ರಕ್ತ ವಿಕ್ರಯ ದೊಡ್ಡ ವ್ಯಾಪಾರ
ಕೆಂಪು ಚಿನ್ನ! ಈ ಉಪನಾಮವು ಸೂಚಿಸುವಂತೆ, ಇದು ಒಂದು ಅತ್ಯಂತ ಬೆಲೆಯುಳ್ಳ ದ್ರವ್ಯವಾಗಿರುತ್ತದೆ. ಇದು ಒಂದು ಅಮೂಲ್ಯವಾದ ದ್ರವವಾಗಿದ್ದು, ಕೇವಲ ಚಿನ್ನಕ್ಕೆ ಮಾತ್ರವೇ ಅಲ್ಲ, ತೈಲ ಮತ್ತು ಇಂಧನಕ್ಕೂ ಹೋಲಿಸಲ್ಪಟ್ಟಿರುವ ಒಂದು ನಿರ್ಣಾಯಕ ಮೂಲಸಂಪತ್ತು. ಆದರೂ ಕೆಂಪು ಚಿನ್ನವು ಬೈರಿಗೆ ಯಂತ್ರ ಮತ್ತು ಸಿಡಿಮದ್ದಿನೊಂದಿಗೆ ಬಂಡೆಗಳ ನಾಡಿಗಳನ್ನು ತೋಡಿ ತೆಗೆದ ಚಿನ್ನವಲ್ಲ. ಬಹು ಕುಶಾಗ್ರತೆಯಿಂದ ಜನರ ನಾಡಿಗಳಿಂದ ತೋಡಿ ತೆಗೆದ ಚಿನ್ನವದು.
“ದಯಮಾಡಿರಿ, ನನ್ನ ಚಿಕ್ಕ ಹುಡುಗಿಗೆ ರಕ್ತ ಬೇಕು” ಎಂದು ಬೇಡುತ್ತದೆ, ನ್ಯೂಯೋರ್ಕ್ ನಗರದ ಕಾರ್ಯಮಗ್ನ ಬೀದಿಯ ಮೇಲೆ ನೇತಾಡುವ ಒಂದು ಪ್ರಕಟನಪಟ. ಇತರ ಜಾಹೀರಾತುಗಳು ಪ್ರಚೋದಿಸುವುದು: “ದಾನಿಗಳು ನೀವಾಗಿದ್ದರೆ, ಯಾರ ಹೊರತು ಲೋಕ ಜೀವಿಸಲಾರದೋ ಆ ನಮೂನೆ ನೀವೇ.” “ನಿಮ್ಮ ರಕ್ತ ಎಣಿಕೆಗೆ ಬರುತ್ತದೆ, ತೋಳನ್ನು ನೆರವಾಗಿ ನೀಡಿರಿ.”
ಇತರರಿಗೆ ಸಹಾಯ ಮಾಡ ಬಯಸುವ ಜನರಿಗೆ ಇದರ ಸಂದೇಶವು ತಿಳಿಯುತ್ತದೆ. ಅವರು ಸಾಲುಗಟ್ಟೆಯಾಗಿ ಬರುತ್ತಾರೆ ಲೋಕವ್ಯಾಪಕವಾಗಿ. ಅವರಲ್ಲಿ ಹೆಚ್ಚಿನವರು ಮತ್ತು ರಕ್ತ ಸಂಗ್ರಹಿಸುವ ಜನರು ಹಾಗೂ ರಕ್ತ ಪೂರಣಗಾರರು, ನಿಸ್ಸಂದೇಹವಾಗಿಯೂ ಬಾಧಿತರಿಗೆ ಸಹಾಯ ಮಾಡ ಬಯಸುತ್ತಾರೆ ಮತ್ತು ತಾವು ಹಾಗೆ ಮಾಡುತ್ತಿದ್ದೇವೆಂದು ನಂಬುತ್ತಾರೆ.
ಆದರೆ ರಕ್ತದಾನ ಮಾಡಿದ ಮೇಲೆ ಮತ್ತು ರಕ್ತ ಪೂರಣಕ್ಕೆ ಮೊದಲು, ಅದು ಅನೇಕ ಕೈಗಳನ್ನು ದಾಟುತ್ತದೆ ಮತ್ತು ಅನೇಕ ಕಾರ್ಯವಿಧಾನಗಳಿಗೆ ಒಳಗಾಗುತ್ತದೆಂಬದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಬಂಗಾರವು ಹೇಗೋ ಹಾಗೆ, ರಕ್ತ ಸಹಾ ಲೋಭವನ್ನು ಪ್ರೇರೇಪಿಸುತ್ತದೆ. ಅದು ಲಾಭಕ್ಕಾಗಿ ಮಾರಲ್ಪಡಬಹುದು ಮತ್ತು ಇನ್ನಷ್ಟು ಲಾಭಕ್ಕಾಗಿ ಪುನಃ ವಿಕ್ರಯವಾಗಬಹುದು. ರಕ್ತ ಸಂಗ್ರಹದ ಹಕ್ಕುಗಳಿಗಾಗಿ ಕೆಲವು ಜನರು ಹೋರಾಟ ನಡಿಸುತ್ತಾರೆ, ದುಬಾರಿ ಬೆಲೆಗೆ ಅದನ್ನು ಮಾರುತ್ತಾರೆ, ಅದರಿಂದ ಬಹಳ ಹಣ ಸಂಪಾದಿಸುತ್ತಾರೆ, ಒಂದು ದೇಶದಿಂದ ಇನ್ನೊಂದಕ್ಕೆ ಅದರ ಕಳ್ಳಸಾಗಣೆಯನ್ನೂ ಮಾಡುತ್ತಾರೆ. ಲೋಕದಲ್ಲೆಲ್ಲೂ ರಕ್ತ ವಿಕ್ರಯ ಒಂದು ದೊಡ್ಡ ವ್ಯಾಪಾರ.
