ತನ್ನ ಅಚ್ಚನ್ನು ಬಿಟ್ಟುಹೋದ ಒಬ್ಬ ಮುದ್ರಣಕಾರ
ಬೈಬಲಿನ ಒಂದು ವಚನವನ್ನು ನೀವು ಕಂಡುಹಿಡಿಯಲು ಬಯಸಿದರೂ ಅದು ಎಲ್ಲಿದೆಯೆಂದು ಜ್ಞಾಪಿಸಿಕೊಳ್ಳಲು ಎಂದಾದರೂ ತಪ್ಪಿದ್ದುಂಟೊ? ಆದರೂ ಒಂದು ಪದವನ್ನು ಮಾತ್ರ ನೆನಪಿಸಿಕೊಂಡ ಕಾರಣ ಬೈಬಲ್ ಕನ್ಕಾರ್ಡನ್ಸ್ ಉಪಯೋಗಿಸಿ ನೀವು ಅದನ್ನು ಕಂಡುಹಿಡಿಯಶಕ್ತರಾದಿರಿ. ಅಥವಾ ಪ್ರಾಯಶಃ ನೀವು ಕ್ರೈಸ್ತ ಕೂಟವೊಂದಕ್ಕೆ, ಅಲ್ಲಿ ಉಪಸ್ಥಿತರಾಗಿದ್ದ ನೂರಾರು ಜನ, ಅಥವಾ ಸಾವಿರಾರು ಜನರು ಸಹ, ವಚನವು ಉದ್ಧರಿಸಲ್ಪಟ್ಟ ಕ್ಷಣಮಾತ್ರದಲ್ಲಿ ಆ ವಚನವನ್ನು ಓದಲು ತಮ್ಮ ಬೈಬಲುಗಳನ್ನು ತೆರೆಯಲು ಶಕ್ತರಾದಾಗ ಹಾಜರಾಗಿದ್ದಿರಿ.
ಸಂದರ್ಭವು ಯಾವುದೇ ಆಗಿದ್ದಿರಲಿ, ನಿಮಗೆ ಪರಿಚಿತನಲ್ಲದ ಒಬ್ಬ ಮನುಷ್ಯನಿಗೆ ನೀವು ಋಣಿಗಳಾಗಿದ್ದೀರಿ. ಅವನು ನಿಮ್ಮ ಬೈಬಲ್ ಅಧ್ಯಯನವನ್ನು ಸರಳ ಮಾಡಿದನು, ಮತ್ತು ನಮ್ಮಲ್ಲಿ ಇಂದು ನಿಷ್ಕೃಷ್ಟವಾದ ಬೈಬಲುಗಳಿರುವಂತೆಯೂ ಖಂಡಿತಮಾಡಲು ಸಹಾಯಮಾಡಿದನು. ಅನೇಕ ಬೈಬಲುಗಳ ತೋರಿಕೆಯನ್ನೂ ಅವನು ಪ್ರಭಾವಿಸಿದನು.
ಆ ಮನುಷ್ಯನು ರಾಬರ್ ಏಟ್ಯೆನ್ ಎಂಬವನು.a ಅವನು ಫ್ರಾನ್ಸ್ನ ಪ್ಯಾರಿಸ್ನಲ್ಲಿ 16 ನೆಯ ಶತಮಾನದ ಆರಂಭದ ಆಸುಪಾಸಿನಲ್ಲಿ ಒಬ್ಬ ಮುದ್ರಣಕಾರನ ಪುತ್ರನಾಗಿ ಜನಿಸಿದ ಒಬ್ಬ ಮುದ್ರಣಕಾರನು. ಅದು ಕಲಾ ಪುನರುಜ್ಜೀವನದ ಮತ್ತು ಸುಧಾರಣೆಯ ಯುಗವಾಗಿತ್ತು. ಇವೆರಡಕ್ಕೂ ಮುದ್ರಣ ಯಂತ್ರವು ಒಂದು ಸಾಧನವಾಗಿ ಪರಿಣಮಿಸಿತು. ರಾಬರ್ನ ತಂದೆ ಆನ್ರಿ ಏಟ್ಯೆನ್ ಒಬ್ಬ ಪ್ರಸಿದ್ಧ ಮುದ್ರಣಕಾರನಾಗಿದ್ದನು. ಕಲಾ ಪುನರುಜ್ಜೀವನ ಕಾಲದಲ್ಲಿ ಹೊರಬಂದ ಅತ್ಯುತ್ಕೃಷ್ಟ ಪುಸ್ತಕಗಳಲ್ಲಿ ಕೆಲವನ್ನು ಅವನು ಉತ್ಪಾದಿಸಿದನು. ಅವನ ಕಾರ್ಯದಲ್ಲಿ, ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ಮತ್ತು ಅದರ ದೇವತಾಶಾಸ್ತ್ರ ಶಾಲೆಯಾದ ಸಾರ್ಬಾನ್ಗೆ ತಯಾರಿಸಿದ ವಿದ್ಯಾಸಂಬಂಧವಾದ ಮತ್ತು ಬೈಬಲ್ಸಂಬಂಧವಾದ ಗ್ರಂಥಗಳು ಸೇರಿದ್ದವು.
ಆದರೆ ನಾವು ಮಗ ರಾಬರ್ ಏಟ್ಯೆನ್ನ ಮೇಲೆ ಕೇಂದ್ರೀಕರಿಸೋಣ. ಅವನ ಔಪಚಾರಿಕ ವಿದ್ಯೆಯ ಬಗೆಗೆ ಹೆಚ್ಚು ತಿಳಿದಿರುವುದಿಲ್ಲ. ಆದರೂ, ಅವನ ಎಳೆಯ ಪ್ರಾಯದಲ್ಲಿ ಅವನು ಲ್ಯಾಟಿನ್ ಪಂಡಿತನಾದದ್ದು ಮಾತ್ರವಲ್ಲ ಬೇಗನೆ ಹೀಬ್ರು ಮತ್ತು ಗ್ರೀಕನ್ನೂ ಕಲಿತನು. ರಾಬರ್ ತನ್ನ ತಂದೆಯಿಂದ ಮುದ್ರಣ ಕಲೆಯನ್ನು ಕಲಿತನು. 1526 ರಲ್ಲಿ ಅವನು ಆನ್ರಿಯ ಮುದ್ರಣಾಲಯದ ಜವಾಬ್ದಾರಿ ವಹಿಸಿದಾಗ, ರಾಬರ್ ಏಟ್ಯೆನ್ ಆಗಲೇ ಉತ್ಕೃಷ್ಟ ಭಾಷಾ ಮಟ್ಟಗಳ ತಜ್ಞನೆಂದು ಪ್ರಸಿದ್ಧಿಪಡೆದಿದ್ದನು. ಅವನು ಲ್ಯಾಟಿನ್ ಸಾಹಿತ್ಯಗಳ ಮತ್ತು ಇತರ ಪಾಂಡಿತ್ಯಪೂರ್ಣ ಗ್ರಂಥಗಳ ವಿಮರ್ಶಾತ್ಮಕ ಮುದ್ರಣಗಳನ್ನು ಪ್ರಕಟಪಡಿಸಿದರೂ ಅವನ ನಿರ್ವಿವಾದಾತ್ಮಕ ಪ್ರಥಮ ಪ್ರೀತಿ ಬೈಬಲಾಗಿತ್ತು. ಲ್ಯಾಟಿನ್ ಸಾಹಿತ್ಯಗಳಿಗೆ ಆಗಲೇ ಏನು ಮಾಡಲಾಗಿತ್ತೊ ಅದನ್ನು ಲ್ಯಾಟಿನ್ ಬೈಬಲಿನ ಸಂಬಂಧದಲ್ಲಿಯೂ ಸಾಧಿಸಲು ತವಕವುಳ್ಳವನಾಗಿ, ಅವನು ಜೆರೋಮನ ಲ್ಯಾಟಿನ್ ವಲ್ಗೆಟ್ ಬೈಬಲಿನ ಐದನೆಯ ಶತಮಾನದ ಮೂಲಪಾಠಗಳನ್ನು ಎಷ್ಟು ಹೆಚ್ಚು ಸಾಧ್ಯವೊ ಅಷ್ಟು ಪುನಃಸ್ಥಾಪಿಸಲು ತೊಡಗಿದನು.
