ಈಕ್ವಟೋರಿಯಲ್ ಗಿನಿಯಲ್ಲಿ ಬೆಳವಣಿಗೆಗಾಗಿ ಒಂದು ವಾತಾವರಣ
ಒಬ್ಬ ಪ್ರವಾಸಿಯ ವಿಮಾನವು ಈಕ್ವಟೋರಿಯಲ್ ಗಿನಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವಾಗ, ಅವನ ಮನಸ್ಸಿಗೆ ಅಚ್ಚೊತ್ತುವ ಪ್ರಥಮ ವಿಷಯವು ಹುಲುಸಾದ ಫಸಲು ಆಗಿದೆ. ನಿಲ್ದಾಣದ ಬಯಲು, ವಿಮಾನ ನಿಲ್ದಾಣದ ಕಟ್ಟಡಗಳನ್ನು ಸಣ್ಣದಾಗಿ ತೋರುವಂತೆ ಮಾಡುವ ಭವ್ಯ ಮರಗಳಿಂದ ಸುತ್ತುವರಿಯಲ್ಪಟ್ಟಿದೆ. 80ಗಳ ಮಧ್ಯ ಭಾಗದಲ್ಲಿ ಸಮೃದ್ಧವಾದ ಮಳೆ ಮತ್ತು ವರ್ಷದಾದ್ಯಂತದ ತಾಪಮಾನದಿಂದ ಉದ್ರೇಕಿಸಲ್ಪಟ್ಟು, ಸೊಂಪಾಗಿ ಬೆಳೆದ ಸಸ್ಯಗಳು ಸಮುದ್ರತೀರದಿಂದ ಪರ್ವತದ ತುದಿಗಳ ವರೆಗೆ ಹಸನಾಗಿ ಬೆಳೆಯುತ್ತವೆ.
ಇನ್ನೊಂದು ರೀತಿಯ ಸಮೃದ್ಧ ಬೆಳವಣಿಗೆಯು ಸಹ ಈಕ್ವಟೋರಿಯಲ್ ಗಿನಿಯಲ್ಲಿ ನಡೆಯುತ್ತಿದೆ, “ದೇವರು ಕೊಡುವ ವೃದ್ಧಿ [“ಬೆಳವಣಿಗೆ,” NW].” (ಕೊಲೊಸ್ಸೆ 2:19) ಫಿಲಿಪ್ಪನಿಂದ ಸಹಾಯವನ್ನು ಕೋರಿದ ಐಥಿಯೋಪ್ಯದ ಅಧಿಕಾರಿಯಂತೆ, ಇಲ್ಲಿ ಅನೇಕರು ಶಾಸ್ತ್ರವಚನಗಳನ್ನು ತಿಳಿದುಕೊಳ್ಳಲು ಕಾತುರರಾಗಿದ್ದಾರೆ. (ಅ. ಕೃತ್ಯಗಳು 8:26-39) ಬೀದಿಯಲ್ಲಿ ಯಾರಾದರೊಬ್ಬರು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನು ಸಮೀಪಿಸಿ, ಒಂದು ಬೈಬಲ್ ಅಧ್ಯಯನಕ್ಕಾಗಿ ಕೇಳಿಕೊಳ್ಳುವುದು ಅಸಾಮಾನ್ಯವಾಗಿರುವುದಿಲ್ಲ. ಈಕ್ವಟೋರಿಯಲ್ ಗಿನಿಯಲ್ಲಿರುವ ಸರಿಸುಮಾರು 325 ಸಾಕ್ಷಿಗಳು, ಒಂದು ಸಾವಿರಕ್ಕಿಂತಲೂ ಹೆಚ್ಚು ಬೈಬಲ್ ಅಭ್ಯಾಸಗಳನ್ನು ನಡಿಸುತ್ತಿದ್ದಾರೆ.
ಆರಂಭದ ದಿನಗಳಲ್ಲಿ ಬೀಜವನ್ನು ಬಿತ್ತುವುದು
ಆಫ್ರಿಕದಲ್ಲಿನ ಅತಿ ಚಿಕ್ಕ ದೇಶವಾಗಿರುವ, ಈಕ್ವಟೋರಿಯಲ್ ಗಿನಿ, ನೈಜೀರಿಯ ಮತ್ತು ಕ್ಯಾಮರೂನ್ನ ದಕ್ಷಿಣ ದಿಕ್ಕಿನಲ್ಲಿ ಇದೆ. (ಭೂಪಟವನ್ನು ನೋಡಿರಿ.) ಕೋಕೊ ತೋಟಗಳಲ್ಲಿ ಕೆಲಸವನ್ನು ಕಂಡುಕೊಳ್ಳಲು ಬಂದ ನೈಜೀರಿಯದ ಸಾಕ್ಷಿಗಳಿಂದ ಸುವಾರ್ತೆಯು ಇಲ್ಲಿ ಪ್ರಥಮವಾಗಿ ತರಲ್ಪಟ್ಟಿತು. ಇಂಗ್ಲಿಷ್ ಭಾಷೆಯನ್ನಾಡುವ ಹಲವಾರು ಸಭೆಗಳು ರಚಿಸಲ್ಪಟ್ಟಿದ್ದರೂ, ಈ ಸಹೋದರರು ನೈಜೀರಿಯಕ್ಕೆ ಹಿಂದಿರುಗಬೇಕಾದಾಗ ಇವು ಅನಂತರ ರದ್ದುಮಾಡಲ್ಪಟ್ಟವು. ಆದಾಗಲೂ, 1968ರಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯವು ಅನುಗ್ರಹಿಸಲ್ಪಟ್ಟ ನಂತರ ಕೂಡಲೇ, ಮೂವರು ವಾಚ್ಟವರ್ ಮಿಷನೆರಿ ದಂಪತಿಗಳು ಇಲ್ಲಿಗೆ ನೇಮಿಸಲ್ಪಟ್ಟರು. ರಾಜಕೀಯ ಕಷ್ಟಗಳಿಂದಾಗಿ ಅವರು ಹೆಚ್ಚು ದೀರ್ಘ ಸಮಯ ಉಳಿಯಲು ಅಶಕ್ತರಾಗಿದ್ದರೂ, ಅವರ ಸಾಕ್ಷಿಕೊಡುವಿಕೆಯು ಉತ್ತಮ ಫಲಿತಾಂಶಗಳನ್ನು ಉತ್ಪಾದಿಸಿತು.