ಅಮೆರಿಕದಲ್ಲಿ, ದಾನಿಗಳು ಕೊಡುವ ರಕ್ತಕ್ಕಾಗಿ ಒಮ್ಮೆ ನೇರವಾಗಿ ಹಣ ಕೊಡಲಾಗುತಿತ್ತು. ಆದರೆ 1971ರಲ್ಲಿ, ಬ್ರಿಟಿಷ್ ಗ್ರಂಥಕರ್ತ ರಿಚರ್ಡ್ ಟಿಟ್ಮಸ್, ಆ ರೀತಿಯಲ್ಲಿ ಕೇವಲ ಕೆಲವು ಡಾಲರುಗಳಿಗಾಗಿ ಬಡವರನ್ನೂ ರೋಗಿಗಳನ್ನೂ ರಕ್ತದಾನ ಮಾಡಲು ಸೆಳೆಯುವ ಅಮೆರಿಕನ್ ವ್ಯವಸ್ಥೆ ಅಸುರಕ್ಷಿತ ಎಂದು ದೂರಿದರು. ಇತರರ ಸಹಾಯಕ್ಕಾಗಿ ತಮ್ಮ ರಕ್ತವನ್ನು ಕೊಡುವದರಿಂದ ಲಾಭಗಳಿಸುವುದು ಜನರಿಗೆ ಅನೈತಿಕವೆಂದೂ ಅವರು ವಾದಿಸಿದರು. ಅವರ ಈ ಆಕ್ರಮಣವು ಅಮೆರಿಕದಲ್ಲಿ (ಕೆಲವು ದೇಶಗಳಲ್ಲಿ ಆ ಪದ್ಧತಿಯಿನ್ನೂ ಹುಲುಸಾಗಿ ಬೆಳೆಯುತ್ತಿದ್ದರೂ), ಪೂರ್ಣ-ರಕ್ತ ದಾನಿಗಳಿಗೆ ಬೆಲೆತೆರುವ ಪದ್ಧತಿಯನ್ನು ನಿಲ್ಲಿಸಲು ಪ್ರೇರಣೆ ಕೊಟ್ಟಿತು. ಆದರೂ ಅದು ರಕ್ತ ಮಾರುಗಟ್ಟೆಯನ್ನೇನೂ ಕಡಿಮೆ ಲಾಭಕರವಾಗಿ ಮಾಡಲಿಲ್ಲ. ಏಕೆ?
ರಕ್ತ ಲಾಭಕರವಾಗಿ ಉಳಿದ ವಿಧ
ವಿಜ್ಞಾನಿಗಳು 1940ರ ದಶಕದಲ್ಲಿ, ರಕ್ತವನ್ನು ಅದರ ಉಪಾಂಗಗಳಿಂದ ಪ್ರತ್ಯೇಕಿಸಲು ಪ್ರಾರಂಭಿಸಿದರು. ಭಿನ್ನಾಂಶೀಕರಣವೆಂಬ ಈ ಕಾರ್ಯವಿಧಾನವು, ರಕ್ತವನ್ನು ಇನ್ನೂ ಹೆಚ್ಚು ಲಾಭಕರ ವ್ಯಾಪಾರವಾಗಿ ಮಾಡುತ್ತದೆ. ಹೇಗೆ? ಒಳ್ಳೇದು, ಇದನ್ನು ಗಮನಿಸಿರಿ: ಹೊಸ ಮಾಡೆಲ್‌ನ ಒಂದು ಮೋಟಾರು ಕಾರನ್ನು ಬಿಚ್ಚಿ ಅದರ ಭಾಗಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಮಾರುವಾಗ, ಇಡೀ ಕಾರನ್ನು ಒಂದಾಗಿ ಮಾರುವದಕ್ಕಿಂತ ಐದು ಪಾಲಷ್ಟು ಹೆಚ್ಚು ಲಾಭ ಸಿಗುತ್ತದೆ. ಅದೇ ರೀತಿ, ರಕ್ತವನ್ನು ವಿಭಜಿಸಿ ಅದರ ಉಪಾಂಗಗಳನ್ನು ಬೇರೆ ಬೇರೆಯಾಗಿ ಮಾರುವಾಗ, ಅದರ ಬೆಲೆ ಇನ್ನೂ ಏರುತ್ತದೆ.
ರಕ್ತದ ಒಟ್ಟು ಪರಿಮಾಣದ ಅರ್ಧದಷ್ಟು ಇರುವ ರಕ್ತರಸವು, ರಕ್ತದ ವಿಶೇಷ ಲಾಭಕರ ಉಪಾಂಗವಾಗಿದೆ. ರಕ್ತರಸದಲ್ಲಿ, ರಕ್ತಕಣಗಳಾದ—ಕೆಂಪು ಕಣ, ಬಿಳಿ ಕಣ ಮತ್ತು ಕಿರುಫಲಕಗಳು—ಇರದಿರುವದರಿಂದ ಅದನ್ನು ಒಣಗಿಸಿ, ಸಂಗ್ರಹಿಸಿ ಇಡಲೂಬಹುದು. ಅದಲ್ಲದೆ, ಪೂರ್ಣ-ರಕ್ತವನ್ನು ದಾನಿಯು ವರ್ಷಕ್ಕೆ ಐದು ಸಲ ಮಾತ್ರವೇ ಕೊಡಲು ಅನುಮತಿ ಇದೆ, ಆದರೆ, ರಕ್ತರಸವನ್ನು ಅವನು ವಾರಕ್ಕೆ ಎರಡು ಸಲ ಕೊಡಶಕ್ತನು, ಪ್ಲಾಸ್ಮಫೆರೀಸ್ ಎಂಬ ಕಾರ್ಯವಿಧಾನಕ್ಕೆ ಒಳಗಾಗುವ ಮೂಲಕ. ಈ ಕಾರ್ಯ ವಿಧಾನದಲ್ಲಿ ಪೂರ್ಣ-ರಕ್ತವನ್ನು ಹೊರ ತೆಗೆಯಲಾಗುತ್ತದೆ, ಅದರಿಂದ ರಕ್ತ ರಸವನ್ನು ಪ್ರತ್ಯೇಕಿಸಲಾಗುತ್ತದೆ, ಮತ್ತು ಅನಂತರ, ಉಳಿದ ರಕ್ತ ಉಪಾಂಗಗಳನ್ನು ದಾನಿಯ ದೇಹದೊಳಗೆ ಮರುಪೂರಣ ಮಾಡಲಾಗುತ್ತದೆ.
