ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಫೆಬ್ರವರಿ ಪು. 8-13
  • ದೀಕ್ಷಾಸ್ನಾನ ಅಂದ್ರೇನು? ಅದು ಯಾಕೆ ಮುಖ್ಯ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೀಕ್ಷಾಸ್ನಾನ ಅಂದ್ರೇನು? ಅದು ಯಾಕೆ ಮುಖ್ಯ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೀಕ್ಷಾಸ್ನಾನದ ಅರ್ಥ
  • ದೀಕ್ಷಾಸ್ನಾನದಲ್ಲಿ ಏನೆಲ್ಲಾ ಒಳಗೂಡಿದೆ
  • “ತಂದೆ ಹೆಸ್ರಲ್ಲಿ, ಮಗನ ಹೆಸ್ರಲ್ಲಿ ಮತ್ತು ಪವಿತ್ರಶಕ್ತಿಯ ಹೆಸ್ರಲ್ಲಿ”
  • ದೀಕ್ಷಾಸ್ನಾನ: ಒಂದು ಒಳ್ಳೇ ಗುರಿ!
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ದೀಕ್ಷಾಸ್ನಾನ—ಕ್ರೈಸ್ತರು ತೆಗೆದುಕೊಳ್ಳಬೇಕಾದ ಪ್ರಾಮುಖ್ಯ ಹೆಜ್ಜೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ದೀಕ್ಷಾಸ್ನಾನ ಅಂದ್ರೇನು?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ದೀಕ್ಷಾಸ್ನಾನವನ್ನು ಏಕೆ ಮಾಡಿಸಿಕೊಳ್ಳಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಫೆಬ್ರವರಿ ಪು. 8-13

ಏಪ್ರಿಲ್‌ 13-19, 2026

ಗೀತೆ 52 ಕ್ರೈಸ್ತ ಸಮರ್ಪಣೆ

ದೀಕ್ಷಾಸ್ನಾನ ಅಂದ್ರೇನು? ಅದು ಯಾಕೆ ಮುಖ್ಯ?

“ಶಿಷ್ಯರಾಗೋಕೆ ಕಲಿಸಿ . . . , ದೀಕ್ಷಾಸ್ನಾನ ಮಾಡಿಸಿ.”—ಮತ್ತಾ. 28:19.

ಈ ಲೇಖನದಲ್ಲಿ ಏನಿದೆ?

ದೀಕ್ಷಾಸ್ನಾನ ಅಂದ್ರೇನು? ಅದ್ರಲ್ಲಿ ಏನೆಲ್ಲಾ ಸೇರಿದೆ ಮತ್ತು ಅದನ್ನ ತಗೊಳ್ಳೋದು ಯಾಕೆ ಮುಖ್ಯ ಅಂತ ನೋಡೋಣ.

1. ಬೈಬಲಿನ ಮುಖ್ಯ ಬೋಧನೆಗಳಲ್ಲಿ ದೀಕ್ಷಾಸ್ನಾನನೂ ಒಂದು ಅಂತ ಹೇಗೆ ಹೇಳಬಹುದು?

ಹೊಸಬರು ದೀಕ್ಷಾಸ್ನಾನ ತಗೊಳ್ಳೋದನ್ನ ನೋಡುವಾಗ ನಮಗೆಷ್ಟು ಖುಷಿ ಆಗುತ್ತೆ ಅಲ್ವಾ? ಒಂದನೇ ಶತಮಾನದ ಮೊದಲನೇ ಕೂಟದಲ್ಲಿ ಎಷ್ಟೋ ಜನ್ರು ದೀಕ್ಷಾಸ್ನಾನ ತಗೊಂಡ್ರು. ಆಗ ಅಲ್ಲಿದ್ದ ಕ್ರೈಸ್ತರಿಗೆ ತುಂಬ ಖುಷಿ ಆಯ್ತು. ಆ ಸಮಯದಲ್ಲಿ ಅಪೊಸ್ತಲ ಪೇತ್ರ ದೀಕ್ಷಾಸ್ನಾನ ತಗೊಳ್ಳೋದು ಎಷ್ಟು ಮುಖ್ಯ ಅಂತ ಅರ್ಥ ಮಾಡಿಸೋಕೆ ಒಂದು ಭಾಷಣ ಕೊಟ್ಟ. (ಅ. ಕಾ. 2:38, 40, 41) ಅಪೊಸ್ತಲ ಪೌಲ ‘ಕ್ರಿಸ್ತನ ಮೂಲ ಬೋಧನೆಗಳಲ್ಲಿ, ದೀಕ್ಷಾಸ್ನಾನ ತಗೊಳ್ಳೋದೂ’ ಒಂದು ಮುಖ್ಯ ವಿಷ್ಯ ಅಂತ ಬರೆದ. (ಇಬ್ರಿ. 6:1, 2) ಇದ್ರಿಂದ ನಮಗೇನು ಗೊತ್ತಾಗುತ್ತೆ? ದೀಕ್ಷಾಸ್ನಾನ ನಮ್ಮೆಲ್ಲರಿಗೆ ಚೆನ್ನಾಗಿ ಪರಿಚಯ ಇರೋ ವಿಷ್ಯವಾದ್ರೂ ಅದೆಷ್ಟು ಪ್ರಾಮುಖ್ಯ ಅಂತ ನಾವೆಲ್ಲ ತಿಳ್ಕೊಬೇಕು. ಯಾಕೆ?

2. ದೀಕ್ಷಾಸ್ನಾನದ ಬಗ್ಗೆ ತಿಳ್ಕೊಳ್ಳೋದು ಯಾಕೆ ಮುಖ್ಯ?

2 ಒಂದು ಮನೆ ದೃಢವಾಗಿ ಇರಬೇಕಂದ್ರೆ ಅದ್ರ ಅಡಿಪಾಯ ಗಟ್ಟಿಯಾಗಿ ಇರಬೇಕು. ಬೈಬಲ್‌ ಸತ್ಯಗಳೇ ನಮ್ಮ ನಂಬಿಕೆಗೆ ಅಡಿಪಾಯ. ನಾವು ಇನ್ನೂ ಬೈಬಲ್‌ ಬಗ್ಗೆ ಕಲಿತಾ ಇರಬಹುದು ಅಥವಾ ದೀಕ್ಷಾಸ್ನಾನ ತಗೊಂಡು ತುಂಬ ವರ್ಷಗಳು ಆಗಿರಬಹುದು. ವಿಷ್ಯ ಏನೇ ಇರಲಿ ದೀಕ್ಷಾಸ್ನಾನದ ಬಗ್ಗೆ ನಾವೆಲ್ರೂ ತಿಳ್ಕೊಳ್ಳೋದು ತುಂಬಾನೇ ಮುಖ್ಯ. ಯಾಕಂದ್ರೆ ಇದೂ ಬೈಬಲ್‌ ಸತ್ಯಗಳಲ್ಲಿ ಒಂದಾಗಿದೆ. ಆದ್ರಿಂದ ನಾವು ಈ ಲೇಖನದಲ್ಲಿ, ದೀಕ್ಷಾಸ್ನಾನ ಅಂದ್ರೇನು? ದೀಕ್ಷಾಸ್ನಾನ ತಗೊಳ್ಳೋದ್ರಲ್ಲಿ ಏನೆಲ್ಲಾ ಒಳಗೂಡಿದೆ? ತಂದೆ, ಮಗ ಮತ್ತು ಪವಿತ್ರಶಕ್ತಿ ಹೆಸ್ರಲ್ಲಿ ದೀಕ್ಷಾಸ್ನಾನ ತಗೊಳ್ಳೋದು ಯಾಕೆ ಮುಖ್ಯ ಅಂತ ನೋಡೋಣ.

