ಆಶ್ರಿತರಾಗಿದ್ದರೂ, ದೇವರನ್ನು ಸೇವಿಸುತ್ತಿರಲು ಸಂತುಷ್ಟರು
ಯುದ್ಧಗಳು, ಕ್ಷಾಮಗಳು, ವಿಪತ್ತುಗಳು, ಮತ್ತು ಅಶಾಂತಿ. ಕೆಲವು ಜನರಿಗೆ ಇವು ಕೇವಲ ತಲೆಪಂಕ್ತಿಗಳು. ಆದರೆ ಇನ್ನಿತರ ಅನೇಕರಿಗೆ ಅವು ದೈನಂದಿನ ಜೀವನದ ಭಾಗ. ಯೆಹೋವನ ಸಾಕ್ಷಿಗಳು ಕ್ರೈಸ್ತರ ಒಂದು ಲೋಕವ್ಯಾಪಕ ಸಂಘವಾಗಿರುವುದರಿಂದ, ಯಾವಾಗಲಾದರೂ ಒಂದು ಯುದ್ಧವು ಆರಂಭವಾಗುವುದಾದರೆ ಅಥವಾ ವಿಪತ್ತು ಬಡಿಯುವುದಾದರೆ, ಅಂತಾರಾಷ್ಟ್ರೀಯ ಭ್ರಾತೃತ್ವದ ಒಂದು ಭಾಗವು ಕಷ್ಟಾನುಭವಿಸಬಹುದೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಮತ್ತು ಜನರು ಜೀವವನ್ನು ಉಳಿಸಲಿಕ್ಕಾಗಿ ಓಡಿಹೋಗಬೇಕಾಗಿ ಬರುವಲ್ಲಿ, ನಮ್ಮ ಸಹೋದರರಿಗೂ ಹಾಗೆಯೇ ಮಾಡಬೇಕಾಗಿ ಬಂದೀತು.
ಅನೇಕ ವರ್ಷಗಳಿಂದ ಆಫ್ರಿಕದ ಅನೇಕ ದೇಶಗಳಲ್ಲಿ ಸಾಕ್ಷಿಗಳು ಇಂತಹ ಅನುಭವಗಳನ್ನು ತಾಳಿಕೊಳ್ಳಬೇಕಾಗಿತ್ತು. ಅವರಲ್ಲಿ ಅನೇಕರಿಗೆ, ಯಾವುದು ಸಾಧ್ಯವಾಗುತ್ತದೋ ಅದನ್ನು ಮೂಟೆಕಟ್ಟಿ ಹೊತ್ತುಕೊಂಡು ಇನ್ನೆಲ್ಲಿಗೋ ಹೋಗಿ ಆಶ್ರಯ ಪಡೆಯಬೇಕಾಗಿತ್ತು. ಸ್ವಲ್ಪ ಮಂದಿಗೆ ವಾಹನ ಮಾಧ್ಯಮ—ಪ್ರಾಯಶಃ ಒಂದು ಸೈಕಲು—ಇತ್ತಾದರೂ, ಹೆಚ್ಚಿನವರು ತಮ್ಮ ಗಮ್ಯಸ್ಥಾನವನ್ನು ಮುಟ್ಟಬೇಕಾದರೆ ಹಲವು ದಿನ, ವಾರಗಳು ಸಹ, ತುಂಬ ನಡೆಯುತ್ತ ನಡೆಯುತ್ತ ಹೋಗಬೇಕಾಗಿತ್ತು.
ಇಂತಹ ಒಂದು ಗಮ್ಯಸ್ಥಾನವು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ಒಂದು ಚಿಕ್ಕ ಪಟ್ಟಣವಾದ ಬೋಕಿ ಆಗಿತ್ತು. ಅನೇಕ ವರ್ಷಗಳಿಂದ ಪುರುಷರೂ ಸ್ತ್ರೀಯರೂ, ಎಳೆಯರೂ ವೃದ್ಧರೂ ಸಾವಿರಗಟ್ಟಲೆಯಾಗಿ ಇಲ್ಲಿಗೆ ಬಂದಿದ್ದಾರೆ. ಇವರ ಮಧ್ಯೆ ಆಸಕ್ತರನ್ನು ಜೊತೆಗೊಂಡು ಬಂದಿದ್ದ ನಮ್ಮ ಕ್ರೈಸ್ತ ಸೋದರ ಸೋದರಿಯರು ಇದ್ದರು. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ರಾಜಧಾನಿಯಾದ ಬಾಂಗಿಯ ವಾಚ್ಟವರ್ ಸೊಸೈಟಿಯ ಬ್ರಾಂಚ್ನಲ್ಲಿರುವ ಜೊತೆಕ್ರೈಸ್ತರು ಸಹಾಯ ನೀಡಲಿಕ್ಕಾಗಿ ಈ ಆಶ್ರಯಾರ್ಥಿಗಳನ್ನು ಭೇಟಿ ಮಾಡಲು ತುಂಬ ಆಸಕ್ತರಾಗಿದ್ದದ್ದು ನಿಶ್ಚಯ. ಸುಮಾರು 1,130 ಕಿಲೊಮೀಟರ್ ದೂರದ ಬಾಂಗಿಯಲ್ಲಿರುವ ಸಾಕ್ಷಿಗಳು ಉದಾರತೆಯಿಂದ ಒದಗಿಸಿದ ಹಣ, ಆಹಾರ, ಬಟ್ಟೆ ಮತ್ತು ಔಷಧದೊಡಗೂಡಿ ಒಬ್ಬ ಪ್ರತಿನಿಧಿಯನ್ನು ಐದು ಬಾರಿ ಅಲ್ಲಿಗೆ ಕಳುಹಿಸಲಾಯಿತು. ಈ ಉದಾರ ಸಹಾಯವನ್ನು ನೀಡಿದವರಲ್ಲಿ ಆರ್ಥಿಕವಾಗಿ ಸ್ವಲ್ಪವೇ ಇತ್ತಾದರೂ ತಮಗೆ ಸಾಧ್ಯವಿರುವುದನ್ನು ಮಾಡಲು ಅವರು ಸಂತೋಷಪಟ್ಟರು.
ಬೋಕಿಗೆ ಹೋಗುವುದು
ಇನ್ನೇನು ಮಾಡುವುದು ಸಾಧ್ಯ ಮತ್ತು ಆಶ್ರಿತರಿಗೆ ಆತ್ಮಿಕವಾಗಿ ಸಹಾಯಮಾಡುವುದು ಹೇಗೆ ಸಾಧ್ಯ ಎಂದು ಬ್ರಾಂಚ್ ಆಫೀಸಿನ ಸಹೋದರರು ನೋಡಬಯಸಿದರು. ಈ ಕಾರಣ ನನ್ನ ಹೆಂಡತಿ ಮತ್ತು ನಾನು, ಸಾನ್ಫಾರ್ಯನ್ ಎಂಬ ವಿಶೇಷ ಪಯನೀಯರ್ ಮತ್ತು ಅವನ ಹೆಂಡತಿಯೊಂದಿಗೆ ಒಂದು ಫೋರ್ ವೀಲ್ಹ್ ಡ್ರೈವ್ ಲ್ಯಾಂಡ್ಕ್ರೂಸರ್ ವಾಹನದಲ್ಲಿ ಪಯಣವನ್ನು ಆರಂಭಿಸಿದೆವು. ಸಾನ್ಫಾರ್ಯನ್ಗೆ ರಸ್ತೆ ಚೆನ್ನಾಗಿ ಗೊತ್ತಿತ್ತು ಮತ್ತು ಬೋಕಿಯ ಆಶ್ರಯಾರ್ಥಿಗಳು ಮಾತಾಡುತ್ತಿದ್ದ ಜಾಂಡೆ ಭಾಷೆಯನ್ನು ಅವನು ಮಾತಾಡುತ್ತಿದ್ದನು. ಅಲ್ಲಿ ಹೋಗಿ ಮುಟ್ಟಲು ನಮಗೆ ನಾಲ್ಕು ದೀರ್ಘ ದಿನಗಳು ಹಿಡಿದವು.
ಕೊನೆಯ 400 ಕಿಲೊಮೀಟರುಗಳು ಸುಂದರವಾದ ಏರುತಗ್ಗುಗಳ ಗ್ರಾಮಪ್ರದೇಶಗಳ ಮತ್ತು ದೊಡ್ಡ ಬಾವುಬ್ಯಾಬ್ ಮರಗಳ ಮಧ್ಯೆ ಮಾಡಿದ ಪ್ರಯಾಣವಾಗಿತ್ತು. ಅಲ್ಲಲ್ಲಿ ನಾವು ಸಣ್ಣ ಹಳ್ಳಿಗಳನ್ನು ದಾಟಿಹೋದೆವು. ಈ ದಾರಿಯಲ್ಲಿ ನನ್ನ ಹೆಂಡತಿ ಸರಿಯಾಗಿ 50 ಸೇತುವೆಗಳನ್ನು ಲೆಕ್ಕ ಮಾಡಿದಳು, ಕೆಲವು ತೀರ ಕೆಟ್ಟ ಸ್ಥಿತಿಯಲ್ಲಿದ್ದವು, ಇನ್ನು ಕೆಲವನ್ನು ದಾಟುವುದು ಅಸಾಧ್ಯವಾಗಿತ್ತು. ನಾವು ಕೆಲವು ಸೇತುವೆಗಳನ್ನು ಕೋಲು ಮತ್ತು ಕೊಳೆತುಹೋಗಿದ್ದ ತೊಲೆಗಳಿಂದ ದುರಸ್ತು ಮಾಡಿ, ನಮ್ಮ ಫೋರ್ ವೀಲ್ಹ್ ಡ್ರೈವ್ ಕಾರನ್ನು ಕರ್ಷಕ (ಟ್ರ್ಯಾಕ್ಷನ್) ದಲ್ಲಿ ಹಾಕಿ, ಪ್ರಾರ್ಥಿಸಿ, ಬಲು ಜಾಗ್ರತೆಯಿಂದ ಮುಂದೆ ಚಲಿಸಿದೆವು. ಹತ್ತಿರದಲ್ಲಿ ಸಣ್ಣ ಹಳ್ಳಿಗಳಿದ್ದಲ್ಲಿ ಎಳೆಯರು ಸಹಾಯ ಮಾಡಲಿಕ್ಕಾಗಿ—ಪ್ರತಿಯಾಗಿ ತುಸು ವೇತನಕ್ಕಾಗಿ—ಓಡಿಬರುತ್ತಿದ್ದರು. ಆ ಸೇತುವೆಯ ತೊಲೆ ಮತ್ತು ಹಾಸುಹಲಗೆಗಳನ್ನು ಅವರು ಸದಾ ಹತ್ತಿರದ ಎತ್ತರದ ಹುಲ್ಲಿನೊಳಗೆ ಅಥವಾ ಪೊದೆಗಳಡಿ ಕಂಡುಹಿಡಿದದ್ದನ್ನು ನೋಡಿ ನಾವು ಆಶ್ಚರ್ಯಪಟ್ಟೆವು. ಅವನ್ನು ಆವಶ್ಯ ಬೀಳುವ ಗಿರಾಕಿಗಳಿಗಾಗಿ ತೆಗೆದು ಇಡಲಾಗಿದೆಯೋ ಎಂದು ನಾವು ಕುತೂಹಲಪಟ್ಟೆವು.
ಮೂರು ಬಾರಿ ನಾವು ಆ ಎಳೆಯರ ಸಹಾಯವನ್ನು ನಿರಾಕರಿಸಿದೆವು, ಏಕೆಂದರೆ ಆ ಸೇತುವೆಗಳು ದಾಟಲು ತೀರ ಅಪಾಯಕರವಾದವುಗಳೆಂದು ನಮಗೆ ತೋರಿತು. ಆಗ ನಾವು ವಾಹನವನ್ನು ರಸ್ತೆಯಿಂದ ಕೆಳಗೆ ಇಳಿಸುತ್ತಾ ಆ ಉಪನದಿಗೆ ಇಳಿಸಿ ಬಂಡೆಗಳ ಮೇಲಿಂದ ನಡಸಿ, ಪುನಃ ಮೇಲೇರಿ, ರಸ್ತೆಯನ್ನು ಹಿಡಿದೆವು. ನಾವು ಒಣಹವೆಯ ಕಾಲದಲ್ಲಿದ್ದುದಕ್ಕಾಗಿ ಎಷ್ಟು ಆನಂದಪಟ್ಟೆವು, ಏಕೆಂದರೆ ಇಲ್ಲದಿದ್ದರೆ ಪ್ರಾಯಶಃ ಹೆಲಿಕಾಪ್ಟರಿನ ಮೂಲಕ ಹೊರತು ನಮಗೆ ಇನ್ನಾವ ಪ್ರಯಾಣ ಮಾರ್ಗವೂ ಇಲ್ಲದಿರುತ್ತಿತ್ತು!
ಬೋಕಿ ಹೇಗಿದ್ದೀತು? ಈ ಅನಂತವಾದ “ಪೀಸ್ಟ್”—ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನಲ್ಲಿ ಒಂದು ರಸ್ತೆ, ಅಥವಾ ಮರಳು, ಕಲ್ಲುಗಳು, ಹೆಂಟೆಗಳು ಮತ್ತು ಸಾವಿರಾರು ಕುಳಿಗಳಿರುವ ಕಾಲುದಾರಿಗೆ ಬಳಸುವ ಫ್ರೆಂಚ್ ಪದ—ನಲ್ಲಿ ವಾಹನ ನಡೆಸುವಾಗ ಇದು ಅನೇಕ ವೇಳೆ ನಮ್ಮ ಮನಸ್ಸಿಗೆ ಬಂತು.
