ನಿಮ್ಮ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಭೂಪಟಗಳು
ಬ್ರಿಟನ್ನ ಎಚ್ಚರ! ಸುದ್ದಿಗಾರರಿಂದ
ಒಂದು ಅಪರಿಚಿತ ದೇಶ ಅಥವಾ ಪಟ್ಟಣದ ಸುತ್ತಲೂ ನಿಮ್ಮ ದಾರಿಯನ್ನು ಕಂಡುಕೊಳ್ಳುವುದು ಒಂದು ಪಂಥಾಹ್ವಾನವಾಗಿದೆ. ಪ್ರಥಮವಾಗಿ, ನಿಮ್ಮ ಸ್ಥಾನದ ಗ್ರಹಿಕೆ ನಿಮಗಾಗಬೇಕು. ಆಮೇಲೆ, ಅತ್ಯುತ್ತಮ ಮಾರ್ಗವು ಯಾವುದೆಂದು ನಿರ್ಧರಿಸಿರಿ. ನೀವು ಹೇಗೆ ಕಂಡುಹಿಡಿಯಬಲ್ಲಿರಿ? ನಿಮಗೆ ಬೇಕಾಗಿರುವಂಥದ್ದು ಒಂದು ಭೂಪಟ!
ಭೂಪಟಗಳು—ಎಂದಿನಿಂದ, ಮತ್ತು ಏಕೆ?
ಭೂಪಟ ತಯಾರಿಕೆ ಅಥವಾ ಭೂಪಟಶಾಸ್ತ್ರವೆಂದು ಕರೆಯಲ್ಪಡುವ ವಿಷಯಕ್ಕೆ, ದೀರ್ಘವಾದ ಹಾಗೂ ಏರುಪೇರಿನ ಇತಿಹಾಸವಿದೆ. ಕೆಲವು ಅಧಿಕಾರಿಗಳು, ಭೂಪಟಗಳ ತಯಾರಿಕೆಯನ್ನು 4,300 ವರ್ಷಗಳ ಹಿಂದೆ, ಬಬಿಲೋನ್ಯದಲ್ಲಿ ಮಣ್ಣಿನ ಹಲಗೆಗಳ ಮೇಲೆ ಕೆತ್ತಲ್ಪಟ್ಟಿರುವ ಭೂಪಟಗಳಿಗೆ ಪತ್ತೆಹಚ್ಚುತ್ತಾರೆ. ಆದರೆ ಆಧುನಿಕ ಭೂಪಟಗಳ ಭವಿಷ್ಯ ಸೂಚಕಗಳಾಗಿದ್ದ ರೇಖಾಪಟಗಳನ್ನು ಚಿತ್ರಿಸಿದವರು ಆರಂಭದ ಗ್ರೀಕರಾಗಿದ್ದರು. ಸಾ.ಶ. ಎರಡನೆಯ ಶತಮಾನದಲ್ಲಿ ಕಾಡ್ಲಿಯಸ್ ಟಾಲೆಮಿ ಚಿತ್ರಿಸಿದ ಪ್ರಾಚೀನ ಜಗತ್ತಿನ ಭೂಪಟಗಳ ತರುವಾಯ, ಭೂಪಟಶಾಸ್ತ್ರವು ಅಂಧಕಾರದೊಳಗೆ ಮುಳುಗಿತು. ಶೋಧಿಸಲ್ಪಟ್ಟಿರದ ಕ್ಷೇತ್ರಗಳು, ಬೃಹದಾಕಾರದ ಪ್ರಾಣಿಗಳ ಮತ್ತು ದೈತ್ಯರ ಪ್ರಾಂತದಂತೆ ಕಾಣಿಸಿಕೊಂಡವು. ಧರ್ಮವು ಭೂಪಟಗಳನ್ನು ಎಷ್ಟು ಮಹತ್ತರವಾಗಿ ಪ್ರಭಾವಿಸಿತೆಂದರೆ, ಅನೇಕ ಭೂಪಟಗಳು ಏದೆನ್ ತೋಟವು ಪ್ರಮುಖವಾಗಿದ್ದ ಒಂದು ಜಗತ್ತನ್ನು ಚಿತ್ರಿಸಿದವು. ಅಂದಿನ ಜಗತ್ತಿನ ಭೂಪಟಗಳ ಮೇಲ್ಭಾಗದಲ್ಲಿ, ಯೆರೂಸಲೇಮ್ ಮತ್ತು ಮಧ್ಯ ಪೂರ್ವವು ಕಾಣಿಸಿಕೊಳ್ಳಲಾರಂಭಿಸಿದವು.
ಬ್ರಿಟನ್ನ ಆರಂಭದ ಭೂಪಟಗಳು, ಚರ್ಚಿನ ಪ್ರಭಾವವನ್ನು ಕೂಡ ಪ್ರತಿಬಿಂಬಿಸಿದವು. ಅಂತಹ ಒಂದು ಭೂಪಟವು, ಇಂಗ್ಲೆಂಡ್ನ ಧಾರ್ಮಿಕ ಪವಿತ್ರ ಸ್ಥಳಗಳಿಗೆ ಯಾತ್ರಿಕರು ಅನುಸರಿಸಿದ ಮಾರ್ಗವನ್ನು ಗುರುತಿಸಿತು. “ಯಾತ್ರಿಕರ ಪ್ರಧಾನ ಉತ್ತರ ಹಾದಿ”ಯನ್ನು ವಿವರವಾಗಿ ನಿರೂಪಿಸುತ್ತಾ, ಈ ಭೂಪಟವು ಉತ್ತರ ಪಟ್ಟಣವಾದ ಡರಮ್ನಿಂದ ದಕ್ಷಿಣ ಕರಾವಳಿಯ ರೇವುಪಟ್ಟಣವಾದ ಡೋವರ್ ವರೆಗಿನ ಮಾರ್ಗವನ್ನು ವಿವರಿಸಿತು.
ಜೆರಾರ್ಡುಸ್ ಮರ್ಕೇಟರ್ ಆಧುನಿಕ ಭೂಪಟಶಾಸ್ತ್ರದ ಜನಕನು (1512-94). ನಾವಿಕರ ಮಧ್ಯದಲ್ಲಿ ಅದರ ನಿಷ್ಕೃಷ್ಟತೆಗೆ ಬಹಳಷ್ಟು ಜನಪ್ರಿಯವಾಗಿರುವ ಪ್ರಲಂಬಾಕೃತಿಯ ಭೂಪಟದ ವಿಧಾನವೊಂದನ್ನು ಅವನು ರಚಿಸಿದನು, ಮತ್ತು ಮರ್ಕೇಟರ್ ಪ್ರಲಂಬಾಕೃತಿಗನುಸಾರವಾಗಿ ಚಿತ್ರಿಸಲ್ಪಟ್ಟ ಅನೇಕ ಭೂಪಟಗಳು ಆಧುನಿಕ ಭೂಪಟಗಳ ಪುಸ್ತಕಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಜಮೀನಾರ್ದರಿಗೆ ಭೂಪಟಗಳು ಒಂದು ವರವಾದವು. ಅವುಗಳ ಸ್ಪಷ್ಟವಾಗಿಗಿ ಚಿತ್ರಿಸಲ್ಪಟ್ಟ ಗಡಿರೇಖೆಗಳಿಗೆ ಮಾಡಲ್ಪಟ್ಟ ಉಲ್ಲೇಖವು, ನ್ಯಾಯಸಮ್ಮತ ವಾದಗಳನ್ನು ಬಗೆಹರಿಸಲು ಸಹಾಯ ಮಾಡಿತು. ತೆರಿಗೆಯ ಅಂದಾಜು, ಹಿಡುವಳಿಯ ನಿಷ್ಕೃಷ್ಟ ದಾಖಲೆಯ ಮೇಲೆ ಅವಲಂಬಿಸಿದಂತೆ, ಭೂಪಟಗಳಲ್ಲಿ ಸರಕಾರದ ಆಸಕ್ತಿಯು ಹೆಚ್ಚಿತು.