ಮಿಷನೆರಿಗಳಲ್ಲಿ ಒಬ್ಬರಾದ ಸಾಂಟ್ಯಾಗೊ, ಸ್ಥಳೀಯರಿಗೆ ಸೂಪರ್ಮ್ಯಾನ್ ಎಂದು ಜ್ಞಾತನಾಗಿದ್ದ, ಒಬ್ಬ ಎತ್ತರವಾದ, ದಷ್ಟಪುಷ್ಟ ಮನುಷ್ಯನಾದ ಬ್ವೆನವೆಂಟೂರಾನನ್ನು ಸಂಧಿಸಿದನು. ಅವನು ಬೈಬಲನ್ನು ಗೌರವಿಸುತ್ತಿದ್ದ ಒಬ್ಬ ಧರ್ಮಶ್ರದ್ಧೆಯುಳ್ಳ ಪುರುಷನಾಗಿದ್ದನು, ಆದರೂ, ಅವನಿಗೆ ಹಿಂಸಾತ್ಮಕವಾದ ಕೋಪವಿತ್ತು. ಯಾರಾದರೊಬ್ಬರನ್ನು ಹೊಡೆಯಲು, ತೀರ ಕ್ಷುಲ್ಲಕವಾದ ಅವಮಾನವು ಸಾಕಾಗುತ್ತಿತ್ತು. ಬಾರ್ನಲ್ಲಿ ಅವನು ಸಿಟ್ಟುಗೊಳ್ಳುತ್ತಿದ್ದಾಗ, ಉಪಸ್ಥಿತರಿದ್ದವರೆಲ್ಲರೂ ಚೆದರಿಹೋಗುತ್ತಿದ್ದರು, ಅವನ ಹೊಡೆತಗಳಿಂದ ಪಾರಾಗಲು ಕಿಟಕಿಗಳಿಂದಲೂ ಹೊರಹಾರುತ್ತಿದ್ದರು. ವಾಸ್ತವದಲ್ಲಿ ಅವನು ಸಾಂಟ್ಯಾಗೊವಿಗೆ ಕಿವಿಗೊಡುತ್ತಿದ್ದಂತೆ, ಅವನು ಏನನ್ನು ಹೇಳುತ್ತಿದ್ದನೊ ಅದಕ್ಕಾಗಿ ಅವನು ಮನಗಾಣಿಸುವಂತಹ ಶಾಸ್ತ್ರೀಯ ಪುರಾವೆಯನ್ನು ಒದಗಿಸಲು ಶಕ್ತನಾಗಿರದಿರುತ್ತಿದ್ದಲ್ಲಿ ಅವನನ್ನು ಹೊಡೆಯಲು ಉದ್ದೇಶಿಸಿದ್ದನು. ‘ಯಾರೂ ಸೂಪರ್ಮ್ಯಾನ್ನನ್ನು ಮರುಳು ಮಾಡರು’ ಎಂದು ಅವನು ತನಗೆ ಹೇಳಿಕೊಂಡನು. ಅವನು ಏನನ್ನು ಕೇಳಿದನೊ ಅದರಿಂದ, ವಿಶೇಷವಾಗಿ ಒಂದು ಪ್ರಮೋದವನ ಭೂಮಿಯಲ್ಲಿ ನಿತ್ಯ ಜೀವದ ನಿರೀಕ್ಷೆಯ ಕುರಿತಾಗಿ ಅವನು ಮೋಹಿತನಾದನು, ಆದುದರಿಂದ ಅವನು ಒಂದು ಬೈಬಲ್ ಅಭ್ಯಾಸಕ್ಕಾಗಿ ಸಮ್ಮತಿಸಿದನು.
ಅಭ್ಯಾಸವು ಮುಂದುವರಿದಂತೆ, ಪ್ರಮೋದವನದಲ್ಲಿ ಸದಾಕಾಲ ಜೀವಿಸುವ ಬ್ವೆನವೆಂಟೂರಾನ ಬಯಕೆಯು ಹೆಚ್ಚು ಬಲವಾಯಿತು, ಮತ್ತು ಅಂತಹ ಒಂದು ಬಹುಮಾನವನ್ನು ಗಳಿಸಲಿಕ್ಕಾಗಿ ತಾನು ತನ್ನ ಜೀವನವನ್ನು ದೇವರ ಮಟ್ಟಗಳಿಗೆ ಸರಿಹೊಂದಿಸಲೇಬೇಕೆಂಬುದನ್ನು ಅವನು ಕಲಿತನು. ಸತ್ಯ ಕ್ರೈಸ್ತರು “ಕೇಡಿಗೆ ಪ್ರತಿಯಾಗಿ ಕೇಡನ್ನು ಹಿಂತಿರುಗಿಸ”ಬಾರದೆಂಬುದನ್ನು (NW) ಗ್ರಹಿಸುತ್ತಾ, ತನ್ನ ಕೋಪವನ್ನು ನಿಯಂತ್ರಿಸಿಕೊಳ್ಳಲು ಅವನು ಒಂದು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡಲಾರಂಭಿಸಿದನು.—ರೋಮಾಪುರ 12:17.
ಒಂದು ದಿನ ಬಾರ್ನಲ್ಲಿ, ಒಬ್ಬ ಗಿರಾಕಿಯ ಗ್ಲಾಸನ್ನು ಆಕಸ್ಮಿಕವಾಗಿ ಕೆಳಗುರುಳಿಸಿದಾಗ ನಿಜವಾದ ಪರೀಕ್ಷೆಯು ಬಂತು. ಆ ಮನುಷ್ಯನು ಸಿಟ್ಟುಗೊಂಡು, ಅವನನ್ನು ಹೊಡೆದನು. ಒಂದು ಕಾದಾಟವು ಆರಂಭವಾಗುವುದನ್ನು ನಿರೀಕ್ಷಿಸುತ್ತಾ, ತತ್ಕ್ಷಣ, ಬಾರ್ನಲ್ಲಿದ್ದ ಇತರರು ಚೆದರಿಹೋದರು. ಆದರೆ ಬ್ವೆನವೆಂಟೂರಾ ದೀನವಾಗಿ ಒಡೆದಹೋದ ಗ್ಲಾಸ್ಗಾಗಿ ಹಣವನ್ನು ತೆತ್ತು, ಆ ಮನುಷ್ಯನಿಗೆ ಇನ್ನೊಂದು ಗ್ಲಾಸು ಮದ್ಯವನ್ನು ತರಿಸಿಕೊಟ್ಟು, ತನ್ನ ನಾಜೂಕಿಲ್ಲದ ವರ್ತನೆಗಾಗಿ ಕ್ಷಮೆಯಾಚಿಸಿದನು. ಬೈಬಲಿನ ಒಂದು ಅಭ್ಯಾಸವು ಅವನಲ್ಲಿ ಅಂತಹ ಬದಲಾವಣೆಗಳನ್ನು ಮಾಡಿದೆಯೆಂಬುದನ್ನು ನೆರೆಹೊರೆಯವರು ಕಂಡಾಗ, ಹಲವಾರು ಮಂದಿ ಅವನೊಂದಿಗೆ ಅಭ್ಯಾಸಿಸಲು ಸಿದ್ಧಮನಸ್ಕರಾಗಿದ್ದರು. ಬ್ವೆನವೆಂಟೂರಾ ದೀಕ್ಷಾಸ್ನಾನ ಹೊಂದುವ ಸಮಯದಷ್ಟಕ್ಕೆ, ಅವನು ಆಗಲೇ ಐದು ಬೈಬಲ್ ಅಭ್ಯಾಸಗಳನ್ನು ನಡಿಸುತ್ತಿದ್ದನು. ಕಳೆದ ಐದು ವರ್ಷಗಳಿಂದ ಅವನು ಒಬ್ಬ ಹಿರಿಯನಾಗಿ ಸೇವೆಸಲ್ಲಿಸಿರುತ್ತಾನೆ, ಮತ್ತು ಜನರು ಅವನನ್ನು ಇನ್ನೂ ಸೂಪರ್ಮ್ಯಾನ್ ಎಂದು ಕರೆಯುತ್ತಾರಾದರೂ, ಅವರು ಈಗ ಆ ರೀತಿಯಲ್ಲಿ ಕರೆಯುವುದು ತಮಾಷೆಗಾಗಿ.
“ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು”
1970ಗಳ ಸಮಯದಲ್ಲಿ, ಇದ್ದ ಕೆಲವೇ ಸ್ಥಳಿಕ ಸಾಕ್ಷಿಗಳು, ತಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ಸಾರುವುದನ್ನು ಮತ್ತು ಒಟ್ಟುಗೂಡಿ ಬರುವುದನ್ನು ಮುಂದುವರಿಸಿದರು. ಅನಂತರ, ಹಲವಾರು ಸ್ಪ್ಯಾನಿಷ್ ಮಿಷನೆರಿ ದಂಪತಿಗಳು ಸಹಾಯ ಮಾಡಲು ಬಂದರು. ಈಕ್ವಟೋರಿಯಲ್ ಗಿನಿಯಲ್ಲಿ 12 ವರ್ಷಗಳಿಂದ ಸೇವೆ ಸಲ್ಲಿಸಿರುವ ಆಂಡ್ರೇಸ್ ಬೋಟೇಯ ಜ್ಞಾಪಿಸಿಕೊಳ್ಳುವುದೇನಂದರೆ, ಅವನು ಆಗಮಿಸಿದ ಕೂಡಲೇ, ಜನರು ಹೇಗೆ ನಿಜವಾಗಿಯೂ “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು” ಆಗಿದ್ದರೆಂಬ ವಿಷಯದಿಂದ ಪ್ರಭಾವಿತನಾದನು. (ಮತ್ತಾಯ 5:3, NW) “ಇಂತಹ ಗಣ್ಯತಾಭಾವದ ಜನರೊಂದಿಗೆ ಬೈಬಲನ್ನು ಅಭ್ಯಾಸಿಸುವುದು ನಿಜವಾದ ಆನಂದವಾಗಿದ್ದಿರುತ್ತದೆ,” ಎಂದು ಅವನು ಹೇಳುತ್ತಾನೆ.
ಒಬ್ಬ ಸ್ಪ್ಯಾನಿಷ್ ಸಹೋದರಿಯಾದ ಮೇರಿ, ಮಾರಿಯಾ ಎಂಬ ಹೆಸರಿನ ಒಬ್ಬ ಯುವ ಹೆಂಗಸಿನೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದಳು. ತನ್ನ ಹೆತ್ತವರಾದ ಫ್ರಾನ್ಸಿಸ್ಕೊ ಮತ್ತು ಫೌಸ್ಟಾ ಸಹ ಅಭ್ಯಾಸ ಮಾಡುವುದರಲ್ಲಿ ಆಸಕ್ತರಾಗಿದ್ದರೆಂದು ಮಾರಿಯಾ ತಿಳಿಸಿದಳು. ಮೇರಿ 15 ಅಭ್ಯಾಸಗಳನ್ನು ನಡಿಸುತ್ತಿದ್ದುದರಿಂದ ಮತ್ತು ಮಾರಿಯಾಳ ಹೆತ್ತವರು ಸ್ವಲ್ಪ ದೂರದಲ್ಲಿ ಜೀವಿಸುತ್ತಿದ್ದುದರಿಂದ, ಅವಳು ಅವರನ್ನು ಸಂದರ್ಶಿಸಲು ಶಕ್ತಳಾಗುವ ಮುಂಚೆ ಹಲವಾರು ವಾರಗಳು ದಾಟಿಹೋದವು.
ಕೊನೆಗೆ, ಮೇರಿ ಮತ್ತು ಅವಳ ಗಂಡನಾದ ಸೆರಾಫೀನ್, ಆ ಹೆತ್ತವರನ್ನು ಸಂಧಿಸಿದಾಗ, ಅವರು ಆಗಲೇ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿa ಎಂಬ ಪುಸ್ತಕವನ್ನು ಮತ್ತು ಒಂದು ಬೈಬಲನ್ನು ಪಡೆದಿದ್ದರು, ಮತ್ತು ಅವರು ಅಭ್ಯಾಸ ಮಾಡುವುದನ್ನು ಆರಂಭಿಸಲು ಆತುರರಾಗಿದ್ದರು. ಆದುದರಿಂದ ಅವರು ತತ್ಕ್ಷಣವೇ ಆರಂಭಿಸಿದರು. ಮಾರಿಯಾಳ ಹೆತ್ತವರು ವಿಷಯದೊಂದಿಗೆ ತೀರ ಪರಿಚಿತರಾಗಿದ್ದರೆಂಬುದನ್ನು ಸೆರಾಫೀನ್ ಗಮನಿಸಿದನು. ಅವರು ಎರಡನೆಯ ಅಧ್ಯಾಯವನ್ನು ಆವರಿಸಿದ ಎರಡನೆಯ ಭೇಟಿಯಲ್ಲೂ ಅದೇ ವಿಷಯವು ಸಂಭವಿಸಿತು. “ಅದು ಬಹುಮಟ್ಟಿಗೆ, ಇಬ್ಬರು ದೀಕ್ಷಾಸ್ನಾನಿತ ಸಾಕ್ಷಿಗಳೊಂದಿಗೆ ಅಭ್ಯಾಸಿಸುವಂತೆ ಇತ್ತು” ಎಂದು ಸೆರಾಫೀನ್ ಜ್ಞಾಪಿಸಿಕೊಳ್ಳುತ್ತಾನೆ. ಅವರು ವಿಷಯವನ್ನು ಇಷ್ಟು ಚೆನ್ನಾಗಿ ತಿಳಿದಿದ್ದರಿಂದ, ಅವರು ನಿಜವಾಗಿ ಎಷ್ಟನ್ನು ಅರ್ಥಮಾಡಿಕೊಂಡಿದ್ದರೆಂಬುದನ್ನು ಕೇವಲ ನಿರ್ಧರಿಸಲಿಕ್ಕಾಗಿ ಒಂದು ಪ್ರಶ್ನೋತ್ತರ ಸೆಷನ್ನ್ನು ನಡಿಸಲು ಸೆರಾಫೀನ್, ಮೂರನೆಯ ಭೇಟಿಯಲ್ಲಿ ಸಲಹೆನೀಡಿದನು. ಫ್ರಾನ್ಸಿಸ್ಕೊ ಮತ್ತು ಫೌಸ್ಟಾ ಇಡೀ ಪುಸ್ತಕವನ್ನು ತಮ್ಮಷ್ಟಕ್ಕೆ ಅಭ್ಯಾಸಿಸಿದ್ದರೆಂಬುದನ್ನು ಅವನು ಕಂಡುಕೊಂಡನು!
