ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಜುಲೈ ಪು. 8-13
  • ಒಳ್ಳೆ ಸಲಹೆ ಕೊಡೋಕೆ ಏನು ಮಾಡಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಳ್ಳೆ ಸಲಹೆ ಕೊಡೋಕೆ ಏನು ಮಾಡಬೇಕು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯಾರಾದ್ರೂ ಸಲಹೆ ಕೇಳಿದಾಗ
  • ನಾವಾಗಿ ನಾವೇ ಸಲಹೆ ಕೊಡ್ವಾಗ . . .
  • ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಸಲಹೆ ಕೊಡಿ!
  • ಸಲಹೆ ಕೊಡ್ತಿರಿ, ತಗೊಳ್ತಿರಿ
  • ಒಳ್ಳೆ ಸಲಹೆ ಪಡ್ಕೊಳ್ಳೋಕೆ ಏನು ಮಾಡಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ‘ಹಿರಿಯರ ಹತ್ರ ಮಾತಾಡಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • “ಮನಸ್ಸಿಗೆ ಖುಷಿ” ಕೊಡೋ ಸಲಹೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ‘ವಿವೇಕಿಯ ಮಾತುಗಳನ್ನು ಕೇಳು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಜುಲೈ ಪು. 8-13

ಅಧ್ಯಯನ ಲೇಖನ 29

ಗೀತೆ 87 ಬನ್ನಿ! ಚೈತನ್ಯ ಪಡೆಯಿರಿ

ಒಳ್ಳೆ ಸಲಹೆ ಕೊಡೋಕೆ ಏನು ಮಾಡಬೇಕು?

“ನಿನ್ನ ಮೇಲೆ ಕಣ್ಣಿಟ್ಟು ಸಲಹೆ ಕೊಡ್ತೀನಿ.”—ಕೀರ್ತ. 32:8.

ಈ ಲೇಖನದಲ್ಲಿ ಏನಿದೆ?

ಬೇರೆಯವ್ರಿಗೆ ಸಹಾಯ ಆಗೋ ತರ ಸಲಹೆ ಕೊಡೋಕೆ ನಾವೇನು ಮಾಡಬೇಕು ಅಂತ ನೋಡೋಣ.

1. ನಾವು ಯಾಕೆ ಸಲಹೆ ಕೊಡಲೇಬೇಕಾಗುತ್ತೆ? ವಿವರಿಸಿ.

ಸಲಹೆ ಕೊಡೋದ್ರ ಬಗ್ಗೆ ನಿಮಗೆ ಹೇಗೆ ಅನಿಸುತ್ತೆ? ಕೆಲವರು ಇಷ್ಟ ಪಡ್ತಾರೆ. ಇನ್ನು ಕೆಲವರು ಸಲಹೆ ಕೊಡೋಕೆ ಹಿಂದೆ ಮುಂದೆ ನೋಡ್ತಾರೆ. ನಿಮಗೆ ಹೇಗೇ ಅನಿಸಲಿ, ನಾವೆಲ್ರೂ ಒಂದಲ್ಲ ಒಂದು ಸಂದರ್ಭದಲ್ಲಿ ಸಲಹೆ ಕೊಡಲೇಬೇಕಾಗುತ್ತೆ. ಯಾಕೆ? ಯಾಕಂದ್ರೆ ‘ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು’ ಅಂತ ಯೇಸು ಹೇಳಿದ್ದಾನೆ. (ಯೋಹಾ. 13:35) ನಾವು ಸಲಹೆ ಕೊಡೋದು ಸಹ ನಮ್ಮ ಸಹೋದರರ ಮೇಲೆ ನಮಗಿರೋ ಪ್ರೀತಿ ತೋರಿಸುತ್ತೆ. ಅದಕ್ಕೆ ಬೈಬಲ್‌, ನಾವು “ಪ್ರಾಮಾಣಿಕ ಸಲಹೆ” ಕೊಟ್ಟಾಗ ನಮ್ಮ ‘ಸ್ನೇಹ ಇನ್ನಷ್ಟು ಬಲ’ ಆಗುತ್ತೆ ಅಂತ ಹೇಳುತ್ತೆ.—ಜ್ಞಾನೋ. 27:9.

2. (ಎ) ಹಿರಿಯರು ಹೇಗೆಲ್ಲ ಸಲಹೆ ಕೊಡ್ತಾರೆ? (ಬಿ) ಯಾಕೆ ಅದು ಮುಖ್ಯ? (“ಮಧ್ಯವಾರದ ಕೂಟದಲ್ಲಿ ಕೊಡೋ ಸಲಹೆ” ಅನ್ನೋ ಚೌಕ ನೋಡಿ.)

2 ಹಿರಿಯರಂತೂ ಚೆನ್ನಾಗಿ ಸಲಹೆ ಕೊಡೋದನ್ನ ತಿಳ್ಕೊಂಡಿರಬೇಕು. ಯಾಕಂದ್ರೆ ಯೆಹೋವ ದೇವರು ಯೇಸು ಮೂಲಕ ಇಡೀ ಸಭೆನ ನೋಡ್ಕೊಳ್ಳೋ ದೊಡ್ಡ ಜವಾಬ್ದಾರಿನ ಇವ್ರಿಗೆ ಕೊಟ್ಟಿದ್ದಾನೆ. (1 ಪೇತ್ರ 5:2, 3) ಅವರು ಇದನ್ನ ಹೇಗೆ ಮಾಡ್ತಾರೆ? ಅವರು ಸಭೆಗೆ ಬೈಬಲ್‌ ಭಾಷಣಗಳನ್ನ ಕೊಡೋ ಮೂಲಕ ಸಲಹೆ ಕೊಡ್ತಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬ ಪ್ರಚಾರಕನಿಗೂ ಅಗತ್ಯ ಇದ್ದಾಗ ಅವನನ್ನ ಬಲಪಡಿಸೋಕೆ ಸಲಹೆ ಕೊಡ್ತಾರೆ. ಸಭೆಯಿಂದ ದೂರ ಹೋಗಿರೋರು ವಾಪಾಸ್‌ ಬರೋಕೆ ಸಲಹೆ ಕೊಡ್ತಾರೆ. ಹಾಗಾಗಿ ಹಿರಿಯರು ಮತ್ತು ನಾವೆಲ್ರೂ ಚೆನ್ನಾಗಿ ಸಲಹೆ ಕೊಡೋಕೆ ಏನು ಮಾಡಬೇಕು ಅಂತ ನೋಡೋಣ.

ವಾರಮಧ್ಯದ ಕೂಟದಲ್ಲಿ ಅಧ್ಯಕ್ಷ “ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ” ಅನ್ನೋ ಕಿರುಹೊತ್ತಗೆಯನ್ನ ಬಳಸಿ ವಿದ್ಯಾರ್ಥಿಯನ್ನ ಹೊಗಳ್ತಾ ಪ್ರೀತಿಯಿಂದ ಸಲಹೆ ಕೊಡ್ತಿದ್ದಾನೆ.

