‘ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆದರದಿರುವುದು’
1 ಫಿಲಿಪ್ಪಿ 1:27, 28ರಲ್ಲಿ ಪೌಲನು ಈ ಮಾತುಗಳನ್ನು ಬರೆದಾಗ, ಫಿಲಿಪ್ಪಿಯದಲ್ಲಿ ಬಂದ ವಿರೋಧದ ಕುರಿತು ಅವನು ನೆನಪಿಸಿಕೊಂಡಿದ್ದಿರಬಹುದು. (ಅ. ಕೃ. 16:19-24) ಆದರೂ ಆ ವಿರೋಧಿಗಳ ಹೆದರಿಕೆಯು ಸುವಾರ್ತೆಯನ್ನು ಸಾರುವುದರಿಂದ ತನ್ನನ್ನು ತಡೆಗಟ್ಟುವಂತೆ ಅವನು ಬಿಡಲಿಲ್ಲ. ಇಂದಿರುವ ನಮಗೆ ಅವನ ಮಾದರಿಯು ನೆರವಾಗಬಲ್ಲದು.
2 ಶುಶ್ರೂಷೆಯಲ್ಲಿ ವಿರೋಧಿಗಳ ದೊಂಬಿಯು ನಮ್ಮನ್ನು ಸುತ್ತುವರಿಯುವಲ್ಲಿ ನಾವು ಹೇಗೆ ಪ್ರತಿಕ್ರಿಯಿಸಬೇಕು? ವಿರೋಧಿಗಳು ನಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ದಲ್ಲಿ ನಾವೇನು ಮಾಡತಕ್ಕದ್ದು? ಪ್ರತಿಯೊಂದು ಸನ್ನಿವೇಶವು ಬೇರೆ ಬೇರೆ ಆಗಿರಬಹುದಾದರೂ, ನಮಗೆ ಸಹಾಯಕರವಾಗುವ ಕೆಲವು ಮೂಲತತ್ತ್ವಗಳನ್ನು ನಾವೀಗ ಪರಿಗಣಿಸೋಣ.
3 ದೊಂಬಿಯಿಂದ ಸುತ್ತುವರಿಯಲ್ಪಟ್ಟಾಗ: ಸಾಧ್ಯವಾದಾಗಲೆಲ್ಲಾ, ದೊಂಬಿಯು ಗುಂಪುಸೇರುವ ಮುಂಚೆಯೇ ಆ ಕ್ಷೇತ್ರವನ್ನು ಬಿಟ್ಟುಹೋಗಿರಿ. (ಅ. ಕೃ. 14:6, 7) ನೀವು ಹೋಗುವುದನ್ನು ಒಂದು ವೇಳೆ ಅವರು ತಡೆಗಟ್ಟಿದಲ್ಲಿ, ಮೊಬೈಲ್ ಫೋನ್ ಮೂಲಕ ಪೊಲೀಸರನ್ನು ಕರೆಯಿರಿ. ನೆಹೆಮೀಯನಂತೆ, ಆ ಕೂಡಲೇ ಯೆಹೋವನಿಗೆ ಪ್ರಾರ್ಥನೆ ಮಾಡಿರಿ. (ನೆಹೆ. 2:4) ಗುಂಪಿನೊಂದಿಗೆ ಅಥವಾ ಅದರ ಮುಖ್ಯಸ್ಥನೊಂದಿಗೆ ನ್ಯಾಯಸಮ್ಮತವಾಗಿ ಮಾತಾಡುತ್ತಾ ಸನ್ನಿವೇಶವನ್ನು ಶಾಂತಗೊಳಿಸಲು ಪ್ರಯತ್ನಿಸಿ. ದೇವರ ಕಡೆಗೆ ಅವರಿಗೂ ಇರುವ ಗೌರವವನ್ನು ಮನಸ್ಸಿನಲ್ಲಿಟ್ಟುಕೊಂಡು, ನಿಮ್ಮೊಂದಿಗೆ ದಯೆಯಿಂದ ವರ್ತಿಸುವಂತೆ ಕೇಳಿಕೊಳ್ಳಿ. ಒಮ್ಮೆ ಹಿಂಸಾತ್ಮಕ ದೊಂಬಿಯೊಂದು ಪೌಲನನ್ನು ಸುತ್ತುವರಿದಾಗ ಅವನೂ ಹಾಗೆ ಮಾಡಿದನು.—ಅ. ಕೃ. 21:27ರಿಂದ 22:30.
