ಫಿಜಿಯ ಜಲಗಳಲ್ಲಿ “ಮೀನು ಹಿಡಿಯುವುದು”
ಫಿಜಿ—ಈ ಹೆಸರು ದಕ್ಷಿಣ ಸಮುದ್ರಗಳಲ್ಲಿರುವ ಒಂದು ಪ್ರಮೋದವನದ ಚಿತ್ರವನ್ನು ಮನಸ್ಸಿಗೆ ಬರಿಸುತ್ತದೆ. ನೀಲ-ಹಸುರು ಜಲಗಳು, ಹವಳದ ದಿಬ್ಬಗಳು, ತೂಗಾಡುವ ತೆಂಗಿನ ಮರಗಳು, ಹಚ್ಚನೆಯ ಬೆಟ್ಟಗಳು, ಉಷ್ಣವಲಯದ ಮೀನು, ವಿಚಿತ್ರ ರೀತಿಯ ಹಣ್ಣುಗಳು ಮತ್ತು ಪುಷ್ಪಗಳು. ದಕ್ಷಿಣ ಶಾಂತಸಾಗರದಲ್ಲಿ, ನ್ಯೂ ಜೀಲೆಂಡಿನ ಸುಮಾರು 1,800 ಕಿಲೊಮೀಟರ್ ಉತ್ತರಕ್ಕಿರುವ 300 ದ್ವೀಪಗಳ ಈ ದ್ವೀಪಸ್ತೋಮದಲ್ಲಿ ನೀವು ಇವೆಲ್ಲವನ್ನು ಕಂಡುಕೊಳ್ಳುವಿರಿ. ಈ ಕಾರಣದಿಂದ, ಫಿಜಿಯು ಉಷ್ಣವಲಯದ ಪ್ರಮೋದವನದ ಸಂಬಂಧದಲ್ಲಿ ಪ್ರತಿಯೊಬ್ಬನ ಸ್ವಪ್ನವಾಗಿರಬಲ್ಲದೆಂದು ನೀವು ಪ್ರಾಯಶಃ ಒಪ್ಪುವಿರಿ.
ಆದರೂ ಫಿಜಿಯು ನೈಸರ್ಗಿಕ ಸೌಂದರ್ಯದಿಂದ ಮಾತ್ರ ಆಕರ್ಷಕವಾಗಿರುವುದಿಲ್ಲ. ಹೌದು, ಹವಳ ದಿಬ್ಬದ ಮತ್ಸ್ಯಗಳಲ್ಲಿ ಮಹಾ ವೈವಿಧ್ಯವಿರುವಂತೆಯೇ, ನೆಲದ ಮೇಲೆ ಸಹ ಮಹಾ ವಿವಿಧತೆಯಿದೆ. ಫಿಜಿಯ ಕುಲ ಮಿಶ್ರಣದಲ್ಲಿ ವೈದೃಶ್ಯವು, ದಕ್ಷಿಣ ಶಾಂತಸಾಗರದ ದ್ವೀಪಗಳಲ್ಲಿ ಪ್ರಾಯಶಃ ಬೇರೆಲಿಯ್ಲೂ ಇಲ್ಲದಷ್ಟಿದೆ. ಅದರ ಸುಮಾರು 7,50,000 ನಿವಾಸಿಗಳಲ್ಲಿ ಮೆಲನೇಷಿಯ ಮೂಲದ ಸ್ಥಳಜನ್ಯ ಫಿಜಿಯನರು ಮತ್ತು ಬ್ರಿಟಿಷ್ ವಸಾಹತುಗಳ ದಿನಗಳಲ್ಲಿ ಕೆಲಸಗಾರರಾಗಿ ತರಲ್ಪಟ್ಟವರ ವಂಶಜರಾದ ಫಿಜಿಯಲ್ಲಿ ಹುಟ್ಟಿರುವ ಭಾರತೀಯರು ಎರಡು ಅತಿ ದೊಡ್ಡ ಗುಂಪುಗಳು. ಆದರೆ ಅಲ್ಲಿ ಬನಾಬನರು, ಚೀನಿಯರು, ಯೂರೋಪಿಯನರು, ಗಿಲ್ಬರ್ಟಿಸರು, ರೋಟೂಮನರು, ಟುವಾಲುವನರು, ಮತ್ತು ಇತರರು ಸಹ ಇದ್ದಾರೆ.
ಈ ಬಹುಸಂಸ್ಕೃತಿಯ ಸಮಾಜದಲ್ಲಿ, ಯೆಹೋವನ ಸಾಕ್ಷಿಗಳು ಕಾರ್ಯಮಗ್ನರಾಗಿ “ಮೀನು ಹಿಡಿಯುವುದರಲ್ಲಿ” ನಿರತರಾಗಿದ್ದಾರೆ. (ಮಾರ್ಕ 1:17) ಇಂತಹ ವಿಭಿನ್ನ ಸಮಾಜದಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದು ಒಂದು ಪಂಥಾಹ್ವಾನವಾಗಿದೆ. ಪ್ರಥಮವಾಗಿ, ಭಾಷೆಯ ಮತ್ತು ಸಂಸ್ಕೃತಿಯ ಅಡೆತಡೆಗಳನ್ನು ಹೋಗಲಾಡಿಸಲಿಕ್ಕಿದೆ. ಇಂಗ್ಲಿಷ್ ಭಾಷೆ ಸರ್ವಸಾಮಾನ್ಯ ಭಾಷೆಯಾದರೂ, ಅನೇಕ ವೇಳೆ ಫಿಜಿಯನ್, ಹಿಂದಿ, ರೋಟೂಮನ್, ಯಾ ಇತರ ಭಾಷೆಗಳನ್ನು ಉಪಯೋಗಿಸಬೇಕಾಗುತ್ತದೆ.
ವಿಭಿನ್ನ ಧಾರ್ಮಿಕ ಹಿನ್ನೆಲೆಯವರೊಂದಿಗೆ ಸಂಭಾಷಿಸಲು ವಿಭಿನ್ನ ಪ್ರಸ್ತಾವಗಳನ್ನೂ ತೆಗೆದುಕೊಳ್ಳಬೇಕು. ಹೆಚ್ಚಿನ ಸ್ಥಳಜನ್ಯ ಫಿಜಿಯನರು ಮತ್ತು ಇತರ ದ್ವೀಪವಾಸಿಗಳು ವಿಭಿನ್ನ ಕ್ರೈಸ್ತ ಪಂಗಡಗಳಿಗೆ ಸೇರಿದವರು. ಭಾರತೀಯ ಜನಸಂಖ್ಯೆಯಲ್ಲಿ ಹಿಂದುಗಳು, ಮುಸ್ಲಿಮರು ಮತ್ತು ಸಿಕ್ಖರಿದ್ದು, ಹಿಂದುಗಳು ಅಧಿಕ ಸಂಖ್ಯಾತರಾಗಿದ್ದಾರೆ. ಪಟ್ಟಣ ಮತ್ತು ಹಳ್ಳಿಗಳಲ್ಲಿ ಚರ್ಚುಗಳು ಹೇರಳವಿವೆ, ಆದರೆ ಫಿಜಿಯ ಎರಡು ಅತಿ ದೊಡ್ಡ ದ್ವೀಪಗಳಲ್ಲಿ ಅನೇಕ ಹಿಂದು ದೇವಸ್ಥಾನಗಳು ಮತ್ತು ಮುಸ್ಲಿಮರ ಮಸೀದಿಗಳು ವೈದೃಶ್ಯವನ್ನು ಒದಗಿಸುತ್ತವೆ.
