ಎಪಫ್ರೊದೀತ ಫಿಲಿಪ್ಪಿಯವರ ಪ್ರತಿನಿಧಿ
“ಅವನನ್ನು ಪೂರ್ಣ ಸಂತೋಷದಿಂದ ಕರ್ತನ ಹೆಸರಿನಲ್ಲಿ ಸೇರಿಸಿಕೊಳ್ಳಿರಿ. ಅಂಥವರನ್ನು ಮಾನ್ಯರೆಂದೆಣಿಸಿರಿ,” ಎಂಬುದಾಗಿ ಪೌಲನು ಫಿಲಿಪ್ಪಿಯವರಿಗೆ ಬರೆದನು. ಕ್ರೈಸ್ತ ಮೇಲ್ವಿಚಾರಕನೊಬ್ಬನು ನಮ್ಮ ಕುರಿತು ಇಂತಹ ಅಭಿನಂದನಾಪೂರ್ವಕವಾದ ಮಾತುಗಳನ್ನಾಡುವಲ್ಲಿ, ನಾವು ಸಂತೋಷಿಸುವೆವು ಎಂಬುದರಲ್ಲಿ ಸಂದೇಹವಿಲ್ಲ. (ಫಿಲಿಪ್ಪಿ 2:29) ಆದರೆ ಪೌಲನು ಯಾರ ಕುರಿತು ಮಾತಾಡುತ್ತಿದ್ದನು? ಮತ್ತು ಇಂತಹ ಆದರಣೀಯ ಶಿಫಾರಸ್ಸಿಗೆ ಅರ್ಹನಾಗಲು ಆ ವ್ಯಕ್ತಿಯು ಏನನ್ನು ಮಾಡಿದ್ದನು?
ಮೊದಲನೆಯ ಪ್ರಶ್ನೆಗೆ ಉತ್ತರವು, ಎಪಫ್ರೊದೀತ ಆಗಿದೆ. ಎರಡನೆಯದನ್ನು ಉತ್ತರಿಸಲು, ಈ ಮಾತುಗಳನ್ನು ಬರೆಯುವಂತೆ ಪೌಲನನ್ನು ಪ್ರಚೋದಿಸಿದ ಸನ್ನಿವೇಶಗಳನ್ನು ನಾವು ಪರಿಗಣಿಸೋಣ.
ಹೆಚ್ಚುಕಡಮೆ ಸಾ.ಶ. 58ರಲ್ಲಿ, ಪೌಲನು ದೇವಾಲಯದ ಹೊರಗೆ ಎಳೆದುಕೊಂಡು ಹೋಗಲ್ಪಟ್ಟು, ಯೆರೂಸಲೇಮಿನಲ್ಲಿನ ಒಂದು ದುಷ್ಟ ಗುಂಪಿನ ಮೂಲಕ ಹೊಡೆಯಲ್ಪಟ್ಟಿದ್ದನೆಂದು, ಅಧಿಕಾರಿಗಳಿಂದ ದಸ್ತಗಿರಿ ಮಾಡಲ್ಪಟ್ಟಿದ್ದನೆಂದು, ಮತ್ತು ಒಂದು ನಿರ್ಣಯವಿಹೀನ ಬಂಧನದ ತರುವಾಯ, ರೋಮ್ಗೆ ಬೇಡಿಗಳಲ್ಲಿ ಸ್ಥಳಾಂತರಿಸಲ್ಪಟ್ಟಿದ್ದನೆಂದು ಫಿಲಿಪ್ಪಿಯವರು ಕೇಳಿ ತಿಳಿದುಕೊಂಡರು. (ಅ. ಕೃತ್ಯಗಳು 21:27-33; 24:27; 27:1) ಅವನ ಕ್ಷೇಮದ ಕುರಿತು ಚಿಂತಿತರಾಗಿದ್ದ ಫಿಲಿಪ್ಪಿಯವರು, ಅವನಿಗಾಗಿ ತಾವು ಏನು ಮಾಡಸಾಧ್ಯವಿತ್ತೆಂದು ತಮ್ಮನ್ನೇ ಕೇಳಿಕೊಂಡಿರಬೇಕು. ಅವರು ಪ್ರಾಪಂಚಿಕವಾಗಿ ಬಡವರೂ ಪೌಲನಿಂದ ದೂರದಲ್ಲಿರುವವರೂ ಆಗಿದ್ದರು, ಆದುದರಿಂದ ಅವರು ಕೊಡಸಾಧ್ಯವಿದ್ದ ಸಹಾಯವು ಸೀಮಿತವಾಗಿತ್ತು. ಆದರೂ, ಗತಕಾಲದಲ್ಲಿ ಅವನ ಶುಶ್ರೂಷೆಯನ್ನು ಬೆಂಬಲಿಸುವಂತೆ ಫಿಲಿಪ್ಪಿಯವರನ್ನು ಪ್ರೇರೇಪಿಸಿದ್ದ ಆ ಬೆಚ್ಚನೆಯ ಭಾವನೆಯು ಅವರನ್ನು ಇನ್ನೂ ಪ್ರಚೋದಿಸುತ್ತಾ ಇತ್ತು; ಅವನೊಂದು ಕಠಿನ ಸನ್ನಿವೇಶದಲ್ಲಿದ್ದ ಕಾರಣ, ಅದು ಇನ್ನೂ ಹೆಚ್ಚಾಗಿತ್ತು.—2 ಕೊರಿಂಥ 8:1-4; ಫಿಲಿಪ್ಪಿ 4:16.
ಅವರಲ್ಲಿ ಒಬ್ಬನು ಪೌಲನನ್ನು ಒಂದು ಕೊಡುಗೆಯೊಂದಿಗೆ ಸಂದರ್ಶಿಸಿ, ಅವನಿಗೆ ಏನಾದರೂ ಬೇಕಾದಲ್ಲಿ ನೆರವು ನೀಡಸಾಧ್ಯವಿತ್ತೊ, ಎಂಬುದನ್ನು ಫಿಲಿಪ್ಪಿಯವರು ಪರಿಗಣಿಸಿದ್ದಿರಬೇಕು. ಆದರೆ ಅದೊಂದು ದೀರ್ಘವಾದ ಹಾಗೂ ಬಳಲಿಸುವ ಪ್ರಯಾಣವಾಗಿತ್ತು, ಮತ್ತು ಅವನಿಗೆ ನೆರವು ನೀಡುವುದು ಅಪಾಯಕಾರಿಯಾಗಿರಬಹುದಿತ್ತು! ಯೊಆಕಿಮ್ ಗ್ನಿಲ್ಕಾ ಗಮನಿಸುವುದು: “ಕೈದಿಯೊಬ್ಬನನ್ನು ಸಂದರ್ಶಿಸಲು ಧೈರ್ಯವು ಬೇಕಾಗಿತ್ತು, ಮತ್ತು ಯಾರ ‘ಅಪರಾಧ’ವು ಅತಿ ಅಸ್ಪಷ್ಟವಾಗಿ ಪ್ರತಿಬಿಂಬಿಸಲ್ಪಟ್ಟಿರುವಂತೆ ತೋರಿತೊ, ಅಂಥವನನ್ನು ಸಂದರ್ಶಿಸಲು ವಿಶೇಷವಾಗಿ ಧೈರ್ಯವು ಬೇಕಾಗಿತ್ತು.” ಬರಹಗಾರ ಬ್ರೈಅನ್ ರ್ಯಾಪ್ಸ್ಕೀ ಹೇಳುವುದು: “ಕೇವಲ ಕೈದಿಯೊಂದಿಗೆ ಅನ್ಯೋನ್ಯವಾಗಿ ಸಹವಸಿಸುವ ಅಥವಾ ಅವನ ದೃಷ್ಟಿಕೋನಗಳ ಕಡೆಗೆ ಸಹಾನುಭೂತಿಯುಳ್ಳವರಾಗಿರುವುದರ ಹೆಚ್ಚಿನ ಅಪಾಯವು ಇತ್ತು. . . . ಒಂದು ಆಕಸ್ಮಿಕ ಮಾತು ಅಥವಾ ಕ್ರಿಯೆಯು ಕೈದಿಯ ಮರಣಕ್ಕೆ ಮಾತ್ರವಲ್ಲ ಸಹಾಯಕನ ಮರಣಕ್ಕೂ ನಡೆಸೀತು.” ಫಿಲಿಪ್ಪಿಯವರು ಯಾರನ್ನು ಕಳುಹಿಸಸಾಧ್ಯವಿತ್ತು?
ಈ ಬಗೆಯ ಒಂದು ಪ್ರಯಾಣವು ಚಿಂತೆ ಮತ್ತು ಅನಿಶ್ಚಿತತೆಯನ್ನು ಕೆರಳಿಸಿದ್ದಿರಲು ಸಾಧ್ಯವೆಂದು ನಾವು ಚೆನ್ನಾಗಿ ಊಹಿಸಿಕೊಳ್ಳಬಹುದು, ಆದರೆ ಎಪಫ್ರೊದೀತನು (ಕೊಲೊಸ್ಸೆಯ ಎಪಫ್ರನೆಂದು ತಪ್ಪಾಗಿ ಗ್ರಹಿಸಿಕೊಳ್ಳಬಾರದು) ಆ ಕಷ್ಟಕರ ಕಾರ್ಯವನ್ನು ಕೈಕೊಳ್ಳಲು ಸಿದ್ಧನಾಗಿದ್ದನು. ಆ್ಯಫ್ರಡೈಟಿ ಎಂಬ ಹೆಸರನ್ನು ಒಳಗೊಳ್ಳುವ ಅವನ ಹೆಸರಿನ ಮೇಲೆ ತೀರ್ಮಾನಿಸುತ್ತಾ, ಅವನು ಕ್ರೈಸ್ತತ್ವಕ್ಕೆ ಮತಾಂತರಿಸಿದ ಒಬ್ಬ ಅನ್ಯಜನಾಂಗದವನಾಗಿದ್ದಿರಬಹುದು—ಪ್ರೇಮ ಮತ್ತು ಫಲಶಕ್ತಿಯ ಆ ಗ್ರೀಕ್ ದೇವತೆಗೆ ದೃಢ ನಿಷ್ಠೆಯುಳ್ಳವರಾಗಿದ್ದ ಹೆತ್ತವರ ಪುತ್ರನು. ತಮ್ಮ ಔದಾರ್ಯಕ್ಕಾಗಿ ಫಿಲಿಪ್ಪಿಯವರಿಗೆ ಉಪಕಾರ ಸಲ್ಲಿಸಲು ಪೌಲನು ಅವರಿಗೆ ಬರೆದಾಗ, ಅವನು ಸರಿಯಾಗಿಯೇ ಎಪಫ್ರೊದೀತನನ್ನು “ನಿಮ್ಮ ಪ್ರತಿನಿಧಿ ಮತ್ತು ನನ್ನ ಅಗತ್ಯಕ್ಕಾಗಿರುವ ಖಾಸಗಿ ಸೇವಕ”ನೆಂದು ವರ್ಣಿಸಸಾಧ್ಯವಿತ್ತು.—ಫಿಲಿಪ್ಪಿ 2:25, NW.
ಎಪಫ್ರೊದೀತನ ಕುರಿತಾಗಿ ಬೈಬಲ್ ಹೇಳುವ ವಿಷಯದಿಂದ ನಾವು, ಪೌಲ ಹಾಗೂ ತನ್ನ ಸ್ವಂತ ಸಭೆಗಾಗಿ ಈ ಸೇವೆಯಲ್ಲಿ ತನ್ನನ್ನು ಉಪಯೋಗಿಸಿಕೊಳ್ಳಲಿಕ್ಕಾಗಿದ್ದ ಅವನ ಪ್ರಶಂಸನೀಯ ಸಿದ್ಧತೆಯ ಹೊರತು, ನಮಗಿರಬಹುದಾದ ಅದೇ ರೀತಿಯ ಸಮಸ್ಯೆಗಳು ಎಪಫ್ರೊದೀತನಿಗಿದ್ದವು ಎಂಬುದನ್ನು ಅರ್ಥಮಾಡಿಕೊಳ್ಳಲು ಶಕ್ತರಾಗಿದ್ದೇವೆ. ಅವನ ಉದಾಹರಣೆಯನ್ನು ನಾವು ಪರಿಗಣಿಸೋಣ.
