ಅಧ್ಯಯನ ಲೇಖನ 28
ಗೀತೆ 88 ನಿನ್ನ ದಾರಿಗಳನ್ನ ನನಗೆ ಕಲಿಸು
ಒಳ್ಳೆ ಸಲಹೆ ಪಡ್ಕೊಳ್ಳೋಕೆ ಏನು ಮಾಡಬೇಕು?
“ಸಲಹೆ ಕೇಳುವವನಿಗೆ ವಿವೇಕ ಸಿಗುತ್ತೆ.”—ಜ್ಞಾನೋ. 13:10.
ಈ ಲೇಖನದಲ್ಲಿ ಏನಿದೆ?
ನಮಗೆ ಸಿಗೋ ಸಲಹೆಯಿಂದ ಪೂರ್ತಿ ಪ್ರಯೋಜ್ನ ಪಡೆಯೋಕೆ ಏನು ಮಾಡಬೇಕು ಅಂತ ನೋಡೋಣ.
1. ನಾವು ಒಳ್ಳೆ ನಿರ್ಧಾರ ಮಾಡೋಕೆ ಮತ್ತು ಆ ನಿರ್ಧಾರಗಳು ಯಶಸ್ಸಾಗೋಕೆ ಯಾವುದು ಸಹಾಯ ಮಾಡುತ್ತೆ? (ಜ್ಞಾನೋಕ್ತಿ 13:10; 15:22)
‘ಜೀವನದಲ್ಲಿ ಒಳ್ಳೆ ನಿರ್ಧಾರಗಳನ್ನ ಮಾಡಬೇಕು, ನಮ್ಮ ಆ ನಿರ್ಧಾರಗಳು ಯಶಸ್ಸಾಗಬೇಕು’ ಅಂತ ನಾವೆಲ್ರೂ ಇಷ್ಟಪಡ್ತೀವಿ. ಆದ್ರೆ ಇದೆಲ್ಲಾ ಆಗಬೇಕಂದ್ರೆ ನಾವೇನು ಮಾಡಬೇಕು ಅಂತ ಬೈಬಲ್ ಹೇಳುತ್ತೆ.—ಜ್ಞಾನೋಕ್ತಿ 13:10; 15:22 ಓದಿ.
2. ಯೆಹೋವ ಏನಂತ ಮಾತು ಕೊಟ್ಟಿದ್ದಾನೆ?
2 ನಾವು ನಿರ್ಧಾರ ಮಾಡೋಕೆ ಮತ್ತು ನಮ್ಮ ನಿರ್ಧಾರ ಯಶಸ್ಸಾಗೋಕೆ ನಮಗೆ ಸಲಹೆ ಬೇಕು. ಅದನ್ನ ಯೆಹೋವನಷ್ಟು ಚೆನ್ನಾಗಿ ಇಡೀ ಪ್ರಪಂಚದಲ್ಲಿ ಯಾರ ಕೈಯಲ್ಲೂ ಕೊಡೋಕಾಗಲ್ಲ. ಅದಕ್ಕೆ ಯೆಹೋವ, “ನಿನ್ನ ಮೇಲೆ ಕಣ್ಣಿಟ್ಟು ಸಲಹೆ ಕೊಡ್ತೀನಿ” ಅಂತ ಮಾತು ಕೊಟ್ಟಿದ್ದಾನೆ. (ಕೀರ್ತ. 32:8) ಈ ಮಾತನ್ನ ಚೆನ್ನಾಗಿ ಗಮನಿಸಿದ್ರೆ ಯೆಹೋವ ನಮ್ಮಲ್ಲಿ ಪ್ರತಿಯೊಬ್ರ ಬಗ್ಗೆ ಯೋಚ್ನೆ ಮಾಡಿ ನಮಗೇನು ಬೇಕೋ ಅದೇ ಸಲಹೆನ ಕೊಡ್ತಾನೆ ಮತ್ತು ಆ ಸಲಹೆನ ಪಾಲಿಸೋಕೆ ಸಹಾಯನೂ ಮಾಡ್ತಾನೆ ಅಂತ ಗೊತ್ತಾಗುತ್ತೆ.
3. ಈ ಲೇಖನದಲ್ಲಿ ಏನು ಕಲಿತೀವಿ?
3 ಈ ಲೇಖನದಲ್ಲಿ ನಾಲ್ಕು ಪ್ರಶ್ನೆಗಳಿಗೆ ಬೈಬಲ್ ಏನು ಉತ್ರ ಕೊಡುತ್ತೆ ಅಂತ ನೋಡೋಣ. ಒಂದು, ನಾವು ಸಲಹೆಯಿಂದ ಪ್ರಯೋಜ್ನ ಪಡಿಬೇಕಂದ್ರೆ ನಮ್ಮಲ್ಲಿ ಯಾವ ಗುಣಗಳಿರಬೇಕು? ಎರಡು, ನಮಗೆ ಯಾರು ಒಳ್ಳೆ ಸಲಹೆ ಕೊಡ್ತಾರೆ? ಮೂರು, ಸಲಹೆ ಕೇಳುವಾಗ ನಮ್ಮಲ್ಲಿ ಯಾವ ಮನೋಭಾವ ಇರಬೇಕು? ನಾಲ್ಕು, ‘ನನ್ನ ಜಾಗದಲ್ಲಿ ನೀವಿದಿದ್ರೆ ಯಾವ ನಿರ್ಧಾರ ಮಾಡ್ತಿದ್ರಿ’ ಅಂತ ಕೇಳೋದು ಸರಿನಾ?
ನಮ್ಮಲ್ಲಿ ಯಾವ ಗುಣಗಳಿರಬೇಕು?
4. ಒಳ್ಳೆ ಸಲಹೆಯಿಂದ ಪ್ರಯೋಜ್ನ ಪಡಿಬೇಕಂದ್ರೆ ನಮ್ಮಲ್ಲಿ ಯಾವ ಗುಣಗಳಿರಬೇಕು?