ಅನೇಕ ಸ್ಥಳಿಕ ಸಾಕ್ಷಿಗಳು ಇಂಗ್ಲಿಷ್, ಫಿಜಿಯನ್ ಮತ್ತು ಹಿಂದಿ—ಈ ಮೂರು ಮುಖ್ಯ ಭಾಷೆಗಳನ್ನು ಕಲಿಯುತ್ತಾ ಬೆಳೆದು ಬಂದಿದ್ದಾರೆ. ಈ ಕೌಶಲ “ಮೀನು ಹಿಡಿಯುವ” ಕೆಲಸದಲ್ಲಿ ಅತಿ ಪ್ರಯೋಜನಕರ. ಕೆಲವು ಬಾರಿ, ಒಬ್ಬ ಫಿಜಿಯನನು ನಿರರ್ಗಳವಾಗಿ ಹಿಂದಿ ಮಾತಾಡುವುದನ್ನು, ಮತ್ತು ಒಬ್ಬ ಹಿಂದು ನಿರರ್ಗಳವಾಗಿ ಫಿಜಿಯನನ್ನು ಮಾತಾಡುವುದನ್ನು ಕೇಳಿ ಜನರು ಆಶ್ಚರ್ಯಪಡುತ್ತಾರೆ. ನಿಭಾಯಿಸಲು ಸಾಂಸ್ಕೃತಿಕ, ಧಾರ್ಮಿಕ ಮತ್ತು ಭಾಷಾ ವ್ಯತ್ಯಾಸಗಳಿರುವುದರಿಂದ, “ಇತರರ ಸಂಗಡ ಸುವಾರ್ತೆಯ ಫಲದಲ್ಲಿ ಪಾಲುಗಾರ” ನಾಗಬೇಕಾದರೆ ಬಹುಮುಖ ಸಾಮರ್ಥ್ಯದ ಸಮೀಪಿಸುವಿಕೆ ಅಗತ್ಯವಾಗುತ್ತದೆ.—1 ಕೊರಿಂಥ 9:23.
ಒಂದು ಫಿಜಿಯನ್ ಗ್ರಾಮದಲ್ಲಿ “ಮೀನು ಹಿಡಿಯುವುದು”
ಸ್ಥಳಜನ್ಯ ಫಿಜಿಯನರು ಮಿತ್ರಭಾವದ, ಆತಿಥ್ಯ ಮಾಡುವ ಜನರು. ಒಂದು ಶತಮಾನಕ್ಕೆ ತುಸು ಹಿಂದೆ ಗೋತ್ರ ಯುದ್ಧಗಳು ಸರ್ವಸಾಮಾನ್ಯವಾಗಿದ್ದವೆಂಬುದನ್ನು ಭಾವಿಸುವುದು ಕಷ್ಟ. ವಾಸ್ತವವೇನಂದರೆ, ಪ್ರಥಮ ಯೂರೋಪಿಯನ್ ಸಂಪರ್ಕವಾಗುವ ಮೊದಲು ಫಿಜಿ ನರಭಕ್ಷಕ ದ್ವೀಪಗಳೆಂದು ಪ್ರಸಿದ್ಧವಾಗಿತ್ತು. ಕ್ರಮೇಣ, ಒಬ್ಬ ಪರಮ ಕುಲ ಮುಖ್ಯಸ್ಥನ ಅಧಿಕಾರವು ಬಂದು ಅವನು ಕ್ರೈಸ್ತನಾಗಿ ಪರಿವರ್ತನೆ ಹೊಂದಿದಾಗ, ಹೋರಾಟಗಳೂ ನರಭಕ್ಷಣವೂ ನಿಂತುಹೋದವು. ಕುಲ ವ್ಯತ್ಯಾಸಗಳು ವಿವಿಧ ಪ್ರಾಂತಗಳಲ್ಲಿ ಕಂಡುಬರುವ ಪ್ರಾಂತ ಭಾಷೆಗಳಲ್ಲಿ ಮಾತ್ರ ಕಂಡುಬರುತ್ತವಾದರೂ ಬಾವಾನ್ ಭಾಷೆ ವ್ಯಾಪಕವಾಗಿ ಗೊತ್ತಿರುವ ಭಾಷೆಯಾಗಿದೆ.
ರಾಜಧಾನಿಯಾಗಿರುವ ಸೂವವಲ್ಲದೆ ಫಿಜಿಯಾದ್ಯಂತ ಅನೇಕ ಪಟ್ಟಣಗಳಿವೆ. ಹೆಚ್ಚಿನ ಫಿಜಿಯನರು ಗ್ರಾಮ ಸಮುದಾಯಗಳಲ್ಲಿ ಒಬ್ಬ ಟೂರಾಗ ನೀ ಕಾರೊ, ಅಥವಾ ಮುಖ್ಯಸ್ಥನ ಅಧಿಕಾರದಲ್ಲಿ ಜೀವಿಸುತ್ತಾರೆ. “ಮೀನು ಹಿಡಿಯುವುದರಲ್ಲಿ” ಭಾಗವಹಿಸಲು ಒಂದು ಗ್ರಾಮಕ್ಕೆ ಭೇಟಿಕೊಡುವಾಗ, ವಿವಿಧ ಬೂರೆಗಳನ್ನು ಅಥವಾ ಸ್ಥಳಿಕ ಮನೆಗಳನ್ನು ಸಂದರ್ಶಿಸುವಂತೆ ಅಪ್ಪಣೆ ಪಡೆಯಲು ಈ ಮನುಷ್ಯನನ್ನು ಸಮೀಪಿಸುವುದು ವಾಡಿಕೆ. ಕೇವಲ ಕೆಲವೊಮ್ಮೆ, ಸಾಮಾನ್ಯವಾಗಿ ಯಾವನೋ ಒಬ್ಬ ಹಳ್ಳಿ ಪಾದ್ರಿಯು ಯೆಹೋವನ ಸಾಕ್ಷಿಗಳನ್ನು ವಿರೋಧಿಸುವ ಕಾರಣ ಮಾತ್ರ, ಅಪ್ಪಣೆಯು ನಿರಾಕರಿಸಲ್ಪಡುತ್ತದೆ. ಒಂದು ಫಿಜಿಯನ್ ಮನೆಯನ್ನು ಭೇಟಿ ಮಾಡುವುದು ಹೇಗಿರುತ್ತದೆ?
