ಜೂನ್ 8-14, 2026
ಗೀತೆ 3 ಯೆಹೋವ ನಮ್ಮ ಆಶ್ರಯ, ವಿಶ್ವಾಸ
‘ಸತ್ಯದ ದೇವರು’ ಹೇಳಿದಂತೆ ಮಾಡ್ತಾನೆ
“ಯೆಹೋವನೇ, ಸತ್ಯದ ದೇವರೇ ನೀನು ನನ್ನನ್ನ ಬಿಡಿಸಿದ್ದೀಯ.” —ಕೀರ್ತ. 31:5.
ಈ ಲೇಖನದಲ್ಲಿ ಏನಿದೆ?
ಯೆಹೋವ ಕೊಟ್ಟ ಮಾತನ್ನ ತಪ್ಪಲ್ಲ! ತನ್ನ ರಾಜ್ಯ ತಂದು ಆದಷ್ಟು ಬೇಗ ಈ ಲೋಕದಲ್ಲಿರೋ ಸುಳ್ಳು ಮತ್ತು ಮೋಸನ ತೆಗೆದುಹಾಕ್ತಾನೆ. ಈ ವಿಷ್ಯದ ಮೇಲೆ ನಮ್ಮ ನಂಬಿಕೆ ಜಾಸ್ತಿ ಮಾಡೋಕೆ ಈ ಲೇಖನ ಸಹಾಯ ಮಾಡುತ್ತೆ.
1. ಕೀರ್ತನೆ 31:2-5ರ ಪ್ರಕಾರ ನಾವ್ಯಾಕೆ ಯೆಹೋವನನ್ನ ಪೂರ್ತಿಯಾಗಿ ನಂಬಬಹುದು? (ಕೀರ್ತನೆ 31:2-5)
ಇದು ಸೈತಾನನ ಲೋಕ! ಇಲ್ಲಿ ಸುಳ್ಳು, ಮೋಸ, ವಂಚನೆ ತುಂಬಿತುಳುಕ್ತಿದೆ. ಇಲ್ಲಿ ನಾವು ಯಾರನ್ನ ನಂಬಬೇಕು, ಯಾರನ್ನ ಬಿಡ್ಬೇಕು ಅಂತಾನೇ ಗೊತ್ತಾಗಲ್ಲ. ವ್ಯಾಪಾರದಲ್ಲಿ ಮೋಸ, ಜಾಹೀರಾತುಗಳಲ್ಲೂ ಮೋಸ. ಅಷ್ಟೇ ಅಲ್ಲ, ನಾವು ನಂಬಿದವ್ರೇ ನಮ್ಮ ಬೆನ್ನಿಗೆ ಚೂರಿ ಹಾಕಬಹುದು. ಆದ್ರೆ ನಾವೆಲ್ರೂ ಒಬ್ಬ ವ್ಯಕ್ತಿನ ಕಣ್ಮುಚ್ಚಿ ನಂಬಬಹುದು. ಆತನು ಯಾರು ಅಂತ ನಮ್ಮೆಲ್ರಿಗೂ ಗೊತ್ತು. ಆತನೇ ಯೆಹೋವ! ಯಾಕಂದ್ರೆ ಆತನು ‘ಸತ್ಯದ ದೇವರು.’ (ಕೀರ್ತನೆ 31:2-5 ಓದಿ.) ಬಟ್ಟೆಯಲ್ಲಿ ಹೇಗೆ ದಾರಗಳು ಹೆಣೆದ್ಕೊಂಡಿರುತ್ತೋ, ಅದೇ ತರ ಯೆಹೋವನ ವ್ಯಕ್ತಿತ್ವದಲ್ಲಿ ಸತ್ಯ ಬೆರೆತು ಹೋಗಿದೆ. ಹಾಗಾಗಿ ಯೆಹೋವ ಹೇಳೋದನ್ನ ಮತ್ತು ಮಾಡೋದನ್ನ ಹೀಗೆ ಪ್ರತಿಯೊಂದನ್ನ ನಾವು ಪೂರ್ತಿಯಾಗಿ ನಂಬಬಹುದು.
2. ಈ ಲೇಖನದಲ್ಲಿ ನಾವೇನು ಕಲಿತೀವಿ?
2 ಈ ಲೇಖನದಲ್ಲಿ ನಾವು ಮೂರು ವಿಷ್ಯಗಳನ್ನ ತಿಳ್ಕೊಳ್ತೀವಿ. (1) ಯೆಹೋವನನ್ನ ನಾವು ಪೂರ್ತಿ ನಂಬೋಕೆ ಯಾವೆಲ್ಲ ಕಾರಣಗಳಿವೆ? (2) ‘ಸತ್ಯದ ದೇವರು’ ಸೈತಾನನ ಲೋಕನ ಹೇಗೆ ನಾಶ ಮಾಡ್ತಾನೆ? (3) ಯೆಹೋವ ತಾನು ಕೊಟ್ಟ ಮಾತಿನ ಪ್ರಕಾರ ನಡ್ಕೊಳ್ಳೋಕೆ ಇವಾಗ ಏನು ಮಾಡ್ತಿದ್ದಾನೆ? ಇದನ್ನೆಲ್ಲ ತಿಳ್ಕೊಂಡ್ರೆ ನಾವು ಧೈರ್ಯವಾಗಿ ಯೆಹೋವನ ಪರ ಸತ್ಯನ ಸಾರ್ತಿವಿ.
ಸತ್ಯದ ದೇವ್ರನ್ನ ನಂಬಲು ಕಾರಣ
3. ಯೆಹೋವನನ್ನ ಸಂಪೂರ್ಣವಾಗಿ ನಂಬೋಕೆ ಒಂದು ಮುಖ್ಯ ಕಾರಣ ಏನು?
3 ಯೆಹೋವನೇ ಸೃಷ್ಟಿಕರ್ತ. ಆತನು ಆಕಾಶ ಮತ್ತು ಭೂಮಿಯನ್ನ ಸೃಷ್ಟಿ ಮಾಡಿದ್ದಾನೆ. ಭೂಮಿಯಲ್ಲಿರೋ ಪ್ರತಿಯೊಂದು ಜೀವಿಗೂ ಆತನೇ ಜೀವ ಕೊಟ್ಟಿದ್ದಾನೆ. (ಆದಿ. 1:1; ಕೀರ್ತ. 36:9; ಪ್ರಕ. 4:11) ಗಿಡ, ಮರ, ಪ್ರಾಣಿ-ಪಕ್ಷಿಗಳನ್ನ ಮತ್ತು ನಮ್ಮನ್ನೆಲ್ಲ ಆತನು ಸಾಕಿ ಸಲಹುತ್ತಿದ್ದಾನೆ. ಹಾಗಾಗಿ ಈ ಪರಿಸರದಲ್ಲಿ ಗಾಳಿ, ನೀರು ಮತ್ತು ಬೆಳಕನ್ನೆಲ್ಲ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಇಡೀ ವಿಶ್ವವನ್ನ ಯೆಹೋವನೇ ನಡೆಸ್ತಿದ್ದಾನೆ. ನಿಜವಾಗ್ಲೂ ಯೆಹೋವ ಒಬ್ಬ ಸರ್ವಜ್ಞಾನಿ ಮತ್ತು ಸರ್ವಶಕ್ತ! ಹಾಗಾಗಿ ಆತನು ಹೇಳೋ ತರ ನಾವು ಬದುಕಿದ್ರೆ ನಮ್ಮ ಜೀವನ ಈಗ ಮತ್ತು ಮುಂದೆ ತುಂಬ ಚೆನ್ನಾಗಿರುತ್ತೆ.
4. ಯೆಹೋವನಿಗೆ ನಮ್ಮ ಮೇಲೆ ಪ್ರೀತಿ ಇದೆ ಅಂತ ಯಾಕೆ ಹೇಳಬಹುದು?
4 ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ. ಯೆಹೋವ ಮನುಷ್ಯರನ್ನ ಸೃಷ್ಟಿ ಮಾಡುವಾಗ “ನಮ್ಮನ್ನ ಹೋಲುವಂಥ, ನಮ್ಮ ಹಾಗೆ ಇರೋ ಮನುಷ್ಯನನ್ನ ಮಾಡೋಣ” ಅಂತ ಹೇಳಿದನು. ನೋಡಿದ್ರಾ, ಆತನ ತರಾನೇ ನಾವು ಯಾವಾಗ್ಲೂ ಖುಷಿ-ಖುಷಿಯಾಗಿ ಬದುಕಿ ಬಾಳಬೇಕು ಅಂತ ಯೆಹೋವ ಬಯಸಿದನು. (ಆದಿ. 1:26) ಯೆಹೋವ ನಮ್ಮನ್ನ ಆತನ ಕೈಗೊಂಬೆಯಾಗಿ ಮಾಡ್ಕೊಂಡಿಲ್ಲ, ನಮಗೆ ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದಾನೆ. ನಮ್ಮನ್ನ ಗುಡಿಸಲಲ್ಲಿ ಇಟ್ಟಿಲ್ಲ, ಸುಂದರವಾದ ಭೂಮಿನ ಮನೆಯಾಗಿ ಕೊಟ್ಟಿದ್ದಾನೆ. (ಕೀರ್ತ. 115:16) ಮೊದಲ ಮನುಷ್ಯರಿಗೆ ಈ ಭೂಮಿನ ಸುಂದರ ಪರದೈಸ್ ಮಾಡೋ ಒಂದು ಅದ್ಭುತವಾದ ಕೆಲಸ ಕೊಟ್ಟನು. (ಆದಿ. 1:28; 2:15) ಅಷ್ಟೇ ಅಲ್ಲ, ಈ ಭೂಮಿಯಲ್ಲಿ ಇರೋ ಎಲ್ಲ ಸಂಪತ್ತನ್ನ ಅವ್ರ ಕೈಗೆ ಒಪ್ಪಿಸಿದನು. ಇದನ್ನೆಲ್ಲ ನೋಡಿದ್ರೆ, ಯೆಹೋವನ “ಪ್ರೀತಿ ಶಾಶ್ವತವಾಗಿ [ಯುಗಯುಗಾಂತರಕ್ಕೂ] ಇರುತ್ತೆ” ಅಂತ ಹೇಳಬಹುದು.—ಕೀರ್ತ. 103:17, ಪಾದಟಿಪ್ಪಣಿ.