4 ಸಲಹೆಯಿಂದ ಪ್ರಯೋಜ್ನ ಪಡೆಯೋಕೆ ನಮ್ಮಲ್ಲಿ ದೀನತೆ ಇರಬೇಕು ಮತ್ತು ನಮ್ಮ ಇತಿಮಿತಿನ ನಾವು ಅರ್ಥ ಮಾಡ್ಕೋಬೇಕು. ನಮ್ಮಷ್ಟಕೆ ನಾವೇ ಒಳ್ಳೆ ನಿರ್ಧಾರ ಮಾಡೋಕಾಗಲ್ಲ, ನಮಗೆ ಬೇರೆಯವ್ರ ಸಹಾಯ ಬೇಕು. ಯಾಕಂದ್ರೆ ಎಲ್ಲಾ ನಿರ್ಧಾರಗಳನ್ನ ತಗೊಳ್ಳೋ ಅನುಭವ ಮತ್ತು ಜ್ಞಾನ ನಮ್ಮ ಹತ್ರ ಎಲ್ಲ ಟೈಮಲ್ಲೂ ಇರಲ್ಲ. ಒಂದುವೇಳೆ ನಮ್ಮಲ್ಲಿ ದೀನತೆ ಇಲ್ಲ ಅಂದ್ರೆ ನಮ್ಮ ಇತಿಮಿತಿನ ಅರ್ಥ ಮಾಡ್ಕೊಂಡಿಲ್ಲ ಅಂದ್ರೆ ಯೆಹೋವ ನಮಗೆ ಸಹಾಯ ಮಾಡಲ್ಲ. ಅಷ್ಟೇ ಅಲ್ಲ, ಆಗ ಬೈಬಲಿಂದ ನಾವು ಏನೇ ಸಲಹೆ ಓದಿದ್ರೂ ಅದು ಬಂಡೆ ಮೇಲೆ ನೀರು ಸುರಿದಂತೆ ವ್ಯರ್ಥ ಆಗೋಗುತ್ತೆ. (ಮೀಕ 6:8; 1 ಪೇತ್ರ 5:5) ಆದ್ರೆ ಈ ಗುಣಗಳನ್ನ ನಾವು ಬೆಳೆಸ್ಕೊಂಡ್ರೆ ಬೇಗ ಬೈಬಲ್ ಸಲಹೆನ ಅರ್ಥ ಮಾಡ್ಕೊಳ್ತೀವಿ ಮತ್ತು ಪಾಲಿಸ್ತೀವಿ.
5. ದಾವೀದ ಅಹಂಕಾರ ಪಡೋಕೆ ಕಾರಣಗಳಿತ್ತ?
5 ನಾವೀಗ ರಾಜ ದಾವೀದನಿಂದ ಏನು ಕಲಿಬಹುದು ಅಂತ ನೋಡೋಣ. ಅವನು ಮಾಡಿದ ಸಾಧನೆ ಒಂದಾ ಎರಡಾ? ಅದನ್ನೆಲ್ಲ ನೋಡಿ ಅವನಲ್ಲಿ ಅಹಂಕಾರ ಬೆಳಿಬಹುದಿತ್ತು. ಅವನು ರಾಜನಾಗೋ ಮುಂಚೆ ಸೂಪರ್ ಆಗಿ ಸಂಗೀತ ನುಡಿಸ್ತಿದ್ದ, ತುಂಬಾ ಫೇಮಸ್ ಆಗಿದ್ದ. ಅದಕ್ಕೆ ಅವನಿಗೆ ರಾಜನ ಮುಂದೆ ಸಂಗೀತ ನುಡಿಸೋ ಕೆಲಸ ಕೊಟ್ರು. (1 ಸಮು. 16:18, 19) ಯೆಹೋವ ಅವನನ್ನ ರಾಜನಾಗಿ ಅಭಿಷೇಕಿಸಿದ ಮೇಲೆ ಪವಿತ್ರಶಕ್ತಿ ಕೊಟ್ಟನು. (1 ಸಮು. 16:11-13) ಅವನು ವೀರ ಸೈನಿಕನಾಗಿದ್ದ. ಎಷ್ಟೋ ಶತ್ರುಗಳನ್ನ ಸೋಲಿಸಿದ್ದ, ದೈತ್ಯ ಗೊಲ್ಯಾತನನ್ನೇ ಕೊಂದು ಹಾಕಿದ್ದ. ಅದಕ್ಕೆ ಇಡೀ ಇಸ್ರಾಯೇಲಿನಲ್ಲಿ ಹೆಸರುವಾಸಿಯಾದ. (1 ಸಮು. 17:37, 50; 18:7) ಒಂದುವೇಳೆ ದಾವೀದನಲ್ಲಿ ಅಹಂಕಾರ ಇದ್ದಿದ್ರೆ, ‘ನಾನು ಇಷ್ಟೆಲ್ಲಾ ಸಾಧಿಸಿದ್ದೀನಿ, ನಂಗೆ ಬೇರೆಯವ್ರ ಸಲಹೆ ಅಗತ್ಯ ಇಲ್ಲ, ಯಾರೂ ನಂಗೆ ಬುದ್ಧಿ ಹೇಳಬೇಕಾಗಿಲ್ಲ’ ಅಂತ ಅಂದ್ಕೊಬಹುದಿತ್ತು. ಆದ್ರೆ ಅವನು ಆ ತರ ಅಂದ್ಕೊಳ್ಳಲಿಲ್ಲ. ಅವನಲ್ಲಿ ತುಂಬ ದೀನತೆ ಇತ್ತು.
6. ದಾವೀದನಿಗೆ ಸಲಹೆ ಕೇಳೋ ಮನಸ್ಸು ಯಾವಾಗ್ಲೂ ಇತ್ತು ಅಂತ ಹೇಗೆ ಹೇಳಬಹುದು? (ಮುಖಪುಟ ಚಿತ್ರ ನೋಡಿ.)
6 ದಾವೀದ ರಾಜನಾದ್ಮೇಲೂ ಒಳ್ಳೆ ಸಲಹೆ ಕೊಡೋರನ್ನ ಫ್ರೆಂಡ್ಸ್ ಮಾಡ್ಕೊಂಡಿದ್ದ. (1 ಪೂರ್ವ. 27:32-34) ರಾಜನಾಗೋ ಮುಂಚೆನೂ ಬೇರೆಯವರು ಕೊಡ್ತಿದ್ದ ಸಲಹೆನ ಕೇಳಿಸ್ಕೊಳ್ತಿದ್ದ. ಅವನು ಬರೀ ಗಂಡಸರು ಸಲಹೆ ಕೊಟ್ಟಾಗ ಮಾತ್ರ ಅಲ್ಲ ಹೆಂಗಸು ಸಲಹೆ ಕೊಟ್ಟಾಗ್ಲೂ ಕೇಳಿಸ್ಕೊಂಡಿದ್ದ. ಒಂದ್ಸಲ ನಾಬಾಲನ ಹೆಂಡತಿ ಅಬೀಗೈಲ್ ದಾವೀದನಿಗೆ ಸಲಹೆ ಕೊಟ್ಟಿದ್ದು ನೆನಪಿದ್ಯಾ? ನಾಬಲ ಸ್ವಾರ್ಥಿ, ಅಹಂಕಾರಿಯಾಗಿದ್ದ. ಬೇರೆಯವ್ರಿಗೆ ಒಂಚೂರು ಬೆಲೆ ಕೊಡ್ತಿರ್ಲಿಲ್ಲ. ಆದ್ರೆ ಅವನ ಹೆಂಡತಿ ಅಬೀಗೈಲ್ ಕೊಟ್ಟ ಸಲಹೆನೂ ದಾವೀದ ದೀನತೆಯಿಂದ ಪಾಲಿಸಿದ. ಇದ್ರಿಂದ ಒಂದು ದೊಡ್ಡ ಅನಾಹುತ ಆಗದಂತೆ ತಪ್ಪಿಸಿದ.—1 ಸಮು. 25:2, 3, 21-25, 32-34.
