“ದಾವೀದನ ಮನೆತನ”—ವಾಸ್ತವಿಕವೊ ಕಾಲ್ಪನಿಕವೊ?
ದಾವೀದನು—ಒಬ್ಬ ಸಂಗೀತಗಾರ, ಒಬ್ಬ ಕವಿ, ಒಬ್ಬ ಸೈನಿಕ, ಒಬ್ಬ ಪ್ರವಾದಿ, ಮತ್ತು ಒಬ್ಬ ರಾಜನಾಗಿ ಪರಿಣಮಿಸಿದ, ಎಳೆಯ ಕುರುಬ ಹುಡುಗನು—ಬೈಬಲಿನಲ್ಲಿ ಮಹತ್ತಾದ ಪ್ರಾಧಾನ್ಯತೆಯಲ್ಲಿ ಎದ್ದುಕಾಣುತ್ತಾನೆ. ಅವನ ಹೆಸರು 1,138 ಸಲ ತಿಳಿಸಲ್ಪಟ್ಟಿದೆ; ಹೆಚ್ಚಾಗಿ ದಾವೀದನ ರಾಜವಂಶಕ್ಕೆ ಸೂಚಿಸುತ್ತಾ, “ದಾವೀದನ ಮನೆತನ” (NW) ಎಂಬ ಅಭಿವ್ಯಕ್ತಿಯು 25 ಸಲ ಉಪಯೋಗಿಸಲ್ಪಟ್ಟಿದೆ. (1 ಸಮುವೇಲ 20:16) ರಾಜ ದಾವೀದ ಮತ್ತು ಅವನ ರಾಜವಂಶವು ಕೇವಲ ಕಾಲ್ಪನಿಕವಾಗಿತ್ತೊ? ಅಗೆತಶಾಸ್ತ್ರವು ಏನನ್ನು ಪ್ರಕಟಪಡಿಸುತ್ತದೆ? ಉತ್ತರ ಗಲಿಲಾಯದ ಟೆಲ್ ಡ್ಯಾನ್ನಲ್ಲಿ ಒಂದು ಅಗೆತಶಾಸ್ತ್ರಶೋಧನಾ ನಿವೇಶನದಲ್ಲಿ ಒಂದು ಇತ್ತೀಚಿನ ಗಮನಾರ್ಹವಾದ ಕಂಡುಹಿಡಿತವು, ದಾವೀದನ ಮತ್ತು ಅವನ ರಾಜವಂಶದ ಐತಿಹಾಸಿಕತೆಯನ್ನು ಬೆಂಬಲಿಸುತ್ತದೆಂದು ವರದಿಸಲಾಗಿದೆ.
1993ರ ಬೇಸಗೆಕಾಲದಲ್ಲಿ, ಪ್ರೊಫೆಸರ್ ಅವರಾಮ್ ಬೀರಾರವರ ನಾಯಕತ್ವದ ಕೆಳಗೆ ಒಂದು ಅಗೆತಶಾಸ್ತ್ರ ತಂಡವು ಪುರಾತನ ದಾನ್ನ ಹೊರ ದ್ವಾರದ ಹೊರಗಿದ್ದ ಒಂದು ಕ್ಷೇತ್ರವನ್ನು ಸ್ವಚ್ಛಗೊಳಿಸಿತು. ಅವರು ಹದಿಸಲ್ಪಟ್ಟ ತೆರಪಾಗಿರುವ ಒಂದು ಚೌಕವನ್ನು ಕಂಡುಹಿಡಿದರು. ನೆಲದಿಂದ ಹೊರಚಾಚುತ್ತಿದ್ದ ಒಂದು ಕಪ್ಪು ಅಗ್ನಿಶಿಲೆಯು ಸುಲಭವಾಗಿ ಹೊರತೆಗೆಯಲ್ಪಟ್ಟಿತು. ಕಲ್ಲನ್ನು ಮಧ್ಯಾಹ್ನದ ಸೂರ್ಯನ ಕಡೆಗೆ ತಿರುಗಿಸಿದಾಗ, ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತಿದ್ದವು. “ಓ, ದೇವರೇ, ನಮಗೆ ಒಂದು ಸ್ಮಾರಕ ಲೇಖನವು ಸಿಕ್ಕಿದೆ!” ಎಂದು ಪ್ರೊಫೆಸರ್ ಬೀರಾ ಉದ್ಗರಿಸಿದರು.