ದೀಕ್ಷಾಸ್ನಾನದ ಅರ್ಥ

3. ನೀವು ಎಲ್ರ ಮುಂದೆ ದೀಕ್ಷಾಸ್ನಾನ ತಗೊಳ್ಳೋದು ಏನೆಲ್ಲ ತೋರಿಸ್ಕೊಡುತ್ತೆ?

3 ನೀವು ಎಲ್ರ ಮುಂದೆ ದೀಕ್ಷಾಸ್ನಾನ ತಗೊಂಡಾಗ ಏನೆಲ್ಲ ತೋರಿಸ್ಕೊಡ್ತೀರಾ? ‘ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಬಗ್ಗೆ ಇರೋ ಸತ್ಯನ ಒಪ್ಕೊಂಡಿದ್ದೀನಿ, ಪಾಪಗಳಿಗೆ ಪಶ್ಚಾತ್ತಾಪ ಪಟ್ಟಿದ್ದೀನಿ, ಯೆಹೋವನ ಸೇವೆಗಾಗಿ ನನ್ನ ಜೀವನವನ್ನ ಬದಲಾಯಿಸ್ಕೊಂಡಿದ್ದೀನಿ, ಯೇಸುವಿನಿಂದಾನೇ ರಕ್ಷಣೆ ಸಿಗುತ್ತೆ ಅಂತ ಅರ್ಥ ಮಾಡ್ಕೊಂಡಿದ್ದೀನಿ ಮತ್ತು ಇನ್ಮೇಲಿಂದ ಯೆಹೋವ ದೇವರಿಗೆ ಇಷ್ಟ ಆಗೋ ತರ ಮತ್ತು ಸಂಘಟನೆ ಹೇಳೋ ತರ ನಡ್ಕೊಳ್ತೀನಿ ಅಂತ ತೋರಿಸ್ಕೊಡ್ತೀರ.’ ನೀವು ಯೆಹೋವನಿಗೆ ನಿಮ್ಮನ್ನ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಂಡಿದ್ದೀರಾ? ಹಾಗಾದ್ರೆ ಶಾಶ್ವತ ಜೀವಕ್ಕೆ ನಡೆಸೋ ದಾರಿಲಿ ನಿಮ್ಮ ಪ್ರಯಾಣ ಶುರು ಆಗಿದೆ ಅಂತ ಅರ್ಥ!

4. ದೀಕ್ಷಾಸ್ನಾನ ಮಾಡಿಸೋ ವಿಧಾನ ಏನನ್ನ ಸೂಚಿಸುತ್ತೆ? (ಚಿತ್ರ ನೋಡಿ.)

4 ದೀಕ್ಷಾಸ್ನಾನ ಮಾಡಿಸುವಾಗ ನಿಮ್ಮನ್ನ ಸಂಪೂರ್ಣವಾಗಿ ನೀರೊಳಗೆ ಮುಳುಗಿಸಿ ಮೇಲೆ ಎತ್ತುತ್ತಾರೆ.a ಇದು ಒಂದು ರೀತಿಲಿ, ನೀವು ಸತ್ತು ಮತ್ತೆ ಜೀವಂತವಾಗಿ ಎದ್ದು ಬಂದ ತರ ಇರುತ್ತೆ. (ಕೊಲೊಸ್ಸೆ 2:12 ಹೋಲಿಸಿ.) ಯಾಕೆ ಹೀಗೆ ಹೇಳಬಹುದು? ನೀವು ನೀರಲ್ಲಿ ಮುಳುಗುವಾಗ ಹಿಂದೆ ಜೀವನ ಮಾಡ್ತಿದ್ದ ರೀತಿನ ಅಲ್ಲಿಗೆ ನಿಲ್ಲಿಸಿದ್ದೀರ ಅಂತ ಅರ್ಥ. ನೀವು ನೀರಿಂದ ಎದ್ದು ಬರುವಾಗ ನಿಮ್ಮ ಜೀವನದ ಹೊಸ ಅಧ್ಯಾಯ ಶುರು ಆಗಿದೆ ಅಂತ ಅರ್ಥ. ಅಂದ್ರೆ ಇನ್ಮುಂದೆ ಯೆಹೋವ ದೇವರಿಗೆ ಇಷ್ಟ ಆಗೋ ತರ ಜೀವನ ಮಾಡೋಕೆ ನೀವು ಶುರು ಮಾಡ್ತೀರ.

ಚಿತ್ರ: ಒಬ್ಬ ವ್ಯಕ್ತಿ ಎಷ್ಟೋ ಸವಾಲುಗಳನ್ನ ಎದುರಿಸಿದ್ಮೇಲೆ ದೀಕ್ಷಾಸ್ನಾನ ತಗೊಳ್ತಿದ್ದಾನೆ. 1. ಟಿವಿಯಲ್ಲಿ ಬಾಕ್ಸಿಂಗ್‌ ನೋಡ್ತಾ ಖುಷಿಪಡ್ತಿದ್ದಾನೆ. 2. ಸಿಗರೇಟ್‌ ಸೇದುತ್ತಿದ್ದಾನೆ. 3. ಅತಿಯಾಗಿ ಕುಡಿತಿದ್ದಾನೆ. 4. ಆದ್ರೆ ಬದ್ಲಾವಣೆ ಆದ್ಮೇಲೆ ದೀಕ್ಷಾಸ್ನಾನ ತಗೊಳ್ತಿದ್ದಾನೆ.

ನಿಮಗೆ ದೀಕ್ಷಾಸ್ನಾನ ಆದಾಗ ಹಳೇ ಜೀವನ ರೀತಿಯನ್ನ ಬಿಟ್ಟು ಯೆಹೋವನಿಗೆ ಇಷ್ಟ ಆಗೋ ತರಾನೇ ಹೊಸ ಜೀವನ ಶುರು ಮಾಡ್ತೀರ (ಪ್ಯಾರ 4 ನೋಡಿ)


5. ದೀಕ್ಷಾಸ್ನಾನ ತಗೊಳ್ಳೋಕೆ ನೀವು ಹಾಕೋ ಪ್ರಯತ್ನನ ಯಾವುದಕ್ಕೆ ಹೋಲಿಸಬಹುದು? (1 ಪೇತ್ರ 3:18-21)

