ಮೃತರು ಯಾವ ಸ್ಥಿತಿಯಲ್ಲಿದ್ದಾರೆ?
ಮೃತರ ಭಯವು ಒಂದು ತರ್ಕದ ಮೇಲೆ ಆಧಾರಿಸಿದೆ—ಅದೇನೆಂದರೆ, ಮರಣದ ಅನಂತರ ಜೀವಿಸಲು ಮುಂದುವರಿಯುವ ಒಂದು ಆತ್ಮ ಯಾ ಪ್ರಾಣ ಮೃತ ವ್ಯಕ್ತಿಗಿದೆ. ಈ ಸಂಕಲ್ಪವು ಸುಳ್ಳಾಗಿದೆ ಎಂದು ಬೈಬಲ್ ಸ್ಪಷ್ಟವಾಗಿಗಿ ಕಲಿಸುವಲ್ಲಿ, ಮೃತರು ನಿಮಗೆ ಹಾನಿಮಾಡಬಲ್ಲರೊ ಎಂಬ ಪ್ರಶ್ನೆಯು ನಿರ್ಣಾಯಕವಾಗಿ ಬಗೆಹರಿಸಲ್ಪಟ್ಟಿದೆ. ಹಾಗಾದರೆ, ಬೈಬಲ್ ಏನನ್ನು ಹೇಳುತ್ತದೆ?
ಮೃತರ ಸ್ಥಿತಿಯ ಕುರಿತು, ದೇವರ ವಾಕ್ಯವು ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ. ಅವರು ಸತ್ತಾಗಲೇ ಅವರ ಪ್ರೀತಿಯೂ ಹಗೆಯೂ ಹೊಟ್ಟೇಕಿಚ್ಚೂ ಅಳಿದುಹೋದವು; ಲೋಕದೊಳಗೆ ನಡೆಯುವ ಯಾವ ಕೆಲಸದಲ್ಲಿಯೂ ಅವರಿಗೆ ಇನ್ನೆಂದಿಗೂ ಪಾಲೇ ಇಲ್ಲ.”—ಪ್ರಸಂಗಿ 9:5, 6.
ಅದರ ನೋಟದಲ್ಲಿ, ಮೃತರು ನಿಮಗೆ ಸಹಾಯ ಯಾ ಹಾನಿ ಮಾಡಬಲ್ಲರೊ? ಇಲ್ಲವೆಂದು ಶಾಸ್ತ್ರಗಳು ಹೇಳುತ್ತವೆ. ಮೃತರು ಪ್ರಜ್ಞೆಯಿಲ್ಲದವರು ಮತ್ತು ಮೌನದಲ್ಲಿರುವವರು ಆಗಿದ್ದಾರೆ. ಬದುಕಿರುವವರೊಂದಿಗೆ ಸಂಸರ್ಗ ಮಾಡಲು ಯಾ ಯಾವುದೇ ಭಾವನೆಯನ್ನು—ಪ್ರೀತಿ ಯಾ ದ್ವೇಷ—ಅಥವಾ ಯಾವುದೇ ಕ್ರಿಯೆಯನ್ನು ನೆರವೇರಿಸಲು ಅವರು ಅಸಮರ್ಥರಾಗಿದ್ದಾರೆ. ಅವರ ಭಯವಿರುವ ಅಗತ್ಯವೇ ನಿಮಗಿರುವುದಿಲ್ಲ.
‘ಒಳ್ಳೇದು, ಶಾರೀರಿಕ ದೇಹದ ಮರಣಕ್ಕೆ ನೀವು ಸೂಚಿಸುವುದಾದರೆ, ಹೌದು ಅದು ಸತ್ಯವಾಗಿರಬಹುದು,’ ಎಂದು ಕೆಲವರು ಹೇಳಬಹುದು. ‘ಆದರೆ ಶಾರೀರಿಕ ಮರಣವು ಜೀವಿತದ ಅಂತ್ಯವಾಗಿರುವುದಿಲ್ಲ; ಅದು ದೇಹದಿಂದ ಕೇವಲ ಪ್ರಾಣವನ್ನು ಬಿಡುಗಡೆಗೊಳಿಸುತ್ತದೆ. ಆ ಪ್ರಾಣವು ಬದುಕಿರುವವರಿಗೆ ಸಹಾಯ ಯಾ ಹಾನಿಯನ್ನು ಮಾಡಬಲ್ಲದು.’ ಭೂವ್ಯಾಪಕವಾಗಿ ಲಕ್ಷಾಂತರ ಜನರು ಹಾಗೆ ಭಾವಿಸುತ್ತಾರೆ.