ಅಮೆರಿಕವು ಇನ್ನೂ ದಾನಿಗಳ ರಕ್ತರಸಕ್ಕಾಗಿ ಹಣ ಸಲ್ಲಿಸುವದನ್ನು ಅನುಮತಿಸುತ್ತದೆ. ಅಷ್ಟಲ್ಲದೆ ಆ ದೇಶವು, ಜಾಗತಿಕ ಆರೋಗ್ಯ ಸಂಸ್ಥೆಯ ಶಿಫಾರಸಿಗಿಂತಲೂ ನಾಲ್ಕು ಪಾಲಷ್ಟು ಹೆಚ್ಚು ಸಲ ರಕ್ತರಸವನ್ನು ವಾರ್ಷಿಕವಾಗಿ ದಾನಮಾಡಲು ದಾನಿಗಳಿಗೆ ಪರವಾನಗಿ ಕೊಡುತ್ತದೆ! ಹೀಗಿರಲಾಗಿ ಅಮೆರಿಕವು, ಲೋಕದ ರಕ್ತರಸ ಸಂಗ್ರಹದ 60 ಪ್ರತಿಶತಕ್ಕಿಂತಲೂ ಹೆಚ್ಚನ್ನು ಶೇಕರಿಸಿರುವದೇನೂ ಆಶ್ಚರ್ಯವಲ್ಲ. ಆ ಎಲ್ಲಾ ರಕ್ತರಸವೇ ಸುಮಾರು 45 ಕೋಟಿ ಡಾಲರುಗಳಷ್ಟು ಬೆಲೆಯುಳ್ಳದ್ದು, ಆದರೆ ಮಾರು ಗಟ್ಟೆಯಲ್ಲಿ ಅದಕ್ಕೆ ಇನ್ನೂ ಎಷ್ಟೋ ಹೆಚ್ಚು ಬೆಲೆ ಇದೆ ಯಾಕಂದರೆ ರಕ್ತರಸವನ್ನು ಸಹಾ ಹಲವಾರು ಘಟಕಗಳಾಗಿ ಪ್ರತ್ಯೇಕಿಸ ಸಾಧ್ಯವಿದೆ. ಲೋಕವ್ಯಾಪಕವಾಗಿ ರಕ್ತರಸವು, ವರ್ಷಕ್ಕೆ 200 ಕೋಟಿ ಡಾಲರುಗಳ ಕೈಗಾರಿಕೆಯ ತಳಪಾಯವಾಗಿದೆ!
ಜಪಾನು, ಮೈನೀಚಿ ಶಿಂಬನ್ ವಾರ್ತಾಪತ್ರಕ್ಕನುಸಾರ, ಲೋಕದ ರಕ್ತರಸದ ಸುಮಾರು ಮೂರನೇ ಒಂದಂಶವನ್ನು ಸೇವಿಸುತ್ತದೆ. ಆ ದೇಶವು ಈ ರಕ್ತ ಉಪಾಂಗದ 96 ಪ್ರತಿಶತವನ್ನು ಆಮದು ಮಾಡುತ್ತದೆ, ಅದರಲ್ಲಿ ಹೆಚ್ಚಿನದನ್ನು ಅಮೆರಿಕದಿಂದಲೇ. ಜಪಾನಿನೊಳಗಿನ ಠೀಕಾಕಾರರು ಆ ದೇಶವನ್ನು, “ಜಗತ್ತಿನ ರಕ್ತಪಿಶಾಚಿ” ಎಂದು ಕರೆದಿದ್ದಾರೆ ಮತ್ತು ಜಪಾನಿನ ಆರೋಗ್ಯ ಮತ್ತು ಕ್ಷೇಮ ಇಲಾಖೆಯು, ರಕ್ತದಿಂದ ಲಾಭಗಳಿಸುವದು ನ್ಯಾಯೋಚಿತವಲ್ಲವೆಂದು ಹೇಳುತ್ತಾ, ಅದರ ವ್ಯಾಪಾರವನ್ನು ಹಿಡಿಕಟ್ಟಲು ಪ್ರಯತ್ನಿಸಿದೆ. ವಾಸ್ತವದಲ್ಲಿ ಜಪಾನಿನ ವೈದ್ಯಕೀಯ ಸಂಘಗಳು, ರಕ್ತರಸದ ಕೇವಲ ಒಂದು ಉಪಾಂಗವಾದ ಅಲ್ಬ್ಯುಮಿನ್‌ನಿಂದ ಪ್ರತಿ ವರ್ಷ ಸುಮಾರು 20 ಕೋಟಿ ಡಾಲರುಗಳಪ್ಟು ಲಾಭ ಸಂಪಾದಿಸುತ್ತವೆಂದು ಮಂತ್ರಿ ಇಲಾಖೆಯು ಆರೋಪಿಸಿದೆ.
