ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಏಪ್ರಿಲ್‌ ಪು. 2-7
  • ಯೆಹೋವ ನನಗೆ ಚಿಕ್ಕವಯಸ್ಸಿಂದಾನೇ ತರಬೇತಿ ಕೊಡ್ತಾ ಬಂದಿದ್ದಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ ನನಗೆ ಚಿಕ್ಕವಯಸ್ಸಿಂದಾನೇ ತರಬೇತಿ ಕೊಡ್ತಾ ಬಂದಿದ್ದಾನೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನನ್ನ ತರಬೇತಿ ಮುಂದುವರೀತು
  • ಪಯನೀಯರ್‌ ಸೇವೆಯಿಂದ ಸಂತೋಷ ಸಿಗುತ್ತೆ
  • ಸೆನೆಗಲ್‌ಗೆ ಹೋದೆ
  • ನ್ಯೂ ಬ್ರನ್ಸ್‌ವಿಕ್‌ ಮತ್ತು ಕ್ವಿಬೆಕ್‌ನಲ್ಲಿ ನಾವು ಮಾಡಿದ ಪಯನೀಯರ್‌ ಸೇವೆ
  • ಕಷ್ಟಪಟ್ಟು ಕೆಲಸ ಮಾಡಿದ ಸಹೋದರ ಮತ್ತು ಸಹೋದರಿಯರನ್ನ ನಾವು ನೆನಸ್ಕೊಳ್ತೀವಿ
  • ನಂಬಿಗಸ್ತ ಸಹೋದರರಿಂದ ಕಲಿತ ಪಾಠಗಳು
  • ಅಮೆರಿಕ ಬೆತೆಲ್‌ನಲ್ಲಿ ಮಾಡಿದ ಸೇವೆ
  • ಬೇರೆಯವ್ರ ಮಾದರಿಯಿಂದ ಕಲಿತಿದ್ರಿಂದ ಎಷ್ಟೋ ಆಶೀರ್ವಾದ ಸಿಕ್ತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ವೈಯಕ್ತಿಕ ಆಸಕ್ತಿಯಿಂದ ಸಿಕ್ಕಿದ ಆಶೀರ್ವಾದಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಏನೇ ಆದರೂ ಕೈಚೆಲ್ಲಿ ಕೂರಲ್ಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • “ನಾನು ಏನನ್ನೂ ಬದಲಾಯಿಸಲು ಇಷ್ಟಪಡೆನು!”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಏಪ್ರಿಲ್‌ ಪು. 2-7
ಸಹೋದರ ಡೇವಿಡ್‌ ಸ್ಪ್ಲೇನ್‌ ಅವ್ರ ಟೇಬಲ್‌ ಹತ್ರ ಕೂತು ಕೆಲಸ ಮಾಡ್ತಿದ್ದಾರೆ.

ಜೀವನ ಕಥೆ

ಯೆಹೋವ ನನಗೆ ಚಿಕ್ಕವಯಸ್ಸಿಂದಾನೇ ತರಬೇತಿ ಕೊಡ್ತಾ ಬಂದಿದ್ದಾನೆ

ಡೇವಿಡ್‌ ಸ್ಪ್ಲೇನ್‌ ಅವ್ರ ಮಾತಿನಲ್ಲಿ

ಒಂದುಸಲ ಒಬ್ಬ ಸಹೋದರ ನನ್ನ ಕೈಗೆ ಒಂದು ಚೀಟಿ ಕೊಟ್ರು. ನಾನು ಅದನ್ನ ಹಾಗೇ ನೋಡಿದೆ. ಅದ್ರ ಮೇಲೆ “ಡೇವಿಡ್‌ ಸ್ಪ್ಲೇನ್‌, ಏಪ್ರಿಲ್‌ 8, 1953: ‘ಜಗತ್ತಿನ ನಾಶವನ್ನು ಘೋಷಿಸುವುದು’” ಅಂತ ಬರೆದಿತ್ತು. ನಾನು ಅವ್ರಿಗೆ “ಇದೇನು?” ಅಂತ ಕೇಳಿದೆ. ಆಗ ಆ ಸಹೋದರ, “ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿa ಇದ್ರ ಬಗ್ಗೆ ಭಾಷಣ ಕೊಡೋ ನೇಮಕ ನಿನಗಿದೆ” ಅಂತ ಹೇಳಿದ್ರು. ಆಗ ನಾನು “ಇಲ್ಲ ಇಲ್ಲ, ಈ ಭಾಷಣ ಕೊಡ್ತೀನಿ ಅಂತ ನಾನು ಯಾವತ್ತೂ ಒಪ್ಕೊಂಡಿಲ್ಲ” ಅಂತ ಹೇಳಿದೆ.

ನಾನು ನನ್ನ ಕಥೆನ ಮೊದಲಿಂದ ಶುರುಮಾಡ್ತೀನಿ. ನಾನು ಎರಡನೇ ಮಹಾಯುದ್ಧದ ಸಮಯದಲ್ಲಿ ಕೆನಡಾದ ಕ್ಯಾಲ್ಗರಿಯಲ್ಲಿ ಹುಟ್ಟಿದೆ. ಇಲ್ಲಿಂದ ಸುಮಾರು 75 ವರ್ಷದ ಹಿಂದೆ ಡೊನಾಲ್ಡ್‌ ಫ್ರೇಸರ್‌ ಅನ್ನೋ ಒಬ್ಬ ಯುವ ಪಯನೀಯರ್‌ ನಮ್ಮ ಮನೆ ಬಾಗಿಲು ತಟ್ಟಿದ್ರು. ನಮ್ಮಮ್ಮ ಬೈಬಲ್‌ ಸ್ಟಡಿಗೆ ಒಪ್ಕೊಂಡ್ರು. ಅಮ್ಮಂಗೆ ಸತ್ಯ ತುಂಬ ಇಷ್ಟ ಆಯ್ತು. ಆದ್ರೆ ಅವ್ರಿಗೆ ತುಂಬ ಹುಷಾರಿಲ್ಲದೇ ಇದ್ದಿದ್ರಿಂದ ತಪ್ಪದೇ ಕೂಟಗಳಿಗೆ ಹೋಗೋಕೆ ಆಗ್ತಿರಲಿಲ್ಲ. ಆದ್ರೂ ಅವರು ಪ್ರಗತಿ ಮಾಡಿ 1950ರಲ್ಲಿ ದೀಕ್ಷಾಸ್ನಾನ ತಗೊಂಡ್ರು. ಆದ್ರೆ ದುಃಖದ ವಿಷ್ಯ ಏನಂದ್ರೆ, ದೀಕ್ಷಾಸ್ನಾನ ಆದ ಎರಡು ವರ್ಷದೊಳಗೆ ನಮ್ಮಮ್ಮ ತೀರಿಹೋದ್ರು. ಆಗಿನ್ನೂ ಅಪ್ಪ ಸತ್ಯನ ಸ್ವೀಕರಿಸಿರಲಿಲ್ಲ. ಆದ್ರೂ ಅವರು ಅಮ್ಮನ ಶವಸಂಸ್ಕಾರನ ಯೆಹೋವನ ಸಾಕ್ಷಿಗಳು ಮಾಡೋಕೆ ಒಪ್ಕೊಂಡ್ರು.

ನಮ್ಮಮ್ಮ ತೀರ್ಕೊಂಡು ಸ್ವಲ್ಪ ದಿನ ಆದ್ಮೇಲೆ ಆ್ಯಲಿಸ್‌ ಅನ್ನೋ ವಯಸ್ಸಾಗಿದ್ದ ಅಭಿಷಿಕ್ತ ಸಹೋದರಿ ‘ಕೂಟಗಳಿಗೆ ಬಾ’ ಅಂತ ನನ್ನನ್ನ ಕರೆದ್ರು. ನಮ್ಮಮ್ಮನ ಜೊತೆ ನಾನು ಕೂಟಗಳಿಗೆ ಹೋಗಿದ್ದಾಗ ಆ ಸಹೋದರಿ ನನ್ನನ್ನ ನೋಡಿದ್ರು. ನಾನು ಅಪ್ಪನ ಹತ್ರ “ನಾನು ಕೂಟಕ್ಕೆ ಹೋಗ್ಲಾ?” ಅಂತ ಕೇಳಿದೆ. ಆಗ ಅವರು ಅಮ್ಮನ ಶವ ಸಂಸ್ಕಾರದಲ್ಲಿ ಭಾಷಣ ಕೊಟ್ಟ ಆ ಸಹೋದರನಿಗೆ ಥ್ಯಾಂಕ್ಸ್‌ ಹೇಳೋಕೆ “ಒಂದೇ ಒಂದುಸಲ” ಹೋಗಿ ಬರೋಣ ಅಂತ ಅವ್ರೂ ನನ್ನ ಜೊತೆ ಬಂದ್ರು. ಅವತ್ತು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟ ನಡೀತು. ಅವತ್ತು ನಮ್ಮಪ್ಪ ಮೀಟಿಂಗ್‌ ಬಂದಿದ್ದು ತುಂಬನೇ ಒಳ್ಳೇದಾಯ್ತು. ಅವರು ಜನ್ರ ಮುಂದೆ ನಿಂತು ಮಾತಾಡೋಕೆ ಒಂದು ಕೋರ್ಸ್‌ ಮಾಡಿದ್ರು. ಅದ್ರಿಂದ ಕೂಟದಲ್ಲಿ ಭಾಷಣ ಕೊಟ್ಟ ರೀತಿ, ಹೇಳ್ಕೊಟ್ಟ ವಿಷ್ಯಗಳು ಅವ್ರಿಗೆ ತುಂಬನೇ ಇಷ್ಟ ಆಯ್ತು. ಅದಕ್ಕೆ ಪ್ರತಿ ವಾರ ಮೀಟಿಂಗ್‌ ಬರೋಕೆ ಅಪ್ಪ ತೀರ್ಮಾನ ಮಾಡಿದ್ರು. ಸ್ವಲ್ಪ ಸಮಯ ಕಳೆದ ಹಾಗೆ ಅವರು ಎಲ್ಲಾ ಕೂಟಗಳಿಗೂ ಬರೋಕೆ ಶುರುಮಾಡಿದ್ರು.

