“ಯೆಹೋವನು ನನ್ನ ಪ್ರಾರ್ಥನೆಗಳನ್ನು ಉತ್ತರಿಸಿದನು!”
ಲೋಕವ್ಯಾಪಕವಾಗಿ, ಯೆಹೋವನ ಸಾಕ್ಷಿಗಳು, ದೇವರ ಮತ್ತು ಮಾನವಕುಲಕ್ಕಾಗಿರುವ ಆತನ ಅದ್ಭುತಕರವಾದ ಉದ್ದೇಶದ ಕುರಿತಾಗಿ ನಿಷ್ಕೃಷ್ಟವಾದ ಜ್ಞಾನವನ್ನು ಗಳಿಸುವುದರಲ್ಲಿ ಆಸಕ್ತರಾಗಿರುವ ಜನರೊಂದಿಗೆ ಹತ್ತಿರಹತ್ತಿರ ಐವತ್ತು ಲಕ್ಷ ಮನೆ ಬೈಬಲ್ ಅಭ್ಯಾಸಗಳನ್ನು ನಡಿಸುತ್ತಿದ್ದಾರೆ. ಈ ಕೆಲಸದಲ್ಲಿ ಯೆಹೋವನ ಸಾಕ್ಷಿಗಳ ನಡುವೆಯಿರುವ ಮಕ್ಕಳೂ ಒಂದು ಪಾಲನ್ನು ತೆಗೆದುಕೊಳ್ಳುತ್ತಿದ್ದಾರೆ. ಉದಾಹರಣೆಗಾಗಿ, ಜೊಯೆಲ್ ಎಂಬ ಹೆಸರಿನ ಒಬ್ಬ ಹುಡುಗನನ್ನು ಪರಿಗಣಿಸಿರಿ. ಅವನು ಒಂಬತ್ತು ವರ್ಷ ವಯಸ್ಸಿನವನಾಗಿದ್ದಾಗ ಯೆಹೋವನಿಗೆ ತನ್ನ ಸಮರ್ಪಣೆಯನ್ನು ಸಂಕೇತಿಸಿ, ದೀಕ್ಷಾಸ್ನಾನಪಡೆದುಕೊಂಡನು. ಒಂದು ವರ್ಷದ ನಂತರ ಅವನಿಗೆ ಈ ಅನುಭವ ಸಿಕ್ಕಿತ್ತು:
“ಶುಶ್ರೂಷೆಯಲ್ಲಿದ್ದಾಗ, ಕ್ಯಾಂಡಿ ಎಂಬ ಹೆಸರಿನ ಒಬ್ಬ ಸ್ತ್ರೀಯನ್ನು ನಾನು ಸಂಧಿಸಿದೆ. ‘ಇಗೋ! ನಾನು ಎಲ್ಲವನ್ನು ಹೊಸದು ಮಾಡುತ್ತೇನೆ’ ಎಂಬ ಬ್ರೋಷರನ್ನು ನಾನು ಅವಳಿಗೆ ನೀಡಿದೆ. ಅದು ಈಗಾಗಲೇ ಅವಳ ಬಳಿ ಇತ್ತು, ಆದುದರಿಂದ ನಾನು ಅವಳಿಗೆ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ನೀಡಿದೆ. ಅದು ಸಹ ಈಗಾಗಲೇ ಅವಳ ಬಳಿ ಇತ್ತು. ನಂತರ ನಾನು ಯೋಚಿಸಿದೆ, ‘ನಾನು ಈ ಸ್ತ್ರೀಗೆ ಒಂದು ಬೈಬಲ್ ಅಭ್ಯಾಸವನ್ನು ನೀಡುವೆ.’ ಅವಳು ಸ್ವೀಕರಿಸಿದಳು!