4 ದೊಂಬಿಯು ನಿಮಗೆ ಬೆದರಿಕೆ ಹಾಕುವಲ್ಲಿ ಅಥವಾ ಹೊಡೆತ ಬಿದ್ದಲ್ಲಿ ಆಗೇನು? ನೀವು ನಿಮ್ಮ ಆತ್ಮ-ರಕ್ಷಣೆಯನ್ನು ಮಾಡಿಕೊಳ್ಳುವುದು ಸೂಕ್ತವೋ? ಇದು ವೈಯಕ್ತಿಕವಾಗಿ ನಿರ್ಣಯಿಸುವ ಒಂದು ವಿಷಯ. ಇದರ ಕುರಿತ ಸಹಾಯಕರ ಮೂಲತತ್ವಗಳನ್ನು ನೀವು, “ಗೊಂದಲಯುಕ್ತ ಲೋಕದಲ್ಲಿ ಪಾತಕವನ್ನು ಎದುರಿಸುವುದು” (ಕಾವಲಿನಬುರುಜು, ಮೇ 1, 1991, ಪುಟ 4-7 (ಇಂಗ್ಲಿಷ್)) ಮತ್ತು “ನಾನು ಆತ್ಮ-ರಕ್ಷಣೆಯನ್ನು ಕಲಿಯಬೇಕೊ?” (ಎಚ್ಚರ! ಅಕ್ಟೋಬರ್ 8, 1995, ಪುಟ 12-14) ಎಂಬ ಲೇಖನಗಳಲ್ಲಿ ಕಂಡುಕೊಳ್ಳಬಹುದು. ಈ ಲೇಖನಗಳನ್ನು ಮುಂಚಿತವಾಗಿ ಓದಿಕೊಳ್ಳುವುದು ಉತ್ತಮ.
5 ಪೊಲೀಸ್ ಠಾಣೆಗೆ ತರಲ್ಪಟ್ಟಾಗ: ನಿಮ್ಮ ನಂಬಿಕೆಗಳ ಕುರಿತು ಇತರರೊಂದಿಗೆ ಶಾಂತಿಯಿಂದ ಮಾತಾಡುವಾಗ ನೀವು ನಿಯಮವನ್ನು ಮುರಿಯುವುದಿಲ್ಲ. ತಮ್ಮ ನಂಬಿಕೆಗಳ ಕುರಿತು ಮಾತಾಡಲು ಪ್ರತಿಯೊಬ್ಬನಿಗೆ ನ್ಯಾಯಬದ್ಧ ಹಕ್ಕು ಇದೆ. ನಿಮ್ಮ ಚಟುವಟಿಕೆಯ ಕುರಿತು ಪ್ರಶ್ನೆಗಳು ಕೇಳಲ್ಪಟ್ಟಲ್ಲಿ, ಅದನ್ನು ಪೊಲೀಸರಿಗೆ ಗೌರವಪೂರ್ವಕವಾಗಿ ತಿಳಿಸಿರಿ. ಬೈಬಲಿನ ಸಂದೇಶವನ್ನು ತಿಳಿಸುವುದಕ್ಕಾಗಿ ನಮಗೆ ಸಂಬಳ ನೀಡಲಾಗುವುದಿಲ್ಲ ಹಾಗೂ ಇತರರನ್ನು ಮತಾಂತರ ಮಾಡಲು ನಾವು ಯಾವ ಪ್ರಲೋಭನೆಯನ್ನೂ ನೀಡುವುದಿಲ್ಲ ಎಂಬದನ್ನೂ ವಿವರಿಸಿರಿ.
6 ಪೋಲಿಸರು ನಿಮ್ಮನ್ನು ಬೈದು ನಿಂದಿಸಿದಲ್ಲಿ, ನಿಮಗೆ ಸುರಕ್ಷೆ ನೀಡುವ ಅವರ ಜವಾಬ್ದಾರಿಯ ಕುರಿತು ಜಾಣ್ಮೆಯಿಂದ ತಿಳಿಯಪಡಿಸಿರಿ. ಅವಶ್ಯವಿದ್ದಲ್ಲಿ ಅವರ ಮೇಲಧಿಕಾರಿಗಳಿಗೆ ಮನವಿಮಾಡಿರಿ. (ರೋಮಾ. 13:3, 4; ಪ್ರಸಂ. 5:8) ಯೆಹೋವನು ನಿಮ್ಮೊಂದಿಗಿದ್ದಾನೆ ಎಂಬ ಭರವಸೆಯೊಂದಿಗೆ ಶಾಂತಚಿತ್ತರಾಗಿ ಉಳಿಯಿರಿ. —ಲೂಕ 12:11, 12.