ಈಗಿನ ದಿನಗಳಲ್ಲಿ ಭೂಪಟಗಳು ಅನುದಿನದ ಅಗತ್ಯಗಳನ್ನು ಪೂರೈಸುತ್ತವೆ. ಭೂಗೋಳಶಾಸ್ತ್ರದ ಮೂಲಭೂತ ಅಂಶಗಳನ್ನು ಗ್ರಹಿಸುವಂತೆ, ಭೂಪಟಗಳ ಪುಸ್ತಕಗಳು ಶಾಲಾಮಕ್ಕಳಿಗೆ ಸಹಾಯ ಮಾಡುತ್ತವೆ. ಹವಾಮಾವ ಪರಿಸ್ಥಿತಿಗಳ ಸಂಬಂಧದಲ್ಲಿ ನಾವು ಏನನ್ನು ನಿರೀಕ್ಷಿಸಬಹುದೆಂಬುದರ ಕುರಿತು, ಸುಸ್ಪಷ್ಟವಾಗಿಗಿ ಪ್ರದರ್ಶಿಸುವಂತೆ ರೇಖಾಪಟಗಳು ಮುನ್ಸೂಚಕರನ್ನು ಶಕ್ತರನ್ನಾಗಿಸುತ್ತವೆ. ಸಾರ್ವಜನಿಕ ವಾಹನ ಸೌಕರ್ಯದ ಅತ್ಯುತ್ತಮ ಉಪಯೋಗವನ್ನು ಮಾಡುವಂತೆ ಒಂದು ಭೂಪಟವು ನಮಗೆ ಸಹಾಯ ಮಾಡಬಲ್ಲದು. ಮತ್ತು ಕುಟುಂಬದ ಸಂತೋಷ ಸಂಚಾರಕ್ಕೆ, ತೆಗೆದುಕೊಳ್ಳಬೇಕಾದ ಅತ್ಯಂತ ಚಿತ್ರಮಯ ಮಾರ್ಗವನ್ನು ಒಂದು ಭೂಪಟವು ತೋರಿಸಬಲ್ಲದು.
ವಿಶೇಷಜ್ಞರು ಅಲಕ್ಷಿಸಲ್ಪಟ್ಟಿರುವುದಿಲ್ಲ. ಪಟ್ಟಣ ಯೋಜಕರಿಗಾಗಿ ಜನಸಂಖ್ಯಾ ಸಾಂದ್ರತೆಯ ಭೂಪಟಗಳಿವೆ. ಸಮುದ್ರತಳದ ಭೂಪಟಗಳು ನಾಶವಾದ ಹಡುಗುಗಳಿಗಾಗಿ ಕಣ್ಣಿಟ್ಟಿರುವವರಿಗೆ ಅಥವಾ ಖನಿಜ ಸಂಪನ್ಮೂಲಗಳನ್ನು ಹುಡುಕುವವರಿಗೆ ಸಹಾಯ ಮಾಡುತ್ತವೆ. ಪ್ರಾಚೀನ ಶೋಧನಶಾಸ್ತ್ರದ ಭೂಪಟಗಳು, ಗತಕಾಲವನ್ನು ಅಗೆಯುತ್ತಿರುವವರಿಗೆ ಒಂದು ಸಹಾಯವಾಗಿವೆ. ಅಂತರಿಕ್ಷ ಸಂಶೋಧಕರಿಗಾಗಿ, ಚಂದ್ರನ ಮತ್ತು ಕೆಲವೊಂದು ಗ್ರಹಗಳ ಭೂಪಟಗಳೂ ಇವೆ! ಭೂಪಟಗಳಲ್ಲಿ ಇಷ್ಟೊಂದು ಹೇರಳವಾದ ಮಾಹಿತಿ ದೊರೆಯುವುದರೊಂದಿಗೆ, ಅವುಗಳನ್ನು ಓದುವುದರಲ್ಲಿ ನಿಮ್ಮ ಕೌಶಲವನ್ನು ವಿಕಸಿಸುವುದು ಮತ್ತು ಉತ್ತಮಗೊಳಿಸುವುದು ನಿಮ್ಮ ಪ್ರಯೋಜನಕ್ಕಾಗಿದೆ.
ಭೂಪಟವೊಂದನ್ನು ಓದುವ ವಿಧ
ನಿಮ್ಮ ಭೂಪಟಗಳಿಂದ ಅತಿ ಹೆಚ್ಚಿನದ್ದನ್ನು ಪಡೆಯುವುದು, ಒಂದು ವಿದೇಶೀ ಭಾಷೆಯನ್ನು ಕಲಿಯುವುದಕ್ಕೆ ಸಮಾನವಾಗಿದೆ. ಬೇರೊಂದು ಭಾಷೆಯನ್ನು ನೀವು ಅಭ್ಯಸಿಸುವಾಗ, ನೀವು ಒಂದು ನವೀನ ಶಬ್ದ ಭಂಡಾರವನ್ನು ಮತ್ತು ಭಿನ್ನವಾದೊಂದು ವ್ಯಾಕರಣವನ್ನು ಎದುರಿಸುತ್ತೀರಿ. ಭೂಪಟ ಭಾಷೆಯಲ್ಲಿ, ಚಿಹ್ನೆಗಳನ್ನು ಶಬ್ದಗಳಿಗೆ ಹೋಲಿಸಬಹುದು, ಆದರೆ ಪ್ರಮಾಣವನ್ನು ತೋರಿಸುವ ಸಮಮಟ್ಟಗೆರೆಗಳು ಮತ್ತು ಚೌಕಟ್ಟುಗಳು ವ್ಯಾಕರಣದಂತೆ ಕಾರ್ಯನಡೆಸುತ್ತವೆ. ಹೆಚ್ಚಿನ ಭೂಪಟಗಳು, ಭೂಪಟದಲ್ಲಿ ಉಪಯೋಗಿಸಲ್ಪಟ್ಟ ಚಿಹ್ನೆಗಳಿಗೆ ವಿವರಣೆಯನ್ನು ನೀಡುವ ಒಂದು ರೇಖಾಚೌಕದೊಂದಿಗೆ ಚಿತ್ರಿಸಲ್ಪಡುತ್ತವೆ. ಇದು ಚಿಹ್ನೆಗಳ ಅರ್ಥವಿವರಣೆಯನ್ನು ನೀಡುವ ಶಬ್ದಕೋಶದಂತೆ ಕಾರ್ಯಮಾಡುತ್ತದೆ.
ಚಿಹ್ನೆಗಳನ್ನು, ಅವುಗಳ ಅರ್ಥವನ್ನು ತಿಳಿಯಪಡಿಸಲಿಕ್ಕಾಗಿ ಜಾಗ್ರತೆಯಿಂದ ಆರಿಸಲಾಗುತ್ತದೆ. ಉದಾಹರಣೆಗೆ, ಒಂದು ದೀಪದ ಮನೆಯನ್ನು (ಲೈಟ್ಹೌಸ್) ಕಂಡುಹಿಡಿಯಲು, ದೀಪದ ಮನೆಯನ್ನು ಹೋಲುವ ಒಂದು ಚಿಹ್ನೆಗಾಗಿ ಹುಡುಕಿರಿ. ಚರ್ಚುಗಳು ಮತ್ತು ಮಸೀದಿಗಳು, ತಮ್ಮ ಮೇಲ್ಭಾಗಗಳಲ್ಲಿ ಶಿಲುಬೆಗಳು ಅಥವಾ ಅರ್ಧಚಂದ್ರನಿರುವ ಕಪ್ಪು ಚೌಕೋನ ಅಥವಾ ವೃತ್ತಗಳಿಂದ ಸೂಚಿಸಲ್ಪಡಬಹುದು.
ಇಂತಹ ಚಿಹ್ನೆಗಳ ಅರ್ಥಗಳೊಂದಿಗೆ ನೀವು ಹೇಗೆ ಚಿರಪರಿಚಿತರಾಗಬಲ್ಲಿರಿ? ಭೂಪಟವನ್ನು ಅನುಸರಿಸಿರಿ (ಇಂಗ್ಲಿಷ್) ಎಂಬ ಪುಸ್ತಕದ ಲೇಖಕರಾದ ಜಾನ್ ವಿಲ್ಸನ್, “‘ಭೂಪಟದ ಮೇಲೆ ಕಣ್ಣಾಡಿಸುವ’ ಮನೋಹರ ಕಾಲಕ್ಷೇಪವನ್ನು” ಶಿಫಾರಸ್ಸು ಮಾಡುತ್ತಾರೆ. ಅವರು ಕೂಡಿಸುವುದು: “ನಿಮ್ಮ ಕಣ್ಣು ಭೂಪಟದ ಮೇಲೆ ಉದ್ದೇಶವಿಲ್ಲದೆ ಅಲೆದಾಡಲಿ, ಮತ್ತು ಚಿಹ್ನೆಗಳನ್ನು ನೀವು ನೋಡಿದಂತೆ ಅವುಗಳನ್ನು ಭಾಷಾಂತರಿಸಿರಿ.”
ನಿಮ್ಮ ನಿವಾಸಸ್ಥಾನವು, ನಿಮ್ಮ ಭೂಪಟವು ತೋರಿಸುವುದಕ್ಕಿಂತ ಬಹಳ ಭಿನ್ನವಾಗಿ ಕಾಣುತ್ತದೆಂದು ನೀವು ಕಂಡುಕೊಳ್ಳುತ್ತೀರೊ? ಇದು ಹೀಗೇಕೆ? ಒಳ್ಳೆಯದು, ಸಾಮಾನ್ಯವಾಗಿ ನಾವು ನಮ್ಮ ಪರಿಸರವನ್ನು ನಮ್ಮ ಸ್ವಂತ ಎತ್ತರ—ಭೂಮಿಯಿಂದ 1.5ರಿಂದ 1.8 ಮೀಟರುಗಳ ಎತ್ತರದಿಂದ ವೀಕ್ಷಿಸುತ್ತೇವೆ. ಆದರೆ ಭೂಪಟಗಳು ನೆಲವನ್ನು ಯಥಾದೃಷ್ಟಿಯಿಂದ, ಪ್ರತಿಯೊಂದು ಬಿಂದುವಿನಿಂದ ಬಹಳ ಎತ್ತರದಲ್ಲಿ ಲಂಬವಾಗಿ ತೋರಿಸುತ್ತವೆ. ಈ ಕಲ್ಪನೆಯನ್ನು ಗ್ರಹಿಸಲು, ನೀವು ಭೂಪಟ ವ್ಯಾಕರಣವನ್ನು ತಿಳಿದುಕೊಳ್ಳುವುದು ಪ್ರಾಮುಖ್ಯವಾಗಿದೆ.
ಅಳತೆ, ಎತ್ತರ, ಮತ್ತು ಸ್ಥಾನ
ಭೂಪಟ ತಯಾರಿಸುವವನ ಪಂಥಾಹ್ವಾನವು, ಸಮುದ್ರಮಟ್ಟದಿಂದ ಎತ್ತರದ ವ್ಯತ್ಯಾಸಗಳ ಮತ್ತು ನೆಲದ ಮೇಲೆ ಯಾವುದೇ ಮಾನವ ನಿರ್ಮಿತ ವೈಶಿಷ್ಟ್ಯಗಳ ದಾಖಲೆಮಾಡುವುದೇ ಆಗಿದೆ. ಇದೆಲ್ಲವು ನಿಭಾಯಿಸಬಲ್ಲ ಗಾತ್ರದ ಒಂದು ಹಾಳೆಯ ಮೇಲೆ ಮುದ್ರಿಸಲ್ಪಡಬೇಕು. ಇದನ್ನು ಸಾಧಿಸಲು ಭೂಪಟಗಳು ಅನುಪಾತಕ್ಕನುಸಾರ ಚಿತ್ರಿಸಲ್ಪಡುತ್ತವೆ. ಒಂದು ಜನಪ್ರಿಯ ಬ್ರಿಟಿಷ್ ಭೂಪಟ ಸರಣಿಗಳು ದೇಶವನ್ನು 1:50,000 ಪ್ರಮಾಣದಲ್ಲಿ ತೋರಿಸುತ್ತವೆ, ಅದರರ್ಥ ಭೂಪಟದ ಮೇಲಿರುವ ಪ್ರತಿಯೊಂದು ಸೆಂಟಿಮೀಟರ್ ಭೂಮಿಯ ಮೇಲ್ಭಾಗದ 50,000 ಸೆಂಟಿಮೀಟರುಗಳನ್ನು ಪ್ರತಿನಿಧಿಸುತ್ತದೆ.