ಉದಾಹರಣೆಗೆ, ಮಡಗಾಸ್ಕರ್‌ನಲ್ಲಿ, ಜೀವಿತವು ಕೇವಲ ಒಂದು ಪರಿವರ್ತನೆಯೋಪಾದಿ ಪರಿಗಣಿಸಲ್ಪಡುತ್ತದೆ, ಆದುದರಿಂದ ಒಂದು ಶವಸಂಸ್ಕಾರವು ಮತ್ತು ಸಮಾಧಿಯಿಂದ ಶವವನ್ನು ಹೊರಕ್ಕೆ ತರುವುದು, ಮದುವೆಗಿಂತ ಹೆಚ್ಚು ಪ್ರಾಮುಖ್ಯವಾಗಿ ಪರಿಗಣಿಸಲ್ಪಡುತ್ತವೆ. ವ್ಯಕ್ತಿಯು ತನ್ನ ಪೂರ್ವಜರಿಂದ ಬಂದಿರುವನೆಂದು ಮತ್ತು ಮರಣದಲ್ಲಿ ಅವರ ಕಡೆಗೆ ಹಿಂದಿರುಗುತ್ತಾನೆಂದು ನೆನಸಲಾಗುತ್ತದೆ. ಆದಕಾರಣ, ಬದುಕಿರುವವರಿಗಾಗಿ ಮನೆಗಳು ಸಕಾಲದಲ್ಲಿ ಶಿಥಿಲವಾಗುವ ಸಾಮಾಗ್ರಿ—ಕಟ್ಟಿಗೆ ಮತ್ತು ಹಸಿಯಿಟ್ಟಿಗೆ—ಗಳಿಂದ ಕಟ್ಟಲ್ಪಡುತ್ತವೆ, ಆದರೆ ಗೋರಿಗಳು, ಮೃತರಿಗಾಗಿರುವ “ಮನೆಗಳು”, ಸಾಮಾನ್ಯವಾಗಿ ಅಧಿಕ ಅಲಂಕಾರದ್ದೂ ಬಾಳಿಕೆ ಬರುವಂಥದ್ದೂ ಆಗಿರುತ್ತವೆ. ಶವವನ್ನು ಹೊರಕ್ಕೆ ತರುವ ಸಂದರ್ಭದಲ್ಲಿ, ಅವರು ಆಶೀರ್ವದಿಸಲ್ಪಡುವರೆಂದು ಕುಟುಂಬದವರಿಗೆ ಮತ್ತು ಮಿತ್ರರಿಗೆ ಅನಿಸುತ್ತದೆ, ಮತ್ತು ಮೃತ ಸಂಬಂಧಿಕನ ಎಲುಬುಗಳನ್ನು ಅವರು ಮುಟ್ಟುವುದಾದರೆ, ಅವರು ಫಲವತ್ತಾಗುವರೆಂದು ಸ್ತ್ರೀಯರು ನಂಬುತ್ತಾರೆ. ಆದರೆ, ಪುನಃ, ದೇವರ ವಾಕ್ಯವು ಏನನ್ನು ಹೇಳುತ್ತದೆ?
