ವಾಸ್ತವವಾದ ಜೀವವನ್ನು ಬಹುಮೂಲ್ಯವೆಂದೆಣಿಸಿರಿ
ಇರುವುದು ಈ ಜೀವಿತ ಮಾತ್ರವೋ? “ವಾಸ್ತವವಾದ ಜೀವದ ಮೇಲೆ ಭದ್ರವಾದ ಹಿಡಿತವನ್ನಿಡಲು” ನಮ್ಮನ್ನು ಉತ್ತೇಜಿಸುವ ಮೂಲಕ, ಇನ್ನೂ ಹೆಚ್ಚಿನದಿದ್ದೆಯೆಂದು ಬೈಬಲು ಸೂಚಿಸುತ್ತದೆ. (1 ತಿಮೊಥೆಯ 6:17-19, NW) ನಮ್ಮ ಸದ್ಯದ ಜೀವವು ವಾಸ್ತವ ಜೀವವಾಗಿರದಿದ್ದರೆ, ವಾಸ್ತವ ಜೀವವು ಏನಾಗಿದೆ?
ಒಬ್ಬ ದೇವಭಯವುಳ್ಳ ವ್ಯಕ್ತಿಯು “ನಿತ್ಯ ಜೀವ”ದ ಮೇಲೆ ಒಂದು ಭದ್ರವಾದ ಹಿಡಿತವನ್ನು ಪಡೆಯಬೇಕೆಂದು ಈ ಮೊದಲು ತಿಳಿಸಲ್ಪಟ್ಟ ವಚನದ ಪೂರ್ವಾಪರವು ತೋರಿಸುತ್ತದೆ. (1 ತಿಮೊಥೆಯ 6:12) ಅಧಿಕಾಂಶ ಜನರಿಗೆ, ಇದು ಭೂಮಿಯ ಮೇಲೆ ನಿತ್ಯ ಜೀವದ ಅರ್ಥದಲ್ಲಿದೆ. ಪ್ರಥಮ ಮನುಷ್ಯನಾದ ಆದಾಮನಿಗೆ, ಒಂದು ಪ್ರಮೋದವನ ಭೂಮಿಯ ಮೇಲೆ ಸದಾಕಾಲ ಜೀವಿಸುವ ಪ್ರತೀಕ್ಷೆಯಿತ್ತು. (ಆದಿಕಾಂಡ 1:26, 27) “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು” ಅವನು ತಿಂದರೆ ಮಾತ್ರ ಅವನು ಸಾಯಲಿದ್ದನು. (ಆದಿಕಾಂಡ 2:17) ಆದರೆ ಅದಾಮ ಮತ್ತು ಅವನ ಪತ್ನಿ ಹವ್ವ, ಅವಿಧೇಯತೆಯಿಂದ ಆ ಮರದ ಹಣ್ಣನ್ನು ತಿಂದ ಕಾರಣ ದೇವರು ಮರಣದ ತೀರ್ಪನ್ನು ವಿಧಿಸಿದನು. ಅವರು ಅದನ್ನು ‘ತಿಂದ ದಿನವೇ’ ದೇವರ ದೃಷ್ಟಿಕೋನದಲ್ಲಿ ಸತ್ತರು ಮತ್ತು ಶಾರೀರಿಕ ಮರಣದೆಡೆಗೆ ಅವರ ಉರುಳುವಿಕೆಯನ್ನು ಆರಂಭಿಸಿದರು. ಅವರ ಜೀವಿತವು ಅವರು ಮೊದಲು ಆನಂದಿಸಿದ್ದ ಗುಣಮಟ್ಟದ್ದಾಗಿರಲಿಲ್ಲ.
“ವಾಸ್ತವವಾದ ಜೀವ”ಕ್ಕೆ ಮಾರ್ಗ
“ವಾಸ್ತವವಾದ ಜೀವ” ವನ್ನು ಸಾಧ್ಯಮಾಡಲಿಕ್ಕಾಗಿ, ಯೆಹೋವ ದೇವರು ಮಾನವ ಕುಲವನ್ನು ರಕ್ಷಿಸಲು ಒಂದು ಏರ್ಪಾಡನ್ನು ಮಾಡಿದನು. ಈ ಏರ್ಪಾಡನ್ನು ಗ್ರಹಿಸಲು, ನಾವು ಒಂದು ಚಿಕ್ಕ ಕಾರ್ಖಾನೆಯನ್ನು ಕಲ್ಪಿಸಿಕೊಳ್ಳೋಣ. ಅದರಲ್ಲಿರುವ ಎಲ್ಲಾ ಯಂತ್ರಗಳು ದೋಷಯುಕ್ತವಾಗಿವೆ ಮತ್ತು ಯಂತ್ರ ನಡಸುವವರಿಗೆ ತೊಂದರೆಯನ್ನುಂಟುಮಾಡುತ್ತವೆ ಯಾಕೆಂದರೆ ವರ್ಷಗಳ ಹಿಂದೆ ಮೊದಲ ಕಾರ್ಮಿಕನು ಯಂತ್ರಚಾಲಕರಿಗಾಗಿರುವ ಕೈಪಿಡಿಯನ್ನು ಅಲಕ್ಷಿಸಿದ್ದನು ಮತ್ತು ಎಲ್ಲಾ ಯಂತ್ರಗಳನ್ನು ಕೆಡಿಸಿದನು. ಪ್ರಸ್ತುತದಿನದ ಯಂತ್ರಚಾಲಕರು ಅವರಿಗೆ ಲಭ್ಯವಿರುವ ಯಂತ್ರಗಳೊಂದಿಗೆ ತಮಗೆ ಸಾಧ್ಯವಾಗಿರುವುದನ್ನು ಮಾತ್ರ ಮಾಡಬಲ್ಲರು. ತನ್ನ ಕಾರ್ಮಿಕರಿಗೆ ಸಹಾಯ ಮಾಡಲು ಕಾರ್ಖಾನೆ ಮಾಲಿಕನು ಯಂತ್ರಗಳನ್ನು ಪುನಃನಿರ್ಮಿಸ ಬಯಸುತ್ತಾನೆ, ಮತ್ತು ಆ ಉದ್ದೇಶಕ್ಕಾಗಿ ಅವಶ್ಯವಾಗಿರುವ ಬಂಡವಾಳವನ್ನು ಅವನು ಬದಿಗಿರಿಸುತ್ತಿದ್ದಾನೆ.
