ಸಲಹೆಗಾಗಿ ನೀವೆಲ್ಲಿಗೆ ಹೋಗುವಿರಿ?
ಖೋಟಾ ಹಣವನ್ನು ಯಾರಾದರೂ ನಿಮಗೆಂದಾದರೂ ದಾಟಿಸಿದ್ದಾರೋ? ಪ್ರಾಯಶಃ ಇಲ್ಲ, ಆದರೂ ಖೋಟಾ ನೋಟುಗಳು ಸಂಚಲನೆಯಲ್ಲಿವೆ ಎಂದು ಯಾರಾದರೂ ನಿಮಗೆ ಹೇಳಿದಲ್ಲಿ, ನಿಮ್ಮ ಪ್ರತಿಕ್ರಿಯೆಯೇನು? ನೀವು ಸಿಟ್ಟಾಗುವಿರೋ? ನಿಶ್ಚಯವಾಗಿಯೂ ಇಲ್ಲ! ಬದಲಾಗಿ ಅಂತಹ ಎಚ್ಚರಿಕೆ ದೊರೆತದಕ್ಕಾಗಿ ಕೃತಜ್ಞರಾಗಿರುವಿರಿ ಮತ್ತು ಕಷ್ಟಪಟ್ಟು ಗಳಿಸಿದ ಅಪ್ಪಟ ಹಣವನ್ನು ಖೋಟಾ ಹಣಕ್ಕಾಗಿ ಬಿಟ್ಟುಕೊಡದಂತೆ ಜಾಗ್ರತೆ ವಹಿಸುವಿರಿ.
ನಮ್ಮಲ್ಲಿ ಹೆಚ್ಚಿನವರು ಆಗಿಂದಾಗ್ಯೆ ಸಲಹೆ ಮತ್ತು ಎಚ್ಚರಿಕೆಗಳನ್ನು ಪಡೆಯುತ್ತೇವೆ, ಕೆಲವು ಎಚ್ಚರಿಕೆಗಳು ಬೇರೆಯವುಗಳಿಗಿಂತ ಹೆಚ್ಚು ಉಪಯುಕ್ತವೆಂಬದೂ ನಿಜ. ಆದರೆ ಕೆಲವು ಸಲಹೆ ಮತ್ತು ಸೂಚನೆಗಳ ವ್ಯಕ್ತಿಪರ ಮೂಲ್ಯತೆಯನ್ನು ನಾವು ಕಾಣದಿದ್ದರೂ ಸಹಾ, ಅದು ನೀಡಲ್ಪಟ್ಟದ್ದಕ್ಕಾಗಿ ಸಿಟ್ಟುಗೊಳ್ಳಲು ಯಾವುದಾದರೂ ಕಾರಣವಿದೆಯೇ?
ಸತ್ಯಸಂಗತಿಯೇನಂದರೆ ಪ್ರತಿಯೊಬ್ಬನಿಗೆ ಆಗಿಂದಾಗ್ಯೆ ಸಹಾಯ ಮತ್ತು ಸಲಹೆಯ ಅಗತ್ಯವಿರುವದೇ. ನಮ್ಮನ್ನು ಸುತ್ತಿರುವ ಆರ್ಥಿಕ ಮತ್ತು ರಾಜಕೀಯ ಅನಿಶ್ಚಯತೆಗಳ ಮಧ್ಯೆ ಪ್ರತಿಯೊಬ್ಬನಿಗೆ ಭವಿಷ್ಯತ್ತಿಗಾಗಿ ದೃಢ ನಿರೀಕ್ಷೆ ಬೇಕು. ಸುಮಾರು ಅರ್ಧದಷ್ಟು ವಿವಾಹಗಳು ವಿಚ್ಛೇದನೆಯಲ್ಲಿ ಅಂತ್ಯಗೊಳ್ಳುವ, ಹದಿವಯಸ್ಕರ ಗರ್ಭಧಾರಣೆ ಹೆಚ್ಚುತ್ತಿರುವ ಮತ್ತು ಲೈಂಗಿಕವಾಗಿ ಹರಡುತ್ತಿರುವ ರೋಗಗಳು ವೃದ್ಧಿಯಾಗುತ್ತಿರುವ ಒಂದು ಲೋಕದಲ್ಲಿ, ಗಂಭೀರವೂ ವ್ಯಾವಹಾರ್ಯವೂ ಆದ ಮಾರ್ಗದರ್ಶನೆ ಅತ್ಯಾವಶ್ಯಕವಾಗಿದೆ. ಈ ಗಲಿಬಿಲಿಯ ವಿಷಯ ವ್ಯವಸ್ಥೆಯಲ್ಲಿ ತಮ್ಮ ಮಕ್ಕಳನ್ನು ಬೆಳೆಸುವ ಉತ್ತಮ ವಿಧಾನವನ್ನು ನಿರ್ಧರಿಸುವಲ್ಲಿ ಹೆತ್ತವರಿಗೆ ಸಹಾಯದ ಅಗತ್ಯವಿದೆ. ಮಿತಿಮೀರಿದ್ದಾಗಿ ತೋರುವ ತಮ್ಮ ಬಾವೂದ್ರೇಕಗಳ ಹೋರಾಟವನ್ನು ಮತ್ತು ಒತ್ತಡವನ್ನು ಕ್ರಮಪಡಿಸಲು ಹದಿವಯಸ್ಕರಿಗೆ ನೆರವು ಬೇಕು. ಅಪ್ರಾಮಾಣಿಕತೆ, ಅನೈತಿಕತೆ ಮತ್ತು ಹಿಂಸಾಚಾರವು ಅಧಿಕಾಧಿಕವಾಗಿ ಸಮ್ಮತಿಸಲ್ಪಡುವ ಲೋಕದಲ್ಲಿ, ವ್ಯಾವಹಾರ್ಯವಾದ ನೈತಿಕ ಮೌಲ್ಯಗಳನ್ನು ಆಚರಿಸಲು ಪ್ರತಿಯೊಬ್ಬನಿಗೆ ಸಹಾಯದ ಅಗತ್ಯವಿದೆ.
ಅಂಥ ಸಹಾಯವನ್ನು ಎಲ್ಲಿ ಕಂಡುಕೊಳ್ಳಬಹುದು? ಜೀವಿತದ ಮೇಲೆ ಸಲಹೆಯನ್ನು ಕೊಡುವ ಅತ್ಯಂತ ಉತ್ತಮ ಮೂಲವು ದೇವರ ಪ್ರೇರಿತ ವಾಕ್ಯವಾದ ಬೈಬಲು. “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ” ಎಂದು ಪ್ರಾಚೀನ ಕೀರ್ತನೆಗಾರನು ಬರೆದಿದ್ದಾನೆ. (ಕೀರ್ತನೆ 119:105) ಯಾರು ದೇವರ ವಾಕ್ಯವನ್ನು ಓದಿ, ಅದನ್ನು ಅನ್ವಯಿಸಿಕೊಳ್ಳುತ್ತಾರೋ ಅವರು ಇಂದಿರುವ ಹೆಚ್ಚಿನ ಕುಣಿಗಳನ್ನು ತಪ್ಪಿಸಿಕೊಳ್ಳುತ್ತಾರೆ. ಯೆಹೋವನ ಸಾಕ್ಷಿಗಳು ಪ್ರತಿವರ್ಷ ತಮ್ಮ ನೆರೆಯವರನ್ನು ಸಂದರ್ಶಿಸಿ, ಅವರೊಂದಿಗೆ ಬೈಬಲನ್ನು ಚರ್ಚಿಸುವುದರಲ್ಲಿ ಮಿಲ್ಯಾಂತರ ತಾಸುಗಳನ್ನು ವ್ಯಯಿಸುವ ಒಂದು ಕಾರಣವು ಇದೇ ಆಗಿದೆ. ಆದರೂ ಹೆಚ್ಚಿನವರು ಕಿವಿಗೊಡುವುದಿಲ್ಲ, ಕೆಲವರು ಸಿಟ್ಟಾಗುತ್ತಾರೆ ಸಹಾ. ಇದೇಕೆ?
