ಸತ್ಯವನ್ನು ಕಂಡುಹಿಡಿಯುವವರಿಗೆ ಆನಂದವು ಶೇಖರಿಸಿಡಲ್ಪಟ್ಟಿದೆ
ಒಬ್ಬ ಫಿನ್ನಿಶ್ ಮನುಷ್ಯನು ತನ್ನ ಅಟ್ಟದಲ್ಲಿ ದ ಡಿವೈನ್ ಪ್ಲ್ಯಾನ್ ಆಫ್ ದಿ ಏಜಸ್ ಪುಸ್ತಕವನ್ನು ಕಂಡುಹಿಡಿದನು. ತತ್ಕ್ಷಣ ಅವನದನ್ನು ಓದಲಾರಂಭಿಸಿದನು ಮತ್ತು ಸ್ಪಲ್ಪ ಸಮಯದಲ್ಲೇ ಆತನು ತನಗೆ ‘ಇದೇ ಸತ್ಯ, ಇದೇ ಸತ್ಯ’ ಎಂದು ಹೇಳಿಕೊಂಡನು. ಅಟ್ಟದಿಂದ ಕೆಳಗೆ ಬಂದ ಮೇಲೆ, ಆತನು “ನಾನು ಸತ್ಯ ಧರ್ಮವನ್ನು ಕಂಡುಹಿಡಿದಿದ್ದೇನೆ” ಎಂದು ತನ್ನ ಹೆಂಡತಿಗೆ ಹೇಳಿದನು.
ಈ ಮನುಷ್ಯನು ಸತ್ಯವನ್ನು ಕಂಡುಹಿಡಿದ ವಿಧದ ಸಂಬಂಧದಲ್ಲಿ ಈ ಅನುಭವವು ಅಸಾಮಾನ್ಯವಾಗಿದೆ, ಆದರೆ ಯೆಹೋವನ ಸಾಕ್ಷಿಗಳಲ್ಲಿ ಅನೇಕರು ತದ್ರೀತಿಯ ಒಂದು ಪ್ರತಿಕ್ರಿಯೆಯನ್ನು ತಿಳಿಸಬಲ್ಲರು. ಸತ್ಯವನ್ನು ಕಂಡುಹಿಡಿಯುವುದರಲ್ಲಿ ಬರುವಂತಹ ಆನಂದವನ್ನು ಅವರೆಲ್ಲರೂ ನಿಮಗೆ ತಿಳಿಸಬಲ್ಲರು. ಮುಂದಿನ ಅನುಭವಗಳು ಇದನ್ನು ಎತ್ತಿ ತೋರಿಸುತ್ತವೆ.
ಬೈಬಲಿನ ಸತ್ಯ ಬೋಧನೆಗಳು ಆನಂದವನ್ನು ತರುತ್ತವೆ
IIನೇ ಲೋಕ ಯುದ್ಧದ ಸಮಯದಲ್ಲಿ ಜರ್ಮನಿಯ ಮ್ಯೂನಿಕ್ನಲ್ಲಿ ಮಾರ್ಗರೀಟಾ ಕ್ಯೂನಿಗರ್ ಬೆಳೆದಳು. ಬಾಂಬ್ ಎಸೆಯಲ್ಪಟ್ಟ ಮತ್ತು ಉರಿಯುತ್ತಿರುವ ಮನೆಗಳು ಒಂದು ನಿತ್ಯಗಟ್ಟಳೆಯ ದೃಶ್ಯವಾಗಿತ್ತು. ಆಕೆಯ ಅಣ್ಣ ಯುದ್ಧದಲ್ಲಿ ಮಡಿದನು. ಆಕೆ ಕ್ಯಾತೊಲಿಕ್ ಚರ್ಚಿನ ಆರಾಧನೆಯ ಕೂಟಗಳಿಗೆ ಹಾಜರಾದಾಗ ಜರ್ಮನ್ ಸೈನಿಕರಿಗೋಸ್ಕರ ಮತ್ತು ನಾಯಕನಾದ ಹಿಟ್ಲರ್ಗೋಸ್ಕರ ಹೇಳಲ್ಪಟ್ಟ ಪ್ರಾರ್ಥನೆಗಳನ್ನು ಕೇಳಿದಳು. ಯುದ್ಧದ ನಂತರ, ಒಂದು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದ ಭಾಗವಾಗಿ, ಅಮೆರಿಕದಲ್ಲಿರುವ ಒಂದು ಕಾಲೇಜಿಗೆ ಹಾಜರಾಗಲು ಆಕೆ ಒಂದು ವಿದ್ಯಾರ್ಥಿವೇತನವನ್ನು ಪಡೆದಳು. ಜನರು ಅವಳೊಂದಿಗೆ ಸ್ನೇಹಮಯರಾಗಿರುವದನ್ನು ಅವಳು ಕಂಡುಕೊಂಡಳು, ಆದುದರಿಂದ, ಶಾಂತಿಯಿಂದ ಜೀವಿಸುವ ಸ್ವಾಭಾವಿಕ ಆಶೆಯಿರುವ ಜನರು, ಯುದ್ಧದ ಸಮಯದಲ್ಲಿ ಒಬ್ಬರನ್ನೊಬ್ಬರು ಸಂಶಯಿಸಲು ಮತ್ತು ದ್ವೇಷಿಸಲು ಏನು ನಿರ್ಬಂಧಿಸುತ್ತದೆಂದು ಆಕೆಯು ಯೋಚಿಸತೊಡಗಿದಳು. ಮ್ಯೂನಿಕ್ಗೆ ಹಿಂದೆರಳಿದಾಗ ಆಕೆ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿದಳು ಮತ್ತು ಅವರೊಂದಿಗಿನ ಬೈಬಲ್ ಅಭ್ಯಾಸದ ಮೂಲಕ ತನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಳು. ಆಕೆ ಹೇಳುವುದು: “ದುಷ್ಟಾತ್ಮ ಶಕ್ತಿಗಳು ಒಳಗೂಡಿವೆಯೆಂದು ನನಗೆ ಬೈಬಲಿನಿಂದ ತೋರಿಸಲಾಯಿತು. . . . ಬೈಬಲ್ ಅವರನ್ನು ‘ಲೋಕಾಧಿಪತಿಗ’ಳು ಎಂದು ಕರೆಯುತ್ತದೆ, ಮತ್ತು ವಾಸ್ತವದಲ್ಲಿ ಸೈತಾನನು ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುತ್ತಿದ್ದಾನೆಂದು’ ಹೇಳುತ್ತದೆ. . . . ರಾಷ್ಟ್ರಗಳ ಮತ್ತು ಜನರ ಭಕ್ತಿರಹಿತ ಪೈಶಾಚಿಕ ಕೃತ್ಯಗಳಿಂದ ನಿರ್ಣಯಿಸುವಾಗ, ಇದು ಎಷ್ಟೊಂದು ಸಮಂಜಸವಾದ ಮತ್ತು ತೃಪ್ತಿದಾಯಕ ಉತ್ತರವಾಗಿದೆ!”—ಎಫೆಸ 6:12; ಪ್ರಕಟನೆ 12:9.
