“ದೇವರ ಗೃಹ” ವನ್ನು ಗಣ್ಯತೆಯಿಂದ ಕಾಣುವುದು
“ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು.”—ಕೀರ್ತನೆ 27:4.
ಗುಣಗ್ರಾಹಿಯಾದ ರಾಜ ದಾವೀದನು ಯೆಹೋವನ ಮಂದಿರವನ್ನು ಸಂತೋಷ, ಯಾ ಹರ್ಷದಿಂದ ನೋಡಿದನು. ಇಂದು ಸತ್ಯ ಆರಾಧನೆಯ ಕೇಂದ್ರಗಳ ಕುರಿತು ನಿಮಗೆ ಅದೇ ರೀತಿಯಾಗಿ ಅನಿಸುತ್ತದೊ? ವಾಚ್ ಟವರ್ ಸೊಸೈಟಿಯ ಬ್ರಾಂಚ್ಗಳಲ್ಲಿರುವ 95 ಕ್ಕಿಂತಲೂ ಹೆಚ್ಚು ಬೆತೆಲ್ ಗೃಹಗಳು, ನಮ್ಮ ಸಮಯದಲ್ಲಿ ಯೆಹೋವನ ಆರಾಧನೆಯೊಂದಿಗೆ ಜೊತೆಸೇರಿರುವ ಸೌಕರ್ಯಗಳಲ್ಲಿ ಸೇರಿವೆ.
“ನನ್ನ ಅನೇಕ ವರ್ಷಗಳ ಬೆತೆಲ್ ಸೇವೆಯ ಕುರಿತು ಪರಾಮರ್ಶಿಸುವುದು, ವರ್ಷದಿಂದ ವರ್ಷಕ್ಕೆ ಬೆಳೆದಿರುವ ಆಳವಾದ ಕೃತಜ್ಞತೆ ಮತ್ತು ಮಹಾ ಗಣ್ಯತೆಯನ್ನು ನನ್ನಲ್ಲಿ ತುಂಬುತ್ತದೆ,” ಎಂದು ಜರ್ಮನಿಯಲ್ಲಿ ಬೆತೆಲ್ ಗೃಹದಲ್ಲಿ 1948 ರಲ್ಲಿ ಕೆಲಸವನ್ನು ಆರಂಭಿಸಿದ ಹೆಲ್ಗಾ ವಿವರಿಸುತ್ತಾರೆ. ಇಸವಿ 1993ರ ಸೇವಾ ವರ್ಷದಲ್ಲಿ ಲೋಕವ್ಯಾಪಕವಾಗಿ ‘ಯೆಹೋವನ ಪ್ರಸನ್ನತೆಯನ್ನು ನೋಡಿದ’ 13,828 ಆನಂದಭರಿತ ಬೆತೆಲ್ ಕೆಲಸಗಾರರಲ್ಲಿ ಹೆಲ್ಗಾ ಒಬ್ಬರಾಗಿದ್ದಾರೆ. ಬೆತೆಲ್ ಎಂಬ ಹೆಸರು ನಿಖರವಾಗಿ ಏನನ್ನು ಅರ್ಥೈಸುತ್ತದೆ? ದೇವರನ್ನು ಬೆತೆಲ್ನಲಿಯ್ಲಾಗಲಿ ಯಾ ಹೊರಗಾಗಲಿ ಸೇವಿಸುವ ಯೆಹೋವನ ಸಾಕ್ಷಿಗಳಲ್ಲಿ ಪ್ರತಿಯೊಬ್ಬನು, ಈ ಏರ್ಪಾಡನ್ನು ಗಣ್ಯತೆಯಿಂದ ಹೇಗೆ ನೋಡಬಲ್ಲನು?
ಭಕ್ತಿಯನ್ನು ಕೇಳಿಕೊಳ್ಳುವ ಒಂದು ಹೆಸರು
ಹೀಬ್ರು ಪದವಾದ ಬೆಹ್ತ್-ಎಲ್ “ದೇವರ ಗೃಹ” ವನ್ನು ಅರ್ಥೈಸುವುದರಿಂದ, “ಬೆತೆಲ್” ಅತಿ ಸೂಕ್ತವಾದ ಹೆಸರಾಗಿದೆ. (ಆದಿಕಾಂಡ 28:19, ಪಾದಟಿಪ್ಪಣಿ) ಹೌದು, ಬೆತೆಲ್ ಒಂದು ಸುಸಂಘಟಿತ ಗೃಹವನ್ನು ಯಾ ದೇವರು ಮತ್ತು ಆತನ ಚಿತ್ತವು ಗಮನದ ಕೇಂದ್ರವಾಗಿರುವ ‘ಜ್ಞಾನದಿಂದ ಕಟ್ಟಲಾದ ಒಂದು ಮನೆವಾರ್ತೆ’ ಯನ್ನು ಹೋಲುತ್ತದೆ. (ಜ್ಞಾನೋಕ್ತಿ 24:3) “ಒಂದು ಕುಟುಂಬದಲ್ಲಿ ಜೀವಿಸುವಂತೆ ಅದಿದೆ. ನಮಗೊಂದು ಸುಸಂಘಟಿತ ದಿನಚರಿಯಿದೆ,” ಎಂದು ಹರ್ಟಾ ಗಣ್ಯತೆಯಿಂದ ಹೇಳುತ್ತಾರೆ. ಹೆಲ್ಗಾರಂತೆ ಅವರು ಅದೇ ಬೆತೆಲ್ನಲ್ಲಿ 45 ಕ್ಕಿಂತಲೂ ಹೆಚ್ಚು ವರ್ಷಗಳಿಂದ ಸೇವಿಸುತ್ತಿದ್ದಾರೆ. ಈ ದೊಡ್ಡ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ, ಸಂತೋಷ ಮತ್ತು ಭದ್ರತೆಯ ಅನಿಸಿಕೆಯನ್ನು ನೀಡುವ ತನ್ನದಾದ ಕಾರ್ಯ ಹಾಗೂ ಸ್ಥಾನವಿದೆ. ಬೆತೆಲ್ ಎಂಬ ಹೆಸರಿಗೆ ಸಮಂಜಸವಾಗಿ, ಸುವ್ಯವಸ್ಥೆ ಮತ್ತು ಸಂಘಟನೆಯು ಪ್ರತಿಯೊಂದು ಖಾತೆಯ ವೈಶಿಷ್ಟ್ಯವಾಗಿರುತ್ತದೆ. ಇದು ಶಾಂತಿಯನ್ನು ಪ್ರವರ್ತಿಸುತ್ತದೆ, ಸುವಾರ್ತೆಯ ಪ್ರಭಾವಕಾರಿ ಸಾರುವಿಕೆಯನ್ನು ಸಾಧ್ಯಗೊಳಿಸುತ್ತದೆ, ಮತ್ತು “ದೇವರ ಗೃಹ” ವನ್ನು ಅತ್ಯಂತ ಗೌರವದಿಂದ ಕಾಣುವ ಸರಿಯಾದ ಕಾರಣವನ್ನು ಸಭೆಗಳಿಗೆ ಕೊಡುತ್ತದೆ.—1 ಕೊರಿಂಥ 14:33, 40.
ಯಾಕೆ ಇಂತಹ ಸೌಕರ್ಯಗಳು ಅವಶ್ಯವಾಗಿವೆ? ಉದಾಹರಣೆಗೆ, ಈ ಪತ್ರಿಕೆಯು, ಒಂದು ಬೆತೆಲ್ ಮುದ್ರಣಾಲಯದಲ್ಲಿ ತಯಾರಿಸಲ್ಪಟ್ಟಿತು. ಯೇಸು ಕ್ರಿಸ್ತನ ಮೂಲಕ ಮುಂಗಾಣಲ್ಪಟ್ಟ ರಾಜ್ಯ ಸಂದೇಶದ ಸಾರುವಿಕೆ ಮತ್ತು ಆತ್ಮಿಕ ಆಹಾರದ ಹಂಚಿಕೆ, ಇವೆರಡೂ—ಸಿದ್ಧರಾಗಿರುವ ಕೆಲಸಗಾರರಿಂದ ಬೆಂಬಲಿಸಲ್ಪಟ್ಟ ಮತ್ತು ಯೆಹೋವನ ಎಲ್ಲ ಆರಾಧಕರಿಂದ ಮಹಾ ಗೌರವದಿಂದ ಕಾಣಲ್ಪಡುವ—ಬೆತೆಲ್ನಂತಹ ಸಂಘಟನಾ ಏರ್ಪಾಡುಗಳನ್ನು ಅನಿವಾರ್ಯವಾಗಿ ಮಾಡುತ್ತವೆ.—ಮತ್ತಾಯ 24:14, 45.
ಇಲ್ಲಿನ ಕೆಲಸದ ದಿನದ ನಿಯತಕ್ರಮದ ಕುರಿತು ಹೆಚ್ಚನ್ನು ಕಲಿಯಲು ನೀವು ಇಷ್ಟಪಡುವಿರೊ? ಹೆಲ್ಗಾ ಮತ್ತು ಹರ್ಟಾ ಜೀವಿಸುವಲ್ಲಿ, 800 ಕ್ಕಿಂತಲೂ ಹೆಚ್ಚಾಗಿರುವ ಕ್ರಮವಾದ ಕೆಲಸಗಾರರಲ್ಲಿ ಅನೇಕರು ದಿನಕ್ಕಾಗಿ ತಯಾರಿಸಲು ಇನ್ನೂ ಬೇಗನೆ ಏಳುವುದಾದರೂ, ಎಲ್ಲಾ ನಿವಾಸಿ ಕಟ್ಟಡಗಳಲ್ಲಿ ಬೆಳಗ್ಗೆ 6:30ಕ್ಕೆ ಮಧುರವಾದ ಒಂದು ಘಂಟಾಮೇಳವು ನಾದ ಕೊಡುತ್ತದೆ. ಬೆಳಗ್ಗೆ 7:00 ರೊಳಗಾಗಿ, ಸೋಮವಾರದಿಂದ ಶನಿವಾರದ ವರೆಗೆ, ದೈನಿಕ ವಚನದ ಚರ್ಚೆ ಯಾ ಬೆಳಗ್ಗಿನ ಆರಾಧನೆಗಾಗಿ ಕುಟುಂಬವು ಊಟದ ಕೋಣೆಗಳಲ್ಲಿ ಸೇರಿಬರುತ್ತದೆ. ಒಂದು ಪೌಷ್ಟಿಕ ಹೊತ್ತರೂಟವು ಹಿಂಬಾಲಿಸುತ್ತದೆ. ಪ್ರತಿಯೊಂದು ಕೆಲಸದ ದಿನವು ಬೆಳಗ್ಗೆ 8:00ಕ್ಕೆ ಆರಂಭವಾಗುತ್ತದೆ ಮತ್ತು ಮಧ್ಯಾಹ್ನದ ಊಟದ ಬಿಡುವಿನಿಂದ ಮಾತ್ರ ತಡೆಯಲ್ಪಟ್ಟು, ಎಂಟು ತಾಸುಗಳ ವರೆಗೆ ಮುಂದುವರಿಯುತ್ತದೆ. (ಕುಟುಂಬವು ಸಾಮಾನ್ಯವಾಗಿ ಶನಿವಾರದಂದು ಅರ್ಧ ದಿನ ಕೆಲಸಮಾಡುತ್ತದೆ.) ಅಡಿಗೆ ಮನೆ, ಮುದ್ರಣಾಲಯ, ದೋಬಿ ಖಾನೆ (ಲಾಂಡ್ರಿ), ಆಫೀಸುಗಳು, ಕಾರ್ಯಾಲಯಗಳು, ಪುಸ್ತಕ ಕಟ್ಟುವ ಸ್ಥಳಗಳು, ಯಾ ಯಾವುದೆ ಬೇರೆ ಖಾತೆಯಲ್ಲಾಗಿರಲಿ, ಮಾಡಲಿಕ್ಕೆ ಹೇರಳವಿದೆ.
