ಜೀವದ ದಾನವೋ ಅಥವಾ ಸಾವಿನ ಚುಂಬನವೋ?
“ಇನ್ನು ಎಷ್ಟು ಹೆಚ್ಚು ಜನರು ಸಾಯಲೇ ಬೇಕು? ಎಷ್ಟು ಮರಣಗಳು ನಿಮಗೆ ಬೇಕು? ಇದು ಸಂಭವಿಸುತ್ತಾ ಇದೆ ಎಂದು ನಂಬುವದಕ್ಕಾಗಿ ನಿಮಗೆ ಬೇಕಾದ ಮರಣದ ಸೀಮಿತವನ್ನು ನಮಗೆ ಕೊಡಿ.”
ಡಾನ್ ಫ್ರಾನ್ಸಿಸ್, ಅಮೆರಿಕದ CDC (ಸೆಂಟ್ರಲ್ ಫಾರ್ ಡಿಸೀಜ್ ಕಂಟ್ರೋಲ್)ನ ಒಬ್ಬಅಧಿಕಾರಿ, ರಕ್ತ ನಿಧಿ ಕೈಗಾರಿಕೆಯ ಉಚ್ಛ ಪ್ರತಿನಿಧಿಗಳ ಒಂದಿಗಿನ ಕೂಟವೊಂದರಲ್ಲಿ, ತನ್ನ ಮುಷ್ಟಿಯನ್ನು ಮೇಜಿಗೆ ಗುದ್ದುತ್ತಾ, ಮೇಲಿನ ಮಾತುಗಳನ್ನು ನುಡಿದನು. ರಕ್ತ ನಿಧಿಯ ಅಧಿಕಾರಿಗಳನ್ನು ರಾಷ್ಟ್ರೀಯ ರಕ್ತ ಸರಬರಾಯಿಯ ಮೂಲಕ ಹರಡುತ್ತಿರುವ ಏಯ್ಡ್ಸ್ ರೋಗದ ಕುರಿತು ಮನಗಾಣಿಸಲು CDC ಪ್ರಯತ್ನಿಸುತ್ತಿತ್ತು.
ಆದರೆ ರಕ್ತ ನಿಧಿಯವರಿಗೆ ಖಾತ್ರಿಯಾಗಲಿಲ್ಲ. ಅವರು ರುಜುವಾತನ್ನು ಬಹು ತೆಳ್ಳಗೆ ಎಂದು ಕರೆದರು—ಕೇವಲ ಕೆಲವೇ ಕೇಸುಗಳು—ಆದ್ದರಿಂದ ರಕ್ತ ಪರೀಕ್ಷೆ ಅಥವಾ ಪರಿಶೋಧನೆ ಹೆಚ್ಚಿಸದೇ ಇರಲು ನಿರ್ಧರಿಸಿದರು. ಅದು ಜನವರಿ 4, 1983ರಲ್ಲಿ. ಆರು ತಿಂಗಳ ನಂತರ, ಅಮೆರಿಕನ್ ರಕ್ತನಿಧಿಗಳ ಸಂಘದ ಅಧ್ಯಕ್ಷರು ಕಂಠೋಕ್ತವಾಗಿ ಹೇಳಿದ್ದು: “ಸಾಮಾನ್ಯ ಜನತೆಗೆ ಕೊಂಚ ಅಥವಾ ಏನೂ ಅಪಾಯವು ಅಲ್ಲಿಲ್ಲ.”
ಆದರೆ ಅನೇಕ ಪರಿಣಿತರಿಗೆ ಕ್ರಿಯೆ ಕೈಕೊಳ್ಳುವಂತೆ ನಡಿಸಲು ಆವಾಗಲೇ ಸಾಕಷ್ಟು ರುಜುವಾತು ಅಲ್ಲಿತ್ತು. ಮತ್ತು ಅಂದಿನಿಂದ, ಆ ಆರಂಭದ “ಕೆಲವೇ ಕೇಸುಗಳು” ಭಯಹಿಡಿಸುವ ರೀತಿಯಲ್ಲಿ ಉಬ್ಬಿವೆ. 1985ಕ್ಕೆ ಮುಂಚೆ, ಪ್ರಾಯಶಃ ಸುಮಾರು 24,000 ಜನರಿಗೆ, ಏಯ್ಡ್ಸ್ ರೋಗವನ್ನುಂಟು ಮಾಡುವ HIV (ಹ್ಯೂಮನ್ ಇಮ್ಯೂನೋಡಿಫಿಶನ್ಸಿ) ಸೋಂಕಿತ ರಕ್ತಪೂರಣಗಳನ್ನು ಕೊಡಲಾಗಿತ್ತು.
ದೂಷಿತವಾದ ರಕ್ತವು ಏಯ್ಡ್ಸ್ ರೋಗದ ಹರಡಿಕೆಗೆ ಭಯಪಡಿಸುವ ರೀತಿಯಲ್ಲಿ ಪರಿಣಾಮಕಾರಿ. ದ ನ್ಯೂ ಇಂಗ್ಲಂಡ್ ಜರ್ನಲ್ ಆಫ್ ಮೆಡಿಸಿನ್ (ದಶಂಬರ 14, 1989) ಪತ್ರಿಕೆಗೆ ಅನುಸಾರ, ರಕ್ತದ ಒಂದೇ ಒಂದು ಯೂನಿಟ್ 17.5 ಲಕ್ಷ ರೋಗಸೋಂಕುಗಳನ್ನು ಉಂಟುಮಾಡುವಷ್ಟು ವಿಷನಂಜನ್ನು ಒಯ್ಯಬಲ್ಲದು. ಜೂನ್ 1990ರೊಳಗೆ, ಅಮೆರಿಕ ಒಂದರಲ್ಲಿಯೇ, 3,506 ಜನರು ರಕ್ತ ಪೂರಣ, ರಕ್ತ ಉಪಾಂಗಗಳ ಮತ್ತು ಅಂಗಾಂಶ ಸ್ಧಲಾಂತರಗಳ ಮೂಲಕ ಈವಾಗಲೇ ಏಯ್ಡ್ಸ್ ರೋಗವನ್ನು ತಗಲಿಸಿಕೊಂಡಿದ್ದರು, ಎಂದು CDC ಎಚ್ಚರ!ಕ್ಕೆ ತಿಳಿಸಿತು.
ಆದರೆ ಅವು ಕೇವಲ ಸಂಖ್ಯೆಗಳು. ಒಳಗೂಡಿರುವ ವ್ಯಕ್ತಿಪರವಾದ ದುಃಖಕರ ಸಂಗತಿಗಳ ಆಳವನ್ನು ಅವು ತಿಳಿಸುವುದಿಲ್ಲ. ಉದಾಹರಣೆಗೆ, 71 ವಯಸ್ಸಿನ ಫ್ರಾನ್ಸಸ್ ಬಾರ್ಕೆಲ್ಟ್‌ನ್ನು ತೆಗೆದುಕೊಳ್ಳಿರಿ. ತನಗೆ ರಕ್ತ ಪೂರಣ ಬೇಡ ಎಂದಾಕೆ ದೃಢತೆಯಿಂದ ಡಾಕ್ಟರರಿಗೆ ಹೇಳಿದ್ದಳು. ಆದರೂ ಹೇಗೂ ಮಾಡಿ ಆಕೆಗೆ ಪೂರಣವನ್ನು ಕೊಡಲಾಯಿತು. ಹೀಗೆ, ಆಕೆ ಏಯ್ಡ್ಸ್‌ನ ಯಾತನಾಮಯ ಮರಣವನ್ನು ಅನುಭವಿಸಿದಾಗ, ಕುಟುಂಬವು ಸಹಾಯಶೂನ್ಯವಾಗಿ ನೋಡಿತು.