5. (ಎ) ಮನುಷ್ಯರನ್ನ ಸಂಪೂರ್ಣವಾಗಿ ನಾಶ ಮಾಡಬೇಕು ಅಂತ ಸೈತಾನ ಅಂದ್ಕೊಂಡ್ರೂ, ಯೆಹೋವ ತನ್ನ ಮಾತನ್ನ ಹೇಗೆ ಉಳಿಸ್ಕೊಂಡನು? (ಬಿ) ಯೆಹೋವ ಕೊಟ್ಟ ಮಾತನ್ನ ಉಳಿಸ್ಕೊಂಡಿರೋ ಕೆಲವು ಉದಾಹರಣೆ ಕೊಡಿ. (“ಯೆಹೋವ ಯಾವಾಗ್ಲೂ ಸತ್ಯ ಹೇಳ್ತಾನೆ ಅನ್ನೋದಕ್ಕೆ ಆಧಾರ” ಅನ್ನೋ ಚೌಕ ನೋಡಿ.)
5 ಯೆಹೋವ ಕೊಟ್ಟ ಮಾತನ್ನ ತಪ್ಪಲ್ಲ. ದೇವರು ಭೂಮಿನ “ಹಾಗೇ ಸುಮ್ಮನೆ ಸೃಷ್ಟಿಸಲಿಲ್ಲ, ಜನ ವಾಸಿಸಬೇಕಂತನೇ ರೂಪಿಸಿದನು.” (ಯೆಶಾ. 45:18, 19) ಆದಾಮ-ಹವ್ವ, ದೇವರ ಮಾತನ್ನ ಕೇಳಲಿಲ್ಲ. ಅದಕ್ಕೆ ಅವ್ರಿಗೆ ಮರಣ ಶಿಕ್ಷೆ ಸಿಕ್ತು. ಇದನ್ನೆಲ್ಲ ನೋಡ್ದಾಗ ಯೆಹೋವನ ಉದ್ದೇಶ ನೀರುಪಾಲಾಯ್ತು ಅಂತ ಅನಿಸಬಹುದು. ಆದ್ರೆ ಯೆಹೋವ ಒಂದ್ಸಲ ಮಾತು ಕೊಟ್ರೆ ಏನೇ ಆದ್ರೂ ಅದನ್ನ ತಪ್ಪಿಸಲ್ಲ. (ಯೆಶಾ. 46:10, 11) ನೀತಿವಂತ ಮನುಷ್ಯರು ಈ ಭೂಮಿಯಲ್ಲಿ ಸಾವಿಲ್ಲದೆ ಯಾವಾಗ್ಲೂ ಬದುಕಬೇಕು ಅನ್ನೋ ಆತನ ಉದ್ದೇಶನ ಯಾವುದೂ ತಡೆಯೋಕೆ ಆಗಲಿಲ್ಲ. ಅದಕ್ಕೆ ಆದಾಮ ಹವ್ವರಿಗೆ ಮಕ್ಕಳಾಗುವಂತೆ ಯೆಹೋವ ಅನುಮತಿಸಿದನು. ಆದ್ರೆ ಈ ಮಕ್ಕಳಲ್ಲಿ ಪಾಪ-ಮರಣ ಇದೆ. ಇದನ್ನ ತೆಗೆದುಹಾಕೋಕೆ ಯೆಹೋವ ತನ್ನ ಒಬ್ಬನೇ ಮಗನನ್ನ ಬಿಡುಗಡೆ ಬೆಲೆಯಾಗಿ ಕೊಟ್ಟನು. ಇದ್ರಿಂದ ಎಲ್ಲಾ ಮನುಷ್ಯರಿಗೆ ಶಾಶ್ವತವಾಗಿ ಜೀವಿಸೋ ಒಂದು ಅದ್ಭುತ ನಿರೀಕ್ಷೆ ಸಿಕ್ತು.—ಯೋಹಾ. 3:16.
ಸತ್ಯದ ದೇವರು ತನ್ನ ಉದ್ದೇಶ ನೆರವೇರಿಸ್ತಾನೆ
6. ಸೈತಾನ ಮಾಡಿದ ತಪ್ಪಿಗೆ ಅವನಿಗೆ ಏನಾಗುತ್ತೆ ಅಂತ ಯೆಹೋವ ಹೇಳಿದನು?
6 ಆದಾಮ ಹವ್ವ, ಯೆಹೋವನ ವಿರುದ್ಧ ತಿರುಗಿ ಬೀಳೋ ತರ ಮಾಡಿದ್ದು ಘಟಸರ್ಪ.“ಈ ಘಟಸರ್ಪಕ್ಕೆ ಪಿಶಾಚ, ಸೈತಾನ, ಹಳೇ ಹಾವು ಅಂತ ಹೆಸ್ರಿದೆ.”a (ಪ್ರಕ. 12:9; ಆದಿ. 3:4, 5; ಯೋಹಾ. 8:44) ಅವನು ಮಾಡಿದ ತಪ್ಪಿಗೆ ಯೆಹೋವ ನ್ಯಾಯ ತೀರ್ಪು ಕೊಟ್ಟನು. ‘ಮುಂದೆ ಒಂದು ದಿನ ಅವನನ್ನ ನಾಶ ಮಾಡ್ತೀನಿ’ ಅಂತ ಹೇಳಿದನು. (ಆದಿ. 3:15) ಆದ್ರೆ ಸೈತಾನ ನಾಶ ಆಗೋ ಮುಂಚೆ ತುಂಬ ಜನ ತನ್ನ ದಾರಿ ಹಿಡಿಯೋ ತರ ಮಾಡ್ತಾನೆ. ಆದ್ರೆ ಅಂಥ ಸಂದರ್ಭದಲ್ಲೂ ಕೆಲವು ಜನ ಯೆಹೋವನಿಗೆ ನಿಷ್ಠರಾಗಿ ಇರ್ತಾರೆ.
