ಯುವ ಜನರು ಪ್ರಶ್ನಿಸುವುದು . . .
ನಾನು ಹೇಗೆ ದೇವರ ಸ್ನೇಹಿತನಾಗಬಲ್ಲೆ?
“ನಿಷ್ಠೆ.” “ವೈಯಕ್ತಿಕ ಶ್ರದ್ಧೆ.” ಇವು ತಮ್ಮ ಅತಿ ಆಪ್ತ ಸ್ನೇಹಿತರೊಂದಿಗಿನ ತಮ್ಮ ಅನ್ಯೋನ್ಯತೆಯನ್ನು ವರ್ಣಿಸಲು, ಜನರು ಅನೇಕ ವೇಳೆ ಉಪಯೋಗಿಸುವ ಪದಗಳಾಗಿವೆ. ಈ ಪದಗಳನ್ನು, ಈ ಘನಗಂಭೀರ ವಿಶ್ವದ ಮಹಾ ಸೃಷ್ಟಿಕರ್ತನೊಂದಿಗಿನ ಅನ್ಯೋನ್ಯತೆಯನ್ನು—ಸ್ವತಃ ದೇವರೇ ನಿಮ್ಮ ವ್ಯಕ್ತಿಗತ ಸ್ನೇಹಿತನಾಗಿರಬಲ್ಲನೆಂಬುದನ್ನು—ವರ್ಣಿಸಲು ಸಹ ಉಪಯೋಗಿಸಸಾಧ್ಯವೆಂದು ನಿಮಗೆ ಗೊತ್ತಿತ್ತೊ? ಹೌದು, ದಿವ್ಯ ಭಕ್ತಿಯನ್ನು ಪಡೆದಿರುವುದರ ಕುರಿತು ಬೈಬಲು ಮಾತಾಡುತ್ತದೆ, ಮತ್ತು ಆ ಅಭಿವ್ಯಕ್ತಿಯು ಕೇವಲ ವಿಧೇಯತೆಯನ್ನು ಮಾತ್ರವಲ್ಲ ದೇವರೊಂದಿಗೆ ಒಂದು ವೈಯಕ್ತಿಕ ಅನ್ಯೋನ್ಯತೆಯನ್ನು, ಒಂದು ಗುಣಗ್ರಾಹಿ ಹೃದಯದಿಂದ ಚಿಮ್ಮುವ ಆಪ್ತತೆಯನ್ನು ಸಹ ಒಳಗೊಳ್ಳುತ್ತದೆ.
ಅಂತಹ ಒಂದು ಅನ್ಯೋನ್ಯತೆಯು ಸಂಭವನೀಯವೂ ಪ್ರಯೋಜನಕರವೂ ಆಗಿದೆಯೆಂದು ಈ ಸರಣಿಯ ಹಿಂದಿನ ಲೇಖನಗಳು ತೋರಿಸಿವೆ.a ಆದರೆ ದೇವರೊಂದಿಗಿನ ಈ ವೈಯಕ್ತಿಕ ಸ್ನೇಹವನ್ನು ನೀವು ಹೇಗೆ ತಾನೇ ಗಳಿಸಿಕೊಳ್ಳುತ್ತೀರಿ? ಅದು ಸ್ವಭಾವಸಿದ್ಧವಾದ ಇಲ್ಲವೆ ದೈವಭಕ್ತಿಯುಳ್ಳ ಹೆತ್ತವರಿಂದ ನೀವು ಅಪ್ರಯತ್ನವಾಗಿ ಪಡೆದುಕೊಳ್ಳುವ ವಿಷಯವಲ್ಲ. ಬದಲಿಗೆ, ಅದು ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಬರುವ ವಿಷಯವಾಗಿದೆ. ಅಪೊಸ್ತಲ ಪೌಲನು ಯುವ ಪುರುಷನಾದ ತಿಮೊಥೆಯನಿಗೆ, ‘ದೇವಭಕ್ತಿಯ ವಿಷಯದಲ್ಲಿ ಸ್ವತಃ ತರಬೇತುಮಾಡಿ’ಕೊಳ್ಳುವಂತೆ (NW) ಹೇಳಿದನು. ಹೌದು, ಒಬ್ಬ ಕ್ರೀಡಾಪಟುವು ತರಬೇತಿಯಲ್ಲಿ ಪ್ರಯೋಗಿಸುವಂತಹದ್ದೇ ರೀತಿಯ ಪ್ರಯತ್ನವನ್ನು ಅವನು ಪ್ರಯೋಗಿಸಬೇಕಿತ್ತು! (1 ತಿಮೊಥೆಯ 4:7, 8, 10) ದೇವರು ನಿಮ್ಮ ಸ್ನೇಹಿತನಾಗಬೇಕಾದರೆ, ನೀವೂ ತದ್ರೀತಿ ಮಾಡಬೇಕು. ಆದರೆ ಈ ಸಂಬಂಧದಲ್ಲಿ ನೀವು ತರಬೇತಿಯನ್ನು ಹೇಗೆ ಆರಂಭಿಸಬಲ್ಲಿರಿ?