ಅಥವಾ, ಭಾರಿ ಋತುಸ್ರಾವದಿಂದ ಪೀಡಿತಳಾಗಿದ್ದ 17 ವರ್ಷದ ಒಬ್ಬ ಹುಡುಗಿಗಾದ ದುರಂತವನ್ನು ಗಮನಿಸಿರಿ. ಅವಳ ರಕ್ತಹೀನತೆಯನ್ನು ಸರಿಪಡಿಸಲು ಅವಳಿಗೆ ಎರಡು ಯೂನಿಟ್ ರಕ್ತವನ್ನು ಕೊಡಲಾಯಿತು. ಅವಳು 19 ವಯಸ್ಸಿನವಳಾದಾಗ ಮತ್ತು ಗರ್ಭಿಣಿಯಾಗಿದ್ದಾಗ, ಆ ರಕ್ತಪೂರಣವು ಆಕೆಗೆ ಏಯ್ಡ್ಸ್ ರೋಗವನ್ನು ತಗಲಿಸಿದೆ ಎಂದು ತಿಳಿದು ಬಂತು. 22 ವಯಸ್ಸಿನಲ್ಲಿ ಅವಳು ಏಯ್ಡ್ಸ್ ಪೀಡಿತಳಾದಳು. ತನಗೆ ಬೇಗನೇ ಸಾವು ಸಿದ್ಧ ಎಂದು ಅವಳಿಗೆ ತಿಳಿದದ್ದಲ್ಲದೆ ಅದರೊಂದಿಗೆ, ಆ ರೋಗವನ್ನು ತನ್ನ ಮಗುವಿಗೆ ದಾಟಿಸಿದ್ದೇನೋ ಎಂಬ ಚಿಂತೆಯಿಂದಲೂ ಕಾಡಿಸಲ್ಪಟಳ್ಟು. ಈ ರೀತಿಯ ದುಃಖದ ದುರಂತಗಳ ಪಟ್ಟಿಯು, ಕೂಸುಗಳಿಂದ ಹಿಡಿದು ವೃದ್ಧರ ತನಕ, ಇಡೀ ಲೋಕದಲ್ಲಿ ಹೆಚ್ಚೆಚ್ಚಾಗುತ್ತಾ ಹೋಗುತ್ತಿದೆ.
ಅಟೊಲೊಗಸ್ ಆ್ಯಂಡ್ ಡೈರೆಕ್ಟೆಡ್ ಬ್ಲಡ್ ಪ್ರೊಗ್ರಾಮ್ಸ್ ಪುಸ್ತಕವು 1987ರಲ್ಲಿ ವಿಲಾಪಿಸಿದ್ದು: “ಆರಂಭದ ಅಪಾಯ ಗುಂಪುಗಳನ್ನು ಗೊತ್ತುಮಾಡಿದ ಕೂಡಲೇ, ಅಚಿಂತ್ಯ ಸಂಗತಿಯು ನಡೆಯಿತು: ಈ ಸಂಭಾವ್ಯ ಮಾರಕ ರೋಗವು [ಏಯ್ಡ್ಸ್], ಐಚ್ಛಿಕ ರಕ್ತ ಸರಬರಾಯಿಯ ಮೂಲಕ ವಾಹ್ಯತೆಯಾಗ ಸಾಧ್ಯವದೆ ಮತ್ತು ವಾಹ್ಯತೆ ಆಗುತ್ತಿದೆ ಎಂದು ತೋರಿಬಂತು. ಇದು ಎಲ್ಲಾ ವೈದ್ಯಕೀಯ ದುರ್ಘಟನೆಗಳಿಗಿಂತ ಅತ್ಯಂತ ಕಹಿಯಾದದ್ದು: ಹೇಗಂದರೆ ಆ ಅಮೂಲ್ಯ ಜೀವದಾಯಕ ರಕ್ತದ ದಾನವು ಮರಣದ ಉಪಕರಣವಾಗಿ ಪರಿಣಮಿಸ ಸಾಧ್ಯವಿರುವದೇ.”
ರಕ್ತರಸದಿಂದ ಉತ್ಪನ್ನವಾಗುವ ಔಷಧಗಳೂ ಈ ಪಿಡುಗನ್ನು ಭೂಸುತ್ತ ಹರಡಿಸಲು ಸಹಾಯ ಮಾಡಿವೆ. ತಮ್ಮ ರೋಗೋಪಚಾರಕ್ಕಾಗಿ ರಕ್ತರಸ-ಮೂಲದ ಹೆಪ್ಪುಗಟ್ಟುವ ಮದ್ದನ್ನು ಉಪಯೋಗಿಸುವ ಹೆಮೊಫಿಲಿಯಕ್ಸ್ ರೋಗಿಗಳಲ್ಲಿ ಹೆಚ್ಚು ಮಂದಿ ಸತ್ತರು. ಆ ಮದ್ದಿನಲ್ಲಿದ್ದ HIV ಯನ್ನು ನಿರ್ಮೂಲಗೊಳಿಸಲು ತಾಪ-ಉಪಚಾರ ಕಾರ್ಯಗತಿಯನ್ನು ಮುಂತರುವ ಮುಂಚೆಯೇ, ಅಮೆರಿಕದಲ್ಲಿ ಅಂಥ 60-90 ಪ್ರತಿಶತ ನಡುವಣ ಜನರಿಗೆ ಏಯ್ಡ್ಸ್ ರೋಗ ಅಂಟಿತ್ತು.
ಆದರೂ, ಇಂದಿನ ತನಕವೂ ರಕ್ತವು ಏಯ್ಡ್ಸ್ ವೈರಸ್‌ನಿಂದ ಸುರಕ್ಷಿತವಿಲ್ಲ. ಮತ್ತು ರಕ್ತಪೂರಣದಿಂದ ಬರುವ ಅಪಾಯವು ಏಯ್ಡ್ಸ್ ಒಂದೇ ಅಲ್ಲ. ಖಂಡಿತವಾಗಿಯೂ ಅಲ್ಲ.
