ಆಫ್ರಿಕನ್ ಶಾಲೆ ಅದು ಏನನ್ನು ಕಲಿಸಿತು?
ಘಾನದ ಎಚ್ಚರ! ಸುದ್ದಿಗಾರರಿಂದ
ಆಫ್ರಿಕನ್ ಶಾಲೆಯೊ? ಪೂರ್ವ ಕಾಲದಲ್ಲಿ ಅಂತಹ ಒಂದು ಏರ್ಪಾಡು ವಾಸ್ತವವಾಗಿ ಅಸ್ತಿತ್ವದಲ್ಲಿತ್ತೆಂದು ತಿಳಿಯಲು ಕೆಲವು ಪಾಶ್ಚಾತ್ಯರು ಆಶ್ಚರ್ಯಪಡಬಹುದು. ಶೋಚನೀಯವಾಗಿ, ಒಬ್ಬ ಅಪಾಯಕರ ಅನಾಗರಿಕನಂತೆ ಒಂದು ಈಟಿಯನ್ನು ಹಿಡಿದುಕೊಂಡಿರುವ ಆಫ್ರಿಕನ್ನ ಹಾಲಿವುಡ್ ಕಲ್ಪನೆಯು, ಜನರ ಮನಸ್ಸುಗಳಲ್ಲಿ ಇನ್ನೂ ಉಳಿದಿದೆ. ಗತಕಾಲದ ಆಫ್ರಿಕನ್ ಯಾವುದೇ ವಿಧದಲ್ಲಿ ಶಿಕ್ಷಿತನೆಂದು ಹೇಗೆ ಪರಿಗಣಿಸಲ್ಪಟ್ಟಿರಸಾಧ್ಯವೆಂದು ಅನೇಕರಿಗೆ ಊಹಿಸಲು ಸಾಧ್ಯವೇ ಇಲ್ಲ.
ಸಾಂಪ್ರದಾಯಿಕ ಸಮಾಜಗಳಲ್ಲಿ ಬೆಳೆಸಲ್ಪಟ್ಟ ಆಫ್ರಿಕನರು, ಪುಸ್ತಕಪಾಂಡಿತ್ಯವನ್ನು ಮತ್ತು ಔಪಚಾರಿಕ ತರಗತಿಕೋಣೆಯ ತರಬೇತಿಯನ್ನು ಪಡೆಯಲಿಲ್ಲವೆಂಬುದು ಖಂಡಿತವಾಗಿಯೂ ಸತ್ಯ. ಹಾಗಿದ್ದರೂ, ಈ ಖಂಡಕ್ಕೆ ಔಪಚಾರಿಕ ಶಿಕ್ಷಣದ ಯೂರೋಪಿಯನ್ ಛಾಪು ತರಲ್ಪಡುವ ಬಹಳ ಮುಂಚೆಯೇ, ತಮ್ಮ ಸ್ಥಳಿಕ ಸಂಸ್ಕೃತಿಯಲ್ಲಿ ಕಾರ್ಯನಡೆಸಿ, ಏಳಿಗೆಹೊಂದಲು ಸುಸಜ್ಜಿತರಾಗುವಂತೆ ಮಕ್ಕಳಿಗೆ ಸಹಾಯ ಮಾಡಿದ ಪರಿಣಾಮಕಾರಿ ಶೈಕ್ಷಣಿಕ ವ್ಯವಸ್ಥೆಗಳು ಅನೇಕ ಆಫ್ರಿಕನ್ ಸಮಾಜಗಳಲ್ಲಿದ್ದವು. ಉದಾಹರಣೆಗೆ, ಘಾನದ ಚ್ವೀ ಭಾಷೆಯನ್ನು ಮಾತಾಡುವ ಆಕಾನ್ ಜನರ ಶಾಲಾಶಿಕ್ಷಣವನ್ನು ಪರಿಗಣಿಸಿರಿ.