ದೇವರ ಕುರಿತಾದ ವೈಯಕ್ತಿಕ ಜ್ಞಾನ
ದಿವ್ಯ ಭಕ್ತಿಯು ಹೃದಯದಿಂದ ಚಿಮ್ಮುವ ಕಾರಣ, ನೀವು ನಿಮ್ಮ ಹೃದಯವನ್ನು ದೇವರ ಜ್ಞಾನದಿಂದ ತುಂಬಿಸಬೇಕು. ವಿಷಾದಕರವಾಗಿ, 500ಕ್ಕಿಂತಲೂ ಹೆಚ್ಚಿನ ಯುವ ಜನರನ್ನು, “ನೀವು ಒಬ್ಬೊಂಟಿಗರಾಗಿರುವಾಗ, ಎಷ್ಟು ಬಾರಿ ಬೈಬಲನ್ನು ಓದುತ್ತೀರಿ?” ಎಂದು ಕೇಳಿದಾಗ, 87 ಪ್ರತಿಶತ ಯುವ ಜನರು, “ಆಗಾಗ,” “ಯಾವಾಗಲಾದರೊಮ್ಮೆ,” ಅಥವಾ “ಇಲ್ಲವೇ ಇಲ್ಲ” ಎಂಬುದಾಗಿ ಹೇಳಿದರು. ಬೈಬಲನ್ನು ಓದುವುದು ನೀರಸವೂ ಬೇಸರಹಿಡಿಸುವಂತಹದ್ದೂ ಆಗಿದೆಯೆಂದು ಹೆಚ್ಚಿನ ಯುವ ಜನರು ನೆನಸುತ್ತಾರೆ. ಆದರೆ ಅದು ನೀರಸವೂ ಬೇಸರಹಿಡಿಸುವಂತಹದ್ದೂ ಆಗಿರಬೇಕೆಂದಿಲ್ಲ! ಇದನ್ನು ಪರಿಗಣಿಸಿರಿ: ಕೆಲವು ಯುವ ಜನರು ಎಲ್ಲ ರೀತಿಯ ಕ್ರೀಡಾ ಅಂಕಿ ಸಂಖ್ಯೆಗಳನ್ನು ಕಂಠಪಾಠಮಾಡುವುದು ಅಥವಾ ತಮ್ಮ ಅಚ್ಚುಮೆಚ್ಚಿನ ಹಾಡುಗಳ ಶಬ್ದಗಳನ್ನು ಏಕೆ ಕಲಿತುಕೊಳ್ಳುತ್ತಾರೆ? ಏಕೆಂದರೆ ಅವರು ಆ ವಿಷಯಗಳಲ್ಲಿ ಆಸಕ್ತರಾಗಿದ್ದಾರೆ. ತದ್ರೀತಿಯಲ್ಲಿ, ನೀವು ಬೈಬಲನ್ನು ಅಧ್ಯಯನಿಸುವುದರಲ್ಲಿ ತಲ್ಲೀನರಾಗುವುದಾದರೆ, ಅದು ಆಸಕ್ತಿಕರವಾಗುತ್ತದೆ. (1 ತಿಮೊಥೆಯ 4:15) ಅಪೊಸ್ತಲ ಪೇತ್ರನು ಪ್ರೇರೇಪಿಸಿದ್ದು: “ವಾಕ್ಯಕ್ಕೆ ಸೇರಿರುವ ಪಾರಮಾರ್ಥಿಕವಾದ ಶುದ್ಧ ಹಾಲಿಗಾಗಿ ಹಂಬಲಿಕೆಯನ್ನು ಬೆಳೆಸಿಕೊಳ್ಳಿರಿ.” (1 ಪೇತ್ರ 2:2, NW) ಹೌದು, ನೀವು ಶಾಸ್ತ್ರಗಳಲ್ಲಿ ಅಂತಹ ಒಂದು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಇಲ್ಲವೆ ವಿಕಸಿಸಿಕೊಳ್ಳಬೇಕು. ಇದು ಪ್ರಯತ್ನವನ್ನು ಕೇಳಿಕೊಳ್ಳಬಹುದಾದರೂ, ಪ್ರತಿಫಲಗಳು ಬೆಲೆಬಾಳುವಂತಹವುಗಳಾಗಿವೆ.b