ಆ ಕಾಲದಲ್ಲಿ ಯಾರೆಲ್ಲಾ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ತಮ್ಮ ಹೆಸ್ರನ್ನ ಕೊಡ್ತಿದ್ರೋ, ಅವ್ರ ಹೆಸ್ರುಗಳನ್ನ ಆ ಶಾಲೆಯ ಸೇವಕ ಕೂಟದ ಆರಂಭದಲ್ಲಿ ಗಟ್ಟಿಯಾಗಿ ಕರೀತಿದ್ರು. ಆಗ ಪ್ರತಿಯೊಬ್ರೂ “ನಾನು ಬಂದಿದ್ದೀನಿ” ಅಂತ ಉತ್ರ ಕೊಡ್ತಿದ್ರು. ಒಂದಿನ ರಾತ್ರಿ ನಾನು, “ನನ್ನ ಹೆಸ್ರನ್ನೂ ಹಾಗೆ ಮುಂದಿನ ಮೀಟಿಂಗ್‌ನಲ್ಲಿ ಕರಿತೀರಾ?” ಅಂತ ಕೇಳಿದೆ. ಆಗ ಆ ಸಹೋದರ ನನ್ನನ್ನ ಹೊಗಳಿದ್ರು. ಆದ್ರೆ ‘ಹೆಸ್ರು ಯಾಕೆ ಕರೀತಾರೆ ಅಂತ ನಿನಗೆ ಗೊತ್ತಿದ್ಯಾ?’ ಅಂತ ಅವರು ನನ್ನನ್ನ ಕೇಳ್ಲಿಲ್ಲ.

ಈ ತರ ಹೆಸ್ರು ಕರೆದ್ರೆ ನಾನು ಆ ಶಾಲೆಯಲ್ಲಿ ಭಾಷಣ ಕೊಡಬೇಕಾಗುತ್ತೆ ಅಂತ ನನಗೆ ಗೊತ್ತೇ ಇರ್ಲಿಲ್ಲ. ನಾನು ಬರೀ ನನ್‌ ಹೆಸ್ರು ಕರೆದ್ರೆ ಸಾಕು ಅಂತ ಅಂದ್ಕೊಂಡಿದ್ದೆ. ಮುಂದಿನ ವಾರ ಅವರು ನನ್ನ ಹೆಸ್ರನ್ನ ಕರೆದ್ರು. ಆಗ ನಾನು ಹೆಮ್ಮೆಯಿಂದ “ಬಂದಿದ್ದೀನಿ” ಅಂತ ಹೇಳ್ದೆ. ಕೂಟ ಆದ್ಮೇಲೆ ಎಲ್ರೂ ನನ್ನನ್ನ ಪ್ರಶಂಸೆ ಮಾಡಿದ್ರು. ಸುಮಾರು ವಾರಗಳಾದ ಮೇಲೆ ನನ್ನ ಕೈಗೆ ಒಂದು ನೇಮಕದ ಚೀಟಿ ಕೊಟ್ರು. ಅದ್ರ ಬಗ್ಗೆನೇ ನಾನು ಈ ಲೇಖನದ ಶುರುವಿನಲ್ಲಿ ಹೇಳಿದ್ದು.

ನನಗೆ ತುಂಬ ಭಯ ಆಯ್ತು. ಆಗೆಲ್ಲಾ ಬರೀ ಬೈಬಲ್‌ ಓದೋ ನೇಮಕ ಇರ್ತಾ ಇರ್ಲಿಲ್ಲ. ವಿದ್ಯಾರ್ಥಿಗಳು 6-8 ನಿಮಿಷದ ಭಾಷಣ ತಯಾರಿ ಮಾಡಬೇಕಿತ್ತು. ನಮ್ಮಪ್ಪ ಆ ಭಾಷಣ ತಯಾರಿ ಮಾಡೋಕೆ ನನಗೆ ಸಹಾಯ ಮಾಡಿದ್ರು ಮತ್ತು ಭಾಷಣ ಕೊಡೋಕೆ ಮುಂಚೆ ಒಂದಿಪ್ಪತ್ತು ಸಲ ಪ್ರ್ಯಾಕ್ಟೀಸ್‌ ಮಾಡಿಸಿದ್ರು. ಭಾಷಣ ಕೊಟ್ಟ ಮೇಲೆ ನನಗೆ ಒಳ್ಳೊಳ್ಳೇ ಸಲಹೆಗಳು ಸಿಕ್ತು. ವರ್ಷಗಳು ಕಳೆದ ಹಾಗೆ ಯೆಹೋವ ದೇವರು ನಮ್ಮ ಅಪ್ಪನಿಂದ, ಅರ್ಹ ಸಹೋದರ ಸಹೋದರಿಯಿಂದ ಮತ್ತು ತನ್ನ ಸಂಘಟನೆಯಿಂದ ನನಗೆ ತರಬೇತಿ ಕೊಡ್ತಾ ಬಂದನು.

ನನ್ನ ತರಬೇತಿ ಮುಂದುವರೀತು

ಯೆಹೋವ ನನಗೆ ತರಬೇತಿ ಕೊಡೋದನ್ನ ಮುಂದುವರಿಸಿದನು. ನಾನು ಈ ಮುಂಚೆ ಹೇಳಿದ್ನಲ್ಲಾ ಸಹೋದರಿ ಆ್ಯಲಿಸ್‌, ನಾನು ಸೇವೆ ಶುರು ಮಾಡಿದಾಗ ನನಗೆ ತರಬೇತಿ ಕೊಟ್ರು. ಆ ಕಾಲದಲ್ಲಿ ಸೇವೆಗೆ ಹೋದಾಗ ನಾವು ಮನೆಯವ್ರಿಗೆ ಮೂರು ವಚನ ತೋರಿಸಿ ಆಮೇಲೆ ಪುಸ್ತಕ ಕೊಡ್ತಿದ್ವಿ. ನನ್ನ ಸರದಿ ಬಂದಾಗ ಸಹೋದರಿ ಆ್ಯಲಿಸ್‌ ತಮ್ಮನ್ನ ಪರಿಚಯ ಮಾಡ್ಕೊಂಡು ಮಾತು ಶುರು ಮಾಡ್ತಿದ್ರು. ಆಮೇಲೆ ಅವರು ನನಗೆ ಮೊದಲನೇ ವಚನ ಓದೋಕೆ ಹೇಳ್ತಿದ್ರು, ಅಲ್ಲಿಂದ ನಾನು ಮಾತುಕತೆ ಮುಂದುವರಿಸ್ತಿದ್ದೆ. ಆಮೇಲೆ ಎರಡನೇ ವಚನ, ಮೂರನೇ ವಚನ ಓದ್ತಿದ್ದೆ. ಇದಾದ್ಮೇಲೆ ಪ್ರಕಾಶನ ಕೊಡ್ತಿದ್ದೆ. ಸಮಯ ಕಳೆದ ಹಾಗೆ ನನ್ನನ್ನ ನಾನೇ ಪರಿಚಯ ಮಾಡ್ಕೊಂಡು ಮಾತನ್ನ ಹೇಗೆ ಶುರುಮಾಡೋದು ಅನ್ನೋದನ್ನ ಕಲಿತೆ. ನಮ್ಮಪ್ಪ 1954ರಲ್ಲಿ ದೀಕ್ಷಾಸ್ನಾನ ತಗೊಂಡ್ರು. ಆಮೇಲೆ ಸೇವೆಯಲ್ಲಿ ತರಬೇತಿ ಕೊಡೋದನ್ನ ಅವರು ಮುಂದುವರಿಸಿದ್ರು. ಅವರು ಒಬ್ಬ ಒಂಟಿ ಹೆತ್ತವರಾಗಿದ್ರೂ ಸತ್ಯದಲ್ಲೇ ನನ್ನನ್ನ ಬೆಳೆಸೋಕೆ ಅವ್ರ ಕೈಯಲ್ಲಿ ಏನಾಗುತ್ತೋ ಅದನ್ನೆಲ್ಲಾ ಮಾಡಿದ್ರು. ಆಧ್ಯಾತ್ಮಿಕ ವಿಷ್ಯಗಳಿಗೆ ಅವರು ತುಂಬ ಪ್ರಾಮುಖ್ಯತೆ ಕೊಡ್ತಿದ್ರು. ನಾವು ಎಲ್ಲಾ ಮೀಟಿಂಗ್‌ಗೆ ಹೋಗ್ತೀವಿ, ಶನಿವಾರ, ಭಾನುವಾರ ಬೆಳಿಗ್ಗೆ ಸೇವೆಗೆ ಹೋಗೇ ಹೋಗ್ತೀವಿ ಅಂತ ನನಗೆ ಚೆನ್ನಾಗಿ ಗೊತ್ತಿತ್ತು.

ನಾನು ಶಾಲೆಯಲ್ಲಿ ಅಷ್ಟೇನು ಚೆನ್ನಾಗಿ ಓದ್ತಿರಲಿಲ್ಲ. ಆದ್ರೂ 12 ವರ್ಷ ನಾನು ಓದಿದ ವಿಷ್ಯಗಳು ಜೀವನದಲ್ಲಿ ನನಗೆ ತುಂಬ ಸಹಾಯ ಮಾಡಿದೆ. ಉದಾಹರಣೆಗೆ, ನಾನು ಶಾಲೆಯಲ್ಲಿ ಗಣಿತನ ಮತ್ತು ಇಂಗ್ಲಿಷ್‌ ವ್ಯಾಕರಣನ ಚೆನ್ನಾಗಿ ಕಲಿತೆ. ಆಮೇಲೆ ನಾನು ಇಂಗ್ಲಿಷ್‌ ಕೋರ್ಸ್‌ನ ಮತ್ತು ಕಥೆ ಬರೆಯೋದನ್ನ ಕಲಿಸೋ ಕೋರ್ಸ್‌ನ ಆಯ್ಕೆ ಮಾಡಿದೆ. ಅದು ನನಗೆ ರೈಟಿಂಗ್‌ ಡಿಪಾರ್ಟ್‌ಮೆಂಟ್‌ನಲ್ಲಿ ಈಗಿರೋ ನೇಮಕನ ಮಾಡೋಕೆ ಸಹಾಯ ಮಾಡ್ತಿದೆ.