ನಾಲ್ಕನೆಯ ದಿವಸ ಮಧ್ಯಾಹ್ನ ಕಳೆದಾಗ ಸಾನ್ಫಾರ್ಯನ್ ಪಪಾಯ ಮರಗಳು ಮತ್ತು ಮರಗೆಣಸಿನ ಹೊಲಗಳಿಂದಾವೃತವಾಗಿದ್ದ ಕೆಲವು ಹುಲ್ಲಿನ ಗುಡಿಸಲುಗಳನ್ನು ತೋರಿಸಿ, “ವಾಲಾ! ಬೋಕಿ ಇಲ್ಲಿಂದ ಆರಂಭವಾಗುತ್ತದೆ,” ಎಂದು ಕೂಗಿ ಹೇಳಿದ. ನಾವು ಏನನ್ನು ನೋಡಿದೆವೂ ಅದರಿಂದ ಆಶ್ಚರ್ಯಗೊಂಡೆವು. “ಇದು ಬೋಕಿಯೊ? ಶಿಬಿರ ಎಲ್ಲಿದೆ?” ಎಂದು ನಾವು ಕೇಳಿದೆವು. ಏಕೆಂದರೆ ನಾವು ನೋಡಿದ್ದು ಶಿಬಿರವಾಗಿರಲಿಲ್ಲ, ಕೇವಲ ಚೆದರಿದ ಕೆಲವು ಮನೆಗಳಾಗಿದ್ದವು. ಅವು ಸಣ್ಣವಾಗಿದ್ದರೂ ಹುಲ್ಲಿನ ಚಾವಣಿಯ ಚೊಕ್ಕ ಚಿಕ್ಕ ಗುಡಿಸಲುಗಳಾಗಿದ್ದವು. ಎಲ್ಲೆಲ್ಲಿಯೂ ಮರಗಳೂ ಪೊದೆಗಳೂ ಇದ್ದವು. ಜನರು ತಮ್ಮ ಬೆಳೆಯನ್ನು ಮನೆಗಳ ಪಕ್ಕದಲ್ಲಿ ಬೆಳೆಸುತ್ತಾರೆ. ಬೋಕಿ ನಾವು ನೋಡಲು ನಿರೀಕ್ಷಿಸಿದ್ದ ಶಿಬಿರವಾಗಿರಲಿಲ್ಲ; ಅದು 35 ಕಿಲೊಮೀಟರ್ ಉದ್ದದ ದೊಡ್ಡ ಹಳ್ಳಿಯಾಗಿತ್ತು.
ಸಹೋದರರನ್ನು ಭೇಟಿಯಾಗುವುದು
ಬೋಕಿಯ ಸಹೋದರರಿಗೆ ನಾವು ಬರುವ ವಿಷಯ ಗೊತ್ತಿತ್ತು, ಆದರೆ ನಮ್ಮ ಪ್ರಯಾಣಕ್ಕೆ ಐದು ದಿನ ಹಿಡಿಯುವವೆಂದು ಅವರು ನೆನಸಿದ್ದರು. ನಮ್ಮ ಕಾರಿನ ಸದ್ದು ಕೇಳಿಸಿದ ಕೂಡಲೆ ಅವರು ಓಡುತ್ತಾ ಬಂದರು. ಪುರುಷರು, ಸ್ತ್ರೀಯರು ಮತ್ತು ಮಕ್ಕಳು ತಮ್ಮ ಗುಡಿಸಲುಗಳಿಂದ, ಪೌಳಿಗಳಿಂದ ಮತ್ತು ಹೊಲಗಳಿಂದ ನಮ್ಮನ್ನು ವಂದಿಸಲು ಧಾವಿಸಿ ಬಂದರು. ಪ್ರತಿಯೊಬ್ಬರೂ ನಸುನಗೆ ಬೀರುತ್ತಾ, ನಗಾಡುತ್ತಾ, ಕೈಕುಲುಕಿದರು—ಸಾಧ್ಯವಾದಲ್ಲಿ ಅನೇಕ ಬಾರಿ. ತಮ್ಮ ಕೂಸುಗಳೊಂದಿಗೆ ಕೈಗಳನ್ನು ಚಾಚಿ ತಾಯಂದಿರು ನಮ್ಮನ್ನು ವಂದಿಸಿದರು. ಎಲ್ಲರೂ ನಮಗೆ ಹಲೋ ಹೇಳಲು ಬಯಸುತ್ತಾ ನಮಗೆ ಹೃತ್ಪೂರ್ವಕವಾದ ಸ್ವಾಗತವನ್ನು ನೀಡಿದರು.
ಸದ್ಯ, ಭಾಷಾ ತಡೆಯ ಕಾರಣ ನನ್ನ ಹೆಂಡತಿಗೂ ನನಗೂ ಹೆಚ್ಚು ಕೆಲಸವಿರಲಿಲ್ಲ. ನಾವು ತುಸು ಫ್ರೆಂಚ್, ತುಸು ಸಾಂಗೊ, ತುಸು ಇಂಗ್ಲಿಷ್ ಮತ್ತು ಆ್ಯರಬಿಕ್ ಭಾಷೆಯಲ್ಲಿ ಮಾತಾಡಲು ಪ್ರಯತ್ನಿಸಿದೆವು. ನಮ್ಮ ಹೆಚ್ಚಿನ ಸಹೋದರರು ಜಾಂಡೆ ಭಾಷೆಯನ್ನು ಮಾತಾಡಿ, ಓದಿ, ಬರೆಯುತ್ತಾರೆ. ನಮ್ಮ ಸಂದರ್ಶನದ ಕಾರ್ಯಕ್ರಮವನ್ನು ವಿವರಿಸುತ್ತಾ ಸಾನ್ಫಾರ್ಯನ್ ಭಾಷಾಂತರ ಮಾಡಬೇಕಾಯಿತು.
