ಜೂನ್ 15-21, 2026
ಗೀತೆ 122 ಸ್ಥಿರವಾಗಿ ನಿಲ್ಲೋಣ!
ಕಷ್ಟಗಳ ಬಗ್ಗೆ ಸರಿಯಾಗಿ ಯೋಚಿಸಿ
“ಕಷ್ಟಕಾರ್ಪಣ್ಯಗಳು ನನ್ನ ಮೇಲೆ ಬಂದ್ರೂ, ನಾನು ನಿನ್ನ ಆಜ್ಞೆಗಳನ್ನ ಪ್ರೀತಿಸ್ತೀನಿ.”—ಕೀರ್ತ. 119:143.
ಈ ಲೇಖನದಲ್ಲಿ ಏನಿದೆ?
ಕಷ್ಟಗಳ ಬಗ್ಗೆ ನಾವು ಯೆಹೋವನ ತರ ಸರಿಯಾಗಿ ಯೋಚಿಸೋಕೆ ಕಲಿಬೇಕು. ಆಗ ಅದನ್ನ ನಾವು ಚೆನ್ನಾಗಿ ಎದುರಿಸ್ತೀವಿ.
1-2. ಕಷ್ಟಗಳನ್ನ ಚೆನ್ನಾಗಿ ಎದುರಿಸಬೇಕಂದ್ರೆ ಮೊದ್ಲು ನಾವೇನು ಮಾಡ್ಬೇಕು? (ಚಿತ್ರ ನೋಡಿ.)
ಮನುಷ್ಯನ ಜೀವನ ಅಂದ್ರೆನೇ ನೂರೆಂಟು ಕಷ್ಟ ಸಮಸ್ಯೆಗಳು! ನೀವು ಯಾವ ಕಷ್ಟವನ್ನ ಎದುರಿಸ್ತಿದ್ದೀರಾ? ನಿಮಗೆ ಅನ್ಯಾಯ ಆಗ್ತಿದ್ಯಾ? ಕುಟುಂಬದಿಂದ ವಿರೋಧ ಬರ್ತಿದ್ಯಾ? ಯೆಹೋವ ದೇವರು ಹೇಳೋ ತರ ಬದುಕ್ತಿರೋದ್ರಿಂದ ಹಿಂಸೆ ಬರ್ತಿದ್ಯಾ? ನೀವು ಕಾಯಿಲೆಯಿಂದ ನರಳ್ತಿದ್ದೀರಾ? ನಿಮ್ಮವ್ರನ್ನ ಸಾವಲ್ಲಿ ಕಳ್ಕೊಂಡಿದ್ದೀರಾ? ವಯಸ್ಸಾಗ್ತಾ ಇರೋದ್ರಿಂದ ನೀವು ಕಷ್ಟ ಪಡ್ತಿದ್ದೀರಾ? ಇವತ್ತು ಯೆಹೋವನ ಎಷ್ಟೊಂದು ಸೇವಕರು ಈ ತರ ಕಷ್ಟಗಳನ್ನ ಅನುಭವಿಸ್ತಿದ್ದಾರೆ. ಅವ್ರ ತರ ನಿಮ್ಮ ಜೀವನನೂ “ಕಷ್ಟ ಕಣ್ಣೀರಿಂದಾನೇ” ತುಂಬಿ ಹೋಗಿರಬಹುದು.—ಕೀರ್ತ. 90:10.
2 ನಾವು ಕಷ್ಟಗಳನ್ನ ಚೆನ್ನಾಗಿ ಎದುರಿಸಬೇಕಂದ್ರೆ, ಮೊದಲು ಅವುಗಳ ಬಗ್ಗೆ ಸರಿಯಾಗಿ ಯೋಚ್ನೆ ಮಾಡೋಕೆ ಕಲಿಬೇಕು. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ಜೀವನದಲ್ಲಿ ಬರೋ ಕಷ್ಟಗಳನ್ನ ನಾವು ಕಾರ್ ಓಡಿಸುವಾಗ ಬರೋ ಅಪಾಯಗಳಿಗೆ ಹೋಲಿಸಬಹುದು. ಕಾರ್ ಓಡಿಸುವಾಗ ಯಾವ ಅಪಾಯ ಇದೆ ಅಂತ ಮೊದಲು ನೋಡಿ ಅರ್ಥ ಮಾಡ್ಕೊಬೇಕು. ಆಗ ಗಾಡಿನ ಎಡಕ್ಕೆ ಅಥವಾ ಬಲಕ್ಕೆ ತಿರುಗಿಸಬಹುದು. ಇಲ್ಲಾಂದ್ರೆ ನಿಧಾನ ಮಾಡಬಹುದು ಅಥವಾ ಪೂರ್ತಿಯಾಗಿ ಸ್ವಲ್ಪ ಹೊತ್ತು ನಿಲ್ಲಿಸಬಹುದು. ಆದ್ರೆ, ನಿಮ್ಮ ಗಾಡಿಯ ಕಿಟಕಿ ಪೂರ್ತಿ ಮಂಜು-ಮಂಜಾಗಿದ್ರೆ, ನಿಮಗೆ ಅಪಾಯಗಳನ್ನ ಸರಿಯಾಗಿ ನೋಡೋಕಾಗುತ್ತಾ? ಇಲ್ಲ ಅಲ್ವಾ! ಕಷ್ಟಗಳನ್ನ ಎದುರಿಸುವಾಗ್ಲೂ ಈ ವಿಷ್ಯನ ಮನಸ್ಸಲ್ಲಿಡಬೇಕು. ನಾವು ಅದ್ರ ಬಗ್ಗೆ ಯೆಹೋವನ ತರ ಸರಿಯಾಗಿ ಯೋಚ್ನೆ ಮಾಡೋಕೆ ಕಲಿಬೇಕು. ಆಗ ಅದನ್ನ ಚೆನ್ನಾಗಿ ಎದುರಿಸೋಕೆ ಆಗುತ್ತೆ. ಹಾಗಾಗಿ ಈ ಲೇಖನದಲ್ಲಿ ನಾವು ಮೂರು ವಿಷ್ಯಗಳನ್ನ ತಿಳ್ಕೊಳ್ಳೋಣ. (1) ಕಷ್ಟಗಳ ಬಗ್ಗೆ ಸರಿಯಾಗಿ ಯೋಚಿಸೋದು ಅಂದ್ರೇನು? (2) ನಾವು ತಪ್ಪಾಗಿ ಯೋಚ್ನೆ ಮಾಡಿದ್ರೆ ಯಾವೆಲ್ಲಾ ತೊಂದ್ರೆ ಎದುರಿಸಬೇಕಾಗುತ್ತೆ? (3) ಕಷ್ಟಗಳು ಬಂದಾಗ ನಾವು ಯಾವ ಹೆಜ್ಜೆಗಳನ್ನ ತಗೊಬೇಕು?
ಕಷ್ಟಗಳು ಬಂದಾಗ ನಾವು ಅದ್ರ ಬಗ್ಗೆ ಸರಿಯಾಗಿ ಯೋಚಿಸಬೇಕು, ಆಗ ಅದನ್ನ ಚೆನ್ನಾಗಿ ನಿಭಾಯಿಸ್ತೀವಿ ( ಪ್ಯಾರ 2 ನೋಡಿ)
ಕಷ್ಟಗಳ ಬಗ್ಗೆ ಸರಿಯಾದ ಯೋಚ್ನೆ
3. ಸೈತಾನನ ಈ ಲೋಕದಲ್ಲಿ ನಾವೆಲ್ರೂ ಯಾವ ವಿಷ್ಯನ ಒಪ್ಕೊಳ್ಳಲೇಬೇಕು?