ಒಂದು ಪ್ರಯೋಜನವೇನೆಂದರೆ, ದೇವರ ವಾಕ್ಯ ಮತ್ತು ಬೈಬಲಾಧಾರಿತ ಪ್ರಕಾಶನಗಳನ್ನು ಓದಿ, ಅಭ್ಯಾಸಿಸುವುದು, “ಆತನ [“ಯೆಹೋವನ,” NW] ಪ್ರಸನ್ನತೆಯನ್ನು” ಪ್ರಕಟಪಡಿಸುವುದು. (ಕೀರ್ತನೆ 27:4) ಆ್ಯಂಬರ್ ಎಂಬ ಹೆಸರಿನ ಒಬ್ಬ ಕ್ರೈಸ್ತ ಯುವತಿಯು, ಇಡೀ ಬೈಬಲನ್ನು ಓದುವುದನ್ನು ತನ್ನ ಗುರಿಯನ್ನಾಗಿ ಮಾಡಿಕೊಂಡಳು. ಇದಕ್ಕೆ ಸುಮಾರು ಒಂದು ವರ್ಷ ಹಿಡಿಯಿತು. “ನನ್ನ ಜೀವಿತದಲ್ಲಿ, ಇಷ್ಟೊಂದು ಸಮಯ ಮತ್ತು ಪ್ರಯತ್ನವನ್ನು ಕೇಳಿಕೊಳ್ಳುವ, ಆದರೆ ಇಷ್ಟೊಂದು ಪ್ರತಿಫಲಗಳನ್ನು ತರುವಂತಹ ವಿಷಯಗಳು ಕೊಂಚವೇ,” ಎಂಬುದಾಗಿ ಆ್ಯಂಬರ್ ವಿವರಿಸಿದಳು. “ನಾನು ಅದನ್ನು ಓದುತ್ತಿದ್ದಾಗ, ಯೆಹೋವನು ಒಬ್ಬ ತಂದೆಯಂತೆ ನನ್ನನ್ನು ತನ್ನ ಮಡಿಲಲ್ಲಿ ಕುಳ್ಳಿರಿಸಿಕೊಂಡು, ನನಗೆ ಕಲಿಸುತ್ತಾ ಇದ್ದನೊ ಎಂಬಂತೆ ಅನಿಸಿತು. ನಾನು ಯೆಹೋವನ ಬಗ್ಗೆ ಬಹಳಷ್ಟನ್ನು—ಆತನ ಕಡೆಗೆ ನನ್ನನ್ನು ಸೆಳೆದಂತಹ ಮತ್ತು ನನ್ನ ಜೀವನಪರ್ಯಂತ ನಾನು ಆತನಿಗೆ ಭಯಪಡಲಿಚ್ಛಿಸುವಂತೆ ಮಾಡಿದ ವಿಷಯಗಳನ್ನು—ಕಲಿತುಕೊಂಡೆ.”
ನೀವು ಬೈಬಲನ್ನು ಓದುವಾಗ, ದೇವರು ತನ್ನ ಸ್ನೇಹಿತರನ್ನು ನಿಷ್ಠೆಯಿಂದ ಬೆಂಬಲಿಸಿದ ಅನೇಕ ಸಂದರ್ಭಗಳ ಕುರಿತು ಕಲಿಯುತ್ತೀರಿ. (ಕೀರ್ತನೆ 18:25; 27:10) ಆತನ ಮಟ್ಟಗಳು ಸದಾ ಅತ್ಯುತ್ತಮವಾದವುಗಳು ಮತ್ತು ನಮ್ಮ ಬಾಳುವ ಒಳಿತಿಗಾಗಿವೆ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ. (ಯೆಶಾಯ 48:17) ಪ್ರೀತಿ ಮತ್ತು ವಿವೇಕದಂತಹ ದೇವರ ಅಸಮಾನ ಗುಣಗಳ ಕುರಿತು ಓದುವುದು, ಆತನನ್ನು ಅನುಕರಿಸಬಯಸುವಂತೆ ನಿಮ್ಮನ್ನು ಪ್ರಚೋದಿಸುತ್ತದೆ. (ಎಫೆಸ 5:1) ಆದರೆ ಇಂತಹ ಮಾಹಿತಿಯು ನಿಮ್ಮ ಹೃದಯವನ್ನು ಪ್ರೇರಿಸಬೇಕಾದರೆ, ನೀವು ಅದರ ಕುರಿತು ಮನನ ಸಹ ಮಾಡಬೇಕು. ನೀವು ಓದಿದಂತೆ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಇದು ನನಗೆ ಯೆಹೋವನ ಕುರಿತು ಏನನ್ನು ತಿಳಿಸುತ್ತದೆ? ಇದನ್ನು ನಾನು ನನ್ನ ಯೋಚನೆ ಹಾಗೂ ಕ್ರಿಯೆಗಳಲ್ಲಿ ಹೇಗೆ ಅನ್ವಯಿಸಿಕೊಳ್ಳಬಲ್ಲೆ? ನನಗೆ ಎಂದಾದರೂ ಇರಸಾಧ್ಯವಿರುವ ಅತ್ಯುತ್ತಮ ಸ್ನೇಹಿತನು ದೇವರೆಂಬುದನ್ನು ಇದು ಹೇಗೆ ತೋರಿಸುತ್ತದೆ?’
