“ಕೆಡವಲ್ಪಟ್ಟವರಾಗಿದ್ದರೂ ಪ್ರಾಣನಷ್ಟಪಡುವವರಲ್ಲ”
ಉಲ್ಫ್ ಹೆಲ್ಗಸನ್ ಹೇಳಿರುವಂತೆ
ಜುಲೈ 1983ರಲ್ಲಿ, ನನ್ನನ್ನು ಬಗ್ಗಿ ನೋಡುತ್ತಿದ್ದ ಡಾಕ್ಟರುಗಳು ಉದ್ಗರಿಸಿದ್ದು: “ಇವನು ಎಚ್ಚರವಿದ್ದಾನೆ!” 15 ತಾಸುಗಳ ಒಂದು ಜಟಿಲವಾದ ಶಸ್ತ್ರಕ್ರಿಯೆಯಲ್ಲಿ ನನ್ನ ಬೆನ್ನೆಲುಬಿನಿಂದ 12 ಸೆಂಟಿಮೀಟರ್ ಉದ್ದದ ಗೆಡ್ಡೆಯನ್ನು ಹೊರತೆಗೆಯಲಾಗಿತ್ತು. ನಾನು ಪೂರ್ತಿಯಾಗಿ ಲಕ್ವಾ ಪೀಡಿತನಾದೆ.
ಕೆಲವು ದಿನಗಳ ಅನಂತರ, ಸ್ವೀಡನ್ನ ಉತ್ತರದಲ್ಲಿರುವ ನನ್ನ ಹುಟ್ಟೂರಾದ ಹಾಲ್ಸಿಂಗ್ಬರ್ಗ್ನಿಂದ ಸುಮಾರು 60 ಕಿಲೊಮೀಟರ್ ದೂರದ ಒಂದು ಆಸ್ಪತ್ರೆಗೆ ನನ್ನನ್ನು ಸಾಗಿಸಲಾಯಿತು. ನಾನು ಅಲ್ಲಿ ಒಂದು ಪುನಸ್ಸಜ್ಜೀಕರಣ ಕಾರ್ಯಕ್ರಮವನ್ನು ಸೇರಿದೆ. ಅದು ಕಟು ಪರಿಶ್ರಮದ್ದು ಎಂದು ಶರೀರ ಚಿಕಿತ್ಸಾತಜ್ಞರು ಹೇಳಿದರೂ ಅದನ್ನು ಆರಂಭಿಸಲು ನಾನು ಆತುರನಾಗಿದ್ದೆ. ಪುನಃ ನಡೆದಾಡಲು ನಾನು ನಿಜವಾಗಿ ಬಯಸಿದೆ. ದಿನಕ್ಕೆ ಐದು ತಾಸಿನ ವ್ಯಾಯಾಮವನ್ನು ಶ್ರದ್ಧಾಪೂರ್ವಕವಾಗಿ ಅನುಸರಿಸುವ ಮೂಲಕ, ನಾನು ತೀವ್ರ ಪ್ರಗತಿಯನ್ನು ಮಾಡಿದೆ.
ಒಂದು ತಿಂಗಳ ತರುವಾಯ ಸಂಚರಣಾ ಮೇಲ್ವಿಚಾರಕರು ನಮ್ಮ ಸಭೆಯನ್ನು ಸಂದರ್ಶಿಸಿದಾಗ, ಅವರು ಮತ್ತು ಇತರ ಕ್ರೈಸ್ತ ಹಿರಿಯರು ಸಭಾ ಹಿರಿಯರ ಕೂಟವನ್ನು ನನ್ನ ಆಸ್ಪತ್ರೆಯ ಕೋಣೆಯಲ್ಲಿ ನಡಸಲಿಕ್ಕಾಗಿ ದೂರ ಪ್ರಯಾಣಮಾಡಿ ಬಂದರು. ಸಹೋದರ ಪ್ರೀತಿಯ ಈ ಪುರಾವೆಗಾಗಿ ನನ್ನ ಹೃದಯವೆಷ್ಟು ಉಲ್ಲಾಸಪಟ್ಟಿತು! ವಾರ್ಡಿನ ದಾದಿಯರು ಕೂಟದ ಅನಂತರ ಇಡೀ ಗುಂಪಿಗೆ ಚಹ ಮತ್ತು ಸ್ಯಾಂಡ್ವಿಚ್ಗಳನ್ನು ಹಂಚಿದರು.