ಮೊದಲ ‘ಯಂತ್ರ ಚಾಲಕ’ ಆದಾಮನು, ತನಗೆ ಕೊಡಲ್ಪಟ್ಟಿದ್ದ ಜೀವವನ್ನು ಬಹುಮೂಲ್ಯವೆಂದೆಣಿಸಲಿಲ್ಲ. ಆದುದರಿಂದ, ಅವನು ತನ್ನ ಸಂತಾನಕ್ಕೆ ಒಂದು ಕೆಲಸ ಮಾಡದ ಯಂತ್ರಕ್ಕೆ ಹೋಲುವ, ಅಪರಿಪೂರ್ಣ ಜೀವವನ್ನು ದಾಟಿಸಿದನು. (ರೋಮಾಪುರ 5:12) ಸನ್ನಿವೇಶವನ್ನು ಸರಿಪಡಿಸಲಾಗದ ಕಾರ್ಖಾನೆಯ ತದನಂತರದ ಕಾರ್ಮಿಕರಂತೆ, ಆದಾಮನ ಸಂತಾನದವರು ತಮಗಾಗಿ ವಾಸ್ತವವಾದ ಜೀವವನ್ನು ಹೊಂದಲು ಅಶಕ್ತರಾಗಿದ್ದಾರೆ. (ಕೀರ್ತನೆ 49:7) ನಿರೀಕ್ಷಾಹೀನವಾಗಿ ತೋರುವ ಈ ಸನ್ನಿವೇಶವನ್ನು ಸರಿಪಡಿಸಲು, ಯೆಹೋವನು ತನ್ನ ಏಕ-ಮಾತ್ರ ಪುತ್ರನನ್ನು ಮಾನವಕುಲಕ್ಕಾಗಿ ನಿತ್ಯ ಜೀವವನ್ನು ಪುನಃ ಕೊಂಡುಕೊಳ್ಳುವಂತೆ ಈ ಭೂಮಿಗೆ ಕಳುಹಿಸಿದನು. (ಲೂಕ 1:35; 1 ಪೇತ್ರ 1:18, 19) ಮಾನವಕುಲಕ್ಕೋಸ್ಕರ ಒಂದು ಯಜ್ಞಾರ್ಪಿತ ಮರಣವನ್ನು ಸಾಯುವ ಮೂಲಕ, ದೇವರ ಏಕಮಾತ್ರ ಪುತ್ರನಾದ ಯೇಸು ಕ್ರಿಸ್ತನು, ಬಂಡವಾಳವನ್ನು—ಆದಾಮನು ಕಳೆದುಕೊಂಡಿದ್ದ ಜೀವಕ್ಕೆ ಅನುರೂಪವಾಗಿರುವಂತಹ ಜೀವವನ್ನು—ಒದಗಿಸಿದನು. (ಮತ್ತಾಯ 20:28; 1 ಪೇತ್ರ 2:22) ಈ ಅಮೂಲ್ಯ ಯಜ್ಞದೊಂದಿಗೆ, ಈಗ ಯೆಹೋವನಿಗೆ ವಾಸ್ತವವಾದ ಜೀವಿತವನ್ನು ಒದಗಿಸಲು ಆಧಾರವಿದೆ.
ವಿಧೇಯ ಮಾನವಕುಲಕ್ಕಾಗಿ, ಯೇಸುವಿನ ಪ್ರಾಯಶ್ಚಿತ್ತ ಯಜ್ಞವು ಒಂದು ಭೂಪ್ರಮೋದವನದಲ್ಲಿ ನಿತ್ಯ ಜೀವದ ಅರ್ಥದಲ್ಲಿರುವದು. (ಕೀರ್ತನೆ 37:29) ಹರ್ಮಗೆದೋನ್ ಎಂದು ಸೂಚಿಸಲ್ಪಡುವ, “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ವನ್ನು ಪಾರಾಗುವವರೆಲರ್ಲಿಗೆ ಈ ನಿರೀಕ್ಷೆಯನ್ನು ನೀಡಲಾಗಿದೆ. (ಪ್ರಕಟನೆ 16:14-16) ಅದು ಭೂಮಿಯಿಂದ ಎಲ್ಲಾ ದುಷ್ಟತನವನ್ನು ನಿರ್ಮೂಲನಮಾಡುವುದು. (ಕೀರ್ತನೆ 37:9-11) ಆ ಸಮಯದ ಮುಂಚೆ ಸತ್ತು ದೇವರ ಜ್ಞಾಪಕದಲ್ಲಿರುವವರು, ಭೂಮಿಯ ಮೇಲೆ ಪುನಃಸ್ಥಾಪಿಸಲ್ಪಟ್ಟ ಪ್ರಮೋದವನದಲ್ಲಿ ಪುನರುತ್ಥಾನಗೊಳಿಸಲ್ಪಡುವರು ಮತ್ತು ದೇವರಿಗೆ ವಿಧೇಯರಾಗಿರುವವರೆಲ್ಲರಿಗೆ ಲಭ್ಯವಾಗಿರುವ ವಾಸ್ತವ ಜೀವಿತವನ್ನು ಆನಂದಿಸುವ ಪ್ರತೀಕ್ಷೆಯುಳ್ಳವರಾಗಿರುವರು.—ಯೋಹಾನ 5:28, 29.
