ಸೇವೆಯಲ್ಲಿ ಕಳೆಯುವ ಸಮಯವನ್ನು ಸದುಪಯೋಗಿಸಿಕೊಳ್ಳಿ
2014ನೇ ಸೇವಾ ವರ್ಷದಲ್ಲಿ ಯೆಹೋವನ ಸಾಕ್ಷಿಗಳು 194 ಕೋಟಿ 54 ಲಕ್ಷದ 87 ಸಾವಿರದ 604 ತಾಸುಗಳನ್ನು ಸೇವೆಯಲ್ಲಿ ಕಳೆದಿದ್ದಾರೆ. ನಾವೆಲ್ಲರೂ ಯೆಹೋವನ ಸೇವೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಎಂದು ಇದು ತೋರಿಸಿಕೊಡುತ್ತದೆ. (ಕೀರ್ತ. 110:3; 1 ಕೊರಿಂ. 15:58) ಆದರೆ “ಉಳಿದಿರುವ ಸಮಯವು ಕೊಂಚವೇ” ಆಗಿದೆ. ಆದ್ದರಿಂದ ಸೇವೆಯಲ್ಲಿ ಇನ್ನೂ ಹೆಚ್ಚಿನ ಜನರಿಗೆ ಸಾಕ್ಷಿ ಕೊಡುತ್ತಾ ನಮ್ಮ ಸಮಯವನ್ನು ಸದುಪಯೋಗಿಸಿಕೊಳ್ಳಲು ಪ್ರಯತ್ನಿಸೋಣ.—1 ಕೊರಿಂ. 7:29.
ಸೇವೆಯಲ್ಲಿ ಕಳೆಯುವ ಸಮಯವನ್ನು ಸದುಪಯೋಗಿಸಬೇಕೆಂದರೆ ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಉದಾಹರಣೆಗೆ, ನೀವು ಪ್ರತಿದಿನ ಒಂದು ತಾಸು ಅಥವಾ ಅದಕ್ಕಿಂತ ಹೆಚ್ಚು ಸಮಯ ಒಂದು ನಿರ್ದಿಷ್ಟ ವಿಧದ ಸೇವೆ ಮಾಡುತ್ತಿದ್ದೀರಿ ಎಂದು ಭಾವಿಸಿ. ಆದರೆ ಆ ಸಮಯದಲ್ಲಿ ಸಾಕ್ಷಿ ನೀಡಲು ನಿಮಗೆ ಯಾರೂ ಸಿಗುತ್ತಿಲ್ಲ. ಆಗ ನೀವು ನಿಮ್ಮ ಸೇವಾ ಕ್ಷೇತ್ರದ ಪರಿಸ್ಥಿತಿಗನುಸಾರ ಬದಲಾವಣೆ ಮಾಡಿಕೊಳ್ಳಿ. ಯಾಕೆಂದರೆ ಎಲ್ಲಾ ಸಭೆಯ ಸೇವಾ ಕ್ಷೇತ್ರಗಳಲ್ಲೂ ಒಂದೇ ರೀತಿಯ ಪರಿಸ್ಥಿತಿ ಇರುವುದಿಲ್ಲ. ನೀವು ಸೇವೆಯಲ್ಲಿ ಕಳೆಯುವ ಸಮಯವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಈ ಕೆಳಗೆ ಕೆಲವು ಸಲಹೆಗಳನ್ನು ಕೊಡಲಾಗಿದೆ. ಅವುಗಳನ್ನು ಅನ್ವಯಿಸುವುದಾದರೆ “ಗಾಳಿಯನ್ನು ಗುದ್ದುವವನಂತೆ” ನಿಮ್ಮ ಪರಿಶ್ರಮ ವ್ಯರ್ಥವಾಗುವುದಿಲ್ಲ.—1 ಕೊರಿಂ. 9:26.
ಮನೆ-ಮನೆ ಸಾಕ್ಷಿಕಾರ್ಯ: ಅನೇಕ ವರ್ಷಗಳಿಂದ ನಾವು ಬೆಳಿಗ್ಗೆ ಹೊತ್ತು ಮನೆ-ಮನೆ ಸೇವೆ ಮಾಡುತ್ತಾ ಬಂದಿದ್ದೇವೆ. ಆದರೆ ಬೆಳಿಗ್ಗೆ ಸಮಯದಲ್ಲಿ ಹೆಚ್ಚು ಜನರು ಮನೆಯಲ್ಲಿರುವುದಿಲ್ಲ. ಹಾಗಾದರೆ ನಾವು ಮನೆ-ಮನೆ ಸೇವೆಯನ್ನು ಸಂಜೆ ಹೊತ್ತು ಮಾಡಬಹುದಲ್ವಾ? ಯಾಕೆಂದರೆ ಸಂಜೆ ಹೊತ್ತು ಹೆಚ್ಚಿನವರು ಮನೆಯಲ್ಲಿರುತ್ತಾರೆ, ಸ್ವಲ್ಪ ಬಿಡುವಾಗಿಯೂ ಇರುತ್ತಾರೆ. ಬೆಳಿಗ್ಗೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಬೀದಿ ಸಾಕ್ಷಿಕಾರ್ಯ ಅಥವಾ ವ್ಯಾಪಾರ ಕ್ಷೇತ್ರಗಳಲ್ಲಿ ಸೇವೆ ಮಾಡಿದರೆ ಉತ್ತಮ ಪ್ರತಿಫಲ ಸಿಗಬಹುದು.