7. ಯಾರೆಲ್ಲ ಸೈತಾನನ ದಾರಿ ಹಿಡಿದಿದ್ದಾರೆ ಮತ್ತು ಅವ್ರಿಗೆ ಮುಂದೆ ಏನಾಗುತ್ತೆ?
7 ಇವತ್ತು ಕೆಟ್ಟ ದೇವದೂತರು ಮತ್ತು ಮನುಷ್ಯರು ಸೈತಾನನ ದಾರಿ ಹಿಡಿದಿದ್ದಾರೆ. ಅವರು ದೇವರ ಉದ್ದೇಶನ, ಕೆಲಸಗಳನ್ನ ವಿರೋಧಿಸ್ತಿದ್ದಾರೆ. ಹೀಗೆ ಅವರು ಸೈತಾನನ ಸಂತತಿಯ ಭಾಗ ಆಗಿದ್ದಾರೆ. ಆದ್ರೆ ಯೆಹೋವ ಇದನ್ನ ನೋಡ್ಕೊಂಡು ಸುಮ್ನೆ ಇರಲ್ಲ. ಸರಿಯಾದ ಸಮಯ ಬಂದಾಗ ಸೈತಾನನನ್ನ ಮತ್ತು ಇವರೆಲ್ರನ್ನ ಸರ್ವನಾಶ ಮಾಡ್ತಾನೆ.—ದಾನಿ. 2:44; ರೋಮ. 16:20.
8. 1914ರಲ್ಲಿ ಯೇಸು ಏನು ಮಾಡಿದನು? (ಚಿತ್ರ ನೋಡಿ.)
8 ಸೈತಾನ ಮತ್ತು ಅವನ ಕಡೆಯವ್ರನ್ನ ಯೆಹೋವ ನಾಶ ಮಾಡ್ತಾನೆ ಅನ್ನೋದಕ್ಕೆ ಏನು ಗ್ಯಾರಂಟಿ ಇದೆ? 1914ರಲ್ಲಿ ಯೇಸು, ಸೈತಾನ ಮತ್ತು ಕೆಟ್ಟ ದೇವದೂತರ ವಿರುದ್ಧ ಸ್ವರ್ಗದಲ್ಲಿ ಯುದ್ಧ ಮಾಡಿದನು. ಆಗ ಯೇಸು ಅವ್ರನ್ನ ಸೋಲಿಸಿ ಭೂಮಿಗೆ ಎಸೆದನು. (ಪ್ರಕ. 12:7-9) ಹಾಗಾಗಿ ನಾವು ಸೈತಾನನ ಕೆಟ್ಟ ಪ್ರಭಾವವನ್ನ ಈಗ ಭೂಮಿಯಲ್ಲೂ ನೋಡಬಹುದು. ಅದಕ್ಕೇ ಬೈಬಲ್, “ಭೂಮಿಯೇ, ಸಮುದ್ರವೇ ಇನ್ಮುಂದೆ ನಿಮಗೆ ತುಂಬ ಕಷ್ಟ ಆಗುತ್ತೆ. ಯಾಕಂದ್ರೆ ತನಗಿರೋ ಸಮಯ ತುಂಬ ಕಮ್ಮಿ ಅಂತ ಸೈತಾನನಿಗೆ ಗೊತ್ತು. ಅದಕ್ಕೇ ಅವನು ತುಂಬ ಕೋಪದಿಂದ ಭೂಮಿಗೆ ಬಂದಿದ್ದಾನೆ” ಅಂತ ಹೇಳುತ್ತೆ. (ಪ್ರಕ. 12:12) 1914ರಿಂದ ಸೈತಾನ ತನ್ನ ಗಮನನ ಭೂಮಿ ಮೇಲೆ ಇಟ್ಟಿದ್ದಾನೆ. ಅದಕ್ಕೆ ಲೋಕದ ಪರಿಸ್ಥಿತಿ ತುಂಬ ಹದಗೆಡ್ತಿದೆ. ಆದ್ರೆ ಯೇಸು ತುಂಬ ಬೇಗ ‘ಶತ್ರುಗಳನ್ನ ಸೋಲಿಸ್ತಾ ಗೆಲ್ತಾ ಹೋಗ್ತಾನೆ.’ ಸೈತಾನ ಮತ್ತು ಅವನ ಕಡೆಯವ್ರನ್ನ ಭೂಮಿಯಿಂದ ತೆಗೆದುಹಾಕ್ತಾನೆ. (ಪ್ರಕ. 6:2) ಹೀಗೆ ಯೆಹೋವನ ಹೆಸ್ರಿಗೆ ಬಂದಿರೋ ಕಳಂಕನ ಪೂರ್ತಿ ತೆಗೆದುಹಾಕ್ತಾನೆ. (ಕೀರ್ತ. 45:4-6) ಆಗ ಯೆಹೋವನೇ ಸತ್ಯದ ದೇವರು ಅಂತ ಇಡೀ ವಿಶ್ವಕ್ಕೆ ಗೊತ್ತಾಗುತ್ತೆ.—ಯೆಹೆ. 38:23.