ಪ್ರೊಫೆಸರ್ ಬೀರಾ ಮತ್ತು ಅವರ ಸಹಕರ್ಮಿಯಾದ, ಯೆರೂಸಲೇಮಿನಲ್ಲಿನ ಹೀಬ್ರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಯೋಸೆಫ್ ನೆವೇ, ಆ ಸ್ಮಾರಕಲೇಖನದ ಕುರಿತಾಗಿ ತಡವಿಲ್ಲದೆ ಒಂದು ವೈಜ್ಞಾನಿಕ ವರದಿಯನ್ನು ಬರೆದರು. ಈ ವರದಿಯ ಮೇಲೆ ಆಧಾರಿಸಿ, ಮಾರ್ಚ್/ಎಪ್ರಿಲ್ 1994ರ ಬಿಬ್ಲಿಕಲ್ ಆರ್ಕಿಆಲಜಿ ರಿವ್ಯೂ ಪತ್ರಿಕೆಯಲ್ಲಿನ ಒಂದು ಲೇಖನವು ಹೀಗೆ ಓದುತ್ತದೆ: “ಅಗೆತಶಾಸ್ತ್ರದ ಒಂದು ಕಂಡುಹಿಡಿತವು ನ್ಯೂ ಯಾರ್ಕ್ ಟೈಮ್ಸ್ನ (ಟೈಮ್ ಪತ್ರಿಕೆಯ ಕುರಿತಾಗಿ ಹೇಳುವುದೇ ಬೇಡ) ಮುಂದಿನ ಪುಟದಲ್ಲಿ ಬರುವುದು ವಿರಳ. ಆದರೆ ಕಳೆದ ಬೇಸಗೆಕಾಲದಲ್ಲಿ, ಯೊರ್ದನ್ ನದಿಯ ಮೂಲಗಳಲ್ಲಿ ಒಂದರ ಬಳಿಯಲ್ಲಿ ಹೆರ್ಮೋನ್ ಪರ್ವತದ ಬುಡದಲ್ಲಿ, ಉತ್ತರ ಗಲಿಲಾಯದ ಒಂದು ಸುಂದರವಾದ ದಿಬ್ಬವಾದ, ಟೆಲ್ ಡ್ಯಾನ್ನಲ್ಲಿನ ಒಂದು ಕಂಡುಹಿಡಿತಕ್ಕೆ ಇದೇ ಸಂಭವಿಸಿತು.
“ಅಲ್ಲಿ ಅವರಾಮ್ ಬೀರಾ ಮತ್ತು ಅಗೆತಶಾಸ್ತ್ರಜ್ಞರ ಅವರ ತಂಡವು, ‘ದಾವೀದನ ಮನೆತನ’ ಮತ್ತು ‘ಇಸ್ರಾಯೇಲಿನ ರಾಜ’ನಿಗೆ—ಎರಡಕ್ಕೂ—ಸೂಚಿಸುವ, ಸಾ.ಶ.ಪೂ. ಒಂಬತ್ತನೆಯ ಶತಮಾನದ ಒಂದು ಗಮನಾರ್ಹವಾದ ಸ್ಮಾರಕಲೇಖನವನ್ನು ಕಂಡುಹಿಡಿಯಿತು. ಬೈಬಲಿನ ಹೊರಗೆ ದಾವೀದನ ಹೆಸರು ಯಾವುದೇ ಪುರಾತನ ಸ್ಮಾರಕಲೇಖನದಲ್ಲಿ ಕಂಡುಹಿಡಿಯಲ್ಪಟ್ಟಿರುವುದು ಇದೇ ಪ್ರಥಮ ಬಾರಿ. ಆ ಸ್ಮಾರಕಲೇಖನವು ಕೇವಲ ಒಬ್ಬ ‘ದಾವೀದ’ನಿಗಲ್ಲ ಬದಲಾಗಿ ದಾವೀದನ ಮನೆತನಕ್ಕೆ, ಆ ಮಹಾನ್ ಇಸ್ರಾಯೇಲ್ಯ ರಾಜನ ರಾಜವಂಶಕ್ಕೆ, ಸೂಚಿಸುವುದು ಇನ್ನೂ ಹೆಚ್ಚು ಗಮನಾರ್ಹವಾದ ವಿಷಯವಾಗಿದೆ.
