ಏಪ್ರಿಲ್ 20-26, 2026
ಗೀತೆ 49 ಯೆಹೋವನ ಮನಸ್ಸನ್ನ ಖುಷಿಪಡಿಸುವುದು
ದೀಕ್ಷಾಸ್ನಾನ ತಗೊಳ್ಳೋ ಗುರಿ ಇಡಿ
“ವಿಶೇಷವಾಗಿ ಕೃಪೆ ತೋರಿಸೋ ಕಾಲ ಇದೇ.”—2 ಕೊರಿಂ. 6:2.
ಈ ಲೇಖನದಲ್ಲಿ ಏನಿದೆ?
ಯೆಹೋವನ ಸ್ನೇಹಿತರಾಗೋಕೆ ಮತ್ತು ದೀಕ್ಷಾಸ್ನಾನ ತಗೊಳ್ಳೋಕೆ ಇದೇ ಸರಿಯಾದ ಸಮಯ.
1. (ಎ) ದೀಕ್ಷಾಸ್ನಾನ ತಗೊಳ್ಳೋದ್ರಿಂದ ಯಾವ ಪ್ರಯೋಜನ ಇದೆ? (ಬಿ) ಈ ಲೇಖನದಲ್ಲಿ ಏನು ಕಲಿತೀವಿ?
ನೀವು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಂಡಿದ್ದೀರಾ? ಹಾಗಾದ್ರೆ ನೀವು ‘ಶುದ್ಧ ಮನಸ್ಸಾಕ್ಷಿ ಕೊಡು ಅಂತ ದೇವರ ಹತ್ರ ಬೇಡ್ಕೊಂಡಿದ್ದೀರ.’ (1 ಪೇತ್ರ 3:21) ನೀವು ದೀಕ್ಷಾಸ್ನಾನ ತಗೊಂಡು ಸಭೆಯಲ್ಲಿರೋ ಹೊಸಬರಿಗೆ ಮತ್ತು ಯುವಜನರಿಗೆ ಮಾದರಿ ಇಟ್ಟಿದ್ದೀರ! ದೀಕ್ಷಾಸ್ನಾನ ನಿಮ್ಮ ಜೀವನದ ಬೆಸ್ಟ್ ನಿರ್ಣಯ ಆಗಿದೆ! ಒಂದುವೇಳೆ, ನೀವಿನ್ನೂ ದೀಕ್ಷಾಸ್ನಾನ ತಗೊಂಡಿಲ್ಲ ಅಂದ್ರೆ ಏನು ಮಾಡೋದು? ನಿಮಗೆ ಯೆಹೋವನ ಮೇಲೆ ಪ್ರೀತಿ ಇರಬಹುದು, ಆತನಿಗೆ ಇಷ್ಟ ಇರೋದನ್ನ ಮಾಡೋಕೆ ಆಸೆ ಇರಬಹುದು. ಆದ್ರೂ ಯೆಹೋವನ ಮೆಚ್ಚಿಗೆ ಪಡಿಬೇಕಂದ್ರೆ ಮತ್ತು ನಿಮ್ಮ ತಪ್ಪುಗಳಿಗೆ ಆತನ ಕ್ಷಮೆ ಸಿಗಬೇಕಂದ್ರೆ ನೀವು ದೀಕ್ಷಾಸ್ನಾನ ತಗೊಳ್ಳಲೇಬೇಕು! (ಅ. ಕಾ. 2:38-40) ದೀಕ್ಷಾಸ್ನಾನ ತಗೊಳ್ಳೋಕೆ ಯಾವುದಾದ್ರೂ ವಿಷ್ಯ ನಿಮಗೆ ಅಡ್ಡಿ ಆಗಿರಬಹುದು. ಅದನ್ನ ಜಯಿಸೋಕೆ ಯಾವುದು ಸಹಾಯ ಮಾಡುತ್ತೆ? ಈ ಲೇಖನದಲ್ಲಿ (1) ಕೆಲವರು ಯಾಕೆ ದೀಕ್ಷಾಸ್ನಾನ ತಗೊಳ್ಳೋಕೆ ಹಿಂಜರಿತಾರೆ? (2) ಅಂತ್ಯ ತುಂಬ ಹತ್ರ ಇದೆ ಅನ್ನೋದನ್ನ ಮನಸ್ಸಲ್ಲಿ ಇಡೋದು ಯಾಕೆ ಪ್ರಾಮುಖ್ಯ? ಮತ್ತು (3) ತಡಮಾಡದೆ ದೀಕ್ಷಾಸ್ನಾನ ತಗೊಳ್ಳೋದ್ರಿಂದ ನಿಮಗೆ ಹೇಗೆ ಪ್ರಯೋಜನ ಸಿಗುತ್ತೆ ಅಂತ ನೋಡೋಣ.
ಕೆಲವರು ಯಾಕೆ ಹಿಂದೇಟು ಹಾಕ್ತಾರೆ?
2. ಕೆಲವರು ದೀಕ್ಷಾಸ್ನಾನ ತಗೊಳ್ಳದೇ ಇರೋಕೆ ಒಂದು ಕಾರಣ ಏನು?
2 ದೀಕ್ಷಾಸ್ನಾನ ತಗೊಳ್ಳೋಕೆ ಕೆಲವರು ಹಿಂದೇಟು ಹಾಕೋಕೆ ಒಂದು ಕಾರಣ ಭಯ. ಉದಾಹರಣೆಗೆ, ಅವ್ರಿಗೆ ಯೆಹೋವನ ಸೇವೆ ಮಾಡಬೇಕು ಅಂತ ಆಸೆ ಇದ್ರೂ ಮುಂದೆ ಎಲ್ಲಿ ಯೆಹೋವನ ಮನಸ್ಸು ನೋಯಿಸ್ತೀವೋ ಅನ್ನೋ ಭಯ ಇರುತ್ತೆ. ಒಂದುವೇಳೆ ನಿಮಗೆ ಆ ತರ ಅನಿಸ್ತಾ ಇದ್ರೆ ಯೆಹೋವ ನಿಮ್ಮಿಂದ ಆಗದೇ ಇರೋದನ್ನ ಕೇಳಲ್ಲ, ನಿಮ್ಮ ಕೈಲಾದಷ್ಟು ಪ್ರಯತ್ನ ಹಾಕಿದ್ರೆ ಅದನ್ನ ನೋಡಿ ಆತನು ಖುಷಿಪಡ್ತಾನೆ ಅನ್ನೋದನ್ನ ನೆನಪಿಡಿ. ಇಂಥ ಭರವಸೆ ಹುಟ್ಟಿಸೋ ಮತ್ತು ಧೈರ್ಯ ತುಂಬೋ ವಚನಗಳನ್ನ ಓದಿ. (ಕೀರ್ತ. 103:13, 14; ಕೊಲೊ. 3:23) ದೀಕ್ಷಾಸ್ನಾನ ತಗೊಂಡ್ರೆ ಎಲ್ಲಿ ಜನ ನನಗೆ ತೊಂದ್ರೆ ಕೊಡ್ತಾರೋ ಅನ್ನೋ ಭಯ ನಿಮಗೆ ಇರಬಹುದು. ಆಗ ಕೀರ್ತನೆಗಾರನ ತರ ‘ಧೈರ್ಯ ಕೊಡು’ ಅಂತ ಯೆಹೋವನ ಹತ್ರ ಬೇಡ್ಕೊಳ್ಳಿ. “ಯೆಹೋವ ನನ್ನ ಪಕ್ಷದಲ್ಲಿ ಇದ್ದಾನೆ, ನಾನು ಹೆದ್ರಲ್ಲ. ಮನುಷ್ಯ ನನಗೆ ಏನು ಮಾಡಕ್ಕಾಗುತ್ತೆ?” ಅಂತ ಅವನು ಹೇಳಿದ.—ಕೀರ್ತ. 118:6.