3 ಕಷ್ಟಗಳು ಬಂದೇ ಬರುತ್ತೆ. ಇವತ್ತು ನಮ್ಮ ಜೀವನದಲ್ಲಿ ಕಷ್ಟಗಳು ಕಟ್ಟಿಟ್ಟ ಬುತ್ತಿ. ಯಾಕಂದ್ರೆ ಈ ಲೋಕನ ಸೈತಾನ ಆಳ್ತಿದ್ದಾನೆ ಮತ್ತು ಪಾಪ, ನಮ್ಮನ್ನೆಲ್ಲ ಆಳ್ತಿದೆ. ಇದ್ರ ಜೊತೆಗೆ ಈ ಲೋಕದ ಅಂತ್ಯನೂ ಹತ್ರ ಆಗ್ತಿದೆ. ಹಾಗಾಗಿ ಇನ್ನು ಮುಂದೆ ನಾವು ಜಾಸ್ತಿ ಕಷ್ಟಗಳನ್ನ ಎದುರಿಸಬೇಕಾಗುತ್ತೆ. ಯುದ್ಧ, ನೈಸರ್ಗಿಕ ವಿಪತ್ತು ಮತ್ತು ಮನುಷ್ಯ ಮಾಡ್ತಿರೋ ಮೋಸ ಅನ್ಯಾಯದಿಂದ ಸಹ ನಮಗೆ ಕಷ್ಟಗಳು ಬರುತ್ತೆ. (ಮತ್ತಾ. 24:8; 2 ತಿಮೊ. 3:13) ಯೆಹೋವ ದೇವರು ಬೇಕಿದ್ರೆ ಮಧ್ಯೆ ಕೈ ಹಾಕಿ ಈಗಲೇ ಈ ಕಷ್ಟಗಳನ್ನೆಲ್ಲ ತೆಗೆದುಹಾಕಬಹುದು. ಆದ್ರೆ ಆ ತರ ಮಾಡಿದ್ರೆ ಈ ಲೋಕನ ನಡೆಸೋಕೆ ಸೈತಾನನಿಗೆ ಯೆಹೋವ ಸಹಾಯ ಮಾಡಿದ ತರ ಆಗಿಬಿಡುತ್ತೆ. ಹಾಗಾಗಿ ನಮಗೆ ಬೇರೆ ದಾರಿ ಇಲ್ಲ. ನಾವು ಎಲ್ಲ ಕಷ್ಟಗಳನ್ನ ಎದುರಿಸಲೇಬೇಕು.—ಪ್ರಸಂ. 9:12.
4. ಕ್ರೈಸ್ತರಾಗಿ ಇರೋದ್ರಿಂದ ನಮಗೆ ಬೇರೆ ಯಾವ ಕಷ್ಟಗಳು ಬರುತ್ತೆ?
4 ಕ್ರೈಸ್ತರಾಗಿ ಇರೋದ್ರಿಂದ ಹೆಚ್ಚಿನ ಕಷ್ಟಗಳು ಬರುತ್ತೆ. ‘ನನ್ನ ಮೇಲೆ ನಂಬಿಕೆ ಇಟ್ಟಿರೋದ್ರಿಂದ ನಿಮ್ಮನ್ನ ಹಿಂಸಿಸ್ತಾರೆ’ ಅಂತ ಯೇಸು ಪದೇ-ಪದೇ ಹೇಳಿದನು. (ಮತ್ತಾ. 24:9; ಯೋಹಾ. 16:2) ಈ ವಿಷ್ಯ ನಮಗೆ ಈಗಾಗಲೇ ಗೊತ್ತಿರೋದ್ರಿಂದ ಇಂಥ ಕಷ್ಟಗಳು ಬಂದಾಗ ನಾವು ಭಯಪಡಲ್ಲ. ಬದ್ಲಿಗೆ ಆಗ ನಮ್ಮ ನಂಬಿಕೆ ಇನ್ನೂ ಜಾಸ್ತಿ ಆಗುತ್ತೆ. (1 ಥೆಸ. 3:3, 4) ‘ನಾವೇನೂ ತಪ್ಪು ಮಾಡ್ತಿಲ್ಲ, ಶಾಶ್ವತ ಜೀವಕ್ಕೆ ನಡೆಸೋ ದಾರಿಯಲ್ಲೇ ಇದ್ದೀವಿ’ ಅನ್ನೋ ನಮ್ಮ ಭರವಸೆ ಹೆಚ್ಚಾಗುತ್ತೆ. ಅಷ್ಟೇ ಅಲ್ಲ, ಯೆಹೋವ ಮತ್ತು ಸೈತಾನನ ಮಧ್ಯೆ ಇರೋ ವಿವಾದಾಂಶದಲ್ಲಿ ನಾವು ಯೆಹೋವನ ಪಕ್ಷದಲ್ಲಿ ಇದ್ದೀವಿ ಅಂತ ತೋರಿಸಿ ಕೊಡೋಕೂ ಕಷ್ಟಗಳು ನಮಗೆ ಒಂದು ಅವಕಾಶ ಸಿಗುತ್ತೆ. ಅದು ಹೇಗೆ? ಸೈತಾನ, ದೇವರ ಹೆಸ್ರಿನ ಮೇಲೆ ಮತ್ತು ದೇವ್ರಿಗೆ ನಿಯತ್ತಾಗಿ ಸೇವೆ ಮಾಡೋರ ಮೇಲೆ ಆರೋಪ ಹಾಕಿದ್ದಾನೆ. ನಾವು ಸ್ವಾರ್ಥ ಕಾರಣಗಳಿಂದ ದೇವರನ್ನ ಆರಾಧಿಸ್ತಿದ್ದೀವಿ ಅಂತ ಹೇಳಿದ್ದಾನೆ. ಅವನು ಹೇಳಿರೋದೇ ಸರಿ ಅಂತ ರುಜು ಮಾಡೋದಕ್ಕೋಸ್ಕರ ಯೆಹೋವನ ಜನ್ರ ಮೇಲೆ ತುಂಬ ಕಷ್ಟಗಳನ್ನ ತರ್ತಿದ್ದಾನೆ. (ಯೋಬ 1:9-11) ನಾವು ಯೆಹೋವನ ಮೇಲಿರೋ ಪ್ರೀತಿಯಿಂದ ಈ ಎಲ್ಲಾ ಕಷ್ಟಗಳನ್ನ ತಾಳ್ಕೊಂಡ್ರೆ, ಆತನ ಪಕ್ಷದಲ್ಲಿ ಇದ್ದೀವಿ ಅಂತ ತೋರಿಸ್ತೀವಿ. ಇದ್ರಿಂದ ಆತನಿಗೆ ತುಂಬ ಖುಷಿಯಾಗುತ್ತೆ.—ಜ್ಞಾನೋ. 27:11.
5. ಪ್ರಸಂಗಿ 7:13, 14ರಿಂದ ನಾವೇನು ಕಲಿತೀವಿ? (ಚಿತ್ರ ನೋಡಿ.)