ಅವರು ಹೊಸತಾಗಿ ಕಂಡುಕೊಂಡಿದ್ದ ಜ್ಞಾನವು ಅವರನ್ನು ಹೇಗೆ ಪ್ರಭಾವಿಸಿತು? ಅವರು ಏನನ್ನು ಕಲಿತಿದ್ದರೊ ಅದಕ್ಕೆ ಹೊಂದಿಕೆಯಲ್ಲಿ, ಅವರು ಈಗಾಗಲೇ ಮಾಟಮಂತ್ರದ ಕೂಟಗಳನ್ನು ಹಾಜರಾಗುವುದನ್ನು ನಿಲ್ಲಿಸಿದ್ದರು ಮತ್ತು ಕ್ಯಾಥೊಲಿಕ್ ಚರ್ಚ್ನೊಂದಿಗೆ ಸಂಬಂಧಗಳನ್ನು ಕಡಿದುಹಾಕಿದ್ದರು. ಇನ್ನೂ ಹೆಚ್ಚಾಗಿ, ಫ್ರಾನ್ಸಿಸ್ಕೊ ಧೂಮಪಾನವನ್ನು ನಿಲ್ಲಿಸಿದ್ದನು, ಮತ್ತು ಅವರು ಇನ್ನೂ ಮುಂದೆ ಸರಿಯಾಗಿ ರಕ್ತ ಬಸಿಯದಿದ್ದ ಮಾಂಸವನ್ನು ತಿನ್ನುತ್ತಿರಲಿಲ್ಲ. ಅವರು ಕಲಿತಂತಹ ಎಲ್ಲ ವಿಷಯವನ್ನು ಅವರು ಸ್ಪಷ್ಟವಾಗಿ ಅನ್ವಯಿಸಿಕೊಂಡಿದ್ದರಿಂದ, ಅವರು ತಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಆರಂಭಿಸುವಂತೆ ಪ್ರೋತ್ಸಾಹಿಸಲ್ಪಟ್ಟರು. ಆ ಕೂಡಲೇ ಅವರು ತಮ್ಮ ನೆರೆಹೊರೆಯವರಿಗೆ ಸಾರುವುದನ್ನು ಆರಂಭಿಸಿದರು. ಕೇವಲ ಮೂರು ತಿಂಗಳುಗಳಲ್ಲಿಯೇ, ಅವರು ದೀಕ್ಷಾಸ್ನಾನಕ್ಕಾಗಿ ಅರ್ಹರಾದರು. ಫ್ರಾನ್ಸಿಸ್ಕೊ ಈಗ ಒಬ್ಬ ಶುಶ್ರೂಷಾ ಸೇವಕನಾಗಿದ್ದಾನೆ ಮತ್ತು ಅವರ ಉತ್ತಮ ಮಾದರಿ ಹಾಗೂ ಸಾರುವುದರಲ್ಲಿನ ಹುರುಪಿನಿಂದಾಗಿ, ಅವರ ಪುತ್ರಿಯರಲ್ಲಿ ಮೂವರು ಈಗ ಸಾಕ್ಷಿಗಳಾಗಿದ್ದಾರೆ, ಇಬ್ಬರು ಪುತ್ರರು ಕೂಟಗಳಿಗೆ ಹಾಜರಾಗುತ್ತಿದ್ದಾರೆ, ಮತ್ತು ಇತರ ಆರು ಸಂಬಂಧಿಗಳು ಅಭ್ಯಾಸಮಾಡುತ್ತಿದ್ದಾರೆ.
ಫ್ರಾನ್ಸಿಸ್ಕೊ ದೀಕ್ಷಾಸ್ನಾನಪಡೆದ ಸ್ವಲ್ಪ ಸಮಯದಲ್ಲೇ, ತನ್ನ ಚರ್ಚಿನಲ್ಲಿ ಪಾರುಪತ್ಯಗಾರನಾಗಿ ಸೇವೆಸಲ್ಲಿಸುತ್ತಿದ್ದ ಒಬ್ಬ ಧರ್ಮನಿಷ್ಠ ಕ್ಯಾಥೊಲಿಕನಾಗಿದ್ದ ಪಾಬ್ಲೊನನ್ನು ಅವನು ಭೇಟಿಯಾದನು. ಪಾದ್ರಿಯು ಅನುಪಸ್ಥಿತನಾಗಿರುತ್ತಿದ್ದಾಗಲೆಲ್ಲಾ, ಪಾಬ್ಲೊ ಪ್ರಸಂಗವನ್ನು ಕೊಡುತ್ತಿದ್ದನು. ಒಬ್ಬ ಚರ್ಚ್ ಸದಸ್ಯನು ಅಸ್ವಸ್ಥನಾಗಿರುತ್ತಿದ್ದಲ್ಲಿ, ಅವನು ಭೇಟಿನೀಡುತ್ತಿದ್ದನು; ಯಾರಾದರೂ ಚರ್ಚಿನಿಂದ ತಪ್ಪುತ್ತಿದ್ದಲ್ಲಿ ಪಾಬ್ಲೊ ಅವರಿಗೆ ಉತ್ತೇಜನವನ್ನು ಕೊಡಲು ಭೇಟಿಯಾಗುತ್ತಿದ್ದನು; ಮತ್ತು ಯಾರಾದರೂ ಸತ್ತಲ್ಲಿ, ಆ ಕುಟುಂಬವನ್ನು ಸಾಂತ್ವನಪಡಿಸಲು ತನ್ನಿಂದ ಸಾಧ್ಯವಿರುವಷ್ಟನ್ನು ಅವನು ಮಾಡುತ್ತಿದ್ದನು. ಗ್ರಾಹ್ಯವಾಗಿಯೇ, ಎಲ್ಲಾ ಚರ್ಚ್ ಸದಸ್ಯರಿಂದ ಪಾಬ್ಲೊ ತುಂಬ ಪ್ರೀತಿಸಲ್ಪಟ್ಟಿದ್ದನು.
ಪಾಬ್ಲೊವಿಗೆ ಬೈಬಲಿಗಾಗಿ ಗಾಢವಾದ ಗೌರವವಿದ್ದುದರಿಂದ, ತನ್ನೊಂದಿಗೆ ಅಭ್ಯಾಸವನ್ನು ಮಾಡುವ ಫ್ರಾನ್ಸಿಸ್ಕೊವಿನ ನೀಡಿಕೆಯನ್ನು ಅವನು ಸಿದ್ಧಮನಸ್ಸಿನಿಂದ ಸ್ವೀಕರಿಸಿದನು. ಬೈಬಲಿನ ಸಂದೇಶವು ಎಷ್ಟು ಸಮಂಜಸವಾಗಿತ್ತೆಂಬುದನ್ನು ಪಾಬ್ಲೊ ಬೇಗನೇ ನೋಡಿದನು, ಮತ್ತು ಕೆಲವು ಅಭ್ಯಾಸಗಳ ನಂತರ, ತಾನು ಕಲಿತಿದ್ದ ಶಾಸ್ತ್ರವಚನಗಳನ್ನು ಒಬ್ಬ ಅಸ್ವಸ್ಥ ಚರ್ಚ್ ಸದಸ್ಯನ ಮೇಲೆ ಮಾಡುವ ತನ್ನ “ಕುರಿಪಾಲನಾ ಭೇಟಿಗಳಲ್ಲಿ” ಒಂದರಲ್ಲಿ ಉಪಯೋಗಿಸಲು ನಿರ್ಣಯಿಸಿದನು. ತದನಂತರ ಸ್ವಲ್ಪ ಸಮಯದಲ್ಲೇ, ತನ್ನ ಆದಿತ್ಯವಾರದ ಪ್ರಸಂಗಗಳಲ್ಲೊಂದರಲ್ಲಿ, ಯೆಹೋವ ಎಂಬ ದೇವರ ಹೆಸರನ್ನು ಉಪಯೋಗಿಸುವುದರ ಪ್ರಾಮುಖ್ಯವನ್ನು ಮತ್ತು ನಾವು ವಿಗ್ರಹಗಳನ್ನು ಏಕೆ ಉಪಯೋಗಿಸಬಾರದೆಂಬುದನ್ನು ಪಾಬ್ಲೊ ವಿವರಿಸಿದನು.