ಮಾನವಜಾತಿಗಾಗಿ ಮರಣವು ಉದ್ದೇಶಿಸಲ್ಪಟ್ಟಿರಲ್ಲಿಲ
ಮನುಷ್ಯನನ್ನು ಯೆಹೋವ ದೇವರು ಜೀವಿಸಲು ಸೃಷ್ಟಿಸಿದನೆಂದು, ಮತ್ತು ಅವಿಧೇಯತೆಯ ಪರಿಣಾಮವಾಗಿ ಮಾತ್ರ ಮರಣದ ಕುರಿತು ಆತನು ಮಾತಾಡಿದನೆಂದು ಗಮನಿಸುವುದು ಆಸಕ್ತಿಕರವಾಗಿದೆ. (ಆದಿಕಾಂಡ 2:17) ವಿಷಾದಕರವಾಗಿ, ಪ್ರಥಮ ಪುರುಷ ಮತ್ತು ಸ್ತ್ರೀ ಪಾಪಮಾಡಿದರು, ಮತ್ತು ಫಲಸ್ವರೂಪವಾಗಿ, ಪಾಪವು ಎಲ್ಲ ಮಾನವಜಾತಿಗೆ ಒಂದು ಮರಣಾಂತಕ ಪಿತ್ರಾರ್ಜಿತ ಸ್ವತಾಗ್ತಿ ಹರಡಿತು. (ರೋಮಾಪುರ 5:12) ಪ್ರಥಮ ಮಾನವ ಜೋಡಿಯ ಅವಿಧೇಯತೆಯ ಸಮಯದಿಂದಲೂ ಮರಣವು ಜೀವನದ ನಿಜತ್ವವಾಗಿದೆ ಎಂದು ನೀವು ಹೇಳಬಹುದು, ಹೌದು, ಜೀವನದ ಸಂಕಟಕರ ನಿಜತ್ವ. ನಾವು ಜೀವಿಸಲಿಕ್ಕಾಗಿ ಸೃಷ್ಟಿಸಲ್ಪಟ್ಟೆವು, ಇದು ಎಣಿಕೆಯಿಲ್ಲದ ಲಕ್ಷಾಂತರ ಜನರಿಗೆ ಮರಣವನ್ನು ಅಂತ್ಯವೆಂಬಂತೆ ಎದುರಿಸುವುದು ಯಾಕೆ ಅಷ್ಟು ಕಠಿನವಾಗಿದೆ ಎಂಬುದನ್ನು ಆಂಶಿಕವಾಗಿ ವಿವರಿಸುತ್ತದೆ.
ಬೈಬಲ್ ದಾಖಲೆಗನುಸಾರ, ಅವಿಧೇಯತೆಯು ಮರಣವನ್ನು ತರುವುದೆಂಬ ದೇವರ ಎಚ್ಚರಿಕೆಯನ್ನು ವಿರೋಧಿಸುವ ಮೂಲಕ, ಮರಣದ ಕುರಿತು ಪ್ರಥಮ ಮಾನವ ಜೋಡಿಯನ್ನು ವಂಚಿಸಲು ಸೈತಾನನು ಪ್ರಯತ್ನಿಸಿದನು. (ಆದಿಕಾಂಡ 3:4) ಆದರೆ, ಸಮಯದ ದಾಟುವಿಕೆಯಿಂದ, ದೇವರು ಹೇಳಿದಂತೆಯೇ ಮಾನವರು ಮೃತರಾಗುತ್ತಾರೆಂಬುದು ಸ್ಪಷ್ಟವಾಗಿಗಿ ವ್ಯಕ್ತವಾಯಿತು. ಹೀಗೆ, ಶತಮಾನಗಳ ಉದ್ದಕ್ಕೂ ಸೈತಾನನು ಇನ್ನೊಂದು ಸುಳ್ಳಿನ ಮೂಲಕ ಪ್ರತಿಕ್ರಿಯಿಸಿದನು—ಅದೇನೆಂದರೆ ದೇಹದ ಮರಣದ ಅನಂತರ, ಮನುಷ್ಯನ ಪ್ರಾಣದ ಯಾವುದೊ ಭಾಗವು ಬದುಕಿ ಉಳಿಯುತ್ತದೆ. ಯಾರನ್ನು ಯೇಸು “ಸುಳ್ಳಿಗೆ ಮೂಲಪುರುಷ” ನೆಂದು ವರ್ಣಿಸಿದನೊ, ಆ ಪಿಶಾಚನಾದ ಸೈತಾನನನ್ನು ಅಂತಹ ವಂಚನೆಯು ಹೋಲುತ್ತದೆ. (ಯೋಹಾನ 8:44) ಇದಕ್ಕೆ ಪ್ರತಿಕೂಲವಾಗಿ, ಮರಣಕ್ಕಿರುವ ದೇವರ ಪ್ರತಿಕ್ರಿಯೆಯು, ಉತ್ತೇಜನದಾಯಕವಾದ ಒಂದು ವಾಗ್ದಾನವಾಗಿದೆ.
ಎಂತಹ ವಾಗ್ದಾನ?