5 ಕಷ್ಟಗಳನ್ನ ಯೆಹೋವನು ಅನುಮತಿಸ್ತಾನೆ. ಹಾಗಂತ ಯಾವತ್ತೂ ಆತನು ನಮಗೆ ಕಷ್ಟಗಳನ್ನ ಕೊಡಲ್ಲ ಅಥವಾ ಕಷ್ಟ ಕೊಟ್ಟು ನಮ್ಮನ್ನ ಪರೀಕ್ಷೆ ಮಾಡೋ ಯೋಚ್ನೆನೂ ಮಾಡಲ್ಲ. (ಯಾಕೋ. 1:13) ಆದ್ರೆ ರಾಜ ಸೊಲೊಮೋನ ‘ಕಷ್ಟದ ದಿನ, ಸತ್ಯದೇವರ ಕೆಲಸ’ ಅಂತ ಹೇಳಿದ್ದಾನೆ. (ಪ್ರಸಂಗಿ 7:13, 14 ಓದಿ.) ಇದ್ರರ್ಥ ಏನು? ಓದಿದ ತಕ್ಷಣ, ದೇವರೇ ಕಷ್ಟದ ದಿನವನ್ನ ಕೊಡ್ತಿದ್ದಾನೆ ಅನ್ನೋ ತರ ನಮಗೆ ಅನಿಸಬಹುದು. ಆದ್ರೆ ಅದ್ರ ನಿಜ ಅರ್ಥ, ಆತನು ಕಷ್ಟದ ದಿನವನ್ನ ಅನುಮತಿಸಿದ್ದಾನೆ ಅಂತ ಅಷ್ಟೇ. ಕಷ್ಟಗಳು ಬಂದಾಗ ಅದ್ರ ಬಗ್ಗೆ ಹೇಗೆ ಸರಿಯಾಗಿ ಯೋಚ್ನೆ ಮಾಡ್ಬೇಕು ಅನ್ನೋದಕ್ಕೆ ಸೊಲೊಮೋನ ಎರಡು ಸಲಹೆ ಕೊಟ್ಟಿದ್ದಾನೆ. ಒಂದು, ನಾವು ಅಪರಿಪೂರ್ಣರಾಗಿ ಇರೋದ್ರಿಂದ ಈ ಜೀವನದಲ್ಲಿ ನಮಗೆ ಒಳ್ಳೇ ದಿನಗಳೂ ಇರುತ್ತೆ, ಕೆಟ್ಟ ದಿನಗಳೂ ಇರುತ್ತೆ. ಒಳ್ಳೇ ದಿನ ಸಿಕ್ಕಾಗ ನಾವು ದೇವ್ರಿಗೆ ಕೃತಜ್ಞತೆ ತೋರಿಸಬೇಕು. ಯಾಕಂದ್ರೆ ಅದು ಯೆಹೋವ ಕೊಡೋ ಗಿಫ್ಟ್ ಆಗಿದೆ. ಎರಡು, ನಾವು ಎಷ್ಟೇ ಪ್ರಯತ್ನ ಮಾಡಿದ್ರೂ ‘ಮುಂದೆ ಒಳ್ಳೇದಾಗುತ್ತಾ, ಕೆಟ್ಟದಾಗುತ್ತಾ’ ಅಂತ ತಿಳ್ಕೊಳ್ಳೋಕೆ ನಮ್ಮ ಕೈಲಾಗಲ್ಲ. ಹಾಗಾಗಿ ಒಳ್ಳೆಯವ್ರಿಗೂ ಕೆಟ್ಟವ್ರಿಗೂ ಕಷ್ಟಗಳು ಬಂದೇ ಬರುತ್ತೆ ಅಂತ ನೆನಪಿಡಬೇಕು.
ಸೈತಾನನ ಈ ಲೋಕದಲ್ಲಿ ಜೀವನ ಯಾವಾಗ್ಲೂ ಹೂವಿನ ಹಾದಿ ತರ ಇರಲ್ಲ. ಕೆಲವು ಸಲ ಒಳ್ಳೇ ದಿನ, ಕೆಲವು ಸಲ ಕೆಟ್ಟ ದಿನ ಇರುತ್ತೆ ಅಂತ ಅರ್ಥ ಮಾಡ್ಕೊಬೇಕು (ಪ್ಯಾರ 5 ನೋಡಿ)
6. ಯೆಹೋವ ಕಷ್ಟಗಳನ್ನ ಯಾಕೆ ಅನುಮತಿಸ್ತಾನೆ? (ಇಬ್ರಿಯ 12:7, 11)
6 ಕಷ್ಟಗಳು ಬಂದಾಗ ನಾವು ನಮ್ಮ ಮೇಲಲ್ಲ, ಯೆಹೋವನ ಮೇಲೆ ಆತ್ಕೊಬೇಕು ಅಂತ ಆತನು ಬಯಸ್ತಾನೆ. ನಮಗೆ ಬರೋ ಪ್ರತಿಯೊಂದು ಕಷ್ಟನ ಯೆಹೋವ ಗಮನಿಸ್ತಿದ್ದಾನೆ. ನಮಗೆ ಸಹಾಯ ಮಾಡಬೇಕು ಅಂತ ಯೋಚಿಸ್ತಿದ್ದಾನೆ. ಕೆಲವೊಮ್ಮೆ ನಮ್ಮನ್ನ “ಕತ್ತಲ ಕಣಿವೆಯಲ್ಲಿ” ನಡಿಯೋ ತರ ಯೆಹೋವ ಬಿಡೋದಾದ್ರೂ ಆತನು ನಮ್ಮ ಕೈ ಹಿಡ್ಕೊಂಡೇ ಇರ್ತಾನೆ. ನಮಗೆ ಪ್ರೀತಿ ತೋರಿಸ್ತಾನೆ, ತಾಳ್ಕೊಳ್ಳೋಕೆ ಬೇಕಾಗಿರೋ ಬಲ ಕೊಡ್ತಾನೆ. (ಕೀರ್ತ. 23:4) ಕಷ್ಟಗಳು ಬಂದಾಗ ನಮ್ಮಲ್ಲಿ ಇರೋ ಬಲಹೀನತೆಗಳು ನಮಗೆ ಗೊತ್ತಾಗುತ್ತೆ. ಆಗ ಯೆಹೋವ, ಸುಂದರವಾದ ಕ್ರೈಸ್ತ ಗುಣಗಳನ್ನ ಬೆಳೆಸ್ಕೊಳ್ಳೋಕೆ ನಮಗೆ ಸಹಾಯ ಮಾಡ್ತಾನೆ. (ಇಬ್ರಿಯ 12:7, 11 ಓದಿ.) ಉದಾಹರಣೆಗೆ, ಯೋಬ ದೀನತೆಯನ್ನ ಕಲಿಬೇಕಿತ್ತು. ಹಾಗಂತ ಯೆಹೋವ ಅವನಿಗೆ ಕಷ್ಟವನ್ನ ಕೊಡಲಿಲ್ಲ. ಅದನ್ನ ಅನುಮತಿಸಿದ ಅಷ್ಟೇ. ಆಗ ಯೋಬ, ಒಳ್ಳೊಳ್ಳೆ ಪಾಠಗಳನ್ನ ಕಲಿತ. (ಯೋಬ 42:1-6) ಯೆಹೋವ ನಮಗೂ ಕಷ್ಟಗಳನ್ನ ಅನುಮತಿಸಬಹುದು. ಆದ್ರೆ ಒಂದಂತೂ ನೆನಪಿಡಿ, ಯಾವುದೇ ಕಷ್ಟ ನಮಗೆ ಶಾಶ್ವತ ಹಾನಿ ಮಾಡೋ ತರ ಯೆಹೋವ ದೇವರು ಯಾವತ್ತೂ ಬಿಡೋದಿಲ್ಲ. ನಾವು ನಿಯತ್ತಾಗಿದ್ದು ಕಷ್ಟಗಳನ್ನ ಎದುರಿಸಬೇಕು, ಆಗ ಖಂಡಿತ ಪೂರ್ತಿಯಾಗಿ ಗೆದ್ದೇ ಗೆಲ್ತೀವಿ.—ರೋಮ. 8:35-39.
7. ಯೆಹೋವನಿಗೆ ನಿಯತ್ತಾಗಿ ಇರೋದ್ರಿಂದ ನಿಮಗೆ ಹಿಂಸೆ ಬರ್ತಿದ್ರೆ ಯಾಕೆ ಖುಷಿಯಾಗಿ ಇರಬಹುದು?
