ತತ್ವ ಯಾ ಜನಪ್ರಿಯತೆ ಯಾವುದು ನಿಮ್ಮ ಮಾರ್ಗದರ್ಶಕ?
ಆರನೆಯ ತರಗತಿಯ ನೊರಿಹಿಟೊ ಒಂದು ಕ್ರೀಡಾ ಸ್ವರ್ಧೆಯಲ್ಲಿ ಪಾಲಿಗನಾಗುತ್ತಿದ್ದನು. ಥಟ್ಟನೆ, ಒಂದು ನಿರ್ಣಯವನ್ನು ಎದುರಿಸಲು ಅವನು ನಿರ್ಬಂಧಿಸಲ್ಪಟ್ಟನು. ದೇಶಭಕ್ತಿಯ ಒಂದು ಆಚರಣೆಯಲ್ಲಿ ಭಾಗವಹಿಸುವಂತೆ ಎಲ್ಲಾ ವಿದ್ಯಾರ್ಥಿಗಳಿಂದ ಅಪೇಕ್ಷಿಸಲ್ಪಟ್ಟಿತು. ದಿನಚರ್ಯೆಯ ವ್ಯಾಯಾಮವಾಗಿ ಕಂಡಿದ್ದ ಇದರಲ್ಲಿ ಅವನು ತನ್ನ ಜೊತೆ ವಿದ್ಯಾರ್ಥಿಗಳೊಂದಿಗೆ ಜತೆಗೂಡಬೇಕೋ?
ಯೆಹೋವನಲ್ಲದೆ ಬೇರೆ ಯಾವ ದೇವರಿಗೂ ಒಂದು ಭಕ್ತಿಯ ಕ್ರಿಯೆಯಲ್ಲಿ ಭಾಗವಹಿಸುವುದು ತಪ್ಪೆಂದು ನೊರಿಹಿಟೊ ಬೈಬಲಿನಿಂದ ಕಲಿತಿದ್ದನು. (ವಿಮೋಚನಕಾಂಡ 20:4, 5; ಮತ್ತಾಯ 4:10) ಲೋಕದ ಎಲ್ಲಾ ರಾಜಕೀಯ ಕಾರ್ಯಗಳಲ್ಲಿ ಕ್ರೈಸ್ತರು ತಟಸ್ಥರಾಗಿ ಉಳಿಯಬೇಕೆಂದೂ ಅವನಿಗೆ ಗೊತ್ತಿತ್ತು. (ದಾನಿಯೇಲ 3:1-30; ಯೋಹಾನ 17:16) ಹೀಗೆ ಅವನ ಜೊತೆ ವಿದ್ಯಾರ್ಥಿಗಳು ಅವನು ಭಾಗಿಯಾಗುವಂತೆ ಪ್ರಚೋದಿಸಿದರೂ, ಅವನು ಧೈರ್ಯದಿಂದ ಆದರೆ ಗೌರವಪೂರ್ವಕವಾಗಿ ತನ್ನ ನೆಲೆಬಿಡದೆ ನಿಂತನು. ಸದೃಶ ಸನ್ನಿವೇಶವೊಂದರಲ್ಲಿ ನೀವೇನು ಮಾಡುತ್ತಿದ್ದೀರಿ?
ಸೇರಿಕೊಳ್ಳುವ ಅಪೇಕ್ಷೆ
ಒಬ್ಬರ ಜೊತೆಯಲ್ಲಿ ಬೆರೆಯುವಂತೆ, ಒಬ್ಬರೊಂದಿಗೊಬ್ಬರು ಹೊಂದಿಕೊಂಡು ಹೋಗುವಂತೆ, ಮತ್ತು ಒಂದುಗೂಡಿ ಕಾರ್ಯಗಳನ್ನು ಮಾಡುವುದರಲ್ಲಿ ಆನಂದಿಸುವಂತೆ ಮನುಷ್ಯರು ದೇವರಿಂದ ನಿರ್ಮಿಸಲ್ಪಟ್ಟರೆಂದು ಶಾಸ್ತ್ರಗ್ರಂಥವು ಸೂಚಿಸುತ್ತದೆ. ಒಬ್ಬನ ಸಮಾನಸ್ಥರೊಂದಿಗೆ ಇರಬಯಸುವುದು, ಇತರರಿಂದ ಸ್ವೀಕರಿಸಲ್ಪಡುವುದು, ಸೇರಿಸಲ್ಪಡುವುದು ಸ್ವಾಭಾವಿಕವಾಗಿದೆ. ಅಂಥ ಅನಿಸಿಕೆಗಳು ಜೀವಿತವನ್ನು ಹೆಚ್ಚು ಉಲ್ಲಾಸಕರವನ್ನಾಗಿ ಮಾಡಿ, ಇತರರೊಂದಿಗಿನ ನಮ್ಮ ಸಂಪರ್ಕಗಳಲ್ಲಿ ಶಾಂತಿ ಮತ್ತು ಹೊಂದಿಕೆಗೆ ನೆರವಾಗುತ್ತವೆ.—ಆದಿಕಾಂಡ 2:18; ಕೀರ್ತನೆ 133:1; 1 ಪೇತ್ರ 3:8.
ಇಂದು ಕೂಡ ಕೆಲವು ಸಂಸ್ಕೃತಿಗಳಲ್ಲಿ ಅನುವರ್ತನೆಯ ಮೇಲೆ ಹಾಕಲ್ಪಡುವ ಬಲವಾದ ಒತ್ತಿನಲ್ಲಿ, ಸ್ವೀಕರಿಸಲ್ಪಡುವ ಸಹಜವಾದ ಇಚ್ಛೆಯು ಪ್ರತಿಬಿಂಬಿಸುತ್ತದೆ. ದೃಷ್ಟಾಂತಕ್ಕೆ, ಜಪಾನಿ ಮಕ್ಕಳು, ತಮ್ಮ ಅತ್ಯಾರಂಭದ ವರ್ಷಗಳಿಂದಲೇ ಅಧಿಕ ಸಂಖ್ಯಾತರ ವಿಧಿಗಳನ್ನು ಅರಿಯುವಂತೆ ಮತ್ತು ಹೊಂದಿಕೊಳ್ಳುವಂತೆ ತರಬೇತುಗೊಳಿಸಲ್ಪಡುತ್ತಾರೆ. ಸಮಾಜದೊಂದಿಗೆ ಹೊಂದಿಕೆಯಾಗಿರುವುದು ಅವರ ಮಹಾ ಕರ್ತವ್ಯಗಳಲ್ಲಿ ಒಂದೆಂದು ಅವರ ಪರಂಪರೆಯು ಅವರಿಗೆ ಕಲಿಸುತ್ತದೆ. “ಗುಂಪುಗೂಡಿ ಕಾರ್ಯನಡಿಸುವ ಸಂಭವನೀಯತೆಯು ಪಾಶ್ಚಿಮಾತ್ಯರಿಗಿಂತ ಜಪಾನಿನವರಲ್ಲಿ ಎಷ್ಟೋ ಹೆಚ್ಚು,” ಎಂದರು ಜಪಾನಿನಲ್ಲಿ ಅಮೆರಿಕದ ಮಾಜಿ ರಾಯಭಾರಿಗಳಾಗಿದ್ದ ಮತ್ತು ಜಪಾನಿಯರ ವರ್ತನೆಗಳ ತೀವ್ರಾಸಕ್ತ ಅವಲೋಕಕರಾದ ಎಡ್ವಿನ್ ರಿಷಾವರ್. ಅವರು ಕೂಡಿಸಿದ್ದು: “ಪಾಶ್ಚಿಮಾತ್ಯರು ಕಡಿಮೆಪಕ್ಷ ಹೊರ ತೋರಿಕೆಯಲ್ಲಿ ಅಪರಾಧೀನತೆ ಮತ್ತು ಅನನ್ಯತೆಯನ್ನು ಪ್ರದರ್ಶಿಸಬಹುದಾದರೂ, ಹೆಚ್ಚಿನ ಜಪಾನೀಯರು ಉಡುಪಿನಲ್ಲಿ, ನಡತೆಯಲ್ಲಿ, ಜೀವನ ಶೈಲಿಯಲ್ಲಿ, ಮತ್ತು ಅವರ ಯೋಚನೆಯಲ್ಲಿ ಸಹ ತಮ್ಮ ಗುಂಪಿನ ರೂಢಿಗಳಿಗೆ ಹೊಂದಿಕೆಯಾಗಿರುವುದರಲ್ಲಿ ತೀರ ತೃಪ್ತರಾಗಿರುವರು.” ಆದರೂ, ಹೊಂದಿಕೊಳ್ಳುವ ಅಪೇಕ್ಷೆಯು ಜಪಾನೀಯರಿಗೆ ಮಾತ್ರವೇ ಸೀಮಿತವಲ್ಲ. ಅದು ಸಾರ್ವತ್ರಿಕವಾಗಿದೆ.