ವೈಯಕ್ತಿಕ ಹಾಗೂ ಸಭಾ ಅಭ್ಯಾಸದ ಮೂಲಕ ನೀವು ದೇವರ ಕುರಿತು ಗಳಿಸುವ ಜ್ಞಾನವು, ಮತ್ತೊಂದು ವಿಧದಲ್ಲಿ ಆತನಿಗೆ ಹತ್ತಿರವಾಗುವಂತೆ ನಿಮಗೆ ಸಹಾಯ ಮಾಡುವುದು. ಒಂದು ಫ್ರೆಂಚ್ ಗಾದೆಯು ತಿಳಿಸುವುದು: “ಏಕಪ್ರಕಾರವಾಗಿ ಆಲೋಚಿಸುವವರೇ ನಿಜ ಸ್ನೇಹಿತರು.” ಆದರೆ ನೀವು ದೇವರೊಂದಿಗೆ ಹೇಗೆ “ಏಕಪ್ರಕಾರವಾಗಿ ಆಲೋಚಿಸ”ಬಲ್ಲಿರಿ? ಯುವ ಡೆನೀಸ್ ವಿವರಿಸುವುದು: “ಒಂದು ವಿಷಯದ ಕುರಿತು ನೀವು ಹೆಚ್ಚಾಗಿ ಅಭ್ಯಸಿಸಿ, ಸಂಶೋಧನೆ ಮಾಡಿದಷ್ಟು, ಅದರ ಕುರಿತು ಯೆಹೋವನ ದೃಷ್ಟಿಕೋನವನ್ನು ನೀವು ಹೆಚ್ಚಾಗಿ ಕಂಡುಕೊಳ್ಳುವಿರಿ. ಯಾವುದಾದರೂ ವಿಷಯದ ಕುರಿತು ಆತನಿಗೆ ಹೇಗನಿಸುತ್ತದೆ ಎಂಬುದನ್ನು ತಿಳಿದುಕೊಂಡಿರುವುದು ಸಹಾಯಕರ.”
ಯಥಾರ್ಥ ನಡವಳಿಕೆಯು ಅತ್ಯಾವಶ್ಯಕ
ದೇವರು, ತನ್ನ ನೈತಿಕ ಮಟ್ಟಗಳನ್ನು ಗೌರವಿಸುವವರನ್ನು ಮಾತ್ರ ತನ್ನ ಸ್ನೇಹಿತರಾಗಿ ಆರಿಸಿಕೊಳ್ಳುತ್ತಾನೆ. “ಯಥಾರ್ಥರಿಗೆ ಆತನ ಸ್ನೇಹವು ದೊರೆಯುವದು” ಎಂದು ಜ್ಞಾನೋಕ್ತಿ 3:32 ಹೇಳುತ್ತದೆ. ನೀತಿವಂತನಾಗಿರಲು ಹೆಣಗಾಡುತ್ತಿರುವ ಯೌವನಸ್ಥನು, “ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಳ್ಳುವದಕ್ಕೆ ಪ್ರಯತ್ನಿ”ಸುವನು. (2 ಅರಸುಗಳು 10:31) ಅಂತಹ ವಿಧೇಯ ನಡವಳಿಕೆಯು ಒಬ್ಬ ವ್ಯಕ್ತಿಯನ್ನು ದೇವರ ಕಡೆಗೆ ಎಷ್ಟು ಹತ್ತಿರಕ್ಕೆ ತರುವುದು? ಯೇಸು ಕ್ರಿಸ್ತನು ಹೇಳಿದ್ದು: “ಅವನನ್ನು ನನ್ನ ತಂದೆಯು ಪ್ರೀತಿಸುವನು, ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು ಅವನ ಬಳಿಯಲ್ಲಿ ಬಿಡಾರವನ್ನು ಮಾಡಿಕೊಳ್ಳುವೆವು.” (ಯೋಹಾನ 14:21-24) ಎಂತಹ ಒಂದು ಹೃದಯೋಲ್ಲಾಸಕರ ಚಿತ್ರ! ವಿಶ್ವದಲ್ಲೇ ಇಬ್ಬರು ಅತ್ಯಂತ ಮಹಾನ್ ವ್ಯಕ್ತಿಗಳು, ತಮ್ಮ ಸತತವಾದ ಗಮನ ಹಾಗೂ ಕಾಳಜಿಯನ್ನು ಒಬ್ಬ ಮಾನವನಿಗೆ ಕೊಡುತ್ತಿರುವುದನ್ನು ಊಹಿಸಿಕೊಳ್ಳಿರಿ! ನೀವು ಯೆಹೋವನ ಧರ್ಮಶಾಸ್ತ್ರದಲ್ಲಿ ನಡೆಯಲು ಪ್ರಯತ್ನಿಸುವಲ್ಲಿ, ಅದು ನಿಮಗೆ ಸಂಭವಿಸುವುದು.