World War I: U.S. National Archives photo; bomb: USAF photo; pandemic: blvdone/stock.adobe.com; riot: inhauscreative/E+ via Getty Images
1914ರಿಂದ ಲೋಕದ ಪರಿಸ್ಥಿತಿ ತೀರಾ ಹದಗೆಟ್ಟಿದೆ (ಪ್ಯಾರ 8 ನೋಡಿ)
ಸತ್ಯನ ಪ್ರೀತಿಸೋರನ್ನ ಒಟ್ಟುಗೂಡಿಸ್ತಾನೆ
9. ಇವತ್ತು ಯೆಹೋವ ಯಾರನ್ನೆಲ್ಲ ಒಟ್ಟು ಸೇರಿಸ್ತಿದ್ದಾನೆ?
9 ಈಗ ಯೆಹೋವ ‘ಸ್ವರ್ಗದಲ್ಲಿರೋ ಮತ್ತು ಭೂಮಿಯಲ್ಲಿರೋ ವಿಷ್ಯಗಳನ್ನ, ಹೀಗೆ ಎಲ್ಲವನ್ನ ಕ್ರಿಸ್ತನ ಮೂಲಕ ಒಟ್ಟು ಸೇರಿಸ್ತಿದ್ದಾನೆ.’ (ಎಫೆ. 1:10) ‘ಸ್ವರ್ಗದಲ್ಲಿರೋ ವಿಷ್ಯಗಳು’ ಅಂದ್ರೆ ಅಭಿಷಿಕ್ತರು. ಯೆಹೋವ ಇವ್ರನ್ನ, ಯೇಸು ಜೊತೆ ಸ್ವರ್ಗದಲ್ಲಿ ಆಳೋಕೆ ಆಯ್ಕೆ ಮಾಡಿದ್ದಾನೆ. ‘ಭೂಮಿಯಲ್ಲಿರೋ ವಿಷ್ಯಗಳು’ ಅಂದ್ರೆ ಈ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ಜನರು. ಯೆಹೋವನನ್ನ ಆರಾಧಿಸೋ ಇವ್ರೆಲ್ರೂ ಸೈತಾನನ ಸುಳ್ಳುಗಳನ್ನ ಬಟ್ಟ-ಬಯಲು ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಸತ್ಯ ಕಲಿಯೋಕೆ ಇಷ್ಟ ಇರೋ ಎಲ್ಲಾ ಜನ್ರಿಗೆ ಸಹಾಯ ಮಾಡ್ತಿದ್ದಾರೆ.
10. ಸುಳ್ಳು ಧರ್ಮಗಳ ಸುಳ್ಳಿನ ಕಂತೆಗಳಿಂದ ಜನ್ರನ್ನ ಯೆಹೋವ ಹೇಗೆ ಬಿಡುಗಡೆ ಮಾಡ್ತಿದ್ದಾನೆ? (ಪ್ರಕಟನೆ 14:6, 7)
10 ಇತಿಹಾಸದಲ್ಲಿ ಯಾವತ್ತೂ ನಡೆಯದಷ್ಟು ದೊಡ್ಡ ಪ್ರಮಾಣದಲ್ಲಿ ಸಿಹಿಸುದ್ದಿ ಸಾರೋ ಕೆಲಸ ಈಗ ನಡೀತಿದೆ. ಇದನ್ನ ಬಳಸಿ ಯೆಹೋವ ದೇವರು ಸತ್ಯನ ಪ್ರೀತಿಸೋರನ್ನ ತನ್ನ ಕಡೆ ಸೆಳಿತಿದ್ದಾನೆ. (ಪ್ರಕಟನೆ 14:6, 7 ಓದಿ.) ಈ ಸಾರೋ ಕೆಲಸಕ್ಕೆ ಮನುಷ್ಯರ ಜೊತೆ ದೇವದೂತರೂ ಸಾಥ್ ಕೊಡ್ತಿದ್ದಾರೆ. ಇವರು ಒಳ್ಳೆ ಮನಸ್ಸಿನ ಜನ್ರನ್ನ ಸತ್ಯದ ಕಡೆ ಮಾರ್ಗದರ್ಶಿಸ್ತಿದ್ದಾರೆ. ಸಾವಿರಾರು ವರ್ಷಗಳಿಂದ ಮಹಾ ಬಾಬೆಲ್ ಯೆಹೋವನ ಬಗ್ಗೆ ಇಲ್ಲ-ಸಲ್ಲದ ಸುಳ್ಳುಗಳನ್ನ ಹೇಳ್ತಾ ಬರ್ತಿದೆ. ಆದ್ರೆ ಸಿಹಿಸುದ್ದಿಯ ಕೆಲಸನ ಬಳಸ್ತಾ ಯೆಹೋವ ಈ ಎಲ್ಲ ಸುಳ್ಳು ಧರ್ಮಗಳ ನಿಜ ಬಣ್ಣ ಬಯಲು ಮಾಡ್ತಿದ್ದಾನೆ. (ಪ್ರಕ. 18:2, 4) ಆದಷ್ಟು ಬೇಗ ಈ ಎಲ್ಲ ಸುಳ್ಳು ಧರ್ಮಗಳನ್ನ ಯೆಹೋವ ನಾಶ ಮಾಡ್ತಾನೆ. ಆಮೇಲೆ ಸತ್ಯನ ಪ್ರೀತಿಸೋರೆಲ್ರೂ ಯೆಹೋವನಿಗೆ ನಿಜವಾದ ಭಯ-ಭಕ್ತಿ ಮತ್ತು ಗೌರವ ಕೊಡ್ತಾರೆ.—ಪ್ರಕ. 17:16.