“‘ಇಸ್ರಾಯೇಲಿನ ರಾಜ’ ಎಂಬುದು ಬೈಬಲಿನಲ್ಲಿ, ವಿಶೇಷವಾಗಿ ಅರಸುಗಳ ಪುಸ್ತಕದಲ್ಲಿ, ಪದೇ ಪದೇ ಕಂಡುಬರುವ ಒಂದು ಪದವಾಗಿದೆ. ಆದಾಗಲೂ, ಇದು ಸೆಮಿಟಿಕ್ ಲಿಪಿಯಲ್ಲಿ ಇಸ್ರಾಯೇಲಿಗೆ ಮಾಡಲ್ಪಟ್ಟ ಅತಿ ಹಳೆಯ, ಬಾಹ್ಯ ಬೈಬಲ್ಸಂಬಂಧಿತ ನಿರ್ದೇಶವಾಗಿರಬಹುದು. ಈ ಸ್ಮಾರಕಲೇಖನವು ಏನನ್ನಾದರೂ ರುಜುಪಡಿಸುವಲ್ಲಿ, ಅದು ಕೆಲವು ಪಾಂಡಿತ್ಯಪೂರ್ಣ ಬೈಬಲ್ ಸಂಬಂಧಿತ ಟೀಕೆಕಾರರ ಪ್ರತಿಪಾದನೆಗಳಿಗೆ ವ್ಯತಿರಿಕ್ತವಾಗಿ, ಇಸ್ರಾಯೇಲ್ ಮತ್ತು ಯೆಹೂದ ಎರಡೂ ಆ ಸಮಯದಲ್ಲಿ ಪ್ರಾಮುಖ್ಯ ರಾಜ್ಯಗಳಾಗಿದ್ದವು” ಎಂಬುದನ್ನು ತೋರಿಸುತ್ತದೆ.
ತಾರೀಖು ಹಾಕುವಿಕೆಯು, ಅಕ್ಷರಗಳ ಆಕಾರ, ಆ ಕಲ್ಲಿನ ಚೂರಿನ ಹತ್ತಿರದಲ್ಲಿ ಕಂಡುಹಿಡಿಯಲಾದ ಮಣ್ಣಿನ ಪಾತ್ರೆಯ ವಿಶ್ಲೇಷಣೆ, ಮತ್ತು ಸ್ಮಾರಕಲೇಖನದಲ್ಲಿ ಅಡಕವಾದ ವಿಷಯದ ಮೇಲೆ ಆಧಾರಿಸಿರುತ್ತದೆ. ಎಲ್ಲಾ ಮೂರು ವಿಧಾನಗಳು ಸಾ.ಶ.ಪೂ. ಒಂಬತ್ತನೆಯ ಶತಮಾನ, ರಾಜನಾದ ದಾವೀದನ ನಂತರ ಸುಮಾರು ಒಂದು ನೂರು ವರ್ಷಗಳಿಗಿಂತ ಹೆಚ್ಚು ಸಮಯದ ನಂತರದ ಅದೇ ಸಮಯಾವಧಿಗೆ ಕೈತೋರಿಸುತ್ತವೆ. ಆ ಸ್ಮಾರಕಲೇಖನವು, “ಇಸ್ರಾಯೇಲಿನ ರಾಜ” ಮತ್ತು “ದಾವೀದನ ಮನೆತನದ [ರಾಜನ]”, ಇಬ್ಬರ, ಒಬ್ಬ ಅರಾಮ್ಯ ಶತ್ರುವಿನಿಂದ ಕಟ್ಟಲ್ಪಟ್ಟ ಒಂದು ವಿಜಯ ಸ್ಮಾರಕಸ್ತಂಭದ ಭಾಗವಾಗಿತ್ತೆಂದು ವಿದ್ವಾಂಸರು ನಂಬುತ್ತಾರೆ. ಜನಪ್ರಿಯ ಬಿರುಗಾಳಿ ದೇವನಾದ ಹೆಡಾಡ್ನನ್ನು ಆರಾಧಿಸುತ್ತಿದ್ದ ಆ ಅರಾಮ್ಯರು, ಪೂರ್ವದಲ್ಲಿ ಜೀವಿಸುತ್ತಿದ್ದರು.