ಹಾಳೆಯ ಭೂಪಟವೊಂದು, ಎತ್ತರದಲ್ಲಿರುವ ವ್ಯತ್ಯಾಸಗಳನ್ನು ತೋರಿಸುವುದಾದರೂ ಹೇಗೆ? ಏರುನೆಲವನ್ನು ನೆರಳು ಮಾಡುವ ಒರೆಯಾದ ಗೆರೆಗಳು ತೃತೀಯ ಪರಿಮಾಣವನ್ನು ಕೂಡಿಸುವ ಒಂದು ವಿಧವಾಗಿದೆ. ಸೂರ್ಯನು ಭೂಪಟದ ಮೇಲ್ಭಾಗದ ಎಡಗೈಯ ಮೂಲೆಯ ಮೇಲಿನ ಒಂದು ಸ್ಥಾನದಿಂದ ಪ್ರಜ್ವಲಿಸುವಂತೆ ತೋರುತ್ತಾನೆ. ಪೂರ್ವ ಮತ್ತು ಆಗ್ನೇಯ ದಿಕ್ಕಿನ ಎದುರಿನಲ್ಲಿರುವ ಏರುನೆಲಗಳು, ನೆರಳಿನಲ್ಲಿರುವುದರಿಂದ, ಅನಂತರ ಗಾಢವಾದ ಬಣ್ಣಗಳಲ್ಲಿ ಚಿತ್ರಿಸಲ್ಪಡುತ್ತವೆ. ಆಧುನಿಕ ಭೂಪಟಗಳಲ್ಲಿ ಅನೇಕವೇಳೆ, ಸರಾಸರಿ ಸಮುದ್ರಮಟ್ಟದ ಮೇಲೆ ಸಮಾನವಾದ ಎತ್ತರವುಳ್ಳ ಬಿಂದುಗಳನ್ನು ಸೇರುವ ಸಮಮಟ್ಟಗೆರೆಗಳಿರುತ್ತವೆ. ಈ ಗುರುತುಗಳನ್ನು ಸೌಮ್ಯಗೊಳಿಸಲ್ಪಟ್ಟ ಬಣ್ಣಗಳಲ್ಲಿ ಮುದ್ರಿಸುವುದು, ಭೂಪಟದ ಇತರ ವೈಶಿಷ್ಟ್ಯಗಳಿಂದ ಅಪಕರ್ಷಿತರಾಗುವುದನ್ನು ದೂರವಿರಿಸುತ್ತದೆ.
ನಿಮ್ಮ ಸ್ಥಾನವನ್ನು ಸ್ಪಷ್ಟವಾಗಿಗಿ ನಿರೂಪಿಸಲು ನಿಮಗೆ ಸಹಾಯ ಮಾಡುವಂತಹ ಛೇದಿಸುವ ಗೆರೆಗಳ ಒಂದು ವ್ಯವಸ್ಥೆಯನ್ನು ಅನೇಕ ಭೂಪಟಗಳು ಉಪಯೋಗಿಸುತ್ತವೆ. ಈ ಚೌಕಟ್ಟು—ಹಾಗೆಂದು ಅದರ ಹೆಸರು—ಯಾವುದೇ ನಿವೇಶನವನ್ನು ಗೆರೆಗಳ ಚೌಕಟ್ಟಿನೊಳಗೆ ಗುರುತಿಸುವಂತಹ ಸುಸಂಘಟಿತ ವರ್ಣಮಾಲೆಯ ಅಥವಾ ಸಂಖ್ಯಾತ್ಮಕ ಶ್ರೇಣಿಯೋಪಾದಿ ಕೊಡಲ್ಪಡಲು ಅನುಮತಿ ನೀಡುತ್ತದೆ. ಉದಾಹರಣೆಗೆ, ಪಟ್ಟಣವೊಂದು G-13ರ ಬಳಿ ಇರಬಹುದು, ಅಂದರೆ ಲಂಬವಾದ ಪಕ್ಕದಲ್ಲಿ G ಮತ್ತು ಸಮತಲದಲ್ಲಿ ಸಂಖ್ಯೆ 13. ಈ ಎರಡು ಬಿಂದುಗಳು ಕೂಡುವ ಸ್ಥಳದಲ್ಲಿಯೇ ನೀವು ಪಟ್ಟಣವನ್ನು ಕಂಡುಕೊಳ್ಳುವಿರಿ. ಹಾಗಿದ್ದರೂ, ನಿಮ್ಮ ಭೂಪಟವು ನಿಮಗೊಂದು ನಿಷ್ಕೃಷ್ಟವಾದ ಚಿತ್ರವನ್ನು ಕೊಡುವುದೆಂದು ನೀವು ಹೇಗೆ ಖಾತರಿಯಿಂದಿರಬಲ್ಲಿರಿ?