ಮುಚ್ಚಿದ ಮನ—ಏಕೆ?
ಒಳ್ಳೇದು, ಹೆಚ್ಚಿನ ಜನರು ಸಲಹೆ ಪಡೆಯುವ ವಿಷಯದಲ್ಲಿ ಅತ್ಯಂತ ಸೂಕ್ಷ್ಮವೇದಿಗಳು, ವಿಶೇಷವಾಗಿ ಧರ್ಮದ ಸಂಬಂಧದಲ್ಲಿ. ತಮ್ಮ ಉಪದೇಶಿಗಳು ನೀಡುವ ಸೂಚನೆಗೆ ಚರ್ಚ್ ಸದಸ್ಯರು ಸಹಾ ಯಾವಾಗಲೂ ಕಿವಿಗೊಡುವುದಿಲ್ಲ. ಒಬ್ಬ ಬ್ರಿಟಿಷ್ ವೈದಿಕರು ಪ್ರಲಾಪಿಸಿದ್ದು: “ಪ್ರತಿಯೊಬ್ಬನಲ್ಲಿ ಅವನ ಸ್ವಂತ ಅಭಿಪ್ರಾಯಗಳಿವೆ ಮತ್ತು ಅವು ಉಪದೇಶಿಯದಕ್ಕಿಂತ ಕಡಿಮೆಯದಲ್ಲ ಎಂದವರು ಪರಿಗಣಿಸುತ್ತಾರೆ.” ಆದ್ದರಿಂದ, ತಮ್ಮ ಮನೆಬಾಗಲಲ್ಲಿ ನಿಂತಿರುವ ಒಬ್ಬ ಅಪರಿಚಿತನಿಗೆ ಅವರು ಕಿವಿಗೊಡದಿರುವುದೇನೂ ಆಶ್ಚರ್ಯವಲ್ಲ.
ಅದಲ್ಲದೆ, ಸಂದೇಹಕ್ಕೆ ಆಸ್ಪದವಿರುವ ಯುಗದಲ್ಲಿ ನಾವು ಜೀವಿಸುತ್ತೇವಾದರೂ, ತಮ್ಮ ಚರ್ಚಿನೊಂದಿಗೆ ನಿಶ್ಚಲವಾದ, ಭಾವನಾತ್ಮಕ ಬಂಧಗಳು ಇನ್ನೂ ಹೆಚ್ಚಿನವರಿಗೆ ಇವೆ. ಒಂದು ವಿಶ್ವಕೋಶವು ತಿಳಿಸಿದ ಪ್ರಕಾರ, “ಧರ್ಮವು ಅಸಂಖ್ಯಾತ ಜನರ ಹೃದಯದ ಆಳದಲ್ಲಿರುವ ಭಾವನೆಗಳನ್ನು ಸ್ಪರ್ಶಿಸುತ್ತದೆ.” ಅಂಥ ಜನರು, ಬೈಬಲಿನ ಕುರಿತು ಇನ್ನೊಂದು ಧರ್ಮದವನೊಂದಿಗೆ ಮಾತಾಡುವ ಅಗತ್ಯವನ್ನು ಒಂದು ವೇಳೆ ಕಾಣಲಿಕ್ಕಿಲ್ಲ, ಆ ಚರ್ಚೆಯು ಅವರ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ನೀಡುವ ಸ್ಥಾನದಲ್ಲಿರುವಾಗಲೂ.
