ಆಗಸ್ಟ್ 3-9, 2026
ಗೀತೆ 113 ಶಾಂತಿಯ ಸಂಪತ್ತು
ಬೇರೆಯವರ ನಿರ್ಧಾರಗಳನ್ನ ಗೌರವಿಸಿ
“ಅವನ ಅಭಿಪ್ರಾಯ ನಿಮ್ಮ ಅಭಿಪ್ರಾಯಕ್ಕಿಂತ ಬೇರೆ ಆಗಿದ್ರೆ ಅದನ್ನ ತಪ್ಪು ಅಂತ ತೀರ್ಪು ಮಾಡಬೇಡಿ.”—ರೋಮ. 14:1.
ಈ ಲೇಖನದಲ್ಲಿ ಏನಿದೆ?
ಬೇರೆಯವರು ಮಾಡೋ ನಿರ್ಧಾರ ನಮಗಿಷ್ಟ ಆಗದಿದ್ದಾಗ, ನಾವದನ್ನ ಒಪ್ಪದಿದ್ದಾಗ ಹೇಗೆ ಗೌರವ ತೋರಿಸಬಹುದು?
1-2. ಕೆಲವೊಮ್ಮೆ ನಾವು ಯಾಕೆ ಬೇರೆ-ಬೇರೆ ರೀತಿಯ ನಿರ್ಧಾರಗಳನ್ನ ಮಾಡ್ತೀವಿ?
ನೀವು ಮಾಡಿದ ನಿರ್ಧಾರ ನೋಡಿ ಜನ ನಿಮ್ಮ ಬಗ್ಗೆ ತಪ್ಪಾಗಿ ತೀರ್ಪು ಮಾಡಿದ್ದಾರಾ? ಒಬ್ಬ ಸಹೋದರa ಮಾಡಿದ ನಿರ್ಧಾರ ನೋಡಿ ನೀವು ಅವ್ರ ಬಗ್ಗೆ ತಪ್ಪಾಗಿ ತೀರ್ಪು ಮಾಡಿದ್ದೀರಾ? ಈ ಎರಡೂ ಪ್ರಶ್ನೆಗಳಿಗೆ ನಮ್ಮಲ್ಲಿರೋ ಎಷ್ಟೋ ಜನ ‘ಹೌದು’ ಅಂತಾನೇ ಉತ್ರ ಕೊಡಬಹುದು!
2 ಕ್ರೈಸ್ತ ಸಭೇಲಿ ನಾವೆಲ್ರೂ ಒಂದೇ ಕುಟುಂಬದ ತರ ಇದ್ರೂ ನಾವು ಮಾಡೋ ನಿರ್ಧಾರಗಳು ಬೇರೆ-ಬೇರೆ ಆಗಿರುತ್ತೆ. ಯಾಕಂದ್ರೆ ನಾವೆಲ್ರೂ ಒಂದೇ ತರ ಇಲ್ಲ, ಹಾಗಾಗಿ ನಾವು ಒಂದೇ ತರ ಯೋಚ್ನೆ ಮಾಡೋಕೆ ಆಗಲ್ಲ. ನಾವು ಬೆಳೆದು ಬಂದಿರೋ ರೀತಿ, ಸಂಸ್ಕೃತಿ, ಹಿನ್ನೆಲೆ, ಜೀವನದಲ್ಲಿ ನಡೆದಿರೋ ವಿಷ್ಯಗಳೆಲ್ಲ ಬೇರೆ-ಬೇರೆ. ಇವೆಲ್ಲಾ ನಮ್ಮ ಯೋಚ್ನೆ ಮೇಲೆ ಪ್ರಭಾವ ಬೀರುತ್ತೆ. ಆದ್ರೆ ಏನೇ ಆಗಲಿ ನಾವು ಯೋಚ್ನೆ ಮಾಡೋ ರೀತಿ, ನಮ್ಮ ಅಭಿಪ್ರಾಯ ಅಥವಾ ಬೇರೆ ಯಾವುದೇ ವಿಷ್ಯ ಸಭೇಲಿರೋ ಒಗ್ಗಟ್ಟು ಮತ್ತು ಶಾಂತಿಯನ್ನ ಮುರಿಯೋಕೆ ನಾವು ಬಿಡಬಾರದು.—ಎಫೆ. 4:3.
3. (ಎ) ಬೇರೆಯವರು ನಿರ್ಧಾರ ತಗೊಂಡಾಗ ನಾವು ಯಾಕೆ ಅವರ ಬಗ್ಗೆ ತೀರ್ಪು ಮಾಡಿಬಿಡ್ತೀವಿ?
3 ಒಬ್ಬ ಸಹೋದರ ನಾವು ಒಪ್ಪದೇ ಇರೋ ನಿರ್ಧಾರ ಮಾಡಿಬಿಡಬಹುದು. ಅಂಥ ಟೈಮಲ್ಲಿ ಅವ್ರ ಹತ್ರ ಹೋಗಿ, ‘ನೀವು ನಿಮ್ಮ ನಿರ್ಧಾರನ ಬದಲಾಯಿಸಿ’ ಅಂತ ಹೇಳೋಣ ಅಂತ ಅನಿಸಬಹುದು. ಮೂರನೇ ವ್ಯಕ್ತಿ ಹತ್ರ, ‘ಅವರು ಮಾಡ್ತಿರೋದು ಸರಿಯಲ್ಲ, ತಪ್ಪು ನಿರ್ಧಾರ ತಗೊಂಡಿದ್ದಾರೆ’ ಅಂತ ಹೇಳೋಣ ಅಂತನೂ ಅಂದ್ಕೊಬಹುದು. ನಮ್ಮ ಉದ್ದೇಶ ಒಳ್ಳೇದೇ ಆಗಿರಬಹುದು. ಯಾಕಂದ್ರೆ ನಾವು ಪ್ರತಿಯೊಬ್ಬ ಸಹೋದರ ಸಹೋದರಿಯರನ್ನ ಪ್ರೀತಿಸ್ತೀವಿ. ಅವ್ರಿಗೆ ಯಾವಾಗ್ಲೂ ಒಳ್ಳೇದಾಗಬೇಕು ಅಂತ ಬಯಸ್ತೀವಿ. (ಜ್ಞಾನೋ. 17:17) ಅಷ್ಟೇ ಅಲ್ಲ, ಅವರು ತಗೊಳ್ಳೋ ನಿರ್ಧಾರದಿಂದ ಮುಂದೆ ಅವ್ರ ಜೀವನದಲ್ಲಿ ಯಾವುದೇ ನೋವಾಗಬಾರದು, ಯೆಹೋವನ ಜೊತೆ ಅವ್ರಿಗಿರೋ ಸಂಬಂಧ ಹಾಳಾಗಬಾರದು ಅಂತನೂ ಇಷ್ಟಪಡ್ತೀವಿ.
4-5. ನಾವು ಇಷ್ಟಪಡದೇ ಇರೋ ನಿರ್ಧಾರನ ಯಾರಾದ್ರೂ ಮಾಡಿದಾಗ ಏನು ಮಾಡಬೇಕು?