ಅವನು ಸತ್ಯವನ್ನು ಇಷ್ಟು ಸುಲಭವಾಗಿ ಸ್ವೀಕರಿಸಿದ್ದರಿಂದ, ಚರ್ಚಿನ ಇತರ ಸದಸ್ಯರು ತದ್ರೀತಿಯಲ್ಲಿ ಪ್ರತಿಕ್ರಿಯಿಸುವರೆಂದು ಅವನು ನಿರೀಕ್ಷಿಸಿದನು. ಆದರೆ ಈ ಬೈಬಲ್ ಆಧಾರಿತವಾದ ಮೂರೊ ನಾಲ್ಕೊ ಪ್ರಸಂಗಗಳ ನಂತರ, ತಾನು ಸಾದರಪಡಿಸುತ್ತಿದ್ದ ಮಾಹಿತಿಯಿಂದ ಜನರು ಅಸಂತುಷ್ಟರಾಗಿದ್ದರೆಂದು ಪಾಬ್ಲೊ ಗಮನಿಸಿದನು. ಆದುದರಿಂದ ಅವನು ಚರ್ಚನ್ನು ತೊರೆದು, ಯೆಹೋವನ ಸಾಕ್ಷಿಗಳೊಂದಿಗೆ ಕ್ರಮವಾಗಿ ಸಹವಸಿಸಲು ನಿರ್ಣಯಿಸಿದನು. ಕೆಲವೇ ತಿಂಗಳುಗಳಲ್ಲಿ ಅವನು ದೀಕ್ಷಾಸ್ನಾನಕ್ಕಾಗಿ ಅರ್ಹನಾದನು, ಮತ್ತು ಈಗ ಅವನು ಸುವಾರ್ತೆಯ ಒಬ್ಬ ಹುರುಪಿನ ಸುವಾರ್ತಿಕನಾಗಿದ್ದಾನೆ. ಪೂರ್ಣ ಸಮಯ ಸಾರಲು ಅಶಕ್ತನಾಗಿದ್ದರೂ, ಅವನು ಸದ್ಯದಲ್ಲಿ ಹತ್ತು ಬೈಬಲ್ ಅಭ್ಯಾಸಗಳನ್ನು ನಡಿಸುತ್ತಿದ್ದಾನೆ.
ಒಟ್ಟಿಗೆ ಸೇರಿಬರುವುದರಿಂದ ಬೆಳವಣಿಗೆಯನ್ನು ಪ್ರವರ್ಧಿಸುವುದು
ಈಕ್ವಟೋರಿಯಲ್ ಗಿನಿಯಲ್ಲಿರುವ ಸಾಕ್ಷಿಗಳು ಜೊತೆಯಾಗಿ ಸೇರಿಬರುವುದನ್ನು ಬಿಟ್ಟುಬಿಡದಿರುವ ಬೈಬಲಿನ ಆಜ್ಞೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (ಇಬ್ರಿಯ 10:25) ಕೆಲಸಕ್ಕೆ ಸರಕಾರದಿಂದ ಪುನಃ ಅಧಿಕೃತವಾದ ಅಂಗೀಕಾರವು ಕೊಡಲ್ಪಟ್ಟ 1994ರಂದಿನಿಂದ, ಸಹೋದರರು ಅನುಕೂಲವಾದ ರಾಜ್ಯ ಸಭಾಗೃಹಗಳನ್ನು ಪಡೆದುಕೊಳ್ಳಲು ಆತುರರಾಗಿದ್ದಾರೆ. ವಾಸ್ತವದಲ್ಲಿ ಸಭೆಗಳಲ್ಲಿ ಹೆಚ್ಚಿನವು ತಮ್ಮ ಸ್ವಂತ ಸಭಾಗೃಹಗಳನ್ನು ನಿರ್ಮಿಸಿವೆ ಅಥವಾ ಹಾಗೆ ಮಾಡುವ ಕಾರ್ಯಗತಿಯಲ್ಲಿವೆ.
ಆದಿತ್ಯವಾರದ ಕೂಟಗಳಲ್ಲಿ ಹಾಜರಿಯು, ರಾಜ್ಯ ಪ್ರಚಾರಕರ ಸಂಖ್ಯೆಯ ಎರಡೂವರೆ ಪಟ್ಟಿನಷ್ಟು ಉಚ್ಚವಾಗಿರುವ ಮೊಂಗಾಮದಲ್ಲಿ, ಸಭೆಯು ಒಂದು ದೊಡ್ಡ ಕೂಟದ ಸ್ಥಳವನ್ನು ನಿರ್ಮಿಸಲು ಕಠಿನವಾಗಿ ಕೆಲಸಮಾಡುತ್ತಿದೆ. ಮೊಂಗಾಮದಲ್ಲಿರುವ ಇತರ ಧರ್ಮಗಳು ತಮ್ಮ ಚರ್ಚುಗಳನ್ನು ಕಟ್ಟಲು ಸಾಮಾನ್ಯವಾಗಿ ಕೆಲಸಗಾರರನ್ನು ಬಾಡಿಗೆಗೆ ತೆಗೆದುಕೊಳ್ಳುತ್ತವೆ, ಆದುದರಿಂದ ಸ್ಥಳಿಕ ಸಾಕ್ಷಿಗಳ ಚಟುವಟಿಕೆಯು ಗಮನಿಸಲ್ಪಡದೆ ಹೋಗಲಿಲ್ಲ. ಕಷ್ಟಪಟ್ಟು ದುಡಿಯುತ್ತಿರುವ ಈ ಕಾರ್ಮಿಕರಿಗೆ ಅವನು ಎಷ್ಟು ಹಣವನ್ನು ಕೊಡುತ್ತಿದ್ದನೆಂದು ಒಬ್ಬ ಹಿರಿಯನನ್ನು ಕೇಳಲು ಒಂದು ದಿನ ಈಗ್ಲೆಸೀಯ ನುಏವ ಅಪೊಸ್ಟೊಲೀಕ (ನ್ಯು ಅಪೊಸ್ಟೊಲಿಕ್ ಚರ್ಚ್)ದ ಪಾಸ್ಟರನು ಕೆಲಸದ ಸ್ಥಳಕ್ಕೆ ಬಂದನು. ತನ್ನ ಸ್ವಂತ ಚರ್ಚಿನ ಸದಸ್ಯರಾಗಿದ್ದ ಕೆಲವು ಇಟ್ಟಿಗೆಕೆಲಸಗಾರರನ್ನು ಇಟ್ಟುಕೊಂಡಿದ್ದನಾದರೂ, ಕೆಲಸವು ತುಂಬ ನಿಧಾನವಾಗಿ ಮುಂದುವರಿಯುತ್ತಿತ್ತೆಂದು ಪಾಸ್ಟರನು ಹೇಳಿದನು. ರಾಜ್ಯ ಸಭಾಗೃಹವನ್ನು ಕಟ್ಟುತ್ತಿದ್ದ ಕೆಲಸಗಾರರನ್ನು ತಾನು ಬಾಡಿಗೆಗೆ ತೆಗೆದುಕೊಳ್ಳಸಾಧ್ಯವಿದೆಯೊ ಎಂದು ಅವನು ಕುತೂಹಲಪಟ್ಟನು. ಎಲ್ಲಾ ಸಾಕ್ಷಿಗಳು ಉಚಿತವಾಗಿ ಕೆಲಸಮಾಡುತ್ತಿದ್ದರೆಂಬ ವಿಷಯವು ಅವನಿಗೆ ಹೇಳಲ್ಪಟ್ಟಾಗ, ಅವನು ದಂಗುಬಡಿದವನಾಗಿ ಹೊರಟುಹೋದನು.
