ಲೋಭದ ಉರ್ಲನ್ನು ವರ್ಜಿಸುವುದರಲ್ಲಿ ಯಶಸ್ವಿಯಾಗಿರಿ
“ಐಶ್ವರ್ಯವಂತರಾಗಬೇಕೆಂದು ನಿಶ್ಚಯಿಸುವವರು ದುಷ್ಪ್ರೇರಣೆ ಮತ್ತು ಉರ್ಲಿಗೆ ಬೀಳುತ್ತಾರೆ.”—1 ತಿಮೊಥೆಯ 6:9, NW.
1. ಉರ್ಲುಗಳ ಕುರಿತು ನಾವು ಯಾಕೆ ಚಿಂತಿತರಾಗಿರಬೇಕು?
“ಉರ್ಲು” ಎಂಬ ಶಬ್ದವು, ಸಂಶಯಪಡದ ಬಲಿಯನ್ನು ಹಿಡಿಯಲು ಬೇಟೆಗಾರನಿಡುವ ಮರೆಮಾಡಲ್ಪಟ್ಟ ಒಂದು ಸಾಧನವನ್ನು ನಿಮ್ಮ ಮನಸ್ಸಿಗೆ ತರಬಹುದು. ಆದರೂ, ದೇವರು ನಮಗೆ ಸ್ಪಷ್ಟಮಾಡುತ್ತಾನೆ ಏನಂದರೆ ನಮಗೆ ಅತ್ಯಂತ ಅಪಾಯಕರವಾದ ಉರ್ಲುಗಳು ಅಂಥ ಅಕ್ಷರಾರ್ಥಕ ಸಾಧನಗಳಲ್ಲ, ಬದಲಿಗೆ, ನಮ್ಮನ್ನು ಆತ್ಮಿಕವಾಗಿ ಅಥವಾ ನೈತಿಕವಾಗಿ ಬಲೆಯಲ್ಲಿ ಬೀಳಿಸಬಹುದಾದವುಗಳು. ಅಂಥ ಉರ್ಲುಗಳನ್ನು ಒಡ್ಡುವುದರಲ್ಲಿ ಪಿಶಾಚನು ಚತುರನು.—2 ಕೊರಿಂಥ 2:11; 2 ತಿಮೊಥೆಯ 2:24-26.
2. (ಎ) ಅಪಾಯಕರ ಉರ್ಲುಗಳನ್ನು ವರ್ಜಿಸಲು ಯೆಹೋವನು ನಮಗೆ ಹೇಗೆ ಸಹಾಯ ಮಾಡುತ್ತಾನೆ? (ಬಿ) ಯಾವ ವಿಶಿಷ್ಟ ತರದ ಉರ್ಲು ಈಗ ಗಮನವನ್ನು ಕೇಂದ್ರೀಕರಿಸುತ್ತದೆ?
2 ಸೈತಾನನ ಅನೇಕ ಮತ್ತು ವಿವಿಧ ಉರ್ಲುಗಳಲ್ಲಿ ಕೆಲವನ್ನು ಗುರುತುಪಡಿಸುವ ಮೂಲಕ ಯೆಹೋವನು ನಮಗೆ ಸಹಾಯ ಮಾಡುತ್ತಾನೆ. ಉದಾಹರಣೆಗಾಗಿ, ನಾವು ಅವಿವೇಕದಿಂದ, ದುಡುಕಿನಿಂದ, ಮತ್ತು ನಾವು ಮಾತಾಡಕೂಡದ ವಿಷಯದ ಕುರಿತು ಮಾತಾಡುವುದಾದರೆ, ನಮ್ಮ ತುಟಿಗಳು ಅಥವಾ ಬಾಯಿ ಒಂದು ಉರ್ಲಾಗಬಲ್ಲದೆಂದು ದೇವರು ಎಚ್ಚರಿಸುತ್ತಾನೆ. (ಜ್ಞಾನೋಕ್ತಿ 18:7; 20:25) ಕೋಷ್ಟಿ ಪ್ರವೃತ್ತಿಯ ಜನರ ಸಂಗಡ ಸಹವಾಸ ಮಾಡುವುದು ಹೇಗೋ ಹಾಗೆ, ಹೆಮ್ಮೆಯೂ ಒಂದು ಪಾಶವಾಗಬಲ್ಲದು. (ಜ್ಞಾನೋಕ್ತಿ 22:24, 25; 29:25) ಆದರೆ ನಾವು ಇನ್ನೊಂದು ಉರ್ಲಿನ ಕಡೆಗೆ ತಿರುಗೋಣ: “ಐಶ್ವರ್ಯವಂತರಾಗಬೇಕೆಂದು ನಿಶ್ಚಯಿಸುವವರು ದುಷ್ಪ್ರೇರಣೆ ಮತ್ತು ಉರ್ಲಿನಲ್ಲಿ ಮತ್ತು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ, ಅವು ಮನುಷ್ಯರನ್ನು ನಾಶನ ಮತ್ತು ಧ್ವಂಸದಲ್ಲಿ ಮುಳುಗಿಸುತ್ತವೆ.” (1 ತಿಮೊಥೆಯ 6:9, NW) ಆ ಉರ್ಲಿನ ಹಿಂದೆ ಏನಿದೆಯೋ ಅಥವಾ ಅದಕ್ಕೆ ಮೂಲಾಧಾರವಾಗಿದೆಯೋ ಅದನ್ನು “ಲೋಭ” ಎಂಬ ಶಬ್ದದಲ್ಲಿ ಮೊತ್ತವಾಗಿ ಹೇಳಬಹುದಾಗಿದೆ. ಐಶ್ವರ್ಯವಂತರಾಗುವ ಒಂದು ದೃಢ ನಿಶ್ಚಯದಿಂದ ಹೆಚ್ಚಾಗಿ ಲೋಭವು ವ್ಯಕ್ತವಾಗುತ್ತದಾದರೂ, ಲೋಭವು ನಿಜವಾಗಿಯೂ ಅನೇಕ ಮುಖಗಳುಳ್ಳ ಒಂದು ಉರ್ಲಾಗಿದೆ.
ಅಪಾಯದ ಕುರಿತು ಯೆಹೋವನು ನಮ್ಮನ್ನು ಎಚ್ಚರಿಸುತ್ತಾನೆ
3, 4. ಪುರಾತನ ಮಾನವ ಇತಿಹಾಸದಲ್ಲಿ ಲೋಭದ ಕುರಿತು ಯಾವ ಪಾಠವು ಅಡಕವಾಗಿದೆ?
3 ಮೂಲತಃ ಲೋಭವು ಹಣ, ಸೊತ್ತುಗಳು, ಅಧಿಕಾರ, ಕಾಮ ಅಥವಾ ಬೇರೆ ವಿಷಯಗಳು ಅಧಿಕವಾಗಿ ಬೇಕೆನ್ನುವ ಒಂದು ಮಿತಿಮೀರಿದ ಅಥವಾ ಅತಿರೇಕವಾದ ಆಶೆಯಾಗಿದೆ. ಲೋಭದ ಉರ್ಲಿನಿಂದ ಅಪಾಯಕ್ಕೊಡ್ಡಲ್ಪಟ್ಟವರಲ್ಲಿ ನಾವು ನಿಶ್ಚಯವಾಗಿಯೂ ಮೊದಲಿಗರಲ್ಲ. ಬಹಳ ಕಾಲದ ಹಿಂದೆ ಏದೆನ್ ತೋಟದಲ್ಲಿ, ಆದಾಮ ಮತ್ತು ಹವ್ವರನ್ನು ಲೋಭವು ಉರ್ಲಿನೊಳಗೆ ಹಾಕಿತು. ಹವ್ವಳ ಸಂಗಾತಿಯು ಜೀವನದಲ್ಲಿ ಅವಳಿಗಿಂತ ಹೆಚ್ಚು ಅನುಭವಸ್ಥನಾಗಿದ್ದನು ಮತ್ತು ಯೆಹೋವನಿಂದ ವೈಯಕ್ತಿಕವಾಗಿ ಉಪದೇಶಿಸಲ್ಪಟ್ಟಿದ್ದನು. ದೇವರು ಒಂದು ಪರದೈಸ ಮನೆಯನ್ನು ಅವರಿಗೆ ಒದಗಿಸಿಕೊಟ್ಟಿದ್ದನು. ಮಾಲಿನ್ಯರಹಿತ ಭೂಮಿಯಲ್ಲಿ ಬೆಳೆಸಲ್ಪಟ್ಟ ಒಳ್ಳೆಯ ಮತ್ತು ವಿವಿಧ ಆಹಾರದ ವಿಪುಲತೆಯಲ್ಲಿ ಅವರು ಆನಂದಿಸಬಹುದಿತ್ತು. ಯಾರೊಂದಿಗೆ ಅವರು ಜೀವಿಸುತ್ತಾ ದೇವರನ್ನು ನಿರಂತರವಾಗಿ ಸೇವಿಸಬಹುದಿತ್ತೋ ಆ ಪರಿಪೂರ್ಣ ಮಕ್ಕಳನ್ನು ಹೊಂದುವಂತೆ ಅವರು ಅಪೇಕ್ಷಿಸಬಹುದಿತ್ತು. (ಆದಿಕಾಂಡ 1:27-31; 2:15) ಅದು ಯಾವುದೇ ಮಾನವನನ್ನು ತೃಪ್ತಿಗೊಳಿಸಲು ಸಾಕಾದಷ್ಟಿತ್ತೆಂದು ತೋರುವುದಿಲ್ಲವೇ?