ಒಂದು ಶುದ್ಧೀಕೃತ ವಲ್ಗೆಟ್
ಜೆರೋಮನು ಬೈಬಲಿನ ಮೂಲ ಹೀಬ್ರು ಮತ್ತು ಗ್ರೀಕ್ನಿಂದ ಭಾಷಾಂತರಿಸಿದ್ದನು. ಆದರೆ ಏಟ್ಯೆನನ ದಿನಗಳೊಳಗೆ, ವಲ್ಗೆಟ್ ಒಂದು ಸಾವಿರ ವರ್ಷ ಅಸ್ತಿತ್ವದಲ್ಲಿತ್ತು. ವಲ್ಗೆಟ್ ಅನ್ನು ಅನೇಕ ಸಂತತಿಗಳಲ್ಲಿ ನಕಲು ಮಾಡಿದುದ್ದರ ಕಾರಣ ಅನೇಕ ತಪ್ಪುಗಳು ಮತ್ತು ಮಾಲಿನ್ಯಗಳು ಒಳಹೊಕ್ಕಿದ್ದವು. ಇದಲ್ಲದೆ, ಮಧ್ಯ ಯುಗಗಳಲ್ಲಿ, ಬೈಬಲಿನ ದೈವಿಕವಾಗಿ ಪ್ರೇರಿತವಾದ ಮಾತುಗಳು ಮಧ್ಯ ಯುಗಗಳ ಪುರಾಣ ಕಥೆಗಳ, ಅರ್ಥ ವಿಸ್ತರಣೆಯ ವಾಕ್ಯಸಮುದಾಯಗಳ, ಮತ್ತು ಖೋಟಾ ಮಧ್ಯಸೇರಿಸುವಿಕೆಗಳ ಅವ್ಯವಸ್ಥೆಯ ಮೂಟೆಯಿಂದ ಲೇಪಿಸಲ್ಪಟ್ಟಿದ್ದವು. ಇವು ಬೈಬಲ್ ಮೂಲಪಾಠದೊಂದಿಗೆ ಎಷ್ಟು ಬೆರೆತಿದ್ದವೆಂದರೆ ಅವನ್ನೂ ಪ್ರೇರಿತ ಬರಹಗಳಾಗಿ ಅಂಗೀಕರಿಸಲು ಆರಂಭವಾಯಿತು.
ಯಾವುವು ಮೂಲದ್ದಾಗಿರಲಿಲ್ಲವೊ ಅವೆಲ್ಲವನ್ನೂ ತೊಡೆದುಹಾಕಲು, ಸಾಂಪ್ರದಾಯಿಕ ಸಾಹಿತ್ಯಗಳ ಅಧ್ಯಯನದಲ್ಲಿ ಬಳಸಿದ ಮೂಲಗ್ರಂಥಗಳ ವಿಮರ್ಶಾ ವಿಧಾನಗಳನ್ನು ಏಟ್ಯೆನ್ ಅನ್ವಯಿಸಿದನು. ಅವನು ಅತ್ಯಂತ ಹಳೆಯ ಮತ್ತು ಅತ್ಯುತ್ತಮವಾದ ಹಸ್ತಪ್ರತಿಗಳನ್ನು ಹುಡುಕಿ ಪಡೆದನು. ಪ್ಯಾರಿಸ್ ಮತ್ತು ಅದರ ಸುತ್ತಲಿನ ಗ್ರಂಥಾಲಯಗಳಲ್ಲಿ ಮತ್ತು ಏವ್ರ ಮತ್ತು ಸ್ವಾಸೋನ್ನಂತಹ ಸ್ಥಳಗಳಲ್ಲಿ, ಅವನು ಅನೇಕ ಹಳೆಯ—ಒಂದು ಆರನೆಯ ಶತಮಾನದ್ದಾಗಿ ತೋರಿಬಂದ—ಹಸ್ತಪ್ರತಿಗಳನ್ನು ಕಂಡುಹಿಡಿದನು. ಏಟ್ಯೆನ್ ಜಾಗರೂಕತೆಯಿಂದ ವಿಭಿನ್ನ ಲ್ಯಾಟಿನ್ ಗ್ರಂಥಪಾಠಗಳನ್ನು ಭಾಗ ಭಾಗವಾಗಿ ಹೋಲಿಸಿ, ಅತ್ಯಂತ ಅಧಿಕೃತವೆಂದು ಕಂಡುಬಂದ ಭಾಗಗಳನ್ನು ಮಾತ್ರ ಆರಿಸಿದನು. ಇದರ ಫಲವಾಗಿ ಬಂದ ಕೃತಿಯಾದ ಏಟ್ಯೆನನ ಬೈಬಲ್, 1528 ರಲ್ಲಿ ಮೊದಲಾಗಿ ಪ್ರಕಟವಾಗಿ, ಬೈಬಲಿನ ಗ್ರಂಥಪಾಠದ ನಿಷ್ಕೃಷ್ಟತೆಯಲ್ಲಿ ಒಂದು ಗಮನಾರ್ಹವಾದ ಮುನ್ನಡೆಯಾಯಿತು. ಏಟ್ಯೆನನಿಂದ ಉತ್ತಮಗೊಳಿಸಲ್ಪಟ್ಟ ಮುದ್ರಣಗಳು ಅನುಸರಿಸಿ ಬಂದವು. ಅವನಿಗಿಂತ ಮೊದಲಿನ ಇತರರು ವಲ್ಗೆಟ್ ಅನ್ನು ತಿದ್ದಲು ಪ್ರಯತ್ನಿಸಿದ್ದರು. ಆದರೆ ಅವನದ್ದು ಕಾರ್ಯಸಾಧಕವಾದ ವಿಮರ್ಶನೋಪಕರಣಗಳನ್ನು ಒದಗಿಸಿದ ಪ್ರಥಮ ಮುದ್ರಣವಾಗಿತ್ತು. ಅಂಚು (ಮಾರ್ಜಿನ್) ಗಳಲ್ಲಿ, ತಾನು ಎಲ್ಲಿ ಕೆಲವು ಸಂದೇಹಾತ್ಮಕ ಭಾಗಗಳನ್ನು ಬಿಟ್ಟಿದ್ದೇನೆ ಅಥವಾ ಒಂದಕ್ಕೂ ಹೆಚ್ಚಿನ ಪಠನವು ಎಲ್ಲಿ ಸಾಧ್ಯ ಎಂಬುದನ್ನು ಅವನು ಸೂಚಿಸಿದನು. ಈ ತಿದ್ದುಪಡಿಗೆ ಯಾವ ಆಧಾರಗ್ರಂಥವು ಅಧಿಕಾರ ಕೊಡುತ್ತದೆಂಬುದನ್ನೂ ಅವನು ಬರೆದನು.
16 ನೆಯ ಶತಮಾನಕ್ಕೆ ತೀರ ಅಪೂರ್ವವಾಗಿದ್ದ ಇತರ ಅನೇಕ ಅಂಶಗಳನ್ನು ಏಟ್ಯೆನ್ ಪರಿಚಯಮಾಡಿಸಿದನು. ಅಪಾಕ್ರಿಫ ಪುಸ್ತಕಗಳು ಮತ್ತು ದೇವರ ವಾಕ್ಯದ ನಡುವೆ ಅವನು ಪ್ರತ್ಯೇಕತೆಯನ್ನು ಮಾಡಿದನು. ಅವನು ಅಪೊಸ್ತಲರ ಕೃತ್ಯಗಳು ಪುಸ್ತಕವನ್ನು ಸುವಾರ್ತೆಗಳ ಅನಂತರ ಮತ್ತು ಪೌಲನ ಪತ್ರಗಳ ಮೊದಲಾಗಿ ಇಟ್ಟನು. ಪ್ರತಿಯೊಂದು ಪುಟದ ತುದಿಯಲ್ಲಿ, ಓದುಗರು ನಿರ್ದಿಷ್ಟ ಭಾಗಗಳನ್ನು ಕಂಡುಹಿಡಿಯುವರೆ ಸಹಾಯಾರ್ಥವಾಗಿ ಕೆಲವು ಮುಖ್ಯ ಪದಗಳನ್ನು ಒದಗಿಸಿದನು. ಇಂದು ಸಾಮಾನ್ಯವಾಗಿ ಪುನರಾವರ್ತಿಸಿದ ಶಿರೋನಾಮೆ (ರನಿಂಗ್ ಹೆಡ್) ಯ ಅತಿ ಆದಿಯ ಉದಾಹರಣೆಯಿದು. ಜರ್ಮನಿಯಲ್ಲಿ ಉಗಮವಾದ ದಪ್ಪದ ಗಾಥಿಕ್ ಅಥವಾ ಅಚಿನ್ಚ ಅಕ್ಷರಗಳ ಬದಲಾಗಿ ಇಡೀ ಬೈಬಲನ್ನು ಈಗ ಸಾಮಾನ್ಯವಾಗಿ ಬಳಕೆಯಲ್ಲಿರುವ, ಸುಲಭವಾಗಿ ಓದಸಾಧ್ಯವಾಗುವ ರೋಮನ್ ಅಚಿನ್ಚ ಮೊಳೆಗಳಲ್ಲಿ ಮುದ್ರಿಸಿದ ಪ್ರಥಮರಲ್ಲಿ ಏಟ್ಯೆನ್ ಒಬ್ಬನು. ಅವನು ನಿರ್ದಿಷ್ಟ ಭಾಗಗಳನ್ನು ಸ್ಪಷ್ಟಪಡಿಸಲು ಸಹಾಯವಾಗುವಂತೆ ಅನೇಕ ಪ್ರಕರಣಾಂತರ ಸೂಚನೆಗಳನ್ನೂ ಭಾಷಾಶಾಸ್ತ್ರೀಯ ಟಿಪ್ಪಣಿಗಳನ್ನೂ ಒದಗಿಸಿದನು.