ಏಯ್ಡ್ಸ್‌ನ್ನು ಚಿಕ್ಕದಾಗಿ ಮಾಡುವ ಅಪಾಯಗಳು
“ಅದು ನಾವು ಔಷಧಿಯಲ್ಲಿ ಉಪಯೋಗಿಸುವ ಅತ್ಯಂತ ಅಪಾಯಕಾರಿ ದ್ರವ್ಯ,” ಎನ್ನುತ್ತಾರೆ ಡಾ. ಚಾರ್ಲ್ಸ್ ಹಗ್ಗಿನ್ಸ್ ರಕ್ತದ ಕುರಿತು. ಅವರಿಗೆ ಅದು ತಿಳಿದಿರಬೇಕು ಯಾಕಂದರೆ ಅವರು ಮಾಸಚ್ಯೂಸೆಟ್ಸ್ ಆಸ್ಪತ್ರೆಯೊಂದರಲ್ಲಿ ರಕ್ತ ಪೂರಣ ಸೇವಾ ವಿಭಾಗದ ಡೈರೆಕ್ಟರರು. ಹೆಚ್ಚಿನವರು ನೆನಸುವುದೇನಂದರೆ ಒಂದು ರಕ್ತಪೂರಣವು, ಒಪ್ಪುವ ರಕ್ತ-ನಮೂನೆಯ ಯಾರಾದರೊಬ್ಬನನ್ನು ಕಂಡುಹಿಡಿಯುವಷ್ಟೇ ಸುಲಭ ಎಂಬದಾಗಿ. ಆದರೆ ರಕ್ತದ ಅಡ್ಡ-ಸರಿಸಮಾನತೆಗಳಿಗಾಗಿ ಯಾವುದನ್ನು ಮಾಮೂಲಿಯಾಗಿ ಪರೀಕ್ಷಿಸಲಾಗುತ್ತದೋ ಆ ABO ನಮೂನೆಗಳು ಮತ್ತು Rh ಅಂಶವು ಮಾತ್ರವಲ್ಲದೆ, ಇರಬಹುದಾದ ಬೇರೆ 400 ಅಥವಾ ಹೆಚ್ಚು ವ್ಯತ್ಯಾಸಗಳನ್ನು ಪರೀಕ್ಷಿಸಿ ನೋಡಲಾಗುವದಿಲ್ಲ. ಹೃದಯ ರಕ್ತ ಪರಿಚಲನಾಂಗದ ಸರ್ಜನ್ ಡೆಂಟನ್ ಕೂಲೀ ಗಮನಿಸಿದ್ದು: “ರಕ್ತ ಪೂರಣವು ಒಂದು ಅಂಗ ಸ್ಥಲಾಂತರವಾಗಿದೆ, . . . ಬಹಳ ಮಟ್ಟಿಗೆ ಎಲ್ಲಾ ರಕ್ತಪೂರಣಗಳಲ್ಲಿ ನಿರ್ದಿಷ್ಟ ಅಸಂಗತತೆಗಳು ಇದ್ದೇ ಇರುತ್ತವೆಂದು ನನ್ನೆಣಿಕೆ.”
ಅಂಥಾ ಜಟಿಲವಾದ ಒಂದು ದ್ರವದ ಪೂರಣವು, ಒಬ್ಬ ಸರ್ಜನರು ಹೇಳುವಂತೆ, ದೇಹದ ರೋಗರಕ್ಷಕ ವ್ಯವಸ್ಥೆಯನ್ನು “ಗಲಿಬಿಲಿ” ಮಾಡಬಹುದು ಎಂಬುದೇನೂ ಆಶ್ಚರ್ಯವಲ್ಲ. ವಾಸ್ತವದಲ್ಲಿ ಒಂದು ರಕ್ತಪೂರಣವು, ರೋಗರಕ್ಷಕ ವ್ಯವಸ್ಥೆಯನ್ನು ಸುಮಾರು ಒಂದು ವರ್ಷದಷ್ಟು ದೀರ್ಘಕಾಲ ನಿರೋಧಿಸಬಲ್ಲದು. ಕೆಲವರಿಗೆ ಇದು ಪೂರಕಗಳ ಅತ್ಯಂತ ಬೆದರಿಕೆಯ ಸ್ವರೂಪವು.
ಅದಲ್ಲದೆ, ಸಾಂಕ್ರಾಮಿಕ ರೋಗಗಳು ಸಹಾ ಅದರಲ್ಲಿವೆ. ಚಗಾಸಸ್ ರೋಗ, ಸೈಟೊಮೆಗೆಲೋವೈರಸ್ ಮುಂತಾದ ಅಸಾಧಾರಣ ಹೆಸರುಗಳು ಅವಕ್ಕಿವೆ. ಅವುಗಳಿಂದ ಚಳಿ ಮತ್ತು ಜ್ವರಗಳಲ್ಲದೆ ಮರಣವೂ ಸಂಭವಿಸಶಕ್ಯವು. ರಕ್ತಪೂರಣದಿಂದ ಯಾವುದೇ ಸಾಂಕ್ರಾಮಿಕ ರೋಗವನ್ನು ಪಡೆಯುವದಕ್ಕೆ ಹತ್ತರಲ್ಲೊಂದು ಸಂದರ್ಭವು ಅಲ್ಲಿದೆ ಎಂದು ಕಾರ್ನೆಲ್ ಯುನಿರ್ವಸಿಟಿ ಆಫ್ ಮೆಡಿಸಿನ್‌ನ ಡಾ. ಜೋಸೆಫ್ ಫೆಲ್ಡ್ಸ್‌ಚೂ ಹೇಳುತ್ತಾರೆ. ಅದು ಹತ್ತು-ಅರೆಗಳಿರುವ ಪಿಸ್ತೂಲಿನೊಂದಿಗೆ ರಷ್ಯನ್ ಜೂಜಿನಾಟವನ್ನು ಆಡುವ ಹಾಗಿದೆ. ಕ್ಯಾನ್ಸರ್ ಸರ್ಜರಿಯ ಸಮಯದಲ್ಲಿ ಕೊಡಲ್ಪಡುವ ರಕ್ತಪೂರಣಗಳು ಕ್ಯಾನ್ಸರ್ ಪುನಃ ಸಂಭವಿಸುವ ಅಪಾಯವನ್ನು ಕಾರ್ಯಥ ಹೆಚ್ಚಿಸಬಹುದೆಂದೂ ಇತ್ತೀಚಿನ ಅಧ್ಯಯನಗಳು ತೋರಿಸಿವೆ.
ಶಸ್ತ್ರಚಿಕಿತ್ಸೆಯಿಂದ ಗುಣಹೊಂದಲು ಇರುವ ಅತ್ಯಂತ ದೊಡ್ಡ ತಡೆಯು ರಕ್ತ ಪೂರಣವೆಂದು ಒಂದು ಟೀವೀ ನ್ಯೂಸ್ ಕಾರ್ಯಕ್ರಮವು ವಾದಿಸಿರುವದೇನೂ ಆಶ್ಚರ್ಯವಲ್ಲ. ಹೆಪಟೈಟಿಸ್ (ಯಕೃತ್ತಿನ ಊತ) ನೂರಾರು ಸಾವಿರಾರು ಜನರಿಗೆ ತಗಲುತ್ತದೆ ಮತ್ತು ಏಯ್ಡ್ಸ್‌ಗಿಂತ ಎಷ್ಟೋ ಹೆಚ್ಚು ಮಂದಿ ರಕ್ತಪೂರಣವಾದವರನ್ನು ಅದು ಕೊಲ್ಲುತ್ತದೆ, ಆದರೆ ಅದಕ್ಕೆ ಸಿಗುವ ಬಹಿರಂಗ ಪ್ರಕಟನೆ ಮಾತ್ರ ಕಡಿಮೆ. ಈ ಮರಣಗಳ ವಿಸ್ತಾರ್ಯವೆಷ್ಟು ಎಂಬದು ಯಾರಿಗೂ ಗೊತ್ತಿಲ್ಲ, ಆದರೆ ಅರ್ಥತಜ್ಞ ರಾಸ್ ಎಕ್ಕರ್ಟ್‌ಗನುಸಾರ, ಜನರಿಂದ ತುಂಬಿದ DC-10 ವಿಮಾನವೊಂದು ಪ್ರತಿತಿಂಗಳು ಅಪಘಾತಗೊಂಡಾಗ ಸಾಯುವ ಜನ ಸಂಖ್ಯೆಗೆ ಅದು ಸರಿಸಮವಾಗಬಹುದು.
