ಮೃತರ ಭಯ ವ್ಯಾಪಕವಾಗಿ ಹರಡಿದೆ
ಸೂರ್ಯಾಸ್ತವು ಬಹಳ ಸಮಯದ ಹಿಂದೆ ಆಗಿಹೋಗಿದೆ. ನೀವು ಬಯಸುವುದಕ್ಕಿಂತ ಕೊಂಚ ತಡವಾಗಿ ಮನೆಗೆ ಹಿಂದಿರುಗುತ್ತಿದ್ದೀರಿ. ನಿಮ್ಮ ನಡಿಗೆಯು ನಿಮ್ಮನ್ನು ಸ್ಥಳೀಯ ಸ್ಮಶಾನದ ಮುಖಾಂತರ ಕೊಂಡೊಯ್ದಂತೆ, ನಿಮ್ಮ ಹೃದಯವು ಸ್ವಲ್ಪ ಜೋರಾಗಿ ಬಡಿಯಲಾರಂಭಿಸುತ್ತದೆ. ಕತ್ತಲೆಯ ರಾತ್ರಿಯ ಶಾಂತತೆಯು ನಿಮ್ಮನ್ನು, ಅತ್ಯಲ್ಪ ಸಪ್ಪಳವನ್ನೂ ಗ್ರಹಿಸುವಂತೆ ಮಾಡುತ್ತದೆ. ಹಠಾತ್ತನೆ ದೂರದಲ್ಲಿ ಒಂದು ತೀಕ್ಷೈವಾದ, ಬೆಚ್ಚುಬೀಳಿಸುವ ಶಬ್ದವನ್ನು ನೀವು ಕೇಳುತ್ತೀರಿ. ನಿಮ್ಮ ನಡಿಗೆಯನ್ನು ನೀವು ತೀವ್ರಗೊಳಿಸುತ್ತೀರಿ, ನಿಮ್ಮ ನಾಡಿಯ ಮಿಡಿತವು ಸಹ ತೀವ್ರಗೊಳ್ಳುತ್ತದೆ. ಮನೆಯ ಸುರಕ್ಷೆಯ ಕಡೆಗೆ ನೀವು ಧಾವಿಸುತ್ತೀರಿ.
ಒಂದು ಸ್ಮಶಾನದಲ್ಲಿ ಯಾ ಅದರ ಹತ್ತಿರ ಇರುವಾಗ, ನೀವು ಕಳವಳದ ಅನಿಸಿಕೆಗಳನ್ನು ಅನುಭವಿಸಿದ್ದೀರೊ? ಹಾಗಿರುವಲ್ಲಿ, ನೀವು ಲೋಕವ್ಯಾಪಕವಾಗಿ ಸಾಮಾನ್ಯವಾಗಿರುವ ಒಂದು ಧಾರ್ಮಿಕ ಸಂಕಲ್ಪದಿಂದ ಪ್ರಭಾವಿಸಲ್ಪಟ್ಟಿರಬಹುದು—ಮೃತರ ಆತ್ಮಗಳು ಬದುಕಿರುವವರಿಗೆ ಸಹಾಯಮಾಡಬಲ್ಲವು ಇಲ್ಲವೆ ಹಾನಿಮಾಡಬಲ್ಲವು.