ನಮ್ಮ ಸದ್ಯದ ಜೀವವನ್ನು ಪೋಷಿಸುವ ಅಗತ್ಯ
ನಮ್ಮ ಸದ್ಯದ ಜೀವದ ಪವಿತ್ರತೆಗಾಗಿ ನಾವು ತಕ್ಕದ್ದಾಗಿ ಅನಾದರವನ್ನು ತೋರಿಸಬಹುದೆಂದು ಇದರ ಅರ್ಥವಲ್ಲ. ಅದರ ಆರೈಕೆಯನ್ನು ಮಾಡದ ಒಬ್ಬ ಕಾರ್ಮಿಕನಿಗಾಗಿ ಒಂದು ಯಂತ್ರವನ್ನು ಪುನಃನಿರ್ಮಿಸಲು ಕಾರ್ಖಾನೆಯ ಮಾಲಿಕನು ಸಮಯ ಮತ್ತು ಹಣವನ್ನು ವ್ಯಯಿಸುವನೋ? ಅದರ ಬದಲು, ಹಳೆಯ ಯಂತ್ರವನ್ನು ದುರಸ್ತಾಗಿಡಲು ತನ್ನಿಂದಾದಷ್ಟನ್ನು ಮಾಡಿದ ವ್ಯಕ್ತಿಗೆ ಪುನಃನಿರ್ಮಿತವಾದ ಯಂತ್ರವನ್ನು ಯಜಮಾನನು ಒಪ್ಪಿಸುವುದಿಲ್ಲವೋ?
ಜೀವವು ಯೆಹೋವನಿಂದ ಒಂದು ಅಮೂಲ್ಯ ಕೊಡುಗೆಯಾಗಿದೆ. ಆ ವರದಾನದ ಪ್ರೀತಿಯ ಮೂಲನೋಪಾದಿ, ನಾವು ಅದನ್ನು ಪೋಷಿಸಬೇಕೆಂದು ಆತನು ಬಯಸುತ್ತಾನೆ. (ಕೀರ್ತನೆ 36:9; ಯಾಕೋಬ 1:17) ಭೂಮಿಯ ಮೇಲಿರುವ ಜನರ ವಿಷಯದಲ್ಲಿ ದೇವರ ಚಿಂತೆಯ ಕುರಿತಾಗಿ ಮಾತಾಡುತ್ತಾ, ಯೇಸು ಅಂದದ್ದು: “ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.” (ಲೂಕ 12:7) ಯೆಹೋವನು ಇಸ್ರಾಯೇಲ್ಯರಿಗೆ ಕೊಲೆ ಮಾಡಬಾರದೆಂದು ಆಜ್ಞಾಪಿಸಿದ್ದನು, ಇದು ಸ್ವಾಭಾವಿಕವಾಗಿ ಒಬ್ಬನು ತನ್ನನ್ನೇ ಕೊಲ್ಲದಿರುವದನ್ನು ಒಳಗೂಂಡಿತು. (ವಿಮೋಚನಕಾಂಡ 20:13) ಆತ್ಮಹತ್ಯೆಯನ್ನು ಒಂದು ಆಯ್ಕೆಯಾಗಿ ದೃಷ್ಟಿಸುವದನ್ನು ಹೋಗಲಾಡಿಸಲು ಇದು ನಮಗೆ ಸಹಾಯ ಮಾಡುತ್ತದೆ.
ನಮ್ಮ ಸುಕ್ಷೇಮದಲ್ಲಿ ಯೆಹೋವನ ಪ್ರೀತಿಪೂರ್ವಕ ಆಸಕ್ತಿಯನ್ನು ತಿಳಿದಿರಲಾಗಿ, ದೇವಭಯವುಳ್ಳ ಜನರು ಪ್ರಸ್ತುತದಿನದ ಆಚಾರಗಳಿಗೆ ಬೈಬಲ್ ಸೂತ್ರಗಳನ್ನು ಅನ್ವಯಿಸುತ್ತಾರೆ. ಉದಾಹರಣೆಗಾಗಿ, ‘ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತವ್ವನ್ನು ಸಿದ್ಧಿಗೆ ತರುವದು’ ಕ್ರೈಸ್ತರಿಂದ ಅಪೇಕ್ಷಿಸಲ್ಪಟ್ಟಿರುವದರಿಂದ, ಸತ್ಯ ಕ್ರೈಸ್ತರು ತಂಬಾಕು ಮತ್ತು ಮನಸ್ಸನ್ನು-ಮಾರ್ಪಡಿಸುವ ಚಟ ಹಿಡಿಸುವ ಅಮಲೌಷಧಗಳಿಂದ ದೂರವಿರುತ್ತಾರೆ.—2 ಕೊರಿಂಥ 7:1.