ಸಾಯಂಕಾಲಗಳಲ್ಲಿ ಯಾ ವಾರಾಂತ್ಯಗಳಲ್ಲಿ, ಕುಟುಂಬದ ಸದಸ್ಯರು ಸ್ಥಳಿಕ ಸಭೆಗಳೊಂದಿಗೆ ಕೂಟಗಳಲ್ಲಿ ಹಾಗೂ ಸಾರ್ವಜನಿಕ ಸಾರುವಿಕೆಯಲ್ಲಿ ಸೇರುತ್ತಾರೆ. ಅನೇಕ ಬೆತೆಲ್ ಸಹೋದರರು ಈ ಸಭೆಗಳಲ್ಲಿ ಹಿರಿಯರು ಯಾ ಶುಶ್ರೂಷಾ ಸೇವಕರಾಗಿದ್ದಾರೆ. ಈ ಸಹಕಾರವನ್ನು—ಎರಡೂ ಗುಂಪುಗಳು ಒಟ್ಟಿಗೆ ಸುಸಂಗತವಾಗಿ ಒಂದೇ ದೇಹದಂತೆ ಪರಸ್ಪರ ಗೌರವ ಮತ್ತು ತಿಳಿವಳಿಕೆಯಿಂದ ಕೆಲಸಮಾಡುವುದನ್ನು—ಸ್ಥಳಿಕ ಸಾಕ್ಷಿಗಳು ನಿಜವಾಗಿಯೂ ಗಣ್ಯಮಾಡುತ್ತಾರೆ. (ಕೊಲೊಸ್ಸೆ 2:19) “ದೇವರ ಗೃಹ” ದಲ್ಲಿ ತನಗಿರುವ ನೇಮಕವು ಇತರ ಚಟುವಟಿಕೆಗಳ ಮೇಲೆ ಆದ್ಯತೆಯನ್ನು ತೆಗೆದುಕೊಳ್ಳುತ್ತದೆಂದು ಪ್ರತಿಯೊಬ್ಬ ಬೆತೆಲ್ ಕೆಲಸಗಾರನಿಗೆ ಗೊತ್ತಿದೆ. ಹಾಗಿದ್ದರೂ, ಸಮತೂಕದ ಮನೋಭಾವದೊಂದಿಗೆ ಕೂಡಿರುವ ಸಾರುವಿಕೆಗಾಗಿ ಉತ್ಸಾಹವು ಮತ್ತು ಸಭೆಯಲ್ಲಿ ಹುರುಪು ಹಾಗೂ ಆಸಕ್ತಿಯು, ಬೆತೆಲ್ ಕೆಲಸಗಾರನ ಆತ್ಮಿಕತೆಯನ್ನು ಬಲಗೊಳಿಸುತ್ತದೆ, ಅವನ ಆನಂದವನ್ನು ಹೆಚ್ಚಿಸುತ್ತದೆ, ಮತ್ತು ಅವನನ್ನು ಕುಟುಂಬದ ಹೆಚ್ಚು ಉತ್ಪನ್ನಕಾರಿ ಸದಸ್ಯನನ್ನಾಗಿ ಮಾಡುತ್ತದೆ. ಮನಃಪೂರ್ವಕ ಭಕ್ತಿಯೊಂದಿಗೆ ಸೇರಿರುವ ಹೆಸರಿನ “ಗೃಹ” ದಲ್ಲಿ ಕೆಲಸಮಾಡುವಾಗ ಈ ಗುಣಗಳು ಎಷ್ಟು ನಿರ್ಧಾರಕವಾಗಿವೆ!
ಬೆತೆಲ್ ಸೇವೆಯನ್ನು ಸಫಲಗೊಳಿಸುವುದು
ಬೆತೆಲ್ ಸೇವೆಯನ್ನು ಸಫಲಗೊಳಿಸುವಂತೆ ಯೆಹೋವನ ಸಾಕ್ಷಿಗಳ ಎಣಿಕೆಯಿಲ್ಲದವರನ್ನು ಯಾವುದು ಸಹಾಯಮಾಡಿದೆ? ಬೆತೆಲ್ನಲ್ಲಿ ಅನೇಕ ವರ್ಷಗಳ ಅನುಭವವಿರುವ ಫ್ರಾನ್ಸ್ನ ಬೆತೆಲ್ ಕುಟುಂಬದ ಸದಸ್ಯರು ಮುಂದೆ ತಿಳಿಸಿದಂತೆ ಹೇಳಿಕೆಯನ್ನು ನೀಡುತ್ತಾರೆ: “ಯೆಹೋವನಿಗಾಗಿ ಪ್ರೀತಿ. ಆತನು ನಮ್ಮನ್ನು ಎಲ್ಲಿ ಇರಿಸುತ್ತಾನೋ ಅಲ್ಲಿ ಬಿಡದೆ ಮುಂದುವರಿಯುವ ದೃಢಸಂಕಲ್ಪವನ್ನು ಹೊಂದಿರುವುದು; ದೀನತೆ, ಅಧೀನತೆ, ಮತ್ತು ಸೊಸೈಟಿಯ ಮೂಲಕ ನಮಗೆ ಕೊಡಲ್ಪಡುವ ನಿರ್ದೇಶನಕ್ಕೆ ವಿಧೇಯತೆ.” (ಡೆನೀಜ್) “ರೋಮಾಪುರ 12:10 ರಲ್ಲಿ ಪೌಲನ ಮೂಲಕ ಉಲ್ಲೇಖಿಸಲಾದ ತತ್ವವನ್ನು ಗೌರವಿಸುವುದು ಎಷ್ಟು ಪ್ರಾಮುಖ್ಯವೆಂದು ನಾನು ಗಮನಿಸಿದ್ದೇನೆ: ‘ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.’ ನಮ್ಮ ವೈಯಕ್ತಿಕ ಅಭಿಪ್ರಾಯವು ಸ್ವೀಕರಿಸಲ್ಪಡುವಂತೆ ಪಟ್ಟುಹಿಡಿಯುವುದಲ್ಲ ಬದಲಿಗೆ, ಇತರರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವುದರ ಪ್ರಮುಖತೆಯನ್ನು ಈ ವಚನವು ನಮಗೆ ತೋರಿಸುತ್ತದೆ. ಬೇರೆ ಮಾತುಗಳಲ್ಲಿ, ಸರ್ವೋತ್ಕೃಷತ್ಟೆಯನ್ನು ಹುಡುಕುವುದಲ್ಲ.” (ಶಾನ್ಜ್ಯಾಕ್ಸ್) “ವಿಷಯಗಳನ್ನು ನಾವು ಶಾರೀರಿಕ, ಮಾನವ ದೃಷ್ಟಿಕೋನದಿಂದ ನೋಡುವುದಾದರೆ, ಬೆತೆಲ್ ಸೇವೆಗಾಗಿರುವ ನಮ್ಮ ಗೌರವವು ನಾಶವಾಗಬಲ್ಲದೆಂದು,” ಬಾರ್ಬರಾ ಹೇಳುತ್ತಾರೆ, “ಯಾಕೆಂದರೆ ಯೆಹೋವನು ತನ್ನ ಸಂಸ್ಥೆಯನ್ನು ನಿರ್ದೇಶಿಸುತ್ತಿದ್ದಾನೆಂಬ ನಿಜತ್ವವನ್ನು ಮರೆಯುವಂತೆ ಇದು ಮಾಡಬಲ್ಲದು. ಇತರರ ಅಪರಿಪೂರ್ಣತೆಗಳಿಂದ ನಾವು ಎಡವುವುದಾದರೆ ಅಂತಹ ಗೌರವವು ನಷ್ಟಗೊಳ್ಳಬಲ್ಲದು.”