“ನನ್ನ ಅಗತ್ಯಕ್ಕಾಗಿರುವ ಖಾಸಗಿ ಸೇವಕ”
ನಮಗೆ ವಿವರಗಳು ತಿಳಿದಿರುವುದಿಲ್ಲ, ಆದರೆ ಎಪಫ್ರೊದೀತನು ತನ್ನ ಪ್ರಯಾಣದಿಂದ ಬಳಲಿ, ರೋಮ್ಗೆ ಆಗಮಿಸಿದನೆಂದು ನಾವು ಕಲ್ಪಿಸಿಕೊಳ್ಳಸಾಧ್ಯವಿದೆ. ಅವನು ಬಹುಶಃ ವೀಆ ಎಗ್ನಾಟೀಆ—ಮ್ಯಾಸಡೋನಿಯದ ಅಡ್ಡಹಾಯ್ದಿರುವ ಒಂದು ರೋಮನ್ ರಸ್ತೆಯ ಉದ್ದಕ್ಕೂ ಪ್ರಯಾಣಿಸಿದನು. ಅವನು ಆ್ಯಡ್ರಿಯಾಟಿಕ್ ಸಮುದ್ರವನ್ನು ದಾಟಿ, ಇಟ್ಯಾಲಿಯನ್ ದ್ವೀಪ ಕಲ್ಪದ “ಹಿಮ್ಮಡಿ”ಗೆ ಬಂದು, ನಂತರ ರೋಮಿನಿಂದ ಆ್ಯಡ್ರಿಯಾಟಿಕ್ನ ವರೆಗೆ ವಿಸ್ತರಿಸುವ ಹೆದ್ದಾರಿಯ ಮುಖಾಂತರ ರೋಮಿಗೆ ಹೋಗಿರಸಾಧ್ಯವಿದೆ. ಅದೊಂದು ಬಳಲಿಸುವ ಪ್ರಯಾಣ (ಒಂದು ದಿಕ್ಕಿನಲ್ಲಿ 1,200 ಕಿಲೊಮೀಟರುಗಳು)ವಾಗಿದ್ದು, ಬಹುಶಃ ಒಂದು ತಿಂಗಳಿಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು.—ಪುಟ 29ರಲ್ಲಿರುವ ರೇಖಾಚೌಕವನ್ನು ನೋಡಿರಿ.
ಯಾವ ಮಾನಸಿಕ ಮನೋಭಾವದೊಂದಿಗೆ ಎಪಫ್ರೊದೀತನು ಈ ಕಾರ್ಯವನ್ನು ಆರಂಭಿಸಿದನು? ಅವನು ಪೌಲನಿಗೆ ಒಂದು “ಖಾಸಗಿ ಸೇವೆ”ಯನ್ನು ಅಥವಾ ಲಿಟರ್ಜೀಯಾ ಅನ್ನು ಸಲ್ಲಿಸಲು ಕಳುಹಿಸಲ್ಪಟ್ಟಿದ್ದನು. (ಫಿಲಿಪ್ಪಿ 2:30, NW) ಈ ಗ್ರೀಕ್ ಶಬ್ದವು ಮೂಲತಃ, ರಾಜ್ಯಕ್ಕಾಗಿ ಒಬ್ಬ ಪ್ರಜೆಯ ಮೂಲಕ ಸ್ವಇಚ್ಛೆಯಿಂದ ಕೈಕೊಳ್ಳಲ್ಪಡುವ ಕೆಲಸಕ್ಕೆ ಸೂಚಿಸಿತು. ತದನಂತರ ಅದು, ಅದನ್ನು ಮಾಡಲು ವಿಶೇಷವಾಗಿ ಅರ್ಹರಾಗಿದ್ದ ಪ್ರಜೆಗಳಿಂದ ರಾಜ್ಯವು ಕಡ್ಡಾಯವಾಗಿ ಕೇಳಿಕೊಳ್ಳುವಂತಹ ರೀತಿಯ ಸೇವೆಯನ್ನು ಅರ್ಥೈಸಲು ಉಪಯೋಗಿಸಲ್ಪಟ್ಟಿತು. ಗ್ರೀಕ್ ಶಾಸ್ತ್ರವಚನಗಳಲ್ಲಿ ಈ ಶಬ್ದದ ಬಳಕೆಯ ಕುರಿತು ಒಬ್ಬ ವಿದ್ವಾಂಸನು ಹೇಳುವುದು: “ಕ್ರೈಸ್ತನು ದೇವರು ಮತ್ತು ಮನುಷ್ಯರಿಗಾಗಿ ಕೆಲಸಮಾಡುವ ಒಬ್ಬ ಮನುಷ್ಯನಾಗಿದ್ದಾನೆ, ಪ್ರಥಮವಾಗಿ ಏಕೆಂದರೆ, ತನ್ನ ಪೂರ್ಣ ಹೃದಯದಿಂದ ಹಾಗೆ ಮಾಡಲು ಅವನು ಅಪೇಕ್ಷಿಸುತ್ತಾನೆ, ಮತ್ತು ಎರಡನೆಯದಾಗಿ, ಹಾಗೆ ಮಾಡುವಂತೆ ಅವನು ಒತ್ತಾಯಿಸಲ್ಪಡುತ್ತಾನೆ, ಏಕೆಂದರೆ ಕ್ರಿಸ್ತನ ಪ್ರೀತಿಯು ಅವನನ್ನು ನಿರ್ಬಂಧಪಡಿಸುತ್ತದೆ.” ಹೌದು, ಎಪಫ್ರೊದೀತನು ಎಂತಹ ಅತ್ಯುತ್ಕೃಷ್ಟವಾದ ಆತ್ಮವನ್ನು ತೋರಿಸಿದನು!