ಜನ್ರು ಯಾವಾಗ್ಲೂ “ನಿಮಗೆ ಸಂಗೀತ ಯಾಕಿಷ್ಟ?” ಅಂತ ಕೇಳ್ತಿರ್ತಾರೆ. ಅಪ್ಪ-ಅಮ್ಮ ಇಬ್ರಿಗೂ ಸಂಗೀತದ ಬಗ್ಗೆ ತುಂಬ ಆಸಕ್ತಿ ಇತ್ತು. ನನಗೆ 7 ವರ್ಷ ಇದ್ದಾಗ ನಾನು ಪಿಯಾನೋ ಕ್ಲಾಸ್‌ಗೆ ಸೇರ್ಕೊಂಡೆ. ಆದ್ರೆ ನಮ್ಮ ಟೀಚರ್‌ಗೆ ನಾನು ಅದನ್ನ ಕಲಿತೀನಿ ಅಂತ ಅನಿಸಲಿಲ್ಲ. ಅದಕ್ಕೇ ಅವರು ನಮ್ಮ ಅಪ್ಪಂಗೆ “ಇವನು ಪಿಯಾನೋ ಕಲಿಯೋದನ್ನ ನಿಲ್ಲಿಸಿದ್ರೆ ಒಳ್ಳೇದು” ಅಂತ ಹೇಳಿದ್ರು. ಯಾಕಂದ್ರೆ ಆ ಸಮಯದಲ್ಲಿ ಅದನ್ನ ಕಲಿಯೋಕೆ ನನಗೆ ಅಷ್ಟು ಆಸಕ್ತಿ ಇರ್ಲಿಲ್ಲ.

ಕೆಲವು ತಿಂಗಳಾದ ಮೇಲೆ ನಮ್ಮಪ್ಪ, ಸಂಗೀತ ಕಲಿಸೋ ಇನ್ನೊಬ್ಬ ಟೀಚರ್‌ನ ಹುಡುಕಿದ್ರು. ಈ ಸಲ ನಾನು ಪಿಯಾನೋ ನುಡಿಸೋದನ್ನ ಮತ್ತು ಹಾಡೋದನ್ನ ಚೆನ್ನಾಗಿ ಕಲಿತೆ. ಚಿಕ್ಕ ವಯಸ್ಸಲ್ಲಿ ನನಗೆ ಒಳ್ಳೇ ಧ್ವನಿ ಇತ್ತು. ಇದ್ರಿಂದ ಕೆಲವು ಸ್ಪರ್ಧೆಗಳಲ್ಲಿ ಗೆದ್ದೆ. ನಾನು ಸಂಗೀತ ಕಲಿತು ಡಿಗ್ರಿ ತಗೊಂಡ್ರೆ ಆಮೇಲೆ ಬೇರೆಯವ್ರಿಗೆ ಸಂಗೀತ ಕಲಿಸ್ತಾ ಪೂರ್ಣ ಸಮಯದ ಸೇವೆ ಮಾಡಬಹುದು ಅಂತ ಅಂದ್ಕೊಂಡೆ. ಆದ್ರೆ ಸಮಯ ಕಳಿತಾ-ಕಳಿತಾ ನಾನು ಸಂಗೀತ ಕಲಿಯೋದ್ರಲ್ಲಿ ಮತ್ತು ಪರೀಕ್ಷೆಗೆ ತಯಾರಿ ಮಾಡೋದ್ರಲ್ಲೇ ತುಂಬ ಸಮಯ ಹೋಗಿಬಿಡುತ್ತೆ ಅಂತ ನನಗೆ ಗೊತ್ತಾಯ್ತು. ಅದಕ್ಕೆ ಅದನ್ನ ಕಲಿಯೋದನ್ನ ಅಲ್ಲಿಗೇ ನಿಲ್ಲಿಸಿದೆ. 1963ರಲ್ಲಿ ರೆಗ್ಯುಲರ್‌ ಪಯನೀಯರಿಂಗ್‌ ಶುರುಮಾಡಿದೆ.

ಪಯನೀಯರ್‌ ಸೇವೆಯಿಂದ ಸಂತೋಷ ಸಿಗುತ್ತೆ

ನಾನು ಒಂದು ವರ್ಷ ಪಯನೀಯರಿಂಗ್‌ ಮಾಡಿದ ಮೇಲೆ ಕಪಸ್ಕೇಸಿಂಗ್‌, ಆಂಟೇರಿಯೋದಲ್ಲಿ ವಿಶೇಷ ಪಯನೀಯರ್‌ ಆಗಿ ನನಗೆ ನೇಮಕ ಸಿಕ್ತು. ಡ್ಯಾನಿಯಲ್‌ ಸ್ಕಿನ್ನರ್‌, ನನ್ನ ಪಯನೀಯರ್‌ ಪಾರ್ಟ್‌ನರ್‌ ಆಗಿದ್ರು. ಅವ್ರ ವಯಸ್ಸು ನನ್ನ ವಯಸ್ಸಿಗಿಂತ ಎರಡು ಪಟ್ಟು ಜಾಸ್ತಿ ಇತ್ತು. ಸಭೆ ಹೇಗೆ ಕೆಲಸ ಮಾಡುತ್ತೆ ಅಂತ ಅವರು ನನಗೆ ತುಂಬ ವಿಷ್ಯಗಳನ್ನ ಹೇಳ್ಕೊಟ್ರು. ನನಗೆ 20 ವರ್ಷ ಇದ್ದಾಗ ಸಭೆಯ ಸೇವಾ ಸಮಿತಿಯಲ್ಲಿ ಕೆಲಸ ಮಾಡೋ ನೇಮಕ ಸಿಕ್ತು. ಅದಕ್ಕೇ ನಾನಿನ್ನೂ ಜಾಸ್ತಿನೇ ಕಲಿಬೇಕಿತ್ತು. ನನಗೆ ಖುಷಿಯಾಗೋ ವಿಷ್ಯ ಏನಂದ್ರೆ, ಸಂಘಟನೆ ಇವತ್ತಿಗೂ ಯುವ ಸಹೋದರರಿಗೆ ತರಬೇತಿ ಕೊಡೋಕೆ ಜಾಸ್ತಿ ಒತ್ತು ಕೊಡುತ್ತೆ. ಯುವ ಸಹೋದರರು ಕಷ್ಟಪಟ್ಟು ಕೆಲಸ ಮಾಡಿದ್ರೆ ಅವ್ರ ವಯಸ್ಸು ಚಿಕ್ಕದಾಗಿದ್ರೂ ಯೆಹೋವ ಅವ್ರನ್ನ ಚೆನ್ನಾಗಿ ಉಪಯೋಗಿಸ್ತಾನೆ.

ಕಪಸ್ಕೇಸಿಂಗ್‌ನಲ್ಲಿ ಜೀವನ ಮಾಡೋದು ಅಷ್ಟು ಸುಲಭ ಆಗಿರ್ಲಿಲ್ಲ. ಯಾಕಂದ್ರೆ ಚಳಿಗಾಲದಲ್ಲಿ ತಾಪಮಾನ -44 ಸೆಲ್ಸಿಯಸ್‌ಗೆ ಇಳೀತಿತ್ತು. ಆದ್ರೆ ಕೆಲವೊಂದು ಸಲ 33 ಸೆಲ್ಸಿಯಸ್‌ ಬಿಸಿ ಇರ್ತಿತ್ತು. ಡ್ಯಾನಿಯಲ್‌ ಮತ್ತು ನಾನು ಎಲ್ಲಾ ಜಾಗಗಳಿಗೂ ನಡ್ಕೊಂಡೇ ಹೋಗ್ತಿದ್ವಿ. ಈ ನೇಮಕದಲ್ಲಿ ನಮಗೆ ತುಂಬ ಖುಷಿ ಸಿಕ್ತು. ಅದ್ರಲ್ಲಿ ಒಂದು ಖುಷಿ ಏನಂದ್ರೆ ಸಹೋದರಿ ಲಿಂಡಾ ಕೋಲ್‌ನ ಭೇಟಿಮಾಡಿದ್ದು. ಆಮೇಲೆ ಅವರು ಲಿಂಡಾ ಸ್ಪ್ಲೇನ್‌ ಆದ್ರು.

ಲಿಂಡಾಗೆ ಸೇವೆಗೆ ಹೋಗೋದಂದ್ರೆ ತುಂಬ ಇಷ್ಟ. ಅವಳಿಗೆ ತುಂಬ ಪುನರ್ಭೇಟಿನೂ ಇತ್ತು. ಅವಳು ಉದಾರಿಯಾಗಿದ್ದಳು, ಬೇರೆಯವ್ರ ಜೊತೆ ದಯೆಯಿಂದ ನಡ್ಕೊಳ್ತಿದ್ದಳು, ಜನ್ರ ಜೊತೆ ಇರೋಕೆ ಇಷ್ಟಪಡ್ತಿದ್ದಳು. ಅವಳಮ್ಮ ಗೋಲ್ಡಿ, ನಂಬಿಗಸ್ತ ಸಹೋದರಿ ಆಗಿದ್ರು, ಅವಳ ಅಪ್ಪ ಆ್ಯಲೆನ್‌ ಮೊದಮೊದ್ಲು ಸತ್ಯನ ವಿರೋಧಿಸ್ತಿದ್ರು. ವಿರೋಧ ಇದ್ರೂ ಅವಳ ಅಮ್ಮ ಅವಳನ್ನ ಮತ್ತು ಅವಳ ತಮ್ಮಂದಿರಾದ ಜಾನ್‌ ಮತ್ತು ಗೋರ್ಡನ್‌ನ ರಾಜ್ಯ ಸಭಾಗೃಹಕ್ಕೆ ಕರ್ಕೊಂಡು ಬರ್ತಿದ್ರು, ಸೇವೆ ಮಾಡೋಕೆ ಅವ್ರಿಗೆ ತರಬೇತಿ ಕೊಡ್ತಿದ್ರು. ಒಂದು ಸಮಯದಲ್ಲಿ ಲಿಂಡಾ, ಅವಳ ತಾಯಿ, ಅವಳ ಇಬ್ರು ತಮ್ಮಂದಿರು ಎಲ್ರೂ ಪಯನೀಯರಿಂಗ್‌ ಸೇವೆ ಮಾಡ್ತಿದ್ರು. ವರ್ಷಗಳು ಕಳೆದ ಮೇಲೆ ಅವ್ರ ಅಪ್ಪ ಆ್ಯಲೆನ್‌ ಕೂಡ ಸತ್ಯ ಸ್ವೀಕರಿಸಿದ್ರು ಮತ್ತು ಸಭೆಯಲ್ಲಿ ಕಷ್ಟಪಟ್ಟು ಕೆಲಸ ಮಾಡೋಕೆ ಶುರುಮಾಡಿದ್ರು.