ಬೆತೆಲ್ನಲ್ಲಿರುವವರೆಲ್ಲರು ಅಪರಿಪೂರ್ಣರಾಗಿದ್ದಾರೆ, ಆದುದರಿಂದ ಸಹವಾಸವು ಜಾಗರೂಕವಾದ ಆಲೋಚನೆಯನ್ನು ಕೇಳಿಕೊಳ್ಳುತ್ತದೆ. ಎಳೆಯರು ಯಾ ಇತ್ತೀಚೆಗೆ ಬಂದವರು ತಮ್ಮ ಸಹವಾಸವನ್ನು ಕೇವಲ ತಮ್ಮ ಸಮಾನಸ್ಕಂದರಿಗೆ ಸೀಮಿತಗೊಳಿಸದೆ ಇರುವುದು ಒಳ್ಳೆಯದು. ದೂರು ಹೇಳುವ ಪ್ರವೃತ್ತಿಯನ್ನು ಪ್ರದರ್ಶಿಸಬಹುದಾದ ಯಾ ನಕಾರಾತ್ಮಕವಾಗಿ ಯೋಚಿಸಬಹುದಾದ ವ್ಯಕ್ತಿಗಳು ಬೆತೆಲ್ನಲ್ಲಿ ಯಾ ಸಭೆಯಲ್ಲಿ ಆತ್ಮೋನ್ನತಿ ಮಾಡುವ ಸಾಹಚರ್ಯವನ್ನು ತರುವುದಿಲ್ಲ. ಇನ್ನೊಂದು ಕಡೆಯಲ್ಲಿ, ಯಾಕೋಬ 3:17 ರಲ್ಲಿ ವರ್ಣಿಸಲಾದ “ಮೇಲಣಿಂದ ಬರುವ ಜ್ಞಾನ” ವನ್ನು ಅನುಕರಿಸುವುದು, ಆಶೀರ್ವಾದಗಳನ್ನು ತರುತ್ತದೆ. ಇದು “ಮೊದಲು ಪರಿಶುದ್ಧವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದು, ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂಥದು ಆಗಿದೆ; ಅದರಲ್ಲಿ ಚಂಚಲವೂ ಕಪಟವೂ ಇಲ್ಲ.” ಅಲ್ಲಿ ಒಬ್ಬನ ಇರುವನ್ನು ಹಿತಕರವಾಗಿಯೂ ಹುರಿದುಂಬಿಸುವಂಥದ್ದಾಗಿಯೂ ಮಾಡುತ್ತಾ, ದೀರ್ಘಶಾಂತಿ ಮತ್ತು ದಯೆಯೊಂದಿಗೆ ಇಂತಹ ಗುಣಗಳು, “ದೇವರ ಗೃಹ” ದಲ್ಲಿ ಗಮನವನ್ನು ಸೆಳೆಯುವಂಥವುಗಳಾಗಿವೆ. ಸಾಕ್ಷಿಗಳಲ್ಲದ ಸಂದರ್ಶಕರೂ ಕೂಡ ಅನೇಕ ವೇಳೆ ಕೆಲಸಗಾರರ ಒಳ್ಳೆಯ ವರ್ತನೆ, ಸ್ನೇಹಭಾವ, ಮತ್ತು ಆನಂದಭರಿತ ಆತ್ಮದ ಬಗ್ಗೆ ಮೆಚ್ಚಿಕೆಯನ್ನು ವ್ಯಕ್ತಪಡಿಸುತ್ತಾರೆ.
ಎಪ್ಪತ್ತಕ್ಕಿಂತಲೂ ಅಧಿಕ ವಯಸ್ಸಾಗಿರುವ ಮತ್ತು 1956 ರಿಂದ ಜರ್ಮನಿಯಲ್ಲಿರುವ ಬೆತೆಲ್ ಕುಟುಂಬದ ಸದಸ್ಯೆ ಆಗಿರುವ ಆನಿ, ಸೇವೆ ಸಲ್ಲಿಸಲಿಕ್ಕಿರುವ ಸಿದ್ಧತೆಯನ್ನು ತಾವು ಹೇಗೆ ಕಾಪಾಡಿಕೊಳ್ಳುತ್ತಾರೆಂದು ವಿವರಿಸುತ್ತಾರೆ: “ನನ್ನ ಆತ್ಮಿಕ ಕ್ಷೇಮಕ್ಕಾಗಿ, ಸೊಸೈಟಿಯ ಪ್ರಕಾಶನಗಳೊಂದಿಗೆ ಸರಿಸಮನಾಗಿರಲು, ಕ್ರಮವಾಗಿ ಕೂಟಗಳನ್ನು ಹಾಜರಾಗಲು, ಮತ್ತು ಸಾರುವಿಕೆಯಲ್ಲಿ ಕ್ರಮವಾದ ಭಾಗವನ್ನು ಹೊಂದಲು ನಾನು ಬಹಳವಾಗಿ ಪ್ರಯತ್ನಿಸುತ್ತೇನೆ. ಪ್ರತಿ ಬೆಳಗ್ಗೆ ವ್ಯಾಯಾಮ ಮಾಡುವ ಮೂಲಕ, ಹೆಚ್ಚಿನ ಸಮಯ ಮೇಲೆತ್ತಿಗೆಯ (ಎಲಿವೇಟರ್) ಉಪಯೋಗವನ್ನು ತಡೆಯುವುದರ ಮೂಲಕ, ಮತ್ತು ವಿಶೇಷವಾಗಿ ಕ್ಷೇತ್ರ ಸೇವೆಯಲ್ಲಿ, ಸಾಧ್ಯವಾದಷ್ಟು ಸಲ ನಡೆಯುವ ಮೂಲಕ ಆರೋಗ್ಯವಾಗಿರಲು ಕೂಡ ನಾನು ಪ್ರಯತ್ನಿಸುತ್ತೇನೆ.”