ಅನೇಕ ಶ್ರೀಮಂತರು ಮತ್ತು ಧರ್ಮಾಧ್ಯಕ್ಷರು ಏಟ್ಯೆನನ ಬೈಬಲನ್ನು ಗಣ್ಯಮಾಡಿದರು, ಏಕೆಂದರೆ ವಲ್ಗೆಟ್ನ ಇತರ ಮುದ್ರಿತ ಆವೃತ್ತಿಗಳಿಗಿಂತ ಅದು ಹೆಚ್ಚು ಉತ್ತಮವಾಗಿತ್ತು. ಸೌಂದರ್ಯ, ಕಾರ್ಯಕೌಶಲ ಮತ್ತು ಉಪಯುಕ್ತತೆಯ ಸಂಬಂಧದಲ್ಲಿ ಅವನ ಆವೃತ್ತಿಯು ಆದರ್ಶವಾಗಿ ಪರಿಣಮಿಸಿ, ಬೇಗನೆ ಯೂರೋಪಿನಲ್ಲೆಲ್ಲ ಅನುಕರಿಸಲ್ಪಟ್ಟಿತು.
ರಾಜಯೋಗ್ಯ ಮುದ್ರಣಕಾರ
“ತನ್ನ ಕೆಲಸದಲ್ಲಿ ಚಟವಟಿಕೆಯಾಗಿರುವವನನ್ನು ನೋಡು; ಇಂಥವನು ರಾಜರನ್ನು ಸೇವಿಸುವನು,” ಎನ್ನುತ್ತದೆ ಜ್ಞಾನೋಕ್ತಿ 22:29. ಏಟ್ಯೆನನ ಹೊಸ ರೀತಿಯ ಶಿಲ್ಪ ಕೌಶಲ ಮತ್ತು ಭಾಷಾ ಸಾಮರ್ಥ್ಯವು ಫ್ರಾನ್ಸ್ನ ಅರಸ, I ನೆಯ ಫ್ರಾನ್ಸಿಸ್ನ ಕಣ್ಣಿಗೆ ಬೀಳದೆ ಹೋಗಲಿಲ್ಲ. ಏಟ್ಯೆನ್ ಲ್ಯಾಟಿನ್, ಹೀಬ್ರು ಮತ್ತು ಗ್ರೀಕ್ನಲ್ಲಿ ರಾಜನ ಮುದ್ರಣಕಾರನಾದನು. ಹಾಗಿರುವಾಗ, ಏಟ್ಯೆನ್ ಫ್ರೆಂಚ್ ಮುದ್ರಣ ಕಲೆಯಲ್ಲಿ ಇನ್ನೂ ನಾಯಕ ಕೃತಿಗಳಾಗಿ ಉಳಿದಿರುವ ಕೆಲವನ್ನು ಉತ್ಪಾದಿಸಿದನು. 1539 ರಲ್ಲಿ ಅವನು, ಫ್ರಾನ್ಸ್ನಲ್ಲಿ ಮುದ್ರಿಸಲ್ಪಟ್ಟ ಪ್ರಥಮ ಮತ್ತು ಅತ್ಯುತ್ತಮವಾದ ಪೂರ್ತಿ ಬೈಬಲನ್ನು ತಯಾರಿಸಲಾರಂಭಿಸಿದನು. 1540 ರಲ್ಲಿ ಅವನು ಲ್ಯಾಟಿನ್ ಬೈಬಲಿನೊಳಗೆ ಚಿತ್ರಗಳನ್ನು ಪರಿಚಯಿಸಿದನು. ಆದರೆ ಮಧ್ಯ ಯುಗಗಳಲ್ಲಿ ಸಾಮಾನ್ಯವಾಗಿದ್ದ ಬೈಬಲ್ ಘಟನೆಗಳ ಸಂಬಂಧದಲ್ಲಿ ವಾಡಿಕೆಯ ಕಾಲ್ಪನಿಕ ವರ್ಣನೆಗಳ ಬದಲಾಗಿ, ಏಟ್ಯೆನ್ ಪ್ರಾಕ್ತನ ಶಾಸ್ತ್ರದ ರುಜುವಾತುಗಳ ಮೇಲೆ ಅಥವಾ ಬೈಬಲಿನಲ್ಲಿಯೇ ಕಂಡುಬರುವ ಅಳತೆಗಳ ಮತ್ತು ವರ್ಣನೆಗಳ ಮೇಲೆ ಆಧಾರಿತವಾದ ಬೋಧಪ್ರದವಾದ ರೇಖನಗಳನ್ನು ಒದಗಿಸಿದನು. ಈ ಮರದ ಪಡಿಯಚ್ಚುಗಳು ಒಡಂಬಡಿಕೆಯ ಮಂಜೂಷ, ಮಹಾ ಯಾಜಕನ ಉಡುಪುಗಳು, ಸಾಕ್ಷಿಗುಡಾರ ಮತ್ತು ಸೊಲೊಮೋನನ ದೇವಾಲಯದಂತಹ ವಿಷಯಗಳನ್ನು ವಿವರವಾಗಿ ಚಿತ್ರಿಸಿದವು.
ಅರಸನ ಹಸ್ತಪ್ರತಿ ಸಂಗ್ರಹವನ್ನು ಮುದ್ರಿಸಲು ತಾನು ಆರ್ಡರ್ ಮಾಡಿದ್ದ ವಿಶೇಷ ಗ್ರೀಕ್ ಮೊಳೆಯಚ್ಚನ್ನು ಉಪಯೋಗಿಸುತ್ತಾ, ಏಟ್ಯೆನ್ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಪ್ರಥಮ ವಿಮರ್ಶಾತ್ಮಕ ಆವೃತ್ತಿಯನ್ನು ತಯಾರಿಸಲು ಮುಂದುವರಿದನು. ಏಟ್ಯೆನನ ಗ್ರೀಕ್ ಗ್ರಂಥಪಾಠದ ಮೊದಲನೆಯ ಎರಡು ಆವೃತ್ತಿಗಳು ಡೆಸಿಡಿರೀಅಸ್ ಇರ್ಯಾಸ್ಮಸ್ನದ್ದಕ್ಕಿಂತ ಹೆಚ್ಚು ಉತ್ತಮವಾಗಿರಲಿಲ್ಲವಾದರೂ, 1550ರ ಮೂರನೆಯ ಆವೃತ್ತಿಯಲ್ಲಿ ಏಟ್ಯೆನ್, ಸಾ.ಶ. ಐದನೆಯ ಶತಮಾನದ ಕೋಡೆಕ್ಸ್ ಬೆಸೀಯನ್ನು ಸೇರಿಸಿ ಸುಮಾರು 15 ಹಸ್ತಪ್ರತಿಗಳಿಂದ ಮತ್ತು ಸೆಪ್ಟ್ಯೂಅಜಿಂಟ್ ಬೈಬಲಿನಿಂದ ತಾರ್ಕಣೆಗಳನ್ನು ಮತ್ತು ಪರಾಮರ್ಶೆಗಳನ್ನು ಕೂಡಿಸಿದನು. ಏಟ್ಯೆನನ ಈ ಆವೃತ್ತಿ ಎಷ್ಟು ವ್ಯಾಪಕವಾಗಿ ಅಂಗೀಕರಿಸಲ್ಪಟಿತ್ಟೆಂದರೆ ಅದು ಆ ಬಳಿಕ, ಯಾವುದರ ಮೇಲೆ 1611ರ ಕಿಂಗ್ ಜೇಮ್ಸ್ ವರ್ಷನ್ ಸೇರಿರುವ ಅನಂತರದ ಅನೇಕ ಭಾಷಾಂತರಗಳು ಆಧಾರಗೊಂಡವೊ, ಆ ಟೆಕ್ಸಸ್ಟ್ ರಿಸೆಪಸ್ಟ್ ಅಥವಾ ಅಂಗೀಕರಿಸಲ್ಪಟ್ಟ ಗ್ರಂಥಪಾಠಕ್ಕೆ ಆಧಾರವಾಗಿ ಪರಿಣಮಿಸಿತು.