‘ತನ್ನ ಪ್ರಾಣವನ್ನು ಅವನು ಅಪಾಯಕ್ಕೆ ಒಡ್ಡಿದನು’
ಜೂಜಾಟದ ಭಾಷೆಯಿಂದ ಎರವಲು ಪಡೆದ ಒಂದು ಶಬ್ದವನ್ನು ಉಪಯೋಗಿಸುತ್ತಾ, ಎಪಫ್ರೊದೀತನು ‘ತನ್ನ ಪ್ರಾಣವನ್ನು ಅಪಾಯಕ್ಕೆ ಒಡ್ಡಿದ್ದನು [ಪಾರಾಬೊಲ್ಯೂಸಮಿನೊಸ್]’ ಅಥವಾ ಪದಶಃ, ಕ್ರಿಸ್ತನ ಸೇವೆಗಾಗಿ ತನ್ನ ಜೀವದೊಂದಿಗೆ “ಜೂಜಾಡಿದ್ದನು” ಎಂಬುದಾಗಿ ಪೌಲನು ಹೇಳುತ್ತಾನೆ. (ಫಿಲಿಪ್ಪಿ 2:30, NW) ಎಪಫ್ರೊದೀತನು ಯಾವುದೊ ಅವಿವೇಕದ ವಿಷಯವನ್ನು ಮಾಡಿದನೆಂದು ಆಲೋಚಿಸುವ ಅಗತ್ಯ ನಮಗಿಲ್ಲ; ಬದಲಿಗೆ, ಅವನ ಪವಿತ್ರ ಸೇವೆಯ ಪೂರೈಸುವಿಕೆಯು ನಿರ್ದಿಷ್ಟವಾದೊಂದು ಗಂಡಾಂತರವನ್ನು ಒಳಗೊಂಡಿತ್ತು. ಪರಿಹಾರ ಕಾರ್ಯವನ್ನು ಅವನು ವರ್ಷದ ಕಠಿನ ಸಮಯದಲ್ಲಿ ಮಾಡಲು ಬಹುಶಃ ಪ್ರಯತ್ನಿಸಿದನೊ? ದಾರಿಯಲ್ಲಿ ಎಲ್ಲಿಯೊ ಅಸ್ವಸ್ಥಗೊಂಡ ತರುವಾಯ, ಸಂಚಾರವನ್ನು ಪೂರ್ತಿಗೊಳಿಸುವ ಪ್ರಯತ್ನದಲ್ಲಿ ಅವನು ಪಟ್ಟುಹಿಡಿದನೊ? ಏನೇ ಆಗಲಿ, ಎಪಫ್ರೊದೀತನು “ಬಹುಮಟ್ಟಿಗೆ ಸಾಯುವ ಮಟ್ಟಕ್ಕೆ ರೋಗಗ್ರಸ್ಥನಾದನು.” ಬಹುಶಃ ಪೌಲನ ಸೇವೆಮಾಡಲು ಇನ್ನೂ ಸ್ವಲ್ಪಕಾಲ ತಂಗಲು ಅವನು ಉದ್ದೇಶಿಸಿದನು, ಆದುದರಿಂದ ನಿರೀಕ್ಷಿಸಿದ್ದಕ್ಕಿಂತ ಮುಂಚಿತವಾಗಿ ಎಪಫ್ರೊದೀತನು ಏಕೆ ಹಿಂದಿರುಗಬೇಕಿತ್ತೆಂಬುದನ್ನು ವಿವರಿಸಲು ಅಪೊಸ್ತಲನು ಬಯಸಿದನೆಂಬುದು ಸುವ್ಯಕ್ತ.—ಫಿಲಿಪ್ಪಿ 2:27, NW.
ಹಾಗಿದ್ದರೂ, ಎಪಫ್ರೊದೀತನು ಅಗತ್ಯದಲ್ಲಿರುವವರಿಗೆ ನೆರವನ್ನು ತರುವ ಸಲುವಾಗಿ ತನ್ನನ್ನು ನಿಸ್ವಾರ್ಥವಾಗಿ ಒಡ್ಡಿಕೊಳ್ಳಲು ಸಿದ್ಧನಾಗಿದ್ದ ಒಬ್ಬ ಧೈರ್ಯವಂತ ವ್ಯಕ್ತಿಯಾಗಿದ್ದನು.
ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬಹುದು, ‘ಕಷ್ಟಕರ ಸನ್ನಿವೇಶಗಳಲ್ಲಿರುವ ನನ್ನ ಆತ್ಮಿಕ ಸಹೋದರರಿಗೆ ನೆರವಾಗಲು ನಾನು ಎಷ್ಟರ ಮಟ್ಟಿಗೆ ಪ್ರಯಾಸಪಡುವೆ?’ ಸಿದ್ಧತೆಯ ಇಂತಹ ಆತ್ಮವು ಕ್ರೈಸ್ತರಿಗೆ ಐಚ್ಛಿಕವಾದದ್ದಲ್ಲ. ಯೇಸು ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.” (ಓರೆಅಕ್ಷರಗಳು ನಮ್ಮವು.) (ಯೋಹಾನ 13:34) ಎಪಫ್ರೊದೀತನು ತನ್ನ ಸೇವೆಯನ್ನು “ಬಹುಮಟ್ಟಿಗೆ ಸಾಯುವ ಮಟ್ಟಕ್ಕೆ” ನೆರವೇರಿಸಿದನು. ಹಾಗಾದರೆ ಎಪಫ್ರೊದೀತನು, ಫಿಲಿಪ್ಪಿಯವರು ಪಡೆದಿರುವಂತೆ ಪೌಲನು ಉತ್ತೇಜಿಸಿದಂತಹ “ಮಾನಸಿಕ ಮನೋಭಾವ”ವನ್ನು ಪಡೆದಿದ್ದ ಒಬ್ಬ ವ್ಯಕ್ತಿಯ ಉದಾಹರಣೆಯಾಗಿದ್ದನು. (ಫಿಲಿಪ್ಪಿ 2:5, 8, 30, ಕಿಂಗ್ಡಂ ಇಂಟರ್ಲೀನಿಯರ್) ಅಷ್ಟರ ಮಟ್ಟಿಗೆ ಹೋಗಲು ನಾವು ಸಿದ್ಧರಾಗಿರುವೆವೊ?
