ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಒಬ್ಬ ಯುವ ರೈಲ್ವೆ ಅತ್ಯುತ್ಸಾಹಿ ಸತ್ಯ ಕಲಿಯುತ್ತಾನೆ
ಒಬ್ಬ ವ್ಯಕ್ತಿಯ ಹೃದಯವು ನೀತಿಯ ಕಡೆಗೆ ಓಲಿದ್ದರೆ, ಯೆಹೋವ ದೇವರು ಕ್ರಿಸ್ತ ಯೇಸುವನ್ನು ಮತ್ತು ಸ್ವರ್ಗ ದೂತರನ್ನು ಉಪಯೋಗಿಸಿ, ಅಂಥ ಕುರಿಸದೃಶ ವ್ಯಕ್ತಿಯು ಕಟ್ಟಕಡೆಗೆ ರಾಜ್ಯದ ಸುವಾರ್ತೆಯೊಂದಿಗೆ ಸಂಪರ್ಕಿಸಲ್ಪಡುವಂತೆ ನೋಡಿಕೊಳ್ಳುವನು. ತಕ್ಕ ಸಮಯದಲ್ಲಿ ಆ ವ್ಯಕ್ತಿಯು ಯೇಸುವಿನ ಅನುಗ್ರಹದ ಬಲಗಡೆಗೆ ಬರಬಹುದು. (ಮತ್ತಾಯ 25:31-33) ಒಂದು ಅಸದೃಶ ರೀತಿಯಲ್ಲಿ ಸತ್ಯದ ಪರಿಚಯಕ್ಕೆ ಬಂದ ಆಸ್ಟ್ರಿಯದ ಒಬ್ಬ ಯುವ ರೈಲ್ವೆ ಅತ್ಯುತ್ಸಾಹಿಯ ವಿಷಯದಲ್ಲಿ ಇದು ಸತ್ಯವಾಗಿದೆ.
ಈ ಯುವಕನ ಅತ್ಯಂತ ರೋಮಾಂಚಕ ಹವ್ಯಾಸದ ಭಾಗವು, ರೈಲ್ವೆ ಮೇಲ್ವಿಚಾರದ ಅನುಮತಿಯೊಂದಿಗೆ ಆವಿಯೆಂಜಿನುಗಳ ಬಂಡಿಯಲ್ಲಿ ಸವಾರಿ ಮಾಡುವುದೇ. ತನ್ನ ಪ್ರತಿ ಸಂಚಾರವನ್ನು ತನ್ನ ಮನೆಯಲ್ಲಿ ಪುನಃ ವೀಕ್ಷಿಸಲಾಗುವಂತೆ, ಅವನು ತನ್ನ ವಿಡಿಯೊ ಕ್ಯಾಮೆರದಲ್ಲಿ ಅದನ್ನು ರೆಕಾರ್ಡ್ ಮಾಡುತ್ತಿದ್ದನು. ವಿಯೆನದಿಂದ ಸಾಲ್ಸ್ಬರ್ಗ್ಗೆ ಅವನು ಮಾಡಿದ ಒಂದು ಪ್ರಯಾಣದಲ್ಲಿ, ಟ್ರೈನ್ ಚಾಲಕನು ಒಬ್ಬ ಯೆಹೋವನ ಸಾಕ್ಷಿಯಾಗಿದ್ದನು. ರಾಜ್ಯದ ಕುರಿತು ಆ ರೈಲ್ವೆ ಅತ್ಯುತ್ಸಾಹಿಗೆ ಮಾತಾಡಲು ಅವನು ಸಂದರ್ಭವನ್ನು ತಕ್ಕೊಂಡನು. ಟ್ರೈನ್ ಚಾಲಕನು ದೇವರ ಮತ್ತು ಬೈಬಲಿನ ಕುರಿತು ಮಾತಾಡುವುದನ್ನು ಕೇಳಲು ಮೊದಮೊದಲು ಈ ಯುವಕನು ಆಶ್ಚರ್ಯಗೊಂಡನು, ಆದರೆ ಸಂಚಾರದ ಸಮಯದಲ್ಲಿ, ಚಾಲಕನು ತನಗೆ ಏನು ಹೇಳುತ್ತಿದ್ದನೋ ಅದಕ್ಕಿಂತ ಪ್ರಕೃತಿ ದೃಶ್ಯದ ಮೇಲೆ ಹೆಚ್ಚು ಏಕಾಗ್ರತೆಯನ್ನಿಡುತ್ತಿದ್ದನು.