ಮಾರ್ಗರೀಟಾ ಮುಂದುವರಿಸುವುದು: “ಭೂಮಿಯ ಸಮಸ್ಯೆಗಳನ್ನು ಬಗೆಹರಿಸುವದಕ್ಕಿರುವ ದೇವರ ಒದಗಿಸುವಿಕೆಯ ಕುರಿತಾಗಿ ಕಲಿಯುವುದು ನನಗೆ ಮಹಾ ಆನಂದವನ್ನು ತಂದಿತು. ಇಲ್ಲ, ಅದು ಲೌಕಿಕ ಶಿಕ್ಷಕರಿಂದ ಪ್ರಸ್ತಾಪಿಸಲ್ಪಟ್ಟ ಮಾನವ ಭಾವನಾಶಾಸ್ತ್ರ ಅಥವಾ ಆಡಳಿತದ ಮೂಲಕ ಬರುವದಿಲ್ಲ. ಬದಲಾಗಿ, ಒಂದು ಹೊಸ ಸ್ವರ್ಗೀಯ ಸರಕಾರವು ಭೂಮಿಯ ವ್ಯವಹಾರಗಳನ್ನು ಮೇಲ್ವಿಚಾರಣೆ ನಡೆಸುವುದೆಂದು ಬೈಬಲು ತೋರಿಸುತ್ತದೆ. . . . ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಪ್ರಾರ್ಥಿಸಲು ಕಲಿಸಿದ್ದು: ‘ನಿನ್ನ ರಾಜ್ಯವು ಬರಲಿ.’ . . . ಈ ರಾಜ್ಯವು ಒಂದು ನಿಜ ಸರಕಾರವಾಗಿದೆ ಮತ್ತು ಕೇವಲ ಅದರ ಮೂಲಕ ಯಥಾರ್ಥವಾದ ಲೋಕವ್ಯಾಪಕ ಶಾಂತಿಯು ಸಾಧಿಸಲ್ಪಡುವುದೆಂಬುದನ್ನು ನಾನು ನೋಡಲಾರಂಭಿಸಿದೆ.” ಸುಮಾರು 30 ವರ್ಷಗಳಲ್ಲಿ, ಮಾರ್ಗರೀಟಾ ಸುಮಾರು ಐದು ಆಫ್ರಿಕನ್ ದೇಶಗಳಲ್ಲಿ ಒಬ್ಬ ಮಿಷನೆರಿಯಾಗಿ ಕೆಲಸಮಾಡಿದ್ದಾಳೆ, ಕಳೆದ 19 ವರ್ಷಗಳು ಬುರ್ಕೀನಾ ಫಾಸೊದ ಅವಾಗಡೊಗೊವಿನ ನಮ್ರ ಜನರಿಗೆ ಸತ್ಯವನ್ನು ಘೋಷಿಸುವುದರಲ್ಲಿ ಕಳೆಯಲ್ಪಟ್ಟಿವೆ.
ಮಾರ್ಗರೀಟಾಳ ಅನುಭವವು ಅಪೂರ್ವವಲ್ಲ. ಹೋರಾಟದ ಎರಡೂ ವಿರುದ್ಧ ಪಕ್ಷಗಳಲ್ಲಿರುವ ಕ್ರೈಸ್ತಪ್ರಪಂಚದ ವೈದಿಕರು ವಿಜಯಕ್ಕಾಗಿ ದೇವರಿಗೆ ಪ್ರಾರ್ಥಿಸುವದನ್ನು ಕಂಡಾಗ ಹಲವಾರು ಜನರು ಅಷ್ಟೇ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಮಾನವನ ಯುದ್ಧಗಳಲ್ಲಿ ದೇವರ ಯಾವ ಪಾಲೂ ಇಲ್ಲ, ಆದರೆ “ಇಡೀ ಲೋಕವು ಕೆಡುಕನ ವಶದಲ್ಲಿ” ಬಿದ್ದಿರುವ ಕಾರಣದಿಂದ ಇವು ಬೆಳೆಯುತ್ತವೆಂಬ ಬೈಬಲಿನ ವಿವರಣೆಯ ಸಾಮಂಜಸ್ಯವನ್ನು ಪ್ರಾಮಾಣಿಕಹೃದಯದ ಜನರು ಕಾಣುತ್ತಾರೆ. ನಿಜ ಕ್ರೈಸ್ತರು “ಲೋಕದ ಭಾಗವಾಗಿರ”ದೆ ಅದರ ವ್ಯವಹಾರಗಳಲ್ಲಿ ತಟಸ್ಥರಾಗಿ ಉಳಿಯಬೇಕೆಂದು ಈ ಸತ್ಯಾನ್ವೇಷಕರು ಕಲಿಯುತ್ತಾರೆ. ಯೆಹೋವನ ಸಾಕ್ಷಿಗಳು ಅಂತಹ ಒಂದು ನಿಲುವನ್ನು ತೆಗೆದುಕೊಂಡಿರುವದನ್ನು ಗುರುತಿಸುತ್ತಾ, ಹೊಸತಾಗಿ ಆಸಕ್ತರಾದ ಜನರು ತಾವು ಸತ್ಯವನ್ನು ಕಂಡುಹಿಡಿದಿದ್ದೇವೆಂಬ ಮನವರಿಕೆಯುಳ್ಳವರಾಗುತ್ತಾರೆ. ದೇವರು ದುಷ್ಟತನವನ್ನು ಅನುಮತಿಸಿರುವ ಕಾರಣ ಮತ್ತು ಆತನು ಬೇಗನೇ ತನ್ನ ರಾಜ್ಯದ ಮೂಲಕ ಹೇಗೆ ಶಾಂತಿಯುಕ್ತ ಮತ್ತು ನೀತಿಯುಕ್ತ ಪರಿಸ್ಥಿತಿಗಳನ್ನು ತರುವನೆಂಬ ವಿಷಯದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದಂತೆ, ಅಂತಹವರು ನಿರೀಕ್ಷೆ ಮತ್ತು ಆನಂದದಲ್ಲಿ ಬೆಳೆಯುತ್ತಾರೆ.—1 ಯೋಹಾನ 5:19; ಯೋಹಾನ 17:16; ಮತ್ತಾಯ 6:9, 10.
