ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಜೂನ್‌ ಪು. 8-13
  • ನಿಮ್ಮ ಸ್ನೇಹನ ಉಳಿಸ್ಕೊಳ್ಳಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಸ್ನೇಹನ ಉಳಿಸ್ಕೊಳ್ಳಿ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸ್ನೇಹಕ್ಕೆ ಕ್ರೈಸ್ತ ಗುಣಗಳೇ ಬುನಾದಿ!
  • ಭಿನ್ನಾಭಿಪ್ರಾಯ ಬಂದಾಗ . . .
  • ವ್ಯಕ್ತಿತ್ವ ಬೇರೆ-ಬೇರೆ ಇದ್ದಾಗ . . .
  • ಸ್ನೇಹಿತರಿಗೆ ಕಾಯಿಲೆ ಇದ್ದಾಗ. . .
  • ಪ್ರೀತಿರಹಿತ ಜಗತ್ತಿನಲ್ಲಿ ಸ್ನೇಹಬಂಧಗಳನ್ನು ಉಳಿಸಿಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಈ ಸ್ನೇಹಕ್ಕೆ ಬೆಲೆ ಕಟ್ಟೋಕಾಗಲ್ಲ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
    2025-2026ರ ಸಮ್ಮೇಳನ ಕಾರ್ಯಕ್ರಮ ಸಂಚರಣ ಮೇಲ್ವಿಚಾರಕನೊಂದಿಗೆ.
  • ಯೆಹೋವ ದೇವರ ತರ ದೀನತೆ ತೋರಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಜೂನ್‌ ಪು. 8-13

ಆಗಸ್ಟ್‌ 17-23, 2026

ಗೀತೆ 106 ಪ್ರೀತಿಯೆಂಬ ಗುಣವನ್ನು ಬೆಳೆಸಿಕೊಳ್ಳುವುದು

ನಿಮ್ಮ ಸ್ನೇಹನ ಉಳಿಸ್ಕೊಳ್ಳಿ!

“ಕೋಮಲ ಮಮತೆ, ಅನುಕಂಪ, ದಯೆ, ದೀನತೆ, ಸೌಮ್ಯತೆ ಮತ್ತು ತಾಳ್ಮೆಯನ್ನ ಬಟ್ಟೆ ತರ ಹಾಕ್ಕೊಳ್ಳಿ.” —ಕೊಲೊ. 3:12.

ಈ ಲೇಖನದಲ್ಲಿ ಏನಿದೆ?

ಕೆಲವೊಮ್ಮೆ ಸಭೆಯಲ್ಲಿರೋ ನಮ್ಮ ಸ್ನೇಹಕ್ಕೆ ಬಿರುಕು ಬರೋ ಸಾಧ್ಯತೆ ಇದೆ. ಆಗ ಅದನ್ನ ಹೇಗೆ ನಿಭಾಯಿಸಬಹುದು ಅಂತ ನೋಡೋಣ.

1. ನಿಜ ಸ್ನೇಹಿತರು ನಮಗೆ ಎಲ್ಲಿ ಸಿಗ್ತಾರೆ?

ಈ ಕೊನೆ ದಿನಗಳಲ್ಲಿ ನಮಗೆ ಹೆಜ್ಜೆ-ಹೆಜ್ಜೆಗೂ ಕಷ್ಟ, ತೊಂದ್ರೆಗಳಿವೆ. ನಾವು ತುಂಬ ಸಲ ಜೀವನದಲ್ಲಿ ಬೀಳ್ತೀವಿ, ಅಳ್ತೀವಿ. ಆದ್ರೆ ಬಿದ್ದಾಗ ಎತ್ತೋಕೆ, ಅತ್ತಾಗ ಕಣ್ಣೀರು ಒರೆಸೋಕೆ ಯಾರೂ ಇಲ್ಲಾಂದ್ರೆ ಹೇಗನ್ಸುತ್ತೆ? ನಾವು ಒಂಟಿ ಆಗಿಬಿಡ್ತೀವಿ ಅಲ್ವಾ? ಹಾಗೆ ಆಗಬಾರದು ಅಂತಾನೇ ಯೆಹೋವ ದೇವರು ನಮಗೆ ಸಭೆಯಲ್ಲಿ ನಿಜ ಸ್ನೇಹಿತರನ್ನ ಕೊಟ್ಟಿದ್ದಾನೆ. (ಕೀರ್ತ. 119:63) ಇವರು ಆತನು ನಮಗೆ ಕೊಟ್ಟಿರೋ ಒಂದು ವರ! ನಾವೆಲ್ರೂ ಯೆಹೋವನ ಕುಟುಂಬ, ನಮ್ಮೆಲ್ರನ್ನ ಹಿಡಿದಿಟ್ಟಿರೋದು ಪ್ರೀತಿ ಅನ್ನೋ ಬಂಧ!

2. ಸಭೆಯಲ್ಲಿ ನಮಗೆ ಎಂಥ ಸ್ನೇಹಿತರು ಸಿಗ್ತಾರೆ?

2 ಸಭೆಯಲ್ಲಿ ನಮಗಿರೋ ಸ್ನೇಹ ಬರೀ ‘ಹಾಯ್‌ಬಾಯ್‌!’ ಹೇಳಿ ಮುಗಿಸೋ ತರದ್ದಲ್ಲ. ಇಲ್ಲಿ ನಮಗೆ ಪ್ರಾಣ ಸ್ನೇಹಿತರು ಅಂದ್ರೆ ಜೀವನ ಪೂರ್ತಿ ನಿಯತ್ತಾಗಿರೋರು ಸಿಗ್ತಾರೆ. ನಮ್ಮ ತರಾನೇ ಇವ್ರಿಗೂ ಯೆಹೋವ ಮತ್ತು ಯೇಸು ಮೇಲೆ ಬೆಟ್ಟದಷ್ಟು ಪ್ರೀತಿ ಇದೆ. ಈ ಪ್ರೀತಿನೇ ನಮ್ಮನ್ನೆಲ್ಲ ಜೊತೆಯಾಗಿ ಇಟ್ಟಿದೆ. (ಯೋಹಾ. 13:35) ಆದ್ರೆ ಇಂಥ ಸ್ನೇಹ ಚಿಟಿಕೆ ಹೊಡೆಯೋಷ್ಟರಲ್ಲಿ ಬಂದ್ಬಿಡಲ್ಲ. ಒಂದು ಗಿಡನ ಬೆಳೆಸೋ ತರ ಅದನ್ನ ನಾವು ಬೆಳೆಸಬೇಕಾಗುತ್ತೆ. ಗುಲಾಬಿ ಎಷ್ಟೇ ಸುಂದರವಾಗಿ ಇದ್ರೂ ಅದ್ರಲ್ಲಿ ಮುಳ್ಳುಗಳು ಇರುತ್ತೆ. ಅದೇ ತರ ನಮ್ಮ ಸ್ನೇಹದಿಂದ ಎಷ್ಟೇ ಸಂತೋಷ ಸಿಕ್ಕಿದ್ರೂ ಕೆಲವೊಮ್ಮೆ ಬೇಜಾರು ಆಗೋದು ಸಾಮಾನ್ಯ ಅಂತ ನಾವು ನೆನಪಿಡಬೇಕು.

3. ಸ್ನೇಹನ ಉಳಿಸ್ಕೊಂಡು ಹೋಗೋಕೆ ಯಾಕೆ ಕಷ್ಟ ಆಗಬಹುದು?