ಜರ್ಮನ್ ಗಣರಾಜ್ಯವು ಯೂರೋಪಿನ ಬೇರೆಲ್ಲಾ ಭಾಗಗಳು ಕೂಡಿ ಸೇವಿಸುವದಕ್ಕಿಂತ ಹೆಚ್ಚು ರಕ್ತ ಉತ್ಪಾದನೆಗಳನ್ನು, ಲೋಕದ ಯಾವುದೇ ದೇಶಕ್ಕಿಂತ ವ್ಯಕ್ತಿಶಃ ಹೆಚ್ಚು ಪ್ರಮಾಣದಲ್ಲಿ ಸೇವಿಸುತ್ತದೆ. ಝಮ್ ಬೈಸ್ಪೈಲ್ ಬ್ಲಟ್ (ಉದಾಹರಣೆಗೆ, ರಕ್ತ), ರಕ್ತ ಉತ್ಪನ್ನಗಳ ಕುರಿತು ಹೇಳುವದು: “ಅರ್ಧ ಪಾಲಿಗಿಂತಲೂ ಹೆಚ್ಚು, ಮುಖ್ಯವಾಗಿ ಅಮೆರಿಕದಿಂದ, ಹಾಗೂ ತೃತೀಯ ಲೋಕದಿಂದಲೂ ಆಮದಾಗುತ್ತದೆ. ರಕ್ತರಸ ದಾನ ಮಾಡುವ ಮೂಲಕ ತಮ್ಮ ಆದಾಯವನ್ನು ಸುಧಾರಿಸ ಬಯಸುವ ಬಡವರು ಹೇಗೂ ಇದರಲ್ಲಿದ್ದಾರೆ.” ಈ ಬಡವರಲ್ಲಿ ಕೆಲವರು ತಮ್ಮ ರಕ್ತದಲ್ಲಿ ಎಷ್ಟು ಹೆಚ್ಚನ್ನು ಮಾರುತ್ತಾರೆಂದರೆ, ರಕ್ತನಷ್ಟದಿಂದ ಅವರು ಸಾಯುವದೂ ಇದೆ.
ಹೆಚ್ಚಿನ ಔದ್ಯೋಗಿಕ ರಕ್ತರಸ-ಕೇಂದ್ರಗಳನ್ನು ಯುಕ್ತಿಯಿಂದ ಕಡಿಮೆ ಆದಾಯದ ಕ್ಷೇತ್ರಗಳಲ್ಲಿ ಅಥವಾ ಬಡ ದೇಶಗಳ ಸೀಮಾಗಡಿಗಳಲ್ಲಿ ಸ್ಥಾಪಿಸಲಾಗುತ್ತದೆ. ಇವು, ಹಣಕ್ಕಾಗಿ ರಕ್ತರಸವನ್ನು ಮಾರಲು ತೀರಾ ಸಿದ್ಧರಿರುವ ಮತ್ತು ಕೊಡಬಾರದಷ್ಟನ್ನು ಕೊಟ್ಟು ಬಿಡಲು ಬಹಳಷ್ಟು ಕಾರಣವಿರುವ ಅಥವಾ ತಮಗಿರುವ ಯಾವುದೇ ರೋಗವನ್ನು ಬಚ್ಚಿಡುವ ದರಿದ್ರರನ್ನು ಮತ್ತು ದಿಕ್ಕಿಲ್ಲದವರನ್ನು ಹತ್ತರ ಸೆಳೆಯುತ್ತವೆ. ಇಂಥಾ ರಕ್ತರಸ ಕ್ರಯವಿಕ್ರಯವು ಭೂಸುತ್ತಲೂ 25 ದೇಶಗಳಲ್ಲಿ ತಲೆದೋರಿದೆ. ಒಂದು ದೇಶದಲ್ಲಿ ಅದು ನಿಲ್ಲಿಸಲ್ಪಟ್ಟ ಕೂಡಲೇ, ಅದು ಇನ್ನೊಂದು ದೇಶದಲ್ಲಿ ತಲೆಯೆತ್ತುತ್ತಿದೆ. ಅಧಿಕಾರಿಗಳಿಗೆ ಲಂಚ ಮತ್ತು ಕಳ್ಳಸಾಗಣೆ ಕೂಡಾ ಅಸಾಮಾನ್ಯವಲ್ಲ.
ಲಾಭವಿಲ್ಲದ ವಲಯದಲ್ಲಿ ನಫೆ
ಆದರೆ ಲಾಭಪಡೆಯದ ರಕ್ತ ನಿಧಿಗಳೂ ಇತ್ತೀಚೆಗೆ ಕಟು ಠೀಕೆಗೆ ಒಳಗಾಗಿರುತ್ತವೆ. ದಾನಿಗಳಿಂದ ಒಂದು ಯೂನಿಟ್ ರಕ್ತವನ್ನು ಶೇಕರಿಸಲಿಕ್ಕೆ ರಕ್ತ ನಿಧಿಗಳಿಗೆ 57.50 ಡಾಲರುಗಳು ಖರ್ಚಾಗುತ್ತದೆ, ಮತ್ತು ರಕ್ತ ನಿಧಿಗಳಿಂದ ಅದನ್ನು ಖರೀದಿಸಲು ಆಸ್ಪತ್ರೆಗಳಿಗೆ 88.00 ಡಾಲರುಗಳು ತಗಲುತ್ತದೆ, ಅದನ್ನು ಒಂದು ಪೂರಣದಲ್ಲಿ ಪಡೆಯಲು ರೋಗಿಗಳಿಗೆ 375 ಡಾಲರುಗಳಿಂದ $600 ಡಾಲರುಗಳಷ್ಟೂ ಖರ್ಚು ತಗಲುತ್ತದೆಂದು ವರದಿಗಾರ್ತಿ ಆಂಡ್ರಿಯ ರಾಕ್ 1986ರಲ್ಲಿ ಮನೀ ಪತ್ರಿಕೆಯಲ್ಲಿ ಆರೋಪಿಸಿದ್ದಳು.
