ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ಅಧ್ಯಯನದಿಂದ ಪ್ರಯೋಜನಹೊಂದಿ
1 “ಹುರುಪಿನ ರಾಜ್ಯ ಘೋಷಕರು” ಎಂಬ 2002ರ ಜಿಲ್ಲಾ ಅಧಿವೇಶನದಲ್ಲಿ ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆಮಾಡಲಾಯಿತು. 2004ರಲ್ಲಿ ಅದು ಕನ್ನಡದಲ್ಲಿ ಸಿಕ್ಕಿದಾಗ ನಾವೆಲ್ಲರೂ ಪುಳಕಿತರಾದೆವು. ಅನೇಕರು ಆ ಪುಸ್ತಕವನ್ನು ತಕ್ಷಣ ಓದಲಾರಂಭಿಸಿದರು.
2 ಈ ತಿಂಗಳು ಸಭಾ ಬೈಬಲ್ ಅಧ್ಯಯನದಲ್ಲಿ ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ಚರ್ಚೆಯನ್ನು ಪುನಃ ಒಮ್ಮೆ ಆರಂಭಿಸುವೆವು. ಈ ಅಧ್ಯಯನದಿಂದ ಹೇಗೆ ಗರಿಷ್ಠ ಮಟ್ಟದ ಪ್ರಯೋಜನ ಹೊಂದಬಲ್ಲೆವು? ತಯಾರಿ ಅತ್ಯಗತ್ಯ. ಒಂದು ಅಧ್ಯಾಯವನ್ನು ಮೂರು ಭಾಗಮಾಡಿರುವುದರಿಂದ ಪ್ರತಿ ವಾರದ ಅಧ್ಯಯನಕ್ಕಾಗಿ ಕೆಲವೇ ಪ್ಯಾರಗಳನ್ನು ನಿಗದಿಮಾಡಲಾಗಿದೆ. ಹಾಗಾಗಿ ನೀವು ಮುಂಚೆಯೇ ಅಧ್ಯಯನಮಾಡಿ ಧ್ಯಾನಿಸಿ ತಯಾರಿಸಿದ ಹೇಳಿಕೆಗಳನ್ನು ಮನಃಪೂರ್ವಕವಾಗಿ ಕೊಡಲು ಸಾಕಷ್ಟು ಅವಕಾಶ ಇರುವುದು. ಅಲ್ಲದೆ ಒಂದು ಅಧ್ಯಾಯದ ಕೊನೆ ಭಾಗವನ್ನು ಚರ್ಚಿಸಲಾಗುವ ವಾರಗಳಲ್ಲಿ ಇನ್ನೂ ಕಡಿಮೆ ಪ್ಯಾರಗಳನ್ನು ಪರಿಗಣಿಸಲಾಗುವುದು. ಆಗ ಪುಸ್ತಕದ ಒಂದು ವೈಶಿಷ್ಟ್ಯವನ್ನು ಬಳಸಲು ಸಮಯವಿರುವುದು.
3 ಅಧ್ಯಾಯ 2ರಿಂದ ಆರಂಭಿಸುತ್ತಾ ಪ್ರತಿ ಅಧ್ಯಾಯ ಕೊನೆಯಾಗುತ್ತಿದ್ದಂತೆ “ಧ್ಯಾನಕ್ಕಾಗಿ ಪ್ರಶ್ನೆಗಳು” ಎಂಬ ಚೌಕವಿದೆ. ಅದನ್ನು ಅಧ್ಯಾಯದ ಕೊನೆ ಪ್ಯಾರ ಪರಿಗಣಿಸಿದ ಬಳಿಕ ಚರ್ಚಿಸಲಾಗುವುದು. ಚೌಕದಲ್ಲಿನ ವಚನಗಳ ಬಗ್ಗೆ ಸಭಿಕರು ಧ್ಯಾನಿಸಿ ಪಡೆದಿರುವ ಒಳ್ಳೆಯ ಅಂಶಗಳನ್ನು ಹೊರತರಲು ಅಧ್ಯಯನ ನಡೆಸುವ ಸಹೋದರ ಯತ್ನಿಸುವರು. (ಜ್ಞಾನೋ. 20:5) ಚೌಕದಲ್ಲಿರುವ ಪ್ರಶ್ನೆಗಳ ಜೊತೆಗೆ ಅವರು ಇಂಥ ಪ್ರಶ್ನೆಗಳನ್ನೂ ಕೇಳಬಹುದು: “ಈ ಮಾಹಿತಿ ನಿಮಗೆ ಯೆಹೋವನ ಕುರಿತು ಏನನ್ನು ತಿಳಿಸುತ್ತದೆ? ಇದು ನಿಮ್ಮ ಜೀವನವನ್ನು ಹೇಗೆ ಪ್ರಭಾವಿಸುತ್ತದೆ? ಇತರರಿಗೆ ಸಹಾಯಮಾಡಲು ನೀವಿದನ್ನು ಹೇಗೆ ಬಳಸಬಹುದು?” ಹೃತ್ಪೂರ್ವಕ ಹೇಳಿಕೆಗಳನ್ನು ಹೊರಸೆಳೆಯುವುದು ಅವರ ಗುರಿಯಾಗಿರಬೇಕೇ ಹೊರತು ಚಿಕ್ಕಪುಟ್ಟ ವಿವರಗಳ ಬಗ್ಗೆ ಕೇಳಿ ಸಭಿಕರ ಜ್ಞಾನ ಪರೀಕ್ಷಿಸುವುದಲ್ಲ.
4 ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಎಲ್ಲಾ ಪ್ರಕಾಶನಗಳು ಯೆಹೋವನನ್ನು ಮಹಿಮೆಪಡಿಸುತ್ತವೆ. ಆದರೆ ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕ ಅದ್ವಿತೀಯ, ಏಕೆಂದರೆ ಇದು ಯೆಹೋವನ ಗುಣಗಳ ಚರ್ಚೆಗೆ ಸಂಪೂರ್ಣ ಮೀಸಲು. (ಮತ್ತಾ. 24:45-47) ಹಾಗಾಗಿ ನಮ್ಮ ಮುಂದೆ ರೋಮಾಂಚಕ ಸದವಕಾಶವಿದೆ. ಯೆಹೋವನ ವ್ಯಕ್ತಿತ್ವದ ಈ ಗಹನ ಅಧ್ಯಯನದಿಂದ ನಮಗೆ ಅತ್ಯಧಿಕ ಪ್ರಯೋಜನವಾಗಲಿದೆ. ನಾವು ನಮ್ಮ ಸ್ವರ್ಗೀಯ ತಂದೆಗೆ ಇನ್ನಷ್ಟು ಸಮೀಪಕ್ಕೆ ಬರುವಂತೆ ಈ ಅಧ್ಯಯನ ಸಹಾಯಮಾಡಲಿ. ಅಲ್ಲದೆ, ಇತರರೂ ಆತನ ಸಮೀಪಕ್ಕೆ ಬರಲು ನೆರವಾಗುವುದರಲ್ಲಿ ನಾವು ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಲಿ.