ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 3/8 ಪು. 7-10
  • ಪಂಥಾಹ್ವಾನವನ್ನು ಎದುರಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪಂಥಾಹ್ವಾನವನ್ನು ಎದುರಿಸುವುದು
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೆಂಬಲವನ್ನು ಒದಗಿಸುವುದು
  • “ಸುಮ್ಮನೆ ಕುಳಿತು ಗಮನ ಕೊಡಿ!”
    ಎಚ್ಚರ!—1997
  • ನಮ್ಮ ವಾಚಕರಿಂದ
    ಎಚ್ಚರ!—1998
  • ಕಲಿಕೆಯ ವಿಕಲತೆಯುಳ್ಳ ಮಕ್ಕಳಿಗೆ ಸಹಾಯ
    ಎಚ್ಚರ!—2009
  • ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ
    ಕುಟುಂಬ ಸಂತೋಷದ ರಹಸ್ಯ
ಇನ್ನಷ್ಟು
ಎಚ್ಚರ!—1997
g97 3/8 ಪು. 7-10

ಪಂಥಾಹ್ವಾನವನ್ನು ಎದುರಿಸುವುದು

ಗತಿಸಿದ ಕೆಲವು ವರುಷಗಳಲ್ಲಿ, ಏಡಿಏಚ್‌ಡಿಗೆ ಅನೇಕ ಚಿಕಿತ್ಸಾಕ್ರಮಗಳನ್ನು ಪ್ರಸ್ತಾವಿಸಲಾಗಿದೆ. ಇವುಗಳಲ್ಲಿ ಕೆಲವು ಆಹಾರಪಥ್ಯದ ಮೇಲೆ ಕೇಂದ್ರೀಕರಿಸಿವೆ. ಆದರೂ, ಆಹಾರ ಸಂಯೋಜನೀಯಗಳು ಸಾಮಾನ್ಯವಾಗಿ ಅತಿಕ್ರಿಯಾಶೀಲತೆಯನ್ನು ಉಂಟುಮಾಡುವುದಿಲ್ಲವೆಂದೂ, ಪೋಷಕ ಪರಿಹಾರಗಳು ಅನೇಕ ವೇಳೆ ಪರಿಣಾಮಕಾರಿಯಾಗಿರುವುದಿಲ್ಲವೆಂದೂ ಕೆಲವು ಅಧ್ಯಯನಗಳು ಸೂಚಿಸುತ್ತವೆ. ಏಡಿಏಚ್‌ಡಿಯ ಚಿಕಿತ್ಸೆಗಿರುವ ಇತರ ವಿಧಾನಗಳು ಯಾವುವೆಂದರೆ ಔಷಧ, ವರ್ತನಾ ರೂಪಾಂತರ ಮತ್ತು ಜ್ಞಾನಗ್ರಹಣ ತರಬೇತು, ಇವೇ.a

ಔಷಧ. ಏಡಿಏಚ್‌ಡಿಯಲ್ಲಿ ಮಿದುಳಿನ ಕಾರ್ಯನ್ಯೂನತೆಯು ಒಳಗೊಂಡಿರುತ್ತದೆಂದು ಸ್ಪಷ್ಟವಾಗಿರುವುದರಿಂದ, ಸರಿಯಾದ ರಾಸಾಯನಿಕ ಸಮತೆಯನ್ನು ಪುನಸ್ಸ್ಥಾಪಿಸುವ ಔಷಧವು ಅನೇಕರಿಗೆ ಸಹಾಯಕಾರಿಯಾಗಿ ಪರಿಣಮಿಸಿದೆ.b ಆದರೂ, ಔಷಧವು ಕಲಿಕೆಯ ಸ್ಥಾನವನ್ನು ಭರ್ತಿಮಾಡುವುದಿಲ್ಲ. ಅದು ಮಗನು ತನ್ನ ಗಮನವನ್ನು ಕೇಂದ್ರೀಕರಿಸುವಂತೆ ಕೇವಲ ಸಹಾಯಮಾಡಿ, ಹೀಗೆ ಅವನು ಹೊಸ ಕೌಶಲಗಳನ್ನು ಕಲಿಯಲು ಒಂದು ಅಸ್ತಿವಾರವನ್ನು ನೀಡುತ್ತದೆ.

ಇದೇ ರೀತಿಯಲ್ಲಿ, ಏಡಿಏಚ್‌ಡಿ ಪೀಡಿತರಾದ ಅನೇಕ ವಯಸ್ಕರಿಗೆ ಔಷಧಗಳು ಸಹಾಯಮಾಡಿವೆ. ಆದರೂ ಉಪಯೋಗಿಸಲ್ಪಡುವ ಉತ್ತೇಜಕ ಔಷಧಗಳಲ್ಲಿ ಕೆಲವು ಗೀಳು ಹಿಡಿಸಬಲ್ಲವಾದುದರಿಂದ, ಯುವ ಜನರು ಮತ್ತು ವಯಸ್ಕರು ಜೋಕೆ ವಹಿಸುವುದು ಯೋಗ್ಯವಾಗಿದೆ.

