ದೇವರ ಕರುಣೆಯ—ಯೋಗ್ಯ ನೋಟವುಳ್ಳವರಾಗಿರಿ
ಡಾಕ್ಟರ್ ದಯಾಪರರೂ ಅತಿ ಪರಿಗಣನೆಯುಳ್ಳವರೂ ಆಗಿದ್ದರು. ಅವರ ಉತ್ತಮ ತೀರ್ಮಾನಕ್ಕನುಸಾರ, ಅವರ ರೋಗಿಯ ಜೀವವನ್ನು ರಕ್ಷಿಸುವದಕ್ಕೆ ಒಂದು ಶಸ್ತ್ರಕ್ರಿಯೆಯು ಅತ್ಯಾವಶ್ಯಕವಾಗಿ ಬೇಕಾಗಿತ್ತು. ಆಕೆ ಹಿಂಜರಿದು, ರಕ್ತ ಪೂರಣಗಳ ಪ್ರಶ್ನೆಯನ್ನೆಬ್ಬಿಸಿದಾಗ, ಅವರಿಗೆ ಆಶ್ಚರ್ಯವಾಯಿತು. ರಕ್ತ ಪೂರಣವನ್ನೊಳಗೊಂಡ ಒಂದು ಶಸ್ತ್ರಕ್ರಿಯೆಗೆ ಧಾರ್ಮಿಕ ಕಾರಣಗಳಿಂದಾಗಿ ತಾನು ಒಪ್ಪಿಗೆ ಕೊಡಲಾರಳೆಂದು ಆಕೆ ವಿವರಿಸಿದಾಗಲಂತೂ, ಅವರಿಗೆ ಸಿಡಿಲೆರಗಿದಂತಾಯಿತು. ಅವಳಿಗೆ ಸಹಾಯಮಾಡುವ ಒಂದು ದಾರಿಯನ್ನು ಯೋಚಿಸಲು ಅವರು ಬಹು ಪ್ರಯತ್ನಮಾಡಿದರು. ಕಟ್ಟಕಡೆಗೆ, ತನಗೊಂದು ಸಿಕ್ಕಿತು ಎಂದವರು ನೆನಸಿದರು. ಅವರಂದದ್ದು: “ನೀನು ರಕ್ತ ಪೂರಣವನ್ನು ತೆಗೆದುಕೊಳ್ಳದಿದ್ದರೆ ಸತ್ತುಹೋಗುವಿ. ನೀನದನ್ನು ಬಯಸುವುದಿಲ್ಲ, ಅಲ್ಲವೇ?”
“ಖಂಡಿತವಾಗಿಯೂ ಬಯಸುವುದಿಲ್ಲ,” ಅಂದಳು ಅವರ ರೋಗಿ.
“ಆದರೆ, ನೀನು ಅದನ್ನು ತೆಗೆದುಕೊಂಡರೆ, ನಿನ್ನ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ಹೋಗುವಂತೆ ತೋರುವುದು. ಒಳ್ಳೇದು, ನನ್ನ ಸಲಹೆ ಹೀಗಿದೆ. ರಕ್ತ ಪೂರಣವನ್ನು ತೆಗೆದುಕೊಂಡು, ಹೀಗೆ ನಿನ್ನ ಜೀವವನ್ನು ಯಾಕೆ ರಕ್ಷಿಸಬಾರದು? ಅನಂತರ, ನೀನು ಪಾಪಗೈದಿ ಎಂತ ದೇವರಿಗೆ ಅರಿಕೆಮಾಡಿಕೊಂಡು, ಪಶ್ಚಾತ್ತಾಪ ಪಡು. ಈ ರೀತಿ ನಿನ್ನ ಧರ್ಮದಲ್ಲೂ ನೀನು ಪುನಃ ಸ್ಥಾಪನೆಯನ್ನು ಹೊಂದುವಿ.”
ಈ ಸದ್ಭಾವನೆಯ ಡಾಕ್ಟರರು ತಾನೊಂದು ಪರಿಪೂರ್ಣ ಉತ್ತರವನ್ನು ಕಂಡುಕೊಂಡರೆಂದು ನೆನಸಿದರು. ತನ್ನ ರೋಗಿಯು ಒಬ್ಬ ಕರುಣಾಭರಿತ ದೇವರನ್ನು ನಂಬಿದ್ದಳೆಂದು ಅವರಿಗೆ ಗೊತ್ತಿತ್ತು. ನಿಶ್ಚಯವಾಗಿ, ದೇವರ ಕರುಣೆಯ ಉಪಯೋಗವನ್ನು ಮಾಡಲು ಇದು ಯೋಗ್ಯ ಸಂದರ್ಭವಾಗಿತ್ತು! ಆದರೆ ಅವರ ಸಲಹೆಯು ಅದು ಕೇಳಿಬರುವಷ್ಟು ನ್ಯಾಯೋಚಿತವಾಗಿತ್ತೋ?