ಯಥಾರ್ಥರಾಗಿರುವುದು, ನೀವು ಪರಿಪೂರ್ಣರಾಗಿರಬೇಕೆಂಬುದನ್ನು ಅರ್ಥೈಸುತ್ತದೊ? ಖಂಡಿತವಾಗಿಯೂ ಇಲ್ಲ! ಬಲಹೀನತೆಯ ಕಾರಣ ಒಂದು ತಪ್ಪನ್ನು ಮಾಡುವುದು, ನೀವು ‘ದೇವರ ಆಜ್ಞಾಮಾರ್ಗವನ್ನು’ ತೊರೆದಿದ್ದೀರಿ ಎಂಬುದನ್ನು ಅರ್ಥೈಸದು. (ಕೀರ್ತನೆ 119:35) ರಾಜ ದಾವೀದನ ಕುರಿತು ಬೈಬಲು ನಮಗೆ ಹೇಳುವ ವಿಷಯವನ್ನು ಪರಿಗಣಿಸಿರಿ. ಅವನು ದೇವರ ಒಬ್ಬ ನಿಷ್ಠಾವಂತ ಸ್ನೇಹಿತನಾಗಿದ್ದುದರ ಹೊರತೂ, ಬಲಹೀನತೆಯ ಕಾರಣ ಕೆಲವು ಗಂಭೀರ ತಪ್ಪುಗಳನ್ನು ಗೈದನು. ಹಾಗಿದ್ದರೂ ಅವನು “ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ” ನಡೆದುಕೊಂಡಿದ್ದನೆಂದು ಯೆಹೋವನು ಹೇಳಿದನು. (1 ಅರಸುಗಳು 9:4) ತಾನು ಗೈದ ಯಾವುದೇ ತಪ್ಪಿಗೆ ರಾಜ ದಾವೀದನು ಹೃತ್ಪೂರ್ವಕ ಪಶ್ಚಾತ್ತಾಪವನ್ನು ಯಾವಾಗಲೂ ತೋರಿಸಿ, ದೇವರಿಗೆ ಮೆಚ್ಚಿಕೆಯಾಗಿರುವಂತಹದ್ದನ್ನು ಮಾಡಲು ಕಷ್ಟಪಟ್ಟು ಪ್ರಯತ್ನಿಸಿದನು.—ಕೀರ್ತನೆ 51:1-4.
ದಾವೀದನು ದೇವರನ್ನು ಪ್ರೀತಿಸಿದರೂ, ಕೆಲವೊಮ್ಮೆ ಸರಿಯಾದ ವಿಷಯವನ್ನು ಮಾಡುವುದು ಎಷ್ಟು ಕಠಿನವಾಗಿರಸಾಧ್ಯವಿದೆಯೆಂದು ಅವನಿಗೆ ಗೊತ್ತಿತ್ತು. ಆದುದರಿಂದಲೇ ಅವನು ದೇವರಲ್ಲಿ ಬೇಡಿಕೊಂಡದ್ದು: “ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು.” ಹೌದು, ದೇವರಿಗೆ ಕೋಪಹುಟ್ಟಿಸುವ ವಿಷಯದಲ್ಲಿ ಅವನು ಪ್ರಾಮಾಣಿಕವಾದ ಭೀತಿ ಇಲ್ಲವೆ ಭಯವನ್ನು ವಿಕಸಿಸಿಕೊಂಡನು. ಆದುದರಿಂದ ದಾವೀದನು ಹೀಗೆ ಹೇಳಸಾಧ್ಯವಿತ್ತು: “ಯೆಹೋವನು ತನ್ನ ಸದ್ಭಕ್ತರಿಗೆ [“ಭಯಪಡುವವರಿಗೆ,” NW] ಆಪ್ತಮಿತ್ರನಂತಿರುವನು.” (ಕೀರ್ತನೆ 25:5, 14) ಇದು ಅಹಿತಕರವಾದ ಭಯವಲ್ಲ, ಬದಲಿಗೆ ಸೃಷ್ಟಿಕರ್ತನಿಗಾಗಿ ಗಾಢವಾದ ಪೂಜ್ಯಭಾವನೆ ಮತ್ತು ಆತನನ್ನು ಅಪ್ರಸನ್ನಗೊಳಿಸುವುದರ ಬಗ್ಗೆ ಹಿತಕರವಾದ ಭೀತಿಯ ಅನಿಸಿಕೆಯಾಗಿದೆ. ಈ ದಿವ್ಯ ಭಯವು, ಯೋಗ್ಯವಾದ ನಡವಳಿಕೆಗೆ ಆಧಾರವಾಗಿದೆ. ಇದನ್ನು ದೃಷ್ಟಾಂತಿಸಲು, ಜೋಶುವ ಎಂಬ ಹೆಸರಿನ ಒಬ್ಬ ಕ್ರೈಸ್ತ ಯುವಕನ ಉದಾಹರಣೆಯನ್ನು ಪರಿಗಣಿಸಿರಿ.