ನಾವು ಇನ್ನು ಕೆಲವು ಕಿಲೊಮೀಟರ್ ಪ್ರಯಾಣಿಸಿ ರಾಜ್ಯ ಸಭಾಗೃಹಕ್ಕೆ ಬಂದೆವು. ಅದು ಬೋಕಿಯಲ್ಲಿ ಯಾವ ಧರ್ಮದ ಆಶ್ರಿತರೇ ಆಗಲಿ ಕಟ್ಟಿದ “ಚರ್ಚ್” ಗಳಲ್ಲಿ ಮೊದಲನೆಯದಾಗಿತ್ತು. ಕೈಕುಲುಕಲಿಕ್ಕಾಗಿ ಹೆಚ್ಚು ಜನ ಸಹೋದರರು, ಅವರ ಮಕ್ಕಳು ಮತ್ತು ಆಸಕ್ತರು ಮುಂದೆ ಬಂದರು. ಸಹೋದರರೊಂದಿಗೆ ನೆರೆಹೊರೆಯ ಮಕ್ಕಳು ಕೂಡ ನಮ್ಮ ಕೈಕುಲುಕಲು ಬಂದರು.
ಸಹೋದರರು ತಮ್ಮ ಭೇಟಿಗಾರರಾದ ನಮಗಾಗಿ ಎರಡು ಮನೆಗಳನ್ನು ತಯಾರಿಸಿದ್ದರು. ಅವು ನಿರ್ಮಲವಾಗಿದ್ದವು. ಎರಡು ತೊಟ್ಟಿ ಶುದ್ಧ ನೀರು ಸಿದ್ಧವಾಗಿದ್ದು ನಮಗಾಗಿ ಕಾಯುತ್ತಿತ್ತು. ಏನೂ ಸಿಕ್ಕದೆಂದು ಮತ್ತು ಸಹೋದರರಿಗೆ ಹೊರೆಯಾಗಬಾರದೆಂದು ಎಣಿಸಿ ನಾವು ನಮ್ಮ ಸ್ವಂತ ಆಹಾರ ಮತ್ತು ಕುಡಿಯುವ ನೀರನ್ನು ತಂದಿದ್ದೆವು. ನಾವು ವಾಹನದಿಂದ ಸಾಮಾನನ್ನು ಇಳಿಸುತ್ತಿದ್ದಾಗ ಒಬ್ಬ ಚಿಕ್ಕ ಹುಡುಗಿ ಬಂದು ನಮಗೆ ಆ ರಾತ್ರಿ ಕೋಳಿಮಾಂಸವನ್ನು ಹೇಗೆ ತಯಾರಿಸಬೇಕು, ಸುಟ್ಟೋ, ಸಾರಿನೊಂದಿಗೊ ಎಂದು ಕೇಳಿದಳು. ನಾವು ಇದನ್ನು ನಿರೀಕ್ಷಿಸಿಯೇ ಇದ್ದಿರದರ್ದಿಂದ, ಅದರೊಂದಿಗೆ ಏನು ತಿನ್ನಲಿಕ್ಕಿದೆ ಎಂದು ಕೇಳಿದೆವು. ಉತ್ತರ: ಮರಗೆಣಸು. ಆದಕಾರಣ ನಾವು ಮಸಾಲೆ ಸಾರಿನ ಕೋಳಿಮಾಂಸವನ್ನು ಆರಿಸಿದೆವು. ನಮ್ಮ ಭಾರಿ ಹಸಿವೆಯು ಆ ರಾತ್ರಿ ಉತ್ತಮವಾಗಿ ತೀರಿಸಲ್ಪಟ್ಟಿತು. ಆದರೆ ಅವರು ಪ್ರತಿದಿನ—ಮದ್ಯಾಹ್ನವೂ ರಾತ್ರಿಯೂ—ನಮಗೆ ಊಟ ಕೊಡುತ್ತಾ ಹೋದರು. ನಮಗೆ ಅದನ್ನು ನಂಬಲಾಗಲಿಲ್ಲ—ಆಶ್ರಿತರು ತಮಗೆ ಹೆಚ್ಚು ಇರಲಿಲ್ಲವಾಗಿದ್ದರೂ ನಮಗೆ ಊಟ ಕೊಟ್ಟು ನಮ್ಮ ಪರಾಮರಿಕೆ ಮಾಡುತ್ತಿದ್ದರು.
ಸಂತುಷ್ಟವಾದ ಚಿಕ್ಕ ಸಭೆ
ನಾವು ಇಂತಹ ದೂರದ ಪ್ರದೇಶದಲ್ಲಿದ್ದರೂ ನಮ್ಮ 21 ಜನ ಸಹೋದರರ ಮಧ್ಯೆ ಇದ್ದೆವು. ಇಲ್ಲಿಗೆ ಇಬ್ಬರು ಮಾತ್ರ ಆಗಲೆ ದೀಕ್ಷಾಸ್ನಾತರಾಗಿ ಬಂದಿದ್ದರು. ಉಳಿದವರು ಇಲ್ಲಿಗೆ ಬಂದಾಗ ಆಸಕ್ತ ವ್ಯಕ್ತಿಗಳಾಗಿದ್ದರು. ಅವರು ಅಧ್ಯಯನವನ್ನು ಮುಂದುವರಿಸಿ ಕಳೆದ ವರ್ಷಗಳಲ್ಲಿ ದೀಕ್ಷಾಸ್ನಾನ ಹೊಂದಿದರು. ನಮ್ಮ ಭೇಟಿಯ ಅವಧಿಯಲ್ಲಿ ಇನ್ನೂ ನಾಲ್ಕು ಜನರು ದೀಕ್ಷಾಸ್ನಾನ ಪಡೆದರು.
