ನಿಮ್ಮ ವಿದ್ಯಾರ್ಥಿಗಳಿಗೋಸ್ಕರ ‘ಪ್ರಾಣ ಕೊಡಿ’
1. ಬೈಬಲ್ ವಿದ್ಯಾರ್ಥಿಗೆ ನೆರವು ನೀಡಲು ಏನು ಅಗತ್ಯ?
1 ಒಬ್ಬ ಬೈಬಲ್ ವಿದ್ಯಾರ್ಥಿ ಸಮರ್ಪಣೆಯ ಹಂತಕ್ಕೆ ತಲಪುವಷ್ಟರ ಮಟ್ಟಿಗೆ ಪ್ರಗತಿಮಾಡಬೇಕಾದರೆ ಅವರೊಂದಿಗೆ ಕ್ರಮವಾಗಿ ಅಧ್ಯಯನ ಮಾಡಿದರಷ್ಟೇ ಸಾಲದು. ಅಪೊಸ್ತಲ ಪೌಲನು ತಾನು ಸತ್ಯವನ್ನು ಕಲಿಸಿದವರೊಂದಿಗಿದ್ದ ಸಂಬಂಧವನ್ನು ವಾತ್ಸಲ್ಯಭರಿತ ತಾಯಿ ಮತ್ತು ಮಕ್ಕಳ ಸಂಬಂಧಕ್ಕೆ ಹೋಲಿಸಿದನು. ನಾವು ಕೂಡ ನಮ್ಮ ವಿದ್ಯಾರ್ಥಿಗಳು ಆಧ್ಯಾತ್ಮಿಕವಾಗಿ ಬೆಳೆಯಲಿಕ್ಕಾಗಿ ‘ಪ್ರಾಣ ಕೊಡಲು’ ಅಂದರೆ ನಮ್ಮ ಸಮಯ ಕೊಡಲು ಹಾಗೂ ಮನಃಪೂರ್ವಕ ಪ್ರಯತ್ನ ಮಾಡಲು ಸಂತೋಷಿಸುತ್ತೇವೆ.—1 ಥೆಸ. 2:7-9.
2. ನಾವೇಕೆ ವೈಯಕ್ತಿಕ ಆಸಕ್ತಿ ತೋರಿಸಬೇಕು, ಮತ್ತು ಹೇಗೆ ತೋರಿಸಬಹುದು?
2 ವೈಯಕ್ತಿಕ ಆಸಕ್ತಿ ತೋರಿಸಿ: ವಿದ್ಯಾರ್ಥಿ ಕಲಿತದ್ದನ್ನು ಅನ್ವಯಿಸುವಾಗ ಬೈಬಲ್ ಮೂಲತತ್ತ್ವಗಳನ್ನು ಪಾಲಿಸದವರೊಂದಿಗಿನ ಆಪ್ತ ಸ್ನೇಹವನ್ನು ಕಡಿದು ಹಾಕುವಂತೆ ಅವನ ಮನಸ್ಸಾಕ್ಷಿ ಪ್ರಚೋದಿಸುವುದು. (1 ಪೇತ್ರ 4:4) ಕುಟುಂಬದವರೂ ಅವನನ್ನು ತೊರೆದುಬಿಟ್ಟಾರು. (ಮತ್ತಾ. 10:34-36) ಇದರಿಂದಾಗಿ ಅವನಲ್ಲಿ ಹುಟ್ಟಿರುವ ಭಾವಾತ್ಮಕ ಶೂನ್ಯತೆಯನ್ನು ನಾವು ಪ್ರೀತಿಭರಿತ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಮೂಲಕ ತುಂಬಿಸಬಹುದು. ಅನುಭವಸ್ಥ ಮಿಷನೆರಿಯೊಬ್ಬರು ಈ ಸಲಹೆಯಿತ್ತರು: “ಅಧ್ಯಯನ ಮುಗಿದ ಕೂಡಲೆ ಅಲ್ಲಿಂದ ಹೊರಡಬೇಡಿ. ಸೂಕ್ತವಾಗಿರುವಲ್ಲಿ ಸ್ವಲ್ಪ ಹೊತ್ತು ಕೂತು ಅವರೊಂದಿಗೆ ಮಾತಾಡಿ.” ವಿದ್ಯಾರ್ಥಿಗೆ ವ್ಯಾವಹಾರಿಕ ಸಹಾಯ ನೀಡಬಹುದಾದ ಸಂದರ್ಭಗಳನ್ನು ಹುಡುಕಿರಿ. ಉದಾಹರಣೆಗೆ, ಅವರಿಗೆ ಸೌಖ್ಯ ಇಲ್ಲದಿರುವಾಗ ಫೋನ್ ಮಾಡಿ ಅಥವಾ ಭೇಟಿ ನೀಡಿ. ಯೋಗ್ಯವಾಗಿರುವಲ್ಲಿ ಕೂಟಗಳಲ್ಲಿ ಅವರೊಂದಿಗೆ ಕೂತುಕೊಳ್ಳಿ ಮತ್ತು ಅವರ ಮಕ್ಕಳನ್ನು ನೋಡಿಕೊಳ್ಳಲು ನೆರವು ನೀಡಿ.