ಗೃಹ ಶಾಲಾಶಿಕ್ಷಣ
ಆಕಾನರಲ್ಲಿ, ಮನೆಯು ಪ್ರಾಥಮಿಕ ತರಗತಿಕೋಣೆಯಂತೆ ಕಾರ್ಯಮಾಡಿತು. ಮಗುವಿನ ಶಿಕ್ಷಣವು, ಅವನು ತನ್ನ ಹೆತ್ತವರಿಂದ ಮಾತನ್ನು ಕಲಿತಂತೆ ಆರಂಭಿಸಿತು. ಅದೇ ಸಮಯದಲ್ಲಿ, ಅವನು ಸಭ್ಯನಡತೆಯಲ್ಲಿ ತನ್ನ ಪ್ರಥಮ ಪಾಠಗಳನ್ನೂ ಪಡೆದನು. ದೃಷ್ಟಾಂತಕ್ಕೆ, ಮನೆಗೆ ಭೇಟಿ ನೀಡುತ್ತಿರುವವರೊಬ್ಬರು ಮಗುವನ್ನು ಅಭಿವಂದಿಸುವಾಗ, ಮಗುವಿಗೆ ಯೋಗ್ಯವಾದ, ವಿನಯ ಪ್ರತಿಕ್ರಿಯೆಯನ್ನು ಕಲಿಸಲಾಗುತ್ತಿತ್ತು. ತದನಂತರ, ಮಗುವು ಸಮಾಚಾರ ಒಯ್ಯುವಂತೆ ಕಳುಹಿಸಲ್ಪಟ್ಟಾಗ, ತಲಪಿಸಲ್ಪಡುತ್ತಿರುವ ಯಾವುದೇ ಸಂದೇಶಗಳನ್ನು ತಿಳಿಸುವ ವಿನಯ ರೀತಿಯು ಅವನಿಗೆ ಹೇಳಲಾಗುತ್ತಿತ್ತು.
ಹೀಗೆ, ಆಕಾನರ ಶೈಕ್ಷಣಿಕ ತತ್ವಜ್ಞಾನವು ಬೈಬಲಿನಲ್ಲಿ ಜ್ಞಾನೋಕ್ತಿ 22:6ರಲ್ಲಿ ವ್ಯಕ್ತಪಡಿಸಲಾದ ವಿಷಯಕ್ಕೆ ಅಸದೃಶವಾಗಿರಲಿಲ್ಲ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” ಹೆತ್ತವರು, ವಿಶೇಷವಾಗಿ ತಂದೆಯು ಮಗುವಿನ ಪಾಲನೆಯಲ್ಲಿ ಆಸಕ್ತಿವಹಿಸಿದನು. ಒಂದು ಆಕಾನ್ ನಾಣ್ಣುಡಿಯು ಹೇಳಿದ್ದು: “ಮಗುವೊಂದು ತನ್ನ ತಾಯಿಯನ್ನು ಹೋಲದಿದ್ದರೆ, ಅವನು ತನ್ನ ತಂದೆಯನ್ನು ಹೋಲುವನು.”
ಮಗುವು ಬೆಳೆದಂತೆ, ಅವನ ಶಿಕ್ಷಣದ ಆಳವೂ ಬೆಳೆಯಿತು. ಜೀವನದ ಕುರಿತಾದ ಪಾಠಗಳು ತಿಳಿಯಪಡಿಸಲಾದವು, ಪುಸ್ತಕಗಳ ಮುಖಾಂತರವಲ್ಲ ಬದಲಿಗೆ ಕಾಕ್ವು ಅನಾನ್ಸೇ ಎಂಬುದಾಗಿ ಕರೆಯಲ್ಪಟ್ಟ ಕಾಲ್ಪನಿಕ ಜೇಡರಹುಳದ ಕುರಿತ ಕಥೆಗಳಂತಹ ಊಹಾತ್ಮಕ ಕಥೆಗಳ ಮುಖಾಂತರ. ಈ ಕಥೆಗಳನ್ನು ಮಕ್ಕಳು ಎಷ್ಟು ಇಷ್ಟಪಟ್ಟರು! ಸಂಜೆಯ ಆದಿಭಾಗದ ನಸುಗಾಳಿಯಲ್ಲಿ ಅಥವಾ ಚಳಿಯಾದ ಬೆಳ್ದಿಂಗಳು ಬೆಳಗುವ ಒಂದು ರಾತ್ರಿಯಲ್ಲಿ, ಅವರು ಬೆಂಕಿಯ ಸುತ್ತಲೂ ಕುಳಿತುಕೊಂಡು, ಜಯ ಮತ್ತು ವಿಫಲತೆಯ ಈ ಕಥೆಗಳಲ್ಲಿ ಹೃತ್ಪೂರ್ವಕವಾಗಿ ಆನಂದಿಸುತ್ತಿದ್ದರು.