ಮೊದಮೊದಲು ಡಾಕ್ಟರರು ನನ್ನ ಪ್ರಗತಿಯನ್ನು ಕಂಡು ಅಚ್ಚರಿಪಟ್ಟರು. ಮೂರು ತಿಂಗಳುಗಳ ಬಳಿಕ ನಾನು ನನ್ನ ಗಾಲಿ ಕುರ್ಚಿಯಲ್ಲಿ ಕೂತುಕೊಳ್ಳಲು ಶಕ್ತನಾದೆ ಮತ್ತು ಕೆಲವು ಕ್ಷಣ ನಿಂತುಕೊಳ್ಳಲೂ ಶಕ್ತನಾದೆ. ನಾನು ಸಂತೋಷಗೊಂಡೆ ಮತ್ತು ಪುನಃ ನಡೆಯಲು ಪೂರ್ಣವಾಗಿ ನಿಶ್ಚಯಿಸಿದ್ದೆ. ನನ್ನ ಕುಟುಂಬ ಮತ್ತು ನನ್ನ ಜೊತೆ ಕ್ರೈಸ್ತರು ತಮ್ಮ ಸಂದರ್ಶನಗಳ ಸಮಯದಲ್ಲಿ ನನಗೆ ತುಂಬ ಪ್ರೋತ್ಸಾಹನೆಯನ್ನು ಕೊಟ್ಟರು. ಕೊಂಚ ಅವಧಿಗಳಿಗೆ ಮನೆಗೆ ಹೋಗಲೂ ನಾನು ಶಕ್ತನಾದೆ.
ನಿಜವಾದ ಹಿಮ್ಮರಳಿಕೆ
ಆದರೆ, ಅದಾದ ಮೇಲೆ ನಾನು ಹೆಚ್ಚಿನ ಪ್ರಗತಿಯನ್ನು ಮಾಡಲಿಲ್ಲ. ಬೇಗನೆ ಶರೀರ ಚಿಕಿತ್ಸಾತಜ್ಞರು ನನಗೆ ನೋಯುವ ಸಂದೇಶವನ್ನು ನೀಡಿದರು: “ಇದಕ್ಕಿಂತ ಹೆಚ್ಚು ನಿನಗೆ ಗುಣವಾಗದು!” ಗಾಲಿ ಕುರ್ಚಿಯಲ್ಲಿ ನಾನಾಗಿಯೇ ಅಡಾಡ್ಡುವಂತೆ ನನ್ನನ್ನು ಬಲಗೊಳಿಸುವುದೇ ಈಗ ಧ್ಯೇಯವಾಗಿತ್ತು. ನನಗೇನು ಸಂಭವಿಸುವುದೋ ಎಂದು ನಾನು ಯೋಚನಾಪರನಾದೆ. ನನ್ನ ಪತ್ನಿಯು ಹೇಗೆ ನಿರ್ವಹಿಸ್ಯಾಳು? ಅವಳಿಗೆ ಸ್ವತಃ ದೊಡ್ಡ ಶಸ್ತ್ರಕ್ರಿಯೆ ಆಗಿತ್ತು ಮತ್ತು ನನ್ನ ಸಹಾಯದ ಅಗತ್ಯವಿತ್ತು. ಚಿಕಿತ್ಸಾಲಯದ ಖಾಯಂ ಉಪಚಾರವು ನನಗೆ ಬೇಕಾಗುವುದೋ?
ನಾನು ಬಹಳವಾಗಿ ಖಿನ್ನನಾದೆ. ನನ್ನ ಸ್ಥೈರ್ಯ, ಧೈರ್ಯ, ಶಕ್ತಿಯು ಕ್ರಮೇಣ ಕುಂದಿಹೋದವು. ದಿನಗಳು ದಾಟಿದವು, ನಾನು ಚಲಿಸಲಾರದೆ ಹೋದೆ. ಶಾರೀರಿಕವಾಗಿ ಪೂರ್ತಿ ಶಕಿಹ್ತೀನನಾದೆ ಮಾತ್ರವಲ್ಲ ಮಾನಸಿಕವಾಗಿಯೂ ಆತ್ಮಿಕವಾಗಿಯೂ ಜಡಗೊಂಡೆ. ನಾನು “ಕೆಡವಲ್ಪ”ಟ್ಟಿದ್ದೆ. ನಾನು ಯಾವಾಗಲೂ ನನ್ನನ್ನು ಆತ್ಮಿಕವಾಗಿ ಬಲಶಾಲಿಯೆಂದು ಎಣಿಸಿದ್ದೆ. ದೇವರ ರಾಜ್ಯದಲ್ಲಿ ಬಲವಾಗಿ ಬೇರೂರಿದ್ದ ನಂಬಿಕೆ ನನಗಿತ್ತು. (ದಾನಿಯೇಲ 2:44; ಮತ್ತಾಯ 6:10) ದೇವರ ನೀತಿಯ ನೂತನ ಲೋಕದಲ್ಲಿ ಎಲ್ಲ ರೋಗಗಳು ಮತ್ತು ನಿರ್ಬಲತೆಗಳು ವಾಸಿಯಾಗುವುವು ಮತ್ತು ಮಾನವ ಕುಲವೆಲ್ಲವು ಅಲ್ಲಿ ಪರಿಪೂರ್ಣ ಜೀವಿತಕ್ಕೆ ಪುನಸ್ಸಾಪ್ಥಿಸಲ್ಪಡುವುದೆಂಬ ಬೈಬಲಿನ ವಾಗ್ದಾನ ನನಗೆ ಮಂದಟ್ಟಾಗಿತ್ತು. (ಯೆಶಾಯ 25:8; 33:24; 2 ಪೇತ್ರ 3:13) ಆದರೂ, ಈಗ ನನಗೆ ಶಾರೀರಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಲಕ್ವಾ ಹೊಡೆದ ಅನಿಸಿಕೆಯಾಯಿತು. “ಪ್ರಾಣನಷ್ಟ”ಪಟ್ಟ ಭಾವನೆ ನನಗಾಯಿತು.—2 ಕೊರಿಂಥ 4:9.