3. ದೀಕ್ಷಾಸ್ನಾನ ತಗೊಳ್ಳೋಕೆ ಹಿಂದೇಟು ಹಾಕೋಕೆ ಇನ್ನೊಂದು ಕಾರಣ ಏನು? (ಮುಖಪುಟ ಚಿತ್ರ ನೋಡಿ.)
3 ಕೆಲವರು, ‘ನನಗೆ ಯೆಹೋವನ ಬಗ್ಗೆ, ಬೈಬಲ್ ಬಗ್ಗೆ ಇನ್ನೂ ಅಷ್ಟೇನು ಗೊತ್ತಿಲ್ಲ, ಜಾಸ್ತಿ ಕಲಿಬೇಕು’ ಅಂತ ದೀಕ್ಷಾಸ್ನಾನ ತಗೊಳ್ಳೋಕೆ ಹಿಂದೆ ಮುಂದೆ ನೋಡ್ತಾರೆ. ಆದ್ರೆ ದೀಕ್ಷಾಸ್ನಾನ ತಗೊಳ್ಳೋಕೆ ಬೈಬಲಲ್ಲಿರೋ ಎಲ್ಲಾ ವಿಷ್ಯಗಳನ್ನ ತಿಳ್ಕೊಂಡಿರಬೇಕಾ? ಇಲ್ಲ. ಉದಾಹರಣೆಗೆ, ಅಪೊಸ್ತಲ ಪೌಲ ಮತ್ತು ಸೀಲ ಇದ್ದ ಜೈಲಿನಲ್ಲಿ ಒಂದು ದೊಡ್ಡ ಭೂಕಂಪ ಆಗೋ ತರ ಯೆಹೋವನು ಮಾಡಿದನು. ಅದಾದ್ಮೇಲೆ ಪೌಲ ಮತ್ತು ಸೀಲ, ಜೈಲಿನ ಅಧಿಕಾರಿ ಮತ್ತು ಅವನ ಮನೆಯವರಿಗೆ ಯೆಹೋವನ ಬಗ್ಗೆ, ಯೇಸುವಿನ ಬಗ್ಗೆ ಸಿಹಿಸುದ್ದಿ ಕಲಿಸಿದ್ರು. ಅವರು ಈ ವಿಷ್ಯಗಳನ್ನ ಒಂದೇ ರಾತ್ರಿಯಲ್ಲಿ ಕಲಿತರು. ಆದ್ರೂ ‘ತಡಮಾಡದೆ ದೀಕ್ಷಾಸ್ನಾನ ತಗೊಂಡ್ರು.’ (ಅ. ಕಾ. 16:25-33) ಇದ್ರಿಂದ ಏನು ಗೊತ್ತಾಗುತ್ತೆ? ನೀವು ಯೆಹೋವನ ಬಗ್ಗೆ ತಿಳ್ಕೊಂಡಿದ್ರೆ, ಆತನನ್ನ ಪೂರ್ಣ ಮನಸ್ಸಿನಿಂದ ಪ್ರೀತಿಸ್ತಿದ್ರೆ, ಬೈಬಲಲ್ಲಿ ಇರೋ ಮುಖ್ಯ ಸತ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ರೆ, ನಿಮ್ಮ ತಪ್ಪುಗಳಿಗೆ ಪಶ್ಚಾತಾಪ ಪಟ್ಟಿದ್ರೆ ಮತ್ತು ಆತನಿಗೆ ಇಷ್ಟ ಆಗೋ ವಿಷ್ಯಗಳನ್ನೇ ಮಾಡೋಕೆ ಪ್ರಯತ್ನ ಹಾಕ್ತಿದ್ರೆ, ನೀವು ದೀಕ್ಷಾಸ್ನಾನ ತಗೊಳ್ಳೋಕೆ ರೆಡಿ ಇದ್ದೀರ ಅಂತರ್ಥ.—ಮಾರ್ಕ 12:30.
ಪೌಲ ಮತ್ತು ಸೀಲ, ಜೈಲಿನ ಅಧಿಕಾರಿ ಮತ್ತು ಅವನ ಮನೆಯವ್ರಿಗೆ ಸಿಹಿಸುದ್ದಿ ಸಾರಿದ್ರು, ಇದ್ರಿಂದ ಅವರೆಲ್ಲರೂ ‘ತಡಮಾಡದೆ ದೀಕ್ಷಾಸ್ನಾನ ತಗೊಂಡ್ರು’ (ಪ್ಯಾರ 3 ನೋಡಿ)
4. ಕೆಲವ್ರಿಗೆ ದೀಕ್ಷಾಸ್ನಾನ ತಗೊಳ್ಳದೇ ಇರೋಕೆ ಇನ್ನೇನು ಕಾರಣ ಇದೆ? (ಚಿತ್ರ ನೋಡಿ.)
4 ಕೆಲವ್ರಿಗೆ ಯೆಹೋವನಿಗೆ ಇಷ್ಟ ಆಗೋ ತರ ಜೀವನದಲ್ಲಿ ಬದಲಾವಣೆ ಮಾಡ್ಕೊಳ್ಳೋಕೆ ಮತ್ತು ದೀಕ್ಷಾಸ್ನಾನ ತಗೊಳ್ಳೋಕೆ ಆಸೆ ಇದ್ರೂ ಅದು ತುಂಬ ಕಷ್ಟ ಅಂತ ನೆನಸ್ತಾರೆ. ನಿಜ, ನಮ್ಮ ಜೀವನದಲ್ಲಿ ನಾವು ತಗೊಳ್ಳೋ ಪ್ರತಿಯೊಂದು ನಿರ್ಣಯದ ಬಗ್ಗೆನೂ ಚೆನ್ನಾಗಿ ಯೋಚ್ನೆ ಮಾಡಬೇಕು. (ಲೂಕ 14:27-30) ಯೆಹೋವನ ಸೇವೆ ಮಾಡೋಕೆ ನಾನು ಏನೆಲ್ಲಾ ಬಿಟ್ಟು ಬರಬೇಕು ಅಂತ ಕೆಲವರು ಯೋಚನೆ ಮಾಡ್ತಾರೆ. ಸಹೋದರಿ ಕ್ಯಾಂಡಸ್‌ಗೂ ಹೀಗೇ ಅನಿಸ್ತು. ಆಕೆ ಸತ್ಯದಲ್ಲೇ ಬೆಳೆದಳು, ಯೆಹೋವನಿಗೆ ಇಷ್ಟ ಆಗೋ ತರ ನಡೆಯೋಕೆ ಏನು ಮಾಡಬೇಕು ಅಂತ ಆಕೆಗೆ ಗೊತ್ತಿತ್ತು. ಆದ್ರೂ ಆಕೆ ಅದನ್ನ ತನ್ನ ಜೀವನದಲ್ಲಿ ಮಾಡಲೇ ಇಲ್ಲ. ಅವಳು ದೊಡ್ಡವಳಾದ ಮೇಲೆ ಬೈಬಲ್ ಸ್ಟಡಿ ತಗೊಂಡಳು. ಅವಳು ಹೇಳ್ತಾಳೆ, “ಯೆಹೋವನಿಗೆ ಇಷ್ಟ ಇಲ್ಲದಿರೋ ಜೀವನವನ್ನ ಬಿಟ್ಟು ಬರಬೇಕು ಅಂತ ಗೊತ್ತಿದ್ರೂ ನಂಗೆ ಅದನ್ನ ಬಿಡೋಕೆ ಕಷ್ಟ ಆಗ್ತಿತ್ತು. ಯಾಕಂದ್ರೆ ಅ ಜೀವನನೇ ನನಗೆ ಖುಷಿ ಕೊಡ್ತಿತ್ತು.” ಕೆಲವರು ದೀಕ್ಷಾಸ್ನಾನ ಆದ್ಮೇಲೆ ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡೋಕೆ ಆಗಲ್ವೇನೋ ಅಂತ ಚಿಂತೆ ಮಾಡ್ತಾರೆ. ‘ಎಲ್ಲಿ ನಾನು ದೊಡ್ಡ ತಪ್ಪು ಮಾಡ್ತೀನೋ, ನನ್ನನ್ನ ಸಭೆಯಿಂದ ಹೊರಗೆ ಹಾಕ್ತಾರೋ’ ಅಂತ ಚಿಂತೆ ಮಾಡ್ತಾರೆ. ನಿಮಗೂ ಈ ತರ ಚಿಂತೆ ಆಗ್ತಿದ್ರೆ ಏನು ಮಾಡೋದು?
ಕೆಲವ್ರಿಗೆ ದೇವರ ಸೇವೆ ಮಾಡೋಕೆ ಇಷ್ಟ ಇದ್ರೂ ಅದಕ್ಕಾಗಿ ಏನೆಲ್ಲಾ ಬಿಟ್ಟು ಬರಬೇಕಾಗುತ್ತೆ ಅಂತ ಯೋಚಿಸ್ತಾರೆ (ಪ್ಯಾರ 4 ನೋಡಿ)
5. ದೀಕ್ಷಾಸ್ನಾನ ತಗೊಳ್ಳೋಕೆ ನಾವು ಹಿಂದೇಟು ಹಾಕ್ತಾ ಇದ್ರೆ, ಯಾವ ವಿಷ್ಯದ ಬಗ್ಗೆ ಯೋಚ್ನೆ ಮಾಡಬೇಕು? (ಮತ್ತಾಯ 13:44-46)
5 ನಾವು ಯಾವುದಾದ್ರೂ ವಸ್ತು ತಗೊಬೇಕು ಅಂದ್ರೆ ಬರೀ ಅದ್ರ ಬೆಲೆ ನೋಡಲ್ಲ. ಅದ್ರಿಂದ ನಮಗೆ ಏನು ಪ್ರಯೋಜನ ಇದೆ ಅಂತಾನೂ ನೋಡ್ತೀವಿ. ಒಂದು ವಸ್ತು ನಮಗೆ ತುಂಬ ಪ್ರಯೋಜನ ಆಗುತ್ತೆ ಅಂದ್ರೆ ಅದ್ರ ಬೆಲೆ ಹೆಚ್ಚಿದ್ರೂ ತಕ್ಷಣ ಅದನ್ನ ತಗೊಳ್ತೀವಿ. ಅದೇ ತರ ದೀಕ್ಷಾಸ್ನಾನ ತಗೊಳ್ಳುವಾಗ ನಾವು ಮಾಡಬೇಕಾಗಿರೋ ಬದಲಾವಣೆಗಳ ಬಗ್ಗೆ ಮಾತ್ರ ಯೋಚಿಸದೆ, ಅದ್ರಿಂದ ಯೆಹೋವನ ಜೊತೆ ನಮಗೆ ಸಿಗೋ ಅಮೂಲ್ಯವಾದ ಫ್ರೆಂಡ್‌ಶಿಪ್ ಬಗ್ಗೆನೂ ಯೋಚಿಸಬೇಕು. ಇದನ್ನ ಅರ್ಥ ಮಾಡಿಸೋಕೆ ಯೇಸು ಎರಡು ಉದಾಹರಣೆ ಹೇಳಿದನು. (ಮತ್ತಾಯ 13:44-46 ಓದಿ.) ಈ ಎರಡೂ ಉದಾಹರಣೆಯಲ್ಲಿ ಒಬ್ಬ ವ್ಯಕ್ತಿ ಬೆಲೆಬಾಳೋ ವಸ್ತುವನ್ನ ತಗೊಳ್ಳೋಕೆ ಅವನ ಹತ್ರ ಇರೋ ಎಲ್ಲ ಆಸ್ತಿಯನ್ನ ಮಾರಿಬಿಟ್ಟ. ನಿಮಗೂ ಅದೇ ರೀತಿಯ ಬೆಲೆಬಾಳೋ ವಸ್ತು ಸಿಕ್ಕಿದೆ. ಅದೇನು ಗೊತ್ತಾ? ದೇವರ ಆಳ್ವಿಕೆ ಬಗ್ಗೆ ಇರೋ ಸತ್ಯ! ‘ನಾನು ದೀಕ್ಷಾಸ್ನಾನ ತಗೊಳ್ಳೋಕೆ ಜೀವನದಲ್ಲಿ ಬದಲಾವಣೆಗಳನ್ನ ಮಾಡಲೇಬೇಕಾ?’ ಅಂತ ನೀವು ಯೋಚಿಸ್ತಾ ಇದ್ರೆ, ಯೇಸು ಹೇಳಿದ ಉದಾಹರಣೆಗಳನ್ನ ನೆನಪಿಸ್ಕೊಳ್ಳಿ. ಜೊತೆಗೆ, ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ: ‘ದೇವರ ಆಳ್ವಿಕೆ ಬಗ್ಗೆ ಇರೋ ಸತ್ಯನ ನಾನು ತುಂಬ ಅಮೂಲ್ಯವಾಗಿ ನೋಡ್ತೀನಾ? ಯೆಹೋವನ ಜೊತೆ ಇರೋ ನನ್ನ ಸ್ನೇಹವನ್ನ, ಶಾಶ್ವತವಾಗಿ ಜೀವಿಸೋ ನಿರೀಕ್ಷೆಯನ್ನ ಮತ್ತು ನಮ್ಮನ್ನ ತುಂಬ ಪ್ರೀತಿಸೋ ಈ ಕುಟುಂಬವನ್ನ ನಾನು ಅಮೂಲ್ಯವಾಗಿ ನೋಡ್ತೀನಾ?’ ನೀವು ಈ ಪ್ರಶ್ನೆಗಳ ಬಗ್ಗೆ ಯೋಚಿಸಿದ್ರೆ, ದೀಕ್ಷಾಸ್ನಾನ ತಗೊಳ್ಳೋಕೆ ನೀವು ಏನು ಮಾಡಬೇಕು ಅಂತ ಗೊತ್ತಾಗುತ್ತೆ.