ಸುಧಾರಣೆಯ ವಿರುದ್ಧ ಸಾರ್ಬಾನ್
ಲೂಥರ್ ಮತ್ತು ಇತರ ಸುಧಾರಕರ ವಿಚಾರಗಳು ಯೂರೋಪಿನಲ್ಲೆಲ್ಲ ಹರಡುತ್ತಿದ್ದಾಗ, ಓದುವುದನ್ನು ನಿಯಂತ್ರಿಸಿ ಜನರ ಯೋಚನೆಯನ್ನು ಕ್ಯಾತೊಲಿಕ್ ಚರ್ಚು ಪ್ರಯತ್ನಪಟ್ಟಿತು. ಜೂನ್ 15, 1520 ರಲ್ಲಿ ಪೋಪ್ X ನೆಯ ಲಿಯೊ ಒಂದು ಆಜ್ಞೆಯನ್ನು ಹೊರಡಿಸಿ, “ಪಾಷಂಡವಾದಗಳು” ಸೇರಿರುವ ಯಾವುದೇ ಪುಸ್ತಕವನ್ನು ಯಾವುದೇ ಕ್ಯಾತೊಲಿಕ್ ದೇಶದಲ್ಲಿ ಮುದ್ರಿಸಬಾರದು, ಮಾರಬಾರದು ಅಥವಾ ಓದಬಾರದು ಮತ್ತು ಸರಕಾರದ ಅಧಿಕಾರಿಗಳು ತಮ್ಮ ದೇಶಗಳೊಳಗೆ ಆ ಆಜ್ಞೆಯನ್ನು ಜಾರಿಗೆ ತರಬೇಕೆಂದು ವಿಧಿಸಿದನು. ಇಂಗ್ಲೆಂಡಿನಲ್ಲಿ, ಅರಸ VIII ನೆಯ ಹೆನ್ರಿ, ಸೆನ್ಸರಿನ ಕೆಲಸವನ್ನು ಕ್ಯಾತೊಲಿಕ್ ಬಿಷಪ್ ಕತ್ಬರ್ಟ್ ಟನ್ಸಲ್ಟ್ ಎಂಬವನಿಗೆ ಬಿಟ್ಟುಕೊಟ್ಟನು. ಆದರೂ, ಯೂರೋಪಿನ ಹೆಚ್ಚಿನ ಭಾಗದಲ್ಲಿ, ತತ್ವಗಳ ವಿಚಾರಗಳಲ್ಲಿ, ಪೋಪನ ಅನಂತರದ ನಿರ್ವಿವಾದದ ಅಧಿಕಾರವು ಪ್ಯಾರಿಸ್ನ ವಿಶ್ವವಿದ್ಯಾಲಯವಾದ ಸಾರ್ಬಾನ್ನ ದೇವತಾಶಾಸ್ತ್ರಜ್ಞರ ವಿಭಾಗದ್ದಾಗಿತ್ತು.
ಸಾರ್ಬಾನ್ ಕ್ಯಾತೊಲಿಕ್ ಸಂಪ್ರದಾಯ ಬದ್ಧತೆಯ ವಾಣಿಯಾಗಿತ್ತು. ಅದು ಶತಮಾನಗಳ ವರೆಗೆ ಕ್ಯಾತೊಲಿಕ್ ವಿಶ್ವಾಸದ ಆಳುವೇರಿಯಾಗಿ ವೀಕ್ಷಿಸಲ್ಪಡುತ್ತಿತ್ತು. ಸಾರ್ಬಾನಿನ ಸೆನ್ಸರ್ ವಿಮರ್ಶಕರು ವಲ್ಗೆಟ್ನ ಎಲ್ಲ ವಿಮರ್ಶಾತ್ಮಕ ಆವೃತ್ತಿಗಳನ್ನು ಮತ್ತು ದೇಶಭಾಷೆಗಳ ಭಾಷಾಂತರಗಳನ್ನು, ಅವು “ಚರ್ಚಿಗೆ ನಿಷ್ಪಯ್ರೋಜಕ ಮಾತ್ರವಲ್ಲ ಹಾನಿಕರವೂ” ಎಂದೆಣಿಸಿದರು. ಸುಧಾರಕರು ಶಾಸ್ತ್ರದ ಅಧಿಕಾರದ ಮೇಲೆ ಆಧಾರವಾಗಿಲ್ಲದ ಚರ್ಚ್ ತತ್ವಗಳನ್ನು, ಸಂಸ್ಕಾರಗಳನ್ನು ಮತ್ತು ಸಂಪ್ರದಾಯಗಳನ್ನು ಅವು ಸಂದೇಹಾಸ್ಪದವೆಂದು ಹೇಳುತ್ತಿದ್ದ ಸಮಯದಲ್ಲಿ ಇದು ಆಶ್ಚರ್ಯವಾಗಿರಲಿಲ್ಲ. ಆದರೂ ಸಾರ್ಬಾನ್ನ ಅನೇಕ ದೇವತಾಶಾಸ್ತ್ರಜ್ಞರು ಬೈಬಲಿನ ನಿಷ್ಕೃಷ್ಟ ಪಠನಕ್ಕಿಂತಲೂ ಚರ್ಚಿನ ಪೂಜ್ಯ ತತ್ವಗಳು ಹೆಚ್ಚು ಪ್ರಾಮುಖ್ಯವೆಂದೆಣಿಸಿದರು. ಒಬ್ಬ ದೇವತಾಶಾಸ್ತ್ರಜ್ಞನು ಹೇಳಿದ್ದು: “ತತ್ವಗಳನ್ನು ಒಮ್ಮೆ ಪಡೆದಾದ ಮೇಲೆ, ಶಾಸ್ತ್ರಗಳು ಗೋಡೆ ಕಟ್ಟಿದ ಮೇಲೆ ತೆಗೆಯಲ್ಪಡುವ ಸಾರುವೆಯಂತಿವೆ.” ಶಾಸ್ತ್ರಜ್ಞರಲ್ಲಿ ಹೆಚ್ಚಿನವರು ಹೀಬ್ರು ಮತ್ತು ಗ್ರೀಕ್ನ ಸಂಬಂಧದಲ್ಲಿ ಅಜ್ಞಾನಿಗಳಾಗಿದ್ದರೂ, ಬೈಬಲಿನಲ್ಲಿ ಬಳಸಿರುವ ಪದಗಳ ಮೂಲಾರ್ಥಗಳನ್ನು ಹುಡುಕುತ್ತಿದ್ದ ಏಟ್ಯೆನ್ ಮತ್ತು ಇತರ ಕಲಾ ಪುನರುಜ್ಜೀವನ ಕಾಲದ ವಿದ್ವಾಂಸರ ಅಧ್ಯಯನಗಳನ್ನು ತಿರಸ್ಕರಿಸಿದರು. ಒಬ್ಬ ಸಾರ್ಬಾನ್ ಪ್ರೊಫೆಸರನು, “ಗ್ರೀಕ್ ಮತ್ತು ಹೀಬ್ರುವಿನ ಜ್ಞಾನವನ್ನು ಪ್ರಸಾರಮಾಡುವುದು ಸರ್ವ ಧರ್ಮದ ನಾಶನವನ್ನು ಉಂಟುಮಾಡುವುದು,” ಎನ್ನುವಷ್ಟರ ಮಟ್ಟಿಗೂ ಮುಂದುವರಿದನು.