ಹೊಂದಿಕೊಳ್ಳಲು ಒತ್ತಡಗಳು
ಇತರರೊಂದಿಗೆ ಹೊಂದಿಕೊಂಡು ಹೋಗಲು ಒಬ್ಬನಿಂದಾಗುವುದೆಲ್ಲವನ್ನು ಮಾಡುವುದು ಅಪೇಕ್ಷಣೀಯವಾಗಿದ್ದರೂ, ಯಾವುದು ಜನಪ್ರಿಯವೋ ಅದಕ್ಕೆ ಕುರುಡಾಗಿ ಹೊಂದಿಕೊಳ್ಳುವುದರಲ್ಲಿ ಅಪಾಯವಿದೆ. ಏಕೆ? ಏಕೆಂದರೆ ಜನಸಮೂಹಕ್ಕೆ ಜನಪ್ರಿಯವಾದದ್ದು ದೇವರಿಂದ ಸ್ವೀಕರಣೀಯವಾದುದಕ್ಕೆ ಹೆಚ್ಚಾಗಿ ಪ್ರತಿಕೂಲವಾಗಿರುತ್ತದೆ. “ಇಡೀ ಲೋಕವು ಕೆಡುಕನ ವಶದಲ್ಲಿ ಬಿದಿದ್ದೆ” ಎಂದು ಬೈಬಲ್ ನಮಗೆ ಹೇಳುತ್ತದೆ. (1 ಯೋಹಾನ 5:19) ಜನಸಮೂಹವನ್ನು ಪ್ರಭಾವಿಸಿ, ಅವರನ್ನು ದೇವರಿಂದ ದೂರ ತಿರುಗಿಸಲು ಸೈತಾನನು ತನ್ನ ಕೈಯಲ್ಲಿರುವ ಪ್ರತಿಯೊಂದು ಸಾಧನಗಳನ್ನು—ಪ್ರಾಪಂಚಿಕತೆ, ಕೀಳು ನೀತಿ ನಿಯಮಗಳು, ಜಾತೀಯ ದುರಭಿಮಾನ, ಧಾರ್ಮಿಕ ಮತಾಂಧತೆ, ರಾಷ್ಟ್ರೀಯತೆ ಮುಂತಾದವುಗಳನ್ನು ತಂತ್ರದಿಂದ ಉಪಯೋಗಿಸುತ್ತಾನೆ. ಅಂಥ ಪದ್ಧತಿಗಳಿಗೆ ಹೊಂದಿಕೊಳ್ಳುವುದು, ಕಾರ್ಯತಃ ಒಬ್ಬನನ್ನು ಯೆಹೋವ ದೇವರಿಗೆ ಮತ್ತು ಆತನ ಉದ್ದೇಶಗಳಿಗೆ ವಿರುದ್ಧವಾಗಿ ಹಾಕುವುದು. ಆದುದರಿಂದಲೇ ಕ್ರೈಸ್ತರಿಗೆ ಸಲಹೆ ಕೊಡಲ್ಪಟ್ಟಿದೆ: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.”—ರೋಮಾಪುರ 12:2.
ಈ ವಿಷಯಗಳ ವ್ಯವಸ್ಥೆಯಲ್ಲಿ ಜೀವಿಸುತ್ತಿರುವಾಗ, ಯಾವುದು ಜನಪ್ರಿಯವೋ ಅದಕ್ಕೆ ಹೊಂದಿಕೊಳ್ಳುವ ಸಂತತವಾದ ಒತ್ತಡದ ಕೆಳಗೆ ಕ್ರೈಸ್ತರಿದ್ದಾರೆ. ಈ ಸಂಬಂಧದಲ್ಲಿ ಯುವಕರು ವಿಶೇಷವಾಗಿ ಸುಲಭಭೇದ್ಯರಾಗಿದ್ದಾರೆ. ಶಾಲಾಸಂಗಾತಿಗಳಂತೆ ತೋರುವ ಮತ್ತು ನಡೆಯುವ ಅಪೇಕ್ಷೆಯು ಅತ್ಯಂತ ಬಲವಾಗಿದೆ. ನಿರ್ದಿಷ್ಟ ಚಟುವಟಿಕೆಗಳಲ್ಲಿ ತಾವೇಕೆ ಭಾಗವಹಿಸುವುದಿಲ್ಲವೆಂದು ತಮ್ಮ ಸಮಾನಸ್ಥರಿಗೆ ವಿವರಿಸಲು ನಿಜ ಧೈರ್ಯವು ಅವರಿಗೆ ಬೇಕಾಗಿದೆ. ಆದರೂ, ಧೈರ್ಯದಿಂದ ತಮ್ಮ ನಿಲುವನ್ನು ವ್ಯಕ್ತಪಡಿಸದೆ ಹೋದರೆ ಅದು ಅವರಿಗೆ ಆತ್ಮಿಕ ವಿಪತ್ತಿನ ಅರ್ಥದಲ್ಲಿರ ಸಾಧ್ಯವಿದೆ.—ಜ್ಞಾನೋಕ್ತಿ 24:1, 19, 20.