7 ಕಷ್ಟಗಳನ್ನ ಎದುರಿಸುವಾಗ್ಲೂ ನೀವು ಖುಷಿಯಾಗಿರಬಹುದು. ನೀವು ಯೆಹೋವನಿಗೆ ನಿಯತ್ತಾಗಿ ಇರೋದ್ರಿಂದ ಹಿಂಸೆ ಬರ್ತಿರೋದಾದ್ರೆ ಬೇಜಾರಾಗಬೇಡಿ. ಯೆಹೋವ ದೇವರು ನಿಮ್ಮ ಕೈ ಬಿಟ್ಟಿದ್ದಾನೆ ಅಂತ ಅಂದ್ಕೊಬೇಡಿ. ನೀವು ನಂಬಿಕೆಯಿಂದಾಗಿ ಕಷ್ಟಗಳನ್ನ ಅನುಭವಿಸ್ತಾ ಇರೋದಾದ್ರೆ ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅಂತರ್ಥ. (ಮತ್ತಾ. 5:10-12) ನೀವಿದನ್ನ ಅರ್ಥ ಮಾಡ್ಕೊಂಡ್ರೆ ಅಪೊಸ್ತಲರ ತರ ಖುಷಿಯಾಗಿ ಇರ್ತೀರ, ನಿಮ್ಮ ಬಗ್ಗೆ ನಾಚಿಕೆಪಡಲ್ಲ. (ಅ. ಕಾ. 5:40-42) ಬೇರೆಯವ್ರಿಗೆ ಸತ್ಯ ಕಲಿಸೋಕೆ ಮತ್ತು ಅವರು ‘ದೇವರನ್ನ ಮಹಿಮೆ ಪಡಿಸೋಕೂ’ ನೀವು ಸಹಾಯ ಮಾಡ್ತೀರ. (1 ಪೇತ್ರ 2:12) ಸ್ವಲ್ಪ ಯೋಚಿಸಿ, ಯೆಹೋವ ದೇವರು ಯೋಸೇಫನನ್ನ ಯಾವಾಗ ಆಶೀರ್ವದಿಸಿದನು? ಅವನ ಕಷ್ಟಗಳೆಲ್ಲ ಹೋದ್ಮೇಲಾ? ಇಲ್ಲ, ಅವನಿನ್ನೂ ಕಷ್ಟಗಳನ್ನ ಅನುಭವಿಸ್ತಿರುವಾಗ್ಲೇ ಆಶೀರ್ವದಿಸಿದನು. ನಿಮಗೂ ಅದೇ ತರ ಮಾಡ್ತಾನೆ.—ಆದಿ. 39:3, 23.
8. ಕಷ್ಟವನ್ನ ತಾಳ್ಕೊಳ್ಳೋಕೆ ನಮಗೆ ಇನ್ಯಾವ ಒಳ್ಳೆ ಕಾರಣ ಇದೆ?
8 ನಮ್ಮ ಕಷ್ಟಗಳಿಗೆ ಕೊನೆಯಿದೆ. ಇದಕ್ಕೆ ಯೋಬನ ಜೀವನನೇ ಸಾಕ್ಷಿ. ಯೆಹೋವ, “ಯೋಬನ ಬದುಕನ್ನ ಮುಂಚೆಗಿಂತ ಜಾಸ್ತಿ ಆಶೀರ್ವಾದ ಮಾಡಿದನು” ಅಂತ ಬೈಬಲ್ ಹೇಳುತ್ತೆ. (ಯೋಬ 42:12) ಅದೇ ತರ ನಮ್ಮನ್ನೂ ಮುಂಚೆಗಿಂತ ಜಾಸ್ತಿ ಯೆಹೋವ ಮುಂದೆ ಆಶೀರ್ವದಿಸ್ತಾನೆ. ನಾವು ನಿಯತ್ತಾಗಿದ್ರೆ ದೇವರ ಆಳ್ವಿಕೆಯಲ್ಲಿ ನಮಗೆ ಹೆಚ್ಚೆಚ್ಚು ಆಶೀರ್ವಾದಗಳು ಸಿಗ್ತಾ ಇರುತ್ತೆ. ‘ಕೊನೆವರೆಗೂ’ ಯೆಹೋವನಿಗೆ ನಿಯತ್ತಾಗಿದ್ರೆ, ಕಷ್ಟಗಳನ್ನ ತಾಳ್ಕೊಂಡ್ರೆ ಎಷ್ಟು ಒಳ್ಳೆ ಪ್ರತಿಫಲ ಸಿಗುತ್ತಲ್ವಾ?—ಮತ್ತಾ. 24:13.
ತಪ್ಪಾಗಿ ಯೋಚಿಸಿದ್ರೆ ಆಗೋ ತೊಂದ್ರೆ
9. ಕಷ್ಟಗಳ ಬಗ್ಗೆ ತಪ್ಪಾಗಿ ಯೋಚ್ನೆ ಮಾಡಿದ್ರೆ ಏನಾಗಿಬಿಡುತ್ತೆ?
9 ನಮಗೆ ಯಾವುದೇ ರೀತಿಯ ಕಷ್ಟ ಬರಲಿ ನಾವು ಅದ್ರ ಬಗ್ಗೆ ಸರಿಯಾಗಿ ಯೋಚ್ನೆ ಮಾಡೋದನ್ನ ಕಲಿಬೇಕು. ಇಲ್ಲಾಂದ್ರೆ ನಮ್ಮ ಪರಿಸ್ಥಿತಿ ಬಾಂಡ್ಲಿಯಿಂದ ಬೆಂಕಿಗೆ ಬಿದ್ದಂತೆ ಆಗುತ್ತೆ. ಆಗ ‘ಯೆಹೋವನೇ ನಂಗೆ ಕಷ್ಟ ಕೊಡ್ತಿದ್ದಾನೆ’ ಅಂತ ತಪ್ಪಾಗಿ ಅಂದ್ಕೊಂಡು ಬಿಡ್ತೀವಿ. ಕಷ್ಟ ಬಂದಾಗ ಯೋಬನೂ ಇದೇ ತರ ಮಾಡಿಬಿಟ್ಟ. ಅದಕ್ಕೆ “ದೇವರು ಮಾಡೋದೆಲ್ಲ ಸರಿ ಅಂತ ಸಾಬೀತು ಮಾಡೋ ಬದ್ಲು ಯೋಬ ತಾನೇ ಸರಿ ಅಂತ ಸಮರ್ಥಿಸ್ತಾ” ಹೋದ. (ಯೋಬ 32:2) ನೊವೊಮಿ ಸಹ ತನಗೆ ಬಂದ ಎಲ್ಲ ಕಷ್ಟಗಳಿಗೆ ಯೆಹೋವನೇ ಕಾರಣ ಅನ್ನೋ ತರ ಮಾತಾಡಿಬಿಟ್ಳು. (ರೂತ್ 1:13, 20, 21) ಒಂದುವೇಳೆ ಯೋಬ ಮತ್ತು ನೊವೊಮಿ ಇದೇ ತರ ತಪ್ಪಾದ ಯೋಚ್ನೆಯಲ್ಲೇ ಮುಳುಗಿ ಹೋಗಿದ್ರೆ ಯೆಹೋವನ ಜೊತೆಯಲ್ಲಿ ಅವ್ರಿಗಿದ್ದ ಸ್ನೇಹನ ಕಳ್ಕೊಂಡು ಬಿಡ್ತಿದ್ರು. (ಜ್ಞಾನೋ. 19:3) ಆದ್ರೆ ಯೆಹೋವ ಅವ್ರನ್ನ ತಿದ್ದಿದನು. ಆಗ ಅವರು ತಮಗೆ ಬಂದ ಕಷ್ಟಗಳ ಬಗ್ಗೆ ಸರಿಯಾಗಿ ಯೋಚ್ನೆ ಮಾಡೋಕೆ ಕಲಿತ್ರು. ಆಮೇಲೆ ಅವರು ನಿಯತ್ತಾಗಿ ಇದ್ದಿದ್ರಿಂದ ಯೆಹೋವ ಅವ್ರನ್ನ ಆಶೀರ್ವದಿಸಿದನು.