3 ಕೆಲವ್ರನ್ನ ನಾವು ಕ್ಲೋಸ್‌ ಫ್ರೆಂಡ್ಸ್‌ ಆಗಿ ಮಾಡ್ಕೊಳ್ತೀವಿ, ತುಂಬ ಹಚ್ಕೊಳ್ತೀವಿ. ಯಾಕೆ? ಯಾಕಂದ್ರೆ ನಾವು ಯೋಚ್ನೆ ಮಾಡೋ ತರಾನೇ ಅವರು ಯೋಚ್ನೆ ಮಾಡ್ತಿರಬಹುದು, ನಮಗೇನು ಇಷ್ಟಾನೋ ಅವ್ರಿಗೂ ಅದೇ ಇಷ್ಟ ಆಗ್ತಿರಬಹುದು. ಆದ್ರೆ ಇನ್ನು ಕೆಲವ್ರನ್ನ ಫ್ರೆಂಡ್ಸ್‌ ಮಾಡ್ಕೊಳ್ಳೋದು ಸ್ವಲ್ಪ ಕಷ್ಟ. ಯಾಕಂದ್ರೆ ಅವರು ನಾವು ಯೋಚಿಸೋ ತರ ಯೋಚ್ನೆ ಮಾಡದೇ ಇರಬಹುದು. ಅವರ ವ್ಯಕ್ತಿತ್ವ ನಮ್ಮ ವ್ಯಕ್ತಿತ್ವಕ್ಕಿಂತ ತುಂಬ ಭಿನ್ನವಾಗಿರಬಹುದು. ಹಾಗಾಗಿ ‘ಇವರು ನನಗೆ ಸೆಟ್‌ ಆಗಲ್ಲ’ ಅಂತ ಅನಿಸಬಹುದು. ಕೆಲವೊಮ್ಮೆ ನಮ್ಮ ಸ್ನೇಹಿತರಿಗೆ ಆರೋಗ್ಯದ ಸಮಸ್ಯೆಗಳಿದ್ರೆ ಅಥವಾ ಅವರು ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ರೆ ಇನ್ನೂ ಕಷ್ಟ ಆಗುತ್ತೆ. ಹಾಗಾಗಿ ಈ ಲೇಖನದಲ್ಲಿ, ನಮ್ಮ ಸ್ನೇಹದಲ್ಲಿ ಬಿರುಕುಗಳು ಬಂದಾಗ ಅವನ್ನ ನಿಭಾಯಿಸೋಕೆ ಯೇಸು ಮಾದರಿ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ. ಆದ್ರೆ ಮೊದಲು, ನಮ್ಮ ಸ್ನೇಹನ ಕಾಪಾಡ್ಕೊಳ್ತಾ ಮುಂದುವರಿಯೋಕೆ ಕ್ರೈಸ್ತ ಗುಣಗಳು ಹೇಗೆ ಸಹಾಯ ಮಾಡುತ್ತೆ ಅಂತ ಕಲಿಯೋಣ.

ಸ್ನೇಹಕ್ಕೆ ಕ್ರೈಸ್ತ ಗುಣಗಳೇ ಬುನಾದಿ!

4. ನಮ್ಮ ಸ್ನೇಹನ ಬಲಪಡಿಸೋಕೆ ಏನು ಮಾಡಬೇಕು?

4 ನಾವು ಯಾವಾಗ್ಲೂ ಬೇರೆಯವ್ರಲ್ಲಿ ಬರೀ ಒಳ್ಳೇದನ್ನೇ ನೋಡಬೇಕು. ಆಗ ನಮ್ಮ ಸ್ನೇಹ ಇನ್ನಷ್ಟು ಬಲ ಆಗುತ್ತೆ. ಅವ್ರ ಜೊತೆ ಸಮಯ ಕಳೆದ್ರೆ ಅವ್ರಲ್ಲಿರೋ ಮುತ್ತಿನಂಥ ಗುಣಗಳನ್ನ ನಾವು ತಿಳ್ಕೊಬಹುದು. ಅಪೊಸ್ತಲ ಪೌಲನಿಗೆ ಸಹ ಸಹೋದರ ಸಹೋದರಿಯರನ್ನ ನೋಡೋಕೆ ತುಂಬ ಆಸೆ ಇತ್ತು. ಅದಕ್ಕೆ ಅವನು ಥೆಸಲೋನಿಕದವ್ರಿಗೆ ‘ನಮ್ಮ ಮನಸ್ಸೆಲ್ಲ ನಿಮ್ಮ ಹತ್ರನೇ ಇದೆ. ನಿಮ್ಮನ್ನ ನೋಡ್ಬೇಕು ಅಂತ ತುಂಬ ಆಸೆ ಇದೆ. ನಿಮ್ಮನ್ನ ಭೇಟಿ ಮಾಡೋಕೆ ತುಂಬ ಪ್ರಯತ್ನ ಹಾಕಿದ್ವಿ’ ಅಂತ ಹೇಳಿದ. (1 ಥೆಸ. 2:17) ನಿಮಗೆ ಗೊತ್ತಾ? ನೇರವಾಗಿ ಭೇಟಿಯಾಗಿ ಮನಸ್ಸು ಬಿಚ್ಚಿ ಮಾತಾಡಿದಾಗ ಬೆಳೆಯೋ ಸ್ನೇಹ ಬಲವಾಗಿ ಬೇರೂರುತ್ತೆ ಅಂತ ತುಂಬ ಜನ ಹೇಳಿದ್ದಾರೆ. ನಾವು ನೇರವಾಗಿ ಭೇಟಿಯಾಗೋಕೆ ಕೂಟಗಳು, ಸೇವೆ, ಸಮ್ಮೇಳನ, ಅಧಿವೇಶನ ಅಂತ ತುಂಬ ದಾರಿಗಳಿವೆ. ಆದ್ರೆ ನಾವು ನೇರವಾಗಿ ಭೇಟಿ ಮಾಡಿದ ತಕ್ಷಣ ನಮ್ಮ ಸ್ನೇಹದಲ್ಲಿ ಸಮಸ್ಯೆಗಳೇ ಬರಲ್ಲ ಅಂತ ಹೇಳೋಕಾಗಲ್ಲ.

5. ಸ್ನೇಹ ಬಿರುಕು ಬಿಡದೆ ಇರೋ ತರ ನೋಡ್ಕೊಳ್ಳೋಕೆ ಏನು ಮಾಡಬೇಕು? ಉದಾಹರಣೆ ಕೊಡಿ. (ಕೊಲೊಸ್ಸೆ 3:12)

5 ಇಬ್ರು ಸ್ನೇಹಿತರು ಒಬ್ರಿಗೊಬ್ರು ತೋರಿಸೋ ಒಳ್ಳೊಳ್ಳೆ ಗುಣಗಳೇ ಅವ್ರ ಸ್ನೇಹನ ಕಾಪಾಡೋದು. (ಕೊಲೊಸ್ಸೆ 3:12 ಓದಿ.) ಅನುಕಂಪ, ದಯೆ, ದೀನತೆ ಮತ್ತು ತಾಳ್ಮೆ ಅನ್ನೋ ಗುಣಗಳನ್ನ ನಾವು ತೋರಿಸೋದಾದ್ರೆ ಎಂಥದ್ದೇ ಸಮಸ್ಯೆಗಳು ಬಂದ್ರೂ ಅವನ್ನ ನಿಭಾಯಿಸೋಕೆ ಆಗುತ್ತೆ. ಕಾರ್‌ ಇಂಜಿನ್‌ಗೆ ಆಯಿಲ್‌ ಹಾಕಿದ್ರೆ ಅದು ಆರಾಮಾಗಿ ಹೋಗೋ ತರ ಸ್ನೇಹ ಸಂಬಂಧಗಳು ಚೆನ್ನಾಗಿ ಬೆಳಿಬೇಕಾದ್ರೆ ನಾವು ಕ್ರೈಸ್ತ ಗುಣಗಳನ್ನ ತೋರಿಸಬೇಕಾಗುತ್ತೆ. ಈಗ ಸ್ನೇಹ ಸಂಬಂಧಕ್ಕೆ ಬರೋ ಮೂರು ಸವಾಲುಗಳನ್ನ ನೋಡೋಣ. ಅದ್ರ ಜೊತೆಗೆ ಅನುಕಂಪ, ದಯೆ, ದೀನತೆ ಮತ್ತು ತಾಳ್ಮೆಯನ್ನ ಯೇಸು ಹೇಗೆ ತೋರಿಸಿದನು? ನಾವು ಬೇರೆಯವ್ರಿಗೆ ಹೇಗೆ ತೋರಿಸಬಹುದು ಅಂತಾನೂ ಚರ್ಚಿಸೋಣ.