ವಯಸ್ಕರು ಸಹ ತಮ್ಮ ಕೆಲಸದ ಸ್ಥಳದಲ್ಲಿ ಅಂತಹ ಒತ್ತಡಗಳನ್ನು ಎದುರಿಸುತ್ತಾರೆ. ಕೆಲಸದ ತಾಸುಗಳ ಅನಂತರ ಅಥವಾ ನಿರ್ದಿಷ್ಟ ರಜಾದಿನಗಳಲ್ಲಿ ನಿರ್ದಿಷ್ಟ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವರಿಂದ ಅಪೇಕ್ಷಿಸಲಾದೀತು. ಅದಕ್ಕೆ ಹೊಂದಿಕೆಯಾಗಲು ನಿರಾಕರಿಸುವುದು ಅವರನ್ನು ಪ್ರತ್ಯೇಕವಾಗಿ ಮತ್ತು ಅಸಹಕಾರಿಗಳಾಗಿ ತೋರುವಂತೆ ಮಾಡಿ, ಕೆಲಸದ ಸ್ಧಳದಲ್ಲಿ ಕಷ್ಟದ ಪರಿಸರವನ್ನು ನಿರ್ಮಿಸಬಹುದು. ಇತರರು ಅದನ್ನು ಮಾಡುತ್ತಾರಾದ್ದರಿಂದ ತಮ್ಮಿಂದಲೂ ಅದು ಅಪೇಕ್ಷಿಸಲ್ಪಡುತ್ತದೆ ಎಂಬ ಕಾರಣ ಮಾತ್ರದಿಂದ ದೀರ್ಘತಾಸುಗಳ ಓವರ್ಟೈಂ ಮಾಡಲು ಕೆಲವರು ನಿರ್ಬಂಧಿಸಲ್ಪಡಬಹುದು. ಅಂಥ ವಿಷಯಗಳಿಗೆ ಬಿಟ್ಟುಕೊಡುವುದು ಅವರಿಗೆ ಆತ್ಮಿಕವಾಗಿ ಹಾನಿಕರವಾಗಿರುವುದು ಹಾಗೂ ಅವರ ಬೇರೆ ಹಂಗುಗಳನ್ನು ನಿರ್ವಹಿಸುವುದರಿಂದ ಅದು ಅವರನ್ನು ತಡೆಯುವುದು.—1 ಕೊರಿಂಥ 15:33; 1 ತಿಮೊಥೆಯ 6:6-8.
ಶಾಲೆ ಮತ್ತು ಕೆಲಸದ ಸ್ಥಳದ ಹೊರತಾಗಿಯೂ ಹೊಂದಿಕೊಳ್ಳಲು ಒತ್ತಡಗಳಿರುತ್ತವೆ. ಒಬ್ಬ ಕ್ರೈಸ್ತ ತಾಯಿಯು ಹೇಳಿದ್ದೇನಂದರೆ ಒಂದು ಸಂದರ್ಭದಲ್ಲಿ ಅವಳು ತನ್ನ ಮಗುವಿಗೆ ಶಿಕ್ಷೆಯನ್ನು, ಅದು ಬಹಳವಾಗಿ ಬೇಕಾಗಿದ್ದರೂ, ಕೊಡದೆ ಬಿಟಳ್ಟು ಯಾಕಂದರೆ ಹಾಜರಿದ್ದ ಬೇರೆ ಗೃಹಿಣಿಯರು ಅದನ್ನು ಒಪ್ಪಲಿಕ್ಕಿಲ್ಲವೆಂದು ಅವಳು ಭಾವಿಸಿದಳು.—ಜ್ಞಾನೋಕ್ತಿ 29:15, 17.
