ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು—ಪೋರ್ಟ ರೀಕೊ
ಕ್ಯಾರಿಬೀಯನ್ ಸಮುದ್ರ ಮತ್ತು ಅಟ್ಲಾಂಟಿಕ್ ಸಮುದ್ರದ ಮಧ್ಯದಲ್ಲಿ ಪೋರ್ಟ ರೀಕೊದ ಹುಲುಸಾದ, ಉಷ್ಣವಲಯ ದ್ವೀಪವು ನೆಲೆಸಿರುತ್ತದೆ. 1493 ರಲ್ಲಿ ಕ್ರಿಸ್ಟಫರ್ ಕಲಂಬಸ್ ಅದನ್ನು ಸ್ಪೆಯಿನ್ಗಾಗಿ ಕೇಳಿಕೊಂಡನು ಮತ್ತು ಅದನ್ನು ಸ್ನಾನಿಕನಾದ ಯೋಹಾನನ ನೆನಪಿನಲ್ಲಿ ಸಾನ್ವಾನ್ ಬಾವ್ಟಿಸ್ಟ ಎಂದು ಹೆಸರಿಸಿದನು. ದೀರ್ಘಸಮಯದ ತನಕ ಅದರ ಅತಿ ದೊಡ್ಡದಾದ ನಗರವನ್ನು ಪೋರ್ಟ ರೀಕೊ ಅಥವಾ “ಸಂಪದ್ಭರಿತ ಬಂದರು” ಎಂದು ಕರೆಯಲಾಗುತ್ತಿತ್ತು. ಸಮಯಾನಂತರ, ಈ ಹೆಸರು ಇಡೀ ದ್ವೀಪಕ್ಕೆ ಅನ್ವಯಿಸಲಾರಂಭಿಸಿದಾಗ, ನಗರವು ಸಾನ್ವಾನ್ ಎಂದು ಕರೆಯಲ್ಪಟ್ಟಿತ್ತು.
ಹಲವಾರು ರೀತಿಗಳಲ್ಲಿ ಪೋರ್ಟ ರೀಕೊ ಒಂದು ಸಂಪದ್ಭರಿತ ಬಂದರಾಗಿ ಪರಿಣಮಿಸಿದೆ. ಸ್ಪ್ಯಾನಿಷ್ ಆಳಿಕೆಯ ಆರಂಭದ ವರ್ಷಗಳಲ್ಲಿ ಇಲ್ಲಿಂದ ತುಂಬ ಚಿನ್ನವನ್ನು ರವಾನಿಸಲಾಗುತ್ತಿತ್ತು. ಈಗ ದ್ವೀಪವು ಕಬ್ಬು, ಕಾಫಿ, ಬಾಳೆಹಣ್ಣು ಮತ್ತು ನಿಂಬೆ ಕುಲದ ಹಣ್ಣುಗಳನ್ನು ರಫ್ತುಮಾಡುತ್ತಿರುವುದಾದರೂ, ಸಾಮಾನು ತಯಾರಿಕೆ ಮತ್ತು ಸೇವಾ ಉದ್ಯಮಗಳು ಇಂದು ಹೆಚ್ಚಿನ ಮಟ್ಟಕ್ಕೆ ಅರ್ಥಿಕ ಆಡಳಿತವನ್ನು ರಚಿಸುತ್ತವೆ. ಆದಾಗಲೂ, ಪೋರ್ಟ ರೀಕೊ ಇನ್ನೂ ಹೆಚ್ಚು ಪ್ರಾಮುಖ್ಯವಾದ ರೀತಿಯಲ್ಲಿ ಒಂದು ಸಂಪದ್ಭರಿತ ಬಂದರಾಗಿ ಪರಿಣಮಿಸಿದೆ.