4 ಒಬ್ಬ ವ್ಯಕ್ತಿ ತಗೊಂಡಿರೋ ನಿರ್ಧಾರ ನಿಮಗೆ ಇಷ್ಟ ಆಗ್ತಿಲ್ಲ ಅಂದಾಗ ಅದ್ರ ಬಗ್ಗೆ ಹೋಗಿ ಅವ್ರ ಹತ್ರ ಮಾತಾಡಬೇಕಾ? ಆ ತರ ಹೋಗಿ ಮಾತಾಡೋ ಮುಂಚೆ ಕೆಲವು ವಿಷ್ಯಗಳ ಬಗ್ಗೆ ಯೋಚ್ನೆ ಮಾಡಬೇಕು. ಉದಾಹರಣೆಗೆ, ಒಬ್ಬ ಸಹೋದರ ದೇವರ ಆಜ್ಞೆಗಳಿಗೆ ವಿರುದ್ಧವಾಗಿ ನಿರ್ಧಾರ ಮಾಡಿದ್ರೆ, ಅವನ ಮೇಲಿರೋ ಪ್ರೀತಿಯಿಂದ ನೀವು ಅವನಿಗೆ ಸರಿಯಾಗಿ ಯೋಚ್ನೆ ಮಾಡೋಕೆ, ನಿರ್ಧಾರ ಮಾಡೋಕೆ ಸಹಾಯ ಮಾಡಬೇಕು. (ಜ್ಞಾನೋ. 27:5, 6) ಆದ್ರೆ ಒಬ್ಬ ಸಹೋದರ ಮಾಡಿರೋ ನಿರ್ಧಾರ ದೇವರ ನಿಯಮಗಳಿಗೆ ವಿರುದ್ಧವಾಗಿಲ್ಲ, ಅದು ಬರೀ ನಿಮಗೆ ಇಷ್ಟ ಆಗ್ತಿಲ್ಲ ಅಂದಾಗ ಏನು ಮಾಡಬೇಕು? ಅದಕ್ಕೆ ಉತ್ರ ಈ ಲೇಖನದ ಮುಖ್ಯ ವಚನದಲ್ಲಿದೆ. ಅದು ಹೇಳೋದು, “ಅವನ ಅಭಿಪ್ರಾಯ ನಿಮ್ಮ ಅಭಿಪ್ರಾಯಕ್ಕಿಂತ ಬೇರೆ ಆಗಿದ್ರೆ ಅದನ್ನ ತಪ್ಪು ಅಂತ ತೀರ್ಪು ಮಾಡಬೇಡಿ.”—ರೋಮ. 14:1.
5 ಇಂಥ ಸನ್ನಿವೇಶದಲ್ಲಿ ಅವರು ಮಾಡೋ ನಿರ್ಧಾರನ ಗೌರವಿಸೋಕೆ ಕಷ್ಟ ಆಗುತ್ತೆ. ಹಾಗಾಗಿ ಈ ಲೇಖನದಲ್ಲಿ, ಬೇರೆಯವರು ತಗೊಳ್ಳೋ ನಿರ್ಧಾರಗಳಿಗೆ ನಾವು ಯಾಕೆ ಗೌರವ ಕೊಡಬೇಕು, ಹೇಗೆ ಗೌರವ ಕೊಡಬೇಕು ಅಂತ ನೋಡೋಣ. ಆದ್ರೆ ಅದಕ್ಕಿಂತ ಮುಂಚೆ, ನಾವು ಯಾವ ಸನ್ನಿವೇಶದಲ್ಲಿ ಬೇರೆಯವರು ತಗೊಂಡಿರೋ ನಿರ್ಧಾರದ ಬಗ್ಗೆ ತೀರ್ಪು ಮಾಡ್ತೀವಿ ಅಂತ ತಿಳ್ಕೊಳ್ಳೋಣ.
ಯಾವ ಸನ್ನಿವೇಶಗಳಲ್ಲಿ ಬೇರೆಯವ್ರ ನಿರ್ಧಾರಗಳನ್ನ ತೀರ್ಪು ಮಾಡಿಬಿಡ್ತೀವಿ?
6-7. ಬೇರೆಯವರ ನಿರ್ಧಾರದ ಬಗ್ಗೆ ನಾವು ತೀರ್ಪು ಮಾಡೋ ಸಾಧ್ಯತೆ ಇರೋ ಸನ್ನಿವೇಶಗಳನ್ನ ವಿವರಿಸಿ.
6 ಮುಂಚೆನೇ ನೋಡಿದ ತರ ನಮ್ಮೆಲ್ರ ಹಿನ್ನೆಲೆ, ಸಂಸ್ಕೃತಿ, ಜೀವನದಲ್ಲಿ ನಡೆದಿರೋ ಘಟನೆಗಳು ಬೇರೆ-ಬೇರೆ. ಹಾಗಾಗಿ ನಮ್ಮೆಲ್ರಿಗೂ ನಮ್ಮದೇ ಆದ ಅಭಿಪ್ರಾಯ ಇರುತ್ತೆ. ಆದ್ರೆ ನಮ್ಮ ತರನೇ ಬೇರೆಯವ್ರಿಗೂ ಅನಿಸ್ತಿದೆ ಅಂತ ನಾವು ಅಂದ್ಕೊಂಡು ಬಿಡ್ತೀವಿ. ಆದರೆ ಅದು ನಿಜ ಅಲ್ಲ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡೋ ಕೆಲವು ಸನ್ನಿವೇಶಗಳನ್ನ ನೋಡೋಣ. ಸನ್ನಿವೇಶ 1: ಸತ್ಯ ಕಲಿಯೋ ಮುಂಚೆ ಒಬ್ಬ ಸಹೋದರ, ತನ್ನ ಅಪ್ಪ ಕಂಠ ಪೂರ್ತಿ ಕುಡಿದು ತೊಂದ್ರೆ ಕೊಡ್ತಿದ್ದ ವಾತಾವರಣದಲ್ಲಿ ಬೆಳೆದಿದ್ದಾನೆ. ಈಗ ಒಂದು ಗೆಟ್ ಟು ಗೆದರಲ್ಲಿ ಸಹೋದರರು ಕುಡಿಯೋದನ್ನ ನೋಡಿದಾಗ ಅವನಿಗೆ ತುಂಬ ಬೇಜಾರಾಗುತ್ತೆ. ಅದಕ್ಕೆ ಅವ್ರ ಹತ್ರ ‘ನೀವು ಮಾಡ್ತಿರೋದು ತಪ್ಪು’ ಅಂತ ಹೇಳ್ತಾನೆ. ಸನ್ನಿವೇಶ 2: ಒಬ್ಬ ಸಹೋದರಿ ಒಂದು ಗಂಭೀರ ಕಾಯಿಲೆ ವಿರುದ್ಧ ಹೋರಾಡಿ ಜಯಿಸಿದ್ದಾಳೆ. ಈಗ ಅವಳಿಗೆ ಇನ್ನೊಬ್ಬ ಸಹೋದರಿಗೂ ಅದೇ ಕಾಯಿಲೆ ಬಂದಿದೆ ಅಂತ ಗೊತ್ತಾಗುತ್ತೆ. ಅವ್ರಿಗೆ ಸಹಾಯ ಮಾಡಬೇಕು ಅಂದ್ಕೊಂಡು, ‘ನೀವು, ನಾನು ತಗೊಂಡಿದ್ದ ಅದೇ ಟ್ರೀಟ್‌ಮೆಂಟ್ ತಗೊಳ್ಳಿ, ಈ ಆಹಾರನೇ ತಿನ್ನಿ, ಇದೇ ಮೆಡಿಸಿನ್ ತಗೊಳ್ಳಿ’ ಅಂತ ಒತ್ತಾಯ ಮಾಡಬಹುದು. ಸನ್ನಿವೇಶ 3: ಒಬ್ಬ ಸಹೋದರ ಸತ್ಯ ಕಲಿಯೋ ಮುಂಚೆ ಒಂದು ಚರ್ಚ್‌ನ ಸದಸ್ಯ ಆಗಿದ್ದ. ಈಗ ಅವನಿಗೆ ಚರ್ಚಲ್ಲಿ ನಡೆಯೋ ವಿಷ್ಯಗಳು, ಅದ್ರ ಆಚಾರ ವಿಚಾರಗಳು ತಪ್ಪು ಅಂತ ಗೊತ್ತಾಗಿದೆ. ಅದನ್ನ ಯಾವತ್ತೂ ಮಾಡಬಾರದು ಅಂತ ತೀರ್ಮಾನ ಮಾಡಿದ್ದಾನೆ. ಆದ್ರೆ ಇನ್ನೊಬ್ಬ ಸಹೋದರ ಚರ್ಚಲ್ಲಿ ನಡೆದ ಒಂದು ಶವ ಸಂಸ್ಕಾರಕ್ಕೆ ಹೋಗಿ ಬಂದಿದ್ದಾನೆ ಅಂತ ಗೊತ್ತಾದಾಗ ಇವನಿಗೆ ತುಂಬ ಬೇಜಾರಾಗುತ್ತೆ.b
7 ಸನ್ನಿವೇಶ 4: ಕ್ರೈಸ್ತ ಗಂಡಸರು ಗಡ್ಡ ಬಿಡೋದು ಸರಿಯಲ್ಲ, ಸ್ತ್ರೀಯರು ಕೂಟಗಳಿಗೆ, ಸೇವೆಗೆ ಮತ್ತು ಸಮ್ಮೇಳನಗಳಿಗೆ ಫಾರ್ಮಲ್ ಪ್ಯಾಂಟ್ ಹಾಕೋದು ಸರಿಯಲ್ಲ ಅಂತ ಹೇಳ್ತಿದ್ದ ಸಮಯದಲ್ಲಿ ಒಬ್ಬ ಸಹೋದರ ಬೆಳೆದಿರಬಹುದು. ಆದ್ರೆ ಈ ಸಹೋದರನಿಗೆ ಈ ವಿಷ್ಯದಲ್ಲಿ ಸಂಘಟನೆ ಇತ್ತೀಚಿಗೆ ಮಾಡಿದ ಬದಲಾವಣೆ ಬಗ್ಗೆ ಚೆನ್ನಾಗಿ ಗೊತ್ತು. ಆದ್ರೂ ಈ ಸಹೋದರ ಎಲ್ರ ಹತ್ರಾನೂ ಹೋಗಿ ‘ಕ್ರೈಸ್ತ ಗಂಡಸರು ಗಡ್ಡ ಬಿಡಬಾರದು, ಸ್ತ್ರೀಯರು ಕೂಟಗಳಿಗೆ ಮತ್ತು ಸೇವೆಗೆ ಫಾರ್ಮಲ್ ಪ್ಯಾಂಟ್ಸ್ ಹಾಕಬಾರದು’ ಅಂತ ಹೇಳ್ತಿರಬಹುದು. ಸನ್ನಿವೇಶ 5: ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಸತ್ಯ ಬಿಟ್ಟು ಹೋಗಿರೋ ಒಬ್ಬ ಸಹೋದರನ ಬಗ್ಗೆ ಹಿರಿಯನಿಗೆ ಗೊತ್ತು. ಈಗ ಸಭೆಯಲ್ಲಿರೋ ಇನ್ನೊಬ್ಬ ಸಹೋದರ ಹೆಚ್ಚಿನ ವಿದ್ಯಾಭ್ಯಾಸನ ಆರಿಸ್ಕೊಂಡಿದ್ದಾನೆ. ಆ ಹುಡುಗನ ಮೇಲಿರೋ ಕಾಳಜಿಯಿಂದ ಆ ಹಿರಿಯ, ಆ ಹುಡುಗನ ಹತ್ರ ಮತ್ತು ಅವನ ಹೆತ್ತವರ ಹತ್ರ ಹೋಗಿ ಅವ್ರ ನಿರ್ಧಾರನ ಬದಲಾಯಿಸೋಕೆ ಪ್ರಯತ್ನಿಸಬಹುದು.
8. (ಎ) ಹೆತ್ತವರು ಬೇರೆ ಕ್ರೈಸ್ತ ಹೆತ್ತವ್ರ ಬಗ್ಗೆ ಯಾವಾಗ ತೀರ್ಪು ಮಾಡಿಬಿಡಬಹುದು? (ಬಿ) ನಮ್ಮಲ್ಲಿರೋ ತೀರ್ಪು ಮಾಡೋ ಸ್ವಭಾವ ಸಭೆ ಮೇಲೆ ಯಾವ ಪರಿಣಾಮ ಬೀರಬಹುದು?