4 ಆದರೂ, ಯಾರಿಗಾದರೂ ಬೇಕಾದಷ್ಟು ಇರುವುದು ಲೋಭವನ್ನು ಉರ್ಲಾಗಿ ಪರಿಣಮಿಸುವುದರಿಂದ ತಡೆಯುವುದಿಲ್ಲ. ಹೆಚ್ಚು ಸ್ವಾತಂತ್ರ್ಯವನ್ನು ಪಡೆದುಕೊಂಡು, ತನ್ನ ಸ್ವಂತ ಮಟ್ಟಗಳನ್ನು ಇಡುತ್ತಾ, ದೇವರಂಥಾಗುವ ಪ್ರತೀಕ್ಷೆಯಿಂದ ಹವ್ವಳು ಪಾಶಕ್ಕೆ ಬಿದ್ದಳು. ಆ ನಷ್ಟವು ಎಷ್ಟೇ ಆಗಿರಲಿ, ತನ್ನ ಸುಂದರ ಪತ್ನಿಯೊಂದಿಗೆ ಮುಂದುವರಿಯುವ ಸಂಬಂಧವನ್ನು ಆದಾಮನು ಬಯಸಿದ್ದಂತೆ ತೋರುತ್ತದೆ. ಈ ಪರಿಪೂರ್ಣ ಮನುಷ್ಯರು ಸಹ ಲೋಭದ ಉರ್ಲಿಗೆ ಬಿದ್ದರಾದ್ದರಿಂದ, ಲೋಭವು ನಮಗೆ ಏಕೆ ಒಂದು ಅಪಾಯವಾಗಿರಬಹುದೆಂಬದನ್ನು ನೀವು ಗಣ್ಯಮಾಡ ಸಾಧ್ಯವಿದೆ.
5. ಲೋಭದ ಉರ್ಲನ್ನು ವರ್ಜಿಸುವುದು ನಮಗೆಷ್ಟು ಮಹತ್ವವುಳ್ಳದ್ದಾಗಿದೆ?
5 ಲೋಭದ ಉರ್ಲಿನೊಳಗೆ ಬೀಳುವ ವಿರುದ್ಧ ನಾವು ಜಾಗ್ರತೆ ವಹಿಸಬೇಕಾಗಿದೆ ಯಾಕಂದರೆ ಅಪೊಸ್ತಲ ಪೌಲನು ನಮ್ಮನ್ನು ಎಚ್ಚರಿಸುವುದು: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು . . . ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (1 ಕೊರಿಂಥ 6:9, 10) ಪೌಲನು ನಮಗೆ ಇದನ್ನೂ ಹೇಳಿದ್ದಾನೆ: “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ (ಲೋಭ, NW) ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು.” (ಎಫೆಸ 5:3) ಹೀಗೆ ನಮ್ಮ ಅಸಂಪೂರ್ಣ ಶರೀರವನ್ನು ತೃಪ್ತಿಗೊಳಿಸುವ ಉದ್ದೇಶಕ್ಕಾಗಿ ಒಂದು ಸಂಭಾಷಣೆಯ ವಿಷಯವಾಗಿಯೂ ಲೋಭವು ಇರಕೂಡದು.
6, 7. (ಎ) ಲೋಭವು ಎಷ್ಟು ಬಲವುಳ್ಳದಾಗಿರಬಲ್ಲದು ಎಂಬದನ್ನು ಯಾವ ಬೈಬಲ್ ದೃಷ್ಟಾಂತಗಳು ಒತ್ತಿಹೇಳುತ್ತವೆ? (ಬಿ) ಆ ದೃಷ್ಟಾಂತಗಳು ನಮಗೆ ಒಂದು ಎಚ್ಚರಿಕೆಯಾಗಿ ಇರಬೇಕು ಯಾಕೆ?
6 ಲೋಭದ ಅಪಾಯಕ್ಕೆ ನಮ್ಮನ್ನು ಎಚ್ಚರಗೊಳಿಸಲು ಯೆಹೋವನು ಅನೇಕ ದೃಷ್ಟಾಂತಗಳನ್ನು ದಾಖಲಿಸಿದ್ದಾನೆ. ಆಕಾನನ ಲೋಭವನ್ನು ಜ್ಞಾಪಕಕ್ಕೆ ತನ್ನಿರಿ. ಯೆರಿಕೋವನ್ನು ನಾಶಮಾಡಬೇಕೆಂದು ದೇವರು ಹೇಳಿದ್ದನು, ಅದರೆ ಅದರ ಬಂಗಾರ, ಬೆಳ್ಳಿ, ತಾಮ್ರ, ಮತ್ತು ಕಬ್ಬಿಣಗಳು ಆತನ ಭಂಡಾರಕ್ಕೆ ಸೇರಬೇಕಿತ್ತು. ಆರಂಭದಲ್ಲಿ ಆಕಾನನು ಆ ಮಾರ್ಗದರ್ಶನವನ್ನು ಪಾಲಿಸಲು ಉದ್ದೇಶಿಸಿದಿರ್ದಬಹುದು, ಆದರೆ ಲೋಭವು ಅವನನ್ನು ಉರ್ಲಿನಲ್ಲಿ ಹಾಕಿತು. ಯೆರಿಕೋವಿಗೆ ಬಂದೊಡನೆ ಅವನಿಗೆ ಒಂದು ಖರೀದಿಸುವ ಸಂಚಾರಕ್ಕೆ ಬಂದವನಂತೆ ತೋರಿಬಂತು, ಅಲ್ಲಿ ಅವನು ನಂಬಲಾಗದಷ್ಟು ಅಗದ್ಗ, ತನಗೆ ತೀರಾ ಸಮರ್ಪಕವೆಂದು ಕಂಡುಬಂದ ಒಂದು ಸುಂದರ ನಿಲುವಂಗಿ ಸೇರಿದ್ದ ಸರಕುಗಳನ್ನು ಕಂಡನು. ಸಾವಿರಾರು ಡಾಲರುಗಳಷ್ಟು ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿಯನ್ನು ಹೆಕ್ಕಿಕೊಂಡು, ಅವನು ಹೀಗೆ ಯೋಚಿಸಿದಿರ್ದಬಹುದು: ‘ಎಷ್ಟೊಂದು ಐಶ್ವರ್ಯ! ಇದೆಷ್ಟು ಅಗವ್ಗೆಂದರೆ ಬಹಳಮಟ್ಟಿಗೆ ಗಿಟ್ಟಿಸಿಕೊಂಡಂತೆಯೇ ಇದೆ.’ ಅದು ಕಳ್ಳತನದ ಕೃತ್ಯ ಸರಿಯೇ! ಯಾವುದನ್ನು ನಾಶಮಾಡಬೇಕಿತ್ತೋ ಅಥವಾ ಭಂಡಾರಕ್ಕೆ ಸೇರಿಸಬೇಕಿತ್ತೋ ಅದನ್ನು ಆಶಿಸುತ್ತಾ, ಅವನು ದೇವರಿಂದ ಕದ್ದನು, ಮತ್ತು ಅದು ಆಕಾನನಿಗೆ ಜೀವ ನಷ್ಟವನ್ನು ತಂದಿತು. (ಯೆಹೋಶುವ 6:17-19; 7:20-26) ಗೇಹಜಿ ಮತ್ತು ಇಸ್ಕರಿಯೋತ ಯೂದನ ದೃಷ್ಟಾಂತಗಳನ್ನೂ ಗಮನಿಸಿರಿ.—2 ಅರಸು 5:8-27; ಯೋಹಾನ 6:64; 12:2-6.