ಒಂದು ಗಮನಾರ್ಹ ಉದಾಹರಣೆ ಫಾವುಸೀನ್ಟೊ ಎಂಬವನದ್ದು. ಬೋಕಿಗೆ ಬರುವ ಮೊದಲು ಅವನು ಒಬ್ಬ ಮಿತ್ರನಿಂದ ಪ್ರಾಥಮಿಕ ಬೈಬಲ್ ಸತ್ಯಗಳನ್ನು ಕಲಿತನು. ತಾನು ಕಲಿಯುತ್ತಿದ್ದುದನ್ನು ಫಾವುಸೀನ್ಟೊ ಗಣ್ಯಮಾಡಿದನು. ಬೇಗನೆ ಅವನೂ ಅವನ ಮಿತ್ರನೂ ಇತರರಿಗೆ ಸಾರಲಾರಂಭಿಸಿದಾಗ ವಿರೋಧಕ್ಕೊಳಗಾಗಿ, ತಮ್ಮ ಧರ್ಮದಿಂದ “ಜನತೆಯನ್ನು ಉದ್ರೇಕಿಸಿದ” ಕಾರಣ ಸೆರೆಮನೆಗೆ ಹಾಕಲ್ಪಟ್ಟರು. ಸೆರೆಮನೆಯಲ್ಲಿರುವಾಗ, ಫಾವೊಸ್ಟೀನನ ಮಿತ್ರನು ಭಯಪಟ್ಟು ಸತ್ಯವನ್ನು ತ್ಯಜಿಸಲಾಗಿ ಬಿಡುಗಡೆಹೊಂದಿದನು. ಎರಡು ತಿಂಗಳ ತರುವಾಯ ಫಾವುಸೀನ್ಟೊ ವಿಚಾರಣೆಗೊಳಗಾದನು. ಆದರೂ ಅವನ ಮೇಲೆ ಬಂದಿದ್ದ ಅಪವಾದಗಳು ಆಧಾರವಿಲ್ಲದವುಗಳಾದುದರಿಂದ ಅವನನ್ನು ಬಿಡುಗಡೆ ಮಾಡಲಾಯಿತು. ಯುದ್ಧವು ಅವನಿದ್ದ ಸ್ಥಳಕ್ಕೆ ಬಂದಾಗ, ಫಾವುಸೀನ್ಟೊ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ಗೆ ಪಲಾಯನಮಾಡಿ, ಅಲ್ಲಿ ಸಹೋದರರನ್ನು ಭೇಟಿಯಾಗಿ ತನ್ನ ಬೈಬಲ್ ಅಧ್ಯಯನವನ್ನು ಪುನಃ ಆರಂಭಿಸಿದನು. ಅವನಿಗೆ 1991 ರ ಜುಲೈಯಲ್ಲಿ ದೀಕ್ಷಾಸ್ನಾನವಾಯಿತು, ಮತ್ತು ಅವನು 1992 ರಲ್ಲಿ ಕ್ರಮದ ಪಯನೀಯರನಾಗಿ ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರಾರಂಭಿಸಿದನು.
ಬೋಕಿಯ ಸಂತುಷ್ಟ ಮತ್ತು ಮಿತ್ರಭಾವದ ಚಿಕ್ಕ ಸಭೆಯಲ್ಲಿ ಈಗ ಒಬ್ಬ ವಿಶೇಷ ಪಯನೀಯರ್ ಮತ್ತು 21 ಪ್ರಚಾರಕರಿದ್ದಾರೆ. ಇಂಗ್ಲಿಷ್ ಮಾತಾಡುವ ಇಬ್ಬರು ಸಹೋದರರು ಹಿರಿಯರಾಗಿ ಸೇವೆಮಾಡುತ್ತಾ ಬಾಂಗಿಯ ಬ್ರಾಂಚ್ ಆಫೀಸಿನೊಂದಿಗೆ ಉತ್ತಮ ಸಂಪರ್ಕದಿಂದಿದ್ದಾರೆ. ಆಶ್ರಿತ ಸಹೋದರರು ಭಯಂಕರ, ಹತಾಶೆಯ ಸ್ಥಿತಿಯಲ್ಲಿರುವರೆಂದು ನಾವು ನಿರೀಕ್ಷಿಸಿದೆವ್ದು, ಆದರೆ ಹಾಗಿರಲಿಲ್ಲ. ಐಹಿಕವಾಗಿ ಬಡವರಾಗಿದ್ದರೂ ಯಾರೂ ಆಪಾದಿಸುತ್ತಿರುವುದಾಗಲಿ, ಚಿಂತೆ ಮಾಡುತ್ತಿರುವುದಾಗಲಿ, ಗೊಣಗುತ್ತಿರುವುದಾಗಲಿ ಇರಲಿಲ್ಲ. ಅವರ ಆಗಮನದಂದಿನಿಂದ ಸಹೋದರರು ತಮ್ಮ ಸ್ವಂತ ಗುಡಿಸಲುಗಳನ್ನು ಮತ್ತು ಮನೆಗಳನ್ನು ಕಟ್ಟಿ ಆಹಾರವನ್ನು ಬೆಳೆಸುವುದನ್ನು ಮತ್ತು ಕೋಳಿಸಾಕಣೆಯನ್ನು ಆರಂಭಿಸಿದ್ದಾರೆ. ಅವರಿಗೆ ಮೊದಲು ಇದ್ದುದಕ್ಕಿಂತ ಈಗ ಕಡಮೆ ಇರುವುದಾದರೂ ಅವರು ಜೀವಂತರಾಗಿದ್ದು ತಮ್ಮ ಜೊತಕ್ರೈಸ್ತರೊಂದಿಗಿದ್ದಾರೆ.
