ಪ್ರೀತಿಯ ಉತ್ಕೃಷ್ಟವಾದ ಮಾರ್ಗವನ್ನು ಅನುಸರಿಸಿರಿ
ಯೆಹೋವ ದೇವರು ಪ್ರೀತಿ ಸ್ವರೂಪಿಯಾಗಿದ್ದಾನೆ. (1 ಯೋಹಾನ 4:8) ನಾವು ದೇವರನ್ನು ಮತ್ತು ನಮ್ಮ ನೆರೆಯವನನ್ನು ಪ್ರೀತಿಸತಕ್ಕದ್ದು ಎಂದು ಅವನ ಮಗ, ಯೇಸು ಕ್ರಿಸ್ತನು ಹೇಳಿದನು. (ಮತ್ತಾಯ 22:37-40) ಹೌದು, ಈ ಗುಣದ ಆಧಾರದಲ್ಲಿ ದೇವರು ಸಮಗ್ರ ವಿಶ್ವವನ್ನು ಚಲಾಯಿಸುತ್ತಾನೆ! ಆದುದರಿಂದ ಅನಂತ ಜೀವ ಎಲ್ಲಿಯೇ ಆಗಿರಲಿ, ಅದಕ್ಕಾಗಿ ನಾವು ಪ್ರೀತಿಯ ಮಾರ್ಗವನ್ನು ಅನುಸರಿಸತಕ್ಕದ್ದು.
ದೇವರು ಇಸ್ರಾಯೇಲ್ಯ ಜನಾಂಗಕ್ಕೆ ಪ್ರೀತಿಯನ್ನು ತೋರಿಸಿದನಾದರೂ, ಅನಂತರ ಅಪನಂಬಿಗಸ್ತಿಕೆಗಾಗಿ ಆ ಸಂಸ್ಥಾಪನೆಯನ್ನು ತೊರೆದನು. ತದನಂತರ, ಅವನು ಯೇಸುವಿನ ಶಿಷ್ಯರ ಸಭೆಯನ್ನು ಅವನ ಹೊಸ ಸಂಸ್ಥಾಪನೆಯಾಗಿ ಗುರುತಿಸಿದನು. ಹೇಗೆ? ವಿವಿಧ ಭಾಷೆಗಳಲ್ಲಿ ಮಾತಾಡಲು ಮತ್ತು ಪ್ರವಾದಿಸಲು ಅವರಿಗೆ ಶಕ್ತಿಯನ್ನು ನೀಡುವುದರ ಮೂಲಕ ಪವಿತ್ರಾತ್ಮನ ವಿಶೇಷ ವ್ಯಕ್ತಪಡಿಸುವಿಕೆಗಳ ಮೂಲಕವೆ. ಈ ರೀತಿಯಲ್ಲಿ, ಸಾ.ಶ. 33 ರ ಪಂಚಾಶತ್ತಮದಲ್ಲಿ 3,000 ಯೆಹೂದ್ಯರು ಮತ್ತು ಯೆಹೂದ್ಯ ಮತಾವಲಂಬಿಗಳು ವಿಶ್ವಾಸಿಗಳಾದರು ಮತ್ತು ದೇವರ ಹೊಸ ಸಂಸ್ಥಾಪನೆಯ ಪರವಾಗಿ ಹಳೆಯದನ್ನು ತ್ಯಜಿಸಿದರು. (ಅ.ಕೃತ್ಯಗಳು 2:1-41) ಅಂದಿನಿಂದ ಯೇಸುವಿನ ಅಪೊಸ್ತಲರುಗಳ ಮೂಲಕ ಆತ್ಮದ ವರದಾನಗಳು ದಯಪಾಲಿಸಲ್ಪಟ್ಟರೂ, ಅವರ ಮರಣದಲ್ಲಿ ಅಂಥ ವ್ಯಕ್ತಪಡಿಸುವಿಕೆಗಳು ನಿಲ್ಲಿಸಲ್ಪಟ್ಟವು. (ಅ.ಕೃತ್ಯಗಳು 8:5-18; 19:1-6) ಆದರೆ ಅಷ್ಟರೊಳಗೆ ವರದಾನಗಳು ದೇವರ ಪ್ರಸನ್ನತೆಯು ಆತ್ಮಿಕ ಇಸ್ರಾಯೇಲ್ಯರ ಮೇಲೆ ಇತ್ತು ಎಂದು ರುಜುಪಡಿಸಿದವು.—ಗಲಾತ್ಯ 6.16.
ಆತ್ಮದ ವರದಾನಗಳ ಮೂಲಕ ಜರುಗುತ್ತಿದ್ದ ಅದ್ಭುತಗಳು ಪ್ರಯೋಜನಕಾರಿಯಾಗಿದ್ದವು. ಆದಾಗ್ಯೂ, ಇತರರಿಗೆ ಪ್ರೀತಿಯನ್ನು ಯಾ ನಿಸ್ವಾರ್ಥದ ಪರಿಗಣನೆಯನ್ನು ತೋರಿಸುವುದು, ಆತ್ಮದ ವರದಾನಗಳಿಗಿಂತಲೂ ಹೆಚ್ಚು ಪ್ರಾಮುಖ್ಯವಾಗಿದೆ. ಕೊರಿಂಥದವರಿಗೆ ಬರೆದ (ಸುಮಾರು ಸಾ.ಶ. 55) ಪತ್ರದಲ್ಲಿ ಅಪೊಸ್ತಲ ಪೌಲನು ಇದನ್ನು ತೋರಿಸಿದನು. ಅದರಲ್ಲಿ ಪ್ರೀತಿಯನ್ನು ಒಂದು “ಉತ್ಕೃಷ್ಟವಾದ ಮಾರ್ಗ” ಎಂದು ಅವನು ಮಾತಾಡಿರುತ್ತಾನೆ. (1 ಕೊರಿಂಥ 12:31) ಆ ಮಾರ್ಗವು 1 ಕೊರಿಂಥ 13 ನೇ ಅಧ್ಯಾಯದಲ್ಲಿ ಚರ್ಚಿಸಲ್ಪಟ್ಟಿದೆ.