ನಾನಿನ್ನೂ ಜಾಸ್ತಿ ತರಬೇತಿ ಪಡ್ಕೊಳ್ಳೋಕೆ 1965ರಲ್ಲಿ ಕೆನಡಾ ಬೆತೆಲ್‌ನಲ್ಲಿ ಒಂದು ತಿಂಗಳು ನಡಿಯೋಕಿದ್ದ ರಾಜ್ಯ ಸೇವಾ ಶಾಲೆಗೆ ಹಾಜರಾಗೋಕೆ ಆಮಂತ್ರಣ ಸಿಕ್ತು. ನಾನು ಆ ಶಾಲೆಗೆ ಹೋದಾಗ ನನಗೆ ಗಿಲ್ಯಡ್‌ ಶಾಲೆಗೆ ಅರ್ಜಿ ಹಾಕೋಕೆ ಹೇಳಿದ್ರು. ನಾನು ಯಾವತ್ತೂ ಮಿಷನರಿ ಸೇವೆ ಮಾಡೋದ್ರ ಬಗ್ಗೆ ಯೋಚ್ನೆನೂ ಮಾಡಿರ್ಲಿಲ್ಲ. ಆ ಸೇವೆ ಮಾಡೋ ಅರ್ಹತೆ ನನಗಿದೆ ಅಂತನೂ ನನಗೆ ಅನಿಸಿರಲಿಲ್ಲ. ಆದ್ರೂ ಆ ಅರ್ಜಿ ಹಾಕಿದೆ. ನನಗೆ 42ನೇ ಗಿಲ್ಯಡ್‌ ಶಾಲೆಗೆ ಹಾಜರಾಗೋ ಅವಕಾಶ ಸಿಕ್ತು. ಗಿಲ್ಯಡ್‌ಗೆ ಹೋದಾಗ ನಮ್ಮ ಶಿಕ್ಷಕರು ನಾನು ಏನು ಪ್ರಗತಿ ಮಾಡಿದ್ದೀನಿ, ಇನ್ನೂ ಎಲ್ಲಿ ಪ್ರಗತಿ ಮಾಡಬೇಕು ಅಂತ ಒಂದು ರಿಪೋರ್ಟ್‌ನಲ್ಲಿ ಕ್ರಮವಾಗಿ ಬರೆದು ಕೊಡ್ತಿದ್ರು. ಈ ಶಾಲೆ ಶುರು ಆದಾಗಿಂದಾನೇ ಶಿಕ್ಷಕರು ನನಗೆ ‘ನೀನು ಈ ಶಾಲೆಯಲ್ಲಿ ಸಂಘಟನೆ ಬಗ್ಗೆ ಎಷ್ಟಾಗುತ್ತೋ ಅಷ್ಟು ಚೆನ್ನಾಗಿ ತಿಳ್ಕೊ’ ಅಂತ ಪ್ರೋತ್ಸಾಹ ಕೊಡ್ತಿದ್ರು. ಆಗ ನನಗೆ ಬರೀ 21 ವರ್ಷ ಆಗಿದ್ರಿಂದ ಆ ಸಲಹೆ ತುಂಬ ಸೂಕ್ತವಾಗಿತ್ತು.

ನಮಗೆ ಗಿಲ್ಯಡ್‌ ಶಾಲೆಯಲ್ಲಿ, ರೇಡಿಯೋ ಮತ್ತು ಟಿವಿ ಮಾಧ್ಯಮದವ್ರ ಜೊತೆ, ವಾರ್ತಾಪತ್ರಿಕೆಯವ್ರ ಜೊತೆ ಹೇಗೆ ಮಾತಾಡಬೇಕು ಅನ್ನೋ ತರಬೇತಿ ಸಿಕ್ತು. ಆ ತರಬೇತಿ ತುಂಬ ಆಸಕ್ತಿಕರವಾಗಿತ್ತು. ಆದ್ರೆ ಅದು ಮುಂದೆ ಎಷ್ಟು ಸಹಾಯ ಮಾಡುತ್ತೆ ಅಂತ ನನಗೆ ಆಗ ಅರ್ಥ ಆಗಿರ್ಲಿಲ್ಲ. ಆ ತರಬೇತಿ ಹೇಗೆ ಸಹಾಯ ಮಾಡ್ತು ಅಂತ ಮುಂದೆ ಹೇಳ್ತೀನಿ.

ಸೆನೆಗಲ್‌ಗೆ ಹೋದೆ

ಗಿಲ್ಯಡ್‌ ಶಾಲೆ ಮುಗಿದು ಸ್ವಲ್ಪ ದಿನ ಆದ್ಮೇಲೆ ನನಗೆ ಮತ್ತು ನನ್ನ ಮಿಷನರಿ ಪಾರ್ಟ್‌ನರ್‌ ಆದ ಮೈಕಲ್‌ ಹೋಲೆಗೆ ಆಫ್ರಿಕಾ ದೇಶದ ಸೆನೆಗಲ್‌ ಅನ್ನೋ ಜಾಗಕ್ಕೆ ಹೋಗೋ ನೇಮಕ ಸಿಕ್ತು. ನಾವಲ್ಲಿಗೆ ಹೋದಾಗ ಆ ಇಡೀ ದೇಶದಲ್ಲಿ ಇದ್ದಿದ್ದು ಸುಮಾರು 100 ಪ್ರಚಾರಕರಷ್ಟೇ.

ನಾನು ಈ ನೇಮಕದಲ್ಲಿ ಹಲವಾರು ತಿಂಗಳು ಕಳೆದ ಮೇಲೆ ಅಲ್ಲಿದ್ದ ಬ್ರಾಂಚ್‌ ಆಫೀಸ್‌ಗೆ ವಾರದಲ್ಲಿ ಒಂದಿನ ಹೋಗಿ ಕೆಲಸ ಮಾಡೋಕೆ ಆಮಂತ್ರಣ ಸಿಕ್ತು. ಅಲ್ಲಿದ್ದ “ಬ್ರಾಂಚ್‌ ಆಫೀಸ್‌” ಮಿಷನರಿ ಮನೆಯಲ್ಲಿದ್ದ ಒಂದು ರೂಮ್‌ ಆಗಿತ್ತಷ್ಟೇ. ಈ ಬ್ರಾಂಚ್‌ ಆಫೀಸ್‌ ತುಂಬ ಚಿಕ್ಕದಾಗಿದ್ರೂ ಇದು ಆ ದೇಶದಲ್ಲಿ ಯೆಹೋವನ ಸಂಘಟನೆನ ಪ್ರತಿನಿಧಿಸ್ತಾ ಇದೆ ಅಂತ ಬ್ರಾಂಚ್‌ ಸೇವಕರಾದ ಸಹೋದರ ಇಮ್ಮಾನ್ಯುಯೆಲ್‌ ಪ್ಯಾಟ್ರಾಕಸ್‌ ನನಗೆ ಅರ್ಥಮಾಡಿಸಿದ್ರು. ಒಂದುಸಲ ಸಹೋದರ ಪ್ಯಾಟ್ರಾಕಸ್‌ ಎಲ್ಲಾ ಮಿಷನರಿಗಳಿಗೆ ಪ್ರೋತ್ಸಾಹ ಕೊಡೋ ಪತ್ರಗಳನ್ನ ನಾವು ಬರೀಬೇಕು ಅಂತ ತೀರ್ಮಾನ ಮಾಡಿದ್ರು. ಆ ಕಾಲದಲ್ಲೆಲ್ಲ ಪತ್ರಗಳನ್ನ ನಕಲು ಮಾಡೋದು ಅಷ್ಟು ಸುಲಭ ಆಗಿರ್ಲಿಲ್ಲ ಮತ್ತು ಅದಕ್ಕೆ ತುಂಬ ಹಣನೂ ಖರ್ಚಾಗ್ತಿತ್ತು. ಅದಕ್ಕೇ ನಾವು ಆ ಪತ್ರಗಳನ್ನ ಟೈಪ್‌ರೈಟರ್‌ನಿಂದ ಟೈಪ್‌ ಮಾಡಿದ್ವಿ. ಇದನ್ನ ಮಾಡೋದು ತುಂಬ ಕಷ್ಟ ಆಗಿತ್ತು, ಯಾಕಂದ್ರೆ ಒಂದು ಚಿಕ್ಕ ತಪ್ಪಾದ್ರೂ ಅದನ್ನ ಅಳಿಸೋಕೆ ಆಗ್ತಿರಲಿಲ್ಲ. ಅದಕ್ಕೇ ತಪ್ಪಾಗದೇ ಇರೋ ತರ ಟೈಪ್‌ ಮಾಡಬೇಕಿತ್ತು.

ನಾನು ಉಳ್ಕೊಳ್ತಿದ್ದ ಮಿಷನರಿ ಮನೆಗೆ ವಾಪಸ್‌ ಹೋಗೋಕೆ ಅವತ್ತು ಸಂಜೆ ರೆಡಿ ಆಗ್ತಿದ್ದೆ. ಆಗ ಸಹೋದರ ಪ್ಯಾಟ್ರಾಕಸ್‌ “ಡೇವಿಡ್‌, ಸೊಸೈಟಿ ಈ ಪತ್ರನ ನಿಂಗೆ ಬರೆದಿದ್ದಾರೆ” ಅಂತ ನನ್ನ ಕೈಗೆ ಒಂದು ಎನ್ವಲಪ್‌ ಕೊಟ್ರು. ಅದನ್ನ ತೆರೆದು ನೋಡಿದಾಗ ನಾನು ಟೈಪ್‌ ಮಾಡಿದ್ದೇ ಒಂದು ಪತ್ರ ಅದ್ರಲ್ಲಿತ್ತು. ಈ ಘಟನೆ, ಸ್ಥಳೀಯ ಬ್ರಾಂಚ್‌ ಆಫೀಸ್‌ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ನಾವು ನಮ್ಮ ಸಂಘಟನೆಗೆ ಗೌರವ ಕೊಡಬೇಕು ಅನ್ನೋ ಪಾಠನ ನನಗೆ ಕಲಿಸ್ತು.

ಸಹೋದರ ಸ್ಪ್ಲೇನ್‌ ಮತ್ತು ಸಹೋದರ, ಸಹೋದರಿಯರ ಒಂದು ಗುಂಪು ಖುಷಿಯಿಂದ ನಗ್ತಾ ತೆಗೆಸ್ಕೊಂಡಿರೋ ಒಂದು ಫೋಟೋ.