ಬೂರೆಯನ್ನು ಪ್ರವೇಶಿಸಿದಾಗ, ನಾವು ಕಾಲ ಮೇಲೆ ಕಾಲು ಹಾಕಿ ನೆಲದಲ್ಲಿ ಕುಳಿತುಕೊಳ್ಳುತ್ತೇವೆ. ಪಾಶ್ಚಾತ್ಯ ದೇಶಗಳಲ್ಲಿ ಆಸಕ್ತಿಯನ್ನು ಸೆಳೆಯುವಂತೆ ಉಪಯೋಗಿಸುವ, ಜಾಗ್ರತೆಯಿಂದ ತಯಾರಿಸಿರುವ ಪೀಠಿಕೆ ಇಲ್ಲಿ ಅಗತ್ಯವಿಲ್ಲ. ದೇವರ ವಿಷಯ ಮಾತಾಡಲು ಯಾರೇ ಬರಲಿ, ಅವನಿಗೆ ಸ್ವಾಗತವಿದೆ. ಆಮಂತ್ರಿಸಲ್ಪಟ್ಟಾಗ, ಮನೆಯವನು ಒಡನೆ ಎದ್ದು, “ಟೂಲೊ” (ಕ್ಷಮಿಸಿ), ಎಂದು ಹೇಳಿ ಫಿಜಿಯನ್ ಭಾಷೆಯ ಬೈಬಲಿನ ಪ್ರತಿಯನ್ನು ಅಲಮಾರಿನಿಂದ ತೆಗೆದು, ಭೇಟಿಕಾರ ಶುಶ್ರೂಷಕನು ಹೇಳುವ ವಿವಿಧ ವಚನಗಳನ್ನು ಆತುರದಿಂದ ಓದುತ್ತಾನೆ. ಆದರೂ ಆತಿಥ್ಯ ಮತ್ತು ಗೌರವದ ಈ ಫಿಜಿಯನ್ ಮನೋಭಾವ ವಿಭಿನ್ನವಾದ ವಿಧದಲ್ಲಿ ಒಂದು ಆಹ್ವಾನವನ್ನು ನೀಡುತ್ತದೆ. ಮನೆಯವರನ್ನು ಸಂಭಾಷಣೆಗೆಳೆಯಲು, ಮಾಡುತ್ತಿರುವ ತರ್ಕ ರೀತಿಯನ್ನು ಅನುಸರಿಸುವಂತೆ ಪ್ರೋತ್ಸಾಹಿಸಲು, ಅಥವಾ ಬೈಬಲಿನ ಬೋಧನೆಗಳೊಂದಿಗೆ ತಮ್ಮ ಸ್ವಂತ ನಂಬಿಕೆಗಳನ್ನು ಸರಿಹೋಲಿಸುವ ಆವಶ್ಯಕತೆಯನ್ನು ಅವರು ನೋಡುವಂತೆ ಮಾಡಲು ಗಣನೀಯ ವಿವೇಚನೆ ಮತ್ತು ಸಮಯೋಚಿತ ನಯ ಅಗತ್ಯ.
ಫಿಜಿಯನ್ ಮನೆಯವರು ಸಾಮಾನ್ಯವಾಗಿ ಸಾಮಾಜಿಕ ಸ್ಥಿತಿ ಅಥವಾ ವಿವಾದಾಂಶಗಳಿಗಿಂತ ತಾತ್ವಿಕ ವಿಷಯಗಳನ್ನು ಚರ್ಚಿಸುವುದರಲ್ಲಿ ಹೆಚ್ಚು ಆಸಕ್ತರು. ವಾಸ್ತವದಲ್ಲಿ, ಫಿಜಿಯ 1,400 ಕ್ಕೂ ಹೆಚ್ಚಾಗಿರುವ ಸಕ್ರಿಯರಾದ ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಬೈಬಲ್ ಸತ್ಯದಲ್ಲಿ ಆಸಕ್ತರಾದದ್ದು, ನರಕ ಯಾವ ವಿಧದ ಸ್ಥಳ? ಸ್ವರ್ಗಕ್ಕೆ ಯಾರು ಹೋಗುತ್ತಾರೆ? ಮತ್ತು ಭೂಮಿ ನಾಶಮಾಡಲ್ಪಡುವುದೊ? ಎಂಬಂತಹ ಪ್ರಶ್ನೆಗಳ ಚರ್ಚೆಯ ಪರಿಣಾಮವಾಗಿಯೇ. ಆದರೂ ತೋರಿಸಲ್ಪಟ್ಟಿರುವ ಆಸಕ್ತಿಯ ಹಿಂದೆ ಹೋಗುವುದು, ಹೊಂದಿಸಿಕೊಳ್ಳುವಿಕೆ ಮತ್ತು ಪಟ್ಟುಹಿಡಿಯುವಿಕೆಯನ್ನು ಕೇಳಿಕೊಳ್ಳುತ್ತದೆ. ಸಮ್ಮತಿಸಿರುವ ಸಮಯದಲ್ಲಿ ಹಿಂದೆ ಬರುವಾಗ ಅನೇಕ ವೇಳೆ ಮನೆಯವನು ಟೇಟೆ (ತೋಟ) ಗೆ ಅಥವಾ ಇನ್ನೆಲ್ಲಿಗೋ ಹೋಗಿರುವುದಾಗಿ ಒಬ್ಬನು ಕಂಡುಹಿಡಿಯುತ್ತಾನೆ. ಇಲ್ಲ, ಭೇಟಿಯನ್ನು ಅವರು ಗಣ್ಯಮಾಡುವುದಿಲ್ಲವೆಂದು ಇದರ ಅರ್ಥವಲ್ಲ. ಅವರ ಸಮಯದ ಪ್ರಜ್ಞೆ ಬೇರೆಯಾಗಿದೆ, ಅಷ್ಟೆ. ಸ್ಥಳಿಕ ಸಾಕ್ಷಿಗಳಿಗೆ ಇದು ವಿಚಿತ್ರವಾಗಿ ಕಂಡುಬರುವುದಿಲ್ಲವೆಂಬುದು ನಿಶ್ಚಯ. ಅವರು ಇನ್ನೊಂದು ಸಮಯದಲ್ಲಿ ಪಟ್ಟುಹಿಡಿದು ಭೇಟಿ ಮಾಡುತ್ತಾರೆ.
