ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಶಿಕ್ಷಣದ ನೆರವು
1 ಶಾಲಾ ಶಿಕ್ಷಣದಿಂದ ನೀವು ಚೆನ್ನಾಗಿ ಓದಿ ಬರೆಯಲು ಕಲಿಯುತ್ತೀರಿ. ಭೂಗೋಳಶಾಸ್ತ್ರ, ಇತಿಹಾಸ, ಗಣಿತ, ವಿಜ್ಞಾನ ಮುಂತಾದವುಗಳ ಬಗ್ಗೆಯೂ ಸ್ವಲ್ಪಮಟ್ಟಿಗಿನ ಜ್ಞಾನ ಗಳಿಸುತ್ತೀರಿ. ವಿಷಯಗಳನ್ನು ಗ್ರಹಿಸಲು, ಮಾಹಿತಿ ಸರಿಯಾ ತಪ್ಪಾ ಎಂದು ವಿಮರ್ಶಿಸಲು, ಸಮಸ್ಯೆಗಳನ್ನು ಬಗೆಹರಿಸಲು, ಹೊಸಹೊಸ ಉಪಯುಕ್ತ ವಿಚಾರಗಳನ್ನು ಹುಟ್ಟುಹಾಕಲು ಕಲಿಯುವಿರಿ. ಇಂಥ ವಿದ್ಯಾಭ್ಯಾಸವು ಜೀವನುದ್ದಕ್ಕೂ ನಿಮಗೆ ಉಪಯುಕ್ತ. ಆದರೆ ‘ಸುಜ್ಞಾನ, ಬುದ್ಧಿ’ ಗಳಿಸಲು ಹಾಗೂ ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಶಿಕ್ಷಣ ಹೇಗೆ ನೆರವಾಗಬಲ್ಲದು?—ಜ್ಞಾನೋ. 3:21, 22.
2 ದೇವರ ಸೇವೆಗೆ ಉಪಯುಕ್ತ: ಶಿಕ್ಷಕರು ಪಾಠ ಹೇಳಿಕೊಡುವಾಗ ಗಮನಕೊಟ್ಟು ಕೇಳಿ. ಕೊಡಲಾದ ಹೋಂವರ್ಕ್ ಮಾಡಿ. ಸ್ಪಷ್ಟವಾಗಿ ಓದುವ ಮತ್ತು ಒಳ್ಳೇ ಅಧ್ಯಯನ ವಿಧಾನಗಳನ್ನು ರೂಢಿಸಿಕೊಳ್ಳಿ. ಆಗ ನಿಮಗೆ ಬೈಬಲ್ ಅಧ್ಯಯನಮಾಡಲು ಸುಲಭವಾಗುವುದು. ಹೀಗೆ ನಿಮ್ಮನ್ನೇ ಆಧ್ಯಾತ್ಮಿಕವಾಗಿ ಬಲವಾಗಿರಿಸಬಲ್ಲಿರಿ. (ಅ. ಕಾ. 17:11) ಶಾಲೆಯಲ್ಲಿ ನೀವು ಗಳಿಸುವ ವೈವಿಧ್ಯಪೂರ್ಣ ಜ್ಞಾನವು ನಿಮಗೆ ಸಾರುವ ಕೆಲಸದಲ್ಲಿ ಭೇಟಿಯಾಗುವ ವಿವಿಧ ಹಿನ್ನೆಲೆ, ಅಭಿರುಚಿ, ನಂಬಿಕೆಗಳ ಜನರೊಂದಿಗೆ ಸಲೀಸಾಗಿ ಮಾತಾಡಲು ನೆರವಾಗುವುದು. ದೇವರ ಸಂಘಟನೆಯಲ್ಲಿ ನಿಮಗಿರುವ ಕ್ರೈಸ್ತ ಜವಾಬ್ದಾರಿಗಳನ್ನು ಪೂರೈಸಲೂ ಸಹಾಯಮಾಡುವುದು.—2 ತಿಮೊಥೆಯ 2:21; 4:11 ಹೋಲಿಸಿ.
3 ಜೀವನೋಪಾಯಕ್ಕೆ ಉಪಯುಕ್ತ: ಶಾಲಾ ಶಿಕ್ಷಣ ಮುಗಿಸಿದ ಬಳಿಕ ವೃತ್ತಿಪರ ಕೌಶಲಗಳನ್ನು ಕಲಿಯಿರಿ. ಇದು ಜೀವನೋಪಾಯಕ್ಕೆ ಉಪಯುಕ್ತ. (1 ತಿಮೊಥೆಯ 5:8 ಹೋಲಿಸಿ.) ಏನು ಕಲಿಯಬೇಕೆಂಬದನ್ನು ಯೋಚಿಸಿ ನಿರ್ಧರಿಸಿ. ಸೀಮಿತ ಉದ್ಯೋಗಾವಕಾಶ ಇರುವ ವಿಷಯವನ್ನು ಆಯ್ಕೆಮಾಡುವ ಬದಲು ಸುಲಭದಲ್ಲಿ ಕೆಲಸ ಸಿಗುವ ಕಸುಬನ್ನೊ ಕೌಶಲವನ್ನೊ ಕಲಿಯಿರಿ. ಮುಂದೆ ನೀವೇನಾದರೂ ಪ್ರಚಾರಕರ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಲು ನಿರ್ಣಯಿಸಿದರೆ ಈ ತರಬೇತಿ ಅಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ನೆರವಾಗುವುದು.—ಅ. ಕಾರ್ಯಗಳು 18:1-4 ಹೋಲಿಸಿ.
4 ಶಾಲಾ ಶಿಕ್ಷಣ ಪಡೆದರೆ ಸಾರುವ ಕೆಲಸ ವಿಸ್ತರಿಸಲು ನಿಮಗೆ ಸಹಾಯವಾಗುವುದು. ಯೆಹೋವನ ಸೇವೆಯನ್ನು ಹೆಚ್ಚಾಗಿ ಮಾಡಲು ನೆರವಾಗುವಂಥ ವೃತ್ತಿಪರ ಕೌಶಲಗಳನ್ನು ಗಳಿಸಲು ಈಗಲೇ ಶ್ರಮಿಸಿ. ಹೀಗೆ ಶಾಲಾ ಶಿಕ್ಷಣ ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ತಲಪಲು ನೆರವಾಗುವುದು.