ಅಪಾಯ ಮತ್ತು ರಕ್ತನಿಧಿಗಳು
ತಮ್ಮ ಉತ್ಪಾದನೆಯ ಈ ಎಲ್ಲಾ ಬಯಲು ಪಡಿಸುವಿಕೆಗೆ ರಕ್ತ ನಿಧಿಗಳು ಹೇಗೆ ಪ್ರತಿಕ್ರಿಯೆ ತೋರಿಸಿವೆ? ಚೆನ್ನಾಗಿ ತೋರಿಸಿಲ್ಲವೆಂದು ಠೀಕಾಕಾರರು ದೂರುತ್ತಾರೆ. 1988ರಲ್ಲಿ, ದ ರಿಪೋರ್ಟ್ ಆಫ್ ದ ಪ್ರೆಸಿಡೆನ್‌ಶಲ್ ಕಮಿಶನ್ ಆನ್ ದ ಹ್ಯೂಮನ್ ಇಮ್ಯೂನೊಡಿಫಿಶನ್ಸಿ ವೈರಸ್ ಎಪಿಡೆಮಿಕ್, ಕೈಗಾರಿಕೆಯು ಏಯ್ಡ್ಸ್ ಬೆದರಿಕೆಗೆ ಪ್ರತಿಕ್ರಿಯೆ ತೋರಿಸುವುದರಲ್ಲಿ “ಅನಾವಶ್ಯಕವಾಗಿ ನಿಧಾನಿಸಿದೆ” ಎಂದು ದೂರಿತು. ಹೆಚ್ಚು-ಅಪಾಯ ಗುಂಪುಗಳ ಸದಸ್ಯರು ರಕ್ತದಾನ ಮಾಡುವದನ್ನು ನಿರುತ್ತೇಜಿಸುವಂತೆ ರಕ್ತ ನಿಧಿಗಳನ್ನು ಒತ್ತಯಾಪಡಿಸಲಾಗಿದೆ. ಸ್ವತಃ _ ರಕ್ತವನ್ನು ತಾನೇ ಪರೀಕ್ಷಿಸುವಂತೆಯೂ, ಹೆಚ್ಚು ಅಪಾಯಕಾರಿ ದಾನಿಗಳಿಂದ ಬರುವ ರಕ್ತದ ಲಕ್ಷಣಗಳನ್ನು ಪರಿಶೋಧಿಸುವಂತೆಯೂ ಅವರನ್ನು ಪ್ರೇರಿಸಲಾಗಿತ್ತು. ಆದರೆ ರಕ್ತ ನಿಧಿಗಳು ವಿಳಂಬ ಮಾಡಿದವು. ಅಪಾಯಗಳು ಚಿತ್ತೋದ್ರೇಕವಲ್ಲದೆ ಬೇರೇನೂ ಅಲ್ಲವೆಂದು ಅವರು ಜರೆದರು. ಏಕೆ?
ರ್ಯಾಂಡಿ ಶಿಲ್ಟ್, ತನ್ನ ಪುಸ್ತಕವಾದ ಆ್ಯಂಡ್ ದ ಬ್ಯಾಂಡ್ ಪ್ಲೆಯ್ಡ್ ಆನ್‌ನಲ್ಲಿ, ರಕ್ತ ನಿಧಿಗಳ ಅಧಿಕಾರಿಗಳು ಹೆಚ್ಚಿನ ಪರೀಕ್ಷೆಯನ್ನು ವಿರೋಧಿಸುವುದು “ಬಹುಮಟ್ಟಿಗೆ ಬರೇ ಹಣಕಾಸಿನ ಕಾರಣದಿಂದಾಗಿ” ಎಂದು ಆರೋಪಿಸಿದ್ದಾರೆ. “ರೆಡ್ ಕ್ರಾಸ್‌ನಂಥಾ ನಫೆರಹಿತ ಸಂಸ್ಥೆಗಳಿಂದ ಹೆಚ್ಚಾಗಿ ನಡಿಸಲ್ಪಡುತ್ತಿರುವ ಈ ರಕ್ತ ಕೈಗಾರಿಕೆಯು ದೊಡ್ಡ ಹಣದ ವ್ಯಾಪಾರ, ಇದರ ವಾರ್ಷಿಕ ಆದಾಯವು ಒಂದು ನೂರು ಕೋಟಿ [ಹತ್ತು ಸಾವಿರ ಲಕ್ಷ] ಡಾಲರುಗಳು. ವರ್ಷಕ್ಕೆ 35 ಲಕ್ಷ ಪೂರಣಗಳಿಗಾಗಿ ರಕ್ತ ಸರಬರಾಯಿ ಮಾಡುವ ಅವರ ವ್ಯಾಪಾರವು ಬೆದರಿಕೆಗೆ ಒಳಗಾಯಿತು.”
ಅಷ್ಟಲ್ಲದೆ, ನಫೆರಹಿತ ರಕ್ತ ನಿಧಿಗಳು ಐಚ್ಛಿಕ ದಾನಿಗಳ ಮೇಲೆ ಬಹಳವಾಗಿ ಆತುಕೊಳ್ಳುವದರಿಂದ, ನಿರ್ದಿಷ್ಟವಾದ ಹೆಚ್ಚು-ಅಪಾಯ ಗುಂಪುಗಳಲ್ಲಿ ಯಾರನ್ನೂ, ವಿಶೇಷವಾಗಿ ಸಲಿಂಗಕಾಮಿಗಳನ್ನು ನೋಯಿಸಲು ಅವರು ಹಿಂಜರಿದರು. ರಕ್ತ ದಾನ ಮಾಡಲು ತಮ್ಮನ್ನು ನಿಶೇಧಿಸುವುದು ಅವರ ಪೌರ-ಹಕ್ಕಿನ ಉಲ್ಲಂಘನೆಯೆಂದೂ, ಇನ್ನೊಂದು ಯುಗದ ಕೂಟ-ಶಿಬಿರ ಮನೋವೃತ್ತಿಯ ಸೂಚಕವೆಂದೂ ಕರಾಳ ಎಚ್ಚರಿಕೆ ನೀಡಿದರು, ಸಲಿಂಗಿ-ಹಕ್ಕುಗಳ ಪ್ರತಿಪಾದಕರು.