6. ಮಾತು ಕೇಳೋ ಹೃದಯ ಪಡ್ಕೊಳ್ಳೋಕೆ ನಾವೇನು ಮಾಡಬೇಕು?
6 ಬಿತ್ತುವವನ ಉದಾಹರಣೆಯಲ್ಲಿ ಯೇಸು, ಜನ್ರ ಹೃದಯದ ಪರಿಸ್ಥಿತಿ ಬಗ್ಗೆ ಹೇಳಿದನು. ಕಲಿತ ತರ ನಡ್ಕೊಳ್ಳೋಕೆ ಕೆಲವ್ರ ಹೃದಯ ಬಿಡಲ್ಲ ಅಂತ ಆತನು ಹೇಳಿದನು. ಆದ್ರೆ ಇನ್ನೂ ಕೆಲವರು, “ಒಳ್ಳೇ ಮನಸ್ಸಿಂದ ಸಂದೇಶ ಕೇಳ್ತಾರೆ” ಮತ್ತು ಅವರು ಕಲಿತ ತರಾನೇ ನಡ್ಕೊಳ್ತಾರೆ ಅಂತ ಹೇಳಿದನು. (ಲೂಕ 8:5-15) ನೀವು ಕಲೀತಿರೋ ತರ ನಡ್ಕೊಳ್ಳೋಕೆ ನಿಮ್ಮ ಹೃದಯನೂ ಬಿಡ್ತಿಲ್ವಾ ಅಂತ ಯೋಚ್ನೆ ಮಾಡಿ ನೋಡಿ. ಆ ತರ ಬಿಡ್ತಿಲ್ಲ ಅಂದ್ರೆ ಬೇಜಾರು ಮಾಡ್ಕೊಬೇಡಿ, ಪ್ರಯತ್ನ ಬಿಡಬೇಡಿ. ‘ಮೃದು ಹೃದಯ ಕೊಡ್ತೀನಿ’ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. ‘ಆ ಹೃದಯ ಕೊಡು’ ಅಂತ ಆತನ ಹತ್ರ ಪ್ರಾರ್ಥನೆ ಮಾಡಿ. ಆಗ, ಮಾತು ಕೇಳೋ ಹೃದಯನ ಆತನು ನಿಮಗೆ ಕೊಡ್ತಾನೆ.—ಯೆಹೆ. 18:31; 36:26.
7-8. ಕೆಲವು ಯುವಜನರು ದೀಕ್ಷಾಸ್ನಾನ ತಗೊಳೋಕೆ ಯಾಕೆ ಪ್ರಗತಿ ಮಾಡಲ್ಲ? (ಚಿತ್ರ ನೋಡಿ.)
7 ಕೆಲವು ಯುವಜನರು ಯೆಹೋವನನ್ನ ಪ್ರೀತಿಸಿದ್ರೂ ದೀಕ್ಷಾಸ್ನಾನ ತಗೊಳ್ಳೋಕೆ ಹಿಂದೇಟು ಹಾಕ್ತಾರೆ. ಯಾಕಂದ್ರೆ ಅವ್ರಿಗೆ ಬೇರೆಯವರು ತಪ್ಪು ತಪ್ಪಾಗಿ ಕಲಿಸ್ತಾ ಅವ್ರ ತಲೆ ಕೆಡಿಸ್ತಾರೆ. ಉದಾಹರಣೆಗೆ, ಶಾಲೆಯಲ್ಲಿ ಶಿಕ್ಷಕರೇ ಮಕ್ಕಳಿಗೆ, ಬೈಬಲ್ ಒಪ್ಪದ ಗುಣಗಳನ್ನ, ನಡತೆಯನ್ನ ‘ಅದೇನೂ ತಪ್ಪಿಲ್ಲ’ ಅಂತ ಕಲಿಸ್ತಾರೆ. ಸರಿ-ತಪ್ಪು ಕಲಿಸಬೇಕಾಗಿರೋ ಶಿಕ್ಷಕರೇ ಈ ರೀತಿ ತಪ್ಪಾದ ವಿಷ್ಯಗಳನ್ನ ಹೇಳ್ಕೊಟ್ಟಾಗ ಮಕ್ಕಳ ಮನಸ್ಸು ಕೆಟ್ಟು ಹೋಗುತ್ತೆ. (ಕೀರ್ತ. 1:1, 2; ಜ್ಞಾನೋ. 7:1-5) ಈ ತರ ವಿಷ್ಯದಿಂದ ನಿಮ್ಮ ಹೃದಯನೂ ಹಾಳಾಗಬಹುದು. ಆ ರೀತಿ ಆಗಬಾರ್ದು ಅಂದ್ರೆ, ನೀವು ಕೀರ್ತನೆಗಾರನ ತರ ನಡ್ಕೊಬೇಕು. ಅವನು, “ನನ್ನ ಶಿಕ್ಷಕರಿಗಿಂತ ನನಗೆ ಜಾಸ್ತಿ ತಿಳುವಳಿಕೆ ಇದೆ, ಯಾಕಂದ್ರೆ ನಿನ್ನ ಎಚ್ಚರಿಕೆಗಳ ಬಗ್ಗೆ ನಾನು ಚೆನ್ನಾಗಿ ಆಲೋಚಿಸ್ತೀನಿ” ಅಂತ ಹೇಳಿದ.—ಕೀರ್ತ. 119:99.
8 ಕೆಲವು ವರದಿಗಳನ್ನ ನೋಡಿದಾಗ ಏನು ಗೊತ್ತಾಗುತ್ತೆ ಅಂದ್ರೆ, ಕೆಲವು ಮಕ್ಕಳು ದೀಕ್ಷಾಸ್ನಾನ ತಗೊಳ್ಳದೇ ಇರೋಕೆ ಅವ್ರ ಅಪ್ಪ ಅಮ್ಮನೇ ಕಾರಣ ಆಗಿದ್ದಾರೆ. ಯಾಕೆ ಈ ರೀತಿ ಆಗಬಹುದು? ಅಪ್ಪ-ಅಮ್ಮ ಮಕ್ಕಳ ಓದಿನ ಬಗ್ಗೆ, ಅವ್ರ ಭವಿಷ್ಯ ಮತ್ತು ಕೆಲಸದ ಬಗ್ಗೆನೇ ತುಂಬ ಯೋಚ್ನೆ ಮಾಡ್ತಾರೆ. ದೀಕ್ಷಾಸ್ನಾನವನ್ನ ಪಕ್ಕಕ್ಕೆ ಇಟ್ಟು ಬಿಡ್ತಾರೆ ಅಥವಾ ಯೆಹೋವನ ಸೇವೆಯಲ್ಲಿ ಅವರು ಯಾವ ಗುರಿಯನ್ನ ಇಡಬೇಕು ಅಂತ ಅವ್ರ ಹತ್ರ ಮಾತೇ ಆಡಲ್ಲ. ಆಧ್ಯಾತ್ಮಿಕ ಗುರಿಗಳನ್ನ ಇಡೋಕೆ ನಿಮ್ಮ ಅಪ್ಪ-ಅಮ್ಮ ಹೆಚ್ಚು ಸಹಾಯ ಮಾಡಿದ್ರೆ ಚೆನ್ನಾಗಿರ್ತಿತ್ತು ಅಂತ ನಿಮಗೆ ಅನಿಸುತ್ತಾ? ಹಾಗಾದ್ರೆ ನೇರವಾಗಿ ಅವ್ರ ಹತ್ರಾನೇ ಮಾತಾಡಿ. ನೆನಪಿಡಿ, ಯೆಹೋವನ ಜೊತೆ ಸ್ನೇಹ ಬೆಳೆಸ್ಕೊಳ್ಳೋಕೆ ಇಷ್ಟೇ ವಯಸ್ಸಾಗಿರಬೇಕು ಅಂತೇನಿಲ್ಲ.—ಜ್ಞಾನೋ. 20:11.
ನೀವು ದೀಕ್ಷಾಸ್ನಾನ ತಗೊಳ್ಳೋಕೆ ಇಷ್ಟಪಡ್ತೀರ ಅಂತ ಅಪ್ಪ-ಅಮ್ಮನ ಹತ್ರ ಮಾತಾಡಿ (ಪ್ಯಾರ 8 ನೋಡಿ)
9. ಅರ್ಹರಾಗಿದ್ರೂ ಯಾಕೆ ಕೆಲವರು ದೀಕ್ಷಾಸ್ನಾನ ತಗೊಳೋದನ್ನ ಮುಂದೂಡ್ತಾರೆ?
9 ಕೆಲವರು ದೀಕ್ಷಾಸ್ನಾನ ತಗೊಳ್ಳೋಕೆ ಅರ್ಹರಾಗಿದ್ರೂ ಅದನ್ನ ಮುಂದೂಡುತ್ತಾರೆ. ಕಾರಣ ಏನಿರಬಹುದು? ‘ನಾನು, ನನ್ನ ಕುಟುಂಬದವರು ಮತ್ತು ನನ್ನ ಫ್ರೆಂಡ್ಸ್ ಒಟ್ಟಿಗೆ ದೀಕ್ಷಾಸ್ನಾನ ತಗೊಬೇಕು’ ಅಂತ ಕೆಲವರು ಅಂದ್ಕೊಳ್ತಾರೆ. ಈ ರೀತಿ ಅಂದ್ಕೊಳ್ಳೋದ್ರಲ್ಲಿ ತಪ್ಪೇನಿಲ್ಲ, ಆದ್ರೂ ಅವರು ಒಂದು ವಿಷ್ಯವನ್ನ ಯೋಚಿಸಬೇಕು. ‘ನಮ್ಮವರ ಜೊತೆ ದೀಕ್ಷಾಸ್ನಾನ ತಗೊಳ್ಳಬೇಕು ಅಂತ ಈಗ ನನ್ನ ದೀಕ್ಷಾಸ್ನಾನವನ್ನ ಮುಂದೂಡೋದು ಸರಿನಾ?’ ನೆನಪಿಡಿ, ಸಮರ್ಪಣೆ ಅನ್ನೋದು ನಾವು ವೈಯಕ್ತಿಕವಾಗಿ ದೇವರಿಗೆ ಕೊಡೋ ಮಾತಾಗಿದೆ. ಹಾಗಾಗಿ ನಮ್ಮ ದೀಕ್ಷಾಸ್ನಾನ ಬೇರೆಯವ್ರ ಮೇಲೆ ಹೊಂದ್ಕೊಂಡಿರಬಾರದು.—ರೋಮ. 14:12.
ಅಂತ್ಯ ಹತ್ರ ಇದೆ, ನೆನಪಿಡಿ!
10. ದೀಕ್ಷಾಸ್ನಾನ ತಗೊಳ್ಳದೇ ಇರೋಕೆ ಇನ್ನೊಂದು ಕಾರಣ ಏನು?
10 ಕೆಲವರು ದೀಕ್ಷಾಸ್ನಾನ ತಗೊಳ್ಳದೇ ಇರೋಕೆ ಏನೆಲ್ಲಾ ಕಾರಣ ಇದೆ ಅಂತ ನಾವು ಇಲ್ಲಿವರೆಗೂ ನೋಡ್ತಾ ಬಂದ್ವಿ. ಇನ್ನು ಕೆಲವರು, ಅಂತ್ಯ ಇನ್ನೂ ತುಂಬ ದೂರದಲ್ಲಿದೆ ಅಂತ ನೆನಸಿ ದೀಕ್ಷಾಸ್ನಾನ ತಗೊಳ್ಳೋದಿಲ್ಲ. ಆದ್ರೆ ಈ ರೀತಿ ಅಂದ್ಕೊಳ್ಳೋದು ಸರಿನಾ? ಯೇಸು ತನ್ನ ಶಿಷ್ಯರಿಗೆ, ‘ನೀವು ಸಿದ್ಧರಾಗಿರಿ, ಯಾಕಂದ್ರೆ ನೀವು ನೆನಸದ ಸಮಯದಲ್ಲಿ ಮನುಷ್ಯಕುಮಾರ ಬರ್ತಾನೆ’ ಅಂತ ಎಚ್ಚರಿಸಿದ. ಇದನ್ನ ನಾವು ನೆನಪಲ್ಲಿ ಇಡಬೇಕು.—ಲೂಕ 12:40.
11. ಕೀರ್ತನೆ 119:60ರ ಪ್ರಕಾರ ಯೆಹೋವನಿಗೆ ಏನಿಷ್ಟ ಅಂತ ನಮಗೆ ಗೊತ್ತಾದಾಗ ನಾವು ಏನು ಮಾಡಬೇಕು ಮತ್ತು ಯಾಕೆ?
11 ನಾವು ಯೆಹೋವನನ್ನ ತುಂಬ ಪ್ರೀತಿಸ್ತೀವಿ, ಆತನ ಮಾತು ಕೇಳೋಕೆ ಇಷ್ಟಪಡ್ತೀವಿ. ಅದಕ್ಕೇ ನಾವು ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಳ್ತೀವಿ. ನಾವು ಎಷ್ಟು ಹೆಚ್ಚು ನಮ್ಮ ಪ್ರೀತಿಯ ದೇವರ ಬಗ್ಗೆ ತಿಳ್ಕೊಳ್ತೀವೋ, ಅಷ್ಟೇ ಹೆಚ್ಚು ಆತನ ಆಜ್ಞೆಗಳನ್ನ ಪ್ರೀತಿಸ್ತೀವಿ. ಹಾಗಾಗಿ ಯೆಹೋವನಿಗೆ ಏನಿಷ್ಟ ಅಂತ ಗೊತ್ತಾದ ತಕ್ಷಣ ಅದನ್ನ ಮಾಡ್ತೀವಿ. (ಕೀರ್ತನೆ 119:60 ಓದಿ.) ಆತನ ಮಾತು ಕೇಳೋಕೆ ಇನ್ನೊಂದು ಮುಖ್ಯವಾದ ಕಾರಣವನ್ನ ಯಾಕೋಬ ಹೇಳಿದ್ದಾನೆ. ‘ನಾಳೆ ಏನಾಗುತ್ತೆ ಅಂತ ನಮಗೆ ಯಾರಿಗೂ ಗೊತ್ತಿಲ್ಲ.’ ಹಾಗಾಗಿ ಯೋಚಿಸಿ ನೋಡಿ, ಒಂದು ವಿಷ್ಯ ಸರಿಯಾಗಿದೆ ಅಂತ ನಮಗೆ ಗೊತ್ತಿದ್ರೂ ಅದನ್ನ ಮಾಡಬೇಕು ಅಂತ ಅಂದ್ಕೊಂಡ್ರೂ ನಾಳೆ ನಮ್ಮ ಜೀವ ಇಲ್ಲದೇ ಹೋಗಬಹುದು. ಆದ್ರಿಂದ ಯೆಹೋವನ ಇಷ್ಟ ಏನು ಅಂತ ಗೊತ್ತಾದ್ಮೇಲೆ ತಡಮಾಡದೇ ಅದನ್ನ ತಕ್ಷಣ ಮಾಡಿ.—ಯಾಕೋ. 4:13-17.