ಸಾರ್ಬಾನ್ ಆಕ್ರಮಣ ಮಾಡುತ್ತದೆ
ಏಟ್ಯೆನನ ವಲ್ಗೆಟ್ನ ಆದಿ ಆವೃತ್ತಿಗಳು ಪಂಡಿತವರ್ಗದ ಸೆನ್ಸರನಲ್ಲಿ ತೇರ್ಗಡೆ ಹೊಂದಿದರೂ, ಅದು ವಾಗ್ವಾದರಹಿತವಾಗಿರಲಿಲ್ಲ. ಹಿಂದೆ 13 ನೆಯ ಶತಮಾನದಲ್ಲಿ, ವಲ್ಗೆಟ್ ವಿಶ್ವವಿದ್ಯಾಲಯದ ಅಧಿಕೃತ ಬೈಬಲಾಗಿ ಸ್ಥಾಪಿಸಲ್ಪಟ್ಟಿತ್ತು, ಮತ್ತು ಅನೇಕ ಜನರಿಗೆ ಅದರ ಗ್ರಂಥಪಾಠವು ತಪ್ಪಿಗವಕಾಶವಿಲ್ಲದ್ದಾಗಿತ್ತು. ಪಂಡಿತವರ್ಗವು ವಲ್ಗೆಟ್ನ ಸಂಬಂಧದಲ್ಲಿ ನಡೆಸಿದ ಕೆಲಸಕ್ಕಾಗಿ ಸನ್ಮಾನ್ಯ ವಿದ್ವಾಂಸ ಇರ್ಯಾಸ್ಮಸ್ನನ್ನು ಖಂಡಿಸಿತ್ತು ಕೂಡ. ಹಾಗಿರುವಾಗ, ಒಬ್ಬ ಸ್ಥಳಿಕ ಸಾಮಾನ್ಯನಾದ ಮುದ್ರಣಕಾರನಿಗೆ ಅಧಿಕೃತ ಗ್ರಂಥಪಾಠವನ್ನು ತಿದ್ದುವಷ್ಟು ಕೆಚ್ಚೆದೆಯಿರುವುದು ಕೆಲವರಿಗೆ ಅಪಾಯ ಸೂಚನೆಯನ್ನು ಕೊಟ್ಟಿತು.
ಪ್ರಾಯಶಃ ಬೇರೆ ಎಲ್ಲ ವಿಷಯಗಳಿಗಿಂತಲೂ ಹೆಚ್ಚಾಗಿ, ದೇವತಾಶಾಸ್ತ್ರಜ್ಞರನ್ನು ಚಿಂತಿತರನ್ನಾಗಿ ಮಾಡಿದ್ದು ಏಟ್ಯೆನನ ಅಂಚು ಟಿಪ್ಪಣಿಗಳಾಗಿದ್ದವು. ಆ ಟಿಪ್ಪಣಿಗಳು ವಲ್ಗೆಟ್ನ ಗ್ರಂಥಪಾಠದ ಯಥಾನ್ಯಾಯತೆಯ ವಿಷಯದಲ್ಲಿ ಸಂದೇಹವನ್ನು ವ್ಯಕ್ತಪಡಿಸಿದವು. ಕೆಲವು ಭಾಗಗಳನ್ನು ಸ್ಪಷ್ಟೀಕರಿಸುವ ಏಟ್ಯೆನನ ಬಯಕೆಯು ಅವನು ದೇವತಾಶಾಸ್ತ್ರದ ಕ್ಷೇತ್ರದೊಳಗೆ ಒಳನುಗ್ಗುತ್ತಾನೆಂಬ ಅಪವಾದವನ್ನು ಫಲಿಸಿತು. ಅವನು ಆ ಆರೋಪವನ್ನು ಅಲ್ಲಗಳೆದನು. ತನ್ನ ಟಿಪ್ಪಣಿಗಳು ಕೇವಲ ಚಿಕ್ಕ ಸಾರಾಂಶಗಳು ಅಥವಾ ಭಾಷಾಶಾಸ್ತ್ರ ಸ್ವರೂಪದವುಗಳು ಎಂದು ಅವನು ವಾದಿಸಿದನು. ಉದಾಹರಣೆಗೆ, ಆದಿಕಾಂಡ 37:35ರ ಮೇಲಿನ ಅವನ ಟಿಪ್ಪಣಿಯು “ನರಕ” [ಲ್ಯಾಟಿನ್, ಈನ್ಫರ್ನಮ್] ಎಂಬ ಪದವು ದುಷ್ಟರು ಶಿಕ್ಷಿಸಲ್ಪಡುವ ಒಂದು ಸ್ಥಳವೆಂದು ತಿಳಿಯಸಾಧ್ಯವಿಲ್ಲ ಎಂದು ವಿವರಿಸಿತು. ಆಗ ಪಂಡಿತವರ್ಗವು, ಅವನು ಆತ್ಮದ ಅಮರತ್ವವನ್ನು ಮತ್ತು “ಸಂತರ” ಮಧ್ಯಸಿಕ್ಥೆಯ ಶಕ್ತಿಯನ್ನು ಅಲ್ಲಗಳೆದನೆಂದು ಆರೋಪಿಸಿತು.
ಆದರೂ ಏಟ್ಯೆನನಿಗೆ ರಾಜನ ಅನುಗ್ರಹವೂ ರಕ್ಷಣೆಯೂ ಇತ್ತು. I ನೆಯ ಫ್ರಾನ್ಸಿಸ್ ಕಲಾ ಪುನರುಜ್ಜೀವನ ಅಧ್ಯಯನದಲ್ಲಿ, ವಿಶೇಷವಾಗಿ ತನ್ನ ರಾಜಯೋಗ್ಯ ಮುದ್ರಣಕಾರನ ಕೆಲಸದಲ್ಲಿ ಅತಿ ಕಾಳಜಿ ತೋರಿಸಿದನು. I ನೆಯ ಫ್ರಾನ್ಸಿಸ್ ಏಟ್ಯೆನನಿಗೆ ಭೇಟಿಕೊಟ್ಟನೆಂದೂ, ಒಮ್ಮೆ ಏಟ್ಯೆನ್ ಒಂದು ಗ್ರಂಥಪಾಠಕ್ಕೆ ಕೊನೆಯ ಗಳಿಗೆಯ ತಿದ್ದುವಿಕೆಯನ್ನು ಮಾಡುತ್ತಿದ್ದಾಗ ತಾಳ್ಮೆಯಿಂದ ಕಾದನೆಂದೂ ವದಂತಿಯಿದೆ. ಅರಸನ ಬೆಂಬಲದಿಂದಾಗಿ ಏಟ್ಯೆನ್ ಸಾರ್ಬಾನನ್ನು ಎದುರಿಸಿ ನಿಂತನು.
ದೇವತಾಶಾಸ್ತ್ರಜ್ಞರು ಅವನ ಬೈಬಲುಗಳ ಮೇಲೆ ನಿಷೇಧ ಹಾಕುತ್ತಾರೆ
ಆದರೆ 1545 ರಲ್ಲಿ, ಸಾರ್ಬಾನ್ನ ಪಂಡಿತ ವರ್ಗದ ಪೂರ್ತಿ ಕೋಪವು ಏಟ್ಯೆನನ ಮೇಲೆ ಕೇಂದ್ರೀಕೃತವಾಯಿತು. ಸುಧಾರಕರ ಎದುರು ಒಂದು ಐಕ್ಯ ರಂಗವನ್ನು ಪ್ರದರ್ಶಿಸುವ ಪ್ರಯೋಜನವನ್ನು ಕಂಡು, ಕಲೋನ್ (ಜರ್ಮನಿ), ಲೂವ್ಯಾನ್ (ಬೆಲ್ಚಿಯಮ್), ಮತ್ತು ಪ್ಯಾರಿಸ್ನ ಕ್ಯಾತೊಲಿಕ್ ವಿಶ್ವವಿದ್ಯಾಲಯಗಳು ಅಸಾಂಪ್ರದಾಯಿಕ ಬೋಧನೆಗಳ ಸೆನ್ಸರಿನಲ್ಲಿ ಜೊತೆಗೂಡಲು ಮೊದಲೇ ಸಮ್ಮತಿಸಿದ್ದವು. ಲೂವ್ಯಾನ್ ವಿಶ್ವವಿದ್ಯಾಲಯದ ದೇವತಾಶಾಸ್ತ್ರಜ್ಞರು ಸಾರ್ಬಾನ್ಗೆ, ಏಟ್ಯೆನನ ಬೈಬಲುಗಳು ಪ್ಯಾರಿಸ್ನ ನಿಷೇಧಿಸಲ್ಪಟ್ಟ ಪುಸ್ತಕಗಳ ಮಧ್ಯೆ ಇಲ್ಲದಿರುವುದಕ್ಕೆ ಆಶ್ಚರ್ಯವನ್ನು ವ್ಯಕ್ತಪಡಿಸಿದಾಗ, ಅವರು ಸುಳ್ಳು ಹೇಳುತ್ತಾ, ತಾವು ಅವುಗಳನ್ನು ನೋಡಿದ್ದರೆ ನಿಶ್ಚಯವಾಗಿಯೂ ನಿಷೇಧಿಸುತ್ತಿದ್ದೆವು ಎಂದು ಉತ್ತರ ಕೊಟ್ಟರು. ಪಂಡಿತ ವರ್ಗದಲ್ಲಿದ್ದ ಏಟ್ಯೆನನ ಶತ್ರುಗಳು ಈಗ, ಲೂವ್ಯಾನ್ ಮತ್ತು ಪ್ಯಾರಿಸ್ನ ಪಂಡಿತ ವರ್ಗಗಳ ಸಂಯೋಜಿತ ಅಧಿಕಾರವು ತನ್ನ ಮುದ್ರಣಕಾರನ ತಪ್ಪುಗಳನ್ನು I ನೆಯ ಫ್ರಾನ್ಸಿಸನಿಗೆ ಮನವರಿಕೆಮಾಡಲು ಸಾಕೆಂಬ ಭರವಸೆಯನ್ನು ತಾಳಿದರು.
