ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 11/1 ಪು. 25-29
  • ‘ನೊಂದ ಆತ್ಮ’ವಿರುವವರಿಗೆ ಸಾಂತ್ವನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ನೊಂದ ಆತ್ಮ’ವಿರುವವರಿಗೆ ಸಾಂತ್ವನ
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ನಿಗ್ರಹಿಸಲ್ಪಟ್ಟ ಸ್ಮರಣೆಗಳು”
  • ಅದು ನಿಜವಾಗಿ ಸಂಭವಿಸಿತ್ತೋ?
  • ಒಂದು ಆಶ್ರಯವನ್ನು ಒದಗಿಸುವುದು
  • ಆತ್ಮಿಕವಾಗಿ ದೃಢರಾಗಿ ಉಳಿಯಿರಿ
  • ಅಪಪ್ರಯೋಗಿಸಿದ ಆರೋಪಿಯ ಕುರಿತೇನು?
  • ಹಿರಿಯರು ಏನು ಮಾಡಬಲ್ಲರು?
  • ಪಿಶಾಚನನ್ನು ಪ್ರತಿರೋಧಿಸುವುದು
  • “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ದುಷ್ಕೃತ್ಯ ನಡೆದಾಗ ಪ್ರೀತಿ ಮತ್ತು ನ್ಯಾಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ದೌರ್ಜನ್ಯಕ್ಕೆ ಒಳಗಾದವರನ್ನು ಸಂತೈಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಮನೆಯಲ್ಲಿ ಕಿರುಕುಳ—ಮೆಟ್ಟಿನಿಲ್ಲಲು ಸಹಾಯ
    ಇತರ ವಿಷಯಗಳು
ಇನ್ನಷ್ಟು
ಕಾವಲಿನಬುರುಜು—1995
w95 11/1 ಪು. 25-29

‘ನೊಂದ ಆತ್ಮ’ವಿರುವವರಿಗೆ ಸಾಂತ್ವನ

ಇಂದು ಸೈತಾನನ ಜಗತ್ತು “ನೀತಿ ಜ್ಞಾನವೆಲ್ಲವನ್ನು ಕಳೆದುಕೊಂಡ”ದ್ದಾಗಿ ಇದೆ. (ಎಫೆಸ 4:19, NW; 1 ಯೋಹಾನ 5:19) ವ್ಯಭಿಚಾರ ಮತ್ತು ಹಾದರವು ಸರ್ವವ್ಯಾಪಿ ವ್ಯಾಧಿಯಾಗಿದೆ. ಅನೇಕ ದೇಶಗಳಲ್ಲಿ 50 ಪ್ರತಿಶತ ಅಥವಾ ಹೆಚ್ಚು ಮದುವೆಗಳು ವಿಚ್ಛೇದದಲ್ಲಿ ಕೊನೆಗೊಳ್ಳುತ್ತವೆ. ಸಲಿಂಗಿ ಕಾಮವು ವ್ಯಾಪಕವಾಗಿ ಸ್ವೀಕರಿಸಲ್ಪಡುತ್ತದೆ. ಲೈಂಗಿಕ ಹಿಂಸಾಚಾರವು—ಬಲಾತ್ಕಾರ ಸಂಭೋಗ—ಆಗಾಗ್ಗೆ ವಾರ್ತೆಯಲ್ಲಿದೆ. ಲಂಪಟ ಸಾಹಿತ್ಯವು 100 ಕೋಟಿ ಡಾಲರುಗಳ ಒಂದು ಕೈಗಾರಿಕೆಯಾಗಿರುತ್ತದೆ.—ರೋಮಾಪುರ 1:26, 27.

ಅತ್ಯಂತ ತುಚ್ಛ ಕಾಮ ವಕ್ರತೆಗಳಲ್ಲಿ, ಮುಗ್ಧ ಮಕ್ಕಳ ಲೈಂಗಿಕ ಅಪಪ್ರಯೋಗವು ಒಂದಾಗಿದೆ. ಸೈತಾನನ ಜಗತ್ತಿನ ಜ್ಞಾನದಂತೆ, ಮಗುವಿನ ಲೈಂಗಿಕ ಅಪಪ್ರಯೋಗವು “ಪಾಶವೀಯ, ಪೈಶಾಚಿಕ.” (ಯಾಕೋಬ 3:15, NW) ಅಮೆರಿಕ ಒಂದರಲ್ಲಿಯೇ, ಟೈಮ್‌ ಪತ್ರಿಕೆಯು ಹೇಳುವುದು, “ಪ್ರತಿ ವರ್ಷ ಅಧ್ಯಾಪಕರಿಂದ ಮತ್ತು ಡಾಕ್ಟರುಗಳಿಂದ ಅಧಿಕಾರಿಗಳಿಗೆ 4,00,000ಕ್ಕಿಂತಲೂ ಹೆಚ್ಚು ರುಜುವಾತು ಪಡಿಸಬಲ್ಲ ಲೈಂಗಿಕ ಆಕ್ರಮಣಗಳ ದೂರುಗಳು ಸಿಗುತ್ತವೆ.” ಈ ಅಪಪ್ರಯೋಗದ ಬಲಿಪಶುಗಳು ಪ್ರೌಢರಾಗುವಾಗ, ಅನೇಕರು ಇನ್ನೂ ನೋವಿನ ಗಾಯಗಳನ್ನು ಒಯ್ಯುತ್ತಾರೆ ಮತ್ತು ಆ ಗಾಯಗಳು ನೈಜವಾಗಿವೆ! ಬೈಬಲು ಹೇಳುವುದು: “ಆತ್ಮವು [ಮಾನಸಿಕ ಪ್ರವೃತ್ತಿ, ಆಂತರಿಕ ಭಾವನೆ ಮತ್ತು ವಿಚಾರಗಳು] ವ್ಯಾಧಿಯನ್ನು ಸಹಿಸಬಲ್ಲದು, ಆತ್ಮವೇ ನೊಂದರೆ [ಗಾಯಗೊಂಡರೆ, ಬಾಧಿತವಾದರೆ] ಸಹಿಸುವವರು ಯಾರು?”—ಜ್ಞಾನೋಕ್ತಿ 18:14.

ದೇವರ ರಾಜ್ಯದ ಸುವಾರ್ತೆಯು ಎಲ್ಲ ವಿಧದ ಜನರಿಗೆ, “ಮನಮುರಿದವ”ರಿಗೆ ಮತ್ತು “ಕುಂದಿದ ಮನ”ದವರಿಗೂ, ಹಿಡಿಸುತ್ತದೆ. (ಯೆಶಾಯ 61:1-4) ಮಾನಸಿಕ ನೋವುಳ್ಳವರಾದ ಅನೇಕರು ಈ ಆಮಂತ್ರಣಕ್ಕೆ ಪ್ರತಿಕ್ರಿಯೆ ತೋರಿಸುವುದು ಆಶ್ಚರ್ಯವಲ್ಲ: “ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕಟನೆ 22:17) ಇವರಿಗೆ ಕ್ರೈಸ್ತ ಸಭೆಯು ಒಂದು ಸಾಂತ್ವನದ ಸ್ಥಳವಾಗಿರಬಲ್ಲದು. ಕಷ್ಟಾನುಭವಗಳು ಬೇಗನೆ ಗತಿಸಿಹೋಗುವವೆಂದು ಕಲಿಯಲು ಅವರು ಉಲ್ಲಾಸಪಡುತ್ತಾರೆ. (ಯೆಶಾಯ 65:17) ಆ ಸಮಯದ ತನಕವಾದರೋ, ಅವರಿಗೆ ‘ಸಂತೈಸಲ್ಪಡ’ಬೇಕಾದ ಮತ್ತು ಅವರ ಗಾಯಗಳು ‘ಕಟ್ಟ’ಲ್ಪಡಬೇಕಾದ ಅಗತ್ಯವಿರಬಹುದು. ಸೂಕ್ತವಾಗಿಯೇ ಪೌಲನು ಕ್ರೈಸ್ತರಿಗೆ ಬುದ್ಧಿ ಹೇಳಿದ್ದು: “ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರಲ್ಲಿಯೂ ದೀರ್ಘಶಾಂತರಾಗಿರಿ.”—1 ಥೆಸಲೊನೀಕ 5:14.