ನಾವೆಂದಾದರೂ ಹೀಗೆ ವಿವೇಚಿಸುತ್ತೇವೋ?
ನಾವು ಕೆಲವು ಸಾರಿ ಆ ಡಾಕ್ಟರರ ರೀತಿಯಲ್ಲಿ ವಿವೇಚಿಸುವವರಾಗಿ ನಮ್ಮನ್ನು ಕಂಡುಕೊಳ್ಳಬಹುದು. ಪ್ರಾಯಶಃ ಶಾಲೆಯಲ್ಲಿ ಯಾ ಕೆಲಸದಲ್ಲಿ ವಿರೋಧದ ಒಂದು ಅನಿರೀಕ್ಷಿತ ಉದ್ರೇಕದಿಂದಾಗಿ ನಾವು ಹೆದರಬಹುದು. ಅಥವಾ ನಮ್ಮ ಮನಸ್ಸಾಕ್ಷಿಯನ್ನು ನೋಯಿಸುವ ಒಂದು ವಿಷಯವನ್ನು ಮಾಡುವ ಒತ್ತಡವು ಬರುವ ಒಂದು ಪೇಚಾಟದ ಪರಿಸ್ಥಿತಿಯಲ್ಲಿ ನಾವು ನಮ್ಮನ್ನು ಕಂಡುಕೊಳ್ಳಬಹುದು. ಹಠಾತ್ತನೆ ಸಂಭವಿಸಿದದ್ದರಿಂದ, ಹೊರಬರುವ ಸುಲಭವಾದ ಮಾರ್ಗವನ್ನು ನಾವು ತೆಗೆದುಕೊಳ್ಳುವ ಪ್ರವೃತ್ತಿಯವರಾಗಬಹುದು, ಮತ್ತು ಅನಂತರ ಕ್ಷಮೆಯಾಚಿಸಲು ಉದ್ದೇಶಿಸುತ್ತಾ, ನಮಗೆ ತಪ್ಪೆಂದು ಗೊತ್ತಿರುವ ವಿಷಯವನ್ನು ಮಾಡಬಹುದು.
ಅಥವಾ ವ್ಯಕ್ತಿಗಳು ತಮ್ಮ ಸ್ವಂತ ಕೆಟ್ಟ ಪ್ರವೃತ್ತಿಗಳಿಂದ ಶೋಧನೆಗೆ ಒಳಗಾಗಬಹುದು. ದೃಷ್ಟಾಂತಕ್ಕಾಗಿ, ಒಬ್ಬ ಯುವಕನು ಅನೈತಿಕತೆಯನ್ನು ಗೈಯುವ ಬಲವಾದ ಶೋಧನೆಗೊಳಗಾಗಿರುವ ಒಂದು ಪರಿಸ್ಥಿತಿಯಲ್ಲಿ ತನ್ನನ್ನು ಕಂಡುಕೊಳ್ಳಬಹುದು. ದುರಿಚ್ಛೆಯ ವಿರುದ್ಧ ಹೋರಾಡುವ ಬದಲಿಗೆ, ತರುವಾಯ ದೇವರೊಂದಿಗೆ ವಿಷಯವನ್ನು ಸರಿಪಡಿಸಿಕೊಳ್ಳುವೆನೆಂದು ನೆನಸುತ್ತಾ, ಅವನದಕ್ಕೆ ಬಿಟ್ಟುಕೊಡಬಹುದು. ಕೆಲವರು ಕ್ರೈಸ್ತ ಸಭೆಯೊಳಗಿಂದ ಪ್ರಾಯಶಃ ಬಹಿಷ್ಕರಿಸಲ್ಪಡಬಹುದೆಂದು ಗೊತ್ತಿದ್ದಾಗ್ಯೂ, ಒಂದು ಗಂಭೀರವಾದ ಪಾಪವನ್ನು ನಡಿಸುವಷ್ಟರ ಮಟ್ಟಿಗೂ ಹೋಗಿದ್ದಾರೆ. ಅವರು ಹೀಗೆ ವಿವೇಚಿಸಿರಬಹುದು, ‘ಸ್ವಲ್ಪ ಸಮಯ ದಾಟುವ ತನಕ ನಾನು ಕಾಯುವೆನು. ಅನಂತರ ಪಶ್ಚಾತ್ತಾಪಪಟ್ಟು, ಪುನಃ ಸ್ಥಾಪಿಸಲ್ಪಡುವೆನು.’