ಬೆತೆಲ್ ಜೀವನದಲ್ಲಿ ಅನುಭವ ಪಡೆದ ಅನೇಕರು ಆನಿಯೊಂದಿಗೆ ಒಪ್ಪುವರು. ಅವರು ಕಲಿಯುವುದನ್ನು ಎಂದೂ ಕೊನೆಗಾಣಿಸುವುದಿಲ್ಲ, ಕೆಲಸಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಸಾಕಾಗುವಷ್ಟು ನಿದ್ರೆಯನ್ನು ಮತ್ತು ಸ್ವಲ್ಪ ವ್ಯಾಯಾಮನ್ನು ಅವರು ಪಡೆಯುವಂತೆ ಹಾಗೂ ತಿನ್ನುವುದರಲ್ಲಿ ಮತ್ತು ಕುಡಿಯುವುದರಲ್ಲಿ ಮಿತಿಯನ್ನು ತೋರಿಸುವಂತೆ ಶಾರೀರಿಕ ಆರೋಗ್ಯವು ಕೇಳಿಕೊಳ್ಳುತ್ತದೆ. ಎಲ್ಲಕ್ಕಿಂತ ಅತಿ ಪ್ರಾಮುಖ್ಯವಾಗಿ, ಅವರು ವೈಯಕ್ತಿಕ ಪ್ರಾರ್ಥನೆಯನ್ನು ಮತ್ತು ಬೈಬಲಿನ ಅಭ್ಯಾಸವನ್ನು ಅಲಕ್ಷಿಸುವುದಿಲ್ಲ.
ಬೆತೆಲ್ನಲ್ಲಿ ಪವಿತ್ರ ಸೇವೆಗಾಗಿ ಉನ್ನತ ಗೌರವ
“ನೀವು ಎಲ್ಲಿ ಕೆಲಸಮಾಡುತ್ತೀರಿ?” ಬೆತೆಲ್ನಲ್ಲಿರುವ ಸದಸ್ಯರಿಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆ ಇದಾಗಿದೆ. ಕೆಲಸದ ನೇಮಕಗಳು ಭಿನ್ನವಾಗಿವೆ, ಆದರೆ ಪ್ರತಿ ಕೆಲಸವು ಪ್ರತಿಯೊಬ್ಬರ ಮೂಲಕ ಉನ್ನತ ಗೌರವದಿಂದ ಕಾಣಲ್ಪಡಲು ಯೋಗ್ಯವಾಗಿದೆ. ಯಾಕೆ? ಯಾಕೆಂದರೆ ಪ್ರತಿ ನೇಮಕವು—ಆತ್ಮಿಕ ಆಹಾರವನ್ನು ಮುದ್ರಿಸುವ ಒಂದು ಯಂತ್ರವನ್ನು ನಡೆಸುವುದು, ಬಟ್ಟೆಗೆಳನ್ನು ಒಗೆಯುವುದು, ಕುಟುಂಬಕ್ಕಾಗಿ ಅಡಿಗೆ ಮಾಡುವುದು ಮತ್ತು ಶುಚಿಮಾಡುವುದು, ಯಾ ಆಫೀಸು ಕೆಲಸವನ್ನು ಮಾಡುವುದು—ಯಾವುದೇ ಆಗಿರಲಿ, ಪವಿತ್ರ ಸೇವೆಯಾಗಿದೆ. ಮೇಲೆ ಉಲ್ಲೇಖಿಸಿದಂತೆ, ಕ್ರೈಸ್ತರು ಪಕ್ಷಪಾತ ಭಿನ್ನತೆಗಳನ್ನು ಮಾಡುವುದಿಲ್ಲ. ಆಲಯದಲ್ಲಿ ಯಾಜಕರು ಮತ್ತು ಲೇವಿಯರ ಮೂಲಕ ಮಾಡಲ್ಪಟ್ಟ ಎಲ್ಲ ಆವಶ್ಯಕ ಕೆಲಸಗಳು, ಅದರ ಅಂಗಣಗಳಲ್ಲಿ ಮತ್ತು ಊಟದ ಕೋಣೆಗಳಲ್ಲಿ, ಎಲ್ಲವೂ ಯೆಹೋವನಿಗೆ ಪವಿತ್ರ ಸೇವೆಯೆಂದು ಪರಿಗಣಿಸಲ್ಪಡುತ್ತಿದ್ದವೆಂದು ನೆನಪಿನಲ್ಲಿಡಿರಿ. ಅದು ಬಲಿಗಾಗಿ ಪಶುಗಳನ್ನು ಕೊಲ್ಲುವುದು ಮತ್ತು ತಯಾರಿಸುವುದು, ಎಣ್ಣೆಯ ದೀಪಗಳಲ್ಲಿ ಪುನಃ ಎಣ್ಣೆಯನ್ನು ತುಂಬುವುದು, ಶುಚಿಮಾಡುವುದು ಮತ್ತು ಕಾವಲುಗಾರನ ಕರ್ತವ್ಯಗಳನ್ನು ಕೂಡ ನೆರವೇರಿಸುವುದನ್ನು ಒಳಗೊಂಡಿತ್ತು. ಹಾಗೆಯೇ, ಬೆತೆಲ್ನಲ್ಲಿ ಪ್ರತಿಯೊಂದು ನೇಮಕವು “ಕರ್ತನ ಸೇವೆಯಲ್ಲಿ” ಒಂದು ತೃಪ್ತಿದಾಯಕ ಹಾಗೂ ಯೋಗ್ಯವಾದ ಚಟುವಟಿಕೆಯಾಗಿದೆ, ಆದಕಾರಣ ಒಂದು ಅಸಾಧಾರಣವಾದ ಸುಯೋಗವು ಅದಾಗಿರುತ್ತದೆ.—1 ಕೊರಿಂಥ 15:58.