1994ರ ಬೇಸಗೆಕಾಲದಲ್ಲಿ, ಈ ಸ್ಮಾರಕಸ್ತಂಭದ ಇನ್ನೂ ಎರಡು ಅವಶಿಷ್ಟಗಳು ಕಂಡುಕೊಳ್ಳಲ್ಪಟ್ಟವು. ಪ್ರೊಫೆಸರ್ ಬೀರಾ ವರದಿಸುವುದು: “ಈ ಎರಡು ಅವಶಿಷ್ಟಗಳಲ್ಲಿ ಅರಾಮ್ಯ ದೇವನಾದ ಹೆಡಾಡ್ನ ಹೆಸರು ಇದೆ, ಹಾಗೂ ಇಸ್ರಾಯೇಲ್ಯರ ಮತ್ತು ಅರಾಮ್ಯರ ನಡುವಿನ ಒಂದು ಹೋರಾಟಕ್ಕೆ ನಿರ್ದೇಶನವಿದೆ.”
1993ರಲ್ಲಿ ಕಂಡುಹಿಡಿಯಲಾದ ಮುಖ್ಯ ಅವಶಿಷ್ಟವು ಹಳೆಯ ಹೀಬ್ರು ಲಿಪಿಯಲ್ಲಿ ಬರೆಯಲ್ಪಟ್ಟಿದ್ದ 13 ಪಾಕ್ಷಿಕವಾಗಿ ದೃಶ್ಯವಾಗಿರುವ ಸಾಲುಗಳನ್ನು ಒಳಗೊಂಡಿತ್ತು. ಆ ಸಮಯದಲ್ಲಿ, ಒಂದು ಗ್ರಂಥಪಾಠದಲ್ಲಿ, ಪದಗಳನ್ನು ವಿಂಗಡಿಸಲು ಬಿಂದುಗಳನ್ನು ಉಪಯೋಗಿಸಲಾಗುತ್ತಿತ್ತು. ಆದಾಗಲೂ, “ದಾವೀದನ ಮನೆತನ”, “ಬಿವೈಟಿ” (ಮನೆ), ಒಂದು ಬಿಂದು, ಮತ್ತು ನಂತರ “ಡಿಡಬ್ಲ್ಯೂಡಿ” (ದಾವೀದ) ಎಂದು ಬರೆಯಲ್ಪಡುವ ಬದಲಿಗೆ, “ಬಿವೈಟಿಡಿಡಬ್ಲ್ಯೂಡಿ” (ರೋಮನ್ ಅಕ್ಷರಗಳಲ್ಲಿ ಲಿಪ್ಯಂತರಮಾಡಲ್ಪಟ್ಟಿದೆ) ಎಂಬ ಅಕ್ಷರಗಳೊಂದಿಗೆ ಒಂದು ಪದವಾಗಿ ಬರೆಯಲ್ಪಟ್ಟಿದೆ. ಗ್ರಾಹ್ಯವಾಗಿ, “ಬಿವೈಟಿಡಿಡಬ್ಲ್ಯೂಡಿ”ಯ ಅರ್ಥವಿವರಣೆಯ ಕುರಿತಾಗಿ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ.