5 1 ಪೇತ್ರ 3:18-21 ಓದಿ. ದೀಕ್ಷಾಸ್ನಾನ ತಗೊಳ್ಳೋಕೆ ನೀವು ಹಾಕೋ ಪ್ರಯತ್ನನ ನೋಹ ಹಡಗು ಕಟ್ಟೋಕೆ ಹಾಕಿದ ಪ್ರಯತ್ನಕ್ಕೆ ಹೋಲಿಸಬಹುದು. ನೀವು ಇತ್ತೀಚೆಗೆ ಯೆಹೋವನ ಬಗ್ಗೆ ಕಲಿಯೋಕೆ ಶುರು ಮಾಡಿದ್ದೀರಾ? ಹಾಗಾದ್ರೆ ‘ದೀಕ್ಷಾಸ್ನಾನ ತಗೊಳ್ಳೋಕೆ ನಾನಿನ್ನೂ ಎಷ್ಟೆಲ್ಲಾ ಕಲಿಬೇಕಪ್ಪಾ’ ಅಂತ ಚಿಂತೆ ಆಗಬಹುದು. ‘ಇದು ನೋಹ ಹಡಗು ಕಟ್ಟಿದಕ್ಕಿಂತ ದೊಡ್ಡ ಕೆಲಸ’ ಅಂತ ಅನಿಸಬಹುದು. ಆದ್ರೆ ಇಷ್ಟೆಲ್ಲಾ ಪ್ರಯತ್ನ ಹಾಕೋದು ಮುಖ್ಯನಾ? ಹೌದು ಮುಖ್ಯ! ನೋಹನೂ ಪ್ರಯತ್ನ ಹಾಕಿದ. ಹಡಗನ್ನ ಹೇಗೆ ಕಟ್ಟಬೇಕು ಅಂತ ಯೆಹೋವ ನೋಹನಿಗೆ ನಿರ್ದಿಷ್ಟವಾಗಿ ಹೇಳಿದನು. ನೋಹ ಯೆಹೋವನ ಮೇಲೆ ನಂಬಿಕೆ ಇಟ್ಟು ಆತನ ಸಹಾಯದಿಂದ ಹಡಗನ್ನ ಕಟ್ಟಿದ. ಅದ್ರಿಂದ ಜಲಪ್ರಳಯದಿಂದ ತನ್ನ ಪ್ರಾಣ ಉಳಿಸ್ಕೊಂಡ, ಅದಕ್ಕೇ ಬೈಬಲ್‌ “ದೇವರ ಮಾತಿನ ಪ್ರಕಾರ ನೋಹ ಎಲ್ಲ ಮಾಡಿದ” ಅಂತ ಹೇಳುತ್ತೆ. (ಆದಿ. 6:22) ನೀವೂ ಹಾಗೆ ಮಾಡ್ತೀರಾ?

6. ಯಾವ ಅರ್ಥದಲ್ಲಿ ದೀಕ್ಷಾಸ್ನಾನ ನಮ್ಮನ್ನ ಕಾಪಾಡ್ತಿದೆ?

6 ವಚನ 21ರಲ್ಲಿ ಅಪೊಸ್ತಲ ಪೇತ್ರ, ದೀಕ್ಷಾಸ್ನಾನ “ನಿಮ್ಮನ್ನ ಕಾಪಾಡ್ತಿದೆ” ಅಂತ ಹೇಳಿದ. ಅವನ ಮಾತಿನ ಅರ್ಥ ನಾವು ದೀಕ್ಷಾಸ್ನಾನ ತಗೊಳ್ಳುವಾಗ ನೀರಲ್ಲಿ ಮುಳುಗಿ ಎದ್ದ ತಕ್ಷಣ ನಮಗೆ ರಕ್ಷಣೆ ಸಿಗುತ್ತೆ ಅಂತಾನಾ? ಅಥವಾ ನಮ್ಮ ಪಾಪಗಳೆಲ್ಲ ಸಂಪೂರ್ಣವಾಗಿ ಅಳಿಸಿಹೋಗುತ್ತೆ ಅಂತಾನಾ? ಇಲ್ಲ. ಯೇಸುವಿನ ರಕ್ತದಿಂದ ಮಾತ್ರನೇ ನಮ್ಮ ಪಾಪಗಳಿಗೆ ಕ್ಷಮೆ ಸಿಗೋದು ಮತ್ತು ನಮಗೆ ರಕ್ಷಣೆ ಸಿಗೋದು! (1 ಯೋಹಾ. 1:7) ಆದ್ರೂ ನಾವು ದೀಕ್ಷಾಸ್ನಾನ ತಗೊಳ್ಳೋದು ತುಂಬ ಮುಖ್ಯ. ಯಾಕಂದ್ರೆ ದೀಕ್ಷಾಸ್ನಾನ ತಗೊಳ್ಳಿ ಅಂತ ಯೆಹೋವನೇ ಆಜ್ಞೆ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ನಾವು ದೀಕ್ಷಾಸ್ನಾನ ತಗೊಂಡಾಗ ನಮಗೆ “ಶುದ್ಧ ಮನಸ್ಸಾಕ್ಷಿ ಕೊಡು” ಅಂತ ಯೆಹೋವನ ಹತ್ರ ನಾವು ಬೇಡ್ಕೊಳ್ತೀವಿ. ಆಗ ಯೇಸುವಿನ ರಕ್ತದಿಂದ ನಮ್ಮ ಪಾಪಗಳನ್ನ ಯೆಹೋವ ಸಂತೋಷವಾಗಿ ಕ್ಷಮಿಸ್ತಾನೆ. ಈ ಅರ್ಥದಲ್ಲಿ ದೀಕ್ಷಾಸ್ನಾನ ‘ನಮ್ಮನ್ನ ಕಾಪಾಡ್ತಿದೆ’ ಮತ್ತು ಶಾಶ್ವತ ಜೀವದ ದಾರಿಗೆ ನಡೆಸ್ತಿದೆ ಅಂತ ಹೇಳಬಹುದು.

ದೀಕ್ಷಾಸ್ನಾನದಲ್ಲಿ ಏನೆಲ್ಲಾ ಒಳಗೂಡಿದೆ

7. ದೀಕ್ಷಾಸ್ನಾನ ಕೊಡೋಕೆ ಸರಿಯಾದ ವಿಧಾನ ಯಾವುದು?

7 ದೀಕ್ಷಾಸ್ನಾನ ಮಾಡಿಸುವಾಗ ಆ ವ್ಯಕ್ತಿನ ಸಂಪೂರ್ಣವಾಗಿ ನೀರಲ್ಲಿ ಮುಳುಗಿಸಬೇಕು ಅಂತ ಬೈಬಲ್‌ ಹೇಳುತ್ತೆ. ಆದ್ರೆ ಇದನ್ನ ಬಿಟ್ಟು ಹೆಚ್ಚಿನ ವಿವರಣೆಗಳನ್ನ ಬೈಬಲ್‌ ಕೊಡಲ್ಲ. ಆದ್ರೂ ನಾವು ಯಾವ ವಿಷ್ಯಗಳನ್ನ ನೆನಪಲ್ಲಿ ಇಟ್ಕೊಬೇಕು ಅಂತ ಬೈಬಲ್‌ ತತ್ವಗಳು ತಿಳಿಸುತ್ತೆ. ಉದಾಹರಣೆಗೆ, ದೀಕ್ಷಾಸ್ನಾನ ತಗೊಳ್ಳೋ ವ್ಯಕ್ತಿ ಯಾವ ತರ ಬಟ್ಟೆ ಹಾಕಬೇಕು, ಅದನ್ನ ನೋಡೋಕೆ ಬರೋ ಜನ್ರು ಯಾವ ರೀತಿ ನಡ್ಕೊಬೇಕು ಅಂತ ತತ್ವಗಳಿಂದ ತಿಳ್ಕೊಬಹುದು. (1 ಕೊರಿಂ. 14:40; 1 ತಿಮೊ. 2:9) ಸಾಮಾನ್ಯವಾಗಿ ಇವತ್ತು ದೀಕ್ಷಾಸ್ನಾನನ ಹಿರಿಯರೇ ಕೊಡ್ತಾರೆ. ಹಾಗಂತ ನಾವು ಈ ಹಿರಿಯರನ್ನ ವಿಶೇಷವಾಗಿ ನೋಡಬೇಕು ಅಂತೇನಿಲ್ಲ. (1 ಕೊರಿಂ. 1:14, 15) ದೀಕ್ಷಾಸ್ನಾನನ ಕಮ್ಮಿ ಜನ್ರ ಮುಂದೆ ಕೊಟ್ರೂ ಅಥವಾ ತುಂಬ ಜನ್ರ ಮುಂದೆ ಕೊಟ್ರೂ ಅದಕ್ಕಿರೋ ಮೌಲ್ಯ ಮಾತ್ರ ಕಮ್ಮಿ ಆಗಲ್ಲ.—ಅ. ಕಾ. 8:36.