12. ಯೇಸು ಹೇಳಿದ ದ್ರಾಕ್ಷಿ ತೋಟದ ಯಜಮಾನನ ಉದಾಹರಣೆಯಿಂದ ನಾವೇನು ಕಲಿಬಹುದು?
12 ಕೆಲವ್ರಿಗೆ ಯೇಸು ಹೇಳಿದ ದ್ರಾಕ್ಷಿ ತೋಟದ ಉದಾಹರಣೆ ನೆನಪಾಗುತ್ತೆ. ಬೆಳಿಗ್ಗೆಯಿಂದ ಕೆಲಸ ಮಾಡಿದವ್ರಿಗೂ ಕೊನೆಗೆ ಬಂದು ಒಂದು ಗಂಟೆ ಕೆಲಸ ಮಾಡಿದವ್ರಿಗೂ ಒಂದೇ ಸಂಬಳ ಅಂತ ಯೇಸು ಹೇಳಿದ ಅಲ್ವಾ? ಅದು ನಿಜಾನೇ! ಆದ್ರೆ ಅವರು ಯಾಕೆ ಬರೀ ಒಂದು ಗಂಟೆ ಕೆಲಸ ಮಾಡಬೇಕಾಯ್ತು ಅಂತ ನೀವು ಯೋಚಿಸಿದ್ರಾ? ಅವರು “ಯಾರೂ ನಮ್ಮನ್ನ ಕೆಲಸಕ್ಕೆ ಕರೆದಿಲ್ಲ” ಅಂತ ಹೇಳಿದ್ರು. ಅವರ ಮಾತಿನ ಅರ್ಥ ಏನು? ಕೆಲಸದಿಂದ ತಪ್ಪಿಸ್ಕೊಳ್ಳಬೇಕು ಅಂತ ಅವರು ಹಾಗೆ ಮಾಡ್ಲಿಲ್ಲ, ಬದ್ಲಿಗೆ ಅವರು ಕೆಲಸಕ್ಕಾಗಿ ಬೆಳಿಗ್ಗೆಯಿಂದ ಕಾಯ್ತಾ ಇದ್ರು. ಆದ್ರೆ ಯಾರೂ ಅವ್ರನ್ನ ಕರೆದಿರಲಿಲ್ಲ ಅಷ್ಟೇ. ಯಾವಾಗ ಅವ್ರನ್ನ ಕೆಲಸಕ್ಕೆ ಕರೆದ್ರೋ ಆಗ ತಡಮಾಡದೆ ತಕ್ಷಣ ಅವರು ಬಂದು ಕೆಲಸಕ್ಕೆ ಸೇರಿಕೊಂಡರು. (ಮತ್ತಾ. 20:1-16) ಅದೇ ತರ ಇವತ್ತು ಯೇಸು, ‘ನನ್ನ ಶಿಷ್ಯರಾಗಿ ದೇವರ ಆಳ್ವಿಕೆಯ ಕೆಲಸಕ್ಕೆ ಕೈಜೋಡಿಸಿ’ ಅಂತ ಕರಿತಿದ್ದಾನೆ. ಆ ಸುದ್ದಿ ನಮ್ಮ ಕಿವಿಗೆ ಬಿದ್ದ ತಕ್ಷಣ, ನಾವು ಆ ಕೆಲಸಕ್ಕೆ ಕೈ ಜೋಡಿಸಬೇಕು.
13. ಲೋಟನ ಹೆಂಡತಿಯಿಂದ ನಾವೇನು ಕಲಿಬಹುದು?
13 ದೇವರ ಸೇವೆಯಲ್ಲಿ ಪ್ರಗತಿ ಮಾಡೋಕೆ ಯಾರಾದ್ರೂ ಈಗ ತಡ ಮಾಡೋದಾದ್ರೆ, ಅವ್ರಿಗೆ ಕೊನೆ ಸಮಯದಲ್ಲಿ ದೇವರಿಗೆ ಇಷ್ಟ ಆಗೋ ತರ ಬದಲಾವಣೆ ಮಾಡ್ಕೊಳ್ಳೋಕೆ ತುಂಬ ಕಷ್ಟ ಆಗುತ್ತೆ. ಅದಕ್ಕೇ ಯೇಸು ತನ್ನ ಶಿಷ್ಯರಿಗೆ, “ಲೋಟನ ಹೆಂಡತಿಯನ್ನ ನೆನಪಿಸ್ಕೊಳ್ಳಿ” ಅಂತ ಎಚ್ಚರಿಸಿದನು. (ಲೂಕ 17:31-35) ಅವಳಿಗೆ ಯೆಹೋವ ಸೋದೋಮ್ ಗೊಮೋರ ಪಟ್ಟಣವನ್ನ ತಕ್ಷಣ ನಾಶ ಮಾಡ್ತಾನೆ ಅಂತ ಚೆನ್ನಾಗಿ ಗೊತ್ತಿತ್ತು. ಆದ್ರೂ ಆ ವಸ್ತುಗಳ ಮೇಲಿದ್ದ ಪ್ರೀತಿಯನ್ನ ಆಕೆಗೆ ಕೊನೇ ಕ್ಷಣದಲ್ಲಿ ಬಿಡೋಕೆ ಆಗ್ಲಿಲ್ಲ. (ಆದಿ. 19:23-26) ಅವಳ ಅನುಭವದಿಂದ ನಮಗೆ ಏನು ಗೊತ್ತಾಗುತ್ತೆ? ರಕ್ಷಣೆಗೆ ಹೋಗೋ ದಾರಿ ಯಾವಾಗ್ಲೂ ತೆರೆದೇ ಇರೋದಿಲ್ಲ! ದೇವರು, ತನ್ನ ಸಮಯ ಬಂದಾಗ ಆ ಬಾಗಿಲನ್ನು ಮುಚ್ಚಿಬಿಡ್ತಾನೆ, ಶಾಶ್ವತವಾಗಿ ಬೀಗ ಹಾಕಿಬಿಡ್ತಾನೆ!—ಲೂಕ 13:24, 25.
14. ಲೋಕದ ಅಂತ್ಯದ ಬಗ್ಗೆ ಇರೋ ಭವಿಷ್ಯವಾಣಿಗಳಿಗೆ ನಾವು ಯಾಕೆ ಗಮನ ಕೊಡಬೇಕು?