ಪ್ರೀತಿಯಿಲ್ಲದಿದ್ದರೆ, ನಾವು ಏನೂ ಅಲ್ಲದವರಾಗಿದ್ದೇವೆ
ಪೌಲನು ತರ್ಕಿಸಿದ್ದು: “ನಾನು ಮನುಷ್ಯರ ಭಾಷೆಗಳನ್ನೂ ದೇವದೂತರ ಭಾಷೆಗಳನ್ನೂ ಆಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ.” (1 ಕೊರಿಂಥ 13:1) ಪ್ರೀತಿಯಿಲ್ಲದಿದ್ದರೆ, ಆತ್ಮದತ್ತ ಮನುಷ್ಯ ಭಾಷೆ ಯಾ ಸ್ವರ್ಗೀಯ ದೇವದೂತರ ಭಾಷೆಯೊಂದನ್ನು ಆಡಿದರೂ ಏನೂ ಅಲ್ಲ ಎಂಬರ್ಥದಲ್ಲಿರುತ್ತದೆ. ಜನರಿಗೆ ಅರ್ಥವಾಗದ ಭಾಷೆಯಲ್ಲಿ ಹತ್ತು ಸಾವಿರ ಮಾತುಗಳನ್ನು ಆಡುವದಕ್ಕಿಂತಲೂ, ಭಕ್ತಿವೃದ್ಧಿ ಮಾಡುವ ಐದು ಮಾತುಗಳನ್ನು ಆಡಲು ಪೌಲನು ಇಷ್ಟಪಟ್ಟನು. (1 ಕೊರಿಂಥ 14:19) ಪ್ರೀತಿರಹಿತನಾದ ವ್ಯಕ್ತಿಯೊಬ್ಬನು “ನಾದಕೊಡುವ ಕಂಚೂ”—ಶಬ್ದಮಾಡುವ, ಕಿರಿಕಿರಿಗೊಳಿಸುವ ಜಾಗಟೆ—ಯಾ ಯಾವುದೇ ರಾಗವಿನ್ಯಾಸವಿಲ್ಲದ “ಗಣಿಗಣಿಸುವ ತಾಳ”ದಂತೆಯೂ ಇರುತ್ತಾನೆ. ಪ್ರೀತಿರಹಿತವಾಗಿ ವಿವಿಧ ಭಾಷೆಗಳಲ್ಲಿ ಮಾತಾಡುವದು ದೇವರನ್ನು ಮಹಿಮೆಗೊಳಿಸುವ ಯಾ ಅವನ ಜನರಿಗೆ ಸಹಾಯ ಮಾಡುವ ಒಂದು ಶಮನಗೊಳಿಸುವ, ಆತ್ಮಿಕವಾಗಿ ಭಕ್ತಿವೃದ್ಧಿ ಮಾಡುವ ಮಾರ್ಗವಲ್ಲ. ಇಂದು, ಕ್ರೈಸ್ತ ಶುಶ್ರೂಷೆಯಲ್ಲಿ ಅರ್ಥಭರಿತ ಮಾತುಕತೆಯನ್ನು ಉಪಯೋಗಿಸುವದರಿಂದ ನಾವು ಪ್ರೀತಿಯನ್ನು ತೋರಿಸುತ್ತೇವೆ.
ಅಪೊಸ್ತಲನು ನಂತರ ಹೇಳುವುದು: “ನನಗೆ ಪ್ರವಾದನವರವಿದ್ದರೂ ಎಲ್ಲಾ ರಹಸ್ಯಗಳೂ ಸಕಲ ವಿಧವಾದ ವಿದ್ಯೆಯೂ ತಿಳಿದರೂ, ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ.” (1 ಕೊರಿಂಥ 13:2) ಅದ್ಭುತಕರವಾಗಿ ಪ್ರವಾದಿಸುವುದು, ಪವಿತ್ರ ರಹಸ್ಯಗಳ ವಿಶೇಷ ಅರ್ಥ ವ್ಯಾಪ್ತಿ, ಮತ್ತು ಆತ್ಮ ದತ್ತ ಜ್ಞಾನ ಇತರರಿಗೆ ಪ್ರಯೋಜನ ತರಬಹುದಾದರೂ, ವರದಾನವಿದವ್ದರು ಪ್ರೀತಿರಹಿತರಾಗಿದ್ದರೆ, ಅಂಥ ವರಗಳು ಅವರಿಗೆ ಪ್ರಯೋಜನ ತರಲಾರವು. ಪವಿತ್ರ ರಹಸ್ಯಗಳ ವಿಶೇಷ ತಿಳುವಳಿಕೆಯನ್ನು ಇತರರಿಗೆ ಸಹಾಯ ಮಾಡಲು ಪೌಲನು ಉಪಯೋಗಿಸಿದನು ಮತ್ತು ಜ್ಞಾನದ ವರದಾನವು ಹಡಗುನಷ್ಟ ಹೊಂದಿದವರ ಪಾರಾಗುವಿಕೆಯನ್ನು ಮುಂತಿಳಿಸಲು ಅವನಿಗೆ ಸಾಧ್ಯ ಮಾಡಿತು. (ಅ.ಕೃತ್ಯಗಳು 27:20-44; 1 ಕೊರಿಂಥ 4:1, 2) ಆದರೂ, ಅವನಿಗೆ ‘ಸಕಲ ವಿಧವಾದ ಜ್ಞಾನ ಮತ್ತು ಎಲ್ಲಾ ನಂಬಿಕೆಯಿದ್ದು,’ ಪ್ರೀತಿರಹಿತನಾಗಿದ್ದರೆ, ಯೆಹೋವನ ದೃಷ್ಟಿಯಲ್ಲಿ ಅವನು ಏನೂ ಅಲ್ಲದವನಾಗಿರುತ್ತಾನೆ.
ಇಂದು, ಯೆಹೋವನ ಆತ್ಮವು ಅವನ ಸಾಕ್ಷಿಗಳಿಗೆ ಬೈಬಲ್ ಪ್ರವಾದನೆಗಳನ್ನು ಮತ್ತು ಪವಿತ್ರ ರಹಸ್ಯಗಳನ್ನು ತಿಳಿದುಕೊಳ್ಳಲು ಸಾಧ್ಯಮಾಡುತ್ತದೆ ಮತ್ತು ಅಂಥ ಜ್ಞಾನವನ್ನು ಇತರರಿಗೆ ದಾಟಿಸಲು ಅವರನ್ನು ಮಾರ್ಗದರ್ಶಿಸುತ್ತದೆ. (ಯೋವೇಲ 2:28, 29) ಆತ್ಮವು ಬೆಟ್ಟಗಳಂಥ ಅಡಿಗ್ಡಳನ್ನು ಜಯಿಸಲು ಬೇಕಾದಂಥ ನಂಬಿಕೆಯನ್ನು ಕೂಡ ಉತ್ಪಾದಿಸುತ್ತದೆ. (ಮತ್ತಾಯ 17:20) ಅಂಥ ವಿಷಯಗಳನ್ನು ಆತ್ಮವು ಮಾಡುವುದರಿಂದ, ಅವುಗಳಿಂದ ವೈಯಕ್ತಿಕ ಮಹಿಮೆಯನ್ನು ಪಡೆಯಲು ಹುಡುಕುವದು ತಪ್ಪಾಗಿದೆ. ದೇವರ ಮಹಿಮೆಗಾಗಿ ಮತ್ತು ಅವನೆಡೆಗಿನ ಮತ್ತು ಜತೆ ಮಾನವರ ಪ್ರೀತಿಯೊಂದಿಗೆ ವಿಷಯಗಳನ್ನು ನಾವು ಮಾಡದೆ ಇರುವುದಾದರೆ, ಏನೂ ಅಲ್ಲದವರಾಗುತ್ತೇವೆ.—ಗಲಾತ್ಯ 5:6.