ಅದು ಅನೇಕರಿಗಾಗಿರುವ ಒಂದು ಪುನರುತ್ಥಾನದ ವಾಗ್ದಾನವಾಗಿದೆ. “ಪುನರುತ್ಥಾನ” ವೆಂದು ಇಲ್ಲಿ ಭಾಷಾಂತರಿಸಲಾದ ಗ್ರೀಕ್ ಪದವು, ಅನಾಸ್ಟಾಸಿಸ್ ಆಗಿದೆ. ಅದು ಅಕ್ಷರಶಃ “ಪುನಃ ಎದ್ದುನಿಲ್ಲುವಿಕೆ” ಯನ್ನು ಅರ್ಥೈಸುತ್ತದೆ, ಮತ್ತು ಮರಣದಿಂದ ಎದ್ದುಬರುವಿಕೆಯನ್ನು ಅದು ಸೂಚಿಸುತ್ತದೆ. ಹೌದು, ಮನುಷ್ಯನು ಮರಣದಲ್ಲಿ ಮಲಗಿರುತ್ತಾನೆ, ಆದರೆ ತನ್ನ ಶಕಿಯ್ತಿಂದ ದೇವರು ಒಬ್ಬ ವ್ಯಕ್ತಿಯನ್ನು ಪುನಃ ಎಬ್ಬಿಸಬಲ್ಲನು. “ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ,” ಎಂದು ದೇವರ ಮಗನಾದ ಯೇಸು ಕ್ರಿಸ್ತನು ಹೇಳಿದನು. (ಯೋಹಾನ 5:28, 29) ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ದೇವರ ಕಡೆಗೆ ಇರುವ ನಿರೀಕ್ಷೆಯನ್ನು’ ಅಪೊಸ್ತಲ ಪೌಲನು ವ್ಯಕ್ತಪಡಿಸಿದನು. (ಅ. ಕೃತ್ಯಗಳು 24:15) ಕ್ರೈಸ್ತಪೂರ್ವ ಸಮಯಗಳಲ್ಲಿದ್ದ ದೇವರ ನಂಬಿಗಸ್ತ ಸೇವಕನಾದ ಯೋಬನು ಸಹ, ಪುನರುತ್ಥಾನದಲ್ಲಿ ತನ್ನ ನಿರೀಕ್ಷೆಯನ್ನು ಘೋಷಿಸಿದನು: “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ? ಹಾಗಾಗುವದಾದರೆ ನನಗೆ ಬಿಡುಗಡೆಯಾಗುವ ವರೆಗೆ ನನ್ನ ವಾಯಿದೆಯ ದಿನಗಳಲ್ಲೆಲ್ಲಾ ಕಾದುಕೊಂಡಿರುವೆನು; ನೀನು [ದೇವರು] ಕರೆದರೆ ಉತ್ತರಕೊಡುವೆನು.”—ಯೋಬ 14:14, 15.
ಪುನರುತ್ಥಾನದ ಸ್ಪಷ್ಟವಾಗಿದ ವಾಗ್ದಾನವು, ಮೃತರು ಒಂದು ಪ್ರಾಣ ರೂಪದಲ್ಲಿ ಜೀವಂತರಾಗಿದ್ದಾರೆಂಬ ವಿಚಾರವನ್ನು ಸುಳ್ಳಾಗಿ ರುಜುಪಡಿಸುವುದಿಲ್ಲವೊ? ಮೃತರು ಜೀವಂತರಾಗಿದ್ದು, ಪರಲೋಕದಲ್ಲಿ ಯಾ ಯಾವುದೊ ಆತ್ಮಲೋಕದಲ್ಲಿ ಅಸ್ತಿತ್ವವನ್ನು ಆನಂದಿಸುತ್ತಿರುವಲ್ಲಿ, ಪುನರುತ್ಥಾನದ ಉದ್ದೇಶವು ಏನಾಗಿರುವುದು? ಅವರು ತಮ್ಮ ಬಹುಮಾನ ಯಾ ವಿಧಿಯನ್ನು ಈಗಾಗಲೇ ಪಡೆದಿರುವವರಾಗಿರುವುದಿಲ್ಲವೊ? ನಮ್ಮ ಪ್ರೀತಿಪರ ತಂದೆಯಾದ ಯೆಹೋವನಿಂದ ವಾಗ್ದಾನಿಸಲ್ಪಟ್ಟ ಪ್ರಮೋದವನದಲ್ಲಿ, ಒಂದು ಹೊಸ ಲೋಕದಲ್ಲಿ ಪುನರುತ್ಥಾನದ ಮೂಲಕ ಆಗುವ ಮಹಾ ಎಚ್ಚರಗೊಳಿಸುವಿಕೆಯ ತನಕ, ಮೃತರು ನಿಜವಾಗಿಯೂ ಸತ್ತವರೂ, ಪ್ರಜ್ಞೆಯಿಲ್ಲದವರೂ, ನಿದ್ರಿಸುತ್ತಿರುವವರೂ ಆಗಿರುತ್ತಾರೆಂದು ದೇವರ ವಾಕ್ಯದ ಅಧ್ಯಯನವು ಪ್ರಕಟಿಸುತ್ತದೆ. ಆದರೆ ಮರಣವು ದೇಹ ಮತ್ತು ಪ್ರಾಣದ ಬೇರ್ಪಡಿಕೆಯನ್ನು ಅರ್ಥೈಸದಿದ್ದರೆ ಮತ್ತು ಆತ್ಮವು ಜೀವಿಸುತ್ತಾ ಇರುವುದನ್ನು ಮುಂದುವರಿಸದಿದ್ದರೆ, ಆತ್ಮಲೋಕದಿಂದ ಬರುವ ತೋರ್ಕೆಯ ಸಂದೇಶಗಳ ಕುರಿತೇನು?