1967, ಸೆನೆಗಲ್‌ನಲ್ಲಿ ನಾವು ಮತ್ತು ಜೊತೆ ಮಿಷನರಿಗಳು

ಸಭೆಯಲ್ಲಿದ್ದ ತುಂಬ ಜನ್ರನ್ನ ನಾನು ಫ್ರೆಂಡ್ಸ್‌ ಮಾಡ್ಕೊಂಡೆ. ಶನಿವಾರ ಸಂಜೆ ಅವ್ರ ಕುಟುಂಬದ ಜೊತೆ ಸಮಯ ಕಳೀತಿದ್ದೆ. ಅವೆಲ್ಲ ಸಂತೋಷದ ಕ್ಷಣಗಳಾಗಿದ್ವು. ನಾನು ಇವತ್ತಿಗೂ ಅವ್ರ ಜೊತೆಯಲ್ಲಿ ಮಾತಾಡ್ತಾ ಇರ್ತೀನಿ. ಸೆನೆಗಲ್‌ನಲ್ಲಿದ್ದಾಗ ನಾನು ಫ್ರೆಂಚ್‌ ಭಾಷೆ ಮಾತಾಡೋದನ್ನ ಕಲಿತೆ. ಅವತ್ತು ಕಲ್ತಿದ್ದು ಇವತ್ತಿಗೂ ನಾನು ಬೇರೆಬೇರೆ ಬ್ರಾಂಚ್‌ಗಳನ್ನ ಭೇಟಿ ಮಾಡುವಾಗ ನನಗೆ ಸಹಾಯ ಮಾಡ್ತಿದೆ.

1968ರಲ್ಲಿ ನನಗೆ ಮತ್ತು ಲಿಂಡಾಗೆ ನಿಶ್ಚಿತಾರ್ಥ ಆಯ್ತು. ಅಲ್ಲಿಂದ ಕೆಲವು ತಿಂಗಳುಗಳು ಕಳೆದ ಮೇಲೆ ನಾನು ಸೆನೆಗಲ್‌ನಲ್ಲಿ ಒಂದು ಪಾರ್ಟ್‌ಟೈಮ್‌ ಕೆಲಸ ಹುಡುಕೋಕೆ ಶುರುಮಾಡಿದೆ. ಇದ್ರಿಂದ ನಾನು ಮತ್ತು ಲಿಂಡಾ ಜೊತೆಯಾಗಿ ಪಯನೀಯರ್‌ ಸೇವೆ ಮಾಡಬಹುದು ಅಂದ್ಕೊಂಡೆ. ಆದ್ರೆ ಅಲ್ಲಿದ್ದ ಕೆಲಸದ ಧಣಿಗಳು ಬೇರೆ ದೇಶದವ್ರಿಗೆ ಕೆಲಸ ಕೊಡೋದಕ್ಕಿಂತ ತಮ್ಮ ದೇಶದವ್ರಿಗೆ ಕೆಲಸ ಕೊಡೋಕೆ ನೋಡ್ತಿದ್ರು. ಕೊನೆಗೆ ನಾನು ಕೆನಡಾಗೆ ವಾಪಸ್‌ ಬಂದೆ. ಅಲ್ಲಿ ನಾನು ಮತ್ತು ಲಿಂಡಾ ಮದುವೆ ಆದ್ವಿ. ಆಮೇಲೆ ನಮಗೆ ಎಡ್ಮುಂಡ್ಸ್ಟನ್‌ ನ್ಯೂ ಬ್ರನ್ಸ್‌ವಿಕ್‌ಗೆ ವಿಶೇಷ ಪಯನೀಯರ್‌ ಆಗಿ ನೇಮಕ ಸಿಕ್ತು. ಇದು ಕ್ವಿಬೆಕ್‌ ಪ್ರಾಂತ್ಯದ ಗಡಿಯಲ್ಲಿದ್ದ ಒಂದು ಚಿಕ್ಕ ಊರಾಗಿತ್ತು.

ಡೇವಿಡ್‌ ಮತ್ತು ಲಿಂಡಾ ಸ್ಪ್ಲೇನ್‌ ಒಂದು ಹೂದೋಟದಲ್ಲಿ ನಗ್ತಾ ನಿಂತಿದ್ದಾರೆ.

1969, ನಮ್ಮ ಮದುವೆ

ನ್ಯೂ ಬ್ರನ್ಸ್‌ವಿಕ್‌ ಮತ್ತು ಕ್ವಿಬೆಕ್‌ನಲ್ಲಿ ನಾವು ಮಾಡಿದ ಪಯನೀಯರ್‌ ಸೇವೆ

ಆ ಊರಲ್ಲಿ ಪ್ರಚಾರಕರು ಇರಲಿಲ್ಲ, ಬೈಬಲನ್ನ ಕಲಿತಿದ್ದ ಕೆಲವು ವಿದ್ಯಾರ್ಥಿಗಳಿದ್ರು. ಅಲ್ಲಿ ಕ್ಯಾಥೋಲಿಕ್‌ ಧರ್ಮದ್ದೇ ಮೇಲುಗೈ. ಆ ಧರ್ಮ ಜನ್ರ ಜೀವನವನ್ನ ತುಂಬ ಪ್ರಭಾವಿಸಿತ್ತು. ಅಲ್ಲಿ ಹೆಚ್ಚುಕಮ್ಮಿ ಪ್ರತಿ ಮನೆ ಮುಂದೆನೂ ಯೆಹೋವನ ಸಾಕ್ಷಿಗಳಿಗೆ ಪ್ರವೇಶ ಇಲ್ಲ ಅಂತ ಬೋರ್ಡ್‌ ಇರ್ತಿತ್ತು. ಈ ತರ ಬೋರ್ಡ್‌ ಹಾಕಿದ್ರೆ ಅವ್ರ ಅಭಿಪ್ರಾಯನ ಗೌರವಿಸಿ ಅಂಥ ಮನೆಗಳಿಗೆ ಹೋಗಬಾರದು ಅಂತ ಈಗಿರೋ ತರ ಆಗಿನ ಕಾಲದಲ್ಲೆಲ್ಲ ಅದಕ್ಕೆ ಜಾಸ್ತಿ ಒತ್ತು ಕೊಡ್ತಿರಲಿಲ್ಲ. ಅದಕ್ಕೇ ಮನೆ ಮುಂದೆ ಬೋರ್ಡ್‌ ಇರಲಿ, ಇಲ್ಲದೇ ಇರಲಿ ನಾವಂತೂ ಅವ್ರ ಮನೆಗಳಿಗೆ ಹೋಗ್ತಿದ್ವಿ. ಪ್ರತಿವಾರ ಕ್ಯಾಥೋಲಿಕ್‌ ಸಂಘಟನೆ ಅಲ್ಲಿನ ಸ್ಥಳೀಯ ನ್ಯೂಸ್‌ಪೇಪರಲ್ಲಿ, “ಯೆಹೋವನ ಸಾಕ್ಷಿಗಳಂಥ ಪೀಡೆಗಳನ್ನ ಹುಡುಕಿ ಅವ್ರ ಹೆಸ್ರು ಇಲ್ಲದ ಹಾಗೆ ಮಾಡೋಣ” ಅಂತ ನೋಟಿಸ್‌ ಹಾಕ್ತಿದ್ರು. ಆ ಇಡೀ ಊರಲ್ಲಿ ಇದ್ದಿದ್ದು ನಾಲ್ಕೇ “ಪೀಡೆಗಳು”—ವಿಕ್ಟರ್‌ ಮತ್ತು ವೆಲ್ಡಾ ನಾರ್ಬರ್ಗ್‌, ಲಿಂಡಾ ಮತ್ತು ನಾನು. ಹಾಗಾಗಿ ಅವರು ಯಾವ ಪೀಡೆಗಳ ಬಗ್ಗೆ ಹೇಳ್ತಿದ್ದಾರೆ ಅಂತ ನಮಗೆ ಡೌಟೇ ಇರಲಿಲ್ಲ!

ಸರ್ಕಿಟ್‌ ಮೇಲ್ವಿಚಾರಕನ ಮೊದಲ ಭೇಟಿಯನ್ನ ನಾನು ಯಾವತ್ತೂ ಮರೆಯಲ್ಲ. ಅವರು ನಮ್ಮ ಜೊತೆ ಒಂದು ವಾರ ಕಳೆದ ಮೇಲೆ, ‘ಬಹುಶಃ ನೀವಿಲ್ಲಿರೋ ತನಕ ಏನು ಮಾಡಬಹುದಂದ್ರೆ ಯೆಹೋವನ ಸಾಕ್ಷಿಗಳ ಬಗ್ಗೆ ಜನ್ರಿಗಿರೋ ತಪ್ಪಾಭಿಪ್ರಾಯನ ಹೋಗಿಸಬಹುದು’ ಅಂತ ನಮಗೆ ಹೇಳಿದ್ರು. ಅವತ್ತಿಂದ ಅದೇ ನಮ್ಮ ಗುರಿ ಆಯ್ತು. ಅದ್ರಲ್ಲಿ ನಮಗೆ ಯಶಸ್ಸು ಕೂಡ ಸಿಕ್ತು. ದೀನರಾಗಿರೋ ಯೆಹೋವನ ಸಾಕ್ಷಿಗಳಿಗೂ ಮತ್ತು ಅಹಂಕಾರಿಗಳಾಗಿದ್ದ ಕ್ಯಾಥೋಲಿಕ್‌ ಚರ್ಚ್‌ ಪಾದ್ರಿಗಳಿಗೂ ಇರೋ ವ್ಯತ್ಯಾಸ ನಿಧಾನವಾಗಿ ಜನ್ರಿಗೆ ಗೊತ್ತಾಯ್ತು. ಈಗ ಆ ಊರಲ್ಲಿ ಒಂದು ಚಿಕ್ಕ ಸಭೆ ಇದೆ.

ಆ ಊರಲ್ಲಿ ಸುಮಾರು ಒಂದು ವರ್ಷ ನಮ್ಮ ನೇಮಕ ಮಾಡಿದ ಮೇಲೆ ನಮಗೆ ಕ್ವಿಬೆಕ್‌ ಊರಲ್ಲಿದ್ದ ಒಂದು ದೊಡ್ಡ ಸಭೆಯಲ್ಲಿ ಸೇವೆ ಮಾಡೋಕೆ ಆಮಂತ್ರಣ ಸಿಕ್ತು. ಅಲ್ಲಿದ್ದ ಸಹೋದರ ಮತ್ತು ಸಹೋದರಿಯರು ತುಂಬ ಅತಿಥಿಸತ್ಕಾರ ತೋರಿಸ್ತಿದ್ರು. ಅವ್ರ ಜೊತೆ ನಾವು ಆರು ತಿಂಗಳು ಕಳೆದ್ವಿ. ಆಮೇಲೆ ನಮಗೆ ಸಂಚರಣ ಕೆಲಸ ಮಾಡೋಕೆ ಆಮಂತ್ರಣ ಸಿಕ್ತು.