ಈ ಎಲ್ಲಾ ಸನ್ನಿವೇಶಗಳಲ್ಲಿ ಎರಡು ಸಾಮಾನ್ಯ ವಿಷಯಗಳಿವೆ. ಮೊದಲನೆಯದು, ಯೋಗ್ಯವಾದುದನ್ನು ಮಾಡಲು ಹೋರಾಟ ನಡಿಸುವ ಬದಲಿಗೆ, ವ್ಯಕ್ತಿಗಳು ಬಿಟ್ಟುಕೊಡುತ್ತಾರೆ. ಎರಡನೆಯದಾಗಿ, ಅವರು ಭಾವಿಸುವುದೇನಂದರೆ ಕೆಟ್ಟದ್ದನ್ನು ಮಾಡಿದ ಮೇಲೆ, ಅವರು ಬರೇ ಕೇಳಿಕೊಂಡಲ್ಲಿ, ದೇವರು ಯಾಂತ್ರಿಕವಾಗಿ ಕ್ಷಮಿಸುವನು.
ಯೋಗ್ಯ ನೋಟವು ಯಾವುದು?
ದೇವರ ಕರುಣೆಗಾಗಿ ಇದು ಯೋಗ್ಯ ಗಣ್ಯತೆಯನ್ನು ತೋರಿಸುತ್ತದೋ? ಒಳ್ಳೇದು, ಆ ಕರುಣೆಯ ಕುರಿತು ಒಂದು ಕ್ಷಣ ಯೋಚಿಸಿರಿ. ಯೇಸುವಂದದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಆ ಕರುಣೆಯು ಹೇಗೆ ಕಾರ್ಯನಡಿಸುತ್ತದೆ ಎಂಬದನ್ನು ಅಪೊಸ್ತಲ ಯೋಹಾನನು ವಿವರಿಸಿದಾಗ ಅಂದದ್ದು: “ನೀವು ಪಾಪಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ.” (1 ಯೋಹಾನ 2:1) ಆದಕಾರಣ, ಅಸಂಪೂರ್ಣತೆಯಿಂದಾಗಿ ನಾವು ಪಾಪದೊಳಗೆ ಬೀಳುವುದಾದರೆ, ನಾವು ದೇವರ ಬಳಿಗೆ ಪ್ರಾರ್ಥನೆಯಲ್ಲಿ ಬರಬಹುದು ಮತ್ತು ಯೇಸುವಿನ ಯಜ್ಞದ ಆಧಾರದ ಮೇಲೆ ಕ್ಷಮೆಗಾಗಿ ಯಾಚಿಸಬಹುದು.
ಎಷ್ಟರ ತನಕ ತದನಂತರ ನಾವು ಕ್ಷಮೆಗಾಗಿ ಯಾಚಿಸುತ್ತೇವೋ ಅಷ್ಟರತನಕ, ನಾವು ಪಾಪ ಮಾಡಲಿ ಮಾಡದಿರಲಿ, ಪರವಾಗಿಲ್ಲ ಎಂದಿದರ ಅರ್ಥವೋ? ಅಲ್ಲವೇ ಅಲ್ಲ. ಆ ಉದ್ಧರಣೆಯ ಮೊದಲನೆಯ ಮಾತುಗಳನ್ನು ನೆನಪಿಸಿರಿ: “ನೀವು ಪಾಪ ಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ.” ಆ ವಚನದ ಯೋಹಾನನ ಮುಂದಿನ ಮಾತುಗಳು, ನಮ್ಮ ಅಸಂಪೂರ್ಣತೆಯೊಂದಿಗೆ ವ್ಯವಹರಿಸುವುದಕ್ಕಾಗಿ ಯೆಹೋವನ ಪ್ರೀತಿಯುಳ್ಳ ಏರ್ಪಾಡನ್ನು ತೋರಿಸುತ್ತವೆ. ಆದಾಗ್ಯೂ, ಪಾಪ ಮಾಡದಂತೆ ನಮ್ಮಿಂದಾದಷ್ಟು ಹೆಚ್ಚಾಗಿ ಪ್ರಯತ್ನಪಡುವ ಅಗತ್ಯ ನಮಗಿದೆ. ಇಲ್ಲವಾದರೆ ದೇವರ ಪ್ರೀತಿಗಾಗಿ ನಾವು ಶೋಚನೀಯ ಅಗೌರವವನ್ನು ತೋರಿಸುತ್ತೇವೆ, ದುರಾಚಾರವನ್ನು ನಡಿಸುವುದಕ್ಕಾಗಿ ದೇವರ ಕೃಪೆಯನ್ನು ನೆವಮಾಡಿಕೊಂಡ, ಯೂದನಿಂದ ನಿರ್ದೇಶಿಸಲ್ಪಟ್ಟ ಆ ಜನರಂತೆಯೇ.—ಯೂದ 4.