ಆದರೂ, ಎಪಫ್ರೊದೀತನು ಖಿನ್ನನಾದನು. ಏಕೆ?
ಅವನ ಖಿನ್ನತೆ
ನಿಮ್ಮನ್ನು ಎಪಫ್ರೊದೀತನ ಸ್ಥಾನದಲ್ಲಿರಿಸಿಕೊಳ್ಳಿರಿ. ಪೌಲನು ವರದಿಸಿದ್ದು: “ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು, ಮತ್ತು ತಾನು ಅಸ್ವಸ್ಥನಾಗಿದ್ದ ವರ್ತಮಾನವನ್ನು ನೀವು ಕೇಳಿದ್ದರಿಂದ ವ್ಯಸನ [“ಖಿನ್ನ,” NW]ಪಟ್ಟನು.” (ಫಿಲಿಪ್ಪಿ 2:26) ತಾನು ಅಸ್ವಸ್ಥನಾಗಿದ್ದು, ಅವರು ನಿರೀಕ್ಷಿಸಿದ್ದ ವಿಧದಲ್ಲಿ ಪೌಲನಿಗೆ ನೆರವಾಗಲು ಶಕ್ತನಾಗಿರಲಿಲ್ಲವೆಂದು ತನ್ನ ಸಭೆಯಲ್ಲಿದ್ದ ಸಹೋದರರಿಗೆ ಗೊತ್ತಿತ್ತೆಂದು ಎಪಫ್ರೊದೀತನು ಬಲ್ಲವನಾಗಿದ್ದನು. ವಾಸ್ತವವಾಗಿ, ಎಪಫ್ರೊದೀತನು ಪೌಲನಿಗೆ ಹೆಚ್ಚು ಚಿಂತೆಗಳನ್ನು ಸೃಷ್ಟಿಸಿದ್ದನೆಂದು ತೋರಬಹುದು. ಪೌಲನ ಸಂಗಾತಿಯಾದ, ವೈದ್ಯ ಲೂಕನು, ಎಪಫ್ರೊದೀತನ ಕಾಳಜಿ ವಹಿಸಲು ಇತರ ವಿಷಯಗಳನ್ನು ಕಡೆಗಣಿಸಬೇಕಾಗಿತ್ತೊ?—ಫಿಲಿಪ್ಪಿ 2:27, 28; ಕೊಲೊಸ್ಸೆ 4:14.
ಬಹುಶಃ ಫಲಸ್ವರೂಪವಾಗಿ, ಎಪಫ್ರೊದೀತನು ಖಿನ್ನನಾದನು. ತನ್ನ ಸಭೆಯಲ್ಲಿದ್ದ ಸಹೋದರರು ತನ್ನನ್ನು ಅಸಮರ್ಥನೆಂದು ಪರಿಗಣಿಸುತ್ತಿದ್ದರೆಂದು ಅವನು ಪ್ರಾಯಶಃ ಊಹಿಸಿದನು. ಬಹುಶಃ ಅವನಿಗೆ ತಪ್ಪಿತಸ್ಥ ಅನಿಸಿಕೆಯಾಗುತ್ತಿತ್ತು ಮತ್ತು ತನ್ನ ನಂಬಿಗಸ್ತಿಕೆಯ ಕುರಿತಾಗಿ ಅವರಿಗೆ ಪುನರಾಶ್ವಾಸನೆಯನ್ನು ನೀಡಲಿಕ್ಕಾಗಿ ಅವರನ್ನು ನೋಡಲು “ಹಂಬಲಿಸುತ್ತಿದ್ದನು.” ಎಪಫ್ರೊದೀತನ ಪರಿಸ್ಥಿತಿಯನ್ನು ವರ್ಣಿಸಲು ಪೌಲನು ಬಹಳ ಬಲವಾದ ಗ್ರೀಕ್ ಪದ, ಆ್ಯಡಿಮೊನಿಯೊ, “ಖಿನ್ನನಾಗಿರು” ಎಂಬುದನ್ನು ಉಪಯೋಗಿಸಿದನು. ವಿದ್ವಾಂಸ ಜೆ. ಬಿ. ಲೈಟ್ಫೂಟ್ಗನುಸಾರ, ಈ ಪದವು “ಶಾರೀರಿಕ ಅಸ್ತವ್ಯಸ್ತತೆಯಿಂದ ಅಥವಾ ದುಃಖ, ಅಪಮಾನ, ನಿರಾಶೆ, ಮುಂತಾದ ಮಾನಸಿಕ ಸಂಕಟದಿಂದ ಉಂಟುಮಾಡಲ್ಪಟ್ಟಿರುವ ಗಲಿಬಿಲಿಯ, ಚಡಪಡಿಸುವ, ಅರ್ಧ-ಗೊಂದಲಗೊಂಡ ಸ್ಥಿತಿಯನ್ನು” ಸೂಚಿಸಬಲ್ಲದು. ಗ್ರೀಕ್ ಶಾಸ್ತ್ರವಚನಗಳಲ್ಲಿ ಈ ಶಬ್ದದ ಮತ್ತೊಂದೇ ಒಂದು ಬಳಕೆಯು, ಗೆತ್ಸೇಮನೆ ತೋಟದಲ್ಲಿ ಯೇಸುವಿನ ತೀವ್ರವಾದ ವ್ಯಥೆಗೆ ಸಂಬಂಧಿಸುತ್ತದೆ.—ಮತ್ತಾಯ 26:37.