ಒಂದು ಮಡಕೆಯಲ್ಲಿ ಜಗತ್ತಿನ ಎಲ್ಲ ವಿವೇಕವನ್ನು ಹಾಕಲು, ಅನಾನ್ಸೇ ಭೂಮಿಯಾದ್ಯಂತ ಸಂಚರಿಸಿದನೆಂದು ಒಂದು ಪ್ರಖ್ಯಾತ ಕಥೆಯು ಹೇಳುತ್ತದೆ. ಅವನ ಧ್ಯೇಯ ಪೂರ್ಣಗೊಂಡಂತೆ ತೋರಿ, ಮಡಕೆಯನ್ನು ಅವನು ಒಂದು ಮರದ ಮೇಲೆ, ಬೇರೆ ಯಾರಿಗೂ ಈ ವಿವೇಕವು ಎಟಕದಂತೆ ತೂಗುಹಾಕಲು ನಿರ್ಧರಿಸಿದನು. ಅವನ ಹೊಟ್ಟೆಯಿಂದ ನೇತಾಡುತ್ತಿದ್ದ, ಒಂದು ದಾರಕ್ಕೆ ಸೇರಿಸಲ್ಪಟ್ಟ ವಿವೇಕದಿಂದ ತುಂಬಿದ ಮಡಕೆಯೊಂದಿಗೆ, ಮರದ ಮೇಲಿನ ಕಷ್ಟಕರ ಆರೋಹಣವನ್ನು ಅವನು ಆರಂಭಿಸಿದನು. ಅವನು ಹೆಣಗಾಡಿದಂತೆ, ಅವನ ಜೇಷ್ಠಪುತ್ರನಾದ ನಿಕ್ಟೂಮೆ ಕಾಣಿಸಿಕೊಂಡು, ಅನಾನ್ಸೇಗೆ ಕೂಗಿ ಹೇಳಿದ್ದು: “ಹಾ, ಬಾ, ತಂದೆಯೆ! ತನ್ನ ಹೊಟ್ಟೆಯ ಮೇಲೆ ಮಡಕೆಯೊಂದನ್ನು ಇಟ್ಟುಕೊಂಡು ಯಾರಾದರೂ ಒಂದು ಮರವನ್ನು ಏರುತ್ತಾರೆಯೇ? ಅದನ್ನು ನಿನ್ನ ಬೆನ್ನಿನ ಮೇಲೆ ಹಾಕಿ, ಚಲಿಸಲು ಸ್ಥಳಾವಕಾಶವಿಟುಕ್ಟೊಳ್ಳಬಾರದೇಕೆ?” ಅನಾನ್ಸೇ ತನ್ನ ಮಗನನ್ನು ನೋಡಿ, ಗಟ್ಟಿಯಾಗಿ ಹೇಳಿದ್ದು: “ನನಗೆ ಕಲಿಸಲು ನಿನಗೆಷ್ಟು ಧೈರ್ಯ?”
ಒಂದಿಷ್ಟು ವಿವೇಕವು ಮಡಕೆಯ ಹೊರಗೆ ಇನ್ನೂ ಉಳಿದಿತ್ತು ಎಂಬುದು ಈಗ ವ್ಯಕ್ತವಾಗಿತ್ತು! ಈ ಗ್ರಹಿಕೆಯಿಂದ ಕೋಪಗೊಂಡು, ಅನಾನ್ಸೇ ಮಡಕೆಯನ್ನು ಕೆಳಗೆ ಬಲವಾಗಿ ಎಸೆದು ಅದನ್ನು ನುಚ್ಚು ನೂರು ಮಾಡಿ, ಎಲ್ಲ ವಿವೇಕವನ್ನು ಸಿಕ್ಕಾಬಟ್ಟೆ ಚೆದರಿಸಿದನು. ಅಲ್ಲಿ ತಲಪಿದವರಲ್ಲಿ ಮೊದಲಿಗರು ಅತ್ಯಂತ ವಿವೇಕಿಗಳಾದರು. ಪಾಠ: ವಿವೇಕದ ಮೇಲೆ ಯಾರಿಗೂ ಏಕಸ್ವಾಮ್ಯತೆ ಇರುವುದಿಲ್ಲ. ಆದುದರಿಂದ ಆಕಾನರು, “ಒಬ್ಬ ವ್ಯಕ್ತಿ ಒಂದು ಮಂಡಲಿಯನ್ನು ರಚಿಸುವುದಿಲ್ಲ,” ಎಂದು ಹೇಳುತ್ತಿದ್ದರು.—ಹೋಲಿಸಿ ಜ್ಞಾನೋಕ್ತಿ 15:22; 24:6.