ಗುಂಪು ತಪ್ಪಾಗಿರಬಲ್ಲದು
ಗುಂಪನ್ನು ಅನುಸರಿಸುವ ವಿಷಯದಲ್ಲಿ ಬೈಬಲು ಬಹಳ ಮುಚ್ಚುಮರೆಯಿಲ್ಲದ ಬುದ್ಧಿವಾದವನ್ನು ಕೊಡುತ್ತದೆ. ದೃಷ್ಟಾಂತಕ್ಕೆ, ಇಸ್ರಾಯೇಲ್ ಜನಾಂಗಕ್ಕೆ ಹೇಳಲ್ಪಟ್ಟದ್ದು: “ದುಷ್ಕಾರ್ಯವನ್ನು ಮಾಡುವವರು ಬಹು ಮಂದಿ ಆದಾಗ್ಯೂ ಅವರ ಜೊತೆಯಲ್ಲಿ ಸೇರಬಾರದು. ಬಹು ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳಬಾರದು.” (ವಿಮೋಚನಕಾಂಡ 23:2; ಹೋಲಿಸಿ ರೋಮಾಪುರ 6:16.) ಈ ಬುದ್ಧಿವಾದವು ಯಾವಾಗಲೂ ಪಾಲಿಸಲ್ಪಡಲಿಲ್ಲ. ಒಮ್ಮೆ, ಐಗುಪ್ತವನ್ನು ಬಿಟ್ಟುಹೋದ ತುಸು ಸಮಯಾನಂತರ, ಮೋಶೆಯು ಇಲ್ಲದ ವೇಳೆಯಲ್ಲಿ, ನಿರ್ದಿಷ್ಟ ವ್ಯಕ್ತಿಗಳು ಆರೋನ ಮತ್ತು ಜನರನ್ನು ಒಂದು ಚಿನ್ನದ ಬಸವನನ್ನು ಮಾಡುವಂತೆ ಮತ್ತು “ಯೆಹೋವನ ಉತ್ಸವದಲ್ಲಿ” ಅದನ್ನು ಆರಾಧಿಸುವಂತೆ ಪ್ರಭಾವಿಸಿದರು. ಆ ಚಿನ್ನದ ಬಸವನಿಗೆ ಯಜ್ಞವನ್ನು ಮಾಡುವಾಗ ಜನರು ಉಂಡು ಕುಡಿದರು ಮತ್ತು ಗಾನ ನಾಟ್ಯಗಳಲ್ಲಿ ಆನಂದಪಟ್ಟರು. ಈ ಸ್ವೇಚ್ಛಾಚಾರದ, ಮೂರ್ತಿಪೂಜಕ ಕೃತ್ಯಕ್ಕಾಗಿ ಸುಮಾರು 3,000 ಮುಖ್ಯ ಸಂಚುಗಾರರು ಸಂಹರಿಸಲ್ಪಟ್ಟರು. ಆದರೆ ಇತರ ಅನೇಕರು ಕೂಡ ವಿಚಾರಹೀನತೆಯಿಂದ ಗುಂಪನ್ನು ಹಿಂಬಾಲಿಸಿದಕ್ಕಾಗಿ ಯೆಹೋವನಿಂದ ಬಾಧೆಗೊಳಗಾದರು.—ವಿಮೋಚನಕಾಂಡ 32:1-35.
ದುರುದ್ದೇಶಕ್ಕಾಗಿ ಗುಂಪನ್ನು ಹಿಂಬಾಲಿಸುವ ಇನ್ನೊಂದು ಉದಾಹರಣೆಯು ಒಂದನೆಯ ಶತಮಾನದಲ್ಲಿ ಯೇಸು ಕ್ರಿಸ್ತನ ಮರಣದ ಸಂಬಂಧದಲ್ಲಿ ನಡೆಯಿತು. ಅಸೂಯಾಪರರಾದ ಧಾರ್ಮಿಕ ಮುಖಂಡರಿಂದ ಪ್ರೇಪೇಪಿಸಲ್ಪಟ್ಟವರಾಗಿ ಜನರಲ್ಲಿ ಅನೇಕರು ಯೇಸುವಿನ ವಧೆಗಾಗಿ ಕೇಳಿಕೊಳ್ಳುವುದರಲ್ಲಿ ಭಾಗಿಗಳಾದರು. (ಮಾರ್ಕ 15:11) ಅವರ ಘೋರ ತಪ್ಪನ್ನು ಪೇತ್ರನು, ಯೇಸುವಿನ ಪುನರುತ್ಥಾನ ಮತ್ತು ದಿವಾರೋಹಣವನ್ನು ಹಿಂಬಾಲಿಸಿದ ಪಂಚಾಶತ್ತಮದಂದು ತೋರಿಸಿಕೊಟ್ಟಾಗ, ಅವರಲ್ಲಿ ಅನೇಕರ “ಹೃದಯದಲ್ಲಿ ಅಲಗು ನೆಟ್ಟಂತಾ” ಯಿತು ಮತ್ತು ಗುಂಪನ್ನು ಹಿಂಬಾಲಿಸಿದರಲ್ಲಿ ತಾವೇನು ಮಾಡಿದ್ದೇವೆಂಬದನ್ನು ಅವರು ಅರಿತುಕೊಂಡರು.—ಅ. ಕೃತ್ಯಗಳು 2:36, 37.