ಅಂದಿನಿಂದ ಪರಿಸ್ಥಿತಿಯಲ್ಲೇನಾದರೂ ಬದಲಾಗಿದೆಯೇ? ಸಪ್ಟಂಬರ 1989ರಲ್ಲಿ ದಿ ಫಿಲೆಡೆಲ್ಪಿಯಾ ಇನ್‌ಕಾಯ್ವರರ್ ವರದಿಗಾರ, ಗಿಲ್ಬರ್ಟ್ ಎಮ್. ಗೌಲ್, ಅಮೆರಿಕದ ರಕ್ತ-ನಿಧಿ ವ್ಯವಸ್ಥೆಯ ಕುರಿತು ಒಂದು ವಾರ್ತಾ ಲೇಖನಮಾಲೆಯನ್ನು ಬರೆದರು.a ಒಂದು ವರ್ಷಕಾಲ ದೀರ್ಘ ಸಂಶೋಧನೆಯ ನಂತರ, ಅವನು ವರದಿಸಿದ್ದೇನಂದರೆ, ಕೆಲವು ರಕ್ತ-ನಿಧಿಗಳು ರಕ್ತದಾನ ಮಾಡುವಂತೆ ಜನರನ್ನು ಬೇಡುತ್ತವೆ, ಅನಂತರ ತಿರುಗಿಬಿದ್ದು ಅದರಲ್ಲಿ ಅರ್ಧದಷ್ಟು ಹೆಚ್ಚನ್ನು ಗಮನಾರ್ಹ ಲಾಭದಲ್ಲಿ ಬೇರೆ ರಕ್ತ ಕೇಂದ್ರಗಳಿಗೆ ಮಾರುತ್ತವೆ. ಈ ರೀತಿಯಲ್ಲಿ ರಕ್ತ ನಿಧಿಗಳು, ವರ್ಷಕ್ಕೆ ಸುಮಾರು 5 ಕೋಟಿ ಲಕ್ಷ ಡಾಲರುಗಳ ಗುಟ್ಟಿನ ವ್ಯಾಪಾರವನ್ನು ಮಾರುಗಟ್ಟೆಯ ರೀತಿಯಲ್ಲಿ ನಡಿಸುತ್ತಾ, ಸುಮಾರು ಐದು ಲಕ್ಷ ಲೀಟರ್ ರಕ್ತ ವಿಕ್ರಯವನ್ನು ಮಾಡುತ್ತವೆಂದು ಗೌಲ್ ಅಂದಾಜು ಹಾಕಿದ್ದಾರೆ.
ಆದರೂ, ಒಂದು ಮುಖ್ಯ ವ್ಯತ್ಯಾಸ: ಈ ರಕ್ತ ವಿನಿಮಯವು ಸರಕಾರದಿಂದ ನಡಿಸಲ್ಪಡುವದಿಲ್ಲ. ಅದರ ಕ್ರಯವನ್ನು ಕ್ರಮಗೊಳಿಸುವದನ್ನಂತೂ ಬಿಡಿ, ಅದರ ನಿಜ ವಿಸ್ತಾರ್ಯವನ್ನೂ ಯಾರೊಬ್ಬನೂ ಅಳೆಯ ಸಾಧ್ಯವಿಲ್ಲ. ಮತ್ತು ಹೆಚ್ಚಿನ ರಕ್ತ ದಾನಿಗಳಿಗೆ ಅದರ ಕುರಿತೇನೂ ತಿಳಿದಿಲ್ಲ. “ಜನರು ಮಂಕು ಮಾಡಲ್ಪಟ್ಟಿದ್ದಾರೆ,” ಎಂದರು ಒಬ್ಬ ರಕ್ತ-ನಿಧಿಯ ನಿವೃತ್ತ ಅಧಿಕಾರಿ, ಫಿಲೆಡೆಲ್ಪಿಯಾ ಇನ್‌ಕಾಯ್ವರರ್‌ಗೆ. “ಅವರ ರಕ್ತ ನಮಗೆ ಹೋಗುತ್ತದೆಂದು ಅವರಿಗೆ ಯಾರೂ ಹೇಳುವದಿಲ್ಲ. ಅದು ಅವರಿಗೆ ತಿಳಿದರೆ, ತುಂಬಾ ಕ್ರೋಧಗೊಂಡಾರು.” ರೆಡ್‌ಕ್ರಾಸ್ ಅಧಿಕಾರಿಯೊಬ್ಬನು ಸಂಕ್ಷೇಪವಾಗಿ ಹೇಳಿದ್ದು: “ರಕ್ತ-ನಿಧಿಯವರು ಹಲವಾರು ವರ್ಷಗಳಿಂದ ಅಮೆರಿಕನ್ ಜನತೆಯನ್ನು ಪೂರಾ ಮಂಕು ಮಾಡಿದ್ದಾರೆ.”
ಅಮೆರಿಕ ಒಂದರಲ್ಲಿಯೇ, ರಕ್ತ-ನಿಧಿಗಳು ಪ್ರತಿ ವರ್ಷ 6.5 ಮಿಲಿಯ ಲೀಟರ್ ರಕ್ತವನ್ನು ಶೇಕರಿಸುತ್ತವೆ ಮತ್ತು 3 ಕೋಟಿ ಯೂನಿಟುಗಳಿಗಿಂತಲೂ ಹೆಚ್ಚು ರಕ್ತ ಉತ್ಪನ್ನಗಳನ್ನು ಸುಮಾರು ಒಂದು ನೂರು ಕೋಟಿ ಮಿಲಿಯ ಡಾಲರುಗಳಿಗೆ ಮಾರುತ್ತವೆ. ಇದು ಹಣದ ಒಂದು ಪ್ರಚಂಡವಾದ ಮೊತ್ತ. ರಕ್ತ-ನಿಧಿಗಳು “ಲಾಭ” ಎಂಬ ಶಬ್ದವನ್ನು ಬಳಸುವದಿಲ್ಲ. “ವೆಚ್ಚಗಳ ಮೇಲೆ ಮೀರಿಕೆ” ಎಂಬ ವಾಕ್ಯ ಅವರಿಗೆ ಇಷ್ಟ. ಉದಾಹರಣೆಗೆ, ರೆಡ್ ಕ್ರಾಸ್, 1980ರಿಂದ 1987 ತನಕ “ವೆಚ್ಚಗಳ ಮೇಲೆ ಮೀರಿಕೆ”ಯಿಂದ 30 ಕೋಟಿ ಡಾಲರುಗಳನ್ನು ಗಳಿಸಿತು.