ಇನ್ನು ಹೆಚ್ಚು ಮುಂದುವರಿಯುವ ಮೊದಲು, ನನ್ನ ಹಿನ್ನೆಲೆಯ ಕುರಿತು ನಾನು ಸ್ವಲ್ಪ ನಿಮಗೆ ಹೇಳುತ್ತೇನೆ.
ಒಂದು ಸಂತೋಷದ ಕುಟುಂಬ
ನಾನು 1934ರಲ್ಲಿ ಹುಟ್ಟಿದೆ ಮತ್ತು ನನ್ನ ಆರೋಗ್ಯವು ಯಾವಾಗಲೂ ಒಳ್ಳೇದಾಗಿತ್ತು. 1950ಗಳ ಆದಿ ಭಾಗದಲ್ಲಿ ನನಗೆ ಇಂಗ್ರಿಡ್ ಎಂಬವಳ ಭೇಟಿಯಾಯಿತು, 1958ರಲ್ಲಿ ನಾವು ಮದುವೆಯಾಗಿ, ಮಧ್ಯ ಸ್ವೀಡನ್ನ ಅರ್ಸರ್ಟ್ಸಂಡ್ ಪಟ್ಟಣದಲ್ಲಿ ನೆಲೆಸಿದೆವು. 1963ರಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ನಾವು ಬೈಬಲಧ್ಯಯನ ಮಾಡತೊಡಗಿದಾಗ, ನಮ್ಮ ಜೀವನದಲ್ಲಿ ಒಂದು ತಿರುಗುಬಿಂದು ಬಂತು. ಅಷ್ಟರೊಳಗೆ ನಮಗೆ ಮೂವರು ಚಿಕ್ಕ ಮಕ್ಕಳಿದ್ದರು—ಏವ, ಬ್ಯೋರ್ನ್, ಮತ್ತು ಲೀನ. ಬೇಗನೆ ನಮ್ಮ ಇಡೀ ಕುಟುಂಬವು ಅಧ್ಯಯನ ಮಾಡುತ್ತಾ ಬೈಬಲಿನ ಜ್ಞಾನದಲ್ಲಿ ಒಳ್ಳೇ ಪ್ರಗತಿಮಾಡುತ್ತಿತ್ತು.
ಅಧ್ಯಯನ ಮಾಡತೊಡಗಿದ ಸ್ವಲ್ಪದರಲ್ಲಿಯೇ ನಾವು ಹಾಲ್ಸಿಂಗ್ಬರ್ಗ್ಗೆ ಸ್ಥಳ ಬದಲಾಯಿಸಿದೆವು. ಅಲ್ಲಿ ನಾನು ಮತ್ತು ನನ್ನ ಪತ್ನಿ ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಂಡು, 1964ರಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡೆವು. 1968ರಲ್ಲಿ ನಮ್ಮ ಹಿರಿಯ ಮಗಳು ಏವ ಸ್ನಾನಿತಳಾದಾಗ, ನಮ್ಮ ಸಂತೋಷವು ವರ್ಧಿಸಿತು. ಏಳು ವರ್ಷಗಳ ಅನಂತರ, 1975ರಲ್ಲಿ ಬ್ಯೋರ್ನ್ ಮತ್ತು ಲೀನ ಕೂಡ ಸ್ನಾನಿತರಾದರು, ಮತ್ತು ಮರುವರ್ಷ ಕ್ರೈಸ್ತ ಸಭೆಯಲ್ಲಿ ಹಿರಿಯನಾಗಿ ನಾನು ನೇಮಕಗೊಂಡೆ.