ಆತ್ಮಲೋಕದಿಂದ ಬರುವ ಸಂದೇಶಗಳು
ಆತ್ಮಲೋಕದಿಂದ ಬಹುಶಃ ಪಡೆದಿರಬಹುದಾದ ಸಂದೇಶಗಳ ಅಸಂಖ್ಯಾತ ವಿದ್ಯಮಾನಗಳು ವರದಿಸಲ್ಪಟ್ಟಿವೆ. ಅವುಗಳ ಮೂಲವು ನಿಜವಾಗಿಯೂ ಏನಾಗಿದೆ? ಬೈಬಲ್ ನಮ್ಮನ್ನು ಎಚ್ಚರಿಸುವುದೇನೆಂದರೆ, “ಸೈತಾನನು ತಾನೇ ಬೆಳಕಿನ ದೇವದೂತನೋಪಾದಿ ನಟಿಸುತ್ತಾನೆ. ಆದುದರಿಂದ ಅವನ ನಿಯೋಗಿಗಳಿಗೆ ಒಳ್ಳೆಯದರ ನಿಯೋಗಿಗಳಂತೆ ನಟಿಸುವುದು ಒಂದು ಸರಳ ವಿಷಯವಾಗಿದೆ.” (2 ಕೊರಿಂಥ 11:14, 15, ದ ನ್ಯೂ ಇಂಗ್ಲಿಷ್ ಬೈಬಲ್) ಹೌದು, ಜನರನ್ನು ಅಧಿಕ ಸರಳವಾಗಿ ವಂಚಿಸಲು ಮತ್ತು ದಾರಿತಪ್ಪಿಸಲು, ದೆವ್ವಗಳು (ದಂಗೆಕೋರ ದೇವದೂತರು) ಬದುಕಿರುವವರೊಂದಿಗೆ—ಕೆಲವೊಮ್ಮೆ ಸಹಾಯಕಾರಿಯಾಗಿರುವಂತೆ ನಟಿಸುತ್ತಾ—ಸಂಪರ್ಕ ಬೆಳೆಸಿವೆ.
ವಂಚನೆಯ ಈ ಚಳುವಳಿಯ ಕುರಿತು ಇನ್ನೂ ಹೆಚ್ಚಿನ ಎಚ್ಚರಿಕೆಯನ್ನು ಅಪೊಸ್ತಲ ಪೌಲನು ಕೊಡುತ್ತಾನೆ: “ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರು.” (1 ತಿಮೊಥೆಯ 4:1) ಆದುದರಿಂದ ಮೃತರಿಗೆ ಆರೋಪಿಸಲಾದ ಯಾವುದೇ ಪ್ರತಿವರ್ತನೆಯು, ದೇವರ ವಾಕ್ಯದ ಸತ್ಯದಿಂದ ದೂರ ನಡಿಸುವ ಮೂಢನಂಬಿಕೆಗಳಿಗೆ ಜನರನ್ನು ದಾಸರನ್ನಾಗಿ ಮಾಡುತ್ತಾ, “ಒಳ್ಳೆಯದರ ನಿಯೋಗಿಗಳಂತೆ” ನಟಿಸುವ ಮತ್ತು ಒಂದು ಧಾರ್ಮಿಕ ಸುಳ್ಳನ್ನು ಪ್ರವರ್ತಿಸುವ ದೆವ್ವಗಳಿಂದ ಬಹುಶಃ ಇರಬಹುದೆಂಬುದು ತೀರ ಸಂಭವನೀಯ.