14 ಒಂದೊಂದು ದಿನ ಕಳೆದಂತೆ ಲೋಕದ ಅಂತ್ಯ ತುಂಬ ಹತ್ರ ಇದೆ ಅಂತ ಭವಿಷ್ಯವಾಣಿಗಳು ತೋರಿಸ್ತಾ ಇದೆ. ಭವಿಷ್ಯವಾಣಿಗಳಲ್ಲಿರೋ ಘಟನೆಗಳನ್ನ ನೀವು ಕಣ್ಣಾರೆ ನೋಡದೆ ಇದ್ರೂ ನಡೀತಿರೋ ಆ ಘಟನೆಗಳಿಗೆ ನೀವು ಗಮನ ಕೊಡಬೇಕು. ಆ ಘಟನೆಗಳು ನಡೀತಿದೆ ಅನ್ನೋ ಸುದ್ದಿ ನಿಮ್ಮ ಕಿವಿಗೆ ಬಿದ್ದಾಗ, ನೀವು ಆ ಸಮಯದ ಗಂಭೀರತೆಯನ್ನ ಅರ್ಥ ಮಾಡ್ಕೊಂಡು ದೀಕ್ಷಾಸ್ನಾನ ತಗೊಬೇಕು. ಅಪೊಸ್ತಲ ಪೇತ್ರ ಅಲ್ಲಿದ್ದ ಕ್ರೈಸ್ತರಿಗೆ, “ಎಲ್ಲಾ ಕೊನೆಯಾಗೋ ಸಮಯ ಹತ್ರ ಆಗಿದೆ” ಹಾಗಾಗಿ ಎಚ್ಚರವಾಗಿರಿ, “ಚೆನ್ನಾಗಿ ಯೋಚ್ನೆ ಮಾಡಿ” ಅಂತ ಹೇಳಿದ. (1 ಪೇತ್ರ 4:7) ಇಲ್ಲಿ ಪೇತ್ರ ಯಾವುದು ‘ಕೊನೆಯಾಗುತ್ತೆ’ ಅಂತ ಹೇಳ್ತಿದ್ದಾನೆ? ಅವನು ಹೇಳಿದ್ದು ಯೆಹೂದಿ ವ್ಯವಸ್ಥೆಗಳು ಕೊನೆಯಾಗುತ್ತೆ ಅಂತ. ಪೇತ್ರ ಈ ಪತ್ರವನ್ನ ಬರೆದಾಗ ಯೆರೂಸಲೇಮ್‌ನಿಂದ ತುಂಬ ದೂರ ಇದ್ದ ಜನ್ರಿಗೆ ಹೇಗನಿಸಿರುತ್ತೆ? ‘ಯೆರೂಸಲೇಮ್ ಪಟ್ಟಣ ನಾಶ ಆದ್ರೆ ನಮಗೇನು? ನಾವು ದೂರ ಇದ್ದೀವಿ, ನಮಗೇನು ತೊಂದ್ರೆ ಆಗಲ್ವಲ್ಲಾ’ ಅಂತ ಅವರು ನೆನಸಿರಬಹುದು. (1 ಪೇತ್ರ 1:1) ಆದ್ರೆ ಯೆರೂಸಲೇಮ್ ಬಗ್ಗೆ ಯೆಹೋವನು ಹೇಳಿದ ಭವಿಷ್ಯವಾಣಿ ನೆರವೇರಿದ್ದನ್ನ ಅವರು ನೋಡಿದಾಗ, ಆತನು ಹೇಳಿರೋ ಬೇರೆಲ್ಲಾ ಮಾತುಗಳು ನೆರವೇರುತ್ತೆ ಅನ್ನೋ ಭರವಸೆ ಅವ್ರಿಗೆ ಹೆಚ್ಚಾಗಿರುತ್ತೆ. ಅದೇ ತರ ಇವತ್ತು ನೆರವೇರುತ್ತಾ ಇರೋ ಭವಿಷ್ಯವಾಣಿಗಳಿಗೆ ನೀವು ಗಮನ ಕೊಡಬೇಕು. ಆಗ ಅಂತ್ಯ ಎಷ್ಟು ಹತ್ರ ಇದೆ ಅಂತ ಅರ್ಥ ಆಗುತ್ತೆ ಮತ್ತು ತಕ್ಷಣ ದೀಕ್ಷಾಸ್ನಾನ ತಗೊಳ್ಳೋಕೆ ನಿಮಗೆ ಪ್ರೇರಣೆ ಸಿಗುತ್ತೆ.
15. ಯೆಹೋವನ ದಿನಕ್ಕೆ ನಾವು ರೆಡಿ ಆಗಿರಬೇಕು ಅಂದ್ರೆ ಈಗ್ಲೇ ಏನು ಮಾಡಬೇಕು? (2 ಪೇತ್ರ 3:10-13)
15 ಪೇತ್ರ ತನ್ನ ಎರಡನೇ ಪತ್ರದಲ್ಲಿ, ಯೆಹೋವನ ತೀರ್ಪಿನ ದಿನಕ್ಕಾಗಿ ಸಿದ್ಧರಾಗಿ ಇರೋಕೆ ನಾವು ಏನೆಲ್ಲ ಮಾಡಬೇಕು ಅಂತ ಹೇಳಿದ. ಅಲ್ಲಿದ್ದ ಕ್ರೈಸ್ತರು ಯೆಹೋವನ ದಿನ ಇನ್ನು ಲೇಟ್ ಆಗಿ ಬರುತ್ತೆ ಅಂತ ಅಂದ್ಕೊಂಡಿದ್ರು. ಆದ್ರೆ ಪೇತ್ರ ಅವ್ರಿಗೆ ‘ಯೆಹೋವನ ದಿನವನ್ನ ಮನಸ್ಸಲ್ಲಿಟ್ಟು ಕಾಯ್ತಾ ಇರಿ’ ಅಂತ ಹೇಳಿದ. (2 ಪೇತ್ರ 3:10-13 ಓದಿ.) ನಾವೂ ಆ ದಿನವನ್ನ ಮನಸ್ಸಲ್ಲಿ ಇಟ್ಟು ಕಾಯ್ತಾ ಇದ್ರೆ, ಅದಕ್ಕಾಗಿ ಸಿದ್ಧರಾಗಿರ್ತೀವಿ ಮತ್ತು ತವಕದಿಂದ ಎದುರು ನೋಡ್ತಾ ಇರ್ತೀವಿ. ಆ ರೀತಿ ತವಕದಿಂದ ಎದುರು ನೋಡ್ತಾ ಇದ್ದೀವಿ ಅಂತ ತೋರಿಸೋಕೆ ‘ನಾವು ಪವಿತ್ರರಾಗಿ ನಡ್ಕೊಬೇಕು ಮತ್ತು ದೇವರ ಮೇಲೆ ಭಕ್ತಿ ಇದೆ ಅಂತ ತೋರಿಸೋ ಕೆಲಸಗಳನ್ನ ಮಾಡಬೇಕು.’ ಇಂಥ ಕೆಲಸಗಳಲ್ಲಿ ಒಂದು ದೀಕ್ಷಾಸ್ನಾನ ತಗೊಳ್ಳೋದು! ನೀವು ಯೆಹೋವನಿಗೆ ನಿಮ್ಮನ್ನ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಂಡಾಗ ಆತನಿಗೆ ಎಷ್ಟು ಖುಷಿಯಾಗುತ್ತೆ ಅಂತ ಯೋಚಿಸಿ.