“ಶಾಂತ ಹೃದಯ” ವನ್ನು ಕಾಪಾಡುವ ಮತ್ತು ಅನೈತಿಕ ನಡತೆಯನ್ನು ಹೋಗಲಾಡಿಸುವ ಆತನ ಸಲಹೆಯಿಂದ ಮಾನವ ಜೀವದಲ್ಲಿ ದೇವರ ಆಸಕ್ತಿಯು ಇನ್ನೂ ಹೆಚ್ಚಾಗಿ ಕಾಣಲಾಗುತ್ತದೆ. (ಜ್ಞಾನೋಕ್ತಿ 14:30 NW; ಗಲಾತ್ಯ 5:19-21) ಈ ಉಚ್ಚ ಮಟ್ಟಗಳಿಗೆ ಅಂಟಿಕೊಳ್ಳುವ ಮೂಲಕ ನಾವು ಆರೋಗ್ಯಕ್ಕೆ ಹಾನಿಕರವಾದ ಕೋಪ ಮತ್ತು ರತಿ ರವಾನಿತ ರೋಗಗಳಂಥ ವಿಷಯಗಳಿಂದ ರಕ್ಷಿಸಲ್ಪಡುತ್ತೇವೆ.
ಮಿತಿಮೀರಿದ ತಿನ್ನುವಿಕೆ ಮತ್ತು ಕುಡಿಯುವಿಕೆಯನ್ನು ನಿಗ್ರಹಿಸುವ ಆತನ ಬುದ್ಧಿವಾದದಿಂದಲೂ ಆತನ ಜನರ ಜೀವಗಳಿಗಾಗಿರುವ ಯೆಹೋವನ ಚಿಂತೆಯು ವ್ಯಕ್ತವಾಗುತ್ತದೆ. (ಧರ್ಮೋಪದೇಶಕಾಂಡ 21:18-21; ಜ್ಞಾನೋಕ್ತಿ 23:20, 21) ಲೋಭಿಗಳು ಮತ್ತು ಕುಡುಕರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂದು, ಅಂದರೆ ಅವರು ವಾಸ್ತವವಾದ ಜೀವನವನ್ನು ಎಂದೂ ಅನುಭವಿಸರೆಂದು ಕ್ರೈಸ್ತರು ಎಚ್ಚರಿಸಲ್ಪಡುತ್ತಾರೆ. (1 ಕೊರಿಂಥ 6:9, 10; 1 ಪೇತ್ರ 4:3) ಮಿತಸ್ವಭಾವವನ್ನು ಪ್ರೋತ್ಸಾಹಿಸುವ ಮೂಲಕ, ನಾವು ಸ್ವತಃ ಲಾಭ ಪಡೆಯುವಂತೆ ಯೆಹೋವನು ಕಲಿಸುತ್ತಾನೆ.—ಯೆಶಾಯ 48:17.
ನಾವು ದೇವರ ಮಟ್ಟಗಳನ್ನು ಪಾಲಿಸುವಾಗ, ನಮ್ಮ ಸದ್ಯದ ಜೀವವನ್ನು ಬಹುಮೂಲ್ಯವೆಂದೆಣಿಸುತ್ತೇವೆಂದು ನಾವು ತೋರಿಸುತ್ತೇವೆ. ಖಂಡಿತವಾಗಿಯೂ, ವಾಸ್ತವವಾದ ಜೀವಿತವು ಇನ್ನೂ ಹೆಚ್ಚು ಮಹತ್ವದ್ದಾಗಿದೆ. ಅದು ಅನಂತಕಾಲದ್ದಾಗಿರುವದರಿಂದ, ಸತ್ಯ ಕ್ರೈಸ್ತರು ತಮ್ಮ ಸದ್ಯದ ಜೀವಕ್ಕಿಂತ ಅದಕ್ಕೆ ಹೆಚ್ಚು ಪ್ರಮುಖತೆ ಕೊಡುತ್ತಾರೆ. ಯೇಸು ಕ್ರಿಸ್ತನು ತನ್ನ ಜೀವವನ್ನು ಸಮರ್ಪಿಸಿದಾಗ, ಆತನು ಯೆಹೋವನ ಚಿತ್ತಕ್ಕೆ ತನ್ನನ್ನು ಅಧೀನಪಡಿಸಿಕೊಂಡನು. ಇಲ್ಲಿ ಭೂಮಿಯ ಮೇಲೆ ತನ್ನ ಜೀವಿತಕ್ಕಿಂತ ತನ್ನ ತಂದೆಗೆ ವಿಧೇಯತೆಯು ಆತನಿಗೆ ಹೆಚ್ಚಿನ ಅರ್ಥದಲ್ಲಿತ್ತು. ಯೇಸುವಿನ ಮಾರ್ಗಕ್ರಮವು ಆತನ ಪುನರುತ್ಥಾನ ಮತ್ತು ಸ್ವರ್ಗದಲ್ಲಿ ಅಮರ ಜೀವವನ್ನು ಪಡೆಯುವದರಲ್ಲಿ ಪರಿಣಮಿಸಿತು. (ರೋಮಾಪುರ 6:9) ಅವನ ಮರಣವು ಆತನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಡುವ ವಿಧೇಯ ಮಾನವಕುಲಕ್ಕೆ ನಿತ್ಯ ಜೀವದ ಅರ್ಥದಲ್ಲಿಯೂ ಇದೆ.—ಇಬ್ರಿಯ 5:8, 9; 12:2.
