ಬೈಬಲನ್ನು ಬಳಸುವುದರಲ್ಲಿ ನಿಪುಣರಾಗಿ
1. ಬೈಬಲ್ ಯಾವುದಕ್ಕೆ ಉಪಯುಕ್ತ?
1 ನಾವು ದೇವರ ಪ್ರೇರಿತ ವಾಕ್ಯವನ್ನು ನಿಪುಣತೆ ಮತ್ತು ಜಾಣ್ಮೆಯಿಂದ ಬಳಸಬೇಕು. ಇದು ಸತ್ಯವನ್ನು ಸಾರಲು, ಸ್ಪಷ್ಟವಾಗಿ ಬೋಧಿಸಲು ಹಾಗೂ ಮಾನವರ ಸುಳ್ಳು ಬೋಧನೆ, ಸಂಪ್ರದಾಯಗಳನ್ನು ಬಯಲಿಗೆಳೆಯಲು ನಮ್ಮನ್ನು ಶಕ್ತಗೊಳಿಸುತ್ತದೆ.—2 ತಿಮೊ. 2:15; 1 ಪೇತ್ರ 3:15.
2. ವಚನಗಳನ್ನು ತೆರೆಯುವುದರಲ್ಲಿ ನಿಪುಣರಾಗಲು ನಮಗೆ ಯಾವುದು ಸಹಾಯಕ?
2 ಸುಪರಿಚಿತರಾಗಿರಿ: ಯಾವುದೇ ಉಪಕರಣವನ್ನು ನೀವು ಹೆಚ್ಚು ನಿಪುಣತೆಯಿಂದ ಬಳಸಬೇಕಾದರೆ ಅದರ ಬಗ್ಗೆ ಹೆಚ್ಚು ತಿಳಿದಿರಬೇಕು. ಬೈಬಲನ್ನು ಬಳಸುವ ವಿಷಯದಲ್ಲೂ ಇದು ಸತ್ಯ. ಮೊದಲ ಪುಟದಿಂದ ಕೊನೇ ಪುಟದ ವರೆಗೆ ಓದುವುದರಿಂದ ಬೈಬಲಿನ ಮುಖ್ಯ ವಿಷಯದ ಪೂರ್ಣ ಚಿತ್ರಣ ನಿಮಗೆ ಸಿಗುತ್ತದೆ. ವಚನಗಳನ್ನು ನೆನಪಿನಲ್ಲಿಡಲು ಮತ್ತು ಬೇಗನೆ ತೆರೆಯಲು ಸಹ ಆಗುತ್ತದೆ. ಬೈಬಲ್ನ ಪರಿಚಯ ಹೆಚ್ಚಿದಂತೆ ನೀವು ಕ್ಷೇತ್ರ ಸೇವೆಯಲ್ಲಿ ಮತ್ತು ಅನೌಪಚಾರಿಕವಾಗಿ ಸಾಕ್ಷಿಕೊಡುವಾಗ ಹೆಚ್ಚು ಹುರುಪು ಮತ್ತು ನಿಶ್ಚಿತಾಭಿಪ್ರಾಯದಿಂದ ಮಾತಾಡುವಿರಿ.—1 ಥೆಸ. 1:5.
3, 4. (ಎ) ಬೈಬಲಿನ ಸುಪರಿಚಯ ಮಾಡಿಕೊಳ್ಳುವ ಕೆಲವು ವಿಧಗಳಾವುವು? (ಬಿ) ನೀವು ಬೇರಾವುದೇ ವಿಧಾನ ಬಳಸಿದ್ದೀರೋ?
3 ಸಭಾ ಕೂಟಗಳಲ್ಲಿ ನಿಮ್ಮ ಬೈಬಲನ್ನು ತೆರೆದು, ಭಾಷಣ ಕೊಡುವವರೊಂದಿಗೆ ವಚನಗಳನ್ನು ಓದುವುದನ್ನು ರೂಢಿಸಿಕೊಳ್ಳಿ. ವೈಯಕ್ತಿಕ ಅಧ್ಯಯನದಲ್ಲಿ ಮತ್ತು ಸಭಾ ಕೂಟಗಳಿಗಾಗಿ ತಯಾರಿಸುವಾಗ ಉದ್ಧರಿಸಿರದ ವಚನಗಳನ್ನು ತೆರೆದು ಓದಿ. ಅವುಗಳ ಅನ್ವಯದ ಕುರಿತು ಧ್ಯಾನಿಸಿರಿ. ವಚನಗಳನ್ನು ಕಂಪ್ಯೂಟರ್ ಅಥವಾ ಪ್ರಿಂಟ್ಔಟ್ನಿಂದ ಓದದೆ ಬೈಬಲ್ನಿಂದಲೇ ಓದುವುದು ಉತ್ತಮವೆಂದು ಅನೇಕರಿಗೆ ಅನಿಸಿದೆ. ಏಕೆಂದರೆ ಶುಶ್ರೂಷೆಯಲ್ಲಿ ಬೇಕಾದಾಗಲೆಲ್ಲ ಆ ವಚನಗಳನ್ನು ತೆರೆಯಲು ಅವರಿಗೆ ಹೆಚ್ಚು ಸುಲಭವಾಗಿದೆ.—ಯೋಹಾ. 14:26.