ನನ್ನ ಐಹಿಕ ಉದ್ಯೋಗವು ನನ್ನ ಕುಟುಂಬದ ಭೌತಿಕ ಅಗತ್ಯಕ್ಕಾಗಿ ಒಳ್ಳೇದಾಗಿ ಒದಗಿಸಲು ನನ್ನನ್ನು ಶಕ್ತನಾಗಿ ಮಾಡಿತು. ಮತ್ತು ಬ್ಯೋರ್ನ್ ಮತ್ತು ಲೀನ ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರವೇಶಿಸಿದಾಗ ನಮ್ಮ ಸಂತೋಷ ಇನ್ನೂ ಹೆಚ್ಚಿತು. ಬ್ಯೋರ್ನ್ ಬೇಗನೆ ಆರ್ಬೂಗದ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಲ್ಲಿ ಸೇವೆಮಾಡಲು ಆಮಂತ್ರಿಸಲ್ಪಟ್ಟನು. ಜೀವನವು ನಮ್ಮ ಮೇಲೆ ಅನುಗ್ರಹದ ಮಂದಹಾಸವನ್ನು ಬೀರಿತೋ ಎನ್ನುವಂತಿತ್ತು. ಬಳಿಕ 1980ರ ಆರಂಭದಲ್ಲಿ, ಗೆಡ್ಡೆಯ ದೈಹಿಕ ಪರಿಣಾಮಗಳನ್ನು ನಾನು ಅನುಭವಿಸತೊಡಗಿದೆ, ಕಟ್ಟಕಡೆಗೆ 1983ರಲ್ಲಿ ಆ ದೊಡ್ಡ ಶಸ್ತ್ರಕ್ರಿಯೆಯಲ್ಲಿ ಅದನ್ನು ತೆಗೆಯಲಾಯಿತು.
ಆತ್ಮಿಕ ಲಕ್ವಾವನ್ನು ಪರಿಹರಿಸುವುದು
ಪುನಃ ನಡೆಯಲಾರೆನೆಂದು ನನಗೆ ಹೇಳಲ್ಪಟ್ಟಾಗ, ಜೀವನ ನನ್ನ ಸುತ್ತಲೂ ಕುಸಿದುಬಿದ್ದಂತೆ ತೋರಿತು. ಆತ್ಮಿಕ ಬಲವನ್ನು ನಾನು ಪುನಃ ಪಡೆದುಕೊಂಡದ್ದು ಹೇಗೆ? ಅದು ನಾನು ನೆನಸಿದುದಕ್ಕಿಂತ ಸುಲಭವಾಗಿತ್ತು. ನಾನು ಕೇವಲ ನನ್ನ ಬೈಬಲನ್ನೆತ್ತಿ ಓದಲು ಸುರುಮಾಡಿದೆ. ಎಷ್ಟು ಹೆಚ್ಚು ಓದಿದೆನೋ ಅಷ್ಟು ಹೆಚ್ಚು ಆತ್ಮಿಕ ಬಲವು ನನಗೆ ದೊರೆಯಿತು. ಯೇಸುವಿನ ಪರ್ವತ ಪ್ರಸಂಗವನ್ನು ನಾನು ಅತಿ ಹೆಚ್ಚು ಗಣ್ಯಮಾಡುವವನಾದೆ. ನಾನದನ್ನು ಪುನಃ ಪುನಃ ಓದುತ್ತಾ ಮನನ ಮಾಡಿದೆ.
ಜೀವನದ ಕುರಿತ ನನ್ನ ಸಂತೋಷದ ಹೊರಮೇರೆಯು ಪುನಃ ಲಭಿಸಿತು. ವಾಚನ ಮತ್ತು ಮನನದ ಮೂಲಕ ನಾನು ಅಡಚಣೆಗಳ ಬದಲು ಸದವಕಾಶಗಳನ್ನು ಕಾಣತೊಡಗಿದೆ. ಇತರರೊಂದಿಗೆ ಬೈಬಲ್ ಸತ್ಯಗಳನ್ನು ಹಂಚುವ ನನ್ನ ಅಪೇಕ್ಷೆ ಮರುಕಳಿಸಿತು, ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಮತ್ತು ನನ್ನನ್ನು ಭೇಟಿಯಾದ ಇತರರಿಗೆ ಸಾಕ್ಷಿಕೊಡುವ ಮೂಲಕ ಈ ಅಪೇಕ್ಷೆಯನ್ನು ನಾನು ತೃಪ್ತಿಗೊಳಿಸಿದೆ. ನನ್ನ ಕುಟುಂಬವು ನನ್ನನ್ನು ಪೂರ್ಣವಾಗಿ ಬೆಂಬಲಿಸಿತು ಮತ್ತು ನನ್ನ ಆರೈಕೆಯ ವಿಧಾನದ ತರಬೇತನ್ನು ಪಡೆಯಿತು. ಕೊನೆಗೆ ನಾನು ಆಸ್ಪತ್ರೆ ಬಿಟ್ಟುಹೇಗಲು ಶಕ್ತನಾದೆ.