ಅಬೀಗೈಲ್ ಕೊಟ್ಟ ಸಲಹೆನ ರಾಜ ದಾವೀದ ದೀನತೆಯಿಂದ ಕೇಳಿಸ್ಕೊಂಡ ಮತ್ತು ಪಾಲಿಸಿದ (ಪ್ಯಾರ 6 ನೋಡಿ)
7. ದಾವೀದನಿಂದ ನಾವೇನು ಕಲಿಬಹುದು? (ಪ್ರಸಂಗಿ 4:13) (ಚಿತ್ರ ನೋಡಿ.)
7 ದಾವೀದನಿಂದ ನಾವೇನು ಕಲಿಬಹುದು? ನಮ್ಮಲ್ಲಿ ಬೇರೆ ಬೇರೆ ಸಾಮರ್ಥ್ಯ ಮತ್ತು ಸ್ವಲ್ಪ ಮಟ್ಟಿಗೆ ಅಧಿಕಾರ ಇರಬಹುದು. ಹಾಗಿದ್ರೂ ನಾವು, ‘ನನಗೆಲ್ಲ ಗೊತ್ತು, ನನಗೆ ಯಾರೂ ಸಲಹೆ ಕೊಡಬೇಕಾಗಿಲ್ಲ’ ಅಂತ ಯಾವತ್ತೂ ಅಂದ್ಕೊಬಾರದು. ಸಲಹೆ ಯಾರೇ ಕೊಡ್ಲಿ ಅದು ಒಳ್ಳೆ ಸಲಹೆ ಆಗಿದ್ರೆ ಅದನ್ನ ಪಾಲಿಸೋಕೆ ದಾವೀದನ ತರ ಯಾವಾಗ್ಲೂ ರೆಡಿ ಇರಬೇಕು. ನಾವು ಹೀಗೆ ಮಾಡಿದ್ರೆ ದೊಡ್ಡ ದೊಡ್ಡ ತಪ್ಪುಗಳನ್ನ ಮಾಡದೇ ಇರೋ ಹಾಗೆ ನೋಡ್ಕೊಳ್ತೀವಿ. (ಪ್ರಸಂಗಿ 4:13 ಓದಿ.) ಆಗ ನಾವೂ ತೊಂದ್ರೆಲಿ ಸಿಕ್ಕಿ ಬೀಳಲ್ಲ, ಬೇರೆಯವ್ರನ್ನೂ ತೊಂದ್ರೆಲಿ ಸಿಕ್ಕಿ ಹಾಕಿಸಲ್ಲ.
ಯಾರೇ ಸಲಹೆ ಕೊಡ್ಲಿ, ಅದು ಒಳ್ಳೆ ಸಲಹೆ ಆಗಿದ್ರೆ ಅದನ್ನ ಮನಸಾರೆ ಕೇಳೋಕೆ ನಾವು ರೆಡಿ ಇರಬೇಕು (ಪ್ಯಾರ 7 ನೋಡಿ)c
ನಮಗೆ ಯಾರು ಒಳ್ಳೆ ಸಲಹೆ ಕೊಡ್ತಾರೆ?
8. ದಾವೀದನಿಗೆ ಒಳ್ಳೆ ಸಲಹೆ ಕೊಡೋ ಸ್ಥಾನದಲ್ಲಿ ಯೋನಾತಾನ ಇದ್ದ ಅಂತ ನಾವು ಯಾಕೆ ಹೇಳಬಹುದು?
8 ನಾವು ದಾವೀದನಿಂದ ಇನ್ನೊಂದು ಪಾಠನೂ ಕಲಿಬಹುದು. ಅವನು ಎಂಥವ್ರ ಹತ್ರ ಸಲಹೆ ಕೇಳಿದ? ಯಾರಿಗೆ ಯೆಹೋವನ ಜೊತೆ ಒಳ್ಳೆ ಸ್ನೇಹ ಇತ್ತೋ ಮತ್ತು ಯಾರು ಅವನ ಪರಿಸ್ಥಿತಿನ ಚೆನ್ನಾಗಿ ಅರ್ಥ ಮಾಡ್ಕೊಂಡ್ರೋ ಅವ್ರ ಹತ್ರ ಕೇಳಿದ. ಉದಾಹರಣೆಗೆ, ಒಂದು ಸಲ ದಾವೀದ ತಾನು ಸೌಲನ ಜೊತೆ ಮತ್ತೆ ಒಂದಾಗಬೇಕಾ ಬೇಡ್ವಾ ಅಂತ ನಿರ್ಧಾರ ಮಾಡಬೇಕಿತ್ತು. ಆಗ ಅವನು ಸೌಲನ ಮಗನಾದ ಯೋನಾತಾನನ ಹತ್ರ ಸಲಹೆ ಕೇಳ್ತಾನೆ. ಯೋನಾತಾನ ಒಳ್ಳೆ ಸಲಹೆ ಕೊಟ್ಟ. ಯಾಕೆ? ಯಾಕಂದ್ರೆ ಅವನಿಗೆ ಯೆಹೋವನ ಜೊತೆ ಒಳ್ಳೆ ಸ್ನೇಹ ಇತ್ತು ಮತ್ತು ದಾವೀದನ ಪರಿಸ್ಥಿತಿ ಚೆನ್ನಾಗಿ ಗೊತ್ತಿತ್ತು ಹಾಗೂ ಸೌಲ ಹೇಗೆ ನಡ್ಕೊಳ್ತಾನೆ ಅಂತಾನೂ ಅರ್ಥ ಮಾಡಿಕೊಂಡಿದ್ದ.—1 ಸಮು. 20:9-13.