ರಾಜ್ಯ ಸಭಾಗೃಹದಿಂದ ದೂರದಲ್ಲಿ ಜೀವಿಸುವವರಿಗೆ, ಕೂಟಗಳನ್ನು ಹಾಜರಾಗುವುದು ಗಣನೀಯವಾದ ತ್ಯಾಗವನ್ನು ಅವಶ್ಯಪಡಿಸಬಹುದು. 1994ರಲ್ಲಿ ದೀಕ್ಷಾಸ್ನಾನ ಹೊಂದಿದ ಒಬ್ಬ ಯುವ ಪುರುಷನಾದ ವಾನ್ ಈ ಸನ್ನಿವೇಶವನ್ನು ಎದುರಿಸಿದನು. ಅವನು ಗಾಬೊನ್ನಲ್ಲಿ ಸತ್ಯದ ಕುರಿತಾಗಿ ಕೇಳಿ, ಸದಾ ಜೀವಿಸಬಲ್ಲಿರಿ ಪುಸ್ತಕದ ಪ್ರಥಮ ಅರ್ಧ ಭಾಗವನ್ನು ಅಲ್ಲಿ ಅಭ್ಯಾಸಿಸಿದನು. ಅನಂತರ ಅವನು ಈಕ್ವಟೋರಿಯಲ್ ಗಿನಿಗೆ, ಮೊಂಗಾಮದಿಂದ ಸುಮಾರು 100 ಕಿಲೊಮೀಟರ್ ದೂರದಲ್ಲಿದ್ದ ತನ್ನ ಹುಟ್ಟೂರಿಗೆ, ಹಿಂದಿರುಗಿದನು. ತನ್ನ ಅಭ್ಯಾಸವನ್ನು ಮುಂದುವರಿಸಲು ಇದು ಅವನಿಗೆ ಒಂದು ಪಂಥಾಹ್ವಾನವನ್ನು ಒಡ್ಡಿತು. ಆದರೆ ಅವನು ಹಿಮ್ಮೆಟ್ಟಲ್ಪಡಲಿಲ್ಲ. ಪ್ರತಿ ತಿಂಗಳು, ಅವನು ಮೊಂಗಾಮಗೆ ತನ್ನ ಸೈಕಲಿನಲ್ಲಿ ಎಂಟು ತಾಸಿನ ಪ್ರಯಾಣವನ್ನು ಮಾಡಿದನು, ಅಲ್ಲಿ ಸ್ಥಳಿಕ ಹಿರಿಯರಲ್ಲಿ ಒಬ್ಬರಾದ ಸಾಂಟ್ಯಾಗೊ, ಅವನೊಂದಿಗೆ ಅಭ್ಯಾಸವನ್ನು ನಡಿಸಿದರು. ಅವನು ಮೊಂಗಾಮದಲ್ಲಿ ಕೆಲವು ದಿನಗಳಿಗೆ ತಂಗುತ್ತಿದ್ದನು ಮತ್ತು ಆ ತಂಗುವಿಕೆಯ ಸಮಯದಲ್ಲಿ ಮೂರು ಅಥವಾ ನಾಲ್ಕು ಸಲ ಅಭ್ಯಾಸಿಸುತ್ತಿದ್ದನು. ಈ ರೀತಿಯಲ್ಲಿ ಅವನು ತನ್ನ ಅಭ್ಯಾಸವನ್ನು ಪೂರ್ಣಗೊಳಿಸಿ, ದೀಕ್ಷಾಸ್ನಾನಕ್ಕಾಗಿ ಅರ್ಹನಾಗಲು ಶಕ್ತನಾದನು.
ಇತರ ಕ್ರೈಸ್ತರೊಂದಿಗೆ ಇಷ್ಟು ಅಲ್ಪವಾದ ಸಹವಾಸದೊಂದಿಗೆ ವಾನ್ ಆತ್ಮಿಕವಾಗಿ ಹೇಗೆ ಬಲವಾಗಿರುತ್ತಾನೆ? ಎಲ್ಲಕ್ಕಿಂತ ಮಿಗಿಲಾಗಿ, ಸುವಾರ್ತೆಯ ಒಬ್ಬ ಹುರುಪಿನ ಸೌವಾರ್ತಿಕನಾಗಿರುವುದರಿಂದಲೇ. ಅವನು ತನ್ನ ಊರಲ್ಲಿರುವ ಎಲ್ಲಾ ಜನರಿಗೆ ಸಾರಿದ್ದಾನೆ, ಮತ್ತು ಅವನು ದೀಕ್ಷಾಸ್ನಾನಪಡೆಯುವ ಸಮಯದಷ್ಟಕ್ಕೆ, ಅವನು 13 ಬೈಬಲ್ ಅಭ್ಯಾಸಗಳನ್ನು ನಡಿಸುತ್ತಿದ್ದನು. ಅವನ ವಿದ್ಯಾರ್ಥಿಗಳಲ್ಲಿ ಆರು ಮಂದಿ, ಅವನ ದೀಕ್ಷಾಸ್ನಾನವನ್ನು ನೋಡಲು ಮೊಂಗಾಮದಲ್ಲಿನ ವಿಶೇಷ ಸಮ್ಮೇಳನ ದಿನಕ್ಕಾಗಿ ಅವನೊಂದಿಗೆ ಜೊತೆಗೂಡಿ ಹೋದರು. ಈಗ ಅವನು ತನ್ನ ಕ್ಷೇತ್ರದಲ್ಲಿರುವ ಆಸಕ್ತ ವ್ಯಕ್ತಿಗಳೊಂದಿಗೆ ಕ್ರಮವಾದ ಕಾವಲಿನಬುರುಜು ಅಭ್ಯಾಸವನ್ನು ನಡಿಸುತ್ತಾನೆ, ಮತ್ತು ಸಾಮಾನ್ಯವಾಗಿ ಸುಮಾರು 20 ಮಂದಿ ಹಾಜರಿರುತ್ತಾರೆ.
ತಾಳ್ಮೆಯಿಂದ ಬೀಜಕ್ಕೆ ನೀರು ಹಾಯಿಸುವುದು
ಎಲ್ಲಾ ಆತ್ಮಿಕ ಬೆಳವಣಿಗೆಯು ಕ್ಷಿಪ್ರವಾಗಿರುವುದಿಲ್ಲ. ಕೆಲವೊಮ್ಮೆ, ಬೀಜವು ಕೊನೆಗೆ ಫಲವನ್ನು ಕೊಡುವುದನ್ನು ಕಾಣಲು ತುಂಬ ತಾಳ್ಮೆಯು ಆವಶ್ಯಕ. ಇದು, 1984ರಷ್ಟು ಹಿಂದೆ, ಒಬ್ಬ ಪಯನೀಯರ್ ಸಹೋದರಿಯಾದ ಏಡೀಟ, ಮಾರುಕಟ್ಟೆಯಲ್ಲಿ ಅವಳಿಗೆ ಸಾಕ್ಷಿಕೊಟ್ಟಾಗ, ಸುವಾರ್ತೆಯನ್ನು ಪ್ರಥಮವಾಗಿ ಕೇಳಿದ ಪಾಕಳ ವಿಷಯದಲ್ಲಿ ಸತ್ಯವಾಗಿತ್ತು. ಮುಂದಿನ ವಾರ ಎಡೀಟ, ಪಾಕಳನ್ನು ಅವಳ ಮನೆಯಲ್ಲಿ ಸಂದರ್ಶಿಸಿದಾಗ, ಪಾಕಳು ಒಂದು ಬೈಬಲ್ ಅಭ್ಯಾಸಕ್ಕಾಗಿ ಸಮ್ಮತಿಸಿದಳು. ಅವಳು ಹೆಚ್ಚು ಪ್ರಗತಿಯನ್ನು ಮಾಡದೆ ಇದ್ದರೂ, ಪಾಕಳಲ್ಲಿ ಒಳ್ಳೆಯ ಗುಣಗಳನ್ನು ವಿವೇಚಿಸಿದ್ದರಿಂದ ಏಡೀಟ ಪಟ್ಟುಹಿಡಿದಳು. “ಅವಳು ಒಬ್ಬ ಕುರಿಸದೃಶ ವ್ಯಕ್ತಿಯಂತೆ ತೋರಿದಳು, ಮತ್ತು ನಾನು ಯೆಹೋವನಿಗೆ, ಅವಳ ಹೃದಯವನ್ನು ತೆರೆಯುವಂತೆ ಪ್ರಾರ್ಥಿಸಿದೆ,” ಎಂದು ಎಡೀಟ ವಿವರಿಸುತ್ತಾಳೆ.