ಮುಂದಿನ 14 ವರ್ಷಗಳು ಕ್ವಿಬೆಕ್‌ ಪ್ರಾಂತ್ಯದಲ್ಲಿ ನಾವು ಬೇರೆಬೇರೆ ಸಭೆಗಳನ್ನ ಭೇಟಿ ಮಾಡಿದ್ವಿ. ಆ ದಿನಗಳನ್ನ ನಾನು ಮರೆಯೋಕಾಗಲ್ಲ! ಅಲ್ಲಿ ಸಿಹಿಸುದ್ದಿ ಸಾರೋ ಕೆಲಸ ತುಂಬ ಚೆನ್ನಾಗಿ ನಡೀತು, ಒಳ್ಳೆ ಪ್ರತಿಫಲನೂ ಸಿಕ್ತು. ನಾವಲ್ಲಿ ಸಭೆಗಳನ್ನ ಭೇಟಿ ಮಾಡ್ತಿದ್ದಾಗ ಒಂದಕ್ಕಿಂತ ಜಾಸ್ತಿ ಕುಟುಂಬದವರು ಬೈಬಲ್‌ ಸ್ಟಡಿ ತಗೊಂಡು ದೀಕ್ಷಾಸ್ನಾನ ತಗೊಳ್ಳೋಕೆ ಮುಂದೆ ಬರ್ತಿದ್ರು!

ಕಷ್ಟಪಟ್ಟು ಕೆಲಸ ಮಾಡಿದ ಸಹೋದರ ಮತ್ತು ಸಹೋದರಿಯರನ್ನ ನಾವು ನೆನಸ್ಕೊಳ್ತೀವಿ

ಕೆನಡಾ ದೇಶದ ಫ್ರೆಂಚ್‌ ಭಾಷೆ ಮಾತಾಡೋ ಸಹೋದರ ಸಹೋದರಿಯರು ಎಲ್ರಿಗೂ ತುಂಬ ಇಷ್ಟ ಆಗ್ತಾರೆ, ಯಾಕಂದ್ರೆ ಅವರು ಅನಿಸಿದ್ದನ್ನ ನೇರವಾಗಿ ಹೇಳ್ತಾರೆ, ಖುಷಿ-ಖುಷಿಯಾಗಿರ್ತಾರೆ ಮತ್ತು ತುಂಬ ಉತ್ಸಾಹ ತೋರಿಸ್ತಾರೆ. ಆದ್ರೆ ಸತ್ಯ ಸ್ವೀಕರಿಸೋದು ಅವ್ರಿಗೆ ಅಷ್ಟು ಸುಲಭ ಆಗಿರಲಿಲ್ಲ. ಅವ್ರ ಕುಟುಂಬದವ್ರಿಂದ ತುಂಬ ವಿರೋಧ ಇತ್ತು. ಕೆಲವರು ಚಿಕ್ಕವ್ರಿದ್ದಾಗ ಸತ್ಯದಲ್ಲಿಲ್ಲದ ಅಪ್ಪ-ಅಮ್ಮ ಅವ್ರಿಗೆ, “ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋದನ್ನ ನಿಲ್ಲಿಸಿ ಇಲ್ಲಾಂದ್ರೆ ಮನೆ ಬಿಟ್ಟು ಹೋಗಿ!” ಅಂತ ಹೇಳ್ತಿದ್ರು. ಇಷ್ಟೆಲ್ಲಾ ವಿರೋಧ ಇದ್ರೂ ಅವ್ರೆಲ್ಲರೂ ಯೆಹೋವನಿಗೆ ನಿಯತ್ತಾಗಿದ್ರು. ಅವ್ರನ್ನ ನೋಡಿ ಯೆಹೋವನಿಗೆ ಖಂಡಿತ ಹೆಮ್ಮೆ ಆಗಿರುತ್ತೆ!

ಆ ಕಾಲದಲ್ಲಿ ಕ್ವಿಬೆಕ್‌ನಲ್ಲಿ ಸೇವೆಮಾಡಿದ ಪಯನೀಯರ್‌ ಮತ್ತು ವಿಶೇಷ ಪಯನೀಯರ್‌ಗಳ ಬಗ್ಗೆ ನಾನೀಗ ಹೇಳ್ಲೇಬೇಕು. ಅವ್ರಲ್ಲಿ ಹೆಚ್ಚಿನವರು ಕೆನಡಾದ ಬೇರೆಬೇರೆ ಭಾಗಗಳಿಂದ ಬಂದಿದ್ರು. ಅವರು ಇಲ್ಲಿಗೆ ಬಂದಾಗ ಫ್ರೆಂಚ್‌ ಭಾಷೆ ಮಾತಾಡೋಕೆ ಕಲಿತ್ರೆ ಮಾತ್ರ ಸಾಕಾಗ್ತಿರಲಿಲ್ಲ. ಅದ್ರ ಜೊತೆಗೆ, ಕ್ಯಾಥೋಲಿಕ್‌ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದ ಜನ್ರ ಸಂಸ್ಕೃತಿನ, ಅವರು ಹೇಗೆ ಯೋಚ್ನೆ ಮಾಡ್ತಾರೆ ಅನ್ನೋದನ್ನ ಕೂಡ ಕಲಿಬೇಕಿತ್ತು.

ಎಲ್ಲಿ ಪ್ರಚಾರಕರು ಇರಲಿಲ್ಲವೋ ಅಂಥ ಟೆರಿಟೊರಿಗಳಿಗೆ ವಿಶೇಷ ಪಯನೀಯರರನ್ನ ನೇಮಕ ಮಾಡ್ತಿದ್ರು. ಅಲ್ಲಿದ್ದ ಜನ್ರಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ತಪ್ಪಭಿಪ್ರಾಯ ಇದ್ದಿದ್ರಿಂದ ಪಯನೀಯರರಿಗೆ ಉಳ್ಕೊಳ್ಳೋಕೆ ಮನೆ ಸಿಗೋದು ಮತ್ತು ಪಾರ್ಟ್‌-ಟೈಮ್‌ ಕೆಲಸ ಸಿಗೋದು ಕಷ್ಟ ಆಗ್ತಿತ್ತು. ಹೊಸದಾಗಿ ಮದುವೆ ಆಗಿರೋರು ಕೂಡ ನಾಲ್ಕು, ಆರು, ಎಂಟು ಜನ್ರ ಜೊತೆ ಒಂದು ಮನೆಲಿ ಇರಬೇಕಾಗ್ತಿತ್ತು. ಯಾಕಂದ್ರೆ ಒಬ್ಬೊಬ್ರೇ ಒಂದೊಂದು ಮನೆಲಿ ಇರುವಷ್ಟು ಹಣ ಅವ್ರ ಹತ್ರ ಇರ್ತಿರಲಿಲ್ಲ. ಆದ್ರೂ ಆ ಪಯನೀಯರರು ಕಷ್ಟಪಟ್ಟು ಸೇವೆ ಮಾಡ್ತಿದ್ರು. ಅವ್ರಿಗೆ ಒಂದು ಬೈಬಲ್‌ ಸ್ಟಡಿ ಸಿಕ್ಕಿದಾಗ ಆ ವಿದ್ಯಾರ್ಥಿಗೆ ಸಹಾಯ ಮಾಡೋಕೆ ತಮ್ಮ ಕೈಲಾಗಿದ್ದೆಲ್ಲಾ ಮಾಡ್ತಿದ್ರು. ಈಗ ಕ್ವಿಬೆಕ್‌ನಲ್ಲಿ ತುಂಬ ಪ್ರಚಾರಕರಿದ್ದಾರೆ. ಅದಕ್ಕೇ ಅಲ್ಲಿದ್ದ ಪಯನೀಯರರು ಅಗತ್ಯ ಇರೋ ಬೇರೆ ಜಾಗಗಳಿಗೆ ಹೋಗಿದ್ದಾರೆ.

ನಾವು ಸರ್ಕಿಟ್‌ ಕೆಲಸದಲ್ಲಿ ಸಭೆಗಳನ್ನ ಭೇಟಿ ಮಾಡ್ತಿದ್ದಾಗ ಶನಿವಾರ ಬೆಳಗ್ಗೆ ಯುವಜನ್ರ ಜೊತೆ ಸೇವೆ ಮಾಡೋಕೆ ಪ್ರಯತ್ನ ಮಾಡ್ತಿದ್ವಿ. ಇದ್ರಿಂದ ಯುವಜನ್ರಿಗೆ ಯಾವೆಲ್ಲಾ ಸಮಸ್ಯೆಗಳಿವೆ ಅಂತ ಅರ್ಥಮಾಡ್ಕೊಳ್ಳೋಕೆ ನಮಗೆ ಸಹಾಯ ಆಯ್ತು. ನಮ್ಮ ಜೊತೆ ಸೇವೆ ಮಾಡಿದ ಕೆಲವು ಯುವಜನ್ರು ಈಗ ಬೇರೆ ದೇಶದಲ್ಲಿ ಮಿಷನರಿಗಳಾಗಿ ಸೇವೆ ಮಾಡ್ತಿದ್ದಾರೆ ಮತ್ತು ಇನ್ನೂ ಕೆಲವರು ಬೇರೆ ನೇಮಕದಲ್ಲಿದ್ದಾರೆ.

ಆ ಕಾಲದಲ್ಲಿ ಕೆಲವು ಸಭೆಗಳಿಗೆ ನಮ್ಮ ಪ್ರಯಾಣದ ಖರ್ಚನ್ನ ಕೊಡೋಕೆ ಆಗ್ತಿರಲಿಲ್ಲ. ಇದ್ರಿಂದ ತಿಂಗಳ ಕೊನೆಲಿ ನಮ್ಮ ಕೈಯಲ್ಲಿ ದುಡ್ಡೇ ಉಳೀತಿರಲಿಲ್ಲ. ಅಂಥ ಸನ್ನಿವೇಶದಲ್ಲಿ ನಾವು ಸಂಪೂರ್ಣವಾಗಿ ಯೆಹೋವನ ಮೇಲೆ ಆತ್ಕೊಳ್ಳಬೇಕಾಗಿತ್ತು, ಯಾಕಂದ್ರೆ ನಮ್ಮ ಪರಿಸ್ಥಿತಿ ಏನಂತ ಆತನಿಗೆ ಮಾತ್ರನೇ ಗೊತ್ತಿತ್ತು. ಆದ್ರೆ ಯೆಹೋವ ಯಾವತ್ತೂ ನಮ್ಮ ಕೈ ಬಿಡಲಿಲ್ಲ. ಒಂದು ಸಭೆಯಿಂದ ಇನ್ನೊಂದು ಸಭೆಗೆ ಹೋಗೋಕೆ ಆತನು ನಮಗೆ ಹೇಗಾದ್ರೂ ಸಹಾಯ ಮಾಡ್ತಿದ್ದನು.