7 ಯಾವುದೇ ಕಾಗದಪತ್ರಕ್ಕೆ ಸಹಿ ಹಾಕುವಂತೆ ಪೊಲೀಸರು ನಿಮಗೆ ಹೇಳುವುದಾದರೆ, ಮೊದಲಾಗಿ ಇಡೀ ಪತ್ರವನ್ನು ಜಾಗ್ರತೆಯಿಂದ ಓದಿಕೊಂಡು ಅದರಲ್ಲಿರುವ ಮಾಹಿತಿಯೆಲ್ಲವೂ ಸರಿಯಾಗಿದೆಯೋ ಎಂದು ಖಾತ್ರಿಮಾಡಿಕೊಳ್ಳಿ. ‘ಇತರರೊಂದಿಗೆ ನನ್ನ ನಂಬಿಕೆಗಳ ಕುರಿತು ಇನ್ನು ಮುಂದೆ ಮಾತಾಡುವುದಿಲ್ಲ’ ಎಂಬ ಹೇಳಿಕೆಯಿರುವ ಯಾವುದೇ ಪತ್ರಕ್ಕೆ ಸಹಿ ಹಾಕಬೇಡಿರಿ. ದೂರು ದಾಖಲಿಸಲ್ಪಟ್ಟಲ್ಲಿ, ಯಾವ ತಪ್ಪಿಗಾಗಿ ನಿಮ್ಮ ಮೇಲೆ ಆರೋಪವು ಹೊರಿಸಲ್ಪಟ್ಟಿದೆ ಮತ್ತು ಯಾವ ನಿರ್ದಿಷ್ಚ ಕಾನೂನಿನ ಕೆಳಗೆ ಆ ತಪ್ಪನ್ನು ವರ್ಗೀಕರಿಸಲಾಗಿದೆ ಎಂದು ಕಂಡುಹಿಡಿಯಿರಿ. ವಿರೋಧಿಗಳಿಂದ ದುರುಪಚರಿಸಲ್ಪಟ್ಟಲ್ಲಿ, ಅವರ ವಿರುದ್ಧವಾಗಿ ಕಾನೂನಿಗನುಸಾರ ದೂರು ದಾಖಲಿಸಲು ನಿಮಗಿರುವ ಹಕ್ಕನ್ನು ಒತ್ತಿಹೇಳಿ. ನಿಮಗೆ ಗಾಯವಾಗಿದ್ದಲ್ಲಿ, ಪೋಲಿಸರು ನಿಮ್ಮನ್ನು ಡಾಕ್ಟರರ ಬಳಿಗೆ ಅಥವಾ ಆಸ್ಪತ್ರೆಗೆ ಒಯ್ಯುವಂತೆ ಒತ್ತಾಯಪಡಿಸಿ.
8 ಯೆಹೋವನಲ್ಲಿ ಭರವಸೆಯಿಡಿ: ಜನರು ನಮ್ಮನ್ನು ಅಧಿಪತಿಗಳ ಮುಂದಕ್ಕೂ ಸ್ಥಳಿಕ ನ್ಯಾಯವಿಚಾರಣೆಯ ಸ್ಥಳಗಳಿಗೂ ಎಳೆದುಕೊಂಡು ಹೋಗಬಹುದು ಎಂದು ಯೇಸು ಹೇಳಿದ್ದನೆಂಬುದನ್ನು ನೆನಪಿಡಿರಿ. (ಮತ್ತಾ. 10:17, 18) ನಿಮಗೆ ವಿರೋಧವು ಎದುರಾದಲ್ಲಿ, ಹೆದರಿ ಕಂಗೆಡಬೇಡಿ, ಬದಲಾಗಿ ಬಲಕ್ಕಾಗಿ ಯೆಹೋವನಿಗೆ ಪ್ರಾರ್ಥನೆಮಾಡಿ. ಆತನು ನಿಮಗೆ ಕಿವಿಗೊಡುವನೆಂಬ ಭರವಸೆ ನಿಮಗಿರಲಿ. ಅಷ್ಟುಮಾತ್ರವಲ್ಲ, “ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದ . . . ಕಾಲಕ್ಷೇಪ” ಮಾಡುವದಕ್ಕೆ ಅಧಿಕಾರಿಗಳ ಅನುಮತಿ ಸಿಗುವಂತೆಯೂ ಪ್ರಾರ್ಥನೆಮಾಡಿರಿ. (1 ತಿಮೊ. 2:1, 2) ಹೀಗೆ ನಾವು ನಮ್ಮ ಶುಶ್ರೂಷೆಯಲ್ಲಿ ಯೆಹೋವನ ಕುರಿತು ಮಾತಾಡುವುದನ್ನು ಮುಂದುವರಿಸುವಾಗ, ವಿರೋಧದ ಎದುರಲ್ಲೂ ಆತನು ನಮ್ಮನ್ನು ಬಲಪಡಿಸುವನೆಂಬ ನಿಶ್ಚಿತೆ ನಮಗಿರಬಲ್ಲದು.