ಮೃತರು ಏನನ್ನೂ ಹೇಳಲಾರರು, ಏನನ್ನೂ ಮಾಡಲಾರರು, ಯಾ ಏನನ್ನೂ ಅನುಭವಿಸಲಾರರು ಎಂಬ ವಿಷಯವನ್ನು ದೃಢಪಡಿಸುತ್ತಾ, ಕೀರ್ತನೆ 146:3, 4 ಹೇಳುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡ ಶಕ್ತನಲ್ಲ; ಅವನ ಉಸಿರು (ಪ್ರಾಣ, NW) ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” ‘ಹೋಗುವ’ ಪ್ರಾಣವು ಯಾವುದಾಗಿದೆ? ಅದು ಉಸಿರಾಡುವ ಮೂಲಕ ಪೋಷಿಸಲ್ಪಡುವ, ವ್ಯಕ್ತಿಯ ಜೀವಶಕ್ತಿಯಾಗಿದೆ. ಆದುದರಿಂದ, ಉಸಿರಾಡುವುದನ್ನು ಸತ್ತವನು ನಿಲ್ಲಿಸಿದಾಗ, ಅವನ ಜ್ಞಾನೇಂದ್ರಿಯಗಳು ಇನ್ನು ಮುಂದೆ ಕೆಲಸಮಾಡುವುದಿಲ್ಲ. ಅವನು ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯನ್ನು ಪ್ರವೇಶಿಸುತ್ತಾನೆ. ಆದುದರಿಂದ ಬದುಕಿರುವವರನ್ನು ನಿಯಂತ್ರಿಸುವುದು ಅವನಿಗೆ ಅಸಾಧ್ಯವಾಗಿದೆ.
ಈ ಕಾರಣಕ್ಕಾಗಿಯೇ ಬೈಬಲು ಒಬ್ಬ ಮಾನವನ ಮರಣವನ್ನು ಒಂದು ಪ್ರಾಣಿಯ ಮರಣಕ್ಕೆ ಹೋಲಿಸುತ್ತಾ, ಇವೆರಡೂ ಮರಣದಲ್ಲಿ ಪ್ರಜ್ಞಾಹೀನ ಸ್ಥಿತಿಯನ್ನು ತಲಪಿ, ಅವು ಮಾಡಲ್ಪಟ್ಟಿದ್ದ ಮಣ್ಣಿಗೆ ಹಿಂದಿರುಗುತ್ತವೆಯೆಂದು ಹೇಳುತ್ತದೆ. ಪ್ರಸಂಗಿ 3:19, 20 ಹೇಳುವುದು: “ಮನುಷ್ಯನ ಗತಿಯೂ ಪಶುವಿನ ಗತಿಯೂ ಒಂದೇ; ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುವದು; ಎಲ್ಲಕ್ಕೂ ಪ್ರಾಣ ಒಂದೇ; ಮನುಷ್ಯನು ಪಶುವಿಗಿಂತ ಶ್ರೇಷ್ಠನಲ್ಲ; ಎಲ್ಲಾ ಬರೀ ಗಾಳಿಯೇ. ಎಲ್ಲಾ ಪ್ರಾಣಿಗಳು ಒಂದೇ ಸ್ಥಳಕ್ಕೆ ಹೋಗುವವು; ಎಲ್ಲಾ ಮಣ್ಣಿನಿಂದಾದವು, ಎಲ್ಲಾ ಮಣ್ಣಿಗೆ ಪುನಃ ಸೇರುವವು.”
ಅವರು ಮೃತರೊಂದಿಗೆ ಸಂಸರ್ಗ ಮಾಡಬಲ್ಲರೆಂಬ ಮತ್ತು ಮೃತರಿಂದ ಪ್ರಭಾವಿಸಲ್ಪಡಬಲ್ಲರೆಂಬ ಆಲೋಚನೆಯೊಳಗೆ ಜನರನ್ನು ದೆವ್ವಗಳು ವಂಚಿಸಲು ಪ್ರಯತ್ನಿಸುತ್ತವೆ ಎಂದು ತಿಳಿದುಕೊಳ್ಳುತ್ತಾ, ತನ್ನ ಜನರಾದ ಪ್ರಾಚೀನ ಇಸ್ರಾಯೇಲ್ಯರನ್ನು ಯೆಹೋವ ದೇವರು ಎಚ್ಚರಿಸಿದ್ದು: “ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.”—ಧರ್ಮೋಪದೇಶಕಾಂಡ 18:10-12.