ಮೃತರಿಗೆ ಬದುಕಿರುವವರ ಸಹಾಯದ ಅಗತ್ಯವಿದೆ ಅಥವಾ ಅವರನ್ನು ಶಾಂತಗೊಳಿಸದಿದ್ದಲ್ಲಿ ಅವರು ಬದುಕಿರುವವರಿಗೆ ಹಾನಿಮಾಡಬಹುದೆಂಬ ನಂಬಿಕೆಯ ಕಾರಣದಿಂದ, ಅನೇಕ ಮೂಢನಂಬಿಕೆಯ ರೂಢಿಗಳು ಬೆಳೆದಿವೆ. ದೃಷ್ಟಾಂತಕ್ಕೆ, ಕೆಲವು ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ, ವ್ಯಕ್ತಿಯೊಬ್ಬನು ಅಪಘಾತದಿಂದ ಮೃತಪಟ್ಟ ಸ್ಥಳದಲ್ಲಿ, ಶಿಲುಬೆಯೊಂದಿರುವ ಸಣ್ಣ ಮನೆಯನ್ನು ಕಟ್ಟುವ ರೂಢಿ ಅನೇಕರಲ್ಲಿದೆ. ಮೃತ ವ್ಯಕ್ತಿಯ ಆತ್ಮ (ಸೋಲ್) ಯಾ ಪ್ರಾಣ (ಸ್ಪಿರಿಟ್)ಕ್ಕೆ ಸಹಾಯ ನೀಡುವ ಅಥವಾ ಅದರಲ್ಲಿ ಆಸಕ್ತಿಯನ್ನು ತೋರಿಸುವ ಪ್ರಯತ್ನದಲ್ಲಿ, ಜನರು ಅಲ್ಲಿ ಮೋಂಬತ್ತಿಗಳನ್ನು ಹೊತ್ತಿಸುತ್ತಾರೆ ಮತ್ತು ಹೂವುಗಳನ್ನು ಹಾಕುತ್ತಾರೆ. ಕೆಲವು ವಿದ್ಯಮಾನಗಳಲ್ಲಿ, ಆನಿಮಿಟಾದ ಸ್ಥಳವನ್ನು, ಮೃತ ವ್ಯಕ್ತಿಯ ಆತ್ಮ ಯಾ ಪ್ರಾಣಕ್ಕಾಗಿರುವ ಸಣ್ಣ ಮನೆಯನ್ನು, ಜನರು ಮತ್ತೆ ಮತ್ತೆ ಸಂದರ್ಶಿಸಲು ತೊಡಗುವಂತೆ, ಪ್ರಾರ್ಥನೆಗಳಿಗೆ ಸಿಕ್ಕಂಥ “ಅದ್ಭುತಕರ” ಉತ್ತರಗಳ ಕುರಿತಾದ ವರದಿಗಳನ್ನು ಪ್ರಚಾರಮಾಡಲಾಗುತ್ತದೆ. ಮೃತ ವ್ಯಕ್ತಿಯು ಏನನ್ನಾದರೂ ಸಾಧಿಸಲು ಯಾ ಪಡೆಯಲು—ಬಹುಶಃ ಒಂದು ಅದ್ಭುತಕರವಾದ ಗುಣಹೊಂದುವಿಕೆ—ತಮಗೆ ಸಹಾಯ ಮಾಡುವುದಾದರೆ, ತಮ್ಮ ಕೃತಜ್ಞತೆಯನ್ನು ಅವರು ವಿಶೇಷವಾದೊಂದು ರೀತಿಯಲ್ಲಿ ತೋರಿಸುವರು ಎಂದು ಹೇಳುವ ಮಾಂಡಾಜ್, ಯಾ ಪ್ರತಿಜ್ಞೆಗಳನ್ನು ಅವರು ಅಲ್ಲಿ ಮಾಡುತ್ತಾರೆ. ಇನ್ನೊಂದು ಕಡೆಯಲ್ಲಿ, ಅಲ್ಲಿರುವವರನ್ನು ಭಯಪಡಿಸುತ್ತಾ, ಒಬ್ಬ ವ್ಯಕ್ತಿಯ ಆತ್ಮವು ರಾತ್ರಿಯ ಕತ್ತಲೆಯಲ್ಲಿ ಕಾಣಿಸಿಕೊಳ್ಳುತ್ತದೆ ಎಂಬುದಾಗಿ ವರದಿಸಲಾಗಬಹುದು. ಅಂತಹ ಆತ್ಮಗಳು ಗತಕಾಲದ ಘಟನೆಗಳ ಕಾರಣದಿಂದ ಜನರನ್ನು ಪೀಡಿಸುವ, ಪೆನಾನ್‌ಡೊ ಗಳೆಂದು ಸಾಮಾನ್ಯವಾಗಿ ಹೇಳಲ್ಪಡುತ್ತವೆ.