ಕೊನೆಗೆ ನಾನು ಮನೆ ಸೇರಿದೆ. ಅದು ನಮಗೆಲ್ಲರಿಗೆ ಎಂತಹ ಸಂತಸದ ದಿನವಾಯಿತು! ನನ್ನ ಆರೈಕೆಯು ಒಳಗೂಡಿದ್ದ ಒಂದು ಕಾರ್ಯತಖ್ತೆಯನ್ನು ನನ್ನ ಕುಟುಂಬವು ಏರ್ಪಡಿಸಿತು. ನನ್ನ ಮಗ ಬ್ಯೋರ್ನ್, ಯೆಹೋವನ ಸಾಕ್ಷಿಗಳ ಆ ಬ್ರಾಂಚ್ ಆಫೀಸಿನ ಕೆಲಸವನ್ನು ಬಿಡಲು ನಿರ್ಣಯಿಸಿ, ನನ್ನ ಆರೈಕೆಗೆ ನೆರವಾಗಲು ಮನೆಗೆ ಬಂದನು. ನನ್ನ ಕುಟುಂಬದ ಅಷ್ಟು ಪ್ರೀತಿ ಮತ್ತು ಚಿಂತನೆಗೆ ಒಳಪಟ್ಟದ್ದು ಅತ್ಯಂತ ಆದರಣೆಯ ವಿಷಯವಾಗಿತ್ತು.
ಇನ್ನೊಂದು ಹಿಮ್ಮರಳಿಕೆಯನ್ನು ನಿಭಾಯಿಸುವುದು
ಆದರೂ, ಸಮಯವು ದಾಟಿದಷ್ಟಕ್ಕೆ ನನ್ನ ಆರೋಗ್ಯವು ಇಳಿಗುಂದಿತು, ಚಲಿಸುವುದು ಕಷ್ಟವಾಯಿತು. ನನ್ನ ಕುಟುಂಬವು ಮನಃಪೂರ್ವಕ ಪ್ರಯತ್ನಗಳನ್ನು ಮಾಡಿದಾಗ್ಯೂ, ಕೊನೆಗೆ, ಮನೆಯಲ್ಲಿ ನನ್ನ ಆರೈಕೆಮಾಡಲು ಅವರು ಶಕ್ತರಾಗಲಿಲ್ಲ. ರೋಗೋಪಚಾರ ಗೃಹವನ್ನು ಸೇರುವುದೇ ನನಗೆ ಉತ್ತಮವೆಂದು ನಾನೆಣಿಸಿದೆ. ಪುನಃ ಬದಲಾವಣೆಗಳು ಮತ್ತು ಹೊಸ ನಿಯತಕ್ರಮ. ಆದರೆ ಇದು ಒಂದು ಆತ್ಮಿಕ ಹಿಮ್ಮರಳಿಕೆಯಾಗಿ ಪರಿಣಮಿಸಲು ನಾನು ಅನುಮತಿಸಲಿಲ್ಲ.
ಬೈಬಲ್ ವಾಚನ ಮತ್ತು ಸಂಶೋಧನೆಯನ್ನು ನಾನೆಂದೂ ನಿಲ್ಲಿಸಲಿಲ್ಲ. ನಾನೇನು ಮಾಡಶಕ್ತನೆಂದು ಪರಿಗಣಿಸುತ್ತಾ ಇದೆನ್ದಲ್ಲದೆ ಏನೂ ಮಾಡಶಕ್ತನಲ್ಲವೆಂದಲ್ಲ. ಯೆಹೋವನ ಸಾಕ್ಷಿಗಳೆಲ್ಲರು ಹೊಂದಿರುವ ಆತ್ಮಿಕ ಆಶೀರ್ವಾದಗಳನ್ನು ನಾನು ಮನನ ಮಾಡಿದೆ. ಪ್ರಾರ್ಥನೆಯಲ್ಲಿ ಯೆಹೋವನಿಗೆ ಹತ್ತಿರವಾಗಿ ಉಳಿದೆ ಮತ್ತು ಪ್ರತಿಯೊಂದು ಸಂದರ್ಭವನ್ನು ಇತರರಿಗೆ ಸಾರುವುದಕ್ಕೆ ಬಳಸಿದೆ.
