ರಕ್ತಕ್ಕಿರುವ ಬದಲಿಗಳನ್ನು ವಿಶೇಷಜ್ಞರು ಪರಿಗಣಿಸುತ್ತಾರೆ
ಶನಿವಾರ, 1995, ಅಕ್ಟೋಬರ್ 7ರಂದು, ಅಮೆರಿಕದ ಸುತ್ತಮುತ್ತಲಿನಿಂದ ಸರಿಸುಮಾರಾಗಿ 200 ಮಂದಿ ವಿಶೇಷಜ್ಞರು ಒಹಾಯೊವಿನ ಕ್ಲೀವ್ಲೆಂಡ್ನಲ್ಲಿ, ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚುತ್ತಿರುವ ಆಸಕ್ತಿಯ ಒಂದು ವಿಷಯ—ರಕ್ತರಹಿತ ಔಷಧ ಮತ್ತು ಶಸ್ತ್ರಚಿಕಿತ್ಸೆ—ವನ್ನು ಚರ್ಚಿಸಲು ಕೂಡಿಬಂದರು.
ಹಲವಾರು ಕಷ್ಟಕರ ಪರಿಸ್ಥಿತಿಗಳು ಚರ್ಚಿಸಲ್ಪಟ್ಟವು. ಉದಾಹರಣೆಗೆ, ರೋಗಿಯೊಬ್ಬನು ತೀವ್ರವಾದ ರಕ್ತಹೀನತೆಯಿಂದ ಬಾಧೆಪಡುವಲ್ಲಿ, ಆಗೇನು? ಅತಿ ಅಕಾಲಿಕವಾಗಿ ಹುಟ್ಟಿರುವ ಒಂದು ಮಗುವನ್ನು ರಕ್ತವಿಲ್ಲದೆ ಹೇಗೆ ಉಪಚರಿಸಸಾಧ್ಯವಿದೆ? ರಕ್ತ ಪೂರಣಗಳಿಲ್ಲದೆ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಸಾಧ್ಯವಿದೆಯೊ? ಸ್ವಾರಸ್ಯಕರವಾಗಿ, ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು—ತನ್ನ ಸ್ವಂತ ರಕ್ತದ ಸರಬರಾಯಿಯನ್ನು ಹೆಚ್ಚಿಸಿಕೊಳ್ಳುವಂತೆ ದೇಹಕ್ಕೆ ಸಹಾಯ ಮಾಡುವಂತಹ ತಂತ್ರಗಳನ್ನು ಅನೇಕ ವೇಳೆ ಉಪಯೋಗಿಸುತ್ತಾ—ಈ ಎಲ್ಲ ಸನ್ನಿವೇಶಗಳಲ್ಲಿ ಒಳ್ಳೆಯ ಪರಿಣಾಮಗಳೊಂದಿಗೆ ಈಗಾಗಲೇ ಅನ್ವಯಿಸಲಾಗಿದೆ.a
ರಕ್ತ ಪೂರಣಗಳಿಗೆ ಬದಲಿಗಳ ಒಂದು ಅಗತ್ಯವಿರುವುದು ಏಕೆ? “ರಕ್ತ ಪೂರಣಗಳು ಅನೇಕ ವೇಳೆ ರೋಗಗಳನ್ನು, ವಿಶೇಷವಾಗಿ ಯಕೃತ್ತಿನ ಊತವನ್ನು ಸಾಗಿಸುತ್ತವೆ ಎಂಬುದಾಗಿ ನಾವು ಕಲಿತಿದ್ದೇವೆ,” ಎಂದು ಶ್ಯಾರನ್ ವರ್ನನ್, ಕ್ಲೀವ್ಲೆಂಡ್ನಲ್ಲಿ ಸೆಂಟ್ ವಿನ್ಸೆಂಟ್ ಚ್ಯಾರಿಟಿ ಆಸ್ಪತ್ರೆಯಲ್ಲಿ, ರಕ್ತರಹಿತ ಔಷಧ ಮತ್ತು ಶಸ್ತ್ರಚಿಕಿತ್ಸೆಗಾಗಿರುವ ಕೇಂದ್ರದ ನಿರ್ದೇಶಕರು