ಪ್ರೀತಿರಹಿತ ತ್ಯಾಗದಿಂದ ಪ್ರಯೋಜನ ಪಡೆಯುವುದಿಲ್ಲ
ಪೌಲನು ಅಂದದ್ದು: “ನನಗಿರುವದನ್ನೆಲ್ಲವನ್ನು ಅನ್ನದಾನಮಾಡಿದರೂ, ನನ್ನ ದೇಹವನ್ನು ಸುಡುವದಕ್ಕೆ ಒಪ್ಪಿಸಿದರೂ ಪ್ರೀತಿಯು ನನಗಿಲ್ಲದಿದ್ದರೆ ನನಗೇನೂ ಪ್ರಯೋಜನವಾಗುವದಿಲ್ಲ.” (1 ಕೊರಿಂಥ 13:3) ತನಗಿರುವ ಎಲ್ಲವನ್ನು ಇತರರಿಗೆ ಉಣಿಸಲು ಅವನು ಕೊಟ್ಟರೂ, ಪ್ರೀತಿಯಿಲ್ಲದಿದ್ದರೆ, ಪೌಲನು ಪ್ರಯೋಜನವೇನೂ ಪಡೆಯುತ್ತಿರಲಿಲ್ಲ. ನಮ್ಮ ಕೊಡುಗೆಗಳ ಹಿಂದಿರುವ ಪ್ರೀತಿಗೋಸ್ಕರ ದೇವರು ನಮಗೆ ಬಹುಮಾನವನ್ನೀಯುತ್ತಾನೆಯೇ ಹೊರತು, ಅವುಗಳ ಐಹಿಕ ಮೌಲ್ಯಗಳಿಗಾಗಿ ಅಲ್ಲ ಯಾ ಸುಳ್ಳಾಡುವ ಅನನೀಯ ಮತ್ತು ಸಪ್ಫೈರಳಂತೆ ದಾನಿಗಳು ಎಂಬ ಮಹಿಮೆಯನ್ನು ನಾವು ಹುಡುಕುವ ಕಾರಣದಿಂದಲೂ ಅಲ್ಲ. (ಅ.ಕೃತ್ಯಗಳು 5:1-11) ಯೂದಾಯದಲ್ಲಿ ವಿಶ್ವಾಸಿಗಳಿಗಾಗಿ ಪರಿಹಾರ ಶುಶ್ರೂಷೆಯೊಂದರ ಸಂಬಂಧದಲ್ಲಿ ಸ್ವತಃ ತನ್ನನ್ನು ಪ್ರೀತಿಯಿಂದ ನೀಡಿಕೊಳ್ಳುವುದರ ಮೂಲಕ ಪೌಲನು ಒಂದು ಉತ್ತಮ ಮಾದರಿಯನ್ನು ಇಟ್ಟನು.—1 ಕೊರಿಂಥ 16:1-4; 2 ಕೊರಿಂಥ 8:1-24; 9:7.
ಸತ್ಯಕ್ಕೆ ಸಾಕ್ಷಿಯಾಗಿ ಪ್ರೀತಿರಹಿತವಾದ ಧರ್ಮಬಲಿಯಾಗುವುದು ಕೂಡ ದೇವರಿಗೆ ಏನೂ ಅಲ್ಲ. (ಜ್ಞಾನೋಕ್ತಿ 25:27) ಯೇಸುವು ಅವನ ಯಜ್ಞದ ಕುರಿತು ಮಾತಾಡಿದನು ಆದರೆ ಅದರ ಕುರಿತು ಕೊಚ್ಚಿಕೊಳ್ಳಲಿಲ್ಲ. ಹೆಮ್ಮೆಪಡುವುದರ ಬದಲು, ಪ್ರೀತಿಯಿಂದ ಅವನು ಸ್ವಇಚ್ಛೆಯಿಂದ ತನ್ನನ್ನೇ ನೀಡಿಕೊಂಡನು. (ಮಾರ್ಕ 10:45; ಎಫೆಸ 5:2; ಇಬ್ರಿಯ 10:5-10) ಅವನ ಆತ್ಮಿಕ ಸಹೋದರರು ದೇವರ ಸೇವೆಯಲ್ಲಿ ‘ತಮ್ಮ ದೇಹಗಳನ್ನು ಸಜೀವಯಜ್ಞವಾಗಿ ಸ್ವತಃ ಮಹಿಮೆಪಡಿಸಿಕೊಳ್ಳುವ ಧರ್ಮಬಲಿಯಾಗಿ ಅರ್ಪಿಸದೆ,’ ಯೆಹೋವನನ್ನು ಮಹಿಮೆಪಡಿಸುವ ಮತ್ತು ಅವನಿಗಾಗಿ ಅವರ ಪ್ರೀತಿಯನ್ನು ಪ್ರದರ್ಶಿಸುವ ನಿರಾಡಂಬರದ ರೀತಿಗಳಲ್ಲಿ ಅರ್ಪಿಸುತ್ತಾರೆ.—ರೋಮಾಪುರ 12:1, 2.
ಪ್ರೀತಿ ನಾವು ಕ್ರಿಯೆಗೈಯುವಂತೆ ಮಾಡುವ ಕೆಲವು ದಾರಿಗಳು
ಪೌಲನು ಬರೆದದ್ದು: “ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು.” (1 ಕೊರಿಂಥ 13:4ಎ) ಆದಾಮನ ಪಾಪದಂದಿನಿಂದ, ಅನೇಕರಿಗೆ ದೇವರ ತಾಳ್ಮೆಯು ರಕ್ಷಣೆಗೆ ನಡಿಸುವ ಪಶ್ಚಾತ್ತಾಪ ಎಂಬರ್ಥದಲ್ಲಿರುತ್ತದೆ. (2 ಪೇತ್ರ 3:9, 15) ನಮ್ಮಲ್ಲಿ ಪ್ರೀತಿ ಇರುವುದಾದರೆ, ನಾವು ತಾಳ್ಮೆಯಿಂದ ಇತರರಿಗೆ ಸತ್ಯವನ್ನು ಕಲಿಸುವೆವು. ನಾವು ಭಾವನಾತ್ಮಕ ಸ್ಫೋಟನಗಳನ್ನು ಹೋಗಲಾಡಿಸುವೆವು ಮತ್ತು ವಿವೇಚನಾಭರಿತರೂ, ಕ್ಷಮಿಸುವವರೂ ಆಗಿರುವೆವು. (ಮತ್ತಾಯ 18:21, 22) ಪ್ರೀತಿಯು ದಯೆಯುಳ್ಳದ್ದೂ ಆಗಿದೆ, ಮತ್ತು ದೇವರ ದಯೆಯ ಕಾರಣ ನಾವು ಅವನ ಬಳಿಗೆ ಸೆಳೆಯಲ್ಪಟ್ಟಿದೇವ್ದೆ. ಅವನ ಆತ್ಮದ ಫಲವಾದ ದಯೆಯು ಅವನು ನಮ್ಮಿಂದ ಅಪೇಕ್ಷಿಸುವುದಕ್ಕಿಂತ ಹೆಚ್ಚನ್ನು, ನಾವು ಇತರರಿಂದ ಅಪೇಕ್ಷಿಸದಂತೆ ನಮ್ಮನ್ನು ದೂರವಿಡುವುದು. (ಎಫೆಸ 4:32) ಉಪಕಾರಿಗಳಲ್ಲದ ಜನರಿಗೂ ನಾವು ದಯೆ ತೋರಿಸುವಂತೆ ಪ್ರೀತಿಯು ನಮ್ಮನ್ನು ಮಾಡುವದು.—ಲೂಕ 6:35.
ಪೌಲನು ಕೂಡಿಸಿದ್ದು: “ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ, ಹೊಗಳಿಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ.” (1 ಕೊರಿಂಥ 13:4ಬಿ) ದೇವರ ರಾಜ್ಯದಿಂದ ಒಬ್ಬನನ್ನು ಹೊರಗೆ ಇಡುವ ಶರೀರಕರ್ಮಗಳಲ್ಲಿ ಹೊಟ್ಟೆಕಿಚ್ಚು ಒಂದಾಗಿದೆ. (ಗಲಾತ್ಯ 5:19-21) ಇನ್ನೊಬ್ಬ ವ್ಯಕ್ತಿಯ ಸ್ವತ್ತುಗಳ ಯಾ ಅನುಕೂಲ ಪರಿಸ್ಥಿತಿಗಳ ಬಗ್ಗೆ ಹೊಟ್ಟೆಕಿಚ್ಚುವುಳ್ಳವರಾಗದಂತೆ ಪ್ರೀತಿಯು ನಮ್ಮನ್ನು ದೂರವಿಡುತ್ತದೆ. ನಾವು ಅಪೇಕ್ಷಿಸಿದ್ದ ಒಂದು ಸೇವಾ ಸುಯೋಗವೊಂದನ್ನು ಅವನು ಪಡೆಯುವುದಾದರೆ, ನಾವು ಅವನೊಂದಿಗೆ ಆನಂದಿಸುವಂತೆ, ಅವನಿಗೆ ನಮ್ಮ ಬೆಂಬಲವನ್ನು ನೀಡುವಂತೆ ಮತ್ತು ಸಭೆಯ ಒಳಿತಿಗಾಗಿ ಅವನನ್ನು ಬಳಸಲು ಸಾಧ್ಯವಿರುವದಕ್ಕಾಗಿ ದೇವರಿಗೆ ಉಪಕಾರ ಸಲ್ಲಿಸುವಂತೆ ಪ್ರೀತಿಯು ಮಾಡುವುದು.