ವಾರಮಧ್ಯದ ಕೂಟದಲ್ಲಿ ಕೊಡೋ ಸಲಹೆ

ವಾರಮಧ್ಯದ ಕೂಟದಲ್ಲಿ ಅಧ್ಯಕ್ಷ, ವಿದ್ಯಾರ್ಥಿ ನೇಮಕ ಮಾಡೋರಿಗೆ ಕೆಲವು ಸಲಹೆಗಳನ್ನ ಕೊಡ್ತಾನೆ. ವಿದ್ಯಾರ್ಥಿ ತನಗಿರೋ ಸ್ಟಡಿ ಪಾಯಿಂಟ್‌ನ ನೇಮಕ ಮಾಡ್ವಾಗ ಹೇಗೆ ಪಾಲಿಸ್ತಿದ್ದಾರೆ ಅಂತ ಅಧ್ಯಕ್ಷ ಗಮನಿಸ್ತಾನೆ.

ವಿದ್ಯಾರ್ಥಿ ತನ್ನ ನೇಮಕ ಮಾಡಿದ ಮೇಲೆ ಒಳ್ಳೆ ಅಂಶಗಳನ್ನ ಅಧ್ಯಕ್ಷ ಹೊಗಳ್ತಾನೆ. ಅವ್ರಿಗೆ ಯಾವುದಾದ್ರೂ ಸಲಹೆ ಕೊಡೋ ಅಗತ್ಯ ಇದ್ರೆ ವಿದ್ಯಾರ್ಥಿ ಆ ಸ್ಟಡಿ ಪಾಯಿಂಟ್‌ನ, ಇನ್ನೂ ಚೆನ್ನಾಗಿ ಹೇಗೆ ಪಾಲಿಸಬಹುದಿತ್ತು ಅಂತ ನೇರವಾಗಿ ಆದ್ರೆ ಜಾಣ್ಮೆಯಿಂದ ಸಲಹೆ ಕೊಡ್ತಾನೆ. ಈ ರೀತಿ ಅವನು ಕೊಡೋ ಸಲಹೆ ಬರೀ ವಿದ್ಯಾರ್ಥಿಗೆ ಅಷ್ಟೇ ಅಲ್ಲ, ಇಡೀ ಸಭೆಗೆ ಪ್ರಯೋಜ್ನ ತರುತ್ತೆ.—ಜ್ಞಾನೋ. 27:17.

3. (ಎ) ಸಲಹೆ ಕೊಡೋ ಕಲೆನಾ ಕಲಿಯೋಕೆ ನಾವೇನು ಮಾಡಬೇಕು? (ಯೆಶಾಯ 9:6; “ಯೇಸು ತರ ಸಲಹೆ ಕೊಡಿ” ಅನ್ನೋ ಚೌಕ ನೋಡಿ.) (ಬಿ) ಈ ಲೇಖನದಲ್ಲಿ ನಾವು ಏನು ನೋಡ್ತೀವಿ?

3 ಒಳ್ಳೊಳ್ಳೆ ಸಲಹೆ ಕೊಟ್ಟ ಎಷ್ಟೋ ಜನ್ರ ಬಗ್ಗೆ ಬೈಬಲಲ್ಲಿದೆ. ಅವ್ರ ಬಗ್ಗೆ ಕಲಿತ್ರೆ ನಾವು ಚೆನ್ನಾಗಿ ಸಲಹೆ ಕೊಡೋದನ್ನ ಕಲಿಬಹುದು. ಅಂಥವ್ರಲ್ಲಿ ಒಬ್ಬರು ಯೇಸು ಕ್ರಿಸ್ತ. ಯೇಸುಗೆ ಬೈಬಲಲ್ಲಿ “ಅದ್ಭುತ ಸಲಹೆಗಾರ” ಅನ್ನೋ ಬಿರುದು ಇದೆ. (ಯೆಶಾಯ 9:6 ಓದಿ) ಹಾಗಾಗಿ ಯಾರಾದ್ರೂ ನಮ್ಮ ಹತ್ರ ಬಂದು ಸಲಹೆ ಕೇಳಿದಾಗ, ಏನು ಮಾಡಬೇಕು? ಯಾರೂ ಕೇಳದಿದ್ರೂ ನಾವಾಗೇ ಹೋಗಿ ಒಬ್ರಿಗೆ ಸಲಹೆ ಕೊಡಬೇಕಾದಾಗ ಏನು ಮಾಡಬೇಕು? ಅಂತ ಈ ಲೇಖನದಲ್ಲಿ ನೋಡೋಣ. ಇದ್ರ ಜೊತೆಗೆ ಸರಿಯಾಗಿರೋ ಸಮಯದಲ್ಲಿ ಮತ್ತು ಸರಿಯಾಗಿರೋ ರೀತಿಯಲ್ಲಿ ಸಲಹೆ ಕೊಡೋದು ಯಾಕೆ ಮುಖ್ಯ ಅಂತಾನೂ ತಿಳ್ಕೊಳ್ಳೋಣ.

ಯೇಸು ತರ ಸಲಹೆ ಕೊಡಿ!

ಯೇಸುಗೆ ಯಾಕೆ ‘ಅದ್ಭುತ ಸಲಹೆಗಾರ’ ಅನ್ನೋ ಬಿರುದು ಇದೆ? ನಾವು ಹೇಗೆ ಯೇಸು ತರ ಸಲಹೆ ಕೊಡಬಹುದು ಅಂತ ನೋಡೋಣ.

  • ಯೇಸುಗೆ ಏನು ಹೇಳಬೇಕು ಅಂತ ಗೊತ್ತಿತ್ತು. ಯೇಸು ಯಾವಾಗ್ಲೂ ಸರಿಯಾಗಿರೋದನ್ನೇ ಹೇಳ್ತಿದ್ದ. ಯಾಕಂದ್ರೆ ಯೇಸು ತನಗೆ ಅನಿಸಿದ್ದನ್ನಲ್ಲ, ಯೆಹೋವ ದೇವ್ರಿಗೆ ಯಾವುದು ಸರಿ ಅನಿಸುತ್ತೋ ಅದನ್ನ ಯೋಚ್ನೆ ಮಾಡಿ ಹೇಳ್ತಿದ್ದ. ಅದಕ್ಕೇ ತನ್ನ ಶಿಷ್ಯರ ಹತ್ರ, “ನಾನು ಯಾವತ್ತೂ ನನಗೆ ಅನಿಸಿದ್ದನ್ನ ಮಾತಾಡಲ್ಲ” ಅಂತ ಹೇಳಿದನು.—ಯೋಹಾ. 14:10.