7 ಮೇಲೆ ತಿಳಿಸಿದ ಮೂವರು ಯೆಹೋವನ ಮಟ್ಟಗಳ ಅರಿವಿಲ್ಲದ ವಿಧರ್ಮಿಗಳಾಗಿರಲಿಲ್ಲವೆಂಬ ನಿಜತ್ವವನ್ನು ನಾವು ಅಲಕ್ಷಿಸಬಾರದು. ಬದಲಿಗೆ ಅವರು, ದೇವರೊಂದಿಗೆ ಒಂದು ಸಮರ್ಪಿತ ಸಂಬಂಧದಲ್ಲಿದ್ದವರು. ದೇವರ ಶಕ್ತಿಯನ್ನು ಮತ್ತು ಆತನ ಅನುಗ್ರಹವನ್ನು ಉಳಿಸಿಕೊಳ್ಳುವ ಮಹತ್ವವನ್ನು ಅವರ ಮೇಲೆ ಪ್ರಭಾವಿಸಿರಬೇಕಿದ್ದ ಅದ್ಭುತಗಳನ್ನು ಅವರೆಲ್ಲರೂ ಕಣ್ಣಾರೆ ಕಂಡಿದ್ದರು. ಆದರೂ, ಲೋಭದ ಉರ್ಲು ಅವರ ಅಧಃಪತನವಾಗಿತ್ತು. ಯಾವುದೇ ವಿಧದ ಲೋಭದ ಉರ್ಲಿಗೆ ಬೀಳುವಂತೆ ನಾವು ನಮ್ಮನ್ನು ಬಿಟ್ಟುಕೊಡುವುದಾದರೆ, ದೇವರೊಂದಿಗಿನ ನಮ್ಮ ಸಂಬಂಧವನ್ನು ನಾವು ಸಹ ಧ್ವಂಸಗೊಳಿಸಬಲ್ಲೆವು. ಲೋಭದ ಯಾವ ಸ್ವರೂಪಗಳು ಅಥವಾ ವಿಧಗಳು ನಮಗೆ ವಿಶೇಷವಾಗಿ ಅಪಾಯಕಾರಿಯಾಗಿರಬಹುದು?
ಐಶ್ವರ್ಯ ಮತ್ತು ಸೊತ್ತುಗಳ ಲೋಭದಿಂದ ಉರ್ಲಿಗೆ ಬಿದ್ದದ್ದು
8. ಐಶ್ವರ್ಯದ ಕುರಿತು ಬೈಬಲ್ ಯಾವ ಎಚ್ಚರಿಕೆಯನ್ನು ಕೊಡುತ್ತದೆ?
8 ಐಶ್ವರ್ಯದಾಶೆಯನ್ನು, ಧನಕ್ಕಾಗಿ ಹಂಬಲವನ್ನು ಬೆಳೆಸಿಕೊಳ್ಳುವ ವಿರುದ್ಧ ಬೈಬಲ್ನ ಸ್ಪಷ್ಟವಾಗಿದ ಎಚ್ಚರಿಕೆಗಳನ್ನು ಹೆಚ್ಚಿನ ಕ್ರೈಸ್ತರು ಕೇಳಿದ್ದಾರೆ. ಮತ್ತಾಯ 6:24-33; ಲೂಕ 12:13-21; ಮತ್ತು 1 ತಿಮೊಥೆಯ 6:9, 10 ರಲ್ಲಿ ಕಂಡುಬರುವ ಅವುಗಳಲ್ಲಿ ಕೆಲವನ್ನು ಯಾಕೆ ಪುನರ್ವಿಮರ್ಶೆ ಮಾಡಬಾರದು? ನೀವು ಅಂಥ ಬುದ್ಧಿವಾದವನ್ನು ಸ್ವೀಕರಿಸುತ್ತೀರಿ ಮತ್ತು ಪಾಲಿಸುತ್ತೀರಿ ಎಂದು ಭಾವಿಸಬಹುದಾದರೂ, ಆಕಾನ, ಗೇಹಜಿ, ಮತ್ತು ಯೂದರು ಸಹ ತಾವು ಅದರೊಂದಿಗೆ ಸಹಮತರೆಂದು ಹೇಳಿದ್ದಿರಬಹುದೆಂಬದು ಸಂಭವನೀಯವಲ್ಲವೇ? ಕೇವಲ ಬೌದ್ಧಿಕ ಸಹಮತವನ್ನು ಮೀರಿ ನಾವು ಹೋಗತಕ್ಕದೆಂಬದು ಸ್ಫುಟ. ಐಶ್ವರ್ಯ ಮತ್ತು ಸೊತ್ತುಗಳ ಲೋಭದ ಉರ್ಲು ನಮ್ಮ ದಿನನಿತ್ಯದ ಜೀವಿತಗಳನ್ನು ಪ್ರಭಾವಿಸದಂತೆ ನಾವು ಜಾಗ್ರತೆ ವಹಿಸಲೇಬೇಕು.
9. ಶಾಪಿಂಗ್ನ ಕಡೆಗೆ ನಮ್ಮ ಮನೋಭಾವವನ್ನು ನಾವೇಕೆ ಪರೀಕ್ಷಿಸಬೇಕು?
9 ದೈನಂದಿನದ ಜೀವನದಲ್ಲಿ ನಮಗೆ ಆಗಿಂದಾಗ್ಗೆ—ಆಹಾರ, ಬಟ್ಟೆ, ಮತ್ತು ಮನೇ ಸಾಮಾನುಗಳನ್ನು—ಖರೀದಿಸಲಿಕ್ಕಿದೆ. (ಆದಿಕಾಂಡ 42:1-3; 2 ಅರಸುಗಳು 12:11, 12; ಜ್ಞಾನೋಕ್ತಿ 31:14, 16; ಲೂಕ 9:13; 17:28; 22:36) ಆದರೆ ವ್ಯಾಪಾರಿ ಜಗತ್ತು ಹೆಚ್ಚು ಮತ್ತು ಹೊಸ ಹೊಸ ವಸ್ತುಗಳಿಗಾಗಿ ಆಶೆಯನ್ನು ಪ್ರಚೋದಿಸುತ್ತದೆ. ವಾರ್ತಾಪತ್ರಗಳನ್ನು, ಪತ್ರಿಕೆಗಳನ್ನು, ಮತ್ತು ಟೀವೀ ಪರದೆಗಳನ್ನು ತುಂಬುವ ಅನೇಕಾನೇಕ ಜಾಹೀರಾತುಗಳು ಲೋಭವನ್ನು ಪ್ರಚೋದಿಸಲಿಕ್ಕಾಗಿ ಮೊಗವಾಡದ ಅಪ್ಪೀಲುಗಳಾಗಿವೆ. ಅಂಥ ಅಪ್ಪೀಲುಗಳು, ರವಿಕೆಗಳು, ಕೋಟುಗಳು, ಅಂಗಿಗಳು, ಮತ್ತು ಸೆಟ್ವರ್ಗಳ ಚೌಕಟ್ಟುಗಳೊಂದಿಗೆ, ಹೊಸ ಪಾದರಕ್ಷೆಗಳು, ಇಲೆಕ್ಟ್ರೊನಿಕ್ ಉಪಕರಣಗಳು ಮತ್ತು ಕ್ಯಾಮೆರಗಳಿರುವ ಷೆಲ್ಫ್ಗಳೊಂದಿಗೆ ಕೂಡಿರುವ ಅಂಗಡಿಗಳಲ್ಲೂ ನೆಲೆಸಿರಬಹುದು. ಕ್ರೈಸ್ತರು ತಮ್ಮನ್ನು ಹೀಗೆ ಕೇಳಿಕೊಳ್ಳ ಬಯಸಬಹುದು, ‘ಶಾಪಿಂಗ್ ಮಾಡುವುದು ನನ್ನ ಜೀವಿತದ ಮುಖ್ಯಾಂಶ ಅಥವಾ ಮುಖ್ಯ ಸುಖಭೋಗವಾಗಿ ಪರಿಣಮಿಸಿದೆಯೇ?’ ‘ನಾನು ವೀಕ್ಷಿಸುವ ಹೊಸ ವಸ್ತುಗಳು ನನಗೆ ನಿಜವಾಗಿಯೂ ಬೇಕೋ, ಇಲ್ಲವೇ ವ್ಯಾಪಾರಿ ಜಗತ್ತು ನನ್ನಲ್ಲಿ ಲೋಭದ ಬೀಜಗಳನ್ನು ಫಲವತ್ತುಮಾಡುತ್ತಿದೆಯೇ?’—1 ಯೋಹಾನ 2:16.