ಪ್ರೀತಿಯು “ಹೊಗಳಿಕೊಳ್ಳದೆ ಇರುವದರಿಂದ,” ತನ್ನ ಸೇವೆಯಲ್ಲಿ ನಾವು ಏನನ್ನು ಮಾಡಲು ದೇವರು ಅನುಮತಿಸುತ್ತಾನೊ ಅದರ ಬಗ್ಗೆ ಹೆಮ್ಮೆಪಡಲು ಅದು ನಮ್ಮನ್ನು ನಡಿಸುವದಿಲ್ಲ. ಕೊರಿಂಥದ ಕೆಲವರು ಆತ್ಮದ ವರದಾನಗಳು ಅವರಲ್ಲಿ ಉದ್ಭವಿಸಿದವೋ ಎಂಬಂತೆ ಹೆಚ್ಚಳಪಟ್ಟರು, ಆದರೆ ಅವನ ಆಧುನಿಕ ದಿನದ ಸಂಸ್ಥಾಪನೆಯಲ್ಲಿನ ಸುಯೋಗಗಳಂತೆಯೇ, ಇವುಗಳು ದೇವರಿಂದ ಬಂದವುಗಳು. ಆದುದರಿಂದ ದೇವರ ಸಂಸ್ಥಾಪನೆಯಲ್ಲಿ ನಮ್ಮ ನಿಲುವಿನ ಕುರಿತು ಹೆಚ್ಚಳಪಡುವದರ ಬದಲಾಗಿ, ನಾವು ಬೀಳದಂತೆ ಜಾಗರೂಕರಾಗಿರೋಣ. (1 ಕೊರಿಂಥ 1:31; 4:7; 10:12) ಪ್ರೀತಿಯು “ಉಬ್ಬಿಕೊಳ್ಳುವದಿಲ್ಲ,” ಆದರೆ ಪ್ರೀತಿಸದಿರುವ ವ್ಯಕ್ತಿಯ ಮನಸ್ಸು ಸ್ವಪ್ರತಿಷ್ಠೆಯಿಂದ ಉಬ್ಬಿರಬಹುದು. ಪ್ರೀತಿಯುಳ್ಳ ಜನರು ಇತರರಿಗಿಂತ ತಾವು ಶ್ರೇಷ್ಠರೆಂದು ಭಾವಿಸುವುದಿಲ್ಲ.—1 ಕೊರಿಂಥ 4:18, 19; ಗಲಾತ್ಯ 6:3.
ಮರ್ಯಾದೆಗೆಟ್ಟದ್ದೂ, ಸ್ವಾರ್ಥದ್ದೂ, ಸಿಟ್ಟುಗೊಳ್ಳುವದೂ ಅಲ್ಲ
ಪ್ರೀತಿಯು “ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೇಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ.” (1 ಕೊರಿಂಥ 13:5ಎ) ಉತ್ತಮ ನಡತೆ, ದೈವಿಕ ವರ್ತನೆ, ಅಧಿಕಾರಕ್ಕೆ ಗೌರವ, ಮತ್ತು ಕ್ರೈಸ್ತ ಕೂಟಗಳಲ್ಲಿ ಸಭ್ಯಾಚಾರವನ್ನು ಅದು ಪ್ರವರ್ಧಿಸುತ್ತದೆ. (ಎಫೆಸ 5:3-5; 1 ಕೊರಿಂಥ 11:17-34; 14:40; ಯೂದ 4, 8-10 ಹೋಲಿಸಿರಿ.) ಮಾನವ ದೇಹದ ಎಲ್ಲಾ ಭಾಗಗಳಂತೆ, ಎಲ್ಲರೂ ಬೇಕಾಗಿದ್ದಾರೆ ಎಂಬ ಭಾವನೆಯನ್ನು ಪ್ರೀತಿಯು ಉಂಟುಮಾಡುವದರಿಂದ, ಪ್ರೀತಿಯ ಒಂದು ಸಭೆಯು ಶಾಂತಿ ಮತ್ತು ಆಶ್ರಯದ ಒಂದು ಸ್ಥಳವಾಗಿದೆ. (1 ಕೊರಿಂಥ 12:22-25) ಸ್ವಾರ್ಥದ ‘ಸ್ವಪ್ರಯೇಜನವನ್ನು ಚಿಂತಿಸುವದರ’ ಬದಲು, ಪ್ರೀತಿಯು ಆಗಾಗ ನಮ್ಮ ಹಕ್ಕುಗಳನ್ನು ತ್ಯಾಗಮಾಡಲು ಮತ್ತು ಇತರರಲ್ಲಿ ಮತ್ತು ಅವರ ಹಿತಾಭಿವೃದ್ಧಿಯಲ್ಲಿ ಆಸಕ್ತಿಯನ್ನು ತೋರಿಸಲು ನಮಗೆ ಕಾರಣವಾಗುತ್ತದೆ. (ಫಿಲಿಪ್ಪಿ 2:1-4) ನಮ್ಮ ಶುಶ್ರೂಷೆಯಲ್ಲಿ ‘ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೊ ಅಂಥಂಥವನಾಗಲು’ ಪ್ರೀತಿಯು ನಮ್ಮನ್ನು ನಡಿಸುತ್ತದೆ.—1 ಕೊರಿಂಥ 9:22, 23.
ಪ್ರೀತಿಯು “ಸಿಟ್ಟುಗೊಳ್ಳುವದಿಲ್ಲ.” ಕೋಪದ ಕೆರಳುವಿಕೆ ಪಾಪಭರಿತ ಶರೀರ ಕರ್ಮಗಳಲ್ಲೊಂದಾಗಿದೆ, ಆದರೆ ಪ್ರೀತಿಯು “ಕೋಪಿಸುವದರಲ್ಲಿಯೂ ನಿಧಾನವಾಗಿಯೂ” ಇರುವಂತೆ ನಮ್ಮನ್ನು ಮಾಡುತ್ತದೆ. (ಯಾಕೋಬ 1:19; ಗಲಾತ್ಯ 5:19, 20) ನ್ಯಾಯಯುಕ್ತವಾಗಿಯೇ ನಾವು ಸಿಟ್ಟುಗೊಳ್ಳುವದಾದರೂ, ಕೋಷ್ಠಿರಾಗಿಯೇ ಇರುವಂತೆ, ಹೀಗೆ ಪಿಶಾಚನಿಗೆ ಅವಕಾಶ ಕೊಡುವಂತೆ ಪ್ರೀತಿಯು ನಮ್ಮನ್ನು ಬಿಡುವದಿಲ್ಲ. (ಎಫೆಸ 4:26, 27) ಕೆಲವು ಸಲಹೆಗಳನ್ನು ಜತೆ ವಿಶ್ವಾಸಿಗಳು ಪರಿಪಾಲಿಸದಿದ್ದರೆ, ವಿಶೇಷವಾಗಿ ಹಿರಿಯರು ಕೋಪವನ್ನು ತೋರಿಸಕೂಡದು.