ಕಂಪ್ಯೂಟರ್ ಯುಗದಲ್ಲಿ ಭೂಪಟಗಳು
ಮಿಲಿಟರಿ ಅಗತ್ಯಗಳು ಅನೇಕವೇಳೆ ಬಹಳಷ್ಟು ನಿಷ್ಕೃಷ್ಟವಾದ ಭೂಪಟಗಳ ಪ್ರಕಟನೆಯಲ್ಲಿ ಫಲಿಸಿವೆ. ಕಳೆದ 40 ವರ್ಷಗಳಲ್ಲಿ, ವಿಮಾನ ಛಾಯಾಚಿತ್ರಗಳ ಸೂಕ್ಷ್ಮದರ್ಶಕ ಹೋಲಿಕೆಯನ್ನು ಬಳಸುತ್ತಾ, ಅತಿ ನಿಷ್ಕೃಷ್ಟ ಭೂಪಟ ತಯಾರಿಕೆಯು ಒಂದು ವಾಸ್ತವಿಕತೆಯಾಗಿದೆ. ಅನೇಕ ದೇಶಗಳು ತದ್ರೀತಿಯ ಯೋಜನೆಗಳನ್ನು ಅನುಸರಿಸಿವೆ.
ಈಗಾಗಲೇ ಕೆಲವೊಂದು ವಾಹನಗಳಲ್ಲಿ ಕಂಪ್ಯೂಟರೀಕರಿಸಿದ ಚಲಿಸುವ ಭೂಪಟ ಪ್ರದರ್ಶನಗಳಿವೆ, ಅಷ್ಟೇ ಅಲ್ಲದೆ ಗೃಹ ಕಂಪ್ಯೂಟರ್ಗಳಿಗೆ ವಿಸ್ತೃತ ಸಂಚಾರ ಭೂಪಟಗಳಿವೆ. “ಕಂಪ್ಯೂಟರ್ಗಳು ವಾಹನ ಚಾಲಕನನ್ನು ನಿರ್ದೇಶಿಸುತ್ತವೆ,” ಎಂಬುದಾಗಿ ದಿ ಅಬ್ಸರ್ವರ್ನ ಒಂದು ಮೇಲ್ಪಂಕ್ತಿಯು ಹೇಳಿತು. ಮಾತಿನ ಸಂಯೋಜಕಗಳಿಗೆ ಜೋಡಿಸಿರುವ ಭೂಪಟ ಮಾಹಿತಿಯುಳ್ಳ ಕಂಪ್ಯೂಟರ್ ಡಿಸ್ಕ್ಗಳನ್ನು ಬಳಸುವ ಒಂದು ಪ್ರಯೋಗಾತ್ಮಕ ಯೋಜನೆಯ ಕುರಿತು ವರದಿಯು ವಿವರಿಸಿತು. ತನ್ನ ಗಮ್ಯಸ್ಥಾನವನ್ನು ಸೂಚಿಸಲು ಚಾಲಕನು, ಕಂಪ್ಯೂಟರ್ ಸ್ಕ್ರೀನ್ ಭೂಪಟಕ್ಕೆ ಆಜ್ಞೆಯ ಕೆಲವು ಪದಗಳನ್ನು ನೀಡುತ್ತಾನೆ. ದಿಗ್ಭಮ್ರೆಗೊಳಿಸುವ ಆ ರಸ್ತೆಯ ಸಂಧಿಸ್ಥಾನಗಳ ಕುರಿತು ಚಿಂತಿಸುವ ಅಗತ್ಯವಿಲ್ಲ! ಏಕೆ? ಏಕೆಂದರೆ, ಪ್ರತಿಯೊಂದು ಛೇದಬಿಂದುವನ್ನು ಕಾರ್ ಸಮೀಪಿಸಿದಂತೆ, ತೆಗೆದುಕೊಳ್ಳಬೇಕಾದ ದಿಕ್ಕಿನ ಕುರಿತು ಒಂದು ಧ್ವನಿಯು ಚಾಲಕನಿಗೆ ಹೇಳುತ್ತದೆ. ದಿಕ್ಸೂಚಿ ಮತ್ತು ಕಾರಿನ ಚಕ್ರಗಳು, ಕಾರಿನ ಮಾರ್ಗದ ದಾಖಲೆಯಿಡುತ್ತವೆ. ಇತ್ತೀಚಿನ ಬೆಳವಣಿಗೆಗಳು ಇನ್ನೂ ಹೆಚ್ಚು ವಿಶ್ವಾಸಾರ್ಹವೂ ಸರಳವೂ ಆಗಿವೆ.
