ಅವಿಶ್ವಾಸಿ ಸಂಗಾತಿಗೆ ನೀವು ಸಹಾಯಮಾಡಬಲ್ಲಿರೊ?
1. ಸತ್ಯವನ್ನು ಸ್ವೀಕರಿಸಲು ತಮ್ಮ ಅವಿಶ್ವಾಸಿ ಸಂಗಾತಿಗೆ ಸಹಾಯಮಾಡಬೇಕೆಂಬ ಬಯಕೆ ಅವರ ಕ್ರೈಸ್ತ ಸಂಗಾತಿಗೆ ಮಾತ್ರ ಇರುತ್ತದೊ?
1 ನಿಮ್ಮ ಸಭೆಯಲ್ಲಿ ಅವಿಶ್ವಾಸಿ ಪತಿ ಅಥವಾ ಪತ್ನಿಯಿರುವ ಪ್ರಚಾರಕರಿದ್ದಾರೊ? ಇರುವಲ್ಲಿ ಅಂಥ ಪ್ರಚಾರಕರು ತಮ್ಮ ಸಂಗಾತಿ ಕೂಡ ಸತ್ಯಾರಾಧನೆಯಲ್ಲಿ ತಮ್ಮನ್ನು ಜೊತೆಗೂಡಬೇಕೆಂದು ಖಂಡಿತ ಬಯಸುವರು. ಆದರೆ ಅಂಥ ಅನಿಸಿಕೆಯಿರುವುದು ಅವರಿಗೆ ಮಾತ್ರವಲ್ಲ. ದೇವರು ಬಯಸುವಂತೆಯೇ ಇಡೀ ಸಭೆ ಸಹ “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎಂದು ಬಯಸುತ್ತದೆ. (1 ತಿಮೊ. 2:4) ನಮ್ಮ ಸಭೆಯಲ್ಲಿರುವ ಪ್ರಚಾರಕರ ಅವಿಶ್ವಾಸಿ ಸಂಗಾತಿಗಳಿಗೆ ನಾವು ಹೇಗೆ ಸಹಾಯಮಾಡಬಹುದು?
2. ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅವಿಶ್ವಾಸಿ ಸಂಗಾತಿಗೆ ಸಹಾಯಮಾಡಲು ನೆರವು ನೀಡಬಲ್ಲದು?
2 ಮೊದಲಾಗಿ ನಾವು ವಿಷಯಗಳನ್ನು ಅವಿಶ್ವಾಸಿಯ ದೃಷ್ಟಿಯಲ್ಲಿ ನೋಡಲು ಪ್ರಯತ್ನಿಸಬೇಕು. ಹೆಚ್ಚಿನ ಅವಿಶ್ವಾಸಿ ಸಂಗಾತಿಗಳು ತಮ್ಮ ಕುಟುಂಬವನ್ನು ಪ್ರೀತಿಸುತ್ತಾರೆ ಮತ್ತು ಉತ್ತಮ ಸಂಗಾತಿಯೂ ಹೆತ್ತವರೂ ಆಗಿರಲು ಪ್ರಯತ್ನಿಸುತ್ತಾರೆ. ಆದರೆ ಅವರ ಯಥಾರ್ಥ ಧಾರ್ಮಿಕ ನಂಬಿಕೆಗಳು ನಮ್ಮ ನಂಬಿಕೆಗಳಿಗಿಂಥ ಭಿನ್ನವಾಗಿರಬಹುದು. ಯೆಹೋವನ ಸಾಕ್ಷಿಗಳ ಬಗ್ಗೆ ಏನೂ ತಿಳಿಯದ ಅಥವಾ ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಹೊಂದಿರುವ ಸಂಗಡಿಗರಿಂದ ಕೇಳಿಸಿಕೊಂಡದ್ದು ಬಿಟ್ಟರೆ ಅವರಿಗೆ ನಮ್ಮ ಬಗ್ಗೆ ಹೆಚ್ಚೇನೂ ತಿಳಿದಿರಲಿಕ್ಕಿಲ್ಲ. ತಮ್ಮ ಸಂಗಾತಿ ಈ ಮುಂಚೆ ಕುಟುಂಬದೊಂದಿಗೆ ಕಳೆಯುತ್ತಿದ್ದ ಸಮಯವನ್ನು ಈಗ ಆರಾಧನೆಗಾಗಿ ಬಳಸುತ್ತಿರುವುದಕ್ಕಾಗಿ ಕೆಲವರು ಕೋಪಿಸಿಕೊಳ್ಳುತ್ತಾರೆ. ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅವಿಶ್ವಾಸಿಯನ್ನು ದಯೆಯಿಂದಲೂ ಗೌರವದಿಂದಲೂ ಉಪಚರಿಸುವಂತೆ ಮತ್ತು ಅವರೊಂದಿಗಿರುವಾಗ ಅನಾವಶ್ಯಕವಾಗಿ ಹೆದರದಂತೆ ನಮಗೆ ಸಹಾಯಮಾಡುವುದು.—ಜ್ಞಾನೋ. 16:20-23.
3. ಅವಿಶ್ವಾಸಿಯನ್ನು ಸತ್ಯದ ಕಡೆ ಹೆಚ್ಚಾಗಿ ಯಾವುದು ಆಕರ್ಷಿಸುತ್ತದೆ?
3 ವೈಯಕ್ತಿಕ ಆಸಕ್ತಿ: ಆರಂಭದಲ್ಲಿ ಒಬ್ಬ ಅವಿಶ್ವಾಸಿ ಸಂಗಾತಿಯನ್ನು ಸತ್ಯದ ಕಡೆಗೆ ಆಕರ್ಷಿಸುವುದು ಹೆಚ್ಚಾಗಿ ನಮ್ಮ ಕ್ರಿಯೆಗಳೇ ಹೊರತು ಬೈಬಲ್ ಚರ್ಚೆಗಳಲ್ಲ. (1 ಪೇತ್ರ 3:1, 2) ಆದ್ದರಿಂದ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದು ಪ್ರಾಮುಖ್ಯ. ಸಭೆಯಲ್ಲಿರುವ ಸಹೋದರಿಯರು ಅವಿಶ್ವಾಸಿ ಪತ್ನಿಯಲ್ಲೂ ಸಹೋದರರು ಅವಿಶ್ವಾಸಿ ಪತಿಯಲ್ಲೂ ವೈಯಕ್ತಿಕ ಆಸಕ್ತಿ ತೋರಿಸಬಲ್ಲರು. ಹೇಗೆ?
4. ನಾವು ವೈಯಕ್ತಿಕ ಆಸಕ್ತಿಯನ್ನು ಹೇಗೆ ತೋರಿಸಬಹುದು?
4 ನೀವು ಈ ತನಕ ಆ ಅವಿಶ್ವಾಸಿ ಸಂಗಾತಿಯನ್ನು ಭೇಟಿಮಾಡಿಲ್ಲವಾದರೆ, ಬಹುಶಃ ಅವರ ಕ್ರೈಸ್ತ ಸಂಗಾತಿಯೊಂದಿಗೆ ಚರ್ಚಿಸಿದ ಬಳಿಕ ಅವರನ್ನು ಭೇಟಿಮಾಡಬಹುದು. ಅವಿಶ್ವಾಸಿಯು ಆರಂಭದಲ್ಲಿ ಅಷ್ಟು ಆಸಕ್ತಿ ತೋರಿಸದಿದ್ದರೆ ನಿರಾಶರಾಗಬೇಡಿ. ನಮ್ಮ ಸ್ನೇಹಪರತೆ ಮತ್ತು ವೈಯಕ್ತಿಕ ಆಸಕ್ತಿಯು ಯೆಹೋವನ ಸಾಕ್ಷಿಗಳನ್ನು ಅವರು ಹಿತದೃಷ್ಟಿಯಿಂದ ನೋಡುವಂತೆ ಪ್ರೇರಿಸಬಹುದು. (ರೋಮ. 12:20) ಕೆಲವು ಪ್ರೌಢ ಕ್ರೈಸ್ತರು ಅವಿಶ್ವಾಸಿಯನ್ನು ಮತ್ತು ಅವನ ಕುಟುಂಬವನ್ನು ಊಟಕ್ಕೆ ಕರೆದಿದ್ದಾರೆ. ಈ ಮೂಲಕ ಅವರ ಒಳ್ಳೇ ಪರಿಚಯ ಮಾಡಿಕೊಳ್ಳಲು ಮತ್ತು ಅವರಲ್ಲಿರುವ ಯಾವುದೇ ಪೂರ್ವಕಲ್ಪಿತ ಅಭಿಪ್ರಾಯಗಳನ್ನು ತೆಗೆದುಹಾಕಲು ಪ್ರಯತ್ನಿಸಿದ್ದಾರೆ. ಇಂಥ ಸಂದರ್ಭಗಳಲ್ಲಿ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಒತ್ತಾಯಪೂರ್ವಕವಾಗಿ ಮಾತಾಡುವುದನ್ನು ಬಿಟ್ಟು ಆ ಅವಿಶ್ವಾಸಿಗೆ ಹಿಡಿಸುವ ವಿಷಯಗಳ ಬಗ್ಗೆ ಅವರು ಮಾತಾಡಿದ್ದಾರೆ. ಅನಂತರ, ಅವನಿಗೆ ಹಿತವೆನಿಸುವಾಗ ಬೈಬಲಿನ ಕುರಿತು ಮಾತಾಡಲು ಸಾಧ್ಯವಾಗಬಹುದು. ಅಥವಾ ಸಭೆಯಲ್ಲಿರುವ ಕೆಲವರ ಪರಿಚಯ ಈಗಾಗಲೇ ಅವನಿಗಿರುವುದರಿಂದ, ಕೂಟಗಳಿಗೆ ಬರಲು ಕೊಡುವ ಆಮಂತ್ರಣವನ್ನು ಅವನು ಸ್ವೀಕರಿಸಬಹುದು ಮತ್ತು ತನ್ನ ಹೆಂಡತಿ ಅಲ್ಲಿ ಏನು ಕಲಿಯುತ್ತಿದ್ದಾಳೆಂದು ತಿಳಿದುಕೊಳ್ಳಲು ಮನಸ್ಸುಮಾಡಬಹುದು. ಅವನು ಸತ್ಯವನ್ನು ಪರಿಶೀಲಿಸಲು ಸಿದ್ಧನಿಲ್ಲದಿದ್ದರೂ ತನ್ನ ವಿಶ್ವಾಸಿ ಸಂಗಾತಿಗೆ ಕೊಡುವ ಬೆಂಬಲಕ್ಕಾಗಿ ಅವನನ್ನು ಪ್ರಶಂಸಿಸಲೇಬೇಕು.
5. ಹಿರಿಯರು ಅವಿಶ್ವಾಸಿಗೆ ಸಹಾಯಮಾಡಲು ಹೇಗೆ ಮುಂದಾಗಬಹುದು?