ರಕ್ತದ ಮೇಲೆ ಮುಖ್ಯವಾದ ನಿಯಮ
ಯೇಸುವಿನ ಹಿಂಬಾಲಕರು ಆತನ ಆಲೋಚನೆಯನ್ನು ಪ್ರತಿಬಿಂಬಿಸುತ್ತಾರೆ ಎಂಬದು ಗ್ರಾಹ್ಯ. ಕ್ರಿಸ್ತನು ಮಾಡಿದಂತೆಯೇ ಅವರು ದೇವರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸಲು ಹುಡುಕುತ್ತಾರೆ. ಕೆಲವು ವೈದ್ಯರು ಜೀವರಕ್ಷಕವೆಂದು ಹೇಳುವ ರಕ್ತ ಪೂರಣಗಳನ್ನು ಅವರು ನಿರಾಕರಿಸುವ ಕಾರಣವನ್ನು ಇದು ವಿವರಿಸುತ್ತದೆ. ರಕ್ತಪೂರಣಗಳನ್ನು ನಿರಾಕರಿಸುವ ಮೂಲಕ ಒಬ್ಬ ವ್ಯಕ್ತಿಯು ವಾಸ್ತವವಾದ ಜೀವವನ್ನು ಬಹುಮೂಲ್ಯವೆಂದೆಣಿಸುತ್ತಾನೆಂದು ಹೇಗೆ ತೋರಿಸುತ್ತಾನೆಂದು ನಾವು ನೋಡೋಣ.
ಯೇಸು ಕ್ರಿಸ್ತನಂತೆ, ಸತ್ಯ ಕ್ರೈಸ್ತರು ದೇವರ ದೃಷ್ಟಿಕೋನದಲ್ಲಿ ಜೀವವುಳ್ಳವರಾಗಿರಲು ಆಶಿಸುತ್ತಾರೆ ಮತ್ತು ಅದಕ್ಕೆ ಆತನಿಗೆ ಪೂರ್ಣವಾದ ವಿಧೇಯತೆಯು ಅವಶ್ಯ. ದೇವರ ವಾಕ್ಯವು ಕ್ರಿಸ್ತನ ಹಿಂಬಾಲಕರಿಗೆ ಆಜ್ಞಾಪಿಸುವದು: “ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ಹಾದರವನ್ನೂ ವಿಸರ್ಜಿಸುವದು ಅವಶ್ಯವಾಗಿದೆ.” (ಅ. ಕೃತ್ಯಗಳು 15:28, 29) ಕ್ರೈಸ್ತರು ಬದ್ಧರಾಗಿರುವ ಆಜ್ಞೆಗಳಲ್ಲಿ ರಕ್ತದ ಕುರಿತಾದ ಈ ನಿಯಮವು ಏಕೆ ಒಳಗೂಡಿಸಲ್ಪಟ್ಟಿತ್ತು?
ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ನಿಯಮವು ರಕ್ತದ ವರ್ಜನೆಯನ್ನು ಅವಶ್ಯಪಡಿಸಿತು. (ಯಾಜಕಕಾಂಡ 17:13, 14) ಕ್ರೈಸ್ತರು ಮೋಶೆಯ ನಿಯಮಶಾಸ್ತ್ರದ ಕೆಳಗಿಲ್ಲ. ಆದರೆ ರಕ್ತವನ್ನು ತಿನ್ನಬಾರದೆಂಬ ಆಜ್ಞೆಯು ನಿಯಮಶಾಸ್ತ್ರಕ್ಕಿಂತ ಮುಂಚೆ ಇತ್ತೆಂದು, ಪ್ರಳಯದ ನಂತರ ಮೊದಲಲ್ಲಿ ಅದು ನೋಹನಿಗೆ ಕೊಡಲ್ಪಟ್ಟಿತ್ತೆಂದು ಅವರು ಅರಿಯುತ್ತಾರೆ. (ಆದಿಕಾಂಡ 9:3, 4; ಕೊಲೊಸ್ಸೆ 2:13, 14) ಯಾರಿಂದ ಭೂಮಿಯ ಎಲ್ಲಾ ಜನಾಂಗಗಳು ಹುಟ್ಟಿವೆಯೋ, ಆ ನೋಹನ ಸಂತಾನದವರೆಲ್ಲರಿಗೆ ಈ ಆಜ್ಞೆಯು ಅನ್ವಯಿಸಿತು. (ಆದಿಕಾಂಡ 10:32) ಇದಕ್ಕೆ ಕೂಡಿಸಿ, ರಕ್ತದ ಪವಿತ್ರತೆಯ ಮೇಲೆ ದೇವರ ಒತ್ತಾಯಕ್ಕೆ ಕಾರಣವನ್ನು ನೋಡಲು ಮೋಶೆಯ ನಿಯಮಶಾಸ್ತ್ರವು ನಮಗೆ ಸಹಾಯ ಮಾಡುತ್ತದೆ. ಯಾವುದೇ ರೀತಿಯ ರಕ್ತವನ್ನು ತಿನ್ನಬಾರದೆಂದು ಇಸ್ರಾಯೇಲ್ಯರನ್ನು ನಿಷೇಧಿಸಿದ ನಂತರ, ದೇವರು ಹೇಳಿದ್ದು: “ಯಾಕಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರವಾಗುತ್ತದಷ್ಟೆ.” (ಯಾಜಕಕಾಂಡ 17:11) ಯಜ್ಞವೇದಿಯ ಮೇಲೆ ಯಜ್ಞಾರ್ಪಣ ಉಪಯೋಗಕ್ಕಾಗಿ ರಕ್ತವು ದೇವರಿಂದ ಕಾದಿರಿಸಲ್ಪಟ್ಟಿತ್ತು. ರಕ್ತದ ಪವಿತ್ರತೆಯ ಮೇಲಿನ ಆತನ ನಿಯಮವು, ಭೂಮಿಯ ಮೇಲಿರುವ ಎಲ್ಲಾ ಜೀವದ ಮೇಲೆ ಆತನ ಅಧಿಕಾರವನ್ನು ಪ್ರಕಟಿಸುತ್ತದೆ. (ಯೆಹೆಜ್ಕೇಲ 18:4; ಪ್ರಕಟನೆ 4:11) ಯೆಹೋವನ ದೃಷ್ಟಿಕೋನದಿಂದ ನಮ್ಮ ಜೀವವನ್ನು ನೋಡುವಾಗ, ಅದು ನಮ್ಮದಲ್ಲ ಬದಲಾಗಿ ದೇವರಿಂದ ನಮಗೆ ಕೇವಲ ವಹಿಸಲ್ಪಡುತ್ತದೆಯೆಂದು ನಾವು ಗ್ರಹಿಸುತ್ತೇವೆ.