ವರ್ತನಾ ರೂಪಾಂತರ. ಒಬ್ಬ ಹುಡುಗನ ಏಡಿಏಚ್‌ಡಿ, ಹೆತ್ತವರನ್ನು ಶಿಸ್ತು ನೀಡುವ ಜವಾಬ್ದಾರಿಯಿಂದ ಮುಕ್ತಗೊಳಿಸುವುದಿಲ್ಲ. ಈ ಸಂಬಂಧದಲ್ಲಿ ಮಗನಿಗೆ ವಿಶೇಷಾವಶ್ಯಕತೆಗಳು ಇರಬಹುದಾದರೂ, ಬೈಬಲು ಹೆತ್ತವರಿಗೆ ಬುದ್ಧಿಹೇಳುವುದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” (ಜ್ಞಾನೋಕ್ತಿ 22:6) ನಿಮ್ಮ ಅತಿಕ್ರಿಯಾಶೀಲ ಮಗು (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ, ಬಾರ್‌ಬ್ರ ಇಂಗರ್‌ಸಾಲ್‌ ಗಮನಿಸುವುದು: “ಕೇವಲ ಬಿಟ್ಟುಕೊಟ್ಟು, ತನ್ನ ಅತಿಕ್ರಿಯಾಶೀಲ ಮಗನು ‘ಸ್ವೇಚ್ಛಾಚಾರಿಯಾಗಿ ಓಡುವಂತೆ’ ಬಿಡುವ ಹೆತ್ತವರು ಮಗನಿಗೆ ಯಾವ ದಯೆಯನ್ನೂ ತೋರಿಸುವುದಿಲ್ಲ. ಬೇರೆ ಯಾವುದೇ ಹುಡುಗನಂತೆ, ಅತಿಕ್ರಿಯಾಶೀಲನಾದ ಹುಡುಗನಿಗೆ ಹೊಂದಿಕೆಯಾಗಿರುವ ಶಿಸ್ತಿನೊಂದಿಗೆ ವ್ಯಕ್ತಿಯಂತೆ ಗೌರವ ಅಗತ್ಯ. ಇದರ ಅರ್ಥವು, ಸ್ಪಷ್ಟವಾದ ಮೇರೆಗಳು ಮತ್ತು ತಕ್ಕದ್ದಾದ ಪ್ರತಿಫಲಗಳೂ ಶಿಕ್ಷೆಗಳೂ.”

ಆದಕಾರಣ, ಹೆತ್ತವರು ಸ್ಪಷ್ಟವಾದ, ಹೊಂದಿಕೆಯಿರುವ ನಿಯಮಗಳನ್ನು ಒದಗಿಸುವುದು ಪ್ರಾಮುಖ್ಯ. ಅದಲ್ಲದೆ, ದಿನನಿತ್ಯದ ಚಟುವಟಿಕೆಗಳಲ್ಲಿ ಕಟ್ಟುನಿಟ್ಟಾದ ಕ್ರಮವಿರಬೇಕು. ಈ ತಖ್ತೆಯನ್ನು ಮಾಡುವುದರಲ್ಲಿ ಹೆತ್ತವರು ಮಗನಿಗೆ ತುಸು ವಿಶಾಲಮನಸ್ಸನ್ನು ತೋರಿಸಲು ಬಯಸಿ, ಶಾಲಾ ಮನೆಕೆಲಸ, ಅಭ್ಯಾಸ, ಸ್ನಾನ, ಇತ್ಯಾದಿಗಳನ್ನು ಸೇರಿಸಬಹುದು. ಬಳಿಕ ಅದನ್ನು ಮಾಡಿ ಮುಗಿಸುವ ವಿಷಯದಲ್ಲಿ ಹೊಂದಿಕೆಯಿಂದಿರ್ರಿ. ದಿನನಿತ್ಯದ ಕಾರ್ಯಕಲಾಪಗಳಿಗೆ ಅಂಟಿಕೊಳ್ಳುವಂತೆ ಖಾತರಿಮಾಡಿಕೊಳ್ಳಿರಿ. ಫೈ ಡೆಲ್ಟ ಕ್ಯಾಪನ್‌ ಗಮನಿಸುವುದು: “ವೈದ್ಯರು, ಮನಶ್ಶಾಸ್ತ್ರಜ್ಞರು, ಶಾಲಾ ಅಧಿಕಾರಿಗಳು ಮತ್ತು ಅಧ್ಯಾಪಕರಿಗೆ ಆ ಹುಡುಗನ ಮತ್ತು ಅವನ ಹೆತ್ತವರ ಕಡೆಗೆ ಒಂದು ಹಂಗು ಇದೆ. ಏನಂದರೆ, ಏಡಿಡಿ ಅಥವಾ ಏಡಿಏಚ್‌ಡಿ ವರ್ಗೀಕರಣವು ತಾವು ಏನೂ ಮಾಡಬಹುದು ಎಂಬುದಕ್ಕೆ ಅನುಮತಿಯಾಗಿರುವುದಿಲ್ಲ, ಬದಲಿಗೆ ಅದು ಆ ಮಗನಿಗೆ ನ್ಯಾಯಸಮ್ಮತವಾದ ಸಹಾಯವು ದೊರೆಯುವಂತೆ ನಡೆಸಬಹುದಾದ ಒಂದು ವಿವರಣೆಯಾಗಿದೆ.”