“ನಿಗ್ರಹಿಸಲ್ಪಟ್ಟ ಸ್ಮರಣೆಗಳು”

ಇತ್ತೀಚಿನ ವರ್ಷಗಳಲ್ಲಿ ಕೆಲವರು ಇತರರಿಗೆ ತಿಳಿದುಕೊಳ್ಳಲು ಕಷ್ಟಕರವಾದ ಕಾರಣಗಳಿಂದಾಗಿ “ಮನಮುರಿದವ”ರಾಗಿದ್ದಾರೆ. ಯಾವುದು “ನಿಗ್ರಹಿಸಲ್ಪಟ್ಟ ಸ್ಮರಣೆಗಳು” ಎಂದು ವಿವರಿಸಲ್ಪಡುತ್ತದೋ ಅದರ ಆಧಾರದ ಮೇಲೆ, ತಾವು ಚಿಕ್ಕ ಮಕ್ಕಳಾಗಿದ್ದಾಗ ಲೈಂಗಿಕವಾಗಿ ಅಪಪ್ರಯೋಗಿಸಲ್ಪಟ್ಟೆವೆಂದು ಈ ಪ್ರಾಪ್ತವಯಸ್ಕ ಜನರು ಹೇಳುತ್ತಾರೆ.a ಆ ತನಕ ತಾವು ಲೈಂಗಿಕವಾಗಿ ಪೀಡಿಸಲ್ಪಟ್ಟ ಯಾವ ವಿಚಾರವೂ ಅವರಿಗೆ ಇರುವುದಿಲ್ಲ, ಅನಂತರ ಒಮ್ಮೆಲೇ, ಚಿಕ್ಕಂದಿನಲ್ಲಿ ಒಬ್ಬ ವಯಸ್ಕ ವ್ಯಕ್ತಿ (ಅಥವಾ ವಯಸ್ಕ ವ್ಯಕ್ತಿಗಳು) ತಮ್ಮನ್ನು ಅಪಪ್ರಯೋಗಿಸಿದ ಹಿಂದಣ ಕ್ಷಣ ಚಿತ್ರಗಳು ಮತ್ತು “ಸ್ಮರಣೆಗಳು” ಅವರಿಗೆ ಹಿಂದಿರುಗಿ ಬರುತ್ತವೆ. ಕ್ರೈಸ್ತ ಸಭೆಯಲ್ಲಿ ಯಾರಿಗಾದರೂ ಅಂತಹ ಮನಕಲಕಿಸುವ ಯೋಚನೆಗಳಿವೆಯೇ? ಕೆಲವು ದೇಶಗಳಲ್ಲಿ ಇವೆ, ಹೌದು, ಮತ್ತು ಈ ಸಮರ್ಪಿತ ಜನರು ಆಳವಾದ ಬೇಗುದಿ, ಕ್ರೋಧ, ಅಪರಾಧ, ನಾಚಿಕೆ, ಅಥವಾ ಒಂಟಿತನವನ್ನು ಅನುಭವಿಸಬಹುದು. ಅವರಿಗೆ ದಾವೀದನಂತೆ, ದೇವರಿಂದ ಒಂಟಿಯಾಗಿ ಬಿಡಲ್ಪಟ್ಟ ಅನುಭವವಾಗಬಹುದು ಮತ್ತು ಅವರು ಹೀಗೆ ಕೂಗಬಹುದು: “ಯೆಹೋವನೇ, ನೀನು ಯಾಕೆ ದೂರವಾಗಿ ನಿಂತಿದ್ದೀ; ಕಷ್ಟಕಾಲದಲ್ಲಿ ಯಾಕೆ ಮರೆಯಾಗುತ್ತೀ?”—ಕೀರ್ತನೆ 10:1.

ಈ “ಸ್ಮರಣೆಗಳ” ಅನೇಕ ವಿಷಯಾಂಶಗಳು ಮನೋಶಾಸ್ತ್ರ ಪರಿಣತರಿಗೆ ಚೆನ್ನಾಗಿ ತಿಳಿದಿರುವುದಿಲ್ಲ. ಆದರೂ, ಅಂತಹ “ಸ್ಮರಣೆಗಳು” ಸಮರ್ಪಿತ ಕ್ರೈಸ್ತರ ಆತ್ಮಿಕತೆಯನ್ನು ಬಾಧಿಸಬಲ್ಲವು. ಆದುದರಿಂದ ಅವನ್ನು ನಿರ್ವಹಿಸುವುದರಲ್ಲಿ ಮಾರ್ಗದರ್ಶನಕ್ಕಾಗಿ ದೇವರ ವಾಕ್ಯಕ್ಕೆ ನಾವು ಭರವಸೆಯಿಂದ ನೋಡುತ್ತೇವೆ. “ಎಲ್ಲಾದರಲ್ಲೂ . . . ವಿವೇಕವನ್ನು” ಬೈಬಲು ಒದಗಿಸುತ್ತದೆ. (2 ತಿಮೊಥೆಯ 2:7; 3:16) ಸಂಬಂಧಪಟ್ಟವರೆಲ್ಲರು “ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸು”ವ ಯೆಹೋವ ದೇವರಲ್ಲಿ ನಂಬಿಕೆಯನ್ನಿಡಲು ಸಹ ಅದು ಸಹಾಯ ಮಾಡುತ್ತದೆ.—2 ಕೊರಿಂಥ 1:3, 4.

ಅದು ನಿಜವಾಗಿ ಸಂಭವಿಸಿತ್ತೋ?

ಈ “ಸ್ಮರಣೆಗಳು” ಯಾವುವು ಮತ್ತು ಅವು ಕಾರ್ಯತಃ ಸಂಭವಿಸಿದ ಸಂಗತಿಗಳನ್ನು ಎಷ್ಟರ ಮಟ್ಟಿಗೆ ಪ್ರತಿನಿಧಿಸುತ್ತವೆಂಬ ವಿಷಯದಲ್ಲಿ ಲೋಕದಲ್ಲಿ ಬಹಳ ವಾಗ್ವಾದವಿದೆ. ಯೆಹೋವನ ಸಾಕ್ಷಿಗಳು ‘ಈ ಲೋಕದ ಭಾಗವಾಗಿಲ್ಲ’ ಮತ್ತು ಈ ವಾಗ್ವಾದದಲ್ಲಿ ಅವರು ಯಾವ ಪಾಲನ್ನೂ ತೆಗೆದುಕೊಳ್ಳುವುದಿಲ್ಲ. (ಯೋಹಾನ 17:16, NW) ಪ್ರಕಾಶಿತ ವರದಿಗಳಿಗೆ ಅನುಸಾರವಾಗಿ, “ಸ್ಮರಣೆಗಳು” ಕೆಲವೊಮ್ಮೆ ನಿಜವಾದವುಗಳಾಗಿ ಪರಿಣಮಿಸಿವೆ. ದೃಷ್ಟಾಂತಕ್ಕೆ, ಇನ್ಶೂರೆನ್ಸ್‌ ನಷ್ಟ ಅಂದಾಜುಗಾರ ಫ್ರ್ಯಾಂಕ್‌ ಫಿಟ್ಸ್‌ಪ್ಯಾಟ್ರಿಕ್‌, ಒಬ್ಬ ನಿರ್ದಿಷ್ಟ ಪಾದ್ರಿಯಿಂದ ಲೈಂಗಿಕವಾಗಿ ಪೀಡಿಸಲ್ಪಟ್ಟದ್ದನ್ನು “ನೆನಪಿಸಿ”ಕೊಂಡಾಗ, ಅದೇ ಪಾದ್ರಿಯಿಂದ ತಾವೂ ಅಪಪ್ರಯೋಗಿಸಲ್ಪಟ್ಟಿದ್ದೇವೆಂದು ಹೇಳಿಕೊಳ್ಳಲು ಸುಮಾರು ಒಂದು ನೂರು ಮಂದಿ ಬೇರೆಯವರು ಮುಂದೆಬಂದರು. ಪಾದ್ರಿಯು ಅಪಪ್ರಯೋಗ ಮಾಡಿದ್ದಾಗಿ ಒಪ್ಪಿಕೊಂಡನೆಂದು ಹೇಳಲಾಗಿದೆ.