ಸಾರ್ವಜನಿಕ ಸಾಕ್ಷಿಕಾರ್ಯ: ಸಭೆಯ ಸೇವಾ ಕ್ಷೇತ್ರದೊಳಗಿರುವ ಹೆಚ್ಚು ಜನರು ಓಡಾಡುವ ಸ್ಥಳಗಳಲ್ಲಿ ಮೇಜು ಮತ್ತು ತಳ್ಳುಬಂಡಿಗಳನ್ನಿಟ್ಟು ಸಾಹಿತ್ಯಗಳನ್ನು ಪ್ರದರ್ಶಿಸಬೇಕು. (2014 ಜೂನ್, ನಮ್ಮ ರಾಜ್ಯ ಸೇವೆ ಪುಟ 3 ನೋಡಿ.) ಒಂದುವೇಳೆ ಸಾರ್ವಜನಿಕ ಸಾಕ್ಷಿಕಾರ್ಯ ಮಾಡುತ್ತಿರುವ ಸ್ಥಳದಲ್ಲಿ ಜನರ ಸಂಖ್ಯೆ ಕಡಿಮೆಯಾದರೆ, ಸೇವಾ ಕಮಿಟಿಯು ಹೆಚ್ಚು ಜನರಿರುವ ಸ್ಥಳದಲ್ಲಿ ಈ ಸಾಕ್ಷಿಕಾರ್ಯವನ್ನು ಮಾಡಲು ನಿರ್ಧರಿಸಬಹುದು.
ಪುನರ್ಭೇಟಿ ಮತ್ತು ಬೈಬಲ್ ಅಧ್ಯಯನಗಳು: ಹೆಚ್ಚು ಜನರು ಸಿಗದಿರುವ ಸಮಯದಲ್ಲಿ ಸೇವೆ ಮಾಡುವ ಬದಲಿಗೆ ಪುನರ್ಭೇಟಿ ಮತ್ತು ಬೈಬಲ್ ಅಧ್ಯಯನಗಳಿಗೆ ಹೋಗಲು ಯೋಜನೆ ಮಾಡಿ. ಉದಾಹರಣೆಗೆ, ಮನೆ-ಮನೆ ಸೇವೆಯನ್ನು ಶನಿವಾರ ಬೆಳಿಗ್ಗೆ ಮಾಡಿದರೆ ತುಂಬ ಜನರು ಸಿಗುತ್ತಾರೆ ಮತ್ತು ಉತ್ತಮ ಪ್ರತಿಫಲ ಸಿಗುತ್ತದೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಪುನರ್ಭೇಟಿ ಮತ್ತು ಬೈಬಲ್ ಅಧ್ಯಯನಗಳನ್ನು ಆ ದಿನ ಮಧ್ಯಾಹ್ನ ಅಥವಾ ಸಂಜೆ ಸಮಯದಲ್ಲಿ ಮಾಡಲು ಸಾಧ್ಯನಾ ಎಂದು ಪರೀಕ್ಷಿಸಿ.
ನಾವು ಸೇವೆಯಲ್ಲಿ ಭಾಗವಹಿಸಿದಾಗೆಲ್ಲಾ ಆ ಸಮಯವನ್ನು ವರದಿಸಬಹುದು. ಆದ್ದರಿಂದ ನಾವು ಸೇವೆಯಲ್ಲಿ ಕಳೆಯವ ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಂಡು, ಅದರಿಂದ ಹೆಚ್ಚು ಪ್ರತಿಫಲ ಪಡೆಯಲು ಪ್ರಯತ್ನಿಸೋಣ. ಆಗ ನಮಗೆ ಸೇವೆಯಲ್ಲಿ ಹೆಚ್ಚು ಸಂತೋಷ ಸಿಗುತ್ತದೆ. ಒಂದು ವಿಧದ ಸೇವೆ ಪರಿಣಾಮಕಾರಿ ಆಗದೇ ಇದ್ದರೆ ಆ ಸಮಯದಲ್ಲಿ ಬೇರೆ ವಿಧದ ಸೇವೆಯನ್ನು ಮಾಡಿ ನೋಡಿ. ಸೇವೆಯಲ್ಲಿ ನೀವು ಕಳೆಯುವ ಸಮಯವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಲು ಮಾರ್ಗದರ್ಶನಕ್ಕಾಗಿ ‘ಕೊಯ್ಲಿನ ಯಜಮಾನನಾದ’ ಯೆಹೋವನಿಗೆ ಪ್ರಾರ್ಥಿಸಿ.—ಮತ್ತಾ. 9:38.