    ನಮಗಿರೋ ಪಾಠ: ನಮಗೆ ತುಂಬ ಅನುಭವ ಮತ್ತು ಜ್ಞಾನ ಇರಬಹುದು. ಆದ್ರೂ ಮನಸ್ಸಿಗೆ ಬಂದ ಸಲಹೆನ ಕೊಡಬಾರದು. ಯೆಹೋವನ ಯೋಚ್ನೆ ತಿಳ್ಕೊಂಡು ಬೈಬಲಿಂದ ಸಲಹೆ ಕೊಡಬೇಕು.

  • ಯೇಸುಗೆ ಯಾವಾಗ ಸಲಹೆ ಕೊಡಬೇಕು ಅಂತಾನೂ ಗೊತ್ತಿತ್ತು. ಯೇಸು ತನ್ನ ಶಿಷ್ಯರಿಗೆ ಎಲ್ಲಾನೂ ಒಂದೇ ಸಲ ಹೇಳಲಿಲ್ಲ. ಅವ್ರಿಗೆ ಸಲಹೆ ಕೊಡೋಕೆ ಸರಿಯಾಗಿರೋ ಸಮಯ ಬರೋವರೆಗೂ ಕಾದನು. ಅವ್ರ ಕೈಯಲ್ಲಿ ಎಷ್ಟು ಅರ್ಥ ಮಾಡ್ಕೊಳ್ಳೋಕೆ ಆಗುತ್ತೋ ಅಷ್ಟನ್ನ ಮಾತ್ರ ಹೇಳಿದನು.—ಯೋಹಾ. 16:12.

    ನಮಗಿರೋ ಪಾಠ: ನಾವು ಸಲಹೆ ಕೊಡಬೇಕಾದ್ರೆ, “ಮಾತಾಡೋಕೆ ಒಂದು ಸಮಯ” ಇದೆ ಅಂತ ನೆನಪಿಡಬೇಕು. (ಪ್ರಸಂ. 3:7) ಆ ರೀತಿ ಮಾತಾಡ್ವಾಗ್ಲೂ ನಮಗೆ ಗೊತ್ತಿರೋ ಎಲ್ಲಾನೂ ಒಂದೇ ಸಲ ಹೇಳಬಾರದು. ಆ ತರ ಹೇಳ್ಬಿಟ್ರೆ ಅವರು ಬೇಜಾರ್‌ ಮಾಡ್ಕೊಳ್ತಾರೆ. ಆಗ ನಾವು ಹೇಳ್ತಿರೋ ವಿಷ್ಯಾನೂ ಸರಿಯಾಗಿ ಅರ್ಥಮಾಡ್ಕೊಳ್ಳಲ್ಲ. ಅದಕ್ಕೇ ಆ ವ್ಯಕ್ತಿಗಿರೋ ಸಮಸ್ಯೆನ ನಿಭಾಯಿಸೋಕೆ ಅವನಿಗೆ ಎಷ್ಟು ವಿಷ್ಯನ ನಾವು ಹೇಳಬೇಕೋ ಅಷ್ಟೇ ವಿಷ್ಯನ ಅವನ ಹತ್ರ ಮಾತಾಡಬೇಕು.

  • ಯೇಸುಗೆ ಹೇಗೆ ಸಲಹೆ ಕೊಡಬೇಕು ಅಂತಾನೂ ಗೊತ್ತಿತ್ತು. ಯೇಸು ತನ್ನ ಅಪೊಸ್ತಲರಿಗೆ ದೀನತೆ ಬಗ್ಗೆ ಪದೇಪದೇ ಸಲಹೆ ಕೊಡಬೇಕಾಯ್ತು. ಆದ್ರೆ ಪ್ರತಿ ಸಲ ಆತನು ದಯೆಯಿಂದ, ಗೌರವದಿಂದ ಮಾತಾಡಿದನು.—ಮತ್ತಾ. 18:1-5.

    ನಮಗಿರೋ ಪಾಠ: ನಾವು ಕೊಟ್ಟಿರೋ ಸಲಹೆನೇ ಒಬ್ಬ ವ್ಯಕ್ತಿಗೆ ಪದೇಪದೇ ಕೊಡಬೇಕಾಗ್ತಿದೆ ಅಂದ್ಕೊಳ್ಳಿ. ಅವನು ಅದನ್ನ ಚೆನ್ನಾಗಿ ಪಾಲಿಸಬೇಕಾದ್ರೆ ಪ್ರತಿ ಸಲ ಅವನ ಹತ್ರ ದಯೆಯಿಂದ, ಗೌರವದಿಂದ ಮಾತಾಡಬೇಕು ಅಂತ ನೆನಪಿಡಿ.

ಯಾರಾದ್ರೂ ಸಲಹೆ ಕೇಳಿದಾಗ

4-5. ಯಾರಾದ್ರೂ ನಿಮ್ಮ ಹತ್ರ ಸಲಹೆ ಕೇಳಿದಾಗ ಮೊದಲು ನೀವು ಏನು ಮಾಡಬೇಕು? ಒಂದು ಉದಾಹರಣೆ ಕೊಡಿ.

4 ಯಾರಾದ್ರೂ ನಿಮ್ಮ ಹತ್ರ ಬಂದು ‘ನಿಮ್ಮಿಂದ ನನಗೊಂದು ಸಲಹೆ ಬೇಕಿತ್ತು’ ಅಂತ ಹೇಳಿದ್ರೆ ನಿಮಗೆ ಹೇಗೆ ಅನಿಸುತ್ತೆ? ‘ಇವರು ನನ್ನನ್ನ ಗೌರವಿಸ್ತಿದ್ದಾರೆ’ ಅಂತ ನಿಮಗೆ ಖುಷಿ ಆಗಬಹುದು. ಹಾಗಂತ ನಿಮ್ಮ ಮನಸ್ಸಿಗೆ ಬಂದಿದ್ದನ್ನ, ನಿಮಗೆ ಗೊತ್ತಿರೋ ವಿಷ್ಯನ ತಕ್ಷಣ ಅವ್ರಿಗೆ ಹೇಳಿಬಿಡಬಾರದು. ‘ಇವ್ರಿಗಿರೋ ಪರಿಸ್ಥಿತಿ ಬಗ್ಗೆ ಮತ್ತು ಇವರು ಕೇಳ್ತಿರೋ ವಿಷ್ಯದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದ್ಯಾ’ ಅಂತ ಯೋಚಿಸಬೇಕು. ಕೆಲವು ಸಲ ನಾವೇ ಸಲಹೆ ಕೊಡೋದಕ್ಕಿಂತ ‘ಈ ವಿಷ್ಯದ ಬಗ್ಗೆ ಯಾರಿಗೆ ಚೆನ್ನಾಗಿ ಗೊತ್ತಿದ್ಯೋ ಅವರ ಹತ್ರ ಹೋಗಿ ಕೇಳಿ’ ಅಂತ ಹೇಳೋದೇ ಒಳ್ಳೇದು.