ಭಿನ್ನಾಭಿಪ್ರಾಯ ಬಂದಾಗ . . .

6. ಭಿನ್ನಾಭಿಪ್ರಾಯ ಹೇಗೆ ಸ್ನೇಹದಲ್ಲಿ ಬಿರುಕು ಬರೋ ತರ ಮಾಡಬಹುದು?

6 ಸಮಸ್ಯೆ: ಭಿನ್ನಾಭಿಪ್ರಾಯ. ಸಾಮಾನ್ಯವಾಗಿ ನಾವು ಹೇಳಿದ್ದೇ ಸರಿ ಅಂತ ಅಂದ್ಕೊಳ್ತೀವಿ, ಆದ್ರೆ ಇದು ಭಿನ್ನಾಭಿಪ್ರಾಯಕ್ಕೆ ನಡೆಸುತ್ತೆ. ಉದಾಹರಣೆಗೆ, ಕ್ಷೇತ್ರ ಸೇವಾ ಗುಂಪಲ್ಲಿರೋ ಇಬ್ರು ಸಹೋದರರು ಸೇವೆನ ‘ಹಂಗೆ ಮಾಡ್ಬೇಕು, ಹಿಂಗೆ ಮಾಡ್ಬೇಕು’ ಅಂತ ಬೇರೆಬೇರೆ ಅಭಿಪ್ರಾಯಗಳನ್ನ ಹೇಳ್ತಾರೆ ಅಂದ್ಕೊಳ್ಳಿ. ಇಬ್ರಿಗೂ ಅವ್ರ ಅಭಿಪ್ರಾಯನೇ ಸರಿ ಅಂತ ಅನ್ಸುತ್ತೆ. ಅವ್ರ ಈ ಭಿನ್ನಾಭಿಪ್ರಾಯ ಸ್ನೇಹದಲ್ಲಿ ಬಿರುಕು ಬಿಡೋ ತರ ಮಾಡಬಹುದು ಅಲ್ವಾ? ಇದಕ್ಕೆ ಕಾರಣ ಏನು ಹೇಳಿ? ‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಸ್ವಲ್ಪ ಮಟ್ಟಿಗಿನ ಅಹಂಕಾರ. ಅವರು ಇದ್ರ ಬಗ್ಗೆ ಕೂತು ಮಾತಾಡಿಲ್ಲ ಅಂದ್ರೆ ಮುಂದೆ ಇದೇ ಅವ್ರ ಮಧ್ಯೆ ಮನಸ್ತಾಪಕ್ಕೆ ಕಾರಣ ಆಗಿಬಿಡುತ್ತೆ. ಸಮಯ ಹೋಗ್ತಾಹೋಗ್ತಾ ಅಹಂಕಾರ ಅನ್ನೋ ಗೆದ್ದಲು ಅವ್ರ ಸ್ನೇಹನ ಬೀಳಿಸುತ್ತೆ. ನೋಡಿದ್ರಾ, ಕ್ರೈಸ್ತ ಗುಣಗಳನ್ನ ತೋರಿಸದೆ ಇದ್ರೆ ಒಂದು ಚಿಕ್ಕ ವಿಷ್ಯ ಕೂಡ ಇಬ್ರು ಪ್ರಾಣ ಸ್ನೇಹಿತರನ್ನ ದೂರ ಮಾಡಬಹುದು.

7. ಭಿನ್ನಾಭಿಪ್ರಾಯಕ್ಕೆ ದೀನತೆ ಮದ್ದು ಅಂತ ಯೇಸು ಹೇಗೆ ತೋರಿಸ್ಕೊಟ್ಟನು?

7 ಪರಿಹಾರ: ದೀನತೆ. ಭಿನ್ನಾಭಿಪ್ರಾಯಕ್ಕೆ ದೀನತೆನೇ ಮದ್ದು ಅಂತ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. ಆತನ ಶಿಷ್ಯರು ತಮ್ಮಲ್ಲಿ ಯಾರು ದೊಡ್ಡವರು ಅಂತ ವಾದ ಮಾಡ್ತಿದ್ರು. ಯಾಕಂದ್ರೆ ಅವ್ರ ಹೃದಯದಲ್ಲಿ ‘ನಾನೇ ಶ್ರೇಷ್ಠ’ ಅನ್ನೋ ಗುಣ ಗೂಡು ಕಟ್ಟಿತ್ತು. ಆದ್ರೆ ಯೇಸು ಅವ್ರಿಗೆ ಬೇರೆಯವ್ರನ್ನ ಶ್ರೇಷ್ಠರನ್ನಾಗಿ ನೋಡಿ ಅಂತ ಹೇಳಿದನು. (ಮತ್ತಾ. 20:25-28) ಅವರು ದೀನರಾಗಿ ಇರಬೇಕು ಅಂತ ಕಲಿಸಿದನು. ಅದಕ್ಕೆ, ತಾನು ಸಾಯೋ ಹಿಂದಿನ ರಾತ್ರಿ ಸೇವಕನ ತರ ಶಿಷ್ಯರ ಕಾಲನ್ನ ತೊಳೆದನು. (ಯೋಹಾ. 13:3-5, 12-16) ಹೀಗೆ, ದೀನತೆ ಇದ್ರೆ ಸ್ನೇಹ ಸಂಬಂಧ ಕಾಪಾಡ್ಕೊಬಹುದು ಅಂತ ತೋರಿಸ್ಕೊಟ್ಟನು. ಶಿಷ್ಯರು ದೀನತೆ ತೋರಿಸೋದನ್ನ ಕಲಿತ್ರು. ಆದ್ರಿಂದ ಭಿನ್ನಾಭಿಪ್ರಾಯ ಬಂದಾಗ ಒಬ್ರಿಗೊಬ್ರು ಬಿಟ್ಟುಕೊಟ್ಟು, ತಮ್ಮ ಸ್ನೇಹನ ಉಳಿಸ್ಕೊಂಡ್ರು.

8. ಭಿನ್ನಾಭಿಪ್ರಾಯ ಬಂದಾಗ ನಿಮ್ಮ ಸ್ನೇಹನ ಕಾಪಾಡ್ಕೊಳ್ಳೋಕೆ ದೀನತೆ ಹೇಗೆ ಸಹಾಯ ಮಾಡುತ್ತೆ? (ಕೊಲೊಸ್ಸೆ 3:13) (ಚಿತ್ರ ನೋಡಿ.)