9. ನಾವು ಯಾರ ಹತ್ರ ಸಲಹೆ ಕೇಳಬೇಕು? ಉದಾಹರಣೆ ಕೊಡಿ. (ಜ್ಞಾನೋಕ್ತಿ 13:20)
9 ನಾವು ಯಾರ ಹತ್ರ ಸಲಹೆ ಕೇಳಬಹುದು? ಯಾರಿಗೆ ಯೆಹೋವನ ಜೊತೆ ಒಳ್ಳೆ ಸಂಬಂಧ ಇದ್ಯೋ ಮತ್ತು ಯಾರು ನಾವು ನಿರ್ಧಾರ ಮಾಡಬೇಕಂತಿರೋ ವಿಷ್ಯನ ಚೆನ್ನಾಗಿ ಅರ್ಥ ಮಾಡ್ಕೊಳ್ತಾರೋ ಅವ್ರ ಹತ್ರ ಸಲಹೆ ಕೇಳಬೇಕು.a (ಜ್ಞಾನೋಕ್ತಿ 13:20 ಓದಿ.) ಉದಾಹರಣೆಗೆ, ಒಬ್ಬ ಯುವ ಸಹೋದರ ಮದುವೆ ಆಗಬೇಕು ಅಂತ ನಿರ್ಣಯ ಮಾಡಿ ಒಳ್ಳೆ ಸಂಗಾತಿಗೋಸ್ಕರ ಹುಡುಕ್ತಿದ್ದಾನೆ ಅಂತ ಅಂದ್ಕೊಳ್ಳಿ. ಈಗ ಅವನು ಯಾರ ಹತ್ರ ಒಳ್ಳೆ ಸಲಹೆ ಕೇಳಬಹುದು? ಮದುವೆ ಆಗದಿರೋ ಒಬ್ಬ ಫ್ರೆಂಡ್ ಹತ್ರ ಕೇಳಿದ್ರೆ ಹೇಗಿರುತ್ತೆ? ಆ ಫ್ರೆಂಡ್ ಬೈಬಲಿಂದ ಸಲಹೆ ಕೊಟ್ರೆ ಮಾತ್ರ ಅದು ಒಳ್ಳೆ ಸಲಹೆ ಆಗಿರುತ್ತೆ. ಆದ್ರೆ ಆ ಯುವ ಸಹೋದರ ತನ್ನ ಬಗ್ಗೆ ಚೆನ್ನಾಗಿ ಗೊತ್ತಿರೋ ಮತ್ತು ಖುಷಿಯಾಗಿ ಯೆಹೋವನ ಸೇವೆ ಮಾಡ್ತಿರೋ ದಂಪತಿ ಹತ್ರ ಸಲಹೆ ಕೇಳಿದ್ರೆ ಹೇಗಿರುತ್ತೆ? ಅವರು ಬೈಬಲಿಂದ ಒಳ್ಳೆ ಸಲಹೆ ಕೊಡ್ತಾರೆ, ಅದ್ರ ಜೊತೆಗೆ ತಮ್ಮ ಸ್ವಂತ ಅನುಭವನೂ ಹೇಳ್ತಾರೆ. ಇದ್ರಿಂದ ಆ ಸಹೋದರ ಒಳ್ಳೆ ನಿರ್ಧಾರ ಮಾಡೋಕಾಗುತ್ತೆ.
10. ನಾವು ಇನ್ನೇನು ಕಲಿತೀವಿ?
10 ನಾವು ಇಲ್ಲಿ ತನಕ ನಮಗೆ ಯಾರು ಒಳ್ಳೆ ಸಲಹೆ ಕೊಡಬಹುದು ಅಂತ ಮತ್ತು ನಾವು ಬೆಳೆಸ್ಕೊಬೇಕಾಗಿರೋ ಎರಡು ಗುಣಗಳು ಯಾವುದು ಅಂತ ಕಲಿತ್ವಿ. ಈಗ, ನಾವು ಬೇರೆಯವ್ರ ಹತ್ರ ಸಲಹೆ ಕೇಳಬೇಕಾದ್ರೆ ಯಾವ ಮನೋಭಾವ ಇರಬೇಕು ಮತ್ತು ‘ನನ್ನ ಜಾಗದಲ್ಲಿ ನೀವು ಇದ್ದಿದ್ರೆ ಏನು ಮಾಡ್ತಿದ್ರಿ’ ಅಂತ ಕೇಳೋದು ಸರಿನಾ? ಅಂತ ನೋಡೋಣ.
ಸಲಹೆ ಕೇಳುವಾಗ ನಮ್ಮಲ್ಲಿ ಯಾವ ಮನೋಭಾವ ಇರಬೇಕು?
11-12. (ಎ) ಕೆಲವರು ಸಲಹೆ ಕೇಳೋ ತರ ಕಾಣ್ತಾರೆ ಆದ್ರೆ ಏನು ಮಾಡಿಬಿಟ್ಟಿರ್ತಾರೆ? (ಬಿ) ರಾಜ ರೆಹಬ್ಬಾಮ ಒಂದು ಮುಖ್ಯ ನಿರ್ಧಾರ ಮಾಡಬೇಕಾದಾಗ ಯಾವ ತಪ್ಪು ಮಾಡಿಬಿಟ್ಟ?
11 ಕೆಲವೊಬ್ರು ಸಲಹೆ ಕೇಳೋ ತರ ಕಾಣ್ತಾರೆ. ಆದ್ರೆ ನಿಜ ಏನಂದ್ರೆ ಅವರು ಈಗಾಗ್ಲೆ ತಮ್ಮ ಮನಸ್ಸಲ್ಲಿ ಒಂದು ನಿರ್ಧಾರ ಮಾಡಿಬಿಟ್ಟಿರ್ತಾರೆ. ಹಾಗಾಗಿ ಅವರು ಸಲಹೆ ಕೇಳೋಕಲ್ಲ ಬದಲಿಗೆ ಅವರು ಮಾಡಿರೋ ನಿರ್ಧಾರನ ಬೇರೆಯವರು ಒಪ್ತಾರಾ ಇಲ್ವಾ ಅಂತ ತಿಳ್ಕೊಳ್ಳೋಕಷ್ಟೇ ಕೇಳ್ತಾರೆ. ಹಾಗಾಗಿ ಇವ್ರಿಗೆ ನಿಜವಾಗ್ಲೂ ಸಲಹೆನ ಕೇಳೋ ಮತ್ತು ಪಾಲಿಸೋ ಮನಸ್ಸಿರಲ್ಲ. ಇಂಥವರು ರಾಜ ರೆಹಬ್ಬಾಮನಿಂದ ಎಚ್ಚರಿಕೆ ಪಾಠ ಕಲಿಬಹುದು.