ಬೈಬಲ್ ತತ್ವಗಳು ಉತ್ತಮವಾಗಿವೆ
ಈ ವೃತ್ತಾಂತಗಳು ಸ್ಪಷ್ಟವಾಗಿಗಿ ಉದಾಹರಿಸುವಂತೆ, ಜನಪ್ರಿಯವಾದದ್ದನ್ನು ಕುರುಡಾಗಿ ಪಾಲಿಸುವುದು ಗಂಭೀರವಾದ ಫಲಿತಾಂಶಗಳಿಗೆ ನಡಿಸಬಲ್ಲದು. ಬೈಬಲನ್ನು ಅನುಸರಿಸಿ, ಅದರ ತತ್ವಗಳು ನಮ್ಮ ಜೀವಿತಗಳಲ್ಲಿ ಮಾರ್ಗದರ್ಶಕವಾಗುವಂತೆ ಬಿಡುವುದು ಅದೆಷ್ಟು ಉತ್ತಮ! “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೂ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ,” ಎನ್ನುತ್ತಾನೆ ಯೆಹೋವನು. (ಯೆಶಾಯ 55:9) ನೀತಿ ನಿಯಮಗಳು ಮತ್ತು ಮಾನವ ಸಂಬಂಧಗಳ ವಿಷಯಗಳಲ್ಲಿ—ನಿಶ್ಚಯವಾಗಿ, ಜೀವಿತದ ನಿರ್ಣಯಗಳೆಲ್ಲವುಗಳಲ್ಲಿ—ಯೆಹೋವನ ಮಾರ್ಗಗಳನ್ನು ಅನುಸರಿಸುವುದು ಜನಪ್ರಿಯವಾದವುಗಳನ್ನು ಹಿಂಬಾಲಿಸುವುದಕ್ಕಿಂತ ಎಷ್ಟೋ ಉತ್ತಮವೆಂದು ಪದೇ ಪದೇ ಪ್ರದರ್ಶಿಸಲ್ಪಟ್ಟಿದೆ. ಅದು ಹೆಚ್ಚು ಸಂತಸದ ಮತ್ತು ಸ್ವಸ್ಥಕರ ಜೀವಿತ ಮಾರ್ಗದ ಕೀಲಿಕೈಯಾಗಿದೆ
ದೃಷ್ಟಾಂತಕ್ಕೆ, ಕಝಾಯನ ಅನುಭವವನ್ನು ತೆಗೆದುಕೊಳ್ಳಿರಿ. ಅವನು ಬೈಬಲನ್ನು ಸ್ವಲ್ಪ ಸಮಯದ ತನಕ ಅಭ್ಯಾಸಿಸಿದ್ದರೂ—ಐಶ್ವರ್ಯವಂತನಾಗಿ, ಸಾಫಲ್ಯವನ್ನು ಗಳಿಸುವ—ಜನಪ್ರಿಯ ಮಾರ್ಗವನ್ನು ಅನುಸರಿಸುವುದನ್ನು ಅವನು ಮುಂದರಿಸಿದನು. ಅವನ ಮೇಲಧಿಕಾರಿಗಳನ್ನು ಮೆಚ್ಚಿಸುವ ಮತ್ತು ತನ್ನ ಜೊತೆಗೆಲಸಗಾರರಿಂದ ಸದ್ಭಾವನೆಯನ್ನು ಪಡೆಯುವ ಪ್ರಯತ್ನಗಳು ಅವನನ್ನು ಆಗಿಂದಾಗ್ಯೆ ಹೊರಗೆ ಪಾನ ಕೇಳಿಗಳಲ್ಲಿ ಬೆಳಗ್ಗಿನ ಜಾವದ ತನಕವೂ ಇರುವಂತೆ ನಡಿಸಿತು. ಅವನು ತಗಾದೆ ಮಾಡುವವನಾಗಿ, ಅಸಹನೆಯವನಾಗಿ ಮತ್ತು ರೇಗುವವನಾಗಿ ಪರಿಣಮಿಸಿದನು. ಅವನ ಅತಿರೇಕ ಜೀವನ ಶೈಲಿಯು ಅವನನ್ನು ಬೇಗನೆ ಲಕ್ವಾ ಹೊಡೆತಕ್ಕೆ ನಡಿಸಿ, ನಿಸ್ಸತ್ವಗೊಳಿಸಿತು. ಗುಣಹೊಂದುತ್ತಾ ಆಸ್ಪತ್ರೆಯ ಮಂಚವೊಂದರಲ್ಲಿ ಬಿದ್ದಿದ್ದಾಗ, ಬೈಬಲಿನಲ್ಲಿ ತಾನು