8 ಸ್ನೇಹನ ಉಳಿಸ್ಕೊಳ್ಳೋಕೆ ಏನು ಮಾಡಬೇಕು? ನಾವು ದೀನತೆ ಬೆಳೆಸ್ಕೊಬೇಕು. ಇದು ಭಿನ್ನಾಭಿಪ್ರಾಯನ ಮನಸ್ಸಿಗೆ ಹಚ್ಕೊಳ್ಳದೇ ಬೇರೆಯವ್ರನ್ನ ಉದಾರವಾಗಿ ಕ್ಷಮಿಸೋಕೆ ಸಹಾಯ ಮಾಡುತ್ತೆ. (ಕೊಲೊಸ್ಸೆ 3:13 ಓದಿ.) ನಾವು ದೀನತೆ ತೋರಿಸಿದ್ರೆ ಭಿನ್ನಾಭಿಪ್ರಾಯ ಬಂದಾಗ್ಲೂ ತಟ್ಟಂತ ಕೋಪ ಮಾಡ್ಕೊಳ್ಳಲ್ಲ, ಕೂಗಾಡಲ್ಲ. (ಕೀರ್ತ. 4:4) ಬೇರೆಯವರು ನೋವಾಗೋ ತರ ಮಾತಾಡಿದ್ರೆ, ‘ಎಲ್ರೂ ಮಾತಲ್ಲಿ ಎಡವುತ್ತಾರೆ, ಆಮೇಲೆ ನಾನು ಹಾಗೆ ಹೇಳಬಾರ್ದಿತ್ತು’ ಅಂತ ಬೇಜಾರು ಮಾಡ್ಕೊತಾರೆ ಅನ್ನೋದನ್ನ ನೆನಪಿಡಿ. (ಪ್ರಸಂ. 7:21, 22) ‘ನಂಗೆ, ನಾನು ಹೇಳಿದ್ದೇ ಸರಿ ಅಂತ ಪ್ರೂವ್‌ ಮಾಡೋದು ಮುಖ್ಯನಾ? ಅಥವಾ ಸ್ನೇಹನ ಕಾಪಾಡ್ಕೊಳ್ಳೋದು ಮುಖ್ಯನಾ?’ ಅಂತ ಕೇಳ್ಕೊಳ್ಳಿ. ಫ್ರೆಂಡ್‌ ಹೇಳಿದ ಮಾತನ್ನ ಗೌರವಿಸಿ ಬಿಟ್ಕೊಡಿ. ಆ ವಿಷ್ಯದ ಬಗ್ಗೆನೇ ಯೋಚ್ನೆ ಮಾಡ್ತಾ ಕೂರಬೇಡಿ. ಅದ್ರ ಬಗ್ಗೆ ಮತ್ತೆ ಮಾತು ಎತ್ತೋಕೆ ಹೋಗಬೇಡಿ.

ಚಿತ್ರ: ವಯಸ್ಸಾದ ಸಹೋದರ ಯೇಸು ತರ ದೀನತೆ ತೋರಿಸ್ತಿದ್ದಾನೆ. 1. ಯೇಸು ಒಬ್ಬ ಅಪೊಸ್ತಲನ ಕಾಲನ್ನ ತೊಳಿತಿದ್ದಾನೆ. 2. ಯುವ ಸಹೋದರ ಸಭೆಯ ಟೆರಿಟೊರಿ ಮ್ಯಾಪ್‌ ತೋರಿಸ್ತಿದ್ದಾನೆ, ಅದನ್ನ ವಯಸ್ಸಾದ ಸಹೋದರ ಸಂಶಯದಿಂದ ನೋಡ್ತಿದ್ದಾನೆ. 3. ಆ ಇಬ್ರು ಸಹೋದರರು ಸಂತೋಷದಿಂದ ಒಟ್ಟಿಗೆ ಸೇವೆ ಮಾಡ್ತಿದ್ದಾರೆ.

ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನ ಮನಸ್ಸಿಗೆ ಹಚ್ಕೊಳ್ಳದೇ ಸ್ನೇಹಿತರನ್ನ ಕ್ಷಮಿಸೋಕೆ ದೀನತೆ ಸಹಾಯ ಮಾಡುತ್ತೆ (ಪ್ಯಾರ 8 ನೋಡಿ)a


9. ಭಿನ್ನಾಭಿಪ್ರಾಯ ಹಾಗೇ ಮುಂದುವರಿತಾ ಇದ್ರೆ ದೀನತೆ ಹೇಗೆ ಸಹಾಯ ಮಾಡುತ್ತೆ? (ಜ್ಞಾನೋಕ್ತಿ 17:9)

9 ಭಿನ್ನಾಭಿಪ್ರಾಯ ಕೆಲವೊಮ್ಮೆ ಹಾಗೇ ಮುಂದೆವರಿಯಬಹುದು. ಆಗ ‘ನಾನೇ ಸರಿ, ನಾನು ಹೇಳಿದ್ದೇ ಆಗಬೇಕು’ ಅಂತ ಸಮರ್ಥಿಸೋಕೆ ಹೋಗಬೇಡಿ. (ಜ್ಞಾನೋಕ್ತಿ 17:9 ಓದಿ; 1 ಕೊರಿಂ. 6:7) ನಿಮ್ಮ ಸ್ನೇಹನ ಉಳಿಸ್ಕೊಳ್ಳೋಕೆ ಏನೆಲ್ಲ ಮಾಡೋಕೆ ಆಗುತ್ತೋ ಅದನ್ನೆಲ್ಲ ಮಾಡಿ. ತುಂಬ ಜನ ನೇರವಾಗಿ ಹೋಗಿ ಮಾತಾಡಿದ್ರಿಂದ ಅವ್ರಿಗೆ ಪ್ರಯೋಜ್ನ ಆಗಿದೆ ಅಂತ ಹೇಳ್ತಾರೆ. (ಕೀರ್ತ. 34:14) ನೀವು ನಿಮ್ಮ ಫ್ರೆಂಡ್‌ ಹತ್ರ ಹೋಗಿ, ‘ಎಷ್ಟೇ ಅಂದ್ರೂ ನಾವು ತುಂಬ ವರ್ಷಗಳಿಂದ ಫ್ರೆಂಡ್ಸ್‌ ಅಲ್ವಾ? ಇದ್ರ ಬಗ್ಗೆ ಸ್ವಲ್ಪ ಹೊತ್ತು ಮಾತಾಡೋಣ್ವಾ?’ ಅಂತ ಕೇಳಿ. ಭಿನ್ನಾಭಿಪ್ರಾಯಕ್ಕೆ ನಿಮ್ಮ ಪಾಲೂ ಇದೆ, ನಿಮ್ಮಿಂದ ನೋವಾಗಿದೆ ಅಂತ ಹೇಳಿ ಕ್ಷಮೆ ಕೇಳಿ. ಒಂದುವೇಳೆ ನಿಮ್ಮ ಸ್ನೇಹಿತ ಅವನು ಮಾಡಿರೋ ತಪ್ಪಿಗೆ ಕ್ಷಮೆ ಕೇಳಿದ್ರೆ, ಅವ್ರನ್ನ ಮನಸಾರೆ ಕ್ಷಮಿಸಿ. (ಲೂಕ 17:3, 4) ನೆನಪಿಡಿ, ನಿಮ್ಮ ಗುರಿ ಯಾರು ಸರಿ, ಯಾರು ತಪ್ಪು ಅಂತ ಸಾಬೀತು ಮಾಡೋದಲ್ಲ. ಬದ್ಲಿಗೆ ನಿಮ್ಮ ಸ್ನೇಹನ ಕಾಪಾಡ್ಕೊಳ್ಳೋದೇ ಆಗಿದೆ.—ಜ್ಞಾನೋ. 18:24.

ವ್ಯಕ್ತಿತ್ವ ಬೇರೆ-ಬೇರೆ ಇದ್ದಾಗ . . .

10. ಕೆಲವ್ರ ಜೊತೆ ಸ್ನೇಹನ ಉಳಿಸ್ಕೊಳ್ಳೋದು ಯಾಕೆ ಕಷ್ಟ?

10 ಸಮಸ್ಯೆ: ಬೇರೆ-ಬೇರೆ ವ್ಯಕ್ತಿತ್ವ. ನಮಗಿಂತ ಭಿನ್ನ ಸ್ವಭಾವದವ್ರ ಜೊತೆ ಸ್ನೇಹನ ಉಳಿಸ್ಕೊಳ್ಳೋಕೆ ಕೆಲವೊಮ್ಮೆ ಕಷ್ಟ ಆಗಬಹುದು. ಕೆಲವರು ಮಾತಾಡೋ ರೀತಿ, ಮಾಡೋ ಕೆಲಸಗಳನ್ನ ನೋಡಿದ್ರೆ ಕಿರಿಕಿರಿ ಆಗಬಹುದು. ಚಿಕ್ಕ ವಯಸ್ಸಿನಲ್ಲಿ ಆದ ಘಟನೆಗಳಿಂದಾಗಿ ಎಲ್ರ ಮುಂದೆ ಧೈರ್ಯದಿಂದ ಮಾತಾಡೋಕೆ ಸ್ವಲ್ಪ ಜನ್ರಿಗೆ ಕಷ್ಟ ಆಗುತ್ತೆ. ಆದ್ರೆ ಬೇರೆ ಕೆಲವರು, ಬೆಳೆದು ಬಂದಿರೋ ರೀತಿಯಿಂದಾಗಿ ಎಲ್ರ ಜೊತೆ ಲವಲವಿಕೆಯಿಂದ ಮಾತಾಡ್ತಾರೆ, ಎಲ್ರ ಜೊತೆ ಬೆರೆಯೋಕೆ ಇಷ್ಟಪಡ್ತಾರೆ. ಇನ್ನು ಕೆಲವರಿಗೆ ನಾಚಿಕೆ ಸ್ವಭಾವ ಇರೋದ್ರಿಂದ ಏನೂ ಮಾತಾಡ್ದೆ ಸುಮ್ನೆ ಇರ್ತಾರೆ, ಒಬ್ರೇ ಇರೋಕೆ ಇಷ್ಟಪಡ್ತಾರೆ.