ತಮ್ಮ ಪ್ರತಿನಿಧಿಯ ಅನಿರೀಕ್ಷಿತ ಹಿಂದಿರುಗುವಿಕೆಯನ್ನು ವಿವರಿಸುವ ಒಂದು ಪತ್ರದೊಂದಿಗೆ ಎಪಫ್ರೊದೀತನನ್ನು ಪುನಃ ಫಿಲಿಪ್ಪಿಗೆ ಕಳುಹಿಸುವುದೇ ಅತ್ಯುತ್ತಮವಾದ ವಿಷಯವಾಗಿರುವುದೆಂದು ಪೌಲನು ತೀರ್ಮಾನಿಸಿದನು. “ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವದು ಅವಶ್ಯವೆಂದು ನೆನಸಿದ್ದೇನೆ,” ಎಂದು ಹೇಳುವುದರಲ್ಲಿ, ಪೌಲನು ಅವನ ಹಿಂದಿರುಗುವಿಕೆಗಾಗಿ ಹೊಣೆಯನ್ನು ವಹಿಸಿಕೊಳ್ಳುತ್ತಾ, ಹೀಗೆ ಎಪಫ್ರೊದೀತನು ವಿಫಲನಾಗಿದ್ದನೆಂಬ ಯಾವುದೇ ಸಂಭವನೀಯ ಸಂಶಯವನ್ನು ದೂರಮಾಡುತ್ತಾನೆ. (ಫಿಲಿಪ್ಪಿ 2:25) ಇದಕ್ಕೆ ವೈದೃಶ್ಯವಾಗಿ, ತನ್ನ ಕಾರ್ಯವನ್ನು ಪೂರ್ಣಗೊಳಿಸುವ ಸಲುವಾಗಿ ಎಪಫ್ರೊದೀತನು ಬಹುಮಟ್ಟಿಗೆ ತನ್ನ ಜೀವವನ್ನು ಕಳೆದುಕೊಂಡನು! “ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕಡಿಮೆಯಾದದ್ದನ್ನು ಪೂರ್ತಿಮಾಡುವದಕ್ಕಾಗಿ ಅವನು ಜೀವದ ಆಶೆಯನ್ನು ಲಕ್ಷ್ಯಮಾಡದೆ ಕ್ರಿಸ್ತನ ಕೆಲಸದ ನಿಮಿತ್ತ ಸಾಯುವ ಹಾಗಿದ್ದನೆಂದು ನೀವು ತಿಳಿದು ಅವನನ್ನು ಪೂರ್ಣ ಸಂತೋಷದಿಂದ ಕರ್ತನ ಹೆಸರಿನಲ್ಲಿ ಸೇರಿಸಿಕೊಳ್ಳಿರಿ. ಅಂಥವರನ್ನು ಮಾನ್ಯರೆಂದೆಣಿಸಿರಿ,” ಎಂಬುದಾಗಿ ಅವರಿಗೆ ಪೌಲನು ಆದರಣೀಯ ಶಿಫಾರಸ್ಸನ್ನು ನೀಡುತ್ತಾನೆ.—ಫಿಲಿಪ್ಪಿ 2:29, 30.
“ಅಂಥವರನ್ನು ಮಾನ್ಯರೆಂದೆಣಿಸಿರಿ”
ಎಪಫ್ರೊದೀತನಂತಹದ್ದೇ ಆದ ಮಾನಸಿಕ ಮನೋಭಾವವನ್ನು ಪಡೆದಿರುವ ಪುರುಷರು ಮತ್ತು ಸ್ತ್ರೀಯರು ನಿಜವಾಗಿಯೂ ಗಣ್ಯಮಾಡಲ್ಪಡಬೇಕು. ಸೇವೆಮಾಡುವ ಸಲುವಾಗಿ ಅವರು ತಮ್ಮನ್ನೇ ಅರ್ಪಿಸಿಕೊಳ್ಳುತ್ತಾರೆ. ಮಿಷನೆರಿಗಳು, ಸಂಚರಣ ಮೇಲ್ವಿಚಾರಕರು, ಅಥವಾ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸುಗಳಲ್ಲಿ ಒಂದರಲ್ಲಿರುವ, ಮನೆಯಿಂದ ದೂರವಾಗಿ, ಸೇವೆಮಾಡಲು ತಮ್ಮನ್ನು ಅರ್ಪಿಸಿಕೊಂಡಿರುವವರ ಕುರಿತಾಗಿ ಯೋಚಿಸಿರಿ. ತಾವು ಒಮ್ಮೆ ಮಾಡಿದಂತೆ ಈಗ ಮಾಡುವುದರಿಂದ ವಯಸ್ಸು ಅಥವಾ ಕುಗ್ಗುತ್ತಿರುವ ಆರೋಗ್ಯವು ಕೆಲವರನ್ನು ತಡೆಯುವುದಾದರೆ, ಹಲವಾರು ವರ್ಷಗಳ ನಂಬಿಗಸ್ತ ಸೇವೆಗಾಗಿ ಅವರು ಗೌರವ ಹಾಗೂ ಮಾನ್ಯತೆಗೆ ಅರ್ಹರಾಗಿದ್ದಾರೆ.