8 ಹೆತ್ತವರು ಎದುರಿಸಬೇಕಾಗೋ ಒಂದು ಸನ್ನಿವೇಶದ ಬಗ್ಗೆ ನೋಡೋಣ. ಸನ್ನಿವೇಶ 6: ಅಪ್ಪ-ಅಮ್ಮ ಆಗಿ ನೀವು ಮಕ್ಕಳನ್ನ ‘ಯೆಹೋವ ಹೇಳೋ ತರಾನೇ ಅವ್ರಿಗೆ ಕಲಿಸ್ತಾ, ತರಬೇತಿ ಕೊಡ್ತಾ ಬೆಳೆಸೋಕೆ’ ತುಂಬ ಪ್ರಯತ್ನ ಹಾಕ್ತಿದ್ದೀರ. (ಎಫೆ. 6:4) ಕೆಲವು ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನ ಬೆಳೆಸ್ತಿರೋ ರೀತಿ ನಿಮಗಿಂತ ಭಿನ್ನವಾಗಿರಬಹುದು. ಉದಾಹರಣೆಗೆ, ತಮ್ಮ ಮಕ್ಕಳು ಮನೆಗೆ ಲೇಟ್ ಆಗಿ ಬರೋಕೆ, ಹಿಂಸೆ ಇಲ್ಲದೆ ಇರೋ ವಿಡಿಯೋ ಗೇಮ್ಸ್ ಆಡೋಕೆ ಅವರು ಬಿಡಬಹುದು ಅಥವಾ ಅವ್ರಿನ್ನೂ ಚಿಕ್ಕವರಿರುವಾಗ್ಲೇ ಅವ್ರಿಗೆ ಫೋನ್ ಕೊಡಿಸಬಹುದು. ಇದನ್ನೆಲ್ಲ ನಿಮ್ಮ ಮಕ್ಕಳು ನೋಡಿದಾಗ ನಮ್ಮ ಅಪ್ಪ-ಅಮ್ಮ ತುಂಬ ‘ಸ್ಟ್ರಿಕ್ಟ್’ ಅಂತ ಅವ್ರಿಗೆ ಅನಿಸಬಹುದು. ಆಗ ಅವರು ‘ನೀವ್ಯಾಕೆ ನಮ್ಮ ಫ್ರೆಂಡ್ಸ್ ಅಪ್ಪ-ಅಮ್ಮನ ತರ ಇಲ್ಲ’ ಅಂತ ಕೇಳಬಹುದು. ಇಂಥ ಸನ್ನಿವೇಶದಲ್ಲಿ ನಿಮಗೆ, ಬೇರೆ ಹೆತ್ತವ್ರನ್ನ ಮತ್ತು ಅವ್ರ ನಿರ್ಧಾರಗಳನ್ನ ನೋಡಿ ಬೇಜಾರಾಗಬಹುದು. ನಿಜ ಏನಂದ್ರೆ, ನಮಗೆ ಇಷ್ಟ ಆಗದೆ ಇರೋ ನಿರ್ಧಾರನ ಯಾರೇ ಮಾಡಿದ್ರೂ ನಾವು ತೀರ್ಪು ಮಾಡಿಬಿಡ್ತೀವಿ. ಉದಾಹರಣೆಗೆ, ಒಬ್ಬ ವ್ಯಕ್ತಿ ತನ್ನ ಹತ್ರ ಇರೋ ಹಣನ ಹೇಗೆ ಬಳಸ್ತಾನೆ, ಅವನು ಎಷ್ಟು ಸಲ ಟೂರ್, ಟ್ರಿಪ್‌ಗಳಿಗೆ ಹೋಗ್ತಾನೆ, ಎಂಥ ಮನೋರಂಜನೆ ನೋಡ್ತಾನೆ ಅನ್ನೋ ವಿಷ್ಯದ ಬಗ್ಗೆ ನಾವು ತೀರ್ಪು ಮಾಡಿಬಿಡಬಹುದು. ಆದ್ರೆ ನೆನಪಿಡಿ, ನಮ್ಮ ಭಾವನೆ, ನಮ್ಮ ಅಭಿಪ್ರಾಯಗಳು ಯಾವತ್ತೂ ಸಭೆಯ ಶಾಂತಿ ಮತ್ತು ಒಗ್ಗಟ್ಟಿಗಿಂತ ಮುಖ್ಯ ಆಗಬಾರದು.
9. ನಾವೆಲ್ರೂ ಏನನ್ನ ಮನಸ್ಸಲ್ಲಿ ಇಡಬೇಕು? (ಚಿತ್ರ ನೋಡಿ.)
9 ಎಲ್ಲ ಸಾಕ್ಷಿಗಳು ಒಂದೇ ತರ ನಿರ್ಧಾರ ತಗೊಳ್ಳಲ್ಲ. ಹಾಗಂತ ಒಬ್ಬನ ನಿರ್ಧಾರ ಸರಿ, ಇನ್ನೊಬ್ಬನ ನಿರ್ಧಾರ ತಪ್ಪು ಅಂತ ನಾವು ಹೇಳೋಕಾಗಲ್ಲ. (ರೋಮ. 14:5) ಕ್ರೈಸ್ತರಾದ ನಾವೆಲ್ರೂ ‘ಒಂದೇ ತರ ಯೋಚ್ನೆ ಮಾಡಬೇಕು’ ಅಂತ ಬೈಬಲ್ ಹೇಳುತ್ತೆ. ಹಾಗಂತ ವೈಯಕ್ತಿಕ ವಿಷ್ಯಗಳಲ್ಲೂ ನಾವು ಒಂದೇ ತರ ಯೋಚ್ನೆ ಮಾಡಬೇಕು ಅನ್ನೋದನ್ನ ಸೂಚಿಸ್ತಿಲ್ಲ. ಬದ್ಲಿಗೆ ಯೆಹೋವ ಇಟ್ಟಿರೋ ಮಟ್ಟಗಳ ಬಗ್ಗೆ ನಾವೆಲ್ಲ ಒಂದೇ ತರ ಯೋಚ್ನೆ ಮಾಡಬೇಕು ಅಂತ ಹೇಳ್ತಿದೆ. (2 ಕೊರಿಂ. 13:11) ವೈಯಕ್ತಿಕ ವಿಷ್ಯಗಳಲ್ಲಿ ನಾವು ತಗೊಳ್ಳೋ ನಿರ್ಧಾರಗಳನ್ನ ಒಂದು ಊರಿಗೆ ಮಾಡೋ ಪ್ರಯಾಣಕ್ಕೆ ಹೋಲಿಸಬಹುದು. ಒಂದು ಊರನ್ನ ತಲುಪೋಕೆ ಎಷ್ಟೊಂದು ದಾರಿಗಳಿರುತ್ತೆ. ಎಲ್ರೂ ಒಂದೇ ದಾರೀನ ಆರಿಸ್ಕೊಳ್ಳಲ್ಲ. ಬದ್ಲಿಗೆ ಯಾವುದು ಅವ್ರಿಗೆ ಇಷ್ಟ ಆಗುತ್ತೋ ಆ ದಾರಿನ ಆರಿಸ್ಕೊತಾರೆ. ಹೀಗೆ ಆ ದಾರಿಯಲ್ಲಿ ಆ ಊರನ್ನ ತಲುಪ್ತಾರೆ. ನಾವೆಲ್ರೂ ಬೇರೆಬೇರೆ ತರ ನಿರ್ಧಾರಗಳನ್ನ ಮಾಡಿದ್ರೂ ನಾವು ತಲುಪಬೇಕಾಗಿರೋ ಊರು ಅಥವಾ ನಮ್ಮೆಲ್ರ ಗುರಿ ಒಂದೇ. ಅದು ಯೆಹೋವನನ್ನ ಮೆಚ್ಚಿಸೋದೇ ಆಗಿದೆ! ಹಾಗಾಗಿ ವೈಯಕ್ತಿಕ ವಿಷ್ಯದಲ್ಲಿ ಯಾರು ಯಾವುದೇ ನಿರ್ಧಾರ ಮಾಡಿದ್ರೂ ನಾವು ತೀರ್ಪು ಮಾಡಬಾರದು.—ಮತ್ತಾ. 7:1; 1 ಥೆಸ. 4:11.
ಒಂದು ಊರಿಗೆ ತಲುಪೋಕೆ ಎಲ್ರೂ ಒಂದೇ ದಾರಿಯಲ್ಲಿ ಹೋಗಲ್ಲ, ಅದೇ ತರ ಯೆಹೋವನ ಸೇವಕರು ವೈಯಕ್ತಿಕ ವಿಷ್ಯಗಳಲ್ಲಿ ನಿರ್ಧಾರ ಮಾಡ್ವಾಗ ಎಲ್ರೂ ಒಂದೇ ತರ ಮಾಡಲ್ಲ (ಪ್ಯಾರ 9 ನೋಡಿ)
ಬೇರೆಯವ್ರ ವೈಯಕ್ತಿಕ ನಿರ್ಧಾರಗಳನ್ನ ಯಾಕೆ ಗೌರವಿಸಬೇಕು?
10. ಯಾಕೋಬ 4:12ರ ಪ್ರಕಾರ ನಮಗೆ ಯಾವ ಅಧಿಕಾರ ಇಲ್ಲ ಮತ್ತು ಯಾಕೆ?