ಬೈಬಲಿನ ನಿಜ ಸೂತ್ರಗಳು ಆನಂದವನ್ನು ತರುತ್ತವೆ
ಎಕಡ್ವಾರ್ನ ಡಾನ್ಯಲ್ ರೋಸೆರೊ, ಜೀವಿತವು ಅರ್ಥರಹಿತವಾಗಿತ್ತೆಂದು ಎಣಿಸಿದನು; ಆದುದರಿಂದ ಆತನು ಕುಡಿಯಲು ಆರಂಭಿಸಿದನು. ಆತನು ಹಾಜರಾಗುತ್ತಿದ್ದ ಚರ್ಚು, ಆತನು ಎದುರುನೋಡಬಹುದಾದ ಒಂದೇ ವಿಷಯ ಮರಣ ಮತ್ತು ನರಕಾಗ್ನಿಯೆಂದು ಆತನಿಗೆ ಕಲಿಸಿತು. ಅವನು ಪ್ರತಿಕ್ರಿಯಿಸಿದ್ದು, “ನಾನು ಸುಡಲ್ಪಡುವೆನು, ಆದುದರಿಂದ ನನ್ನನ್ನು ಕುಡಿಯಲು ಬಿಡಿ!” ಆತನಿಗೆ ಎಂಟು ಜನರಿರುವ ಒಂದು ಕುಟುಂಬವಿತ್ತು, ಆತನು ಅವರಿಗಾಗಿ ಒದಗಿಸತ್ತಿರಲಿಲ್ಲ, ಮತ್ತು ಆತನು ಯಾವಾಗಲೂ ತನ್ನ ಹೆಂಡತಿ ಡೆಲ್ಯಾಳೊಂದಿಗೆ ಜಗಳವಾಡುತ್ತಿದ್ದನು. ಒಂದು ಆದಿತ್ಯವಾರ ಬೆಳಗ್ಗೆ, ಅವರಿಗೆ ಯೆಹೋವನ ಸಾಕ್ಷಿಗಳು ಭೇಟಿಕೊಟ್ಟಾಗ ಮತ್ತು ಬೈಬಲನ್ನು ಅಭ್ಯಸಿಸಲು ಆರಂಭಿಸಿದಾಗ ಬದಲಾವಣೆಯು ಸಂಭವಿಸಿತು. ಯೆಹೋವನ ಸಾಕ್ಷಿಗಳ ಒಂದು ಸರ್ಕಿಟ್ ಸಮ್ಮೇಳನವನ್ನು ಡಾನ್ಯಲ್ ಮೊದಲ ಸಾರಿ ಹಾಜರಾದಾಗ ತಾನು ಸತ್ಯವನ್ನು ಕಂಡುಹಿಡಿದೆನೆಂದು ಆತನಿಗೆ ಅರಿವಾಯಿತು. ಆತನು ಹೇಳುವುದು: “ವ್ಯವಸ್ಥಾಪನೆಯು ನನ್ನನ್ನು ಪರವಶಗೊಳಿಸಿತು. ಅನೇಕ ಜನರು ಜೊತೆಯಾಗಿ ಒಗ್ಗಿಕೊಂಡರು. ನೀವು ಜನಸಂದಣಿಯಲ್ಲಿ ಪ್ರೀತಿಯನ್ನು ಅನುಭವಿಸಬಹುದಿತ್ತು. ಯಾರೊಬ್ಬರು ಧೂಮಪಾನ ಮಾಡಲಿಲ್ಲ. ಯಾವ ಅಶ್ಲೀಲ ಭಾಷೆಯು ಇಲ್ಲ. . . . ‘ಇದೇ ಸತ್ಯ!’ ವೆಂದು ಆಲೋಚಿಸುವುದು ನನಗೆ ನೆನಪಿದೆ. ನನ್ನನ್ನು ಭಾವನಾತ್ಮಕವಾಗಿ ಕಲಕಿಸಿದಂತಹ ವಿಷಯವು, ಮರಣದ ಭಯ ಅಥವಾ ಲೋಕದ ಅಂತ್ಯದ ಭಯ ಅಲ್ಲ. ಅದು ಸಂಸ್ಥೆಯ ಶುಚಿತ್ವವಾಗಿತ್ತು.”
