ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಹೊಸ ಲೇಖನಮಾಲೆ
1. ಕಾವಲಿನಬುರುಜುವಿನ ಸಾರ್ವಜನಿಕ ಆವೃತ್ತಿಯಲ್ಲಿ ಯಾವ ಹೊಸ ಲೇಖನಮಾಲೆ ಬರಲಿದೆ? ಅದನ್ನು ಯಾಕೆ ರಚಿಸಲಾಗಿದೆ?
1 ಕಾವಲಿನಬುರುಜುವಿನ ಸಾರ್ವಜನಿಕ ಆವೃತ್ತಿಯಲ್ಲಿ ಮುಂದಿನ ತಿಂಗಳಿಂದ ಆರಂಭಿಸಿ ಒಂದು ಹೊಸ ಲೇಖನಮಾಲೆ ಇರುವುದು. ಇದು ನಮಗೆ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ನೆರವಾಗುವುದು. ಅದರ ಶೀರ್ಷಿಕೆ “ದೇವರ ವಾಕ್ಯದಿಂದ ಕಲಿಯಿರಿ” ಎಂದಾಗಿದೆ. ಟೆರಿಟೊರಿಯಲ್ಲಿರುವ ಕೆಲವರು ಈ ಶೀರ್ಷಿಕೆಯಡಿ ಮೂಡಿಬರುವ ಪ್ರತಿ ಲೇಖನವನ್ನು ತಮ್ಮಷ್ಟಕ್ಕೆ ಓದಿ ಆನಂದಿಸಬಹುದಾದರೂ ಇವುಗಳನ್ನು ಮುಖ್ಯವಾಗಿ ರಚಿಸಲಾಗಿರುವುದು ಮನೆಯವರೊಂದಿಗೆ ಚರ್ಚಿಸಲಿಕ್ಕಾಗಿಯೇ.
2. ಈ ಲೇಖನಗಳ ಕೆಲವೊಂದು ವೈಶಿಷ್ಟ್ಯಗಳಾವುವು?
2 ವೈಶಿಷ್ಟ್ಯಗಳು: ಈ ಲೇಖನದ ಶೀರ್ಷಿಕೆ, ಉಪಶೀರ್ಷಿಕೆಗಳು ಪ್ರಶ್ನಾ ರೂಪದಲ್ಲಿವೆ. ಇವುಗಳನ್ನು ಚರ್ಚೆಯಲ್ಲಿ ಮನೆಯವನಿಗೆ ಕೇಳಬೇಕು. ಮುಖ್ಯ ವಚನಗಳನ್ನು ತಿಳಿಸಲಾಗಿದೆ, ಉಲ್ಲೇಖಿಸಲಾಗಿಲ್ಲ. ಇದರ ಉದ್ದೇಶ, ಮನೆಯವನು ನೇರವಾಗಿ ದೇವರ ವಾಕ್ಯದಿಂದಲೇ ವಿಷಯಗಳನ್ನು ಕಲಿಯಬೇಕೆಂಬುದೇ. ಪ್ಯಾರಗಳು ಚುಟುಕಾಗಿವೆ. ಅವುಗಳನ್ನು ಮನೆಬಾಗಲಲ್ಲಿ ನಿಂತುಕೊಂಡೇ ಚರ್ಚಿಸಬಹುದು. ಪ್ರತಿ ಲೇಖನವೂ ಬೈಬಲ್ ಬೋಧಿಸುತ್ತದೆ ಪುಸ್ತಕಕ್ಕೆ ಸೂಚಿಸುವುದರಿಂದ ಸೂಕ್ತ ಸಂದರ್ಭದಲ್ಲಿ ನೀವು ಅಧ್ಯಯನವನ್ನು ಆ ಪುಸ್ತಕಕ್ಕೆ ಬದಲಾಯಿಸಬಹುದು.
3. ಮನೆಮನೆಯ ಸೇವೆಯಲ್ಲಿ ಮನೆಬಾಗಲಲ್ಲೇ ನಿಂತು ಬೈಬಲ್ ಅಧ್ಯಯನ ಆರಂಭಿಸಲು ಈ ಲೇಖನಮಾಲೆಯನ್ನು ಹೇಗೆ ಬಳಸಬಲ್ಲೆವು?