10 ಬೇರೆಯವರು ಮಾಡೋ ವೈಯಕ್ತಿಕ ನಿರ್ಧಾರಗಳಿಗೆ ನಾವು ಯಾಕೆ ಗೌರವ ಕೊಡಬೇಕು ಅನ್ನೋದಕ್ಕೆ ಬೈಬಲ್ ಎಷ್ಟೋ ಕಾರಣಗಳನ್ನ ಕೊಡುತ್ತೆ. ಬೇರೆಯವ್ರ ವೈಯಕ್ತಿಕ ವಿಷ್ಯಗಳ ಬಗ್ಗೆ ತೀರ್ಪು ಮಾಡೋಕೆ ನಮಗ್ಯಾರಿಗೂ ಅಧಿಕಾರ ಇಲ್ಲ. (ಯಾಕೋಬ 4:12 ಓದಿ.) ಯೆಹೋವ ಮಾತ್ರ ನ್ಯಾಯಾಧೀಶ, ಆತನು ಮಾತ್ರ ನಮಗೆ ನಿಯಮ ಕೊಡ್ತಾನೆ. ಹಾಗಾಗಿ ನಮ್ಮ ಸಹೋದರ ಸಹೋದರಿಯರು ಯೆಹೋವನಿಗೆ ಮಾತ್ರ ಲೆಕ್ಕ ಕೊಡಬೇಕು ನಮಗಲ್ಲ ಅನ್ನೋದನ್ನ ನೆನಪಿಡೋಣ. (ರೋಮ. 14:10) ಯಾರಾದ್ರೂ ನಮಗಿಂತ ಭಿನ್ನವಾದ ನಿರ್ಧಾರ ಮಾಡಿದಾಗ ಅವರು ಮಾಡ್ತಿರೋದು ತಪ್ಪು ಅಂತ ಅವ್ರನ್ನ ತೀರ್ಪು ಮಾಡೋ ಹಕ್ಕು ನಮಗ್ಯಾರಿಗೂ ಇಲ್ಲ.c
11. ಸಭೆಯಲ್ಲಿರೋ ಒಗ್ಗಟ್ಟನ್ನ ಜಾಸ್ತಿ ಮಾಡೋಕೆ ಏನು ಮಾಡಬೇಕು? (ಚಿತ್ರ ನೋಡಿ.)
11 ನಾವೆಲ್ರೂ ಒಂದೇ ತರ ಇರಬೇಕಂತಲ್ಲ, ಒಗ್ಗಟ್ಟಾಗಿರಬೇಕು ಅಂತ ಯೆಹೋವ ಬಯಸ್ತಾನೆ. ಯೆಹೋವನಿಗೆ ಎಲ್ಲಾ ವಿಷ್ಯಗಳು ಒಂದೇ ತರ ಇರೋದು ಇಷ್ಟ ಇಲ್ಲ. ಇದಕ್ಕೆ ಸೃಷ್ಟಿನೇ ದೊಡ್ಡ ಸಾಕ್ಷಿ. ಉದಾಹರಣೆಗೆ, ಒಂದು ಮರದಲ್ಲಿ ಸಾವಿರಾರು ಎಲೆಗಳಿದ್ರೂ ಒಂದು ಎಲೆ ಇನ್ನೊಂದು ಎಲೆ ತರ ಇರಲ್ಲ. ಮನುಷ್ಯರ ಬಗ್ಗೆ ಯೋಚ್ನೆ ಮಾಡಿ ನೋಡಿ. ಇಡೀ ಭೂಮಿಯಲ್ಲಿ 800 ಕೋಟಿಗಿಂತ ಜಾಸ್ತಿ ಜನ್ರಿದ್ದಾರೆ. ಆದ್ರೂ ಯಾವುದೇ ಇಬ್ರು ವ್ಯಕ್ತಿಗಳೂ ಒಂದೇ ತರ ಇಲ್ಲ. ಪ್ರತಿಯೊಬ್ರೂ ನೋಡೋಕೆ ಬೇರೆಬೇರೆ ತರ ಇದ್ದಾರೆ. ಪ್ರತಿಯೊಬ್ರಿಗೂ ಬೇರೆಬೇರೆ ವ್ಯಕ್ತಿತ್ವ ಇದೆ. ಯಾಕಂದ್ರೆ ನಮ್ಮಲ್ಲಿ ಪ್ರತಿಯೊಬ್ರನ್ನ ಯೆಹೋವ ತುಂಬ ವಿಶೇಷವಾಗಿ ಸೃಷ್ಟಿ ಮಾಡಿದ್ದಾನೆ. ಇದ್ರಿಂದ ಏನು ಗೊತ್ತಾಗುತ್ತೆ? ನಾವೆಲ್ರೂ ಒಂದೇ ತರ ಇರಬೇಕಂತಲ್ಲ, ಬದ್ಲಿಗೆ ಒಗ್ಗಟ್ಟಾಗಿ ಇರಬೇಕು ಅನ್ನೋದೇ ಯೆಹೋವನ ಇಷ್ಟ ಅಂತ ಗೊತ್ತಾಗುತ್ತೆ. ಹಾಗಾಗಿ ನಾವೆಲ್ರೂ ಯೆಹೋವ ಕೊಟ್ಟಿರೋ ಈ ವಿವಿಧತೆನ ಒಪ್ಕೊಂಡು ಸ್ವೀಕರಿಸೋಣ. ನಮ್ಮಲ್ಲಿ ಈ ವಿವಿಧತೆ ಇದೆ ಅಂತ ನಾವೆಲ್ಲ ಒಬ್ರಿಂದ ಒಬ್ರು ದೂರ ಆಗೋ ಬದಲು, ಶಾಂತಿಯಿಂದ ಇರೋಕೆ ಪ್ರಯತ್ನ ಹಾಕೋಣ. ನಮ್ಮ ಅಭಿಪ್ರಾಯನೇ ನಡೀಬೇಕು, ನಾವು ಹೇಳಿದ್ದೇ ಆಗಬೇಕು ಅಂತ ಹಠ ಹಿಡಿಯದೇ ಸಭೆ ಒಗ್ಗಟ್ಟಾಗಿರೋಕೆ ನಾವೆಲ್ಲ ನಮ್ಮಿಂದ ಆಗೋದನ್ನೆಲ್ಲ ಮಾಡೋಣ.—ರೋಮ. 14:19.
ನಾವೆಲ್ರೂ ಒಂದೇ ತರ ಇರಬೇಕಂತಲ್ಲ, ಒಗ್ಗಟ್ಟಾಗಿರಬೇಕು ಅಂತ ಯೆಹೋವ ಬಯಸ್ತಾನೆ (ಪ್ಯಾರ 11 ನೋಡಿ)
ಬೇರೆಯವ್ರ ನಿರ್ಧಾರಗಳನ್ನ ಹೇಗೆ ಗೌರವಿಸಬಹುದು?
12-13. ಬೇರೆಯವರು “ತಪ್ಪು ದಾರಿ” ಹಿಡಿದಿದ್ದಾರೆ ಅಂತ ನಿಮಗೆ ಅನಿಸಿದ್ರೆ ಏನು ಮಾಡಬೇಕು? (ಗಲಾತ್ಯ 6:1; “ನೀವು ಒಪ್ಪದೇ ಇದ್ದಾಗ” ಅನ್ನೋ ಚೌಕ ನೋಡಿ.)
