ವಿದ್ಯಾರ್ಥಿಗಳ ಹೃದಯ ತಲುಪುವುದು ಹೇಗೆ?
1. ಯೇಸುವಿನ ಬೋಧನೆ ಕೇಳುಗರ ಮೇಲೆ ಎಂತಹ ಪ್ರಭಾವ ಬೀರಿತು?
1 ಯೇಸು ಕೇಳುಗರ ಹೃದಯವನ್ನು ತಲುಪುವ ರೀತಿಯಲ್ಲಿ ಮಾತಾಡುತ್ತಿದ್ದನು. ಒಂದು ಸಾರಿಯಂತೂ ಬೈಬಲಿನ ವಚನಗಳ ಅರ್ಥವನ್ನು ವಿವರಿಸಿದ್ದನ್ನು ಕಂಡು ಆತನ ಶಿಷ್ಯರ ಹೃದಯ ‘ಕುದಿಯಿತು.’ (ಲೂಕ 24:32) ದೇವರಿಗೆ ವಿಧೇಯತೆ ಹೃದಯದಿಂದ ಹೊರ ಹೊಮ್ಮಬೇಕು. ಆದ್ದರಿಂದ ವಿದ್ಯಾರ್ಥಿಗಳ ಹೃದಯವನ್ನು ತಲುಪಿ, ಅವರು ತಮ್ಮ ಬಾಳಲ್ಲಿ ಬದಲಾವಣೆ ಮಾಡಿಕೊಳ್ಳಲು ಪ್ರಚೋದಿಸುವುದು ಹೇಗೆ?—ರೋಮ. 6:17.
2. ವಿದ್ಯಾರ್ಥಿಯ ಹೃದಯವನ್ನು ತಲುಪಲು ಜಾಣ್ಮೆ ಮತ್ತು ವಿವೇಚನೆ ಹೇಗೆ ಸಹಾಯ ಮಾಡುತ್ತದೆ?
2 ಜಾಣ್ಮೆ ಮತ್ತು ವಿವೇಚನೆ ತೋರಿಸಿ: ಯಾವುದು ಸರಿ, ಯಾವುದು ತಪ್ಪು ಎಂದು ಹೇಳಿದಾಕ್ಷಣ ಅದನ್ನು ಮಾಡಬೇಕು ಅಂತ ಜನರಿಗೆ ಅನಿಸುವುದಿಲ್ಲ. ಹಾಗಂತ, ಅವರ ಧಾರ್ಮಿಕ ನಂಬಿಕೆಗಳು ತಪ್ಪು ಎಂದು ತೋರಿಸುವ ಹತ್ತಾರು ವಚನಗಳನ್ನು ತೋರಿಸಿದರೆ, ಸತ್ಯ ಕಲಿಯುವ ಆಲೋಚನೆಯನ್ನೂ ಬಿಟ್ಟುಬಿಡುತ್ತಾರೆ. ಒಬ್ಬನ ಹೃದಯವನ್ನು ತಲುಪಲು, ಮೊದಲು ಆ ವ್ಯಕ್ತಿಯ ನಂಬಿಕೆಗೆ ಕಾರಣವೇನೆಂದು ತಿಳಿದುಕೊಳ್ಳಬೇಕು. ಇದಕ್ಕಾಗಿ ಜಾಣ್ಮೆ ಮತ್ತು ವಿವೇಚನೆಯಿಂದ ಪ್ರಶ್ನೆ ಕೇಳಬೇಕು. ಆಗ ವಿದ್ಯಾರ್ಥಿ ತನ್ನ ಹೃದಯದಲ್ಲೇನಿದೆ ಎಂದು ತಿಳಿಸುತ್ತಾನೆ. (ಜ್ಞಾನೋ. 20:5) ನಂತರ ಆತನ ಹೃದಯವನ್ನು ತಲುಪುವ ಬೈಬಲಿನ ವಿಷಯವನ್ನು ನಾವು ಆಯ್ಕೆ ಮಾಡಬೇಕು. ಇದೆಲ್ಲಾ ಮಾಡಬೇಕೆಂದರೆ ವೈಯಕ್ತಿಕ ಆಸಕ್ತಿ ಮತ್ತು ತಾಳ್ಮೆ ಮುಖ್ಯ. (ಜ್ಞಾನೋ. 25:15) ನೆನಪಿಡಿ, ಒಬ್ಬೊಬ್ಬರು ಒಂದೊಂದು ವೇಗದಲ್ಲಿ ಪ್ರಗತಿ ಮಾಡುತ್ತಾರೆ. ಆದ್ದರಿಂದ, ದೇವರ ಪವಿತ್ರಾತ್ಮ ಅವರ ಯೋಚನೆಗಳನ್ನು ಮತ್ತು ಕ್ರಿಯೆಗಳನ್ನು ಪ್ರಭಾವಿಸಲು ಸಮಯ ಕೊಡಿ.—ಮಾರ್ಕ 4:26-29.
3. ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ನಾವು ವಿದ್ಯಾರ್ಥಿಗೆ ಹೇಗೆ ಸಹಾಯಮಾಡಬಹುದು?
3 ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಮಾಡಿ: ಯೆಹೋವ ದೇವರು ಎಷ್ಟು ಒಳ್ಳೆಯವನು, ಆತನಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಎಂದು ತೋರಿಸುವ ವೃತ್ತಾಂತಗಳು ಬೈಬಲಿನಲ್ಲಿವೆ. ಅವು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗೆ ಸಹಾಯ ಮಾಡುತ್ತವೆ. ಕೀರ್ತನೆ 139:1-4 ಮತ್ತು ಲೂಕ 12:6, 7 ನ್ನು ತೋರಿಸಿ ಪ್ರತಿಯೊಬ್ಬರ ಮೇಲೆ ದೇವರಿಗೆ ಎಷ್ಟು ಕಾಳಜಿ ಎಂದು ತಿಳಿಸಬಹುದು. ದೇವರು ತೋರಿಸಿರುವ ಅಪಾತ್ರ ದಯೆಯ ಕಡೆಗೆ ವಿದ್ಯಾರ್ಥಿಯಲ್ಲಿ ಮನದಾಳದ ಗಣ್ಯತೆ ಹೆಚ್ಚಿದಂತೆ, ಪ್ರೀತಿ ಮತ್ತು ದೇವಭಕ್ತಿಯನ್ನು ಬೆಳೆಸಿಕೊಳ್ಳುತ್ತಾನೆ. (ರೋಮ. 5:6-8; 1 ಯೋಹಾ. 4:19) ನಮ್ಮ ನಡತೆಯಿಂದ ದೇವರಿಗೆ ಒಂದೋ ಸಂತೋಷ ಆಗುತ್ತೆ ಅಥವಾ ದುಃಖ ಆಗುತ್ತೆ ಎಂದು ತಿಳಿದುಕೊಂಡಾಗ, ಆತನು ಮೆಚ್ಚುವಂತಹ ಮತ್ತು ಆತನಿಗೆ ಗೌರವ ತರುವಂತಹ ರೀತಿಯಲ್ಲಿ ನಡೆದುಕೊಳ್ಳಲು ವಿದ್ಯಾರ್ಥಿ ಮನಸ್ಸು ಮಾಡುತ್ತಾನೆ.—ಕೀರ್ತ. 78:40, 41; ಜ್ಞಾನೋ. 23:15.
4. ಯೆಹೋವನಂತೆ ನಾವು ಸಹ ವಿದ್ಯಾರ್ಥಿಗಳಿಗೆ ಹೇಗೆ ಗೌರವ ತೋರಿಸಬಹುದು?
4 ತಾನು ಹೇಳಿದ್ದನ್ನೇ ಮಾಡಬೇಕು ಅಂತ ಯೆಹೋವ ದೇವರು ಯಾರನ್ನೂ ಒತ್ತಾಯ ಮಾಡುವುದಿಲ್ಲ. ಬದಲಿಗೆ, ತನ್ನ ಮಾತನ್ನು ಕೇಳಿದರೆ ಏನು ಪ್ರಯೋಜನ ಅಂತ ತಿಳಿದುಕೊಳ್ಳಲು ಸಹಾಯ ಮಾಡುತ್ತಾನೆ. (ಯೆಶಾ. 48:17, 18) ನಾವು ಯೆಹೋವನನ್ನು ಅನುಸರಿಸುವ ಮೂಲಕ ವಿದ್ಯಾರ್ಥಿಗಳೇ ಖುದ್ದಾಗಿ ನಿರ್ಣಯಗಳನ್ನು ಮಾಡಲು ಸಹಾಯ ಮಾಡುತ್ತೇವೆ. ತಮ್ಮ ಬಾಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಸ್ವತಃ ವಿದ್ಯಾರ್ಥಿಗಳು ಮನಗಂಡರೆ, ಅದರಿಂದಾಗುವ ಪ್ರಯೋಜನಗಳು ಶಾಶ್ವತವಾಗಿರುತ್ತವೆ. (ರೋಮ. 12:2) ಜೊತೆಗೆ, ‘ಹೃದಯಗಳನ್ನು ಶೋಧಿಸುವವನಾದ’ ಯೆಹೋವನ ಸಮೀಪಕ್ಕೆ ಅವರು ಬರುತ್ತಾರೆ.—ಜ್ಞಾನೋ. 17:3.