ಹೇಳುತ್ತಾರೆ. ಅವರು ಮುಂದುವರಿಸುವುದು: “ರಕ್ತವು ಒಂದು ಸೋಂಕನ್ನು ಸಾಗಿಸದಿದ್ದಾಗಲೂ, ಅದು ರೋಗಿಯ ಸೋಂಕು ರಕ್ಷಾ ಪ್ರತಿಕ್ರಿಯೆಯನ್ನು ನಿಗ್ರಹಿಸಬಲ್ಲದು.” ರಕ್ತದ ಸ್ಕ್ರೀನಿಂಗ್ ಮುಖಾಂತರ ಏಯ್ಡ್ಸ್ನ ಸಾಗಿಸುವಿಕೆಯು ಕಡಿಮೆಗೊಳಿಸಲ್ಪಟ್ಟಿದೆಯಾದರೂ, ಇಂತಹ ಪರೀಕ್ಷೆಗಳ ಮೂಲಕ ಗುರುತಿಸಲ್ಪಡದೇ ಹೋಗಬಲ್ಲ ಇನ್ನೂ ಅನೇಕ ರೋಗಗಳಿವೆ. ಮತ್ತು ಹೆಚ್ಚಿನ ತಯಾರಿಗಾಗಿರುವ ಅಗತ್ಯದ ಹೊರತೂ, ರಕ್ತರಹಿತ ಶಸ್ತ್ರಚಿಕಿತ್ಸೆಯು ಆಸ್ಪತ್ರೆಗಳಿಗೆ ಮಿತವ್ಯಯವುಳ್ಳದ್ದಾಗಿ ಪರಿಣಮಿಸುತ್ತದೆ, ಏಕೆಂದರೆ ರೋಗಿಗಳು ಕಳಂಕಿತ ರಕ್ತವನ್ನು ಪಡೆಯುವಾಗ ಪರಿಣಮಿಸಬಹುದಾದ ಶಾಸನಾನುಗುಣವಾದ ಸಮಸ್ಯೆಗಳನ್ನು ಅದು ತೆಗೆದುಹಾಕುತ್ತದೆ.
ಯೆಹೋವನ ಸಾಕ್ಷಿಗಳಿಗೆ, ರಕ್ತವನ್ನು ತೆಗೆದುಕೊಳ್ಳುವುದನ್ನು ವಿಸರ್ಜಿಸಲಿಕ್ಕಾಗಿ ಹೆಚ್ಚು ಪ್ರಾಮುಖ್ಯವಾದ ಕಾರಣವೊಂದಿದೆ: ದೇವರ ನಿಯಮವು ಅದನ್ನು ನಿಷೇಧಿಸುತ್ತದೆ. (ಅ. ಕೃತ್ಯಗಳು 15:29) ಆದರೂ, ಸಾಧ್ಯವಿರುವ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಅವರು ಬಯಸುತ್ತಾರೆ. ಹೀಗೆ, ಅರಕ್ತ ವೈದ್ಯಕೀಯ ಚಿಕಿತ್ಸೆಯಲ್ಲಿನ ಸಂಶೋಧನೆಯಲ್ಲಿ ನುಗ್ಗುಮೊನೆಯಾಗಿರುವ ವೈದ್ಯರೊಂದಿಗೆ ಅವರು ಸಹಕರಿಸಿದ್ದಾರೆ. ಇಂತಹ ಚಿಕಿತ್ಸೆಯು ಯೆಹೋವನ ಸಾಕ್ಷಿಗಳಿಗೆ ಮಾತ್ರವಲ್ಲ, ರಕ್ತ ಪೂರಣಗಳ ಅಪಾಯಗಳ ಕುರಿತು ಚಿಂತಿತರಾಗಿರುವ ಇತರ ಅನೇಕರಿಗೂ ಪ್ರಯೋಜನಕರವಾಗಿರುತ್ತದೆ.
[ಪಾದಟಿಪ್ಪಣಿ]
a ಎಚ್ಚರ! ಪತ್ರಿಕೆಯ ಸಂಚಿಕೆಗಳಾದ ಮಾರ್ಚ್ 8, 1994, ಪುಟಗಳು 26-8, ಮತ್ತು ಫೆಬ್ರವರಿ 8, 1996, ಪುಟ 31ನ್ನು ನೋಡಿರಿ.
[ಪುಟ 32 ರಲ್ಲಿರುವ ಚಿತ್ರ ಕೃಪೆ]
WHO photo by P. Almasy