ನಾವೇನೇ ಮಾಡಲಿ, ನಮ್ಮನ್ನು ಯಾವಾಗಲೂ ಹಿಡಿದೆತ್ತುವ ಒಂದು ರೀತಿಯ ಕಾಪು ಬಲೆಯಾಗಿ ದೇವರ ಕರುಣೆಯನ್ನು ಉಪಯೋಗಿಸುವುದು, ದೇವರ ಕರುಣೆಯನ್ನು ಕ್ಷುಲ್ಲಕಗೊಳಿಸಿ, ಪಾಪವು ಅಷ್ಟೇನೂ ಕೆಟ್ಟದ್ದಲ್ಲ ಎಂದು ಕಾಣುವಂತೆ ಮಾಡುತ್ತದೆ. ಇದು ಎಷ್ಟು ಮಾತ್ರಕ್ಕೂ ಸತ್ಯವಲ್ಲ. ಅಪೊಸ್ತಲ ಪೌಲನು ತೀತನಿಗೆ ಹೇಳಿದ್ದು: “ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು; ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ವಿಸರ್ಜಿಸಿ . . . ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕೆಂದು ಅದು ನಮಗೆ ಬೋಧಿಸುತ್ತದೆ.”—ತೀತ 2:11, 12.
ತನ್ನ ಸ್ವಂತ ಅಸಂಪೂರ್ಣತೆಯ ವಿರುದ್ಧ ಅವನು ಹೋರಾಟ ನಡಿಸಿದ ರೀತಿಯಲ್ಲಿ, ಪೌಲನು ದೇವರ ಕರುಣೆಗಾಗಿ ತನ್ನ ಗಣ್ಯತೆಯನ್ನು ತೋರಿಸಿದನು. ಅವನಂದದ್ದು: “ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.” (1 ಕೊರಿಂಥ 9:27) ಆಗಿಂದಾಗ್ಗೆ ತಾನು ಪಾಪಮಾಡುವುದು ಕಡ್ಡಾಯವೆಂಬ ರೀತಿಯಲ್ಲಿ ಅದನ್ನು ತೀರ ಹಗುರವಾಗಿ ಪೌಲನು ತೆಗೆದುಕೊಳ್ಳಲಿಲ್ಲ. ನಾವು ತೆಗೆದುಕೊಳ್ಳಬೇಕೋ?
ಯೇಸುವಿನ ದೃಷ್ಟಿಕೋನ
ಯೋಗ್ಯವಾದ ವಿಷಯಗಳ ಮೇಲೆ ಸಂಧಾನ ಮಾಡಿಕೊಳ್ಳುವ ಮತ್ತು ಕಷ್ಟಾನುಭವವನ್ನು ವರ್ಜಿಸಲಿಕ್ಕಾಗಿ ಸುಲಭವಾದ ಮಾರ್ಗವನ್ನು ತೆಗೆದುಕೊಳ್ಳುವ ವಿಷಯವಾಗಿ ತನ್ನ ದೃಷ್ಟಿಕೋನವೇನೆಂದು ಯೇಸು ಒಂದು ಸಂದರ್ಭದಲ್ಲಿ ತೋರಿಸಿಕೊಟ್ಟನು. ಬರಲಿರುವ ತನ್ನ ಯಜ್ಞಾರ್ಪಣೆಯ ಮರಣದ ಕುರಿತು ತನ್ನ ಶಿಷ್ಯರಿಗೆ ಹೇಳಲಾರಂಭಿಸಿದಾಗ, ಪೇತ್ರನು ಅವನನ್ನು ತಡೆಯಲು ಪ್ರಯತ್ನಿಸುತ್ತಾ ಅಂದದ್ದು: “ಸ್ವಾಮೀ, ದೇವರು ನಿನ್ನನ್ನು ಕಾಯಲಿ; [ನಿನಗೆ ದಯೆ ತೋರಿಸಿಕೋ, NW] ಹೀಗೆ ಎಂದಿಗೂ ಆಗಬಾರದು.” ಯೇಸುವಿನ ಪ್ರತಿಕ್ರಿಯೆ? “ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನನಗೆ ನೀನು ವಿಘ್ನವಾಗಿದ್ದೀ; ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ.”—ಮತ್ತಾಯ 16:22, 23.
