ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಜೂನ್‌ ಪು. 14-19
  • ಕ್ಷೇತ್ರ ಸೇವಾ ಗುಂಪಿಂದ ಏನು ಪ್ರಯೋಜ್ನ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ಷೇತ್ರ ಸೇವಾ ಗುಂಪಿಂದ ಏನು ಪ್ರಯೋಜ್ನ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಗುಂಪು ಮೇಲ್ವಿಚಾರಕ ಮತ್ತು ಸಹಾಯಕನ ಜವಾಬ್ದಾರಿ
  • ಗುಂಪಿಗೆ ಬೆಂಬಲ ಕೊಡಿ
  • ನಿಮಗೆ ಸಿಗೋ ಪ್ರಯೋಜನ
  • ಕ್ಷೇತ್ರ ಸೇವಾ ಗುಂಪಿನಿಂದ ಪ್ರಯೋಜನ ಪಡೆಯಿರಿ
    2012 ನಮ್ಮ ರಾಜ್ಯದ ಸೇವೆ
  • ಕ್ಷೇತ್ರ ಸೇವೆಗಾಗಿ ಕೂಟಗಳು
    2009 ನಮ್ಮ ರಾಜ್ಯದ ಸೇವೆ
  • ಸಮಯೋಚಿತ ಸಹಾಯವು
    1990 ನಮ್ಮ ರಾಜ್ಯದ ಸೇವೆ
  • ಸಭೆಯನ್ನು ಪರಿಪಾಲಿಸುವ ಮೇಲ್ವಿಚಾರಕರು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಜೂನ್‌ ಪು. 14-19

ಆಗಸ್ಟ್‌ 24-30, 2026

ಗೀತೆ 65 ಮುನ್ನಡೆ ಮುನ್ನಡೆ

ಕ್ಷೇತ್ರ ಸೇವಾ ಗುಂಪಿಂದ ಏನು ಪ್ರಯೋಜ್ನ?

“ನಾನು ನನ್ನ ಪೂರ್ತಿ ಹೃದಯದಿಂದ ಯೆಹೋವನನ್ನ ಸ್ತುತಿಸ್ತೀನಿ, ನೀತಿವಂತರು ಸೇರಿ ಬರೋ ಸಭೆಯಲ್ಲಿ ಹೊಗಳ್ತೀನಿ.”—ಕೀರ್ತ. 111:1.

ಈ ಲೇಖನದಲ್ಲಿ ಏನಿದೆ?

ಕ್ಷೇತ್ರ ಸೇವಾ ಗುಂಪಿಂದ ಏನೆಲ್ಲಾ ಪ್ರಯೋಜ್ನ ಇದೆ ಅಂತ ತಿಳ್ಕೊಳ್ಳೋಣ.

1-2. ಕ್ಷೇತ್ರ ಸೇವಾ ಗುಂಪಿನ ಬಗ್ಗೆ ಕೆಲವ್ರಿಗೆ ಹೇಗೆ ಅನಿಸುತ್ತೆ?

ನೀವು ಪ್ರಚಾರಕರಾದ ದಿನ ನಿಮಗೆ ನೆನಪಿದ್ಯಾ? ಆ ದಿನ ನಿಮಗೆ ಎಷ್ಟು ಖುಷಿ ಆಗಿತ್ತು ಅಲ್ವಾ? ಅವತ್ತು ನೀವು ಯೆಹೋವನನ್ನ ಹಾಡಿ ಹೊಗಳೋ ಮತ್ತು ಆತನನ್ನ ಮನಸಾರೆ ಆರಾಧಿಸೋ ಒಂದು ದೊಡ್ಡ ಗುಂಪಿನ ಭಾಗ ಆದ್ರಿ. (ಕೀರ್ತ. 148:1, 2, 12, 13) ಅಷ್ಟೇ ಅಲ್ಲ, ಅವತ್ತು ನೀವು ಒಂದು ಚಿಕ್ಕ ಗುಂಪಿನ ಭಾಗ ಕೂಡ ಆಗಿರ್ತೀರ. ಅದು ಯಾವ ಗುಂಪು? ಕ್ಷೇತ್ರ ಸೇವಾ ಗುಂಪು! ಇದ್ರಲ್ಲಿ ಕೆಲವೇ ಸಹೋದರ ಸಹೋದರಿಯರು ಇರ್ತಾರೆ. ಯೇಸು ಭೂಮಿಲ್ಲಿದ್ದಾಗ, “ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ದೇಶಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ” ಅಂತ ತಿಳಿಸಿದನು. ಈ ಮಾತು ನಿಜ ಆಗೋ ತರ ಮಾಡೋದ್ರಲ್ಲಿ ಕ್ಷೇತ್ರ ಸೇವಾ ಗುಂಪು ಮುಖ್ಯ ಪಾತ್ರವಹಿಸುತ್ತೆ.—ಮತ್ತಾ. 24:14.

2 ಕ್ಷೇತ್ರ ಸೇವಾ ಗುಂಪಿನ ಏರ್ಪಾಡಿನ ಬಗ್ಗೆ ನಿಮಗೇನು ಅನಿಸುತ್ತೆ? ವೆಂಡಿa ಅನ್ನೋ ಸಹೋದರಿ ಹೇಳೋದು, “ಈ ಏರ್ಪಾಡಿಂದ ನಾನು ಚೆನ್ನಾಗಿ ಸಿಹಿಸುದ್ದಿ ಸಾರೋಕೆ ಮತ್ತು ಕಲಿಸೋಕೆ ಕಲ್ತಿದ್ದೀನಿ. ಹೊಸಹೊಸ ಕೌಶಲ್ಯಗಳನ್ನ ಬೆಳೆಸ್ಕೊಂಡಿದ್ದೀನಿ, ಒಳ್ಳೊಳ್ಳೆ ಆಧ್ಯಾತ್ಮಿಕ ಗುರಿಗಳನ್ನ ಇಟ್ಟು ಅದನ್ನ ಮುಟ್ಟೋಕೂ ಇದು ಸಹಾಯ ಮಾಡಿದೆ. ಈ ಏರ್ಪಾಡಿಂದ ಜೀವನ ಪೂರ್ತಿ ನಿಯತ್ತಾಗಿರೋ ಎಷ್ಟೋ ಒಳ್ಳೆ ಸ್ನೇಹಿತ್ರನ್ನ ನಾನು ಮಾಡ್ಕೊಂಡಿದ್ದೀನಿ.” ರಿಚ್‌ ಅನ್ನೋ ಸಹೋದರ ಹೇಳೋದು, “ನಂಗೆ ಗುಂಪು ಮೇಲ್ವಿಚಾರಕನಾಗಿ ಕೆಲಸ ಮಾಡೋಕೆ ಅವಕಾಶ ಸಿಕ್ಕಿರೋದು ದೊಡ್ಡ ಸುಯೋಗ ಅಂತ ಭಾವಿಸ್ತೀನಿ. ಪ್ರಚಾರಕರಿಗೆ ಒಬ್ಬ ವ್ಯಕ್ತಿ ದೀಕ್ಷಾಸ್ನಾನ ತಗೊಳೋಕೆ ಸಹಾಯ ಮಾಡೋ ಅವಕಾಶ ಸಿಗುತ್ತೆ. ಆದ್ರೆ ಗುಂಪು ಮೇಲ್ವಿಚಾರಕನಿಗೆ, ದೀಕ್ಷಾಸ್ನಾನ ತಗೊಂಡ ಆ ವ್ಯಕ್ತಿ ಯೆಹೋವನಿಗೆ ನಿಯತ್ತಾಗಿರೋಕೆ, ಆಧ್ಯಾತ್ಮಿಕವಾಗಿ ಪ್ರಗತಿ ಮಾಡೋಕೆ ಸಹಾಯ ಮಾಡೋ ವಿಶೇಷ ಅವಕಾಶಗಳು ಸಿಗುತ್ತೆ.” ಡೈನಾ ಅನ್ನೋ ಒಬ್ಬ ಸಹೋದರಿ ಹೇಳೋದು, “ಈ ಏರ್ಪಾಡು ನಿಜಕ್ಕೂ ಒಂದು ದೊಡ್ಡ ವರ. ನಮ್ಮ ಗುಂಪಲ್ಲಿರೋ ಸದಸ್ಯರೆಲ್ಲ ನನ್ನ ಕುಟುಂಬನೇ!”