ಆದರೂ, ಅನೇಕ ವ್ಯಕ್ತಿಗಳು ತಮ್ಮ “ಸ್ಮರಣೆಗಳ”ನ್ನು ದೃಢೀಕರಿಸಲು ಅಶಕ್ತರಾಗಿರುವುದು ಗಮನಾರ್ಹವಾಗಿದೆ. ಈ ರೀತಿಯಲ್ಲಿ ಬಾಧಿತರಾದ ಕೆಲವರಿಗೆ ಒಬ್ಬ ನಿರ್ದಿಷ್ಟ ವ್ಯಕ್ತಿಯು ಅಪಪ್ರಯೋಗ ಗೈದಿರುವ ಅಥವಾ ವಿಶಿಷ್ಟ ಸ್ಥಳದಲ್ಲಿ ಆ ಅಪಪ್ರಯೋಗವು ನಡಿಸಲ್ಪಟ್ಟ ಸ್ಪಷ್ಟವಾಗಿದ ಜ್ಞಾಪಕವಿತ್ತು. ಆದರೂ ಅನಂತರ, ಸಪ್ರಮಾಣವಾದ ಪ್ರತಿಕೂಲ ಪುರಾವೆಯು ಈ “ನೆನಪಿಸಲ್ಪಟ್ಟ” ವಿವರಗಳು ಸತ್ಯವಾಗಿರಸಾಧ್ಯವಿಲ್ಲವೆಂಬುದನ್ನು ಸೃಷ್ಟಗೊಳಿಸಿತು.

ಒಂದು ಆಶ್ರಯವನ್ನು ಒದಗಿಸುವುದು

ಆದರೂ, ಅಂತಹ “ಸ್ಮರಣೆಗಳ” ಕಾರಣ ‘ನೊಂದ ಆತ್ಮ’ವನ್ನು ಅನುಭವಿಸುವವರಾದ ಜನರಿಗೆ ಸಾಂತ್ವನವನ್ನು ಹೇಗೆ ಕೊಡಸಾಧ್ಯವಿದೆ? ಸ್ನೇಹಭಾವದ ಸಮಾರ್ಯದವನ ಕುರಿತ ಯೇಸುವಿನ ಸಾಮ್ಯವನ್ನು ನೆನಪಿಸಿರಿ. ಒಬ್ಬಾನೊಬ್ಬ ಮನುಷ್ಯನು ಕಳ್ಳರ ಕೈಗೆ ಸಿಕ್ಕಿದನು, ಹೊಡೆಯಲ್ಪಟ್ಟನು, ಮತ್ತು ಅವನ ಸ್ವತ್ತುಗಳನ್ನು ಸುಲಿಯಲಾಯಿತು. ಒಬ್ಬ ಸಮಾರ್ಯದವನು ಆ ದಾರಿಯಾಗಿ ಬಂದಾಗ ಗಾಯಗೊಂಡ ಈ ಮನುಷ್ಯನನ್ನು ಕಂಡು ಕನಿಕರಪಟ್ಟನು. ಅವನೇನು ಮಾಡಿದನು? ಬಿದ್ದ ಪೆಟ್ಟುಗಳ ಕುರಿತು ಎಲ್ಲ ವಿವರಗಳನ್ನು ಹೇಳುವಂತೆ ಪಟ್ಟುಹಿಡಿದನೋ? ಅಥವಾ ಆ ಸಮಾರ್ಯದವನು ಆ ಕಳ್ಳರ ವರ್ಣನೆಯನ್ನು ಪಡೆದುಕೊಂಡು ಆ ಕೂಡಲೆ ಅವರನ್ನು ಅಟಿಸ್ಟಿಕೊಂಡು ಹೋದನೋ? ಇಲ್ಲ. ಮನುಷ್ಯನಿಗೆ ಗಾಯವಾಗಿತ್ತು! ಆದುದರಿಂದ ಸಮಾರ್ಯದವನು ನಯವಾಗಿ ಅವನ ಗಾಯಗಳನ್ನು ಕಟ್ಟಿ, ಗುಣಹೊಂದುವಂತೆ ಸಮೀಪದ ಒಂದು ಚತ್ರದ ಸುರಕ್ಷೆಗೆ ಪ್ರೀತಿಯಿಂದ ಒಯನ್ದು.—ಲೂಕ 10:30-37.

ದೈಹಿಕ ಗಾಯಗಳು ಮತ್ತು ಕಾರ್ಯತಃ ಬಾಲ್ಯದ ಲೈಂಗಿಕ ಅಪಪ್ರಯೋಗದಿಂದ ಉಂಟಾದ ‘ನೊಂದ ಆತ್ಮ’ದ ನಡುವೆ ಒಂದು ವ್ಯತ್ಯಾಸವಿದೆ ನಿಜ. ಆದರೆ ಎರಡೂ ಅತಿ ನೋವನ್ನು ಉಂಟುಮಾಡುತ್ತವೆ. ಆದಕಾರಣ, ಗಾಯಗೊಂಡ ಯೆಹೂದ್ಯನಿಗೆ ಸಮಾರ್ಯದವನು ಏನು ಮಾಡಿದನೋ ಅದು, ಬಾಧಿತನಾದ ಜೊತೆ ಕ್ರೈಸ್ತನಿಗೆ ಸಹಾಯ ಮಾಡಲು ಏನು ಮಾಡಸಾಧ್ಯವಿದೆಯೆಂಬುದನ್ನು ತೋರಿಸುತ್ತದೆ. ಮೊದಲ ಆದ್ಯತೆಯು ಅವನಿಗೆ ಪ್ರೀತಿಯ ಸಾಂತ್ವನವನ್ನು ಕೊಟ್ಟು, ಅವನು ವಾಸಿಯಾಗುವಂತೆ ನೆರವಾಗುವುದೇ ಆಗಿದೆ.