ಯೇಸು ಪೇತ್ರನಿಗೆ ಕೊಟ್ಟ ತೀವ್ರ ಗದರಿಕೆಯು, ದೇವರ ಚಿತ್ತಕ್ಕೆ ವಿರುದ್ಧವಾಗಿ ಹೋಗುವುದನ್ನು ಒಳಗೂಡಿದ್ದ ಒಂದು ಸುಲಭವಾದ ಮಾರ್ಗವನ್ನು ತೆಗೆದುಕೊಳ್ಳಲು ಯೇಸು ನಿರಾಕರಿಸಿದನೆಂದು ಮನಮುಟ್ಟುವ ರೀತಿಯಲ್ಲಿ ತೋರಿಸಿತು. ಆತನು ಸದಾ ಸೈತಾನನ ಕೈಯಿಂದ ಪೀಡೆಯನ್ನು ಅನುಭವಿಸುತ್ತಾ, ನೀತಿಯ ಮಾರ್ಗವನ್ನು ನಿಶ್ಚಂಚಲನಾಗಿ ಅನುಸರಿಸಿದನೆಂದು ದಾಖಲೆಯು ತೋರಿಸುತ್ತದೆ. ಕೊನೆಯಲ್ಲಿ ಅವನು ಪರಿಹಾಸ್ಯ ಮಾಡಲ್ಪಟ್ಟನು, ಕಠಿನವಾಗಿ ಹೊಡೆಯಲ್ಪಟ್ಟನು, ಮತ್ತು ಅವನು ಸಂಕಟಮಯ ಮರಣವನ್ನು ಅನುಭವಿಸಿದನು. ಆದರೂ, ಅವನು ಸಂಧಾನ ಮಾಡಿಕೊಳ್ಳಲಿಲ್ಲ, ಮತ್ತು ಈ ಕಾರಣದಿಂದಾಗಿ ಆತನು ನಮಗಾಗಿ ತನ್ನ ಜೀವವನ್ನು ಪ್ರಾಯಶ್ಚಿತವ್ತಾಗಿ ಕೊಡಶಕ್ತನಾದನು. ಕಷ್ಟಗಳು ಅಥವಾ ಶೋಧನೆಗಳು ಏಳುವಾಗ ನಾವು ‘ನಮಗೆ ದಯೆತೋರಿಸಿ ಕೊಳ್ಳ’ ಲಾಗುವಂತೆ ಆತನು ಇವೆಲ್ಲವನ್ನು ಸಹಿಸಿಕೊಳ್ಳಲಿಲ್ಲ ಎಂಬುದು ನಿಶ್ಚಯ!
ಯೇಸುವಿನ ಕುರಿತು ಹೇಳಲ್ಪಟ್ಟಿದೆ: “ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದ್ದಿ.” (ಇಬ್ರಿಯ 1:9) ಸುಲಭವಾಗಿ ತಪ್ಪಿಸಿಕೊಳ್ಳುವುದರಲ್ಲಿ ಸಾಮಾನ್ಯವಾಗಿ ಅಧರ್ಮವು ಒಳಗೂಡಿರುತ್ತದೆ. ಆದುದರಿಂದ, ನಾವಿದನ್ನು—ಯೇಸು ಮಾಡಿದಂತೆ—ನಿಜವಾಗಿಯೂ ದ್ವೇಷಿಸಿದರೆ, ಸಂಧಾನ ಮಾಡಲು ಯಾವಾಗಲೂ ನಿರಾಕರಿಸುವೆವು. ಜ್ಞಾನೋಕ್ತಿಯ ಪುಸ್ತಕದಲ್ಲಿ, ಯೆಹೋವನು ಅನ್ನುವುದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.” (ಜ್ಞಾನೋಕ್ತಿ 27:11) ಯೇಸುವಿನ ಸಮತೆಯ ಆದರೆ ಸಂಧಾನಕ್ಕೆ ಬರದ ನೀತಿಯು, ಯೆಹೋವನ ಹೃದಯಕ್ಕೆ ಮಹಾ ಸಂತೋಷವನ್ನು ತಂದಿತು. ಯೇಸುವಿನ ಸಮಗ್ರತೆಯ ಮಾರ್ಗವನ್ನು ನಾವು ಹಿಂಬಾಲಿಸುವುದಾದರೆ, ಯೆಹೋವನಿಗೆ ತದ್ರೀತಿಯ ಸಂತೋಷವನ್ನು ನಾವು ಕೊಡಬಲ್ಲೆವು.—1 ಪೇತ್ರ 2:23.