ಪುನಃ ಮನೆಯಲ್ಲಿ, ಈ ಯುವ ಅತ್ಯುತ್ಸಾಹಿಯು ತನ್ನ ವಿಡಿಯೊ ರೆಕಾರ್ಡಿಂಗನ್ನು ಒಂದಲ್ಲ, ಹತ್ತು ಸಲ ವೀಕ್ಷಿಸಿದನು ಯಾಕಂದರೆ ಅವನಿಗೆ ಈ ಪಯಣದಲ್ಲಿ ಅತ್ಯಾಸಕ್ತಿ ಇತ್ತು. ಅವನು ದ್ವನಿಯನ್ನು ಸಹ ರೆಕಾರ್ಡ್ ಮಾಡಿದ್ದರಿಂದ, ಸಾಕ್ಷಿಯು ಅವನಿಗೆ ಏನು ಹೇಳಿದ್ದನೋ ಅದನ್ನು ಪದೇ ಪದೇ ಆಲಿಸಿದನು. ಎಷ್ಟು ಹೆಚ್ಚಾಗಿ ವಿಡಿಯೊ ವೀಕ್ಷಿಸಿದನೋ ಅಷ್ಟು ಹೆಚ್ಚಾಗಿ ಅವನಿಗೆ ಹೇಳಲ್ಪಟ್ಟ ವಿಷಯದ ಪರಿಚಯವಾಯಿತು. ಅವನು ಈಗ ಅದರ ಕುರಿತು ಯೋಚಿಸಲಾರಂಭಿಸಿದನು, ಮತ್ತು ಕೊನೆಗೆ, ಬೈಬಲಿನಿಂದ ನೀಡಲ್ಪಟ್ಟ ಆ ಆಶ್ಚರ್ಯಕರ ಮಾಹಿತಿಯ ಕುರಿತು ಅವನು ಉತ್ಸಾಹಿಯಾದನು. ಅವನು ಹೆಚ್ಚನ್ನು ತಿಳಿಯಲು ಬಯಸಿದನು.
ಟ್ರೈನ್ ಚಾಲಕನ ಹೆಸರು ಅವನಿಗೆ ನೆನಪಿತ್ತು ಮತ್ತು ವಿಯೆನದಲ್ಲಿ ಎಲ್ಲಿಯೋ ಅವನು ವಾಸಿಸಿದ್ದನೆಂದು ಗೊತ್ತಿತ್ತು. ಹೀಗೆ ಅವನು ಅಂಚೆ ಆಫೀಸಿಗೆ ಹೋಗಿ ಡಿರೆಕ್ಟ್ರಿಯಲ್ಲಿ ಹೆಸರಿನ ಕೆಳಗೆ ಪಟ್ಟಿಮಾಡಲ್ಪಟ್ಟ ನಂಬ್ರಗಳನ್ನು ಫೋನ್ನಲ್ಲಿ ಒಂದರ ಹಿಂದೊಂದರಂತೆ ಕರೆದನು. ಫೋನನ್ನು ಉತ್ತರಿಸಿದವರಿಗೆ ಅವನ ಪ್ರಶ್ನೆಯು ಹೀಗಿತ್ತು: “ನೀವು ಟ್ರೈನ್ ಚಾಲಕರೋ?” ಉತ್ತರವು ಅಲ್ಲವೆಂದಾದರೆ ಅವನು ಇನ್ನೊಂದು ನಂಬ್ರವನ್ನು ಕರೆಯುತ್ತಿದ್ದನು. ಕೊನೆಗೆ ಟ್ರೈನ್ ಚಾಲಕನು ಅವನಿಗೆ ಸಿಕ್ಕಿದನು. ಅವನು ತನ್ನ ಕಥೆಯನ್ನು ಅವನಿಗೆ ತಿಳಿಸಿದನು ಮತ್ತು ತಾನು ವಿಡಿಯೊದಲ್ಲಿ ಕೇಳಿದ ಬೈಬಲ್ ಸಂದೇಶದಲ್ಲಿ ತನಗೆ ಆಸಕ್ತಿ ಇದೆ ಎಂದನು.
ಆ ಯುವಕನ ಸಮೀಪ ವಾಸಿಸಿದ್ದ ಯಾರಾದರೂ ಆ ಸಂದರ್ಶನ ಮಾಡುವಂತೆ ಸಾಕ್ಷಿಯು ಬ್ರಾಂಚ್ ಆಫೀಸಿನ ಮೂಲಕ ಏರ್ಪಾಡುಗಳನ್ನು ಮಾಡಿದನು. ಆ ಸ್ಥಳೀಕ ಸಭೆಯಲ್ಲಿ ಸಹ ಒಬ್ಬ ಟ್ರೈನ್ ಚಾಲಕನಿದ್ದನು. ಈ ಎರಡನೆಯ ಚಾಲಕನು ರೈಲ್ವೆ ಅತ್ಯುತ್ಸಾಹಿಯನ್ನು ಭೇಟಿಯಾದನು ಮತ್ತು ಒಂದು ಬೈಬಲಭ್ಯಾಸವು ಪ್ರಾರಂಭಿಸಿತು. ಇಸವಿ 1991 ರ ಬೇಸಗೆಯಲ್ಲಿ ಆ ಯೌವನಸ್ಥನಿಗೆ ದೀಕ್ಷಾಸ್ನಾನವಾಯಿತು.
ಎಲ್ಲಾ ಹೃದಯಗಳನ್ನು ವಿಚಾರಿಸುವವನಾದ ಯೆಹೋವ ದೇವರು, ಈ ವ್ಯಕ್ತಿಯಲ್ಲಿ ನೀತಿಗಾಗಿ ಪ್ರಾಮಾಣಿಕ ಪ್ರೀತಿ ಇದ್ದದ್ದನ್ನು ಕಂಡಿರಲೇಬೇಕು. ಆದಕಾರಣ, ಬೈಬಲ್ ಸತ್ಯದೊಂದಿಗೆ ಅವನನ್ನು—ಒಂದು ಅಸದೃಶ ರೀತಿಯಲ್ಲಾದರೂ—ಸಂಪರ್ಕಕ್ಕೆ ತಂದನು.—1 ಪೂರ್ವಕಾಲವೃತ್ತಾಂತ 28:9; ಯೋಹಾನ 10:27.
[ಪುಟ 9 ರಲ್ಲಿರುವ ಚಿತ್ರ ಕೃಪೆ]
Courtesy of the Austrian Railways