11. ಬೇರೆಬೇರೆ ವ್ಯಕ್ತಿತ್ವ ಇರೋರ ಜೊತೆ ಸ್ನೇಹ ಕಾಪಾಡ್ಕೊಳ್ಳೋಕೆ ಯೇಸುಗೆ ಯಾವುದು ಸಹಾಯ ಮಾಡ್ತು?

11 ಪರಿಹಾರ: ತಾಳ್ಮೆ. ಯೇಸು ತನ್ನ ತರ ಇರೋ ಜನ್ರನ್ನೇ ಫ್ರೆಂಡ್‌ ಮಾಡ್ಕೋಬೇಕು ಅಂತ ಅಂದ್ಕೊಳ್ಳಲಿಲ್ಲ. ಉದಾಹರಣೆಗೆ, ಅಪೊಸ್ತಲ ಯೋಹಾನ ಮತ್ತು ಯಾಕೋಬ ಸಾಮಾನ್ಯ ವ್ಯಕ್ತಿಗಳಾಗಿದ್ರೂ ಸ್ವರ್ಗದಲ್ಲಿ ದೊಡ್ಡದೊಡ್ಡ ಅಧಿಕಾರ ಸಿಗಬೇಕು ಅಂತ ಆಸೆ ಪಟ್ರು. (ಮಾರ್ಕ 10:35-37) ಆದ್ರೆ ದೇವರ ಮಗನಾಗಿದ್ದ ಯೇಸು ತನಗೆ ಸ್ವರ್ಗದಲ್ಲಿ ದೊಡ್ಡ ಸ್ಥಾನ, ಗೌರವ ಇದ್ರೂ ಅದನ್ನೆಲ್ಲ ಬಿಟ್ಟು ಭೂಮಿಗೆ ಬಂದು ಸೇವಕನ ತರ ಜೀವನ ಮಾಡಿದನು. (ಫಿಲಿ. 2:5-8) ನೋಡಿದ್ರಾ ಇವರಿಬ್ರ ಗುಣಗಳು ಬೇರೆಬೇರೆ. ಆದ್ರೂ ಯೇಸು, ಅವರ ಜೊತೆ ಮತ್ತು ಬೇರೆಯವ್ರ ಜೊತೆ ತಾಳ್ಮೆಯಿಂದ ನಡ್ಕೊಂಡನು.

12. ಯೇಸುಗೆ ತನ್ನ ಶಿಷ್ಯರ ಜೊತೆ ತಾಳ್ಮೆಯಿಂದ ಇರೋಕೆ ಯಾವುದು ಸಹಾಯ ಮಾಡ್ತು?

12 ಯೇಸು ತಾನು ಪರಿಪೂರ್ಣನಾಗಿರೋ ತರ ಶಿಷ್ಯರೂ ಪರಿಪೂರ್ಣವಾಗಿ ನಡ್ಕೊಬೇಕು ಅಂತ ಅಂದ್ಕೊಳ್ಳಲಿಲ್ಲ. ಯೋಹಾನ ಮತ್ತು ಯಾಕೋಬನ ತರ ಬೇರೆ ಶಿಷ್ಯರಿಗೂ ದೊಡ್ಡದೊಡ್ಡ ಸ್ಥಾನ ಪಡ್ಕೊಬೇಕು ಅನ್ನೋ ಆಸೆ ಇದೆ ಅಂತ ಅರ್ಥ ಮಾಡ್ಕೊಂಡನು. (ಮಾರ್ಕ 9:34) ಅಷ್ಟೇ ಅಲ್ಲ, ತಾನೂ ಚಿಕ್ಕಂದಿನಿಂದ ಅಂಥದ್ದೇ ವಾತಾವರಣದಲ್ಲಿ ಬೆಳೆದು ಬಂದಿದ್ದನು. ಆಗಿನ ಸಮಯದಲ್ಲಿ ಸ್ಥಾನಮಾನಕ್ಕೆ ಜನ ತುಂಬ ಬೆಲೆ ಕೊಡ್ತಿದ್ರು. ಇದು ಶಿಷ್ಯರ ಯೋಚ್ನೆ ಮೇಲೆ ಪ್ರಭಾವ ಬೀರಿದೆ ಅಂತ ಯೇಸು ಅರ್ಥ ಮಾಡ್ಕೊಂಡನು. ತುಂಬ ವರ್ಷಗಳಿಂದ ಬೇರೂರಿರೋ ಈ ಗುಣನ ಒಂದೇ ರಾತ್ರಿಯಲ್ಲಿ ಕಿತ್ತು ಬಿಸಾಕೋಕೆ ಆಗಲ್ಲ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಅವ್ರಿಗೆ ಬದಲಾಗೋಕೆ ಸಮಯ ಕೊಟ್ಟನು.—ಮಾರ್ಕ 10:42-45.

13. ಸ್ನೇಹನ ಕಾಪಾಡ್ಕೊಳ್ಳೋಕೆ ತಾಳ್ಮೆ ತೋರಿಸೋದು ಯಾಕೆ ಮುಖ್ಯ? (ಎಫೆಸ 4:2)

13 ಸ್ನೇಹನ ಉಳಿಸ್ಕೊಳ್ಳೋಕೆ ಏನು ಮಾಡಬೇಕು? ಬೇರೆಯವರು ನಮಗೆ ಕಿರಿಕಿರಿ ಮಾಡೋ ತರ ನಡ್ಕೊಂಡ್ರೂ ನಾವು ತಾಳ್ಮೆ ತೋರಿಸೋಕೆ ಕಲಿಬೇಕು. (ಜ್ಞಾನೋ. 14:29) ನಮ್ಮೆಲ್ರ ವ್ಯಕ್ತಿತ್ವ, ಸ್ವಭಾವ ಬೇರೆಬೇರೆ ಆಗಿದೆ, ಅದ್ರಲ್ಲೇನೂ ತಪ್ಪಿಲ್ಲ. ಬೇರೆಯವ್ರಿಗೂ ನಮ್ಮ ಸ್ವಭಾವದಿಂದ ನೋವು, ಬೇಜಾರು ಆಗ್ತಿರಬಹುದು. ಆದ್ರೂ ಅವರು ನಮ್ಮ ಜೊತೆ ತಾಳ್ಮೆಯಿಂದ ಇದ್ದಾಗ ನಮಗೆ ಎಷ್ಟು ಖುಷಿ ಆಗುತ್ತೆ ಅಲ್ವಾ? (ಎಫೆಸ 4:2 ಓದಿ.) ಹಾಗಾಗಿ ಎಲ್ರೂ ನಮ್ಮ ತರಾನೇ ಇರ್ಬೇಕು ಅಂತ ಅಂದ್ಕೊಬಾರದು. ಯಾಕಂದ್ರೆ ಎಲ್ರಿಗೂ ಅವ್ರದ್ದೇ ಆದ ಸ್ವಾತಂತ್ರ್ಯ ಇದೆ. ಅಷ್ಟೇ ಅಲ್ಲ, ನಾಚಿಕೆ ಇರೋ ಒಬ್ಬ ವ್ಯಕ್ತಿಗೆ ನಾಲ್ಕು ಜನ್ರ ಮುಂದೆ ಧೈರ್ಯದಿಂದ ಮಾತಾಡೋಕೆ ಎಷ್ಟು ಕಷ್ಟ ಆಗುತ್ತೆ ಅಂತನೂ ಅರ್ಥ ಮಾಡ್ಕೊಳ್ಳಿ. ಅದ್ರ ಜೊತೆಗೆ ಪಟಪಟ ಅಂತ ಮಾತಾಡೋ ವ್ಯಕ್ತಿಗಳ ಜೊತೆನೂ ತಾಳ್ಮೆಯಿಂದಿರಿ. ನಾವು ಎಲ್ರಿಗೂ ಬೆಸ್ಟ್‌ ಫ್ರೆಂಡ್ಸ್‌ ಆಗೋಕೆ ಆಗಲ್ಲ, ನಿಜ. ಹಾಗಂತ ನಮ್ಮ ತರ ಇರೋರನ್ನೇ ಬೆಸ್ಟ್‌ ಫ್ರೆಂಡ್ಸ್‌ ಮಾಡ್ಕೊಬೇಕು ಅಂತೇನಿಲ್ಲ. ಬೇರೆಬೇರೆ ವ್ಯಕ್ತಿತ್ವ ಇರೋರು ಸಹ ನಮಗೆ ಪ್ರಾಣ ಸ್ನೇಹಿತರಾಗೋಕೆ ಸಾಧ್ಯ. ಅಂಥವ್ರ ಸ್ನೇಹದಿಂದಾನೂ ನಾವು ಖುಷಿ ಖುಷಿಯಾಗಿರಬಹುದು.