ಪ್ರೀತಿಯ ಕುರಿತು ಪೌಲನು ಇದನ್ನೂ ಹೇಳಿದ್ದಾನೆ: “ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ.” (1 ಕೊರಿಂಥ 13:5ಬಿ) ಲೆಕ್ಕದ ಪುಸ್ತಕದಲ್ಲಿ ದಾಖಲೆಗಳನ್ನು ಮಾಡಿಡುವಂತೆ, ತಪ್ಪುಗಳ ಒಂದು ಪಟ್ಟಿಯನ್ನು ಪ್ರೀತಿಯು ಇಡುವದಿಲ್ಲ. ಜತೆ ವಿಶ್ವಾಸಿಗಳಲ್ಲಿ ಒಳ್ಳೇತನವನ್ನು ಅದು ಕಾಣುತ್ತದೆ ಮತ್ತು ನೈಜವಾದ ಯಾ ಕಾಲ್ಪನಿಕ ತಪ್ಪುಗಳಿಗೆ ಪ್ರತೀಕಾರ ತೀರಿಸುವದಿಲ್ಲ. (ಜ್ಞಾನೋಕ್ತಿ 20:22; 24:29; 25:21, 22) “ಸಮಾಧಾನಕ್ಕೂ . . . ಅನುಕೂಲವಾಗಿರುವವುಗಳನ್ನು ಸಾಧಿಸಿಕೊಳ್ಳಲು” ಪ್ರೀತಿಯು ನಮಗೆ ನೆರವಾಗುತ್ತದೆ. (ರೋಮಾಪುರ 14:19) ಪೌಲ ಮತ್ತು ಬಾರ್ನಬರ ನಡುವೆ ಒಂದು ವಿವಾದವಿತ್ತು ಮತ್ತು ಅವರು ದೇವರ ಸೇವೆಯಲ್ಲಿ ಪ್ರತ್ಯೇಕವಾಗಿ ಹೋದರು, ಆದರೆ ಪ್ರೀತಿಯು ಆ ಬಿರುಕನ್ನು ವಾಸಿಮಾಡಿತು ಮತ್ತು ದ್ವೇಷವನ್ನು ಅವರು ಇಟ್ಟುಕೊಳ್ಳದಂತೆ ಮಾಡಿತು.—ಯಾಜಕಕಾಂಡ 19:17, 18; ಅ. ಕೃತ್ಯಗಳು 15:36-41.
ನೀತಿ ಮತ್ತು ಸತ್ಯದ ಪರವಾಗಿರುವದು
ಪ್ರೀತಿಯ ಕುರಿತಾಗಿ, ಪೌಲನು ಹೇಳುತ್ತಾ ಮುಂದರಿಸುವುದು: “ಅನ್ಯಾಯವನ್ನು ನೋಡಿ ಸಂತೋಷಪಡದೆ ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ.” (1 ಕೊರಿಂಥ 13:6) ಕೆಲವರು ಅನ್ಯಾಯದಲ್ಲಿ ಎಷ್ಟೊಂದು ಸಂತೋಷಿಸುತ್ತಾರೆಂದರೆ “ಕೇಡುಮಾಡದಿದ್ದರೆ ಅವರಿಗೆ ನಿದ್ರೆಹತದ್ತು.” (ಜ್ಞಾನೋಕ್ತಿ 4:16) ಆದರೆ ದೇವರ ಸಂಸ್ಥಾಪನೆಯಲ್ಲಿ ನಾವು ಒಬ್ಬರು ಇನ್ನೊಬ್ಬರೊಂದಿಗೆ ವಾಗ್ವಾದಿಸುವದಿಲ್ಲ ಯಾ ಒಬ್ಬನು ಪಾಪಕ್ಕೆ ಬಲಿಯಾದರೆ ಸಂತೋಷಿಸುವದಿಲ್ಲ. (ಜ್ಞಾನೋಕ್ತಿ 17:5; 24:17, 18) ದೇವರಿಗಾಗಿ ಮತ್ತು ನೀತಿಗಾಗಿ ಕೊರಿಂಥ ಸಭೆಯಲ್ಲಿ ಬೇಕಾಗುವಷ್ಟು ಪ್ರೀತಿಯು ಇದ್ದಿದ್ದರೆ, ಅಲ್ಲಿ ಅನೈತಿಕತೆಯು ಸಹಿಸಲ್ಪಡುತ್ತಿರಲಿಲ್ಲ. (1 ಕೊರಿಂಥ 5:1-13) ಇತರ ಸಂಗತಿಗಳೊಂದಿಗೆ, ನೀತಿಗಾಗಿರುವ ಪ್ರೀತಿಯು ಟೆಲಿವಿಷನ್ನ, ಚಲನ ಚಿತ್ರಗಳ ಯಾ ರಂಗಮಂದಿರಗಳ ಅನ್ಯಾಯದ ಪ್ರದರ್ಶನಗಳಲ್ಲಿ ಸಂತೋಷಿಸುವುದರಿಂದ ನಮ್ಮನ್ನು ದೂರವಿಡುತ್ತದೆ.
ಪ್ರೀತಿಯು “ಸತ್ಯದಲ್ಲಿ ಸಂತೋಷಿಸುತ್ತದೆ.” ಇಲ್ಲಿ ಅನ್ಯಾಯದೊಂದಿಗೆ [ಅನೀತಿಯೊಂದಿಗೆ, NW ] ಸತ್ಯದ ವ್ಯತ್ಯಾಸವನ್ನು ತೋರಿಸಲಾಗಿದೆ. ಜನರ ಮೇಲೆ ಸತ್ಯಕ್ಕಿರುವ ನೀತಿಯ ಪ್ರಭಾವದ ಮೇಲೆ ಆನಂದಿಸುವಂತೆ ಪ್ರೀತಿಯು ನಮಗೆ ಕಾರಣವಾಗುತ್ತದೆ ಎಂದಿದರ ಅರ್ಥವೆಂದು ವ್ಯಕ್ತವಾಗುತ್ತದೆ. ಜನರನ್ನು ಕಟ್ಟುವಂಥ ಮತ್ತು ಸತ್ಯ ಮತ್ತು ನೀತಿಯನ್ನು ಪ್ರಗತಿಗೊಳಿಸಲು ಹೇತುವಾಗುವಂಥ ಸಂಗತಿಗಳಲ್ಲಿ ನಾವು ಆನಂದವನ್ನು ಕಾಣುತ್ತೇವೆ. ಸುಳ್ಳುಗಳನ್ನು ಹೇಳದಂತೆ ಪ್ರೀತಿಯು ತಡೆಗಟ್ಟುತ್ತದೆ, ನೀತಿವಂತರು ನಿರಪರಾಧಿಗಳೆಂದು ರುಜುವಾದಾಗ ನಮಗೆ ಆನಂದವನ್ನು ಕೊಡುತ್ತದೆ, ಮತ್ತು ದೇವರ ಸತ್ಯದ ವಿಜಯದಲ್ಲಿ ಉಲ್ಲಾಸಿಸುವಂತೆ ನಮ್ಮನ್ನು ಮಾಡುತ್ತದೆ.—ಕೀರ್ತನೆ 45:4.