ಜ್ಞಾನಗ್ರಹಣ ತರಬೇತು. ಹುಡುಗನು ತನ್ನ ಮತ್ತು ತನ್ನ ಅಸ್ವಸ್ಥತೆಯ ಕುರಿತ ದೃಷ್ಟಿಕೋನವನ್ನು ಬದಲಾಯಿಸುವಂತೆ ಸಹಾಯಮಾಡುವುದು ಇದರಲ್ಲಿ ಸೇರಿದೆ. ಡಾ. ರಾನಲ್ಡ್‌ ಗೋಲ್ಡ್‌ಬರ್ಗ್‌ ಅವಲೋಕಿಸುವುದು: “ನ್ಯೂನ ಗಮನ ಅಸ್ವಸ್ಥತೆಯ ಜನರು, ತಾವು ಮನೋಹರರು, ಬುದ್ಧಿಶಕ್ತಿಯುಳ್ಳವರು ಮತ್ತು ಸಹೃದಯರು ಆಗಿರುವುದಾದರೂ, ತಾವು ‘ಕುರೂಪಿಗಳು, ಮೂರ್ಖರು ಮತ್ತು ಕೆಟ್ಟವರು’ ಎಂದೆಣಿಸುತ್ತಾರೆ.” ಆದಕಾರಣ, ಏಡಿಡಿ ಅಥವಾ ಏಡಿಏಚ್‌ಡಿ ಇರುವ ಹುಡುಗನಿಗೆ ತನ್ನ ಬೆಲೆಯ ಕುರಿತು ಯೋಗ್ಯ ದೃಷ್ಟಿಕೋನವಿರಬೇಕು ಮತ್ತು ತನಗಿರುವ ಗಮನ ಸಮಸ್ಯೆಗಳು ನಿರ್ವಹಿಸಸಾಧ್ಯವಿರುವವುಗಳೆಂದು ಅವನಿಗೆ ತಿಳಿದಿರುವುದು ಅಗತ್ಯ. ವಿಶೇಷವಾಗಿ ತಾರುಣ್ಯದಲ್ಲಿ ಇದು ಪ್ರಾಮುಖ್ಯ. ಏಡಿಏಚ್‌ಡಿ ಇರುವ ವ್ಯಕ್ತಿಯು ಹದಿಪ್ರಾಯದ ವರುಷಗಳನ್ನು ತಲಪುವುದರೊಳಗೆ, ಅವನು ತನ್ನ ಸಮಪ್ರಾಯಸ್ಥರಿಂದ, ಅಧ್ಯಾಪಕರಿಂದ, ಒಡಹುಟ್ಟಿದವರಿಂದ ಮತ್ತು ಪ್ರಾಯಶಃ ಹೆತ್ತವರಿಂದಲೂ ತುಂಬ ಟೀಕೆಯನ್ನು ಅನುಭವಿಸಿರಬಹುದು. ಈಗ ಅವನು ವಸ್ತುನಿಷ್ಠ ಗುರಿಗಳನ್ನು ಇಟ್ಟುಕೊಳ್ಳುವ ಹಾಗೂ ತನಗೆ ತಾನು ನಿರ್ದಯತೆಯಿಂದ ತೀರ್ಪುಮಾಡಿಕೊಳ್ಳುವ ಬದಲಾಗಿ ನಿಷ್ಪಕ್ಷಪಾತದಿಂದ ತೀರ್ಪು ಮಾಡಿಕೊಳ್ಳುವ ಅಗತ್ಯವಿದೆ.

ಚಿಕಿತ್ಸೆಗಿರುವ ಈ ಮೇಲಿನ ವಿಧಾನಗಳನ್ನು ಏಡಿಏಚ್‌ಡಿ ಇರುವ ವಯಸ್ಕರೂ ಅನುಸರಿಸಬಲ್ಲರು. ಡಾ. ಗೋಲ್ಡ್‌ಬರ್ಗ್‌ ಬರೆಯುವುದು: “ರೂಪಾಂತರಗಳು ವಯಸ್ಸಿನ ಮೇಲೆ ಹೊಂದಿಕೊಂಡು ಅಗತ್ಯವಾಗಿರುವುದಾದರೂ, ಚಿಕಿತ್ಸೆಯ ಅಡಿಪಾಯಗಳು—ತಕ್ಕದ್ದಾಗಿರುವಲ್ಲಿ ಔಷಧ, ವರ್ತನಾ ರೂಪಾಂತರ ಮತ್ತು ಜ್ಞಾನಗ್ರಹಣ [ತರಬೇತು]—ಜೀವನಚಕ್ರದಲ್ಲೆಲ್ಲ ಸಾಧಾರವಾದ ಮಾರ್ಗಗಳಾಗಿ ಉಳಿಯುತ್ತವೆ.”