ಜೀವಿತ ಕೌಶಲಗಳು
ಆಕಾನ್ ಶಿಕ್ಷಣದಲ್ಲಿ, ಜೀವಿತ ಕೌಶಲಗಳಲ್ಲಿ ತರಬೇತಿಯೂ ಸೇರಿತ್ತು. ಹೆಚ್ಚಿನ ಹುಡುಗರು ತಮ್ಮ ತಂದೆಗಳ ಕಸಬನ್ನು—ಸಾಮಾನ್ಯವಾಗಿ ಬೇಸಾಯವನ್ನು ಮಾಡಿದರು. ಆದರೆ ಕಲಿಯುವುದು, ಬೇಟೆಯಾಡುವುದು, ತಾಳೆಯ ಮದ್ಯದ ಶೇಖರಣೆ, ಮತ್ತು ಬುಟ್ಟಿ ಹೆಣೆಯುವ ಕಲೆಗಳಂತಹ ಇತರ ಕೌಶಲಗಳು ಸಹ ಇದ್ದವು. ಕೆತ್ತನೆಕೆಲಸ ಅಥವಾ ನೆಯೆಯ್ಗಂತಹ ವಿಶದವಾದ ಕೆಲಸಗಳಿಗೆ, ಹುಡುಗರನ್ನು ನಿಪುಣ ಕುಶಲಕರ್ಮಿಗಳ ಬಳಿ ಕಲಿಕೆಗೆ ಸೇರಿಸಲಾಗುತ್ತಿತ್ತು. ಮತ್ತು ಹುಡುಗಿಯರು? ಅವರ ತರಬೇತಿಯು ಮುಖ್ಯವಾಗಿ, ಸಸ್ಯದ ಎಣ್ಣೆಯನ್ನು ತೆಗೆಯುವುದು, ಸಾಬೂನು ತಯಾರಿಸುವುದು ಮತ್ತು ಕುಂಬಾರಗೆಲಸ, ಹತ್ತಿಯನ್ನು ನೂಲುವುದು ಮತ್ತು ತದ್ರೀತಿಯ ಗೃಹಕೃತ್ಯದ ಕೌಶಲಗಳ ಮೇಲೆ ಕೇಂದ್ರೀಕರಿಸಿತು.
ಸಾಂಪ್ರದಾಯಿಕ ಶಾಲೆಯ “ಪಾಠಕ್ರಮ”ದಲ್ಲಿ ವಿಜ್ಞಾನವು ಬಿಡಲ್ಪಟ್ಟಿರಲಿಲ್ಲ. ಔಷಧಕ್ಕಾಗಿ ಉಪಯೋಗಿಸುವ ಗಿಡಮೂಲಿಕೆಗಳ ಜ್ಞಾನ, ಅವುಗಳ ತಯಾರಿಕೆ ಮತ್ತು ವಿನಿಯೋಗವನ್ನು, ತಂದೆಯಿಂದ ಮಗನಿಗೆ ಅಥವಾ ಅಜ್ಜನಿಂದ ಮೊಮ್ಮಗನಿಗೆ ದಾಟಿಸಲಾಯಿತು. ಒಂದು ಮಗುವು ತನ್ನ ಬೆರಳುಗಳನ್ನು, ಅಷ್ಟೇ ಅಲ್ಲದೆ ಗೋಲಿಗಳು, ಕಲ್ಲುಗಳು, ಮತ್ತು ಕೋಲುಗಳ ಮೇಲಿನ ಗುರುತುಗಳನ್ನು ಬಳಸುತ್ತಾ, ಸಂಖ್ಯೆಗಳನ್ನು ಗಣಿಸಲು ಕೂಡ ಕಲಿಯಿತು. ಓವಾರೆ ಮತ್ತು ಚದುರಂಗದಂತಹ ಆಟಗಳು ಎಣಿಸುವ ಕೌಶಲಗಳನ್ನು ಉತ್ತಮಗೊಳಿಸಿದವು.
ಸಾರ್ವಜನಿಕ ಕೋರ್ಟ್ ಅವಧಿಗಳನ್ನು ಹಾಜರಾಗುವ ಮೂಲಕ, ಯುವ ಆಕಾನ್ ರಾಜಕೀಯ ಮತ್ತು ನ್ಯಾಯಸ್ಥಾನದ ವ್ಯವಸ್ಥೆಗಳ ಒಳನೋಟವನ್ನೂ ಪಡೆದನು. ಶವಸಂಸ್ಕಾರಗಳು ಹಾಗೂ ಉತ್ಸವದ ಸಂದರ್ಭಗಳು ಸ್ಥಳೀಯ ಶೋಕ ಗೀತೆಗಳನ್ನು, ಕಾವ್ಯ, ಇತಿಹಾಸ, ಸಂಗೀತ, ಡೋಲು ಬಾರಿಸುವಿಕೆ, ಮತ್ತು ನೃತ್ಯವನ್ನು ಸಮೀಕರಿಸುವ ಸಂದರ್ಭಗಳಾಗಿದ್ದವು.