8. ದೀಕ್ಷಾಸ್ನಾನ ತಗೊಳ್ಳೋರಿಗೆ ಯಾವ ಪ್ರಶ್ನೆಗಳನ್ನ ಕೇಳಲಾಗುತ್ತೆ ಮತ್ತು ಯಾಕೆ? (ಅಪೊಸ್ತಲರ ಕಾರ್ಯ 2:38-42) (ಚಿತ್ರ ನೋಡಿ.)

8 “ರಕ್ಷಣೆ ಪಡೀಬೇಕಾದ್ರೆ ಆ ನಂಬಿಕೆ ಬಗ್ಗೆ ಎಲ್ರಿಗೂ ಸಾರಬೇಕು” ಅಂತ ಬೈಬಲ್‌ ಹೇಳುತ್ತೆ. (ರೋಮ. 10:9, 10; “ಎಲ್ರಿಗೂ ಸಾರಬೇಕು” ಅನ್ನೋ ಇಂಗ್ಲಿಷ್‌ ಸ್ಟಡಿ ನೋಟ್‌ ನೋಡಿ.) ನಾವು ಸಿಹಿಸುದ್ದಿ ಸಾರುವಾಗಷ್ಟೇ ಅಲ್ಲ, ದೀಕ್ಷಾಸ್ನಾನ ತಗೊಳ್ಳುವಾಗ್ಲೂ ನಮ್ಮ ನಂಬಿಕೆ ಬಗ್ಗೆ ಸಾರುತ್ತೀವಿ. ಅದು ಹೇಗೆ? ದೀಕ್ಷಾಸ್ನಾನ ತಗೊಳ್ಳೋ ಅಭ್ಯರ್ಥಿಗಳಿಗೆ ಎರಡು ಪ್ರಶ್ನೆಗಳನ್ನ ಕೇಳಲಾಗುತ್ತೆ. ಮೊದಲನೇದು, “ನಿಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟು, ಯೆಹೋವನಿಗೆ ಸಮರ್ಪಿಸಿಕೊಂಡು, ಯೇಸುವಿನ ಮೂಲಕ ನಿಮ್ಮ ರಕ್ಷಣೆಗಾಗಿ ಯೆಹೋವನು ಮಾಡಿರುವ ಏರ್ಪಾಡನ್ನು ಒಪ್ಪಿಕೊಳ್ಳುತ್ತೀರಾ?” ಈ ಪ್ರಶ್ನೆ ಕೇಳೋದ್ರಿಂದ ಆ ವ್ಯಕ್ತಿ ದೀಕ್ಷಾಸ್ನಾನ ತಗೊಳ್ಳೋಕೆ ಏನೆಲ್ಲಾ ಪ್ರಯತ್ನ ಹಾಕಿದ್ದಾನೆ ಅಂತ ಎಲ್ರಿಗೂ ತಿಳಿದು ಬರುತ್ತೆ. ಪೇತ್ರನೂ ಇದೇ ತರದ ಮಾತನ್ನ ಒಂದನೇ ಶತಮಾನದಲ್ಲಿದ್ದ ಜನ್ರಿಗೆ ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನ ತಗೊಳ್ಳಿ ಅಂತ ವಿವರಿಸುವಾಗ ಹೇಳಿದ. ಎರಡನೇ ಪ್ರಶ್ನೆ, “ದೀಕ್ಷಾಸ್ನಾನ ಆದಮೇಲೆ ನಿಮ್ಮನ್ನು ಒಬ್ಬ ಯೆಹೋವನ ಸಾಕ್ಷಿಯಾಗಿ ಮತ್ತು ಯೆಹೋವನ ಸಂಘಟನೆಯ ಭಾಗವಾಗಿ ಗುರುತಿಸಲಾಗುತ್ತೆ ಅಂತ ಅರ್ಥಮಾಡಿಕೊಂಡಿದ್ದೀರಾ?” ಈ ಪ್ರಶ್ನೆ ಕೇಳೋದ್ರಿಂದ, ಆ ವ್ಯಕ್ತಿ ಸಮರ್ಪಣೆಗೆ ತಕ್ಕಂತೆ ಜೀವಿಸ್ತಾನೆ, ಸಂಘಟನೆಗೆ ಬೆಂಬಲ ಕೊಡ್ತಾನೆ. ಅಷ್ಟೇ ಅಲ್ಲ, ಸಭೆಯವರ ಜೊತೆ ಸೇರಿ ಯೆಹೋವ ದೇವರನ್ನ ಆರಾಧಿಸ್ತಾನೆ ಅಂತ ಗೊತ್ತಾಗುತ್ತೆ. ಇದನ್ನೇ ಮೊದಲನೇ ಶತಮಾನದಲ್ಲಿದ್ದ ಕ್ರೈಸ್ತರು ಕೂಡ ಮಾಡಿದ್ರು. (ಅಪೊಸ್ತಲರ ಕಾರ್ಯ 2:38-42 ಓದಿ.) ದೀಕ್ಷಾಸ್ನಾನದ ಅಭ್ಯರ್ಥಿಗಳು ಈ ಎರಡೂ ಪ್ರಶ್ನೆಗೆ ‘ಹೌದು’ ಅಂತ ಯಾವಾಗ ಉತ್ರ ಕೊಡ್ತಾರೋ ಆಗ ಅವರು ದೀಕ್ಷಾಸ್ನಾನ ಪಡ್ಕೊಳ್ಳೋಕೆ ಅರ್ಹರು ಅಂತ ಗೊತ್ತಾಗುತ್ತೆ.

ಬೇರೆಬೇರೆ ವಯಸ್ಸಿನ ದೀಕ್ಷಾಸ್ನಾನದ ಅಭ್ಯರ್ಥಿಗಳು, ಸಮ್ಮೇಳನದ ಮೊದಲನೇ ಸಾಲಿನಲ್ಲಿ ನಿಂತ್ಕೊಂಡು ತಮ್ಮ ನಂಬಿಕೆ ಬಗ್ಗೆ ಎಲ್ರ ಮುಂದೆ ಹೇಳ್ತಿದ್ದಾರೆ.

“ರಕ್ಷಣೆ ಪಡೀಬೇಕಾದ್ರೆ . . . ನಂಬಿಕೆ ಬಗ್ಗೆ ಎಲ್ರಿಗೂ ಸಾರಬೇಕು.” ಅದನ್ನ ನೀವು ದೀಕ್ಷಾಸ್ನಾನ ತಗೊಂಡಾಗ ಮಾಡ್ತೀರ (ಪ್ಯಾರ 8 ನೋಡಿ)d


9. ಯೆಹೋವನ ಮೆಚ್ಚುಗೆ ಪಡ್ಕೊಳ್ಳೋಕೆ ಪ್ರತಿಯೊಬ್ರು ಏನು ಮಾಡಬೇಕು?