“ಮೀನು ಹಿಡಿಯುವುದು” ಪಾಲಿನೀಷಿಯ ಸ್ಟೈಲ್
ನಾವೀಗ ಒಬ್ಬ ಸಂಚಾರ ಶುಶ್ರೂಷಕ ಯಾ ಸರ್ಕಿಟ್ ಮೇಲ್ವಿಚಾರಕನೊಂದಿಗೆ, ಅವನು ರೋಟೂಮದ ಒಂದು ಸಣ್ಣ ಸಭೆಯನ್ನು ಸಂದರ್ಶಿಸುವಾಗ “ಮೀನು ಹಿಡಿಯಲು” ಹೋಗೋಣ. ಈ ಜ್ವಾಲಾಮುಖಿ ದ್ವೀಪಗಳ ಗುಂಪು ಫಿಜಿಗೆ 500 ಕಿಲೊಮೀಟರ್ ಉತ್ತರದಲ್ಲಿದೆ. ಇದನ್ನು ಮುಟ್ಟಲು ನಾವು 19 ಆಸನಗಳಿರುವ ಒಂದು ವಿಮಾನದಲ್ಲಿ ಹಾರಿಹೋಗುತ್ತೇವೆ. ಮುಖ್ಯ ದ್ವೀಪದ ವಿಸ್ತೀರ್ಣ ಕೇವಲ 50 ಚದರ ಕಿಲೊಮೀಟರುಗಳು. ಇರುವ ಒಟ್ಟು ಜನಸಂಖ್ಯೆ ಸುಮಾರು 3,000. ಕಡಲತೀರದ ಉದ್ದಕ್ಕೂ ಒಂದು ಮರಳಹಾದಿ ಸುಮಾರು 20 ಹಳ್ಳಿಗಳನ್ನು ಜೋಡಿಸುತ್ತಾ ಹೋಗುತ್ತದೆ. ರೋಟೂಮದ ಆಡಳಿತವನ್ನು ಫಿಜಿ ಮಾಡುತ್ತದಾದರೂ ಅದಕ್ಕೆ ಭಿನ್ನವಾದ ಸಂಸ್ಕೃತಿ ಮತ್ತು ಭಾಷೆಯಿದೆ. ಪಾಲಿನೇಷಿಯ ಮೂಲದ ಜನರು ಇವರಾಗಿರುವುದರಿಂದ ತೋರಿಕೆಯಲ್ಲಿ ಇವರು ಮೆಲನೇಷಿಯದ ಫಿಜಿಯನರಿಗಿಂತ ಭಿನ್ನರು. ಧಾರ್ಮಿಕವಾಗಿ ಹೇಳುವುದಾದರೆ, ಹೆಚ್ಚಿನವರು ಒಂದೇ ಕ್ಯಾತೊಲಿಕರು ಇಲ್ಲವೆ ಮೆತಡಿಸ್ಟರು.
ವಿಮಾನವು ಇಳಿದು ನೆಲಮುಟ್ಟಲು ಯೋಜಿಸುವಾಗ, ನಾವು ದ್ವೀಪದ ಹುಲುಸಾಗಿರುವ ಹಸುರು ಸಸ್ಯಜೀವನವನ್ನು ನೋಡುತ್ತೇವೆ. ತೆಂಗಿನ ಮರಗಳ ಗರಿಗಳಂತಹ ಪರ್ಣಾಂಗಗಳು ಸರ್ವತ್ರವೂ ಇವೆ. ವಾರಕ್ಕೊಂದರಂತೆ ಬರುವ ವಿಮಾನವನ್ನು ಎದುರ್ಗೊಳ್ಳಲು ಜನರ ಒಂದು ದೊಡ್ಡ ಗುಂಪು ಬಂದಿದೆ. ಅವರ ಮಧ್ಯೆ ಸಾಕ್ಷಿಗಳ ಒಂದು ಗುಂಪು ಸಹ ಇದೆ. ನಮ್ಮನ್ನು ಅನುರಾಗದಿಂದ ವಂದಿಸಲಾಗುತ್ತದೆ, ಮತ್ತು ಅನೇಕ ದೊಡ್ಡ, ಎಳೆಯ, “ಕಣ್ಣುಗಳು” ತೆರೆಯಲ್ಪಟ್ಟಿರುವ ತೆಂಗಿನ ಕಾಯಿಗಳು ನಮ್ಮ ಬಾಯಾರಿಕೆಯನ್ನು ತಣಿಸಲಿಕ್ಕಾಗಿ ನಮಗೆ ಕೊಡಲಾಗುತ್ತವೆ.
ತುಸು ಹೊತ್ತು ಪ್ರಯಾಣಿಸಿದ ಬಳಿಕ ನಾವು ನಮ್ಮ ವಾಸಸ್ಥಳಕ್ಕೆ ಬರುತ್ತೇವೆ. ನೆಲದ ಒಲೆಯ ಕಾವಿನಲ್ಲಿ ಬೇಯಿಸಿದ ಊಟ ತಯಾರಾಗಿದೆ. ಸುಟ್ಟ ಹಂದಿ ಮಾಂಸ, ಕೋಳಿ, ಹುರಿದ ಮೀನು, ಮುಳ್ಳುನಳ್ಳಿ, ಮತ್ತು ಸ್ಥಳಿಕ ಬೇರು ಬೆಳೆಯಾದ ಟಾರೊ ನಮ್ಮ ಮುಂದೆ ಇಡಲ್ಪಡುತ್ತದೆ. ಎಂತಹ ಔತಣದೂಟ ಮತ್ತು ಎಳೆಯ ತೆಂಗಿನ ಮರಗಳಡಿಯಲ್ಲಿ ಎಂತಹ ಪ್ರಮೋದವನ್ಯ ಹಿನ್ನೆಲೆ!
ಮರುದಿನ ರೋಟೂಮದಲ್ಲಿ ಹೂವಾಂಗಾ ಎಂದು ಕರೆಯಲ್ಪಡುವ ಹಳ್ಳಿಗಳ ಜನರಿಗೆ ನಾವು ಭೇಟಿಕೊಡುತ್ತೇವೆ. ಮೊದಲನೆಯ ಮನೆಯನ್ನು ನಾವು ಸಮೀಪಿಸುವಾಗ ರೊಪ್ಪಗಳಿಂದ ತಪ್ಪಿಸಿಕೊಂಡಿದ್ದ ಒಂದು ಹಂದಿಮರಿ ಚೀರಾಡುತ್ತಾ ಓಡಿ ನಮ್ಮನ್ನು ದಾಟಿಹೋಗುತ್ತದೆ. ನಾವು ಬರುವುದನ್ನು ನೋಡಿರುವ ಮನೆಯವನು ನಸುನಗೆ ಬೀರುತ್ತಾ ಬಾಗಿಲು ತೆರೆದು, ರೋಟೂಮನ್ ಭಾಷೆಯಲ್ಲಿ ನಾಯೀಯ ಎಂದು ವಂದಿಸಿ, ಕುಳಿತುಕೊಳ್ಳಲು ಆಮಂತ್ರಿಸುತ್ತಾನೆ. ನಮ್ಮ ಎದುರಿನಲ್ಲಿ ಒಂದು ಬಟ್ಟಲು ಬಾಳೆಹಣ್ಣು ಇಡಲ್ಪಡುತ್ತದೆ. ಮತ್ತು ಕೆಲವು ಎಳೆಯ ತೆಂಗಿನ ಕಾಯಿಗಳನ್ನು ಕುಡಿಯುವಂತೆ ಸಹ ನಾವು ಕೇಳಿಕೊಳ್ಳಲ್ಪಡುತ್ತೇವೆ. ರೋಟೂಮದಲ್ಲಿ ಅತಿಥಿ ಸತ್ಕಾರಕ್ಕೆ ಪ್ರಥಮ ಸ್ಥಾನವಿದೆ.