ನಂಬಿಗಸ್ತ ಸಹೋದರರಿಂದ ಕಲಿತ ಪಾಠಗಳು

ನಾನು ಈ ಮುಂಚೆ ಮಾಧ್ಯಮದವ್ರ ಜೊತೆ ಹೇಗೆ ಮಾತಾಡಬೇಕು ಅಂತ ಗಿಲ್ಯಡ್‌ನಲ್ಲಿ ಸಿಕ್ಕ ತರಬೇತಿ ಬಗ್ಗೆ ಹೇಳಿದ್ದೆ. ಅದು ನನಗೆ ತುಂಬ ಪ್ರಯೋಜನ ಆಯ್ತು. ಆ ಕಾಲದಲ್ಲೆಲ್ಲ ಕ್ವಿಬೆಕ್‌ನಲ್ಲಿ ರೇಡಿಯೋದವ್ರಿಗೆ, ಟಿವಿ ಮಾಧ್ಯಮದವ್ರಿಗೆ, ವಾರ್ತಾಪತ್ರಿಕೆಯವ್ರಿಗೆ ಸಾಕ್ಷಿ ಕೊಡೋಕೆ ನಮಗೆ ತುಂಬ ಅವಕಾಶಗಳು ಸಿಕ್ತಿತ್ತು. ಮಾಧ್ಯಮದವ್ರ ಜೊತೆ ಮಾತಾಡೋಕೆ ನನ್ನನ್ನ ಸಂಚರಣ ಮೇಲ್ವಿಚಾರಕರಾದ ಸಹೋದರ ಲೆಯಾನ್ಸ್‌ ಕ್ರೇಪೋ ಅವ್ರ ಜೊತೆ ಕಳಿಸ್ತಿದ್ರು. ಆ ಸಹೋದರನಿಗೆ ಮಾಧ್ಯಮದವ್ರ ಜೊತೆ ಹೇಗೆ ಮಾತಾಡಬೇಕು ಅಂತ ಚೆನ್ನಾಗಿ ಗೊತ್ತಿತ್ತು. ಆದ್ರೆ ಮಾಧ್ಯಮದ ಮುಖ್ಯ ವ್ಯಕ್ತಿನ ನಾವು ಭೇಟಿಯಾದಾಗ ಆ ಸಹೋದರ ತನಗೆಷ್ಟು ಗೊತ್ತಿದೆ ಅಂತ ಅವ್ರ ಮುಂದೆ ತೋರಿಸ್ಕೊಳ್ಳದೇ ದೀನತೆಯಿಂದ, “ಸರ್‌, ನಾನು ಮತ್ತು ಇವರು ದೇವರ ಸೇವೆ ಮಾಡ್ತೀವಿ. ನಮಗೆ ಮಾಧ್ಯಮದ ಬಗ್ಗೆ ಅಷ್ಟೇನು ಗೊತ್ತಿಲ್ಲ. ಆದ್ರೆ ಯೆಹೋವನ ಸಾಕ್ಷಿಗಳು ನಡಿಸಲಿಕ್ಕಿರೋ ಒಂದು ದೊಡ್ಡ ಅಧಿವೇಶನದ ಬಗ್ಗೆ ಜನ್ರಿಗೆ ತಿಳಿಸಿ ಅಂತ ನಮ್ಮನ್ನ ಕಳಿಸಿದ್ದಾರೆ. ಈ ವಿಷ್ಯದಲ್ಲಿ ನೀವು ನಮಗೆ ಮಾಡೋ ಸಹಾಯನ ತುಂಬ ಮೆಚ್ಕೊಳ್ತೀವಿ” ಅಂತ ಹೇಳ್ತಿದ್ರು. ಅವರು ಈ ತರ ದೀನತೆಯಿಂದ ಮಾತಾಡಿದ್ರಿಂದ ನಮಗೆ ಮಾಧ್ಯಮದವ್ರ ಸಹಾಯ ಸಿಕ್ತು, ಇಲ್ಲಾಂದ್ರೆ ಸಿಕ್ತಿರಲಿಲ್ಲ.

ಆಮೇಲೆ ಬ್ರಾಂಚ್‌ ನನ್ನನ್ನ ಸಹೋದರ ಗ್ಲೆನ್‌ ಹೌ ಜೊತೆ ಕೆಲಸ ಮಾಡೋಕೆ ನೇಮಿಸಿತು. ಅವರು ನಮ್ಮ ಲಾಯರ್‌ ಆಗಿದ್ರು. ಮಾಧ್ಯಮದವರು ಮಾತಾಡುವಂಥ ಕಷ್ಟವಾದ ಕೇಸುಗಳನ್ನ ಇವರು ನೋಡ್ಕೊಳ್ತಿದ್ರು. ಗಿಲ್ಯಡ್‌ನಲ್ಲಿ ಸಿಕ್ಕ ತರಬೇತಿ ಮತ್ತು ಸಹೋದರ ಲೆಯಾನ್ಸ್‌ ಅವ್ರಿಂದ ಸಿಕ್ಕ ಅನುಭವ ನನಗೆ ತುಂಬ ಸಹಾಯ ಮಾಡ್ತು. ಸಹೋದರ ಹೌ ಜೊತೆ ಕೆಲಸ ಮಾಡಿದ್ದು ಕೂಡ ನನಗೆ ಸಿಕ್ಕ ಒಂದು ಸುಯೋಗ. ಅವ್ರಿಗೆ ಒಂಚೂರು ಭಯ ಇರಲಿಲ್ಲ. ಕೋರ್ಟ್‌ನಲ್ಲಿ ನಮ್ಮ ಸಂಘಟನೆ ಬಗ್ಗೆ ಧೈರ್ಯವಾಗಿ ಮಾತಾಡ್ತಿದ್ರು. ಎಲ್ಲದಕ್ಕಿಂತ ಹೆಚ್ಚಾಗಿ ಅವ್ರಿಗೆ ದೇವರ ಭಯ ಇತ್ತು. ಅವರು ಯೆಹೋವನನ್ನ ತುಂಬ ಪ್ರೀತಿಸ್ತಿದ್ರು.

1985ರಲ್ಲಿ ಪಶ್ಚಿಮ ಕೆನಡಾದಲ್ಲಿದ್ದ ನಮ್ಮ ತಂದೆ ಮನೆಗೆ ಹತ್ರದಲ್ಲಿದ್ದ ಸರ್ಕಿಟ್‌ನಲ್ಲಿ ಸೇವೆ ಮಾಡೋಕೆ ನಮಗೆ ನೇಮಕ ಸಿಕ್ತು. ಇದ್ರಿಂದ ನಾವು ಅವ್ರಿಗೆ ಬೇಕಾಗಿರೋ ಸಹಾಯ ಮಾಡಬಹುದಿತ್ತು. ಆದ್ರೆ ನಮ್ಮ ತಂದೆ ಮೂರು ತಿಂಗಳಾದ್ಮೇಲೆ ತೀರಿಹೋದ್ರು. ನಾವು 1989ರ ತನಕ ಪಶ್ಚಿಮ ಕೆನಡಾದಲ್ಲಿ ಸರ್ಕಿಟ್‌ ಕೆಲಸ ಮಾಡೋದನ್ನ ಮುಂದುವರೆಸಿದ್ವಿ. ಆಮೇಲೆ ನಮಗೆ ಅಮೆರಿಕ ಬೆತೆಲ್‌ ಕುಟುಂಬದ ಭಾಗವಾಗೋಕೆ ಆಮಂತ್ರಣ ಸಿಕ್ತು. ಈ ಆಮಂತ್ರಣ ಸಿಕ್ಕಿದಾಗ ನಮಗೆ ನಂಬೋಕೆ ಆಗ್ಲಿಲ್ಲ. ನಾವು ಸುಮಾರು 19 ವರ್ಷ ಮಾಡಿದ ಸಂಚರಣ ಕೆಲಸನ ಬಿಟ್ಟು ಹೋಗಬೇಕಾಯ್ತು. ಅಷ್ಟೂ ವರ್ಷ ನಾವು ನೂರಾರು ಮನೆಗಳಲ್ಲಿ ಇದ್ವಿ, ನಮಗೆ ಪ್ರೀತಿ ತೋರಿಸಿದ ಸಹೋದರ ಸಹೋದರಿಯರ ಜೊತೆ ಸಾವಿರಾರು ಸಲ ಊಟ ಮಾಡಿದ್ವಿ. ಯಾರೆಲ್ಲ ನಮ್ಮನ್ನ ತಮ್ಮ ಮನೆಗಳಲ್ಲಿ ಉಳಿಸ್ಕೊಂಡ್ರೋ, ತಮ್ಮ ಊಟನ ನಮ್ಮ ಜೊತೆ ಹಂಚ್ಕೊಂಡ್ರೋ ಆ ಸಹೋದರ ಸಹೋದರಿಯರಿಗೆಲ್ಲ ನಾವು ತುಂಬ ಋಣಿಗಳಾಗಿದ್ದೀವಿ!