ನಾಲ್ಕೂವರೆ ವರ್ಷಗಳ ತನಕ ಪಾಕಳು ತನ್ನ ಅಭ್ಯಾಸವನ್ನು ಬಿಟ್ಟುಬಿಟ್ಟು ಮುಂದುವರಿಸಿದಳು, ಆದರೆ ತುಂಬ ಕಡಿಮೆ ಪ್ರಗತಿಯೊಂದಿಗೆ. ಆದುದರಿಂದ ಅವರು ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಪೂರ್ಣಗೊಳಿಸಿದಾಗ, ಸತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದರ ಪ್ರಾಮುಖ್ಯದ ಕುರಿತಾಗಿ ಏಡೀಟ ಪಾಕಳೊಂದಿಗೆ ಒಂದು ಮುಚ್ಚುಮರೆಯಿಲ್ಲದ ಸಂಭಾಷಣೆಯನ್ನು ನಡಿಸಿದಳು. ಪಾಕಳ ಹೃದಯವನ್ನು ತಲಪುವ ತನ್ನ ಪ್ರಯತ್ನದಲ್ಲಿ, ಏಡೀಟ ಕಣ್ಣೀರನ್ನೂ ಸುರಿಸಿದಳು.
“ಆ ಹೃತ್ಪೂರ್ವಕವಾದ ಸಲಹೆಯು ನಿಜವಾಗಿ ನನ್ನನ್ನು ಸ್ಪರ್ಶಿಸಿತು,” ಎಂದು ಪಾಕಳು ನೆನಪಿಸಿಕೊಳ್ಳುತ್ತಾಳೆ. “ಅಂದಿನಿಂದ ನಾನು ನನ್ನ ಜೀವಿತದಲ್ಲಿ ಬದಲಾವಣೆಗಳನ್ನು ಮಾಡಲಾರಂಭಿಸಿದೆ. ನಾನು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ದಾಖಲಾದೆ, ಮತ್ತು ಅದೇ ವರ್ಷ ಒಬ್ಬ ಅಸ್ನಾನಿತ ಪ್ರಚಾರಕಳಾದೆ. ನಾನು ಕೊನೆಗೆ ದೀಕ್ಷಾಸ್ನಾನಪಡೆದ ದಿನವು ನನ್ನ ಜೀವಿದಲ್ಲಿಯೇ ಅತೀ ಸಂತೋಷಕರವಾದ ದಿನವಾಗಿತ್ತು!” ಪಾಕಳ ಪ್ರಸ್ತುತ ಉತ್ಸಾಹವು ಅವಳ ಹಿಂದಿನ ಉದಾಸೀನತೆಗೆ ವ್ಯತಿರಿಕ್ತವಾಗಿದೆ. ಅವಳು ಸದ್ಯದಲ್ಲಿ 13 ಬೈಬಲ್ ಅಭ್ಯಾಸಗಳನ್ನು ನಡಿಸುತ್ತಿದ್ದಾಳೆ, ಮತ್ತು ಯಾರು ಕ್ಷಿಪ್ರವಾದ ಪ್ರಗತಿಯನ್ನು ಮಾಡುವುದಿಲ್ಲವೊ ಅವರೊಂದಿಗೆ ಅವಳು ನಿಶ್ಚಯವಾಗಿಯೂ ತಾಳ್ಮೆಯುಳ್ಳವಳಾಗಿದ್ದಾಳೆ.
ತಮ್ಮ ಜೀವಿತಗಳನ್ನು ಉತ್ತಮಗೊಳಿಸಲು ಜನರಿಗೆ ಸಹಾಯಮಾಡುವುದು
ಬೈಬಲ್ ಮಟ್ಟಗಳಿಗನುಸಾರ ಜೀವಿಸುವ ಮೂಲಕ, ಈಕ್ವಟೋರಿಯಲ್ ಗಿನಿಯಲ್ಲಿರುವ ಯೆಹೋವನ ಸಾಕ್ಷಿಗಳು, ಪ್ರಾಮಾಣಿಕತೆ ಮತ್ತು ಸಭ್ಯತೆಗಾಗಿ ಕೀರ್ತಿಯನ್ನು ಸಂಪಾದಿಸಿದ್ದಾರೆ. ಅವರ ನಡತೆಯಿಂದ ವಿಶದವಾಗಿ ಪ್ರಭಾವಿಸಲ್ಪಟ್ಟಿದ್ದ ಒಬ್ಬ ಮನುಷ್ಯನು, ಬಾಟಾ ಸಭೆಯ ಒಬ್ಬ ಹಿರಿಯನನ್ನು ಸಮೀಪಿಸಿ ಕೇಳಿದ್ದು: “ನಿಮ್ಮ ಹತ್ತಿರ ಒಂದು ರೀಸನಿಂಗ್ ಪುಸ್ತಕ ಇದೆಯೊ?b ಒಬ್ಬ ಲೌಕಿಕ ವ್ಯಕ್ತಿಯಾಗಿರುವುದರಲ್ಲಿ ನಾನು ಬೇಸತ್ತುಹೋಗಿದ್ದೇನೆ. ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಲು ಇಷ್ಟಪಡುತ್ತೇನೆ!”
ಮಲಾಬೊ ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿರುವ ಆ್ಯಂಟೊನ್ಯೊ, ಒಬ್ಬ ಸಾಕ್ಷಿಯಾಗಿ ಪರಿಣಮಿಸಿದ ಒಬ್ಬ ಲೌಕಿಕ ವ್ಯಕ್ತಿಯ ಒಂದು ಪ್ರತಿನಿಧಿರೂಪ ಮಾದರಿಯಾಗಿದ್ದಾನೆ. ಅವನು ಬೈಬಲನ್ನು ಅಭ್ಯಾಸಿಸುವ ಮುಂಚೆ, ಅವನು ಒಂದು ನೀತಿಗೆಟ್ಟ ಜೀವನವನ್ನು ನಡಿಸಿದನು. ಗಡಿಯಾರ ರಿಪೇರಿಮಾಡುವವನಾಗಿ ಅವನು ಸಂಪಾದಿಸಿದ ಹಣದಲ್ಲಿ ಹೆಚ್ಚಿನದ್ದನ್ನು ಅವನು ಕುಡಿಯುವುದರಲ್ಲಿ ಖರ್ಚುಮಾಡಿದನು, ಮತ್ತು ಅವನು ಅನೈತಿಕವಾಗಿಯೂ ಜೀವಿಸಿದನು. ಅವನ ಜೀವನ ಶೈಲಿಯನ್ನು ಬದಲಾಯಿಸಲು ಅವನಿಗೆ ಏನು ಸಹಾಯ ಮಾಡಿತು? 1 ಕೊರಿಂಥ 6:9, 10ರಲ್ಲಿ ಏನು ಬಲವತ್ತಾಗಿ ತಿಳಿಸಲ್ಪಟ್ಟಿದೆಯೊ ಅದರಿಂದ ಅವನು ಗಾಢವಾಗಿ ಪ್ರಭಾವಿತನಾದನು: “ಮೋಸಹೋಗಬೇಡಿರಿ, ಜಾರರು . . . ಕುಡಿಕರು . . . ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” ದೇವರ ಮೆಚ್ಚಿಕೆಯನ್ನು ಪಡೆಯಲು, ತಾನು ತನ್ನ ಜೀವನ ರೀತಿಯನ್ನು ಬದಲಾಯಿಸಲೇಬೇಕೆಂಬುದನ್ನು ಅವನು ಗ್ರಹಿಸಿದನು. ಆ ಉದ್ದೇಶದಿಂದ, ಅವನು ತನ್ನ ಸಹವಾಸದ ಕುರಿತಾಗಿ ನಿಗಾ ವಹಿಸಲು ತೊಡಗಿದನು. (ಜ್ಞಾನೋಕ್ತಿ 13:20) ಹಿಂದಿನ ಸ್ನೇಹಿತರು ಅವನನ್ನು ಕುಡಿಯಲಿಕ್ಕಾಗಿ ಕರೆದಾಗ, ಅವನು ಅವರ ಆಮಂತ್ರಣವನ್ನು ನಿರಾಕರಿಸಿ, ಅದಕ್ಕೆ ಬದಲಾಗಿ ಅವರಿಗೆ ಒಂದು ಸಾಕ್ಷಿಯನ್ನು ಕೊಟ್ಟನು. ಬೇಗನೆ ಅವರು ಅವನನ್ನು ಕಾಡುವುದನ್ನು ನಿಲ್ಲಿಸಿದರು.