12 ಸೊಲೊಮೋನ ಸತ್ತ ನಂತ್ರ ರೆಹಬ್ಬಾಮ ಇಸ್ರಾಯೇಲಿನ ರಾಜನಾಗ್ತಾನೆ. ಅವನು ರಾಜನಾದಾಗ ಇಸ್ರಾಯೇಲ್ ದೇಶ ಶ್ರೀಮಂತವಾಗಿರುತ್ತೆ. ಅಲ್ಲಿದ್ದ ಜನ್ರಿಗೆ ಸೊಲೊಮೋನ ಇಷ್ಟು ವರ್ಷ ತಮಗೆ ಕಷ್ಟದ ಕೆಲಸ ಕೊಡ್ತಿದ್ದ ಅಂತ ಅನಿಸಿರುತ್ತೆ. ಅದಕ್ಕೆ ಅವ್ರೆಲ್ರೂ ರೆಹಬ್ಬಾಮನ ಹತ್ರ ಬಂದು, ‘ಈ ಕಷ್ಟದ ಕೆಲಸನ ಕಮ್ಮಿ ಮಾಡು’ ಅಂತ ಬೇಡ್ಕೊತಾರೆ. ಆಗ ರೆಹಬ್ಬಾಮ ‘ನಂಗೆ ಸ್ವಲ್ಪ ಟೈಮ್ ಕೊಡಿ, ಇದ್ರ ಬಗ್ಗೆ ಯೋಚ್ನೆ ಮಾಡಿ ಹೇಳ್ತೀನಿ’ ಅಂತ ಹೇಳ್ತಾನೆ. ಮೊದಲು ಅವನು ಸೊಲೊಮೋನನಿಗೆ ಸಹಾಯ ಮಾಡಿದ ಹಿರಿಯರ ಹತ್ರ ಸಲಹೆ ಕೇಳ್ತಾನೆ. (1 ಅರ. 12:2-7) ಆದ್ರೆ ಅವರು ಕೊಟ್ಟ ಸಲಹೆನ ಅವನು ಪಾಲಿಸಲಿಲ್ಲ. ಯಾಕೆ ಈ ತರ ಮಾಡಿದ? ಬಹುಶಃ ಅವನು ಈಗಾಗ್ಲೇ ತನ್ನ ಮನಸ್ಸಲ್ಲಿ ಒಂದು ನಿರ್ಧಾರ ಮಾಡಿಬಿಟ್ಟಿದ್ದ ಅಂತ ಅನಿಸುತ್ತೆ. ಅದಕ್ಕೆ ಅವನು ಹಿರಿಯರನ್ನ ಬಿಟ್ಟು ತನ್ನ ಯುವ ಸ್ನೇಹಿತರ ಹತ್ರ ಹೋಗಿ ಸಲಹೆ ಕೇಳ್ತಾನೆ. ಅವರು ಅವನಿಗೆ ಇಷ್ಟ ಆಗೋ ತರ ಸಲಹೆ ಕೊಡ್ತಾರೆ. (1 ಅರ. 12:8-14) ಆ ಸಲಹೆ ಪ್ರಕಾರ ನಿರ್ಧಾರ ಮಾಡಿ ಅದನ್ನೇ ಹೋಗಿ ಆ ಜನ್ರ ಹತ್ರ ಹೇಳ್ತಾನೆ. ಈ ಸಲಹೆನ ಪಾಲಿಸಿದ್ರಿಂದ ಏನಾದ್ರೂ ಪ್ರಯೋಜ್ನ ಆಯ್ತಾ? ಇಲ್ಲ. ಇದ್ರಿಂದ ರಾಜ್ಯ ಎರಡು ಭಾಗ ಆಯ್ತು ಮತ್ತು ರೆಹಬ್ಬಾಮನಿಗೆ ಒಂದಾದ್ಮೇಲೆ ಒಂದು ಕಷ್ಟಗಳು ಬರೋಕೆ ಶುರು ಆಯ್ತು.—1 ಅರ. 12:16-19.
13. ನಾನು ಒಂದು ಸಲಹೆನ ಮನಸಾರೆ ಕೇಳ್ತಿದ್ದೀನಾ ಇಲ್ವಾ ಅಂತ ಹೇಗೆ ಗೊತ್ತಾಗುತ್ತೆ?
13 ರೆಹೆಬ್ಬಾಮನಿಂದ ನಾವೇನು ಕಲಿಬಹುದು? ನಾವು ಈಗಾಗ್ಲೇ ನಿರ್ಧಾರ ಮಾಡಿಬಿಟ್ಟು ಆಮೇಲೆ ಹೋಗಿ ಸಲಹೆ ಕೇಳಬಾರದು. ನಮಗೆ ಸಿಗೋ ಸಲಹೆನ ಮನಸಾರೆ ಕೇಳೋಕೆ ರೆಡಿ ಇರಬೇಕು. ನಾವು ನಿಜವಾಗ್ಲೂ ಮನಸಾರೆ ಕೇಳ್ತಿದ್ದೀವಾ ಇಲ್ವಾ ಅಂತ ತಿಳ್ಕೊಳ್ಳೋಕೆ ಏನು ಮಾಡಬಹುದು? ನಮ್ಮನ್ನ ನಾವು ಹೀಗೆ ಕೇಳ್ಕೊಬೇಕು: ಸಲಹೆ ಸಿಕ್ಕಾಗ ನನಗೆ ಅದು ಇಷ್ಟ ಇಲ್ಲ ಅಂದ ತಕ್ಷಣ ಅದನ್ನ ಪಕ್ಕಕ್ಕೆ ಇಟ್ಟುಬಿಡ್ತೀನಾ? ಬನ್ನಿ ಇದಕ್ಕೊಂದು ಉದಾಹರಣೆ ನೋಡೋಣ.
14. ನಮಗೆ ಸಲಹೆ ಸಿಕ್ಕಾಗ ನಾವು ಏನನ್ನ ನೆನಪಲ್ಲಿಡಬೇಕು? ಉದಾಹರಣೆ ಕೊಡಿ. (ಚಿತ್ರ ನೋಡಿ.)