3. ನಮ್ಮ ವಿದ್ಯಾರ್ಥಿ ಸಭೆಯಿಂದ ಉತ್ತೇಜನ ಪಡೆಯುವಂತಾಗಲು ನಾವೇನು ಮಾಡಬೇಕು?
3 ಸಭೆಯ ಸಹಾಯ: ವಿದ್ಯಾರ್ಥಿಯ ಮನೆಯ ಹತ್ತಿರ ನೀವು ಸೇವೆ ಮಾಡುತ್ತಿರುವಲ್ಲಿ ಕೆಲವು ನಿಮಿಷ ಅವರನ್ನು ಭೇಟಿಮಾಡಿ ನಿಮ್ಮೊಂದಿಗಿರುವವರನ್ನು ಪರಿಚಯಿಸಬಹುದಲ್ಲವೇ? ಸೂಕ್ತ ಸಂದರ್ಭಗಳಲ್ಲಿ ಹಿರಿಯರನ್ನೂ ಸೇರಿಸಿ ಬೇರೆ ಬೇರೆ ಪ್ರಚಾರಕರನ್ನು ನಿಮ್ಮೊಂದಿಗೆ ಅಧ್ಯಯನಕ್ಕೆ ಕರೆದೊಯ್ಯಿರಿ. ಅಲ್ಲದೆ, ಅಧ್ಯಯನ ಮುಂದುವರಿಯುವುದು ಖಚಿತವಾದ ಕೂಡಲೆ ಕೂಟಗಳಿಗೆ ಹಾಜರಾಗಲು ವಿದ್ಯಾರ್ಥಿಯನ್ನು ಉತ್ತೇಜಿಸಿ. ಆ ಕೂಟಗಳಲ್ಲಿ ವಿದ್ಯಾರ್ಥಿಯು ಮುಂದೆ ತನ್ನ ಆಧ್ಯಾತ್ಮಿಕ ಕುಟುಂಬವಾಗಬಲ್ಲ ಸಭಾ ಸದಸ್ಯರೊಂದಿಗೆ ಭಕ್ತಿವರ್ಧಕ ಸಹವಾಸದಲ್ಲಿ ಆನಂದಿಸುವನು.—ಮಾರ್ಕ 10:29, 30; ಇಬ್ರಿ. 10:24, 25.
4. ನಮ್ಮ ಶ್ರದ್ಧೆಯ ಪ್ರಯತ್ನಕ್ಕೆ ಹೇಗೆ ಪ್ರತಿಫಲ ಸಿಗುವುದು?
4 ಮಕ್ಕಳಿಗೆ ಆಧ್ಯಾತ್ಮಿಕ ನೆರವು ನೀಡಲು ಶ್ರಮಪಟ್ಟಿರುವ ಹೆತ್ತವರು ಆ ಮಕ್ಕಳು ಯೆಹೋವನ ಪಕ್ಷ ವಹಿಸಿ ಸತ್ಯದಲ್ಲಿ ನಡೆಯುವುದನ್ನು ನೋಡುವಾಗ ಪಡುವ ಆನಂದಕ್ಕೆ ಪಾರವೇ ಇಲ್ಲ! (3 ಯೋಹಾ. 4) ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಲು ಮನಃಪೂರ್ವಕವಾಗಿ ಪ್ರಯತ್ನಿಸುವಾಗ ಅಂಥದ್ದೇ ಆನಂದ ನಮ್ಮದಾಗಬಲ್ಲದು.