ಆ ಎಲ್ಲಾ ಪ್ರಯತ್ನಕ್ಕೆ ಅದು ಅರ್ಹವಾಗಿತ್ತೊ? “ನಾನು ನನ್ನ ಜೀವನ ರೀತಿಯನ್ನು ಬದಲಾಯಿಸಿದುದಕ್ಕಾಗಿ ತುಂಬ ಸಂತೋಷಿತನಾಗಿದ್ದೇನೆ,” ಎಂದು ಆ್ಯಂಟೊನ್ಯೊ ವಿವರಿಸುತ್ತಾನೆ. “ನಾನು ನನ್ನ 60ರ ವಯಸ್ಸಿನಲ್ಲಿರುವುದಾದರೂ ನನ್ನ ಆರೋಗ್ಯವು ಹೆಚ್ಚು ಉತ್ತಮವಾಗಿದೆ, ಆದರೆ ನನ್ನ ಹಿಂದಿನ ಸ್ನೇಹಿತರು ಸತ್ತಿದ್ದಾರೆ ಅಥವಾ ನ್ಯೂನ ಆರೋಗ್ಯದಿಂದಾಗಿ ಕಷ್ಟಾನುಭವಿಸುತ್ತಿದ್ದಾರೆ. ಕೇವಲ ತಮ್ಮ ಮುಂದಿನ ಪಾನಕ್ಕಾಗಿ ಹಣವನ್ನು ತೆರಲು ಸಿದ್ಧನಾಗಿರುವ ಒಬ್ಬ ಸಂಗಾತಿಯನ್ನು ಬಯಸುವವರಿಗಿಂತ ಈಗ ನನಗೆ ನಿಜವಾದ ಸ್ನೇಹಿತರಿದ್ದಾರೆ. ಎಲ್ಲಕ್ಕಿಂತ ಪ್ರಾಮುಖ್ಯವಾಗಿ, ನನಗೆ ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವಿದೆ. ಈಗ ನಾನು ಒಬ್ಬ ಕ್ರಮದ ಪಯನೀಯರನಾಗಿ ಸೇವೆಸಲ್ಲಿಸುತ್ತಿದ್ದೇನೆ, ಮತ್ತು ಕುಡಿಯುವ ಸಮಸ್ಯೆಯಿರುವ ಒಬ್ಬ ಮನುಷ್ಯನೊಂದಿಗೂ ಒಂದು ಬೈಬಲ್ ಅಭ್ಯಾಸ ನನಗಿದೆ, ಆದುದರಿಂದ ಅವನಿಗೆ ಸಹಾಯ ಮಾಡಲು ನಾನು ನನ್ನ ಅನುಭವವನ್ನು ಉಪಯೋಗಿಸಸಾಧ್ಯವಿದೆ.”
ದೇವರ ದಾಸರಾಗುವುದು
ಸುಮಾರು 200 ವರ್ಷಗಳ ಹಿಂದೆ, ಈಕ್ವಟೋರಿಯಲ್ ಗಿನಿಯ ಕರಾವಳಿಯ ಉದ್ದಕ್ಕೂ ಇದ್ದ ಜನರನ್ನು ಒಟ್ಟುಗೂಡಿಸಿ, ಅಮೆರಿಕಕ್ಕೆ ದಾಸರನ್ನಾಗಿ ರವಾನಿಸಲಾಗುತ್ತಿತ್ತು. ಇಂದು ಅನೇಕರು ಸ್ವಯಂಪ್ರೇರಿತರಾಗಿ ದಾಸರಾಗುತ್ತಿದ್ದಾರೆ—ದೇವರ ದಾಸರು. ಈ ರೀತಿಯ ದಾಸ್ವತವು ಅವರನ್ನು ಬಾಬೆಲಿನ ಬೋಧನೆಗಳಿಂದ ಮತ್ತು ಮಾಟಮಂತ್ರದ ಆಚರಣೆಗಳಿಂದ ಮುಕ್ತರನ್ನಾಗಿ ಮಾಡುತ್ತಾ, ಅವರಿಗೆ ನಿಜವಾದ ಸ್ವಾತಂತ್ರ್ಯವನ್ನು ತಂದಿದೆ. ಇದು ಅವರಿಗೆ ತೃಪ್ತಿದಾಯಕವಾದ ಮತ್ತು ಉತ್ಪನ್ನಕಾರಕ ಜೀವಿತಗಳನ್ನು ಜೀವಿಸುವ ವಿಧವನ್ನೂ ಕಲಿಸಿದೆ. ಯೇಸು ಏನನ್ನು ವಾಗ್ದಾನಿಸಿದ್ದನೊ ಅದನ್ನು ಅವರು ಅನುಭವಿಸಲು ತೊಡಗಿದ್ದಾರೆ: “ಸತ್ಯವನ್ನು ತಿಳಿದುಕೊಳ್ಳಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.”—ಯೋಹಾನ 8:32.
1995ರ ಜ್ಞಾಪಕಾಚರಣೆಯನ್ನು 1,937 ಮಂದಿ—ಆ ದೇಶದಲ್ಲಿರುವ ಪ್ರಚಾರಕರ ಸಂಖ್ಯೆಯ ಹತ್ತಿರಹತ್ತಿರ ಆರು ಪಟ್ಟು—ಹಾಜರಾಗುವುದರೊಂದಿಗೆ ಹೆಚ್ಚಿನ ಆತ್ಮಿಕ ಬೆಳವಣಿಗೆಗಾಗಿ ಅತ್ಯುತ್ಕೃಷ್ಟವಾದ ಪ್ರತೀಕ್ಷೆಗಳಿವೆ. ಈಕ್ವಟೋರಿಯಲ್ ಗಿನಿಯಲ್ಲಿನ ಸಾಕ್ಷಿಗಳು ಹುರುಪಿನಿಂದ ಸತ್ಯದ ಬೀಜವನ್ನು ನೆಡುತ್ತಾ, ನೀರು ಹೊಯ್ಯುತ್ತಾ ಮುಂದುವರಿದಂತೆ, ‘ದೇವರು ಅದನ್ನು ಬೆಳೆಸುತ್ತಾ ಬರುವನು’ ಎಂಬ ಖಾತ್ರಿ ಅವರಿಗಿದೆ. (1 ಕೊರಿಂಥ 3:6) ನಿಸ್ಸಂದೇಹವಾಗಿ, ಈಕ್ವಟೋರಿಯಲ್ ಗಿನಿಯಲ್ಲಿ ಆತ್ಮಿಕ ಬೆಳವಣಿಗೆಗಾಗಿ ಒಂದು ಆದರ್ಶಮಯ ವಾತಾವರಣವಿದೆ!
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯಾದಿಂದ ಪ್ರಕಾಶಿತ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.