ಆದರೆ ಈ ಮಧ್ಯೆ, ತನ್ನ ಶತ್ರುಗಳ ಇಂಗಿತಗಳ ಕುರಿತು ಎಚ್ಚರಿಸಲ್ಪಟ್ಟವನಾದ ಏಟ್ಯೆನ್, ಮೊದಲಾಗಿ ತಾನೇ ಅರಸನಿಗೆ ಭೇಟಿಕೊಟ್ಟನು. ದೇವತಾಶಾಸ್ತ್ರಜ್ಞರು ತಾವೇ ಕಂಡುಹಿಡಿದಿದ್ದ ಯಾವುದೇ ತಪ್ಪುಗಳ ಒಂದು ಪಟ್ಟಿಯನ್ನು ಒದಗಿಸುವಲ್ಲಿ, ತಾನು ಆ ದೇವತಾಶಾಸ್ತ್ರಜ್ಞರ ತಿದ್ದಾಣಿಕೆಗಳೊಂದಿಗೆ ಅದನ್ನು ಮುದ್ರಿಸುವೆನೆಂದೂ ಮಾರಾಟವಾಗುವ ಪ್ರತಿಯೊಂದು ಬೈಬಲಿನೊಂದಿಗೆ ಅವು ಸೇರಿರುವುವೆಂದೂ ಏಟ್ಯೆನ್ ಸೂಚಿಸಿದನು. ಈ ಪರಿಹಾರವು ರಾಜನ ಅನುಗ್ರಹವನ್ನು ಸಂಪಾದಿಸಿತು. ತನ್ನ ರಾಜಯೋಗ್ಯ ಸಹಾಯಕ ಪೀಎರ್ ಡ್ಯೂ ಷಾಸೆಲ್ಟ್ ಇದರ ಜಾಗ್ರತೆ ವಹಿಸುವಂತೆ ಅವನು ಕೇಳಿಕೊಂಡನು. ಅಕ್ಟೋಬರ 1546 ರಲ್ಲಿ ಪಂಡಿತ ವರ್ಗವು ವಿರೋಧ ಸೂಚಿಸುತ್ತಾ, ಏಟ್ಯೆನನ ಬೈಬಲುಗಳು, “ನಮ್ಮ ವಿಶ್ವಾಸಗಳನ್ನು ಅಲ್ಲಗಳೆಯುವವರಿಗೆ ಮತ್ತು ಪ್ರಚಲಿತ . . . ಪಾಷಂಡವಾದಗಳನ್ನು ಬೆಂಬಲಿಸುವವರಿಗೆ ಗ್ರಾಸ” ವೆಂದೂ ಅವುಗಳಲ್ಲಿ ಎಷ್ಟು ತಪ್ಪುಗಳಿವೆಯೆಂದರೆ, “ಅವನ್ನು ಪೂರ್ತಿ ಅಳಿಸಿ ನಿರ್ಮೂಲ ಮಾಡಬೇಕು,” ಎಂದು ಡ್ಯೂ ಷಾಸೆಲ್ಟ್ಗೆ ಬರೆದರು. ಇದರಿಂದ ಮನವರಿಕೆಯಾಗದವನಾಗಿ, ಅರಸನು ಈಗ ಸ್ವತಃ, ಏಟ್ಯೆನನ ಬೈಬಲುಗಳೊಂದಿಗೆ ಮುದ್ರಿಸಲ್ಪಡುವಂತೆ ಪಂಡಿತ ವರ್ಗ ತನ್ನ ಆಕ್ಷೇಪಣೆಗಳನ್ನು ಒದಗಿಸಬೇಕೆಂದು ಆಜ್ಞಾಪಿಸಿದನು. ಇದನ್ನು ತಾವು ಒದಗಿಸುತ್ತೇವೆಂದು ಅವರು ವಚನ ಕೊಟ್ಟರೂ, ಆ ಊಹಿತ ತಪ್ಪುಗಳ ವಿವರವಾದ ಪಟ್ಟಿಯನ್ನು ಒದಗಿಸುವುದನ್ನು ತಪ್ಪಿಸಲು ತಮಗೆ ಸಾಧ್ಯವಿರುವುದನ್ನೆಲ್ಲ ಮಾಡಿದರು.
ಮಾರ್ಚ್ 1547 ರಲ್ಲಿ I ನೆಯ ಫ್ರಾನ್ಸಿಸ್ ಸತ್ತನು ಮತ್ತು ಅವನೊಂದಿಗೆ ಸಾರ್ಬಾನ್ನ ಎದುರಾಗಿ ಏಟ್ಯೆನನಿಗಿದ್ದ ಅತ್ಯಂತ ಸಮರ್ಥ ಸಹಕಾರವು ಗತಿಸಿಹೋಯಿತು. II ನೆಯ ಹೆನ್ರಿ ಸಿಂಹಾಸನವನ್ನೇರಿದಾಗ, ಅವನು ಆಕ್ಷೇಪಣೆಗಳನ್ನು ಒದಗಿಸುವ ತನ್ನ ತಂದೆಯ ಆಜ್ಞೆಯನ್ನು ನವೀಕರಿಸಿದನು. ಆದರೂ, ಜರ್ಮನ್ ರಾಜಕುಮಾರರು ಸುಧಾರಣೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಹೇಗೆ ಉಪಯೋಗಿಸುತ್ತಾರೆಂಬುದನ್ನು ಅವಲೋಕಿಸುತ್ತಾ, II ನೆಯ ಹೆನ್ರಿಯು ರಾಜಯೋಗ್ಯ ಮುದ್ರಣಕಾರನ ಬೈಬಲುಗಳ ಊಹಿತ ಪ್ರಯೋಜನ, ಅಪ್ರಯೋಜನಗಳ ಸಂಬಂಧದಲ್ಲಿ, ಫ್ರಾನ್ಸ್ ಕ್ಯಾತೊಲಿಕ್ ಆಗಿರುವುದಕ್ಕಿಂತ ಮತ್ತು ಹೊಸ ರಾಜನ ಕೆಳಗೆ ಐಕ್ಯವಾಗಿರುವುದಕ್ಕಿಂತ ಕಡಮೆ ಚಿಂತಿತನಾಗಿದ್ದನು. ದಶಂಬರ 10, 1547 ರಲ್ಲಿ ಪ್ರಿವಿ ಕೌನ್ಸಿಲು, ದೇವತಾಶಾಸ್ತ್ರಜ್ಞರು ತಮ್ಮ ಆಕ್ಷೇಪಣೆಗಳ ಪಟ್ಟಿಯನ್ನು ಒದಗಿಸುವ ತನಕ ಏಟ್ಯೆನನ ಬೈಬಲುಗಳ ಮಾರಾಟವನ್ನು ನಿಷೇಧಿಸಲು ನಿರ್ಣಯಿಸಿತು.