ದಾನಿಗಳನ್ನು ಕಳಕೊಳ್ಳುವಿಕೆ ಮತ್ತು ಹೊಸ ಹೊಸ ಪರೀಕ್ಷೆಗಳನ್ನು ಕೂಡಿಸುವಿಕೆಗೆ ಖರ್ಚೂ ಹೆಚ್ಚು. 1983ರ ವಸಂತಕಾಲದಲ್ಲಿ, ಸ್ಟಾನ್‌ಫರ್ಡ್ ಯೂನಿರ್ವಸಿಟಿಯ ರಕ್ತ ನಿಧಿಯು, ರಕ್ತದ ಮೇಲೆ ಬದಲೀ ಪರೀಕ್ಷೆಯನ್ನು ಮಾಡಿದ್ದರಲ್ಲಿ ಮೊದಲನೆಯದಾಯಿತು, ಏಯ್ಡ್ಸ್‌ನ ಹೆಚ್ಚು-ಅಪಾಯವಿರುವ ದಾನಿಗಳಿಂದ ಆ ರಕ್ತವು ಬಂದಿದೆಯೇ ಎಂಬದನ್ನು ಸೂಚಿಸುವ ಪರೀಕ್ಷೆಯದು. ಇದು ಅಧಿಕ ರೋಗಿಗಳನ್ನು ಆಕರ್ಷಿಸುವ ವ್ಯಾಪಾರ ಹಂಚಿಕೆ ಎಂದು ಠೀಕಿಸಿದರು ಇತರರ ರಕ್ತ ನಿಧಿಗಳವರು. ಪರೀಕ್ಷೆಗಳು ಬೆಲೆಗಳನ್ನು ಅಧಿಕಗೊಳಿಸುತ್ತವೆಯಷ್ಟೇ. ಆದರೆ, ಯಾರ ಮಗುವಿಗೆ ಅವರಿಗೆ ತಿಳಿಯದಂತೆ ಪೂರಣವು ನೀಡಲ್ಪಟ್ಟಿತ್ತೋ, ಆ ಒಬ್ಬ ದಂಪತಿಗಳು ಹೇಳಿದಂತೆ, ಅಂಥ ಪರೀಕೆಗ್ಷಳಿಗಾಗಿ “ಪೈಂಟಿಗೆ 5 ಡಾಲರುಗಳಷ್ಟು ಹೆಚ್ಚು ಹಣವನ್ನು ನಾವು ಖಂಡಿತವಾಗಿಯೂ ಕೊಡುತ್ತಿದ್ದೆವು.” ಅವರ ಮಗು ಏಯ್ಡ್ಸ್‌ನಿಂದ ಸತ್ತಿತ್ತು.
ಆತ್ಮ ರಕ್ಷಣೆಯ ಭಾಗ
ಕೆಲವು ಪರಿಣಿತರು ಹೇಳುವದೇನಂದರೆ, ರಕ್ತದಲ್ಲಿನ ಅಪಾಯಗಳಿಗೆ ಪ್ರತಿಕ್ರಿಯೆ ತೋರಿಸಲು ರಕ್ತ ನಿಧಿಯವರು ಉದಾಸೀನರಾಗಿರುವದು ಯಾಕೆಂದರೆ ತಮ್ಮ ಸ್ವಂತ ತಪ್ಪುಗಳ ಫಲಿತಾಂಶಕ್ಕಾಗಿ ಅವರಿಗೆ ಉತ್ತರ ಕೊಡಲಿಕ್ಕಿಲ್ಲದಿರುವದೇ. ಉದಾಹರಣೆಗೆ, ದ ಫಿಲೆಡೆಲ್ಪಿಯಾ ಇನ್‌ಕಾಯ್ವರರ್‌ಗೆ ಅನುಸಾರವಾಗಿ, FDA (ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಎಡ್ಮಿನಿಸ್ಟ್ರೇಶನ್), ರಕ್ತ ನಿಧಿಗಳು ತಮ್ಮ ದರ್ಜೆಯನ್ನು ಮುಟ್ಟುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದೆ, ಅದರೆ ಆ ದರ್ಜೆಯನ್ನಿಡುವಂತೆ ರಕ್ತನಿಧಿಗಳ ಮೇಲೆಯೇ ಅದು ಬಲವಾಗಿ ಆತುಕೊಂಡಿರುವಂತೆ ಕಾಣುತ್ತದೆ. ಮತ್ತು FDAಯ ಕೆಲವು ಅಧಿಕಾರಿಗಳು ರಕ್ತ ಕೈಗಾರಿಕೆಯಲ್ಲಿ ಮುಂಚೆ ನಾಯಕರಾಗಿದವ್ದರು. ಹೀಗೆ, ಏಯ್ಡ್ಸ್‌ನ ವಿಷಮಸ್ಥಿತಿಯು ಉಲ್ಬಣಗೊಂಡಂತೆ, ರಕ್ತ ನಿಧಿಗಳ ತನಿಖೆಯ ತೀವ್ರತೆಯು ಕಡಿಮೆ ಆಗತೊಡಗಿತು!
ಅಮೆರಿಕದ ರಕ್ತ ನಿಧಿಗಳು ಕಾನೂನು ಮೊಕದ್ದಮೆಗಳಿಂದ ತಮ್ಮನ್ನು ಸಂರಕ್ಷಿಸಿಕೊಳ್ಳಲು ಒಂದು ಶಾಸನ ರಚನೆಗಾಗಿ ಶಾಸನಸಭೆಯ ಸದಸ್ಯರ ಅಭಿಮತಗಳಿಗಾಗಿ ಕ್ರಮಕೈಗೊಂಡರು. ರಕ್ತವು ಒಂದು ಸೇವೆಯಾಗಿದೆಯೇ ಹೊರತು ಒಂದು ಉತ್ಪಾದನೆಯಲ್ಲ ಎಂದು ಈಗ ಹೆಚ್ಚುಕಡಿಮೆ ಎಲ್ಲಾ ರಾಜ್ಯಗಳಲ್ಲಿನ ಕಾನೂನು ಹೇಳುತ್ತದೆ. ಅದರ ಅರ್ಥ ರಕ್ತ ನಿಧಿಯ ಮೇಲೆ ಮೊಕದ್ದಮೆ ಹೂಡುವ ವ್ಯಕ್ತಿಯೊಬ್ಬನು ನಿಧಿಯ ವತಿಯಿಂದ ಅಲಕ್ಷ್ಯವನ್ನು ರುಜುಪಡಿಸತಕ್ಕದ್ದು—ಇದೊಂದು ಕಷ್ಟಸಾಧ್ಯವಾದ ಕಾನೂನು ಅಡ್ಡಿಯಾಗಿದೆ. ಅಂತಹ ಕಾನೂನುಗಳು ಮೊಕದ್ದಮೆಗಳಿಂದ ರಕ್ತ ನಿಧಿಗಳನ್ನು ಸುರಕ್ಷಿತವನ್ನಾಗಿ ಮಾಡುತ್ತವೆ, ಆದರೆ ರೋಗಿಗಳಿಗೆ ರಕ್ತವನ್ನು ಹೆಚ್ಚು ಸುರಕ್ಷಿತವುಳ್ಳದ್ದಾಗಿ ಮಾಡುವುದಿಲ್ಲ.