ಇಡೀ ರೋಸೆರೊ ಕುಟುಂಬವು ಯೆಹೋವನ ಸಾಕ್ಷಿಗಳಾಯಿತು. ಅವರು ಬೈಬಲ್ ಸೂತ್ರಗಳನ್ನು ಅನ್ವಯಿಸಿದಂತೆ ಅವರ ಕುಟುಂಬ ಜೀವನ ಮತ್ತು ಅವರ ಆರ್ಥಿಕ ಸ್ಥಿತಿಯು ಉತ್ತಮಗೊಂಡಿತು. ಡೆಲ್ಯಾ ರೋಸೆರೊ ಹೇಳುವುದು: “ಇದೆಲ್ಲದ್ದಕ್ಕಾಗಿ ನಾನು ಬೈಬಲಿನ ಸತ್ಯಕ್ಕೆ ಋಣಿಯಾಗಿದ್ದೇನೆ. ದೇವರ ವಾಕ್ಯವಿಲ್ಲದೆ ನನ್ನ ಮಕ್ಕಳು ಎಲ್ಲಿರುತ್ತಿದ್ದರೋ ಏನೋ? ಅವರಲ್ಲಿ ಎಲ್ಲಾ ಏಳು ಜನರು ದೀಕ್ಷಾಸ್ನಾನ ಪಡೆದಿದ್ದಾರೆ ಮತ್ತು ಸ್ಥಿರರಾಗಿದ್ದಾರೆ. ಸತ್ಯವು ನನಗೆ ಒಂದು ಪೂರ್ಣವಾದ ಹೊಸ ಜೀವನ, ಹೊಸ ಸಂತೋಷದ ಅರ್ಥದಲ್ಲಿದೆ.”
ರೋಸೆರೊ ಕುಟುಂಬದ ಅನುಭವವು ಅಪೂರ್ವವಲ್ಲ. ನಮ್ಮ ದಿನದಲ್ಲಿ ಅನೇಕರು ಸಮಸ್ಯೆಗಳಿಂದ ಪೀಡಿತರಾಗಿದ್ದಾರೆ. ಒಂದು ಕಾರಣ, ಮುಂಚಿನ ಸಂತತಿಗಳಲ್ಲಿದ್ದಂತೆ, ಬೈಬಲಿನಲ್ಲಿ ಒದಗಿಸಲ್ಪಟ್ಟ ಮಟ್ಟಗಳು ಇನ್ನು ಮುಂದೆ ಗೌರವಿಸಲ್ಪಡುತ್ತಿಲ್ಲ. ಹೆಚ್ಚಿನ ಧರ್ಮಗಳು, ಸಹಿಷ್ಣುತೆಯ ಹೆಸರಿನಲ್ಲಿಯೋ ಅಥವಾ ಬದಲಾಗುತ್ತಿರುವ ಸಮಯದೊಂದಿಗೆ ಹಳೆಯ ನೀತಿ ತತ್ವಗಳು ಚಾಲ್ತಿಯಲ್ಲಿ ಇಲ್ಲವಾಗುತ್ತವೆಂದು ಅವರಿಗೆ ಅನಿಸುವ ಕಾರಣದಿಂದಲೋ ಈ ಪ್ರವೃತ್ತಿಯನ್ನು ಅನುಸರಿಸುತ್ತವೆ. ಆದುದರಿಂದ ಇತರರಂತೆ, ರೋಸೆರೊ ಕುಟುಂಬವು ಬೈಬಲಿನ ಮಾರ್ಗದರ್ಶನವಿಲ್ಲದೆ ತಡಕಾಡಲು ಬಿಡಲ್ಪಟ್ಟಿತ್ತು. ಹಾಗಿದ್ದರೂ, ಅಂತಹ ನಮ್ರ ಜನರು ನೀತಿ ತತ್ವಗಳು ಮತ್ತು ಕುಟುಂಬ ಜೀವಿತದ ಮೇಲಿನ ದೇವರ ದೃಷ್ಟಿಕೋನದ ತಿಳಿವಳಿಕೆಯನ್ನು ಪಡೆದಂತೆ, ಅವರು ತಡವಿಲ್ಲದೇ ತಾವು ಏನನ್ನು ಕಲಿತಿದ್ದಾರೋ ಅದನ್ನು ಅನ್ವಯಿಸುತ್ತಾರೆ. ಅವರ ಕತೆಗಳಿಂದ ಹಾಗೆ ಮಾಡುವುದರ ಒಳ್ಳೇ ಫಲಿತಾಂಶಗಳನ್ನು ನಾವು ನೋಡಬಲ್ಲೆವು.