5 ಇದಕ್ಕೊಂದು ಉದಾಹರಣೆ ನೋಡೋಣ. ನಿಮ್ಮ ಫ್ರೆಂಡ್‌ ನಿಮ್ಮ ಹತ್ರ ಬಂದು ಅವನಿಗೆ ಇರೋ ಒಂದು ಕಾಯಿಲೆ ಬಗ್ಗೆ ಹೇಳಿ, ‘ಈ ಕಾಯಿಲೆಗೆ ಈ ತರ ಬೇರೆ ಬೇರೆ ಟ್ರೀಟ್ಮೆಂಟ್‌ ಇದೆ. ಯಾವುದು ತಗೊಂಡ್ರೆ ಚೆನ್ನಾಗಿರುತ್ತೆ’ ಅಂತ ಕೇಳ್ತಾನೆ ಅಂದ್ಕೊಳ್ಳಿ. ನಿಮಗೆ ಯಾವುದೋ ಒಂದು ಟ್ರೀಟ್ಮೆಂಟ್‌ ಚೆನ್ನಾಗಿದೆ ಅಂತ ಅನಿಸುತ್ತೆ. ಅದನ್ನ ಹೇಳಬೇಕು ಅಂತ ಅಂದ್ಕೊಳ್ತೀರ. ಆದ್ರೆ ನೀವು ಡಾಕ್ಟರ್‌ ಆಗಿಲ್ಲದೇ ಇರೋದ್ರಿಂದ, ಆ ಕಾಯಿಲೆ ಬಗ್ಗೆ ನಿಮಗೆ ಜಾಸ್ತಿ ಜ್ಞಾನ ಇಲ್ಲದೇ ಇರೋದ್ರಿಂದ ಏನು ಮಾಡಿದ್ರೆ ಸರಿ ಇರುತ್ತೆ? ಈ ಸಂದರ್ಭದಲ್ಲಿ ನೀವು ಇದ್ರ ಬಗ್ಗೆ ಯಾರಿಗೆ ಜಾಸ್ತಿ ಗೊತ್ತಿದ್ಯೋ ಆ ವ್ಯಕ್ತಿ ಹತ್ರ ಹೋಗೋಕೆ ಹೇಳಿದ್ರೇನೇ ಚೆನ್ನಾಗಿರುತ್ತೆ.

6. ಸಲಹೆ ಕೊಡೋ ಮುಂಚೆ ನಾವೇನು ಮಾಡೋದು ಒಳ್ಳೇದು?

6 ಕೆಲವೊಮ್ಮೆ ನಮಗೆ, ‘ಈ ವಿಷ್ಯ ನಂಗೆ ಚೆನ್ನಾಗಿ ಗೊತ್ತಿದೆ’ ಅಥವಾ ‘ಇವನು ನನ್ನ ಫ್ರೆಂಡ್‌ ತಾನೇ, ನಾನೇ ಸಲಹೆ ಕೊಡಬಹುದು’ ಅಂತ ಅನಿಸಬಹುದು. ಹಾಗಿದ್ರೂ ತಕ್ಷಣ ಸಲಹೆ ಕೊಡದೆ ಸ್ವಲ್ಪ ಟೈಮ್‌ ತಗೊಳೋದು ಒಳ್ಳೇದು. ಜ್ಞಾನೋಕ್ತಿ 15:28ರಲ್ಲಿ, “ನೀತಿವಂತನ ಹೃದಯ ಉತ್ತರ ಕೊಡೋ ಮುಂಚೆ ಯೋಚ್ನೆ ಮಾಡುತ್ತೆ” ಅಂತ ಹೇಳುತ್ತೆ. ಹಾಗಾಗಿ ಆ ವಿಷ್ಯ ನಮಗೆ ಎಷ್ಟೇ ಚೆನ್ನಾಗಿ ಗೊತ್ತಿದ್ರೂ ಸಲಹೆ ಕೊಡೋದಕ್ಕಿಂತ ಮುಂಚೆ ಪ್ರಾರ್ಥನೆ ಮಾಡಿ, ಸಂಶೋಧನೆ ಮಾಡಿ, ಅದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿದ್ಮೇಲೆ ಸಲಹೆ ಕೊಡಬೇಕು. ಈ ತರ ನಾವು ಸಲಹೆ ಕೊಟ್ರೆ ಅದು ಯೆಹೋವನ ಇಷ್ಟದ ಪ್ರಕಾರ ಇರುತ್ತೆ. ಈ ತರ ಮಾಡೋದು ಯಾಕೆ ಮುಖ್ಯ ಅಂತ ಪ್ರವಾದಿ ನಾತಾನನ ಉದಾಹರಣೆ ತೋರಿಸುತ್ತೆ.

7. ಪ್ರವಾದಿ ನಾತಾನನಿಂದ ನಾವೇನು ಕಲಿಬಹುದು?

7 ಒಂದು ಸಲ ರಾಜ ದಾವೀದ ಪ್ರವಾದಿ ನಾತಾನನ ಹತ್ರ, ‘ನಾನು ಯೆಹೋವನಿಗೋಸ್ಕರ ಒಂದು ಆಲಯ ಕಟ್ಟಬೇಕು ಅಂದ್ಕೊಂಡಿದ್ದೀನಿ’ ಅಂತ ಹೇಳ್ತಾನೆ. ಆಗ ನಾತಾನ ಏನೂ ಯೋಚಿಸದೇ ತಕ್ಷಣ, ‘ನೀನು ಕಟ್ಟಬಹುದು’ ಅಂತ ಹೇಳಿಬಿಡ್ತಾನೆ. ಆದ್ರೆ ನಾತಾನ ಸ್ವಲ್ಪ ಟೈಮ್‌ ತಗೊಂಡು ಯೆಹೋವ ದೇವರ ಹತ್ರ ಇದ್ರ ಬಗ್ಗೆ ಕೇಳಬೇಕಿತ್ತು. ಯಾಕೆ? ಯಾಕಂದ್ರೆ ದಾವೀದ ಆಲಯ ಕಟ್ಟೋದು ಯೆಹೋವ ದೇವ್ರಿಗೆ ಇಷ್ಟ ಇರಲಿಲ್ಲ. (1ಪೂರ್ವ 17:1-4) ಈ ಘಟನೆಯಿಂದ ನಮಗೇನು ಗೊತ್ತಾಗುತ್ತೆ? ಯಾರಿಗಾದ್ರೂ ಸಲಹೆ ಕೊಡೋದಕ್ಕಿಂತ ಮುಂಚೆ ನಾವು ಸ್ವಲ್ಪ ಟೈಮ್‌ ತಗೊಂಡು ಅದ್ರ ಬಗ್ಗೆ ಯೋಚ್ನೆ ಮಾಡಬೇಕು. ಅದಕ್ಕೆ ಬೈಬಲ್‌, “ಮಾತಾಡೋದನ್ನ ಕಮ್ಮಿ ಮಾಡಿ” ಅಂತ ನಮ್ಮೆಲ್ರಿಗೂ ಸಲಹೆ ಕೊಟ್ಟಿದೆ.—ಯಾಕೋ 1:19.