3. ಈ ಲೇಖನದಲ್ಲಿ ನಾವು ಏನು ಕಲಿತೀವಿ?

3 ಈ ಲೇಖನದಲ್ಲಿ, ಗುಂಪು ಮೇಲ್ವಿಚಾರಕ ಮತ್ತು ಅವನ ಸಹಾಯಕನಿಗೆ ಯಾವೆಲ್ಲಾ ಜವಾಬ್ದಾರಿ ಇದೆ, ಅವರು ಏನೆಲ್ಲ ಕೆಲಸ ಮಾಡ್ತಾರೆ ಅಂತ ನೋಡೋಣ. ನಾವು ಈ ಏರ್ಪಾಡಿಗೆ ಹೇಗೆ ಬೆಂಬಲ ಕೊಡಬಹುದು ಅಂತ ತಿಳ್ಕೊಳ್ಳೋಣ. ಅಷ್ಟೇ ಅಲ್ಲ, ಈ ಏರ್ಪಾಡಿಂದ ನಮಗೆ ಯಾವೆಲ್ಲ ಪ್ರಯೋಜ್ನ ಇದೆ ಅಂತಾನೂ ಕಲಿಯೋಣ.

ಗುಂಪು ಮೇಲ್ವಿಚಾರಕ ಮತ್ತು ಸಹಾಯಕನ ಜವಾಬ್ದಾರಿ

4. (ಎ) ಗುಂಪು ಮೇಲ್ವಿಚಾರಕನ ಮುಖ್ಯ ಜವಾಬ್ದಾರಿ ಏನು? (ಬಿ) ತನ್ನ ಗುಂಪಿನಲ್ಲಿರೋ ಪ್ರತಿಯೊಬ್ರಿಗೂ ಮೇಲ್ವಿಚಾರಕ ಹೇಗೆ ಕಾಳಜಿ ತೋರಿಸ್ತಾನೆ (“ಗುಂಪು ಮೇಲ್ವಿಚಾರಕನಿಗೆ ಕಿವಿಮಾತು” ಅನ್ನೋ ಚೌಕ ನೋಡಿ.)

4 ಒಬ್ಬ ಹಿರಿಯb ಗುಂಪು ಮೇಲ್ವಿಚಾರಕನಾಗಿ ಇರ್ತಾನೆ. ಈ ಮೇಲ್ವಿಚಾರಕನನ್ನ, ಹಿರಿಯ ಮಂಡಲಿ ಆಯ್ಕೆ ಮಾಡಿರುತ್ತೆ. ಈ ಮೇಲ್ವಿಚಾರಕನ ಮುಖ್ಯ ಜವಾಬ್ದಾರಿ ತನ್ನ ಗುಂಪಲ್ಲಿರೋ ಪ್ರತಿಯೊಬ್ರು ಯೆಹೋವನಿಗೆ ಹತ್ರ ಆಗೋಕೆ, ಆತನ ಸೇವೆ ಜಾಸ್ತಿ ಮಾಡೋಕೆ ಸಹಾಯ ಮಾಡೋದೇ ಆಗಿದೆ. ಆದ್ರೆ ಇದನ್ನ ಅವನು ಹೇಗೆ ಮಾಡ್ತಾನೆ? ಒಂದು, ತನ್ನ ಗುಂಪಲ್ಲಿರೋ ಪ್ರತಿಯೊಬ್ರ ಮೇಲೂ ನಿಜವಾದ ಆಸಕ್ತಿಯನ್ನ ತೋರಿಸ್ತಾನೆ. (ಜ್ಞಾನೋ. 27:23) ಕಾಳಜಿ ತೋರಿಸೋ ಕುರುಬನ ತರ ನಡ್ಕೊತಾನೆ. ಪ್ರತಿಯೊಬ್ರ ಜೊತೆನೂ ಆಗಾಗ ಮಾತಾಡ್ತಾ ಇರ್ತಾನೆ. ಇದ್ರಿಂದ ಆ ಗುಂಪಲ್ಲಿರೋ ಪ್ರಚಾರಕರು ಆಧ್ಯಾತ್ಮಿಕವಾಗಿ, ಭಾವನಾತ್ಮಕವಾಗಿ ಹೇಗಿದ್ದಾರೆ ಅಂತ ತಿಳ್ಕೊತಾನೆ. ಅವ್ರಿಗೆ ಏನಾದ್ರೂ ಸಹಾಯ ಬೇಕಿದ್ಯಾ ಅಂತ ನೋಡ್ಕೊಂಡು ಅದನ್ನ ಮಾಡ್ತಾನೆ. (ಜ್ಞಾನೋ. 12:25; ಯೆಶಾ. 32:2; ಯಾಕೋ. 2:15-17) ಎರಡು, ತನ್ನ ಗುಂಪಲ್ಲಿರೋ ಪ್ರತಿಯೊಬ್ರು ಚೆನ್ನಾಗಿ ಸಿಹಿಸುದ್ದಿ ಸಾರೋಕೆ ಸಹಾಯ ಮಾಡ್ತಾನೆ. ಪ್ರತಿ ವಾರ ಟೈಮ್‌ ಮಾಡ್ಕೊಂಡು ತನ್ನ ಗುಂಪಿನ ಜೊತೆ ಹುರುಪಿಂದ ಸಿಹಿಸುದ್ದಿ ಸಾರ್ತಾನೆ. ಪ್ರತಿಯೊಬ್ರ ಜೊತೆನೂ ಸಿಹಿಸುದ್ದಿ ಸಾರುತ್ತಾ ಬೇರೆಯವ್ರಿಗೆ ಮಾದರಿ ಆಗಿರ್ತಾನೆ. ಅಷ್ಟೇ ಅಲ್ಲ, ಅವ್ರಿಗೆ ಬೇಕಿರೋ ಪ್ರೋತ್ಸಾಹ ಮತ್ತು ತರಬೇತಿಯನ್ನೂ ಕೊಡ್ತಾನೆ. ಒಂದುವೇಳೆ ಯಾವಾಗಾದ್ರೂ ಕೂಟಕ್ಕೆ ಬರಲು ಆಗದೆ ಹೋದ್ರೆ ತನ್ನ ಸಹಾಯಕ ಅಥವಾ ಬೇರೆ ಅರ್ಹ ಪ್ರಚಾರಕ ಗುಂಪನ್ನ ನೋಡ್ಕೊಳ್ಳೋ ಏರ್ಪಾಡು ಮಾಡ್ತಾನೆ. ಮೂರು, ದೀಕ್ಷಾಸ್ನಾನ ತಗೊಂಡಿರೋ ಸಹೋದರರು ಮುಂದೆ ಸಭೆಯಲ್ಲಿ ಹೆಚ್ಚಿನ ಜವಾಬ್ದಾರಿ ತಗೊಳ್ಳೋಕೆ ತರಬೇತಿ ಕೊಡ್ತಾನೆ. (1 ತಿಮೊ. 3:1) ಆ ಸಹೋದರರು ಮಾಡ್ತಿರೋ ಒಳ್ಳೆ ಕೆಲಸಗಳನ್ನ ಗಮನಿಸಿ ಅವ್ರನ್ನ ಮೆಚ್ಕೊಳ್ತಾನೆ. ಅವ್ರಿಗೆ ಸಲಹೆ ಬೇಕಿದ್ದಾಗ ಬೈಬಲನ್ನ ಬಳಸಿ ಸಲಹೆ ಕೊಡ್ತಾನೆ. ಹೀಗೆ ಚೆನ್ನಾಗಿ ತರಬೇತಿ ಕೊಡೋದ್ರಿಂದ ಅವರು ಮುಂದೆ ಹಿರಿಯರಾಗೋಕೆ ಅಥವಾ ಸಹಾಯಕ ಸೇವಕರಾಗೋಕೆ ಸಹಾಯ ಆಗುತ್ತೆ. ಗುಂಪು ಮೇಲ್ವಿಚಾರಕನಿಗೆ ಎಷ್ಟೊಂದು ಜವಾಬ್ದಾರಿ ಇದೆ ಅಲ್ವಾ! ಹಾಗಾಗಿ ಹಿರಿಯ ಮಂಡಲಿ ಈ ಎಲ್ಲ ಅಂಶಗಳನ್ನ ತೂಗಿ ನೋಡಿ, ಯಾರು ಈ ಎಲ್ಲ ಕೆಲಸನ ಚೆನ್ನಾಗಿ ಮಾಡೋಕೆ ಆಗುತ್ತೋ ಅಂಥವ್ರನ್ನ ಗುಂಪು ಮೇಲ್ವಿಚಾರಕರಾಗಿ ಆಯ್ಕೆ ಮಾಡ್ತಾರೆ.