ಆನಂದವು ಬೆಳೆಸಲ್ಪಡತಕ್ಕದ್ದು
ಒಬ್ಬ ಕ್ರೈಸ್ತನು ಸತತವಾಗಿ ಸಂಭ್ರಮದ ಒಂದು ಸ್ಥಿತಿಯಲ್ಲಿರುತ್ತಾನೆಂಬದು ಇದರ ಅರ್ಥವಲ್ಲ. ನಿರುದ್ಯೋಗ, ಅಸ್ವಸ್ಥತೆ ಮತ್ತು ಮರಣದಂತಹ, ಸಾಮಾನ್ಯವಾಗಿ ಜನರು ಎದುರಿಸುವ ಕಷ್ಟಗಳು ಕ್ರೈಸ್ತರನ್ನೂ ಪ್ರಭಾವಿಸುತ್ತವೆ. ಕ್ರೈಸ್ತರು ಸಹ ತಮ್ಮ ಸ್ವಂತ ಅಪರಿಪೂರ್ಣತೆಗಳು ಮತ್ತು ಬಲಹೀನತೆಗಳ ವಿರುದ್ಧವಾಗಿ ಒಂದು ನಿರಂತರ ಹೋರಾಟದಲ್ಲಿ ತೊಡಗಬೇಕು. ಲೋಟನು ಸೊದೋಮ್ ಪಟ್ಟಣದಲ್ಲಿದ್ದ “ಅಧರ್ಮಿಗಳ ನಾಚಿಕೆಗೆಟ್ಟ ನಡತೆಗೆ ವೇದನೆಗೊಂಡಿದ್ದ”ನೆಂದು ಬೈಬಲಿನ ದಾಖಲೆಯು ತಿಳಿಸುತ್ತದೆ. ನಂಬಿಗಸ್ತ ಕ್ರೈಸ್ತರು ದುಷ್ಟ ಪರಿಸ್ಥಿತಿಗಳು ಚಾಲ್ತಿಯಲ್ಲಿರುವದನ್ನು ನೋಡುವಾಗ ತದ್ರೀತಿಯ ಭಾವನೆಗಳನ್ನು ಹೋಗಲಾಡಿಸಲಾರರು.—2 ಪೇತ್ರ 2:7, 8.