ನಮ್ಮ ದೃಷ್ಟಾಂತದಲ್ಲಿನ ಯಂತ್ರಚಾಲಕನು ಒಂದು ಯಂತ್ರಕ್ಕಾಗಿ ಜವಾಬ್ದಾರನಾಗಿದ್ದಂತೆ, ನಮ್ಮ ಸದ್ಯದ ಜೀವವು ನಮಗೆ ವಹಿಸಲ್ಪಟ್ಟಿದೆ. ನಿಮ್ಮ ಯಂತ್ರಕ್ಕೆ ರಿಪೇರಿ ಮಾಡುವ ಆವಶ್ಯಕತೆಯಿದ್ದು, ಯಂತ್ರ ಚಾಲಕರಿಗಾಗಿರುವ ಕೈಪಿಡಿಯಲ್ಲಿ ನಿರ್ದಿಷ್ಟವಾಗಿ ನಿಷೇಧಿಸಲ್ಪಟ್ಟ ಭಾಗಗಳನ್ನು ಉಪಯೋಗಿಸುವ ಮೂಲಕ ಅದನ್ನು ರಿಪೇರಿ ಮಾಡಲು ಒಬ್ಬ ಯಂತ್ರಿಗನು ಸಲಹೆ ಕೊಡುವದಾದರೆ ನೀವೇನು ಮಾಡುವಿರಿ? ಕೈಪಿಡಿಯಲ್ಲಿರುವ ಸೂಚನೆಗಳನುಸಾರವಾಗಿ ಯಂತ್ರವನ್ನು ಸರಿಪಡಿಸಬಹುದೋ ಎಂದು ನೋಡಲು ನೀವು ಇತರ ಯಂತ್ರಿಗರನ್ನು ವಿಚಾರಿಸುವದಿಲ್ಲವೋ? ಮಾನವ ಜೀವವು ಒಂದು ಯಂತ್ರಕ್ಕಿಂತ ಹೆಚ್ಚು ಪ್ರಾಮುಖ್ಯವೂ ಜಟಿಲವೂ ಆಗಿದೆ. ಮಾನವರನ್ನು ಜೀವಿತರಾಗಿರಿಸಲು ಇರುವ ಕೈಪಿಡಿಯಾದ ಆತನ ಪ್ರೇರಿತ ವಾಕ್ಯದಲ್ಲಿ, ಜೀವವನ್ನು ಪೋಷಿಸಲು ರಕ್ತದ ಉಪಯೋಗವನ್ನು ನಮ್ಮ ನಿರ್ಮಾಣಿಕನು ನಿಷೇಧಿಸುತ್ತಾನೆ. (ಧರ್ಮೋಪದೇಶಕಾಂಡ 32:46, 47; ಫಿಲಿಪ್ಪಿ 2:16) ಆ ಕೈಪಿಡಿಯ ಆವಶ್ಯಕತೆಗಳಿಗೆ ಅಂಟಿಕೊಳ್ಳುವದು ಸಮಂಜಸವಲ್ಲವೋ?
ನಿಜವಾಗಿಯೂ, ತಮ್ಮ ರೋಗಸ್ಥಿತಿಯ ರಕ್ತರಹಿತವಾದ ನಿರ್ವಹಣೆಗಾಗಿ ಕೇಳಿಕೊಳ್ಳುವ ಕ್ರೈಸ್ತ ರೋಗಿಗಳು ಎಲ್ಲಾ ವೈದ್ಯಕೀಯ ಚಿಕಿತ್ಸೆಯನ್ನು ತಿರಸ್ಕರಿಸುವದಿಲ್ಲ. ಅವರ ಸದ್ಯದ ಮತ್ತು ಭವಿಷ್ಯದ ಜೀವಕ್ಕಾಗಿ ಗೌರವವನ್ನು ತೋರಿಸುವ ಚಿಕಿತ್ಸೆಗಾಗಿ ಮಾತ್ರ ಅವರು ಕೇಳಿಕೊಳ್ಳುತ್ತಿದ್ದಾರೆ. ಕ್ರೈಸ್ತರಿಂದ ತೆಗೆದುಕ್ಕೊಳ್ಳಲ್ಪಟ್ಟ ನಿಲುವನ್ನು ಧೈರ್ಯದಿಂದ ಗೌರವಿಸುವ ವೈದ್ಯರು ಅವರ ಬೇಡಿಕೆಗನುಸಾರವಾಗಿ ಅವರಿಗೆ ಚಿಕಿತ್ಸೆ ನೀಡುವುದರ ಲಾಭಗಳಿಗೆ ಸಾಕ್ಷ್ಯವನ್ನು ನೀಡುತ್ತಾರೆ. “ಯೆಹೋವನ ಸಾಕ್ಷಿಗಳೊಂದಿಗಿನ ಭೇಟಿಯು ನನ್ನನ್ನು ಮೌಲ್ಯಗಳ ಒಂದು ಹೊಸ ವಿನ್ಯಾಸದ ಕಡೆಗೆ ನಡಿಸಿತು” ಎಂದು ರಕ್ತವನ್ನು ವ್ಯಾಪಕವಾಗಿ ಉಪಯೋಗಿಸುತ್ತಿದ್ದ ಶಸ್ತ್ರವೈದ್ಯನೊಬ್ಬನು ಹೇಳಿದನು. ಈಗ ಅವನು ಸಾಕ್ಷಿಯಾಗಿರದವರಿಗೆ ಸಹ ರಕ್ತವಿಲ್ಲದೆ ಚಿಕಿತ್ಸೆ ನಡಿಸಲು ಪ್ರಯತ್ನಿಸುತ್ತಾನೆ.