ದೇವರ ರಾಜ್ಯದ ಸುವಾರ್ತೆಯು ಇಲ್ಲಿ 1930ರ ದಶಕಗಳಲ್ಲಿ ಪ್ರಚಾರವಾಗಲು ಆರಂಭಿಸಿತು. ಇಂದು ಪೋರ್ಟ ರೀಕೊದಲ್ಲಿ ಸುವಾರ್ತೆಯ 25,000 ಕ್ಕಿಂತ ಹೆಚ್ಚು ಪ್ರಚಾರಕರಿದ್ದಾರೆ. 1993 ರಲ್ಲಿ ವಾಚ್ಟವರ್ ಸೊಸೈಟಿಯ ಈ ಶಾಖೆಯಲ್ಲಿರುವ ಸಿಬ್ಬಂದಿವರ್ಗವು 23 ರಿಂದ 100 ಕ್ಕೇರಿತು. ಲೋಕವ್ಯಾಪಕವಾಗಿ ಸ್ಪ್ಯಾನಿಷ್ ಮಾತಾಡುವ ಸುಮಾರು 35,00,00,000 ಜನರಿಗೆ ಪ್ರಕಾಶನಗಳನ್ನು ದೊರಕಿಸಲು, ಸ್ಪ್ಯಾನಿಷ್ನಲ್ಲಿ ಬೈಬಲ್ ಸಾಹಿತ್ಯದ ಭಾಷಾಂತರದ ಮೇಲ್ವಿಚಾರಣೆ ಮಾಡುವಂತೆ ಶಾಖೆಗೆ ಸಾಧ್ಯಮಾಡಲು ಈ ಅಭಿವೃದ್ಧಿಯು ಅವಶ್ಯವಾಗಿತ್ತು.
ಒಂದು ಹೊಸ ಕ್ಷೇತ್ರ
ಶಾಖಾ ಆಫೀಸು ವರದಿಸುವದು: “ರಾಜ್ಯ ಸಂದೇಶವನ್ನು ಕಿವುಡರಿಗೆ ತಲಪಿಸಲು ನಾವು ಪ್ರಯತ್ನಗಳನ್ನು ಮಾಡುತ್ತಿರುವದರಿಂದ ಒಂದು ಹೊಸ ಕ್ಷೇತ್ರವು ಪೋರ್ಟ ರೀಕೊದಲ್ಲಿ ತೆರೆದುಕೊಂಡಿದೆ. ಒಬ್ಬ ಸಹೋದರಿಯು ಈ ಮುಂದಿನ ಅನುಭವವನ್ನು ತಿಳಿಸುತ್ತಾಳೆ: “ನಾನು ಕಿವುಡರೊಂದಿಗೆ ಕೆಲಸ ಮಾಡುತ್ತಿದ್ದೆ ಮತ್ತು ಇಬ್ಬರು ಚಿಕ್ಕ ಮಕ್ಕಳಿರುವ ಒಬ್ಬ ಹೆಂಗಸಿಗೆ ಭೇಟಿಕೊಟ್ಟೆ. ನಾನು ಒಬ್ಬ ಸಾಕ್ಷಿಯೆಂದು ಅವಳಿಗೆ ತಿಳಿದಾಗ ಆಕೆ ಕೂಡಲೇ ನನ್ನನ್ನು ತಿರಸ್ಕರಿಸಿದಳು, ಯಾಕಂದರೆ ಆಕೆಯ ಗಂಡನು, ಅವನೂ ಕಿವುಡನಾಗಿದ್ದನು, ಯೆಹೋವನ ಸಾಕ್ಷಿಗಳನ್ನು ಇಷ್ಟಪಡುತ್ತಿರಲಿಲ್ಲ.”
“‘ಕೆಲವು ತಿಂಗಳ ನಂತರ ಇದೇ ಹೆಂಗಸು, ಯೆಹೋವನ ಸಾಕ್ಷಿಗಳೊಂದಿಗೆ ಅಭ್ಯಾಸಿಸುತ್ತಿದ್ದ ಒಬ್ಬ ಸ್ನೇಹಿತಳನ್ನು ಸಂದರ್ಶಿಸಿದಳು. ಅವಳು ಬೈಬಲ್ ಅಧ್ಯಯನದಲ್ಲಿ ಜೊತೆಗೂಡಿದಳು ಮತ್ತು ಅದನ್ನು ತುಂಬಾ ಆನಂದಿಸಿದಳು. ನಾನು ಆ ಹೆಂಗಸನ್ನು ಪುನಃ ಒಮ್ಮೆ ಭೇಟಿಯಾದೆ ಮತ್ತು ತನ್ನ ಗಂಡನು ಸಾಕ್ಷಿಗಳನ್ನು ಇಷ್ಟಪಡುವದಿಲ್ಲವೆಂದು