ಪಿಶಾಚನು ನಂಬಿಗಸ್ತ ಯೋಬನನ್ನು ಬಾಧಿಸಿದನು, ಮಾನಸಿಕ ಅಥವಾ ಶಾರೀರಿಕ ವೇದನೆಯು ಅವನ ಸಮಗ್ರತೆಯನ್ನು ಮುರಿಯುವುದೆಂಬ ಭರವಸೆ ಅವನಿಗಿತ್ತೆಂಬುದು ವ್ಯಕ್ತ. (ಯೋಬ 1:11; 2:5) ಅಂದಿನಿಂದ ಸೈತಾನನು ಆಗಿಂದಾಗ್ಗೆ—ಅವನದನ್ನು ನೇರವಾಗಿ ಆಗಿಸಲಿ, ಆಗಿಸದಿರಲಿ—ಪೀಡೆಯನ್ನು ಕೊಟ್ಟು ದೇವರ ಸೇವಕರ ನಂಬಿಕೆಯನ್ನು ನಿರ್ಬಲಗೊಳಿಸಲು ಪ್ರಯತ್ನಿಸಿದ್ದಾನೆ. (ಹೋಲಿಸಿ 2 ಕೊರಿಂಥ 12:7-9.) ಈಗ ಸೈತಾನನು ಮಕ್ಕಳ ಅಪಪ್ರಯೋಗವನ್ನು ಮತ್ತು ಇದನ್ನು ಅನುಭವಿಸಿದ (ಅಥವಾ ಅದನ್ನು ಅನುಭವಿಸಿದ “ಸ್ಮರಣೆಗಳ” ಮೂಲಕ ಪೀಡಿಸಲ್ಪಡುವ) ಅನೇಕ ವಯಸ್ಕರ “ಮನಮುರಿದ” ಸ್ಥಿತಿಯನ್ನು ಬಳಸಿ, ಕ್ರೈಸ್ತರ ನಂಬಿಕೆಯನ್ನು ನಿರ್ಬಲಗೊಳಿಸಲು ಯತ್ನಿಸುತ್ತಾನೆಂಬುದನ್ನು ನಾವು ಸಂದೇಹಿಸಬಲ್ಲೆವೋ? ಸೈತಾನನ ಆಕ್ರಮಣದ ಕೆಳಗಿರುವಾಗ ಯೇಸು ಮಾಡಿದಂತೆ, ನೋವನ್ನು ಅನುಭವಿಸುವ ಆದರೆ ತನ್ನ ಸಮಗ್ರತೆಯನ್ನು ಬಿಟ್ಟುಬಿಡಲು ಧೈರ್ಯದಿಂದ ನಿರಾಕರಿಸುವ ಕ್ರೈಸ್ತನೊಬ್ಬನು, “ಸೈತಾನನೇ, ನೀನು ತೊಲಗಿಹೋಗು,” ಎಂದು ಹೇಳುತ್ತಾನೆ.—ಮತ್ತಾಯ 4:10.

ಆತ್ಮಿಕವಾಗಿ ದೃಢರಾಗಿ ಉಳಿಯಿರಿ

ಮಕ್ಕಳ ಅಪಪ್ರಯೋಗದಿಂದ ಉಂಟಾದ ಆತ್ಮಿಕ ಮತ್ತು ಮಾನಸಿಕ ನೋವನ್ನು ನಿರ್ವಹಿಸಲು ಸಹಾಯಕ್ಕಾಗಿ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಮಾಹಿತಿಯನ್ನು ಪ್ರಕಾಶಿಸಿದ್ದಾನೆ. (ಮತ್ತಾಯ 24:45-47) ಬಾಧಿತನಾದವನು “ದೇವರು ದಯಪಾಲಿಸುವ ಸರ್ವಾಯುಧಗಳನ್ನು” ಧರಿಸಿಕೊಳ್ಳುತ್ತಾ, ‘ಕರ್ತನ ಮೇಲೂ ಆತನ ಅತ್ಯಧಿಕವಾದ ಶಕ್ತಿಯ ಮೇಲೂ’ ಆತುಕೊಳ್ಳಬಲ್ಲನಾದರೆ ಅವನಿಗೆ ಸಹಾಯ ಸಿಗುತ್ತದೆಂದು ಅನುಭವವು ತೋರಿಸುತ್ತದೆ. (ಎಫೆಸ 6:10-17) ಈ ಸರ್ವಾಯುಧಗಳಲ್ಲಿ ಬೈಬಲಿನ “ಸತ್ಯ” ಸೇರಿರುತ್ತದೆ, ಅದು ಸೈತಾನನನ್ನು ಕೊನೆಯ ಶತ್ರುವಾಗಿ ಬಯಲುಪಡಿಸುತ್ತದೆ ಮತ್ತು ಅವನೂ ಅವನ ಬೆಂಬಲಿಗರೂ ಕಾರ್ಯನಡಿಸುವ ಅಂಧಕಾರವನ್ನು ಓಡಿಸುತ್ತದೆ. (ಯೋಹಾನ 3:19) ಅಲ್ಲದೆ, “ನೀತಿಯೆಂಬ ವಜ್ರಕವಚ” ಇದೆ. ಬಾಧಿತನು ನೀತಿಯ ಮಟ್ಟಗಳನ್ನು ಎತ್ತಿಹಿಡಿಯಲು ಪ್ರಯಾಸಪಡಬೇಕು. ದೃಷ್ಟಾಂತಕ್ಕಾಗಿ ಕೆಲವರಿಗೆ, ತಮಗೆ ಹಾನಿಮಾಡಿಕೊಳ್ಳುವ ಅಥವಾ ಅನೈತಿಕತೆಯನ್ನು ನಡಸುವ ಬಲವಾದ ಪ್ರವೃತ್ತಿಗಳು ಇರುತ್ತವೆ. ಪ್ರತಿ ಸಲ ಈ ಪ್ರವೃತ್ತಿಗಳನ್ನು ಅವರು ಪ್ರತಿಭಟಿಸುವಾಗ, ಅವರೊಂದು ಜಯವನ್ನು ಗಳಿಸುತ್ತಾರೆ!

ಆತ್ಮಿಕ ಸರ್ವಾಯುಧಗಳಲ್ಲಿ “ಸಮಾಧಾನದ ವಿಷಯವಾದ ಸುವಾರ್ತೆ” ಸಹ ಸೇರಿರುತ್ತದೆ. ಯೆಹೋವನ ಉದ್ದೇಶಗಳ ಕುರಿತು ಇತರರಿಗೆ ತಿಳಿಸುವುದು, ಮಾತಾಡುವ ಹಾಗೂ ಕೇಳುವ ಯಾವನನ್ನಾದರೂ ಬಲಪಡಿಸುತ್ತದೆ. (1 ತಿಮೊಥೆಯ 4:16) ‘ನೊಂದ ಆತ್ಮ’ವಿರುವವರು ನೀವಾಗಿದ್ದು ಸುವಾರ್ತೆಯ ಕುರಿತು ಮಾತಾಡುವುದು ನಿಮಗೆ ಕಷ್ಟವಾದಲ್ಲಿ, ಇನ್ನೊಬ್ಬ ಕ್ರೈಸ್ತನು ಈ ಮಹತ್ವದ ಕಾರ್ಯವನ್ನು ಮಾಡುವಾಗ ಅವನು ಅಥವಾ ಅವಳೊಂದಿಗೆ ಜತೆಗೂಡಲು ಪ್ರಯತ್ನ ಮಾಡಿರಿ. ಮತ್ತು ‘ನಂಬಿಕೆಯೆಂಬ ದೊಡ್ಡ ಗುರಾಣಿಯನ್ನು’ ಮರೆಯಬೇಡಿರಿ. ಯೆಹೋವನು ನಿಮ್ಮನ್ನು ಪ್ರೀತಿಸುತ್ತಾನೆಂದೂ ಮತ್ತು ನೀವು ಕಳೆದುಕೊಂಡ ಎಲ್ಲವನ್ನು ಆತನು ಪುನಸ್ಸಾಪ್ಥಿಸುವನೆಂದೂ ನಂಬಿರಿ. ಯೇಸು ಕೂಡ ನಿಮ್ಮನ್ನು ಪ್ರೀತಿಸುತ್ತಾನೆಂದು ನಿಸ್ಸಂಶಯದಿಂದ ನಂಬಿರಿ, ನಿಮಗಾಗಿ ಸಾಯುವ ಮೂಲಕ ಆತನು ಇದನ್ನು ರುಜುಪಡಿಸಿದನು. (ಯೋಹಾನ 3:16) ಯೆಹೋವನು ತನ್ನ ಸೇವಕರನ್ನು ಲಕ್ಷಿಸುವುದಿಲ್ಲ ಎಂದು ಸೈತಾನನು ಯಾವಾಗಲೂ ತಪ್ಪಾಗಿ ವಾದಿಸಿದ್ದಾನೆ. ಅದು ಕೇವಲ ಅವನ ಅಸಹ್ಯಕರ, ಕುತ್ಸಿತ ಸುಳ್ಳುಗಳಲ್ಲಿ ಇನ್ನೊಂದು.—ಯೋಹಾನ 8:44; ಹೋಲಿಸಿ ಯೋಬ 4:1, 15-18; 42:10-15.