3 ಅದನ್ನು ಬಳಸುವ ವಿಧ: ಪ್ರತಿ ತ್ರೈಮಾಸಿಕ ಸಂಚಿಕೆಯಲ್ಲಿ ಈ ಹೊಸ ಲೇಖನಮಾಲೆಯ ಮೂರು ಲೇಖನಗಳಿರುವವು. ಪತ್ರಿಕೆಗಳನ್ನು ನೀಡುವಾಗ, ಈ ಲೇಖನದ ವಿಷಯದ ಕುರಿತು ಆಸಕ್ತಿಕೆರಳಿಸುವ ಒಂದು ಪ್ರಶ್ನೆಯನ್ನು ನೀವು ಕೇಳಬಹುದು. ಉದಾಹರಣೆಗೆ ಜುಲೈ-ಸೆಪ್ಟೆಂಬರ್ ಸಂಚಿಕೆಯಲ್ಲಿನ ಲೇಖನಮಾಲೆಯ ಪ್ರಥಮ ಲೇಖನ ಬೈಬಲಿನ ಮೌಲ್ಯದ ಕುರಿತು ಚರ್ಚಿಸುತ್ತದೆ. ನೀವು ಹೀಗೆ ಕೇಳಬಹುದು: “ನಿಮ್ಮ ಅಭಿಪ್ರಾಯದಲ್ಲಿ ಬೈಬಲ್ ದೇವರ ವಾಕ್ಯವೊ? ಕೇವಲ ಒಂದು ಒಳ್ಳೇ ಪುಸ್ತಕವೊ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಈ ವಿಷಯದ ಕುರಿತು ನನ್ನ ಬಳಿ ಆಸಕ್ತಿಕರ ಮಾಹಿತಿಯಿದೆ.” ಒಂದನೇ ಪ್ರಶ್ನೆಯನ್ನು ತೋರಿಸಿ. ಮೊದಲ ಪ್ಯಾರ ಓದಿ. ಅಲ್ಲಿ ಕೊಡಲಾದ ವಚನವನ್ನು ಬೈಬಲಿನಿಂದ ತೆರೆದು ಓದಿ. ಪುನಃ ಪ್ರಶ್ನೆ ಓದಿ, ನಂತರ ಮನೆಯವರ ಅಭಿಪ್ರಾಯ ಕೇಳಿ. ಸೂಕ್ತವಾಗಿರುವಷ್ಟು ಮಾಹಿತಿಯನ್ನು ಪರಿಗಣಿಸಿರಿ. ಅಂಕೆಯಿಂದ ಸೂಚಿತ ಪ್ರಶ್ನೆಗಳನ್ನು ಚರ್ಚೆಗಾಗಿ ಅಂಶಗಳಾಗಿ ಬಳಸಿ. ಅಲ್ಲಿಂದ ಹೊರಡುವ ಮುಂಚೆ, ಅಂಕೆಯಿಂದ ಸೂಚಿತ ಮುಂದಿನ ಪ್ರಶ್ನೆಯತ್ತ ಅವರ ಗಮನ ಸೆಳೆಯಿರಿ. ಅವರನ್ನು ಪುನಃ ಭೇಟಿ ಮಾಡಿ ಆ ಪ್ರಶ್ನೆಯನ್ನು ಚರ್ಚಿಸಲು ಪಕ್ಕಾ ಏರ್ಪಾಡು ಮಾಡಿ. ಪ್ರತಿ ವಾರ ವಾಪಸ್ಸು ಹೋಗಿ ಅದೇ ಲೇಖನದಿಂದ ಹೆಚ್ಚಿನ ವಿಷಯವನ್ನು ಚರ್ಚಿಸಿ. ಹೀಗೆ ಆ ಲೇಖನ ಮುಗಿಸಿ. ಬಳಿಕ ಚರ್ಚೆಯನ್ನು ಬೈಬಲ್ ಬೋಧಿಸುತ್ತದೆ ಪುಸ್ತಕದ ನಿಯತ ಬೈಬಲ್ ಅಧ್ಯಯನವಾಗಿ ಪರಿವರ್ತಿಸಲು, ಅಗತ್ಯವಿದ್ದಲ್ಲಿ ಲೇಖನಮಾಲೆಯ ಉಳಿದ ಲೇಖನಗಳನ್ನು ಬಳಸಿ. ಇನ್ನೊಂದು ವಿಧಾನವೇನೆಂದರೆ, ಆಸಕ್ತಿಯುಳ್ಳ ಮನೆಯವರಿಗೆ ನೇರವಾಗಿ ಮೊದಲ ಭೇಟಿಯಲ್ಲೇ ಬೈಬಲ್ ಅಧ್ಯಯನದ ಬಗ್ಗೆ ತಿಳಿಸಿ ಆಮೇಲೆ ಪತ್ರಿಕೆಯಲ್ಲಿನ ಈ ಲೇಖನ ಬಳಸುತ್ತಾ ಹೇಗೆ ಅಧ್ಯಯನ ನಡೆಸುತ್ತೇವೆಂದು ತೋರಿಸಿಕೊಡುವುದೇ.
4. ಪುನರ್ಭೇಟಿಗಳನ್ನು ಮಾಡುವಾಗ ಈ ಲೇಖನಗಳನ್ನು ಹೇಗೆ ಬಳಸಬಲ್ಲೆವು?
4 ಈ ಹೊಸ ಲೇಖನಮಾಲೆಯನ್ನು ಪತ್ರಿಕಾ ಮಾರ್ಗ ಮತ್ತು ಇತರ ಪುನರ್ಭೇಟಿಗಳಲ್ಲೂ ಪರಿಣಾಮಕಾರಿಯಾಗಿ ಬಳಸಬಲ್ಲಿರಿ. ನೀವು ಇಷ್ಟನ್ನೇ ಹೇಳಬಹುದು: “ಕಾವಲಿನಬುರುಜು ಪತ್ರಿಕೆಯಲ್ಲಿ ಈಗ ಒಂದು ಹೊಸ ಲೇಖನ ಬರುತ್ತಿದೆ. ನೀವದನ್ನು ಹೇಗೆ ಬಳಸಬಹುದೆಂದು ತೋರಿಸುತ್ತೇನೆ.” ಈ ಹೊಸ ಲೇಖನಮಾಲೆಯ ಮೂಲಕ ಇನ್ನೂ ಅನೇಕರು “ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದು”ಕೊಳ್ಳಲು ಶಕ್ತರಾಗಬೇಕೆಂಬುದೇ ನಮ್ಮ ಹಾರೈಕೆ.—1 ತಿಮೊ. 2:4.