10. ಕಷ್ಟ ಬಂದಾಗ ನಮಗೆ ಯಾವ ಡೌಟ್ ಬರಬಹುದು?
10 ಯೆಹೋವ ಅಂತೂ ಕಷ್ಟ ಕೊಡಲ್ಲ ಅಂತ ನಮಗೆ ಗ್ಯಾರಂಟಿ ಆಗಿ ಗೊತ್ತು. ಆದ್ರೂ ನಮಗೆ ಕಷ್ಟ ಬಂದಾಗ ‘ಯೆಹೋವ ನಮ್ಮ ಕೈ ಬಿಟ್ಟುಬಿಟ್ನಾ, ಆತನು ನಮ್ಮ ಬಗ್ಗೆ ಯೋಚ್ನೆ ಮಾಡಲ್ವಾ’ ಅಂತ ನಮಗೆ ಒಂದೊಂದು ಸಲ ಡೌಟ್ ಬರಬಹುದು. ನಾವೇನಾದ್ರೂ ಈ ತರ ತಪ್ಪಾಗಿ ಯೋಚ್ನೆ ಮಾಡೋದನ್ನ ಕಲಿತುಬಿಟ್ರೆ ನಮ್ಮಲ್ಲಿರೋ ಬಲನೂ ಕಮ್ಮಿ ಆಗುತ್ತೆ. (ಜ್ಞಾನೋ. 24:10) ರಾಜ ದಾವೀದ, ಪ್ರವಾದಿ ಹಬಕ್ಕೂಕ ಕೂಡ ತುಂಬ ಕಷ್ಟಗಳನ್ನ ಎದುರಿಸಿದ್ರು. ಅವರು ಎಷ್ಟೋ ಸಲ ಯೆಹೋವನಿಗೆ ಪ್ರಾರ್ಥನೆ ಮಾಡಿದ್ರು. ಕೆಲವೊಮ್ಮೆ ಅವ್ರಿಗೆ ಯೆಹೋವ ನಿಜವಾಗ್ಲೂ ನಮ್ಮ ಪ್ರಾರ್ಥನೆ ಕೇಳ್ತಿದ್ದಾನಾ ಅಂತ ಅನಿಸ್ತು. (ಕೀರ್ತ. 10:1; ಹಬ. 1:2) ಹಾಗಂತ ಅವರು ಪ್ರಾರ್ಥನೆ ಮಾಡೋದನ್ನೇ ನಿಲ್ಲಿಸಲಿಲ್ಲ. ಯೆಹೋವ ಅವ್ರಿಗೆ ಬೇಕಾಗಿರೋ ಬೆಂಬಲ ಕೊಟ್ಟು, ಧೈರ್ಯ ತುಂಬಿದನು. ನಿಮಗೂ ಬೇಕಾಗಿರೋ ಶಕ್ತಿ ಕೊಡ್ತಾನೆ, ಸಹಾಯ ಮಾಡ್ತಾನೆ.—ಕೀರ್ತ. 10:17.
11. ಕಷ್ಟಗಳ ಬಗ್ಗೆ ಸರಿಯಾಗಿ ಯೋಚ್ನೆ ಮಾಡೋಕೆ ನಾವು ಕಲಿಯದೇ ಹೋದ್ರೆ ಏನಾಗಬಹುದು?
11 ಕಷ್ಟಗಳ ಬಗ್ಗೆ ನಾವು ಸರಿಯಾಗಿ ಯೋಚ್ನೆ ಮಾಡೋಕೆ ಕಲಿಯಲಿಲ್ಲ ಅಂದ್ರೆ ಅವು ಬಂದಾಗ ನಮಗೆ ಶಾಕ್ ಆಗುತ್ತೆ. ‘ಯೆಹೋವನು ಈ ಕಷ್ಟನ ನನಗೆ ಅನುಮತಿಸಬಾರದಿತ್ತು’ ಅಂತ ಆತನ ಬಗ್ಗೆ ತಪ್ಪಾಗಿ ಅಂದ್ಕೊಳ್ತೀವಿ. (1 ಪೇತ್ರ 4:12) ಯೇಸುವಿನ ಶಿಷ್ಯರೂ ಇದೇ ತರ ತಪ್ಪಾಗಿ ಅಂದ್ಕೊಂಡ್ರು. ಆದ್ರಿಂದನೇ ಯೇಸು ತನಗೆ ತುಂಬ ಕಷ್ಟ ಹಿಂಸೆಗಳು ಬರುತ್ತೆ ಅಂತ ಹೇಳ್ದಾಗ ಅದನ್ನ ಅವರು ಸರಿಯಾಗಿ ಅರ್ಥ ಮಾಡ್ಕೊಳ್ಳಲಿಲ್ಲ. (ಲೂಕ 18:33, 34) ತನಗೆ ಮುಂದೆ ಏನೇನಾಗುತ್ತೆ ಅಂತ ಯೇಸು ಅವ್ರಿಗೆ ಸ್ಪಷ್ಟವಾಗಿ ಮೊದ್ಲೇ ಹೇಳಿದ್ದನು. ಹಾಗಿದ್ರೂ ಪೇತ್ರ, ‘ಯೆಹೋವ ದೇವರು ಯಾವುದೇ ಕಾರಣಕ್ಕೂ ಯೇಸುಗೆ ಇಂಥ ಕಷ್ಟನ ಅನುಮತಿಸಲ್ಲ’ ಅಂತ ತಪ್ಪಾಗಿ ಅಂದ್ಕೊಂಡ. ‘ಪೇತ್ರನ ತರ ನಾನೂ ಯೋಚ್ನೆ ಮಾಡಿದ್ರೆ ಯೆಹೋವನ ಇಷ್ಟವನ್ನ ಮಾಡೋಕೆ ನಂಗೂ ಕಷ್ಟ ಆಗುತ್ತೆ’ ಅಂತ ಯೇಸುಗೆ ಗೊತ್ತಿತ್ತು. ಅದಕ್ಕೇ ಪೇತ್ರನನ್ನ ಯೇಸು ತಿದ್ದಿದನು. (ಮಾರ್ಕ 8:31-33) ಯೇಸು ಸತ್ತಮೇಲೆ ನಡೆದ ಘಟನೆಗಳನ್ನ ಅರ್ಥ ಮಾಡ್ಕೊಳ್ಳೋಕೂ ಶಿಷ್ಯರು ಕಷ್ಟಪಟ್ರು. ಹಾಗಂತ ಯೇಸು ಅವ್ರನ್ನ ಬಿಟ್ಟುಬಿಡಲಿಲ್ಲ. ಯೇಸು ಮತ್ತೆ ಎದ್ದು ಬಂದ್ಮೇಲೆ ಕಷ್ಟಗಳ ಬಗ್ಗೆ ಸರಿಯಾಗಿ ಯೋಚ್ನೆ ಮಾಡೋಕೆ ಅವ್ರಿಗೆ ಸಹಾಯ ಮಾಡಿದನು. ಅದಕ್ಕೆ “ಎಲ್ಲ ವಚನಗಳನ್ನ ಒಂದೊಂದಾಗಿ ಬಿಡಿಸಿ ವಿವರಿಸಿದನು.” (ಲೂಕ 24:25-27, 32, 44-48) ಆತನ ಶಿಷ್ಯರು ಯೇಸು ಕಲಿಸಿದ ಈ ವಿಷ್ಯಗಳ ಬಗ್ಗೆ ಧ್ಯಾನ ಮಾಡಿದ್ರೆ ಮುಂದೆ ಅವ್ರಿಗೆ ಬರಲಿದ್ದ ಕಷ್ಟಗಳನ್ನ ನಿಭಾಯಿಸೋಕೆ ಸಹಾಯ ಆಗ್ತಿತ್ತು. ನಾವೂ ಕಷ್ಟಗಳ ಬಗ್ಗೆ ಬೈಬಲ್ ಕಲಿಸೋ ಸತ್ಯವನ್ನ ತಿಳ್ಕೊಬೇಕು. ಆಗ ಯೇಸು ತರ ಕಷ್ಟಗಳನ್ನ ನಿಭಾಯಿಸೋಕೆ ತಯಾರಾಗ್ತೀವಿ.