ತಾಳ್ಮೆಯಿಂದ ತರಬೇತು ಮಾಡಲ್ಪಟ್ಟದ್ದು
ಅಪೊಸ್ತಲ ಪೇತ್ರನು ಬರೆದದ್ದು: “ನೀವು ಸದ್ಯಕ್ಕೆ ಸ್ವಲ್ಪಕಾಲ ದೇವರ ಚಿತ್ತಾನುಸಾರ ನಾನಾ ಕಷ್ಟಗಳಲ್ಲಿದ್ದು ದುಃಖಿಸುವವರಾಗಿದ್ದರೂ ಆ ಪದವಿಯನ್ನು ಆಲೋಚಿಸಿ ಹರ್ಷಿಸುವವರಾಗಿದ್ದೀರಿ. ಭಂಗಾರವು ನಾಶವಾಗುವಂಥದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟಾಹಾಕಿ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು.” (1 ಪೇತ್ರ 1:6, 7) ನಾವು ಅಸಂಪೂರ್ಣರಾಗಿರುವುದರಿಂದ ಮತ್ತು ಸೈತಾನನ ಲೋಕದ ಮಧ್ಯದಲ್ಲಿ ಜೀವಿಸುವುದರಿಂದ, ಸದಾ ಪರೀಕ್ಷೆಗಳನ್ನು ಮತ್ತು ಶೋಧನೆಗಳನ್ನು ಎದುರಿಸುವೆವು. ಪೇತ್ರನು ತೋರಿಸುವಂತೆ, ಇವು ಒಂದು ಒಳ್ಳೇ ಉದ್ದೇಶಕ್ಕಾಗಿ ಕಾರ್ಯನಡಿಸಬಲ್ಲವು. ಅವು ನಮ್ಮ ನಂಬಿಕೆಯನ್ನು ಪರೀಕ್ಷಿಸಿ, ಅದು ನಿರ್ಬಲವೂ ಬಲವುಳ್ಳದ್ದೋ ಎಂದು ತೋರಿಸುತ್ತವೆ.
ನಮ್ಮನ್ನು ತರಬೇತು ಮಾಡಲೂ ಅವು ಕಾರ್ಯನಡಿಸುತ್ತವೆ. ಯೇಸುವು “ಅನುಭವಿಸಿದ ಬಾಧೆಯಿಂದಲೇ ವಿಧೇಯತೆಯನ್ನು ಕಲಿತುಕೊಂಡನು.” (ಇಬ್ರಿಯ 5:8) ಪರೀಕ್ಷೆಯ ಕೆಳಗೆ ನಾವು ತಾಳಿಕೊಳ್ಳುವುದಾದರೆ, ನಾವೂ ವಿಧೇಯತೆಯನ್ನು ಹಾಗೂ ಯೆಹೋವನ ಮೇಲೆ ಆತುಕೊಳ್ಳುವುದನ್ನು ಕಲಿಯಬಲ್ಲೆವು. ಮತ್ತು ಈ ಕಲಿಯುವ ಕಾರ್ಯಗತಿಯು, ಪೇತ್ರನು ಅಂದಂತೆ, ಪೂರ್ಣವಾಗುವ ತನಕ ಮುಂದುವರಿಯುವುದು: “ದೇವರು ತಾನೇ . . . ನಿಮ್ಮನ್ನು ಯೋಗ್ಯ ಸ್ಥಿತಿಗೆ ತಂದು [ನಿಮ್ಮ ತರಬೇತನ್ನು ಪೂರ್ಣಗೊಳಿಸಿ, NW] ನೆಲೆಗೊಳಿಸಿ ಬಲಪಡಿಸುವನು.”—1 ಪೇತ್ರ 5:10.
ಒಂದು ವೇಳೆ ನಾವು ಪರೀಕ್ಷೆಯ ಕೆಳಗೆ ಸಂಧಾನ ಮಾಡಿದರೆ, ಯೆಹೋವನೆಡೆಗೆ ಮತ್ತು ನೀತಿಯ ಕಡೆಗೆ ಬಲವಾದ ಪ್ರೀತಿಯಲ್ಲಿ ಕೊರತೆ ಅಥವಾ ಆತ್ಮ-ಸಂಯಮದಲ್ಲಿ ಕೊರತೆಯುಳ್ಳವರಾಗಿ, ನಮ್ಮನ್ನು ಹೇಡಿಗಳಾಗಿ ಯಾ ನಿರ್ಬಲರಾಗಿ ತೋರಿಸಿಕೊಡುತ್ತೇವೆ. ಅಂಥ ಯಾವುದೇ ನಿರ್ಬಲತೆಯು ದೇವರೊಂದಿಗಿನ ನಮ್ಮ ಸಂಬಂಧವನ್ನು ಗುರುತರವಾಗಿ ಅಪಾಯಕ್ಕೊಡ್ಡುತ್ತದೆ. ನಿಶ್ಚಯವಾಗಿ, ಪೌಲನ ಎಚ್ಚರಿಕೆಯು ನಮ್ಮ ವಿಷಯದಲ್ಲಿ ಸತ್ಯವಾಗಬಹುದು: “ಯಾಕಂದರೆ ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪ ಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ.” (ಇಬ್ರಿಯ 10:26) ನಿರ್ಬಲತೆಗೆ ಬಿದ್ದವರಾಗಿ ಜೀವದ ಎಲ್ಲಾ ಪ್ರತೀಕ್ಷೆಗಳನ್ನು ಕಳೆದುಕೊಳ್ಳುವ ಸಂಭವವನ್ನು ಬರಮಾಡುವುದಕ್ಕಿಂತ ಮೊದಲಾಗಿಯೇ ಪಾಪ ಮಾಡದೆ ಇರುವುದು ಅದೆಷ್ಟು ಹೆಚ್ಚು ಒಳ್ಳೆಯದು!