ಬೋಕಿಯಲ್ಲಿ 17,000 ದಿಂದ 20,000 ದಷ್ಟು ಆಶ್ರಿತರಿದ್ದಾರೆ, ಮತ್ತು ಪ್ರತಿ ತಿಂಗಳಲ್ಲಿ ಹೆಚ್ಚು ಜನರು ಬರುತ್ತಾ ಇರುವುದರಿಂದ ನಮ್ಮ ಸಹೋದರರಿಗೆ ತಮ್ಮ ಶುಶ್ರೂಷೆಗಾಗಿ ಒಂದು ದೊಡ್ಡ ಕ್ಷೇತ್ರವಿದೆ. ನಾವು ಅವರೊಂದಿಗೆ ಸಾರಲು ಹೋದೆವು ಮತ್ತು ಅದು ನಿಶ್ಚಯವಾಗಿಯೂ ಅತ್ಯಭಿರುಚಿಯದ್ದಾಗಿತ್ತು. ಅವರು ಅನೇಕ ವೇಳೆ ಜಾಂಡೆಯಲ್ಲಿ ಬೈಬಲನ್ನು ಉಪಯೋಗಿಸುತ್ತಾರೆ ಮತ್ತು ಈ ಭಾಷಾಂತರದಲ್ಲಿ ದೇವರ ನಾಮವು ಹೀಬ್ರು ಶಾಸ್ತ್ರಗಳಲ್ಲಿ ಇರುವುದಲ್ಲದೆ ಅನೇಕ ಕಡೆಗಳಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿಯೂ ಇದೆ. ಈ ಜನರಿಗೆ ದೇವರು ಕೇವಲ “ಬೋಲಿ” (ಜಾಂಡೆ ಭಾಷೆಯಲ್ಲಿ “ದೇವರು”) ಯಲ್ಲ, “ಯೆಕೋವ”—ದೇವರ ವೈಯಕ್ತಿಕ ಹೆಸರನ್ನು ಅವರು ಉಚ್ಚರಿಸುವ ವಿಧ—ಕೂಡ ಆಗಿದ್ದಾನೆ. “ಬೋಲಿ ಯೆಕೋವ” ಎಂಬುದು ಸಾಮಾನ್ಯ ಅಭಿವ್ಯಕ್ತಿ. ಇತರ ಅನೇಕ ಆಫ್ರಿಕನ್ ಭಾಷೆಗಳಲ್ಲಿ ಪ್ರಾಟೆಸ್ಟಂಟ್ ಭಾಷಾಂತರಗಳು ಹೀಗೆ ಸರಿಯಾಗಿ ಭಾಷಾಂತರಿಸದೆ, “ಯೆಹೋವ” ನನ್ನು “ನ್ಸಾಪ,” “ನ್ಸಾಂಬೆ,” ಅಥವಾ ದೇವರಿಗಿರುವ ಇತರ ಆಫ್ರಿಕನ್ ಹೆಸರುಗಳಿಂದ ಭರ್ತಿಮಾಡುತ್ತವೆ.
ಯೇಸುವಿನ ಪ್ರವಾದನೆಗನುಸಾರ, ರಾಜ್ಯ ಸುವಾರ್ತೆಯು ಇಡೀ ಜಗತ್ತಿನಲ್ಲಿ, ಬೋಕಿಯಲ್ಲಿ ಸಹ ಸಾರಲ್ಪಡುತ್ತಿದೆ. (ಮತ್ತಾಯ 24:14) ಸಭೆಯಲ್ಲಿ ಈಗ ಅದಕ್ಕೆ ಬೇಕಾಗುವ ಎಲ್ಲ ಭಾಷೆಗಳಲ್ಲಿ ಬೈಬಲ್ಗಳ, ಪುಸ್ತಕಗಳ, ಪತ್ರಿಕೆಗಳ, ಪುಸ್ತಿಕೆಗಳ, ಮತ್ತು ಕಿರುಹೊತ್ತಗೆಗಳ ಒಳ್ಳೆಯ ಸಂಗ್ರಹವಿದೆ. ಪ್ರಾಯಶಃ ಭವಿಷ್ಯತ್ತಿನಲ್ಲಿ, ಜಾಂಡೆ ಭಾಷೆಯಲ್ಲಿ ಹೆಚ್ಚು ಪ್ರಕಾಶನಗಳು ದೊರೆಯುವುವು.