ಸತ್ಯವನ್ನು ಕಂಡುಹಿಡಿದವರಿಗಾದರೋ ಪ್ರಯೋಜನವೊಂದಿದೆ. ಉದಾಹರಣೆಗಾಗಿ, ಸತ್ತಿರುವ ವ್ಯಕ್ತಿಯೊಬ್ಬನಿಗಾಗಿ ದುಃಖಿಸುತ್ತಿರುವ ಒಬ್ಬ ವಿಶ್ವಾಸಿಯು “ನಿರೀಕ್ಷೆಯಿಲ್ಲದವರಾದ ಇತರರಂತೆ ದುಃಖಿಸುವ” ಅಗತ್ಯವಿಲ್ಲ. ಆತನ ದುಃಖವು ಅಸೀಮಿತವಾಗಿರದು. ಇತರ ಸಮಸ್ಯೆಗಳ ವಿಷಯದಲ್ಲೂ ಇದು ಸತ್ಯವಾಗಿದೆ. ಸತ್ಯವನ್ನು ಕಂಡುಹಿಡಿದ ವ್ಯಕ್ತಿಗೆ ಸದ್ಯದ ಕಷ್ಟಗಳು ಕೇವಲ ತಾತ್ಕಾಲಿಕವೆಂದು ತಿಳಿದಿದೆ. ನಿರೀಕ್ಷೆಯು, ಕಷ್ಟಗಳನ್ನು ಸಹಿಸಿಕೊಳ್ಳಲು ಸುಲಭವನ್ನಾಗಿ ಮಾಡುತ್ತದೆ. ಒಂದು ಸಮತೂಕವಾದ ಜೀವನ ಶೈಲಿಯೂ ಸಹಾಯಮಾಡುತ್ತದೆ.—1 ಥೆಸಲೊನೀಕ 4:13.
ಪೌಲನು ಕ್ರೈಸ್ತರಿಗೆ ಈ ಪ್ರಚೋದನೆಯನ್ನು ಕೊಟ್ಟನು: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ.” (ಫಿಲಿಪ್ಪಿ 4:4) ಆನಂದವು ನಮ್ಮೆಲ್ಲರ ನಿಲುಕಿಗೆ ಹತ್ತಿರವಿದ್ದರೂ, ಅದನ್ನು ಪಡೆಯದೇ ಇರುವುದೂ ಸಂಭಾವ್ಯ. ಈ ಹಳೆಯ ವಿಷಯಗಳ ವ್ಯವಸ್ಥೆಯ ಚಿಂತೆಗಳು ಒಂದು ಅಡಚಣೆಯಾಗಿ ಪರಿಣಮಿಸಬಲ್ಲವು. ಇದಕ್ಕೆ ಕೂಡಿಸಿ, ದೇವರ ಆತ್ಮದ ಫಲಗಳಲ್ಲಿ ಒಂದಾಗಿರುವ ಆನಂದವನ್ನು ಬೆಳೆಸಿಕೊಳ್ಳುವ ಅಗತ್ಯ ನಮಗಿದೆಯೆಂದು ಬೈಬಲ್ ನಮಗೆ ಹೇಳುತ್ತದೆ. (ಗಲಾತ್ಯ 5:22) ಸತ್ಯದ ಜ್ಞಾನವನ್ನು ನಿರಂತರವಾಗಿ ತೆಗೆದುಕೊಳ್ಳುತ್ತಾ, ಅದು ತಂದಿರುವ ಮತ್ತು ಇನ್ನೂ ತರುತ್ತಿರುವ ಆತ್ಮಿಕ ಐಶ್ವರ್ಯಗಳ ಕುರಿತಾಗಿ ಸ್ವತಃ ನೆನಪಿಸಿಕೊಳ್ಳುವದಾದರೆ, ನಿಮ್ಮ ಆನಂದವು ಕುಂದುವುದಿಲ್ಲ. ಜನರ ಕಣ್ಣುಗಳಿಂದ ದೇವರು “ಕಣ್ಣೀರನ್ನೆಲ್ಲಾ ಒರಸಿಬಿಡುವ” ಮತ್ತು ಇನ್ನು ಮುಂದೆ “ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ” ಇರದಂತಹ ಒಂದು ಸಮಯವನ್ನು ನಾವು ಸಮೀಪಿಸುತ್ತಿರುವಂತೆ ಅದು ಇನ್ನೂ ಹೆಚ್ಚು ಬಲವಾಗುವುದು.—ಪ್ರಕಟನೆ 21:4.
[ಪುಟ 8 ರಲ್ಲಿರುವ ಚಿತ್ರಗಳು]
ಯೆಹೋವನ ಸಾಕ್ಷಿಗಳ ಸಮ್ಮೇಳನಗಳಲ್ಲಿರುವ ಆನಂದ ಮತ್ತು ಒಳ್ಳೆಯ ವ್ಯವಸ್ಥಾಪನೆಯಿಂದ ಅನೇಕರು ಪ್ರಭಾವಿತರಾಗಿದ್ದಾರೆ