8. ಸಲಹೆ ಕೊಡ್ವಾಗ ನಾವ್ಯಾಕೆ ಹುಷಾರಾಗಿರಬೇಕು?

8 ಸಲಹೆ ಕೊಡೋ ಮುಂಚೆ ನಾವು ಯೋಚಿಸಬೇಕು ಮತ್ತು ಹುಷಾರಾಗಿರಬೇಕು ಅನ್ನೋದಕ್ಕೆ ಇನ್ನೊಂದು ಕಾರಣನೂ ಇದೆ. ನಾವು ಯೋಚಿಸದೆ ಯಾರಿಗಾದ್ರೂ ತಪ್ಪಾಗಿರೋ ಸಲಹೆ ಕೊಟ್ರೆ ಅದ್ರಿಂದ ಅವ್ರಿಗೆ ತುಂಬ ತೊಂದ್ರೆ ಆಗಬಹುದು. ಅವ್ರ ಆ ತೊಂದ್ರೆಗೆ ನಾವೂ ಕಾರಣ ಆಗಿಬಿಡ್ತೀವಿ. ಅದಕ್ಕೇ ಸಲಹೆ ಕೊಡೋ ಮುಂಚೆ ಟೈಮ್‌ ತಗೊಂಡು ಯೋಚ್ನೆ ಮಾಡೋದು ತುಂಬ ಒಳ್ಳೇದು.

ನಾವಾಗಿ ನಾವೇ ಸಲಹೆ ಕೊಡ್ವಾಗ . . .

9. ಸಲಹೆ ಕೊಡೋದಕ್ಕಿಂತ ಮುಂಚೆ ಹಿರಿಯರು ಏನನ್ನ ತಿಳ್ಕೊಬೇಕು? (ಗಲಾತ್ಯ 6:1)

9 ಯಾರಾದ್ರೂ ‘ಗೊತ್ತಿಲ್ಲದೇ ತಪ್ಪು ದಾರಿ ಹಿಡಿದಿದ್ರೆ’ ಹಿರಿಯರು ಅವ್ರಿಗೆ ಮುಂದೆ ಹೋಗಿ ಸಲಹೆ ಕೊಡಬೇಕಾಗುತ್ತೆ. (ಗಲಾತ್ಯ 6:1 ಓದಿ.) ಯಾಕಂದ್ರೆ ಹಿರಿಯರು ಸಲಹೆ ಕೊಡಲಿಲ್ಲಾಂದ್ರೆ ಆ ವ್ಯಕ್ತಿ, ಮುಂದೆ ದೊಡ್ಡ ಪಾಪ ಮಾಡಿಬಿಡಬಹುದು ಮತ್ತು ಶಾಶ್ವತ ಜೀವನ ಕಳ್ಕೊಬಹುದು. ಆದ್ರೆ ಯೆಹೋವ ದೇವರು ಎಲ್ರಿಗೂ ಅವ್ರ ಮನಸ್ಸಾಕ್ಷಿ ಪ್ರಕಾರ ನಿರ್ಧಾರ ಮಾಡೋಕೆ ಅವಕಾಶ ಕೊಟ್ಟಿದ್ದಾನೆ. (ರೋಮ. 14:1-4) ಆದ್ರಿಂದ ಸಲಹೆ ಕೊಡೋಕೆ ಮುಂಚೆ ಈ ವ್ಯಕ್ತಿ ನಿಜವಾಗ್ಲೂ ‘ತಪ್ಪು ದಾರಿ ಹಿಡಿದಿದ್ದಾನಾ’ ಅಂತ ಹಿರಿಯರು ತಿಳ್ಕೊಬೇಕು. (ಯಾಕೋ. 5:19, 20) ಆ ವ್ಯಕ್ತಿ ನಿಜವಾಗ್ಲೂ ತಪ್ಪು ದಾರಿ ಹಿಡಿದಿದ್ದಾನೆ ಅಂತ ಹಿರಿಯರು ಮನದಟ್ಟು ಮಾಡ್ಕೊಂಡ ಮೇಲೆ ಅವನಿಗೆ ಸಲಹೆ ಕೊಡಬಹುದು. ಆದ್ರೆ ಅದನ್ನ ಅವರು ಹೇಗೆ ಮಾಡಬೇಕು?

10-12. ತಾವೇ ಮುಂದೆ ಹೋಗಿ ಸಲಹೆ ಕೊಡ್ವಾಗ ಹಿರಿಯರು ಏನು ಮಾಡಬೇಕು? ಉದಾಹರಣೆ ಕೊಡಿ. (ಚಿತ್ರಗಳನ್ನ ನೋಡಿ.)

10 ಹಿರಿಯರು ತಾವಾಗಿ ತಾವೇ ಮುಂದೆ ಹೋಗಿ ಸಲಹೆ ಕೊಡೋದು ಅಷ್ಟು ಸುಲಭದ ವಿಷ್ಯ ಅಲ್ಲ. ಯಾಕೆ? ಯಾಕಂದ್ರೆ ಪೌಲ, ‘ಕೆಲವೊಬ್ರು ಗೊತ್ತಿಲ್ದೆ ತಪ್ಪು ದಾರಿ ಹಿಡಿಬಹುದು’ ಅಂತ ಹೇಳಿದ್ದಾನೆ. ‘ಗೊತ್ತಿಲ್ದೆ’ ಇರೋ ವಿಷ್ಯನ ಆ ವ್ಯಕ್ತಿಗೆ ಅರ್ಥ ಮಾಡಿಸೋಕೆ ಹಿರಿಯರು ಮೊದಲು ಆ ವ್ಯಕ್ತಿಯ ಹೃದಯನ ರೆಡಿ ಮಾಡಬೇಕಾಗುತ್ತೆ.