ನಿಮ್ಮ ಹೃದಯ ವೇದನೆಯು, ಯೆಹೋವನು ನಿಮ್ಮ ಕುರಿತು ಚಿಂತಿಸುತ್ತಾನೆಂದು ನಂಬುವುದನ್ನು ಕಷ್ಟಗೊಳಿಸಿದರೆ, ಆತನಿಗೆ ಖಂಡಿತವಾಗಿ ಚಿಂತೆಯಿದೆ ಎಂದು ದೃಢವಾಗಿ ನಂಬುವ ಇತರರೊಂದಿಗೆ ಸಹವಾಸಿಸುವುದು ಸಹಾಯಕರವು. (ಕೀರ್ತನೆ 119:107, 111; ಜ್ಞಾನೋಕ್ತಿ 18:1; ಇಬ್ರಿಯ 10:23-25) ಜೀವದ ಕೊಡುಗೆಯನ್ನು ನಿಮ್ಮಿಂದ ಅಪಹರಿಸುವಂತೆ ಸೈತಾನನಿಗೆ ಬಿಟ್ಟುಕೊಡಲು ನಿರಾಕರಿಸಿರಿ. “ರಕ್ಷಣೆಯೆಂಬ ಶಿರಸ್ತ್ರಾಣ” ಸರ್ವಾಯುಧಗಳ ಒಂದು ಭಾಗವೆಂದು ನೆನಪಿಡಿರಿ; ಅಂತೆಯೇ “ಪವಿತ್ರಾತ್ಮನು ಕೊಡುವ . . . ಕತ್ತಿ,” ಇದೆ. ಬೈಬಲು ಪವಿತ್ರಾತ್ಮದಿಂದ ಪ್ರೇರಿತವಾಗಿದೆ, ಅದನ್ನು ಸೈತಾನನು ಸೋಲಿಸಲಾರನು. (2 ತಿಮೊಥೆಯ 3:16; ಇಬ್ರಿಯ 4:12) ಅದರ ವಾಸಿಕಾರಕ ಮಾತುಗಳು ಮಾನಸಿಕ ವೇದನೆಯನ್ನು ಶಮನಗೊಳಿಸಬಲ್ಲವು.—ಹೋಲಿಸಿ ಕೀರ್ತನೆ 107:20; 2 ಕೊರಿಂಥ 10:4, 5.

ಕೊನೆಗೆ, ತಾಳಿಕೊಳ್ಳಲು ಬೇಕಾದ ಬಲಕ್ಕಾಗಿ ಎಡೆಬಿಡದೆ ಪ್ರಾರ್ಥನೆ ಮಾಡಿರಿ. (ರೋಮಾಪುರ 12:12; ಎಫೆಸ 6:18) ತೀವ್ರವಾದ ಮಾನಸಿಕ ವೇದನೆಯಲ್ಲಿ ಹೃತ್ಪೂರ್ವಕ ಪ್ರಾರ್ಥನೆಯು ಯೇಸುವನ್ನು ಬಲಪಡಿಸಿತು, ಅದು ನಿಮಗೂ ನೆರವಾಗಬಲ್ಲದು. (ಲೂಕ 22:41-43) ಪ್ರಾರ್ಥನೆ ಮಾಡುವುದು ನಿಮಗೆ ಕಷ್ಟವೋ? ಇತರರನ್ನು ನಿಮ್ಮೊಂದಿಗೆ ಮತ್ತು ನಿಮಗಾಗಿ ಪ್ರಾರ್ಥಿಸುವಂತೆ ಕೇಳಿರಿ. (ಕೊಲೊಸ್ಸೆ 1:3; ಯಾಕೋಬ 5:14) ಪವಿತ್ರಾತ್ಮವು ನಿಮ್ಮ ಪ್ರಾರ್ಥನೆಗಳನ್ನು ಬೆಂಬಲಿಸುವುದು. (ಹೋಲಿಸಿ ರೋಮಾಪುರ 8:26, 27.) ಒಂದು ವೇದನಾಮಯ ಶಾರೀರಿಕ ಕಾಯಿಲೆಯಲ್ಲಿ ಇರುವಂತೆ, ಆಳವಾದ ಮಾನಸಿಕ ಗಾಯಗಳುಳ್ಳ ಕೆಲವರಿಗೆ ಈ ವಿಷಯಗಳ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಗುಣವಾಗದಿರಲೂಬಹುದು. ಆದರೆ ಯೆಹೋವನ ಸಹಾಯದಿಂದ ನಾವು ತಾಳಿಕೊಳ್ಳಬಲ್ಲೆವು, ಮತ್ತು ಯೇಸುವಿನ ವಿಷಯದಲ್ಲಿ ಆದಂತೆ, ತಾಳ್ಮೆಯು ವಿಜಯವೇ ಸರಿ. (ಯೋಹಾನ 16:33) “ಜನರೇ, ಯಾವಾಗಲೂ ಆತನನ್ನೇ [ಯೆಹೋವನನ್ನು] ನಂಬಿ ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ; ದೇವರು ನಮ್ಮ ಆಶ್ರಯವು.”—ಕೀರ್ತನೆ 62:8.

ಅಪಪ್ರಯೋಗಿಸಿದ ಆರೋಪಿಯ ಕುರಿತೇನು?

ಒಂದು ಮಗುವನ್ನು ಕಾರ್ಯತಃ ಲೈಂಗಿಕವಾಗಿ ಅಪಪ್ರಯೋಗಿಸುವ ವ್ಯಕ್ತಿಯು ಬಲಾತ್ಕಾರ ಸಂಭೋಗಿಯಾಗಿದ್ದಾನೆ ಮತ್ತು ಅವನನ್ನು ಅಂಥವನಾಗಿ ವೀಕ್ಷಿಸಬೇಕು. ಈ ರೀತಿಯಲ್ಲಿ ಬಲಿಪಶುವಾದ ಯಾವನಿಗೂ ತನ್ನನ್ನು ಅಪಪ್ರಯೋಗಿಸಿದವನ ಮೇಲೆ ದೋಷಾರೋಪ ಮಾಡುವ ಹಕ್ಕಿದೆ. ಆದರೂ, ಆರೋಪವು ಒಂದು ಅಪಪ್ರಯೋಗದ “ನಿಗ್ರಹಿಸಲ್ಪಟ್ಟ ಸ್ಮರಣೆಗಳ” ಮೇಲೆ ಮಾತ್ರ ಆಧಾರಿತವಾಗಿದ್ದಲ್ಲಿ, ದುಡುಕಿ ದೋಷಾರೋಪ ಮಾಡಬಾರದು. ಈ ಸನ್ನಿವೇಶದಲ್ಲಿ ಬಾಧಿತನಿಗೆ ಒಂದು ಮಟ್ಟದ ಮಾನಸಿಕ ಸ್ಥಿರತೆಯನ್ನು ಪುನಃ ಗಳಿಸುವುದು ಅತಿ ಮಹತ್ವದ ಸಂಗತಿಯು. ಸ್ವಲ್ಪ ಸಮಯವು ದಾಟಿದ ಬಳಿಕ, ಅವನು ತನ್ನ “ಸ್ಮರಣೆಗಳ”ನ್ನು ಪರೀಕ್ಷಿಸಿಕೊಳ್ಳಲು ಮತ್ತು ಅವುಗಳ ಕುರಿತು ತಾನೇನು ಮಾಡಬಯಸುವೆನೆಂದು ನಿರ್ಣಯಿಸಿಕೊಳ್ಳಲು ಒಂದು ಉತ್ತಮ ಸ್ಥಾನದಲ್ಲಿದ್ದಾನು.