12. ಕಷ್ಟಗಳ ಬಗ್ಗೆ ತಪ್ಪಾಗಿ ಯೋಚ್ನೆ ಮಾಡಿದ್ರೆ ನಮಗೆ ಹೇಗನಿಸುತ್ತೆ?
12 ಕಷ್ಟಗಳ ಬಗ್ಗೆ ನಾವು ತಪ್ಪಾಗಿ ಯೋಚಿಸಿದ್ರೆ, ಒಂದು ಚಿಕ್ಕ ಕಲ್ಲು ಸಹ ದೊಡ್ಡ ಬೆಟ್ಟದ ತರ ಅನ್ಸುತ್ತೆ. ಉದಾಹರಣೆಗೆ, ತೋಟದಲ್ಲಿ ಕೆಲಸ ಮಾಡೋಕೆ ಬಂದ ಕೆಲಸಗಾರರ ಬಗ್ಗೆ ಯೇಸು ಹೇಳಿದ ಕಥೆಯಲ್ಲಿ ಏನಾಯ್ತು ನೋಡಿ. ಕೆಲವು ಕೆಲಸಗಾರರಿಗೆ ಜಾಸ್ತಿ ಸಂಬಳ ಸಿಗ್ಲಿಲ್ಲ. ಅದಕ್ಕೆ ಅವ್ರಿಗೆ, ‘ಅನ್ಯಾಯ ಆಯ್ತು’ ಅಂತ ಅನಿಸ್ತು. ಆದ್ರೆ ಅವ್ರಿಗೆ ಯಜಮಾನ “ಗೆಳೆಯಾ, ನಾನು ನಿನಗೆ ಏನೂ ಅನ್ಯಾಯ ಮಾಡ್ತಾ ಇಲ್ಲ” ಅಂತ ಹೇಳಿದ. (ಮತ್ತಾ. 20:10-13) ಆ ಕೆಲಸಗಾರರಿಗೆ ಯಾಕೆ ‘ಅನ್ಯಾಯ’ ಅಂತ ಅನಿಸ್ತು? ನಿಜವಾಗ್ಲೂ ಅಲ್ಲಿ ಅನ್ಯಾಯ ಆಗಿತ್ತಾ? ಇಲ್ಲ. ಜಾಸ್ತಿ ಸಂಬಳ ಸಿಗುತ್ತೆ ಅಂತ ಅವರು ಅಂದ್ಕೊಂಡಿದ್ರು, ಆದ್ರೆ ಯಜಮಾನ ಜಾಸ್ತಿ ಸಂಬಳ ಕೊಡ್ತೀನಿ ಅಂತ ಮಾತು ಕೊಟ್ಟಿರಲಿಲ್ಲ. ಇವತ್ತು ಕೆಲವು ಸಾಕ್ಷಿಗಳಿಗೂ ಹೀಗೇ ಅನಿಸಬಹುದು. ಉದಾಹರಣೆಗೆ, ಅವರು ತುಂಬ ಕನಸು ಕಂಡಿದ್ದ ಕೆಲವು ನೇಮಕ ಅವ್ರಿಗೆ ಸಿಗದೆ ಹೋಗಬಹುದು ಅಥವಾ ಅವರು ತುಂಬ ಖುಷಿಯಿಂದ ಮಾಡ್ತಿದ್ದ ಕೆಲವು ನೇಮಕನ ಬಿಟ್ಟು ಬರಬೇಕಾಗಬಹುದು. ಇಂಥ ಪರಿಸ್ಥಿತಿಯಲ್ಲಿ ಸರಿಯಾಗಿ ಯೋಚ್ನೆ ಮಾಡೋಕೆ ಏನು ಮಾಡಬೇಕು?
ಕಷ್ಟ ಬಂದಾಗ ಹೀಗೆ ಮಾಡಿ . . .
13. ಕಷ್ಟಗಳು ಬಂದಾಗ ನಾವು ಹೇಗೆ ಯೋಚ್ನೆ ಮಾಡಿಬಿಡಬಹುದು?
13 ಕಷ್ಟಗಳ ಬಗ್ಗೆ ಬೈಬಲ್ ಏನು ಕಲಿಸುತ್ತೆ ಅನ್ನೋದು ನಿಮಗೆ ಚೆನ್ನಾಗಿ ಗೊತ್ತಿರಬಹುದು. ಕಷ್ಟಗಳು ಬಂದಾಗ ಅದನ್ನ ಹೇಗೆ ಎದುರಿಸಬೇಕು ಅನ್ನೋದನ್ನ ನೀವು ಈಗಾಗ್ಲೇ ಹತ್ತಾರು ಜನ್ರಿಗೆ ಬೈಬಲ್ ಅಧ್ಯಯನದಲ್ಲಿ ಕಲಿಸಿರಬಹುದು. ಆದ್ರೆ ಅದೇ ಕಷ್ಟಗಳು ನಿಮಗೆ ಬಂದಾಗ ಸರಿಯಾಗಿ ಯೋಚ್ನೆ ಮಾಡೋದು ಒಂದು ದೊಡ್ಡ ಸವಾಲು! ಉದಾಹರಣೆಗೆ, ಒಂದಾದ್ಮೇಲೆ ಒಂದು ಕಷ್ಟ ಬರ್ತಿದ್ರೆ ‘ಯೆಹೋವನೇ ನನಗೆ ಶಿಕ್ಷೆ ಕೊಡ್ತಿದ್ದಾನಾ’ ಅಂತ ಅನಿಸಬಹುದು. ‘ಎಷ್ಟೇ ಪ್ರಾರ್ಥನೆ ಮಾಡಿದ್ರೂ ದೇವರು ಕಿವಿಗೆ ಹಾಕೊಳ್ತಿಲ್ವೇನೋ’ ಅನ್ನೋ ಸಂಶಯ ಬರಬಹುದು. ಇಂಥ ಪರಿಸ್ಥಿತಿಯಲ್ಲಿ ನೀವು ಸರಿಯಾಗಿ ಯೋಚ್ನೆ ಮಾಡೋಕೆ ಏನು ಮಾಡಬೇಕು?
14. ನೀವು ಕಷ್ಟ ಎದುರಿಸುವಾಗ ಯಾವುದಕ್ಕೋಸ್ಕರ ಪ್ರಾರ್ಥನೆ ಮಾಡಬೇಕು? (ಫಿಲಿಪ್ಪಿ 4:13)
14 ಯೆಹೋವನ ಸಹಾಯ ಕೇಳಿ. ನಿಮಗೆ ಯಾವೆಲ್ಲಾ ಕಷ್ಟಗಳಿದೆ, ನಿಮಗೆ ಹೇಗೆ ಅನಿಸ್ತಿದೆ ಅಂತ ಯಾವುದನ್ನೂ ಮುಚ್ಚಿಡದೆ ಎಲ್ಲನೂ ಆತನ ಹತ್ರ ಹೇಳ್ಕೊಳ್ಳಿ. ಹೇಗೆ ಸಹಾಯ ಮಾಡಿದ್ರೆ ನಿಮಗೆ ಪ್ರಯೋಜ್ನ ಆಗುತ್ತೆ ಅನ್ನೋದನ್ನೂ ನಿರ್ದಿಷ್ಟವಾಗಿ ಯೆಹೋವನಿಗೆ ಹೇಳಿ. ‘ಪವಿತ್ರಶಕ್ತಿ ಕೊಡು’ ಅಂತ ಬೇಡ್ಕೊಳ್ಳಿ. ಯಾಕಂದ್ರೆ ಅದು ನಿಮಗೆ ಕಷ್ಟನಾ ತಾಳ್ಕೊಳ್ಳೋಕೆ ಬೇಕಾಗಿರೋ ಬಲ ಮತ್ತು ವಿವೇಕನ ಕೊಡುತ್ತೆ. ಕೆಲವೊಮ್ಮೆ ಯೆಹೋವ ನಿಮ್ಮ ಪ್ರಾರ್ಥನೆಗೆ ನೀವು ಕನಸು-ಮನಸ್ಸಲ್ಲೂ ಯೋಚ್ನೆ ಮಾಡದೆ ಇರೋ ರೀತಿಯಲ್ಲಿ ಉತ್ರ ಕೊಡಬಹುದು ಅಂತ ನೆನಪಿಡಿ. (ಎಫೆ. 3:20) ಅಷ್ಟೇ ಅಲ್ಲ, ಆತನು ದೇವದೂತರನ್ನ ಅಥವಾ ಸಹೋದರ ಸಹೋದರಿಯರನ್ನ ಬಳಸಿ ನಿಮಗೆ ಸಹಾಯ ಮಾಡಬಹುದು. (ಕೀರ್ತ. 34:7) ಹಾಗಾಗಿ ಆತನು ಹೇಗೆ ಸಹಾಯ ಮಾಡ್ತಿದ್ದಾನೆ ಅನ್ನೋದನ್ನ ಗಮನಿಸಿ, ಅದಕ್ಕೆ ಕೃತಜ್ಞತೆ ತೋರಿಸಿ. ನೀವು ಹೀಗೆ ಮಾಡಿದ್ರೆ ಆತನು ತನ್ನ ಪವಿತ್ರಶಕ್ತಿನ ಉದಾರವಾಗಿ ಕೊಡ್ತಾನೆ. ಆಗ ನೀವು ಎಂಥದ್ದೇ ಕಷ್ಟ ಬಂದ್ರೂ ಅದನ್ನ ನಿಭಾಯಿಸೋಕೆ ಬೇಕಾಗಿರೋ ಬಲ ಪಡ್ಕೊಳ್ತೀರ.—ಫಿಲಿಪ್ಪಿ 4:13 ಓದಿ.
15. ಕಷ್ಟನ ಎದುರಿಸೋಕೆ ಯಾವುದು ನಿಮಗೆ ಸಹಾಯ ಮಾಡುತ್ತೆ? (ಚಿತ್ರ ನೋಡಿ.)
15 ಆಧ್ಯಾತ್ಮಿಕ ರೂಢಿ ಬಿಟ್ಟುಬಿಡಬೇಡಿ. ಕಷ್ಟ ಬಂದಾಗ ಮುಂಚಿನ ತರ ಎಲ್ಲಾ ಮಾಡೋಕ್ಕಾಗಲ್ಲ ನಿಜ. ಆದ್ರೂ ನಿಮ್ಮ ಕೈಲಾದಷ್ಟು ಮಟ್ಟಿಗೆ ನೀವು ಆಧ್ಯಾತ್ಮಿಕ ವಿಷ್ಯಗಳನ್ನ ಮಾಡ್ತಾ ಇರಬೇಕು. ದೇವರ ಯೋಚ್ನೆಗಳನ್ನ ನಿಮ್ಮ ಮನಸ್ಸಲ್ಲಿ ನೀವು ತುಂಬಿಸಿಕೊಳ್ತಾ ಇರ್ಬೇಕು. ನಿಮಗೆ ಕಷ್ಟಗಳು ಜಾಸ್ತಿ ಬಂದಾಗಂತೂ ಇದನ್ನ ಇನ್ನೂ ಜಾಸ್ತಿ ಮಾಡ್ಬೇಕು. (ಕೀರ್ತ. 119:143) ಇದನ್ನ ಹೇಗೆ ಮಾಡಬಹುದು? ತಪ್ಪದೇ ಬೈಬಲ್ ಓದಬೇಕು, ಅಧ್ಯಯನ ಮಾಡಬೇಕು, ಓದಿದ್ರ ಬಗ್ಗೆ ಧ್ಯಾನ ಮಾಡಬೇಕು ಮತ್ತು ಸಿಹಿಸುದ್ದಿ ಸಾರಬೇಕು. ಕೂಟಗಳಿಗೆ ಹಾಜರಾಗಿ ಮನಸಾರೆ ಉತ್ರ ಕೊಡಬೇಕು. ಕಷ್ಟ ಬಂದಾಗ ‘ನಾಲ್ಕು ಗೋಡೆ ಮಧ್ಯದಲ್ಲೇ ಇದ್ದು ಬಿಡೋಣ’ ಅಂತ ತುಂಬ ಸಲ ಅನಿಸಬಹುದು. ಆದ್ರೆ ದಯವಿಟ್ಟು ಆ ತರ ಮಾಡಬೇಡಿ. ಸಹೋದರ ಸಹೋದರಿಯರ ಜೊತೆ ಸಮಯ ಕಳೆಯೋಕೆ ಯಾವಾಗ್ಲೂ ಅವಕಾಶಗಳನ್ನ ಹುಡುಕ್ತಾ ಇರಿ.—ಜ್ಞಾನೋ. 18:1.