“ದೇವರ ಗೃಹ” ವನ್ನು ಗಣ್ಯತೆಯಿಂದ ನಮ್ಮ ನೋಡುವಿಕೆಯನ್ನು ತಡೆಯಬಲ್ಲ ಒಂದು ಗುಣವನ್ನು ಸಂಕ್ಷಿಪ್ತವಾಗಿ ಪರಿಗಣಿಸಿರಿ. ಬೆತೆಲ್ನಲ್ಲಿ ಮತ್ತು ಹೊರಗೆ ಇರುವ ಕ್ರೈಸ್ತರು—ಇಬ್ಬರೂ—“ಎಲುಬಿಗೆ ಕ್ಷಯ” ವಾಗಿರುವ ಮತ್ಸರ ಮತ್ತು ಅಸೂಯೆಯ ವಿರುದ್ಧ ಎಚ್ಚರವಾಗಿರಬೇಕು. (ಜ್ಞಾನೋಕ್ತಿ 14:30) ಬೆತೆಲ್ ಕೆಲಸಗಾರರ ಸೇವಾ ಸುಯೋಗಗಳ ಕುರಿತು ಅಸೂಯೆಪಡುವ ಕಾರಣ ಯಾರಲ್ಲಿಯೂ ಇರುವುದಿಲ್ಲ. ಮೇಲಾಗಿ, ಶರೀರಭಾವದ ಕರ್ಮಗಳಲ್ಲಿ ಒಂದಾಗಿರುವ ಅಸೂಯೆಗೆ ಬೆತೆಲ್ ಕುಟುಂಬದೊಳಗೆ ಯಾವುದೇ ಸ್ಥಳವಿರುವುದಿಲ್ಲ. ಇತರರಿಗೆ ಹೆಚ್ಚಿನ ಸುಯೋಗಗಳು ಕೊಡಲ್ಪಟ್ಟು, ತಾನು ಅಲಕ್ಷಿಸಲ್ಪಟ್ಟಂತೆ ತೋರಬಹುದಾದ ಒಬ್ಬನಿಗಿರುವ ಸ್ವಸ್ಥ ಸಲಹೆಯು—ದೈನ್ಯವಾಗಿ ಕಾಯುವುದು. ಇದಕ್ಕೂ ಹೆಚ್ಚಾಗಿ, ಬಹಳಷ್ಟು ಭಿನ್ನವಾಗಿರುವ ಆರ್ಥಿಕ ಹಿನ್ನೆಲೆಗಳ ವ್ಯಕ್ತಿಗಳು ಬೆತೆಲ್ನಲ್ಲಿ ಒಟ್ಟಿಗೆ ಜೀವಿಸುತ್ತಾರೆ. ಒಬ್ಬನು ತನ್ನ ಪರಿಸ್ಥಿತಿಗಳನ್ನು “ಮತ್ತೊಬ್ಬರ ಹೋಲಿಕೆಯಲ್ಲಿ” ದೃಷ್ಟಿಸುವುದಾದರೆ ಎಷ್ಟು ಪ್ರತಿಕೂಲಕರವಾಗಿರುವುದು! “ಅನ್ನವಸ್ತ್ರಗಳಿಂದ” ತೃಪ್ತರಾಗುವುದು “ದೇವರ ಗೃಹ” ದಲ್ಲಿ ದಶಕಗಳ ವರೆಗೆ ನಂಬಿಗಸ್ತರಾಗಿ ಮುಂದುವರಿಯಲು ಅನೇಕರಿಗೆ ಸಹಾಯ ಮಾಡಿದೆ.—ಗಲಾತ್ಯ 5:20, 26; 6:4, NW; 1 ತಿಮೊಥೆಯ 6:8.
ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ಪ್ರೀತಿಯಿಂದ ನಿಸ್ವಾರ್ಥವಾಗಿ ಮಾಡುವ ಕೆಲಸ—ಬೆತೆಲ್ನಲ್ಲಿ ಮಾಡಲ್ಪಡುವ ಸಂಬಳವಿಲ್ಲದ ಸೇವೆ—ಗಳಿಂದ ಯೆಹೋವನ ಸಾಕ್ಷಿಗಳು ಮತ್ತು ಇತರ ಲಕ್ಷಾಂತರ ಜನರು ಮಹಾ ಪ್ರಯೋಜನವನ್ನು ಪಡೆಯುತ್ತಾರೆ. ಬೆತೆಲ್ ಮನೆಗಳು ಮತ್ತು ವಾಚ್ ಟವರ್ ಸೊಸೈಟಿಯ ಮುದ್ರಣಾಲಯಗಳು, ಇತರ ದೇವಪ್ರಭುತ್ವ ಸೌಕರ್ಯಗಳಂತೆ, ಸ್ವಇಚ್ಛೆಯ ಕಾಣಿಕೆಗಳ ಮೂಲಕ ನಡೆಸಲ್ಪಡುತ್ತವೆ. (2 ಕೊರಿಂಥ 9:7) ರಾಜ ದಾವೀದನಂತೆ ಮತ್ತು ಇಸ್ರಾಯೇಲಿನ ರಾಜಕುಮಾರರು ಹಾಗೂ ಮುಖ್ಯಸ್ಥರಂತೆ, ಸೊಸೈಟಿಗೆ ನೈತಿಕ ಹಾಗೂ ಆರ್ಥಿಕ ಬೆಂಬಲವನ್ನು ಕೊಡುವ ಮೂಲಕ “ದೇವರ ಗೃಹ”ಕ್ಕೆ ನಾವು ನಮ್ಮ ಮಾನ್ಯತೆ ಹಾಗೂ ಗಣ್ಯತೆಯನ್ನು ತೋರಿಸಬಲ್ಲೆವು. (1 ಪೂರ್ವಕಾಲವೃತ್ತಾಂತ 29:3-7) ಬೆತೆಲ್ನಲ್ಲಿ ‘ಯೆಹೋವನ ಪ್ರಸನ್ನತೆಯನ್ನು ನೋಡುವುದು’ ಹೇಗೆ ಸಾಧ್ಯವೆಂದು ನಾವೀಗ ನೋಡೋಣ.