ವಾಸ್ತವವಾದ ಜೀವವನ್ನು ಬಹುಮೂಲ್ಯವೆಂದೆಣಿಸುವದು
ಯೆಹೋವನ ಸಾಕ್ಷಿಗಳಿಗೆ ಚಿಕಿತ್ಸೆ ನೀಡುವದರಿಂದ ಈ ಶಸ್ತ್ರವೈದ್ಯನು ಕಂಡುಕೂಂಡ ಮೌಲ್ಯಗಳ ಹೊಸ ಕಟ್ಟು ಯಾವುದು? ಒಬ್ಬ ರೋಗಿಗೆ ಚಿಕಿತ್ಸೆ ನೀಡುವುದು ಕೇವಲ ರೋಗದಿಂದ ಬಾಧಿಸಲ್ಪಟ್ಟ ದೇಹದ ಭಾಗವನ್ನು ಮಾತ್ರವಲ್ಲ ಬದಲಾಗಿ ಇಡೀ ವ್ಯಕ್ತಿಯನ್ನೇ ಒಳಗೂಡುತ್ತದೆಂದು ಅವನು ಈಗ ಗ್ರಹಿಸುತ್ತಾನೆ. ಅವನ ಅಥವಾ ಅವಳ ಶಾರೀರಿಕ, ಆತ್ಮಿಕ ಮತ್ತು ಭಾವನಾತ್ಮಕ ಸುಕ್ಷೇಮದ ಉತ್ತಮ ಆರೈಕೆಗಾಗಿ ಕೇಳಿಕೊಳ್ಳುವಂತೆ ಒಬ್ಬ ರೋಗಿಯು ಅನುಮತಿಸಲ್ಪಡಬಾರದೋ?
ತನ್ನ ಮಾರಕ ಲೂಕೇಮೀಯಕ್ಕೆ ಚಿಕಿತ್ಸೆ ಕೊಡಲು ಒಂದು ರಕ್ತಪೂರಣವು, 15 ವರ್ಷದ ಕುಮಿಕೊಗೆ ಸಾಧ್ಯವಿದ್ದವುಗಳಲ್ಲಿ ಅತ್ಯಂತ ಕೆಟ್ಟ ಆಯ್ಕೆಯಾಗಿತ್ತು. ಅವಳ ಜೀವವನ್ನು ಈ ವಿಧಾನದ ಮೂಲಕ ಕೆಲವು ವಾರಗಳು, ತಿಂಗಳುಗಳು ಅಥವಾ ವರ್ಷಗಳಿಗೂ ಲಂಬಿಸಲು ಪ್ರಯತ್ನಿಸುವುದು, ದೀರ್ಘವಾದ ಓಟದಲ್ಲಿ ಅವಳು ತೆರಬೇಕಾದ ಬೆಲೆಗೆ ಅರ್ಹವಾಗಿರಲಿಲ್ಲ. ಆತನ ಸಾಕ್ಷಿಗಳಲ್ಲಿ ಒಬ್ಬಳೋಪಾದಿ ಅವಳ ಸದ್ಯದ ಜೀವಿತವನ್ನು ಯೆಹೋವ ದೇವರಿಗೆ ಸಮರ್ಪಿಸಿದುದರಿಂದ ಅವಳು ಜೀವ ಮತ್ತು ರಕ್ತದ ಪವಿತ್ರತೆಯನ್ನು ಗೌರವಿಸಿದಳು. ಅವಳ ತಂದೆ ಮತ್ತು ಇತರ ಸಂಬಂಧಿಕರು ಅವಳ ನಿಲುವನ್ನು ಬಲವಾಗಿ ವಿರೋಧಿಸಿದರೂ, ಕುಮಿಕೊ ದೃಢವಾಗಿದ್ದಳು. ಅವಳ ವೈದ್ಯನು ಒಮ್ಮೆ ಅವಳಿಗೆ ಹೀಗೆ ಕೇಳಿದನು: “ನಿನ್ನ ದೇವರು ತಪ್ಪಿಬಿದ್ದವರನ್ನು ಕ್ಷಮಿಸುತ್ತಾನಾದರೆ, ನೀನು ಸಹ ರಕ್ತಪೂರಣವೊಂದನ್ನು ಸ್ವೀಕರಿಸಿದರೆ ಅವನು ಕ್ಷಮಿಸಲಿಕ್ಕಿಲ್ಲವೋ?” ಕುಮಿಕೊ ಒಪ್ಪಂದವನ್ನು ಮಾಡಲು, ಹೀಗೆ ತನ್ನ ಬೈಬಲ್ ಆಧಾರಿತ ವಿಶ್ವಾಸವನ್ನು ತ್ಯಜಿಸಲು ನಿರಾಕರಿಸಿದಳು. “ಜೀವದ ವಾಕ್ಯದ ಮೇಲೆ ಒಂದು ಭದ್ರವಾದ ಹಿಡಿತವನ್ನು ಇಡುತ್ತಾ” ಅವಳು ತನ್ನ ನಿಲುವನ್ನು ಕಾಪಾಡಿಕೊಂಡಳು. (ಫಿಲಿಪ್ಪಿ 2:16, NW) ಅವಳ ಅವಿಶ್ವಾಸಿ ಅಜ್ಜಿ ಹೇಳಿದಂತೆ “ಕುಮಿಕೊ ತನ್ನ ನಂಬಿಕೆಯನ್ನು ತೊರೆಯಲು ಸಿದ್ಧಳಿರಲಿಲ್ಲ.” ಬೇಗನೇ ಅವಳ ತಂದೆ ಮತ್ತು ಅಜ್ಜಿ ಹಾಗೂ ಚಿಕಿತ್ಸೆ ನೀಡುತ್ತಿದ್ದ ವೈದ್ಯರುಗಳ ಮನೋಭಾವವು ಬದಲಾಯಿತು.