11 ಕೇಳದಿದ್ದಾಗಲೂ ಸಲಹೆ ಕೊಡೋದು ಒಂದು ರೀತಿ ಗಟ್ಟಿ ನೆಲದಲ್ಲಿ ಗಿಡನ ಬೆಳೆಸಿದಂತೆ. ರೈತ ಗಿಡಾನ ಬೆಳೆಸೋದಕ್ಕಿಂತ ಮುಂಚೆ ಆ ಗಟ್ಟಿ ನೆಲವನ್ನ ಹದ ಮಾಡಬೇಕು. ಆಗ ಆ ಮಣ್ಣು ಮೃದು ಆಗುತ್ತೆ. ಆಮೇಲೆ ರೈತ ಬೀಜ ಹಾಕ್ತಾನೆ, ನಿಧಾನಕ್ಕೆ ನೀರು ಹಾಕಿ ಅದು ಬೆಳಿಯೋ ತರ ನೋಡ್ಕೊಳ್ತಾನೆ. ಅದೇ ತರಾನೇ ಹಿರಿಯರು ತಾವೇ ಮುಂದೆ ಹೋಗಿ ಒಬ್ಬ ವ್ಯಕ್ತಿಗೆ ಸಲಹೆ ಕೊಡಬೇಕಾದ್ರೆ ಮೊದಲು ಆ ವ್ಯಕ್ತಿಯ ಹೃದಯನ ರೆಡಿ ಮಾಡಬೇಕು. ಉದಾಹರಣೆಗೆ, ಆ ವ್ಯಕ್ತಿ ಹತ್ರ ಮಾತಾಡೋಕೆ ಸರಿಯಾಗಿರೋ ಸಮಯ ಯಾವುದು ಅಂತ ಯೋಚಿಸಬೇಕು. ಆ ವ್ಯಕ್ತಿ ಮೇಲೆ ಆಸಕ್ತಿ, ಕಾಳಜಿ ಮತ್ತು ಪ್ರೀತಿ ಇದೆ ಅಂತ ತೋರಿಸ್ಕೊಡಬೇಕು. ಇದನ್ನ ಅರ್ಥ ಮಾಡ್ಸಿದ್ರೆ ಸಲಹೆ ಕೊಟ್ಟಾಗ ಆ ವ್ಯಕ್ತಿ ತಗೊಳೋಕೆ ರೆಡಿ ಇರ್ತಾನೆ.

12 ತಾವೇ ಮುಂದೆ ಹೋಗಿ ಸಲಹೆ ಕೊಡ್ವಾಗ ಹಿರಿಯರು ರೈತನ ತರ ಏನು ಮಾಡಬೇಕು? ‘ಎಲ್ರೂ ತಪ್ಪು ಮಾಡ್ತಾರೆ ಎಲ್ರಿಗೂ ಆಗಿಂದಾಗೆ ಸಲಹೆ ಬೇಕಾಗುತ್ತೆ’ ಅಂತ ಹೇಳೋ ಮೂಲಕ ಆ ವ್ಯಕ್ತಿಯ ಹೃದಯನ ಹದ ಮಾಡಬೇಕು. (ರೋಮ. 3:23) ಅವನು ಹೇಗೆ ತಪ್ಪುದಾರಿಯನ್ನ ಹಿಡಿದ ಅಂತ ದಯೆಯಿಂದ, ಗೌರವದಿಂದ ಹೇಳ್ತಾ ಬೈಬಲನ್ನ ಬಳಸಿ ಅವನಿಗೆ ಅರ್ಥ ಮಾಡಿಸಬೇಕು. ‘ಹೌದು ನಾನು ತಪ್ಪದಾರಿ ಹಿಡಿದಿದ್ದೀನಿ’ ಅಂತ ಅವನು ಅರ್ಥ ಮಾಡ್ಕೊಂಡ್ರೆ ಹಿರಿಯರು ಅವನ ‘ಹೃದಯದಲ್ಲಿ ಬೀಜ ಬಿತ್ತಿದ್ದಾರೆ’ ಅಂತರ್ಥ. ಅದಾದ್ಮೇಲೆ ಅವನು ಆ ತಪ್ಪುದಾರಿನ ಬಿಟ್ಟು ಬರೋಕೆ ಏನು ಮಾಡಬೇಕು ಅಂತ ಅವನಿಗೆ ವಿವರಿಸಿ ಹೇಳಬೇಕು. ಕೊನೆಗೆ, ಬದಲಾಗೋಕೆ ಅವನಿಗಿರೋ ಮನಸ್ಸನ್ನ ಹಿರಿಯರು ಹೊಗಳ್ತಾ ಅವನ ಜೊತೇಲಿ ಪ್ರಾರ್ಥನೆ ಮಾಡಬೇಕು. ಈ ತರ ಮಾಡಿದ್ರೆ ಬಿತ್ತಿದ ಬೀಜಕ್ಕೆ ನೀರು ಹಾಕಿದಂತೆ ಇರುತ್ತೆ.—ಯಾಕೋ. 5:15.

ಹಿರಿಯನು ಒಬ್ಬ ಸಹೋದರನಿಗೆ ಸಲಹೆ ಕೊಡೋದನ್ನ ಗಟ್ಟಿ ನೆಲದಲ್ಲಿ ಬೀಜ ಬಿತ್ತೋದಕ್ಕೆ ಹೋಲಿಸ್ತಿರೋ ಚಿತ್ರಗಳು. 1. ನೆಲವನ್ನ ಹದ ಮಾಡಿ: ರೈತ ಮಣ್ಣನ್ನ ಹದ ಮಾಡ್ತಿದ್ದಾನೆ; ಒಬ್ಬ ಹಿರಿಯ ಪ್ರೀತಿಯಿಂದ ಒಬ್ಬ ಸಹೋದರನ ಜೊತೆ ಮಾತಾಡ್ತಿದ್ದಾನೆ. 2. ಗಿಡ ನೆಡಿ: ಹದವಾಗಿರೋ ಮಣ್ಣಲ್ಲಿ ರೈತ ಬೀಜ ಬಿತ್ತುತ್ತಿದ್ದಾನೆ; ಹಿರಿಯ ಆ ಸಹೋದರನ ಜೊತೆ ಬೈಬಲ್‌ ಬಳಸಿ ಮಾತಾಡ್ತಿದ್ದಾನೆ. 3. ನೀರು ಹಾಕಿ: ರೈತ ನೀರು ಹಾಕ್ತಿದ್ದಾನೆ; ಹಿರಿಯ ಆ ಸಹೋದರನ ಜೊತೆ ಪ್ರಾರ್ಥನೆ ಮಾಡ್ತಿದ್ದಾನೆ.

ನಾವಾಗಿ ನಾವೇ ಹೋಗಿ ಸಲಹೆ ಕೊಡ್ವಾಗ ಪ್ರೀತಿ ಮತ್ತು ಜಾಣ್ಮೆ ತೋರಿಸಬೇಕು (ಪ್ಯಾರ 10-12 ನೋಡಿ)


13. ಕೊಟ್ಟ ಸಲಹೆನ ಆ ವ್ಯಕ್ತಿ ಸರಿಯಾಗಿ ಅರ್ಥ ಮಾಡ್ಕೊಂಡಿದ್ದಾನಾ ಇಲ್ವಾ ಅಂತ ತಿಳ್ಕೊಳ್ಳೋಕೆ ಹಿರಿಯರು ಏನು ಮಾಡಬೇಕು?