ಬೆಂಬಲವನ್ನು ಒದಗಿಸುವುದು

ಏಡಿಏಚ್‌ಡಿ ಪೀಡಿತ ತರುಣನೊಬ್ಬನ ತಂದೆಯಾದ ಜಾನ್‌, ಸಮಾನ ಪರಿಸ್ಥಿತಿಯಲ್ಲಿರುವ ಹೆತ್ತವರಿಗೆ ಹೇಳುವುದು: “ಈ ಸಮಸ್ಯೆಯ ಕುರಿತು ನಿಮಗೆ ಸಾಧ್ಯವಿರುವಷ್ಟನ್ನು ಕಲಿಯಿರಿ. ತಿಳಿವಳಿಕೆಯ ನಿರ್ಣಯಗಳನ್ನು ಮಾಡಿರಿ. ಎಲ್ಲಕ್ಕಿಂತ ಮೇಲಾಗಿ, ನಿಮ್ಮ ಮಗನನ್ನು ಪ್ರೀತಿಸಿರಿ. ಅವನ ಆತ್ಮಗೌರವವನ್ನು ಬಲಪಡಿಸಿರಿ. ಕೆಳಮಟ್ಟದ ಆತ್ಮಗೌರವವು ಅವನ ಮನೋಭಾವವನ್ನು ಕುಂದಿಸುತ್ತದೆ.”

ಏಡಿಏಚ್‌ಡಿ ಪೀಡಿತ ಹುಡುಗನಿಗೆ ಸಾಕಷ್ಟು ಬೆಂಬಲವಿರಲು ಹೆತ್ತವರಲ್ಲಿ ಇಬ್ಬರೂ ಸಹಕರಿಸತಕ್ಕದ್ದು. ಏಡಿಏಚ್‌ಡಿ ಪೀಡಿತ ಹುಡುಗನಿಗೆ, “ತಾನು ಮನೆಯ ಆವರಣದೊಳಗೆ ಪ್ರೀತಿಸಲ್ಪಡುತ್ತಿದ್ದೇನೆ ಮತ್ತು ಆ ಪ್ರೀತಿಯು ಹೆತ್ತವರಿಗೆ ಅವರ ಮಧ್ಯೆ ಇರುವ ಪ್ರೀತಿಯಿಂದಾಗಿ ಬರುತ್ತದೆ ಎಂದು ತಿಳಿಯುವುದು” ಅಗತ್ಯವೆಂದು ಡಾ. ಗಾರ್ಡನ್‌ ಸರ್ಫಾಂಟೇನ್‌ ಬರೆಯುತ್ತಾರೆ. (ಓರೆ ಅಕ್ಷರಗಳು ನಮ್ಮವು.) ಅಸಂತೋಷಕರವಾಗಿ, ಇಂತಹ ಪ್ರೀತಿಯು ಯಾವಾಗಲೂ ಪ್ರದರ್ಶಿಸಲ್ಪಡುವುದಿಲ್ಲ. ಡಾ. ಸರ್ಫಾಂಟೇನ್‌ ಮುಂದುವರಿಸುವುದು: “ಎಲ್ಲಿ [ಏಡಿಏಚ್‌ಡಿ ಪೀಡಿತ ಮಗನು] ಇದ್ದಾನೊ ಆ ಕುಟುಂಬದಲ್ಲಿ, ಒಂದು ಸಾಮಾನ್ಯ ಕುಟುಂಬದಲ್ಲಿರುವುದಕ್ಕಿಂತ ಸುಮಾರು ಮೂರರಲ್ಲಿ ಒಂದಂಶ ಹೆಚ್ಚು ವೈವಾಹಿಕ ವೈಮನಸ್ಯ ಮತ್ತು ಮುರಿತವಿದೆಯೆಂಬುದು ಧಾರಾಳವಾಗಿ ಸ್ಥಾಪಿಸಲ್ಪಟ್ಟಿದೆ.” ಇಂತಹ ವೈಮನಸ್ಯವನ್ನು ನಿಗ್ರಹಿಸಲು, ಏಡಿಏಚ್‌ಡಿ ಪೀಡಿತ ಮಗನನ್ನು ಬೆಳೆಸುವುದರಲ್ಲಿ ತಂದೆಯು ಗಮನಾರ್ಹವಾದ ಪಾತ್ರವನ್ನು ವಹಿಸಬೇಕು. ಇದರ ಜವಾಬ್ದಾರಿಯು ತಾಯಿಯ ಮೇಲೆ ಏಕಮಾತ್ರವಾಗಿ ಬಿಡಲ್ಪಡಬಾರದು.—ಎಫೆಸ 6:4; 1 ಪೇತ್ರ 3:7.

ಆಪ್ತಮಿತ್ರರು, ಕುಟುಂಬದ ಸದಸ್ಯರಲ್ಲವಾದರೂ, ಭಾರಿ ಬೆಂಬಲವಾಗಿ ಪರಿಣಮಿಸಬಲ್ಲರು. ಹೇಗೆ? ಈ ಮೊದಲು ಉಲ್ಲೇಖಿಸಲಾಗಿದ್ದ ಜಾನ್‌ ಹೇಳುವುದು: “ದಯೆಯುಳ್ಳವರಾಗಿರಿ, ಬಾಹ್ಯ ಸಂಗತಿಗಳಿಗಿಂತಲೂ ಹೆಚ್ಚು ಆಳವಾಗಿ ನೋಡಿರಿ. ಆ ಹುಡುಗನ ಪರಿಚಯ ಮಾಡಿಕೊಳ್ಳಿರಿ. ಹೆತ್ತವರೊಂದಿಗೂ ಮಾತಾಡಿರಿ. ಅವರು ಹೇಗಿದ್ದಾರೆ? ದಿನೇದಿನೇ ಅವರಿಗೆ ಏನನ್ನು ನಿಭಾಯಿಸಲಿಕ್ಕಿರುತ್ತದೆ?”—ಜ್ಞಾನೋಕ್ತಿ 17:17.