ನಾನೀಗ ನನ್ನ ರಾತ್ರಿಗಳನ್ನು ಮತ್ತು ದಿನಗಳ ಅಂಶಗಳನ್ನು ರೋಗೋಪಚಾರ ಗೃಹದಲ್ಲಿ ಕಳೆಯುತ್ತೇನೆ. ಅಪರಾಹ್ಣಗಳನ್ನು ಮತ್ತು ಸಂಜೆಗಳನ್ನು ಮನೆಯಲ್ಲಿ ಅಥವಾ ನಮ್ಮ ಕ್ರೈಸ್ತ ಕೂಟಗಳಲ್ಲಿ ಕಳೆಯುತ್ತೇನೆ. ಕೂಟಗಳಿಗೆ ಹೋಗಿ ಬರಲು ಮತ್ತು ಮನೆಗೆ ಹೋಗಿ ಬರಲು ಒಂದು ಸಮಾಜ ಸೇವೆಯು ಕ್ರಮದ ವಾಹನ ಸೌಕರ್ಯವನ್ನು ಒದಗಿಸುತ್ತದೆ. ನನ್ನ ಪ್ರಿಯ ಕುಟುಂಬವು ಮತ್ತು ಸಭೆಯ ಸದಸ್ಯರು, ಮತ್ತು ರೋಗೋಪಚಾರ ಗೃಹದ ಸಿಬ್ಬಂದಿಯು ಆಶ್ಚರ್ಯಕರ ರೀತಿಯಲ್ಲಿ ನನ್ನ ಆರೈಕೆ ಮಾಡುತ್ತಾರೆ.
ನನ್ನಿಂದಾದುದನ್ನು ಮಾಡುವುದು
ನನ್ನನ್ನು ದುರ್ಬಲನೆಂದು ನಾನು ಎಣಿಸುವುದಿಲ್ಲ, ನನ್ನ ಕುಟುಂಬವಾಗಲಿ ನನ್ನ ಕ್ರೈಸ್ತ ಸಹೋದರರಾಗಲಿ ನನ್ನನ್ನು ಅಂಥವನಾಗಿ ಉಪಚರಿಸುವುದೂ ಇಲ್ಲ. ನನಗೆ ಪ್ರೀತಿಯ ಆರೈಕೆ ಸಿಗುವುದರಿಂದ ಒಬ್ಬ ಹಿರಿಯನಾಗಿ ಪರಿಣಾಮಕರ ಸೇವೆಯನ್ನು ಮುಂದುವರಿಸಲು ಶಕ್ತನಾಗಿದ್ದೇನೆ. ಪ್ರತಿ ವಾರ ಒಂದು ಸಭಾ ಪುಸ್ತಕ ಅಭ್ಯಾಸವನ್ನು ಹಾಗೂ ರಾಜ್ಯ ಸಭಾಗೃಹದಲ್ಲಿ ವಾರದ ಕಾವಲಿನಬುರುಜು ಅಭ್ಯಾಸವನ್ನು ನಾನು ನಿರ್ವಹಿಸುತ್ತೇನೆ. ಬೈಬಲಿನ ಪುಟಗಳನ್ನು ತೆರೆಯಲು ನನಗೆ ಕಷ್ಟವಾಗುವುದರಿಂದ ಕೂಟಗಳಲ್ಲಿ ನನಗೆ ಸಹಾಯಕ್ಕಾಗಿ ಒಬ್ಬನು ನೇಮಿಸಲ್ಪಡುತ್ತಾನೆ. ನಾನು ಕೂಟಗಳನ್ನು ನಿರ್ವಹಿಸುವುದೂ ಬೈಬಲ್ ಭಾಷಣಗಳನ್ನು ಕೊಡುವುದೂ ನನ್ನ ಗಾಲಿ ಕುರ್ಚಿಯಿಂದಲೇ.
ಹೀಗೆ, ನಾನು ಹಿಂದೆ ಮಾಡಲು ಆನಂದಿಸಿದ್ದ ಅನೇಕ ವಿಷಯಗಳನ್ನು ಇನ್ನೂ ಮಾಡಬಲ್ಲೆನು, ಕುರಿಪಾಲನೆಯ ಸಂದರ್ಶನಗಳನ್ನು ಸಹ. (1 ಪೇತ್ರ 5:2) ನಾನು ಇದನ್ನು ಮಾಡುವುದು, ಸಹಾಯ ಮತ್ತು ಸಲಹೆಗಾಗಿ ಸಹೋದರ ಮತ್ತು ಸಹೋದರಿಯರು ನನ್ನ ಬಳಿಗೆ ಬರುವಾಗ. ನಾನು ಟೆಲಿಫೋನನ್ನೂ ಬಳಸುತ್ತಾ, ಇತರರಿಗೆ ಫೋನ್ ಮಾಡುವ ಮೂಲಕ ಮೊದಲಹೆಜ್ಜೆ ಇಡುತ್ತೇನೆ. ಪರಿಣಮಿಸುವ ಉತ್ತೇಜನವು ಪರಸ್ಪರವಾದುದು. ಒಬ್ಬ ಮಿತ್ರನು ಇತ್ತೀಚೆಗೆ ಹೇಳಿದ್ದು: “ನನಗೆ ಎದೆಗುಂದಿಸುವ ಅನಿಸಿಕೆಯಾಗುವಷ್ಟರಲ್ಲೇ, ನಿನ್ನ ಫೋನ್ ಕರೆಯು ನನ್ನನ್ನು ಹುರಿದುಂಬಿಸುತ್ತದೆ.” ಯೆಹೋವನು ನನ್ನ ಪ್ರಯತ್ನಗಳನ್ನು ಆಶೀರ್ವದಿಸುತ್ತಿದ್ದಾನೆಂದು ತಿಳಿದು, ನಾನು ಕೂಡ ಪ್ರೋತ್ಸಾಹಗೊಳಿಸಲ್ಪಡುತ್ತೇನೆ.