ಇಲ್ಲಿ ಆಜೇಯ್ಞತಾವಾದಿಗಳಾಗಲಿ ವಿಕಾಸವಾದಿಗಳಾಗಲಿ ಇಲ್ಲ. ಎಲ್ಲರಿಗೂ ಬೈಬಲಿನಲ್ಲಿ ನಂಬಿಕೆಯಿದೆ. ಭೂಮಿಯ ಕಡೆಗೆ ದೇವರ ಉದ್ದೇಶದಂತಹ ವಿಷಯಗಳು ಅವರ ಗಮನವನ್ನು ಸುಲಭವಾಗಿ ಆಕರ್ಷಿಸುತ್ತವೆ. ಈ ಭೂಮಿಯು ನಾಶಮಾಡಲ್ಪಡದು, ಬದಲಿಗೆ ಯಾರು ಅದರಲ್ಲಿ ಅನಂತಕಾಲ ಜೀವಿಸುವರೋ ಅಂತಹ ನೀತಿವಂತರಿಂದ ನೆಲಸಲ್ಪಡುವುದು ಎಂದು ಕೇಳುವಾಗ ಮನೆಯವನು ವಿಸ್ಮಯಗೊಳ್ಳುತ್ತಾನೆ. (ಕೀರ್ತನೆ 37:29) ಈ ಅಂಶಕ್ಕೆ ಆಧಾರಕೊಡುವ ಬೈಬಲ್ ವಚನಗಳನ್ನು ಓದುವಾಗ ಅವನು ಒತ್ತಾಗಿ ಅನುಸರಿಸುತ್ತಾ ನಾವು ನೀಡುವ ಬೈಬಲ್ ಸಾಹಿತ್ಯವನ್ನು ಆತುರದಿಂದ ಅಂಗೀಕರಿಸುತ್ತಾನೆ. ನಾವು ಬೀಳ್ಕೊಡಲು ತಯಾರಾಗುವಾಗ, ನಮ್ಮ ಭೇಟಿಗೆ ಅವನು ಉಪಕಾರ ಹೇಳಿ, ನಾವು ದಾರಿಯಲ್ಲಿ ತಿನ್ನುವಂತೆ ಬಾಳೆಹಣ್ಣು ತುಂಬಿದ ಒಂದು ಪ್ಲಾಸ್ಟಿಕ್ ಚೀಲವನ್ನು ಕೊಡುತ್ತಾನೆ. ಇಲ್ಲಿ ಸಾರುವುದರಿಂದ ಒಬ್ಬನು ಸುಲಭವಾಗಿ ದಪ್ಪವಾಗಬಲ್ಲನು!
ಭಾರತೀಯ ಸಮಾಜಕ್ಕೆ ಹೊಂದಿಸಿಕೊಳ್ಳುವುದು
ದಕ್ಷಿಣ ಶಾಂತಸಾಗರದಲ್ಲಿ ಇತರ ಅನೇಕ ದ್ವೀಪ ದೇಶಗಳು ಬಹುಜಾತೀಯವಾಗಿವೆಯಾದರೂ, ಈ ಸಂಬಂಧದಲ್ಲಿ ಫಿಜಿ ಎದ್ದುಕಾಣುವ ದೇಶವಾಗಿದೆ. ಮೆಲನೇಷಿಯ, ಮೈಕ್ರೊನೇಷಿಯ ಮತ್ತು ಪಾಲಿನೇಷಿಯ ಸಂಸ್ಕೃತಿಗಳೊಂದಿಗೆ ಏಷಿಯದಿಂದ ಸ್ಥಳಾಂತರವಾಗಿರುವ ಒಂದು ಸಂಸ್ಕೃತಿ ಅಲ್ಲಿದೆ. ವರ್ಷ 1879 ಮತ್ತು 1916 ರ ನಡುವೆ, ಕಬ್ಬಿನ ತೋಟಗಳಲ್ಲಿ ಕೆಲಸಮಾಡಲು ಭಾರತದಿಂದ ಕರಾರುಬದ್ಧ ಕಾರ್ಮಿಕರನ್ನು ತರಲಾಯಿತು. ಗಿರ್ಮಿಟ್ ಎಂದು ಕರೆಯಲಾದ ಈ ಏರ್ಪಾಡಿನಿಂದಾಗಿ ಸಾವಿರಾರು ಜನ ಭಾರತೀಯರು ಫಿಜಿಗೆ ಬರುವಂತಾಯಿತು. ಈ ಕಾರ್ಮಿಕರ ವಂಶಜರು ಈ ದೇಶದ ಜನಸಂಖ್ಯೆಯಲ್ಲಿ ಒಂದು ದೊಡ್ಡ ಭಾಗವಾಗಿರುತ್ತಾರೆ. ಅವರು ತಮ್ಮ ಸಂಸ್ಕೃತಿ, ಭಾಷೆ, ಮತ್ತು ಧರ್ಮವನ್ನು ಕಾಪಾಡಿಕೊಂಡಿದ್ದಾರೆ.
ಫಿಜಿಯ ಪ್ರಧಾನ ದ್ವೀಪದ ಗಾಳಿಮರೆ ಪಕ್ಕದಲ್ಲಿ ಲಾಟೋಕ ನಗರವಿದೆ. ಇದು ಕಬ್ಬು ಉದ್ಯಮದ ಕೇಂದ್ರವಾಗಿದ್ದು, ದೇಶದ ಭಾರತೀಯ ಜನಸಂಖ್ಯೆಯಲ್ಲಿ ಒಂದು ದೊಡ್ಡ ಭಾಗದ ವಾಸಸ್ಥಳವಾಗಿದೆ. ತಮ್ಮ “ಮೀನುಗಾರಿಕೆ” ಯಲ್ಲಿ ಇಲ್ಲಿರುವ ಯೆಹೋವನ ಸಾಕ್ಷಿಗಳ ಮೂರು ಸಭೆಗಳ ಸದಸ್ಯರು ತುಂಬ ಹೊಂದಿಸಿಕೊಳ್ಳುವವರಾಗಿರುವುದು ಅಗತ್ಯ. ಮನೆಯಿಂದ ಮನೆಗೆ ಭೇಟಿಕೊಡುವಾಗ, ಮನೆಯವನ ಕುಲ ಮತ್ತು ಧರ್ಮಾನುಸಾರ ವಿಷಯಗಳನ್ನು ಬದಲಾಯಿಸಲು ಒಬ್ಬನು ತಯಾರಾಗಿರಬೇಕು. ಲಾಟೋಕಕ್ಕೆ ತಾಗಿ ಹೊರಗಿರುವ ಕಬ್ಬಿನ ತೋಟಗಳ ಮಧ್ಯೆ ಹರಡಿರುವ ಮನೆಗಳನ್ನು ಸಂದರ್ಶಿಸುವಾಗ, ಸ್ಥಳಿಕ ಸಾಕ್ಷಿಗಳ ಒಂದು ಗುಂಪನ್ನು ನಾವು ಜೊತೆಗೂಡೋಣ.