ಬೇಷರತ್ತಿನ ಸಮಗ್ರತೆ
ಪ್ರವಾದಿಯಾದ ದಾನಿಯೇಲನ ದಿನಗಳಲ್ಲಿ, ಮೂವರು ಇಬ್ರಿಯರಿಗೆ, ಅವರು ವಿಗ್ರಹವೊಂದನ್ನು ಆರಾಧಿಸದಿದ್ದರೆ ಬೆಂಕಿಯ ಮರಣದ ಬೆದರಿಕೆಯು ಹಾಕಲ್ಪಟ್ಟಿತು. ಅವರ ಉತ್ತರ? “ನಾವು ಸೇವಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೇ ಉರಿಯುವ ಆವಿಗೆಯೊಳಗಿಂದ ನಮ್ಮನ್ನು ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು. ಚಿತ್ತವಿಲ್ಲದಿದ್ದರೂ ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವದಿಲ್ಲ.”—ದಾನಿಯೇಲ 3:17, 18.
ಅವರು ಆ ನಿಲುವನ್ನು ತೆಗೆದುಕೊಂಡದ್ದು ಯಾವುದು ಯೋಗ್ಯವೋ ಅದನ್ನು ಮಾಡಲು ಬಯಸಿದ್ದರಿಂದಲೇ. ಅದು ಅವರನ್ನು ಮರಣಕ್ಕೆ ನಡಿಸಿದ್ದಾದರೆ, ಅದಕ್ಕೂ ಅವರು ಸಿದ್ಧರಾಗಿದ್ದರು. ಅವರ ಭರವಸೆಯು ಪುನರುತ್ಥಾನದಲ್ಲಿತ್ತು. ಆದರೆ ಒಂದುವೇಳೆ ದೇವರು ಅವರನ್ನು ಬಿಡಿಸಿದ್ದಾದರೆ, ಅದೂ ಇಷ್ಟಕರವಾಗಿರುತ್ತಿತ್ತು. ಆದರೆ ಅವರ ದೃಢವಾದ ನಿಲುವು ಬೇಷರತ್ತಿನದಾಗಿತ್ತು. ದೇವರ ಸೇವಕರಲ್ಲಿ ಅದು ಯಾವಾಗಲೂ ಹಾಗೆಯೇ ಇರಬೇಕು.
ನಮ್ಮ ದಿನಗಳಲ್ಲಿ ಸಂಧಾನ ಮಾಡಲು ನಿರಾಕರಿಸಿದ ಕೆಲವರನ್ನು ಸೆರೆಮನೆಗೆ ಹಾಕಲಾಗಿದೆ, ಹಿಂಸಿಸಲಾಗಿದೆ, ಕೊಲ್ಲಲ್ಪಟ್ಟಿದ್ದಾರೆ ಸಹ. ಇತರರು ಯೋಗ್ಯ ತತ್ವಗಳನ್ನು ತ್ಯಜಿಸಿಬಿಟ್ಟು ಧನಿಕರಾಗುವುದಕ್ಕಿಂತ ಬಡವರಾಗಿಯೇ ಉಳಿಯಲು ಇಷ್ಟಪಟ್ಟು, ಭೌತಿಕ ತ್ಯಾಗಗಳನ್ನು ಮಾಡಿರುತ್ತಾರೆ. ಈ ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟ ಆ ಕ್ರೈಸ್ತ ಸ್ತ್ರೀಗೆ ಏನು ಸಂಭವಿಸಿತು? ತಪ್ಪುದಾರಿಯದ್ದಾದರೂ ದಯೆಯುಳ್ಳ ಡಾಕ್ಟರರ ಹೇತುವನ್ನು ಆಕೆ ಗಣ್ಯಮಾಡಿದರೂ, ತನ್ನ ನಂಬಿಕೆಯ ಬಗ್ಗೆ ಆಕೆ ಸಂಧಾನ ಮಾಡಲಿಲ್ಲ. ಬದಲಿಗೆ, ಯೆಹೋವನ ನಿಯಮಗಳಿಗೆ ಆಕೆಯ ಗೌರವವು ಶಸ್ತ್ರಕ್ರಿಯೆಯನ್ನು ನಿರಾಕರಿಸುವಂತೆ ನಡಿಸಿತು. ಸಂತೋಷಕರವಾಗಿ, ಆಕೆ ಹೇಗಾದರೂ ಗುಣಹೊಂದಿದಳು ಮತ್ತು ಯೆಹೋವನ ಕ್ರಿಯಾಶೀಲ ಸೇವೆಯನ್ನು ಮುಂದರಿಸಿದಳು. ಆದರೂ, ಆಕೆ ತನ್ನ ನಿಲುವನ್ನು ತೆಗೆದುಕೊಂಡಾಗ, ಅಂತ್ಯ ಫಲವೇನೆಂದು ಆಕೆಗೆ ಗೊತ್ತಿರಲಿಲ್ಲ, ಆದರೆ ಇಡೀ ವಿಷಯವನ್ನು ಯೆಹೋವನ ಹಸ್ತಗಳಲಿಡ್ಲಲು ಆಕೆ ಸಿದ್ಧಳಾಗಿದ್ದಳು.