ಎಲ್ಲ ಸಂಗತಿಗಳೊಂದಿಗೆ ಪ್ರೀತಿಯು ವ್ಯವಹರಿಸುವ ವಿಧ
ಪ್ರೀತಿಯ ಅವನ ಅರ್ಥವಿವರಣೆಯನ್ನು ಮುಂದರಿಸುತ್ತಾ, ಪೌಲನು ಬರೆದದ್ದು: “ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ [ತಾಳಿಕೊಳ್ಳುತ್ತದೆ, NW ], ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ.” (1 ಕೊರಿಂಥ 13:7) ‘ಎಲ್ಲವನ್ನೂ ತಾಳಿಕೊಳ್ಳುತ್ತದೆ,’ ಒಂದು ಒಳ್ಳೆಯ ಚಾವಣಿಯು ಮಳೆಯನ್ನು ಹೊರಗಿಡುವಂತೆ, ಪ್ರೀತಿಯು ತೀವ್ರ ಅಸಮಾಧಾನವನ್ನು ಹೊರಗೆ ಇಡುತ್ತದೆ. ಯಾರಾದರೂ ನಮಗೆ ನೋಯಿಸಿದರೂ, ಅನಂತರ ಕ್ಷಮೆ ಕೇಳಿದರೆ, ಪ್ರೀತಿಯು ನೋವನ್ನು ತಾಳಿಕೊಳ್ಳಲು ಮತ್ತು ವಿಷಯಗಳ ಕುರಿತು ಹರಟೆ ಮಾತಾಡುವದರ ಬದಲು ನೋಯಿಸಿದವನನ್ನು ಕ್ಷಮಿಸುವಂತೆ ನಮಗೆ ಸಾಧ್ಯಮಾಡುತ್ತದೆ. ಪ್ರೀತಿಯಲ್ಲಿ ‘ನಮ್ಮ ಸಹೋದರನನ್ನು ಸಂಪಾದಿಸಲು’ ನಾವು ಪ್ರಯತ್ನಿಸುತ್ತೇವೆ.—ಮತ್ತಾಯ 18:15-17; ಕೊಲೊಸ್ಸೆ 3:13.
ಪ್ರೀತಿಯು ದೇವರ ವಾಕ್ಯದಲ್ಲಿ “ಎಲ್ಲವನ್ನೂ ನಂಬುತ್ತದೆ” ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕ ಒದಗಿಸಲ್ಪಟ್ಟ ಆತ್ಮಿಕ ಆಹಾರಕ್ಕಾಗಿ ಕೃತಜ್ಞರಾಗಿರುವಂತೆ ನಮ್ಮನ್ನು ಮಾಡುತ್ತದೆ. (ಮತ್ತಾಯ 24:45-47) ನಾವು ಬೆಪ್ಪುತಕ್ಕಡಿಗಳಲ್ಲವಾದರೂ ಕೂಡ, ಅಪನಂಬಿಕೆಯ ಹೃದಯವೊಂದಿರದಂತೆ ಪ್ರೀತಿಯು ನಮ್ಮನ್ನು ತಡೆಯುತ್ತದೆ ಮತ್ತು ಸಹ ವಿಶ್ವಾಸಿಗಳಲ್ಲಿ ದುಷ್ಟ ಹೇತುಗಳ ಆಪಾದನೆ ಮಾಡದಂತೆ ದೂರವಿಡುತ್ತದೆ. (ಪ್ರಸಂಗಿ 7:21, 22) ಪ್ರೀತಿಯು ಶಾಸ್ತ್ರಗ್ರಂಥದಲ್ಲಿ ದಾಖಲಿಸಿದ, ದೇವರ ರಾಜ್ಯದ ಕುರಿತ ಸತ್ಯಗಳಂಥ “ಎಲ್ಲವನ್ನೂ ನಿರೀಕ್ಷಿಸುತ್ತದೆ.” ಪ್ರೀತಿಯಿಂದ ಪ್ರೇರಿಸಲ್ಪಟ್ಟವರಾಗಿ, ಕಷ್ಟಕರ ಸನ್ನಿವೇಶಗಳಲ್ಲಿ ಅತ್ಯುತ್ತಮವಾದ ಫಲಿತಾಂಶ ಬರಲು ನಾವು ನಿರೀಕ್ಷಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ. ನಮ್ಮ ನಿರೀಕ್ಷೆಯ ಆಧಾರವನ್ನು ಇತರರಿಗೆ ತಿಳಿಸಲು ಕೂಡ ಪ್ರೀತಿಯು ನಮ್ಮನ್ನು ಪ್ರಚೋದಿಸುತ್ತದೆ. (1 ಪೇತ್ರ 3:15) ಇದಕ್ಕೆ ಕೂಡಿಸಿ, ಪ್ರೀತಿಯು ನಮ್ಮ ವಿರುದ್ಧವಾಗಿರುವ ಪಾಪಗಳ ಸಹಿತ “ಎಲ್ಲವನ್ನೂ ಸಹಿಸಿಕೊಳ್ಳುತ್ತದೆ.” (ಜ್ಞಾನೋಕ್ತಿ 10:12) ದೇವರಿಗಾಗಿರುವ ಪ್ರೀತಿಯು ಹಿಂಸೆ ಮತ್ತು ಇತರ ಶೋಧನೆಗಳನ್ನು ಸಹಿಸಿಕೊಳ್ಳಲು ಕೂಡ ನಮಗೆ ಸಹಾಯ ಮಾಡುತ್ತದೆ.
ಪೌಲನು ಕೂಡಿಸುವದು: “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.” (1 ಕೊರಿಂಥ 13:8ಎ) ಯೆಹೋವನು ಹೇಗೆ ಪರಾಜಯಗೊಳ್ಳುವದಿಲ್ಲವೊ ಹಾಗೆಯೇ ಪ್ರೀತಿಯು ಪರಾಜಯಗೊಳ್ಳುವದಿಲ್ಲ. ನಮ್ಮ ನಿತ್ಯನಾದ ತಂದೆಯು ಪ್ರೀತಿಯ ಸಾಕ್ಷತ್ ರೂಪವಾಗಿರುವದರಿಂದ, ಪ್ರೀತಿಯ ಈ ಗುಣವು ಎಂದಿಗೂ ಇಲ್ಲದೆ ಹೋಗುವದಿಲ್ಲ. (1 ತಿಮೊಥೆಯ 1:17; 1 ಯೋಹಾನ 4:16) ವಿಶ್ವವು ಎಂದೆಂದಿಗೂ ಪ್ರೀತಿಯಿಂದಲೇ ಚಲಾಯಿಸಲ್ಪಡುವದು. ಆದುದರಿಂದ ಸ್ವಾರ್ಥ ಸ್ವಭಾವಗಳನ್ನು ಜಯಿಸಲು ಮತ್ತು ಅವನ ಆತ್ಮದ ಪರಾಜಯಗೊಳ್ಳದ ಈ ಗುಣವನ್ನು ಪ್ರದರ್ಶಿಸಲು ದೇವರು ನಮಗೆ ಸಹಾಯ ಮಾಡುವಂತೆ ನಾವು ಪ್ರಾರ್ಥಿಸೋಣ.—ಲೂಕ 11:13.