14 ಒಬ್ಬ ಸಹೋದರನಿಗೆ ಕೈತುಂಬ ಸಂಬಳ ಇರೋ ಕೆಲಸಕ್ಕೆ ಹೋಗೋ ಅವಕಾಶ ಸಿಗುತ್ತೆ. ಆ ಕೆಲಸನ ಒಪ್ಕೊಳ್ಳೋ ಮುಂಚೆ ಆ ಸಹೋದರ ಹೋಗಿ ಒಬ್ಬ ಹಿರಿಯನ ಹತ್ರ ಸಲಹೆ ಕೇಳ್ತಾನೆ. ‘ಈ ಕೆಲಸ ಒಪ್ಕೊಂಡ್ರೆ ನಾನು ಸುಮಾರು ತಿಂಗಳು ಕುಟುಂಬನ ಬಿಟ್ಟು ಬೇರೆ ಕಡೆ ಇರಬೇಕಾಗುತ್ತೆ’ ಅಂತ ಹಿರಿಯನಿಗೆ ತಿಳಿಸ್ತಾನೆ. ಆಗ ಹಿರಿಯ ಅವನಿಗೆ ಬೈಬಲ್ ತೋರಿಸಿ, ‘ನಿನ್ನ ಇಡೀ ಕುಟುಂಬ ಯೆಹೋವನಿಗೆ ಹತ್ರ ಆಗೋ ತರ ಮಾಡೋದೇ ನಿನಗಿರೋ ದೊಡ್ಡ ಜವಾಬ್ದಾರಿ, ಅದನ್ನ ಮನಸ್ಸಲ್ಲಿಟ್ಟು ನಿರ್ಧಾರ ಮಾಡು’ ಅಂತ ಹೇಳ್ತಾನೆ. (ಎಫೆ. 6:4; 1 ತಿಮೊ. 5:8) ಹಿರಿಯ ಕೊಟ್ಟ ಸಲಹೆ ಆ ಸಹೋದರನಿಗೆ ಇಷ್ಟ ಆಗಲ್ಲ. ಅದಕ್ಕೆ ಅವನಿಗೆ ಇಷ್ಟ ಆಗೋ ತರ ಯಾರು ಸಲಹೆ ಕೊಡ್ತಾರೆ ಅಂತ ಬೇರೆ ಬೇರೆಯವ್ರ ಹತ್ರ ಇದ್ರ ಬಗ್ಗೆ ಹೋಗಿ ಕೇಳ್ತಾನೆ. ನಿಮಗೇನು ಅನಿಸುತ್ತೆ? ಈ ಸಹೋದರನಿಗೆ ನಿಜವಾಗ್ಲೂ ಸಲಹೆ ಕೇಳೋ ಮನಸ್ಸಿದ್ಯಾ ಅಥವಾ ಈಗಾಗ್ಲೇ ಒಂದು ನಿರ್ಧಾರ ಮಾಡಿ ಅದನ್ನ ಯಾರು ಒಪ್ಕೊತಾರೆ ಅಂತ ಹುಡುಕ್ತಿದ್ದಾನಾ? ನಿಜ ಹೇಳಬೇಕಂದ್ರೆ, ಕೆಲವು ಸಲ ಯಾವ ಸಲಹೆ ಸರಿಯಾಗಿರುತ್ತೋ ಅದನ್ನೇ ನಮ್ಮ ಮನಸ್ಸು ಬೇಡ ಅಂತ ಹೇಳುತ್ತೆ. ಯಾಕಂದ್ರೆ ನಮ್ಮ ಹೃದಯ ನಮ್ಮನ್ನ ಮೋಸ ಮಾಡುತ್ತೆ. ನಾವದನ್ನ ನೆನಪಲ್ಲಿಟ್ಕೊಬೇಕು.—ಯೆರೆ. 17:9.
ನಾವು ನಿಜವಾಗ್ಲೂ ಸಲಹೆ ಕೇಳ್ತಿದ್ದೀವಾ ಅಥವಾ ನಾವು ಮಾಡಿರೋ ಒಂದು ನಿರ್ಧಾರನ ಯಾರು ಒಪ್ಕೊತ್ತಾರೆ ಅಂತ ಹುಡುಕ್ತಿದ್ದೀವಾ? (ಪ್ಯಾರ 14 ನೋಡಿ)
‘ನನ್ನ ಜಾಗದಲ್ಲಿ ನೀವಿದ್ದಿದ್ರೆ ಯಾವ ನಿರ್ಧಾರ ಮಾಡ್ತಿದ್ರಿ’ ಅಂತ ಕೇಳೋದು ಸರಿನಾ?
15. ನಾವೇನು ಮಾಡೋಕೆ ಹೋಗಬಾರದು ಮತ್ತೆ ಯಾಕೆ?
15 ನಮ್ಮ-ನಮ್ಮ ನಿರ್ಧಾರನ ನಾವೇ ಮಾಡಬೇಕು. ಇದು ನಮ್ಮ ಜವಾಬ್ದಾರಿ! (ಗಲಾ. 6:4, 5) ಒಂದು ನಿರ್ಧಾರ ಮಾಡೋ ಮುಂಚೆ ಬೈಬಲ್ ಮತ್ತು ಪ್ರೌಢ ಕ್ರೈಸ್ತರು ಕೊಡೋ ಸಲಹೆನ ಕೇಳಬೇಕು ಅಂತ ಕಲಿತ್ವಿ. ನಮಗೋಸ್ಕರ ನೀವು ನಿರ್ಧಾರ ಮಾಡಿ ಅಂತ ನಾವು ಯಾವತ್ತೂ ಬೇರೆಯವ್ರನ್ನ ಕೇಳಬಾರದು. ಆದ್ರೆ ಕೆಲವರು ತಾವು ಇಷ್ಟಪಡೋರ ಹತ್ರ ‘ನನ್ನ ಜಾಗದಲ್ಲಿ ನೀವು ಇದ್ದಿದ್ರೆ ಯಾವ ನಿರ್ಧಾರ ಮಾಡ್ತಿದ್ರಿ’ ಅಂತ ಕೇಳ್ತಾರೆ. ಇನ್ನು ಕೆಲವೊಬ್ರು ಈ ತರ ಕೇಳೋಕೆ ಹೋಗಲ್ಲ, ಆದ್ರೆ ಬೇರೆಯವರು ಏನು ಮಾಡ್ತಾರೆ ಅಂತ ನೋಡಿ ಹಿಂದೆ ಮುಂದೆ ಯೋಚ್ನೆ ಮಾಡದೇ ಅದೇ ತರಾನೇ ನಿರ್ಧಾರ ಮಾಡಿಬಿಡ್ತಾರೆ.