ಸಮುದಾಯ ಹೊಣೆಗಾರಿಕೆ
ಆಕಾನರಲ್ಲಿ, ಮಗುವು ಒಂದು ಸಾಮಾಜಿಕ ದ್ವೀಪವಾಗಿರಲಿಲ್ಲ. ಜೀವಿತದ ಆರಂಭದಲ್ಲಿಯೇ ಸಮುದಾಯದ ಕಡೆಗಿರುವ ತನ್ನ ಹೊಣೆಗಾರಿಕೆಯನ್ನು ಅವನು ಗ್ರಹಿಸುವಂತೆ ಮಾಡಲ್ಪಟ್ಟನು. ಈ ವಿಷಯದಲ್ಲಿ ಅವನು ತನ್ನ ಮೊದಲ ಪಾಠಗಳನ್ನು, ಆಡಲಿಕ್ಕೆ ತನ್ನ ಸಮಾನಸ್ಕಂದರನ್ನು ಸೇರಿದಂತೆ ಕಲಿತನು. ತದನಂತರದ ವರ್ಷಗಳಲ್ಲಿ ಅವನು, ಸಮುದಾಯ ಕೆಲಸದಂತಹ ಸಹಕಾರ ಚಟುವಟಿಕೆಗಳಲ್ಲಿ ತೊಡಗಿದನು. ಅವನು ಅಯೋಗ್ಯವಾಗಿ ವರ್ತಿಸಿದಾಗ, ಶಿಕ್ಷೆಯು ಅವನ ಹೆತ್ತವರಿಂದ ಮಾತ್ರವಲ್ಲ, ಆದರೆ ಸಮುದಾಯದ ಯಾವುದೇ ವಯಸ್ಕ ಸದಸ್ಯನಿಂದ ಕೊಡಲ್ಪಡುತ್ತಿತ್ತು. ನಿಶ್ಚಯವಾಗಿ, ಅಯೋಗ್ಯವಾಗಿ ವರ್ತಿಸುವ ಯಾವುದೇ ಮಗುವನ್ನು ಶಿಕ್ಷಿಸುವುದು, ಒಬ್ಬ ವಯಸ್ಕನ ನೈತಿಕ ಕರ್ತವ್ಯವೆಂದು ಪರಿಗಣಿಸಲಾಗುತ್ತಿತ್ತು.
ಇಂತಹ ಶಿಕ್ಷೆಯು ಚೆನ್ನಾಗಿ ಸ್ವೀಕರಿಸಲ್ಪಡುತ್ತಿತ್ತು, ಏಕೆಂದರೆ ಮಕ್ಕಳು ವಯಸ್ಕರಿಗೆ ವಿಶೇಷ ಮರ್ಯಾದೆ ತೋರಿಸುವಂತೆ ಕಲಿಸಲ್ಪಟ್ಟರು. ವಾಸ್ತವದಲ್ಲಿ, ಆಕಾನರು ಹೀಗೆ ಹೇಳುತ್ತಿದ್ದರು: “ವೃದ್ಧ ಸ್ತ್ರೀಯೊಬ್ಬಳು ಒಬ್ಬ ವ್ಯಕ್ತಿಗೆ ಮಾತ್ರ ಅಜಿಯ್ಜಾಗಿರಲಾರಳು.” ಹೀಗೆ ವೃದ್ಧರಿಗೆ ಗೌರವ ಮತ್ತು ಅವರ ಸೇವೆಯು ಒಂದು ಕರ್ತವ್ಯವಾಗಿತ್ತು. ಮತ್ತು ಯಾವುದೇ ಮಗುವು, ಯೋಗ್ಯವಾದ ಕಾರಣವಿಲ್ಲದೆ ಒಬ್ಬ ವಯಸ್ಕನಿಗೆ ಸೇವೆ ಸಲ್ಲಿಸಲು ನಿರಾಕರಿಸುವಲ್ಲಿ, ಅವನ ಹೆತ್ತವರಿಗೆ ದೂರು ಸಲ್ಲಿಸಲಾಗುತ್ತಿತ್ತು.