ಮೊದಲನೆಯ ಮನೆಯನ್ನು ಸಮೀಪಿಸುವಾಗ, ಹಿತ್ತಲಿನ ಮುಂಬದಿಯ ಮೂಲೆಯಲ್ಲಿ, ತುದಿಯಲ್ಲಿ ಕೆಂಪು ಬಟ್ಟೆಯ ತುಂಡುಗಳನ್ನು ಕಟ್ಟಿದ ಒಂದು ಬಿದಿರು ಕಂಬವನ್ನು ನಾವು ಗಮನಿಸುತ್ತೇವೆ. ಇದು ಹಿಂದುಗಳಾದ ಕುಟುಂಬವನ್ನು ಗುರುತಿಸುತ್ತದೆ. ಹೆಚ್ಚಿನ ಹಿಂದು ಮನೆಗಳು ಅವರ ದೇವರುಗಳ ಚಿತ್ರಗಳಿಂದ ಅಲಂಕರಿಸಲ್ಪಟ್ಟಿರುತ್ತವೆ. ಅನೇಕರಿಗೆ ಕೃಷ್ಣನಂತಹ, ಅವರ ಮೆಚ್ಚಿನ ದೇವರಿದ್ದಾನೆ, ಮತ್ತು ಅನೇಕ ವೇಳೆ, ಅಲ್ಲಿ ಒಂದು ಚಿಕ್ಕ ಗುಡಿಯಿರುತ್ತದೆ.a
ಹೆಚ್ಚಿನ ಹಿಂದುಗಳು ಎಲ್ಲ ಧರ್ಮಗಳು ಒಳ್ಳೆಯವುಗಳೆಂದೂ, ಅವು ಆರಾಧಿಸುವ ವಿವಿಧ ಮಾರ್ಗಗಳೆಂದೂ ನಂಬುತ್ತಾರೆ. ಹೀಗೆ ಒಬ್ಬ ಮನೆಯವನು ಸಭ್ಯತೆಯಿಂದ ಆಲಿಸಿ, ಸಾಹಿತ್ಯವನ್ನು ಅಂಗೀಕರಿಸಿ, ಉಪಾಹಾರವನ್ನು ನೀಡಿ, ತಾನು ತನ್ನ ಕರ್ತವ್ಯವನ್ನು ಮಾಡಿದ್ದೇನೆಂದು ನೆನಸಬಹುದು. ಮನೆಯವರನ್ನು ಹೆಚ್ಚು ಅರ್ಥಪೂರ್ಣ ಚರ್ಚೆಗಳಿಗೆ ಎಳೆಯಲಿಕ್ಕಾಗಿ ಯೋಗ್ಯ ಪ್ರಶ್ನೆಗಳನ್ನು ಎತ್ತಬೇಕಾದರೆ, ಅವರ ನಂಬಿಕೆಯ ಭಾಗವಾಗಿರುವ ಕೆಲವು ಕಥೆಗಳನ್ನು ತಿಳಿದಿರುವುದು ಅನೇಕ ವೇಳೆ ಸಹಾಯಕಾರಿಯಾಗಿದೆ. ಉದಾಹರಣೆಗೆ, ಅನೇಕರು ಸಂದೇಹಿಸಬಹುದಾದ, ಅವರ ದೇವರುಗಳು ಅನೈತಿಕ ಕೃತ್ಯಗಳಲ್ಲಿ ತೊಡಗುವುದನ್ನು ಚಿತ್ರಿಸುವ ಅವರ ಕೆಲವು ಕಥೆಗಳನ್ನು ತಿಳಿದಿರುವ ನಾವು, “ನಿಮ್ಮ ಪತ್ನಿಯ (ಪತಿಯ) ಇಂತಹ ನಡತೆಯನ್ನು ನೀವು ಒಪ್ಪುವಿರೊ?” ಎಂದು ಕೇಳಬಹುದು. ಸಾಮಾನ್ಯವಾಗಿ ಉತ್ತರವು, “ಇಲ್ಲ, ಖಂಡಿತ ಇಲ್ಲ!” ಎಂದಾಗಿರುವುದು. ಆಗ ಈ ಪ್ರಶ್ನೆಯನ್ನು ಆ ವ್ಯಕ್ತಿಗೆ ಹಾಕಸಾಧ್ಯವಿದೆ: “ಒಳ್ಳೇದು, ಒಬ್ಬ ದೇವರು ಹೀಗೆ ನಡೆಯಬೇಕೊ?” ಇಂತಹ ಚರ್ಚೆಗಳು ಅನೇಕ ವೇಳೆ ಬೈಬಲಿನ ಮೌಲ್ಯವನ್ನು ತೋರಿಸುವ ಸಂದರ್ಭಗಳನ್ನು ತೆರೆಯುತ್ತವೆ.
ಹಿಂದು ಧರ್ಮದ ಇನ್ನೊಂದು ನಂಬಿಕೆಯಾದ ಪುನರವತಾರ ಚರ್ಚೆಗಾಗಿರುವ ಇನ್ನೊಂದು ಫಲವತ್ತಾದ ವಿಷಯ. ತನ್ನ ತಂದೆಯನ್ನು ಇತ್ತೀಚೆಗೆ ಮರಣದಲ್ಲಿ ಕಳೆದುಕೊಂಡಿದ್ದ ಒಬ್ಬ ಸುಶಿಕ್ಷಿತ ಹಿಂದು ಮಹಿಳೆಯನ್ನು, “ನಿಮ್ಮ ತಂದೆಯನ್ನು ಅವರು ಮೊದಲಿದ್ದಂತೆಯೇ ಪುನಃ ನೋಡಲು ನೀವು ಇಷ್ಟಪಡುವಿರೊ?” ಎಂದು ಕೇಳಲಾಯಿತು. “ಹೌದು, ಅದೆಷ್ಟು ಉತ್ತಮವಾಗಿದ್ದೀತು!” ಎಂದು ಆಕೆ ಉತ್ತರಿಸಿದಳು. ಅವಳ ಪ್ರತ್ಯುತ್ತರ ಮತ್ತು ಅನಂತರದ ಸಂಭಾಷಣೆಯಿಂದ, ಆಕೆಯ ತಂದೆ ಈಗ ಯಾವುದೋ ಇನ್ನೊಂದು ರೂಪದಲ್ಲಿ ಜೀವಿಸುತ್ತಿದ್ದಾನೆ ಮತ್ತು ಆಕೆ ತಂದೆಯನ್ನು ಪುನಃ ಎಂದಿಗೂ ತಿಳಿಯಳು ಎಂಬ ನಂಬಿಕೆಯಿಂದ ಆಕೆ ತೃಪ್ತಳಾಗಲಿಲ್ಲವೆಂದು ಸ್ಪಷ್ಟವಾಗಿಯಿತು. ಆದರೆ ಪುನರುತ್ಥಾನದ ಕುರಿತ ಬೈಬಲಿನ ಅದ್ಭುತಕರವಾದ ಬೋಧನೆ ಆಕೆಯ ಹೃದಯವನ್ನು ಸ್ಪರ್ಶಿಸಿತು.