10. ಲೋಭದ ಯಾವ ಉರ್ಲು ವಿಶಿಷ್ಟವಾಗಿ ಪುರುಷರಿಗೆ ಒಂದು ಅಪಾಯವಾಗಿ ಇದೆ?
10 ಶಾಪಿಂಗ್ ಮಾಡುವುದು ಸ್ತ್ರೀಯರಿಗಿರುವ ಒಂದು ಸರ್ವಸಾಮಾನ್ಯ ಉರ್ಲಾಗಿ ತೋರುತ್ತದಾದರೆ, ಹೆಚ್ಚು ಹಣ ಗಳಿಸುವುದು ಅಸಂಖ್ಯಾತ ಪುರುಷರಿಗಿರುವ ಪಾಶವಾಗಿದೆ. ಈ ಉರ್ಲನ್ನು ಯೇಸು, ಒಳ್ಳೇ ಆದಾಯವಿದ್ದರೂ, ‘ನನ್ನ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ತುಂಬಿ’ ಡುವೆನೆಂದು ನಿಶ್ಚೈಸಿದ ಒಬ್ಬ ಐಶ್ವರ್ಯವಂತ ಮನುಷ್ಯನ ವಿಷಯದಲ್ಲಿ ಉದಾಹರಿಸಿದ್ದನು. ಅಪಾಯದ ವಿಷಯದಲ್ಲಿ ಯೇಸು ಯಾವ ಸಂದೇಹವನ್ನೂ ಇಡಲಿಲ್ಲ: “ಎಲ್ಲಾ ಲೋಭಕ್ಕೂ,” ಅಥವಾ ದುರಾಶೆಗೆ, “ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ.” (ಲೂಕ 12:15-21) ನಾವು ಐಶ್ವರ್ಯವಂತರಾಗಿರಲಿ, ಇಲ್ಲದಿರಲಿ, ನಮಗೆ ಆ ಬುದ್ಧಿವಾದವನ್ನು ಪಾಲಿಸಬೇಕು.
11. ಹೆಚ್ಚು ಹಣಕ್ಕಾಗಿರುವ ಲೋಭದಿಂದ ಒಬ್ಬ ಕ್ರೈಸ್ತನು ಉರ್ಲಿಗೆ ಹಾಕಲ್ಪಡಬಹುದು ಹೇಗೆ?
11 ಅಧಿಕ ಹಣಕ್ಕಾಗಿ ಅಥವಾ ಹಣವು ಖರೀದಿಸಬಲ್ಲ ವಸ್ತುಗಳಿಗಾಗಿ ಲೋಭವು, ಹೆಚ್ಚಾಗಿ ಮರೆಯಲ್ಲಿ ಪೋಷಿಸಲ್ಪಡುತ್ತದೆ. ಬೇಗನೆ ಐಶ್ವರ್ಯವಂತರಾಗುವ ಒಂದು ಯೋಜನೆಯು—ಪ್ರಾಯಶಃ ನಷ್ಟದ ಸಂಭವವುಳ್ಳ ಬಂಡವಾಳದ ಮೂಲಕ ಆರ್ಥಿಕ ಭದ್ರತೆಗಾಗಿ—ಜೀವಿತದಲ್ಲೊಮ್ಮೆ ಬರುವ ಅವಕಾಶವಾಗಿ ನೀಡಲ್ಪಡಬಹುದು. ಅಥವಾ ಸಂದೇಹಾಸ್ಪದವಾದ ಅಥವಾ ನ್ಯಾಯಬಾಹಿರ ವ್ಯಾಪಾರ ಪದ್ಧತಿಗಳ ಮೂಲಕ ಹಣ ಸಂಪಾದಿಸುವ ಶೋಧನೆಗೆ ಒಬ್ಬನು ಬೀಳಬಹುದು. ಹೌದು, ಈ ಅತ್ಯಾಶೆಯ ಅಪೇಕ್ಷೆಯು ಅದುಮಿಬಿಡುವ, ಉರ್ಲಿಗೆ ಸಿಕ್ಕಿಸುವ ವಿಷಯವಾಗಿ ಪರಿಣಮಿಸಬಹುದು. (ಕೀರ್ತನೆ 62:10; ಜ್ಞಾನೋಕ್ತಿ 11:1; 20:10) ಕ್ರೈಸ್ತ ಸಭೆಯೊಳಗಿನ ಕೆಲವರು ತಮ್ಮ ಭರವಸಯೋಗ್ಯ ಸಹೋದರರು ಮುಖ್ಯ ಗಿರಾಕಿಗಳಾಗುವರೆಂಬ ನಿರೀಕ್ಷಣೆಯಿಂದ ವ್ಯಾಪಾರಗಳನ್ನು ಆರಂಭಿಸಿರುತ್ತಾರೆ. ಅವರ ಹೇತುವು ಕೇವಲ ಬೇಕಾದ ಉತ್ಪಾದನೆಯನ್ನು ಒದಗಿಸುವುದು ಅಥವಾ ‘ಕೈಯಿಂದ ಯಾವದೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿ’ ದ ಸೇವೆಯು ಆಗಿರುವ ಬದಲಾಗಿ, ಜೊತೆ ಕ್ರೈಸ್ತರ ವೆಚ್ಚದಲ್ಲಿ ತರ್ವೆಯಾಗಿ ಹಣ ಮಾಡುವುದಾಗಿದ್ದರೆ, ಅವರು ಲೋಭದಿಂದಲೇ ಅದನ್ನು ಮಾಡುತ್ತಿದ್ದಾರೆ. (ಎಫೆಸ 4:28; ಜ್ಞಾನೋಕ್ತಿ 20:21; 31:17-19, 24; 2 ಥೆಸಲೊನೀಕ 3:8-12) ಹಣದ ಲೋಭವು ಕೆಲವರನ್ನು ಸೋಡ್ತಿಗಳು, ಕುದುರೆ ಪಂದ್ಯಗಳ, ಅಥವಾ ಲಾಟರಿಗಳ ಮೂಲಕ ಜೂಜಾಟಕ್ಕೆ ನಡಿಸಿದೆ. ಇನ್ನು ಕೆಲವರು ಅನುಭೂತಿ ಮತ್ತು ವಿವೇಚನೆಯನ್ನು ದುರ್ಲಕ್ಷಿಸಿ, ದೊಡ್ಡ ದಂಡ ಅಥವಾ ಹಣ ಫೈಸಲು ದೊರೆಯುವ ನಿರೀಕ್ಷೆಗಳಲ್ಲಿ ಅವಸರದಿಂದ ವ್ಯಾಜ್ಯಗಳನ್ನು ಹೂಡಿರುತ್ತಾರೆ.
12. ಐಶ್ವರ್ಯದ ಲೋಭವನ್ನು ಜಯಿಸಸಾಧ್ಯವಿದೆಂದು ನಮಗೆ ತಿಳಿದಿದೆಯೇಕೆ?