ಅಮೆರಿಕ ಬೆತೆಲ್‌ನಲ್ಲಿ ಮಾಡಿದ ಸೇವೆ

ಬ್ರೂಕ್ಲಿನ್‌ಗೆ ಬಂದಾಗ, ನನಗೆ ಸರ್ವಿಸ್‌ ಡಿಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡೋ ನೇಮಕ ಸಿಕ್ತು. ಅಲ್ಲಿ ನನಗೆ ಸಿಕ್ಕದ ತರಬೇತಿಗೆ ನಾನು ಯಾವಾಗ್ಲೂ ಋಣಿಯಾಗಿರ್ತೀನಿ. ಅಲ್ಲಿ ನಾನು ಕಲಿತ ಒಂದು ದೊಡ್ಡ ಪಾಠ ಏನಂದ್ರೆ ಸತ್ಯ ಏನಂತ ಚೆನ್ನಾಗಿ ತಿಳ್ಕೊಳ್ಳಬೇಕು, ಯಾವುದನ್ನೂ ಊಹೆ ಮಾಡಬಾರದು ಅಂತ. 1998ರಲ್ಲಿ ನನಗೆ ರೈಟಿಂಗ್‌ ಡಿಪಾರ್ಟ್ಮೆಂಟ್‌ನಲ್ಲಿ ಸೇವೆ ಮಾಡೋ ನೇಮಕ ಸಿಕ್ತು. ಅಲ್ಲಿ ನಾನು ಬರೆಯೋದು ಹೇಗೆ ಅಂತ ಇವತ್ತಿಗೂ ಕಲಿತಾನೇ ಇದ್ದೀನಿ. ತುಂಬ ವರ್ಷಗಳ ವರೆಗೆ ನನಗೆ, ರೈಟಿಂಗ್‌ ಕಮಿಟಿಯ ಸಂಯೋಜಕನಾದ ಸಹೋದರ ಜಾನ್‌ ಬಾರ್‌ಗೆ ಸಹಾಯಕನಾಗಿ ಕೆಲಸ ಮಾಡೋ ಸುಯೋಗ ಸಿಕ್ತು. ಅವರು ನನಗೆ ಕೊಟ್ಟಿರೋ ತರಬೇತಿನ ಮತ್ತು ಅವರ ಜೊತೆ ನಾನು ಕಳೆದ ಕ್ಷಣಗಳನ್ನ ತುಂಬ ಅಮೂಲ್ಯವಾಗಿ ನೋಡ್ತೀನಿ. ಅವ್ರಲ್ಲಿ ತುಂಬ ಒಳ್ಳೊಳ್ಳೆ ಗುಣಗಳಿತ್ತು.

ಡೇವಿಡ್‌ ಮತ್ತು ಲಿಂಡಾ ಸ್ಪ್ಲೇನ್‌ ಜಾನ್‌ ಮತ್ತು ಮಿಲ್ಡ್ರಡ್‌ ಬಾರ್‌ ಜೊತೆ ನಿಂತು ತೆಗೆಸ್ಕೊಂಡಿರೋ ಫೋಟೋ.

ಜಾನ್‌ ಮತ್ತು ಮಿಲ್ಡ್ರಡ್‌ ಬಾರ್‌ ಜೊತೆ

ರೈಟಿಂಗ್‌ ಡಿಪಾರ್ಟ್ಮೆಂಟ್‌ನಲ್ಲಿರೋ ಸಹೋದರ ಸಹೋದರಿಯರು ತುಂಬ ದೀನತೆ ತೋರಿಸ್ತಾರೆ. ಅವ್ರ ಜೊತೆ ಕೆಲಸ ಮಾಡೋದು ನನಗೆ ಸಿಕ್ಕಿರೋ ಒಂದು ದೊಡ್ಡ ಆಶೀರ್ವಾದ. ಅವರು ತಮ್ಮ ನೇಮಕ ಮಾಡೋಕೆ ಯಾವಾಗ್ಲೂ ಯೆಹೋವನ ಸಹಾಯ ಕೇಳ್ತಾರೆ. ಅವರು ತಮ್ಮ ನೇಮಕದಲ್ಲಿ ಏನೆಲ್ಲ ಸಾಧಿಸಿದ್ದಾರೋ ಅದು ತಮ್ಮ ಸ್ವಂತ ಸಾಮರ್ಥ್ಯದಿಂದಲ್ಲ, ಯೆಹೋವನ ಪವಿತ್ರ ಶಕ್ತಿಯಿಂದಾನೇ ಅಂತ ಚೆನ್ನಾಗಿ ಅರ್ಥಮಾಡ್ಕೊಂಡಿದ್ದಾರೆ.

ಸಹೋದರ ಸ್ಪ್ಲೇನ್‌ 20 ಸಹೋದರ ಸಹೋದರಿಯರ ಜೊತೆ ಕಾವಲಿನಬುರುಜು ಕೋರಸ್‌ ನಡೆಸ್ತಿದ್ದಾರೆ, ಒಬ್ಬ ಸಹೋದರಿ ಪಿಯಾನೋ ನುಡಿಸ್ತಾ ಇದ್ದಾರೆ.

2009ರ ವಾರ್ಷಿಕ ಕೂಟದಲ್ಲಿ ಕಾವಲಿನಬುರುಜು ಕೋರಸ್‌ನ ನಡೆಸ್ತಿರೋದು

ಸಹೋದರ ಸ್ಪ್ಲೇನ್‌ ಬೈಬಲ್‌ನ ಒಂದು ಪ್ರತಿಯನ್ನ ಒಬ್ಬ ಸಹೋದರಿಗೆ ಖುಷಿಯಾಗಿ ಕೊಡ್ತಿದ್ದಾರೆ.

2014ರಲ್ಲಿ ಸಿಯೋಲ್‌, ಕೊರಿಯದ ಅಂತರಾಷ್ಟ್ರೀಯ ಅಧಿವೇಶನದಲ್ಲಿ ಬೈಬಲನ್ನ ಕೊಡ್ತಿರೋದು

ಲಿಂಡಾ ಮತ್ತು ನನಗೆ ಇಲ್ಲಿವರೆಗೂ 110 ದೇಶಗಳಲ್ಲಿರೋ ನಮ್ಮ ನಂಬಿಗಸ್ತ ಸಹೋದರ ಸಹೋದರಿಯರನ್ನ ಭೇಟಿ ಮಾಡೋ ಅವಕಾಶ ಸಿಕ್ಕಿದೆ. ಅಲ್ಲಿರೋ ಮಿಷನರಿಗಳು, ಬ್ರಾಂಚ್‌ ಕಮಿಟಿ ಸದಸ್ಯರು ಮತ್ತು ಬೇರೆ ಪೂರ್ಣ ಸಮಯದ ಸೇವಕರು ಯೆಹೋವನನ್ನ ಎಷ್ಟು ಪ್ರೀತಿಸ್ತಾರೆ ಅಂತ ನಾವು ಕಣ್ಣಾರೆ ನೋಡಿದ್ದೀವಿ. ಅಲ್ಲಿರೋ ಪ್ರಚಾರಕರು ಯುದ್ಧಗಳಿದ್ರೂ, ಹಣಕಾಸಿನ ಸಮಸ್ಯೆ ಇದ್ರೂ ಮತ್ತು ಹಿಂಸೆ ಬಂದ್ರೂ ಹುರುಪು ಕಳ್ಕೊಳ್ಳದೇ ಯೆಹೋವನಿಗೆ ನಿಯತ್ತಾಗಿರೋದನ್ನ ನೋಡುವಾಗ ನಮಗೆ ತುಂಬ ಖುಷಿ ಆಗುತ್ತೆ. ಯೆಹೋವನು ಅವ್ರನ್ನ ತುಂಬ ಪ್ರೀತಿಸ್ತಾನೆ ಅನ್ನೋ ಗ್ಯಾರಂಟಿ ನಮಗಿದೆ!

ನನ್ನ ನೇಮಕನ ಇಷ್ಟು ವರ್ಷಗಳು ಚೆನ್ನಾಗಿ ಮಾಡೋಕೆ ಲಿಂಡಾ ನನಗೆ ತುಂಬ ಸಹಾಯ ಮಾಡಿದ್ದಾಳೆ. ಅವಳು ಜನ್ರನ್ನ ತುಂಬ ಪ್ರೀತಿಸ್ತಾಳೆ, ಅವ್ರಿಗೆ ಸಹಾಯ ಮಾಡೋಕೆ ಬೇರೆ-ಬೇರೆ ದಾರಿಗಳನ್ನ ಹುಡುಕ್ತಾಳೆ. ಅವಳು ಚೆನ್ನಾಗಿ ಮಾತು ಶುರು ಮಾಡ್ತಾಳೆ ಮತ್ತು ಜನ್ರು ಸತ್ಯಕ್ಕೆ ಬರೋಕೂ ಸಹಾಯ ಮಾಡಿದ್ದಾಳೆ. ಅವ್ರಲ್ಲಿ ಕೆಲವರು ಈ ಮುಂಚೆ ನಿಷ್ಕ್ರಿಯರಾಗಿದ್ರು. ಲಿಂಡಾ ನಿಜವಾಗ್ಲೂ ಯೆಹೋವ ನನಗೆ ಕೊಟ್ಟಿರೋ ಒಂದು ದೊಡ್ಡ ಗಿಫ್ಟ್‌! ಈಗ ನಮಗೆ ವಯಸ್ಸಾಗ್ತಿರೋದ್ರಿಂದ ಪ್ರಯಾಣ ಮಾಡೋಕೆ ಮತ್ತು ಬೇರೆ ಕೆಲಸಗಳನ್ನ ಮಾಡೋಕೆ ನಮ್ಮ ಯುವ ಸಹೋದರ ಸಹೋದರಿಯರು ಸಹಾಯ ಮಾಡ್ತಿದ್ದಾರೆ. ಅವರು ಮಾಡ್ತಿರೋ ಈ ಸಹಾಯಕ್ಕೆ ನಾವು ತುಂಬ ಋಣಿಯಾಗಿದ್ದೀವಿ.—ಮಾರ್ಕ 10:29, 30.

80 ವರ್ಷದ ನನ್ನ ಜೀವನದ ಪುಟಗಳನ್ನ ತಿರುಗಿಸಿ ನೋಡಿದ್ರೆ ನನಗೆ ತುಂಬ ಸಂತೋಷ ಆಗುತ್ತೆ. ಇದಕ್ಕೆ ನಾನು ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಕೀರ್ತನೆಗಾರನಿಗೆ ಅನಿಸಿದ ಹಾಗೆ ನನಗೂ ಅನಿಸುತ್ತೆ: “ದೇವರೇ, ನಾನು ಚಿಕ್ಕವನಾಗಿ ಇದ್ದಾಗಿಂದ ನೀನು ನನಗೆ ಕಲಿಸಿದ್ದೀಯ, ಇಲ್ಲಿ ತನಕ ನಾನು ನಿನ್ನ ಅದ್ಭುತಗಳ ಬಗ್ಗೆ ಹೇಳ್ತಾನೇ ಬಂದಿದ್ದೀನಿ” ಅಂತ ಅವನು ಬರೆದ. (ಕೀರ್ತ. 71:17) ನನ್ನ ಕೊನೆ ಉಸಿರಿರೋ ತನಕ ಇದನ್ನೇ ಮಾಡಬೇಕು ಅನ್ನೋದೇ ನನ್ನಾಸೆ.

a ಈಗ ಈ ತರಬೇತಿ ನಮ್ಮ ವಾರಮಧ್ಯದ ಕೂಟದಲ್ಲಿ ಸಿಗುತ್ತೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