ಗುಂಪು ಮೇಲ್ವಿಚಾರಕನಿಗೆ ಕಿವಿಮಾತು

  • ಕ್ಷೇತ್ರ ಸೇವಾ ಕೂಟ ಚುಟುಕಾಗಿ ಇರಲಿ. 7 ನಿಮಿಷಕ್ಕಿಂತ ಜಾಸ್ತಿ ಆಗದಂತೆ ನೋಡ್ಕೊಳ್ಳಿ. ಹೀಗೆ ಮಾಡಿದ್ರೆ ಪ್ರಚಾರಕರು ಸಿಹಿಸುದ್ದಿ ಸಾರೋಕೆ ಬೇಗ ಹೋಗೋಕಾಗುತ್ತೆ.

  • ನಿಮ್ಮ ಗುಂಪಲ್ಲಿರೋ ಪ್ರತಿಯೊಬ್ರ ಜೊತೆನೂ ಸಿಹಿಸುದ್ದಿ ಸಾರೋಕೆ ಕೈಲಾದ ಪ್ರಯತ್ನ ಮಾಡಿ. ಯಾರು ಕ್ರಮವಾಗಿ ಕ್ಷೇತ್ರ ಸೇವಾ ಕೂಟಕ್ಕೆ ಬರಲ್ವೋ ಅವ್ರ ಜೊತೆನೂ ಸಿಹಿಸುದ್ದಿ ಸಾರೋಕೆ ಪ್ರಯತ್ನ ಮಾಡಿ. ಬೇಕಿದ್ರೆ ನೀವು ಅವ್ರ ಜೊತೆ ಬೇರೆ ದಿನ ಅಥವಾ ಸಾಯಂಕಾಲ ಸೇವೆಗೆ ಹೋಗಬಹುದು.

  • ಆಗಿಂದಾಗ್ಗೆ ಪರಿಪಾಲನೆ ಭೇಟಿಗಳನ್ನ ಮಿಸ್‌ ಮಾಡದೇ ಮಾಡಿ. ಈ ಪರಿಪಾಲನಾ ಭೇಟಿಗಳನ್ನ ಪ್ರಚಾರಕರ ಮನೆಯಲ್ಲಿ, ರಾಜ್ಯ ಸಭಾಗೃಹದಲ್ಲಿ ಅಥವಾ ಅನುಕೂಲವಾದ ಬೇರೆ ಸ್ಥಳಗಳಲ್ಲೂ ಮಾಡಬಹುದು. ಅಷ್ಟೇ ಅಲ್ಲ, ಟೆಲಿಫೋನ್‌ ಮೂಲಕ ಮತ್ತು ಪತ್ರ ಬರೆಯೋ ಮೂಲಕನೂ ಪರಿಪಾಲನಾ ಭೇಟಿ ಮಾಡಬಹುದು.

  • ತಮ್ಮ ಸಾಮರ್ಥ್ಯವನ್ನ ಪೂರ್ತಿ ಬಳಸಿ ಯೆಹೋವನ ಸೇವೆ ಮಾಡೋಕೆ ಸಹೋದರರಿಗೆ ತರಬೇತಿ ಕೊಡಿ. ನೀವು ಹೀಗೆ ಮಾಡಿದ್ರೆ ಅವರು ಮುಂದೆ ಹೆಚ್ಚಿನ ಜವಾಬ್ದಾರಿಗಳನ್ನ ಪಡ್ಕೊಳ್ಳೋಕೆ ಅರ್ಹರಾಗ್ತಾರೆ.

  • ನಿಮ್ಮ ಗುಂಪು ಬೇರೆ ಗುಂಪಿನ ಜೊತೆ ಸೇರಿ ಕೆಲವೊಮ್ಮೆ ಕ್ಷೇತ್ರ ಸೇವಾ ಕೂಟ ನಡೆಸಬಹುದು. ಆಗ್ಲೂ ನೀವು ನಿಮ್ಮ ಗುಂಪಿನವ್ರ ಜೊತೆ ಸೇರಿ ಸೇವೆ ಮಾಡೋಕೆ ಪ್ಲಾನ್‌ ಮಾಡಿ.

5. ಗುಂಪು ಮೇಲ್ವಿಚಾರಕರಿಗೆ ಯಾವೆಲ್ಲ ಸವಾಲುಗಳಿವೆ?

5 ಗುಂಪು ಮೇಲ್ವಿಚಾರಕನಿಗೆ ತುಂಬ ಸವಾಲುಗಳು ಎದುರಾಗುತ್ತೆ. ಯೋರಿಕ್‌ ಅನ್ನೋ ಸಹೋದರ ಜರ್ಮನಿಯಲ್ಲಿ ಗುಂಪು ಮೇಲ್ವಿಚಾರಕನಾಗಿದ್ದಾನೆ. ಬೇರೆ ಹಿರಿಯರ ತರಾನೇ ಇವನಿಗೂ ಸಭೆಯಲ್ಲಿ ಒಂದಕ್ಕಿಂತ ಜಾಸ್ತಿ ಜವಾಬ್ದಾರಿ ಇದೆ. ಇವನು ಹೇಳೋದು ಏನಂದ್ರೆ, “ಎಲ್ಲಾನೂ ಬ್ಯಾಲೆನ್ಸ್‌ ಮಾಡೋಕೆ ಕಷ್ಟ ಆಗುತ್ತೆ. ನನ್ನ ಗುಂಪಲ್ಲಿರೋ ಪ್ರತಿಯೊಬ್ರ ಜೊತೆನೂ ಆಗಾಗ ಮಾತಾಡೋಕೆ ಸಾಧ್ಯ ಆಗಲ್ಲ.” ಉಗಾಂಡಾದಲ್ಲಿ ಗುಂಪು ಮೇಲ್ವಿಚಾರಕನಾಗಿ ಸೇವೆ ಮಾಡ್ತಿರೋ 70 ವಯಸ್ಸಿನ ಏಬೆಲ್‌ ಅನ್ನೋ ಸಹೋದರ ಹೇಳೋದೇನಂದ್ರೆ, “ನಮ್ಮ ಸಭೆಯಲ್ಲಿ ಹಿರಿಯರು ಮತ್ತು ಸಹಾಯಕ ಸೇವಕರು ಕಡಿಮೆ ಇದ್ದಾರೆ. ಹಾಗಾಗಿ ಕಡಿಮೆ ಗುಂಪುಗಳಿವೆ, ಆದ್ರೆ ಪ್ರತಿಯೊಂದ್ರಲ್ಲೂ ತುಂಬ ಪ್ರಚಾರಕರಿದ್ದಾರೆ. ಇದ್ರಿಂದ ಗುಂಪಲ್ಲಿರೋ ಪ್ರತಿಯೊಬ್ರ ಜೊತೆನೂ ಸಿಹಿಸುದ್ದಿ ಸಾರೋಕೆ ಮತ್ತು ಪ್ರೋತ್ಸಾಹ ಕೊಡೋಕೆ ಕಷ್ಟ ಆಗುತ್ತೆ.” ಸುರಿನಾಮ್‌ ದೇಶದಲ್ಲಿರೋ ಒಬೇದ್‌ ಅನ್ನೋ ಸಹೋದರ ಹೇಳೋದು, “ಬೇರೆಯವ್ರಿಗೆ ತರಬೇತಿ ಕೊಡೋದಂದ್ರೆ ನಂಗೆ ತುಂಬ ಇಷ್ಟ. ಆದ್ರೆ ಇದನ್ನ ಮಾಡೋಕೆ ತುಂಬ ಸಮಯ, ಶಕ್ತಿ ಬೇಕು. ಅಷ್ಟೇ ಅಲ್ಲ, ತರಬೇತಿ ಕೊಡೋದನ್ನ ಅನ್ವಯಿಸ್ಕೊಂಡು ಪ್ರಚಾರಕರು ಗುರಿ ಮುಟ್ಟೋಕೂ ತುಂಬ ಸಮಯ ತಗೊಳ್ತಾರೆ. ಇಷ್ಟು ಸಮಯ ಕೊಡೋಕೆ ಕೆಲವೊಮ್ಮೆ ನನಗೆ ಆಗದೇ ಇರೋದ್ರಿಂದ ನಾನು ಎಷ್ಟೊಂದು ಸಲ ತರಬೇತಿ ಕೊಡೋದನ್ನೇ ಪಕ್ಕಕ್ಕೆ ಇಟ್ಟುಬಿಡ್ತೀನಿ.” ಇಂಥ ಸವಾಲುಗಳನ್ನ ಎದುರಿಸ್ತಿರೋ ಗುಂಪು ಮೇಲ್ವಿಚಾರಕರಿಗೆ ಯಾವುದು ಸಹಾಯ ಮಾಡುತ್ತೆ?