ಜೋಶುವ ಒಬ್ಬ ಸಹಪಾಠಿಯಿಂದ ಒಂದು ಸಣ್ಣ ಚೀಟಿಯನ್ನು ಪಡೆದನು. ಆಕೆ ಅವನನ್ನು ಇಷ್ಟಪಡುವುದಾಗಿ, ಮತ್ತು ಅವನೊಂದಿಗೆ ಒಂದು “ಸಂಬಂಧವನ್ನು” ಪಡೆದಿರಲು ಬಯಸಿರುವುದಾಗಿ ಅದರಲ್ಲಿ ಬರೆದಿದ್ದಳು. ಜೋಶುವ ಆಕೆಯ ಕಡೆಗೆ ಆಕರ್ಷಿತನಾಗಿದ್ದರೂ, ಅವಿಶ್ವಾಸಿಯೊಂದಿಗೆ ಅಂತಹ ಒಂದು ಸಹವಾಸವು ಅನೈತಿಕತೆಗೆ ನಡೆಸಿ, ಯೆಹೋವನೊಂದಿಗಿನ ತನ್ನ ಸ್ನೇಹವನ್ನು ಹಾನಿಗೊಳಿಸಸಾಧ್ಯವಿದೆಯೆಂಬುದನ್ನು ಗ್ರಹಿಸಿದನು. ಆದುದರಿಂದ ತಾನು ಆಸಕ್ತನಾಗಿಲ್ಲವೆಂದು ಆಕೆಗೆ ಸ್ಪಷ್ಟವಾಗಿ ತಿಳಿಸಿದನು! ತದನಂತರ ಅವನು ಆ ಸನ್ನಿವೇಶವನ್ನು ಹೇಗೆ ನಿರ್ವಹಿಸಿದನೆಂಬುದನ್ನು ತನ್ನ ತಾಯಿಗೆ ಹೇಳಿದಾಗ, ಯೋಚನೆಮಾಡದೆಯೆ ಆಕೆ ಉದ್ಗರಿಸಿದ್ದು: “ಓಹ್ ಜೋಶುವ, ನೀನು ಬಹುಶಃ ಆಕೆಯ ಮನಸ್ಸನ್ನು ನೋಯಿಸಿದೆ!” ಜೋಶುವ ಉತ್ತರಿಸಿದ್ದು: “ಆದರೆ ಅಮ್ಮ, ಯೆಹೋವನ ಮನನೋಯಿಸುವುದಕ್ಕಿಂತ ಆಕೆಯ ಮನನೋಯಿಸುವುದು ಉತ್ತಮವೆಂದು ನಾನೆಣಿಸುತ್ತೇನೆ.” ಅವನ ದಿವ್ಯಭಯ, ತನ್ನ ಸ್ವರ್ಗೀಯ ಸ್ನೇಹಿತನನ್ನು ಅಪ್ರಸನ್ನಗೊಳಿಸುವ ಅವನ ಭೀತಿ, ಯಥಾರ್ಥ ನಡವಳಿಕೆಯನ್ನು ಕಾಪಾಡಿಕೊಳ್ಳುವಂತೆ ಅವನನ್ನು ಪ್ರೇರೇಪಿಸಿತು.