ಧಾರ್ಮಿಕ ಶಿಕ್ಷಣ
ನಿಸರ್ಗ ಮತ್ತು ಅಜ್ಞಾತ ವಿಶ್ವದ ಕಡೆಗೆ ಒಂದು ಭಕ್ತಿಯುಕ್ತ ಮನೋಭಾವವನ್ನು ಪಡೆದಿರುತ್ತಾ, ಆಕಾನರು ಬಹಳ ಧಾರ್ಮಿಕ ಪ್ರವೃತ್ತಿಯುಳ್ಳವರಾಗಿದ್ದರು. ಅನೇಕ ದೇವರುಗಳಲ್ಲಿ ನಂಬಿಕೆಯಿಡುತ್ತಾ, ಅವರು ಬಹು ದೇವತಾರಾಧಕರಾಗಿದ್ದರು, ನಿಜ. ಹಾಗಿದ್ದರೂ, ಆಕಾನರು ಒಂದು ಸರ್ವಶ್ರೇಷ್ಠ ಜೀವಿಯ ಅಸ್ತಿತ್ವದಲ್ಲಿ ನಂಬಿದರು. (ರೋಮಾಪುರ 1:20) “ದೇವರು,” ಯಾವುದೇ ದೇವರಿಗಾಗಿರುವ ಆಕಾನ್ ಪದವು ಆನ್ಯಾಮೆ ಆಗಿದೆ. ಆದರೆ ಸೃಷ್ಟಿಕರ್ತನನ್ನು ವರ್ಣಿಸಲು ಆ ಪದವು ಕೊರತೆಯುಳ್ಳದ್ದೆಂದು ಆಕಾನರಿಗೆ ತೋರಿತು. ಆದುದರಿಂದ ಅವರು ಆತನನ್ನು ಓನ್ಯಾನ್ಕೋಪೋನ್ ಎಂದು ಕರೆದರು, ಅಂದರೆ “ತಾನೊಬ್ಬನೆ ಸರ್ವೋನ್ನತನಾಗಿರುವ ದೇವರು.”
ಅದು ಸರ್ವೋನ್ನತ ದೇವರ ಏರ್ಪಾಡೆಂಬ ನಂಬಿಕೆಯಲ್ಲಿ ಕೆಳದರ್ಜೆಯ ದೇವರುಗಳು ಆರಾಧಿಸಲ್ಪಟ್ಟರು. ಅವರ ಮನಸ್ಸುಗಳಲ್ಲಿ ಇದು, ಕೆಳದರ್ಜೆಯ ಮುಖ್ಯಸ್ಥರ ಮುಖಾಂತರ ಪರಮ ಮುಖ್ಯಸ್ಥನು ಸೇವಿಸಲ್ಪಟ್ಟ ವಿಧಕ್ಕೆ ತದ್ರೀತಿಯದ್ದಾಗಿತ್ತು. ಹೇಗಾದರೂ, ಪ್ರತಿಯೊಬ್ಬ ಆಕಾನ್ ಮಗುವಿಗೆ ಈ ಧರ್ಮವನ್ನು ಕಲಿಸಲಾಗುತ್ತಿತ್ತು.
ಇಂದು ಸಾಂಪ್ರದಾಯಿಕ ಶಿಕ್ಷಣ
ಇತ್ತೀಚಿನ ವರ್ಷಗಳಲ್ಲಿ ಲಕ್ಷಾಂತರ ಆಫ್ರಿಕನರು ದೊಡ್ಡ ನಗರಗಳಿಗೆ ವಲಸೆಹೋಗಿದ್ದಾರೆ, ಅಲ್ಲಿ ಔಪಚಾರಿಕ ತರಗತಿಕೋಣೆಯ ಉಪದೇಶವು ಬಹುಮಟ್ಟಿಗೆ ಶಾಲಾಶಿಕ್ಷಣದ ಸಾಂಪ್ರದಾಯಿಕ ವಿಧಗಳನ್ನು ಸ್ಥಾನಪಲ್ಲಟಮಾಡಿದೆ. ಆದರೂ, ಸಾಂಪ್ರದಾಯಿಕ ಆಫ್ರಿಕನ್ ಶಾಲೆಯು ಕೆಲವೊಂದು ಸಮುದಾಯಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ದಿ ಹೊಂದಲು ಮುಂದುವರಿದಿದೆ. ಕೆಲವು ಆಫ್ರಿಕನರು, ಸಾಂಪ್ರದಾಯಿಕ ಹಾಗೂ ಔಪಚಾರಿಕ—ಎರಡೂ ಬಗೆಯ ಶಿಕ್ಷಣಗಳಿಂದಲೂ ಲಾಭಪಡೆದಿದ್ದಾರೆ!