ಕೂಟಗಳ ಮುಂಚೆ ಮತ್ತು ಬಳಿಕ, ಸಭೆಯ ಮಕ್ಕಳ ಉತ್ತಮ ಸಹವಾಸವು ನನಗೆ ಸಿಗುತ್ತದೆ. ನಾನು ನನ್ನ ಗಾಲಿ ಕುರ್ಚಿಯಲ್ಲಿ ಕೂತಿರುವುದರಿಂದ ಒಂದೇ ದೃಷ್ಟಿಮಟ್ಟದಿಂದ ನಾವು ಒಬ್ಬರೊಂದಿಗೊಬ್ಬರು ಮಾತಾಡುತ್ತೇವೆ. ಅವರ ಯಥಾರ್ಥತೆ ಮತ್ತು ನಿಷ್ಕಾಪಟ್ಯವನ್ನು ನಾನು ಗಣ್ಯಮಾಡುತ್ತೇನೆ. ಒಬ್ಬ ಎಳೆಯ ಹುಡುಗನು ಒಮ್ಮೆ ನನಗಂದದ್ದು: “ನೀವೊಬ್ಬ ಅಸಾಧಾರಣ ಸುಂದರರಾದ ಅಂಗಹೀನರು!”
ಏನನ್ನು ಮಾಡಲಾರೆನೋ ಅದಕ್ಕಾಗಿ ಕೊರಗುವ ಬದಲಿಗೆ, ಮಾಡಶಕ್ತನಾದ ವಿಷಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ನಾನು ಯೆಹೋವನ ಸೇವೆಯಲ್ಲಿ ಆನಂದಿಸುತ್ತಿದ್ದೇನೆ. ನನಗೇನು ಸಂಭವಿಸಿದೆಯೇ ಅದರಿಂದ ನಾನು ಹೆಚ್ಚನ್ನು ಕಲಿತೆ. ನಾವು ಅನುಭವಿಸುವ ಸಂಕಷ್ಟಗಳಿಂದ ನಾವು ತರಬೇತನ್ನು ಮತ್ತು ಬಲವನ್ನು ಹೊಂದುತ್ತೇವೆಂಬ ಗ್ರಹಿಕೆ ನನಗಾಗಿದೆ.—1 ಪೇತ್ರ 5:10.
ಅನೇಕ ಆರೋಗ್ಯವಂತ ಜನರು, ನಮ್ಮ ಸ್ವರ್ಗೀಯ ತಂದೆಯ ಆರಾಧನೆಯನ್ನು ನಾವು ಯಾವಾಗಲೂ ಗಂಭೀರವಾಗಿ ತೆಗೆದುಕೊಳ್ಳಬೇಕೆಂಬುದನ್ನು ಗಣ್ಯಮಾಡಲು ತಪ್ಪುವುದನ್ನು ನಾನು ಅವಲೋಕಿಸಿದ್ದೇನೆ. ನಾವು ತೆಗೆದುಕೊಳ್ಳದಿದ್ದರೆ, ನಮ್ಮ ಅಭ್ಯಾಸದ, ಕೂಟಗಳ, ಮತ್ತು ಕ್ಷೇತ್ರಸೇವೆಯ ಕಾರ್ಯತಖ್ತೆಯು ಬರೇ ದಿನಚರಿಯಾಗಬಲ್ಲದು. ಈ ಲೋಕದ ಅಂತ್ಯವನ್ನು ಪಾರಾಗಿ ದೇವರ ವಾಗ್ದತ್ತ ಭೂಪ್ರಮೋದವನಕ್ಕೆ ಸೇರಲು ಈ ಒದಗಿಸುವಿಕೆಗಳು ಅತ್ಯಾವಶ್ಯಕವೆಂಬುದು ನನ್ನ ಪರಿಗಣನೆ.—ಕೀರ್ತನೆ 37:9-11, 29; 1 ಯೋಹಾನ 2:17.