ಮೃತರ “ಪ್ರಾಣಗಳನ್ನು” ಶಾಂತಗೊಳಿಸಲಿಕ್ಕಾಗಿ, ಅನೇಕ ದೇಶಗಳಲ್ಲಿ ಜನರು ಬಹಳವಾಗಿ ಪ್ರಯತ್ನಿಸುತ್ತಾರೆ. ಜಟಿಲ ವಿವರಗಳ ಉತ್ಸವಗಳು ನಡೆಸಲ್ಪಡುತ್ತವೆ, ಬಲಿಗಳು ಅರ್ಪಿಸಲ್ಪಡುತ್ತವೆ, ಸಂತೈಸುವ ಮಾತುಗಳು ಆಡಲ್ಪಡುತ್ತವೆ—ಎಲ್ಲವು ಮೃತ ವ್ಯಕ್ತಿಯ ಪ್ರಾಣದಿಂದ ಪ್ರತೀಕಾರವನ್ನು ತಡೆಯುವ ಪ್ರಯತ್ನದಲ್ಲಿ ಮಾಡಲಾಗುತ್ತವೆ. ಪ್ರಾಣವನ್ನು ಸಂತೈಸುವುದು, ಬದುಕಿರುವವರಿಗೆ ಬಹುಮಾನಗಳಲ್ಲಿ ಮತ್ತು ಆಶೀರ್ವಾದಗಳಲ್ಲಿ ಫಲಿಸುವುದೆಂದು ನೆನಸಲಾಗುತ್ತದೆ.
“ಯಾವ ಘಟನೆಯೂ ‘ಸಾಧಾರಣವಾಗಿ ಯಾ ನೈಜವಾಗಿ,’ ಸಂಭವಿಸುವುದಿಲ್ಲವೆಂದು ಅನೇಕರು ನಂಬುತ್ತಾರೆ”, ಎಂದು ಆಫ್ರಿಕದಿಂದ ಬಂದ ಒಂದು ವರದಿಯು ಹೇಳುತ್ತದೆ. “ಯಾವುದೇ ಘಟನೆ—ಅದು ಕಾಯಿಲೆ, ವಿಪತ್ತು, ಬಂಜೆತನ, ಆರ್ಥಿಕ ತೊಂದರೆ, ವಿಪರೀತ ಮಳೆ ಯಾ ಬಿಸಿಲು, ಅಪಘಾತಗಳು, ಕುಟುಂಬ ಅನೈಕ್ಯತೆ, ಮರಣ, ಏನೇ ಆಗಿರಲಿ—ಅತಿಮಾನುಷ ಶಕಿಗ್ತಳಿರುವ ಅದೃಶ್ಯ ಪ್ರಾಣಗಳಿಂದ ಉಂಟಾಗಿದೆ ಎಂದು ನಂಬಲಾಗುತ್ತದೆ.” ಇನ್ನೊಂದು ವರದಿಯು ಹೇಳುವುದು: “ತಮ್ಮ ಪೂರ್ವಜರ ಪ್ರಾಣಗಳು ಪರಲೋಕದಲ್ಲಿ ಒಂದು ಸ್ಥಾನವನ್ನು ಹೊಂದಿವೆ ಮತ್ತು ಭೂಮಿಯಲ್ಲಿರುವ ತಮ್ಮ ಉಳಿದವರ ಮೇಲೆ ಅವರು ಸತತವಾದ ಕಾವಲಿಟ್ಟಿರುತ್ತಾರೆಂದು ಜನರು ನಂಬುತ್ತಾರೆ. ಪೂರ್ವಜರಿಗೆ ಅತಿಮಾನುಷ ಶಕಿಗ್ತಳಿವೆ ಎಂದು ನಂಬಲಾಗುತ್ತದೆ, ಅದನ್ನು ಅವರು ಭೂಮಿಯಲ್ಲಿರುವ ತಮ್ಮ ಸಂಬಂಧಿಕರನ್ನು ಆಶೀರ್ವದಿಸಲು ಮತ್ತು ಸಂರಕ್ಷಿಸಲು ಇಲ್ಲವೆ ಅವರನ್ನು ದಂಡಿಸಲು—ಮೃತರನ್ನು ಸಂಬಂಧಿಕರು ಹೇಗೆ ಘನಪಡಿಸುತ್ತಾರೆ ಯಾ ಅಲಕ್ಷಿಸುತ್ತಾರೆ ಎಂಬುದರ ಮೇಲೆ ಅವಲಂಬಿಸುತ್ತಾ—ಅವರು ಉಪಯೋಗಿಸಬಲ್ಲರು.”
ಆದರೆ ಇಂತಹ ವಿಚಾರವು ದೇವರ ವಾಕ್ಯದೊಂದಿಗೆ ಸರಿಹೊಂದುತ್ತದೊ? ನಿಮ್ಮ ಅಭಿಪ್ರಾಯವೇನು?
[ಪುಟ 4 ರಲ್ಲಿರುವ ಚಿತ್ರ]
ಚಿಲಿಯಲ್ಲಿರುವ ಒಂದು “ಆನಿಮಿಟಾ”