ಹಾಗಿದ್ದರೂ, ನಿತ್ರಾಣಗೊಳಿಸುವ ಒಂದು ಅನಾರೋಗ್ಯವು ಖಿನ್ನತೆ ಅಥವಾ ತಪ್ಪಿತಸ್ಥ ಭಾವನೆಗಳ ಮೂಲವಾಗಿರಬಹುದು. ಒಬ್ಬನು ಹೆಚ್ಚನ್ನು ಮಾಡಲು ಬಯಸುವನು. ಎಷ್ಟು ಆಶಾಭಂಗಮಾಡುವಂತಹದ್ದು! ಇಂತಹ ಒಂದು ಸನ್ನಿವೇಶದಲ್ಲಿ ತಮ್ಮನ್ನು ಕಂಡುಕೊಳ್ಳುವ ಯಾವನೇ ವ್ಯಕ್ತಿಯು, ಎಪಫ್ರೊದೀತನಿಂದ ಕಲಿಯಸಾಧ್ಯವಿದೆ. ಎಷ್ಟೆಂದರೂ, ಅವನು ರೋಗಗ್ರಸ್ಥನಾದದ್ದು ಅವನ ತಪ್ಪಾಗಿತ್ತೊ? ಖಂಡಿತವಾಗಿಯೂ ಅಲ್ಲ! (ಆದಿಕಾಂಡ 3:17-19; ರೋಮಾಪುರ 5:12) ಎಪಫ್ರೊದೀತನು ದೇವರ ಮತ್ತು ತನ್ನ ಸಹೋದರರ ಸೇವೆಮಾಡಲು ಅಪೇಕ್ಷಿಸಿದನು, ಆದರೆ ರೋಗವು ಅವನನ್ನು ಸೀಮಿತಗೊಳಿಸಿತು.
ಅವನ ಕಾಯಿಲೆಯ ಕಾರಣ ಪೌಲನು ಎಪಫ್ರೊದೀತನನ್ನು ಗದರಿಸಲಿಲ್ಲ, ಬದಲಿಗೆ ಅವನ ಪಕ್ಕದಲ್ಲಿ ಒತ್ತಾಗಿ ಉಳಿಯುವಂತೆ ಫಿಲಿಪ್ಪಿಯವರಿಗೆ ಹೇಳಿದನು. ತದ್ರೀತಿಯಲ್ಲಿ, ನಮ್ಮ ಸಹೋದರರು ಎದೆಗುಂದಿರುವಾಗ ನಾವು ಅವರಿಗೆ ಸಾಂತ್ವನ ನೀಡಬೇಕು. ಸಾಮಾನ್ಯವಾಗಿ ಸೇವೆಯ ಅವರ ನಂಬಿಗಸ್ತ ಮಾದರಿಗಾಗಿ ನಾವು ಅವರನ್ನು ಪ್ರಶಂಸಿಸಬಲ್ಲೆವು. ಪೌಲನು ಅವನ ಕುರಿತು ಅಷ್ಟು ಒಳ್ಳೆಯದಾಗಿ ಮಾತಾಡುತ್ತಾ, ಎಪಫ್ರೊದೀತನನ್ನು ಗಣ್ಯಮಾಡಿದನೆಂಬ ನಿಜತ್ವವು, ಅವನ ಖಿನ್ನತೆಯನ್ನು ಕಡಮೆಮಾಡುತ್ತಾ ಅವನನ್ನು ಸಾಂತ್ವನಗೊಳಿಸಿದ್ದಿರಬೇಕು. ‘ನಾವು ದೇವಜನರಿಗೆ ಉಪಚಾರ ಮಾಡಿದ್ದೇವೆ, ಇನ್ನೂ ಮಾಡುತ್ತಾ ಇದ್ದೇವೆ. ಈ ಕೆಲಸವನ್ನೂ ಇದರಲ್ಲಿ ನಾವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ದೇವರು ಮರೆಯುವದಕ್ಕೆ ಅನ್ಯಾಯಸ್ಥನಲ್ಲ,’ ಎಂಬ ವಿಷಯದಲ್ಲಿ ನಾವು ಸಹ ಖಚಿತರಾಗಿರಬಲ್ಲೆವು.—ಇಬ್ರಿಯ 6:10.
[ಪುಟ 29 ರಲ್ಲಿರುವ ಚೌಕ]
ಪ್ರಯಾಣದ ಅನಾನುಕೂಲತೆಗಳು
ಇಂದಿನ ದಿನಗಳಲ್ಲಿ—ಎಪಫ್ರೊದೀತನಿಂದ ಕೈಕೊಳ್ಳಲ್ಪಟ್ಟ ಪ್ರಯಾಣಕ್ಕೆ ಸಮಾನವಾದ—ಯೂರೋಪಿನ ಎರಡು ಪ್ರಮುಖ ನಗರಗಳ ನಡುವಿನ ಒಂದು ಪ್ರಯಾಣವು, ಬಹಳಷ್ಟು ಪ್ರಯತ್ನವನ್ನು ಕೇಳಿಕೊಳ್ಳಲಿಕ್ಕಿಲ್ಲ. ಸಂಚಾರವನ್ನು ಹಾಯಾಗಿ ಜೆಟ್ ವಿಮಾನವೊಂದರಲ್ಲಿ, ಒಂದು ಅಥವಾ ಎರಡು ತಾಸುಗಳಲ್ಲಿ ಮುಗಿಸಸಾಧ್ಯವಿದೆ. ಪ್ರಥಮ ಶತಮಾನದಲ್ಲಿ ಇಂತಹ ಒಂದು ಪ್ರಯಾಣವನ್ನು ಮಾಡುವುದು ಸಂಪೂರ್ಣವಾಗಿ ಭಿನ್ನವಾದ ಒಂದು ಕಥೆಯಾಗಿತ್ತು. ಆ ಸಮಯದಲ್ಲಿ, ಸ್ಥಳದಿಂದ ಸ್ಥಳಕ್ಕೆ ಸಂಚರಿಸುವುದು ಅನಾನುಕೂಲತೆಯನ್ನು ಅರ್ಥೈಸಿತು. ಪ್ರಯಾಣಿಕನೊಬ್ಬನು—ತನ್ನನ್ನು ಹವಾಮಾನ ಮತ್ತು “ಕಳ್ಳ”ರನ್ನು ಸೇರಿಸಿ, ವಿವಿಧ ಅಪಾಯಗಳಿಗೆ ಒಡ್ಡಿಕೊಳ್ಳುತ್ತಿರುವಾಗ, ಕಾಲ್ನಡಿಗೆಯಲ್ಲಿ ಒಂದು ದಿನಕ್ಕೆ 30ರಿಂದ 35 ಕಿಲೊಮೀಟರುಗಳನ್ನು ಆವರಿಸಸಾಧ್ಯವಿತ್ತು.—2 ಕೊರಿಂಥ 11:26.