9 ನೀವು ಸತ್ಯ ಕಲಿಯೋಕ್ಕಿಂತ ಮುಂಚೆಯಿಂದಾನೇ ಒಳ್ಳೇ ಜೀವನ ನಡೆಸಿರಬಹುದು ಅಥವಾ ಯಾವ ಗಂಭೀರ ತಪ್ಪನ್ನೂ ಮಾಡದೇ ಇದ್ದಿರಬಹುದು. ನಿಮ್ಮ ಕ್ರೈಸ್ತ ಹೆತ್ತವರು, ನೀವು ಯೆಹೋವನನ್ನ ಪ್ರೀತಿಸೋ ತರ ಬೆಳೆಸಿರಬಹುದು. ಹಾಗಿದ್ರೂ ನೀವು ದೇವರ ಮೆಚ್ಚುಗೆ ಪಡಿಯೋಕೆ ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನ ತಗೊಳ್ಳಲೇಬೇಕಾ? ಹೌದು. ನಾವು ಯಾವುದೇ ಹಿನ್ನೆಲೆಯಿಂದ ಬಂದಿದ್ರೂ ನಾವು ಹುಟ್ಟಿದಾಗಿಂದಾನೇ ಪಾಪಿಗಳಾಗಿದ್ದೀವಿ ಅಂತ ನೆನಪಿಡಬೇಕು. ಹಾಗಾಗಿ ನಾವ್ಯಾರೂ ನಮ್ಮ ಸ್ವಂತ ಶಕ್ತಿಯಿಂದ ಯೆಹೋವನಿಗೆ ಹತ್ರ ಆಗೋಕೆ ಸಾಧ್ಯ ಇಲ್ಲ. (ಕೀರ್ತ. 51:5) ಆದ್ರೆ ಯಾವಾಗ ನಾವು ಯೆಹೋವನ ಬಗ್ಗೆ ಹೆಚ್ಚೆಚ್ಚು ಕಲಿಯೋಕೆ ಶುರು ಮಾಡ್ತೀವೋ, ಆಗ ನಮ್ಮಿಷ್ಟಕ್ಕಿಂತ ನಾವು ಯೆಹೋವನ ಇಷ್ಟಕ್ಕೆ ಮೊದಲ ಸ್ಥಾನ ಕೊಡ್ತೀವಿ. ಹೀಗೆ ಹಿಂದೆ ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು ಆ ಹಳೇ ಜೀವನನ ಬಿಟ್ಟುಬಿಡ್ತೀವಿ. ಇನ್ಮುಂದೆ ನಮ್ಮ ತಂದೆ ಆದ ಯೆಹೋವನಿಗೆ ಇಷ್ಟ ಆಗೋ ತರ ಬದುಕಬೇಕು ಅಂತ ತೀರ್ಮಾನಿಸ್ತೀವಿ. ಹೀಗೆ ನಾವು ರೆಡಿ ಆದಾಗ ದೀಕ್ಷಾಸ್ನಾನ ತಗೊಳ್ತೀವಿ.—ಅ. ಕಾ. 3:19.

10. ನೀವು ಈಗಾಗ್ಲೇ ಬೇರೆ ಧರ್ಮದಲ್ಲಿ ದೀಕ್ಷಾಸ್ನಾನ ತಗೊಂಡಿದ್ರೂ ಈಗ ಏನು ಮಾಡಬೇಕು?

10 ನೀವು ಸತ್ಯ ಕಲಿಯೋಕ್ಕಿಂತ ಮುಂಚೆ ಬೇರೆ ಧರ್ಮದಲ್ಲಿ ದೀಕ್ಷಾಸ್ನಾನ ತಗೊಂಡಿರಬಹುದು. ಹಾಗಿದ್ರೂ ಈಗ ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ರಾಗಿ ದೀಕ್ಷಾಸ್ನಾನ ತಗೊಳ್ಳಲೇಬೇಕು. ‘ಈಗಾಗ್ಲೇ ದೀಕ್ಷಾಸ್ನಾನ ತಗೊಂಡಿದ್ದೀನಿ, ದೇವರಿಗೆ ಸಮರ್ಪಿಸ್ಕೊಂಡಿದ್ದೀನಿ ಅಲ್ವಾ’ ಅಂತ ನಿಮಗೆ ಅನಿಸಬಹುದು. ಆದ್ರೆ ಈ ಮುಂಚೆ ನಿಮಗೆ ಯೆಹೋವನ ಬಗ್ಗೆ, ಯೇಸು ಬಗ್ಗೆ ಪೂರ್ತಿ ಸತ್ಯ ಗೊತ್ತಿತ್ತಾ? ದೇವರಿಗೆ ಏನಿಷ್ಟ ಅಂತ ಆಗ ನಿಮಗೆ ಪೂರ್ತಿ ಅರ್ಥ ಆಗಿತ್ತಾ? ಇಲ್ಲ ಅಲ್ವಾ? ಎಫೆಸದಲ್ಲಿದ್ದ ಜನರೂ ಈ ಹಿಂದೆನೇ ದೀಕ್ಷಾಸ್ನಾನ ತಗೊಂಡಿದ್ರು. ಆದ್ರೆ ಅವ್ರಿಗೆ ಯೇಸು ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಅದಕ್ಕೇ ಅಪೊಸ್ತಲ ಪೌಲ, ಅವರು ಮತ್ತೆ ದೀಕ್ಷಾಸ್ನಾನ ತಗೊಳ್ಳೋಕೆ ಏರ್ಪಾಡು ಮಾಡಿದ.b (ಅ. ಕಾ. 19:1-5) ಇದ್ರಿಂದ ನಮಗೇನು ಗೊತ್ತಾಗುತ್ತೆ? ನಾವು ತಗೊಳ್ಳೋ ದೀಕ್ಷಾಸ್ನಾನನ ಯೆಹೋವ ದೇವರು ಒಪ್ಪಬೇಕಂದ್ರೆ ನಾವು ಆತನ ಬಗ್ಗೆ ಮತ್ತು ಆತನ ನೀತಿ ನಿಯಮಗಳ ಬಗ್ಗೆ ಸರಿಯಾಗಿ ತಿಳ್ಕೊಂಡಿರಬೇಕು.

“ತಂದೆ ಹೆಸ್ರಲ್ಲಿ, ಮಗನ ಹೆಸ್ರಲ್ಲಿ ಮತ್ತು ಪವಿತ್ರಶಕ್ತಿಯ ಹೆಸ್ರಲ್ಲಿ”

11. “ತಂದೆ ಹೆಸ್ರಲ್ಲಿ, ಮಗನ ಹೆಸ್ರಲ್ಲಿ ಮತ್ತು ಪವಿತ್ರಶಕ್ತಿಯ ಹೆಸ್ರಲ್ಲಿ” ದೀಕ್ಷಾಸ್ನಾನ ತಗೊಳ್ಳೋದ್ರ ಅರ್ಥ ಏನು? (ಮತ್ತಾಯ 28:18-20)