6. ಕ್ಷೇತ್ರ ಸೇವಾ ಗುಂಪು ಚಿಕ್ಕದಾಗಿದ್ರೆ ಏನು ಪ್ರಯೋಜ್ನ?

6 ಕ್ಷೇತ್ರ ಸೇವಾ ಗುಂಪು ಎಷ್ಟು ಚಿಕ್ಕದಾಗಿರುತ್ತೋ ಅಷ್ಟು ಒಳ್ಳೇದು. ಆಗ ಗುಂಪು ಮೇಲ್ವಿಚಾರಕನಿಗೆ ಗುಂಪಲ್ಲಿರೋ ಪ್ರತಿಯೊಬ್ರ ಬಗ್ಗೆನೂ ಚೆನ್ನಾಗಿ ತಿಳ್ಕೊಳ್ಳೋಕೆ, ಅವ್ರಿಗೆ ಬೇಕಿರೋ ಸಹಾಯ ಮಾಡೋಕೆ ಆಗುತ್ತೆ. ಆದ್ರೆ ಸಭೆಯಲ್ಲಿ ಕಮ್ಮಿ ಹಿರಿಯರಿದ್ರೆ ಏನು ಮಾಡೋದು? ದೊಡ್ಡ-ದೊಡ್ಡ ಗುಂಪನ್ನ ಮಾಡಿದ್ರೆ ಆ ಗುಂಪು ಮೇಲ್ವಿಚಾರಕನಿಗೆ ಪ್ರತಿಯೊಬ್ರಿಗೂ ಕಾಳಜಿ ತೋರಿಸೋಕೆ ಕಷ್ಟ ಆಗುತ್ತೆ. ಹಾಗಾಗಿ ಸ್ವಲ್ಪ ಸಮಯದವರೆಗೆ ಒಬ್ಬ ಸಹಾಯಕ ಸೇವಕನನ್ನ ಗುಂಪು ನೋಡ್ಕೊಳ್ಳೋಕೆ ನೇಮಿಸಬಹುದು. ಆಗ ಗುಂಪು ಚಿಕ್ಕದಾಗುತ್ತೆ. ಹೀಗೆ ಮಾಡಿದ್ರೆ ಗುಂಪು ಮೇಲ್ವಿಚಾರಕರು ತಮಗಿರೋ ಮುಖ್ಯ ಜವಾಬ್ದಾರಿನ, ಅಂದ್ರೆ ಪ್ರಚಾರಕರು ಯೆಹೋವನಿಗೆ ಹತ್ರ ಆಗೋ ತರ ಸಹಾಯ ಮಾಡೋಕೆ ಆಗುತ್ತೆ.

7. ಗುಂಪು ಮೇಲ್ವಿಚಾರಕ ತನ್ನ ಗುಂಪಲ್ಲಿರೋ ಪ್ರತಿಯೊಬ್ರಿಗೂ ಹೇಗೆ ಕಾಳಜಿ ತೋರಿಸಬಹುದು? (1 ಪೇತ್ರ 5:2) (ಚಿತ್ರ ನೋಡಿ.)

7 ನಿಮ್ಮ ಸಭೆಯಲ್ಲಿ ಕಮ್ಮಿ ಹಿರಿಯರು ಇದ್ದಾರಾ? ಹಾಗಾದ್ರೆ ನಿಮ್ಮ ಗುಂಪನ್ನ ನೋಡ್ಕೊಳ್ಳೋಕೆ ಸಹಾಯಕನಿಗೆ ಒಳ್ಳೆ ತರಬೇತಿ ಕೊಡಿ. (1 ಪೇತ್ರ 5:2 ಓದಿ.) ಗುಂಪಲ್ಲಿ ಕೆಲವು ಕೆಲಸಗಳನ್ನ ಮಾಡೋಕೆ ಅವನಿಗೆ ಅವಕಾಶ ಕೊಡಿ. ಉದಾಹರಣೆಗೆ, ಕ್ಷೇತ್ರ ಸೇವಾ ಕೂಟ ನಡೆಸೋಕೆ ಬಿಟ್ಟುಕೊಡಬಹುದು. ಗುಂಪಲ್ಲಿರೋರು ಹೇಗೆ ಸೇವೆ ಮಾಡ್ತಿದ್ದಾರೆ, ಅವ್ರಿಗೆ ಯಾವ ಸಹಾಯ ಬೇಕು ಅಂತ ಅವನ ಜೊತೆ ಕೂತು ಮಾತಾಡಬಹುದು. ಪರಿಪಾಲನಾ ಭೇಟಿಗಳಿಗೆ ಅವನನ್ನೂ ಕರ್ಕೊಂಡು ಹೋಗೋಕೆ ಮರಿಬೇಡಿ. ಪ್ರತಿ ಭೇಟಿಗೂ ಮುಂಚೆ ಮತ್ತು ಆಮೇಲೆ ಅವನು ಇನ್ನೂ ಏನೆಲ್ಲಾ ಚೆನ್ನಾಗಿ ಮಾಡಬಹುದಿತ್ತು ಅಂತ ಸಲಹೆಗಳನ್ನ ಕೊಡಿ. ನೀವು ಈ ತರ ಮಾಡಿದ್ರೆ, ಮುಂದೆ ಒಂದಿನ ಅವನೂ ಗುಂಪು ಮೇಲ್ವಿಚಾರಕ ಆಗಬಹುದು. (2 ತಿಮೊ. 2:2) ನಿಮ್ಮ ಗುಂಪಲ್ಲಿರೋ ಬೇರೆ ಪ್ರಚಾರಕರ ಸಹಾಯನೂ ನೀವು ಪಡ್ಕೊಬಹುದು. ಉದಾಹರಣೆಗೆ, ನಿಮ್ಮ ಗುಂಪಲ್ಲಿರೋ ಪಯನೀಯರರು ಮತ್ತು ಅನುಭವ ಇರೋ ಪ್ರಚಾರಕರು, ಹೊಸ ಪ್ರಚಾರಕರಿಗೆ ಸಹಾಯ ಮಾಡಬಹುದು. ಅವರು ಸಂಭಾಷಣೆ ಶುರು ಮಾಡೋಕೆ, ಪುನರ್ಭೇಟಿಗಳನ್ನ ಮಾಡೋಕೆ ಮತ್ತು ಬೈಬಲ್‌ ಅಧ್ಯಯನ ಶುರು ಮಾಡೋಕೆ ಬೇರೆಯವ್ರಿಗೆ ಸಹಾಯ ಮಾಡಬಹುದು. ಈಗ ನಮ್ಮ ಕ್ಷೇತ್ರ ಸೇವಾ ಗುಂಪಿಗೆ ಯಾವ ಮೂರು ರೀತಿಯಲ್ಲಿ ಬೆಂಬಲ ಕೊಡಬಹುದು ಅಂತ ನೋಡೋಣ.

ಒಬ್ಬ ಗುಂಪು ಮೇಲ್ವಿಚಾರಕ “ಜನರನ್ನ ಪ್ರೀತಿಸಿ-ಶಿಷ್ಯರಾಗೋಕೆ ಕಲಿಸಿ” ಕಿರುಹೊತ್ತಗೆ ಬಳಸ್ತಾ ಒಬ್ಬ ಸಹೋದರನಿಗೆ ತರಬೇತಿ ಕೊಡ್ತಿದ್ದಾನೆ.