ಅವಳು ಪುನಃ ಹೇಳಿದಳು. ಆದಾಗಲೂ, ಅವಳು ಬೈಬಲನ್ನು ತಿಳಿದುಕೊಳ್ಳಲು ಬಯಸಿದಳು ಮತ್ತು ಅವಳ ಚರ್ಚಿನಿಂದ ಬೇಸತ್ತು ಹೋಗಿದ್ದಳು ಯಾಕೆಂದರೆ ಅವರು ಏನನ್ನು ಕಲಿಸತ್ತಿರಲಿಲ್ಲ. ಒಂದು ಕಿರುಹೊತ್ತಗೆಯನ್ನು ಉಪಯೋಗಿಸಿ ನಾವು ಅಭ್ಯಾಸಿಸಲು ಆರಂಭಿಸಿದೆವು. ಒಂದು ದಿನ ಅವಳು ನನಗೆ ಶನಿವಾರದಂದು ಬರಲು ಹೇಳಿದಳು ಯಾಕಂದರೆ ಅವಳ ಗಂಡನು ಅಲ್ಲಿರುವನು. “ಆದರೆ ಅವನು ನಮ್ಮನ್ಮು ಇಷ್ಟಪಡುವದಿಲ್ಲ, ಅಲ್ಲವೇ?” ಎಂದು ನಾನು ಕೇಳಿದೆ. ಅವಳು ಉತ್ತರಿಸಿದ್ದು: “ಯೆಹೋವನ ಸಾಕ್ಷಿಗಳು ನಿರ್ದಿಷ್ಟವಾಗಿ ಏನು ಕಲಿಸುತ್ತಾರೆಂದು ಅವನು ತಿಳಿಯಲು ಬಯಸುತ್ತಾನೆ.”
“‘ಮರುದಿನ ಅವರಿಬ್ಬರು ನನ್ನ ಬಾಗಿಲನ್ನು ತಟ್ಟುತ್ತಿದ್ದರು! ಗಂಡನಿಗೆ ಹಲವಾರು ಪ್ರಶ್ನೆಗಳಿದ್ದುದರಿಂದ, ಕಿವುಡರಿಗಾಗಿರುವ ನಮ್ಮ ಕೂಟಗಳನ್ನು ಹಾಜರಾಗಲು ನಾನು ಅವರನ್ನು ಆಮಂತ್ರಿಸಿದೆ. ನಾನು ಅಲ್ಲಿ ಹೋಗುವ ಮುಂಚೆಯೇ ಅವನು ಅಲ್ಲಿ ಇದ್ದನು ಮತ್ತು ಅಂದಿನಿಂದ ಒಂದು ಕೂಟವನ್ನೂ ತಪ್ಪಿಸಿಲ್ಲ. ಅವನು ಇತರ ಕಿವುಡ ವ್ಯಕ್ತಿಗಳಿಗೆ ಸಾರುತ್ತಿದ್ದಾನೆ, ಒಂದು ಸಮ್ಮೇಳನವನ್ನು ಹಾಜರಾಗಿದ್ದಾನೆ, ಮತ್ತು ದೀಕ್ಷಾಸ್ನಾನ ಹೊಂದಲು ಆತುರತೆಯಿಂದ ಎದುರುನೋಡುತ್ತಿದ್ದಾನೆ.’”
ಶಾಖಾ ವರದಿಯು ಮುಂದುವರಿಸುವದು: “ಈ ವರ್ಷದ ನಮ್ಮ ಜಿಲ್ಲಾ ಅಧಿವೇಶನದಲ್ಲಿ, ಇಡೀ ಕಾರ್ಯಕ್ರಮವನ್ನು ಸನ್ನೆಗಳ ಭಾಷೆಯಲ್ಲಿ ಪ್ರಸ್ತುತಪಡಿಸಲಾಯಿತು, ಅನೇಕ ಕಿವುಡ ಜನರು ತಮ್ಮ ಕುಟುಂಬಗಳೊಂದಿಗೆ ಹಾಜರಿದ್ದರು. ಕೊನೆಯ ಭಾಷಣದ ಸಮಯದಲ್ಲಿ ಕಿವುಡರ ನಡುವೆ ಮಾಡಲಾಗುತ್ತಿರುವ ಕೆಲಸ ಮತ್ತು ಸುಮಾರು 70 ಜನರು ಉಪಸ್ಥಿತರಾಗಿರುವದನ್ನು ಭಾಷಣಕರ್ತನು ತಿಳಿಸಿದಾಗ ಅದು ತುಂಬ ಭಾವುಕವಾದ ಒಂದು