ಒತ್ತಡದ ಕೆಳಗೆ ಅಷ್ಟು ದೃಢವಾಗಿ ನಿಲ್ಲಲು ಅವಳಿಗೆ ಸಹಾಯ ಮಾಡಿದ್ದು ಯಾವುದು? ಆಕೆ ತನ್ನ ಸ್ವಂತ ಶಕ್ತಿಯಲ್ಲಿ ನಿಲ್ಲಲು ಪ್ರಯತ್ನ ಮಾಡಲಿಲ್ಲ, ಮತ್ತು ಯಾವನೇ ದೇವರ ಸೇವಕನು ಹಾಗೆ ಮಾಡಬಾರದು. ನೆನಪಿಡಿರಿ, “ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.” (ಕೀರ್ತನೆ 46:1) ಮೊದಲು ಪಾಪ ಮಾಡಿ ಅನಂತರ ಕರುಣೆಗಾಗಿ ದೇವರೆಡೆಗೆ ತಿರುಗುವುದಕ್ಕಿಂತ, ಪರೀಕ್ಷೆಯ ಕೆಳಗಿರುವಾಗಲೇ ಸಹಾಯಕ್ಕಾಗಿ ಆತನ ಬಳಿಗೆ ತೆರಳುವುದು ಅದೆಷ್ಟು ಹೆಚ್ಚು ಉತ್ತಮ!
ಹೌದು, ದೇವರ ಮಹಾ ಕರುಣೆಯನ್ನು ನಾವೆಂದೂ ಉದಾಸೀನದಿಂದ ಸತ್ಕರಿಸದಿರೋಣ. ಬದಲಿಗೆ, ಯಾವುದು ಯೋಗ್ಯವೋ ಅದನ್ನು ಮಾಡಲು ನಿಜ ಅಪೇಕ್ಷೆಯನ್ನು ವಿಕಾಸಿಸೋಣ, ಕಷ್ಟಗಳ ಎದುರಲ್ಲಿ ಸಹ. ಇದು ಯೆಹೋವನೊಂದಿಗೆ ನಮ್ಮ ಸಂಬಂಧವನ್ನು ಆಳಗೊಳಿಸಿ, ನಿತ್ಯಜೀವಕ್ಕಾಗಿ ನಮಗೆ ಬೇಕಾದ ತರಬೇತನ್ನು ಕೊಡುವುದು, ಮತ್ತು ದೇವರ ಕರುಣೆಗಾಗಿ ಯೋಗ್ಯ ಗೌರವವನ್ನು ಪ್ರದರ್ಶಿಸುವುದು. ಅಂಥ ಸುಜ್ಞ ನಡವಳಿಕೆಯು ನಮ್ಮ ಸ್ವರ್ಗೀಯ ತಂದೆಯ ಹೃದಯಕ್ಕೆ ಸಂತೋಷವನ್ನು ತರುವುದು.
[ಪುಟ 24 ರಲ್ಲಿರುವ ಚಿತ್ರ]
ಪುನರುತ್ಥಾನದಲ್ಲಿ ದೃಢವಾದ ಭರವಸೆಯು, ಮೂವರು ಇಬ್ರಿಯರಿಗೆ ಸಮಗ್ರತೆಯನ್ನು ಕಾಪಾಡಲು ನೆರವಾಯಿತು