16. (ಎ) ಮೂರ್ತಿಗಳಿಗೆ ಅರ್ಪಿಸಿದ ಮಾಂಸದ ವಿಷ್ಯದಲ್ಲಿ ಕೊರಿಂಥ ಸಭೇಲಿದ್ದವ್ರಿಗೆ ಯಾವ ಪ್ರಶ್ನೆ ಬಂತು? (ಬಿ) ಆ ಮಾಂಸವನ್ನ ತಿನ್ನಬೇಕಾ ಬೇಡ್ವಾ ಅಂತ ಯಾರು ನಿರ್ಧಾರ ಮಾಡಬೇಕಿತ್ತು? (1 ಕೊರಿಂಥ 8:7; 10:25, 26)
16 ಒಂದನೇ ಶತಮಾನದಲ್ಲಿ ಕೊರಿಂಥ ಸಭೇಲಿದ್ದ ಕ್ರೈಸ್ತರು ಮೂರ್ತಿಗಳಿಗೆ ಅರ್ಪಿಸಿದ ಮಾಂಸವನ್ನ ತಿನ್ನಬೇಕಾ ಬೇಡ್ವಾ ಅನ್ನೋ ನಿರ್ಧಾರ ಮಾಡಬೇಕಿತ್ತು. ಇದ್ರ ಬಗ್ಗೆ ಪೌಲ, “ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದದ ಬಗ್ಗೆ ಈಗ ಹೇಳ್ತೀನಿ. ಮೂರ್ತಿ ಏನೂ ಅಲ್ಲ, ದೇವರು ಒಬ್ಬನೇ, ಆತನನ್ನ ಬಿಟ್ಟು ಬೇರೆ ದೇವರಿಲ್ಲ ಅಂತ ನಮಗೆ ಗೊತ್ತು” ಅಂತ ಹೇಳ್ತಾನೆ. (1 ಕೊರಿಂ. 8:4) ಇದನ್ನ ಮನಸ್ಸಲ್ಲಿಟ್ಟು ಸಭೇಲ್ಲಿದ್ದ ಕೆಲವರು ಮೂರ್ತಿಗಳಿಗೆ ಅರ್ಪಿಸಿದ್ದ ಮಾಂಸವನ್ನ ಮಾರುಕಟ್ಟೆಯಲ್ಲಿ ಮಾರಿದಾಗ ತಿನ್ನೋದ್ರಲ್ಲಿ ಏನು ತಪ್ಪಿಲ್ಲಾ ಅಂತ ನಿರ್ಧಾರ ಮಾಡಿದ್ರು. (1 ಕೊರಿಂ. 10:25, 26) ಆದ್ರೆ ಇನ್ನು ಕೆಲವೊಬ್ರು ಆ ಮಾಂಸವನ್ನ ತಿನೋಕೆ ನಮ್ಮ ಮನಸಾಕ್ಷಿ ಒಪ್ತಿಲ್ಲ, ನಾವು ತಿನ್ನಲ್ಲ ಅಂತ ನಿರ್ಧಾರ ಮಾಡಿದ್ರು. (1 ಕೊರಿಂಥ 8:7; 10:25, 26 ಓದಿ.) ಇದು ಅವ್ರ ವೈಯಕ್ತಿಕ ನಿರ್ಧಾರ ಆಗಿತ್ತು. ಪೌಲ ಕೊರಿಂಥ ಕ್ರೈಸ್ತರಿಗೆ, ನೀವು ಬೇರೆಯವ್ರಿಗೋಸ್ಕರ ನಿರ್ಧಾರ ಮಾಡಿ ಅಂತಾಗಲಿ ಅಥವಾ ಬೇರೆಯವರು ಏನು ಮಾಡ್ತಾರೋ ಅದೇ ತರ ನೀವೂ ನಿರ್ಧಾರ ಮಾಡಿ ಅಂತ ಯಾವತ್ತೂ ಹೇಳಲಿಲ್ಲ. ಬದಲಿಗೆ “ಪ್ರತಿಯೊಬ್ರೂ ನಮ್ಮ ನಮ್ಮ ಬಗ್ಗೆ ದೇವರಿಗೆ ಲೆಕ್ಕ ಕೊಡಬೇಕು” ಅಂತ ಹೇಳಿದ.—ರೋಮ. 14:10-12.
17. ಬೇರೆಯವರು ಮಾಡೋ ನಿರ್ಧಾರನ ನೋಡಿ ನಾವು ಅದೇ ತರ ಮಾಡಿದ್ರೆ ಏನಾಗಬಹುದು? ಉದಾಹರಣೆ ಕೊಡಿ. (ಚಿತ್ರಗಳನ್ನ ನೋಡಿ.)
17 ಇವತ್ತು ನಮಗೂ ಈ ತರ ಸನ್ನಿವೇಶ ಸಭೇಲಿ ಬರಬಹುದಾ? ರಕ್ತದ ಚಿಕ್ಕ ಚಿಕ್ಕ ಅಂಶಗಳನ್ನ ತಗೊಳ್ಳೋದ್ರ ಬಗ್ಗೆ ನೋಡಿ. ಇದನ್ನ ತಗೋಬೇಕಾ ಬೇಡ್ವಾ ಅಂತ ಪ್ರತಿಯೊಬ್ರೂ ಅವರಾಗಿ ಅವರೇ ಸ್ವಂತ ನಿರ್ಧಾರ ಮಾಡಬೇಕು.b ರಕ್ತದ ಬಗ್ಗೆ ಎಲ್ಲ ವಿಷ್ಯನ ತಿಳ್ಕೊಂಡು ಅರ್ಥಮಾಡ್ಕೊಳ್ಳೋದು ಕಷ್ಟ ಆದ್ರೂ ನಾವು ನಮ್ಮ ಸ್ವಂತ ನಿರ್ಧಾರನ ಮಾಡಬೇಕು. (ರೋಮ. 14:4) ಬೇರೆಯವರು ಮಾಡೋ ನಿರ್ಧಾರನ ನೋಡಿ ನಾವೂ ಅದೇ ತರ ನಿರ್ಧಾರ ಮಾಡಿದ್ರೆ ನಾವು ಯಾವತ್ತೂ ವಿವೇಕಿಗಳಾಗಲ್ಲ. ನಾವು ವಿವೇಕಿಗಳಾಗೋಕೆ ಬೈಬಲ್ ಏನು ಹೇಳುತ್ತೋ ಅದನ್ನ ಅರ್ಥಮಾಡ್ಕೊಂಡು ನಿರ್ಧಾರ ಮಾಡಬೇಕು. (ಇಬ್ರಿ. 5:14) ಹಾಗಾದ್ರೆ ನಾವು ಪ್ರೌಢ ಕ್ರೈಸ್ತರ ಹತ್ರ ಯಾವಾಗ ಸಲಹೆ ಕೇಳಬೇಕು? ನಾವು ಒಂದು ವಿಷ್ಯದ ಬಗ್ಗೆ ಸಂಶೋಧನೆ ಮಾಡಾದ ಮೇಲೂ ಕೆಲವೊಂದು ಬೈಬಲ್ ವಿಷ್ಯಗಳು ನಮಗೆ ಅರ್ಥ ಆಗದಿದ್ದಾಗ ಸಲಹೆ ಕೇಳಬೇಕು.