ಉದಾಹರಣೆಗೆ, ಘಾನದಲ್ಲಿರುವ ಆ್ಯಲ್ಫ್ರೆಡ್ ಎಂಬ ಒಬ್ಬ ಕ್ರೈಸ್ತ ಶುಶ್ರೂಷಕನನ್ನು ಪರಿಗಣಿಸಿರಿ. ಒಂದು ಔಪಚಾರಿಕ ಶಿಕ್ಷಣವನ್ನು ಪಡೆದ ಹೊರತೂ, ಅವನಿಗೆ ಸಾಂಪ್ರದಾಯಿಕ ಜೀವನ ರೀತಿಯ ಅನೇಕ ವಿಷಯಾಂಶಗಳಿಗಾಗಿ ವಿಶೇಷ ಗೌರವವಿದೆ. ಆ್ಯಲ್ಫ್ರೆಡ್ ಹೇಳುವುದು: “ನನ್ನ ಅನಕ್ಷರಸ್ಥ ರಕ್ತಸಂಬಂಧಿಕರಲ್ಲಿ ಹೆಚ್ಚಿನವರು, ತಮ್ಮ ಸಾಂಪ್ರದಾಯಿಕ ತರಬೇತಿಯನ್ನು ಮಾತ್ರ ಪಡೆದಿದ್ದರೂ, ಜೀವನದ ವ್ಯಾವಹಾರಿಕ ವಿಷಯಾಂಶಗಳ ಬಹಳ ಉತ್ತಮ ಶಿಕ್ಷಕರಾಗಿದ್ದಾರೆ. ಅವರ ಮಧ್ಯದಲ್ಲಿರುವ ಜೊತೆ ಕ್ರೈಸ್ತರೊಂದಿಗೆ ಕೆಲಸಮಾಡುವುದು, ನನ್ನ ಸಂದೇಶವನ್ನು ಸರಳ, ವ್ಯಾವಹಾರಿಕ ಶೈಲಿಯಲ್ಲಿ ಸಾದರಪಡಿಸುವ ಅನೇಕ ಪರಿಣಾಮಕಾರಿ ವಿಧಗಳನ್ನು ನನಗೆ ಕಲಿಸಿದೆ. ಹೀಗೆ, ನಾನು ಸಾಂಪ್ರದಾಯಿಕ ಹಿನ್ನಲೆಯಿರುವ, ಅಷ್ಟೇ ಅಲ್ಲದೆ ಔಪಚಾರಿಕ ಶಿಕ್ಷಣವನ್ನೂ ಪಡೆದಿರುವ ಜನರೊಂದಿಗೆ ಮಾತಾಡಬಲ್ಲೆ. ಹೆಚ್ಚಿನಬಾರಿ, ಈ ಜನರಿಂದ ಉಪಯೋಗಿಸಲ್ಪಡುವ ಒಂದು ನಾಣ್ಣುಡಿ ಅಥವಾ ದೃಷ್ಟಾಂತವನ್ನು ತೆಗೆದುಕೊಂಡು, ಅದನ್ನು ಶುದ್ಧೀಕರಿಸಿ, ನನ್ನ ಬೈಬಲ್ ಭಾಷಣಗಳಲ್ಲಿ ಸೇರಿಸುತ್ತೇನೆ. ಇದು ಅನೇಕವೇಳೆ ಸಭಿಕರಿಂದ ಉತ್ಸಾಹಭರಿತ ಪ್ರಶಂಸೆಯನ್ನು ತರುತ್ತದೆ! ಆದರೂ, ನಿಜವಾಗಿ ಕೀರ್ತಿಯು ಸಾಂಪ್ರದಾಯಿಕವಾಗಿ ತರಬೇತಿ ಹೊಂದಿರುವ ಈ ಪುರುಷರಿಗೆ ಮತ್ತು ಸ್ತ್ರೀಯರಿಗೆ ಸಲ್ಲತಕ್ಕದ್ದು.”
ಹಾಗಾದರೆ ಸ್ಪಷ್ಟವಾಗಿಗಿ, ಆಫ್ರಿಕನ್ ಶಾಲೆಗೆ ಅನೇಕ ಶ್ಲಾಘನೀಯ ವಿಷಯಾಂಶಗಳಿವೆ ಮತ್ತು ಅದು ತಿರಸ್ಕಾರಕ್ಕಲ್ಲ, ಗೌರವಕ್ಕೆ ಅರ್ಹವಾಗಿದೆ. ಅದು ತಾಂತ್ರಿಕ ಅದ್ಭುತಗಳನ್ನು ಉತ್ಪಾದಿಸದೆ ಇದ್ದಿರಬಹುದು, ಆದರೆ ಅದು ಬಲವಾದ ಕುಟುಂಬ ಚೌಕಟ್ಟನ್ನು, ಸಮುದಾಯ ಪ್ರಜ್ಞೆಯನ್ನು, ತೀಕ್ಷ್ಣ ಮನಸ್ಸಿನ ಜನರನ್ನು, ಮನವೊಲಿಸುವ ಹಾಸ್ಯ ಪ್ರವೃತ್ತಿಯನ್ನು, ಮತ್ತು ಉದಾರ, ಆತಿಥ್ಯ ಮನೋಭಾವವನ್ನು ಖಂಡಿತ ಉತ್ಪಾದಿಸಿತು. ಹಾಗಾದರೆ, ನಗರದಲ್ಲಿರುವ ಅನೇಕ ಆಫ್ರಿಕನರು