ದೇವರ ಬರಲಿರುವ ನೂತನ ಲೋಕದಲ್ಲಿ ಜೀವದ ನಿರೀಕ್ಷೆಯನ್ನು ನಾವು ಯಾವಾಗಲೂ ನಮ್ಮ ಹೃದಯದಲ್ಲಿ ಸಜೀವವಾಗಿಡಬೇಕು. (1 ಥೆಸಲೊನೀಕ 5:8) ನಿರಾಶೆಗೊಳ್ಳುವ ಯಾವುದೇ ಪ್ರವೃತ್ತಿಯ ವಿರುದ್ಧ ಹೋರಾಟವನ್ನು ಬಿಟ್ಟುಕೊಡದಂತೆಯೂ ನಾನು ಕಲಿತೆ. ಯೆಹೋವನನ್ನು ನನ್ನ ತಂದೆಯಾಗಿಯೂ ಆತನ ಸಂಸ್ಥೆಯನ್ನು ನನ್ನ ತಾಯಿಯಾಗಿಯೂ ವೀಕ್ಷಿಸಲು ನಾನು ಕಲಿತಿದ್ದೇನೆ. ನಾವು ಪ್ರಯತ್ನವನ್ನು ಮಾಡುವಲ್ಲಿ, ನಮ್ಮಲ್ಲಿ ಯಾವನನ್ನಾದರೂ ತನ್ನ ಒಬ್ಬ ಪರಿಣಾಮಕಾರಿ ಸೇವಕನಾಗಿ ಯೆಹೋವನು ಉಪಯೋಗಿಸಬಲ್ಲನೆಂಬ ಮನವರಿಕೆ ನನಗಾಗಿದೆ.
ನಾನು ‘ಕೆಡವಲ್ಪಟ್ಟೆನೋ’ ಎಂಬಂತೆ ಕೆಲವೊಮ್ಮೆ ನನಗೆ ಭಾಸವಾದಾಗ್ಯೂ, ನಾನು ‘ಪ್ರಾಣನಷ್ಟಪಡಲಿಲ್ಲ.’ ಯೆಹೋವನಿಂದ ಮತ್ತು ಆತನ ಸಂಸ್ಥೆಯಿಂದ ನಾನೆಂದೂ ತೊರೆಯಲ್ಪಡಲಿಲ್ಲ, ಹಾಗೂ ಕುಟುಂಬದಿಂದಲೂ ನನ್ನ ಕ್ರೈಸ್ತ ಸಹೋದರರಿಂದಲೂ ಸಹ. ನಾನು ಬೈಬಲನ್ನು ತೆಗೆದುಕೊಂಡು ಅದನ್ನು ಓದಲು ತೊಡಗಿದುದರ ಪರಿಣಾಮವಾಗಿ ಆತ್ಮಿಕ ಬಲವನ್ನು ನಾನು ಪುನಃ ಪಡೆದುಕೊಂಡೆ. ಆತನಲ್ಲಿ ಭರವಸೆಯಿಡುವಾಗ ನಮಗೆ “ಬಲಾಧಿಕ್ಯವನ್ನು” ಕೊಡುವಾತನಾದ ಯೆಹೋವ ದೇವರಿಗೆ ನಾನು ಕೃತಜ್ಞನು.—2 ಕೊರಿಂಥ 4:7.
ಯೆಹೋವನಲ್ಲಿ ಪೂರ್ಣ ಭರವಸೆ ಮತ್ತು ಸಂಪೂರ್ಣ ವಿಶ್ವಾಸದಿಂದ, ನಾನು ಭವಿಷ್ಯತ್ತಿಗಾಗಿ ಆತುರದಿಂದ ಮುನ್ನೋಡುತ್ತಿದ್ದೇನೆ. ಇಲ್ಲಿ ಭೂಮಿಯ ಮೇಲೆ ಒಂದು ಪುನಸ್ಸಾಪ್ಥಿತ ಪ್ರಮೋದವನವನ್ನು, ಅದು ತರಲಿರುವ ಸಕಲ ಆಶೀರ್ವಾದಗಳೊಂದಿಗೆ ಬರಮಾಡುವ ತನ್ನ ವಾಗ್ದಾನವನ್ನು ಯೆಹೋವನು ಅತಿ ಶೀಘ್ರದಲ್ಲೇ ನೆರವೇರಿಸುವನೆಂಬ ಭರವಸೆ ನನಗಿದೆ.—ಪ್ರಕಟನೆ 21:3, 4.