11. ಯೆಹೋವನ ನಿಜ ಆರಾಧಕರನ್ನ ನಾವು ಹೇಗೆ ಕಂಡುಹಿಡಿಬಹುದು?
11 ದೇಶ, ಕುಲ, ಜಾತಿ ಮತ್ತು ಭಾಷೆ ಹೀಗೆ ಯಾವುದೇ ಭೇದಭಾವ ಇಲ್ದೆ ಜನರು ಸತ್ಯನ ಪ್ರೀತಿಸ್ತಿದ್ದಾರೆ. (ಪ್ರಕ. 7:9, 10) ಇವರು ‘ಸಿಹಿಸುದ್ದಿನ’ ಕೇಳಿಸ್ಕೊಂಡಾಗ ಇದ್ರಲ್ಲಿ ಸತ್ಯ ಇದೆ ಅಂತ ಅರ್ಥ ಮಾಡ್ಕೊಂಡಿದ್ದಾರೆ ಮತ್ತು ಖುಷಿಯಾಗಿ ಯೆಹೋವನ ಆರಾಧಕರ ಜೊತೆ ಕೈ ಜೋಡಿಸಿದ್ದಾರೆ. (ಮಾರ್ಕ 13:10) ಪ್ರವಾದಿ ಮಲಾಕಿಯ, “ನೀವು ನೀತಿವಂತನಿಗೂ ಕೆಟ್ಟವನಿಗೂ ಮತ್ತು ದೇವರನ್ನ ಆರಾಧಿಸುವವನಿಗೂ ಆರಾಧಿಸದವನಿಗೂ ಇರೋ ವ್ಯತ್ಯಾಸವನ್ನ ಮತ್ತೊಮ್ಮೆ ನೋಡ್ತೀರ” ಅಂತ ಹೇಳಿದ. (ಮಲಾ. 3:18) ಹಾಗಾಗಿ ಇವತ್ತು ದೇವ್ರನ್ನ ಯಾರು ಸರಿಯಾಗಿ ಆರಾಧಿಸ್ತಿದ್ದಾರೆ, ಯಾರು ಸರಿಯಾಗಿ ಆರಾಧಿಸ್ತಿಲ್ಲ ಅಂತ ಸ್ಪಷ್ಟವಾಗಿ ಗೊತ್ತಾಗ್ತಿದೆ. ಯೆಹೋವನ ಸಾಕ್ಷಿಗಳು ತಮ್ಮ ನಡವಳಿಕೆ ಮತ್ತು ಸಾರೋ ಕೆಲಸದಿಂದ ಸತ್ಯದ ದೇವ್ರನ್ನ ಸರಿಯಾಗಿ ಆರಾಧಿಸ್ತಿದ್ದಾರೆ ಅಂತ ತೋರಿಸ್ತಿದ್ದಾರೆ.
12. ಸಾರೋ ಕೆಲಸ ಯೆಹೋವನ ಉದ್ದೇಶನ ಪೂರೈಸೋಕೆ ಹೇಗೆ ಸಹಾಯ ಮಾಡುತ್ತೆ?
12 ಇವತ್ತು ನಾವು ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಸಾರೋದ್ರಿಂದ ಎರಡು ವಿಷ್ಯಗಳನ್ನ ಸಾಧಿಸ್ತಿದ್ದೀವಿ. ಒಂದು, ಯೇಸು ಕೊಟ್ಟಿರೋ ಆಜ್ಞೆಯನ್ನ ಪಾಲಿಸ್ತಿದ್ದೀವಿ. ಎರಡು, ಭವಿಷ್ಯವಾಣಿಯನ್ನ ನೆರವೇರಿಸ್ತಿದ್ದೀವಿ. (ಮತ್ತಾ. 24:14; 28:18-20) ಈ ಕೆಲಸದಿಂದ ಇವತ್ತು ತುಂಬ ಜನ ಯೇಸುವಿನ ಶಿಷ್ಯರಾಗ್ತಿದ್ದಾರೆ ಮತ್ತು ಸತ್ಯದ ದೇವರನ್ನ ಆರಾಧಿಸ್ತಿದ್ದಾರೆ. ಯೆಹೋವನ ಉದ್ದೇಶ ನೆರವೇರಿಸೋದ್ರಲ್ಲಿ ನಮಗೂ ಒಂದು ಚಿಕ್ಕ ಪಾಲಿದೆ ಅನ್ನೋ ವಿಷ್ಯ, ನಮಗೆ ಎಷ್ಟು ಖುಷಿ ಕೊಡುತ್ತಲ್ವಾ?
ಭವಿಷ್ಯನ ನಂಬಿಕೆಯಿಂದ ಎದುರಿಸಿ
13. ಸೈತಾನ ಮುಖ್ಯವಾಗಿ ಯಾರ ಮೇಲೆ ಗುರಿ ಇಟ್ಟಿದ್ದಾನೆ ಮತ್ತು ಯಾಕೆ?