ಏಡಿಏಚ್‌ಡಿ ಪೀಡಿತ ಹುಡುಗ ಮತ್ತು ಹೆತ್ತವರು—ಇವರಿಬ್ಬರಿಗೂ ಬೆಂಬಲ ಕೊಡುವುದರಲ್ಲಿ ಕ್ರೈಸ್ತ ಸಭಾಸದಸ್ಯರು ಹೆಚ್ಚಿನದನ್ನು ಮಾಡಬಲ್ಲರು. ಹೇಗೆ? ತಮ್ಮ ನಿರೀಕ್ಷಣೆಗಳಲ್ಲಿ ನ್ಯಾಯಸಮ್ಮತರಾಗಿರುವ ಮೂಲಕವೇ. (ಫಿಲಿಪ್ಪಿ 4:5) ಆಗಾಗ್ಗೆ, ಏಡಿಏಚ್‌ಡಿ ಪೀಡಿತ ಮಗು ಗಲಾಟೆಯೆಬ್ಬಿಸಬಹುದು. ನಿರ್ದಯತೆಯಿಂದ, “ನಿಮ್ಮ ಮಗುವನ್ನು ನೀವೇಕೆ ನಿಯಂತ್ರಿಸುವುದಿಲ್ಲ?” ಅಥವಾ “ಅವನನ್ನು ಏಕೆ ಶಿಸ್ತಿಗೊಳಪಡಿಸುವುದಿಲ್ಲ?” ಎಂದು ಹೇಳುವ ಬದಲಿಗೆ, ಒಬ್ಬ ಸೂಕ್ಷ್ಮಗ್ರಾಹಿಯಾದ ಜೊತೆವಿಶ್ವಾಸಿಯು, ಏಡಿಏಚ್‌ಡಿ ಪೀಡಿತ ಮಗುವಿನ ಹೆತ್ತವರು ಆ ಮಗನನ್ನು ಬೆಳೆಸುವ ವಿಷಯದಲ್ಲಿ ದಿನನಿತ್ಯದ ತಗಾದೆಗಳಿಂದ ಆಗಲೇ ಮುಳುಗಿಹೋಗಿರಬಹುದೆಂದು ಗ್ರಹಿಸುವರು. ಹೆತ್ತವರು ಆ ಮಗನ ಗಲಾಟೆಯೆಬ್ಬಿಸುವ ವರ್ತನೆಯನ್ನು ನಿಯಂತ್ರಿಸಲು ತಮಗೆ ಮಾಡಸಾಧ್ಯವಿರುವುದನ್ನು ಮಾಡಬೇಕೆಂಬುದು ನಿಶ್ಚಯ. ಆದರೂ ರೇಗಿಕೊಂಡು ಬಿರುಸಾಗಿ ಮಾತಾಡುವ ಬದಲು, ನಂಬಿಕೆಯಲ್ಲಿ ಸಂಬಂಧಿಸಿರುವವರು “ಸಹಾನುಭೂತಿ”ಯನ್ನು (NW) ತೋರಿಸಲು ಮತ್ತು “ಆಶೀರ್ವಾದವನ್ನು ಸುರಿಸಲು” ಪ್ರಯತ್ನಿಸಬೇಕು. (1 ಪೇತ್ರ 3:8, 9) ಹೌದು, ಅನೇಕ ವೇಳೆ ದೇವರು “ದೀನಾವಸ್ಥೆಯಲ್ಲಿರುವವರನ್ನು ಸಂತೈಸುವುದು” (NW) ಕನಿಕರ ತೋರಿಸುವ ಜೊತೆ ವಿಶ್ವಾಸಿಗಳ ಮುಖಾಂತರವೇ.—2 ಕೊರಿಂಥ 7:5-7.