11 ಯೇಸು, ಹೊಸ ಶಿಷ್ಯರಿಗೆ “ತಂದೆ ಹೆಸ್ರಲ್ಲಿ, ಮಗನ ಹೆಸ್ರಲ್ಲಿ ಮತ್ತು ಪವಿತ್ರಶಕ್ತಿಯ ಹೆಸ್ರಲ್ಲಿ ದೀಕ್ಷಾಸ್ನಾನ” ತಗೊಳ್ಳಿ ಅಂತ ಆಜ್ಞೆ ಕೊಟ್ಟನು. (ಮತ್ತಾಯ 28:18-20 ಓದಿ.) ಆತನ ಮಾತಿನ ಅರ್ಥ ಏನು? ಬೈಬಲಲ್ಲಿ “ಹೆಸ್ರು” ಅನ್ನೋ ಪದ ಹೆಚ್ಚಿನ ಸಲ ಒಬ್ಬ ವ್ಯಕ್ತಿಯ ಗೌರವ ಮತ್ತು ಪ್ರತಿಷ್ಠೆಯನ್ನ ಸೂಚಿಸುತ್ತೆ. ಜೊತೆಗೆ ಅವನಿಗಿರೋ ಸ್ಥಾನ ಮತ್ತು ಅಧಿಕಾರವನ್ನೂ ಸೂಚಿಸುತ್ತೆ. ಇದ್ರಿಂದ ನಮಗೇನು ಗೊತ್ತಾಗುತ್ತೆ? ನಾವು ಯೆಹೋವ ಮತ್ತು ಯೇಸು ಕ್ರಿಸ್ತನ “ಹೆಸ್ರಲ್ಲಿ” ದೀಕ್ಷಾಸ್ನಾನ ತಗೊಂಡಾಗ ನಾವೇನು ಮಾಡಬೇಕು ಅಂತ ಹೇಳೋ ಸ್ಥಾನ ಮತ್ತು ಅಧಿಕಾರ ಅವ್ರಿಬ್ರಿಗೂ ಇದೆ ಅನ್ನೋದನ್ನ ಒಪ್ಕೊಂಡಿದ್ದೀವಿ ಅಂತ ತೋರಿಸ್ತೀವಿ. (ಮತ್ತಾಯ 10:41 ಹೋಲಿಸಿ; “ಪ್ರವಾದಿಯನ್ನ” ಅನ್ನೋ ಇಂಗ್ಲಿಷ್‌ ಸ್ಟಡಿ ನೋಟ್‌ ನೋಡಿ.) ಅಷ್ಟೇ ಅಲ್ಲ, ಪವಿತ್ರಶಕ್ತಿಯ ಹೆಸ್ರಲ್ಲಿ ದೀಕ್ಷಾಸ್ನಾನ ತಗೊಳ್ಳುವಾಗ ಅದ್ರ ಮಾರ್ಗದರ್ಶನವನ್ನ ಪಾಲಿಸೋಕೆ ರೆಡಿ ಇದ್ದೀವಿ ಅಂತ ತೋರಿಸ್ತೀವಿ. ಈಗ ಈ ಮೂರು ವಿಷ್ಯಗಳ ಬಗ್ಗೆ ಒಂದೊಂದಾಗಿ ನೋಡೋಣ.

12. ತಂದೆ ಹೆಸ್ರಲ್ಲಿ ದೀಕ್ಷಾಸ್ನಾನ ತಗೊಳ್ಳೋದು ಅಂದ್ರೇನು? (ಪ್ರಕಟನೆ 4:11) (ಚಿತ್ರ ನೋಡಿ.)

12 ತಂದೆ ಹೆಸ್ರಲ್ಲಿ. ಯೆಹೋವ ನಮ್ಮ ಸ್ವರ್ಗೀಯ ತಂದೆ, ಆತನು ನಮಗೆ ಜೀವ ಕೊಟ್ಟಿದ್ದಾನೆ ಅಂತ ನಾವು ಒಪ್ಕೊಳ್ತೀವಿ. ಅಷ್ಟೇ ಅಲ್ಲ, ಆತನು ಸರ್ವಶಕ್ತ ದೇವರು ಮತ್ತು ನಮ್ಮ ಸೃಷ್ಟಿಕರ್ತನೂ ಆಗಿದ್ದಾನೆ. (ಪ್ರಕಟನೆ 4:11 ಓದಿ.) ಆತನು ನಮ್ಮ ಪ್ರಾರ್ಥನೆಗಳನ್ನ ಕೇಳ್ತಾನೆ. ಹಾಗಾಗಿ ನಾವು ಪ್ರಾರ್ಥನೆ ಮಾಡುವಾಗ ಮತ್ತು ಬೇರೆಯವ್ರಿಗೆ ಆತನ ಬಗ್ಗೆ ಹೇಳುವಾಗ ಆತನ ಹೆಸ್ರನ್ನ ಗೌರವದಿಂದ, ಮುಜುಗರ ಇಲ್ಲದೆ ಬಳಸಬೇಕು. (ಕೀರ್ತ. 65:2) ಆದ್ರೂ ತಂದೆಯ ಹೆಸ್ರಲ್ಲಿ ದೀಕ್ಷಾಸ್ನಾನ ತಗೊಳ್ಳೋದ್ರಲ್ಲಿ ಇನ್ನೂ ಕೆಲವು ವಿಷ್ಯಗಳು ಒಳಗೂಡಿದೆ. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಈಗಾಗ್ಲೇ ಯೆಹೋವ ದೇವರ ಬಗ್ಗೆ ಗೊತ್ತಿತ್ತು, ಹಾಗಿದ್ರೂ ಪೇತ್ರ ಆತನ ಬಗ್ಗೆ ಇನ್ನೂ ಕಲಿಸಿದ. ಯಾಕಂದ್ರೆ ಯೇಸು ಮೂಲಕ, ಯೆಹೋವನೇ ಅವ್ರಿಗೆ ಶಾಶ್ವತ ಜೀವ ಕೊಡೋದು ಅಂತ ಆ ಜನರು ಅರ್ಥ ಮಾಡ್ಕೊಬೇಕಿತ್ತು.—ರೋಮ. 5:8.

ಹಿಂದಿನ ಚಿತ್ರದಲ್ಲಿದ್ದ ಹೊಸದಾಗಿ ದೀಕ್ಷಾಸ್ನಾನ ತಗೊಂಡ ಸಹೋದರಿ ತಮ್ಮ ಮನೆಯಲ್ಲಿ ಕೂತು ಪ್ರಾರ್ಥನೆ ಮಾಡ್ತಿದ್ದಾರೆ.

ದೀಕ್ಷಾಸ್ನಾನ ಆದ್ಮೇಲೆ ತಂದೆ, (ಪ್ಯಾರ 12 ನೋಡಿ)


13. ಮಗನ ಹೆಸ್ರಲ್ಲಿ ದೀಕ್ಷಾಸ್ನಾನ ತಗೊಳ್ಳೋದು ಅಂದ್ರೇನು? (ಚಿತ್ರ ನೋಡಿ.)

13 ಮಗನ ಹೆಸ್ರಲ್ಲಿ. ಯೇಸುನೇ ಯೆಹೋವ ದೇವರ ಒಬ್ಬನೇ ಮಗ ಅಂತ ನಾವು ಒಪ್ಕೊಳ್ತೀವಿ. ಅಷ್ಟೇ ಅಲ್ಲ, ನಾವು ಯೆಹೋವನ ಜೊತೆ ಒಂದು ಒಳ್ಳೇ ಆಪ್ತ ಸಂಬಂಧ ಬೆಳೆಸ್ಕೊಳ್ಳೋಕೆ ಯೇಸುನೇ “ದಾರಿ” ಆಗಿದ್ದಾನೆ ಅಂತ ನಂಬ್ತೀವಿ. (ಯೋಹಾ. 14:6) ನಾವು ಶಾಶ್ವತ ಜೀವ ಪಡ್ಕೊಳ್ಳೋಕೆ ಯೇಸು ತನ್ನ ಪ್ರಾಣ ಕೊಟ್ಟನು ಅನ್ನೋದನ್ನ ನಾವು ಪೂರ್ತಿಯಾಗಿ ಒಪ್ಕೊಬೇಕು. ಆಗ ನಾವು ದೀಕ್ಷಾಸ್ನಾನ ತಗೊಂಡಾಗ ಅಷ್ಟೇ ಅಲ್ಲ, ನಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲೂ ಯೇಸು ತರ ನಡಿಯೋಕೆ ಪ್ರಯತ್ನ ಹಾಕ್ತೀವಿ. (1 ಯೋಹಾ. 2:6) ನಾವು ಯೇಸು ತರ ಹುರುಪಿಂದ ಸಿಹಿಸುದ್ದಿ ಸಾರ್ತೀವಿ. ಯಾವ ವಿಷ್ಯನೂ ಅದಕ್ಕೆ ಅಡ್ಡಿ ಆಗೋ ತರ ನಾವು ಬಿಡಲ್ಲ. (ಲೂಕ 4:43) ನಮಗೆ ಎಷ್ಟೇ ಹಿಂಸೆ, ವಿರೋಧ ಬಂದ್ರೂ ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡ್ತೀವಿ. (2 ತಿಮೊ. 3:12) ಯೇಸು ‘ಸಭೆಯ ಯಜಮಾನ ಆಗಿದ್ದಾನೆ’ ಅನ್ನೋದನ್ನ ಸಹ ನಾವು ಒಪ್ಕೊಳ್ತೀವಿ. ಹಾಗಾಗಿ ನಮ್ಮನ್ನ ಮುಂದೆ ನಿಂತು ನಡೆಸೋಕೆ ಮತ್ತು ನಮ್ಮನ್ನ ನೋಡ್ಕೊಳ್ಳೋಕೆ ಆತನು ಯಾರಿಗೆ ಅಧಿಕಾರ ಕೊಟ್ಟಿದ್ದಾನೋ ಅವ್ರ ಮಾತನ್ನೂ ನಾವು ಕೇಳಿ ಅಧೀನತೆ ತೋರಿಸ್ತೀವಿ.—ಎಫೆ. 4:8, 11, 12; 5:23.