ಭಾಷಾ ಪರಿಣತನಾದ ಪ್ರೊಫೆಸರ್ ಆ್ಯನ್ಸನ್ ರೈನೀ ವಿವರಿಸುವುದು: “ಯೋಸೆಫ್ ನಾವೇ ಮತ್ತು ಅವರಾಮ್ ಬೀರಾ ಸ್ಮಾರಕ ಲೇಖನವನ್ನು ವಿಸ್ತೃತವಾಗಿ ವಿವರಿಸಲಿಲ್ಲ, ಪ್ರಾಯಶಃ ಯಾಕಂದರೆ, ಅಂತಹ ಒಂದು ರಚನೆಯಲ್ಲಿ, ವಿಶೇಷವಾಗಿ ಜೋಡಣೆಯು ಒಂದು ಸುಸ್ಥಾಪಿತ ಅಂಕಿತನಾಮವಾಗಿರುವಾಗ, ಎರಡು ಅಂಶಗಳ ನಡುವಿನ ಒಂದು ಶಬ್ದ ವಿಭಾಜಕವು ಹೆಚ್ಚಾಗಿ ಬಿಟ್ಟುಬಿಡಲ್ಪಡುತ್ತದೆಂಬುದು ವಾಚಕರಿಗೆ ತಿಳಿದಿರುವುದೆಂದು ಅವರು ಭಾವಿಸಿಕೊಂಡರು. ‘ದಾವೀದನ ಮನೆತನ’ ನಿಶ್ಚಯವಾಗಿಯೂ ಸಾ.ಶ.ಪೂ. ಒಂಬತ್ತನೆಯ ಶತಮಾನದ ಮಧ್ಯದಲ್ಲಿ ಅಂತಹ ಒಂದು ಯೋಗ್ಯವಾದ ರಾಜಕೀಯ ಮತ್ತು ಭೂಗೋಳ ನಾಮವಾಗಿತ್ತು.”
ಅಗೆತಶಾಸ್ತ್ರದ ಇನ್ನೊಂದು ಪುರಾವೆ
ಆ ಕಂಡುಹಿಡಿತದ ನಂತರ, ಮೇಷಾ ಸ್ಮಾರಕಸ್ತಂಭದ (ಮೋವಬೈಟ್ ಶಿಲೆಯೆಂದೂ ಕರೆಯಲ್ಪಡುತ್ತದೆ) ಒಬ್ಬ ಪರಿಣತರಾದ, ಪ್ರೊಫೆಸರ್ ಆ್ಯಂಡ್ರೆ ಲೇಮೆರ್, ವರದಿಸಿದ್ದೇನಂದರೆ, ಅದು ಸಹ “ದಾವೀದನ ಮನೆತನ”ಕ್ಕೆ ಸೂಚಿಸುತ್ತದೆ.# 1868ರಲ್ಲಿ ಕಂಡುಹಿಡಿಯಲ್ಪಟ್ಟ ಮೇಷಾ ಸ್ಮಾರಕಸ್ತಂಭದಲ್ಲಿ, ಟೆಲ್ ಡ್ಯಾನ್ ಸ್ಮಾರಕಸ್ತಂಭಕ್ಕೆ ಸಾಮಾನ್ಯವಾಗಿರುವ ತುಂಬ ವಿಷಯವಿದೆ. ಎರಡೂ ಸ್ಮಾರಕಸ್ತಂಭಗಳು ಸಾ.ಶ.ಪೂ. ಒಂಬತ್ತನೆಯ ಶತಮಾನದ್ದಾಗಿವೆ, ಒಂದೇ ಪದಾರ್ಥದ್ದು, ಗಾತ್ರದಲ್ಲಿ ಸಮಾನವಾಗಿವೆ, ಮತ್ತು ಬಹುಮಟ್ಟಿಗೆ ತದ್ರೂಪದ ಸೆಮಿಟಿಕ್ ಲಿಪಿಯಲ್ಲಿ ಬರೆಯಲ್ಪಟ್ಟಿವೆ.