ಮೃತರು ನಮಗೆ ಹಾನಿಮಾಡಬಲ್ಲರೆಂಬ ವಿಚಾರವು ದೇವರಿಂದ ಬರುವುದಿಲ್ಲ ಎಂಬುದು ಸ್ಪಷ್ಟ. ಆತನು ಸತ್ಯದ ದೇವರಾಗಿದ್ದಾನೆ. (ಕೀರ್ತನೆ 31:5; ಯೋಹಾನ 17:17) ಮತ್ತು ‘ಆತ್ಮ ಹಾಗೂ ಸತ್ಯದಿಂದ’ ಆತನನ್ನು ಆರಾಧಿಸುವ ಸತ್ಯದ ಪ್ರಿಯರಿಗೆ ಅದ್ಭುತಕರವಾದ ಭವಿಷ್ಯವನ್ನು ಆತನು ಸಿದ್ಧಗೊಳಿಸಿದ್ದಾನೆ.—ಯೋಹಾನ 4:23, 24.
ಯೆಹೋವ—ಸತ್ಯ ಮತ್ತು ಪ್ರೀತಿಯ ದೇವರು
“ಸುಳ್ಳಾಡದ” ನಮ್ಮ ಪ್ರೀತಿಪರ ಸ್ವರ್ಗೀಯ ತಂದೆಯು, ಮಾತು ಕೊಟ್ಟಿದ್ದಾನೆ: ಮೃತರಾಗಿರುವ ಮತ್ತು ಸಮಾಧಿಗಳಲ್ಲಿ ಹಾಕಲ್ಪಟ್ಟಿರುವ ಅನೇಕ ಲಕ್ಷಾಂತರ ಜನರು, ನೀತಿಯ ಹೊಸ ಲೋಕದಲ್ಲಿ ಅನಂತ ಜೀವನದ ಪ್ರತೀಕ್ಷೆಯೊಂದಿಗೆ ಪುನರುತ್ಥಾನಗೊಳಿಸಲ್ಪಡುವರು! (ತೀತ 1:1, 2; ಯೋಹಾನ 5:28) ತನ್ನ ಮಾನವ ಸೃಷ್ಟಿಯ ಕ್ಷೇಮದಲ್ಲಿ ಯೆಹೋವನಿಗೆ ಒಂದು ಆಳವಾದ ಆಸಕ್ತಿಯಿದೆ ಎಂದು ಮತ್ತು ಮರಣ, ದುಃಖ, ಹಾಗೂ ವೇದನೆಗೆ ಅಂತ್ಯವನ್ನು ತರುವ ಹೃತ್ಪೂರ್ವಕ ಬಯಕೆಯಿದೆ ಎಂದು ಪುನರುತ್ಥಾನದ ಈ ಪ್ರೀತಿಪರ ವಾಗ್ದಾನವು ಪ್ರಕಟಿಸುತ್ತದೆ. ಆದುದರಿಂದ ಮೃತರಿಗೆ ಭಯಪಡುವ ಯಾ ಅವರ ಹಾಗೂ ಅವರ ಪ್ರತೀಕ್ಷೆಗಳ ಕುರಿತು ಅನುಚಿತವಾಗಿ ಚಿಂತಿತರಾಗಿರುವ ಅಗತ್ಯವಿಲ್ಲ. (ಯೆಶಾಯ 25:8, 9; ಪ್ರಕಟನೆ 21:3, 4) ಮರಣದ ವೇದನೆಯನ್ನು ತೊಡೆದುಹಾಕುತ್ತಾ, ನಮ್ಮ ಪ್ರೀತಿಪರ ಹಾಗೂ ನಿಷ್ಪಕ್ಷಪಾತಿ ದೇವರಾದ ಯೆಹೋವನು, ಅವರನ್ನು ಪುನರುತ್ಥಾನಗೊಳಿಸಬಲ್ಲನು ಮತ್ತು ಪುನರುತ್ಥಾನಗೊಳಿಸುವನು.