ರಕ್ತ ನಿಧಿಗಳು ತಾವು ನಫೆರಹಿತ ಸಂಸ್ಥೆಗಳೆಂಬದಾಗಿ ವಾದಿಸುತ್ತವೆ. ವಾಲ್ ಸ್ಟ್ರೀಟಿನ ದೊಡ್ಡ ದೊಡ್ಡ ವ್ಯವಸ್ಥಾಪನೆಗಳ ಹಾಗೆ ತಮ್ಮ ಹಣವು ಹಿಸ್ಸೇದಾರರಿಗೆ ಹೋಗುವದಿಲ್ಲ ಎಂದವರ ಮತ. ಆದರೆ ರೆಡ್‌ಕ್ರಾಸ್‌ಗೆ ಹಿಸ್ಸೇದಾರರಿದದ್ದಾದ್ದರೆ, ಅದು ಅಮೆರಿಕದಲ್ಲಿ ಅತ್ಯಂತ ಹೆಚ್ಚು ನಫೆ ಗಳಿಸುವ ಜನರಲ್ ಮೋಟರ್ಸ್‌ನಂಥಾ ಕಂಪೆನಿಗಳ ಸಾಲಿನಲ್ಲಿರುತ್ತಿತ್ತು. ರಕ್ತ ನಿಧಿಗಳ ಅಧಿಕಾರಿಗಳಿಗೆ ಉತ್ತಮ ವೇತನಾಧಿಕ್ಯವಿದೆ. ಫಿಲೆಡೆಲ್ಪಿಯಾ ಇನ್‌ಕಾಯ್ವರರ್‌ರಿಂದ ಸರ್ವೇ ಮಾಡಲ್ಪಟ್ಟ 62 ರಕ್ತ ನಿಧಿಗಳ ಅಧಿಕಾರಿಗಳಲ್ಲಿ 25 ಸೇಕಡಾ ವರ್ಷಕ್ಕೆ 1,00,000 ಡಾಲರುಗಳಿಗಿಂತಲೂ ಹೆಚ್ಚು ಹಣ ಗಳಿಸಿದ್ದಾರೆ. ಕೆಲವರು ಇದರ ಇಮ್ಮಡಿಗಿಂತಲೂ ಹೆಚ್ಚು ಸಂಪಾದಿಸಿರುವರು.
ತಾವು ಶೇಕರಿಸುವ ರಕ್ತವನ್ನು “ಮಾರು”ವುದಿಲ್ಲ—ಕಾರ್ಯಗತಿಯ ಖರ್ಚನ್ನು ಮಾತ್ರ ಹೊರಿಸುತ್ತೇವೆ ಎಂದೂ ರಕ್ತ ನಿಧಿಯವರು ವಾದಿಸುತ್ತಾರೆ. ಒಬ್ಬ ರಕ್ತ ನಿಧಿಯವನು ಆ ವಾದವನ್ನು ಎದುರುತರ್ತಿಸುತ್ತಾ, ಅಂದದ್ದು: “ರೆಡ್‌ಕ್ರಾಸ್ ತಾನು ರಕ್ತ ವಿಕ್ರಯಿಸುವುದಿಲ್ಲವೆಂದು ಹೇಳುವಾಗ ನನಗೆ ತಲೆಬಿಸಿ. ಅದು, ತಾವು ಹಾಲಿಗಲ್ಲ, ರಟ್ಟುಪೆಟ್ಟಿಗೆಗೆ ಮಾತ್ರ ಬೆಲೆಹೊರಿಸುತ್ತೇವೆಂದು ಹೇಳುವ ಸೂಪರ್ ಮಾರ್ಕೆಟ್‌ನಂತಿದೆ.”
ವಿಶ್ವ ಮಾರುಗಟ್ಟೆ
ರಕ್ತದ್ರವದ ವ್ಯಾಪಾರದಂತೆ, ಪೂರ್ಣ-ರಕ್ತದ ವ್ಯಾಪಾರವೂ ಇಡೀ ವಿಶ್ವವನ್ನೇ ಆವರಿಸಿದೆ. ಅಂತೆಯೇ, ಅದರ ಮೇಲಣ ಠೀಕೆಯು ಸಹಾ. ಉದಾಹರಣೆಗೆ, ಜಾಪಾನಿ ರೆಡ್‌ಕ್ರಾಸ್, ದಾನಿತ ರಕ್ತದಿಂದ ಹೊರತೆಗೆದ ಉತ್ಪನ್ನಗಳ ಮೇಲೆ ದೊಡ್ಡ ರಿಯಾಯಿತಿ ನೀಡಿಕೆಯ ಮೂಲಕ 1989 ಒಕ್ಟೋಬರದಲ್ಲಿ ಜಾಪಾನಿ ಮಾರುಗಟ್ಟೆಯೊಳಗೆ ಒಳನುಗ್ಗಲು ಪ್ರಯತ್ನಿಸಿದಾಗ, ಒಂದು ದೊಡ್ಡ ಹೊಯ್ಲನ್ನೆಬ್ಬಿಸಿತು. ತಾವು ರಕ್ತವನ್ನು ಪ್ರಮಾಣ ಬೆಲೆಯಲ್ಲೇ ಖರೀದಿಸಿದ್ದೇವೆಂದು ತಮ್ಮ ವಿಮಾ ಫಾರ್ಮುಗಳಲ್ಲಿ ಹಕ್ಕು ಸಾಧಿಸುವ ಮೂಲಕ, ಆಸ್ಪತ್ರೆಗಳು ಸಹಾ, ತುಂಬಾ ನಫೆಯನ್ನು ಕೊಯ್ದಿವೆ.