ಡಾನ ಎಂಬವಳ ವಿಷಯವನ್ನು ತೆಗೆದುಕೊಳ್ಳಿರಿ. ಅವಳಿಗೆ ತಿನ್ನುವ ಕ್ರಮರಾಹಿತ್ಯಗಳಿದವ್ದೆಂದು ವರದಿಸಲಾಗಿದದ್ದರಿಂದ ಅವಳು ಸಲಹೆಗಾರನ ಬಳಿಗೆ—ಸಂದೇಹಾಸ್ಪದ ಯೋಗ್ಯತೆಗಳಿದ್ದವನೆಂದು ವ್ಯಕ್ತ—ಹೋದಳು. ಬೇಗನೆ ಅವಳು ತನ್ನ ತಂದೆಯ ಮೇಲೆ ಅಗಮ್ಯ ಗಮನದ ಆರೋಪ ಹೊರಿಸಿ ಅವನನ್ನು ಕೋರ್ಟಿಗೆಳೆದಳು. ನ್ಯಾಯದರ್ಶಿಗಳು ಒಂದು ಒಮ್ಮತದ ತೀರ್ಮಾನಕ್ಕೆ ಬಾರದರ್ದಿಂದ ತಂದೆ ಸೆರೆಮನೆಗೆ ಹೋಗಲಿಲ್ಲ, ಆದರೆ ಕೋರ್ಟಿನಲ್ಲಿ ವ್ಯಾಜ್ಯಹೂಡಲು ಅವನು 1,00,000 ಡಾಲರ್‌ಗಳನ್ನು ತೆರಬೇಕಾಗಿತ್ತು. ಇದೆಲ್ಲವು ನಡೆದಾದ ಮೇಲೆ, ಅಪಪ್ರಯೋಗವು ಸಂಭವಿಸಿತ್ತೆಂದು ತಾನು ಇನ್ನು ಮುಂದೆ ನಂಬಿಲಿಲ್ಲವೆಂದಳು ಡಾನ ತನ್ನ ಹೆತ್ತವರಿಗೆ!

ಜ್ಞಾನದಿಂದಲೇ ಸೊಲೊಮೋನನಂದದ್ದು: “ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಹೋಗಬೇಡ.” (ಜ್ಞಾನೋಕ್ತಿ 25:8) ಆರೋಪಿಸಲ್ಪಟ್ಟ ಅಪರಾಧಿಯು ಮಕ್ಕಳನ್ನು ಇನ್ನೂ ಅಪಪ್ರಯೋಗಿಸುತ್ತಿದ್ದಾನೆಂದು ಸಂಶಯಿಸಲು ಏನಾದರೂ ದೃಢವಾದ ಕಾರಣವಿದ್ದಲ್ಲ, ಒಂದು ಎಚ್ಚರಿಕೆಯನ್ನು ಕೊಡಬೇಕಾದೀತು. ಅಂತಹ ಒಂದು ಸನ್ನಿವೇಶದಲ್ಲಿ ಸಭಾ ಹಿರಿಯರು ಸಹಾಯ ಮಾಡಬಲ್ಲರು. ಇಲ್ಲವಾದಲ್ಲಿ, ದುಡುಕಬೇಡಿರಿ. ಕೊನೆಗೆ, ಆ ವಿಷಯವನ್ನು ಬಿಟ್ಟುಬಿಡುವುದರಲ್ಲೂ ನೀವು ತೃಪ್ತರಾದೀರಿ. ಆದರೂ, ನೀವು “ನೆನಪಿಸಲ್ಪಟ್ಟ” ಅಪರಾಧಿಯ ಮುಖಾಬಿಲೆ ಮಾಡಲು ಬಯಸಿದಲ್ಲಿ (ಸಂಭಾವ್ಯ ಪ್ರತಿಕ್ರಿಯೆಗಳ ಕುರಿತು ನಿಮ್ಮ ಅನಿಸಿಕೆಯೇನೆಂದು ಮೊದಲು ಪರೀಕ್ಷಿಸಿಕೊಂಡ ಬಳಿಕ), ಹಾಗೆ ಮಾಡುವ ಹಕ್ಕು ನಿಮಗಿದೆ.

“ಸ್ಮರಣೆಗಳ”ನ್ನು ಅನುಭವಿಸುವ ಒಬ್ಬನು ವಾಸಿಯಾಗುತ್ತಿರುವ ಸಮಯದಲ್ಲಿ, ಎಡವಟಿನ್ಟ ಪರಿಸ್ಥಿತಿಗಳೇಳಬಹುದು. ದೃಷ್ಟಾಂತಕ್ಕಾಗಿ, ತಾನು ಪ್ರತಿ ದಿನ ನೋಡುವ ಯಾರಾದರೊಬ್ಬನಿಂದ ಲೈಂಗಿಕವಾಗಿ ಪೀಡಿಸಲ್ಪಡುವ ಸ್ಪಷ್ಟ ಮಾನಸಿಕ ಚಿತ್ರಗಳನ್ನು ವ್ಯಕ್ತಿಯೊಬ್ಬನು ಹೊಂದಬಹುದು. ಇದನ್ನು ನಿರ್ವಹಿಸಲು ಯಾವ ಮೂಲಸೂತ್ರಗಳನ್ನೂ ವಿಧಿಸಸಾಧ್ಯವಿಲ್ಲ. “ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:5) ಕೆಲವು ಸಾರಿ ಒಬ್ಬ ಸಂಬಂಧಿಯು ಇಲ್ಲವೆ ಒಬ್ಬನ ಹತ್ತಿರದ ಕುಟುಂಬ ಸದಸ್ಯರಲ್ಲಿ ಒಬ್ಬನು ಅದರಲ್ಲಿ ಒಳಗೂಡಿದ್ದಾನೆಂಬ ಅನಿಸಿಕೆ ಒಬ್ಬನಿಗಾಗಬಹುದು. ಅಪರಾಧಿಯೆಂದು ಸಂಶಯಿಸಲಾದ ಒಬ್ಬನನ್ನು ಗುರುತಿಸುವ ವಿಷಯದಲ್ಲಿ ಕೆಲವು “ನಿಗ್ರಹಿಸಲ್ಪಟ್ಟ ಸ್ಮರಣೆಗಳ” ಸಂದೇಹಾಸ್ಪದ ಸ್ವರೂಪವನ್ನು ನೆನಪಿಸಿರಿ. ಅಂತಹ ಪರಿಸ್ಥಿತಿಯಲ್ಲಿ, ಸಂಗತಿಯು ದೃಢವಾಗಿ ಸಮರ್ಥಿಸಲ್ಪಡದಿರುವ ತನಕ, ಕುಟುಂಬದೊಂದಿಗೆ—ಕಡಿಮೆ ಪಕ್ಷ ಆಗಾಗ ಭೇಟಿಗಳು, ಪತ್ರದ ಮೂಲಕ, ಅಥವಾ ಫೋನ್‌ ಮಾಡಿ—ಸಂಪರ್ಕವನ್ನಿಡುವುದರಿಂದ ಒಬ್ಬನು ಶಾಸ್ತ್ರೀಯ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾನೆಂದು ತೋರಿಸಿ ಕೊಡುವುದು.—ಎಫೆಸ 6:1-3ನ್ನು ಹೋಲಿಸಿ.

ಹಿರಿಯರು ಏನು ಮಾಡಬಲ್ಲರು?