ಸಕಲ ಮಾನವ ಅಪೂರ್ಣತೆಯು—ಕಲಿಯುವ ಅಸಾಮರ್ಥ್ಯಗಳು ಮತ್ತು ಏಡಿಏಚ್‌ಡಿ ಸೇರಿ—ಪ್ರಥಮ ಮಾನವನಾದ ಆದಾಮನಿಂದ ಪಿತ್ರಾರ್ಜಿತವಾಗಿ ಬಂದಿದೆಯೆಂದು ಬೈಬಲಿನ ವಿದ್ಯಾರ್ಥಿಗಳು ಗ್ರಹಿಸುತ್ತಾರೆ. (ರೋಮಾಪುರ 5:12) ಸೃಷ್ಟಿಕರ್ತನಾದ ಯೆಹೋವನು, ಮುಂದೆ ಸಂಕಟಕರವಾದ ರೋಗಗಳು ಎಂದೂ ಅಸ್ತಿತ್ವದಲ್ಲಿರದ, ಒಂದು ನೀತಿಯ ನೂತನ ಲೋಕವನ್ನು ಬರಮಾಡುವ ತನ್ನ ವಾಗ್ದಾನವನ್ನು ನೆರವೇರಿಸುವನೆಂದೂ ಅವರು ಬಲ್ಲರು. (ಯೆಶಾಯ 33:24; ಪ್ರಕಟನೆ 21:1-4) ಈ ಆಶ್ವಾಸನೆಯು ಏಡಿಏಚ್‌ಡಿನಂತಹ ಅಸ್ವಸ್ಥತೆ ತಟ್ಟಿರುವವರಿಗೆ ಬೆಂಬಲನೀಡುವ ಲಂಗರಾಗಿದೆ. ಜಾನ್‌ ಹೇಳುವುದು: “ವಯಸ್ಸು, ತರಬೇತು ಮತ್ತು ಅನುಭವವು ನಮ್ಮ ಮಗನು ತನ್ನ ಅಸ್ವಸ್ಥತೆಯನ್ನು ಗ್ರಹಿಸಿ, ನಿರ್ವಹಿಸುವಂತೆ ಸಹಾಯ ಮಾಡುತ್ತಿವೆ. ಆದರೆ ಈ ವಿಷಯಗಳ ವ್ಯವಸ್ಥೆಯಲ್ಲಿ ಅವನಿಗೆ ಎಂದಿಗೂ ಪೂರ್ತಿಯಾಗಿ ಗುಣವಾಗದು. ಯೆಹೋವನು ನೂತನ ಲೋಕದಲ್ಲಿ ನಮ್ಮ ಮಗನ ಅಸ್ವಸ್ಥವನ್ನು ತಿದ್ದಿ, ಅವನು ಜೀವನದಲ್ಲಿ ಪೂರ್ತಿಯಾಗಿ ಆನಂದಿಸುವಂತೆ ಮಾಡುವನೆಂಬುದೇ ನಮ್ಮ ದೈನಂದಿನ ಸಾಂತ್ವನವಾಗಿದೆ.”

[ಅಧ್ಯಯನ ಪ್ರಶ್ನೆಗಳು]

a ಎಚ್ಚರ! ಯಾವುದೇ ಒಂದು ನಿರ್ದಿಷ್ಟ ಚಿಕಿತ್ಸಾಕ್ರಮವನ್ನು ಅನುಮೋದಿಸುವುದಿಲ್ಲ. ತಾವು ಪಡೆಯುವ ಯಾವುದೇ ಚಿಕಿತ್ಸೆಯು ಬೈಬಲ್‌ ಮೂಲಸೂತ್ರಗಳಿಗೆ ವಿರೋಧವಾಗಿರದಂತೆ ಕ್ರೈಸ್ತರು ಜಾಗ್ರತೆವಹಿಸಬೇಕು.

b ಔಷಧದಿಂದ ಕೆಲವರು, ಕಳವಳ ಮತ್ತು ಇತರ ಭಾವಾತ್ಮಕ ಸಮಸ್ಯೆಗಳು ಕೂಡಿರುವ ಅನಪೇಕ್ಷಣೀಯ ಪಕ್ಕ ಪರಿಣಾಮಗಳನ್ನು ಅನುಭವಿಸುತ್ತಾರೆ. ಅದಲ್ಲದೆ, ಉತ್ತೇಜಕ ಔಷಧಗಳು, ಟುರೆಟ್‌ ಲಕ್ಷಣಾವಳಿಯಂತಹ ಸ್ನಾಯು ಸೆಳೆತಗಳಿರುವ ರೋಗಿಗಳಲ್ಲಿ ತುಡಿತಗಳನ್ನು ವಿಪರೀತಗೊಳಿಸಬಲ್ಲವು. ಈ ಕಾರಣದಿಂದ, ಔಷಧವು ಡಾಕ್ಟರರ ಮೇಲ್ವಿಚಾರಣೆಯಲ್ಲಿ ಪರಿವೀಕ್ಷಿಸಲ್ಪಡಬೇಕು.

[ಪುಟ 9 ರಲ್ಲಿರುವ ಚೌಕ]

ಹೆತ್ತವರಿಗೊಂದು ಎಚ್ಚರಿಕೆಯ ಮಾತು

ಕಾರ್ಯತಃ ಎಲ್ಲ ಮಕ್ಕಳು ಆಗಾಗ್ಗೆ ಗಮನ ಕೊಡದವರೂ, ಆವೇಗಪರರೂ, ಅತಿಕ್ರಿಯಾಶೀಲರೂ ಆಗಿರುತ್ತಾರೆ. ಈ ಲಕ್ಷಣಗಳ ಇರುವಿಕೆಯು ಯಾವಾಗಲೂ ಏಡಿಏಚ್‌ಡಿಯನ್ನು ಸೂಚಿಸುವುದಿಲ್ಲ. ಹೊತ್ತು ಮೀರುವ ಮೊದಲು (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಡಾ. ಸ್ಟ್ಯಾಂಟನ್‌ ಇ. ಸ್ಯಾಮನೊ ಗಮನಿಸುವುದು: “ಒಂದು ಕೆಲಸವನ್ನು ಮಾಡಬಯಸದಿರುವ ಮಗನನ್ನು, ಅವನು ಒಂದು ಬಲಹೀನತೆಯಿಂದ ಅಥವಾ ದೋಷವು ಅವನದ್ದಾಗಿಲ್ಲದ ಒಂದು ಸ್ಥಿತಿಯಿಂದ ನರಳುತ್ತಿದ್ದಾನೆಂದು ಯೋಚಿಸಿ ಮನ್ನಿಸಲ್ಪಡುವ ಅಸಂಖ್ಯಾತ ವಿದ್ಯಮಾನಗಳನ್ನು ನಾನು ನೋಡಿದ್ದೇನೆ.”