ಒಳ್ಳೆಯ ಸಹವಾಸಿಗಳನ್ನು ಹುಡುಕಿರಿ
ಆದರೂ, ಲಿನ್ ಎಂಬ ಹೆಸರಿನ ಒಬ್ಬ ಯುವತಿಯು, ಸದಾ ತೊಂದರೆಯೊಳಗೆ ಸಿಕ್ಕಿಕೊಳ್ಳುತ್ತಿದ್ದಳು. ಸಮಸ್ಯೆಯು ಏನಾಗಿತ್ತು? ಅವಳು ತಪ್ಪಾದ ಗುಂಪಿನೊಂದಿಗೆ ಸಹವಸಿಸುತ್ತಿದ್ದಳು. (ವಿಮೋಚನಕಾಂಡ 23:2; 1 ಕೊರಿಂಥ 15:33) ಪರಿಹಾರವೇನು? ಹೊಸ ಸ್ನೇಹಿತರನ್ನು ಕಂಡುಕೊಳ್ಳುವುದೇ! “ಯೆಹೋವನನ್ನು ಪ್ರೀತಿಸುವ ಸ್ನೇಹಿತರು ನಿಮ್ಮ ಸುತ್ತಲೂ ಇರುವುದಾದರೆ, ಅದು ಒಂದು ಸೂಕ್ಷ್ಮವಾದ ಮನಸ್ಸಾಕ್ಷಿಯನ್ನು ಪಡೆದುಕೊಂಡು, ತೊಂದರೆಯಿಂದ ದೂರ ಉಳಿಯುವಂತೆ ನಿಮಗೆ ಸಹಾಯ ಮಾಡುತ್ತದೆ. ಅವರು ತಪ್ಪುಮಾಡುವಿಕೆಯನ್ನು ಕಂಡು ಹೇಸುವಾಗ, ನಿಮಗೂ ಅದೇ ರೀತಿ ಅನಿಸುವಂತೆ ಅದು ಮಾಡುತ್ತದೆ” ಎಂಬುದಾಗಿ ಲಿನ್ ಕೊನೆಗೊಳಿಸಿದಳು.
ನಿಜವಾಗಿಯೂ, ಸ್ನೇಹಿತರ ವಿಷಯದಲ್ಲಿನ ನಿಮ್ಮ ಕೆಟ್ಟ ಆಯ್ಕೆಯು, ದೇವರೊಂದಿಗೆ ಒಂದು ಸ್ನೇಹವನ್ನು ಪಡೆದಿರುವುದಕ್ಕೆ ಅತ್ಯಂತ ದೊಡ್ಡದಾದ ಅಡೆತಡೆಯಾಗಿರಬಲ್ಲದು. ಹದಿನೆಂಟು ವರ್ಷ ಪ್ರಾಯದ ಆ್ಯನ್ ಒಪ್ಪಿಕೊಂಡದ್ದು: “ನಿಮ್ಮ ಸಹವಾಸಿಗಳು ನಿಮ್ಮ ಮೇಲೆ ಬಹಳಷ್ಟು ಪ್ರಭಾವವನ್ನು ಬೀರುತ್ತಾರೆ. ಇಂದೊ ಮುಂದೊ ನೀವು ಅವರಂತಾಗುವಿರಿ. ನೀವು ಅವರ ಹಾಗೆ ಯೋಚಿಸುವಂತೆ ಅವರು ನಿಮ್ಮನ್ನು ಪ್ರಭಾವಿಸುತ್ತಾರೆ. ಸಂಭಾಷಣೆಗಳು ಹೆಚ್ಚಾಗಿ ಸಂಭೋಗದ ಕುರಿತಾಗಿರಬಹುದು. ನೀವು ಕುತೂಹಲಪಡುವಂತೆ ಅದು ಮಾಡಬಹುದು. ಸಂಭೋಗವು ಹೇಗಿರುವುದೆಂದು ನೀವು ಆಲೋಚಿಸುತ್ತೀರಿ.” ಆ್ಯನ್ ಇದನ್ನು ಒಂದು ಕಹಿಯಾದ ಅನುಭವದಿಂದ ಕಲಿತುಕೊಂಡಳು. ಆಕೆ ಹೇಳುವುದು: “ಇದು ಸತ್ಯವೆಂದು ನನಗೆ ಗೊತ್ತು. ನಾನು ಅನೈತಿಕತೆಯಲ್ಲಿ ಒಳಗೊಂಡು, 15ರ ಪ್ರಾಯದಲ್ಲಿ ಗರ್ಭಿಣಿಯಾದೆ.”