ಮೇಷಾ ಸ್ಮಾರಕಸ್ತಂಭದ ಮೇಲೆ ಹಾನಿಯಾದ ಒಂದು ಸಾಲಿನ ಹೊಸ ಪುನರ್ನಿರ್ಮಾಣದ ಕುರಿತಾಗಿ ಪ್ರೊಫೆಸರ್ ಲೇಮಾರ್ ಬರೆದುದು: “ಟೆಲ್ ಡ್ಯಾನ್ ಅವಶಿಷ್ಟದ ಕಂಡುಹಿಡಿತದ ಸುಮಾರು ಎರಡು ವರ್ಷಗಳ ಮುಂಚೆ, ಮೇಷಾ ಸ್ಮಾರಕಸ್ತಂಭವು ‘ದಾವೀದನ ಮನೆತನ’ಕ್ಕೆ ಒಂದು ನಿರ್ದೇಶನವನ್ನು ಒಳಗೊಂಡಿದೆಯೆಂದು ನಾನು ತೀರ್ಮಾನಿಸಿದೆ. . . . ‘ದಾವೀದನ ಮನೆತನ’ಕ್ಕೆ ಈ ನಿರ್ದೇಶನವು ಎಂದೂ ಗಮನಿಸಲ್ಪಟ್ಟಿರದಕ್ಕೆ ಕಾರಣವು, ಮೇಷಾ ಸ್ಮಾರಕಸ್ತಂಭವು ಎಂದೂ ಒಂದು ಸರಿಯಾದ ಎಡೀಟ್ಯೂ ಪ್ರಿನ್ಕೆಪ್ಸ್ [ಪ್ರಥಮ ಮುದ್ರಣ]ವನ್ನು ಹೊಂದಿರದೆ ಇದ್ದ ವಾಸ್ತವಾಂಶದಿಂದಾಗಿರಬಹುದು. ಮೇಷಾ ಸ್ಮಾರಕಸ್ತಂಭದ ಕಂಡುಹಿಡಿಯುವಿಕೆಯ 125 ವರ್ಷಗಳ ನಂತರ, ನಾನು ಅದನ್ನು ತಯಾರಿಸುತ್ತಿದ್ದೇನೆ.”
ಅಂತಹ ಅಗೆತಶಾಸ್ತ್ರದ ಮಾಹಿತಿಯು ಆಸಕ್ತಿಕರವಾಗಿದೆ ಏಕೆಂದರೆ, ಒಬ್ಬ ದೇವದೂತನು, ಸ್ವತಃ ಯೇಸು, ಅವನ ಶಿಷ್ಯರು ಮತ್ತು ಸಾಮಾನ್ಯ ಜನರು ದಾವೀದನ ಐತಿಹಾಸಿಕತೆಗೆ ಪುರಾವೆಯನ್ನು ಕೊಟ್ಟಿದ್ದಾರೆ. (ಮತ್ತಾಯ 1:1; 12:3; 21:9; ಲೂಕ 1:32; ಅ. ಕೃತ್ಯಗಳು 2:29) ಅವನು ಮತ್ತು ಅವನ ರಾಜವಂಶ, “ದಾವೀದನ ಮನೆತನ” ಕಾಲ್ಪನಿಕವಲ್ಲ, ಬದಲಾಗಿ ವಾಸ್ತವಾಂಶವಾಗಿದೆಯೆಂದು ಅಗೆತಶಾಸ್ತ್ರದ ಕಂಡುಹಿಡಿತಗಳು ಸ್ಪಷ್ಟವಾಗಿ ಸಮ್ಮತಿಸುತ್ತವೆ.
[ಪಾದಟಿಪ್ಪಣಿ]
ಮೇಷಾ ಸ್ಮಾರಕಸ್ತಂಭವು ವಾಚ್ ಟವರ್ ಸೊಸೈಟಿಯ ಸಾಹಿತ್ಯದ ಓದುಗರಿಗೆ ಜ್ಞಾತವಾಗಿದೆ. (ಎಪ್ರಿಲ್ 15, 1990ರ ದ ವಾಚ್ಟವರ್, ಪುಟಗಳು 30-1ನ್ನು ನೋಡಿರಿ.) ಅದು ಪ್ಯಾರಿಸ್ನ ಲೂವ್ರ್ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲ್ಪಟ್ಟಿದೆ.
[ಪುಟ 31 ರಲ್ಲಿರುವ ಚಿತ್ರ]
1993ರಲ್ಲಿ, ಉತ್ತರ ಗಲಿಲಾಯದ ದಾನ್ ಪಟ್ಟಣದಲ್ಲಿ ಕಂಡುಹಿಡಿಯಲ್ಪಟ್ಟ, ಟೆಲ್ ಡ್ಯಾನ್ ಅವಶಿಷ್ಟ
ರೇಖನ ಚಿತ್ರವು ಇಸ್ರಾಯೇಲ್ ಎಕ್ಸ್ಪ್ಲೋರೆಷನ್ ಜರ್ನಲ್ನಲ್ಲಿ ತೋರಿಬರುವ ಒಂದು ಛಾಯಾಚಿತ್ರದ ಮೇಲೆ ಆಧರಿತವಾಗಿದೆ.