ರಾತ್ರಿಯಲ್ಲಿ ಉಳಿದುಕೊಳ್ಳುವ ಸ್ಥಳಗಳು ಮತ್ತು ಆಹಾರದ ಸರಬರಾಯಿಗಳ ಕುರಿತೇನು?
ಇತಿಹಾಸಕಾರ ಮೈಕಲ್ಆ್ಯಂಜಲೊ ಕಾಜಾನೊ ಡಿ ಆಸೆವೇಡೊ ಸೂಚಿಸುವುದೇನೆಂದರೆ, ರೋಮನ್ ರಸ್ತೆಗಳ ಉದ್ದಕ್ಕೂ “ಸರಬರಾಯಿಗಳು, ಲಾಯಗಳು, ಮತ್ತು ತಮ್ಮ ಸಿಬ್ಬಂದಿಗಾಗಿ ವಸತಿಗಳುಳ್ಳ ಸಂಪೂರ್ಣವಾದ ಹೋಟೆಲುಗಳು, ಮಾನ್ಸ್ಯೋನೆಸ್ ಇದ್ದವು; ಅನುಗೂಡಿ ಬರುವ ಎರಡು ಮಾನ್ಸ್ಯೋನೆಸ್ನ ನಡುವೆ, ಹಲವಾರು ಮೂಟಾಟ್ಯೋನೆಸ್, ಅಥವಾ ನಿಲುಗಡೆಯ ಬಿಂದುಗಳು ಇದ್ದವು, ಅಲ್ಲಿ ಒಬ್ಬನು ಕುದುರೆಗಳನ್ನು ಅಥವಾ ವಾಹನಗಳನ್ನು ಬದಲಾಯಿಸಿ, ಸರಬರಾಯಿಗಳನ್ನು ಕಂಡುಕೊಳ್ಳಸಾಧ್ಯವಿತ್ತು.” ಈ ಹೋಟೆಲುಗಳು ಸಾಮಾಜಿಕ ವರ್ಗಗಳಲ್ಲಿ ಅತ್ಯಂತ ಕೀಳ್ದರ್ಜೆಯ ಜನರಿಂದ ಸಂದರ್ಶಿಸಲ್ಪಡುತ್ತಿದ್ದ ಕಾರಣ, ಇವುಗಳಿಗೆ ಬಹಳ ಕೆಟ್ಟ ಹೆಸರಿತ್ತು. ಪ್ರಯಾಣಿಕರಿಂದ ದೋಚಿಕೊಳ್ಳುವುದರ ಜೊತೆಗೆ, ಪ್ರವಾಸಿ ಗೃಹದ ಯಜಮಾನರು ಅನೇಕ ವೇಳೆ ತಮ್ಮ ವರಮಾನದೊಂದಿಗೆ ವೇಶ್ಯೆಯರಿಂದ ಬಂದ ಸಂಪಾದನೆಗಳನ್ನು ಕೂಡಿಸಿದರು. ಲ್ಯಾಟಿನ್ ವಿಡಂಬನಾ ಕವಿಯಾದ ಜೂವೆನಾಲ್ ಹೇಳಿಕೆಯನ್ನಿತ್ತದ್ದೇನೆಂದರೆ, ಆ ರೀತಿಯ ಒಂದು ಹೋಟೆಲಿನಲ್ಲಿ ತಂಗುವಂತೆ ತಾನು ನಿರ್ಬಂಧಗೊಳಿಸಲ್ಪಟ್ಟಿದ್ದೇನೆಂದು ಕಂಡುಕೊಳ್ಳುವ ಯಾವನೇ ವ್ಯಕ್ತಿಯು, ತಾನು “ಒಬ್ಬ ಕೊಲೆಗೇಡಿಯ ಪಕ್ಕದಲ್ಲಿ ಮಲಗಿರುವುದನ್ನು, ಅಂಬಿಗರು, ಕಳ್ಳರು, ಮತ್ತು ತಪ್ಪಿಸಿಕೊಂಡ ಗುಲಾಮರ ಸಹವಾಸದಲ್ಲಿರುವುದನ್ನು, ಗಲ್ಲಿಗೇರಿಸುವವರು ಮತ್ತು ಶವಸಂಪುಟವನ್ನು ಮಾಡುವವರ ಪಕ್ಕದಲ್ಲಿ ಮಲಗಿರುವುದನ್ನು” ಕಂಡುಕೊಂಡಿರಬಹುದು, “. . . ಎಲ್ಲರೂ ಒಂದೇ ಬಟ್ಟಲನ್ನು ಉಪಯೋಗಿಸುತ್ತಾರೆ; ಯಾರಿಗೂ ತನಗಾಗಿ ಒಂದು ಹಾಸಿಗೆ ಅಥವಾ ಉಳಿದವರಿಂದ ಪ್ರತ್ಯೇಕವಾದ ಒಂದು ಮೇಜು ಇರುವುದಿಲ್ಲ.” ಇತರ ಪ್ರಾಚೀನ ಬರಹಗಾರರು, ನಿರ್ಮಲವಾಗಿರದ ಕುಡಿಯುವ ನೀರು ಮತ್ತು ಜನನಿಬಿಡವಾದ, ಕೊಳಕಾದ, ಒದ್ದೆಯಾದ, ಮತ್ತು ಚಿಗಟದಿಂದ ತುಂಬಿರುವ ಕೋಣೆಗಳ ಕುರಿತು ಪ್ರಲಾಪಿಸಿದರು.
[ಪುಟ 27ರಲ್ಲಿರುವಚಿತ್ರ/ಚಿತ್ರಗಳು]
ರೋಮ್
[ಚಿತ್ರ]
ರೋಮನ್ ಸಮಯಗಳಲ್ಲಿನ ಒಬ್ಬ ಪ್ರಯಾಣಿಕ
[ಚಿತ್ರ]
Map: Mountain High Maps® Copyright © 1995 Digital Wisdom, Inc.; Traveler: Da originale del Museo della Civiltà Romana, Roma