ಅವಳನ್ನು ಸತ್ತವರೊಳಗಿಂದ ಪುನರುತ್ಥಾನಗೊಳಿಸಶಕ್ತನಾದ ಯೆಹೋವ ದೇವರಲ್ಲಿ ಕುಮಿಕೊನ ಬಲವಾದ ನಂಬಿಕೆಯು, ಅನೇಕರ ಮನಸ್ಸನ್ನು ಕರಗಿಸಿತು. ಇನ್ನೂ ಜೀವಂತಳಾಗಿದ್ದಾಗ, ಅವಳು ತನ್ನ ತಂದೆಗೆ ಹೀಗೆ ಬೇಡಿಕೊಂಡಳು: “ನಾನು ಸತ್ತರೂ, ನನ್ನನ್ನು ಪ್ರಮೋದವನದಲ್ಲಿ ಪುನರುತ್ಥಾನಗೊಳಿಸಲಾಗುವದು. ಆದರೆ ನೀವು ಹರ್ಮಗೆದೋನಿನಲ್ಲಿ ನಾಶವಾದರೆ, ನಾನು ನಿಮ್ಮನ್ನು ಕಾಣಲಾರೆನು. ಆದುದರಿಂದ ದಯವಿಟ್ಟು ಬೈಬಲನ್ನು ಅಭ್ಯಾಸಿಸಿ.” “ನೀನು ಗುಣವಾದ ನಂತರ ನಾನು ಹಾಗೆ ಮಾಡುವೆನು” ಎಂದು ಅವಳ ತಂದೆ ಹೇಳುತ್ತಾ ಇದ್ದನು. ಆದರೆ ಕುಮಿಕೊ ತನ್ನ ಪಟ್ಟುಸಡಿಲಿಸದ ಕಾಯಿಲೆಯಿಂದ ಸತ್ತಾಗ, ಅವಳ ತಂದೆ ಅವಳ ಶವಪೆಟ್ಟಿಗೆಯಲ್ಲಿ ಹೀಗನ್ನುವ ಒಂದು ಚೀಟಿಯನ್ನು ಹಾಕಿದನು: “ನಾನು ನಿನ್ನನ್ನು ಪ್ರಮೋದವನದಲ್ಲಿ ನೋಡುವೆನು, ಕುಮಿಕೊ.” ಹೂಣಿಡುವ ಸಂಸ್ಕಾರದ ನಂತರ, ಅವನು ಸಂಸ್ಕಾರಕ್ಕೆ ಹಾಜರಾದ ಕೆಲವರೊಂದಿಗೆ ಮಾತಾಡಿದನು ಮತ್ತು ಹೀಗಂದನು: “ನಾನು ಅವಳನ್ನು ಪ್ರಮೋದವನದಲ್ಲಿ ನೋಡುವೆನೆಂದು ನಾನು ಕುಮಿಕೊಗೆ ವಚನಕೊಟ್ಟಿದ್ದೇನೆ. ನಾನು ಸಾಕಷ್ಟು ಅಧ್ಯಯನವನ್ನು ಮಾಡಿರದ ಕಾರಣ, ನಾನು ಇನ್ನೂ ಅದರಲ್ಲಿ ನಂಬಲು ಸಾಧ್ಯವಾಗದಿದ್ದರೂ, ನಾನು ಅದನ್ನು ಜಾಗ್ರತೆಯಿಂದ ಪರೀಕ್ಷಿಸಲು ನಿರ್ಧಾರಿತನಾಗಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿರಿ.” ಅವಳ ಕುಟುಂಬದಲ್ಲಿ ಇತರರು ಸಹ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದರು.
ಕುಮಿಕೊಗೆ ಜೀವಕ್ಕಾಗಿ ನಿಜವಾದ ಗೌರವವಿತ್ತು ಮತ್ತು ಅವಳು ಜೀವಿಸಲು ಬಯಸಿದಳು. ಅವಳ ಸದ್ಯದ ಜೀವವನ್ನು ರಕ್ಷಿಸಲು ಅವಳ ವೈದ್ಯರುಗಳು ಮಾಡಿದ್ದೆಲ್ಲವನ್ನು ಅವಳು ಗಣ್ಯಮಾಡಿದಳು. ಸೃಷ್ಟಿಕರ್ತನ ಕೈಪಿಡಿಯಲ್ಲಿರುವ ಸೂಚನೆಗಳನ್ನು ಅನುಸರಿಸುವ ಮೂಲಕವಾದರೋ, ಅವಳು ವಾಸ್ತವವಾದ ಜೀವನವನ್ನು ಬಹುಮೂಲ್ಯವೆಂದೆಣಿಸಿದಳೆಂದು ಅವಳು ತೋರಿಸಿಕೊಟ್ಟಳು. ಲಕ್ಷಾಂತರ ಜನರಿಗೆ ಅದು ಪ್ರಮೋದವನ ಭೂಮಿಯ ಮೇಲೆ ನಿತ್ಯ ಜೀವವಾಗಿರುವದು. ನೀವು ಅವರ ಮಧ್ಯೆ ಇರುವಿರೋ?