12 ಲೋಭವು ನಮ್ಮಲ್ಲಿ ಕಾರ್ಯನಡಿಸುತ್ತಿರಬಹುದೋ ಇಲ್ಲವೋ ಎಂದು ನಾವು ಪ್ರಾಮಾಣಿಕತೆಯಿಂದ ಕಾಣಶಕ್ತರಾಗುವಂತೆ, ಮೇಲಿನ ಕ್ಷೇತ್ರಗಳಲ್ಲಿ ಆತ್ಮ ಪರೀಕ್ಷಣೆಯು ಯುಕ್ತವಾಗಿದೆ. ಅದು ಒಂದುವೇಳೆ ಕಾರ್ಯನಡಿಸುತ್ತಿದ್ದರೂ, ನಾವು ಬದಲಾಗಬಲ್ಲೆವು. ಜಕ್ಕಾಯನು ಬದಲಾದನೆಂಬದನ್ನು ಜ್ಞಾಪಕಕ್ಕೆ ತನ್ನಿರಿ. (ಲೂಕ 19:1-10) ಐಶ್ವರ್ಯದ ಅಥವಾ ಸೊತ್ತುಗಳ ಲೋಭವು ಒಂದು ಸಮಸ್ಯೆಯಾಗಿರುವುದಾಗಿ ಯಾವನಾದರೂ ಕಂಡರೆ, ಆ ಉರ್ಲಿನಿಂದ ಪಾರಾಗಲು ಅವನ ದೃಢ ನಿಶ್ಚಯವು ಜಕ್ಕಾಯನ ಹಾಗೆ ಇರಬೇಕು.—ಯೆರೆಮೀಯ 17:9.
ಜೀವಿತದ ಇತರ ಸ್ಥಿತಿಗಳಲ್ಲಿ ಲೋಭ
13. ಲೋಭದ ಬೇರೆ ಯಾವ ಉರ್ಲನ್ನು ಕೀರ್ತನೆ 10:18 ನಮ್ಮ ಗಮನಕ್ಕೆ ತರುತ್ತದೆ?
13 ಕೆಲವರು ಲೋಭದ ಅಪಾಯವನ್ನು, ಅದು ತೋರಿಬರುವ ಬೇರೆ ವಿಧಾನಗಳಿಗಿಂತ ಹಣದ ಮತ್ತು ಸೊತ್ತಿನ ಸಂಬಂಧದಲ್ಲಿ ಹೆಚ್ಚು ಸುಲಭವಾಗಿ ಕಾಣುತ್ತಾರೆ. ಗ್ರೀಕ್ನ ಒಂದು ಶಬ್ದಕೋಶವು ಹೇಳುವುದೇನಂದರೆ “ಲೋಭ” ಅಥವಾ “ದುರಾಶೆ” ಎಂದು ತರ್ಜುಮೆಯಾದ ಪದ ಸಮೂಹಕ್ಕೆ, “ಅಧಿಕಾರವೇ ಮುಂತಾದ ಸಂಬಂಧದಲ್ಲಿ ಹಾಗೂ ಆಸ್ತಿಯ ಸಂಬಂಧದಲ್ಲಿ ‘ಹೆಚ್ಚನ್ನು ಆಶಿಸುವ’ ಅರ್ಥವಿದೆ.” ಹೌದು, ಇತರರ ಮೇಲೆ ಅಧಿಕಾರ ನಡಿಸುವ, ಪ್ರಾಯಶಃ ನಮ್ಮ ಅಧಿಕಾರದ ಕೆಳಗೆ ಅವರು ನಡುಗುವಂತೆ ಮಾಡಲು ಲೋಭದಿಂದ ಬಯಸುವ ಒಂದು ಪಾಶದೊಳಗೆ ನಾವು ಬೀಳಸಾಧ್ಯವಿದೆ.—ಕೀರ್ತನೆ 10:18.
14. ಅಧಿಕಾರಕ್ಕಾಗಿ ಆಶೆಯು ಯಾವ ಕ್ಷೇತ್ರಗಳಲ್ಲಿ ಅಪಾಯಕರವಾಗಿರುತ್ತದೆ?
14 ಆರಂಭದ ಕಾಲದಿಂದಲೂ ಅಸಂಪೂರ್ಣ ಮಾನವರು ಇತರರ ಮೇಲೆ ಅಧಿಕಾರ ನಡಿಸುವುದರಲ್ಲಿ ಆನಂದಿಸಿದ್ದಾರೆ. ಅನೇಕ ಗಂಡಂದಿರು ತಮ್ಮ ಪತ್ನಿಯರ ಮೇಲೆ “ಒಡೆತನ” ನಡಿಸುವುದು ಮಾನವ ಪಾಪದ ಒಂದು ಶೋಚನೀಯ ಪರಿಣಾಮವಾಗಿರುವುದನ್ನು ದೇವರು ಮುನ್ನೋಡಿದ್ದನು. (ಆದಿಕಾಂಡ 3:16) ಈ ಲೋಪವಾದರೋ ದಾಂಪತ್ಯ ದೃಶ್ಯಕ್ಕಿಂತ ಆಚೇಕಡೆ ವಿಸ್ತರಿಸಲ್ಪಟ್ಟಿದೆ. ಸಾವಿರಾರು ವರ್ಷಗಳ ತರುವಾಯ, ಒಬ್ಬ ಬೈಬಲ್ ಲೇಖಕನು, “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು” ಮಾಡಿದ್ದಾನೆಂಬದನ್ನು ಗಮನಿಸಿದನು. (ಪ್ರಸಂಗಿ 8:9) ರಾಜಕೀಯ ಮತ್ತು ಮಿಲಿಟರಿ ವಿಷಯಗಳಲ್ಲಿ ಅದೆಷ್ಟು ಸತ್ಯವಾಗಿದೆ ಎಂಬದು ನಿಮಗೆ ತಿಳಿದಿರುವುದು ಸಂಭವನೀಯ, ಆದರೆ ನಮ್ಮ ಸ್ವಂತ ಪ್ರಭಾವದ ಕ್ಷೇತ್ರದಲ್ಲಿ, ಹೆಚ್ಚು ವೈಯಕ್ತಿಕ ಅಧಿಕಾರಕ್ಕಾಗಿ ಅಥವಾ ಹತೋಟಿಗಾಗಿ ನಾವು ಪ್ರಯಾಸಪಡುತ್ತಿರ ಸಾಧ್ಯವಿದೆಯೋ?
15, 16. ಹೆಚ್ಚು ಅಧಿಕಾರದ ಆಶೆಯಿಂದಾಗಿ ಒಬ್ಬ ಕ್ರೈಸ್ತನು ಯಾವ ರೀತಿಗಳಲ್ಲಿ ಉರ್ಲಿಗೆ ಬೀಳಬಹುದು? (ಫಿಲಿಪ್ಪಿ 2:3)
15 ನಾವೆಲ್ಲರೂ—ನಮ್ಮ ಹತ್ತಿರದ ಅಥವಾ ದೂರದ ಕುಟುಂಬಗಳಲ್ಲಿ, ನಮ್ಮ ಐಹಿಕ ಕೆಲಸದಲ್ಲಿ ಅಥವಾ ಶಾಲೆಯಲ್ಲಿ, ಸ್ನೇಹಿತರ ನಡುವೆ, ಮತ್ತು ಸಭೆಯಲ್ಲಿ—ಇತರ ಮಾನವರ ಸಂಬಂಧಕ್ಕೆ ಬರುತ್ತೇವೆ. ಪ್ರಾಸಂಗಿಕವಾಗಿ ಅಥವಾ ಆಗಿಂದಾಗ್ಗೆ, ಏನು ಮಾಡಲ್ಪಡಬೇಕು, ಹಾಗೂ ಹೇಗೆ ಮತ್ತು ಯಾವಾಗ ಮಾಡಲ್ಪಡಬೇಕು ಎಂಬದನ್ನು ನಿರ್ಣಯಿಸುವ ಒಂದು ಪಾತ್ರವು ನಮಗಿರಬಹುದು. ಅದು ತನ್ನಲ್ಲಿ ತಾನೇ ತಪ್ಪಲ್ಲ ಅಥವಾ ಕೆಟ್ಟದಲ್ಲ. ಆದರೂ, ನಮಗಿರಬಹುದಾದ ಯಾವುದೇ ಅಧಿಕಾರವನ್ನು ಉಪಯೋಗಿಸುವುದರಲ್ಲಿ ಅತಿರೇಕವಾಗಿ ನಾವು ಆನಂದಿಸುತ್ತೇವೋ? ಕೊನೆಯ ನಿರ್ಣಯವನ್ನು ನಾವೇ ಮಾಡುವುದು ನಮಗಿಷ್ಟವೋ ಮತ್ತು ನಾವದನ್ನು ಹೆಚ್ಚೆಚ್ಚಾಗಿ ಬಯಸುವುದು ಸಾಧ್ಯವೋ? ಲೌಕಿಕ ಮ್ಯಾನೇಜರುಗಳು ಮತ್ತು ಧಣಿಗಳು, ಯಾವ ಭಿನ್ನಾಭಿಪ್ರಾಯಗಳನ್ನೂ ಸೂಚಿಸದ ಮತ್ತು ತಮ್ಮ ಮೇಲಧಿಕಾರಿಗಳ ಐಹಿಕ ಅಧಿಕಾರದ ಹಂಬಲ (ಲೋಭ) ಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ ಹೌದಪ್ಪಗಳಿಂದ ತಮ್ಮನ್ನು ಸುತ್ತುವರಿಸಿಕೊಳ್ಳುವ ಮೂಲಕ, ಆಗಿಂದಾಗ್ಗೆ ಈ ಮನೋಭಾವವನ್ನು ಪ್ರದರ್ಶಿಸುತ್ತಾರೆ.