ಆಧ್ಯಾತ್ಮಿಕ ರೂಢಿಯನ್ನ ಬಿಡದೇ ಇರೋಕೆ ನಿಮ್ಮ ಕೈಲಾಗೋದನ್ನೆಲ್ಲಾ ಮಾಡಿ (ಪ್ಯಾರ 15 ನೋಡಿ)
16. (ಎ) ಕಷ್ಟಗಳು ಬಂದಾಗ ನಿಮಗೆ ಯಾವ ಸಂಶಯ ಬರಬಹುದು? (ಬಿ) ಅವನ್ನ ನೀವು ಹೇಗೆ ಜಯಿಸಬಹುದು? (2 ಕೊರಿಂಥ 10:4, 5)
16 ಸಂಶಯಗಳನ್ನ ಸಾಯಿಸಿ. ಕಷ್ಟಗಳು ಬಂದಾಗ, ನಮ್ಮ ಬಗ್ಗೆ ಅಥವಾ ಯೆಹೋವ ದೇವರ ಬಗ್ಗೆ ನಮಗೆ ಕೆಲವು ಸಂಶಯಗಳು ಬರಬಹುದು. (2 ಕೊರಿಂಥ 10:4, 5 ಓದಿ.) ಆಗ ನಾವು ಯೋಚ್ನೆ ಮಾಡೋ ರೀತಿನೇ ಬದಲಾಗಿಬಿಡುತ್ತೆ. ಆ ರೀತಿ ಆಗಬಾರದು ಅಂದ್ರೆ ಏನು ಮಾಡಬೇಕು? ನಿಮಗೆ ಬಂದಿರೋ ಸಂಶಯಗಳನ್ನ ಬೈಬಲ್ ಮತ್ತು ನಮ್ಮ ಪ್ರಕಾಶನಗಳಲ್ಲಿ ಇರೋ ‘ದೇವರ ಜ್ಞಾನದಿಂದ’ ಹೊಡೆದೋಡಿಸಬೇಕು. ಉದಾಹರಣೆಗೆ, ದೇವರು ನಿಜವಾಗ್ಲೂ ನಿಮ್ಮನ್ನ ಮೆಚ್ಕೊಳ್ತಾನಾ ಅನ್ನೋ ಸಂಶಯ ಬಂದ್ರೆ, ಅಪೊಸ್ತಲ ಪೌಲನ ಅನುಭವ ಓದಿ. ಅವನು ಸಿಹಿಸುದ್ದಿ ಸಾರುವಾಗ ಅವನಿಗೆ ಎಷ್ಟೋ ಕಷ್ಟಗಳು ಬಂತು. ಅದನ್ನೆಲ್ಲ ನೋಡಿ ಅವನು ಯಾವತ್ತೂ ಸಂಶಯ ಪಡಲಿಲ್ಲ. ಬದ್ಲಿಗೆ ‘ನಾನು ಕ್ರಿಸ್ತನ ನಿಯತ್ತಾದ ಸೇವಕ’ ಅನ್ನೋ ನಂಬಿಕೆನ ಜಾಸ್ತಿ ಮಾಡ್ಕೊಂಡ. (2 ಕೊರಿಂ. 11:23-27) ಹಿಂದೆ ನಾವು ಮಾಡಿದ ತಪ್ಪುಗಳನ್ನ ದೇವರು ನಿಜವಾಗ್ಲೂ ಕ್ಷಮಿಸಿದ್ದಾನಾ ಅನ್ನೋ ಡೌಟ್ ಬಂದ್ರೆ ಏನು ಮಾಡಬೇಕು? ಆತನು ಕ್ಷಮಿಸಿದ್ದಾನೆ ಅಂತ ತೋರಿಸೋ ವಚನಗಳನ್ನೆಲ್ಲ ಒಂದು ಕಡೆ ಪಟ್ಟಿ ಮಾಡಿ. (ಯೆಶಾ. 43:25) ಅದನ್ನ ನೀವು ಆಗಾಗ ಓದಿ ಮತ್ತು ಧ್ಯಾನ ಮಾಡಿ. (ಕೀರ್ತ. 119:97) ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದ್ರೂ ದೊಡ್ಡ ದುರಂತ ನಡೆದಿದ್ಯಾ? ಆಗ ಯೆಹೋವ ನಿಮ್ಮ ಕೈ ಬಿಟ್ಟುಬಿಟ್ಟಾ ಅಂತ ಅನಿಸಿದ್ಯಾ? ಹಾಗಾದ್ರೆ ದೇವರು ಯಾಕೆ ಕಷ್ಟಗಳನ್ನ ಅನುಮತಿಸಿದ್ದಾನೆ, ನಿಮ್ಮನ್ನ ಆಧ್ಯಾತ್ಮಿಕವಾಗಿ ಹೇಗೆ ಕಾಪಾಡ್ತಿದ್ದಾನೆ ಅನ್ನೋ ವಿಷ್ಯಗಳ ಬಗ್ಗೆ ಸಂಶೋಧನೆ ಮಾಡಿ. (ಕೀರ್ತ. 91:9-12) ಇದೆಲ್ಲದ್ರ ಜೊತೆಗೆ ನಮ್ಮ ಸಹೋದರ ಸಹೋದರಿಯರು ಅವ್ರಿಗೆ ಬಂದಿರೋ ಕಷ್ಟಗಳನ್ನ ಹೇಗೆ ಜಯಿಸಿದ್ದಾರೆ ಅನ್ನೋ ಅನುಭವಗಳನ್ನ ಓದಿ. ಆಗ ನೀವು ಸಂಶಯಗಳನ್ನ ಸಾಯಿಸ್ತೀರ.a
17. ಕಷ್ಟ ಬಂದಾಗ ನಾವೇನು ಮಾಡಬೇಕು?
17 ಸದ್ಯಕ್ಕೆ ನಿಮಗೆ ಯಾವುದೇ ಕಷ್ಟ ಇಲ್ವಾ? ನೀವು ಜೀವನದಲ್ಲಿ ನೆಮ್ಮದಿಯಾಗಿ ಇದ್ದೀರಾ? ಹಾಗಾದ್ರೆ ನಿಮಗಿರೋ ಈ ಒಳ್ಳೇ ಸಮಯನ ಯೆಹೋವನಿಗೋಸ್ಕರ ಬಳಸಿ, ಆತನಿಗೆ ಋಣಿಗಳಾಗಿರಿ. (ಪ್ರಸಂ. 7:14) ಆದ್ರೆ ಮುಂದೆ ಕಷ್ಟಗಳು ಬಂದಾಗ ಅದ್ರ ಬಗ್ಗೆ ಸರಿಯಾಗಿ ಯೋಚಿಸೋಕೆ ಮತ್ತು ಯೆಹೋವನ ಮೇಲೆ ಪೂರ್ತಿಯಾಗಿ ಆತ್ಕೊಳ್ಳೋಕೆ ಈಗ್ಲೇ ತಯಾರಾಗಿ. ನೀವಿದನ್ನ ಮಾಡ್ತಾ ಇದ್ರೆ “ಕಷ್ಟ ಬಂದಾಗ ಅದನ್ನ ನೀವು ಸಹಿಸ್ಕೊಳ್ಳೋಕೆ ಬೇಕಾದ ಸಹಾಯವನ್ನೂ ಆತನು ಕೊಡ್ತಾನೆ.” (1 ಕೊರಿಂ. 10:13) ಆದ್ರೆ ಈಗ ನಮ್ಮ ಸಹೋದರ ಸಹೋದರಿಯರಿಗೂ ಕಷ್ಟ ಇದೆ ಅಲ್ವಾ? ಅವ್ರಿಗೆ ಸಹಾಯ ಮಾಡೋಕೆ ನಾವೇನು ಮಾಡಬಹುದು? ಇದ್ರ ಬಗ್ಗೆ ನಾವು ಮುಂದಿನ ಲೇಖನದಲ್ಲಿ ಚರ್ಚಿಸೋಣ.
ಗೀತೆ 150 ನಮ್ಮ ರಕ್ಷಣೆಗಾಗಿ ಯೆಹೋವನ ನಂಬೋಣ
a ಉದಾಹರಣೆಗೆ, ಸಹೋದರ ಡೇವಿಡ್ ಮಜ಼ಾರವರ ಕುಟುಂಬ ತಮ್ಮ ಮಗನನ್ನ ಕಳ್ಕೊಂಡ್ರು. ಅವ್ರಿಗೆ ಈ ಕಷ್ಟ ಬಂದಾಗ ಹೇಗೆ ನಿಭಾಯಿಸಿದ್ರು ಅಂತ ತಿಳ್ಕೊಳ್ಳೋಕೆ jw.org ನಲ್ಲಿರೋ “ಎ ಹ್ಯಾಪಿ ಫ್ಯಾಮಿಲಿ, ಶಾಟರ್ಡ್ ಆ್ಯಂಡ್ ರಿಬಿಲ್ಟ್ “(ಇಂಗ್ಲಿಷ್) ಅನ್ನೋ ಅವ್ರ ಜೀವನ ಕಥೆ ಓದಿ.