ಅಂತಿಮವಾಗಿ ಆ್ಯನ್, ಬೈಬಲಿನ ಈ ಮಾತುಗಳ ಸತ್ಯತೆಯನ್ನು ಗಣ್ಯಮಾಡುವಂತಾಯಿತು: “ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4) ಹೌದು, ಆ್ಯನ್ ಈ ಲೋಕದ ಸ್ನೇಹಿತೆಯಾಗಿರಲು ಬಯಸಿದಳು ಮತ್ತು ದೃಢಸಂಕಲ್ಪವನ್ನು ಮಾಡಿಕೊಂಡಿದ್ದಳು. ಆದರೆ ಇದು ಮನೋವ್ಯಥೆಗಳ ಸರಣಿಗೆ ಮಾತ್ರ ನಡೆಸಿತು. ಸಂತೋಷಕರವಾಗಿ, ಆ್ಯನ್ಗೆ ತನ್ನ ಅವಿವೇಕದ ಅರಿವಾಯಿತು. ತನ್ನ ಕಾರ್ಯಗತಿಗಾಗಿ ಅವಳು ಗಾಢವಾಗಿ ವಿಷಾದಿಸಿದಳು ಮತ್ತು ತನ್ನ ಹೆತ್ತವರು ಹಾಗೂ ತನ್ನ ಸಭೆಯಲ್ಲಿನ ಹಿರಿಯರಿಂದ ಸಹಾಯವನ್ನು ಕೋರಿದಳು. ತನಗಾಗಿ ಹೊಸ ಸ್ನೇಹಿತರ ಗುಂಪನ್ನೂ ಆಕೆ ಕಂಡುಕೊಂಡಳು. (ಕೀರ್ತನೆ 111:1) ಬಹಳಷ್ಟು ಪ್ರಯತ್ನಗಳೊಂದಿಗೆ ಆ್ಯನ್, ಪುನಃ ದೇವರ ಸ್ನೇಹಿತೆಯಾಗಲು ಶಕ್ತಳಾದಳು. ಈಗ ಹಲವಾರು ವರ್ಷಗಳಾನಂತರ, ಆಕೆ ಹೇಳುವುದು: “ಯೆಹೋವನೊಂದಿಗಿನ ನನ್ನ ಸಂಬಂಧವು ಬಹಳಷ್ಟು ಆಪ್ತವಾಗಿದೆ.”
ಬೈಬಲಿನ ವೈಯಕ್ತಿಕ ಅಭ್ಯಾಸ, ಮನನ, ಯಥಾರ್ಥ ನಡವಳಿಕೆ, ಮತ್ತು ಹಿತಕರವಾದ ಸಹವಾಸಗಳ ಮುಖಾಂತರ, ನೀವು ಸಹ ದೇವರೊಂದಿಗೆ ಒಂದು ಆಪ್ತ ಸ್ನೇಹವನ್ನು ಬೆಳೆಸಿಕೊಳ್ಳಸಾಧ್ಯವಿದೆ. ಆದರೆ ಆ ಸ್ನೇಹವನ್ನು ಕಾಪಾಡಿಕೊಳ್ಳುವುದು ಮತ್ತೊಂದು ವಿಷಯವೇ ಆಗಿದೆ. ಕಷ್ಟಗಳು ಮತ್ತು ವೈಯಕ್ತಿಕ ಬಲಹೀನತೆಗಳ ಹೊರತೂ ಆ ಸ್ನೇಹವನ್ನು ಹೇಗೆ ಕಾಪಾಡಿಕೊಳ್ಳಸಾಧ್ಯ? ಈ ಸರಣಿಯಲ್ಲಿನ ಮುಂದಿನ ಲೇಖನವು ಈ ವಿಷಯವನ್ನು ಚರ್ಚಿಸುವುದು.
[ಅಧ್ಯಯನ ಪ್ರಶ್ನೆಗಳು]
a ಜುಲೈ 22 ಮತ್ತು ನವೆಂಬರ್ 22, 1995ರ ಅವೇಕ್! ಸಂಚಿಕೆಗಳನ್ನು ನೋಡಿರಿ.
b ನಮ್ಮ ಆಗಸ್ಟ್ 8, 1985ರ ಅವೇಕ್! ಸಂಚಿಕೆಯಲ್ಲಿ, “ಯುವ ಜನರು ಪ್ರಶ್ನಿಸುವುದು . . . ಬೈಬಲನ್ನು ಏಕೆ ಓದಬೇಕು?” ಎಂಬ ಲೇಖನವನ್ನು ನೋಡಿರಿ.
[ಪುಟ 24 ರಲ್ಲಿರುವ ಚಿತ್ರ]
ನಾನು ದೇವರ ಸ್ನೇಹಿತನಾಗಿರುವಂತೆ ನನ್ನ ಸಹವಾಸಿಗಳು ಸಹಾಯ ಮಾಡುವರೊ?