16 ಜೊತೆ ಕ್ರೈಸ್ತರೊಂದಿಗೆ ವ್ಯವಹರಿಸುವಲ್ಲಿ ವರ್ಜಿಸಬೇಕಾದ ಒಂದು ಉರ್ಲು ಇದಾಗಿದೆ. ಯೇಸುವಂದದ್ದು: “ಜನಗಳನ್ನಾಳುವವರು ಅವರ ಮೇಲೆ ಅಹಂಕಾರದಿಂದ ದೊರೆತನಮಾಡುತ್ತಾರೆ, ಮತ್ತು ದೊಡ್ಡವರು ಬಲಾತ್ಕಾರದಿಂದ ಅಧಿಕಾರನಡಿಸುತ್ತಾರೆ ಎಂದು ನೀವು ಬಲ್ಲಿರಷ್ಟೆ. ನಿಮ್ಮಲ್ಲಿ ಹಾಗಿರಬಾರದು; ಆದರೆ ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು.” (ಮತ್ತಾಯ 20:25, 26) ಕ್ರೈಸ್ತ ಹಿರಿಯರು ಒಬ್ಬರೊಂದಿಗೊಬ್ಬರು, ಶುಶ್ರೂಷಕ ಸೇವಕರೊಂದಿಗೆ ಮತ್ತು ಹಿಂಡಿನೊಂದಿಗೆ ವ್ಯವಹರಿಸುವಾಗ ಅಂಥ ದೀನತೆಯು ತೋರಿಬರಬೇಕು. ಉದಾಹರಣೆಗಾಗಿ, ಕೇವಲ ಚಿಕ್ಕ ಪುಟ್ಟ ವಿಷಯಗಳಿಗಾಗಿ ಮಾತ್ರವೇ ಜೊತೆ ಹಿರಿಯರನ್ನು ಸಂಪರ್ಕಿಸುವ ಆದರೆ ಎಲ್ಲಾ ಮುಖ್ಯ ನಿರ್ಣಯಗಳನ್ನು ತಾನಾಗಿಯೇ ಮಾಡುವ ಒಬ್ಬ ಅಧ್ಯಕ್ಷ ಮೇಲ್ವಿಚಾರಕನಿಂದ, ಅಧಿಕಾರಕ್ಕಾಗಿ ಆಶೆಯು ಪ್ರತಿಬಿಂಬಿಸಲ್ಪಡಬಹುದೋ? ಕೆಲಸಗಳನ್ನು ವಹಿಸಿಕೊಡಲು ಅವನು ನಿಜವಾಗಿಯೂ ಮನಸ್ಸುಳ್ಳವನಾಗಿದ್ದಾನೋ? ಒಬ್ಬ ಶುಶ್ರೂಷ ಸೇವಕನು ಕ್ಷೇತ್ರ ಸೇವೆಗಾಗಿ ಒಂದು ಕೂಟವನ್ನು ನಿರ್ವಹಿಸುವಾಗ, ತನ್ನ ಏರ್ಪಾಡುಗಳಲ್ಲಿ ಅಸಮಂಜಸವಾಗಿ ನಿರ್ಬಂಧಪಡಿಸುವವನಾಗಿ, ನಿಯಮಗಳನ್ನು ಸಹ ಮಾಡುವವನಾಗಿಯೂ ಇದ್ದರೆ ಸಮಸ್ಯೆಗಳು ಉಂಟಾಗಬಹುದು.—1 ಕೊರಿಂಥ 4:21; 9:18; 2 ಕೊರಿಂಥ 10:8; 13:10; 1 ಥೆಸಲೊನೀಕ 2:6, 7.
17. ಲೋಭದ ಉರ್ಲಿನ ಕುರಿತು ಚರ್ಚಿಸುವಾಗ, ಆಹಾರದ ಕುರಿತು ಪರಿಗಣಿಸುವುದೇಕೆ ಯುಕ್ತವಾಗಿದೆ?
17 ಲೋಭದಿಂದ ಅನೇಕರು ಉರ್ಲಿಗೆ ಬೀಳುವ ಇನ್ನೊಂದು ಕ್ಷೇತ್ರವು ಆಹಾರವಾಗಿದೆ. ತಿನ್ನುವುದರಲ್ಲಿ ಮತ್ತು ಕುಡಿಯುವುದರಲ್ಲಿ ಆನಂದವನ್ನು ಕಂಡುಕೊಳ್ಳುವುದು ಸ್ವಾಭಾವಿಕವಾಗಿದೆ ನಿಶ್ಚಯ; ಅದರ ಕುರಿತು ಸಮ್ಮತಿಪೂರ್ವಕವಾಗಿ ಬೈಬಲು ಮಾತಾಡುತ್ತದೆ. (ಪ್ರಸಂಗಿ 5:18) ಆದರೂ, ಈ ಸಂಬಂಧದಲ್ಲಿ ಒಂದು ಆಶೆಯು ಒಂದು ಕಾಲಾವಧಿಯ ತನಕ ಬೆಳೆಯುತ್ತಾ, ಯಾವುದು ಸಮಂಜಸವಾಗಿ ಆನಂದದಾಯಕವೂ ಮತ್ತು ಸಂತುಷ್ಟಿಕರವೂ ಅದಕ್ಕಿಂತಲೂ ಎಷ್ಟೋ ಹೆಚ್ಚು ಅತೀತವಾಗಿ ವಿಸ್ತರಿಸುವುದೇನೂ ಅಸಾಮಾನ್ಯವಲ್ಲ. ದೇವರ ಸೇವಕರು ಚಿಂತಿತರಾಗಿರಬೇಕಾದ ಒಂದು ಕ್ಷೇತ್ರವು ಇದಾಗಿರದಿದ್ದರೆ, “ಕುಡುಕರಲ್ಲಿಯೂ ಅತಿಮಾಂಸಭಕ್ಷಕರಲ್ಲಿಯೂ ಸೇರದಿರು,” ಎಂದು ಯೆಹೋವನ ವಾಕ್ಯವು ಜ್ಞಾನೋಕ್ತಿ 23:20 ರಲ್ಲಿ ಹೇಳುವುದೇತಕ್ಕೆ? ಆದರೂ, ನಾವೀ ಉರ್ಲನ್ನು ವರ್ಜಿಸುವುದು ಹೇಗೆ?
18. ಆಹಾರ ಮತ್ತು ಪಾನದ ಕುರಿತು ಯಾವ ಆತ್ಮ-ಪರೀಕ್ಷಣೆಯನ್ನು ನಾವು ಮಾಡಬಹುದು?