5 ವಿಶೇಷವಾಗಿ ಹಿರಿಯರು ಅವಿಶ್ವಾಸಿ ಸಂಗಾತಿಗಳಿಗೆ ಸಹಾಯಮಾಡಲು ಮುಂದಾಗಬೇಕು. ಅವರಿಗೆ ಸಾಕ್ಷಿಕೊಡಲು ಅವಕಾಶಗಳಿಗಾಗಿ ಹುಡುಕುತ್ತಿರಬೇಕು. ಅವಿಶ್ವಾಸಿಯೊಬ್ಬನು ಈ ಮುಂಚೆ ಬೈಬಲ್ ಚರ್ಚೆಗೆ ಕಿವಿಗೊಡದೇ ಇದ್ದಿರಬಹುದು. ಆದರೆ ಅವನು ಆಸ್ಪತ್ರೆಯಲ್ಲಿರುವಾಗ ಇಲ್ಲವೇ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಬಹುಶಃ ಬೈಬಲಾಧರಿತ ಉತ್ತೇಜನಕ್ಕೆ ಕಿವಿಗೊಡಲು ಮನಸ್ಸುಮಾಡಬಹುದು. ವಿಭಜಿತ ಕುಟುಂಬವು ಒಂದು ಸಂಕಷ್ಟವನ್ನು ಎದುರಿಸುವಾಗ, ಉದಾಹರಣೆಗೆ ಅದರ ಸದಸ್ಯರೊಬ್ಬರು ತೀರಿಹೋಗುವಾಗ ಹಿರಿಯರು ಕುಟುಂಬಕ್ಕೆ ಸಾಂತ್ವನ ಹೇಳುವ ಸಂದರ್ಭದಲ್ಲಿ ಅವಿಶ್ವಾಸಿಯೂ ಉಪಸ್ಥಿತನಿರುವಂತೆ ಆಮಂತ್ರಿಸಬಹುದು.
6. ಅವಿಶ್ವಾಸಿ ಸಂಗಾತಿಗಳಿಗೆ ಸಹಾಯಮಾಡಲು ಯಾವ ಕಾರಣಗಳಿವೆ?
6 ನಮ್ಮ ಸಭೆಯಲ್ಲಿರುವವರ ಅವಿಶ್ವಾಸಿ ಸಂಗಾತಿ ಒಳ್ಳೇ ಪ್ರತಿಕ್ರಿಯೆ ತೋರಿಸಿ ಸತ್ಯಕ್ಕೆ ಬರುವಾಗ ಅವರ ಕ್ರೈಸ್ತ ಸಂಗಾತಿಗೆ ಎಷ್ಟು ಸಂತೋಷವಾಗಬೇಕು! ಅಂಥ ಸಂತೋಷಕರ ಘಟನೆಯು ಯೆಹೋವನಿಗೆ, ದೇವದೂತರಿಗೆ ಮತ್ತು ಸಭೆಯ ಉಳಿದವರಿಗೂ ಹೆಚ್ಚಿನ ಸಂತೋಷವನ್ನು ತರುವುದು. (ಲೂಕ 15:7, 10) ಆದರೆ ಅವಿಶ್ವಾಸಿಯು ಮೊದಮೊದಲು ಪ್ರತಿಕ್ರಿಯೆ ತೋರಿಸದಿದ್ದರೂ ನಮ್ಮ ಮುಂದುವರಿದ ಪ್ರಯತ್ನಗಳನ್ನು ಯೆಹೋವನು ಮೆಚ್ಚುತ್ತಾನೆ ಎಂದು ತಿಳಿದು ನಾವು ಸಂತೋಷಪಡಬಲ್ಲೆವು. ಏಕೆಂದರೆ, ‘ಯಾವನಾದರೂ ನಾಶವಾಗುವುದನ್ನು ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪ ಹೊಂದುವುದನ್ನು ಬಯಸುವಾತನಾಗಿದ್ದಾನೆ.’—2 ಪೇತ್ರ 3:9.
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ಆರಂಭದಲ್ಲಿ ಒಬ್ಬ ಅವಿಶ್ವಾಸಿ ಸಂಗಾತಿಯನ್ನು ಸತ್ಯದ ಕಡೆಗೆ ಆಕರ್ಷಿಸುವುದು ಹೆಚ್ಚಾಗಿ ನಮ್ಮ ಕ್ರಿಯೆಗಳೇ ಹೊರತು ಬೈಬಲ್ ಚರ್ಚೆಗಳಲ್ಲ