ಭೂಪಟಗಳ ಭವಿಷ್ಯಕ್ಕೆ ಇದು ಯಾವ ಅರ್ಥದಲ್ಲಿರುವುದು? ಕಾಗದದ ಭೂಪಟಗಳು ಸಂಗ್ರಾಹ್ಯ ವಸ್ತುಗಳಾಗುವವೊ? ಕಾಲವೇ ತಿಳಿಸೀತು. ಯಾವುದೇ ಸಂದರ್ಭದಲ್ಲಿ, ನಿಮ್ಮ ಸಂಚಾರ ಅಗತ್ಯಗಳನ್ನು ಪೂರೈಸಲು, ಭೂಪಟವು ಒಂದು ಬಹುಮುಖ ಸಾಮರ್ಥ್ಯವುಳ್ಳ ಸಾಧನವಾಗಿ ಮುಂದುವರಿಯುವುದು.
[Map/Pictures on page 22]
ಅನೇಕ ಭೂಪಟಗಳು, ಬಳಸಲ್ಪಟ್ಟ ಚಿಹ್ನೆಗಳ ಅರ್ಥವಿವರಣೆ ನೀಡಲು, ಒಂದು ವಿವರಣೆಯನ್ನು ಅಥವಾ ಸ್ಪಷ್ಟೀಕರಣವನ್ನು ಒಳಗೊಂಡಿರುತ್ತವೆ
ಎತ್ತರದಲ್ಲಿನ ವ್ಯತ್ಯಾಸಗಳು ಸಮಮಟ್ಟಗೆರೆಗಳ ಮೂಲಕ ತೋರಿಸಲ್ಪಡುತ್ತವೆ, ಸಾಮಾನ್ಯವಾಗಿ ಸೌಮ್ಯಗೊಳಿಸಲ್ಪಟ್ಟ ಬಣ್ಣಗಳಲ್ಲಿ
ಚೌಕಟ್ಟು ವ್ಯವಸ್ಥೆಯ, ಭೂಪಟದ ಮೇಲೆ ಒಂದು ನಿವೇಶನವನ್ನು ಗುರುತಿಸುವಂತೆ ಅನುಮತಿಸುತ್ತದೆ
ಭೂಮಿಯ ಮೇಲ್ಭಾಗದಲ್ಲಿ ಒಂದು ಅಂಗುಲ ಅಥವಾ ಒಂದು ಸೆಂಟಿಮೀಟರ್ ಎಷ್ಟಕ್ಕೆ ಸಮಾನವಾಗಿದೆ ಎಂಬುದನ್ನು ಭೂಪಟವು ಸಾಮಾನ್ಯವಾಗಿ ತೋರಿಸುತ್ತದೆ (ಇಲ್ಲಿ ತೋರಿಸಲ್ಪಟ್ಟಿಲ್ಲ)
ಮೈಲುಗಳ ಅಥವಾ ಕಿಲೋಮೀಟರುಗಳ ಒಂದು ಅಳತೆಯು, ಸ್ಥಳಗಳ ನಡುವಿನ ಅಂತರಗಳನ್ನು ಅಳೆಯುವಂತೆ ನಿಮಗೆ ಅನುಮತಿ ನೀಡುತ್ತದೆ
[ಕೃಪೆ]
Crown Copyright Reserved
[ಪುಟ 32 ರಲ್ಲಿರುವ ಚಿತ್ರ ಕೃಪೆ]
From the book Die Heiligkeit der Gesellschaft Jesu