12 ಬೇರೆಯವರ ವೈಯಕ್ತಿಕ ನಿರ್ಧಾರಗಳನ್ನ ಹೇಗೆ ಗೌರವ ತೋರಿಸಬಹುದು? ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ, ‘ಈ ವ್ಯಕ್ತಿ ನಿಜವಾಗ್ಲೂ “ತಪ್ಪು ದಾರಿ” ಹಿಡಿತಿದ್ದಾನಾ? ಅಥವಾ ನನಗಿಂತ ಭಿನ್ನವಾಗಿ ನಿರ್ಧಾರ ಮಾಡ್ತಿದ್ದಾನಾ?’ ಒಂದುವೇಳೆ ಅವನು ತಪ್ಪು ದಾರಿ ಹಿಡಿತಿದ್ರೆ, ಅದು ಬೈಬಲ್ ಆಜ್ಞೆಗಳಿಗೆ ವಿರುದ್ಧವಾಗಿದ್ರೆ, ಹೀಗೆ ಕೇಳ್ಕೊಳ್ಳಿ, ‘ಈ ವಿಷ್ಯದ ಬಗ್ಗೆ ಅವನ ಹತ್ರ ಹೋಗಿ ಸಹಾಯ ಮಾಡೋ ಜವಾಬ್ದಾರಿಯುತ ಸ್ಥಾನದಲ್ಲಿ ನಾನಿದ್ದೀನಾ ಅಥವಾ ಒಬ್ಬ ಹಿರಿಯ ಹೋಗಿ ಸಹಾಯ ಮಾಡಿದ್ರೆ ಚೆನ್ನಾಗಿರುತ್ತಾ?’ ಒಂದುವೇಳೆ ಈ ಪರಿಸ್ಥಿತಿಯಲ್ಲಿ ಅವನಿಗೆ ಸಹಾಯ ಮಾಡೋ ಜವಾಬ್ದಾರಿ ನಿಮಗಿದ್ರೆ, ದಯವಿಟ್ಟು ಅವನ ಜೊತೆ ಮಾತಾಡ್ವಾಗ ಮೃದುವಾಗಿ, ನೋವಾಗದೇ ಇರೋ ತರ ದಯೆಯಿಂದ ಮಾತಾಡಿ. (ಗಲಾತ್ಯ 6:1 ಓದಿ.) ಇಂಥ ಸನ್ನಿವೇಶದಲ್ಲಿ ಆ ವ್ಯಕ್ತಿ ತಪ್ಪು ದಾರಿ ಹಿಡಿತಿಲ್ಲ, ಬದಲಿಗೆ ನಿಮಗಿಂತ ಭಿನ್ನವಾದ ನಿರ್ಧಾರ ಮಾಡ್ತಿದ್ದಾನಷ್ಟೇ ಅಂತ ನಿಮಗೆ ಗೊತ್ತಾಗುತ್ತೆ. ಅಂತ ಟೈಮಲ್ಲಿ ಅವನಿಗೆ ತುಂಬ ಪ್ರಶ್ನೆಗಳನ್ನ ಕೇಳೋಕೆ ಹೋಗಬೇಡಿ ಅಥವಾ ಅವನು ಮಾಡ್ತಿರೋ ನಿರ್ಧಾರದ ಬಗ್ಗೆ ತಪ್ಪಾಗಿ ಮಾತಾಡಬೇಡಿ. ನಿರ್ಧಾರಗಳನ್ನ ತಗೊಳ್ಳೋ ಹಕ್ಕು ಮತ್ತು ಸ್ವಾತಂತ್ರ್ಯ ಅವನಿಗಿದೆ ಅನ್ನೋದನ್ನ ಒಪ್ಕೊಂಡು, ಅವನು ಮಾಡೋ ನಿರ್ಧಾರವನ್ನ ಗೌರವಿಸಿ.—ರೋಮ. 14:2-4.
13 ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ನೀವು ಮತ್ತು ನಿಮ್ಮ ಫ್ರೆಂಡ್ ಒಂದು ಹೋಟೆಲ್‌ಗೆ ಹೋಗಿದ್ದೀರ ಅಂದ್ಕೊಳ್ಳಿ. ನೀವೇನು ಆರ್ಡರ್ ಮಾಡ್ತೀರೋ ಅದೇ ಊಟನ ನಿಮ್ಮ ಫ್ರೆಂಡೂ ಆರ್ಡರ್ ಮಾಡಬೇಕಂತ ನೀವು ಒತ್ತಾಯ ಮಾಡ್ತೀರಾ? ಇಲ್ಲ ಅಲ್ವಾ? ಅವನಿಗೆ ಏನು ಇಷ್ಟ ಆಗುತ್ತೋ ಅದನ್ನ ತಗೊಳ್ಳೋಕೆ ಬಿಟ್ಕೊಡ್ತೀರ. ಯಾಕಂದ್ರೆ ಅವನು ಮಾಡೋ ನಿರ್ಧಾರ ನಿಮ್ಮ ಮೇಲೆ ಪ್ರಭಾವ ಬೀರಲ್ಲ. ಒಂದುವೇಳೆ ನೀವೇನು ತಗೋಬೇಕು, ನೀವೇನು ಆರ್ಡರ್ ಮಾಡಬೇಕು ಅಂತ ನಿಮ್ಮ ಫ್ರೆಂಡೇ ನಿರ್ಧಾರ ಮಾಡಿದ್ರೆ ನಿಮಗೆ ಹೇಗೆ ಅನ್ಸುತ್ತೆ? ನಿಮಗೆ ಕಷ್ಟ ಆಗುತ್ತೆ ತಾನೇ? ಬೇರೆಯವರ ವೈಯಕ್ತಿಕ ನಿರ್ಧಾರಗಳ ಬಗ್ಗೆ ತೀರ್ಪು ಮಾಡೋದೂ ಇದೇ ತರ. ನೀವು ಬೇರೆಯವ್ರ ಹತ್ರ ನೀವು ಹೇಳಿದಂಗೆ ಆಗಬೇಕು ಅಂತ ನಿಮ್ಮ ಅಭಿಪ್ರಾಯಗಳನ್ನ ಹೇರದೇ ಅವ್ರಿಗೆ ನಿರ್ಧಾರ ಮಾಡೋ ಹಕ್ಕಿದೆ ಅಂತ ನೆನಪಲ್ಲಿ ಇಟ್ಕೊಂಡು ಅದನ್ನ ಬಿಟ್ಟುಕೊಡಿ. ಹೀಗೆ ಮಾಡೋ ಮೂಲಕ ಅವ್ರಿಗೆ ಗೌರವ ತೋರಿಸಿ.
