ವಾಚಕರಿಂದ ಪ್ರಶ್ನೆಗಳು
ಜ್ಞಾಪಕದ ಸಂಕೇತಗಳಲ್ಲಿ ಪಾಲ್ಗೊಳ್ಳುತ್ತಿರುವವರ ಸಂಖ್ಯೆಯು ಸ್ವಲ್ಪಮಟ್ಟಿಗೆ ಹೆಚ್ಚಿರುವುದನ್ನು ಕೆಲವು ವರ್ಷಗಳಿಗಾಗಿರುವ ವರದಿಗಳು ತೋರಿಸುತ್ತವೆ. ಇದು ಅನೇಕ ಹೊಸಬರು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಡುತ್ತಿದ್ದಾರೆಂಬುದನ್ನು ಸೂಚಿಸುತ್ತದೊ?
1,44,000 ಅಭಿಷಿಕ್ತ ಕ್ರೈಸ್ತರ ಸಂಖ್ಯೆಯು ದಶಕಗಳ ಹಿಂದೆ ಸಂಪೂರ್ಣಗೊಂಡಿತ್ತೆಂದು ನಂಬಲು ಸಕಾರಣವಿದೆ.
ಅ. ಕೃತ್ಯಗಳು 2:1-4ರಲ್ಲಿ, ಆ ಸೀಮಿತ ಗುಂಪಿನಲ್ಲಿನ ಮೊದಲಿಗರ ಕುರಿತು ನಾವು ಓದುತ್ತೇವೆ: “ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರು ಏಕಮನಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿದ್ದರು. ಆಗ ಬಿರುಗಾಳಿ ಬೀಸುತ್ತದೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. ಅದಲ್ಲದೆ ಉರಿಯಂತಿದ್ದ ನಾಲಿಗೆಗಳು ವಿಂಗಡಿಸಿಕೊಳ್ಳುವ ಹಾಗೆ ಅವರಿಗೆ ಕಾಣಿಸಿ ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕೂತುಕೊಂಡವು. ಆಗ ಅವರೆಲ್ಲರು ಪವಿತ್ರಾತ್ಮಭರಿತರಾಗಿ ಆ ಆತ್ಮ ತಮತಮಗೆ ನುಡಿಯುವ ಶಕ್ತಿಯನ್ನು ಕೊಡುವ ಪ್ರಕಾರ ಬೇರೆಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು.”
ಇದಾದ ತರುವಾಯ, ಯೆಹೋವನು ಇತರರನ್ನು ಆರಿಸಿಕೊಂಡನು, ಮತ್ತು ಅವರನ್ನು ತನ್ನ ಪವಿತ್ರಾತ್ಮದಿಂದ ಅಭಿಷೇಕಿಸಿದನು. ಕ್ರೈಸ್ತತ್ವದ ಆ ಆದಿ ವರ್ಷಗಳಲ್ಲೇ ಸಾವಿರಾರು ಮಂದಿ ಕೂಡಿಸಲ್ಪಟ್ಟರು. ನಮ್ಮ ಸಮಯದಲ್ಲಿನ ಜ್ಞಾಪಕಾಚರಣೆಯಲ್ಲಿ, ಭಾಷಣಕರ್ತನು ಅನೇಕ ವೇಳೆ ರೋಮಾಪುರ 8:15-17ರಲ್ಲಿರುವ ಅಪೊಸ್ತಲ ಪೌಲನ ಮಾತುಗಳಿಗೆ ಗಮನವನ್ನು ಸೆಳೆಯುತ್ತಾನೆ. ಅದು, ಅಭಿಷಿಕ್ತರು ‘ಪುತ್ರರೋಪಾದಿ ದತ್ತುಸ್ವೀಕಾರದ ಒಂದು ಆತ್ಮವನ್ನು ಪಡೆಯುತ್ತಾರೆ’ (NW) ಎಂಬ ವಿಷಯವನ್ನು ಉಲ್ಲೇಖಿಸುತ್ತದೆ. ಪೌಲನು ಕೂಡಿಸಿ ಹೇಳಿದ್ದೇನೆಂದರೆ, ಅವರು ಪಡೆಯುವ ಪವಿತ್ರಾತ್ಮವು ‘ಅವರು ದೇವರ ಮಕ್ಕಳಾಗಿದ್ದಾರೆಂದೂ ಕ್ರಿಸ್ತನೊಂದಿಗೆ ಸಹಬಾಧ್ಯರೆಂದೂ . . . ಅವರ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ.’ ಈ ಆತ್ಮಾಭಿಷೇಕವನ್ನು ನಿಜವಾಗಿಯೂ ಪಡೆದಿರುವವರು ಅದನ್ನು ಖಚಿತವಾಗಿ ಬಲ್ಲವರಾಗಿರುತ್ತಾರೆ. ಅದು ಕೇವಲ ಒಂದು ಬಯಕೆ ಅಥವಾ ತಮ್ಮ ಕುರಿತಾದ ಒಂದು ಭಾವನಾತ್ಮಕ ಮತ್ತು ಅವಾಸ್ತವಿಕ ದೃಷ್ಟಿಕೋನದ ಒಂದು ಪ್ರತಿಬಿಂಬವಾಗಿರುವುದಿಲ್ಲ.
ಕತ್ತಲೆಯ ಯುಗಗಳೆಂದು ಕರೆಯಲ್ಪಟ್ಟ ಸಮಯದಲ್ಲಿ, ಅಭಿಷಿಕ್ತರ ಸಂಖ್ಯೆಯು ಬಹಳ ಕೊಂಚವಾಗಿದ್ದ ಸಂದರ್ಭಗಳು ಇದ್ದಿರಬಹುದಾದರೂ, ಈ ಸ್ವರ್ಗೀಯ ಕರೆಯುವಿಕೆಯು ಶತಮಾನಗಳ ಉದ್ದಕ್ಕೂ ಮುಂದುವರಿಯಿತೆಂದು ನಾವು ತಿಳಿದುಕೊಳ್ಳುತ್ತೇವೆ.a ಕಳೆದ ಶತಮಾನದ ಕೊನೆಯಲ್ಲಿ ನಿಜ ಕ್ರೈಸ್ತತ್ವದ ಪುನರ್‌ಸ್ಥಾಪನೆಯೊಂದಿಗೆ, ಹೆಚ್ಚು ಜನರು ಕರೆಯಲ್ಪಟ್ಟರು ಮತ್ತು ಆರಿಸಿಕೊಳ್ಳಲ್ಪಟ್ಟರು. ಆದರೆ 1930ಗಳ ಮಧ್ಯದಲ್ಲಿ, 1,44,000 ಜನರ ಪೂರ್ಣ ಸಂಖ್ಯೆಯು ಮೂಲಭೂತವಾಗಿ ಸಂಪೂರ್ಣಗೊಂಡಿತೆಂದು ತೋರುತ್ತದೆ. ಹೀಗೆ ಭೂನಿರೀಕ್ಷೆಯುಳ್ಳ ನಿಷ್ಠಾವಂತ ಕ್ರೈಸ್ತರ ಒಂದು ಗುಂಪು ಕಾಣಿಸಿಕೊಳ್ಳಲು ತೊಡಗಿತು. ಇಂತಹವರನ್ನು ಯೇಸು “ಬೇರೆ ಕುರಿಗಳು” ಎಂಬುದಾಗಿ ಹೆಸರಿಸಿದನು. ಇವರು ಅಭಿಷಿಕ್ತರೊಂದಿಗೆ ಅನುಮೋದನೆ ಪಡೆದ ಒಂದು ಹಿಂಡಿನೋಪಾದಿ ಆರಾಧನೆಯಲ್ಲಿ ಐಕ್ಯರಾಗುತ್ತಾರೆ.—ಯೋಹಾನ 10:14-16.
ಕಳೆದ ದಶಕಗಳಲ್ಲಿನ ನಿಜಾಂಶಗಳು, ಅಭಿಷಿಕ್ತರ ಕರೆಯುವಿಕೆಯ ಸಂಪೂರ್ಣತೆ ಮತ್ತು “ಮಹಾ ಸಂಕಟ”ವನ್ನು ಪಾರಾಗಿ ಉಳಿಯಲು ನಿರೀಕ್ಷಿಸುವ, ಬೆಳೆಯುತ್ತಿರುವ “ಮಹಾ ಸಮೂಹ”ದ ಮೇಲಿನ ಯೆಹೋವನ ಆಶೀರ್ವಾದ—ಇವೆರಡನ್ನೂ—ಪ್ರತಿಬಿಂಬಿಸುತ್ತವೆ. (ಪ್ರಕಟನೆ 7:9, 14) ಉದಾಹರಣೆಗೆ, 63,146 ಜನರಿಂದ ಹಾಜರಾಗಲ್ಪಟ್ಟ, 1935ರಲ್ಲಿ ನಡೆದ ಜ್ಞಾಪಕಾಚರಣೆಯಲ್ಲಿ, ಅಭಿಷಿಕ್ತರೆಂಬ ತಮ್ಮ ವಾದದ ಗುರುತಾಗಿ ಸಂಕೇತಗಳಲ್ಲಿ ಪಾಲ್ಗೊಂಡವರ ಸಂಖ್ಯೆಯು 52,465 ಆಗಿತ್ತು. ಮೂವತ್ತು ವರ್ಷಗಳ ನಂತರ, ಅಥವಾ 1965ರಲ್ಲಿ, ಹಾಜರಿಯು 19,33,089 ಆಗಿತ್ತು, ಆದರೆ ಪಾಲ್ಗೊಳ್ಳುವವರು 11,550ರ ಸಂಖ್ಯೆಗೆ ಇಳಿದರು. ಪ್ರಸ್ತುತ ಸಮಯಕ್ಕೆ 30 ವರ್ಷಗಳು ಹತ್ತಿರವಾಗುತ್ತಾ, 1995ರಲ್ಲಿ ಹಾಜರಿಯು 1,31,47,201ಕ್ಕೆ ಏರಿತು, ಆದರೆ ಕೇವಲ 8,645 ಜನರು ರೊಟ್ಟಿ ಹಾಗೂ ದ್ರಾಕ್ಷಾಮದ್ಯದಲ್ಲಿ ಪಾಲ್ಗೊಂಡರು. (1 ಕೊರಿಂಥ 11:23-26) ಸ್ಪಷ್ಟವಾಗಿಯೇ, ದಶಕಗಳು ದಾಟಿಹೋದಂತೆ, ಉಳಿಕೆಯವರೆಂದು ಹೇಳಿಕೊಳ್ಳುವವರ ಸಂಖ್ಯೆಯು ಮಹತ್ತರವಾಗಿ ಕಡಿಮೆಯಾಯಿತು—1935ರಲ್ಲಿ ಸುಮಾರು 52,400; 1965ರಲ್ಲಿ 11,500; 1995ರಲ್ಲಿ 8,600. ಹಾಗಿದ್ದರೂ, ಭೂನಿರೀಕ್ಷೆಗಳುಳ್ಳವರು ಆಶೀರ್ವದಿಸಲ್ಪಟ್ಟಿದ್ದಾರೆ, ಮತ್ತು ಅವರ ಸಂಖ್ಯೆಯು ಹೇರಳವಾಗಿ ವೃದ್ಧಿಗೊಂಡಿದೆ.
ತೀರ ಇತ್ತೀಚೆಗೆ ಪ್ರಕಾಶಿಸಲ್ಪಟ್ಟ ವರದಿಯು ಇಸವಿ 1995ಕ್ಕಾಗಿದೆ, ಮತ್ತು ಅದು ಹಿಂದಿನ ವರ್ಷಕ್ಕಿಂತ 28 ಮಂದಿ ಅಧಿಕ ಪಾಲ್ಗೊಳ್ಳುವವರನ್ನು ತೋರಿಸುತ್ತದೆ. ಆದರೂ ಹಾಜರಾಗುವವರಿಗೆ ಪಾಲ್ಗೊಳ್ಳುವವರ ಅನುಪಾತವು ಖಂಡಿತವಾಗಿಯೂ ಇಳಿಮುಖವಾಯಿತು. ಎಲ್ಲ ವಿಷಯಗಳು ಪರಿಗಣಿಸಲ್ಪಟ್ಟಾಗ, ಇನ್ನೂ ಕೆಲವರು ಸಂಕೇತಗಳಲ್ಲಿ ಪಾಲ್ಗೊಳ್ಳಲು ಆರಿಸಿಕೊಂಡರೆಂಬ ನಿಜತ್ವವು ನಮ್ಮನ್ನು ಕಳವಳಗೊಳಿಸಬಾರದು. ಗತವರ್ಷಗಳಲ್ಲಿ, ಹೊಸದಾಗಿ ದೀಕ್ಷಾಸ್ನಾನ ಪಡೆದ ಕೆಲವು ಜನರು ಸಹ, ಇದ್ದಕ್ಕಿದ್ದಹಾಗೆ ಪಾಲ್ಗೊಳ್ಳಲು ಆರಂಭಿಸಿದ್ದಾರೆ. ಹೆಚ್ಚಿನ ವಿದ್ಯಮಾನಗಳಲ್ಲಿ, ಸ್ವಲ್ಪ ಸಮಯಾನಂತರ ಇದೊಂದು ತಪ್ಪಾಗಿತ್ತೆಂದು ಅವರು ಅಂಗೀಕರಿಸಿದ್ದಾರೆ. ಬಹುಶಃ ಶಾರೀರಿಕ ಅಥವಾ ಮಾನಸಿಕ ಒತ್ತಡಕ್ಕೆ ಒಂದು ಭಾವನಾತ್ಮಕ ಪ್ರತಿಕ್ರಿಯೆಯೋಪಾದಿ ತಾವು ಪಾಲ್ಗೊಂಡೆವೆಂದು ಕೆಲವರು ಒಪ್ಪಿಕೊಂಡಿದ್ದಾರೆ. ಆದರೆ ತಾವು ನಿಜವಾಗಿಯೂ ಸ್ವರ್ಗೀಯ ಜೀವಿತಕ್ಕೆ ಕರೆಯಲ್ಪಟ್ಟಿರಲಿಲ್ಲವೆಂದು ಅವರು ಕಟ್ಟಕಡೆಗೆ ಗ್ರಹಿಸಿಕೊಂಡರು. ದೇವರ ಕರುಣಾಮಯ ಅರ್ಥಮಾಡಿಕೊಳ್ಳುವಿಕೆಗಾಗಿ ಅವರು ಕೇಳಿಕೊಂಡರು. ಮತ್ತು ಅವರು ಭೂಮಿಯ ಮೇಲೆ ನಿತ್ಯಜೀವದ ನಿರೀಕ್ಷೆಯುಳ್ಳವರಾಗಿ, ಆತನಿಗೆ ಉತ್ತಮ, ನಿಷ್ಠಾವಂತ ಕ್ರೈಸ್ತರಾಗಿ ಸೇವೆಮಾಡುವುದನ್ನು ಮುಂದುವರಿಸುತ್ತಾರೆ.