“ದೇವರ ಗೃಹ” ದಲ್ಲಿ ಆಶೀರ್ವಾದಗಳು
ಒಂದು ಸಮ್ಮೇಳನವನ್ನು ಹಾಜರಾಗುವಾಗ, ಯೆಹೋವನ ಸಂತುಷ್ಟ ಆರಾಧಕರಿಂದ ನೀವು ಸುತ್ತುವರಿಯಲ್ಪಟ್ಟ ಕಾರಣ, ಆಳವಾದ ಸಂತೃಪ್ತಿಯನ್ನು ನೀವು ಅನುಭವಿಸುತ್ತೀರೊ? ಕೇವಲ ಊಹಿಸಿ, ಒಬ್ಬ ಬೆತೆಲ್ ಕೆಲಸಗಾರನಿಗೆ ಪ್ರತಿದಿನ ಸಹೋದರರ ಗುಂಪಿನ ಮಧ್ಯೆ ಯೆಹೋವನನ್ನು ಸೇವಿಸುವ ಸುಯೋಗವಿದೆ! (ಕೀರ್ತನೆ 26:12) ಆತ್ಮಿಕ ಬೆಳವಣಿಗೆಗಾಗಿ ಎಂತಹ ಅತ್ಯುತ್ತಮ ಪ್ರತೀಕ್ಷೆಗಳನ್ನು ಅದು ನೀಡುತ್ತದೆ! ತನ್ನ ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡುವಂತೆ ಬೇರೆ ಕಡೆಯಲ್ಲಿ ಮೂರು ವರ್ಷಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನದನ್ನು ಬೆತೆಲಿನಲ್ಲಿ ಒಂದು ವರ್ಷದೊಳಗೆ ಕಲಿತನೆಂದು ಒಬ್ಬ ಸಹೋದರು ಹೇಳಿದನು. ಯಾಕೆ? ಯಾಕೆಂದರೆ ಇಷ್ಟೊಂದು ಪ್ರೌಢ ಕ್ರೈಸ್ತ ವ್ಯಕ್ತಿತ್ವಗಳನ್ನು ಗಮನಿಸುವ ಮತ್ತು ಅವರ ನಂಬಿಕೆಯನ್ನು ಅನುಕರಿಸುವ ಅವಕಾಶ ಅವನಿಗೆ ಬೇರೆಲಿಯ್ಲೂ ಇರಲಿಲ್ಲ.—ಜ್ಞಾನೋಕ್ತಿ 13:20.
ಸಾಂಕೇತಿಕವಾಗಿ ಮಾತಾಡುವುದಾದರೆ, ಬೆತೆಲ್ನಲ್ಲಿ ಒಬ್ಬ ವ್ಯಕ್ತಿಯು ಅನುಭವಸ್ಥ ಸಲಹೆಗಾರರಿಂದ ಸುತ್ತುವರಿಯಲ್ಪಡುತ್ತಾನೆ. ಅದರ ಜೊತೆಗೆ, ಬೆಳಗ್ಗಿನ ಆರಾಧನೆಯಲ್ಲಿ ಮತ್ತು ಬೆತೆಲ್ ಕುಟುಂಬದ ಕಾವಲಿನಬುರುಜು ಅಭ್ಯಾಸದಲ್ಲಿ ಸಾದರಪಡಿಸಲಾಗುವ ಚೆನ್ನಾಗಿ ತಯಾರಿಸಲ್ಪಟ್ಟ ಹೇಳಿಕೆಗಳನ್ನು ಕೇಳುವ ಮತ್ತು ಸೋಮವಾರ ಸಂಜೆಗಳಲ್ಲಿ ಉಪನ್ಯಾಸಗಳನ್ನು ಆಲಿಸುವ ಪ್ರಯೋಜನವಿದೆ. ಹೊಸದಾಗಿ ಬಂದವರಿಗೆ ಬೆತೆಲ್ ಪ್ರವೇಶಕರ ಶಾಲೆಯಲ್ಲಿ ಉಪದೇಶ ಸಿಗುತ್ತದೆ ಮತ್ತು ಪ್ರಥಮ 12 ತಿಂಗಳುಗಳೊಳಗೆ ಸಂಪೂರ್ಣ ಬೈಬಲನ್ನು ಓದುವಂತೆ ನೇಮಕ ಕೊಡಲ್ಪಡುತ್ತದೆ.
ಇತರ ದೇಶಗಳಿಂದ ಬರುವ ಸಂದರ್ಶಕರ ವರದಿಗಳು ಮತ್ತು ಅನುಭವಗಳು ಹೆಚ್ಚಿನ ಉತ್ತೇಜನವನ್ನು ನೀಡುತ್ತವೆ. ಇನ್ನೂ ಹೆಚ್ಚಾಗಿ, ಆಡಳಿತ ಮಂಡಲಿಯ ಸದಸ್ಯರು ಯಾ ಅವರ ಪ್ರತಿನಿಧಿಗಳು ಬ್ರಾಂಚ್ ಆಫೀಸುಗಳಿಗೆ ಭೇಟಿಗಳನ್ನು ನೀಡುತ್ತಾರೆ. “ಅವರಿಗೆ ಮಾಡಲು ಹೆಚ್ಚಿನ ಕೆಲಸವಿದ್ದರೂ,” ಹೆಲ್ಗಾ ಜ್ಞಾಪಿಸಿಕೊಳ್ಳುತ್ತಾರೆ, “ಒಂದು ಸ್ನೇಹಪರ ಮಾತಿಗೆ ಯಾ ಒಂದು ಮುಗುಳುನಗೆಗೆ ಸಹೋದರರು ಯಾವಾಗಲೂ ಸಮಯವನ್ನು ಕಂಡುಕೊಳ್ಳುತ್ತಾರೆ.” ಇಂತಹ ನಿಷ್ಠಾವಂತ ಪುರುಷರ ಉಲ್ಲಾಸಭರಿತ ಹಾಗೂ ವಿನಯಶೀಲ ರೀತಿಯನ್ನು ವೈಯಕ್ತಿಕವಾಗಿ ಕಾಣುವುದು ಎಷ್ಟು ಉತ್ತೇಜನದಾಯಕವಾಗಿದೆ!