ಕಲಿತ ವಿಷಯಗಳನ್ನು ಮತ್ತು ತಾನೀಗ ಜೀವಿಸುವ ಬದುಕಿನ ಮೇಲೆ ಪ್ರತಿಬಿಂಬಿಸಲು ಅವನಿಗೆ ಸಮಯ ಸಿಕ್ಕಿತು. ತಾನು ಕಲಿತ ವಿಷಯಗಳನ್ನು ಅನ್ವಯಿಸಲಾರಂಭಿಸುವ ಸಮಯವದೆಂದು ಅವನು ನಿರ್ಣಯಿಸಿದನು. ಅವನು ತನ್ನ ಮ್ಯಾನೇಜರನ ಸ್ಥಾನಕ್ಕೆ ರಾಜೀನಾಮೆ ಕೊಟ್ಟನು ಮತ್ತು ತನ್ನ ಸಹವಾಸಗಳನ್ನು ಬದಲಾಯಿಸಿದನು. ಕ್ರೈಸ್ತ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಯಥಾರ್ಥ ಪ್ರಯತ್ನಗಳನ್ನು ಮಾಡಿ, ಪ್ರಾಪಂಚಿಕ ಸ್ವತ್ತುಗಳ ತನ್ನ ನೋಟವನ್ನು ಅಳವಡಿಸಿಕೊಂಡನು. ಫಲಿತಾಂಶವಾಗಿ, ಅವನ ಮೌಲ್ಯಗಳು ಬದಲಾದವು, ಆರೋಗ್ಯವು ಸುಧಾರಿಸಿತು. ಕೊನೆಗೆ, ಅವನು ಯೆಹೋವನಿಗೆ ತನ್ನ ಜೀವನವನ್ನು ಸಮರ್ಪಿಸಿ, ದೀಕ್ಷಾಸ್ನಾನ ಪಡಕೊಂಡನು.
ಜನಪ್ರಿಯವಲ್ಲದ ಒಂದು ಮಾರ್ಗವನ್ನು ಅನುಸರಿಸುವುದರಲ್ಲಿ ಸಾಫಲ್ಯಹೊಂದಲು, ಒಳಗೂಡಿರುವ ತತ್ವಗಳು ಒಬ್ಬನಿಗೆ ತಿಳಿದಿರಬೇಕು ಮತ್ತು ಅವು ಸರಿ ಎಂಬ ಪೂರ್ಣ ಮನವರಿಕೆಯಾಗಿರಬೇಕು. ವಿಷಯವು ಹೀಗಿದೆಯೆಂದು ಮಸಾರು ಅನುಭವಿಸಿದ ಸಂಗತಿಗಳಿಂದ ತೋರಿಬರುತ್ತದೆ. ಮಾಧ್ಯಮಿಕ ಶಾಲೆಯ ಆರನೆಯ ತರಗತಿಯಲ್ಲಿದ್ದಾಗ, ವಿದ್ಯಾರ್ಥಿ ಮಂಡಲಿಯ ಅಧ್ಯಕ್ಷತನಕ್ಕೆ ಉಮೇದ್ವಾರನಾಗಿ ನಿಲ್ಲುವಂತೆ ಸಹಪಾಠಿಗಳಿಂದ ಶಿಫಾರಸ್ಸು ಮಾಡಲ್ಪಟ್ಟನು. ಸ್ವಲ್ಪ ಸಂಕೋಚದಿಂದ ಅವನು ನೆನಪಿಸುವುದೇನಂದರೆ, ಒಳಗೂಡಿರುವ ಬೈಬಲ್ ತತ್ವಗಳನ್ನು ಪೂರ್ಣವಾಗಿ ತಿಳಿಯದೆ ಇದ್ದ ಕಾರಣ, ರಾಜಕೀಯ ಸ್ಥಾನಕ್ಕಾಗಿ ನಿಲ್ಲಲು ತನಗೇಕೆ ಸಾಧ್ಯವಿಲ್ಲವೆಂದು ತನ್ನ ಸಹಪಾಠಿಗಳಿಗೆ ವಿವರಿಸಲು ಅವನು ಶಕ್ತನಾಗಲಿಲ್ಲ. ತಾನೊಬ್ಬ ಕ್ರೈಸ್ತನೆಂದು ತಿಳಿಯಪಡಿಸುವುದರಿಂದ ಮನುಷ್ಯನ ಭಯವು ಅವನನ್ನು ಹಿಮ್ಮೆಟ್ಟಿಸಿತು. ತಲೆಬಾಗಿಸಿ, ಕಣ್ಣೀರಿಡುತ್ತಾ, “ನಾನದನ್ನು ಮಾಡಲಾರೆ” ಎಂದು ಪುನಃ ಪುನಃ ನುಡಿಯಲು ಮಾತ್ರವೇ ಅವನು ಶಕ್ತನಾದನು.
