ತಡಮಾಡದೆ ಪುನರ್ಭೇಟಿ ಮಾಡಿ!
1 ‘ನಾಳೆ ಮಾಡೋದನ್ನ ಇವತ್ತು ಮಾಡು, ಇವತ್ತು ಮಾಡೋದನ್ನ ಈಗಲೇ ಮಾಡು.’ ಅನೇಕರಿಗೆ ಈ ನಾಣ್ಣುಡಿ ಗೊತ್ತು. ಮುಖ್ಯವಾದ ಕೆಲಸಗಳನ್ನು ಬೇಗ ಮಾಡಿಬಿಡಬೇಕು ಅನ್ನೋದು ಈ ನಾಣ್ಣುಡಿಯ ಅರ್ಥ. ಈ ತತ್ವ ನಮ್ಮ ಸೇವೆಗೂ ಅನ್ವಯವಾಗುತ್ತದೆ. ಮುಂದಿನ ಪ್ಯಾರದಲ್ಲಿರುವ ಅನುಭವ ಇದಕ್ಕೊಂದು ಉದಾಹರಣೆ.
2 ಮನೆಮನೆ ಸೇವೆಯಲ್ಲಿ ಒಬ್ಬ ವ್ಯಕ್ತಿಗೆ ನಮ್ಮ ಸಹೋದರಿಯೊಬ್ಬರು ಪುಸ್ತಕ ಕೊಟ್ಟರು, ಇನ್ನೊಂದು ಸಲ ಭೇಟಿಮಾಡುತ್ತೇನೆಂದು ಹೇಳಿ ಬಂದಿದ್ದರು. ಒಂದು ತಾಸಿನೊಳಗೆ ಇನ್ನೊಬ್ಬ ಸಹೋದರಿ ಏನೋ ಅಪ್ಪಿತಪ್ಪಿ ಅದೇ ಮನೆಗೆ ಹೋದರು. ಆಗ ಆ ವ್ಯಕ್ತಿ ಆ ಪುಸ್ತಕವನ್ನು ಕೈಯಲ್ಲೇ ಹಿಡಿದುಕೊಂಡು ಹೊರಗೆ ಬಂದು “ನೀವು ಇನ್ನೊಂದು ಸಲ ಭೇಟಿಮಾಡ್ತೀನಿ ಅಂತ ಹೇಳಿದ್ರಿ ಆದರೆ ಇಷ್ಟು ಬೇಗ ಬರ್ತಿರಂತ ನಾನು ಅಂದುಕೊಂಡಿರಲಿಲ್ಲ. ಬನ್ನಿ ಒಳಗೆ, ಕಲಿಯೋಕೆ ನಾನು ರೆಡಿ” ಅಂತ ಹೇಳಿದರು. ಇದೇ ರೀತಿ ಯಾವಾಗಲೂ ಮಾಡಕ್ಕಾಗಲ್ಲ. ಆದರೆ ಆಸಕ್ತರನ್ನು ತಡಮಾಡದೆ ಪುನರ್ಭೇಟಿ ಮಾಡಬೇಕು ಎನ್ನುವುದು ಇದರಿಂದ ಗೊತ್ತಾಗುತ್ತದೆ.
3 ಜನರಿಗೆ ಹೆಚ್ಚಿನ ಸಹಾಯದ ಅಗತ್ಯವಿದೆ: ಜನರು ನಮ್ಮ ಪ್ರಕಾಶನಗಳಲ್ಲಿ ಇರುವ ಮಾಹಿತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಮತ್ತು ಆ ಮಾಹಿತಿ ಇವತ್ತೂ ಮುಂದೆನೂ ಸಹಕಾರಿ ಅಂತ ಅವರು ಗ್ರಹಿಸಬೇಕಾದರೆ ನಾವು ಅವರಿಗೆ ಸಹಾಯ ಮಾಡಬೇಕು. ಅದಕ್ಕಾಗಿ ನಾವವರನ್ನು ಪುನರ್ಭೇಟಿ ಮಾಡಬೇಕು. ಕೆಲವೇ ದಿನಗಳೊಳಗೆ ಭೇಟಿ ಆದರಂತೂ ಇನ್ನೂ ಒಳ್ಳೇದು. ಆದರೆ ಇದನ್ನು ಮಾಡೋದು ಹೇಗೆ? ‘ಮತ್ತೆ ನಿಮ್ಮನ್ನು ಭೇಟಿಯಾಗಲು ನಾನು ಬಯಸ್ತೇನೆ’ ಅಂತ ಹೇಳಿ. ಆಗ ಅವರಲ್ಲಿರುವ ಆಸಕ್ತಿ ನಿಮಗೆ ತಿಳಿದುಬರ್ತದೆ.