ಗತಿಸಿಹೋಗಲಿರುವ ಸಂಗತಿಗಳು
ಮುಂದಕ್ಕೆ ತೋರಿಸುತ್ತಾ, ಪೌಲನು ಬರೆದದ್ದು: “ಪ್ರವಾದನೆಗಳಾದರೋ ಇಲ್ಲದಂತಾಗುವವು; ವಾಣಿಗಳೋ ನಿಂತುಹೋಗುವವು; ವಿದ್ಯೆಯೋ ಇಲ್ಲದಂತಾಗುವದು.” (1 ಕೊರಿಂಥ 13:8ಬಿ) ‘ಪ್ರವಾದಿಸುವ ವರದಾನಗಳು’ ಇರುವವರಿಗೆ ಹೊಸ ಪ್ರವಾದನೆಗಳನ್ನು ಉಚ್ಛರಿಸಲು ಶಕ್ಯರನ್ನಾಗಿ ಮಾಡಿತು. ಅಂಥ ವರದಾನಗಳು ಕ್ರೈಸ್ತ ಸಭೆಯು ದೇವರ ಸಂಸ್ಥಾಪನೆಯೋಪಾದಿ ಸ್ಥಾಪಿತವಾದ ನಂತರ ಗತಿಸಿಹೋದರೂ, ಅವನ ಪ್ರವಾದನಾ ಶಕ್ತಿಯು ಎಂದಿಗೂ ಗತಿಸಿಹೋಗುವದಿಲ್ಲ, ಮತ್ತು ನಮಗೆ ಈಗ ಆವಶ್ಯಕವಾದ ಎಲ್ಲಾ ಪ್ರವಾದನೆಗಳು ಅವನ ವಾಕ್ಯದಲ್ಲಿ ಅಡಕವಾಗಿರುತ್ತವೆ. ಭಾಷೆಗಳಲ್ಲಿ ಮಾತಾಡುವ ಆತ್ಮ ದತ್ತ ಸಾಮರ್ಥ್ಯವು ಕೂಡ ನಿಂತುಹೋಗಿದೆ, ಮತ್ತು ಮುಂತಿಳಿಸಿದಂತೆ ವಿಶೇಷ ಜ್ಞಾನವು “ಇಲ್ಲದಂತಾಗಿದೆ.” ಆದರೆ ಯೆಹೋವನ ಸಮಗ್ರ ವಾಕ್ಯವು ರಕ್ಷಣೆಯನ್ನು ಪಡೆಯಲು ನಾವೇನು ತಿಳಿಯಬೇಕೊ ಅದೆಲ್ಲವನ್ನೂ ಒದಗಿಸುತ್ತದೆ. (ರೋಮಾಪುರ 10:8-10) ಇನ್ನು ಹೆಚ್ಚಾಗಿ, ದೇವರ ಜನರು ದೇವರಾತ್ಮಭರಿತರು ಆಗಿದ್ದಾರೆ ಮತ್ತು ಅದರ ಫಲಗಳನ್ನು ಫಲಿಸುತ್ತಾ ಇದ್ದಾರೆ.
ಪೌಲನು ಮುಂದರಿಸುವದು: “ಅಪೂರ್ಣವಾಗಿ ತಿಳುಕೊಳ್ಳುತ್ತೇವೆ, ಅಪೂರ್ಣವಾಗಿ ಪ್ರವಾದಿಸುತ್ತೇವೆ. ಆದರೆ ಸಂಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲವಾಗುವದು.” (1 ಕೊರಿಂಥ 13:9, 10) ಜ್ಞಾನ ಮತ್ತು ಪ್ರವಾದನೆಯ ವರದಾನಗಳು ಅಪೂರ್ಣವಾಗಿದ್ದವು. ತೋರಿಕೆಯಲ್ಲಿ, ಅಂಥ ಪ್ರವಾದನೆಯು ವಿವರವಾಗಿ ಇರಲಿಲ್ಲ, ಮತ್ತು ಪ್ರತಿಯೊಬ್ಬ ಪ್ರವಾದಿಯು ಭವಿಷ್ಯದ ಕುರಿತಾಗಿ ಪ್ರಕಟಗೊಳಿಸಿರುವಂತಹದ್ದು ಆಂಶಿಕವಾಗಿದ್ದು, ಅವನೇನು ಮುಂತಿಳಿಸಿದ್ದಾನೋ ಅದು ಪರಿಪೂರ್ಣ ಜ್ಞಾನದ ಕೊರತೆಯುಳ್ಳದ್ದಾಗಿತ್ತು. ಆದಾಗ್ಯೂ, ಈಗ ಪ್ರವಾದನೆಯ ತಿಳಿವಳಿಕೆಯು ಕ್ರಮೇಣ ಪೂರ್ಣತೆಗೆ ಬರುತ್ತಾ ಇದೆ. ಉದಾಹರಣೆಗೆ, ಮಾನವಕುಲದ ಮೇಲೆ ಅರಸುತನದ ಅಧಿಕಾರವನ್ನು ಯೇಸುವು 1914 ರಲ್ಲಿ ಪಡೆದನು ಎಂದು ಬೈಬಲ್ ಪ್ರವಾದನೆಯ ನೆರವೇರಿಕೆಯ ವಾಸ್ತವಾಂಶಗಳು ದೃಢೀಕರಿಸುತ್ತವೆ. ಅಂದಿನಿಂದ, ನಾವು “ಯುಗದ ಸಮಾಪ್ತಿಯಲ್ಲಿ” ಇದ್ದೇವೆ ಮತ್ತು ಆತ್ಮಿಕ ಜ್ಞಾನ ಮತ್ತು ಬೈಬಲ್ ಪ್ರವಾದನೆಯ ತಿಳಿವಳಿಕೆಯ ಮುಂದರಿದ ಬೆಳವಣಿಗೆಯಲ್ಲಿ ಸಂತೋಷಿಸುತ್ತಾ ಇದ್ದೇವೆ. (ದಾನಿಯೇಲ 12:4) ಆದಕಾರಣ, ನಾವು ಪರಿಪೂರ್ಣ ಜ್ಞಾನಕ್ಕೆ ಬರುತ್ತಾ ಇದ್ದೇವೆ ಮತ್ತು “ಸಂಪೂರ್ಣವಾದದ್ದು” ಸನ್ನಿಹಿತದಲ್ಲಿಯೇ ಇರಬೇಕು.