ಅರ್ಥತಜ್ಞ ರಾಕ್ ಎಕ್ಕರ್ಟ್ ವಿವೇಚಿಸುವ ಪ್ರಕಾರ, ರಕ್ತ ನಿಧಿಗಳು ತಾವು ಮಾರುವ ರಕ್ತಕ್ಕಾಗಿ ಜವಾಬ್ದಾರರಾಗಿ ಹಿಡಿಯಲ್ಪಟ್ಟಲ್ಲಿ, ಅವರು ಅದರ ಗುಣಮಟ್ಟದ ಖಾತ್ರಿಗಾಗಿ ಹೆಚ್ಚು ದಕ್ಷತೆ ವಹಿಸುವರು. ನಿವೃತ್ತ ರಕ್ತ ನಿಧಿಗಾರ ಏರನ್ ಕೆಲ್ನರ್ ಒಪ್ಪುತ್ತಾರೆ: “ಒಂದು ಚಿಕ್ಕ ಕಾಯಿದೆಯ ರಸತಂತ್ರದಿಂದ, ರಕ್ತವು ಸೇವೆಯಾಗಿ ಪರಿಣಮಿಸಿತು. ಪ್ರತಿಯೊಬ್ಬನೂ ಅದರಿಂದ ಹೊಣೆಮುಕ್ತನು, ಪ್ರತಿಯೊಬ್ಬನು ಅಂದರೆ, ಬಲಿಯಾದ ನಿರಪರಾಧಿ ರೋಗಿಯನ್ನು ಬಿಟ್ಟು ಬೇರೆಲ್ಲರೂ.” ಅವರು ಕೂಡಿಸಿದ್ದು: “ಕಡಿಮೆ ಪಕ್ಷ ನಡೆಯುತ್ತಿರುವ ಅನ್ಯಾಯಕ್ಕೆ ನಾವು ಗಮನ ಸೆಳೆಯಬಹುದಿತ್ತು, ಆದರೆ ನಾವದನ್ನು ಮಾಡಲಿಲ್ಲ. ನಾವು ನಮ್ಮ ಸ್ವಂತ ಆಪತ್ತಿನ ಕುರಿತೇ ಚಿಂತಿಸಿದ್ದೆವು; ರೋಗಿಗಳಿಗಾಗಿ ನಮಗೆ ಗಮನವೆಲ್ಲಿ?”
ಕೊನೆಯ ತೀರ್ಮಾನವು ತಪ್ಪಿಸಿಕೊಳ್ಳಲಾಗದ್ದಾಗಿ ತೋರುತ್ತದೆ. ರಕ್ತ ನಿಧಿ ಕೈಗಾರಿಕೆಯು ತನ್ನ ಉತ್ಪನ್ನಗಳ ಅಪಾಯದಿಂದ ಜನರನ್ನು ರಕ್ಷಿಸುವದಕ್ಕಿಂತ ತನ್ನ ಸ್ವಂತ ಆರ್ಥಿಕ ಲಾಭವನ್ನೇ ಕಾಪಾಡಿಕೊಳ್ಳುವದರಲ್ಲಿ ಎಷ್ಟೋ ಹೆಚ್ಚು ಆಸಕ್ತವಾಗಿದೆ. ‘ಆದರೆ ಈ ಎಲ್ಲಾ ಅಪಾಯಗಳು ನಿಜವಾಗಿ ಲಕ್ಷಿಸಲರ್ಹವೋ?’ ಎಂದು ಕೆಲವರು ಕೇಳಾರು, ‘ರಕ್ತವೊಂದೇ ಜೀವರಕ್ಷಣೆಯ ಶಕ್ಯ ಉಪಚಾರವಾಗಿದ್ದರೆ, ಪ್ರಯೋಜನಗಳು ಅಪಾಯಗಳಿಂತ ಹೆಚ್ಚು ಬೆಲೆಯುಳ್ಳದ್ದಲ್ಲವೇ?’ ಇವು ಒಳ್ಳೇ ಪ್ರಶ್ನೆಗಳು. ಆ ಎಲ್ಲಾ ಪೂರಕಗಳ ಅವಶ್ಯಕತೆಯಾದರೂ ಎಷ್ಟು? (g90 10/22)
[ಪುಟ 9 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಡಾಕ್ಟರರು ತಮ್ಮ ರೋಗಿಗಳ ರಕ್ತದಿಂದ ತಮ್ಮನ್ನು ಕಾಪಾಡಿಕೊಳ್ಳುವದಕ್ಕಾಗಿ ಬಹಳ ಕ್ರಮವನ್ನು ಕೈಕೊಳ್ಳುತ್ತಾರೆ. ಆದರೆ, ರೋಗಿಗಳು ಪೂರಣವಾದ ರಕ್ತದಿಂದ ಸಾಕಷ್ಟು ರಕ್ಷಣೆಯನ್ನು ಪಡೆಯುತ್ತಾರೋ?
[ಪುಟ 8 ರಲ್ಲಿರುವ ಚೌಕ/ಚಿತ್ರಗಳು]
ಪೂರಕ ರಕ್ತ ಮತ್ತು ಕ್ಯಾನ್ಸರ್
ಪೂರಕ ರಕ್ತವು ರೋಗ ರಕ್ಷೆಯ ವ್ಯವಸ್ಥೆಯನ್ನು ನಿರೋಧಿಸಬಲ್ಲದು ಮತ್ತು ಆ ನಿರೋಧಿತ ರೋಗ ರಕ್ಷೆ, ಕಾನ್ಸರ್ ಶಸ್ತ್ರಕ್ರಿಯೆಯಾದ ರೋಗಿಗಳ ಪಾರಾಗುವ ಪ್ರಮಾಣವನ್ನು ಪ್ರತಿಕೂಲವಾಗಿ ಪ್ರಭಾವಿಸುತ್ತದೆ. ಕ್ಯಾನ್ಸರ್ ಪತ್ರಿಕೆಯ ಫೆಬ್ರವರಿ 15, 1987ರ ಸಂಚಿಕೆಯು, ನೆದರ್ಲೆಂಡ್ಸ್‌ನಲ್ಲಿ ನಡೆಸಿದ ಒಂದು ಅಧ್ಯಯನದ ಸಮಾಚಾರವನ್ನು ವರದಿಸಿತ್ತು. “ದೊಡ್ಡ ಕರುಳಿನ ಕ್ಯಾನ್ಸರ್ ರೋಗಿಗಳಲ್ಲಿ,” ಪತ್ರಿಕೆಯು ಹೇಳಿದ್ದು, “ದೀರ್ಘಕಾಲ ಜೀವಿಸುವಿಕೆಯ ಮೇಲೆ ರಕ್ತಪೂರಣದ ಪ್ರತಿಕೂಲ ಪರಿಣಾಮವು ಗಮನಾರ್ಹವಾಗಿ ತೋರಿಬಂತು. ಈ ಗುಂಪಿನಲ್ಲಿ ಒಟ್ಟು ಐದು ವರ್ಷದ ತನಕ ಜೀವಿಸಿದವರಲ್ಲಿ, ಪೂರಕವಾದ ರೋಗಿಗಳು 48% ಮತ್ತು ಪೂರಕವಾಗದವರು 74% ಮಂದಿ.”