ಪಾಷಂಡವಾದಿಯಾಗಿದ್ದನೆಂದು ಆಪಾದಿಸಲ್ಪಟ್ಟದ್ದು
ಪಂಡಿತ ವರ್ಗವು ಈಗ ಏಟ್ಯೆನನ ಮೊಕದ್ದಮೆಯನ್ನು, ಪಾಷಂಡವಾದದ ಮೊಕದ್ದಮೆಗಳನ್ನು ವಿಚಾರಿಸಲು ಹೊಸದಾಗಿ ಏರ್ಪಡಿಸಿದ ವಿಶೇಷ ನ್ಯಾಯಸ್ಥಾನಕ್ಕೆ ವರ್ಗಾಯಿಸಲು ಪ್ರಯತ್ನಿಸಿತು. ತಾನಿದ್ದ ಅಪಾಯದ ಜ್ಞಾಪನವು ಏಟ್ಯೆನನಿಗೆ ಅಗತ್ಯವಿರಲಿಲ್ಲ. ನ್ಯಾಯಸ್ಥಾನವು ರಚಿಸಲ್ಪಟ್ಟ ಎರಡು ವರ್ಷಗಳೊಳಗಾಗಿ, ಅದು ಷಾನ್ಬ್ರಾ ಆರ್ಡಾಂಟ್ ಅಥವಾ “ಉರಿಯುವ ಕೋಣೆ” ಎಂದು ಪ್ರಸಿದ್ಧವಾಯಿತು. ಸುಮಾರು 60 ಮಂದಿ ಆಹುತಿಗಳನ್ನು ಸುಡುಗಂಬಕ್ಕೆ ಕಳುಹಿಸಲಾಯಿತು. ಇವರಲ್ಲಿ ಪ್ಲಾಸ್ ಮೋಬರ್ನಲ್ಲಿ, ಏಟ್ಯೆನನ ಮನೆಯ ಎದುರು ಬಾಗಿಲಿನಿಂದ ತುಸು ದೂರದಲ್ಲಿ ಜೀವಸಹಿತ ಸುಟ್ಟ ಕೆಲವು ಮುದ್ರಣಕಾರರು ಮತ್ತು ಪುಸ್ತಕ ವ್ಯಾಪಾರಿಗಳು ಸೇರಿದ್ದರು. ಏಟ್ಯೆನನ ಮನೆಯನ್ನು, ಅವನ ವಿರುದ್ಧ ಲೇಶವಾದರೂ ರುಜುವಾತು ದೊರೆಯುವಂತೆ ಪದೇ ಪದೇ ಝಡತಿ ಮಾಡಲಾಯಿತು. 80 ಕ್ಕೂ ಹೆಚ್ಚು ಮಂದಿ ಸಾಕ್ಷಿಗಳನ್ನು ವಿಚಾರಿಸಲಾಯಿತು. ಪಾಷಂಡವಾದದ ಅಪರಾಧನಿಶ್ಚಯವಾಗುವಲ್ಲಿ ಅವನ ವಸ್ತುಗಳಲ್ಲಿ ಕಾಲುಭಾಗ ಕೊಡಲಾಗುವುದೆಂದು ಗುಟ್ಟಿನಿಂದ ಅಪರಾಧ ತಿಳಿಸುವವರಿಗೆ ವಾಗ್ದಾನಿಸಲಾಯಿತು. ಹೀಗಿದ್ದರೂ, ಏಟ್ಯೆನ್ ತನ್ನ ಬೈಬಲಿನಲ್ಲಿ ಬಹಿರಂಗವಾಗಿ ಏನನ್ನು ಮುದ್ರಿಸಿದ್ದನೊ ಅದು ಮಾತ್ರ ಅವರಿಗಿದ್ದ ಏಕಮಾತ್ರ ರುಜುವಾತಾಗಿತ್ತು.
ಪಂಡಿತ ವರ್ಗದ ಆಕ್ಷೇಪಣೆಗಳ ಪಟ್ಟಿಯನ್ನು ಪ್ರಿವಿ ಕೌನ್ಸಿಲಿಗೆ ಒಪ್ಪಿಸಬೇಕೆಂದು ಅರಸನು ಪುನಃ ಆಜ್ಞಾಪಿಸಿದನು. ಹಠದಿಂದ, ಪಂಡಿತ ವರ್ಗವು, ‘ಪಾಷಂಡವಾದವನ್ನು ಖಂಡಿಸಲು ಕಾರಣಗಳನ್ನು ಬರೆದಿಡುವ ಅಭ್ಯಾಸ ದೇವತಾಶಾಸ್ತ್ರಜ್ಞರಿಗಿಲ್ಲ, ಅವರು ಕೇವಲ ಮಾತಿನಿಂದ ಉತ್ತರಕೊಡುತ್ತಾರೆಂದು ತಾವು ನಂಬಬೇಕು. ಇಲ್ಲದಿರುವಲ್ಲಿ ಬರವಣಿಗೆಗೆ ಅಂತ್ಯವಿರಲಿಕ್ಕಿಲ್ಲ,’ ಎಂದು ಉತ್ತರಕೊಟ್ಟಿತು. ಹೆನ್ರಿ ಇದಕ್ಕೆ ಒಪ್ಪಿದನು. ಅಂತಿಮ ನಿಷೇಧ ಹಾಕಲ್ಪಟ್ಟಿತು. ಬಹುಮಟ್ಟಿಗೆ ಏಟ್ಯೆನನ ಪ್ರತಿಯೊಂದು ಬೈಬಲ್ ಸಂಬಂಧವಾದ ಕೃತಿಯು ಖಂಡಿಸಲ್ಪಟ್ಟಿತು. ಏಟ್ಯೆನನು ಪ್ಲಾಸ್ ಮೋಬರ್ನ ಬೆಂಕಿಯಿಂದ ತಪ್ಪಿಸಿಕೊಂಡರೂ, ತನ್ನ ಬೈಬಲ್ಗಳ ಮೇಲಿನ ಪೂರ್ತಿ ನಿಷೇಧದ ಎದುರಿನಲ್ಲಿ ಮತ್ತು ಇನ್ನೂ ಹೆಚ್ಚಿನ ಕಿರುಕುಳದ ಸಂಭನೀಯತೆಯ ಎದುರಿನಲ್ಲಿ ಫ್ರಾನ್ಸ್ಗೆ ಹೋಗಲು ನಿರ್ಣಯಿಸಿದನು.
ದೇಶಭ್ರಷ್ಟನಾದ ಮುದ್ರಣಕಾರ
ನವಂಬರ 1550 ರಲ್ಲಿ ಏಟ್ಯೆನ್ ಸ್ವಿಟ್ಸರ್ಲೆಂಡಿನ ಜಿನೀವಕ್ಕೆ ಮನೆ ಬದಲಾಯಿಸಿದನು. ಫ್ರಾನ್ಸ್ನಲ್ಲಿ ವಲ್ಗೆಟ್ ಬಿಟ್ಟು ಇನ್ನಾವ ಬೈಬಲನ್ನೂ ಪ್ರಕಟಿಸುವುದನ್ನು ಪಂಡಿತ ವರ್ಗವು ನ್ಯಾಯ ವಿರುದ್ಧವಾಗಿ ಮಾಡಿತ್ತು. ತನಗೆ ಇಷ್ಟವಿರುವುದನ್ನು ಪ್ರಕಟಿಸುವ ಸ್ವಾತಂತ್ರ್ಯ ಈಗ ಉಳ್ಳವನಾಗಿ, ಏಟ್ಯೆನ್ ತನ್ನ ಗ್ರೀಕ್ “ಹೊಸ ಒಡಂಬಡಿಕೆ” ಯನ್ನು 1551 ರಲ್ಲಿ, ಸಮಾನಾಂತರ ಅಂಕಣಗಳಲ್ಲಿ ಎರಡು ಲ್ಯಾಟಿನ್ ಭಾಷಾಂತರ (ವಲ್ಗೆಟ್ ಮತ್ತು ಇರ್ಯಾಸ್ಮಸ್) ಗಳೊಂದಿಗೆ ಪುನಃ ಮುದ್ರಿಸಿದನು. ಇದನ್ನನುಸರಿಸಿ, 1552 ರಲ್ಲಿ, ಸಮಾನಾಂತರವಾಗಿ ಇರ್ಯಾಸ್ಮಸ್ನ ಲ್ಯಾಟಿನ್ ಮೂಲಪಾಠಗಳೊಂದಿಗೆ ಅವನು ಗ್ರೀಕ್ ಶಾಸ್ತ್ರಗ್ರಂಥಗಳ ಫ್ರೆಂಚ್ ಭಾಷಾಂತರವನ್ನು ಪ್ರಕಟಿಸಿದನು. ಈ ಎರಡು ಆವೃತ್ತಿಗಳಲ್ಲಿ, ಬೈಬಲ್ ವಾಕ್ಯಗಳನ್ನು ಅಂಕಿಗಳಿರುವ ವಚನಗಳಾಗಿ ವಿಭಾಗಿಸುವ ಪದ್ಧತಿ—ಇಂದು ಸಾರ್ವತ್ರಿಕವಾಗಿ ಬಳಕೆಯಲ್ಲಿರುವಂತೆಯೆ—ಯನ್ನು ಏಟ್ಯೆನ್ ಪರಿಚಯ ಮಾಡಿಸಿದನು. ಈ ಹಿಂದೆ ಇತರರು ವಚನ ವಿಭಾಗಕ್ಕೆ ವಿಭಿನ್ನ ಹಂಚಿಕೆಗಳನ್ನು ಪ್ರಯತ್ನಿಸಿದ್ದರೂ, ಏಟ್ಯೆನನದ್ದು ಅಂಗೀಕರಿಸಲ್ಪಟ್ಟ ರೂಪವಾಗಿ ಪರಿಣಮಿಸಿತು. 1553ರ ಅವನ ಫ್ರೆಂಚ್ ಬೈಬಲು ಅವನ ವಚನ ವಿಭಾಗಗಳನ್ನು ಒದಗಿಸಿದ ಪ್ರಥಮ ಪೂರ್ತಿ ಬೈಬಲಾಗಿತ್ತು.