ಥಾಯ್ಲೆಂಡಿನ ವಾರ್ತಾಪತ್ರ ದ ನೇಶನ್ ಇದಕ್ಕನುಸಾರ, ಕೆಲವು ಏಷ್ಯನ್ ದೇಶಗಳು ಪಾವತಿ ದಾನಗಳನ್ನು ಅಂತ್ಯಗೊಳಿಸುವ ಮೂಲಕ ಕೆಂಪು ಚಿನ್ನದಲ್ಲಿನ ಮಾರುಗಟ್ಟೆಯ ಮೇಲೆ ಹಿಡಿಗೈ ಬಿಗಿಸಬೇಕಾಯಿತು. ಭಾರತದಲ್ಲಿ 5 ಲಕ್ಷದಷ್ಟು ಹೆಚ್ಚು ಜನರು ತಮ್ಮ ಸ್ವಂತ ರಕ್ತವನ್ನು ಮಾರಿ ಜೀವನೋಪಾಯ ನಡಿಸುತ್ತಾರೆ. ಬಡತನದಿಂದ ಹಸಿದು ಕಂಗೆಟ್ಟವರಾದ ಕೆಲವರು, ಪರವಾನಿಗಿಗಿಂತ ಹೆಚ್ಚು ರಕ್ತವನ್ನು ನೀಡುವದಕ್ಕಾಗಿ ತಮ್ಮ ರೂಪುಮರಸಿಕೊಂಡೂ ಬರುತ್ತಾರೆ. ಇತರರನ್ನು ರಕ್ತ ನಿಧಿಗಳೇ ಬುದ್ಧಿಪೂರ್ವಕವಾಗಿ ಮಿತಿಮೀರಿ ಹಿಂಡುತ್ತವೆ.
ಪಾಯ್‌ಟ್ ಜೆ. ಹ್ಯಾಗನ್, ಬ್ಲಡ್: ಗಿಫ್ಟ್ ಆರ್ ಮರ್ಚೆಂಡೈಸ್ ಎಂಬ ತನ್ನ ಪುಸ್ತಕದಲ್ಲಿ, ರಕ್ತ-ನಿಧಿಗಳ ಗೋಪ್ಯ ವ್ಯವಹಾರಗಳು ಬ್ರಾಜಿಲಿನಲ್ಲಿ ಬಹಳ ಹೆಚ್ಚು ನಡಿಯುತ್ತವೆಂದು ಹೇಳುತ್ತಾನೆ. ನೂರಾರು ಬ್ರಾಜಿಲ್ ಔದ್ಯೋಗಿಕ ರಕ್ತ ನಿಧಿಗಳು ತಮ್ಮ 7 ಕೋಟಿ ಡಾಲರುಗಳ ಮಾರುಗಟ್ಟೆಗೆ, ಸಂದೇಹಪಡದವರನ್ನು ಆಕರ್ಷಿಸುತ್ತವೆ. ಬಟ್ಲರ್ನ್‌ಟ್ (ರಕ್ತ ಕೊಯ್ಲು) ಪುಸ್ತಕಕ್ಕನುಸಾರ, ಬಡವರು ಮತ್ತು ನಿರುದ್ಯೋಗಿಗಳು ಬಗೋಟದ ಅಸಂಖ್ಯಾತ ರಕ್ತ ನಿಧಿಗಳಿಗೆ ಪ್ರವಾಹದಂತೆ ಬರುತ್ತಾರೆ. ತಮ್ಮ ರಕ್ತದ ಅರ್ಧ ಲೀಟರ್ ರಕ್ತವನ್ನು ಕೇವಲ 350-500 ಪಿಸೋಸ್‌ಗಳಿಗೆ ಮಾರುತ್ತಾರೆ. ಅದೇ ರಕ್ತದ ಪೈಂಟಿಗೆ ರೋಗಿಗಳು 4,000-6,000 ಪಿಸೋಸ್‌ಗಳಷ್ಟು ಬೆಲೆ ತೆರಲೂಬಹುದು!
ಮೇಲಿನ ವಿಷಯಗಳಿಂದ ಕಡಿಮೆಪಕ್ಷ ಒಂದು ಭೌಗೋಲಿಕ ನಿಜ ಸಂಗತಿಯು ಸ್ಪಷ್ಟ: ರಕ್ತ ವಿಕ್ರಯವು ನಿಜವಾಗಿಯೂ ಒಂದು ದೊಡ್ಡ ವ್ಯಾಪಾರ. ‘ಅದಕ್ಕೇನು? ರಕ್ತವು ಒಂದು ದೊಡ್ಡ ವ್ಯಾಪಾರ ಯಾಕಾಗಬಾರದು?’ ಎಂದು ಕೆಲವರು ಕೇಳ್ಯಾರು.
ಒಳ್ಳೇದು, ಸಾಮಾನ್ಯವಾಗಿ ದೊಡ್ಡ ವ್ಯಾಪಾರಗಳ ಕುರಿತು ಅನೇಕರನ್ನು ಚಡಪಡಿಸುವಂತೆ ಮಾಡುವುದು ಯಾವುದು? ಅದು ಲೋಭ. ಉದಾಹರಣೆಗೆ, ದೊಡ್ಡ ವ್ಯಾಪಾರಗಳು ಜನರಿಗೆ ನಿಜವಾಗಿಯೂ ಬೇಕಿರದ ವಸ್ತುಗಳನ್ನು ಖರೀದಿಸುವಂತೆ ಒತ್ತಯಾ ಪಡಿಸುವಾಗ, ಅಪಾಯಕಾರಿ ಎಂದು ಜ್ಞಾತವಾದ ಉತ್ಪನ್ನಗಳನ್ನು ಚೊಕ್ಕ ವಸ್ತುಗಳೆಂದು ಹೇಳಿ ಜನತೆಗೆ ಒದಗಿಸುತ್ತಾ ಇರುವಾಗ, ಅಥವಾ ತನ್ನ ಉತ್ಪಾದನೆಗಳನ್ನು ಸುರಕ್ಷಿತವನ್ನಾಗಿ ಮಾಡಲಿಕ್ಕಾಗಿ ಹಣವ್ಯಯಿಸಲು ನಿರಾಕರಿಸುತ್ತಿರುವಾಗ, ಲೋಭವು ತಲೆಯೆತ್ತುತ್ತದೆ.