ಒಬ್ಬ ಹಿರಿಯ ಕ್ಷೇತ್ರ ಸೇವಾ ಗುಂಪಲ್ಲಿರೋ ಸಹಾಯಕ ಸೇವಕನಿಗೆ ತರಬೇತಿ ಕೊಡಬಹುದು. ಉದಾಹರಣೆಗೆ, ಕ್ಷೇತ್ರ ಸೇವಾ ಕೂಟಗಳನ್ನ ನಡೆಸಲು ಅವನಿಗೆ ಅವಕಾಶ ಕೊಡಬಹುದು (ಪ್ಯಾರ 7 ನೋಡಿ)


ಗುಂಪಿಗೆ ಬೆಂಬಲ ಕೊಡಿ

8. ನಮ್ಮ ಕ್ಷೇತ್ರ ಸೇವಾ ಗುಂಪಿಗೆ ಹೇಗೆ ಬೆಂಬಲ ಕೊಡಬಹುದು? (ರೋಮನ್ನರಿಗೆ 1:12)

8 ನಿಮ್ಮ ಗುಂಪಿನವರ ಜೊತೆ ಸೇವೆ ಮಾಡಿ. ಆಗ ಒಬ್ರಿಂದ ಒಬ್ರು ಪ್ರೋತ್ಸಾಹ ಪಡ್ಕೊಳ್ತೀರ. (ರೋಮನ್ನರಿಗೆ 1:12 ಓದಿ.) ಹೀಗೆ ಜೊತೆಯಾಗಿ ಸೇವೆ ಮಾಡ್ವಾಗ ನಿಮಗೆ ಮಾತಾಡೋಕೆ ಭಯ ಆಗಲ್ಲ ಮತ್ತು ಸುರಕ್ಷಿತವಾಗಿ ಸೇವೆ ಮಾಡೋಕೆ ಆಗುತ್ತೆ. ನಿಮ್ಮ ಕೆಲಸದ ಕಾರಣದಿಂದಾಗಿ ನೀವು ನಿಮ್ಮ ಗುಂಪಿನವ್ರ ಜೊತೆ ಸೇವೆ ಮಾಡೋಕೆ ಆಗ್ತಿಲ್ವಾ? ಹಾಗಾದ್ರೆ ನಿಮ್ಮ ಬಾಸ್‌ ಹತ್ರ ‘ನನ್ನ ಕೆಲಸದ ಟೈಮ್‌ನ ಸ್ವಲ್ಪ ಬದಲಾಯಿಸೋಕೆ ಆಗುತ್ತಾ’ ಅಂತ ಕೇಳಿ ನೋಡಿ. ಅವರು ಒಪ್ಕೊಬಹುದು. (ನೆಹೆ. 2:4-6) ನಿಮಗೆ ತುಂಬ ಹುಷಾರಿಲ್ವಾ ಅಥವಾ ವಯಸ್ಸಾಗಿದ್ಯಾ? ನಿಮ್ಮ ಗುಂಪಿನವ್ರ ಜೊತೆ ಸೇವೆ ಮಾಡೋಕೆ ಕಷ್ಟ ಆಗ್ತಿದ್ಯಾ? ಇದ್ರ ಬಗ್ಗೆ ನಿಮ್ಮ ಮೇಲ್ವಿಚಾರಕನ ಹತ್ರ ಮಾತಾಡಿ. ಆಗ ಅವರು, ನೀವು ಜ಼ೂಮ್‌ ಮೂಲಕ ಕ್ಷೇತ್ರ ಸೇವಾ ಕೂಟ ಹಾಜರಾಗೋಕೆ, ಫೋನ್‌ ಅಥವಾ ಪತ್ರದ ಮೂಲಕ ಸಾಕ್ಷಿ ಕೊಡೋಕೆ ಏರ್ಪಾಡು ಮಾಡಬಹುದು. ನೀವು ಯುವಕರಾಗಿದ್ದೀರಾ, ನಿಮಗೆ ಒಳ್ಳೆ ಆರೋಗ್ಯ ಇದ್ಯಾ? ಆದ್ರೂ ಪ್ರತಿ ವಾರ ಸೇವೆಗೆ ಹೋಗೋಕೆ ಕಷ್ಟ ಆಗ್ತಿದ್ಯಾ? ದಯವಿಟ್ಟು, ಪ್ರತಿವಾರ ನಿಮ್ಮ ಗುಂಪಿನವರ ಜೊತೆ ಸೇವೆಗೆ ಹೋಗೋ ಗುರಿ ಇಡಿ. ನೀವು ಈ ತರ ಮಾಡೋಕೆ, ನಿಮ್ಮ ಟೈಮ್‌ ಟೇಬಲ್‌ನ ಸ್ವಲ್ಪ ಬದಲಾಯಿಸಬೇಕಾಗುತ್ತೆ. (ರೋಮ. 12:11; ಕೊಲೊ. 4:5) ಆದ್ರೆ ನೀವು ಹಾಕೋ ಒಂದೊಂದು ಪ್ರಯತ್ನಾನೂ ಯೆಹೋವ ತುಂಬ ಮೆಚ್ಕೊಳ್ತಾನೆ ಮತ್ತು ಆಶೀರ್ವದಿಸ್ತಾನೆ. ಹಾಗಾಗಿ ಯೆಹೋವನ ಹತ್ರ ಪ್ರಾರ್ಥನೆ ಮಾಡಿ, ಆಗ ಆತನು ಈ ಕೆಲಸಗಳನ್ನ ಮಾಡೋಕೆ ನಿಮಗೆ ಬೇಕಾದ “ಬಯಕೆಯನ್ನ, ಅದ್ರ ಪ್ರಕಾರ ನಡ್ಕೊಳ್ಳೋ ಶಕ್ತಿನ” ಕೊಡ್ತಾನೆ.—ಫಿಲಿ. 2:13.

9. ನಮ್ಮ ಕ್ಷೇತ್ರ ಸೇವಾ ಗುಂಪಲ್ಲಿ ಪ್ರೀತಿ, ಐಕ್ಯತೆನ ಹೇಗೆ ಜಾಸ್ತಿ ಮಾಡಬಹುದು? (ರೋಮನ್ನರಿಗೆ 12:13)

9 “ಅತಿಥಿಸತ್ಕಾರ” ತೋರಿಸಿ. ನಾವಿದನ್ನ ಮಾಡಿದ್ರೆ ನಮ್ಮ ಗುಂಪಲ್ಲಿ ಪ್ರೀತಿ ಮತ್ತು ಐಕ್ಯತೆ ತುಂಬಿ ತುಳುಕುತ್ತೆ. (ರೋಮನ್ನರಿಗೆ 12:13 ಓದಿ.) ನಿಮ್ಮ ಮನೆಯಲ್ಲಿ ಕ್ಷೇತ್ರ ಸೇವಾ ಕೂಟ ನಡೆಸೋಕೆ ಅವಕಾಶ ಮಾಡ್ಕೊಡೋಕೆ ಆಗುತ್ತಾ ಅಂತ ಯೋಚಿಸಿ. ಕೆಲವೊಂದು ಸಭೆಗಳಲ್ಲಿ ಅವ್ರ ಸಭೆಗೆ ಅತಿಥಿ ಭಾಷಣಕಾರ ಬಂದಾಗ ಯಾವ ಗುಂಪು ಅತಿಥಿಸತ್ಕಾರ ತೋರಿಸಬೇಕು ಅಂತ ಮೊದ್ಲೇ ಪ್ಲಾನ್‌ ಮಾಡ್ತಾರೆ. ಈ ತರ ಮಾಡೋದ್ರಿಂದ ಪ್ರತಿಯೊಂದು ಗುಂಪಿಗೂ ಅತಿಥಿಸತ್ಕಾರ ತೋರಿಸೋಕೆ ಅವಕಾಶ ಸಿಗುತ್ತೆ. ಒಂದುವೇಳೆ ಭಾಷಣಗಾರ ಅಕಸ್ಮಾತ್‌ ಊಟ ಮಾಡೋಕೆ ಬರ್ಲಿಲ್ಲ ಅಂದ್ರೂ ಈ ಗುಂಪಿನವರು ಒಟ್ಟಾಗಿ ಸೇರಿ ಊಟ ಮಾಡ್ತಾ, ಸಮಯ ಕಳೀತಾ ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾರೆ. ಸಾರ ಅನ್ನೋ ಒಬ್ಬ ವಿಶೇಷ ಪಯನೀಯರ್‌ ಸಹೋದರಿ ಹೇಳೋದು, “ನನಗೆ ಅಷ್ಟು ಚೆನ್ನಾಗಿ ಅಡುಗೆ ಮಾಡೋಕೆ ಬರಲ್ಲ. ಹಾಗಾಗಿ ಅತಿಥಿಗಳು ಬಂದಾಗ ನಾನು ಸಿಂಪಲ್ಲಾಗಿ ಅಡುಗೆ ಮಾಡ್ತೀನಿ. ಆದ್ರಿಂದ ನಾನು ಮಾಡಿರೋ ಅಡುಗೆ ಹೇಗಿದ್ಯೋ ಏನೋ ಅಂತ ಜಾಸ್ತಿ ಚಿಂತೆ ಮಾಡಲ್ಲ. ಬದಲಿಗೆ ಬಂದವ್ರ ಜೊತೆ ಜಾಸ್ತಿ ಸಮಯ ಕಳಿತೀನಿ, ಅವ್ರನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸ್ತೀನಿ.” ನಾವು ನಮ್ಮ ಕ್ಷೇತ್ರ ಸೇವಾ ಗುಂಪಿನವ್ರಿಗೆ ಪ್ರೀತಿ ತೋರಿಸ್ತಾ, ಅತಿಥಿಸತ್ಕಾರ ಮಾಡ್ತಾ ಇದ್ರೆ ಯೆಹೋವನಿಗೆ ಇನ್ನೂ ಹತ್ರ ಆಗ್ತೀವಿ. ಅಷ್ಟೇ ಅಲ್ಲ, ಒಬ್ರಿಗೊಬ್ರೂ ಹತ್ರ ಆಗ್ತೀವಿ.—ನೆಹೆ. 8:10; ಅ. ಕಾ. 20:35.