13 ಸೈತಾನನ ಲೋಕ ತುಂಬ ಬೇಗ ನಾಶ ಆಗುತ್ತೆ. ಹಾಗಾಗಿ ‘ನನಗಿರೋ ಸಮಯ ತುಂಬ ಕಮ್ಮಿ’ ಅಂತ ಸೈತಾನನಿಗೆ ಚೆನ್ನಾಗಿ ಗೊತ್ತು. (ಪ್ರಕ. 12:12, 13) ಅದಕ್ಕೆ ಅವನು ಕೋಪದಿಂದ ಕುದಿತಿದ್ದಾನೆ. ಹಾಗಾಗಿ ಭೂಮಿಯಲ್ಲಿರೋ ಅಭಿಷಿಕ್ತರನ್ನ ಸೈತಾನ ಇವತ್ತು ತನ್ನ ಮುಖ್ಯ ಗುರಿ ಹಲಗೆಯಾಗಿ ಮಾಡ್ಕೊಂಡಿದ್ದಾನೆ. ಯಾಕಂದ್ರೆ ಅವರು, ‘ದೇವರ ಆಜ್ಞೆಗಳನ್ನ ಪಾಲಿಸ್ತಾ, ಯೇಸು ಬಗ್ಗೆ ಸಾಕ್ಷಿ ಹೇಳ್ತಾ’ ಇದ್ದಾರೆ. (ಪ್ರಕ. 12:17; 14:12) ಅಷ್ಟೇ ಅಲ್ಲ, ಈ ಅಭಿಷಿಕ್ತರನ್ನ ಮತ್ತು ಅವ್ರ ಕೆಲಸನ ಬೆಂಬಲಿಸ್ತಾ ಇರೋರು ಸಹ ಸೈತಾನನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
14. ಸೈತಾನ, ಯೆಹೋವನ ಜನ್ರ ಮೇಲೆ ಆಕ್ರಮಣ ಮಾಡ್ವಾಗ ಏನಾಗುತ್ತೆ? ( ಚಿತ್ರ ನೋಡಿ.)
14 ಸುಳ್ಳು ಧರ್ಮಗಳು ನಾಶ ಆದ್ಮೇಲೆ ಸೈತಾನನ ಕಡೆಯವರು ತಮಗಿರೋ ಎಲ್ಲಾ ಶಕ್ತಿಗಳನ್ನ ಬಳಸಿ ಯೆಹೋವನ ಜನ್ರ ಮೇಲೆ ಆಕ್ರಮಣ ಮಾಡ್ತಾರೆ. ಆಗ ಹರ್ಮಗೆದೋನ್ ಯುದ್ಧ ಶುರುವಾಗುತ್ತೆ. (ಪ್ರಕ. 16:13, 14, 16) ಯೇಸು ಮತ್ತು ಸ್ವರ್ಗದ ಸೈನ್ಯ, ಯೆಹೋವನ ಜನ್ರನ್ನ ಕಣ್ಣುರೆಪ್ಪೆ ತರ ಕಾಪಾಡ್ತಾರೆ. ಆದ್ರೆ ಸೈತಾನನ ಲೋಕದಲ್ಲಿ ಏನೆಲ್ಲ ಉಳಿದಿರುತ್ತೋ ಅದನ್ನೆಲ್ಲ ಪೂರ್ತಿಯಾಗಿ ನಾಶ ಮಾಡ್ತಾರೆ. (ಪ್ರಕ. 19:19-21) ಆಗ ಸುಳ್ಳು ಹೇಳೋರು, ಕೆಟ್ಟ ಜನರು ಮತ್ತು ಮೋಸ ಮಾಡೋ ಒಬ್ರೂ ಉಳಿಯಲ್ಲ. (ಪ್ರಕ. 21:8) ಇದೆಲ್ಲ ನಡೆದಾಗ ಯೆಹೋವನೇ ಸತ್ಯದೇವರು, ಆತನು ಮಾಡೋದೆಲ್ಲ ಸರಿಯಾಗಿರುತ್ತೆ ಅಂತ ಇಡೀ ಭೂಮಿಗೆ ಗೊತ್ತಾಗುತ್ತೆ.
ಯೇಸು ಮತ್ತು ಆತನ ಸ್ವರ್ಗದ ಸೈನ್ಯ ಅರ್ಮಗೆದೋನ್ ಯುದ್ಧದಲ್ಲಿ ದೇವರ ಶತ್ರುಗಳನ್ನ ನಾಶ ಮಾಡ್ತಿದ್ದಾರೆ (ಪ್ಯಾರ 14 ನೋಡಿ)
15. ನಾವು ಯಾಕೆ ಯೇಸುನ ಸಂಪೂರ್ಣವಾಗಿ ನಂಬಬಹುದು? (ಯೆಶಾಯ 65:16, 17) (ಚಿತ್ರ ನೋಡಿ.)