ಮೊದಲು ನಾವು ಸಂಶೋಧನೆ ಮಾಡಬೇಕು, ಆಮೇಲೆ ಬೇರೆಯವ್ರ ಹತ್ರ ಸಲಹೆ ಕೇಳಬೇಕು (ಪ್ಯಾರ 17 ನೋಡಿ)
ಸಲಹೆ ಕೇಳ್ತಾ ಇರಿ
18. ಯೆಹೋವ ನಮಗೆ ಏನೆಲ್ಲ ಕೊಟ್ಟಿದ್ದಾನೆ?
18 ನಿರ್ಧಾರಗಳನ್ನ ಮಾಡೋ ಸ್ವಾತಂತ್ರ್ಯನ ಯೆಹೋವ ನಮಗೆ ಕೊಟ್ಟಿದ್ದಾನೆ. ಹೀಗೆ ನಮ್ಮ ಮೇಲೆ ಭರವಸೆ ಇದೆ ಅಂತ ತೋರಿಸಿದ್ದಾನೆ. ಒಳ್ಳೆ ನಿರ್ಧಾರಗಳನ್ನ ಮಾಡೋಕೆ ನಮಗೆ ಏನೆಲ್ಲಾ ಕೊಟ್ಟಿದ್ದಾನೆ? ಬೈಬಲನ್ನ ಮತ್ತು ಅದ್ರಲ್ಲಿರೋ ವಿಷ್ಯಗಳನ್ನ ಅರ್ಥ ಮಾಡಿಸೋ ಒಳ್ಳೆ ಸ್ನೇಹಿತ್ರನ್ನ ಕೊಟ್ಟಿದ್ದಾನೆ. ಇದನ್ನೆಲ್ಲಾ ಕೊಡೋ ಮೂಲಕ ಯೆಹೋವ ನಮ್ಮನ್ನ ತುಂಬಾ ಪ್ರೀತಿಸೋ ಅಪ್ಪ ಅಂತ ತೋರಿಸಿದ್ದಾನೆ. (ಜ್ಞಾನೋ. 3:21-23) ಇಷ್ಟೆಲ್ಲಾ ಮಾಡಿರೋ ಯೆಹೋವ ಅಪ್ಪಾಗೆ ನಾವು ಹೇಗೆಲ್ಲ ಥ್ಯಾಂಕ್ಸ್ ಹೇಳಬಹುದು?
19. ಯೆಹೋವನ ಮನಸ್ಸನ್ನ ನೀವು ಹೇಗೆ ಖುಷಿಪಡಿಸ್ತಾ ಇರಬಹುದು?
19 ಮಕ್ಕಳು ಬೆಳೆದು ದೊಡ್ಡವರಾಗಿ ಯೆಹೋವನ ಮನಸ್ಸು ಖುಷಿಪಡಿಸ್ತಾ, ಬೇರೆಯವ್ರಿಗೆ ಸಹಾಯ ಮಾಡೋದನ್ನ ನೋಡ್ವಾಗ ಅಪ್ಪಅಮ್ಮಗೆ ತುಂಬಾ ಖುಷಿ ಆಗುತ್ತೆ. ಅದೇ ತರ ನಾವೂ ಪ್ರೌಢರಾಗಿ, ಬೇರೆಯವ್ರಿಂದ ಸಲಹೆ ಕೇಳ್ತಾ ಸರಿಯಾದ ನಿರ್ಧಾರಗಳನ್ನ ಮಾಡ್ವಾಗ ಯೆಹೋವನಿಗೆ ತುಂಬ ಖುಷಿಯಾಗುತ್ತೆ.
ಗೀತೆ 49 ಯೆಹೋವನ ಮನಸ್ಸನ್ನ ಖುಷಿಪಡಿಸುವುದು
a ನೀವು ವಿವೇಚನೆ ಬಳಸಿ ಕೆಲವೊಮ್ಮೆ ಬೇರೆ ವಿಷ್ಯಗಳ ಬಗ್ಗೆ ಅಂದ್ರೆ ಹಣ ಮತ್ತು ಚಿಕಿತ್ಸೆ ಬಗ್ಗೆ ಸಾಕ್ಷಿಗಳಲ್ಲದವ್ರ ಹತ್ರನೂ ಸಲಹೆ ತಗೊಬಹುದು.
b ಈ ವಿಷ್ಯದ ಬಗ್ಗೆ ಹೆಚ್ಚನ್ನ ತಿಳಿಯೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ ಪಾಠ 39ರ ಪಾಯಿಂಟ್ 5ನ್ನ ಮತ್ತು “ಇದನ್ನೂ ನೋಡಿ” ಅನ್ನೋ ಭಾಗವನ್ನ ಓದಿ.
c ಚಿತ್ರ ವಿವರಣೆ : ಇತ್ತೀಚಿಗೆ ನಡೆದ ಒಂದು ಮೀಟಿಂಗ್ನಲ್ಲಿ ‘ನೀವು ಇನ್ನೂ ಚೆನ್ನಾಗಿ ಮಾತಾಡಬಹುದಿತ್ತು’ ಅಂತ ಒಬ್ಬ ಹಿರಿಯ ಇನ್ನೊಬ್ಬ ಹಿರಿಯನಿಗೆ ಸಲಹೆ ಕೊಡ್ತಿದ್ದಾನೆ.