ತಡ ಮಾಡದೇ ಇದ್ರೆ ಸಿಗೋ ಪ್ರಯೋಜನ
16. ಯಾವಾಗ ದೀಕ್ಷಾಸ್ನಾನ ತಗೊಂಡ್ರೆ ಒಳ್ಳೇದು? (2 ಕೊರಿಂಥ 6:1, 2) (ಚಿತ್ರ ನೋಡಿ.)
16 ನೀವು ಯಾವಾಗ ದೀಕ್ಷಾಸ್ನಾನ ತಗೊಬೇಕು ಅಂತ ಯೋಚಿಸ್ತಾ ಇದ್ದೀರಾ? ಇದೇ ಅದಕ್ಕೆ ಸರಿಯಾದ ಸಮಯ! (2 ಕೊರಿಂಥ 6:1, 2 ಓದಿ.) ಫಿಲಿಪ್ಪ ಇಥಿಯೋಪ್ಯದ ಅಧಿಕಾರಿಯನ್ನ ಭೇಟಿ ಮಾಡಿದಾಗ ಅವನು ಸಿಹಿಸುದ್ದಿಯನ್ನ ಕೇಳಿಸ್ಕೊಂಡ ಮತ್ತು ದೀಕ್ಷಾಸ್ನಾನ ತಗೊಳ್ಳೋದು ಮುಖ್ಯ ಅಂತ ಅರ್ಥ ಮಾಡ್ಕೊಂಡ. ದೀಕ್ಷಾಸ್ನಾನ ತಗೊಳ್ಳೋಕೆ ಅವನಿಗೆ ಒಂದು ಅವಕಾಶ ಸಿಕ್ಕಿದಾಗ ಅವನು, ‘ನಾನು ಮೊದಲು ಸಿಹಿಸುದ್ದಿ ಬಗ್ಗೆ ಇನ್ನೂ ಜಾಸ್ತಿ ಕಲಿತೀನಿ, ಮುಂದೆ ನೀರು ಸಿಕ್ಕಿದ್ರೆ ಅಲ್ಲಿ ದೀಕ್ಷಾಸ್ನಾನ ತಗೊಳ್ತೀನಿ’ ಅಂತ ಯೋಚಿಸ್ಲಿಲ್ಲ. ಬದ್ಲಿಗೆ ತಕ್ಷಣ, “ನಾನ್ಯಾಕೆ ದೀಕ್ಷಾಸ್ನಾನ ತಗೊಳ್ಳಬಾರದು?” ಅಂತ ಕೇಳಿದ. (ಅ. ಕಾ. 8:26, 27, 35-39) ನೋಡಿದ್ರಾ? ದೀಕ್ಷಾಸ್ನಾನ ತಗೊಳ್ಳೋಕೆ ಅವನಲ್ಲಿ ಎಷ್ಟು ಹುರುಪಿತ್ತು. ಅವನು ದೀಕ್ಷಾಸ್ನಾನ ತಗೊಂಡ ಮೇಲೆ “ಸಂತೋಷದಿಂದ ತನ್ನ ದಾರಿ ಹಿಡಿದು ಊರಿಗೆ ವಾಪಸ್ ಹೋದ” ಅಂತ ಬೈಬಲ್ ಹೇಳುತ್ತೆ.
ಇಥಿಯೋಪ್ಯದ ಅಧಿಕಾರಿ ತರ ದೀಕ್ಷಾಸ್ನಾನ ತಗೊಳ್ಳೋಕೆ ಇದೇ ಸರಿಯಾದ ಸಮಯ ಅನ್ನೋದನ್ನ ನೆನಪಿಡಿ! (ಪ್ಯಾರ 16 ನೋಡಿ)a
17. ಯೆಹೋವ ನಿಮಗೆ ಹೇಗೆ ಸಹಾಯ ಮಾಡ್ತಾನೆ?
17 ಒಂದುವೇಳೆ ನೀವು ದೀಕ್ಷಾಸ್ನಾನ ತಗೊಳ್ಳೋಕೆ ಹಿಂದೇಟು ಹಾಕ್ತಿದ್ರೆ ನೆನಪಿಡಿ, ಯೆಹೋವನು ನಿಮ್ಮ ಫ್ರೆಂಡ್ ಆಗಬೇಕು ಅಂತ ಕಾಯ್ತಾ ಇದ್ದಾನೆ. (ರೋಮ. 2:4) ನಿಮಗೆ ಏನೇ ಭಯ ಇದ್ರೂ, ಏನೇ ಚಿಂತೆ ಇದ್ರೂ ಅಥವಾ ನಿಮ್ಮನ್ನ ಯಾರೇ ತಪ್ಪು ದಾರಿಗೆ ನಡೆಸ್ತಾ ಇದ್ರೂ ಯೆಹೋವನು ಅದನ್ನೆಲ್ಲ ತೆಗೆದು ಹಾಕಿ ನೀವು ದೀಕ್ಷಾಸ್ನಾನ ತಗೊಳ್ಳೋಕೆ ಸಹಾಯ ಮಾಡ್ತಾನೆ. ನೀವು ಇದನ್ನ ನಂಬಿ! ನೀವು ದೀಕ್ಷಾಸ್ನಾನ ತಗೊಂಡ್ರೆ ನಿಮಗೆ ದೇವರ ಮುಂದೆ ಒಂದು ಒಳ್ಳೇ ಮನಸ್ಸಾಕ್ಷಿ ಇರುತ್ತೆ. ಆಗ ನೀವು ಹಿಂದೆ ಬಿಟ್ಟು ಬಂದಿರೋ ವಿಷ್ಯಗಳಿಗಾಗಿ ಬೇಜಾರು ಮಾಡ್ಕೊಳಲ್ಲ. (ಫಿಲಿ. 3:8, 13) ಬದಲಿಗೆ ಯಾರೆಲ್ಲಾ ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಂಡಿದ್ದಾರೋ ಅವ್ರಿಗೆ ಆತನು ಕೊಟ್ಟಿರೋ ಮಾತು ನೆರವೇರೋದನ್ನ ನೀವು ನೋಡ್ತೀರ.—ಅ. ಕಾ. 3:19.
ಗೀತೆ 38 ಮಾಡುವನು ಸ್ಥಿರ, ನೀಡುವನು ಬಲ!
a ಚಿತ್ರ ವಿವರಣೆ: ಇಥಿಯೋಪ್ಯದ ಅಧಿಕಾರಿ ಫಿಲಿಪ್ಪನಿಗೆ ‘ನಾನು ದೀಕ್ಷಾಸ್ನಾನ ತಗೋಬೇಕು’ ಅಂತ ಹೇಳಿದ ತರಾನೇ ಬೈಬಲ್ ಸ್ಟಡಿ ತಗೊಳ್ತಾ ಇರೋ ಒಬ್ಬ ವಿದ್ಯಾರ್ಥಿ ಹಿರಿಯರ ಹತ್ರ ‘ನಾನೂ ದೀಕ್ಷಾಸ್ನಾನ ತಗೊಳ್ಳಬೇಕು’ ಅಂತ ಕೇಳ್ತಿದ್ದಾಳೆ.