ಉತ್ಕೃಷ್ಟವಾದ ಗುಣವು ಉಳಿಯುತ್ತದೆ
ಸಭೆಯ ಪ್ರಗತಿಯನ್ನು ಪ್ರಾಸಂಗಿಕವಾಗಿ ಸೂಚಿಸುತ್ತಾ, ಪೌಲನು ಬರೆದದ್ದು: “ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಸುಖದುಃಖಗಳನ್ನು ಅನುಭವಿಸಿದೆನು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.” (1 ಕೊರಿಂಥ 13:11) ಕೂಸೊಂದು ಸೀಮಿತ ಜ್ಞಾನ ಮತ್ತು ಶಾರೀರಿಕ ಬೆಳವಣಿಗೆಯ ಆಧಾರದಲ್ಲಿ ವರ್ತಿಸುತ್ತದಾದ್ದರಿಂದ, ತೊಟಿಲ್ಟಿನಲ್ಲಿ ತೂಗಾಡಿಸಲ್ಪಡುವಂತೆ, ಅದು ಆಚೀಚೆ ಪ್ರಭಾವಿಸಲ್ಪಡಬಹುದು. ಆದರೆ ಪ್ರಾಯಸ್ಥನೊಬ್ಬನು ಎಷ್ಟೊ ಹೆಚ್ಚು ದೈಹಿಕವಾಗಿ ಬೆಳೆದಿರುತ್ತಾನೆ, ಅವನಿಗೆ ಅಧಿಕ ಜ್ಞಾನವಿರುತ್ತದೆ, ಮತ್ತು ಸಾಮಾನ್ಯವಾಗಿ ಬಹಳ ಸುಲಭವಾಗಿ ಪ್ರಭಾವಿಸಲ್ಪಡುವದಿಲ್ಲ. ಅವನ ಬಾಲ್ಯತನದ ಆಲೋಚನೆಗಳನ್ನು, ಮನೋಭಾವಗಳನ್ನು, ಮತ್ತು ವಿಧಾನಗಳನ್ನು ಅವನು ತೊರೆಯುತ್ತಾನೆ. ತದ್ರೀತಿಯಲ್ಲಿ, ದೇವರ ಐಹಿಕ ಸಂಸ್ಥಾಪನೆಯು ಅದರ ಬಾಲ್ಯತನದಿಂದ ಬೆಳೆದಾಗ, ಅದಕ್ಕೆ ಆತ್ಮನ ವರದಾನಗಳಾದ ಪ್ರವಾದನೆ, ಭಾಷೆಗಳು, ಮತ್ತು ಜ್ಞಾನದ ಅಗತ್ಯವಿಲ್ಲವೆಂದು ಅವನು ತೀರ್ಮಾನಿಸಿದನು. ಈಗ ಮುಪ್ಪಿನಲ್ಲಿರುವ ಸಭೆಯ ಆಧುನಿಕ ದಿನದ ಸದಸ್ಯರು ಕೂಡ, ಅಂಥ ವರದಾನಗಳ ಆವಶ್ಯಕತೆಯಿಲ್ಲವೆಂದು ಭಾವಿಸಿದರೂ, ಅವನ ಆತ್ಮದ ಮಾರ್ಗದರ್ಶನದ ಕೆಳಗೆ ದೇವರನ್ನು ಸೇವಿಸಲು ಅವರು ಸಂತೋಷಿಸುತ್ತಾರೆ.
ಪೌಲನು ಕೂಡಿಸಿದ್ದು: “ಈಗ ಕಂಚಿನ ದರ್ಪಣದಲ್ಲಿ ಕಾಣಿಸುವಂತೆ [ದೇವರ ಮುಖವು] ನಮಗೆ ಮೊಬ್ಬಾಗಿ ಕಾಣಿಸುತ್ತದೆ; ಆಗ ಮುಖಾಮುಖಿಯಾಗಿ ನೋಡುವೆವು. ಈಗ ಸ್ವಲ್ಪಮಾತ್ರ ನನಗೆ ತಿಳಿದದೆ; ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳುಕೊಂಡಂತೆ, ನಾನು ಸಂಪೂರ್ಣವಾಗಿ ತಿಳುಕೊಳ್ಳುವೆನು.” (1 ಕೊರಿಂಥ 13:12) ಸಭೆಯ ಬಾಲ್ಯತನದ ಸಮಯದಲ್ಲಿ, ಕೆಲವು ನಿರ್ದಿಷ್ಟ ವಿಷಯಗಳನ್ನು ಪ್ರಕಟಿಸಲು ದೇವರ ಸಮಯವಾಗಿರಲಿಲ್ಲ. ಆದಕಾರಣ, ಉತ್ತಮ ಪ್ರತಿಬಿಂಬವನ್ನು ತೋರಿಸದ ಒಂದು ಕಂಚಿನ ದರ್ಪಣದ ಮೂಲಕ ಕ್ರೈಸ್ತರು ನೋಡುತ್ತಿದ್ದಾರೊ ಎಂಬಂತೆ, ಅವುಗಳು ಮೊಬ್ಬಾಗಿ ಕಾಣಿಸುತ್ತಿದ್ದವು. (ಅ.ಕೃತ್ಯಗಳು 1:6, 7) ಆದರೆ ಆ ಅಸ್ಪಷ್ಟ ದೃಶ್ಯವನ್ನು ದಾಟಿ ನಾವು ಇದ್ದೇವೆ. ಪ್ರವಾದನೆಯ ಮತ್ತು ರೂಪದ ನೆರವೇರಿಕೆ ಸ್ಪಷ್ಟವಾಗಿಗಿ ಗೋಚರಿಸುತ್ತದೆ, ಯಾಕಂದರೆ ಇದು ದೇವರ ಪ್ರಕಟನೆಯ ಸಮಯವಾಗಿದೆ. (ಕೀರ್ತನೆ 97:11; ದಾನಿಯೇಲ 2:28) ಪೌಲನು ಸ್ವತಃ ದೇವರ ಕುರಿತು ಬಲ್ಲವನಾಗಿದ್ದರೂ, ಯೆಹೋವನ ಜ್ಞಾನದ ಮತ್ತು ಅವನೊಂದಿಗಿನ ಆಪ್ತ ಸಂಬಂಧದ ಪರಾಕಾಷ್ಠೆಯು, ಅಪೊಸ್ತಲನು ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಟ್ಟಾಗ ಬರಲಿರುವದು, ಹೀಗೆ ಅವನ ಕ್ರೈಸ್ತ ಮಾರ್ಗದ ಪೂರ್ಣ ಬಹುಮಾನವನ್ನು ಪಡೆಯುವನು.
ಪ್ರೀತಿಯ ಸಾಕ್ಷತ್ ರೂಪವನ್ನು ಅವನು ಸಮಾಪ್ತಿಗೊಳಿಸುತ್ತಾ, ಪೌಲನು ಬರೆದದ್ದು: “ಹೀಗಿರುವದರಿಂದ ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ.” (1 ಕೊರಿಂಥ 13:13) ಆತ್ಮದ ಅದ್ಭುತಕರ ವರದಾನಗಳ ಗೈರುಹಾಜರಿಯಲ್ಲೂ ಕೂಡ, ಈಗ ಸಭೆಗೆ ವಿಫುಲವಾದ ನಂಬಿಕೆ, ನಿರೀಕ್ಷೆ, ಮತ್ತು ಪ್ರೀತಿಗೆ ಹೆಚ್ಚು ಪೂರ್ಣವಾದ ಜ್ಞಾನ ಮತ್ತು ಕಾರಣ ಇರುತ್ತದೆ. ದೇವರು ವಾಗ್ದಾನಿಸಿದ ಪ್ರತಿಯೊಂದು ಸಂಗತಿಯು ನೆರವೇರಿದೆಯೋ ಎಂಬಷ್ಟು ನಂಬಿಕೆ ಅದಕ್ಕಿದೆ. (ಇಬ್ರಿಯ 11:1) ದೇವರ ವಾಕ್ಯದಲ್ಲಿ ಮುಂತಿಳಿಸಿದ ವಿಷಯಗಳು ನೆರವೇರಿದಾಗ ನಂಬಿಕೆಯ ಲಕ್ಷಣಗಳು ಕೊನೆಗೊಳ್ಳುವವು. ನಿರೀಕ್ಷಿಸಿದ ಸಂಗತಿಗಳನ್ನು ನಾವು ನೋಡುವಾಗ, ನಿರೀಕ್ಷೆಯ ರೂಪಗಳು ಕೊನೆಗೊಳ್ಳುವವು. ಆದರೆ ಪ್ರೀತಿಯು ಸದಾ ಕಾಲಕ್ಕೂ ಉಳಿಯುವದು. ಆದಕಾರಣ, ಯೆಹೋವನ ಸಾಕ್ಷಿಗಳೆಲ್ಲರೂ ಈ ಪ್ರೀತಿಯ ಉತ್ಕೃಷ್ಟವಾದ ಮಾರ್ಗವನ್ನು ಅನುಸರಿಸುವದನ್ನು ಮುಂದುವರಿಸಲಿ.