10. ಕೌಶಲ್ಯನ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು? (ಜ್ಞಾನೋಕ್ತಿ 1:5; 27:17) (ಚಿತ್ರ ನೋಡಿ.)

10 ನೀವೇ ಮುಂದೆ ಬನ್ನಿ. ಸಾರೋ ಮತ್ತು ಕಲಿಸೋ ವಿಷ್ಯದಲ್ಲಿ ಸಾಧ್ಯವಾದಷ್ಟು ಹೆಚ್ಚು ಕೌಶಲ್ಯ ಬೆಳೆಸ್ಕೊಳ್ಳಿ. ಇದನ್ನ ಹೆಚ್ಚು ಬೆಳೆಸ್ಕೊಂಡ್ರೆ ನಿಮ್ಮ ಗುಂಪಿನವರ ಸೇವೆನ ಜೊತೆ ಎಂಜಾಯ್‌ ಮಾಡ್ತೀರ. ನಿಮಗಿರೋ ಯಾವ ಕೌಶಲ್ಯನ ಜಾಸ್ತಿ ಮಾಡಬೇಕು ಅಂದ್ಕೊಳ್ತಿದ್ದೀರಾ? ನಿಮಗೇನಾದ್ರೂ ಸಹಾಯ ಬೇಕಿದ್ರೆ ನಿಮ್ಮ ಗುಂಪಿನಲ್ಲಿರೋ ಪಯನೀಯರರ ಹತ್ರ ಅಥವಾ ಅನುಭವ ಇರೋ ಪ್ರಚಾರಕರ ಹತ್ರ ಕೇಳಿ. (ಜ್ಞಾನೋಕ್ತಿ 1:5; 27:17 ಓದಿ.) ನೀವು ಯಾವ ಗುರಿ ಇಟ್ಟಿದ್ದೀರ ಅಂತಾನೂ ನಿಮ್ಮ ಗುಂಪು ಮೇಲ್ವಿಚಾರಕನಿಗೆ ತಿಳಿಸಿ. ಆ ಗುರಿ ಮುಟ್ಟೋಕೆ ಅವರು ನಿಮಗೆ ಸಹಾಯ ಮಾಡ್ತಾರೆ. ಹೀಥರ್‌ ಅನ್ನೋ ಒಬ್ಬ ಸಹೋದರಿಗೆ ತುಂಬ ನಾಚಿಕೆ ಸ್ವಭಾವ ಇತ್ತು. ಅವರು ಹೇಳೋದು, “ಪುನರ್ಭೇಟಿಗಳನ್ನ ಮಾಡೋಕೆ ನಂಗೆ ಸಹಾಯ ಮಾಡಿ ಅಂತ ನಾನು ಒಬ್ಬ ಪಯನೀಯರ್‌ ಸಹೋದರಿ ಹತ್ರ ಕೇಳಿದೆ. ಅವರು ನನ್ನ ಜೊತೆ ತುಂಬ ಪ್ರೀತಿ ಮತ್ತು ದಯೆಯಿಂದ ನಡ್ಕೊಂಡ್ರು. ಕ್ರಮವಾಗಿ ನನ್ನ ಜೊತೆ ಸೇವೆಗೆ ಬಂದ್ರು. ನಾನೊಂದು ಬೈಬಲ್‌ ಸ್ಟಡಿ ಶುರು ಮಾಡೋಕೂ ನಂಗೆ ಸಹಾಯ ಮಾಡಿದ್ರು. ಅವ್ರ ಹತ್ರ ಹೋಗಿ ಸಹಾಯ ಕೇಳಿದ್ದು ತುಂಬ ಒಳ್ಳೇದಾಯ್ತು. ಇದ್ರಿಂದ ನಾನು ಸಿಹಿಸುದ್ದಿ ಸಾರೋದನ್ನ ಜಾಸ್ತಿ ಎಂಜಾಯ್‌ ಮಾಡ್ತಿದ್ದೀನಿ.” ನೋಡಿದ್ರಾ, ಕ್ಷೇತ್ರ ಸೇವಾ ಗುಂಪಲ್ಲಿ ಎಂಜಾಯ್‌ ಮಾಡೋಕೆ ಮತ್ತು ಅದನ್ನ ಬೆಂಬಲಿಸೋಕೆ ನಮಗೆ ಎಷ್ಟೊಂದು ದಾರಿ ಇವೆ!

ಒಬ್ಬ ಯುವ ಸಹೋದರಿ, ಅನುಭವ ಇರೋ ವಯಸ್ಸಾದ ಸಹೋದರಿಯನ್ನ ತನ್ನ ಜೊತೆ ಸೇವೆ ಮಾಡಲು ಕೇಳ್ಕೊತ್ತಿದ್ದಾಳೆ.

ಕ್ಷೇತ್ರ ಸೇವಾ ಗುಂಪು ಚಿಕ್ಕದಾಗಿದ್ರೆ ಒಬ್ರನ್ನೊಬ್ರು ತಿಳ್ಕೊಳ್ಳೋಕೆ ಮತ್ತು ಎಲ್ರ ಜೊತೆ ಸಿಹಿಸುದ್ದಿ ಸಾರೋಕೆ ಸಾಧ್ಯ ಆಗುತ್ತೆ (ಪ್ಯಾರ 10 ನೋಡಿ)


ನಿಮಗೆ ಸಿಗೋ ಪ್ರಯೋಜನ

11-12. ಕ್ಷೇತ್ರ ಸೇವಾ ಗುಂಪಿನ ಏರ್ಪಾಡು ಯೆಹೋವನಿಗೆ ಹತ್ರ ಆಗೋಕೆ ಹೇಗೆ ಸಹಾಯ ಮಾಡುತ್ತೆ? ಒಂದು ಅನುಭವ ಹೇಳಿ.