ಕ್ಯಾನ್ಸರ್ ಸರ್ಜರಿಯಾದ ರೋಗಿಗಳು ರಕ್ತಪೂರಕ ತಕ್ಕೊಂಡಿದ್ದರೆ, ಅವರಲ್ಲಿ ಹೆಚ್ಚಿನವರಿಗೆ ಕ್ಯಾನ್ಸರ್ ಪುನಃ ಸಂಭವಿಸುವ ಶಕ್ಯತೆ ಇದೆಂಬದಾಗಿ ಯೂನಿರ್ವಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯದ ಚಿಕಿತ್ಸಕರು ಕೂಡಾ ಕಂಡುಕೊಂಡಿದ್ದಾರೆ. ಮಾರ್ಚ್ 1989ರ ದ ಆನಲ್ಸ್ ಆಫ್ ಒಟೋಲಜಿ, ರೈನಾಲಜಿ ಆ್ಯಂಡ್ ಲಾರಿಂಗಾಲಜಿ, ಈ ಚಿಕಿತ್ಸಕರು ಸುಮಾರು ನೂರು ರೋಗಿಗಳನ್ನು ಅನುಸರಿಸಿ ನಡಿಸಿದ ಅಧ್ಯಯನವನ್ನು ವರದಿಸುತ್ತಾ, ಅಂದದ್ದು: “ಕಂಠನಾಳದ ಎಲ್ಲಾ ಕ್ಯಾನ್ಸರ್‌ಗಳಲ್ಲಿ ಮರುಸಂಭವಿಸುವ ಪ್ರಮಾಣವು ರಕ್ತ ತಕ್ಕೊಳ್ಳದವರಲ್ಲಿ 14% ಮತ್ತು ರಕ್ತ ತಕ್ಕೊಂಡವರಲ್ಲಿ 65%. ಬಾಯಿಸಂಧಿನ, ಗಂಟಲಿನ, ಮೂಗು ಅಥವಾ ಕುಳಿಯ ಕ್ಯಾನ್ಸರುಗಳಲ್ಲಿ, ಪೂರಕವಿಲ್ಲದವರಲ್ಲಿ 31% ಮತ್ತು ಪೂರಕವಾದವರಲ್ಲಿ 71% ಅದು ಮರುಸಂಭವಿಸುತ್ತದೆ.”
“ಬ್ಲಡ್ ಟ್ರಾನ್ಸ್‌ಫ್ಯೂಶನ್ಸ್ ಆ್ಯಂಡ್ ಸರ್ಜರಿ ಫಾರ್ ಕ್ಯಾನ್ಸರ್” ಎಂಬ ತನ್ನ ಪುಸ್ತಕದಲ್ಲಿ ಡಾ. ಜೋನ್ ಎಸ್. ಸ್ಪ್ರೇಟ್ ತೀರ್ಮಾನಿಸಿದ್ದು: “ಕ್ಯಾನ್ಸರ್ ಸರ್ಜನನು ಅರಕ್ತ ಸರ್ಜನನಾಗಿ ಪರಿಣಮಿಸುವ ಅಗತ್ಯ ಬರಲೂಬಹುದು.”—ದ ಅಮೆರಿಕನ್ ಜರ್ನಲ್ ಆಫ್ ಸರ್ಜರಿ, ಸಪ್ಟಂಬರ 1986.
[ಕೃಪೆ]
CDC, Atlanta, Ga.
[ಪುಟ 11ರಲ್ಲಿರುವಚೌಕ]
ರಕ್ತವು ಇಂದು ಏಡ್ಸ್‌ನಿಂದ ಸುರಕ್ಷಿತವೋ?
“ಅದು ರಕ್ತಮಯ ಶುಭವಾರ್ತೆ” ಎಂದು ಘೋಷಿಸಿತು ನ್ಯೂ ಯೋರ್ಕ್ ಡೈಲೀ ನ್ಯೂಸ್ ತಲೇಪಂಕ್ತಿ, ತನ್ನ ಒಕ್ಟೋಬರ 5, 1989ರ ಸಂಚಿಕೆಯಲ್ಲಿ. ರಕ್ತ ಪೂರಣದಿಂದ ಏಯ್ಡ್ಸ್ ಪಡೆಯುವ ಸಂದರ್ಭವು 28,000 ದಲ್ಲಿ ಒಂದು ಎಂಬದಾಗಿ ಲೇಖನವು ವರದಿ ಮಾಡಿತ್ತು. ರಕ್ತ ಸರಬರಾಯಿಯಿಂದ ಈ ರೋಗ ಸೋಂಕನ್ನು ಹೊರಗಿಡುವ ಕಾರ್ಯವಿಧಾನವು, ಅದು ಹೇಳಿದ್ದು, ಈಗ 99.9 ಪ್ರತಿಶತ ಪರಿಣಾಮಕಾರಿ.
ತದ್ರೀತಿಯ ಖಂಡಿತಭಾವವು ರಕ್ತ ನಿಧಿ ಕೈಗಾರಿಕೆಯನ್ನು ಆಳುತ್ತಿದೆ. ‘ರಕ್ತ ಸರಬರಾಯಿ ಎಂದಿಗಿಂತಲೂ ಹೆಚ್ಚು ಸುರಕ್ಷಿತ’ ಎಂದವರ ವಾದ. ರಕ್ತದಿಂದ ಏಯ್ಡ್ಸ್‌ನ್ನು ಪಡೆಯುವ ಅಪಾಯವು “ಪೂರಾರೀತಿಯಲ್ಲಿ ನಿರ್ಮೂಲವಾಗಿದೆ” ಎಂದರು ಅಮೆರಿಕದ ರಕ್ತ ನಿಧಿಗಳ ಸಂಘದ ಅಧ್ಯಕ್ಷರು. ಆದರೆ, ರಕ್ತವು ಸುರಕ್ಷಿತವಿದ್ದರೆ, ಕೋರ್ಟುಗಳು ಮತ್ತು ಚಿಕಿತ್ಸಕರು ಇಬ್ಬರೂ ಅದಕ್ಕೆ “ವಿಷಕಾರಿ” ಮತ್ತು “ತಪ್ಪಿಸಲಾರದ ಅಸುರಕ್ಷಿತತೆ” ಎಂಬ ಚೀಟನ್ನು ಹೊಡೆದಿರುವದೇಕೆ? ಕೆಲವು ಡಾಕ್ಟರುಗಳು ಶಸ್ತ್ರಕ್ರಿಯೆ ನಡಿಸುವಾಗ ರಕ್ತದ ಎಲ್ಲಾ ಸಂಪರ್ಕದಿಂದ ದೂರವಿರಲಿಕ್ಕಾಗಿ, ಮುಖವಾಡ ಮತ್ತು ಈಜುಬೂಟಿನಿಂದ ಸಜ್ಜಿತವಾದ ವ್ಯೋಮ ಸೂಟಿನಂಥ ಅಂಗಿಯನ್ನು ಧರಿಸುವದೇಕೆ? ರಕ್ತಪೂರಕಗಳ ಅಪಾಯಕಾರಿ ಪರಿಣಾಮಗಳಿಗಾಗಿ ತಮ್ಮ ಹೊಣೆಯನ್ನು ತಪ್ಪಿಸುವ ಒಪ್ಪಿಗೆಯ ಪತ್ರಕ್ಕೆ ಸಹಿಹಾಕಲು ಅಷ್ಟು ಆಸ್ಪತ್ರೆಗಳು ರೋಗಿಗಳನ್ನು ಕೇಳುವದೇಕೆ? ಏಯ್ಡ್ಸ್‌ನಂಥ ರೋಗಗಳಿಂದ ರಕ್ತವು ನಿಜವಾಗಿಯೂ ಸುರಕ್ಷಿತವೋ?