ಏಟ್ಯೆನನ 1557ರ ಎರಡು ತರ್ಜುಮೆಗಳ ಲ್ಯಾಟಿನ್ ಬೈಬಲು, ಹೀಬ್ರು ಶಾಸ್ತ್ರ ಗ್ರಂಥಗಳಲ್ಲೆಲ್ಲ ದೇವರ ಯೆಹೋವ ಎಂಬ ವೈಯಕ್ತಿಕ ಹೆಸರನ್ನು ಬಳಸಿರುವುದಕ್ಕೆ ಸಹ ಗಮನಾರ್ಹವಾಗಿದೆ. ಎರಡನೆಯ ಕೀರ್ತನೆಯ ಮಾರ್ಜಿನ್ನಲ್ಲಿ, ಹೀಬ್ರು ಚತುರಕ್ಷರಿ ಪವಿತ್ರ ಪದ (יהוה, ಟೆಟ್ರಗ್ರ್ಯಾಮಟಾನ್)ದ ಬದಲಿಗೆ ಅಧೊನೊಯಿ ಎಂಬ ಪದವನ್ನು ಉಪಯೋಗಿಸಿದ್ದು ಯೆಹೂದಿ ಮೂಢನಂಬಿಕೆಯ ಮೇಲೆ ಮಾತ್ರ ಆಧಾರಿಸಿತ್ತು ಮತ್ತು ಅದನ್ನು ವಿಸರ್ಜಿಸತಕ್ಕದ್ದು ಎಂದು ಅವನು ಬರೆದನು. ಈ ಆವೃತ್ತಿಯಲ್ಲಿ ಏಟ್ಯೆನ್, ಹೀಬ್ರುವಿನ ಅರ್ಥವನ್ನು ಪೂರ್ತಿಗೊಳಿಸಲು ಕೂಡಿಸಲ್ಪಟ್ಟ ಲ್ಯಾಟಿನ್ ಪದಗಳನ್ನು ಸೂಚಿಸಲಿಕ್ಕೆ ಓರೆ ಅಕ್ಷರಗಳನ್ನು ಉಪಯೋಗಿಸಿದನು. ಈ ಆಚಾರವನ್ನು ತರುವಾಯ ಇತರ ಬೈಬಲುಗಳಿಗೆ ಆಯ್ದುಕೊಳ್ಳಲಾಯಿತು. ಒತ್ತನ್ನು ತೋರಿಸಲು ಓರೆ ಅಕ್ಷರಗಳ ಆಧುನಿಕ ಉಪಯೋಗವು ರೂಢಿಯಾಗಿರುವ ಇಂದಿನ ಓದುಗರನ್ನು ಈ ಪರಂಪರೆಯು ಅನೇಕ ವೇಳೆ ತಬ್ಬಿಬ್ಬಾಗಿಸುತ್ತದೆ.
ತನ್ನ ಕಲಿಕೆಯನ್ನು ಇತರರಿಗೆ ಲಭ್ಯವಾಗಿಸುವ ದೃಢಮನಸ್ಸುಳ್ಳವನಾಗಿ ಏಟ್ಯೆನ್ ತನ್ನ ಜೀವನವನ್ನು ಪವಿತ್ರ ಶಾಸ್ತ್ರಗಳ ಪ್ರಕಾಶನಕ್ಕೆ ಮೀಸಲಾಗಿಟ್ಟನು. ಇಂದು ದೇವರ ವಾಕ್ಯವನ್ನು ಬೆಲೆಯುಳ್ಳದ್ದೆಂದು ಎಣಿಸುವವರು ಅವನ ಪ್ರಯತ್ನಗಳಿಗೆ ಮತ್ತು ಆದಿಯಲ್ಲಿ ಬರೆದಿದ್ದಂತೆ ಬೈಬಲಿನ ಮಾತುಗಳನ್ನು ಬಯಲುಮಾಡಲು ಶ್ರಮ ತೆಗೆದುಕೊಂಡ ಇತರರ ಪ್ರಯತ್ನಗಳಿಗಾಗಿ ಕೃತಜ್ಞರಾಗಿರಸಾಧ್ಯವಿದೆ. ಅವರು ಆರಂಭಿಸಿದ ಕಾರ್ಯಗತಿಯು, ನಾವು ಪುರಾತನ ಭಾಷೆಗಳ ಹೆಚ್ಚು ನಿಷ್ಕೃಷ್ಟ ಜ್ಞಾನವನ್ನು ಸಂಪಾದಿಸಿದಂತೆ ಮತ್ತು ದೇವರ ವಾಕ್ಯದ ಹೆಚ್ಚು ಹಳೆಯದಾದ ಮತ್ತು ಹೆಚ್ಚು ನಿಷ್ಕೃಷ್ಟವಾದ ಹಸ್ತಪ್ರತಿಗಳನ್ನು ಕಂಡುಹಿಡಿದಂತೆ, ಮುಂದುವರಿಯುತ್ತದೆ. ಅವನ ಮರಣ (1559)ಕ್ಕೆ ತುಸು ಮೊದಲು, ಏಟ್ಯೆನ್ ಗ್ರೀಕ್ ಶಾಸ್ತ್ರಗಳ ಒಂದು ಹೊಸ ಭಾಷಾಂತರದ ಕೆಲಸದಲ್ಲಿದ್ದನು. ಅವನನ್ನು, “ಅದನ್ನು ಯಾರು ಖರೀದಿಸುವರು? ಯಾರು ಓದುವರು?” ಎಂದು ಕೇಳಲಾಯಿತು. ಅವನು ಭರವಸೆಯಿಂದ ಉತ್ತರ ಕೊಟ್ಟದ್ದು: ‘ದಿವ್ಯ ಭಕ್ತಿಯ ಸಕಲ ವಿದ್ಯಾವಂತ ಜನರು.’
[ಅಧ್ಯಯನ ಪ್ರಶ್ನೆಗಳು]
a ಅವನ ಹೆಸರಿನ ಲ್ಯಾಟಿನ್ ರೂಪವಾದ ಸೆಫ್ಟನಸ್ ಮತ್ತು ಆಂಗ್ಲೀಕರಿಸಿದ ಹೆಸರಾದ ಸ್ಟೀವನ್ಸ್ನಿಂದಲೂ ಅವನು ಪ್ರಸಿದ್ಧನು.
[ಪುಟ 10 ರಲ್ಲಿರುವ ಚಿತ್ರ]
ರಾಬರ್ ಏಟ್ಯೆನನ ಪ್ರಯತ್ನಗಳು ಬೈಬಲ್ ವಿದ್ಯಾರ್ಥಿಗಳ ಅನೇಕ ಸಂತತಿಯವರಿಗೆ ಸಹಾಯ ಮಾಡಿವೆ
[ಕೃಪೆ]
Bibliothèque Nationale, Paris
[ಪುಟ 12 ರಲ್ಲಿರುವ ಚಿತ್ರ]
ಏಟ್ಯೆನನ ಬೋಧಪ್ರದ ದೃಷ್ಟಾಂತಗಳನ್ನು ಅನೇಕ ಸಂತತಿಗಳಲ್ಲಿ ಅನುಕರಿಸಲಾಗಿದೆ
[ಕೃಪೆ]
Bibliothèque Nationale, Paris