14. ನಾವು ತಾಳ್ಮೆ ತೋರಿಸಿದ್ರೆ ಏನು ಮಾಡಬಹುದು?

14 ನಾವು ತಾಳ್ಮೆ ತೋರಿಸಿದ್ರೆ ನಮ್ಮ ಸಹೋದರ ಸಹೋದರಿಯರಲ್ಲಿರೋ ಒಳ್ಳೆ ಗುಣಗಳು ಎದ್ದು ಕಾಣುತ್ತೆ. ಆಗ ಭಿನ್ನ ವ್ಯಕ್ತಿತ್ವ ನಮ್ಮ ಸ್ನೇಹದ ಮಧ್ಯೆ ಅಡ್ಡ ಗೋಡೆ ಆಗೋಕೆ ನಾವು ಬಿಡಲ್ಲ. ಅಪೊಸ್ತಲ ಯೋಹಾನ ಮತ್ತು ಯಾಕೋಬ ದೇವರ ಆಳ್ವಿಕೆಯಲ್ಲಿ ಅವ್ರಿಗೆ ದೊಡ್ಡದೊಡ್ಡ ಸ್ಥಾನಗಳು ಸಿಗಬೇಕು ಅಂತ ಆಸೆ ಪಟ್ರು. ಅದನ್ನ ನೋಡ್ದಾಗ ಇವರು ಎಷ್ಟು ಸ್ವಾರ್ಥಿಗಳು ಅಂತ ಅನ್ಸುತ್ತೆ. ಆದ್ರೆ ತಾಳ್ಮೆಯಿಂದ ಗಮನಿಸಿದ್ರೆ, ಅವರು ದೇವರ ಆಳ್ವಿಕೆ ಖಂಡಿತ ಬರುತ್ತೆ ಅಂತ ಎಷ್ಟು ಬಲವಾಗಿ ನಂಬಿದ್ರು ಅಂತ ಗೊತ್ತಾಗುತ್ತೆ. ಯೇಸು ಅವರ ಈ ನಂಬಿಕೆಯನ್ನ ಗಮನಿಸಿದನು ಮತ್ತು ಮೆಚ್ಕೊಂಡನು. ನಾವೂ ನಮ್ಮ ಸ್ನೇಹಿತರಲ್ಲಿರೋ ಒಳ್ಳೆ ಗುಣಗಳನ್ನ ಮಾತ್ರ ನೋಡೋಕೆ ಕಲಿಬೇಕು. ಆಗ ಯೇಸು ಮತ್ತು ಯೆಹೋವನ ತರ ನಡ್ಕೊಳ್ತೀವಿ.

15. ಭಿನ್ನ ಸ್ವಭಾವದವ್ರ ಜೊತೆ ನಮ್ಮ ಸ್ನೇಹನ ಕಾಪಾಡ್ಕೊಳ್ಳೋಕೆ ಯಾರು ಸಹಾಯ ಮಾಡ್ತಾರೆ?

15 ಭಿನ್ನ ವ್ಯಕ್ತಿತ್ವ ಇರೋರ ಜೊತೆ ಸ್ನೇಹನ ಕಾಪಾಡ್ಕೊಳ್ಳೋಕೆ ಯೆಹೋವನ ಹತ್ರ ಸಹಾಯಕ್ಕಾಗಿ ಪ್ರಾರ್ಥನೆ ಮಾಡಿ. ಜೊತೆಗೆ, ಯಾವ ಪರಿಸ್ಥಿತಿ ಅಥವಾ ವಿಷ್ಯಗಳಿಂದಾಗಿ ನಿಮ್ಮಿಬ್ರ ಸ್ನೇಹಕ್ಕೆ ಸಮಸ್ಯೆಗಳು ಬರಬಹುದು ಅಂತ ಮೊದಲೇ ಯೋಚ್ನೆ ಮಾಡಿ ನೋಡಿ. ಆ ಸನ್ನಿವೇಶದಲ್ಲಿ ತಾಳ್ಮೆಯಿಂದ ಇರೋಕೆ ಮೊದಲೇ ಯೆಹೋವನ ಹತ್ರ ಸಹಾಯಕ್ಕಾಗಿ ಪ್ರಾರ್ಥಿಸಿ. ನೆನಪಿಡಿ, ಯೆಹೋವ ನಮ್ಮ ಸೃಷ್ಟಿಕರ್ತ ಆಗಿರೋದ್ರಿಂದ ನಾವೆಲ್ರೂ ಬೇರೆಬೇರೆ ಆಗಿದ್ದೀವಿ, ನಮ್ಮ ವ್ಯಕ್ತಿತ್ವ ಬೇರೆಬೇರೆ ಅಂತ ಆತನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ನೀವು ಪ್ರಾರ್ಥನೆ ಮಾಡ್ವಾಗ ತಾಳ್ಮೆ ತೋರಿಸೋಕೆ ನಿಮಗೆ ಏನು ಅಗತ್ಯ ಇದೆಯೋ ಅದು ಯೆಹೋವನಿಗೆ ಚೆನ್ನಾಗಿ ಗೊತ್ತಿದೆ, ಅದನ್ನ ಆತನು ಖಂಡಿತ ಕೊಡ್ತಾನೆ ಅಂತ ನೆನಪಿಡಿ. ಇಷ್ಟೆಲ್ಲ ಮಾಡಿದ ಮೇಲೂ ಕೆಲವೊಮ್ಮೆ ಕೋಪ ಆಗಾಗ ಬರ್ತಾ ಇರಬಹುದು. ಆಗ್ಲೂ ನೀವು ಯೆಹೋವನ ಪವಿತ್ರ ಶಕ್ತಿಗಾಗಿ ಬೇಡ್ಕೊಳ್ಳೋದನ್ನ ಮುಂದುವರಿಸಿ.—ಲೂಕ 11:13; ಗಲಾ. 5:22, 23.

ಸ್ನೇಹಿತರಿಗೆ ಕಾಯಿಲೆ ಇದ್ದಾಗ. . .

16. ನಮ್ಮ ಸ್ನೇಹಿತರು ಕಾಯಿಲೆ ಬಿದ್ದಾಗ ನಾವು ಯಾವ ಸಮಸ್ಯೆಗಳನ್ನ ಅಥವಾ ತೊಂದ್ರೆಗಳನ್ನ ಎದುರಿಸಬಹುದು?