18 ತನ್ನ ಜನರು ಕೆಲವು ಕಟ್ಟುನಿಟ್ಟಿನ ಆಹಾರ ಪಥ್ಯೆಯಿಂದ ಪೋಷಿಸಿಕೊಳ್ಳಬೇಕೆಂದು ದೇವರು ಸೂಚಿಸುವುದಿಲ್ಲ. (ಪ್ರಸಂಗಿ 2:24, 25) ಆದರೆ, ಆಹಾರ ಮತ್ತು ಪಾನವನ್ನು ನಮ್ಮ ಸಂಭಾಷಣೆ ಮತ್ತು ಯೋಜನೆಯ ಒಂದು ಪ್ರಧಾನ ಭಾಗವಾಗಿ ಮಾಡುವುದನ್ನೂ ಆತನು ಸಮ್ಮತಿಸುವುದಿಲ್ಲ. ನಾವು ನಮ್ಮನ್ನು ಹೀಗೆ ಕೇಳಿಕೊಳ್ಳಬಹುದು, ‘ನಾನು ಉಂಡ ಅಥವಾ ಉಣ್ಣಲು ಯೋಜಿಸುವ ಒಂದು ಊಟವನ್ನು ವರ್ಣಿಸುವಾಗ ಆಗಿಂದಾಗ್ಗೆ ಅತಿರೇಕ ಉತ್ಸಾಹಪಡುತ್ತೇನೋ?’ ‘ನಾನು ಯಾವಾಗಲೂ ಆಹಾರ ಮತ್ತು ಪಾನದ ಕುರಿತು ಮಾತಾಡುತ್ತೇನೋ?’ ನಾವು ತಯಾರಿಸದ ಅಥವಾ ಹಣಕೊಡದ ಒಂದು ಊಟಕ್ಕೆ, ಪ್ರಾಯಶಃ ಇನ್ನೊಬ್ಬರ ಮನೆಯಲ್ಲಿ ಅತಿಥಿಯಾಗಿರುವಾಗ ಅಥವಾ ಕ್ರೈಸ್ತ ಸಮ್ಮೇಳನದಲ್ಲಿ ಊಟವು ದೊರಕುವಾಗ, ನಾವು ಹೇಗೆ ಪ್ರತಿಕ್ರಿಯಿಸುತ್ತೇವೆಂಬದು ಇನ್ನೊಂದು ಸೂಚಕವಾಗಿರಬಹುದು. ಆಗ ನಾವು ಎಂದಿಗಿಂತಲೂ ಎಷ್ಟೋ ಹೆಚ್ಚು ತಿನ್ನುವ ಪ್ರವೃತ್ತಿಯುಳ್ಳವರಾಗಿರಬಹುದೋ? ಏಸಾವನು ತನ್ನ ಶಾಶ್ವತ ಹಾನಿಗಾಗಿ, ಆಹಾರವು ಅಯುಕ್ತ ಮಹತ್ವವನ್ನು ಪಡೆಯುವಂತೆ ಅನುಮತಿಸಿದನೆಂಬದು ನಮಗೆ ನೆನಪಿದೆ.—ಇಬ್ರಿಯ 12:16.
19. ಲೈಂಗಿಕ ಸುಖದ ಸಂಬಂಧದಲ್ಲಿ ಲೋಭವು ಒಂದು ಸಮಸ್ಯೆಯಾಗಿರ ಸಾಧ್ಯವಿದೆ ಹೇಗೆ?
19 ಪೌಲನು ಇನ್ನೊಂದು ಉರ್ಲಿನ ಒಳನೋಟವನ್ನು ನಮಗೆ ಕೊಡುತ್ತಾನೆ: “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ [ಲೋಭ, NW] ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು.” (ಎಫೆಸ 4:17-19; 5:3) ಲೈಂಗಿಕ ಸುಖಕ್ಕಾಗಿ ಲೋಭವು ವಿಕಾಸಗೊಳ್ಳಬಲ್ಲದು ನಿಶ್ಚಯ. ಈ ಸುಖಕ್ಕೆ, ವಿವಾಹದ ಬಂಧಗಳೊಳಗೆ ಒಂದು ತಕ್ಕದಾದ ವ್ಯಕ್ತಪಡಿಸುವಿಕೆಯು ನಿಶ್ಚಯವಾಗಿಯೂ ಇದೆ. ಈ ಸುಖದೊಂದಿಗೆ ಜತೆಗೂಡಿರುವ ಆಪ್ತ ಪ್ರೇಮವು ಗಂಡ ಮತ್ತು ಹೆಂಡತಿಗೆ ವಿವಾಹದ ಅನೇಕ ವರ್ಷಗಳಲ್ಲಿ ಒಬ್ಬರಿಗೊಬ್ಬರು ಅನುರಕ್ತರಾಗಿ ಉಳಿಯುವಂತೆ ಸಹಾಯ ಮಾಡುವುದರಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ. ಆದರೂ, ಯಾವುದು ಪೌಲನು ತಿಳಿಸಿದ ಲೋಭದ ಒಂದು ಪ್ರತಿಫಲನವೋ ಅದನ್ನು ಒಂದು ಯಥಾ ಸ್ಥಿತಿಯಾಗಿ ನೀಡುತ್ತಾ, ಇಂದಿನ ಲೋಕವು ಲೈಂಗಿಕತೆಯ ಮೇಲೆ ಅತಿರೇಕ ಒತ್ತನ್ನು ಹಾಕಿದೆ ಎಂಬದನ್ನು ಅಲ್ಲಗಳೆಯುವವರು ಕೊಂಚ ಜನ. ಇಂದಿನ ಅನೇಕ ಚಲನ ಚಿತ್ರಗಳಲ್ಲಿ, ವಿಡಿಯೊಗಳಲ್ಲಿ, ಪತ್ರಿಕೆಗಳಲ್ಲಿ, ಮತ್ತು ಮನೋರಂಜನೆಯ ಸ್ಥಳಗಳಲ್ಲಿಯೂ ಸರ್ವಸಾಮಾನ್ಯವಾಗಿರುವ ಅನೈತಿಕತೆ ಮತ್ತು ನಗ್ನತೆಗೆ ಯಾರು ತಮ್ಮನ್ನು ಬಯಲುಪಡಿಸುತ್ತಾರೋ ಅವರಿಂದ ವಿಶೇಷವಾಗಿ, ಲೈಂಗಿಕ ಸುಖದ ಅಂಥ ಒಂದು ತಪ್ಪು ನೋಟವು ಸುಲಭವಾಗಿ ಸ್ವೀಕರಿಸಲ್ಪಡುತ್ತದೆ.
20. ಲೈಂಗಿಕ ವಿಷಯಗಳಲ್ಲಿ ಅತ್ಯಾಶೆಯ ಅಪಾಯಕ್ಕೆ ಕ್ರೈಸ್ತರು ತಮ್ಮನ್ನು ಎಚ್ಚರವುಳ್ಳವರಾಗಿ ಹೇಗೆ ತೋರಿಸಬಲ್ಲರು?
20 ಲೈಂಗಿಕ ಲೋಭದ ಉರ್ಲಿನಿಂದ ದೇವರ ಸೇವಕರಲ್ಲೊಬ್ಬನು ಸಿಕ್ಕಿಸಲ್ಪಡಬಲ್ಲನೆಂಬದನ್ನು ಬತ್ಷೆಬೆಯೊಂದಿಗೆ ದಾವೀದನು ಗೈದ ಪಾಪದ ವೃತ್ತಾಂತವು ತೋರಿಸುತ್ತದೆ. ತನ್ನ ಸ್ವಂತ ವಿವಾಹದೊಳಗೆ ಸುಖವನ್ನು ಆನಂದಿಸಲು ಅವನು ಸ್ವತಂತ್ರನಿದ್ದರೂ, ನಿಷಿದ್ಧ ಲೈಂಗಿಕ ಆಶೆಯು ಬೆಳೆಯುವಂತೆ ದಾವೀದನು ಬಿಟ್ಟುಕೊಟ್ಟನು. ಊರೀಯನ ಪತ್ನಿಯು ಎಷ್ಟು ಆಕರ್ಷಕಳಿದ್ದಳೆಂಬದನ್ನು ಗಮನಿಸುತ್ತಾ, ಅವಳೊಂದಿಗೆ ನ್ಯಾಯವಿರುದ್ದ ಸುಖವನ್ನು ಕಂಡುಕೊಳ್ಳಲು ತನ್ನ ಯೋಚನೆ—ಮತ್ತು ಕೃತ್ಯ—ಕ್ಕೆ ಲಗಾಮು ಸಡಿಲಬಿಟ್ಟನು. (2 ಸಮುವೇಲ 11:2-4; ಯಾಕೋಬ 1:14, 15) ಖಂಡಿತವಾಗಿಯೂ ನಾವು ಈ ರೀತಿಯ ಲೋಭವನ್ನು ವರ್ಜಿಸಬೇಕು. ವಿವಾಹದೊಳಗೆ ಸಹ ಈ ಅತ್ಯಾಶೆಯನ್ನು ವರ್ಜಿಸುವುದು ಯುಕ್ತವಾಗಿದೆ. ಇದರಲ್ಲಿ ಅತಿರೇಕ ಲೈಂಗಿಕ ಪದ್ಧತಿಗಳನ್ನು ತಿರಸ್ಕರಿಸುವುದು ಸೇರಿರುವುದು. ಈ ಕ್ಷೇತ್ರದಲ್ಲಿ ಅತ್ಯಾಶೆಯನ್ನು ವರ್ಜಿಸಲು ನಿರ್ಧರಿಸಿರುವ ಒಬ್ಬ ಗಂಡನು ತನ್ನ ಸಂಗಾತಿಯಲ್ಲಿ ನಿಜವಾಗಿ ಆಸಕ್ತನಿರುವನು, ಹೀಗೆ ಅವರಿಬ್ಬರು ಕುಟುಂಬ ಯೋಜನೆಯ ಕುರಿತು ಮಾಡಿದ ಯಾವುದೇ ಆಯ್ಕೆಯು, ಪತ್ನಿಯ ಪ್ರಸ್ತುತ ಮತ್ತು ಭವಿಷ್ಯದ ಆರೋಗ್ಯಕ್ಕಿಂತ ಅವನ ಸುಖವನ್ನು ಹೆಚ್ಚು ಮಹತ್ವದ್ದಾಗಿ ಮಾಡದು.—ಫಿಲಿಪ್ಪಿ 2:4.