ಕೆಲವು ಹಿಂದುಗಳಿಗೆ ನಿಜವಾಗಿಯೂ ಪ್ರಶ್ನೆಗಳಿವೆ, ಮತ್ತು ಅವರು ತೃಪ್ತಿಕರವಾದ ಉತ್ತರಗಳಿಗಾಗಿ ಹುಡುಕುತ್ತಿದ್ದಾರೆ. ಒಬ್ಬ ಸಾಕ್ಷಿ ಒಂದು ಹಿಂದು ಮನೆಗೆ ಭೇಟಿಕೊಟ್ಟಾಗ, ಅಲ್ಲಿಯ ಮನುಷ್ಯನು, “ನಿಮ್ಮ ದೇವರ ಹೆಸರೇನು?” ಎಂದು ಕೇಳಿದನು. ಆಗ ಆ ಸಾಕ್ಷಿ ಕೀರ್ತನೆ 83:18 ನ್ನು ಓದಿ, ದೇವರ ಹೆಸರು ಯೆಹೋವನೆಂದೂ, ರಕ್ಷಣೆ ಪಡೆಯಲು ನಾವು ಆ ನಾಮವನ್ನು ಎತ್ತಬೇಕೆಂದು ರೋಮಾಪುರ 10:13 ಹೇಳುತ್ತದೆಂದೂ ವಿವರಿಸಿದನು. ಆಗ ಆ ಮನುಷ್ಯನು ಮನಮುಟ್ಟಿದವನಾಗಿ, ಹೆಚ್ಚು ತಿಳಿಯಲು ಬಯಸಿದನು. ವಾಸ್ತವವೇನಂದರೆ, ಅವನು ತಿಳಿಯಲು ವಿಪರೀತ ಬಯಸುವವನಾಗಿದ್ದನು. ಕುಟುಂಬ ಮೂರ್ತಿಗೆ ತೀರಾ ಅನುರಕ್ತನಾಗಿದ್ದ ತನ್ನ ತಂದೆ, ಅದರ ಮುಂದೆ ಆರಾಧಿಸಿದ ಬಳಿಕ ಕಾಯಿಲೆ ಬಿದ್ದು ತುಸು ಸಮಯಾನಂತರ ತೀರಿಕೊಂಡನೆಂದು ಅವನು ಹೇಳಿದನು. ಅವನ ಅಣನ್ಣಿಗೂ ಹಾಗೆಯೇ ಸಂಭವಿಸಿತ್ತು. ಬಳಿಕ ಅವನು ಹೇಳಿದ್ದು: “ಆ ವಿಗ್ರಹ ನಮಗೆ ಜೀವವನ್ನಲ್ಲ, ಮರಣವನ್ನು ತರುತ್ತಿದೆ. ಆದುದರಿಂದ ಅದನ್ನು ಆರಾಧಿಸುವುದರಲ್ಲಿ ಏನೋ ತಪ್ಪಿರಬೇಕು. ಒಂದು ವೇಳೆ ಈ ದೇವರಾದ ಯೆಹೋವನು, ನಾವು ಜೀವದ ದಾರಿಯನ್ನು ಕಂಡುಹಿಡಿಯಲು ಸಹಾಯಮಾಡಬಲ್ಲನು.” ಹೀಗೆ ಅವನೊಂದಿಗೆ ಮತ್ತು ಅವನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲಾಯಿತು. ಅವರು ತೀವ್ರ ಪ್ರಗತಿಯನ್ನು ಮಾಡಿ ಬೇಗನೆ ದೀಕ್ಷಾಸ್ನಾನ ಹೊಂದಿದರು. ಅವರು ತಮ್ಮ ವಿಗ್ರಹಗಳನ್ನು ತೊರೆದು ಈಗ ಜೀವದ ದೇವರಾದ ಯೆಹೋವನ ಮಾರ್ಗದಲ್ಲಿ ನಡೆಯುತ್ತಿದ್ದಾರೆ.
ಮುಂದೆ ನಾವು ಒಂದು ಮುಸ್ಲಿಮ್ ಕುಟುಂಬದ ಮನೆಗೆ ಬರುತ್ತೇವೆ. ಅದೇ ಆತಿಥ್ಯದ ಮನೋಭಾವ ಇಲಿಯ್ಲೂ ಸ್ಪಷ್ಟವಾಗಿಗುತ್ತದೆ, ಮತ್ತು ಬೇಗನೇ ನಾವು ನಮ್ಮ ಕೈಗಳಲ್ಲಿ ತಂಪು ಪಾನೀಯಗಳೊಂದಿಗೆ ಕುಳಿತುಕೊಳ್ಳುತ್ತೇವೆ. ನಾವು ಗೋಡೆಯಲ್ಲಿ ಒಂದು ಸಣ್ಣ ಆ್ಯರೆಬಿಕ್ ಲಿಪಿಯಲ್ಲಿ ಬರೆದಿರುವ ವಚನವಿರುವ ಚೌಕಟ್ಟಲ್ಲದೆ ಇನ್ನಾವ ಧಾರ್ಮಿಕ ಚಿತ್ರವನ್ನೂ ನೋಡುವುದಿಲ್ಲ. ಬೈಬಲ್ ಮತ್ತು ಕುರಾನ್ಗಳ ಮಧ್ಯೆ ಒಂದು ಸಾಮಾನ್ಯ ಸಂಬಂಧವಿದೆ, ಮತ್ತು ಅದು ಮೂಲಪಿತ ಅಬ್ರಹಾಮನೆಂದೂ, ಅವನ ಸಂತಾನದ ಮೂಲಕ ಎಲ್ಲ ಜನಾಂಗಗಳು ಆಶೀರ್ವದಿಸಲ್ಪಡುತ್ತವೆಂದು ದೇವರು ಅಬ್ರಹಾಮನಿಗೆ ವಚನ ಕೊಟ್ಟನೆಂದೂ ಹೇಳುತ್ತೇವೆ. ಇದು ದೇವರ ಪುತ್ರನಾದ ಯೇಸು ಕ್ರಿಸ್ತನಲ್ಲಿ ನೆರವೇರಲಿದೆ. ದೇವರಿಗೆ ಒಬ್ಬ ಪುತ್ರನಿದ್ದಾನೆಂಬ ವಿಚಾರಕ್ಕೆ ಕೆಲವು ಮುಸ್ಲಿಮರು ಆಕ್ಷೇಪಣೆ ಮಾಡುವರು. ಆದುದರಿಂದ, ಆದಾಮನು ದೇವರಿಂದ ಸೃಷ್ಟಿಮಾಡಲ್ಪಟ್ಟ ಕಾರಣದಿಂದ ಅವನನ್ನು ಹೇಗೆ ದೇವರ ಪುತ್ರನೆಂದು ಕರೆಯಲಾಗಿದೆಯೋ ಹಾಗೆಯೇ ಯೇಸು ದೇವರ ಪುತ್ರನು ಎಂದು ನಾವು ವಿವರಿಸುತ್ತೇವೆ. ಇಂತಹ ಪುತ್ರರನ್ನು ಉತ್ಪಾದಿಸಲು ದೇವರಿಗೆ ಒಬ್ಬ ಅಕ್ಷರಾರ್ಥದ ಪತ್ನಿಯ ಅಗತ್ಯವಿಲ್ಲ. ಮುಸ್ಲಿಮರು ತ್ರಯೈಕ್ಯದ ಬೋಧನೆಯನ್ನು ನಂಬದಿರುವ ಕಾರಣ, ನಾವು ಈ ಸಾಮಾನ್ಯ ಸಮ್ಮತಿಯನ್ನು ಯೆಹೋವ ದೇವರು ಪರಮನು ಎಂಬುದನ್ನು ತೋರಿಸಲು ಉಪಯೋಗಿಸುತ್ತೇವೆ.