ದೇವರ ಸಂಸ್ಥೆಯು ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ಆತನ ಪವಿತ್ರ ಆತ್ಮವು ಹೇಗೆ ಸಿದ್ಧವಾಗಿರುವ ಹೃದಯಗಳನ್ನು ಮತ್ತು ಕೈಗಳನ್ನು ಕ್ರಿಯೆಗೆ ಪ್ರಚೋದಿಸುತ್ತದೆ ಎಂದು ವಿಶೇಷವಾಗಿ ಬೆತೆಲ್ನಲ್ಲಿ ಒಬ್ಬನು ನಿಕಟವಾಗಿ ಗಮನಿಸಬಲ್ಲನು. “ಬೆತೆಲ್ನಲ್ಲಿ ‘ಚಟುವಟಿಕೆಯ ಕೇಂದ್ರಕ್ಕೆ’ ಹತ್ತಿರವಿರುವಂತೆ ಒಬ್ಬನಿಗೆ ಅನಿಸುತ್ತದೆ,” ಎಂದು 1949 ರಿಂದ ಫ್ರಾನ್ಸ್ನಲ್ಲಿರುವ ಬೆತೆಲ್ನಲ್ಲಿ ಸೇವಿಸುತ್ತಿರುವ ಒಬ್ಬ ಸಹೋದರನು ವಿವರಿಸುತ್ತಾನೆ. ಅವನು ಮುಂದುವರಿಸುವುದು: “ನನಗಾಗಿ ಬೆತೆಲ್, ಯೆಹೋವನ ಸೇವೆಗೆ ಸಮಯ ಮತ್ತು ಬಲದ ಅತಿಹೆಚ್ಚಿನ ಮೊತ್ತವನ್ನು ಸಮರ್ಪಿಸುವಂತೆ ಮತ್ತು ಸಹೋದರರ ಅತಿ ಹೆಚ್ಚಿನ ಸಂಖ್ಯೆಗೆ ಸೇವೆಯನ್ನು ನೀಡುವಂತೆ ಅನುಮತಿಸುವ ಪೂರ್ಣ ಸಮಯದ ಸೇವೆಯ ಒಂದು ಬಗೆಯಾಗಿದೆ ಎಂದು ನಾನು ಸತ್ಯವಾಗಿಯೂ ಹೇಳಬಲ್ಲೆನು.” ಮತ್ತು ಅದು ಜೀವನದಲ್ಲಿ ನಮ್ಮ ನಿಜವಾದ ಉದ್ದೇಶ—ದೇವರ ಚಿತ್ತವನ್ನು ಮಾಡುವುದು—ಆಗಿಲ್ಲವೊ? ಬೆತೆಲ್ನಲ್ಲಿ ಒಬ್ಬನು “ಸದಾಕಾಲ ಕೀರ್ತಿಸ” ಬಲ್ಲನು. ಎಂತಹ ಒಂದು ಆಶೀರ್ವಾದ!—ಕೀರ್ತನೆ 44:8.
ನಾವು ಕಂಡುಕೊಂಡಿರುವಂತೆ, ಬೆತೆಲ್ ಮನೆಯಲ್ಲಿ ಕೆಲಸಮಾಡುತ್ತಿರುವವನೊಬ್ಬನು ಯೆಹೋವನ ಪ್ರಸನ್ನತೆಯನ್ನು ನೋಡಬಲ್ಲನು ಮತ್ತು ಆಶೀರ್ವಾದಗಳ ಒಂದು ವ್ಯಾಪಕ ವ್ಯಾಪ್ತಿಯನ್ನು ಕಂಡುಹಿಡಿಯಬಲ್ಲನು. (ಇಬ್ರಿಯ 6:10) “ದೇವರ ಗೃಹ” ದಲ್ಲಿ ಸೇವೆಯು ನಿಮಗಾಗಿ ಸಾರ್ಥಕವಾದೊಂದು ವಿಷಯವಾಗಿರಬಲ್ಲದೊ? ಯೆಹೋವನ ಸಾಕ್ಷಿಗಳಲ್ಲಿ ಕಡಿಮೆ ಪಕ್ಷ 19 ವಯಸ್ಸಿನವರು, ಒಳ್ಳೆಯ ಆತ್ಮಿಕ ಹಾಗೂ ಶಾರೀರಿಕ ಆರೋಗ್ಯವುಳ್ಳವರು, ಮತ್ತು ತಿಮೊಥೆಯನಂತೆ, “ಸಹೋದರರಿಂದ ಒಳ್ಳೆಯ ಸಾಕ್ಷಿಯನ್ನು” ಪಡೆದವರು ಬೆತೆಲ್ನಲ್ಲಿ ಸೇವೆಮಾಡಲು ಅರ್ಜಿ ಸಲ್ಲಿಸಬಲ್ಲರು. (ಅ. ಕೃತ್ಯಗಳು 16:2, NW) ಮೇಲೆ ಉಲ್ಲೇಖಿಸಲ್ಪಟ್ಟವರಂತೆ ಅನೇಕರು ಬೆತೆಲ್ ಸೇವೆಯನ್ನು ತಮ್ಮ ಜೀವನದ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ. ಅವರಿಗೆ ಕೀರ್ತನೆಗಾರನ ಆಳವಾದ ಹಾತೊರೆಯುವಿಕೆಯು—‘ತನ್ನ ಜೀವಮಾನವೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುವುದು’—ವಾಸ್ತವಿಕತೆಯಾಗಿದೆ.
ನೇಮಕಗಳನ್ನು ಮನಃಪೂರ್ವಕವಾಗಿ ಮತ್ತು ಆನಂದಭರಿತವಾಗಿ ನೆರವೇರಿಸುವ ಬೆತೆಲ್ನಲ್ಲಿರುವ ತಮ್ಮ ಸಹೋದರ ಹಾಗೂ ಸಹೋದರಿಯರಿಂದ ತೋರಿಸಲ್ಪಟ್ಟ ಸ್ವತ್ಯಾಗದ ಆತ್ಮಕ್ಕೆ ಯೆಹೋವನ ಸಾಕ್ಷಿಗಳಲ್ಲಿ ಬಹಳ ಗೌರವವಿದೆ. ನಾವು ಯೆಹೋವನನ್ನು ಬೆತೆಲಿನಲ್ಲಿಯಾಗಲಿ ಇನ್ನೆಲ್ಲಿಯಾಗಲಿ ಸೇವಿಸಲಿ, ನಮ್ಮಲ್ಲಿ ಪ್ರತಿಯೊಬ್ಬನಿಗೆ ರಾಜ ದಾವೀದನಿಗಾದ ಅನಿಸಿಕೆ—“ದೇವರ ಗೃಹ” ವನ್ನು ಗಣ್ಯತೆಯಿಂದ ಯಾ ಹರ್ಷದಿಂದ ನೋಡುವುದು—ಯಾಗಲು ಸಕಾರಣವಿದೆ.
[ಪುಟ 31 ರಲ್ಲಿರುವ ಚಿತ್ರ]
ಈ ಕ್ರೈಸ್ತರು ದಶಕಗಳಿಂದ ಜರ್ಮನಿಯಲ್ಲಿರುವ ಬೆತೆಲ್ನಲ್ಲಿ ಪವಿತ್ರ ಸೇವೆಯಲ್ಲಿ ಸಂತೋಷಿಸಿದ್ದಾರೆ