ಹಿಂದಿನ ಚಿತ್ರದಲ್ಲಿದ್ದ ಹೊಸದಾಗಿ ದೀಕ್ಷಾಸ್ನಾನ ತಗೊಂಡ ಸಹೋದರ ಮನೆ-ಮನೆ ಸೇವೆಯಲ್ಲಿ ಒಬ್ಬ ವ್ಯಕ್ತಿಗೆ ವಚನ ತೋರಿಸಿ ಸಾರ್ತಿದ್ದಾನೆ.

ದೀಕ್ಷಾಸ್ನಾನ ಆದ್ಮೇಲೆ ತಂದೆ, ಮಗನ ಅಧಿಕಾರಕ್ಕೆ ಗೌರವ ಕೊಟ್ಟು ಅವ್ರ ಮಾತನ್ನ ಕೇಳಿ (ಪ್ಯಾರ 13 ನೋಡಿ)


14. (ಎ) ಪವಿತ್ರಶಕ್ತಿಯ ಹೆಸ್ರಲ್ಲಿ ದೀಕ್ಷಾಸ್ನಾನ ತಗೊಳ್ಳೋದು ಅಂದ್ರೇನು? (ಚಿತ್ರ ನೋಡಿ.) (ಬಿ) ಅಭಿಷಿಕ್ತ ಕ್ರೈಸ್ತರು ಬೇರೆ ಯಾವ ರೀತಿಯ ದೀಕ್ಷಾಸ್ನಾನನೂ ತಗೊಳ್ತಾರೆ? (“ಅಭಿಷಿಕ್ತರು ತಗೊಳ್ಳೋ ದೀಕ್ಷಾಸ್ನಾನ” ಅನ್ನೋ ಚೌಕ ನೋಡಿ.)

14 ಪವಿತ್ರಶಕ್ತಿಯ ಹೆಸ್ರಲ್ಲಿ. ಪವಿತ್ರಶಕ್ತಿ ಒಬ್ಬ ವ್ಯಕ್ತಿಯಲ್ಲ ಅಥವಾ ಅದು ತ್ರಿಯೇಕಕ್ಕೆ ಸಂಬಂಧಪಟ್ಟ ವಿಷ್ಯನೂ ಅಲ್ಲ. ಬದಲಿಗೆ ದೇವರ ಶಕ್ತಿಯಾಗಿದೆ ಅನ್ನೋ ಸತ್ಯನ ನಾವು ಒಪ್ಕೊಳ್ತೀವಿ. ದೇವರು ತನ್ನ ಪವಿತ್ರಶಕ್ತಿ ಬಳಸಿನೇ ಪ್ರವಾದಿಗಳಿಗೆ ಮತ್ತು ಬೈಬಲ್‌ ಬರೆದವ್ರಿಗೆ ಸಹಾಯ ಮಾಡಿದನು ಅನ್ನೋದನ್ನ ನಾವು ನಂಬ್ತೀವಿ. ಹಾಗಾಗಿ ನಾವು ಪ್ರತಿದಿನ ಬೈಬಲ್‌ ಓದಿ ಅದ್ರಲ್ಲಿರೋ ವಿಷ್ಯಗಳನ್ನ ಪಾಲಿಸ್ತೀವಿ. (2 ಪೇತ್ರ 1:20, 21) ಅಷ್ಟೇ ಅಲ್ಲ, ನಾವು ಯಾವುದೇ ಗಂಭೀರ ತಪ್ಪನ್ನ ಮಾಡದೇ ಇರೋ ಹಾಗೆ ಹುಷಾರಾಗಿ ಇರ್ತೀವಿ. ಇಲ್ಲಾಂದ್ರೆ ನಮಗೂ ಪವಿತ್ರಶಕ್ತಿ ಸಿಗಲ್ಲ ಮತ್ತು ಸಭೆಯಲ್ಲೂ ಪವಿತ್ರಶಕ್ತಿ ಕೆಲಸ ಮಾಡಲ್ಲ.—ಎಫೆ. 4:30.

ಹಿಂದಿನ ಚಿತ್ರದಲ್ಲಿದ್ದ ಹೊಸದಾಗಿ ದೀಕ್ಷಾಸ್ನಾನ ತಗೊಂಡ ಸಹೋದರಿ ತಮ್ಮ ಮನೆಯಲ್ಲಿ ಬೈಬಲ್‌ ಓದ್ತಿದ್ದಾರೆ.

ದೀಕ್ಷಾಸ್ನಾನ ಆದ್ಮೇಲೆ ಪವಿತ್ರಶಕ್ತಿಯ ನಿರ್ದೇಶನಗಳನ್ನ ಪಾಲಿಸಿ (ಪ್ಯಾರ 14 ನೋಡಿ)


ಅಭಿಷಿಕ್ತರು ತಗೊಳ್ಳೋ ದೀಕ್ಷಾಸ್ನಾನ

ಅಭಿಷಿಕ್ತ ಕ್ರೈಸ್ತರು ನೀರಲ್ಲಿ ದೀಕ್ಷಾಸ್ನಾನ ತಗೊಳ್ಳೋದ್ರ ಜೊತೆಗೆ ಇನ್ನೂ ಬೇರೆ ರೀತಿಯಲ್ಲೂ ದೀಕ್ಷಾಸ್ನಾನ ತಗೊಳ್ತಾರೆ.

  • ಸ್ವರ್ಗದಲ್ಲಿ ಕ್ರಿಸ್ತನ ಜೊತೆ ಆಳೋಕೆ ಅವ್ರನ್ನ ಕರೆಯುವಾಗ ಪವಿತ್ರಶಕ್ತಿಯಿಂದ ಅವರು ದೀಕ್ಷಾಸ್ನಾನ ತಗೊಳ್ತಾರೆ. (ಮತ್ತಾ. 3:11)

  • ಅವರು “ಕ್ರಿಸ್ತನ ಜೊತೆ ಒಂದಾಗಿರೋಕೆ ದೀಕ್ಷಾಸ್ನಾನ” ತಗೊಳ್ತಾರೆ. ಅವರು ಆಗ ಯೇಸು ಕ್ರಿಸ್ತನಿಗೆ ಎಷ್ಟು ಆಪ್ತರಾಗ್ತಾರೆ ಅಂದ್ರೆ ಅವ್ರನ್ನ ಕ್ರಿಸ್ತನ ದೇಹ ಅಂತ ಕರೆಯಲಾಗುತ್ತೆ. (ಗಲಾ. 3:27, 28; 1 ಕೊರಿಂ. 12:27)

  • ಅವರು ‘ಕ್ರಿಸ್ತನ ಸಾವಿನಲ್ಲೂ ಪಾಲುಗಾರರು ಆಗೋಕೆ ದೀಕ್ಷಾಸ್ನಾನ’ ಪಡ್ಕೊಳ್ತಾರೆ. ಅಂದ್ರೆ ಈ ಲೋಕದಲ್ಲಿ ಸಾಯೋವರೆಗೂ ಅವರು ನಿಯತ್ತಾಗಿ ಯೇಸು ತರ ಯೆಹೋವನನ್ನ ಆರಾಧಿಸ್ತಾರೆ. ಆಮೇಲೆ ಸ್ವರ್ಗದಲ್ಲಿ ಮತ್ತೆ ಜೀವ ಪಡ್ಕೊಳ್ತಾರೆ. (ರೋಮ. 6:3-5)

15. ನಾವೆಲ್ರೂ ಯಾವ ನಿರ್ಧಾರ ಮಾಡಬೇಕು?