ಈ ನೋವಿನ ಅನುಭವವು ರಾಜಕೀಯ ಚಟುವಟಿಕೆಗಳಲ್ಲಿ ಕ್ರೈಸ್ತನೇಕೆ ಒಳಗೂಡುವುದಿಲ್ಲ ಎಂಬದನ್ನು ಪರೀಕ್ಷಿಸಲು ಅವನನ್ನು ನಡಿಸಿತು. (ಹೋಲಿಸಿ ಯೋಹಾನ 6:15.) ತದನಂತರ, ಅವನು ಜೂನಿಯರ್ ಹೈಸ್ಕೂಲಿನಲ್ಲಿದ್ದಾಗ ತದ್ರೀತಿಯ ಪರಿಸ್ಥಿತಿಯೊಂದು ತಲೆದೋರಿತು. ಈ ಸಮಯದಲ್ಲಾದರೋ, ತನ್ನ ನಿಲುವನ್ನು ತನ್ನ ಅಧ್ಯಾಪಕರಿಗೆ ಮನವರಿಕೆಯೊಂದಿಗೆ ವಿವರಿಸಲು ಅವನು ಸಿದ್ಧನಾಗಿದ್ದನು. ಅಧ್ಯಾಪಕರು ಹಾಗೂ ಅವನ ಬೈಬಲಾಧಾರಿತ ನಂಬಿಕೆಗಳ ಕುರಿತು ಕೇಳಿದ ಅವನ ಹಲವಾರು ಸಹಪಾಠಿಗಳು ಸಹ ಅವನ ವಿವರಣೆಯನ್ನು ಸ್ವೀಕರಿಸಿದರು.
ಎಲ್ಲರೂ ಯೋಗ್ಯವಾದದ್ದನ್ನೇ ಮಾಡುವ ಸಮಯ
ಕ್ರಿಸ್ತನ ಆಳಿಕೆಯ ಕೆಳಗೆ ಬರಲಿರುವ ನೂತನ ಲೋಕದಲ್ಲಿ, ಜನಪ್ರಿಯ ವಿಷಯವನ್ನು ಮಾಡುವುದು ಯೋಗ್ಯ ವಿಷಯವನ್ನು ಮಾಡುವುದಾಗಿರುವುದು. ಆ ಸಮಯದ ತನಕ, ಯಾವುದು ಜನಪ್ರಿಯವೋ ಅದಕ್ಕೆ ಹೊಂದಿಕೊಳ್ಳುವ ಪ್ರೇರಣೆಯ ವಿರುದ್ಧ ನಾವು ಎಚ್ಚರವಾಗಿರಬೇಕಾಗಿದೆ. ಪೌಲನ ಬುದ್ಧಿವಾದದಿಂದ ನಾವು ಉತ್ತೇಜನವನ್ನು ಸೆಳೆಯಬಲ್ಲೆವು: “ಆದಕಾರಣ ಇಷ್ಟು ಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನು ನಾವು ಸಹ ತೆಗೆದಿಟ್ಟು . . . ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.”—ಇಬ್ರಿಯ 12:1.
ಪ್ರಶ್ನೆಗಳೂ ಪಂಥಾಹ್ವಾನಗಳೂ ನಿಮ್ಮ ಮುಂದೆ ಬರುವಾಗ, ನೀವೇನು ಮಾಡುವಿರಿ? ಮನುಷ್ಯರ ಭಯಕ್ಕೆ ಬಲಿಬಿದ್ದು, ಯಾವುದು ಜನಪ್ರಿಯವೋ ಅದನ್ನು ಮಾಡಲು ಬಿಟ್ಟುಕೊಡುವಿರೋ? ಅಥವಾ ದೇವರ ವಾಕ್ಯವಾದ ಬೈಬಲಿಗೆ ತಿರುಗಿ, ಅದರ ತತ್ವಗಳನ್ನು ಅನುಸರಿಸುವಿರೋ? ಈ ಎರಡನೆಯ ಮಾರ್ಗವನ್ನು ತೆಗೆದುಕೊಳ್ಳುವುದು ನಿಮಗೆ ಈಗ ಪ್ರಯೋಜನದಾಯಕ ಮಾತ್ರವೇ ಅಲ್ಲ, ಯಾರು “ನಂಬಿ ಅವುಗಳ ಫಲಕ್ಕೋಸ್ಕರ . . . ಕಾದಿದ್ದು ಆ ಫಲವನ್ನು ಹೊಂದುತ್ತಾರೋ” ಅವರೊಂದಿಗಿರುವ ಪ್ರತೀಕ್ಷೆಯನ್ನು ಸಹ ನಿಮಗೆ ಕೊಡುವುದು.—ಇಬ್ರಿಯ 6:12.