ವಾಗ್ದಾನಮಾಡಲಾದ ಆ ನೀತಿಯ ಹೊಸ ಲೋಕದಲ್ಲಿ, ಭೂಮಿಯ ಮೇಲೆ ಪರಿಸ್ಥಿತಿಗಳು ಹೇಗಿರುವವೆಂಬ ವರ್ಣನೆಗಳಿಂದ ದೇವರ ವಾಕ್ಯವಾದ ಬೈಬಲ್ ತುಂಬಿದೆ. (ಕೀರ್ತನೆ 37:29; 2 ಪೇತ್ರ 3:13) ಎಲ್ಲ ಜೊತೆಮಾನವರಿಗಾಗಿ ಅದು ಶಾಂತಿ ಮತ್ತು ಸಂತೋಷದ ಹಾಗೂ ಪ್ರೀತಿಯ ಸಮಯವಾಗಿರುವುದು. (ಕೀರ್ತನೆ 72:7; ಯೆಶಾಯ 9:7; 11:6-9; ಮೀಕ 4:3, 4) ಎಲ್ಲರಿಗೂ ಭದ್ರವಾದ, ಒಳ್ಳೆಯ ಮನೆಗಳು, ಅಷ್ಟೇ ಅಲ್ಲದೆ ಆನಂದದಾಯಕ ಕೆಲಸಗಳಿರುವವು. (ಯೆಶಾಯ 65:21-23) ತಿನ್ನಲಿಕ್ಕಾಗಿ ಎಲ್ಲರಿಗೂ ಹೇರಳವಾದ ಒಳ್ಳೆಯ ವಿಷಯಗಳಿರುವವು. (ಕೀರ್ತನೆ 67:6; 72:16) ಎಲ್ಲರೂ ಸಮೃದ್ಧವಾದ ಆರೋಗ್ಯವನ್ನು ಅನುಭವಿಸುವರು. (ಯೆಶಾಯ 33:24; 35:5, 6) ಅಪೊಸ್ತಲರು ಮತ್ತು ಕೂಡಿಸಲ್ಪಟ್ಟ ಒಂದು ಸೀಮಿತ ಸಂಖ್ಯೆಯು ಯೇಸುವಿನೊಂದಿಗೆ ಪರಲೋಕದಲ್ಲಿ ಆಳುವುದಾದರೂ, ಮರಣದ ಅನಂತರ ಇತರರ ಆತ್ಮಗಳಿಗಾಗಿ ಪರಲೋಕದಲ್ಲಿ ಸುಖದಾಯಕ ಪರಿಸ್ಥಿತಿಗಳ ಯಾವ ಉಲ್ಲೇಖವನ್ನೂ ಬೈಬಲ್ ಮಾಡುವುದಿಲ್ಲ. (ಪ್ರಕಟನೆ 5:9, 10; 20:6) ಮೃತರಾಗಿರುವ ಕೋಟ್ಯನುಕೋಟಿ ಜನರು ಮರಣದ ಅನಂತರ ಜೀವಿಸುವುದಾದರೆ, ಇದು ವಿಚಿತ್ರವಾಗಿರುವುದು.
ಆದರೆ ಬೈಬಲಿನ ಸ್ಪಷ್ಟವಾಗಿದ ಬೋಧನೆಯನ್ನು ನಾವು ಅರಿಯುವಾಗ, ಅದು ವಿಚಿತ್ರವಾಗಿರುವುದಿಲ್ಲ: ಮೃತರು ಜೀವಂತ ಆತ್ಮಗಳೋಪಾದಿ ಜೀವಿಸುವುದನ್ನು ನಿಲ್ಲಿಸಿದ್ದಾರೆ. ಅವರು ನಿಮಗೆ ಹಾನಿಯನ್ನು ಮಾಡಲು ಸಾಧ್ಯವಿಲ್ಲ. ಸ್ಮಾರಕ ಸಮಾಧಿಗಳಲ್ಲಿರುವವರು ದೇವರ ಕ್ಲುಪ್ತ ಸಮಯದಲ್ಲಿ ಅವರ ಪುನರುತ್ಥಾನದ ತನಕ ಪ್ರಜ್ಞಾಹೀನರೂ, ವಿಶ್ರಾಂತಿಸುವವರೂ ಆಗಿದ್ದಾರೆ. (ಪ್ರಸಂಗಿ 9:10; ಯೋಹಾನ 11:11-14, 38-44) ಹಾಗಾದರೆ, ನಮ್ಮ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳು ದೇವರ ಮೇಲೆ ಅವಲಂಬಿಸಿವೆ. “ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸ” ಪಡೋಣ.—ಯೆಶಾಯ 25:9.
[ಪುಟ 7 ರಲ್ಲಿರುವ ಚಿತ್ರ]
ದೇವರ ವಾಕ್ಯವು ಸ್ಪಷ್ಟವಾಗಿಗಿ ತೋರಿಸುವಂತೆ, ಮೃತರು ಪುನರುತ್ಥಾನದ ವರೆಗೆ ಸಂಪೂರ್ಣವಾಗಿ ನಿಷ್ಕ್ರಿಯರಾಗಿದ್ದಾರೆ