ಪ್ರಾಸಂಗಿಕ ಭೇಟಿಗಳನ್ನು ಮಾಡುವ ಮೂಲಕ, ಗ್ರಾಮಗಳಲ್ಲಿ ಜೀವಿಸುವ ಸಂಬಂಧಿಕರೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳಲು ಪ್ರಯತ್ನಿಸುವುದು ಆಶ್ಚರ್ಯಕರವೇನೂ ಅಲ್ಲ. ಅಂತಹ ಸಂದರ್ಭಗಳಲ್ಲಿ ತೊಡಕಿನ ಕ್ಷಣಗಳಿಲ್ಲದೆ ಇರುವುದಿಲ್ಲ. ಸಾಂಪ್ರದಾಯಿಕ ರೂಢಿಗಳ ವಿಷಯದಲ್ಲಿ ನಗರ ನಿವಾಸಿಗಳು ಅನೇಕವೇಳೆ ಎಡವುತ್ತಾರೆ. ಉದಾಹರಣೆಗೆ, ಒಂದು ಗುಂಪಿನೊಂದಿಗೆ ಕೈಕುಲುಕುವಾಗ, “ಯೋಗ್ಯವಾದ” ವಿಧಾನವು, ಬಲಗಡೆಯಿಂದ ಎಡಗಡೆಗೆ ಹೋಗುವುದಾಗಿದೆ ಎಂದು ಅನೇಕವೇಳೆ ಅವರಿಗೆ ಗೊತ್ತಿರುವುದಿಲ್ಲ. ಆದರೂ, ಅಂತಹ ಭೇಟಿಗಳು ಪರಸ್ಪರವಾಗಿ ಚೈತನ್ಯದಾಯಕವಾಗಿ ಪರಿಣಮಿಸಬಲ್ಲವು.
ಆಫ್ರಿಕನ್ ಸಾಂಪ್ರದಾಯಿಕ ಶಾಲೆಯು ಪೂಜ್ಯಭಾವನೆ ಮತ್ತು ಭಕ್ತಿಯನ್ನು ಕಲಿಸಿತಾದರೂ, ಅದು ಯೆಹೋವ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಕುರಿತಾದ ಜೀವದಾಯಕ ಜ್ಞಾನವನ್ನು ನೀಡಲಿಲ್ಲವೆಂಬುದು ಒಪ್ಪತಕ್ಕದ್ದೇ. (ಯೋಹಾನ 17:3) ಈ ಪ್ರಾಮುಖ್ಯವಾದ ಜ್ಞಾನವನ್ನು ಒದಗಿಸಲು ಯೆಹೋವನ ಸಾಕ್ಷಿಗಳು ಆಕಾನ್ ಮತ್ತು ಇತರ ಆಫ್ರಿಕನ್ ಕುಲಸಂಬಂಧವಾದ ಗುಂಪುಗಳಲ್ಲಿ ಕೆಲಸಮಾಡುವ ಸುಯೋಗವನ್ನು ಪಡೆದಿದ್ದಾರೆ. ದೇವರ ವಾಕ್ಯವನ್ನು ನೇರವಾಗಿ ಅಭ್ಯಸಿಸಲು ಸಾಧ್ಯವಾಗುವಂತೆ, ಔಪಚಾರಿಕ ಶಾಲಾಶಿಕ್ಷಣದ ಕೊರತೆಯಿರುವ ಸಾವಿರಾರು ಆಫ್ರಿಕನರಿಗೆ ಓದಲು ಮತ್ತು ಬರೆಯಲು ಅವರು ಕಲಿಸಿದ್ದಾರೆ. “ತಮ್ಮ ಆತ್ಮಿಕ ಅಗತ್ಯದ ಅರಿವು” ಉಳ್ಳವರಿಗೆ, ಅದು ಒಬ್ಬ ವ್ಯಕ್ತಿಯು ಪಡೆದಿರಲು ಸಾಧ್ಯವಾದ ಅತಿ ಪ್ರಾಮುಖ್ಯ ಶಿಕ್ಷಣವಾಗಿದೆ.—ಮತ್ತಾಯ 5:3, NW.
[ಪುಟ 36 ರಲ್ಲಿರುವ ಚಿತ್ರಗಳು]
ಆಕಾನರಲ್ಲಿ, ಮಗುವು ಸಮುದಾಯದ ಕಡೆಗಿರುವ ತನ್ನ ಹೊಣೆಗಾರಿಕೆಯನ್ನು ಗ್ರಹಿಸುವಂತೆ ಮಾಡಲ್ಪಟ್ಟನು
[ಪುಟ 37 ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳು ಸಾಕ್ಷರತಾ ತರಗತಿಗಳನ್ನು ಒದಗಿಸುತ್ತವೆ