ಅಷ್ಟರೊಳಗೆ ಮಧ್ಯಾಹ್ನದ ಊಟದ ಸಮಯವಾಗುತ್ತದೆ. ಮತ್ತು ನಮ್ಮ ಗುಂಪಿನ ಜನರು ಪಟ್ಟಣಕ್ಕೆ ಹಿಂದೆ ಹೋಗುವ ಬಸ್ಸು ಹಿಡಿಯಲು ಕಬ್ಬಿನ ಗದ್ದೆಗಳೊಳಗಿಂದ ರಸ್ತೆಗೆ ಬರುತ್ತಿದ್ದಾರೆ. ತುಸು ದಣಿದಿರುವುದಾದರೂ, ಬೆಳಗ್ಗಿನ “ಮೀನು ಹಿಡಿಯುವಿಕೆ” ಯಿಂದಾಗಿ ಎಲ್ಲರೂ ಉತ್ಸಾಹಿತರಾಗಿದ್ದಾರೆ. ವಿವಿಧ ಸನ್ನಿವೇಶ ಮತ್ತು ನಂಬಿಕೆಗಳಿಗೆ ಹೊಂದಿಸಿಕೊಳ್ಳಲು ಮಾಡಿರುವ ಪ್ರಯತ್ನ ಸಾರ್ಥಕವಾಗಿತ್ತು.
ಫಿಜಿಯ ಜಲಗಳು ಮತ್ತು ದಿಬ್ಬಗಳಲ್ಲಿ ಅನೇಕ ವಿಧದ ಮೀನುಗಳಿವೆ. ಯಶಸ್ವಿ ಹೊಂದಲು, ಫಿಜಿಯನ್ ಗಾನೆಂಡೊ (ಬೆಸ್ತ) ತನ್ನ ಕೆಲಸದಲ್ಲಿ ಕೌಶಲವುಳ್ಳವನಾಗಿರುವುದು ಅಗತ್ಯ. ಯೇಸು ತನ್ನ ಶಿಷ್ಯರಿಗೆ ನೇಮಿಸಿದ “ಮೀನು ಹಿಡಿಯುವ” ಕೆಲಸವೂ ಹೀಗೆಯೇ. ಕ್ರೈಸ್ತರಾದ “ಮನುಷ್ಯರನ್ನು ಹಿಡಿಯುವ ಬೆಸ್ತರು” ಕೌಶಲವುಳ್ಳವರೂ, ತಮ್ಮ ನೀಡುವಿಕೆ ಮತ್ತು ವಾದವನ್ನು ಜನರ ವೈವಿಧ್ಯಮಯ ನಂಬಿಕೆಗಳಿಗೆ ಹೊಂದಿಸಿಕೊಳ್ಳುವವರೂ ಆಗಿರಬೇಕು. (ಮತ್ತಾಯ 4:19) ಇದು ಫಿಜಿಯಲ್ಲಿ ನಿಶ್ಚಯವಾಗಿಯೂ ಆವಶ್ಯಕ. ಮತ್ತು ಫಿಜಿಯನರು, ಭಾರತೀಯರು, ರೋಟೂಮನರು, ಮತ್ತು ಮಿಶ್ರ ಕುಲ ಹಿನ್ನೆಲೆಗಳ ಜನರು ಯೆಹೋವ ದೇವರನ್ನು ಯೆಹೋವನ ಸಾಕ್ಷಿಗಳ ಸಮ್ಮೇಳನಗಳಲ್ಲಿ ಐಕ್ಯದಿಂದ ಆರಾಧಿಸುವಾಗ ಪರಿಣಾಮಗಳು ಸುವ್ಯಕ್ತ. ಹೌದು, ಫಿಜಿಯ ಜಲಗಳಲ್ಲಿ ನಡೆಯುವ “ಮೀನು ಹಿಡಿಯುವ” ಕೆಲಸದ ಮೇಲೆ ಆತನ ಆಶೀರ್ವಾದವಿದೆ.
[ಅಧ್ಯಯನ ಪ್ರಶ್ನೆಗಳು]
a ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಎಂಬ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್, ಪುಟ 115-17 ನೋಡಿ.
[ಪುಟ 23ರಲ್ಲಿರುವಚಿತ್ರ]
(For fully formatted text, see publication)
ವೀಟೀ ಲೆವೂ
ವನೂವ ಲೆವೂ
ಸೂವ
ಲಾಟೋಕ
ನಾಂದಿ
0 100 ಕಿಮೀ
0 100 ಮೈ
18°
180°
[ಪುಟ 24 ರಲ್ಲಿರುವ ಚಿತ್ರ]
ಒಂದು ಬೂರೆ, ಅಥವಾ ಸ್ಥಳಿಕ ಮನೆ
[ಪುಟ 24 ರಲ್ಲಿರುವ ಚಿತ್ರ]
ಫಿಜಿಯಲ್ಲಿ ಒಂದು ಹಿಂದು ದೇವಸ್ಥಾನ
[ಪುಟ 25 ರಲ್ಲಿರುವ ಚಿತ್ರಗಳು]
ಫಿಜಿಯಲ್ಲಿ ಮನುಷ್ಯರಿಗಾಗಿ ಯಶಸ್ವಿಯಾದ “ಮೀನು ಹಿಡಿಯುವಿಕೆ”
[ಪುಟ 24 ರಲ್ಲಿರುವ ಚಿತ್ರ ಕೃಪೆ]
Fiji Visitors Bureau