16 ಸಮಸ್ಯೆ: ಕಾಯಿಲೆ. ನಮ್ಮ ಸ್ನೇಹಿತರು ಕಾಯಿಲೆ ಬಿದ್ದಾಗ ಅಥವಾ ಭಾವನಾತ್ಮಕವಾಗಿ ಕುಗ್ಗಿ ಹೋದಾಗ ಅವ್ರನ್ನ ಮಾತಾಡಿಸೋಕೆ ಅವ್ರ ಜೊತೆ ಸಮಯ ಕಳೆಯೋಕೆ ನಮಗೆ ಕಷ್ಟ ಆಗುತ್ತೆ. ಯಾಕೆ? ಉದಾಹರಣೆಗೆ, ಅವರು ಏನೂ ಮಾತಾಡದೇ ಸುಮ್ನೆ ಇರಬಹುದು ಅಥವಾ ನಮಗೆ ಕಿರಿಕಿರಿ ಆಗೋ ತರ ನಡ್ಕೊಬಹುದು. ಕೆಲವೊಮ್ಮೆ ಇದ್ದಕ್ಕಿದ್ದಂತೆ ಏನಾದ್ರೂ ಹೇಳಿಬಿಡಬಹುದು ಅಥವಾ ಮಾಡಿಬಿಡಬಹುದು. ಇದ್ರಿಂದ ನಮಗೆ ತುಂಬ ಬೇಜಾರಾಗುತ್ತೆ, ನೋವಾಗುತ್ತೆ. (ಯೋಬ 6:2, 3) ಅವ್ರಿಗೆ ಯಾವೆಲ್ಲ ಕಷ್ಟಗಳಿವೆ ಅಂತ ನಮಗೆ ಕರೆಕ್ಟಾಗಿ ಗೊತ್ತಿಲ್ದೇ ಇರೋದ್ರಿಂದ ‘ಅವರು ಯಾಕೆ ನನ್ನ ಜೊತೆ ಹೀಗೆ ನಡ್ಕೊಳ್ತಿದ್ದಾರೆ?’ ಅಂತ ಯೋಚಿಸ್ತೀವಿ. ಅಷ್ಟೇ ಅಲ್ಲ, ಕೆಲವೊಮ್ಮೆ ಅವರು ತಕ್ಷಣ ಮೊದಲಿನ ತರನೇ ನಡ್ಕೊಬೇಕು ಅಂತ ಅತಿಯಾಗಿ ನಿರೀಕ್ಷಿಸ್ತೀವಿ.

17. ಕುರುಡನಾಗಿದ್ದ ಬಾರ್ತಿಮಾಯನ ಜೊತೆ ಯೇಸು ನಡ್ಕೊಂಡ ರೀತಿಯಿಂದ ನಾವೇನು ಕಲಿಬಹುದು?

17 ಪರಿಹಾರ: ದಯೆ ಮತ್ತು ಅನುಕಂಪ. ಯಾರೆಲ್ಲ ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ರೋ ಅಂಥವ್ರ ಜೊತೆ ಯೇಸು ದಯೆ ಮತ್ತು ಅನುಕಂಪದಿಂದ ನಡ್ಕೊಂಡನು. ಕೆಲವ್ರನ್ನಂತೂ ಯೇಸು ಈ ಮುಂಚೆ ಯಾವತ್ತೂ ನೋಡಿರ್ಲಿಲ್ಲ. ಆದ್ರೂ ಅವ್ರ ಜೊತೆ ಹೀಗೆ ನಡ್ಕೊಂಡನು. ಬಾರ್ತಿಮಾಯ ಅನ್ನೋ ಒಬ್ಬ ಕುರುಡ ಇದ್ದ. ಯೇಸು ದಾರಿಯಲ್ಲಿ ನಡ್ಕೊಂಡು ಹೋಗ್ತಿದ್ದಾನೆ ಅಂತ ಅವನಿಗೆ ಗೊತ್ತಾಯ್ತು. ಆಗ ಅವನು, ಯೇಸು ತನ್ನ ಕಡೆ ನೋಡ್ಲಿ ಅಂತ ಜೋರಾಗಿ ಕಿರುಚೋಕೆ ಶುರು ಮಾಡಿದ. ಹೇಗಾದ್ರೂ ಮಾಡಿ ಯೇಸು ಗಮನ ತನ್ನ ಕಡೆ ಬರೋ ತರ ಮಾಡಬೇಕು, ತಾನು ಗುಣ ಆಗಬೇಕು ಅಂತ ಅವನು ಅಂದ್ಕೊಂಡ. ಆಗ ಅಲ್ಲಿದ್ದ ಜನರು ‘ಬಾರ್ತಿಮಾಯ ಸುಮ್ನಿರು’ ಅಂತ ಹೇಳಿದ್ರು. ಆದ್ರೂ ಅವನು ಕೂಗಾಡೋದನ್ನ, ಕಿರುಚಾಡೋದನ್ನ ನಿಲ್ಲಿಸಲಿಲ್ಲ. ಇವನು ಈ ರೀತಿ ನಡ್ಕೊಂಡಿದ್ದನ್ನ ನೋಡಿ ಅವ್ರಿಗೆ ಕಿರಿಕಿರಿ ಆಗಿರಬಹುದಾ? ಆಗಿರಬಹುದು. ಆದ್ರೆ ಯೇಸುಗೆ ಬಾರ್ತಿಮಾಯನನ್ನ ನೋಡಿ ತುಂಬ ‘ಕನಿಕರ ಬಂತು’ ಅಂತ ಬೈಬಲ್‌ ಹೇಳುತ್ತೆ. (ಮತ್ತಾ. 20:34; ಮಾರ್ಕ 10:46-52) ಹಾಗಾಗಿ ಯೇಸು ಅವನ ಜೊತೆ ದಯೆಯಿಂದ ನಡ್ಕೊಂಡನು ಅವನು ತೋರಿಸಿದ ನಂಬಿಕೆನ ಮೆಚ್ಕೊಂಡನು. ಅಷ್ಟೇ ಅಲ್ಲ, ಅವನಿಗೆ ಅದ್ಭುತವಾಗಿ ಕಣ್ಣು ಕಾಣೋ ತರ ಮಾಡಿದನು.

18. ಕಾಯಿಲೆಯಿಂದ ನರಳ್ತಿರೋ ನಮ್ಮ ಸ್ನೇಹಿತರ ಜೊತೆ ನಾವು ಹೇಗೆ ನಡ್ಕೊಬೇಕು? (1 ಥೆಸಲೊನೀಕ 5:14)

18 ನಿಮ್ಮ ಸ್ನೇಹನ ಕಾಪಾಡ್ಕೊಳ್ಳೋಕೆ ನೀವೇನು ಮಾಡಬಹುದು? ದಯೆ ಮತ್ತು ಅನುಕಂಪ ಅನ್ನೋ ಗುಣಗಳನ್ನ ತೋರಿಸಿ. ಇವು ಕೋಮಲವಾದ ಗುಣಗಳು. ಕಾಯಿಲೆಯಲ್ಲಿ ನರಳುತ್ತಿರೋ ನಮ್ಮ ಸ್ನೇಹಿತರಿಗೆ ‘ಸಂತೈಸೋ ತರ ಮಾತಾಡೋಕೆ’ ಈ ಗುಣಗಳು ನಮಗೆ ಸಹಾಯ ಮಾಡುತ್ತೆ. (1 ಥೆಸಲೊನೀಕ 5:14 ಓದಿ.) ನೆನಪಿಡಿ, ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಅದ್ರಲ್ಲೂ ಮುಖ್ಯವಾಗಿ ‘ಕಷ್ಟ ಕಾಲದಲ್ಲಿ’ ಸಹಾಯ ಮಾಡೋಕೆ ಸಿದ್ಧನಾಗಿ ಇರ್ತಾನೆ. (ಜ್ಞಾನೋ. 17:17) ಅಂಥ ಫ್ರೆಂಡ್‌ ಕಷ್ಟಗಳನ್ನ ನೋಡಿ ಬರೀ ‘ಅಯ್ಯೋ ಪಾಪ’ ಅನ್ನಲ್ಲ. ಬದ್ಲಿಗೆ ಅವ್ರಿಗೆ ಬೇಕಾದ ಭಾವನಾತ್ಮಕ ಬೆಂಬಲ ಕೊಡ್ತಾನೆ, ಪ್ರೋತ್ಸಾಹದ ಮಾತುಗಳನ್ನ ಹೇಳ್ತಾನೆ ಮತ್ತು ಅಗತ್ಯ ಇರೋ ಸಹಾಯನ ಮಾಡೋಕೆ ತನ್ನಿಂದಾದ ಎಲ್ಲವನ್ನ ಮಾಡ್ತಾನೆ.