13 ಕೆಲವೊಮ್ಮೆ ಹಿರಿಯರು ಹೇಳೋದೇ ಒಂದು, ಆದ್ರೆ ತಪ್ಪು ಮಾಡಿರೋ ವ್ಯಕ್ತಿಗಳು ಅರ್ಥ ಮಾಡ್ಕೊಳ್ಳೋದೇ ಇನ್ನೊಂದು ಆಗಿರುತ್ತೆ. ಈ ತರ ಆಗಬಾರದು ಅಂದ್ರೆ ಹಿರಿಯರು ಏನು ಮಾಡಬೇಕು? ಮುಖ್ಯ ವಿಷ್ಯಗಳನ್ನ ಆ ವ್ಯಕ್ತಿ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾನಾ ಅಂತ ತಿಳ್ಕೊಳ್ಳೋಕೆ ಗೌರವದಿಂದ, ವಿವೇಚನೆ ಬಳಸಿ ಪ್ರಶ್ನೆಗಳನ್ನ ಕೇಳಬೇಕು. (ಪ್ರಸಂ. 12:11) ಆಗ ಅವನು ಕೊಡೋ ಉತ್ರದಿಂದ ಸಲಹೆನ ಸರಿಯಾಗಿ ಅರ್ಥ ಮಾಡ್ಕೊಂಡಿದ್ದಾನಾ ಇಲ್ವಾ ಅಂತ ಗೊತ್ತಾಗುತ್ತೆ.

ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಸಲಹೆ ಕೊಡಿ!

14. ನಾವು ಕೋಪದಲ್ಲಿದ್ದಾಗ ಯಾಕೆ ಸಲಹೆ ಕೊಡೋಕೆ ಹೋಗಬಾರದು? ವಿವರಿಸಿ.

14 ನಾವೆಲ್ರೂ ಅಪರಿಪೂರ್ಣರು. ಆದ್ರಿಂದ ಬೇರೆಯವ್ರಿಗೆ ಬೇಜಾರಾಗೋ ತರ, ನೋವಾಗೋ ತರ ಒಂದೊಂದು ಸಲ ಏನಾದ್ರೂ ಹೇಳಿಬಿಡ್ತೀವಿ, ಮಾಡಿಬಿಡ್ತೀವಿ. (ಕೊಲೊ. 3:13) ಕೆಲವೊಮ್ಮೆ ಕೋಪ ಬರಿಸೋ ತರಾನೂ ಮಾತಾಡಿಬಿಡ್ತೀವಿ ಅಂತ ಬೈಬಲ್‌ ಹೇಳುತ್ತೆ. (ಎಫೆ. 4:26) ಆದ್ರೆ ನಮಗೆ ಕೋಪ ಬಂದಾಗ ನಾವು ಯಾರಿಗೂ ಸಲಹೆ ಕೊಡಬಾರದು. ಯಾಕಂದ್ರೆ “ಮನುಷ್ಯ ಕೋಪ ಮಾಡ್ಕೊಂಡ್ರೆ ದೇವರ ದೃಷ್ಟಿಯಲ್ಲಿ ಸರಿಯಾಗಿ ಇರೋದನ್ನ ಮಾಡಕ್ಕಾಗಲ್ಲ” ಅಂತ ಬೈಬಲ್‌ ಹೇಳುತ್ತೆ. (ಯಾಕೋ. 1:20) ಅದಕ್ಕೇ ಕೋಪದಲ್ಲಿದ್ದಾಗ ನಾವು ಸಲಹೆ ಕೊಟ್ರೆ ಅದ್ರಿಂದ ಒಳ್ಳೆದಾಗೋದಕ್ಕಿಂತ ಕೆಟ್ಟದಾಗೋದೇ ಜಾಸ್ತಿ. ಅದ್ರರ್ಥ ನಮಗೆ ಕೋಪ ಬರಿಸಿದ ವ್ಯಕ್ತಿಗೆ ನಮಗೆ ಎಷ್ಟು ನೋವಾಗಿದೆ, ನಮಗೆ ಹೇಗೆ ಅನಿಸ್ತಿದೆ ಅಂತ ಹೇಳಬಾರದು ಅಂತಲ್ಲ, ಮೊದಲು ನಾವು ಸಮಾಧಾನ ಮಾಡ್ಕೊಬೇಕು. ಆಮೇಲೆ ಅವರ ಹತ್ರ ಹೋಗಿ ಅದ್ರ ಬಗ್ಗೆ ಮಾತಾಡಬೇಕು. ಈ ವಿಷ್ಯದಲ್ಲಿ ಯೋಬನಿಗೆ ಚೆನ್ನಾಗಿ ಸಲಹೆ ಕೊಟ್ಟ ಎಲೀಹು ನಮಗೆ ಮಾದರಿಯಾಗಿದ್ದಾನೆ.

15. ಎಲೀಹುವಿನಿಂದ ನಾವೇನು ಕಲಿತೀವಿ? (ಚಿತ್ರ ನೋಡಿ.)

15 ಯೋಬನ ಮೇಲೆ ಅವನ ಸ್ನೇಹಿತರು ಸುಳ್ಳಾರೋಪ ಹಾಕಿದಾಗ ಯೋಬ ತನ್ನನ್ನ ಸಮರ್ಥಿಸ್ಕೊಳ್ತಾ ಇದ್ದ. ಇದನ್ನ ನೋಡಿದಾಗ ಎಲೀಹುಗೆ ಯೋಬನ ಬಗ್ಗೆ ‘ಅಯ್ಯೋ’ ಅಂತ ಅನಿಸ್ತು. ಆದ್ರೆ ಯಾವಾಗ ಯೋಬ ಯೆಹೋವನ ಬಗ್ಗೆ ತಪ್ಪಾಗಿ ಮಾತಾಡಿದ್ನೋ, ತಾನೇ ಶ್ರೇಷ್ಠ ಅಂತ ಹೇಳಿದ್ನೋ ಆಗ ಎಲೀಹುಗೆ ತುಂಬಾ ಕೋಪ ಬಂತು. ಕೋಪ ಬಂದ್ರೂ ಅವನು ಆತುರದಲ್ಲಿ ಏನೂ ಮಾತಾಡೋಕೆ ಹೋಗ್ಲಿಲ್ಲ. ಅವನಿಗೆ ಅವಕಾಶ ಸಿಗೋವರೆಗೂ ಕಾದ. ಆಮೇಲೆ ದಯೆಯಿಂದ, ತಾಳ್ಮೆಯಿಂದ ಮತ್ತು ಗೌರವದಿಂದ ಯೋಬನಿಗೆ ಸಲಹೆ ಕೊಟ್ಟ. (ಯೋಬ 32:2; 33:1-7) ಎಲೀಹು ಈ ತರ ನಡ್ಕೊಂಡಿದ್ರಿಂದ ನಾವೊಂದು ಪಾಠ ಕಲಿತೀವಿ. ಸರಿಯಾಗಿರೋ ಸಲಹೆನ ಸರಿಯಾಗಿರೋ ಸಮಯದಲ್ಲಿ, ಸರಿಯಾಗಿರೋ ರೀತಿಯಲ್ಲಿ ಕೊಡಬೇಕು. ಪ್ರೀತಿ ಮತ್ತು ಗೌರವ ಅದ್ರಲ್ಲಿ ಇರ್ಬೇಕು.—ಪ್ರಸಂ. 3:1, 7.