ಒಂದು ಕಾಯಂ ನಿವಾಸಕ್ಕಾಗಿ ಕಾಯುವುದು
ಮೊದಲನೆಯ ಸಾಯಂಕಾಲ, “ಪೂರ್ವ ಯೂರೋಪಿನ ಸಂತುಷ್ಟ ಅಧಿವೇಶನಕಾರರು ಯೆಹೋವನನ್ನು ಸ್ತುತಿಸುತ್ತಾರೆ,” ಎಂಬ, ಸೊಸೈಟಿಯ ಜಾರುಚಿತ್ರ (ಸ್ಲೈಡ್) ಕಾರ್ಯಕ್ರಮವನ್ನು ನಾವು ತೋರಿಸಿದೆವು. ಮುಂದಿನ ರಾತ್ರಿ, “ಅನೇಕರನ್ನು ಸದ್ಧರ್ಮಕ್ಕೆ ತರುವುದು,” ಎಂಬುದು ಕಾರ್ಯಕ್ರಮವಾಗಿತ್ತು. ಇದರ ದೇಖಾವೆಯನ್ನು ಹೊರಗೆ, ರಾಜ್ಯ ಸಭಾಗೃಹದ ಪಕ್ಕದಲ್ಲಿ, ಸ್ವಚ್ಛವಾದ ಆಕಾಶದ ಮತ್ತು ಬೆಳ್ಳಿಯಂತಹ ಚಂದ್ರನ ಕೆಳಗೆ ತೋರಿಸಲಾಯಿತು. ಎಂತಹ ಒಂದು ವಾತಾವರಣ! ಈ ಸ್ಲೈಡ್ ದೇಖಾವೆಗಳನ್ನು ನೋಡಲು ನೂರಾರು ಜನರು ಬಂದರು, ಮತ್ತು ಆ ಜನಸಂಖ್ಯೆಗೆ ವಿಶೇಷವಾದ ಯಾವುದನ್ನೋ ನೀಡಲು ನಮ್ಮ ಸಹೋದರರು ಸಂತೋಷ ಮತ್ತು ಅಭಿಮಾನವುಳ್ಳವರಾಗಿದ್ದರು.
ಸೋಮವಾರ ಬಂದಾಗ, ನಾವು ಹಿಂದೆ ಹೋಗುವ ಪ್ರಯಾಣಕ್ಕೆ ಸಿದ್ಧರಾದೆವು. ಅದೇ ರಸ್ತೆಯ ಮೇಲೆ, ಅವೇ 50 ಸೇತುವೆಗಳನ್ನು ದಾಟುವ ಪುನಃ ನಾಲ್ಕು ದಿವಸಗಳ ಪ್ರಯಾಣ ಇದಾಗಿರುವುದು. ಈ ಪ್ರಯಾಣಕ್ಕೆ ತಾನು ಸ್ವಲ್ಪ ಆಹಾರ—ಆಗಲೇ ಸುಟ್ಟಿದ್ದ ಮತ್ತು ಬೆಳ್ಳುಳ್ಳಿಯಿಂದ ರುಚಿಗೊಳಿಸಿದ ಇನ್ನೆರಡು ಕೋಳಿಗಳ ಮಾಂಸ—ತಯಾರಿಸುತ್ತೇನೆಂದು ಒಬ್ಬ ಸಹೋದರಿ ಪಟ್ಟುಹಿಡಿದು ಹೇಳಿದಳು. ಆ ಬೆಳಗ್ಗಿನ ಹೊತ್ತಿನಲ್ಲಿ ನಾವು ಲ್ಯಾಂಡ್ ಕ್ರೂಸರ್ನಲ್ಲಿ ಪ್ರಯಾಣಿಸುತ್ತಿದ್ದಾಗ ಅದರ ಸುವಾಸನೆ ಎಷ್ಟೋ ಹಿಡಿಸುತ್ತಿತ್ತು. ಆ ಮಧ್ಯಾಹ್ನ ನಾವು ಕಾಡುಪ್ರದೇಶದಲ್ಲಿ ಆ ಸುಟ್ಟ ಕೋಳಿಮಾಂಸವನ್ನು ಸವಿಯಲು ನಿಂತಾಗ ಬೋಕಿಯ ನಮ್ಮ ಸಹೋದರರನ್ನು ನೆನಸಿದೆವು. ಆಶ್ರಿತರಾಗಲು ಬಲಾತ್ಕರಿಸಲ್ಪಟ್ಟರೂ, ಅವರು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಾ ಮುಂದುವರಿದು, ದೇವರ ವಾಗ್ದಾನಿತ ನೂತನ ಲೋಕದಲ್ಲಿ ಶಾಂತಿಯ ಒಂದು ಕಾಯಂ ನಿವಾಸವನ್ನು ಎದುರುನೋಡುತ್ತಿದ್ದಾರೆ. (2 ಪೇತ್ರ 3:13)—ದತ್ತಲೇಖನ.