15 ನೀವು ಒಂದುವೇಳೆ ಈಗಾಗ್ಲೇ ದೀಕ್ಷಾಸ್ನಾನ ತಗೊಂಡಿದ್ರೆ ಅದು ಎಷ್ಟು ಮುಖ್ಯ ಅಂತ ಆಗಾಗ ನೆನಪು ಮಾಡ್ಕೊಳ್ತಾ ಇರಿ. ಅಷ್ಟೇ ಅಲ್ಲ, ನಾವು ಸಮರ್ಪಣೆಯಲ್ಲಿ ಮತ್ತು ದೀಕ್ಷಾಸ್ನಾನ ತಗೊಳ್ಳುವಾಗ ಯೆಹೋವನಿಗೆ ಕೊಟ್ಟ ಮಾತಿನ ಪ್ರಕಾರ ಜೀವನ ಮಾಡೋ ನಿರ್ಧಾರ ಮಾಡೋಣ.c ಒಂದುವೇಳೆ ನೀವಿನ್ನೂ ದೀಕ್ಷಾಸ್ನಾನ ತಗೊಂಡಿಲ್ಲ ಅಂದ್ರೆ ಆಗೇನು? ನೀವು ದೀಕ್ಷಾಸ್ನಾನ ತಗೊಳ್ಳದೇ ಇರೋಕೆ ನಿಮ್ಮನ್ನ ಯಾವುದಾದ್ರೂ ವಿಷ್ಯ ತಡೀತಾ ಇದ್ಯಾ ಅಂತ ಯೋಚಿಸಿ. ಅಂಥ ಅಡ್ಡಿತಡೆಗಳನ್ನ ಜಯಿಸೋಕೆ ಮತ್ತು ದೀಕ್ಷಾಸ್ನಾನ ತಗೊಳ್ಳೋಕೆ ಏನೆಲ್ಲಾ ಮಾಡಬೇಕು ಅಂತ ಮುಂದಿನ ಲೇಖನದಲ್ಲಿ ನೋಡೋಣ.

ನೀವೇನು ಹೇಳ್ತೀರಾ?

  • ನೀರಲ್ಲಿ ದೀಕ್ಷಾಸ್ನಾನ ತಗೊಳ್ಳೋದು ಅಂದ್ರೇನು?

  • ದೀಕ್ಷಾಸ್ನಾನ ತಗೊಳ್ಳೋರಿಗೆ ಯಾವ ಪ್ರಶ್ನೆಗಳನ್ನ ಕೇಳಲಾಗುತ್ತೆ ಮತ್ತು ಯಾಕೆ?

  • “ತಂದೆ ಹೆಸ್ರಲ್ಲಿ, ಮಗನ ಹೆಸ್ರಲ್ಲಿ ಮತ್ತು ಪವಿತ್ರಶಕ್ತಿಯ ಹೆಸ್ರಲ್ಲಿ” ದೀಕ್ಷಾಸ್ನಾನ ತಗೊಳ್ಳೋದು ಅಂದ್ರೇನು?

ಗೀತೆ 161 ನಿನ್ನಿಷ್ಟ ನನ್ನ ಆನಂದ

a ಬ್ಯಾಪ್ಟಿಸ್ಮಾ ಅನ್ನೋ ಗ್ರೀಕ್‌ ಪದದ ಕನ್ನಡ ಪದ “ದೀಕ್ಷಾಸ್ನಾನ” ಅಂತಾಗಿದೆ. ಅದರ ಅರ್ಥ “ಮುಳುಗಿಸಿ ಎಬ್ಬಿಸೋದು.” ಹಾಗಾಗಿ ಒಬ್ಬ ವ್ಯಕ್ತಿಗೆ ದೀಕ್ಷಾಸ್ನಾನ ಕೊಡುವಾಗ ಅವನನ್ನ ನೀರಲ್ಲಿ ಸಂಪೂರ್ಣವಾಗಿ ಮುಳುಗಿಸ್ತಾರೇ ಹೊರತು ಕೆಲವು ಧರ್ಮದವರು ಮಾಡೋ ಪ್ರಕಾರ ಆ ವ್ಯಕ್ತಿಯ ಮೇಲೆ ನೀರನ್ನ ಬರೀ ಚಿಮುಕಿಸಲ್ಲ.

b ಎಫೆಸದಲ್ಲಿದ್ದ ಜನ್ರು “ಯೋಹಾನ ಕಲಿಸ್ತಾ ಇದ್ದ ದೀಕ್ಷಾಸ್ನಾನ” ತಗೊಂಡಿದ್ರು. (ಅ. ಕಾ. 19:3) ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಯೆಹೂದ್ಯರಿಗೆ ಮೋಶೆ ನಿಯಮದ ವಿರುದ್ಧ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡೋಕೆ ಹೇಳ್ತಿದ್ದ. ಯಾರೆಲ್ಲ ಪಶ್ಚಾತ್ತಾಪ ಪಡ್ತಿದ್ರೋ ಅವ್ರಿಗೆ ದೀಕ್ಷಾಸ್ನಾನ ಮಾಡಿಸ್ತಿದ್ದ. (ಮಾರ್ಕ 1:4, 5) ಆದ್ರೆ ಯಾವಾಗ ಮೋಶೆ ನಿಯಮ ಪುಸ್ತಕ ಅಂತ್ಯ ಆಯ್ತೋ ಆಗ ಯೋಹಾನ ಮಾಡಿಸ್ತಿದ್ದ ದೀಕ್ಷಾಸ್ನಾನನೂ ನಿಂತುಹೋಯ್ತು. ಅವಾಗಿಂದ ರಕ್ಷಣೆಗೆ ನಡೆಸೋ ‘ಒಂದೇ ದೀಕ್ಷಾಸ್ನಾನನ’ ಯೆಹೋವ ಸ್ವೀಕರಿಸಿದನು.—ಎಫೆ. 4:5.

c “ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ” ಅನ್ನೋ ಸರಣಿಯಲ್ಲಿ “ದೀಕ್ಷಾಸ್ನಾನ ಅಂದ್ರೇನು” ಅನ್ನೋ ಲೇಖನ ನೋಡಿ. ಇದು jw.org ಮತ್ತು JW ಲೈಬ್ರರಿಯಲ್ಲಿ ಸಿಗುತ್ತೆ.

d ಚಿತ್ರ ವಿವರಣೆ: ತಮ್ಮ ನಂಬಿಕೆ ಬಗ್ಗೆ ಎಲ್ರ ಮುಂದೆ ಹೇಳೋಕೆ ಸಮ್ಮೇಳನದಲ್ಲಿ ದೀಕ್ಷಾಸ್ನಾನದ ಅಭ್ಯರ್ಥಿಗಳು ಸಾಲಾಗಿ ನಿಂತಿದ್ದಾರೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