ಕ್ಷಣವಾಗಿತ್ತು. ಒಂದು ದೊಡ್ಡ ಘೋಷಾನುಮೋದನೆಯಿತ್ತು, ಆದರೆ ಭಾಷಣಕರ್ತನು ಗಮನಿಸಿದಂತೆ, ಕಿವುಡರಿಗೆ ಅದನ್ನು ಕೇಳಲು ಆಗಲಿಲ್ಲ. ಆದುದರಿಂದ ಕಿವುಡರಿಗೆ ಸಭಿಕರನ್ನು ನೋಡಲು ಹೇಳಿ, ಭಾಷಣಕರ್ತನು ‘ನಿಮ್ಮ ಕಿವುಡ ಸಹೋದರರು ಇಲ್ಲಿ ನಿಮ್ಮೊಂದಿಗಿರಲು ನೀವು ಸಂತೋಷಿಸುತ್ತೀರೋ?’ ಎಂಬ ಪ್ರಶ್ನೆಯನ್ನು ಪುನಃ ಕೇಳಿದನು ಮತ್ತು ಎರಡು ಕೈಗಳನ್ನು ಬೀಸುವ ಮೂಲಕ ಸಮ್ಮತಿ ಸೂಚಿಸುವಂತೆ ಸಭಿಕರನ್ನು ಕೇಳಿಕೊಂಡನು. 11,000 ಸಹೋದರ ಸಹೋದರಿಯರು ತಮ್ಮ ಕೈಗಳನ್ನು ಬೀಸುವ ಮೂಲಕ ಘೋಷಾನುಮೋದನೆ ಮಾಡುವುದನ್ನು ನೋಡುವದು ಒಂದು ಅದ್ಭುತಕರ ದೃಶ್ಯವಾಗಿತ್ತು. ನಮ್ಮ ಕಿವುಡ ಸಹೋದರ ಸಹೋದರಿಯರು ಆನಂದಪರವಶರಾದರು ಮತ್ತು ಅವರು ಮಹತ್ತಾದ ಸಹೋದರತ್ವದ ಒಂದು ಭಾಗವಾಗಿದ್ದರು ಎಂಬ ಅನಿಸಿಕೆ ಅವರಿಗಾಯಿತು. ಅನೇಕರು ಆನಂದಾಶ್ರುಗಳನ್ನು ಸುರಿಸಿದರು.”
ಪೋರ್ಟ ರೀಕೊದ ಕೊಯ್ಲಿನ ಕಾರ್ಯದಲ್ಲಿ ಯೆಹೋವನ ಸಾಕ್ಷಿಗಳು ಭಾಗವಹಿಸುತ್ತಿರುವಂತೆಯೇ, ನಿಸ್ಸಂದೇಹವಾಗಿ ಅದು ಒಂದು ಸಂಪದ್ಭರಿತ ಬಂದರಾಗಿ ಮುಂದುವರಿಯುವದು. “ಸಮಸ್ತಜನಾಂಗಗಳ ಇಷ್ಟವಸ್ತು” ಗಳೆಂದು ಆತನು ಕರೆಯುವ ದೇವರ “ಕುರಿಗಳು”, ಯೆಹೋವನ ಮನೆಯು ವೈಭವದಿಂದ ತುಂಬಿಕೊಳ್ಳುವಂತೆ ಒಳಬರುತ್ತಾ ಇರುವರು.—ಯೋಹಾನ 10:16; ಹಗ್ಗಾಯ 2:7.
[ಪುಟ 9 ರಲ್ಲಿರುವ ಚೌಕ]
ದೇಶದ ಪಾರ್ಶ್ವದೃಶ್ಯ
1994ರ ಸೇವಾ ವರ್ಷ
ಸಾಕ್ಷಿನೀಡುತ್ತಿರುವವರ ಉಚ್ಚಾಂಕ: 25,428
ಪ್ರಮಾಣ: 1 ಸಾಕ್ಷಿಗೆ 139
ಜ್ಞಾಪಕಾಚರಣೆ ಹಾಜರಿ: 60,252
ಸರಾಸರಿ ಪಯನೀಯರ್ ಪ್ರಚಾರಕರು: 2,329
ಸರಾಸರಿ ಬೈಬಲ್ ಅಧ್ಯಯನಗಳು: 19,012
ದೀಕ್ಷಾಸ್ನಾನ ಪಡೆದವರ ಸಂಖ್ಯೆ: 919
ಸಭೆಗಳ ಸಂಖ್ಯೆ: 312
ಶಾಖಾ ಆಫೀಸ್: ಗ್ವೈನಾಬೋ