15 ಇವತ್ತು ಇಡೀ ಲೋಕ ಒಡೆದು ಹೋಗ್ತಿದೆ. ಆದ್ರೂ ಯೆಹೋವನ ಸಹಾಯದಿಂದ ಆತನ ಜನರು ಒಗ್ಗಟ್ಟಾಗಿದ್ದಾರೆ. ಜನ್ರನ್ನ ಒಟ್ಟುಗೂಡಿಸೋ ಕೆಲಸ ತುಂಬ ಚೆನ್ನಾಗಿ ನಡೀತಿದೆ. ತನ್ನ ಜನ್ರನ್ನ ಮತ್ತು ಅವರು ಮಾಡ್ತಿರೋ ಕೆಲಸನ ಯೆಹೋವ ತುಂಬ ಆಶೀರ್ವದಿಸ್ತಿದ್ದಾನೆ. ಇದನ್ನ ಯಾರೂ ತಡೆಯೋಕೆ ಆಗಲ್ಲ. (ಯೆಶಾಯ 65:16, 17 ಓದಿ.) ಹಾಗಾಗಿ ನಾವೆಲ್ರೂ ಯೆಹೋವನ ಮೇಲೆ ನಂಬಿಕೆ ಇಡೋಣ. ರೋಮನ್ನರಿಗೆ 8:38, 39ರಲ್ಲಿ ಹೇಳಿರೋ ಮಾತುಗಳನ್ನ ಮನಸ್ಸಲ್ಲಿ ಇಡೋಣ. ಅಲ್ಲಿ, “ಸಾವಾಗ್ಲಿ ಬದುಕಾಗ್ಲಿ ದೇವದೂತರಾಗ್ಲಿ ಸರ್ಕಾರಗಳಾಗ್ಲಿ ಈಗಿರೋ ವಿಷ್ಯಗಳಾಗ್ಲಿ ಮುಂದೆ ಬರೋ ವಿಷ್ಯಗಳಾಗ್ಲಿ ಶಕ್ತಿಗಳಾಗ್ಲಿ ಎತ್ತರವಾಗ್ಲಿ ಆಳವಾಗ್ಲಿ ಬೇರೆ ಯಾವ ಸೃಷ್ಟಿನೇ ಆಗ್ಲಿ ನಮ್ಮ ಪ್ರಭು ಕ್ರಿಸ್ತ ಯೇಸುವಿನ ಮೂಲಕ ದೇವರು ತೋರಿಸೋ ಪ್ರೀತಿಯಿಂದ ನಮ್ಮನ್ನ ದೂರ ಮಾಡಕ್ಕಾಗಲ್ಲ” ಅನ್ನೋ ಭರವಸೆಯ ಮಾತಿದೆ.
ಹೊಸ ಲೋಕದಲ್ಲಿ ಈಗಿರೋ ಕಷ್ಟಗಳು ನೆನಪಿಗೆ ಬರಲ್ಲ (ಪ್ಯಾರ 15 ನೋಡಿ)
16. ನೀವು ಯೆಹೋವನನ್ನ ಪೂರ್ಣ ಹೃದಯದಿಂದ ಯಾಕೆ ನಂಬ್ತೀರಾ?
16 ಯೆಹೋವನನ್ನ ನಾವು ಕಣ್ಮುಚ್ಚಿ ನಂಬೋಕೆ ತುಂಬ ಕಾರಣಗಳಿವೆ. ಯೆಹೋವ ನಮ್ಮ ಸೃಷ್ಟಿಕರ್ತ, ಆತನು ನಮ್ಮನ್ನ ತುಂಬ ಪ್ರೀತಿಸ್ತಾನೆ. ಯೆಹೋವನನ್ನ ಆರಾಧಿಸೋಕೆ ಇವತ್ತು ಲೋಕದ ಮೂಲೆ-ಮೂಲೆಯಿಂದ ಜನ ಬರ್ತಿದ್ದಾರೆ. ಹಾಗಾಗಿ ದಿನೇದಿನೇ ದೊಡ್ಡ ಗುಂಪಿನ ಸಂಖ್ಯೆ ಬೆಳಿತಾನೇ ಇದೆ. (ಯೆಶಾ. 60:22; ಜೆಕ. 8:23) ಆರು ಮೂರು ಆಗ್ಲಿ, ಮೂರು ಆರು ಆಗ್ಲಿ ಯೆಹೋವ ತನ್ನ ಉದ್ದೇಶನ ಖಂಡಿತ ನೆರವೇರಿಸ್ತಾನೆ. ಆದಷ್ಟು ಬೇಗ ಸೈತಾನನ ಸುಳ್ಳುಗಳನ್ನ, ಮೋಸದ ಜಾಲನ ಕಿತ್ತು ಬಿಸಾಕ್ತಾನೆ. ಹಾಗಾಗಿ ನಾವೆಲ್ರೂ ದಾವೀದನ ತರ ಹೀಗೆ ಪ್ರಾರ್ಥಿಸೋಣ, “ಯೆಹೋವನಿಗೆ ಹೊಗಳಿಕೆ ಸಿಗಲಿ, . . . ಆತನು ಮಾತ್ರ ಅದ್ಭುತಗಳನ್ನ ಮಾಡ್ತಾನೆ. ಗೌರವ ಇರೋ ಆತನ ಹೆಸ್ರಿಗೆ ಸದಾಕಾಲಕ್ಕೂ ಹೊಗಳಿಕೆ ಸಿಗಲಿ, ಆತನ ಮಹಿಮೆ ಇಡೀ ಭೂಮಿಯನ್ನ ತುಂಬಿಕೊಳ್ಳಲಿ.”—ಕೀರ್ತ. 72:18, 19.
ಗೀತೆ 2 ಯೆಹೋವ - ಏಕೈಕ ದೇವ
a “ಸೈತಾನ” [ವಿರೋಧಿ] “ಪಿಶಾಚ” [ಹೆಸ್ರು ಹಾಳು ಮಾಡೋನು] ಅನ್ನೋದು ಆ ಕೆಟ್ಟ ದೇವದೂತನ ವೈಯಕ್ತಿಕ ಹೆಸ್ರಲ್ಲ. ಅವು ಅವನ ಕೆಟ್ಟ ಗುಣಗಳನ್ನ ಸೂಚಿಸ್ತಾ ಇಟ್ಟಿರೋ ಬಿರುದುಗಳು.