ಮಕ್ಕಳ ಅಪಪ್ರಯೋಗದ ಹಿನ್ನೋಟಗಳಿಂದ ಅಥವಾ “ನಿಗ್ರಹಿಸಲ್ಪಟ್ಟ ಸ್ಮರಣೆ”ಗಳನ್ನು ಅನುಭವಿಸುತ್ತಿರುವ ಸಭೆಯ ಸದಸ್ಯನೊಬ್ಬನು ಹಿರಿಯರನ್ನು ಸಮೀಪಿಸಿದಲ್ಲಿ, ಸಾಮಾನ್ಯವಾಗಿ ಅವರಲ್ಲಿ ಇಬ್ಬರು ಸಹಾಯ ಮಾಡಲು ನೇಮಿಸಲ್ಪಡುತ್ತಾರೆ. ಈ ಮಧ್ಯೆ ಅವನು ತನ್ನ ಮಾನಸಿಕ ಬೇಗುದಿಯನ್ನು ಹೋರಾಡಲು ಕೇಂದ್ರೀಕರಿಸುವಂತೆ ಬಾಧಿತನನ್ನು ಈ ಹಿರಿಯರು ದಯೆಯಿಂದ ಉತ್ತೇಜಿಸಬೇಕು. “ನೆನಪಿಸಲ್ಪಟ್ಟ” ಯಾರೇ ಅಪಪ್ರಯೋಗಿಗಳ ಹೆಸರನ್ನು ಕಟ್ಟುನಿಟ್ಟಾಗಿ ಗುಪ್ತವಾಗಿಡಬೇಕು.

ಹಿರಿಯರ ಮುಖ್ಯ ಕೆಲಸವು ಕುರುಬರಾಗಿ ಕಾರ್ಯನಡಿಸುವುದಾಗಿದೆ. (ಯೆಶಾಯ 32:1, 2; 1 ಪೇತ್ರ 5:2, 3) ಅವರು “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು [ತಾವಾಗಿ] ಧರಿಸಿ”ಕೊಳ್ಳಬೇಕು. (ಕೊಲೊಸ್ಸೆ 3:12) ಅವರು ದಯೆಯಿಂದ ಕಿವಿಗೊಟ್ಟು, ಅನಂತರ ಶಾಸ್ತ್ರಗಳಿಂದ ಶಮನಗೊಳಿಸುವ ಮಾತುಗಳನ್ನು ಅನ್ವಯಿಸಬೇಕು. (ಜ್ಞಾನೋಕ್ತಿ 12:18) ವೇದನಾಮಯ ‘ಸ್ಮರಣೆಗಳಿಂದ’ ಬಾಧಿತರಾದ ಕೆಲವರು, ತಾವು ಹೇಗಿದ್ದೇವೆಂದು ನೋಡುವುದಕ್ಕೆ ಕ್ರಮವಾಗಿ ಸಂದರ್ಶನವನ್ನು ಅಥವಾ ಫೋನನ್ನೂ ಮಾಡುವ ಹಿರಿಯರಿಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಅಂತಹ ಸಂಪರ್ಕಗಳಿಗೆ ತುಂಬ ಸಮಯವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ, ಆದರೆ ಯೆಹೋವನ ಸಂಸ್ಥೆಗೆ ಕಾಳಜಿ ಇದೆಯೆಂದು ಅದು ತೋರಿಸುತ್ತದೆ. ತನ್ನ ಕ್ರೈಸ್ತ ಸಹೋದರರು ತನ್ನನ್ನು ನಿಜವಾಗಿಯೂ ಪ್ರೀತಿಸುತ್ತಾರೆಂದು ಬಾಧಿತನಿಗೆ ಮನವರಿಕೆಯಾಗುವಾಗ, ಅವನಿಗೆ ಒಂದು ಗಮನಾರ್ಹ ಮಟ್ಟದಲ್ಲಿ ಮಾನಸಿಕ ಸಮತೆಯನ್ನು ಪುನಃ ಗಳಿಸಲು ಸಹಾಯವಾದೀತು.

ಒಂದು ಆರೋಪವನ್ನು ಮಾಡಲು ತಾನು ಬಯಸುತ್ತೇನೆಂದು ಬಾಧಿತನು ನಿರ್ಣಯಿಸುವುದಾದರೆ ಆಗೇನು?b ಆಗ ಆ ಇಬ್ಬರು ಹಿರಿಯರು ಅವನಿಗೆ ಸಲಹೆ ಕೊಡಬಲ್ಲರು ಏನಂದರೆ, ಮತ್ತಾಯ 18:15ರ ಮೂಲಸೂತ್ರಕ್ಕನುಸಾರ, ಅವನು ಆ ವಿಷಯದಲ್ಲಿ ಅಪರಾಧಿಯನ್ನು ವೈಯಕ್ತಿಕವಾಗಿ ಸಮೀಪಿಸಬೇಕು. ಆರೋಪಿಯು ಎದುರೆದುರಿಗೆ ಇದನ್ನು ಮಾಡಲು ಮಾನಸಿಕವಾಗಿ ಶಕ್ತನಾಗದಿದ್ದರೆ, ಅದನ್ನು ಟೆಲಿಫೋನಿನ ಮೂಲಕ ಅಥವಾ ಪತ್ರದ ಮುಖೇನ ಮಾಡಸಾಧ್ಯವಿದೆ. ಈ ರೀತಿಯಲ್ಲಿ ಅಪರಾಧಿಗೆ, ಆ ಆರೋಪಕ್ಕೆ ಉತ್ತರವಾಗಿ ಯೆಹೋವನ ಮುಂದೆ ಒಂದು ಗಂಭೀರ ಹೇಳಿಕೆ ನೀಡುವ ಅವಕಾಶವು ನೀಡಲಾಗುತ್ತದೆ. ಆ ಅಪಪ್ರಯೋಗವನ್ನು ತಾನು ಮಾಡಿರಸಾಧ್ಯವಿಲ್ಲವೆಂಬುದಕ್ಕೆ ಪುರಾವೆಯನ್ನು ನೀಡಲೂ ಅವನು ಶಕ್ತನಾದಾನು. ಅಥವಾ ಅಪರಾಧಿಯು ಪ್ರಾಯಶಃ ತಪ್ಪನ್ನು ಅರಿಕೆಮಾಡುವನು ಮತ್ತು ಒಂದು ಸಂಧಾನವು ಸಾಧಿಸಲ್ಪಟ್ಟೀತು. ಅದೆಂತಹ ಆಶೀರ್ವಾದವಾಗಿರುವುದು! ಪಾಪದ ಅರಿಕೆಯು ಇದ್ದಲ್ಲಿ, ಆ ಇಬ್ಬರು ಹಿರಿಯರು ಶಾಸ್ತ್ರೀಯ ಸೂತ್ರಗಳಿಗೆ ಹೊಂದಿಕೆಯಲ್ಲಿ ವಿಷಯಗಳನ್ನು ಮುಂದೆ ನಿರ್ವಹಿಸಬಲ್ಲರು.

ಆರೋಪವು ನಿರಾಕರಿಸಲ್ಪಟ್ಟಲ್ಲಿ, ನ್ಯಾಯವಿಚಾರಣೆಯ ವಿಧದಲ್ಲಿ ಇನ್ನೇನನ್ನೂ ಮಾಡಲು ಸಾಧ್ಯವಿಲ್ಲವೆಂದು ಹಿರಿಯರು ಆರೋಪಿಗೆ ವಿವರಿಸಿ ಹೇಳಬೇಕು. ಮತ್ತು ಸಭೆಯು ಆಪಾದಿತನನ್ನು ಒಬ್ಬ ನಿರ್ದೋಷಿಯೋಪಾದಿ ವೀಕ್ಷಿಸುವುದನ್ನು ಮುಂದುವರಿಸುವುದು. ನ್ಯಾಯಸಮ್ಮತವಾದ ಕ್ರಿಯೆಯನ್ನು ಕೈಕೊಳ್ಳುವ ಮೊದಲು ಇಬ್ಬರು ಅಥವಾ ಮೂವರು ಸಾಕ್ಷಿಗಳಿರಬೇಕೆಂದು ಬೈಬಲು ಹೇಳುತ್ತದೆ. (2 ಕೊರಿಂಥ 13:1; 1 ತಿಮೊಥೆಯ 5:19) ಅದೇ ವ್ಯಕ್ತಿಯ ಮೂಲಕ ಗೈಯಲ್ಪಟ್ಟ ಅಪಪ್ರಯೋಗವನ್ನು ಒಬ್ಬನಿಗಿಂತ ಹೆಚ್ಚು ಮಂದಿ “ನೆನಸಿಕೊಳ್ಳು”ವುದಾದರೂ, ಈ ಮರುಜ್ಞಾಪನಗಳ ಸ್ವರೂಪವು, ಸಮರ್ಥಿಸುವ ಬೇರೆ ಸಾಕ್ಷ್ಯವಿಲ್ಲದೆ ಅವುಗಳ ಮೇಲೆ ನ್ಯಾಯಸಮ್ಮತವಾದ ನಿರ್ಣಯಗಳನ್ನು ಆಧರಿಸಲು ತೀರ ಅನಿಶ್ಚಿತವಾಗಿವೆ. ಅಂತಹ “ಸ್ಮರಣೆಗಳು” ಸುಳ್ಳು (ಅಥವಾ ಅವು ಸತ್ಯವೆಂದು ವೀಕ್ಷಿಸಲ್ಪಡುತ್ತವೆ) ಎಂಬುದನ್ನು ಅರ್ಥೈಸುವುದಿಲ್ಲ. ಆದರೆ ಒಂದು ವಿಷಯವನ್ನು ನ್ಯಾಯಸಮ್ಮತವಾಗಿ ಸ್ಥಾಪಿಸುವಲ್ಲಿ ಬೈಬಲ್‌ ತತ್ವಗಳು ಅನುಸರಿಸಲ್ಪಡಬೇಕು.