11 ಯೆಹೋವನಿಗೆ ಇನ್ನೂ ಹತ್ರ ಆಗ್ತೀವಿ. ಕ್ಷೇತ್ರ ಸೇವಾ ಗುಂಪಿನಿಂದ ನಮಗೆ ಆಧ್ಯಾತ್ಮಿಕವಾಗಿ ತುಂಬ ಪ್ರಯೋಜ್ನ ಸಿಗುತ್ತೆ. ಉದಾಹರಣೆಗೆ, ಯೆಹೋವ ವಿಧವೆಯರನ್ನ, ಅನಾಥರನ್ನ ಮತ್ತು ವಯಸ್ಸಾಗಿರೋರನ್ನ ತುಂಬ ಪ್ರೀತಿಸ್ತಾನೆ, ತುಂಬ ಮೆಚ್ಕೊಳ್ತಾನೆ. ಇಂಥವ್ರಿಗೆ ಆಗಿಂದಾಗ್ಗೆ ಪರಿಪಾಲನಾ ಭೇಟಿಗಳನ್ನ ಮಾಡಲಾಗುತ್ತೆ. ಹೀಗೆ ಅವ್ರಿಗೆ ಬೇಕಾದ ಪ್ರೋತ್ಸಾಹ ಮತ್ತು ಕಾಳಜಿ ಸಿಗುತ್ತೆ. (1 ಥೆಸ. 2:8; ಯಾಕೋ. 1:27) ಅಷ್ಟೇ ಅಲ್ಲ, ಸಾರೋದ್ರಲ್ಲಿ ಮತ್ತು ಕಲಿಸೋದ್ರಲ್ಲಿ ಪ್ರಗತಿ ಮಾಡಲು ಬೇಕಾಗಿರೋ ಒಳ್ಳೊಳ್ಳೆ ಕೌಶಲ್ಯಗಳನ್ನ ಬೆಳೆಸ್ಕೊಳ್ಳೋಕೆ ತರಬೇತಿ ಕೊಡಲಾಗುತ್ತೆ. ಒಳ್ಳೆ ಮಾದರಿ ಇಟ್ಟಿರೋ ದೀಕ್ಷಾಸ್ನಾನ ತಗೊಂಡಿರೋ ಸಹೋದರರಿಗೆ ಸಭೆಯಲ್ಲಿ ಹೆಚ್ಚು ಜವಾಬ್ದಾರಿಗಳನ್ನ ತಗೊಳ್ಳೋಕೆ ತರಬೇತಿನೂ ಸಿಗುತ್ತೆ.—1 ತಿಮೊ. 3:10.

12 ಈಗಾಗ್ಲೇ ತಿಳಿಸಿದ ವೆಂಡಿ ಅನ್ನೋ ಸಹೋದರಿಗೆ ಕ್ಷೇತ್ರ ಸೇವಾ ಗುಂಪಿಂದ ತುಂಬ ಸಹಾಯ ಸಿಕ್ತು. ಅವರು ಹೇಳೋದು, “ನನ್ನ ಅಪ್ಪ, ಸತ್ಯನ ತುಂಬ ವಿರೋಧಿಸ್ತಿದ್ರು. ಇದ್ರಿಂದ ಅಮ್ಮನಿಗೆ ವಾರಾಂತ್ಯಗಳಲ್ಲಿ ತನ್ನ ಗುಂಪಿನ ಜೊತೆ ಸೇವೆಗೆ ಹೋಗೋಕೆ ಆಗ್ತಿರ್ಲಿಲ್ಲ. ಆದ್ರೆ ನನಗೆ ಹೋಗೋಕೆ ಬಿಡ್ತಿದ್ರು. ಹಾಗಾಗಿ ನಾನು ಸೇವೆಗೆ ಹೋಗ್ತಿದ್ದೆ. ನಮ್ಮ ಗುಂಪಲ್ಲಿದ್ದ ವಯಸ್ಸಾದ ಪಯನೀಯರ್‌ ಸಹೋದರಿ ನನಗೆ ಫ್ರೆಂಡ್‌ ಆದ್ರು, ತುಂಬ ಸಹಾಯ ಮಾಡಿದ್ರು. ಒಳ್ಳೊಳ್ಳೆ ಕೌಶಲ್ಯಗಳನ್ನ ಬೆಳೆಸ್ಕೊಳ್ಳೋಕೆ ಸಹಾಯ ಮಾಡಿದ್ರು. ಇದ್ರಿಂದ ನನಗೆ ಸೇವೆಲಿ ಮತ್ತು ಸಭೆಯಲ್ಲೂ ತುಂಬ ಪ್ರಯೋಜ್ನ ಸಿಕ್ತು. ನನ್ನ ಗುಂಪು ಮೇಲ್ವಿಚಾರಕ ನನಗೆ ಎಷ್ಟೋ ಸಾರಿ ಬೈಬಲಿಂದ ಒಳ್ಳೊಳ್ಳೆ ಸಲಹೆಗಳನ್ನ ಕೊಟ್ರು. ಆ ಸಲಹೆಗಳಿಂದ ಇವತ್ತಿಗೂ ನನಗೆ ಸಹಾಯ ಆಗ್ತಿದೆ.”

13. ಕ್ಷೇತ್ರ ಸೇವಾ ಗುಂಪಿಂದ ನಮಗೆ ಹೇಗೆ ಪ್ರೀತಿ ಮತ್ತು ಕಾಳಜಿ ಸಿಗುತ್ತೆ? ( ಚಿತ್ರ ನೋಡಿ.)

13 ಪ್ರೀತಿ ಕಾಳಜಿ ತೋರಿಸೋ ಸ್ನೇಹಿತರು. ನಮ್ಮ ಗುಂಪಲ್ಲಿರೋರು ಸಿಹಿಸುದ್ದಿ ಸಾರೋಕೆ ನಮ್ಮ ಜೊತೆ “ಹೆಗಲಿಗೆ ಹೆಗಲು ಕೊಟ್ಟು” ಕೆಲಸ ಮಾಡ್ತಾರೆ. ಆಗ ಅವ್ರ ಜೊತೆ ನಮಗೆ ಒಳ್ಳೆ ಸ್ನೇಹ ಬೆಳೆಯುತ್ತೆ. (ಫಿಲಿ. 1:27) ಕ್ಷೇತ್ರ ಸೇವಾ ಗುಂಪು ಚಿಕ್ಕದಾಗಿದ್ರೆ ನಾಚಿಕೆ ಸ್ವಭಾವದವ್ರಿಗೆ, ದೊಡ್ಡ ಗುಂಪಲ್ಲಿ ಮಾತಾಡೋಕೆ ಭಯ ಪಡೋರಿಗೆ ಒಳ್ಳೆ ಸ್ನೇಹನ ಬೆಳೆಸ್ಕೊಳ್ಳೋಕೆ ಸಹಾಯ ಸಿಗುತ್ತೆ. (2 ಕೊರಿಂ. 6:13) ಇಲ್ಲಿ ಸಿಗೋ ಸ್ನೇಹಿತರು ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಲ್ತಾರೆ. ಹೇಗೆ? ನಮಗೆ ಹುಷಾರಿಲ್ಲದೆ ಇದ್ದಾಗ, ನೋವು-ಚಿಂತೆಯಲ್ಲಿದ್ದಾಗ, ಆಪ್ತರನ್ನ ಸಾವಲ್ಲಿ ಕಳ್ಕೊಂಡಾಗ ತುಂಬ ಸಹಾಯ ಮಾಡ್ತಾರೆ. (1 ಥೆಸ. 5:14) ಮುಂದೆ ಮಹಾ ಸಂಕಟದಲ್ಲಿ ನಮಗೆ ಇಂಥ ಸ್ನೇಹಿತರ ಅಗತ್ಯ ತುಂಬನೇ ಇರುತ್ತೆ. (ಮತ್ತಾ. 24:21) ಇವ್ರ ಕೈಯಲ್ಲಿ ನಮ್ಮ ಕಷ್ಟ-ಸಮಸ್ಯೆಗಳನ್ನ ತೆಗೆದುಹಾಕೋಕೆ ಆಗಲ್ಲ ನಿಜ. ಆದ್ರೆ ಇವ್ರಿಂದ ನಮ್ಮನ್ನ ಪ್ರೀತಿಸೋ, ನಮಗೆ ಬೆಂಬಲ ಕೊಡೋ ಸ್ನೇಹಿತರಿದ್ದಾರೆ ಅನ್ನೋ ಭರವಸೆ ಸಿಗುತ್ತೆ. ಈ ಭರವಸೆ ಕಷ್ಟ-ಸಮಸ್ಯೆಗಳನ್ನ ಮೆಟ್ಟಿ ನಿಲ್ಲೋಕೆ, ತಾಳ್ಕೊಳ್ಳೋಕೆ ಬೇಕಾದ ಸಹಾಯ ಕೊಡುತ್ತೆ.—ಜ್ಞಾನೋ. 17:17.

ಹಿಂದಿನ ಚಿತ್ರದಲ್ಲಿದ್ದ ಸಹೋದರಿಯರು ಕ್ಷೇತ್ರ ಸೇವಾ ಕೂಟ ಮುಗಿಸ್ಕೊಂಡು ಟೆರಿಟೊರಿಗೆ ಹೋಗ್ತಿದ್ದಾರೆ. ಆ ಗುಂಪಲ್ಲಿರೋ ಬೇರೆಯವರೂ ತಮ್ಮತಮ್ಮ ಟೆರಿಟೊರಿಗೆ ಹೋಗ್ತಿದ್ದಾರೆ.