ರಕ್ತ ವ್ಯಾಪಾರವು ಆ ರೀತಿಯ ಲೋಭದಿಂದ ಮಲಿನವಾಗಿದ್ದರೆ, ಲೋಕದಲ್ಲೆಲ್ಲೂ ಇರುವ ಮಿಲ್ಯಾಂತರ ಜನರ ಜೀವಗಳು ಮಹಾ ಅಪಾಯಕರ ಸ್ಥಿತಿಯಲ್ಲಿದೆ ಎಂಬದು ಸತ್ಯ. ಆ ಲೋಭವು ರಕ್ತ ವ್ಯಾಪಾರವನ್ನು ಭ್ರಷ್ಟಗೊಳಿಸಿದೆಯೇ? (g90 10/22)
[ಅಧ್ಯಯನ ಪ್ರಶ್ನೆಗಳು]
a ಎಪ್ರಿಲ್ 1990ರಲ್ಲಿ, ಗೌಲ್‌ನ ಮರೆದೆಗೆಯು, ಒಂದು ಪ್ಯುಲಿಟ್ಸರ್ ಪಾರಿತೋಷಕವನ್ನು ಸಾರ್ವಜನಿಕ ಸೇವೆಗಾಗಿ ಗಳಿಸಿತು. ಅದು ರಕ್ತ-ಕೈಗಾರಿಕೆಯ ವ್ಯವಹಾರವನ್ನು ಶೋಧಿಸಲಿಕ್ಕಾಗಿ 1989ರ ಅಂತ್ಯದಲ್ಲಿ ಒಂದು ದೊಡ್ಡ ಶಾಸನೀಯ ತನಿಖೆಯನ್ನೂ ಬಡಿದೆಬ್ಬಿಸಿತು.
[ಪುಟ 6 ರಲ್ಲಿರುವ ಚೌಕ/ಚಿತ್ರಗಳು]
ಜರಾಯು ವಿಕ್ರಯ
ಕೂಸು ಗರ್ಭದಲ್ಲಿರುವಾಗ ಅದನ್ನು ಪೋಷಿಸುವ ರಕ್ತ ಅಂಗಾಂಶಗಳ ಮುದೆಯ್ದಾದ ಜರಾಯುವಿಗೆ ಏನಾಗುತ್ತದೆಂದು ಆಗಲೇ ಹೆತ್ತ ಕೆಲವೇ ಸ್ತ್ರೀಯರು ಒಂದುವೇಳೆ ಯೋಚಿಸಾರು. ಫಿಲೆಡೆಲ್ಪಿಯಾ ಇನ್‌ಕಾಯ್ವರರ್‌ಗೆ ಅನುಸಾರವಾಗಿ, ಹೆಚ್ಚಿನ ಆಸ್ಪತ್ರೆಗಳು ಅವನ್ನು ಉಳಿಸಿ, ಘನೀಭವಿಸಿ, ಅನಂತರ ಮಾರುತ್ತವೆ. 1987 ಒಂದರಲ್ಲಿಯೇ, ಅಮೆರಿಕವು ಸುಮಾರು 8 ಲಕ್ಷ ಕಿಲೊಗ್ರಾಮ್ ಜರಾಯುವನ್ನು ಪರದೇಶಗಳಿಗೆ ಸಾಗಿಸಿತು. ಫ್ರಾನ್ಸಿನ ಪೇರಿಸ್ ಸಮೀಪದ ಒಂದು ಕಂಪೆನಿಯು ಪ್ರತಿ ದಿನ 15 ಟನ್ನು ಜರಾಯುವನ್ನು ಖರೀದಿಸುತ್ತದೆ! ತಾಯಿಯ ರಕ್ತ ರಸದ ಒಂದು ಸಿದ್ದಮೂಲವಾದ ಜರಾಯುಗಳನ್ನು, ಆ ಕಂಪೆನಿಯು ಹಲವಾರು ತರದ ಔಷಧಿಗಳಾಗಿ ಪರಿವರ್ತಿಸಿ, ಸುಮಾರು ಒಂದು ನೂರು ದೇಶಗಳಲ್ಲಿ ಮಾರುತ್ತಿದೆ.
[ಪುಟ 4 ರಲ್ಲಿರುವಚಿತ್ರ]
(For fully formatted text, see publication)
ರಕ್ತದ ಮುಖ್ಯ ಉಪಾಂಗಗಳು
ರಕ್ತರಸ: ರಕ್ತದ ಸುಮಾರು 55 ಪ್ರತಿಶತ. ಅದರಲ್ಲಿ 92 ಪ್ರತಿಶತ ನೀರು; ಉಳಿದ ಭಾಗವು ಸಂಕೀರ್ಣ ಸಾರಜನಕಗಳಾದ ಗ್ಲೊಬ್ಯುಲಿನ್, ಫೈಬ್ರಿನೋಜಿನ್ ಮತ್ತು ಅಲ್ಬ್ಯೂಮಿನ್‌ನಿಂದ ಕೂಡಿರುತ್ತದೆ
ಕಿರುಫಲಕಗಳು: ರಕ್ತದ ಸುಮಾರು 0.17 ಪ್ರತಿಶತ
ಬಿಳಿ ಕಣಗಳು: ಸುಮಾರು 0.1 ಪ್ರತಿಶತ
ಕೆಂಪು ಕಣಗಳು: ಸುಮಾರು 45 ಪ್ರತಿಶತ