ಆಪಾದಿತನು ತಪ್ಪನ್ನು ನಿರಾಕರಿಸುತ್ತಿದ್ದರೂ, ನಿಜವಾಗಿಯೂ ತಪ್ಪಿತಸ್ಥನಾಗಿರುವಲ್ಲಿ, ಆಗೇನು? ಅವನು ದಂಡನೆಯಿಂದ “ತಪ್ಪಿಸಿಕೊಳ್ಳು”ತಾನ್ತೊ? ಖಂಡಿತವಾಗಿಯೂ ಇಲ್ಲ! ಅವನ ದೋಷ ಅಥವಾ ನಿದೋಷತ್ವವು ಸುರಕ್ಷಿತವಾಗಿ ಯೆಹೋವನ ಕೈಗಳಲ್ಲಿ ಬಿಡಲ್ಪಡಬಲ್ಲದು. “ಕೆಲವರ ಪಾಪಕೃತ್ಯಗಳು ಪ್ರಸಿದ್ಧವಾಗಿದ್ದು ಅವರು ಇಂಥವರೆಂದು ಮೊದಲೇ ತಿಳಿಯಪಡಿಸುತ್ತವೆ; ಬೇರೆ ಕೆಲವರ ಪಾಪಕೃತ್ಯಗಳು ಮರೆಯಾಗಿದ್ದು ತರುವಾಯ ತಿಳಿದುಬರುತ್ತವೆ.” (1 ತಿಮೊಥೆಯ 5:24; ರೋಮಾಪುರ 12:19; 14:12) ಜ್ಞಾನೋಕ್ತಿಯ ಪುಸ್ತಕವು ಹೇಳುವುದು: “ಶಿಷ್ಟನ ನಂಬಿಕೆಗೆ ಆನಂದವು ಫಲ; ದುಷ್ಟನ ನಿರೀಕ್ಷೆ ನಿಷ್ಫಲ.” “ದುಷ್ಟನು ಸಾಯುವಾಗ ಅವನ ನಿರೀಕ್ಷೆಯು ಹಾಳಾಗುವದು.” (ಜ್ಞಾನೋಕ್ತಿ 10:28; 11:7) ಕಟ್ಟಕಡೆಗೆ, ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ನ್ಯಾಯದಲ್ಲಿ ಅನಂತ ನ್ಯಾಯತೀರ್ಪನ್ನು ಸಲ್ಲಿಸುವರು.—1 ಕೊರಿಂಥ 4:5.

ಪಿಶಾಚನನ್ನು ಪ್ರತಿರೋಧಿಸುವುದು

ಸಮರ್ಪಿತ ಪ್ರಾಣಗಳು ಅತಿಯಾದ ಶಾರೀರಿಕ ಅಥವಾ ಭಾವನಾತ್ಮಕ ವೇದನೆಯ ಎದುರಿನಲ್ಲಿ ತಾಳಿಕೊಳ್ಳುವಾಗ, ಅದು ಅವರ ಆಂತರಿಕ ಬಲ ಮತ್ತು ದೇವರಿಗಾಗಿರುವ ಪ್ರೀತಿಯ ಎಂತಹ ಒಂದು ಪ್ರಮಾಣವಾಗಿದೆ! ಮತ್ತು ಅವರನ್ನು ಪೋಷಿಸಲು ಯೆಹೋವನ ಆತ್ಮಕ್ಕಿರುವ ಶಕ್ತಿಯ ಎಂತಹ ಒಂದು ಸಾಕ್ಷ್ಯವಾಗಿದೆ!—ಹೋಲಿಸಿ 2 ಕೊರಿಂಥ 4:7.

ಪೇತ್ರನ ಮಾತುಗಳು ಇಂತಹವರಿಗೆ ಅನ್ವಯಿಸುತ್ತವೆ: “ನೀವು ನಂಬಿಕೆಯಲ್ಲಿ ದೃಢವಾಗಿದ್ದು [ಸೈತಾನನನ್ನು] ಎದುರಿಸಿರಿ.” (1 ಪೇತ್ರ 5:9) ಹಾಗೆ ಮಾಡುವುದು ಸುಲಭವಾಗಿರಲಿಕ್ಕಿಲ್ಲ. ಕೆಲವೊಮ್ಮೆ, ಸ್ಪಷ್ಟವಾಗಿಗಿ ಮತ್ತು ತರ್ಕಬದ್ಧವಾಗಿ ಯೋಚಿಸುವುದೂ ಕಷ್ಟಕರವಾಗಿರಬಹುದು. ಆದರೆ ನಿರಾಶರಾಗಬೇಡಿ! ಬೇಗನೆ, ಪಿಶಾಚನು ಮತ್ತು ಅವನ ಕುತಂತ್ರಗಳು ಇನ್ನುಮುಂದೆ ಅಸ್ತಿತ್ವದಲ್ಲಿರವು. ನಿಜವಾಗಿಯೂ ನಾವು, “ದೇವರು ತಾನೇ . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ,” ಹೋಗುವ ಆ ಸಮಯಕ್ಕಾಗಿ ಹಾತೊರೆಯುತ್ತೇವೆ.—ಪ್ರಕಟನೆ 21:3, 4.

[ಅಧ್ಯಯನ ಪ್ರಶ್ನೆಗಳು]

a  “ನಿಗ್ರಹಿಸಲ್ಪಟ್ಟ ಸ್ಮರಣೆಗಳು” ಮತ್ತು ತತ್ಸಮಾನವಾದ ಅಭಿವ್ಯಕ್ತಿಗಳನ್ನು, ಹೆಚ್ಚಾಗಿ ನಮಗೆಲ್ಲರಿಗೆ ಬರುವ ಸಾಮಾನ್ಯ ಸ್ಮರಣೆಗಳಿಂದ ಪ್ರತ್ಯೇಕಿಸಲಿಕ್ಕಾಗಿ ಉದ್ಧರಣ ಚಿಹ್ನೆಗಳಲ್ಲಿ ಹಾಕಲಾಗಿದೆ.

b  ವಿಷಯವು ಸಭೆಯಲ್ಲಿ ಸಾಮಾನ್ಯ ಜ್ಞಾನವಾಗಿ ಪರಿಣಮಿಸಿದ್ದರೆ, ಈ ಪ್ಯಾರಗ್ರಾಫ್‌ನಲ್ಲಿ ಸೂಚಿಸಲ್ಪಟ್ಟ ಹೆಜ್ಜೆಯನ್ನೂ ತೆಗೆದುಕೊಳ್ಳುವುದು ಅಗತ್ಯವಾಗಿರಬಹುದು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