ಕ್ಷೇತ್ರ ಸೇವಾ ಗುಂಪಲ್ಲಿರೋ ಇಬ್ರು ಸಹೋದರಿಯರು ಜೊತೆಯಾಗಿ ಸೇವೆಗೆ ಹೋಗ್ತಿದ್ದಾರೆ (ಪ್ಯಾರ 13 ನೋಡಿ)


14. ವಿಪತ್ತಾದಾಗ ಕ್ಷೇತ್ರ ಸೇವಾ ಗುಂಪಿಂದ ಹೇಗೆ ಪ್ರಯೋಜ್ನ ಸಿಗುತ್ತೆ?

14 ಬೇಕಾದ ಸಹಾಯ ಸಿಗುತ್ತೆ. ಅಂಟು ರೋಗಗಳು ಹರಡಿದಾಗ, ನೈಸರ್ಗಿಕ ವಿಪತ್ತಾದಾಗ, ಚಿಕಿತ್ಸೆ ಬೇಕಾದಾಗ, ಹಿಂಸೆ ಬಂದಾಗ ಅಥವಾ ಹಣಕಾಸಿನ ತೊಂದ್ರೆ ಬಂದಾಗ ಕ್ಷೇತ್ರ ಸೇವಾ ಗುಂಪು ನಮಗೆ ಸಹಾಯ ಮಾಡುತ್ತೆ. ಉದಾಹರಣೆಗೆ, ನೈಸರ್ಗಿಕ ವಿಪತ್ತಾದಾಗ ಗುಂಪು ಮೇಲ್ವಿಚಾರಕ ತನ್ನ ಗುಂಪಲ್ಲಿರೋ ಎಲ್ಲಾ ಕುಟುಂಬಗಳಿಗೆ ಊಟ, ಬಟ್ಟೆ, ನೀರು, ಇರೋಕೆ ಜಾಗ ಇದ್ಯಾ ಅವ್ರಿಗೆ ಚಿಕಿತ್ಸೆ ಬೇಕಿದ್ಯಾ ಅಂತ ತಿಳ್ಕೊಳ್ತಾನೆ. ಅವ್ರಿಗೆ ಬೇಕಾಗಿರೋ ಸಹಾಯ ಮಾಡ್ತಾನೆ. ಅಷ್ಟೇ ಅಲ್ಲ, ತನ್ನ ಗುಂಪಲ್ಲಿರೋ ಯಾರಿಗಾದ್ರೂ ಜಾಸ್ತಿ ಸಹಾಯ ಬೇಕಿದೆ ಅಂತ ಗೊತ್ತಾದ್ರೆ ಸಭೆಯ ಸೇವಾ ಕಮಿಟಿ ಜೊತೆ ಮಾತಾಡಿ ಅವ್ರಿಗೆ ಬೇಕಾಗಿರೋ ಸಹಾಯ ಒದಗಿಸೋ ಏರ್ಪಾಡನ್ನ ಮಾಡ್ತಾನೆ. ನಿಜಕ್ಕೂ ಕ್ಷೇತ್ರ ಸೇವಾ ಗುಂಪಿನ ಏರ್ಪಾಡಿಂದ ನಮಗೆ ತುಂಬ ಸಹಾಯ ಸಿಗುತ್ತೆ ಅಲ್ವಾ!

15. ನಮ್ಮೆಲ್ಲರ ಬಯಕೆ ಏನು?

15 ಯೆಹೋವನ ಕುಟುಂಬ ತುಂಬ ದೊಡ್ಡದು. ತನ್ನ ಸ್ವರ್ಗೀಯ ಕುಟುಂಬದಲ್ಲಿ ಕೋಟ್ಯಾನುಕೋಟಿ ಆತ್ಮಜೀವಿಗಳಿದ್ದಾರೆ. ಭೂಮಿಯಲ್ಲಿ ಹತ್ರತ್ರ 90 ಲಕ್ಷಕ್ಕಿಂತ ಜಾಸ್ತಿ ಜನ ಯೆಹೋವನನ್ನ ನಿಯತ್ತಾಗಿ ಆರಾಧಿಸ್ತಿದ್ದಾರೆ, ದಿನದಿಂದ ದಿನಕ್ಕೆ ಇವ್ರ ಸಂಖ್ಯೆ ಜಾಸ್ತಿ ಆಗ್ತಾನೇ ಇದೆ. (ಜೆಕ. 8:23; ಪ್ರಕ. 5:11) ಸಾಧ್ಯ ಆದಷ್ಟು ಜನ ದೇವರ ಆಳ್ವಿಕೆಯ ಸಿಹಿಸುದ್ದಿನ ತಿಳ್ಕೊಂಡು ಆತನಿಗೆ ಹತ್ರ ಆಗಬೇಕು ಅನ್ನೋದು ಯೆಹೋವನ ಕುಟುಂಬದಲ್ಲಿರೋ ಎಲ್ರ ಬಯಕೆ. ಹಾಗಾಗಿ ಈ ಕೆಲಸ ಮಾಡೋದ್ರಲ್ಲಿ ಇವ್ರೆಲ್ರೂ ತುಂಬ ಶ್ರಮ ಪಡ್ತಿದ್ದಾರೆ. ಸಾರೋಕೆ ತಮ್ಮ ಕೈಲಾದಷ್ಟು ಪ್ರಯತ್ನ ಹಾಕ್ತಿದ್ದಾರೆ. (ಪ್ರಕ. 14:6, 7) ಕ್ಷೇತ್ರ ಸೇವಾ ಗುಂಪಿನ ಏರ್ಪಾಡು ಯೆಹೋವನನ್ನ ಹಾಡಿ ಹೊಗಳೋಕೆ ತುಂಬ ಸಹಾಯ ಮಾಡುತ್ತೆ. ಹಾಗಾಗಿ ಈ ಏರ್ಪಾಡಿಂದ ಸಿಗೋ ಪ್ರಯೋಜನವನ್ನ ನಾವೆಲ್ಲ ಪಡ್ಕೊಳ್ತಾ ಇರೋಣ.—ಕೀರ್ತ. 111:1.

ನೀವೇನು ಹೇಳ್ತೀರಾ?

  • ಗುಂಪು ಮೇಲ್ವಿಚಾರಕ ಮತ್ತು ಅವನ ಸಹಾಯಕನ ಕರ್ತವ್ಯಗಳೇನು?

  • ಕ್ಷೇತ್ರ ಸೇವಾ ಗುಂಪಿಗೆ ನಾವು ಹೇಗೆ ಬೆಂಬಲ ಕೊಡಬಹುದು?

  • ಕ್ಷೇತ್ರ ಸೇವಾ ಗುಂಪಿಂದ ಯಾವೆಲ್ಲಾ ಪ್ರಯೋಜ್ನಗಳಿವೆ?

ಗೀತೆ 61 ಮುಂದೆ ಸಾಗಿರಿ

a ಕೆಲವ್ರ ಹೆಸ್ರನ್ನ ಬದಲಾಯಿಸಲಾಗಿದೆ.

b ಒಬ್ಬ ಹಿರಿಯ ಈ ಜವಾಬ್ದಾರಿಯನ್ನ ನೋಡ್ಕೊಳ್ಳೋವರೆಗೂ ಕ್ಷೇತ್ರ ಸೇವಾ ಗುಂಪನ್ನ ಒಬ್ಬ ಸಹಾಯಕ ಸೇವಕನಿಗೆ ವಹಿಸಬಹುದು. ಆದ್ರೆ ಈ ಸಹಾಯಕ ಸೇವಕ ಸಭೆಯಲ್ಲಿ ಮೇಲ್ವಿಚಾರಣೆ ವಹಿಸದೇ ಇರೋದ್ರಿಂದ ಇವನನ್ನ ಗುಂಪು ಮೇಲ್ವಿಚಾರಕ ಅಂತ ಕರೆಯಲ್ಲ. ಬದ್ಲಿಗೆ ಗುಂಪಿನ ಸಹಾಯಕ ಅಂತ ಕರೆಯಲಾಗುತ್ತೆ. ಈ ಸಹಾಯಕ ಸೇವಕ, ಗುಂಪನ್ನ ನಡೆಸ್ಕೊಂಡು ಹೋಗೋಕೆ ಬೇಕಾದ ಮಾರ್ಗದರ್ಶನ ಮತ್ತು ಸಲಹೆಗಳನ್ನ ಹಿರಿಯರು ಕೊಡ್ತಾರೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