19. ನಾವು ಹೇಗೆ ದಯೆ ಮತ್ತು ಅನುಕಂಪ ತೋರಿಸಬಹುದು? (ಚಿತ್ರ ನೋಡಿ.)

19 ನಾವು ಹೇಗೆ ನಮ್ಮ ಸ್ನೇಹಿತರಿಗೆ ದಯೆ ಮತ್ತು ಅನುಕಂಪ ತೋರಿಸಬಹುದು? ನಮಗೆ ಯೇಸು ತರ ಅವ್ರ ಕಾಯಿಲೆಯನ್ನ ತೆಗೆಯೋಕೆ ಆಗಲ್ಲ ನಿಜ. ಆದ್ರೆ ಅವರು ಪಡ್ತಿರೋ ಕಷ್ಟನ, ಅವ್ರಿರೋ ಪರಿಸ್ಥಿತಿನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದಾದ ಎಲ್ಲವನ್ನ ಮಾಡಬಹುದು. (ಮತ್ತಾ. 7:12; 1 ಪೇತ್ರ 3:8) ಅವರು ಮಾತಾಡ್ವಾಗ ನಾವು ಗಮನ ಕೊಟ್ಟು ಕೇಳಿಸ್ಕೊಬೇಕು. ಅವ್ರಿಗೇನು ಹೇಳಿದ್ರೆ ಸಾಂತ್ವನ ಆಗುತ್ತೆ ಅಂತ ಯೋಚಿಸಿ ಮಾತಾಡಬೇಕು. (ಜ್ಞಾನೋ. 12:25) ಅವರು ಪಡ್ತಿರೋ ಕಷ್ಟಗಳ ಬಗ್ಗೆ ನನಗೆ ಪೂರ್ತಿ ಗೊತ್ತು ಅಂತ ನಾವು ಅಂದ್ಕೊಬಾರದು. (ಜ್ಞಾನೋ. 18:13) ಅವ್ರ ಜೊತೆ ನಾವು ತಾಳ್ಮೆಯಿಂದ ಇರ್ಬೇಕು. ಅವರು ಮಾತಲ್ಲಿ ಎಡವುತ್ತಾರೆ ಅಂತ ಮನಸ್ಸಲ್ಲಿ ಇಡಬೇಕು.—ಎಫೆ. 4:32.

ಚಿತ್ರ: ಒಬ್ಬ ಸಹೋದರಿ ಇನ್ನೊಬ್ಬ ಸಹೋದರಿಯನ್ನ ಸಂತೈಸ್ತಿದ್ದಾರೆ. 1. ತನ್ನ ಫ್ರೆಂಡ್‌ ಕಣ್ಣೀರಿಂದ ದುಃಖನ ತೋಡ್ಕೊಳ್ಳುವಾಗ ಸಹೋದರಿ ಅದನ್ನ ಗಮನ ಕೊಟ್ಟು ಕೇಳ್ತಿದ್ದಾಳೆ. 2. ಆ ಸಹೋದರಿ ತನ್ನ ಫ್ರೆಂಡ್‌ಗೆ ಮನೇಲಿ ತಯಾರಿಸಿದ ಬಿಸ್ಕೆಟ್‌ನ ಕೊಡ್ತಿದ್ದಾರೆ.

ದಯೆ ಮತ್ತು ಅನುಕಂಪ ತೋರಿಸ್ತಾ ನಿಜ ಸ್ನೇಹಿತರು ಸಾಂತ್ವನ ಕೊಡ್ತಾರೆ (ಪ್ಯಾರ 19 ನೋಡಿ)


20. ನೀವು ಎಂಥ ಸ್ನೇಹಿತರಾಗಲು ಇಷ್ಟಪಡ್ತೀರಾ?

20 ಸಭೆಯಲ್ಲಿ ನಮಗಿರೋ ಸ್ನೇಹಿತರು ಯೆಹೋವ ದೇವರು ನಮಗೆ ಕೊಟ್ಟಿರೋ ವರ. ಆದ್ರೆ ನಾವೆಲ್ರೂ ಅಪರಿಪೂರ್ಣರಾಗಿ ಇರೋದ್ರಿಂದ ಕೆಲವೊಮ್ಮೆ ನಮ್ಮ ಮಾತಲ್ಲಿ, ನಡತೆಯಲ್ಲಿ ಎಡವುತ್ತೀವಿ. ಅಷ್ಟೇ ಅಲ್ಲ, ನಾವು ಚಿಕ್ಕವರಿಂದ ಬೆಳೆದು ಬಂದಿರೋ ರೀತಿ ಅಥವಾ ನಮ್ಮ ಜೀವನದಲ್ಲಿ ಆದ ಕಹಿ ಘಟನೆಗಳು ತಪ್ಪಾಗಿ ನಡ್ಕೊಳ್ಳೋ ತರ ಮಾಡಿಬಿಡುತ್ತೆ. ಆದ್ರೆ ನಮ್ಮ ಸ್ನೇಹಿತರು ನಮ್ಮ ಜೊತೆ ತಾಳ್ಮೆಯಿಂದ, ದೀನತೆಯಿಂದ, ದಯೆಯಿಂದ ಮತ್ತು ಅನುಕಂಪದಿಂದ ನಡ್ಕೊಂಡ್ರೆ ನಮಗೆ ಎಷ್ಟು ಖುಷಿಯಾಗುತ್ತಲ್ವಾ? ಹಾಗಾಗಿ ನಾವೆಲ್ರೂ ಇಂಥ ಗುಣಗಳನ್ನ ತೋರಿಸೋ ನಿಜವಾದ ಸ್ನೇಹಿತರಾಗಿ ಇರೋಣ.

ಇಂಥ ಸನ್ನಿವೇಶದಲ್ಲಿ ನಿಮ್ಮ ಸ್ನೇಹನ ಕಾಪಾಡ್ಕೊಳ್ಳೋಕೆ ಏನು ಮಾಡ್ತೀರಾ?

  • ಭಿನ್ನಾಭಿಪ್ರಾಯ ಬಂದಾಗ

  • ಬೇರೆ-ಬೇರೆ ವ್ಯಕ್ತಿತ್ವ ಇದ್ದಾಗ

  • ಸ್ನೇಹಿತರು ಕಾಯಿಲೆ ಬಿದ್ದಾಗ

ಗೀತೆ 101 ಬಾಳೋಣ ಐಕ್ಯದಿ

a ಚಿತ್ರ ವಿವರಣೆ:ಟೆರಿಟೊರಿ ವಿಷ್ಯದಲ್ಲಿ ಒಬ್ಬ ಯುವ ಸಹೋದರನಿಗೆ ಮತ್ತು ವಯಸ್ಸಾದ ಸಹೋದರನಿಗೆ ಭಿನ್ನಾಭಿಪ್ರಾಯ ಬಂದಿದೆ. ಆದ್ರೆ ಆಮೇಲೆ ಅವ್ರಿಬ್ರೂ ಜೊತೆಯಾಗಿ ಸೇವೆ ಮಾಡ್ತಿದ್ದಾರೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