ಡಾ. ರಿಚರ್ಡ್‌ ಬ್ರಾಮ್‌ಫೀಲ್ಡ್‌ ಎಚ್ಚರಿಕೆಯ ಅಗತ್ಯವನ್ನೂ ನೋಡುತ್ತಾರೆ. ಅವರು ಬರೆಯುವುದು: “ನಿಶ್ಚಯವಾಗಿಯೂ, ಏಡಿಏಚ್‌ಡಿ ರೋಗನಿರ್ಣಯವಾಗಿರುವ ಕೆಲವು ಜನರು ನರರೋಗದಿಂದ ಬಳಲಿ ಔಷಧದ ಅಗತ್ಯವುಳ್ಳವರಾಗಿದ್ದಾರೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಏಡಿಏಚ್‌ಡಿಗೆ ಯಾವ ಸಂಬಂಧವೂ ಇಲ್ಲದ, ಎಲ್ಲ ವಿಧಗಳ ದುರುಪಯೋಗಗಳು, ಕಪಟಾಚಾರಗಳು, ಅಲಕ್ಷ್ಯಗಳು ಮತ್ತು ಇತರ ಸಾಮಾಜಿಕ ಕೆಡುಕುಗಳಿಗೂ ಆ ರೋಗವನ್ನು ದೋಷಿಯೆಂದು ಹೆಸರಿಸಲಾಗುತ್ತದೆ. ವಾಸ್ತವವೇನಂದರೆ, ಆಧುನಿಕ ಜೀವನದಲ್ಲಿ ಮೌಲ್ಯಗಳ ಕೊರತೆ—ಗೊತ್ತುಗುರಿಯಿಲ್ಲದ ಹಿಂಸಾಚಾರ, ಅಮಲೌಷಧದ ದುರುಪಯೋಗ ಮತ್ತು ಕಡಮೆ ದಿಗಿಲುಗೊಳಿಸುವ ವಿಷಯಾಂಶಗಳಾದ, ಶಿಸ್ತಿಲ್ಲದ, ಅತಿ ಅವ್ಯವಸ್ಥೆಯ ಮನೆಗಳು—ಇವುಗಳು ಯಾವುದೇ ನರರೋಗಶಾಸ್ತ್ರೀಯ ಕುಂದುಗಳಿಗಿಂತ ಹೆಚ್ಚು ಏಡಿಏಚ್‌ಡಿ-ಸದೃಶ ಚಡಪಡಿಸುವಿಕೆಗಳನ್ನು ಬೆಳೆಸುವ ಪ್ರವೃತ್ತಿಯುಳ್ಳದ್ದಾಗಿವೆ.”

ಹೀಗೆ ಸಕಾರಣದಿಂದಲೇ, ಡಾ. ರಾನಲ್ಡ್‌ ಗೋಲ್ಡ್‌ಬರ್ಗ್‌ ಏಡಿಏಚ್‌ಡಿಯನ್ನು, “ಅಡಕುಚೀಲ ಭಾವನೆ”ಯಾಗಿ ಉಪಯೋಗಿಸುವ ವಿರುದ್ಧ ಎಚ್ಚರಿಸುತ್ತಾರೆ. “ಸರಿಯಾದ ನಿರ್ಣಯಕ್ಕೆ ಬರಲು, ಯಾವುದೇ ಪ್ರಮುಖ ರೋಗನಿರ್ಣಯ ವಿಧಾನಗಳು ಬಿಡಲ್ಪಟ್ಟಿಲ್ಲವೆಂದು ಖಚಿತಮಾಡಿಕೊಳ್ಳಿರಿ” ಎಂಬುದು ಅವರ ಬುದ್ಧಿವಾದ. ಏಡಿಏಚ್‌ಡಿಗೆ ಹೋಲಿಕೆಯಾದ ರೋಗಲಕ್ಷಣಗಳು, ಅನೇಕ ಶಾರೀರಿಕ ಮತ್ತು ಭಾವನಾತ್ಮಕ ಸಮಸ್ಯೆಗಳಲ್ಲಿ ಯಾವುದಾದರೂ ಒಂದನ್ನು ಸೂಚಿಸಬಹುದು. ಆದುದರಿಂದ ಒಬ್ಬ ಅನುಭವಸ್ಥ ಡಾಕ್ಟರರ ಸಹಾಯವು, ನಿಷ್ಕೃಷ್ಟವಾದ ರೋಗನಿರ್ಣಯ ಮಾಡಲು ಅತ್ಯಾವಶ್ಯಕ.

