ಜೀವವು ನಿಮಗೆ ಎಷ್ಟು ಅಮೂಲ್ಯವಾಗಿದೆ?
ಒಬ್ಬ ಹದಿವಯಸ್ಕ ಹುಡುಗನು ಒಂದು ವಾಸದ ಕಟ್ಟಡದ ಎಂಟನೆಯ ಮಾಳಿಗೆಯಿಂದ ಹಾರಿ ಸತ್ತನು. ಮೃತ್ಯು ನೆಗೆತವನ್ನು “ನೋವು ಅಥವಾ ಆತಂಕ ಅಥವಾ ಭಯದಿಂದ ಮುಕ್ತ; ಒಂದು ಒಳ್ಳೆಯ ಭಾವನೆಯನ್ನು ಕೊಡುವಂತಹದ್ದಾಗಿ” ವರ್ಣಿಸುವ ಒಂದು ಪುಸ್ತಕವನ್ನು ಅವನು ಓದಿದ್ದನು. ಜಪಾನಿನಲ್ಲಿ ಪ್ರಕಾಶಿತವಾದ ಈ ಪುಸ್ತಕದ ಗ್ರಂಥಕರ್ತನು “ಆತ್ಮಹತ್ಯೆಯನ್ನು ಜೀವನದ ಆಯ್ಕೆಗಳಲ್ಲಿ ಒಂದಾಗಿ” ಮಾತ್ರ ನೀಡುತ್ತಿದ್ದೇನೆಂದು ವಾದಿಸಿದನು.
ಆತ್ಮಹತ್ಯೆ ಮಾಡಿಕೊಳ್ಳುವವರು ಮಾತ್ರ ಇಂದು ಜೀವಕ್ಕಾಗಿ ಅನಾದರವನ್ನು ತೋರಿಸುವವರಾಗಿರುವದಿಲ್ಲ. ನಿರ್ಲಕ್ಷ ವಾಹನ ಚಾಲಕರು ಸಹ ಜೀವಕ್ಕಾಗಿ ಸ್ವಲ್ಪವೇ ಆದರವನ್ನು ತೋರಿಸುತ್ತಾರೆ. ಕೆಲವು ಚಾಲಕರು ಮದ್ಯದ ಪ್ರಭಾವದಲ್ಲಿರುವಾಗಲೂ ವಾಹನ ನಡೆಸುತ್ತಾ ಇವರಲ್ಲಿ ಅನೇಕರು ಬೀದಿಯಲ್ಲಿ ಬಿರ್ರನೆ ತಮ್ಮ ಮರಣಕ್ಕೆ ಸಾಗುತ್ತಾರೆ.
ಇತರರು ಸುಖಾನುಭವಕ್ಕೆ ಕೊಡುವ ಪ್ರಾಧಾನ್ಯದಿಂದ ತಾವು ತಮ್ಮ ಜೀವಕ್ಕೆ ಎಷ್ಟು ಕಡಿಮೆ ಬೆಲೆ ಕೊಡುತ್ತೇವೆಂದು ತೋರಿಸುತ್ತಾರೆ. ಧೂಮಪಾನವು ಮರಣವನ್ನುಂಟು ಮಾಡಬಲ್ಲದ್ದಾಗಿದ್ದು, ನಿಧಾನ ಗತಿಯ ಆತ್ಮಹತ್ಯೆಯೆಂದು ಕರೆಯಲ್ಪಟ್ಟಿರುವುದಾದರೂ ಧೂಮಪಾನಿಗಳು ಧೂಮಪಾನಮಾಡುವದನ್ನು ನಿಲ್ಲಿಸಲು ನಿರಾಕರಿಸುತ್ತಾರೆ. ಈ ಕಾಮೋನ್ಮತ ಲೋಕದಲ್ಲಿ ಅವ್ಯಭಿಚಾರತೆಯನ್ನು ಕಾಪಾಡುವದರ ಬದಲಿಗೆ, ಅನೇಕ ಸಲ ಮರಣಕ್ಕೆ ನಡಿಸುವ ಒಂದು ಸ್ವೇಚ್ಛಾ ಮಾರ್ಗಕ್ರಮವನ್ನು ಅನೇಕರು ಬೆನ್ನಟ್ಟುತ್ತಾರೆ.
ಅದರ ಅರಿವೂ ಇಲ್ಲದೆ, ಕೆಲವರು ಮಿತಿಮೀರಿದ ತಿನ್ನುವಿಕೆ ಮತ್ತು ಮಿತಿಮೀರಿದ ಕುಡಿಯುವಿಕೆ, ಸಾಕಷ್ಟು ವ್ಯಾಯಾಮದ ಕೊರತೆ, ಮತ್ತು ಸುಖಾನುಭವದ ಹುಡುಕುವಿಕೆಯಿಂದ ಜೀವಿತದ ವರ್ಷಗಳನ್ನು ತಮ್ಮಿಂದ ವಂಚಿಸಿಕೊಳ್ಳುತ್ತಾರೆ. ಜಪಾನಿ ಗ್ರಂಥಕರ್ತ ಶಿನ್ಯಾ ನಿಷಿಮಾರು ಎಚ್ಚರಿಸಿದ್ದು: “ಅನಿರ್ಬಂಧಿತ ತಿನ್ನುವ ಹವ್ಯಾಸಗಳು ಶರೀರ ವಿಜ್ಞಾನದ ಕ್ರಿಯೆಗಳನ್ನು ಕೆಡಿಸುತ್ತವೆ, ಮತ್ತು ಬೇರೇನೂ ಅಲ್ಲದೆ ಸೌಕರ್ಯ ಹಾಗೂ ಸುಖಾನುಭವದ ಬೆನ್ನಟ್ಟುವಿಕೆಯು ಜನರ ಚೈತನ್ಯವನ್ನು ಸವೆಯಿಸುತ್ತದೆ.” ಪುರಾತನ ಕಾಲಗಳಲ್ಲಿ ಹೀಗಂದವರ ನೋಟದಲ್ಲಿ ಕೆಲವರು ಪಾಲಿಗರಾಗುತ್ತಾರೆ: “ನಾಳೆ ಸಾಯುತ್ತೇವೆಂದು ತಿಂದು ಕುಡಿ” ಯೋಣ.—ಯೆಶಾಯ 22:13; 1 ಕೊರಿಂಥ 15:32.
ಹೌದು, ಇಂದು ಜೀವಕ್ಕಾಗಿ ಅನಾದರವು ಅತಿರೇಕವಾಗಿದೆ. ಆದುದರಿಂದ, ನಿಮಗೆ ಜೀವವು ಎಷ್ಟು ಅಮೂಲ್ಯವಾಗಿದೆ? ಎಂದು ಕೇಳುವುದು ತಕ್ಕದ್ದಾಗಿರುವದು. ಯಾವುದೇ ಬೆಲೆಯನ್ನು ತೆತ್ತಾದರೂ ಜೀವವನ್ನು ಸಂರಕ್ಷಿಸಬೇಕೋ? ಮತ್ತು ನಮ್ಮ ಸದ್ಯದ ಜೀವಕ್ಕಿಂತ ಹೆಚ್ಚು ಬೆಲೆಬಾಳುವಂತಹದ್ದು ಏನಾದರೂ ಇದೆಯೋ?