“ಕ್ಯಾನ್ಸರ್ ರೋಗದಿಂದ ಸಾಯುತ್ತಾ ಇದ್ದ ಕ್ಯಾಂಡಿಯ ಸಹೋದರಿ, ಅವಳೊಂದಿಗೆ ಜೀವಿಸಲು ಬಂದಳು. ಇದಕ್ಕೆ ಕೂಡಿಸಿ, ಕ್ಯಾಂಡಿ ಒಬ್ಬ ನರ್ಸ್ ಆಗಲು ಅಭ್ಯಾಸಮಾಡುತ್ತಿದ್ದಳು. ಆದುದರಿಂದ ಸ್ವಲ್ಪ ಸಮಯಾವಧಿಗೆ ಬೈಬಲ್ ಅಭ್ಯಾಸವನ್ನು ನಿಲ್ಲಿಸಲಾಯಿತು. ಆದರೆ ನನ್ನ ಹೆತ್ತವರು ಮತ್ತು ನಾನು, ಅವಳೊಂದಿಗೆ ಅಥವಾ ಅವಳ ಗಂಡನಾದ ಡಿಕ್ನೊಂದಿಗೆ ಪತ್ರಿಕೆಗಳನ್ನು ಬಿಟ್ಟುಹೋಗುವ ಮೂಲಕ ಅವಳೊಂದಿಗೆ ಸಂಪರ್ಕವನ್ನಿಟ್ಟೆವು. ಅವಳು ಪತ್ರಿಕೆಗಳನ್ನು ತನ್ನ ಮಂಚದ ಪಕ್ಕದಲ್ಲಿ ಇಟ್ಟುಕೊಂಡು, ರಾತ್ರಿ ಸಮಯದಲ್ಲಿ ಅವುಗಳನ್ನು ಓದುತ್ತಿದ್ದಳೆಂದು ಅವನು ನಮಗೆ ಹೇಳಿದನು.
“ಕಟ್ಟಕಡೆಗೆ, ಕ್ಯಾಂಡಿಯ ಸಹೋದರಿಯು ತೀರಿಹೋದಳು. ಕ್ಯಾಂಡಿಯೊಂದಿಗೆ ನನ್ನ ತಂದೆತಾಯಿ ಮತ್ತು ನಾನು ಸತ್ತವರ ಪರಿಸ್ಥಿತಿಯ ಕುರಿತಾಗಿ ಮಾತಾಡಿದೆವು. ಅವಳು ತನ್ನ ಬೈಬಲ್ ಅಭ್ಯಾಸವನ್ನು ಪುನಃ ಆರಂಭಿಸಲು ನಿರ್ಣಯಿಸಿದಳು. ಇನ್ನೊಂದು ದಿನ, ಡಿಕ್ ಕ್ಯಾಂಡಿಯ ಜೊತೆಯಲ್ಲಿ ಅಭ್ಯಾಸಿಸಿ ಅದನ್ನು ಒಂದು ಕುಟುಂಬ ಅಭ್ಯಾಸವನ್ನಾಗಿ ಮಾಡಲು ಇಷ್ಟಪಡುವನೊ ಎಂದು ನಾವು ಅವನಿಗೆ ಕೇಳಿದೆವು. ಅದು ಒಂದು ಒಳ್ಳೆಯ ವಿಚಾರವೆಂದು ಅವನು ನೆನಸಿದನು. ಹೀಗೆ ಈಗ, ನನ್ನ ತಂದೆಯೊಂದಿಗೆ, ನಾನು ಡಿಕ್ ಮತ್ತು ಕ್ಯಾಂಡಿ ಇಬ್ಬರೊಂದಿಗೂ ಅಭ್ಯಾಸವನ್ನು ನಡಿಸುತ್ತಿದ್ದೇನೆ. ಅವರು ಉತ್ತಮ ಪ್ರಗತಿಯನ್ನು ಮಾಡುತ್ತಿದ್ದಾರೆ ಮತ್ತು ಬೈಬಲ್ ಅಭ್ಯಾಸಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸುತ್ತಾರೆ.
“ನಾನು ಒಂದು ಬೈಬಲ್ ಅಭ್ಯಾಸಕ್ಕಾಗಿ ಪ್ರಾರ್ಥಿಸುತ್ತಿದ್ದೆ, ಮತ್ತು ಯೆಹೋವನು ನನ್ನ ಪ್ರಾರ್ಥನೆಗಳನ್ನು ಉತ್ತರಿಸಿದನು!”