ಲೋಭವನ್ನು ವರ್ಜಿಸುವುದಕ್ಕೆ ನಿರ್ಧಾರವುಳ್ಳವರಾಗಿ ಇರ್ರಿ
21. ಲೋಭದ ಕುರಿತಾದ ನಮ್ಮ ಚರ್ಚೆಯು ನಮ್ಮನ್ನು ನಿರುತ್ತೇಜನಗೊಳಿಸಬಾರದೇಕೆ?
21 ಯೆಹೋವನು ಮುಂಜಾಗ್ರತೆ ಯಾ ಎಚ್ಚರಿಕೆಗಳನ್ನು ಕೊಡುವುದು ಯಾವುದೇ ಅಪನಂಬಿಕೆಯಿಂದಲ್ಲ. ಅವನ ಮೀಸಲಾದ ಸೇವಕರು ಅವನನ್ನು ನಿಷ್ಠೆಯಿಂದ ಸೇವಿಸಬಯಸುತ್ತಾರೆಂದು ಅವನಿಗೆ ಗೊತ್ತಿದೆ, ಮತ್ತು ಅಧಿಕ ಸಂಖ್ಯಾತರು ಅದನ್ನು ಮಾಡುವುದನ್ನು ಮುಂದರಿಸುವರೆಂಬ ಭರವಸೆಯು ಆತನಿಗಿದೆ. ಆತನು ತನ್ನ ಜನರ ವಿಷಯವಾಗಿ ಒಟ್ಟುಗಟ್ಟಳೆಯಾಗಿ, ಸೈತಾನನೊಂದಿಗೆ ಮಾತಾಡುವಾಗ ಯೋಬನ ಕುರಿತಾಗಿ ಹೇಳಿದ ತದ್ರೀತಿಯ ಒಂದು ಅಭಿವ್ಯಂಜಕವನ್ನು ಮಾಡಬಲ್ಲನು: “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ.” (ಯೋಬ 1:8) ನಮ್ಮ ಪ್ರೀತಿಯುಳ್ಳ, ಭರವಸೆಯುಳ್ಳ ಸ್ವರ್ಗೀಯ ತಂದೆಯು, ಲೋಭದ ವಿಧಾನಗಳಿಗೆ ಸಂಬಂಧಿಸಿದಂಥ ಅಪಾಯಕರ ಉರ್ಲುಗಳಿಗೆ ನಮ್ಮನ್ನು ಎಚ್ಚರಿಸುತ್ತಾನೆ ಯಾಕಂದರೆ ನಾವು ಆತನಿಗೆ ನಿಷ್ಕಳಂಕರೂ ನಂಬಿಗಸ್ತರೂ ಆಗಿ ಮುಂದರಿಯುವಂತೆ ಆತನು ಬಯಸುತ್ತಾನೆ.
22. ನಮ್ಮ ಅಧ್ಯಯನವು ವೈಯಕ್ತಿಕ ಅಪಾಯದ ಅಥವಾ ಬಲಹೀನತೆಯ ಒಂದು ಕ್ಷೇತ್ರವನ್ನು ತೋರಿಸಿದ್ದಾದರೆ ನಾವೇನು ಮಾಡಬೇಕು?
22 ನಮ್ಮಲ್ಲಿ ಪ್ರತಿಯೊಬ್ಬರು ಲೋಭದ ಯಾವುದಾದರೂ ಒಂದು ರೂಪದ ಕಡೆಗೆ ಒಂದು ಪ್ರವೃತ್ತಿಯನ್ನು ಬಾಧ್ಯವಾಗಿ ಹೊಂದಿದ್ದೇವೆ ಅಥವಾ ಈ ದುಷ್ಟ ಲೋಕದ ಪ್ರಭಾವದ ಕೆಳಗೆ ಅಂತಹದನ್ನು ಅಧಿಕ ವಿಕಸಿಸಿಕೊಂಡಿದ್ದೇವೆ. ಲೋಭದ ಕುರಿತಾದ ನಮ್ಮ ಅಧ್ಯಯನದಲ್ಲಿ—ಐಶ್ವರ್ಯ, ಸೊತ್ತುಗಳು, ಶಕ್ತಿ ಮತ್ತು ಅಧಿಕಾರ, ಆಹಾರ, ಅಥವಾ ಲೈಂಗಿಕ ಸುಖ—ಇವುಗಳಲ್ಲಿ ಬಲಹೀನತೆಯ ಒಂದು ಕ್ಷೇತ್ರವನ್ನು ನೀವು ಕಂಡಲ್ಲಿ ಆಗೇನು? ಆಗ ಯೇಸುವಿನ ಸಲಹೆಯನ್ನು ಹೃದಯಕ್ಕೆ ತಕ್ಕೊಳ್ಳಿರಿ: “ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕತ್ತರಿಸಿ ಬಿಡು; ಎರಡು ಕೈಯುಳ್ಳವನಾಗಿ ಗೆಹೆನ್ನಾದಲ್ಲಿ ಬೀಳುವದಕ್ಕಿಂತ ಕೈಕಳಕೊಂಡವನಾಗಿ ಜೀವದಲ್ಲಿ ಸೇರುವದು ನಿನಗೆ ಉತ್ತಮ.” (ಮಾರ್ಕ 9:43, NW) ಮನೋಭಾವನೆಗಳಲ್ಲಿ ಮತ್ತು ಅಭಿರುಚಿಗಳಲ್ಲಿ ಆವಶ್ಯಕವಾದ ಯಾವುದೇ ಬದಲಾವಣೆಗಳನ್ನು ಮಾಡಿರಿ. ಲೋಭದ ಮಾರಕ ಉರ್ಲನ್ನು ವರ್ಜಿಸಿರಿ. ಹೀಗೆ ದೇವರ ಸಹಾಯದೊಂದಿಗೆ ನೀವು “ಜೀವದಲ್ಲಿ ಸೇರ” ಬಹುದು.
ನಾನೇನನ್ನು ಕಲಿತೆನು?
▫ ಲೋಭದ ಉರ್ಲಿನ ಕುರಿತು ನಾವೇಕೆ ಚಿಂತಿತರಾಗಿರಬೇಕು?
▫ ಯಾವ ವಿಧಗಳಲ್ಲಿ ಐಶ್ವರ್ಯ ಅಥವಾ ಸೊತ್ತುಗಳ ಲೋಭವು ನಮ್ಮನ್ನು ಉರ್ಲಿಗೆ ಹಾಕಬಹುದು?
▫ ಜೀವನದ ಬೇರೆ ಕ್ಷೇತ್ರಗಳಲ್ಲಿ ಲೋಭವು ಹೇಗೆ ನಿಜ ಅಪಾಯಗಳನ್ನು ಮುಂತರಬಹುದು?
▫ ಲೋಭದ ಸಂಬಂಧದಲ್ಲಿ ನಮಗಿರುವ ಯಾವುದೇ ಬಲಹೀನತೆಯ ಕುರಿತು ನಮ್ಮ ಮನೋಭಾವನೆ ಹೇಗಿರಬೇಕು?