14. ವೈಯಕ್ತಿಕ ನಿರ್ಧಾರ ಮಾಡ್ವಾಗ ಸಭೇಲಿರೋ ಐಕ್ಯತೆನ ಜಾಸ್ತಿ ಮಾಡೋಕೆ ನೀವೇನು ಮಾಡಬೇಕು? (1 ಕೊರಿಂಥ 8:12, 13)
14 ನೀವು ವೈಯಕ್ತಿಕ ವಿಷ್ಯಗಳಲ್ಲಿ ನಿರ್ಧಾರ ಮಾಡ್ವಾಗ ಏನು ಮಾಡಬೇಕು? ಬೇರೆಯವ್ರನ್ನ ಎಡವಿಸದೇ ಇರೋ ತರ ನಿರ್ಧಾರ ಮಾಡೋಕೆ ಕೈಲಾದದ್ದನ್ನೆಲ್ಲಾ ಮಾಡಿದ್ರೆ ಸಭೆಯಲ್ಲಿರೋ ಐಕ್ಯತೆ ಜಾಸ್ತಿ ಆಗುತ್ತೆ. (1 ಕೊರಿಂಥ 8:12, 13 ಓದಿ.) ಕೆಲವೊಂದು ಸಲ ನೀವು ಮಾಡೋ ನಿರ್ಧಾರ ದೇವರ ವಾಕ್ಯಕ್ಕೆ ವಿರುದ್ಧವಾಗಿ ಇಲ್ಲದಿರಬಹುದು. ಆದ್ರೆ ಆ ನಿರ್ಧಾರ ಸಭೇಲಿರೋ ಒಬ್ಬ ವ್ಯಕ್ತಿನ ಎಡವಿಸ್ತಿದ್ರೆ ಅದ್ರಿಂದ “ಪ್ರಯೋಜನ” ಇದ್ಯಾ?d (1 ಕೊರಿಂ. 10:23, 24) ಅಂಥ ಟೈಮಲ್ಲಿ ನಿಮ್ಮದೇ ಆಗಬೇಕು ಅಂತ ಹಠ ಹಿಡಿದೆ ಬೇರೆಯವ್ರ ಅಭಿಪ್ರಾಯಗಳಿಗೆ ದಯವಿಟ್ಟು ಬೆಲೆ ಕೊಡಿ. (ರೋಮ. 15:1) ಆದ್ರೆ ಈಗಷ್ಟೇ, ವೈಯಕ್ತಿಕ ವಿಷ್ಯದಲ್ಲಿ ನಾವು ಮಾಡೋ ನಿರ್ಧಾರಗಳನ್ನ ಬೇರೆಯವರು ಗೌರವಿಸಬೇಕು ಅಂತ ನೋಡಿದ್ವಿ ಅಲ್ವಾ? ಹೌದು ಗೌರವಿಸಬೇಕು. ಆದ್ರೆ ಅವರು ನಮ್ಮ ಆಯ್ಕೆಗಳನ್ನ ಗೌರವಿಸೋ ತರ, ನಾವೂ ಅವ್ರ ಅಭಿಪ್ರಾಯಗಳನ್ನ ಗೌರವಿಸಬೇಕು. ಅಷ್ಟೇ ಅಲ್ಲ, ರೋಮನ್ನರಿಗೆ 12:18ರಲ್ಲಿ ಹೇಳೋ ತರ, “ಸಾಧ್ಯವಾದ್ರೆ ಎಲ್ರ ಜೊತೆ ಶಾಂತಿಯಿಂದ ಇರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ” ಅನ್ನೋ ಸಲಹೆಯನ್ನ ನಾವೆಲ್ರೂ ಪಾಲಿಸಬೇಕು. ಹಾಗಾಗಿ ನಾವು ಬೇರೆಯವ್ರನ್ನ ಎಡವಿಸದೇ ಇರೋ ತರ ನಿರ್ಧಾರ ತಗೊಳ್ಳೋಕೆ ನಮ್ಮಿಂದ ಆಗೋದನ್ನೆಲ್ಲಾ ಮಾಡೋಣ.
15. ಹಿರಿಯರು ಹೇಗೆ ಸಭೆಯ ಒಗ್ಗಟ್ಟನ್ನ ಕಾಪಾಡಬಹುದು? (1 ಕೊರಿಂಥ 4:6)
15 ಬೇರೆಯವ್ರ ನಿರ್ಧಾರಗಳನ್ನ ಹಿರಿಯರು ಹೇಗೆ ಗೌರವಿಸಬಹುದು? ವೈಯಕ್ತಿಕ ವಿಷ್ಯಗಳಲ್ಲಿ ನಿಯಮಗಳನ್ನ ಇಡದೆ ಇರೋ ಮೂಲಕ, ಬೈಬಲಲ್ಲಿ ‘ಬರೆದಿರೋ ವಿಷ್ಯಗಳನ್ನ ಮೀರಿ ಹೋಗದೆ’ ಇರೋ ಮೂಲಕ ಇದನ್ನ ಮಾಡಬಹುದು. ಹೀಗೆ ಸಭೆಯ ಒಗ್ಗಟ್ಟನ್ನ ಹಿರಿಯರು ಕಾಪಾಡಬಹುದು. (1 ಕೊರಿಂಥ 4:6 ಓದಿ.) ಅಷ್ಟೇ ಅಲ್ಲ, ನಮ್ಮ ಪ್ರಕಾಶನಗಳಲ್ಲಿರೋ ಬೈಬಲ್ ಆಧಾರಿತ ಸಲಹೆಗಳನ್ನ ಮೀರಿ ಹೋಗದೆ ಇರೋ ಮೂಲಕನೂ ಅವರು ಇದನ್ನ ಮಾಡಬಹುದು. ಯಾರಾದ್ರೂ ಬಂದು ಒಬ್ಬ ಹಿರಿಯನ ಹತ್ರ ಸಹಾಯ ಕೇಳಿದಾಗ ಅವರು ಬರೀ ತಮ್ಮ ಅನುಭವದಿಂದಸಲಹೆಗಳನ್ನ ಕೊಡದೇ ಬೈಬಲನ್ನ ಆಧರಿಸಿ ಸಲಹೆಗಳನ್ನ ಕೊಡಬೇಕು.—ಯೆಶಾ. 48:17, 18.
16. ಹಿರಿಯ ಮಂಡಲಿ ತಗೊಂಡಿರೋ ನಿರ್ಧಾರನ ಒಬ್ಬ ಹಿರಿಯ ಹೇಗೆ ಗೌರವಿಸಬಹುದು?