ಇನ್ನು ಕೆಲವರು ಬೈಬಲನ್ನು ಚರ್ಚಿಸ ಬಯಸುವುದಿಲ್ಲ ಯಾಕಂದರೆ ಧರ್ಮದಲ್ಲಿ ನಡಿಯುತ್ತಿರುವ ಬಹಳಷ್ಟು ಕಪಟತನ ಮತ್ತು ಭ್ರಷ್ಟತೆಯನ್ನು ಅವರು ಕಂಡಿದ್ದಾರೆ. ಕೆಲವು ಧರ್ಮ ಮುಖಂಡರು ಅನೈತಿಕತೆಯನ್ನು ಮಾನ್ಯಮಾಡುವುದು ಅವರನ್ನು ರೇಗಿಸಿದೆ, ಹಲವಾರು ಟೀವೀ ಸುವಾರ್ತಿಕರ ನಿರ್ಲಜ್ಜೆಯ ಧನಲೋಭವನ್ನು ಅವರು ಹೇಸಿದ್ದಾರೆ. ರಾಜಕೀಯ ಹೋರಾಟದಲ್ಲಿ ಒಂದು ಪಕ್ಷಕ್ಕೆ ಇನ್ನೊಂದು ಪಕ್ಷದ ವಿರುದ್ಧವಾಗಿ ಬೆಂಬಲಕೊಡಲು ತನ್ನ ಅಧಿಕಾರವನ್ನು ವೈದಿಕನು ಪ್ರಯೋಗಿಸುವುದು ಪ್ರಾಯಶಃ ಅವರಿಗೆ ತಿರಸ್ಕಾರ ತಂದಿದೆ. ಧರ್ಮವು ಪರಿಹರಿಸುವದಕ್ಕಿಂತ ಉಂಟುಮಾಡುವ ಸಮಸ್ಯೆಗಳೇ ಹೆಚ್ಚು ಎಂದವರಿಗೆ ತೋರುತ್ತದೆ.
ಅಂಥವರು ದೂರುತ್ತಿರುವ ಸಮಸ್ಯೆಗಳು ನಿಜವಾದವುಗಳು. ಧಾರ್ಮಿಕವಾಗಿ ಹೇಳುವುದಾದರೆ ಬಹಳಷ್ಟು “ಖೋಟಾ ಹಣವು” ಅಲ್ಲಿ ಸಂಚಲನೆಯಲ್ಲಿದೆ. ಆದರೆ ಈ ಕಾರಣಕ್ಕಾಗಿ, ಬೈಬಲಿನ ಮೂಲ್ಯವುಳ್ಳ ಸಹಾಯವನ್ನು ಸ್ವೀಕರಿಸಲು ನಿರಾಕರಿಸುವುದು, ಖೋಟಾ ನೋಟುಗಳು ಸಂಚಲನೆಯಲ್ಲಿರುವ ಕಾರಣ ಅಪ್ಪಟ ನೋಟುಗಳನ್ನು ಸ್ವೀಕರಿಸಲು ನಿರಾಕರಿಸುವಷ್ಟೇ ಅಸಮಂಜಸವಾಗಿದೆ!
ಮತ್ತು ಈ ಮೊದಲೇ ತಿಳಿಸಿದಂತೆ ನಮಗೆಲ್ಲರಿಗೆ, ಕಷ್ಟದ ಆಯ್ಕೆಗಳ ಮತ್ತು ಅಪಾಯದ ಪರಿಸ್ಥಿತಿಗಳ ಈ ಲೋಕದಲ್ಲಿ ಸೂಚನೆಯ ಅಗತ್ಯವಿದೆ. ಸಲಹೆಯನ್ನು ಸ್ವೀಕರಿಸುವ ಈ ವಿಷಯದಲ್ಲಿ ಸುಜ್ಞ ಮಾರ್ಗದರ್ಶನೆಯ ಯಾವ ಮಾರ್ಗವಾದರೂ ಇದೆಯೋ? ಬೈಬಲಿನ ಕುರಿತು ಇನ್ನೊಂದು ಧರ್ಮದವನೊಂದಿಗೆ ಮಾತಾಡುವುದು ಅನಾವಶ್ಯಕವೂ, ಅಥವಾ ತಪ್ಪೋ? ಒಳ್ಳೇ ಸೂಚನೆಯನ್ನು ಸ್ವೀಕರಿಸಲು ಸಾಕಷ್ಟು ತೆರೆದ ಮನಸ್ಸು ಇದ್ದಾಗಲೂ, ಖೋಟಾ ಸಲಹೆಯಿಂದ ಮೋಸ ಹೋಗದಿರಲು ಸಾಧ್ಯವೂ? ಇದರ ಕುರಿತು ಬೈಬಲು ಹೇಳುವದೇನು? (w89 8/1)