ರೋಗನಿರ್ಣಯ ಮಾಡಿದರೂ, ಹೆತ್ತವರು ಔಷಧದ ಸಾಧಕ ಬಾಧಕಗಳನ್ನು ತೂಗಿನೋಡುವುದು ಒಳ್ಳೆಯದು. ರಿಟಲಿನ್‌ ಔಷಧ ಅನಪೇಕ್ಷಣೀಯ ರೋಗಲಕ್ಷಣಗಳನ್ನು ನಿವಾರಿಸಬಲ್ಲದಾದರೂ, ನಿರ್ನಿದ್ರತೆ, ವರ್ಧಿಸಿದ ಕಳವಳ ಮತ್ತು ಉದ್ವಿಗ್ನತೆಯಂತಹ ಅಹಿತಕರವಾದ ಪಕ್ಕ ಪರಿಣಾಮಗಳನ್ನೂ ಕೊಡಬಲ್ಲದು. ಆದಕಾರಣ, ಹುಡುಗನ ರೋಗಲಕ್ಷಣಗಳನ್ನು ಕೇವಲ ನಿವಾರಿಸಲಿಕ್ಕಾಗಿ ಅವನಿಗೆ ಕೂಡಲೇ ಔಷಧ ಕೊಡುವುದರ ವಿರುದ್ಧ ಡಾ. ರಿಚರ್ಡ್‌ ಬ್ರಾಮ್‌ಫೀಲ್ಡ್‌ ಎಚ್ಚರಿಸುತ್ತಾರೆ. ಅವರು ಹೇಳುವುದು: “ತೀರ ಹೆಚ್ಚು ಮಕ್ಕಳಿಗೆ ಮತ್ತು ಹೆಚ್ಚೆಚ್ಚು ವಯಸ್ಕರಿಗೆ ರಿಟಲಿನ್‌ ಅಯೋಗ್ಯವಾಗಿ ಕೊಡಲಾಗುತ್ತದೆ. ನನ್ನ ಅನುಭವದಲ್ಲಿ, ರಿಟಲಿನ್‌ ಉಪಯೋಗವು, ಹೆಚ್ಚಾಗಿ ಮಕ್ಕಳ ವರ್ತನೆಯನ್ನು ಸಹಿಸಲು ಹೆತ್ತವರಿಗೂ ಅಧ್ಯಾಪಕರಿಗೂ ಇರುವ ಸಾಮರ್ಥ್ಯದ ಮೇಲೆ ಹೊಂದಿಕೊಂಡಿದೆಯೆಂದು ಕಾಣುತ್ತದೆ. ಮಕ್ಕಳ ಆವಶ್ಯಕತೆಗಳನ್ನು ಪೂರೈಸುವುದಕ್ಕಿಂತ ಹೆಚ್ಚಾಗಿ ಅವರನ್ನು ಶಿಸ್ತಿನಲ್ಲಿಡಲು ಅದು ಕೊಡಲ್ಪಟ್ಟಂತಹ ಮಕ್ಕಳ ವಿಷಯ ನನಗೆ ತಿಳಿದದೆ.”

ಆದಕಾರಣ, ತಮ್ಮ ಮಕ್ಕಳು ಏಡಿಏಚ್‌ಡಿ ಪೀಡಿತರು ಅಥವಾ ಒಂದು ಕಲಿಯುವ ಅಸಾಮರ್ಥ್ಯವುಳ್ಳವರೆಂದು ನಿರ್ಣಯಿಸುವುದರಲ್ಲಿ ಹೆತ್ತವರು ಹೆಚ್ಚು ವೇಗಿಗಳಾಗಿರಬಾರದು. ಬದಲಿಗೆ, ನಿಪುಣ ವೈದ್ಯರ ಸಹಾಯದಿಂದ, ಅವರು ಜಾಗರೂಕತೆಯಿಂದ ಸಾಕ್ಷ್ಯಗಳನ್ನು ತೂಗಿನೋಡಬೇಕು. ಒಬ್ಬ ಹುಡುಗನಿಗೆ ಒಂದು ಕಲಿಯುವ ಅಸಾಮರ್ಥ್ಯವಿದೆ ಅಥವಾ ಏಡಿಏಚ್‌ಡಿ ಇದೆ ಎಂದು ನಿರ್ಧರಿಸಲ್ಪಡುವಲ್ಲಿ, ಹೆತ್ತವರು ತಮ್ಮ ಮಕ್ಕಳ ಸುಕ್ಷೇಮದ ದೃಷ್ಟಿಯಲ್ಲಿ ವರ್ತಿಸಸಾಧ್ಯವಾಗುವಂತೆ ಆ ಸಮಸ್ಯೆಯ ಕುರಿತು ಒಳ್ಳೆಯ ತಿಳಿವಳಿಕೆಯನ್ನು ಪಡೆಯಲು ಸಮಯವನ್ನು ತೆಗೆದುಕೊಳ್ಳಬೇಕು.

[ಪುಟ 0 ರಲ್ಲಿರುವ ಚಿತ್ರ]

ಏಡಿಏಚ್‌ಡಿ ಪೀಡಿತ ಮಗುವಿಗೆ ದಯೆಯುಳ್ಳ ಆದರೂ ಹೊಂದಿಕೆಯಾಗಿರುವ ಶಿಸ್ತು ಅಗತ್ಯ

[ಪುಟ 21 ರಲ್ಲಿರುವ ಚಿತ್ರ]

ಹೆತ್ತವರ ಪ್ರಶಂಸೆ ಅತಿ ಪರಿಣಾಮಕಾರಿಯಾಗಿರುತ್ತದೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