16 ಹಿರಿಯ ಮಂಡಲಿ ತಗೊಳ್ಳೋ ನಿರ್ಧಾರಗಳನ್ನ ಪ್ರತಿಯೊಬ್ಬ ಹಿರಿಯನೂ ಗೌರವಿಸಬೇಕು. ಹಿರಿಯ ಮಂಡಲಿ ಒಂದು ವಿಷ್ಯದ ಬಗ್ಗೆ ಪವಿತ್ರಶಕ್ತಿಗಾಗಿ ಪ್ರಾರ್ಥಿಸಿ, ಅದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ಹುಡುಕಿ, ತಿಳ್ಕೊಂಡು ನಿರ್ಧಾರ ಮಾಡ್ತಾರೆ. ಆದ್ರೆ ಕೆಲವೊಮ್ಮೆ ಇಂಥ ನಿರ್ಧಾರದ ಬಗ್ಗೆ ಒಬ್ಬ ಹಿರಿಯನಿಗೆ ಒಪ್ಪಿಗೆ ಇಲ್ಲದೇ ಇರಬಹುದು. ಆದ್ರೂ ಅವನು ಹೆಚ್ಚಿನ ಹಿರಿಯರು ತೆಗೆದುಕೊಂಡಿರೋ ಆ ನಿರ್ಣಯವನ್ನ ಬೆಂಬಲಿಸಬೇಕು. (ಎಫೆ. 5:17) ಅಷ್ಟೇ ಅಲ್ಲ, ಒಬ್ಬ ಹಿರಿಯ ನಮ್ಮ ಪ್ರಕಾಶನಗಳಲ್ಲಿರೋ ನಿರ್ದೇಶನ ಓದ್ವಾಗ ಮತ್ತು ಅದನ್ನ ಬಳಸ್ವಾಗ ತನ್ನ ಇಷ್ಟಕ್ಕೆ ತಕ್ಕಂತೆ ಅದನ್ನ ಅನ್ವಯಿಸಬಾರದು. ಈ ವಿಷ್ಯದಲ್ಲಿ ಅವರು ಹುಷಾರಾಗಿರಬೇಕು. ಉದಾಹರಣೆಗೆ, ತನ್ನ ಯೋಚ್ನೆನೇ ಸರಿ ಅಂತ ಸಾಬೀತು ಮಾಡೋಕೆ ಒಂದು ಲೇಖನದಲ್ಲಿರೋ ಯಾವುದೋ ಒಂದು ಸಾಲನ್ನ ತಗೊಂಡು ಅದರ ಹಿನ್ನೆಲೆ ನೋಡದೆ ಬಳಸಬಾರದು.
17. ಬೇರೆಯವರು ಮಾಡೋ ನಿರ್ಧಾರಗಳನ್ನ ನಾವು ಗೌರವಿಸಿದ್ರೆ ಸಭೆಗೆ ಏನು ಪ್ರಯೋಜ್ನ?
17 ನಮ್ಮಲ್ಲಿ ವಿವಿಧತೆ ಇದ್ರೂ ಐಕ್ಯತೆ ಇದೆ. ಇದು ನಮ್ಮ ಅಂದವನ್ನ ಹೆಚ್ಚಿಸುತ್ತೆ, ಹಾಗಾಗಿ ಇದು ತುಂಬ ಒಳ್ಳೆ ವಿಷ್ಯ! ನಮ್ಮಲ್ಲಿ ಪ್ರತಿಯೊಬ್ರೂ ಬೇರೆಬೇರೆ ತರ ಇದ್ದೀವಿ, ನಮಗೆ ಬೇರೆಬೇರೆ ಅಭಿಪ್ರಾಯಗಳಿವೆ. ನಮ್ಮ ಹಿನ್ನೆಲೆ, ವ್ಯಕ್ತಿತ್ವ ಎಲ್ಲಾನೂ ಬೇರೆ-ಬೇರೆ. ಆದ್ರೂ ಇದು ನಮ್ಮ ಸಭೆಯ ಸೌಂದರ್ಯನ ಇನ್ನೂ ಹೆಚ್ಚಿಸುತ್ತೆ. ಹಾಗಾಗಿ ನಮ್ಮಲ್ಲಿರೋ ಈ ವಿವಿಧತೆ ನಮ್ಮ ಶಾಂತಿಯನ್ನ ಹೆಚ್ಚಿಸೋ ತರ ನೋಡ್ಕೊಳ್ಳೋಣ. ನಾವು ಯಾರನ್ನೂ ಎಡವಿಸದೆ ಇರೋಕೆ ಪ್ರಯತ್ನಿಸೋಣ. ಬೇರೆಯವರು ಮಾಡೋ ವೈಯಕ್ತಿಕ ನಿರ್ಧಾರಗಳನ್ನ ಗೌರವಿಸೋಣ. ಇದನ್ನೆಲ್ಲಾ ಮಾಡೋಕೆ ನಾವು ಹಾಕೋ ಪ್ರಯತ್ನ ವ್ಯರ್ಥ ಆಗಲ್ಲ ಅಂತ ನೆನಪಿಡೋಣ. ಆಗ ಯೆಹೋವ ನಮ್ಮನ್ನ ಆಶೀರ್ವದಿಸ್ತಾನೆ. ಅಷ್ಟೇ ಅಲ್ಲ, ನಾವು ಹೀಗೆ ಮಾಡಿದ್ರೆ ನಮ್ಮ ಇಡೀ ಸಭೆ ಖುಷಿ-ಖುಷಿಯಾಗಿ, ಒಗ್ಗಟ್ಟಿಂದ ಒಂದೇ ಕುಟುಂಬದ ತರ ಇರೋಕಾಗುತ್ತೆ.—ಕೀರ್ತ. 133:1; ಮತ್ತಾ. 5:9.
ಗೀತೆ 89 ಆಲಿಸಿ, ಪಾಲಿಸಿ, ಖುಷಿಯಾಗಿರಿ!
a ಈ ವಿಷ್ಯಗಳು ಸಹೋದರಿಯರಿಗೂ ಅನ್ವಯಿಸುತ್ತೆ.
b ಒಬ್ಬ ಕ್ರೈಸ್ತ ಚರ್ಚಲ್ಲಿ ನಡೆಯೋ ಶವ ಸಂಸ್ಕಾರಕ್ಕೆ ಅಥವಾ ಒಂದು ಮದುವೆಗೆ ಹೋಗಬೇಕಾ ಬೇಡ್ವಾ ಅಂತ ನಿರ್ಧಾರ ಮಾಡೋ ಮುಂಚೆ ಎಷ್ಟೋ ವಿಷ್ಯಗಳನ್ನ ತೂಗಿ ನೋಡಬೇಕು. ಇದ್ರ ಬಗ್ಗೆ ತಿಳ್ಕೊಳ್ಳೋಕೆ ಮೇ 15, 2002ರ ಕಾವಲಿನಬುರುಜುವಿನಲ್ಲಿರೋ “ವಾಚಕರಿಂದ ಪ್ರಶ್ನೆಗಳು” ಅನ್ನೋ ಲೇಖನ ನೋಡಿ.
c ಒಬ್ಬ ಕ್ರೈಸ್ತ ದೇವರ ಆಜ್ಞೆಗಳಿಗೆ ವಿರುದ್ಧವಾಗಿ ನಡ್ಕೊಳ್ತಿರುವಾಗ ಹಿರಿಯರು ಅದನ್ನ ಗಮನಿಸಿ ಅವನನ್ನು ತಿದ್ದಬೇಕಾಗುತ್ತೆ. ಅವನ ವಿಷ್ಯದಲ್ಲಿ ಕೆಲವು ನಿರ್ಧಾರಗಳನ್ನ ತಗೊಬೇಕಾಗುತ್ತೆ. ಆದ್ರೆ ಅವರು ಇದನ್ನ ಮಾಡ್ವಾಗ ತಮಗಿಷ್ಟ ಬಂದ ಹಾಗೆ ಮಾಡದೇ ಯೆಹೋವನ ನೀತಿ-ನಿಯಮಗಳ ಪ್ರಕಾರ ಮಾಡಬೇಕು.—2 ಪೂರ್ವಕಾಲವೃತ್ತಾಂತ 19:6 ಹೋಲಿಸಿ.
d ಉದಾಹರಣೆಗಳಿಗಾಗಿ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ ಪಾಠ 35ರಲ್ಲಿರೋ ಪಾಯಿಂಟ್ 5ನ್ನ ನೋಡಿ.