4 ಕೆಲವು ಕುಟುಂಬಗಳು ವಚನಗಳನ್ನು ಕಂಠಪಾಠಮಾಡಲು ಸಮಯ ಮಾಡಿಕೊಂಡಿವೆ. ನೀವು ಹೀಗೆ ಮಾಡಬಹುದು: ಒಂದು ಬದಿಯಲ್ಲಿ ವಚನ ಇನ್ನೊಂದು ಬದಿಯಲ್ಲಿ ಅದೇ ವಚನದ ವಾಕ್ಯಗಳಿರುವ ಚಿಕ್ಕಚಿಕ್ಕ ಕಾರ್ಡು ಇಲ್ಲವೆ ಕಾಗದಗಳನ್ನು ತಯಾರಿಸಿರಿ. ಒಬ್ಬೊಬ್ಬರು ಆ ಕಾರ್ಡುಗಳಲ್ಲಿ ಒಂದನ್ನು ತೆಗೆದು ನೋಡಿ ಕೊಡಲಾಗಿರುವ ವಚನ ಏನು ಹೇಳುತ್ತದೆ ಎಂದು ಅಥವಾ ವಾಕ್ಯಗಳನ್ನು ಓದಿ ಆ ವಚನ ಯಾವದೆಂದು ನೆನಪಿಗೆ ತರಲು ಪ್ರಯತ್ನಿಸಲಿ. ನಿರೂಪಣೆಗಳಲ್ಲಿ ಮತ್ತು ಆಕ್ಷೇಪಣೆ ಅಥವಾ ಪ್ರಶ್ನೆಗಳನ್ನು ಉತ್ತರಿಸುವ ಸಂದರ್ಭಗಳಲ್ಲಿ ಬೈಬಲನ್ನು ಹೇಗೆ ಬಳಸಬಹುದೆಂದು ಪ್ರ್ಯಾಕ್ಟಿಸ್ ಮಾಡುವುದು ಸಹ ನಮ್ಮ ನಿಪುಣತೆಯನ್ನು ಹೆಚ್ಚಿಸುತ್ತದೆ.
5. ಬೈಬಲನ್ನು ಬಳಸುವುದರಲ್ಲಿ ನಾವೇಕೆ ನಿಪುಣರಾಗಬೇಕು?
5 ಬೈಬಲಿಗೆ ಸರಿಸಾಟಿಯಾದ ಪುಸ್ತಕ ಬೇರೊಂದಿಲ್ಲ. ಜನರನ್ನು “ರಕ್ಷಣೆಗಾಗಿ ವಿವೇಕಿಯನ್ನಾಗಿ” ಮಾಡಬಲ್ಲ ಬರಹಗಳಿರುವುದು ಅದರಲ್ಲಿ ಮಾತ್ರ. (2 ತಿಮೊ. 3:15) ನಮ್ಮ ಟೆರಿಟೊರಿಯಲ್ಲಿ ಹೆಚ್ಚಿನವರಿಗೆ ಬೈಬಲಿನಲ್ಲಿರುವ ಅಮೂಲ್ಯ ನಿಕ್ಷೇಪಗಳ ಬಗ್ಗೆ ತಿಳಿದಿಲ್ಲ. ಆದ್ದರಿಂದ ಬೈಬಲಿನಲ್ಲಿ ನಿಜವಾಗಿಯೂ ಏನಿದೆ ಎಂದು ಅವರಿಗೆ ತೋರಿಸಲು ನಾವು ಬೈಬಲನ್ನು ಬಳಸುವುದರಲ್ಲಿ ಹೆಚ್ಚು ನಿಪುಣರಾಗುವುದು ಅಗತ್ಯ.—ಜ್ಞಾನೋ. 2:1-5.