ವ್ಯಕ್ತಿಯೊಬ್ಬನು ಸಂಕೇತಗಳಲ್ಲಿ ಪಾಲ್ಗೊಳ್ಳಲು ಅಥವಾ ಪಾಲ್ಗೊಳ್ಳದೆ ಇರಲು ತೊಡಗುವುದಾದರೆ, ನಮ್ಮಲ್ಲಿ ಯಾರೊಬ್ಬರೂ ಚಿಂತಿತರಾಗುವ ಅಗತ್ಯವಿಲ್ಲ. ಯಾರೊ ಒಬ್ಬನು ನಿಜವಾಗಿ ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟು, ಸ್ವರ್ಗೀಯ ಜೀವಿತಕ್ಕೆ ಕರೆಯಲ್ಪಟ್ಟಿರುವನೊ ಇಲ್ಲವೊ ಎಂಬುದು ಖಂಡಿತವಾಗಿಯೂ ನಮಗೆ ಬಿಟ್ಟಂತಹ ವಿಷಯವಲ್ಲ. ಯೇಸುವಿನ ದೃಢ ಆಶ್ವಾಸನೆಯನ್ನು ಜ್ಞಾಪಿಸಿಕೊಳ್ಳಿರಿ: “ನಾನೇ ಒಳ್ಳೆಯ ಕುರುಬನು, ಮತ್ತು ನನಗೆ ನನ್ನ ಕುರಿಗಳ ಪರಿಚಯವಿದೆ.” ಅಷ್ಟೇ ಖಂಡಿತವಾಗಿ, ಯೆಹೋವನಿಗೆ ಆತ್ಮಿಕ ಪುತ್ರರಾಗಿ ತಾನು ಆರಿಸಿಕೊಂಡಿರುವವರು ಯಾರೆಂಬುದು ಗೊತ್ತಿದೆ. ಮುಪ್ಪಿನ ವಯಸ್ಸು ಮತ್ತು ಮುನ್ನರಿಯದಿರುವ ಸಂಭವಗಳು ಅವರ ಭೂಜೀವಿತಗಳನ್ನು ಅಂತ್ಯಗೊಳಿಸಿದಂತೆ, ಅಭಿಷಿಕ್ತರ ಸಂಖ್ಯೆಯು ಕಡಿಮೆಯಾಗುವುದೆಂದು ನಂಬಲು ಸಕಾರಣವಿದೆ. ಆದರೂ, ಜೀವದ ಕಿರೀಟವನ್ನು ಪಡೆಯುವುದಕ್ಕೆ ಮುನ್ನೋಡುತ್ತಾ, ನಿಜವಾಗಿಯೂ ಅಭಿಷೇಕಿಸಲ್ಪಟ್ಟ ಈ ಜನರು ಮರಣದ ವರೆಗೆ ನಂಬಿಗಸ್ತರಾಗಿ ಪರಿಣಮಿಸುವಾಗ, ಬೇರೆ ಕುರಿಗಳು—ಕುರಿಮರಿಯ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡಿರುವವರು—ಆಸನ್ನವಾಗಿರುವ ಮಹಾ ಸಂಕಟವನ್ನು ಪಾರಾಗಿ ಉಳಿಯುವುದಕ್ಕೆ ಎದುರುನೋಡಸಾಧ್ಯವಿದೆ.—2 ತಿಮೊಥೆಯ 4:6-8; ಪ್ರಕಟನೆ 2:10.
[ಪಾದಟಿಪ್ಪಣಿ]
a 1965, ಮಾರ್ಚ್ 15ರ ದ ವಾಚ್‌ಟವರ್ ಪತ್ರಿಕೆ, ಪುಟಗಳು 191-2ನ್ನು ನೋಡಿರಿ.