ಯೋಬನ ಮೈತುಂಬ ಹುಣ್ಣಾಗಿದೆ. ಅವನು ಮಾತಾಡ್ತಿರೋದನ್ನ ಎಲೀಹು ಗಮನಕೊಟ್ಟು ಕೇಳಿಸ್ಕೊತ್ತಿದ್ದಾನೆ.

ಎಲೀಹುಗೆ ಮೊದ್ಲು ಕೋಪ ಬಂದಿತ್ತು, ಆದ್ರೆ ಸಲಹೆ ಕೊಡುವಾಗ ಕಾದು ಗೌರವದಿಂದ ಮತ್ತು ದಯೆಯಿಂದ ಕೊಟ್ಟ (ಪ್ಯಾರ 15 ನೋಡಿ)


ಸಲಹೆ ಕೊಡ್ತಿರಿ, ತಗೊಳ್ತಿರಿ

16. ಕೀರ್ತನೆ 32:8ರಿಂದ ನೀವೇನು ಕಲಿತ್ರಿ?

16 “ನಿನ್ನ ಮೇಲೆ ಕಣ್ಣಿಟ್ಟು ಸಲಹೆ ಕೊಡ್ತೀನಿ” ಅಂತ ಯೆಹೋವ ಹೇಳಿದ್ದಾನೆ. ಇದೇ ಈ ಲೇಖನದ ಮುಖ್ಯ ವಚನ. (ಕೀರ್ತನೆ 32:8 ಓದಿ) ಈ ವಚನದಲ್ಲಿ ಹೇಳೋ ಹಾಗೆ ಯೆಹೋವ ದೇವರು ನಮಗೆ ಸಹಾಯ ಮಾಡೋಕೆ ಯಾವಾಗ್ಲೂ ನೋಡ್ತಾ ಇರ್ತಾನೆ. ಆತನು ನಮಗೆ ಬರೀ ಸಲಹೆ ಕೊಡೋದಷ್ಟೇ ಅಲ್ಲ, ಅದನ್ನ ಪಾಲಿಸೋಕೂ ಬೇಕಾಗಿರೋ ಸಹಾಯ ಮಾಡ್ತಾನೆ. ನಮ್ಮೆಲ್ರಿಗೂ ಯೆಹೋವ ಎಂಥ ಒಳ್ಳೆ ಮಾದರಿ ಅಲ್ವಾ! ಒಂದುವೇಳೆ ಬೇರೆಯವ್ರಿಗೆ ಸಲಹೆ ಕೊಡೋ ಸುಯೋಗ ನಮಗೆ ಇರೋದಾದ್ರೆ ನಾವೂ ಯೆಹೋವ ದೇವ್ರ ತರಾನೇ ನಡ್ಕೊಳ್ಳೋಣ. ಸಲಹೆ ಕೊಡೋದ್ರ ಜೊತೆಗೆ ಅದನ್ನ ಪಾಲಿಸೋಕೂ ಅವ್ರಿಗೆ ಸಹಾಯ ಮಾಡೋಣ.

17. ಹಿರಿಯರು ಬೈಬಲ್‌ ಆಧಾರಿತ ಸಲಹೆನ ಕೊಟ್ಟಾಗ ನಮಗೆ ಹೇಗೆ ಅನಿಸುತ್ತೆ? ವಿವರಿಸಿ. (ಯೆಶಾಯ 32:1, 2)

17 ನಾವು ಕೊನೇ ದಿನಗಳಲ್ಲಿ ಜೀವಿಸ್ತಾ ಇರೋದ್ರಿಂದ ಸಲಹೆ ತಗೊಬೇಕಾಗುತ್ತೆ, ಸಲಹೆ ಕೊಡಬೇಕಾಗುತ್ತೆ. (2 ತಿಮೊ. 3:1) ಬೈಬಲ್‌ ಬಳಸಿ ಸಲಹೆ ಕೊಡೋ ಹಿರಿಯರು “ಮರುಭೂಮಿಯ ನೀರಿನ ತೊರೆಗಳ ತರ ಇರ್ತಾರೆ.” (ಯೆಶಾಯ 32:1, 2 ಓದಿ) ನಮ್ಮನ್ನ ಮೆಚ್ಚಿಸೋಕೆ ನಮಗೆ ಇಷ್ಟ ಆಗೋ ತರ ಯಾವುದೋ ಒಂದು ಸಲಹೆ ಕೊಡೋ ಫ್ರೆಂಡ್‌ಗಿಂತ, ನಮಗೆ ಏನು ಬೇಕು ಅಂತ ಅರ್ಥ ಮಾಡ್ಕೊಂಡು ಕಷ್ಟ ಆದ್ರೂ ಆ ಸಲಹೆ ಕೊಡೋ ಫ್ರೆಂಡ್‌ಗೆ ದೇವರ ಹತ್ರ ಬೆಲೆ ಜಾಸ್ತಿ. ಅಂಥವರು ಕೊಡೋ ಸಲಹೆ “ಬೆಳ್ಳಿ ಪಾತ್ರೆಯಲ್ಲಿ ಇರೋ ಬಂಗಾರದ ಸೇಬುಗಳ ತರ ಚಂದ.” (ಜ್ಞಾನೋ. 25:11) ಹಾಗಾಗಿ ನಾವೆಲ್ರೂ ಸಲಹೆ ತಗೊಳೋಕೆ ಮತ್ತು ಕೊಡೋಕೆ ಯಾವಾಗ್ಲೂ ಕಲಿತಾ ಇರೋಣ.

ನೀವೇನು ಹೇಳ್ತೀರಾ?

  • ಯಾರಾದ್ರೂ ನಿಮ್ಮನ್ನ ಸಲಹೆ ಕೇಳಿದಾಗ ನೀವೇನು ಮಾಡಬೇಕು?

  • ನೀವೇ ಮುಂದೆ ಹೋಗಿ ಸಲಹೆ ಕೊಡಬೇಕಾದ್ರೆ ಏನು ಮಾಡಬೇಕು?

  • ನೀವು ಕೋಪದಲ್ಲಿದ್ದಾಗ ಏನು ಮಾಡೋಕೆ ಹೋಗಬಾರದು?

ಗೀತೆ 106 ಪ್ರೀತಿಯೆಂಬ ಗುಣವನ್ನು ಬೆಳೆಸಿಕೊಳ್ಳುವುದು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