4 ಪುನರ್ಭೇಟಿ ಮಾಡಲು ಅವಕಾಶ ಹುಡುಕಿ: ಈ ಗಡಿಬಿಡಿ ಲೋಕದಲ್ಲಿ ಜನರು ನಮಗೆ ‘ಈ ಸಮಯಕ್ಕೇ ಬನ್ನಿ’ ಅಂತ ಹೇಳೋದು ತುಂಬ ಕಮ್ಮಿ. ಒಂದುವೇಳೆ ಹೇಳಿದರೂ ಮನೆಯವರು ಆ ಸಮಯದಲ್ಲಿ ಸಿಗ್ತಾರೆ ಅನ್ನೋ ಗ್ಯಾರಂಟಿ ಇಲ್ಲ. ಹಾಗಂತ ನಾವು ಪುನರ್ಭೇಟಿ ಮಾಡದೆ ಹಾಗೆಯೇ ಇರೋದು ಬೇಡ. ಕೆಲವೇ ದಿನಗಳಲ್ಲಿ ಅವರಿಗೆ ಹೇಳಿದಂತೆ ಮತ್ತೆ ಹೋಗಿ ಭೇಟಿಯಾಗೋಣ. ನಮಗಿರುವ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡು ಚೆನ್ನಾಗಿ ನಿರ್ವಹಿಸೋಣ. ಒಂದುವೇಳೆ ನಾವು ಹೋದಾಗ ಅವರು ಮನೆಯಲ್ಲಿ ಇಲ್ಲ ಅಂದ್ರೆ ಏನು ಮಾಡೋದು? ಮತ್ತೆ ಬೇರೆ ಸಮಯಗಳಲ್ಲಿ ಹೋಗುತ್ತಾ ಇರೋಣ. ಹಾಗೆ ಮಾಡುವಾಗ ನಾವು ಮಾಡುವ ಅಮೂಲ್ಯ ಕೆಲಸದ ಕಡೆಗೆ ಅವರಿಗೂ ಸ್ವಲ್ಪ ಗಂಭೀರತೆ ಬರಬಹುದು. ಅವರೂ ಮನೆಯಲ್ಲಿ ಇರುವ ಯೋಜನೆ ಮಾಡಬಹುದು.
5 ಮೊದಲ ಸಾರಿ ಭೇಟಿಯಾದಾಗ ಮನೆಯವರಿಗೆ ಎಷ್ಟು ಆಸಕ್ತಿ ಇದೆಯಂತ ಹೇಳೋದು ಸ್ವಲ್ಪ ಕಷ್ಟ. ಅವರಲ್ಲಿ ಸ್ವಲ್ಪ ಆಸಕ್ತಿ ಕಂಡುಕೊಂಡರೂ ಮತ್ತೆ ಭೇಟಿಮಾಡಿ. ತಡಮಾಡದೆ ಆ ಸ್ವಲ್ಪ ಆಸಕ್ತಿಯನ್ನು ಉಳಿಸಲು ಪ್ರಯತ್ನಿಸಿ. ಪುನರ್ಭೇಟಿಯಾದಾಗ ಅವರ ಪ್ರತಿಕ್ರಿಯೆ ನೋಡಿ ನೀವೇ ಆಶ್ಚರ್ಯಗೊಳ್ಳಬಹುದು. ಹಾಗಾಗಿ ತಡಮಾಡದೆ ಬೇಗನೆ ಮತ್ತೆ ಭೇಟಿಯಾಗಿ!