ರಕ್ತವನ್ನು ರಕ್ಷಿಸಲು ಉಪಯೋಗಿಸುವ ಎರಡು ಕಾರ್ಯಗತಿಯ ಮೇಲೆ ಸುರಕ್ಷೆಯು ಆತುಕೊಂಡಿದೆ: ಅದನ್ನು ನೀಡುವ ದಾನಿಗಳನ್ನು ಪರೀಕ್ಷೆ ಮಾಡುವದು ಮತ್ತು ರಕ್ತವನ್ನು ಸಹಾ ಪರೀಕ್ಷೆ ಮಾಡುವದು. ಯಾರ ಜೀವನ ಕ್ರಮವು ಅವರನ್ನು ಏಯ್ಡ್ಸ್‌ನ ಹೆಚ್ಚು ಅಪಾಯದ ಗುಂಪಿಗೆ ಹಾಕುತ್ತದೋ ಅಂಥ ರಕ್ತದಾನಿಗಳನ್ನು ಪರೀಕ್ಷೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಿದಾಗ್ಯೂ, ಪರೀಕ್ಷೆಯಿಂದ ತಪ್ಪಿಸುವವರು ಕೆಲವರು ಇನ್ನೂ ಇದ್ದಾರೆ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಕೇಳುವ ಪ್ರಶ್ನೆಗಳಿಗೆ ಅವರು ತಪ್ಪು ಉತ್ತರಗಳನ್ನು ಕೊಟ್ಟು, ರಕ್ತ ದಾನ ಮಾಡುತ್ತಾರೆ. ಕೆಲವರು ಕೇವಲ ತಮಗೆ ಆ ರೋಗ ಸೋಂಕಿದೆಯೇ ಎಂದು ಗುಟ್ಟಿನಲ್ಲಿ ತಿಳುಕೊಳ್ಳ ಬಯಸುತ್ತಾರೆ ಅಷ್ಟೇ.
ರಕ್ತ ನಿಧಿಗಳು 1985ರಲ್ಲಿ, ಏಯ್ಡ್ಸ್ ರೋಗವನ್ನು ಹೋರಾಡಲು ದೇಹವು ಉತ್ಪಾದಿಸುವ ಪ್ರತಿವಿಷವಸ್ತುಗಳಿಗಾಗಿ ರಕ್ತವನ್ನು ಪರೀಕ್ಷೆ ಮಾಡಲು ತೊಡಗಿದರು. ಈ ಪರೀಕ್ಷೆಯ ಸಮಸ್ಯೆ ಏನಂದರೆ, ಅದು ಗುರುತಿಸುವ ಯಾವುದೇ ಪ್ರತಿವಿಷಗಳು ವಿಕಸಿಸುವ ಕೆಲವು ಕಾಲ ಮುಂಚೆಯೇ ವ್ಯಕ್ತಿಯೊಬ್ಬನು ಏಯ್ಡ್ಸ್‌ನಿಂದ ಸೋಂಕಿತನಾಗ ಸಾಧ್ಯವಿದೆ. ಈ ನಿರ್ಣಾಯಕ ಅಂತರವನ್ನು ವಿಂಡೋ ಅವಧಿ ಎಂದು ಕರೆಯುತ್ತಾರೆ.
ರಕ್ತ ಪೂರಣದಿಂದ ಏಯ್ಡ್ಸ್ ಪಡೆಯುವ ಸಂದರ್ಭ 28,000ದಲ್ಲಿ ಒಂದು ಎಂಬ ವಿಚಾರವು ಬಂದದ್ದು, ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟ ಒಂದು ಅಧ್ಯಯನದಿಂದ. ಹೆಚ್ಚು ಸಂಭಾವ್ಯವಾದ ವಿಂಡೋ ಅವಧಿಯು ಸರಾಸರಿ ಎಂಟು ವಾರಗಳಷ್ಟು ಇದೆ ಎಂದು ಆ ಪತ್ರಿಕೆಯು ವಿಧಿಸಿತ್ತು. ಜೂನ್ 1989ರಲ್ಲಿ ಅದೇ ಪತ್ರಿಕೆಯು, ವಿಂಡೋ ಅವಧಿಯು ಹೆಚ್ಚು ದೀರ್ಘಕಾಲ—ಮೂರು ವರ್ಷಗಳು ಅಥವಾ ಹೆಚ್ಚಾಗಿರಲೂ ಬಹುದೆಂಬ ಅಧ್ಯಯನವನ್ನು ಪ್ರಕಟಿಸಿತು. ಈ ಆರಂಭದ ಅಧ್ಯಯನವು, ಅಂಥ ದೀರ್ಘ ವಿಂಡೋ ಅವಧಿಗಳು ಒಮ್ಮೆ ನೆನಸಿದ್ದಕ್ಕಿಂತಲೂ ಹೆಚ್ಚು ಸರ್ವ ಸಾಮಾನ್ಯವಾಗಿವೆ ಎಂದು ಸೂಚಿಸಿತು, ಮಾತ್ರವಲ್ಲದೆ, ಕೆಲವು ಸೋಂಕಿತ ವ್ಯಕ್ತಿಗಳು ರೋಗಕ್ಕೆ ಪ್ರತಿವಿಷವನ್ನು ಎಂದೂ ಉತ್ಪಾದಿಸದೇ ಇರಬಹುದು ಎಂದೂ ಹೇಳಿದೆ! ಆದರೂ, ಹೆಚ್ಚು ಖಂಡಿತವಾದ ಅಧ್ಯಯನವು ಈ ಸಂಶೋಧನೆಗಳನ್ನು “ಚೆನ್ನಾಗಿ ತಿಳುಕೊಳ್ಳಲಾಗುವದಿಲ್ಲ” ಎಂದು ಕರೆಯುತ್ತಾ, ಸಂಘೀಕರಿಸಿರುವದಿಲ್ಲ.
ಏಯ್ಡ್ಸ್‌ನ ವಿಷಯದಲ್ಲಿ ಪ್ರೆಸಿಡೆನ್‌ಶ್ಯಲ್ ಕಮಿಶನಿನ ಡಾ. ಕಾರಿ ಸರಾಸ್ವ್ ಹೀಗಂದದರಲ್ಲಿ ಆಶ್ಚರ್ಯವಿಲ್ಲ: “ರಕ್ತ ಸರಬರಾಯಿ ಬಹಳಷ್ಟು ಸುರಕ್ಷಿತ ಎಂದು ರಕ್ತ ನಿಧಿಗಳು ಸಾರ್ವಜನಿಕರಿಗೆ ಹೇಳುತ್ತಾ ಇರಬಹುದು, ಆದರೆ ಸಾರ್ವಜನಿಕರು ಅದನ್ನು ಇನ್ನು ಮುಂದೆ ಅಂಗೀಕರಿಸರು ಯಾಕೆಂದರೆ ಅದು ಸತ್ಯವಲ್ಲವೆಂದು ಅವರಿಗೆ ಗೊತ್ತು.”
[ಪುಟ 10 ರಲ್ಲಿರುವಚಿತ್ರ]
ರಕ್ತವು ಜೀವರಕ್ಷಕ ಮದ್ದು ಎಂಬದು ವಾದಾಸ್ಪದ, ಆದರೆ ಅದು ಜನರನ್ನು ಕೊಲ್ಲುತ್ತದೆ ಎಂಬದು ಅಲ್ಲ